ದಿನದ ಸುದ್ದಿ
ಈಗಲಾದರೂ ಮೀನುಗಾರರ ಕುಟುಂಬಗಳು ನ್ಯಾಯ ಪಡೆದುಕೊಳ್ಳಲಿ

ಕಳೆದ ಡಿಸೆಂಬರ್ 15 ರಂದು ನಾಪತ್ತೆಯಾಗಿದ್ದ ಕರ್ನಾಟಕದ ಮೀನುಗಾರರಿದ್ದ ಸುವರ್ಣ ತ್ರಿಭುಜ ದೋಣಿ ಮೊನ್ನೆ ಪತ್ತೆಯಾಗಿದೆ ಎಂದು ನೌಕಾಪಡೆ ದೋಣಿಯ ಫೋಟೋ ಸಮೇತ ಬಹಿರಂಗಪಡಿಸಿದೆ.ಆದರೆ ಮೀನುಗಾರರು ಬದುಕಿ ಉಳಿದಿರುವ ಲಕ್ಷಣಗಳು ತೋರುತ್ತಿಲ್ಲ.
Missing Fishing Boat Wreck Found by #IndianNavy – After an intensive search by ships & aircraft since December 2018, #IndianNavy has located the wreck of fishing vessel Suvarna Tribhuja 33 km WSW of the coast of Malvan. The wreck was found by #INSNireekshak on 01 May 19. 1/2 pic.twitter.com/23ZVJ3XfxZ
— SpokespersonNavy (@indiannavy) May 2, 2019
ಇದೀಗ ಉಡುಪಿ ಶಾಸಕರು ಮತ್ತು ಮಾಜಿ ಸಚಿವರು ನೇರವಾಗಿ ಭಾರತೀಯ ನೌಕಾಪಡೆಯ ಐ ಎನ್ ಎಸ್ ಕೊಚ್ಚಿನ್ ನೌಕೆಯೇ ಮೀನುಗಾರರ ದೋಣಿಗೆ ಹೊಡೆದು ಮುಳಿಗಿಸಿರುವ ಆತಂಕ ವ್ಯಕ್ತಪಡಿಸಿದ್ದಾರೆ.
ಇದೆಲ್ಲ ಸುಳ್ಳಾಗಲಿ, ನಮ್ಮ ಮೀನುಗಾರರು ಬದುಕಿರಲಿ ಎಂದು ಆಶಿಸೋಣ. ಆದರೆ ಅಕಸ್ಮಾತ್ ಇವರು ವ್ಯಕ್ತಪಡಿಸಿರುವ ಅನುಮಾನ ನಿಜವೇ ಆಗಿದ್ದರೆ!? ಆಗ ಕೆಲವು ಗಂಭೀರ ಪ್ರಶ್ನೆಗಳನ್ನು ಕೇಂದ್ರ ಸರ್ಕಾರ ಉತ್ತರಿಸಬೇಕಾಗುತ್ತದೆ.
- ಮೀನುಗಾರರ ಬೋಟು ಪತ್ತೆಯಾಗಿರುವುದು ಮಹಾರಾಷ್ಟ್ರ ಕರಾವಳಿಯಿಂದ ಕೇವಲ 33 ಕಿಲೋಮೀಟರ್ ದೂರದಲ್ಲಿ. ಡಿಸೆಂಬರ್ 13 ರಿಂದ ಇದುವರೆಗೆ ದೇಶದ ಪಶ್ಚಿಮ ಕರಾವಳಿಯಲ್ಲಾಗಲೀ, ಅರಬ್ಬೀ ಸಮುದ್ರದಲ್ಲಾಗಲೀ ಯಾವುದೇ ಹವಾಮಾನ ವೈಪರೀತ್ಯ ಆದ ವರದಿ ಇಲ್ಲ. ಅಂದರೆ ಬೋಟು ಹಾಳಾಗಿಯೋ, ಹಿಡಿತ ತಪ್ಪಿಯೋ ಸಮುದ್ರದಲ್ಲಿ ಮುಳುಗಿದರೆ ಕನಿಷ್ಟ ಸಂದೇಶವನ್ನು ತಲುಪಿಸಲಾರದ ಸ್ಥಿತಿಯಂತೂ ಇರುವುದಿಲ್ಲ. ಹಾಗೆ ಮುಳುಗಿದರೆ ಲೈಫ್ ಜಾಕೆಟ್ ಧರಿಸಿ ಕೆಲವರಾದರೂ ಬದುಕಿ ಉಳಿಯುವ ಸಾಧ್ಯತೆ ಇರುತ್ತದೆ.
- ಬೋಟ್ ಮುಳುಗಿರುವುದು ಹೀಗಲ್ಲವಾದರೆ ಉಳಿಯುವ ಎರಡು ಸಾದ್ಯತೆಗಳೆಂದರೆ ಒಂದು ಶತ್ರುಪಡೆಯ ಯುದ್ಧ ನೌಕೆ ಹೊಡೆದು ಮುಳುಗಿಸಿರುವುದು ಮತ್ತೊಂದು ನಮ್ಮದೇ ನೌಕಾಪಡೆ ಶತ್ರುಗಳ ದೋಣಿ ಎಂದು ಭಾವಿಸಿಯೋ ಅಥವಾ ಬೇರಾವ ಕಾರಣದಿಂದಲೋ ಮೀನುಗಾರರ ದೋಣಿಯನ್ನು ಹೊಡೆದು ಮುಳುಗಿಸಿರುವುದು.
- ದೋಣಿ ಪತ್ತೆಯಾಗಿರುವುದು ಭಾರತದ ಸಾಗರ ಗಡಿಯೊಳಗೆ ಆಗಿರುವುದರಿಂದ ಇದು ಶತ್ರುಪಡೆಯ ಕೆಲಸ ಅಲ್ಲ ಎಂದು ಹೇಳಬಹುದು. ಕೊನೆಯ ಸಾಧ್ಯತೆ ನಮ್ಮದೇ ನೌಕಾಪಡೆ ದಿಡೀರ್ ದಾಳಿ ನಡೆಸಿ ಸುವರ್ಣ ತ್ರಿಭುಜ ದೋಣಿಯನ್ನು ಮುಳುಗಿಸಿರುವುದು.
- ಇದು ಹೀಗೇ ಆಗಿದ್ದ ಪಕ್ಷದಲ್ಲಿ ನಾಲ್ಕು ತಿಂಗಳ ಕಾಲ ಮಾಹಿತಿಯನ್ನು ಮುಚ್ಚಿಡಲಾಗಿದೆ. ಇದಕ್ಕೆ ಕಾರಣ ಲೋಕಸಭಾ ಚುನಾವಣೆ.
- ಕೇಂದ್ರ ಸರ್ಕಾರಕ್ಕೆ ಸರಿಯಾದ ಮಾಹಿತಿ ಇದ್ದ ಕಾರಣದಿಂದಲೇ ಈ ನಾಲ್ಕು ತಿಂಗಳ ಕಾಲ ತೋರಿಕೆಯ ಹುಡುಕಾಟ ನಡೆಸುತ್ತಿದ್ದುದನ್ನು ಗಮನಿಸಬಹುದು.
- ಇಲ್ಲಿ ನೌಕಾಪಡೆ ತಿಳಿದೋ ತಿಳಿದೆಯೋ ಮೀನುಗಾರರ ದೋಣಿಯನ್ನು ಮುಳುಗಿಸರಬಹುದು. ಆದರೆ ಕೇಂದ್ರ ಸರ್ಕಾರ ಮಾತ್ರ ಉದ್ದೇಶಪೂರ್ವಕವಾಗಿ ಸತ್ಯವನ್ನು ಮುಚ್ಚಿಟ್ಟಿದೆ ಎನಿಸುತ್ತದೆ. ಇದು ನಿಜವಾಗಿದ್ದರೆ ಮೀನುಗಾರರ ಕುಟುಂಬಗಳ ದೃಷ್ಟಿಯಿಂದ ಅಕ್ಷಮ್ಯ ಅಪರಾಧವೇ ಸರಿ.
- ಸಚಿವ ಪ್ರಮೋದ್ ಮಧ್ವರಾಜ್, ಮೀನುಗಾರ ಸಮುದಾಯದ ಮುಖಂಡ ಜಿ ಶಂಕರ್ ಮೊದಲಾದವರು ಆಗ್ರಹಿಸಿರುವ ರೀತಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದೇ ಸೂಕ್ತ.
- ಸತ್ಯವನ್ನು ಮುಳುಗಿಸಲು ಆಸ್ಪದ ನೀಡಲಾಗದು. ಮೀನುಗಾರರ ದೋಣಿ ಹೇಗೆ ಮುಳುಗಿತು, ಎಲ್ಲಿ ಮುಳಿಗಿತು? ಯಾರಿಂದ ಮುಳುಗಿತು, ಮೀನುಗಾರರು ಏನಾದರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲೇಬೇಕು.
ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು ಕೇಂದ್ರ ಸರ್ಕಾರ ಹಿಂದೆ ಮುಂದೆ ಯೋಚಿಸಿದರೆ ಅದು ಕರಾವಳಿಯ ಮೀನುಗಾರ ಸಮುದಾಯಕ್ಕೆ ದೊಡ್ಡ ದ್ರೋಹವಾಗಲಿದೆ. ಕನಿಷ್ಟ ಈಗಲಾದರೂ ಮೀನುಗಾರರ ಕುಟುಂಬಗಳು ನ್ಯಾಯ ಪಡೆದುಕೊಳ್ಳಲಿ.
The wreck was found through Side Scan Sonar operations and confirmed today by Naval Divers undertaking saturation diving at a depth of 60 metres.2/2 pic.twitter.com/SuVFNEpOnz
— SpokespersonNavy (@indiannavy) May 2, 2019
– ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಗಿಗ್, ಸಿನಿ ಹಾಗೂ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಅಧಿನಿಯಮ ಜಾರಿಗೆ ಕ್ರಮ : ಸಚಿವ ಸಂತೋಷ್ ಲಾಡ್

ಸುದ್ದಿದಿನ,ದಾವಣಗೆರೆ:ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು, ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾ ಕಾರ್ಮಿಕರು ಹಾಗೂ ಮನೆಗೆಲಸದಲ್ಲಿ ತೊಡಗಿರುವ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಅಧಿನಿಯಮಗಳನ್ನು ರೂಪಿಸಿದೆ. ಮುಂಬರುವ ದಿನಗಳಲ್ಲಿ ಸದನದಲ್ಲಿ ಈ ಅಧಿಸೂಚನೆಗಳನ್ನು ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆಗಳನ್ನಾಗಿ ಜಾರಿ ಮಾಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ನಗರದ ದೊಡ್ಡಬೂದಿಹಾಳ್ ರಸ್ತೆಯ ತಾಜ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈಗಾಗಲೇ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಗಿಗ್ ಕಾರ್ಮಿಕರನ್ನು ನೋಂದಾಯಿಸಿ, ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲು ಹಾಗೂ ಸಂಪನ್ಮೂಲ ಕ್ರೂಢೀಕರಣಕ್ಕಾಗಿ ‘ಕರ್ನಾಟಕ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ಅಧಿನಿಯಮ-2025’ ಜಾರಿ ಮಾಡಲಾಗುವುದು. ರಾಜ್ಯದಲ್ಲಿ ವರ್ಷಕ್ಕೆ ಸುಮಾರು 4 ಕೋಟಿ ಸಿನಿಮಾ ಟಿಕೆಟ್‌ಗಳು ಮಾರಾಟವಾಗುತ್ತವೆ.
ಈ ಟಿಕೆಟ್‌ಗಳ ಮೇಲೆ ಸೆಸ್ ವಿಧಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆಸಲಾಗುತ್ತಿದೆ. ಇದಕ್ಕಾಗಿ ‘ಕರ್ನಾಟಕ ಸಿನಿಮಾ ಮತ್ತು ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ ಸುಂಕ ಅಧಿನಿಯಮ-2024’ ಅನ್ನು ರಚಿಸಲಾಗಿದೆ. ಇದರೊಂದಿಗೆ ಮನೆಗೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ‘ಕರ್ನಾಟಕ ಗೃಹ ಕಾರ್ಮಿಕರ ಅಧಿನಿಯಮ-2025’ ರಚಿಸಲಾಗಿದೆ. ಈ ಎಲ್ಲಾ ಅಧಿನಿಯಮಗಳ ನಿಯಾವಳಿಗಳನ್ನು ರೂಪಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಅಧಿನಿಯಮಗಳನ್ನು ಸದನದಲ್ಲಿ ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗೆ 5 ವರ್ಷದಲ್ಲಿ 3 ಲಕ್ಷ ಕೋಟಿ ಖರ್ಚು
ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 56 ರಿಂದ 60 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಈ ಮೊತ್ತ 5 ವರ್ಷಗಳಲ್ಲಿ 3 ಲಕ್ಷ ಕೋಟಿ ರೂ. ತಲುಪಬಹುದು. ದೇಶದ ಯಾವುದೇ ರಾಜ್ಯದಲ್ಲಿ ಇಷ್ಟೊಂದು ಮೊತ್ತದ ಹಣವನ್ನು ನೇರವಾಗಿ ಜನರ ಕಲ್ಯಾಣಕ್ಕಾಗಿ ವ್ಯಯಿಸುತ್ತಿಲ್ಲ. ರಾಜ್ಯದಲ್ಲಿ 30 ರಿಂದ 40 ಲಕ್ಷ ಅಸಂಘಟಿತ ಕಾರ್ಮಿಕರು ಇದ್ದು, ಕಾರ್ಮಿಕ ಇಲಾಖೆ 91 ವಿವಿಧ ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಿದೆ. ಅಸಂಘಟಿತ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿಕೊಂಡು ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಇದಕ್ಕಾಗಿ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ಜಾರಿ ಮಾಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 25,45,607 ಕಾರ್ಮಿಕರು, ದಾವಣಗೆರೆ ಜಿಲ್ಲೆಯಲ್ಲಿ 89,493 ಕಾರ್ಮಿಕರು ನೊಂದಣಿಯಾಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿಸಿದ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಮೂಲಕ, ಚಾಲಕರು, ನಿರ್ವಾಹಕ, ಕ್ಲೀನರ್, ನಿಲ್ದಾಣ ಸಿಬ್ಬಂದಿ, ಮಾರ್ಗ ಪರಿಶೀಲನಾ ಸಿಬ್ಬಂದಿ, ಬುಕಿಂಗ್, ನಗದು, ಡಿಪೋ ಗುಮಾಸ್ತರು ಸೇರಿದಂತೆ, ಮೋಟಾರು ಕ್ಷೇತ್ರದಲ್ಲಿ ದುಡಿಯತ್ತಿರುವ ಎಲ್ಲಾ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು.
ಖಾಸಗಿ ವಲಯದ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಉದ್ದೇಶಿತ ದೃಷ್ಠಿಯಿಂದ ‘ಆಶಾದೀಪ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಯಡಿ ಉದ್ಯೋಗದಾತ ಮಾಲಿಕರು ಪಾವತಿಸಿದ ಇ.ಎಸ್.ಐ ಮತ್ತು ಇ.ಪಿ.ಎಫ್ ವಂತಿಕೆ ಮರುಪಾವತಿ, ತರಬೇತಿ ನೇಮಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಶಿಷ್ಯವೇತನ ಮರುಪಾವತಿ, ಹೊಸ ನೇಮಕಾತಿಗೊಂಡವರಿಗೆ ಪಾವತಿಸಿದ ವೇತನದ ಎರಡು ವರ್ಷಗಳ ಅವಧಿಗೆ ಪ್ರತಿ ಉದ್ಯೋಗಿಯ ಮಾಸಿಕ ತಲಾ 6000 ರೂ. ವೇತನವನ್ನು ಉದ್ಯೋಗದಾತರಿಗೆ ಮರುಪಾವತಿ ಮಾಡಲಾಗುವುದು ಎಂದು ಸಚಿವ ಸಂತೋಷ ಎಸ್. ಲಾಡ್ ತಿಳಿಸಿದರು.
ಸರ್ಕಾರದಿಂದ ಖಾಸಗಿ ಕಂಪನಿಗಳು ನೀಡುವ ಇ.ಪಿ.ಎಫ್‌ಗಳನ್ನು ಪ್ರತ್ಯೇಕವಾಗಿ ಬ್ಯಾಂಕ್ ಖಾತೆಗಳನ್ನು ತೆರದು ನಿರ್ವಹಣೆ ಮಾಡುವಂತೆ ನಿಯಮ ರೂಪಿಸಲಾಗಿದೆ. ಉದ್ಯೋಗಿ, ಕಂಪನಿ ತೊರೆದ ಸಂದರ್ಭದಲ್ಲಿ ಈ ಹಣ ನೇರವಾಗಿ ಉದ್ಯೋಗಿಯ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಇದರಿಂದ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ಜಿಲ್ಲೆಯಲ್ಲಿ ಅರ್ಹ ಅಸಂಘಟಿತ ಕಾರ್ಮಿಕರನ್ನು ಗುರತಿಸಿ ಸ್ಮಾರ್ಟ್ಕಾರ್ಡ್ ವಿತರಿಸಲಾಗುತ್ತಿದೆ. ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜನರಿಗೆ ಯೋಜನೆ ಮತ್ತು ಸೌಲಭ್ಯಗಳನ್ನು ಸಮಪರ್ಕವಾಗಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಬಡವರ, ಕಾರ್ಮಿಕ ವರ್ಗದವರ ಕಷ್ಟಗಳ ಬಗ್ಗೆ ಅರಿತಿರುವ ಸಚಿವ ಸಂತೋಷ್ ಲಾಡ್ ಅವರು, ಅನೇಕ ಜನಕಲ್ಯಾಣ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾರ್ಮಿಕ ಇಲಾಖೆ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ. ಈ ಹಿಂದೆ ಕಾರ್ಮಿಕ ಇಲಾಖೆಯಲ್ಲಿ ಮಾತ್ರ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಆದರೆ ಸಚಿವ ಲಾಡ್ ಅವರಿಂದ ಪ್ರಸ್ತುತ ಮೇ 01ರಂದು ಎಲ್ಲಾ ಇಲಾಖೆ ಹಾಗೂ ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿಯೂ ಆಚರಿಸಲಾಗುತ್ತದೆ ಎಂದರು.
ವಿವಿಧ ಸೌಲಭ್ಯಗಳ ವಿತರಣೆ
ಕಾರ್ಯಕ್ರಮದಲ್ಲಿ ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ಚಾಲಕರ ಅವಲಂಬಿತ ಮಹಿಳೆ ಜಗಳೂರಿನ ಗೌರಮ್ಮನವರಿಗೆ ರೂ.5 ಲಕ್ಷ ಪರಿಹಾರ ಧನ, ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ವಾಹನ ಚಾಲಕರ ಮಕ್ಕಳಿಗೆ ರೂ.10,000 ಶೈಕ್ಷಣಿಕ ಧನಸಹಾಯದ ಚೆಕ್ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡುಗಳನ್ನು ವಿತರಿಸಲಾಯಿತು.
ಕಾರ್ಮಿಕ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಸಂವಿಧಾನ ಪೀಠಿಕೆ ಬೋಧಿಸಿದರು. ಉಪ ಕಾರ್ಮಿಕ ಆಯುಕ್ತ ಡಾ.ವೆಂಕಟೇಶ್ ಶಿಂದಿಹಟ್ಟಿ ಸ್ವಾಗತಿಸಿದರು. ಜಂಟಿ ಕಾರ್ಮಿಕ ಆಯುಕ್ತ ಡಾ. ಎಸ್.ಬಿ. ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಚೇತನ್ ಹಾಗೂ ಸಂಡಿಗರ ಕಲಾತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನೌಡ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿ.ಪಂ.ಸಿಇಓ ಗಿತ್ತೆ ಮಾಧವ ವಿಠಲ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 9360 ಪ್ರಕರಣ ಇತ್ಯರ್ಥ ; ವಿಚ್ಚೇದನ ಕೋರಿ ಸಲ್ಲಿಸಿದ್ದ 23 ಜೋಡಿ ವೈವಾಹಿಕ ಜೀವನ ಸುಖಾಂತ್ಯ

ಸುದ್ದಿದಿನ,ದಾವಣಗೆರೆ:ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಪ್ರಕರಣಗಳ 18024 ಕೈಗೆತ್ತಿಕೊಂಡಿದ್ದು, ಅದರಲ್ಲಿ ಒಟ್ಟು 9,360 ಜಾರಿಯಲ್ಲಿರುವ ಪ್ರಕರಣಗಳು ಮುಕ್ತಾಯಗೊಂಡು, ರೂ.14,33,66,571 ಹಣದ ಪ್ರಕರಣ ಹಾಗೂ ವ್ಯಾಜ್ಯ ಪೂರ್ವ 2,62,712 ಪ್ರಕರಣಗಳು ಮುಕ್ತಾಯಗೊಂಡು ರೂ.72,62,10,788 ಹಣದ ಪರಿಹಾರವಾಗಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ತಿಳಿಸಿದ್ದಾರೆ.
ಜಿಲ್ಲೆಯ ನ್ಯಾಯಾಲಯಗಳಲ್ಲಿ 77 ಅಪರಾಧಿಕ, 195 ಚೆಕ್ ಅಮಾನ್ಯ, 43 ಬ್ಯಾಂಕ್ ವಸೂಲಾತಿ, 14 ಇತರೆ ಹಣ ವಸೂಲಾತಿ, 74 ಅಪಘಾತ ಪರಿಹಾರ, 144 ವಿದ್ಯುತ್ ಕಳ್ಳತನ, 02 ಅಕ್ರಮ ಮರಳು ಗಣಿಗಾರಿಕೆ, 51 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆ, 26 ಭೂ ಸ್ವಾಧೀನ ಪರಿಹಾರ ಜಾರಿ ಅರ್ಜಿ, 132 ಇತರೆ ರಾಜಿ ಅರ್ಜಿ ಹಾಗೂ ಹಲವು ಕಾರಣಕ್ಕಾಗಿ ದಾಖಲಿಸಿದ 88 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ 50 ಪ್ರಕರಣಗಳು ಸೇರಿ ಒಟ್ಟು 9360 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
23 ಜೋಡಿ ವೈವಾಹಿಕ ಜೀವನ ಸುಖಾಂತ್ಯ
ಜಿಲ್ಲೆಯಲ್ಲಿ ಒಟ್ಟು 225 ಜೋಡಿ ವಿವಿಧ ಕಾರಣಗಳಿಂದ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿ ನ್ಯಾಯಾಲಯ ಮೆಟ್ಟಿಲೇರಿದ್ದು, ಅದರಲ್ಲಿ 20 ಪ್ರಕರಣ ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಹಾಗೂ ಹರಿಹರ, ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕು ನ್ಯಾಯಾಲಯದಲ್ಲಿ ತಲಾ ಒಂದರಂತೆ ಒಟ್ಟು 23 ಜೋಡಿಗಳು ತಮ್ಮ ವೈಮನಸ್ಸುಗಳನ್ನು ಮರೆತು ಒಂದಾಗಿ ಸಹಬಾಳ್ವೆ ನಡೆಸಲು ಒಪ್ಪಿಕೊಂಡಿದ್ದು ಸುಖಾಂತ್ಯ ಕಂಡಿವೆ. ರಾಷ್ಟ್ರೀಯ ಲೋಕ್ ಅದಾಲತ್ ನಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ

ಸುದ್ದಿದಿನಡೆಸ್ಕ್:ಗ್ರಾಮೀಣ ಪ್ರದೇಶದಲ್ಲಿ 500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ಹಾಗೂ ನಗರ ಪ್ರದೇಶಗಳಲ್ಲಿ 800 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮುಂದಿನ ಮೂರು ತಿಂಗಳಲ್ಲಿ 10 ಸಾವಿರ ನಿವೇಶನ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 2 ಸಾವಿರದ 500 ಮನೆಗಳು ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕೂಡ ಅರ್ಹ ಫಲಾನುಭವಿಗಳಿಗೆ ಹಂಚಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ
-
ದಿನದ ಸುದ್ದಿ1 day ago
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ3 days ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ1 day ago
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ
-
ದಿನದ ಸುದ್ದಿ3 days ago
ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್
-
ದಿನದ ಸುದ್ದಿ2 days ago
ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಉದ್ಯೋಗ | ಜುಲೈ 15 ರಂದದು ನೇರ ಸಂದರ್ಶನ