ದಿನದ ಸುದ್ದಿ
ಇದು ‘ಆತ್ಮ ಬರ್ಬಾದ್’ ಬಜೆಟ್ : ಸಿದ್ದರಾಮಯ್ಯ ಲೇವಡಿ
ಸುದ್ದಿದಿನ, ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ಪರಿಹಾರಕ್ಕಾಗಿ “ಆತ್ಮನಿರ್ಭರ’ ಹೆಸರಲ್ಲಿ ಮೂರು ಪ್ಯಾಕೇಜ್ ಗಳನ್ನು ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ‘ಆತ್ಮಬರ್ಬರ’ ಬಜೆಟ್ ನೀಡಿದ್ದಾರೆ. ಇದೊಂದು ರೀತಿಯಲ್ಲಿ “ ಆತ್ಮ ಬರ್ಬಾದ್’ (ವಿನಾಶ) ಬಜೆಟ್ ಕೂಡಾ ಹೌದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶವ್ಯಕ್ತ ಪಡಿಸಿದರು.
ಬೆಂಗಳೂರಿನಲ್ಲಿ ಕೇಂದ್ರ ಬಜೆಟ್ ಮಂಡನೆ ಬಗ್ಗೆ ಅವರು ಪ್ದತಿಕ್ರಿಯಿಸಿದರು. ಕೊರೊನಾದಿಂದಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದೆ, ರೈತರು ಬೆಳೆಗೆ ಬೆಲೆ ಇಲ್ಲದೆ ದಿವಾಳಿಸ್ಥಿತಿಯಲ್ಲಿದ್ದಾರೆ, ಉದ್ಯಮಿಗಳು ಮಾರುಕಟ್ಟೆ ಇಲ್ಲದೆ ಕಷ್ಟದಲ್ಲಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಯಾವ ನಿರ್ದಿಷ್ಠ ಕ್ರಮಗಳು 2021-22ರ ಸಾಲಿನ ಬಜೆಟ್ ನಲ್ಲಿ ಇಲ್ಲ ಎಂದರು.
ಕೊರೊನಾದಿಂದಾಗಿ ನೆಲಕಚ್ಚಿರುವ ಆರ್ಥಿಕತೆಯ ಚೇತರಿಕೆಗಾಗಿ ಜನರ ಕೈಗೆ ದುಡ್ಡು ಸೇರುವಂತೆ ಮಾಡಬೇಕೆಂಬುದು ನಮ್ಮ ದೇಶದ ಮತ್ತು ಅಂತರರಾಷ್ಟ್ರೀಯ ಆರ್ಥಿಕ ತಜ್ಞರೆಲ್ಲರೂ ಸೂಚಿಸಿದ್ದ ಸಾಮಾನ್ಯ ಪರಿಹಾರ. ಸೀತಾರಾಮನ್ ಜನರಿಂದ ಇನ್ನಷ್ಟು ಹಣವನ್ನು ಕಿತ್ತುಕೊಳ್ಳಲು ಹೊರಟಿದ್ದಾರೆಯೇ ಹೊರತು ಅವರ ಜೇಬಿಗೆ ಏನನ್ನೂ ಹಾಕಿಲ್ಲ.
ತೆರಿಗೆ ಎನ್ನುವುದು ಬಜೆಟ್ ಗಳ ಸಾಮಾನ್ಯ ಭಾಗ. ಪ್ರಮುಖವಾಗಿ ತೆರಿಗೆಗಳ ಮೂಲಕವೇ ಸರ್ಕಾರ ತನ್ನ ವೆಚ್ಚಕ್ಕೆ ಬೇಕಾದ ಸಂಪನ್ಮೂಲವನ್ನು ಕ್ರೋಡೀಕರಿಸುತ್ತದೆ. ಆದರೆ ನಿರ್ಮಲಾ ಸೀತಾರಾಮನ್ ಅವರು ನೇರವಾಗಿ ಹೆಚ್ಚು ತೆರಿಗೆ ವಿಧಿಸದೆ, ಕೃಷಿ ಮೂಲಸೌಕರ್ಯ ಸೆಸ್ ಹೇರಿ ರೈತರ ಹೆಸರಲ್ಲಿ ಪರೋಕ್ಷವಾಗಿ ಸಂಪನ್ಮೂಲ ಕ್ರೋಡಿಕರಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಕಲ್ಲಿದ್ದಲು, ಪಾಮ್ ಆಯಿಲ್, ಕಡಲೆ, ಬಟಾಣಿ, ಹತ್ತಿಯಿಂದ ಹಿಡಿದು ಸೇಬು,ಮದ್ಯದ ವರೆಗೆ ಎಲ್ಲದರ ಮೇಲೂ ಶೇಕಡಾ 2.5ರಿಂದ ಹಿಡಿದು ಶೇಕಡಾ ನೂರರ ವರೆಗೆ ಕೃಷಿ ಸೆಸ್ ಹೇರಲಾಗಿದೆ. ಇದರಿಂದಾಗುವ ಬೆಲೆ ಏರಿಕೆಗೆ ರೈತರೂ ಸೇರಿದಂತೆ ಎಲ್ಲರೂ ತಲೆಕೊಡಬೇಕಾಗುತ್ತದೆ.
ಕೃಷಿ ಮೂಲಸೌಕರ್ಯ ಸೆಸ್ ನಿಂದಾಗಿ ಬೆಲೆ ಏರಿಕೆಯಾದಾಗ ಜನ ಸರ್ಕಾರವನ್ನಲ್ಲ ರೈತರನ್ನು ದೂರತೊಡಗುತ್ತಾರೆ. ಈ ಮೂಲಕ ಬೆಲೆ ಏರಿಕೆಗೆ ಕೃಷಿ ಸೆಸ್ ಕಾರಣ ಎಂಬ ಜನಾಭಿಪ್ರಾಯವನ್ನು ಮೂಡಿಸಿ ಜನರನ್ನು ರೈತರ ವಿರುದ್ದ ಎತ್ತಿಕಟ್ಟುವ ಹೀನ ಕೃತ್ಯವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ವಾಗ್ದಾಳಿ ಮಾಡಿದರು.
ಕೃಷಿ ಮೂಲಸೌಕರ್ಯ ಸೆಸ್ ನಿಂದಾಗಿ ಸಂಗ್ರಹವಾಗುವ ಹಣ ಎಷ್ಟು? ಇದನ್ನು ಬಳಸಿಕೊಂಡು ಕೃಷಿಕ್ಷೇತ್ರದಲ್ಲಿ ಅನುಷ್ಠಾನಗೊಳ್ಳಲಿರುವ ಮೂಲಸೌಕರ್ಯಗಳ ಯೋಜನೆಗಳೇನು ಎಂಬ ಬಗ್ಗೆ 65 ಪುಟಗಳ ಬಜೆಟ್ ಭಾಷಣದಲ್ಲಿ ಎಲ್ಲಿಯೂ ಉಲ್ಲೇಖ ಇಲ್ಲ. ನೀರಾವರಿ, ಶೈತ್ಯಾಗಾರ, ದಾಸ್ತಾನು ಮಳಿಗೆ ಹೀಗೆ ಯಾವುದೇ ನಿರ್ದಿಷ್ಠ ಯೋಜನೆಗಳನ್ನು ಘೋಷಣೆ ಮಾಡಲಾಗಿಲ್ಲ.
ನೀರಾವರಿ ಯೋಜನೆಗಳು, ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಬೆಲೆ ರಕ್ಷಣೆಗೆ ಕ್ರಮಗಳು, ಕಡಿಮೆ ಬಡ್ಡಿದರದಲ್ಲಿ ಸಾಲ, ಕಡಿಮೆ ಬೆಲೆಯಲ್ಲಿ ಬೀಜ-ಗೊಬ್ಬರ ಸೇರಿದಂತೆ ರೈತರ ಅವಶ್ಯಕತೆಗಳನ್ನು ಪೂರೈಸುವ ಯಾವ ಯೋಜನೆಗಳೂ ಬಜೆಟ್ ನಲ್ಲಿ ಇಲ್ಲ.
ದೇಶಾದ್ಯಂತ ರೈತರು ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುವ ಯೋಜನೆಯ ಬಗ್ಗೆ ಒತ್ತಾಯಿಸುತ್ತಾ ಬಂದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ದಿಯಾಗಬೇಕಾದರೆ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ ಸಿಗಬೇಕು. ಇದರ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾವ ಇಲ್ಲ ಎಂದರು.
ಇದೇ ರೀತಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕೃಷಿ ಸಾಲವನ್ನು ಮನ್ನಾ ಮಾಡಬೇಕೆಂಬ ಬೇಡಿಕೆಯನ್ನು ಕಳೆದ ಏಳು ವರ್ಷಗಳಿಂದ ರೈತರು ಮಾಡುತ್ತಾ ಬಂದಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ಸರ್ಕಾರ ಮಾಡಿದ್ದ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾವೇ ಕೊನೆಯದ್ದು, ಅದರ ನಂತರ ಈ ಬ್ಯಾಂಕ್ ಗಳ ಸಾಲ ಮನ್ನಾ ಆಗಿಲ್ಲ. ಈ ಸಾಲಮನ್ನಾ ಮಾಡಿದ್ದರೆ ಸಂಕಷ್ಟದಲ್ಲಿರುವ ರೈತರು ಸ್ವಲ್ಪ ನಿರಾಳವಾಗುತ್ತಿದ್ದರು.
ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಚಾಲನೆ ನೀಡಿರುವುದು ರೈತರು ಸೇರಿದಂತೆ ಎಲ್ಲ ಜನವರ್ಗಗಳ ಮೇಲೆ ಇನ್ನೊಂದು ಹೊಡೆತ. ಖಾಸಗಿಕರಣಗೊಂಡರೆ ರೈತರಿಗೆ ಈಗ ಲಭ್ಯ ಇರುವ ಉಚಿತ ವಿದ್ಯುತ್ ಖಂಡಿತ ಕಡಿತ ಆಗಲಿದೆ. ಇದರ ಜೊತೆಗೆ ಸಾಮಾನ್ಯ ಜನರ ಮನೆ ಬಳಕೆಯ ವಿದ್ಯುತ್ ಕೂಡಾ ದುಬಾರಿಯಾಗಲಿದೆ. ಉದ್ಯಮಿಗಳ ಮೇಲೆಯೂ ಹೆಚ್ಚಿನ ಹೊರೆ.
ವಿಮಾ ಕ್ಷೇತ್ರದಲ್ಲಿ 74% ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಅಪಾಯಕಾರಿಯಾದ ಬೆಳವಣಿಗೆ. ನಮ್ಮಲ್ಲಿ ಬಹಳ ದುರ್ಬಲವಾದ ಸಾಮಾಜಿಕ ಭದ್ರತಾ ವ್ಯವಸ್ಥೆಯಿದೆ. ವಯಸ್ಸಾದವರು ಮತ್ತು ನಿವೃತ್ತರು ತಮ್ಮ ಆರೋಗ್ಯ ಭದ್ರತೆಗಾಗಿ ವಿಮೆಯನ್ನು ನಂಬಿದ್ದಾರೆ. ಈ ಕ್ಷೇತ್ರದ ಖಾಸಗೀಕರಣದಿಂದಾಗಿ ವಿಮೆಯಿಂದಲೂ ಭದ್ರತೆ ಇಲ್ಲದಂತಾಗುವ ದಿನ ದೂರ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಸಂಸದರಾಗಿದ್ದರೂ ಬಜೆಟ್ ನಲ್ಲಿ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಮೆಟ್ರೋ ಮತ್ತು ಬೆಂಗಳೂರು-ಚೆನ್ನೈ ಕಾರಿಡಾರ್ ಗೆ ನೀಡಿರುವ ಅನುದಾನ ಹೊಸದೇನಲ್ಲ. ಉಳಿದಂತೆ ಹಣಕಾಸು ಸಚಿವರು ಒಮ್ಮೆಯೂ ಕರ್ನಾಟಕದ ಹೆಸರನ್ನೂ ಕೂಡಾ ಎತ್ತಿಲ್ಲ.
ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಯಾವುದೇ ಪರಿಹಾರ ಬಜೆಟ್ನಿಂದ ಸಿಕ್ಕಿಲ್ಲ. ಚುನಾವಣೆ ನಡೆಯುವ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳಿಗೆ ಹೆಚ್ಚು ಹಣ ನೀಡಲಾಗಿದೆ. ಪ್ರತಿ ವರ್ಷ ಚುನಾವಣೆ ನಡೆಸಿದರೆ ನಮಗೂ ಹೆಚ್ಚಿನ ಅನುದಾನ ನೀಡಬಹುದು ಎಂದರು.
ವಿತ್ತೀಯ ಕೊರತೆ ಶೇ. 3.5ಕ್ಕೆ ತರುವುದಾಗಿ ಹೇಳಿದ್ದರು. ಈಗ ಶೇ. 9.7ಕ್ಕೆ ಏರಿದೆ. ಇದರಿಂದ ಹೆಚ್ಚು ಸಾಲ ಮಾಡಬೇಕಾಗುತ್ತದೆ. ನನ್ನ ಪ್ರಕಾರ ವಿತ್ತೀಯ ಕೊರತೆ ಶೇ.14-15 ಇದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಜಿಡಿಪಿ ಬೆಳವಣಿಗೆ ಕುಸಿಯುತ್ತಲೇ ಇದೆ. ಡಾ. ಮನಮೋಹನಸಿಂಗ್ ಅವರ ಅವಧಿಯಲ್ಲಿ ಇದ್ದಿದುಕ್ಕಿಂತ ಕಡಿಮೆಯಾಗುತ್ತಿದೆ.
ಈ ವರ್ಷ ಕೊರೊನಾ ಸಂಕಷ್ಟ ಎದುರಾಗಿತ್ತು. ಆದರೆ, ಕಳೆದ ವರ್ಷ ಏನಾಗಿತ್ತು. ನಿರುದ್ಯೋಗ ಪ್ರಮಾಣ ನಗರದಲ್ಲಿ ಶೇ.9.2. ಇದರಿಂದ ಯುವಕರಿಗೆ ಉದ್ಯೋಗ ಎಲ್ಲಿ ಸಿಗುತ್ತದೆ. ಅವರು ಪಕೋಡಾ ಮಾರಲು ಹೋಗಬೇಕಾಗುತ್ತದೆ. ಈ ವರ್ಷ ಜಿಡಿಪಿ ಬೆಳವಣಿಗೆ -7.7% ಆಗಿದೆ.
2020-2021ನೇ ಸಾಲಿಗೆ ಜಿಡಿಪಿ ಬೆಳವಣಿಗೆಯನ್ನು ಶೇ. 11ಕ್ಕೆ ಏರಿಸುವುದಾಗಿ ಕೇಂದ್ರ ಘೋಷಣೆ ಮಾಡಿದೆ. ಇದು ನಂಬಲು ಸಾಧ್ಯವೇ ? ಇದು ಸುಳ್ಳಿನ ಕಂತೆ. ಅಂಕಿ-ಅಂಶಗಳನ್ನು ನೀಡದೆ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಇದಾಗಿದೆ. ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ವಿವರಗಳನ್ನು ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟದ್ದೇ ಹೆಚ್ಚು ಎಂದು ಆರೋಪಿಸಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. 80 ಕೋಟಿ ಮಂದಿಗೆ ಅಂದರೆ ಶೇ. 80ರಷ್ಟು ಮಂದಿಗೆ ಪಡಿತರ ಚೀಟಿ ಮೂಲಕ ಆಹಾರ ಧಾನ್ಯ ನೀಡಲಾಗುತ್ತಿದೆ. ಶಾಂತಕುಮಾರ್ ಅವರ ಸಮಿತಿ ವರದಿ ಜಾರಿಗೆ ತಂದರೆ ಶೇ.20ರಷ್ಟು ಮಂದಿ ಮಾತ್ರ ಪಡಿತರ ಮೂಲಕ ಆಹಾರ ಧಾನ್ಯ ಪಡೆಯಲು ಅರ್ಹರಾಗುತ್ತಾರೆ.
ರೈಲ್ವೆ ನಿಲ್ದಾಣ, ಬಂದರು, ವಿಮಾನ ನಿಲ್ದಾಣಗಳನ್ನು ಅಂಬಾನಿ, ಅಂದಾನಿ ಮೊದಲಾದ ಉದ್ಯಮಿಗಳಿಗೆ ಮಾರಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ. ಇದರಿಂದ ದೇಶ ತನ್ನ ಆಸ್ತಿ ಕಳೆದುಕೊಳ್ಳುವುದಲ್ಲದೆ ತಳಸಮುದಾಯ ಮೀಸಲಾತಿ ಸೌಲಭ್ಯವನ್ನೂ ಕಳೆದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ಪರಿಹಾರಕ್ಕಾಗಿ “ಆತ್ಮನಿರ್ಭರ’ ಹೆಸರಲ್ಲಿ ಮೂರು ಪ್ಯಾಕೇಜ್ ಗಳನ್ನು ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ‘ಆತ್ಮಬರ್ಬರ’ ಬಜೆಟ್ ನೀಡಿದ್ದಾರೆ. ಇದೊಂದು ರೀತಿಯಲ್ಲಿ “ ಆತ್ಮ ಬರ್ಬಾದ್’ (ವಿನಾಶ) ಬಜೆಟ್ ಕೂಡಾ ಹೌದು. 1/19#Budget2021
— Siddaramaiah (@siddaramaiah) February 1, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!
ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.
ನಡೆದಿದ್ದೇನು?
ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.
ಡೆತ್ ನೋಟ್ನಲ್ಲಿತ್ತು ಕೊನೆಯ ಆಸೆ
ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.
ತಮಿಳುನಾಡಿನಲ್ಲಿ ಅಂತ್ಯಕ್ರಿಯೆ
ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.
ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸ್; ಪ್ರವೇಶಾತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: 2026-27ನೇ ಶೈಕ್ಷಣಿಕ ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿನ ಮೂರು ವರ್ಷಗಳ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಹಾಗೂ ಎರಡನೇ ವರ್ಷದ ನೇರ ಪ್ರವೇಶಕ್ಕೆ (Lateral Entry) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ 2026 ರ ಜುಲೈ 01ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 23 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 25 ವರ್ಷ ಮೀರಿರಬಾರದು. ಒಟ್ಟು 39 ಅಭ್ಯರ್ಥಿಗಳನ್ನು (ಪುರುಷ ಮತ್ತು ಮಹಿಳಾ) ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ. 2,500/- ಗಳ ಶಿಷ್ಯವೇತನ ನೀಡಲಾಗುವುದು., ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಡಿಪ್ಲೋಮಾ ಕೋರ್ಸ್ಗೆ ನೇರ ಪ್ರವೇಶಕ್ಕೆ https://khtigadag.ac.in/
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಗಳಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಕಾಲೇಜು ರಸ್ತೆ, ನಿಟ್ಟುವಳ್ಳಿ, ದಾವಣಗೆರೆ ಅಥವಾ ದೂರವಾಣಿ ಸಂಖ್ಯೆ: 08192-262362 ಸಂಪರ್ಕಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನದ ಸುದ್ದಿ
ದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
ಸುದ್ದಿದಿನ,ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂಬುದಾಗಿ ಉಪನ್ಯಾಸಕರೊಬ್ಬರಿಗೆ ಆಮಿಷ ತೋರಿಸಿದ ದುಷ್ಕರ್ಮಿಗಳು 14 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ದಾವಣಗೆರೆಯ ಭೂಮಿಕಾ ನಗರದ ನಿವಾಸಿಯಾಗಿರುವ 52 ವರ್ಷದ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹಣ ಕಳೆದುಕೊಂಡಿದ್ದಾರೆ.
ಉಪನ್ಯಾಸಕರು ಮೊದಲಿಗೆ ಟೆಲಿಗ್ರಾಂ ಮೂಲಕ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅಲ್ಲಿ ವಂಚಕರು ಹೇಳಿದಂತೆ ಹಲವು ಲಿಂಕ್ಗಳನ್ನು ಕ್ಲಿಕ್ ಮಾಡುತ್ತಾ ಹೋಗಿದ್ದು, ಹಂತಹಂತವಾಗಿ ಹಣ ಕಳೆದುಕೊಂಡಿದ್ದಾರೆ.
ಲಾಭದ ನಿರೀಕ್ಷೆಯಲ್ಲಿದ್ದ ಉಪನ್ಯಾಸಕರಿಗೆ ಲಾಭ ಹೋಗಲಿ, ಅಸಲೂ ಬಾರದ ಕಾರಣ ಅನುಮಾನಗೊಂಡು ತಾನು ಹಣ ಕಳೆದುಕೊಂಡಿರುವುದು ದೃಢಪಟ್ಟಿದೆ. ನಂತರ ಸೈಬರ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ6 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ2 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ದಿನದ ಸುದ್ದಿ6 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ಕ್ರೀಡೆ6 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ಅಂಕಣ1 day agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ದಿನದ ಸುದ್ದಿ1 day agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ

