ದಿನದ ಸುದ್ದಿ
ಪರಿಸರದ ಪ್ರಜ್ಞೆ ಇಲ್ಲದಾಗ, ಸೃಷ್ಟಿಸುತ್ತಿರುವ ಜಾಗತಿಕ ತಲ್ಲಣಗಳು..!
- ಸೋಮನಗೌಡ. ಎಸ್.ಎಂ ಕಟ್ಟಿಗೆಹಳ್ಳಿ,ಪತ್ರಕರ್ತರು, ಬೆಂಗಳೂರು
ಪರಮಾಣು ಬಾಂಬುಗಳನ್ನು ಒಂದಾದ ಮೇಲೆ ಒಂದರಂತೆ ಸಿಡಿಸಿ ಈ ಜಗತ್ತಿನ ಪವರ್ ಫುಲ್ ರಾಷ್ಟ್ರ ಅಮೆರಿಕವನ್ನೇ ನಿರ್ನಾಮ ಮಾಡುತ್ತೇನೆ ಎಂದಿದ್ದ ಉತ್ತರ ಕೋರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಈಗ ಅನಾರೋಗ್ಯದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ತನ್ನಲ್ಲಿರುವ ಪರಮಾಣು ಸಿಡಿತಲೆಗಳಿಂದ ಇರಾನ್ ದೇಶವನ್ನೇ ನಿರ್ನಾಮ ಮಾಡಬಲ್ಲೆ ಅಂತ ಹೇಳಿದ್ದ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇಡೀ ವಿಶ್ವವನ್ನೇ ದಂಗು ಬಡಿಸುತ್ತಿರುವ ಕೋವಿಡ್-19 ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ.
ಅತ್ಯಾಧುನಿಕ ಮಿಸೈಲ್ಗಳು, ಅಣುಬಾಂಬ್ಗಳು, ಶಸ್ತ್ರಸಜ್ಜಿತ ಸೈನ್ಯನಿಂದ ತಮ್ಮ ತಮ್ಮ ದೇಶಗಳನ್ನು ರಕ್ಷಿಸಿಕೊಂಡಿರುವ ಬಹುತೇಕ ಎಲ್ಲಾ ದೇಶಗಳನ್ನು ಕಾಣದ ಒಂದು ವೈರಣು ಜಗತ್ತನ್ನೇ ನಾಶ ಮಾಡಲು ತನ್ನ ಕಬಂಧಬಾಹುವನ್ನು ಚಾಚುತ್ತಲೇ ಇದೆ.
ವಿಶ್ವದ ಜನರೆಲ್ಲರೂ ಕೊರೋನಾ ವೈರಸ್ ಎಂಬ ಯಃಕಶ್ಚಿತ್ ಸೂಕ್ಷ್ಮಾಣುವಿಗೆ ಹೆದರಿ ಮನೆಯಲ್ಲೇ ಅವಿತು ಕುಳಿತಿದ್ದಾರೆ. ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪ್ರಪಂಚದ ಎಲ್ಲಾ ನಗರಗಳು ಬಿಕೋ ಎನ್ನುತ್ತಿವೆ. ಆಕಾಶ ಶುಭ್ರವಾಗಿದೆ. ನದಿಗಳು ಶುದ್ಧವಾಗಿ ಹರಿಯುತ್ತಿವೆ. ಕಾಡುಪ್ರಾಣಿ, ಪಕ್ಷಿಗಳೆಲ್ಲವೂ ನಗರಗಳತ್ತ ಮುಖಮಾಡುತ್ತಿವೆ.
ಮತ್ತೊಂದೆಡೆ ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಬಡತನದ ರೇಖೆ ಹೆಚ್ಚಾಗುತ್ತಿದೆ. ಕೋವಿಡ್ ಎಂಬ ಸೂಕ್ಷ್ಮಾಣು ಅಕ್ಷರಶಃ ಜಗತ್ತನ್ನೇ ತಲ್ಲಣಗೊಳಿಸಿದೆ. ಈಗ ನಾವು ವಿಜ್ಞಾನದ ಯುಗದಲ್ಲಿದ್ದೇವೆ. ನಮ್ಮ ಮುಂದೆ ವಿಜ್ಞಾನ ಹೊಸ ತರ್ಕ ಮತ್ತು ಹೊಸ ಸತ್ಯ ಶೋಧನೆಯನ್ನು ಮುಂದಿಟ್ಟಿದೆ.
ಆದರೆ ಮನುಷ್ಯ ಇಂದಿಗೂ ಎದುರಿಸುತ್ತಿರುವ ಹಳೆಯ ಯಕ್ಷಪ್ರಶ್ನೆ ನಾವು ಪರಿಸರ ಮುಂದೆ ಕೇವಲ ಬುದ್ಧಿ ಜೀವಿಗಳಷ್ಟೇ? ಜೀವ ಜಗತ್ತಿನ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಮುಂದೆ ಮನುಷ್ಯ ಎದುರಿಸುವ ಅತ್ಯಂತ ದೊಡ್ಡ ವಿಪತ್ತು ಜೈವಿಕ ಪ್ರಳಯ!
ಇಡೀ ವಿಶ್ವ ಒಂದು ಬೀಜರೂಪದ ಮಹಾನ್ ಅಗ್ನಿ. ಬಿಂದುವಿನಿಂದ ಆಸ್ಫೋಟಗೊಂಡು ವಿಶ್ವರೂಪ ತಳೆಯುತ್ತಾ ಸಾಗುತ್ತಿದೆ. ಸೃಷ್ಟಿ ಸ್ಥಿತಿ ಲಯಗಳ ನಿರಂತರ ಆವರ್ತದಲ್ಲಿ ವಿಶ್ವ ಇದೆ ಎಂದು ಪ್ರತಿಪಾದಿಸುತ್ತಾರೆ ಖ್ಯಾತ ಖಭೌತ ವಿಜ್ಞಾನಿ ಹಬಲ್ ಮತ್ತು ರಾಬರ್ಟ್ ಸನ್.
ಭೂಮಿಯ ಅವೈಜ್ಞಾನಿಕ ಮೂಲದಿಂದ ಜೈವಿಕ ಸೃಷ್ಟಿಯ ದಾರಿಯಲ್ಲಿ ಜೀವಿಗಳ ಬೆಳವಣಿಗೆ ಹೇಗಾಯಿತು ಎಂಬುದಕ್ಕೆ ನಿಖರವಾದ ಉತ್ತರ ಇನ್ನೂ ದೊರೆಯದಿದ್ದರೂ ವಿಶ್ವಸ್ಥಾಯಿ ವಾದ ಸಿದ್ಧಾಂತದ ಪ್ರವರ್ತಕರಲ್ಲಿ ಮುಖ್ಯವಾದ ಖಗೋಳ ವಿಜ್ಞಾನಿಗಳಾದ ಫ್ರೆಡ್ಹಾಯ್ಲ್ ಮತ್ತು ಭಾರತೀಯ ಗಣಿತ ಶಾಸ್ತ್ರಜ್ಞ ವಿಷ್ಣುಜಯಂತ್, ನಾರ್ಲೀಕರ್ ಮುಂತಾದವರು ವಿಶ್ವವನ್ನು ಅನಾದಿ, ಅನಂತ ಎನ್ನುತ್ತಾರೆ.
ಭೂಮಿ ಲಕ್ಷಾಂತರ ವರ್ಷಗಳ ಹಿಂದೆ ಸೂಕ್ಷ್ಮಾಣು ಜೀವಿಯಿಂದ ಪ್ರಾರಂಭಗೊಂಡ ಜೀವ ಸಂಕುಲ ಮನುಷ್ಯ ಸೇರಿದಂತೆ ಸಕಲ ಚರಾಚರ ಜೀವಿಗಳಿಗೆ ಆವಾಸಸ್ಥಾನ ಈ ವಸಂಧರೆ. ಜೀವವಿಕಾಸದ ಅತ್ಯಂತ ಸಂಕೀರ್ಣವೂ, ವಿಸ್ಮಯಗಳ ಮ್ಯಾಜಿಕ್ ಬಾಲ್ ಈ ಧರೆ.
ನಾವು ಭೂಮಿಯ ಒಂದು ಭಾಗ ಮಾತ್ರ ಎನ್ನುವುದನ್ನು ಮನವರಿಕೆ ಮಾಡಿ ಕೊಳ್ಳಬೇಕು. ಇಲ್ಲಿ ಇರುವುದು ಮನುಷ್ಯ ಜೀವಿ ಮಾತ್ರವಲ್ಲ. ಜೀವ ಪರಿಸರದ ಒಂದು ಅಂಗ ಮಾತ್ರ. ಈ ಧರೆಯಲ್ಲಿ ಮನುಷ್ಯನಂತೆಯೇ ಲಕ್ಷಾಂತರ ಜೀವಿಗಳಿಗೂ ಬದುಕುವ ಹಕ್ಕಿದೆ, ಸ್ವಾತಂತ್ರವಿದೆ.
ಮನುಷ್ಯನಿಗೆ ತಗುಲಿರುವ ಕೊರೋನಾ ಸೂಕ್ಷ್ಮಾಣು ಈಗ ಪ್ರಾಣಿ ಸಂಕುಲವನ್ನು ಆವರಿಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಅಮೆರಿಕದ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿರುವ ನಾಲ್ಕು ವರ್ಷದ ‘ಮಲಯನ್’ ಎಂಬ ಹೆಸರಿನ ಹುಲಿಗೆ ಕೋವಿಡ್-19 ವೈರಸ್ ತಗುಲಿದೆ.
ಈಗ ಮನುಷ್ಯನನ್ನಷ್ಟೇ ಅಲ್ಲ ಪ್ರಾಣಿಗಳಿಗೂ ಮಾರಕ ವೈರಾಣು ದಾಂಗುಡಿ ಇಟ್ಟಿರುವುದು ಪ್ರಾಣಿ ತಜ್ಞರಲ್ಲಿ ಆತಂಕ ಸೃಷ್ಟಿಸಿದೆ. ಮನುಷ್ಯನಿಂದ-ಪ್ರಾಣಿಗಳಿಗೆ ಸೋಂಕು ತಗುಲಿರುವುದು ಆತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಮನುಷ್ಯ ಸಮಾಜದಿಂದ ದೂರವಿರುವ ಕಾಡು ಪ್ರಾಣಿಗಳನ್ನು ಕೊರೋನಾ ಮತ್ತಿತರ ರೋಗಾಣುಗಳು ಬಾಧಿಸಿದರೆ ಭವಿಷ್ಯದಲ್ಲಿ ಜೈವಿಕ ಸರಪಳಿಯ ಕೊಂಡಿ ಕಳಚಿ ಈ ಪರಿಸರವೇ ನಾಶವಾದೀತು! ಕಾಡುಪ್ರಾಣಿಗಳಿಗೆ ಕೊರೋನಾ ವೈರಸ್ ಹಬ್ಬುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಇವುಗಳನ್ನು Zoonatic ಕಾಯಿಲೆಗಳೆಂದು ಕರೆಯಬಹುದು. ಇವು ಮನುಷ್ಯನ ಹಲವು ಕಾರ್ಯ ಚಟುವಟಿಕೆಗಳಿಂದಲೇ ಹರಡಬಹುದು.
ಉದಾಹರಣೆಗೆ ಕೊರೋನಾದಂತೆಯೇ ಎಬೊಲ, ಸಾರ್ಸ್ ವೈರಸ್ಗಳು ವನ್ಯಜೀವಿಗಳಿಂದಲೇ ಬಂದಿವೆ. ಅಂದರೆ ಹಾವು, ಬಾವಲಿ ಮತ್ತು ಇತರ ಪ್ರಾಣಿಗಳಿಂದ, ಗಿಡ ಮತ್ತು ಕೀಟಗಳಿಂದ. ಜೊನಾಟಿಕ್ ಕಾಯಿಲೆಗಳು ಹೆಚ್ಚಾಗಿ ಹರಡುವುದು ಮನುಷ್ಯನ ಚಟುವಟಿಕೆಗಳಿಂದಲೇ. ಆತ ಕಡಿಯುವ ಕಾಡು, ಸೃಷ್ಟಿಸುವ ಪರಿಸರ ಮಾಲಿನ್ಯ ಮತ್ತು ಜಾಗತಿಕ ವ್ಯಾಪಾರ ವಹಿವಾಟುಗಳು ಈ ವಿಷಯದಲ್ಲಿ ಬೃಹತ್ ಪಾತ್ರವನ್ನೇ ಸೃಷ್ಟಸಿದೆ.
ನೋವೆಲ್ ಕೊರೋನಾ ಅಥವಾ ಕೋವಿಡ್-19 ಎನ್ನುವ ಮಾರಕ ಕಾಯಿಲೆ ಬಂದಿದ್ದು ಮಾತ್ರ ಚೀನಾದ ವುಹಾನ್ ಮಾರುಕಟ್ಟೆಯಿಂದ. ಒಂದು ಬಾವಲಿಯೊಳಗಿನ ಸೂಕ್ಷ್ಮಾಣು ಮನುಷ್ಯಲೋಕದ ಎಲ್ಲಾ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿದೆ. ಲಸಿಕೆಯೇ ಇಲ್ಲದ ಈ ವೈರಸ್ಗೆ ಲಾಕ್ಡೌನ್, ಸೀಲ್ಡೌನ್ ಮತ್ತು ಕ್ವಾರಂಟೈನ್ ಎನ್ನುವ ಸ್ವಯಂ ನಿಯಂತ್ರಣವೇ ಮದ್ದು.
ಇದರಿಂದಾಗಿ ಭೂಮಿಯ ಕಲುಷಿತ ಪರಿಸರದ ಮೇಲೆ ಎಂತಹ ಪರಿಣಾಮ ಉಂಟುಮಾಡಿದೆ ಎನ್ನುವುದು ನಾವೆಲ್ಲಾ ನೋಡುತ್ತಿದ್ದೇವೆ. ಪ್ರಕೃತಿ ಮಾತೆ ಮನುಷ್ಯನಿಗೆ ಅನೇಕ ಎಚ್ಚರಿಕೆಗಳನ್ನು ನೀಡುತ್ತಾಬಂದಿದೆ.
ಸಾಂಕ್ರಾಮಿಕ ರೋಗಗಳು ಈ ಜಗತ್ತಿನಲ್ಲಿ ಮಹತ್ವದ ಬದಲಾವಣೆಗೆ ಹಲವು ಬಾರಿ ಮುನ್ನುಡಿ ಬರೆದಿವೆ.
ಈ ಹಿಂದೆ ಜಗತ್ತನ್ನೇ ಕಾಡಿದ ಮಹಾಮಾರಿಗಳಿಗೆ ಬಹುದೊಡ್ಡ ಇತಿಹಾಸವೇ ಇದೆ. 12 ಸಾವಿರ ವರ್ಷಗಳಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಜಗತ್ತನ್ನು ದಂಗು ಬಡಿಸಿವೆ. ಚೀನಾದ ಹಮೀನ್ ಮಂಘಿ ಎಂಬಲ್ಲಿ ಪತ್ತೆ ಮಾಡಲಾದ ಸುಮಾರು 5000 ವರ್ಷಗಳಷ್ಟು ಹಳೆಯ ಮನೆಯೊಂದರಲ್ಲಿ ಉತ್ಕನನದ ವೇಳೆ ಸುಟ್ಟು ಕರಕಲಾದ ನೂರಾರು ಅಸ್ತಿಪಂಜರಗಳು ಕಂಡವು.
ಯಾವುದೋ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಇಡೀ ಊರಿಗೂರೇ ಬಲಿಯಾಗಿರಬಹುದು. ಎಲ್ಲ ಶವಗಳನ್ನು ಒಂದೇ ಮನೆಯಲ್ಲಿ ಸುಟ್ಟುಹಾಕಿರಬಹುದು ಎಂದು ಪುರಾತತ್ವ ಸಂಶೋಧಕರು ವಿಶ್ಲೇಷಿಸಿದ್ದಾರೆ. ಕ್ರಿ.ಪೂ 430ರಲ್ಲಿ ಗ್ರೀಸ್ ದೇಶದ ಅಥೆನ್ಸ್ನಲ್ಲಿ ಕಂಡ ವಿಚಿತ್ರ ಕಾಯಿಲೆಗೆ ಲಕ್ಷಾಂತರ ಮಂದಿ ಸತ್ತರು. ಇದನ್ನು ಪ್ಲೇಗ್ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.
ಕ್ರಿ.ಶ. 165 ರಿಂದ 180 ಹಾಗೂ 250 ರಿಂದ 271 ಮತ್ತು 541-542ರಲ್ಲಿ ರೋಮ್ನಲ್ಲಿ ಪ್ಲೇಗ್ ರೋಗಕ್ಕೆ ಲಕ್ಷಾಂತರ ಮಂದಿ ಪ್ರಾಣತೆತ್ತರು. ಕ್ರಿ.ಶ. 250ರಿಂದ271ರ ಪ್ಲೇಗ್ ಎಷ್ಟು ಭೀಕರವಾಗಿತ್ತು ಎಂದರೆ ಇದು ಉತ್ತುಂಗಕ್ಕೇರಿದಾಗ ದಿನಕ್ಕೆ 5000 ಮಂದಿ ರೋಮ್ ನಗರವೊಂದರಲ್ಲೇ ಸಾಯುತ್ತಿದ್ದರು ಎಂದು ಇತಿಹಾಸಗಳೇ ಹೇಳುತ್ತವೆ.
1346-53ರಲ್ಲಿ ಏಷ್ಯಾದಿಂದ ಯೂರೋಪ್ವರೆಗೆ ಹಬ್ಬಿದ ಪ್ಲೇಗ್ ಮಹಾಮಾರಿಗೆ ಯೂರೋಪ್ನ ಅರ್ಧಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಇಲಿಗಳ ಮೂಲಕ ಬ್ಯಾಕ್ಟೀರಿಯಾಗಳು ಹರಡಿ ಲಕ್ಷಾಂತರ ಜನರು ಪ್ರಾಣ ಬಿಟ್ಟರು.
ಕೊಕೊಲಿಸ್ಟಲಿ (ಟೈಫಾಯ್ಡ್ ಮಾದರಿಯ ಜ್ವರ) ಕ್ರಿ.ಶ 1545-48ರಲ್ಲಿ ಸ್ಪೇನ್ನಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ರೋಗಕ್ಕೆ ಮೆಕ್ಸಿಕೋ ಮತ್ತು ಮಧ್ಯ ಅಮೆರಿಕದ ಸುಮಾರು 1.50 ಕೋಟಿ ಜನರು ಬಲಿಯಾದರು. ಕ್ರಿ.ಶ. 1665-66 ರಲ್ಲಿ ಇಲಿಗಳ ಮೂಲಕ ಕಾಣಿಸಿಕೊಂಡ ವೈರಸ್ ಬ್ರಿಟನ್ನಲ್ಲಿ 1ಲಕ್ಷಕ್ಕೂ ಅಧಿಕ ಜನರ ಸಾವಿಗೆ ಕಾರಣವಾಯಿತು.
ಜಸ್ಪೀನಿಯರ್ ಪ್ಲೇಗ್, ಥರ್ಡ್ಪ್ಲೇಗ್, ಆಂಟೋನೈನ್ ಪ್ಲೇಗ್, ಗ್ರೇಟ್ ಪ್ಲೇಗ್ಗಳಿಂದ ಲೆಕ್ಕವಿಲ್ಲದಷ್ಟು ಜನ ಬಲಿಯಾಗಿದ್ದಾರೆ.
ಇತ್ತೀಚಿನ ಕಾಯಿಲೆಗಳ ಬಗ್ಗೆ ನಮ್ಮ ಹಿರಿಕರು ಹೇಳುವ ಭೀಕರ ಕಾಯಿಲೆ ಎಂದರೆ ಸ್ಪ್ಯಾಮೊಷ್ ಫ್ಲೂ. ಆ ರೋಗಕ್ಕೆ 1918-19ರಲ್ಲಿ ಜಗತ್ತಿನಲ್ಲಿ 4ರಿಂದ5 ಕೋಟಿ ಜನ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿ ಹೇಳಿರುವುದು ದಾಖಲೆಗಳೇ ಸ್ಪಷ್ಟಪಡಿಸುತ್ತವೆ. 2002-2003ರಲ್ಲಿ ಸಾರ್ಸ್ಗೆ 770, 2012ರಲ್ಲಿ ಕಾಣಿಸಿಕೊಂಡ ಮರ್ಸ್ 850ಜನ, ಎಬೊಲಾ ಮಾರಣಾಂತಿಕ ರೋಗಕ್ಕೆ 2014-16ರಲ್ಲಿ 11.300 ಜನರು ಪ್ರಾಣಬಿಟ್ಟಿದ್ದಾರೆ.
ಸ್ಪ್ಯಾಮೊಷ್ ಫ್ಲೂ (1918-19)ಬಂದು ಹೋದ ನಂತರ ಬರೊಬ್ಬರಿ 100 ವರ್ಷಗಳ ಬಳಿಕ 2019 ಡಿಸೆಂಬರ್-19 ರಂದು ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ಗೆ 1.62 ಲಕ್ಷಕ್ಕೂ ಹೆಚ್ಚಿನ ಮಂದಿ ಜಗತ್ತಿನಾದ್ಯಂತ ಜೀವ ಕಳೆದುಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈ ಕೋವಿಡ್ ರೋಗವನ್ನು ಜಾಗತಿಕ ಪಿಡುಗು ಎಂದು ಕಳೆದ ತಿಂಗಳು 11 ಘೋಷಿಸಿದೆ. ಕ್ರಿ.ಪೂರ್ವ, ಕ್ರಿ.ಶಕ ಎನ್ನುವ ಕಾಲಘಟ್ಟಗಳ ಇತಿಹಾಸ ಹೇಳುವಂತೆ ಕೊರೋನಾ ಪೂರ್ವ ಮತ್ತು ಕೊರೋನಾ ನಂತರದ ಜಗತ್ತು ಎಂದು ವಿಭಜಿಸಿ ಹೇಳಬೇಕಾಗಿರುವ ಕಾಲ ಬಂದಿದೆ.
ಇದೇ ವರ್ಷ ಜನವರಿಯಲ್ಲಿ ದಾವೋಸ್ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಹವಮಾನ ಬದಲಾವಣೆ ತಡೆ ಕುರಿತ ಸಮಾಲೋಚನೆಯಲ್ಲಿ ಪರಿಸರ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಉಂಟು ಮಾಡುತ್ತಿರುವ ಹವಮಾನ ವೈಪರೀತ್ಯ ಮತ್ತು ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಂದಿದ್ದ ಜಾಗತಿಕ ನಾಯಕರ ಮುಂದೆ ಸ್ವೀಡನ್ 16ರ ಬಾಲೆ ಗ್ರೇತಾ ಥನ್ಬರ್ಗ್ ‘ಇನ್ನು ಸಮಯವಿಲ್ಲ ಭೂಮಿಯ ತಾಪಮಾನ ತಗ್ಗಿಸಲು ಏನಾದರೂ ಕ್ರಮ ಕೈಗೊಳ್ಳಿ.
2030-2050 ಅಂತ ಕಥೆ ಹೇಳಬೇಡಿ’ ಎಂದು ಹೇಳಿದರೂ ದೊಡ್ಡಣ್ಣ ಅಮೆರಿಕ ನಿರ್ಲಕ್ಷಿಸಿತು. ಈಗ ನೋಡಿ ಭೌತಿಕ ಯುದ್ಧವಿಲ್ಲದೇ ಶೀತಲ ಯುದ್ಧದ ಸ್ಥಿತಿಗೆ ಕಾಣದ ಕೊರೋನಾ ಸೂಕ್ಷ್ಮಾಣುಗಳು ಮನುಷ್ಯನ ವಿರುದ್ಧ ಹೋರಾಟಕ್ಕಿಳಿದಿವೆ.
ಮನುಷ್ಯನ ಅತಿ ಆಸೆಗೆ ಸಿಲುಕಿ ಭೂಮಿ ಬಿಸಿಯಾಗುತ್ತಿದೆ. ಪಾತಾಳದ ಕಲ್ಲಿದ್ದಲು ಕರಗಿ ವಿದ್ಯುತ್ ಆಗಿ ಪರಿವರ್ತಿಯಾಗಿ ಓಝೋನ್ ಪದರವನ್ನೇ ರಂಧ್ರ ಮಾಡುತ್ತಿದೆ.
ಪೆಟ್ರೋಲ್ ಉತ್ಪನ್ನಗಳ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಸಿಮೆಂಟ್, ಉಕ್ಕು ಕಾರ್ಖಾನೆಗಳಿಂದ ಭೂಮಿ ಕೆಂಡವಾಗುತ್ತಿದೆ. ಆಕಾಶವನ್ನು ಕಲುಷಿತಗೊಳಿಸುತ್ತಿದ್ದೇವೆ. ಇಂತಿಪ್ಪ ಪರಿಸರದ ಮೇಲೆ ನಡೆಯುತ್ತಿರುವ ಮನುಷ್ಯನ ದುರಾಸೆಗೆ ಇಡೀ ಭೂ ಮಂಡಲದ ವಿನಾಶದ ಅಂಚಿಗೆ ಹೋಗುತ್ತಿದೆ.
ಅಣ್ವಸ್ತ್ರಗಳನ್ನು ಬಳಸಿ ನಡೆಸುವ ಹತ್ಯಾಕಾಂಡವು ಮನುಷ್ಯ ಕುಲಕ್ಕೆ ಎಷ್ಟು ಕಂಟಕವಾಗಬಲ್ಲದೋ ವೈರಸ್ಗಳು ಕೂಡ ಅಷ್ಟೇ ಮಟ್ಟಿನ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ವಸುಂಧರೆಯ ಸಂಪತ್ತನ್ನು ಅತಿಯಾಗಿ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ನಿಸರ್ಗದ ದೇವತೆಗಳು ಕೊಟ್ಟಿರುವ ಈ ಶಿಕ್ಷೆಯೇ ಸಾಂಕ್ರಾಮಿಕ ಪಿಡುಗು ಕೊರೋನಾ ವೈರಸ್.
ಈ ಕೊರೋನಾ ವೈರಸ್ಗೆ ಅತ್ಯಂತ ಹೆಚ್ಚು ಬಲಿಯಾಗುತ್ತಿರುವುದು 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 8 ವರ್ಷದ ಒಳಗಿನ ಮಕ್ಕಳು. ಸಾವಿನ ದವಡೆಯಿಂದ ರಕ್ಷಿಸಲು ವೈದ್ಯರು ತಮ್ಮ ಪ್ರಾಣವನ್ನೂ ಲೆಕ್ಕಿಸದ ಹೋರಾಡುತ್ತಿದ್ದಾರೆ. ಅವರಿಗೆ ಕೋಟಿ ಕೋಟಿ ನಮನಗಳು.
ಇದು ವಿಶ್ವಮಟ್ಟದ ಬಿಕ್ಕಟ್ಟಿನ ಸಂದರ್ಭ. ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಯೋಚಿಸಬೇಕಾದ ಕಾಲ. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚಲೇ ಬೇಕು. ‘ಸಾಲು ಮನೆಗೆ ಬೆಂಕಿ ಬಿದ್ದರೆ ಸಂಪನ್ನರ ಮನೆ ಉಳಿಯುತ್ತದಾ’? ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲು ಬಾರದು’ ಬಸವಣ್ಣನವರ ಈ ವಚನ ಆಗಾಗ ನೆನಪಾಗುತ್ತದೆ.
ಪರಿಸರದಲ್ಲಿ ಆಗುವ ಏರಿಳಿತಳನ್ನು ಅಥವಾ ಬದಲಾವಣೆಗಳನ್ನು ಕಡಿಮೆ ಅವಧಿಯಲ್ಲಿ ಅಂದಾಜಿಸುವುದು ಕಷ್ಟ. ಇತಿಹಾಸಕಾರ ‘ಲಾ ಮಾರ್ಟಿನ್’ ಹೇಳುವಂತೆ ‘ಇತಿಹಾಸ ಕೇವಲ ಭೂತಕಾಲವನ್ನಷ್ಟೇ ಹೇಳುವುದಿಲ್ಲ. ಭವಿಷ್ಯವನ್ನು ನುಡಿಯುತ್ತದೆ’ ಎಂಬ ಮಾತು ಸರ್ವಕಾಲಿಕವು ಸತ್ಯವಾದುದು. ಅದುವೇ ಸೂಕ್ಷ್ಮಾಣು ಸೃಷ್ಟಿಸುತ್ತಿರುವ ಜಾಗತಿಕ ತಲ್ಲಣಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.
‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)
AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.
ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.
ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.
ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.
ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
ಸುದ್ದಿದಿನ,ದಾವಣಗೆರೆ:ಮಾರ್ಚ್ 18 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಉಪ ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ಎಸ್.ಎಸ್.ಎಲ್.ಸಿ ಎರಡು ಪೂರ್ವಭಾವಿ ಪರೀಕ್ಷೆಗಳು ನಡೆದಿದ್ದು ಶೇ. 18 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಿ ವಿವರಣೆಯನ್ನು ಪಡೆಯಬೇಕು, ಎಸ್.ಎಸ್.ಎಲ್.ಸಿ ಗೆ ಪ್ರವೇಶ ಪಡೆದು ಪರೀಕ್ಷೆಗೆ ಗೈರಾಗಿರುವ ಮಕ್ಕಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಮನೆಮನೆ ಭೇಟಿ, ಅವರನ್ನು ಮತ್ತೇ ಶಾಲೆಗೆ ಕರೆತರಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಡಿಡಿಪಿಐ ಕೊಟ್ರೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21,863 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪ್ರವೇಶ ಪಡೆದಿದ್ದಾರೆ, ವಿವಿಧ ಕಾರಣಗಳಿಂದ 378 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಅಂತಿಮವಾಗಿ 21,400 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದಾರೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ 20,129 ವಿದ್ಯಾರ್ಥಿಗಳು ಹಾಜರಾಗಿದ್ದು, 1,353 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಕಡಿಮೆ ಹಾಜರಾತಿ (75% ಕ್ಕಿಂತ ಕಡಿಮೆ) ಮತ್ತು ಪರೀಕ್ಷೆಯ ಬಗ್ಗೆ ಆಸಕ್ತಿ ಇಲ್ಲದಿರುವುದು ಗೈರುಹಾಜರಿಗೆ ಮುಖ್ಯ ಕಾರಣಗಳಾಗಿವೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ 49% ಬಂದಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ 68% ಕ್ಕೆ ಏರಿಕೆಯಾಗಿದೆ, ಆದರೆ 1,460 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಗೈರುಹಾಜರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಅವರನ್ನು ಶಾಲೆಗೆ ಕರೆತರುವಂತೆ ಕ್ರಮವಹಿಸಲಾಗಿದೆ, ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುವುದು ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿಕೊಡುವುದು.
ಮಂಡಳಿಯಿAದ ನೀಡಲಾದ 4 ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು 2 ಪೂರ್ವಸಿದ್ಧತಾ ಪರೀಕ್ಷಾ ಪತ್ರಿಕೆಗಳು ಸೇರಿದಂತೆ ಒಟ್ಟು 6 ಪ್ರಶ್ನೆ ಪತ್ರಿಕೆಗಳನ್ನು ಪದೇ ಪದೇ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸುಮಾರು 1,400 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಿ ಅವರು ತೇರ್ಗಡೆಯಾಗುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಶಿಕ್ಷಕರು ಅತಿ ಮುಖ್ಯವಾಗಿ ಗೈರುಹಾಜರಾಗಿರೋ ಮಕ್ಕಳನ್ನ ಶಾಲೆಗೆ ಕರೆತರಬೇಕು, ಮನೆ ಮನೆ ಭೇಟಿ ಮಾಡಿ ಪಾಲಕ ಪೋಷಕರಿಗೆ ಮನವೊಲಿಸಿ, ಶಿಕ್ಷಣ ಇಲಾಖೆ ನೀಡಿರುವ ಬ್ಲೂಪ್ರಿಂಟ್ ಪ್ರಕಾರ ಮಕ್ಕಳನ್ನು ಸಿದ್ದಗೊಳಿಸಿ, ಪ್ರಶ್ನೆ ಪತ್ರಿಕೆಗಳನ್ನ ಪದೇ ಪದೇ ಬಿಡಿಸೋದರ ಮೂಲಕ ಮಕ್ಕಳಲ್ಲಿ ಒಂದು ಆತ್ಮವಿಶ್ವಾಸ ತುಂಬಬೇಕು , ಗೈರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 1,400 ಇದೆ, ಆ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಒಂದು ಉತ್ತಮ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದು, ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಡಯಟ್ ಪ್ರಾಂಶುಪಾಲರಾದ ಗೀತಾ, ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.
ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್ನಾಯ್ಕ್.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ2 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ2 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ


