Connect with us

ದಿನದ ಸುದ್ದಿ

ಇಸ್ರೇಲಿನ ಸಂಪಾದಕರು ಮತ್ತು ಭಾರತದ ಸಂಪಾದಕರ ನಡುವಿನ ಐತಿಹಾಸಿಕ ಸಂವಾದವಿದು..!

Published

on

ಮೇ 12, 2021 ರಂದು ಇಸ್ರೇಲಿ ಯುದ್ಧ ವಿಮಾನಗಳು ಪ್ಯಾಲೇಸ್ಟಿನಿಯನ್ ಸಮುದಾಯಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿದ್ದಂತೆ ಗಾಜಾ ನಗರದಲ್ಲಿ ಕಟ್ಟಡಗಳು ಸುಟ್ಟು ಉರಿಯುತ್ತಿರುವದು. ಚಿತ್ರ | Mahmud Hams/AFP via Getty Images


  • ಪ್ರಧಾನಿಯೇ ಒಂದು ಸಮುದಾಯವನ್ನು ಹಿಂಸಾಚಾರಕ್ಕೆ ಪ್ರಚೋದಿಸಿದಾಗ ಜನ ಸಮುದಾಯದ ಜವಾಬ್ದಾರಿಗಳು ಏನು? ಮುಸ್ಲೀಮರ ಮೇಲಿನ ದ್ವೇಷಕ್ಕಾಗಿ ಐ ಸ್ಟ್ಯಾಂಡ್ ವಿತ್ ಇಸ್ರೇಲ್ ಎನ್ನುವವರು ಇಸ್ರೇಲ್ ನ ಅತೀ ಹೆಚ್ಚು ಪ್ರಸರಣಾ ಸಂಖ್ಯೆ ಹೊಂದಿರುವ HAARETZ (ಭೂಮಿ) ಪತ್ರಿಕೆಯ ಸಂಪಾಕೀಯವನ್ನು ಓದಬೇಕು.

  • ಸಂಪಾದಕೀಯ : ಅಲುಫ್ ಬೆನ್, ಪ್ರಧಾನ ಸಂಪಾಕರು, HAARETZ, ಅನುವಾದ : ನವೀನ್ ಸೂರಿಂಜೆ

ಕಳೆದ ಹಲವು ದಿನಗಳಿಂದ ಇಸ್ರೇಲ್ನಲ್ಲಿ ಅರಬ್ಬರು ಮತ್ತು ಯಹೂದಿಗಳ ನಡುವಿನ ನೋವಿನ ಘರ್ಷಣೆಯ ಉತ್ತುಂಗಕ್ಕೆ ಏರಿದೆ. ಇವೆಲ್ಲವನ್ನೂ ಹೊರತುಡಿಸಿ ಸಮಾಜದ ಗಣ್ಯರೂ ಸೇರಿದಂತೆ ಸಾವಿರಾರು ಅರಬ್ ಮತ್ತು ಯಹೂದಿ ನಾಗರಿಕರು ಇಸ್ರೇಲಿ ನಗರಗಳಲ್ಲಿ, ಹಳ್ಳಿಗಳಲ್ಲಿ ನಡೆಸಿದ ಜಂಟಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅರಬರು, ಯಹೂದಿಗಳು ಎಂಬ ಯಾವ ವ್ಯತ್ಯಾಸವು ಇಸ್ರೇಲಿನ ಸಾಮಾನ್ಯ ಜನರ ಮಧ್ಯೆ ಇಲ್ಲ.

ಮುಸ್ಲೀಮರು ಮತ್ತು ಯಹೂದಿಗಳು ಜೊತೆಗೂಡಿ ನಡೆಸುತ್ತಿರುವ ಹತ್ತಾರು ಕಾರ್ಯಕ್ರಮಗಳ ವಿಶೇಷತೆಯೆಂದರೆ ಅವು “ಫಿರಂಗಿಗಳು ಘರ್ಜಿಸುತ್ತಿರುವಾಗಲೂ” ನಡೆಯುತ್ತಿವೆ ಎಂಬುದೇ ಆಗಿದೆ, ಗಲಭೆಗಳು ಮತ್ತು ಆಕ್ರಮಣಗಳು ಇಸ್ರೇಲ್ ದೇಶದ ಸಾಮಾನ್ಯಯಹೂದಿ-ಅರಬ್ ಸಮುದಾಯಗಳಲ್ಲಿ ಯಾವ ವ್ಯತ್ಯಾಸವನ್ನು ಮಾಡಕೂಡದು.

ಇದೊಂದೇ ನಮ್ಮ ಮುಂದಿರುವ ಅತೀ ದೊಡ್ಡ ಭರವಸೆಯಾಗಿದೆ. ಈ ಹಿಂದೆಯೂ ಇದೇ ರೀತಿ ಮುಸ್ಲಿಂ ಮತ್ತು ಯಹೂದಿಗಳ ಸೌಹಾರ್ಧ ಕಾರ್ಯಕ್ರಮಗಳು ನಡೆದಿತ್ತು. ಆ ಕಾರ್ಯಕ್ರಮಗಳು ಗಲಭೆಗಳ ನಂತರ ನಡೆದಿದ್ದರೆ ಈ ಬಾರಿ ಸಂಘರ್ಷಗಳು ಜಾರಿಯಲ್ಲಿರುವಂತೆಯೇ ಮುಸ್ಲಿಂ ಮತ್ತು ಯಹೂದಿ ಸೌಹಾರ್ಧ ಕಾರ್ಯಕ್ರಮಗಳೂ ಜಾರಿಯಲ್ಲಿದೆ.

ಹಾಗಾಗಿ, ಈ ಭಯಾನಕ ಘಟನಗಳು, ಸಾವು ನೋವುಗಳು, ಹತಾಶೆಯಿಂದ ಅಘಾತಕ್ಕೊಳಗಾಗಿರುವ ಇಸ್ರೇಲ್ನಲ್ಲಿ ಎಲ್ಲವೂ ಕಳೆದು ಹೋಗಿಲ್ಲ ಎಂಬ ಆಶಾಭಾವ ಮೂಡುತ್ತಿದೆ. ಸಂಘರ್ಷದ ಮಧ್ಯೆಯೇ ಹಲವು ಸಮಾಜಿಕ ಸಂಘಟನೆಗಳ ನೇತೃತ್ವದಲ್ಲಿ ಮುಸ್ಲಿಂ ಮತ್ತು ಯಹೂದಿಗಳ ಸಹ ಜೀವನ ನಡೆಸಲು ಬೇಕಾಗುವ ವಾತಾವರಣ ನಿರ್ಮಿಸುತ್ತಿರುವುದು ಸಮಾನತೆ ಮತ್ತು ಪರಸ್ಪರ ಗೌರವ ಹುಟ್ಟಿಸುವ ಮೊದಲ ಬೀಜಗಳೆಂದು ನಾವು ನೋಡಬಹುದು. ದೇಶದಲ್ಲಿ ಎಲ್ಲವೂ ಸರಿಯಿದ್ದಾಗ ಸೌಹಾರ್ದತೆಯಿಂದ ವಾಸಿಸುವುದು ದೊಡ್ಡ ವಿಚಾರವಲ್ಲ. ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದಾಗಲೇ ಜನರ ಸೌಹಾರ್ಧ ಮನಸ್ಥಿತಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಈ ದೇಶದ ಅಭಿವೃದ್ದಿಗೆ ಎಲ್ಲಾ ಸಮುದಾಯಗಳ ಕೊಡುಗೆಯಿದೆ. ಅರಬರು/ಮುಸ್ಲಿಮರು/ಯಹೂದಿಗಳು ಸೇರಿದಂತೆ ಸಮುದಾಯಗಳ ಅಭಿವೃದ್ದಿಯ ಕೊಡುಗೆಯಿಂದ ಇಸ್ರೇಲ್ ಗಟ್ಟಿಗೊಂಡಿದೆ. ಕೆಲ ಮಾನವ ಹಕ್ಕು ನಾಗರಿಕ ಸಂಘಟನೆಗಳು ಸೌಹಾರ್ದತೆಗಾಗಿ ಕೆಲಸ ಮಾಡಿದೆ. ಸಮ ಸಮಾಜಕ್ಕಾಗಿ ಕೆಲಸ ಮಾಡುವ ಅಂತಹ ಸಂಘಟನೆಗಳ ಕೆಲಸ ಫಲಿತಾಂಶ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇಷ್ಟೊಂದು ಸಂಘರ್ಷಗಳ ಮಧ್ಯೆಯೂ ನಮಗೂ ಅದಕ್ಕೂ ಯಾವ ಸಂಬಂಧವಿಲ್ಲ ಎಂಬಂತೆ ಸೌಹಾರ್ದಯುತವಾಗಿ ಬದುಕುವ ಇಸ್ರೇಲಿನ ಹಲವು ಪ್ರದೇಶಗಳು ಇದಕ್ಕೆ ನಿದರ್ಶನವಾಗಿದೆ. ಯಾರು ಏನೇ ಪ್ರಯತ್ನಪಟ್ಟರೂ ನಾವುಗಳು ಹಂಚಿಕೊಂಡು ಬದುಕುವುದನ್ನು ತಪ್ಪಿಸಲಾಗದು.

ಕೆಲವೇ ಕೆಲವು ತಿಂಗಳುಗಳ ಹಿಂದೆ ಹೊರಳಿ ನೋಡಿ, ದೇಶಾದ್ಯಂತದ ಅರಬ್-ಯಹೂದಿ ವೈದ್ಯಕೀಯ ತಂಡಗಳು ಕರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಒಟ್ಟಾಗಿ ಹೋರಾಡಿದ್ದವು. ವೈರಸ್ ವಿರುದ್ಧ ಜನಸಮುದಾಯದ ಮಧ್ಯೆ ಸೌಹಾರ್ದಯುತವಾಗಿ ಕೆಲಸ ಮಾಡಿದ್ದನ್ನು ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈಗ ಅದೇ ತಂಡಗಳು ಹಿಂಸಾಚಾರದ ವಿರುದ್ಧ ಮತ್ತು ಪರಸ್ಪರ ಸೌಹಾರ್ಧಕ್ಕಾಗಿ ಕರೆ ನೀಡುತ್ತಿದ್ದಾರೆ.

ಕೆಲವು ರಾಜಕಾರಣಿಗಳು, ಸಮುದಾಯದ ಮುಖಂಡರು ಮತ್ತು ಮಾಧ್ಯಮಗಳು ಜನರನ್ನು ಪ್ರಚೋದಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಇಂತಹ ಕಂದಕಗಳನ್ನು ಸೃಷ್ಟಿಸುವವರ ಮಧ್ಯೆ ಮಾನವ ಹಕ್ಕುಗಳ ಪರವಾಗಿನ ಕೆಲ ಅರಬ್ ಮತ್ತು ಯಹೂದಿ ರಾಜಕೀಯ ಮುಖಂಡರು ಸಮುದಾಯಗಳ ಮಧ್ಯೆ ಸಂವಾದವನ್ನು ನಡೆಸುತ್ತಿದ್ದಾರೆ. ಇದು ಮನುಷ್ಯರ ಮಧ್ಯೆ ಇರುವ ಜ್ವಾಲೆಗಳನ್ನು ತಣಿಸುತ್ತಿದೆ.

ಇಸ್ರೇಲಿನಲ್ಲಿ ಸಮುದಾಯಗಳ ಮಧ್ಯೆ ಇರುವ ಆಳವಾದ ಭಿನ್ನಾಭಿಪ್ರಾಯಗಳನ್ನು ಅಲ್ಲಗಳೆಯುವಂತಿಲ್ಲ. ಜೆರುಸಲೆಮ್, ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆಯಲ್ಲಿನ ಘಟನೆಗಳು ಅರಬ್ ಮತ್ತು ಯಹೂದಿ ಸಮುದಾಯಗಳ ಮಧ್ಯೆ ಇರುವ ಸಂಘರ್ಷವನ್ನೇ ಸೂಚಿಸುತ್ತದೆ. ಇದ್ಯಾವುದಕ್ಕೂ ಯುದ್ದ, ಗಲಭೆಗಳು ಪರಿಹಾರವಲ್ಲ. ಪರಸ್ಪರ ಮಾತುಕತೆಗಳೇ ಈ ಸಂಘರ್ಷಕ್ಕೆ ಇರುವ ಪರಿಹಾರ. ಪರಸ್ಪರ ಸೌಹಾರ್ಧ ಸಂಬಂಧಗಳೇ ಈಗಿರುವ ಇಸ್ರೇಲಿನ ದುಗುಡಯುಕ್ತ ವಾತಾವರಣಕ್ಕೆ ಏಕೈಕ ಪರಿಹಾರವಾಗಿದೆ.

ಇಸ್ರೇಲಿನಲ್ಲಿ ಅರಬ್ಬರು ಮತ್ತು ಯಹೂದಿಗಳು ಒಂದೇ ನಗರಗಳಲ್ಲಿ ಅಕ್ಕಪಕ್ಕದಲ್ಲೇ ವಾಸಿಸುತ್ತಾರೆ. ವಿಶೇಷವಾಗಿ ಅಪಾರ್ಟ್ಮೆಂಟ್ ಕಟ್ಟಡಗಳು ಮತ್ತು ಸೈಟುಗಳನ್ನು ಹಂಚಿಕೊಳ್ಳುವುದರಲ್ಲಿ ಈವರೆಗೂ ತಾರತಮ್ಯ ಮಾಡಿಲ್ಲ. ಆದರೆ ಕಳೆದ ಕೆಲ ದಿನಗಳು ಎರಡೂ ಜನಸಮುದಾಯಗಳು ಭಯ ಮತ್ತು ಅಪನಂಬಿಕೆಯ ವಾತಾವರಣದಲ್ಲಿ ಬದುಕುತ್ತಿದೆ.

ಇದು ಎಷ್ಟು ಅಪಾಯಕಾರಿ ಮತ್ತು ಜನರನ್ನು ಮಾನಸಿಕತೆಯ ಮೇಲೆ ಹೊಡೆತ ಬೀರುತ್ತೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕು. ಅದಕ್ಕಾಗಿಯೇ ನೆರೆಹೊರೆಯವರನ್ನು, ಬೇರೆ ಬೇರೆ ಸಮುದಾಯಗಳನ್ನು ಒಂದುಗೂಡಿಸುವ ಕಾರ್ಯಚಟುವಟಿಕೆಗಳು ಇಸ್ರೇಲಿನ ಸಧ್ಯದ ಅವಶ್ಯಕತೆಯಾಗಿದೆ.

ಸೌಹಾರ್ದತೆಯನ್ನು ಹುಟ್ಟಿಸುವ ಮತ್ತು ಹರಡುವ ಈ ಮೌಲ್ಯಯುತ ಕೆಲಸವನ್ನು ಜನರೇ ಖುದ್ದಾಗಿ ಮಾಡಬೇಕಿದೆ. ಏಕೆಂದರೆ ದೇಶದ ಪ್ರಧಾನಿಯೇ ಒಂದು ಸಮುದಾಯವನ್ನು ಅಪರಾಧ ಮತ್ತು ಹಿಂಸಾಚಾರಕ್ಕೆ ಪ್ರಚೋದಿಸಿದಾಗ ಈ ನೆಲ ಮೂಲವೇ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ‌.


  • ಅಲುಫ್ ಬೆನ್ ಇಸ್ರೇಲ್ ನ ಖ್ಯಾತ ಪತ್ರಕರ್ತರು. ದೇಶದ ನಂಬರ್ 1 ಪತ್ರಿಕೆಯ ಪ್ರಧಾನ ಸಂಪಾದಕರಾಗಿರುವ ಅಲುಫ್ ಬೆನ್ ಚಿಕ್ಕಪ್ಪ ಗಾಜಾ ಪಟ್ಟಿಯಲ್ಲಿ ನಡೆದ ದಾಳಿಯ ವೇಳೆ ಮೃತರಾಗಿದ್ದಾರೆ. ಹಲವು ಪ್ರತಿಷ್ಟಿತ ಪತ್ರಿಕೆಯಲ್ಲಿ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿರುವ ಅಲುಫ್ ಬೆನ್ ಇಸ್ರೇಲ್ ನ ಎಲ್ಲಾ ಗಲಭೆ, ಯುದ್ದಗಳನ್ನು ಖುದ್ದು ವರದಿ ಮಾಡಿದ್ದಾರೆ. ಮಾನವ ಹಕ್ಕುಗಳು, ಸಮಾನತೆಯ ಪ್ರತಿಪಾದಕರಾಗಿರುವ ಅಲುಫ್ ಬೆನ್ ಬರಹಗಳ ಜಗತ್ತಿನ ಎಲ್ಲಾ ಕಡೆ ನಡೆಯುವ ದೌರ್ಜನ್ಯವನ್ನು ವಿರೋಧಿಸುತ್ತಾರೆ. ಅವರ ಸಂಪಾದಕೀಯವನ್ನು ಅವರ ಆಶಯಕ್ಕೆ ಕುಂದು ಬಾರದ ರೀತಿಯಲ್ಲಿ ಅನುವಾದ ಮಾಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಟ ‘ಸಂಚಾರಿ’ ವಿಜಯ್ ಇನ್ನಿಲ್ಲ..!

Published

on

ಸುದ್ದಿದಿನ, ಬೆಂಗಳೂರು: ಶನಿವಾರ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ‌’ಸಂಚಾರಿ’ ವಿಜಯ್ ( 38) ಮೆದುಳು ನಿಷ್ಕ್ರಿಯಗೊಂಡು ನಿಧನರಾಗಿದ್ದಾರೆ.

ಸ್ನೇಹಿತನ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಕರೆಂಟ್ ಕಂಬಕ್ಕೆ ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಇದರಿಂದಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋವಿಡ್ ಮೂರನೇ ಅಲೆ ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Published

on

ಸುದ್ದಿದಿನ,ಶಿವಮೊಗ್ಗ: ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸರ್ಕಾರ ಎಲ್ಲಾ ಮುಜಾಗರೂಕತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ಭೀತಿಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಕೋವಿಡ್ ನಿರ್ವಹಣೆ ಹಾಗೂ ವಿವಿಧ ಅಭಿವೃದ್ದಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೂರನೇ ಅಲೆ ಕುರಿತು ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ಸರ್ಕಾರ ಡಾ.ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ಈಗಾಗಲೇ ರಚಿಸಿದೆ. ಈ ಸಮಿತಿ ಮೂರ್ನಾಲ್ಕು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದು, ಸಮಿತಿಯ ವರದಿಯ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಮೂರನೇ ಅಲೆಯಿಂದ ಮಕ್ಕಳಿಗೆ ತೊಂದರೆಯಾಗಲಿದೆ ಎಂಬ ವರದಿಗಳಿದ್ದು, ಕೋವಿಡ್‍ನಿಂದ ಮಕ್ಕಳನ್ನು ರಕ್ಷಿಸಲು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 75 ಮಕ್ಕಳ ಐಸಿಯು ಬೆಡ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ,.5ಕ್ಕಿಂತ ಕೆಳಗೆ ಇಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ವೈದ್ಯಕೀಯ ಸೇವೆ ಉತ್ತಮಪಡಿಸಲು ಸರ್ಕಾರ ಹಲವು ದಿಟ್ಟ ಹೆಜ್ಜೆ ಇರಿಸಿದೆ. ಇದೇ ಮೊದಲ ಬಾರಿಗೆ 1780 ವೈದ್ಯರನ್ನು ರಾಜ್ಯದಲ್ಲಿ ನೇರ ನೇಮಕಾತಿ ಮೂಲಕ ಪಡೆದುಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಗೆ 83 ವೈದ್ಯರ ನೇಮಕ ಮಾಡಲಾಗಿದ್ದು, ಇದರಲ್ಲಿ 29 ಮಂದಿ ತಜ್ಞ ವೈದ್ಯರಿದ್ದಾರೆ. ಜಿಲ್ಲೆಯ ವೈದ್ಯಕೀಯ ಕ್ಷೇತ್ರದ ಸುಧಾರಣೆ ಕುರಿತು ಪರಿಶೀಲನೆ ನಡೆಸಲು ಜಿಲ್ಲೆಗೆ ಮತ್ತೊಮ್ಮೆ ಭೇಟಿ ನೀಡಲು ಆರೋಗ್ಯ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ತಜ್ಞರ ಸಮಿತಿಯಿಂದ ಆಡಿಟ್

ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸಾವುಗಳ ಕುರಿತು ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಆಡಿಟ್ ನಡೆಸಿ ವರದಿಯನ್ನು ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚಾಗಿರಲು ಕಾರಣವನ್ನು ಕಂಡುಕೊಳ್ಳಲು ಬೆಂಗಳೂರಿನಿಂದ ತಜ್ಞರ ಸಮಿತಿಯನ್ನು ಕಳುಹಿಸಲಾಗುವುದು. ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾದ 72ಗಂಟೆಯೊಳಗೆ ಸಾವಿಗೀಡಾದವರ ಪ್ರಮಾಣ ಹೆಚ್ಚಾಗಿದ್ದು, ಈ ಕುರಿತು ಸಮಿತಿ ಪರಿಶೀಲನೆ ನಡೆಸಿ ವರದಿಯನ್ನು ನೀಡಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಸಭೆಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರ ಕೋವಿಡ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ಹೋಂ ಐಸೋಲೇಷನ್‍ಗೆ ಅವಕಾಶ ನೀಡದರೆ ಕೋವಿಡ್ ಕೇರ್ ಸೆಂಟರ್‍ಗಳಲ್ಲಿಯೇ ಪೀಡಿತರಿಗೆ ಚಿಕಿತ್ಸೆ ಒದಗಿಸಬೇಕು. ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಇದಕ್ಕೆ ಅನುಗುಣವಾಗಿ ವೈದ್ಯರು ಸೇರಿದಂತೆ ಮೂಲಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು, ನರ್ಸ್‍ಗಳು ಹಾಗೂ ಡಿ ಗ್ರೂಪ್ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವ ಅನಿವಾರ್ಯತೆಯಿದ್ದು, ಈ ಕುರಿತು ಆದಷ್ಟು ಬೇಗನೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಜಿಲ್ಲೆಯ ಕೋವಿಡ್ ನಿರ್ವಹಣೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ಮಾಹಿತಿಯನ್ನು ನೀಡಿದರು.

ನಗರಾಭಿವೃದ್ಧಿ ಸಚಿವ ಬಿ.ಬಸವರಾಜು, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜೂನ್ 14,16,18 ರಂದು ಬೆಳಿಗ್ಗೆ 6 ರಿಂದ 12 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ; ಜೂನ್ 14 ರಿಂದ 21 ರವರೆಗೆ ಲಾಕ್‍ಡೌನ್ ಮುಂದುವರಿಕೆ : ಜಿಲ್ಲಾಧಿಕಾರಿ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಜೂನ್ 14 ರವರೆಗೆ ಇದ್ದ ಲಾಕ್‍ಡೌನ್ ಅನ್ನು ಜೂನ್ 21 ರ ಬೆಳಿಗ್ಗೆ 6 ರವೆರೆಗೆ ವಿಸ್ತರಿಸಿ ಆದೇಶಿಸಲಾಗಿದೆ.

ಜಿಲ್ಲಾಡಳಿತ ಭವನದಲ್ಲಿ ಇಂದು (ಶನಿವಾರ) ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು, ಈ ಹಿಂದಿನ ಮಾರ್ಗಸೂಚಿಯಂತೆ ಲಾಕ್‍ಡೌನ್‍ನ ಎಲ್ಲಾ ನಿರ್ಬಂಧಗಳು ಮುಂದುವರೆದಿದ್ದು, ಜೂನ್ 14, 16, 18 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು ಮೀನು ಹಾಗೂ ಮದ್ಯದ ಅಂಗಡಿಗಳು, ಕೋವಿಡ್-19 ನಿರ್ವಹಣೆಯ ಸಂಬಂಧ ಹೊರಡಿಸಲಾದ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ಅನುಮತಿಸಲಾಗಿರುತ್ತದೆ.

ನಿರ್ಮಾಣ ಸ್ಥಳದಲ್ಲಿಯೇ ವಾಸವಾಗಿರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿಸಲಾಗಿರುವ ಹಿನ್ನೆಲೆಯಲ್ಲಿ ಕಟ್ಟಡ ಕೆಲಸ, ಕಾಮಗಾರಿಗಳು, ಕಟ್ಟಡ ಕಾಮಗಾರಿ ಸಾಮಾಗ್ರಿ ಮತ್ತು ಅಗತ್ಯ ವಸ್ತುಗಳಾದ ಸಿಮೆಂಟ್, ಕಬ್ಬಿಣ, ಪೇಂಟ್ಸ್, ಹಾರ್ಡ್‍ವೇರ್, ಗ್ಲಾಸ್, ಪ್ಲೆ-ವುಡ್, ಸಾಮಿಲ್ಸ್, ಎಲೆಕ್ಟ್ರೀಕಲ್ಸ್, ಟೈಲ್ಸ್ ಅಥವಾ ಮಾರ್ಬಲ್ಸ್, ಸ್ಯಾನಿಟರಿ ವೈರ್ಸ್ ಅಂಗಡಿಗಳ ಚಟುವಟಿಕೆಗಳನ್ನು ನಡೆಸಲು ಜೂನ್ 14, 16, 18 ರ ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ ಮೂರು ದಿನ ಅವಕಾಶ ಕಲ್ಪಿಸಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜನಪ್ರತಿನಿಧಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು ಈ ಸಾಂಕ್ರಮಿಕವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು 25 ಗ್ರಾಮಗಳಲ್ಲಿ ವರದಿಯಾಗಿದ್ದು, ಆ ಗ್ರಾಮಗಳನ್ನು ಕಂಟೆನ್ಮೆಂಟ್ ಜೋನ್ ಮಾಡಲಾಗಿದೆ. ಈ ಗ್ರಾಮಗಳಲ್ಲಿ ವೈದ್ಯಕೀಯ ತುರ್ತು ಹಾಗೂ ಅಗತ್ಯ ಸೇವೆಗಳ ಹೊರತುಪಡಿಸಿ ಗ್ರಾಮದಿಂದ ಹೊರ ಹಾಗೂ ಒಳ ಸಂಚಾರವನ್ನು ಕಟ್ಟುನಿಟ್ಟಾಗಿ ಬಿಗಿಗೊಳಿಸಲಾಗಿದೆ.

ನರೇಗಾ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಉಳಿದ ದಿನ ಹಾಲು ಮೊಟ್ಟೆ, ಮೆಡಿಕಲ್ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ತರಕಾರಿ ಹಣ್ಣುಗಳನ್ನು ತಳ್ಳುಗಾಡಿ ಮುಖಾಂತರ ಮನೆ ಮನೆಗೆ ಹೋಗಿ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ.

ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು,
6-10 ಪ್ರಕರಣಗಳಿರುವ 64 ಗ್ರಾಮಗಳಲ್ಲಿ ಸರ್ವೇಕ್ಷಣೆಯನ್ನು ತೀವ್ರಗೊಳಿಸಿ ಸ್ಥಳೀಯ ಗ್ರಾಮಪ್ರತಿನಿಧಿಗಳು, ಪಿಡಿಓ ಇವರುಗಳಿಂದ ಜಾಗೃತಿ ಮೂಡಿಸಿ ಟೆಸ್ಟ್ ಗಳನ್ನು ಹೆಚ್ಚು ಮಾಡಲು ನಿರ್ದೇಶಿಸಲಾಗಿದೆ. ಹಾಗೂ ಜಿಲ್ಲೆಯಲ್ಲಿ ಜೂ.1 ರಂದು ಶೇ.23.47, ಜೂ.9 ರಂದು ಶೇ.12.65, ಜೂ.10 ರಂದು ಶೇ.10.23, ಜೂ.11 ರಂದು ಶೇ.6.81 ರಷ್ಟು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವ್ ದರ ಕಡಿಮೆಯಾಗುತ್ತಿದೆ. ಇದು ಹೀಗೆ ಮುಂದುವರಿಯಬೇಕು ಎಂದರೆ ನಿರ್ಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದರು.

ಅನಗತ್ಯವಾಗಿ ಮನೆಯಿಂದ ಯಾರು ಹೊರ ಬರಬಾರದು ಹಾಗೂ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರನ್ನು ನೋಡಿಕೊಳ್ಳುವ ಅಟೆಂಡರ್‍ಗಳು ಸುಮ್ಮಸುಮ್ಮನೆ ಕಾರಣ ಹೇಳಿ ಹೊರಬರಬಾರದು ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ರಿಷ್ಯಂತ್ ಮಾತನಾಡಿ, ಜಿಲ್ಲೆಯಲ್ಲಿ 26 ಕಡೆ ಚೆಕ್‍ಪೋಸ್ಟ್ ಇದ್ದು ಅಲ್ಲಿ ಸಿಬ್ಬಂದಿಗಳನ್ನು ಹೆಚ್ಚಳ ಮಾಡಲಾಗುವುದು. ಕೆಲವೆಡೆ ಇಬ್ಬರು ಸಿಬ್ಬಂದಿ ಇದ್ದು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಇದೆ. ಹಾಗಾಗಿ ಹೋಂ ಗಾರ್ಡ್ ಗಳನ್ನು ಪಡೆದು ಸಿಬ್ಬಂದಿ ನೇಮಕ ಮಾಡಲಾಗುವುದು.

ಹಾಗೂ ನಿಯಾಮ ಉಲ್ಲಂಘಿಸುವವರ ವಿರುದ್ಧ ಕೇಸ್ ದಾಖಲಾಗಿಸಲಾಗುವುದು. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವ ಬೈಕ್ ಸವಾರರನ್ನು ದಂಡ ವಿಧಿಸಿ ವಾಹನಗಳನ್ನು ಸೀಜ್ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ಪ್ಯಾಟ್ರೋಲ್ ವಾಹನಗಳಿಂದ ಗಸ್ತು ನಡೆಸಲಾಗುವುದು. ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳುವವರು ಹೆಚ್ಚಾಗಿದ್ದು ಅಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಿ ಜನದಟ್ಟನೆ ನಿಯಂತ್ರಿಸಲಾಗುವುದು ಎಂದರು.

ಇದನ್ನೂ ಓದಿ | ದಾವಣಗೆರೆ | ಜಿಲ್ಲೆಯ 25 ಗ್ರಾಮಗಳು ನಿಯಂತ್ರಿತ ವಲಯ : ಜಿಲ್ಲಾಧಿಕಾರಿ https://suddidina.com/davanagere-25-villages-in-the-district-controlled-zone-district-collector/

ಜಿ.ಪಂ. ಸಿಇಒ ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಲಾಗುತ್ತಿದ್ದು, ಟೆಸ್ಟ್ ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಹಾಗೂ ಪಾಸಿಟಿವ್ ದರ ಕಡಿಮೆಯಾಗುತ್ತಿದೆ. ಸೋಂಕಿತರನ್ನ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲು ತಿಳಿಸಲಾಗುತ್ತಿದೆ ಎಂದರು.

ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾಹಿತಿ ನೀಡಿ ಜಿಲ್ಲೆಯಲ್ಲಿ ಈಗಾಗಲೇ 3,69,925 ಜನರಿಗೆ ಲಸಿಕೆ ಹಾಕಲಾಗಿದೆ ಎಂದರು.

ಸಭೆಯಲ್ಲಿ ಎಸಿ ಮಮತ ಹೊಸಗೌಡರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಒ ಡಾ.ನಾಗರಾಜ್, ಯೋಜನಾಧಿಕಾರಿ ನಜ್ಮಾ, ಎಎಸ್‍ಪಿ ರಾಜೀವ್, ಡಾ.ನಟರಾಜ್, ಡಾ.ಯತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

25 ಗ್ರಾಮಗಳು ಕಂಟೆನ್ಮೆಂಟ್ ಜೋನ್ ವ್ಯಾಪ್ತಿಗೆ

ದಾವಣಗೆರೆ ತಾಲ್ಲೂಕಿನ ಅಣಬೇರು, ಕುಕ್ಕುವಾಡ, ಕೈದಾಳೆ, ಕುರ್ಕಿ, ತುರ್ಚಘಟ್ಟ, ಬೇತೂರು, ಕಾಶೀಪುರ, ಮಳಲಕೆರೆ ಗ್ರಾಮಗಳು, ಹರಿಹರ ತಾಲ್ಲೂಕಿನ ಗುತ್ತೂರು, ಕೆ.ಬೇವಿನಹಳ್ಳಿ, ನಂದಿತಾವರೆ, ಭಾನುವಳ್ಳಿ, ಹೊಳೆಸಿರಿಗೆರೆ, ಹಾಲಿವಾಣ ಗ್ರಾಮಗಳು, ಹೊನ್ನಾಳಿ ತಾಲ್ಲೂಕಿನ ಕುಳಗಟ್ಟೆ, ಹನುಮನಹಳ್ಳಿ, ಕೂಲಂಬಿ, ಗೊಲ್ಲರಹಳ್ಳಿ, ಐನೂರು ಗ್ರಾಮಗಳು, ನ್ಯಾಮತಿ ತಾಲ್ಲೂಕಿನ ದಾನಿಹಳ್ಳಿ, ಕುಂಕೊವ, ಫಲವನಹಳ್ಳಿ, ಸುರಹೊನ್ನೆ ಗ್ರಾಮಗಳು, ಚನ್ನಗಿರಿ ತಾಲ್ಲೂಕಿನ ಸಿದ್ದನಮಠ ಗ್ರಾಮ ಹಾಗೂ ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮಗಳಲ್ಲಿ ಹತ್ತಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಗ್ರಾಮಗಳನ್ನು ಕಂಟೆನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending