Connect with us

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರೀತಿ ಟಿ.ಎಸ್ ಇವರು ಎರಡು ಗೋಲ್ಡ್ ಮೆಡಲ್ ಪಡೆಯುವ ಮೂಲಕ ಎಂಎ ಜರ್ನಲಿಸಂ ಅಲ್ಲಿ ಪದವಿಧರರಾಗಿದ್ದಾರೆ. ಸುದ್ದಿ ದಿನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂಭತ್ತು ವರ್ಷಗಳಿಂದ ಪ್ರಿಂಟ್, ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ದೇಶ ವಿದೇಶದ ಸುದ್ದಿಗಳ ಜೊತೆಗೆ ಜಿಲ್ಲಾ, ತಾಲೂಕು, ಗ್ರಾಮೀಣ ಮಟ್ಟದ ಸುದ್ದಿಗಳ ಕುರಿತು ಇವರಿಗೆ ಹೆಚ್ಚಿನ ಆಸಕ್ತಿ ಇದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ಮಾಹಿತಿಯನ್ನು ಹೆಕ್ಕಿ ತೆಗೆಯುವುದರಲ್ಲಿ ಇವರಿಗೆ ನೈಪುಣ್ಯತೆ ಇದೆ. ಅಪರಾಧ (ಕ್ರೈಮ್) ಲೋಕದ ಬಗ್ಗೆಯೂ ಬರೆಯುತ್ತಿದ್ದಾರೆ. ಕ್ರೀಡಾ ಲೋಕದ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ವೈರಲ್ ಸುದ್ದಿಗಳ ಅಸಲೀಯತ್ತು ಕೆದಕುವುದು ಇವರ ನೆಚ್ಚಿನ ಕಾರ್ಯಗಳಲ್ಲಿ ಒಂದು.. ಸುದ್ದಿ ವಿಭಾಗದಲ್ಲಿ ವಿಶ್ವಾಸಾರ್ಹ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಹವ್ಯಾಸಿ ರಂಗಭೂಮಿ ಸ್ಕ್ರಿಪ್ಟ್ ಬರಹಗಾರ್ತಿ, ಪ್ರವಾಸ ಕೈಗೊಳ್ಳುವುದು, ಚಿತ್ರಕಲೆ, ಓದುವುದು, ಅಂಕಣ ಬರವಣಿಗೆ ಹಾಗೂ ವಾಯ್ಸ್ ಓವರ್ ಗಳನ್ನು ಕೊಡುವುದು ಇವರ ಹವ್ಯಾಸ.

ಅಂತರಂಗ

ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ

Published

on

~ ಡಾ. ಸುಜಾತಾ ಚಲವಾದಿ

ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.

ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.

ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.

ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.

ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.

ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.

ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.

ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.

1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.

ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.

ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.

ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.

26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.

ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು

Published

on

ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.

ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.

ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.

ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.

ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.

——————————————————————-

ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?

ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.

ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?

ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.

ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?

ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.

ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?

ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.

ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.

ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?

ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)

ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?

ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)

ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?

ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.

ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?

ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.

ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕತೆ | ಮಾಯಮ್ಮ

Published

on

~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್,ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ

ʼಆಗಸದ ತುಂಬಾ ಕಪ್ಪನೆಯ ದಟ್ಟ ಮೋಡಗಳು ಕವಿದುಕೊಂಡಿವೆ. ಮೋಡ ಮೋಡಗಳು ಬಸೆದುಕೊಂಡು ಗುಡುಗು ರ‍್ಜಿಸುತ್ತಿದೆ. ಗುಡುಗು ಗುಡುಗುಗಳನ್ನು ಹೊತ್ತಿಕೊಂಡು ಮಿಂಚುಗಳು ಮಿನುಗುತ್ತಿವೆ. ಮಿಂಚು ಮಿಂಚುಗಳು ಹೊಸೆದುಕೊಂಡು ಬೆಂಕಿಸುರಿಸುತ್ತಿವೆ.ಆ ಸೆಕೆಗೆ ಕಪ್ಪುಮೋಡ ಕದಲಿಹೋಗುತ್ತಿದೆ. ಹೊಡೆದುಕೊಂಡು ಹೋಗುತ್ತಿದೆ. ಹೊಗೆಯನ್ನು ತಗಲಿಸಿಕೊಂಡು ಬೋಂಕನೆ ಸರಿಯುತ್ತಿದೆ. ನಕ್ಕನ್‌ ಕರೇಮೋಡ. ಈ ಗಡ್ಡೆಮ್ಯಾಕೆ ಸುರಿಬೇಕಂದರೆ ಈ ಮಾಡಗಳಿಗೆ ಏನು ಮಾಡಬೇಕೋ. ನಮ್ಮ ನೆತ್ತಿಯ ಮೇಲೆ ಬರವನ್ನು ಹಾಕಿ ಎಲ್ಲಿಗೋ ಮಳೆಗಳನ್ನ ಓಡಿಸಿಬಿಡುತ್ತವೆ. ಈ ಮಾಡಗಳಿಗೆ ಅದೇಟು ತೀಟಿ…” ವೀರಶಿವ ಬೈದುಕೊಳ್ಳುತಿದ್ದಾನೆ ಮಾಯಮ್ಮನ ಗುಡಿಯ ಪಡಸಾಲೆಯೊಳಗೆ ಉದ್ದಕೆ ಮಲಗಿಕೊಂಡು.
ಕಪ್ಪನೆಯ ಶರೀರ. ಮಾಸಿದ ಗಡ್ಡ. ಹರಿದುಹೋಗಿರುವ ಬಟ್ಟೆಗಳು. ಕೈಯೊಳಗೊಂದು ಬಿದುರು ಕೋಲು. ಹೆಗಲ ಮೇಲೊಂದು ಜೋಳಿಗೆ. ಧೂಳ ಕಾಲಿನ ಮೇಲೊಂದು ಕುರ ಅದಕ್ಕೆ ಮುತ್ತಿಕೊಳ್ಳುತ್ತಿರುವ ನೊಣದ ಹಿಂಡು, ಇವು ತಿಕ್ಕ ಶಿವನ ಆಕಾರ. ಯಾವಾಗಲೂ ಮಾಯವ್ವನ ಗುಡಿಯ ಹತ್ತಿರವೇ ಇರುತಾನೆ. ಹೊಟ್ಟೆ ಹಸಿದಾಗ ಮಾತ್ರವೇ ಎದ್ದು ಹಳ್ಳಿಗಳ ಒಳಗೆ ಬಂದು ಯಾರೋ ಒಬ್ಬರ ಮನಿಯೊಳಗೆ ಕುಂತು ಅಷ್ಟು ಜೋಳಿಗಿಯೊಳಗೆ ಹಾಕಿಸಿಕೊಂಡು ಹೋಗಿ ಆ ಗುಡಿಯ ಒಳಗೇ ಕುಂತು ತಿನ್ನುತ್ತಾನೆ. ಕಾಲುವೆಯೊಳಗೆ ಹರಿವ ನೀರನ್ನು ಬಾಯಿಗಚ್ಚಿಕೊಂಡೇ ಕುಡಿತಾನೆ. ಹಂಗೇ ಆತನ ಬದುಕೆಲ್ಲಾ ಕಳೆದು ಹೋಗುತ್ತಿದೆ.

ಆಕಾಶವೆಂದರೆ ಕೋಪ. ಮೋಡಗಳೆಂದರೆ ಕೋಪ. ಬೆಳೆಗಳೆಂದರೆ ಕೋಪ. ವ್ಯವಸಾಯವೆಂದರೆ ಕೋಪ. ನಂಬಿಕೊಂಡ ದೇವರೆಂದರೆ ಕೋಪ. ಅದುಕ್ಕೇ ಮಾಯವ್ವ ತಾಯಿಗೆ ಅರಿಷಿಣ ಕುಂಕುಮದ ಬದಲು ಮಸಿಬಳಿಯುತ್ತಾನೆ. ಆ ಗುಡಿ ಹತ್ರ ಆ ತಾಯಿಗೆ ಪೂಜೆಗಳಿಲ್ಲ ಪುನಸ್ಕಾರಗಳಿಲ್ಲ. ದೇವರ ವಿಗ್ರಹವೂ ಕೊಂಚ ಮುಕ್ಕಾಗಿದೆ. ಬಾವಲಿಗಳು ಸೇರಿಕೊಂಡಿವೆ. ಹೊಲಸು ನಾತ ಹೊಡೆಯುತ್ತದೆ. ಅಂತಹ ಗುಡಿಯಲ್ಲೇ ತಿಕ್ಕ ಶಿವಪ್ಪ. ಆ ತಾಯಿಗೆ ಬಾಯಿಗೆ ಬಂದಂಗೆ ಬೈಯುತ್ತಾ ಇರುತ್ತಾನೆ.
ತಿಕ್ಕ ಶಿವಪ್ಪನೆಂದರೆ ನಮ್ಮ ಹಳ್ಳಿಯೊಳಗೆ ಎಲ್ಲರಿಗೂ ಅಭಿಮಾನ. ದೊಡ್ಡ ದೊಡ್ಡವರೆಲ್ಲಾ ಕೈಯೆತ್ತಿ ಮುಗಿಯುತ್ತಾರೆ.

ಆತ್ಮೀಯತೆಯಿಂದ ಆದರಿಸುತ್ತಾರೆ. ಅತ ಬಂದು ಕೇಳಬೇಕೇ ವಿನಃ ಆಸ್ತಿಗಳನ್ನಾದರೂ ಕೊಟ್ಟುಬಿಡುತ್ತಾರೆ. ಆತನಿಗಿರುವ ಹೆಸರು ಅಂತಾದ್ದು. ತಿಕ್ಕ ಶಿವನೆನ್ನೋ ಹೆಸರು ಕೂಡಾ ಅಮಾಯಕವಾಗಿ ಮಕ್ಕಳು ಮಾತಾಡಿಕೊಳ್ಳೋದು. ʼವೀರ ಶಿವʼ ಅಂತಾ ಬಾಯತುಂಬಾ ಕರೆಯಬೇಕೆಂದರೆ ಎಲ್ಲರಿಗೂ ಪರಮಾನ್ನ ತಿನ್ನುವಷ್ಟು ಇಷ್ಟ. ಆಗ… ಆಗ್ಯಾವಾಗಲೋ.. ನಾನು ಸಣ್ಣವನಿದ್ದಾಗಿನ ದಿನದೊಳಗೆ ವೀರ ಶಿವನ ಸಾಹಸಗಳ ಕುರಿತು ಕತೆ ಕತೆಗಳಾಗಿ ಹೇಳುತಿದ್ದರು. ಆ ಕಥೆಗಳೆಲ್ಲವೂ ಜ್ಞಾಪಕಕ್ಕೆಬರುತ್ತಿವೆ…
***
ದಿನಾ ರಾತ್ರಿ ಹೊತ್ತಿಗೆ ದೊಡ್ಡ ಹುಲಿ ಬರುತಾತೆಂದು ಹಳ್ಳಿಯ ಜನ ಭಯಬೀಳುತಿದ್ದರೆ ಆ ವಿಷಯವು ಚಿಕ್ಕ ವೀರಶಿವನಿಗೆ ಒಂದು ದಿನ ತನ್ನ ಜೊತೆಗಾರರನ್ನು ಹಿಂದಾಕಿಕೊಂಡು ಬೆಟ್ಟದ ಮಲ್ಲಪ್ಪನ ಗುಡ್ಡದ ಬಯಲಿಗೆ ಹೊಂಟನು. ಕಣವಿಹಳ್ಳಿ ಅಡವಿಯೊಳಗಿಂದ ದಾಟಿಕೊಂಡು ಕುಮಾರನ ಹಳ್ಳಿ ದಿಕ್ಕಿಗೆ ತಿರುಗಿದನು.ಏಳು ಮೆಟ್ಟಿನ ಹುಲಿಬೇಟೆಗೆಂದು ತಿಳಿದರೆ ಯಾರೂ ಹಿಂದೆ ಬರಲಾರರೆಂದು ಮೊಲದ ಬೇಟಿಗೆ ಹೋಗಾನ ರ‍್ರಿ ಅಂತ ನಂಬಿಸಿದ್ದನು. ನಡು ರಾತ್ರಿತಂಕಾ ಮಲ್ಲಪ್ಪನ ಗುಡ್ಡಕ್ಕೆ ಸೇರಿಕೊಂಡು ಅಲ್ಲಿಂದ ಅಡ್ಡದಾರಿಗುಂಟಾ ಮಲ್ಲಪ್ಪನ ಗುಡ್ಡದ ಬಯಲ ಕಡೆಗೆ ಸೇರಿದರು.
ಕೈಯೊಳಗಿನ ನಾಡ ಬಂದೂಕು ಹಸಿದ ಕಣ್ಣು ಬಿಡುತ್ತಿದೆ. ಬಂಡೆಗಲ್ಲಿನ ಮೇಲೇರಿ ಕೆಳಗೆ ನೋಡುತಿದ್ದಾನೆ ವೀರಶಿವ. ಸಣ್ಣಗೆ ಪೊದೆಯೊಳಗಿನ ಎಲೆಗಳು ಅಲುಗಿದಂಗಾಯಿತು. ಜೊತೆಗಾರರು ಬೆದರಿ ಗುಡ್ಡದ ಮೇಲಕ್ಕೆ ಏರತೊಡಗಿದರು. ವೀರ ಶಿವ ತುಪಾಕಿಯನ್ನು ಸರಿಮಾಡಿಕೊಂಡನು. ಗುರಿ ಕುದುರಿತು. ನೋಟದೊಳಗೆ ಏನೋ ಅನುಮಾನ ಕಾಣಿಸಿತು. ತಡೆದನು. ಲಾಟೀನಿನ ಬುಡ್ಡಿ ದೀಪವನ್ನ ಸ್ವಲ್ಪ ಮೇಲೆತ್ತಿರೆಂದು ಹಿಡಿದುಕೊಳ್ಳಿರೆಂದು ಹೇಳಿದನು. ಪರೀಕ್ಷೆಯಿಂದ ಮರದ ಕಡೆಗೆ ನೋಡಿದನು. ಬಂಡೆ ಇಳಿಯಲು ಪ್ರಾರಂಭಿಸಿದನು. ಎಲ್ಲರೂ ಬ್ಯಾಡಾ ಅಂದರು. ಆದರೂ ಕೇಳದಂತೆ ಹೆಜ್ಜೆಯ ಸಪ್ಪಳ ಕೇಳದಂತೆ ಮರಗಳ ಕೆಳಗೆ ಹೋಗಿ ಸ್ವಲ್ಪ ಬಗ್ಗಿಕೊಂಡು ಎರಡು ಕೈಗಳಿಂದ ಅವಚಿಕೊಂಡನು. ದಾರಿ ಬಳಿ ಜಿಂಕೆ ಮರಿ ಕೊಸರಾಡುತ್ತಿದೆ. ಆಕಡಿಗೆ ಈ ಕಡಿಗೆ ಅದು ತಪ್ಪಿಸಿಕೊಳ್ಳಬೇಕೆಂದು ಕೊಸರಾಡುವುದನ್ನು ನೋಡಿ ಕೈಯೊಳಗಿದ್ದ ಹಗ್ಗದಿಂದ ಅದರ ಎರಡು ಕಾಲು ಕಟ್ಟಿ ಅಲ್ಲೇ ವಗೆದನು. ಅದು ಅರಚುತ್ತಲೇ ಇದೆ. ಅಲ್ಲಿಂದ ಚಕ ಚಕನೇ ಗುಡ್ಡದ ಬಂಡೆಯನ್ನೇರಿದನು. ನಾಡ ಬಂದೂಕನ್ನು ಕೈಯೊಳಗೆ ತೆಗೆದುಕೊಂಡನು. ಜಿಂಕೆ ಮರಿಯ ಕಡೆಗೆ ಗುರಿ ಇಟ್ಟುಕೊಂಡು ಹೊಂಚಿಕೊಂಡು ಕುಳಿತನು. ಆ ಜಿಂಕೆ ಮರಿ ಅಡವಿಯೆಲ್ಲಾ ಅದುರುವಂತೆ ಮೊರೆಯುತ್ತಲೇ ಇದೆ.

ಲಾಟೀನು ಬುಡ್ಡಿಯ ಬೆಳಕನ್ನು ಇಳಿಸಿದನು. ಜೊತೆಗೆ ಬಂದವರೆಲ್ಲಾ ಬೆದರಿ ಮುದುರಿಕೊಂಡು ಏನು ನಡೆಯುತ್ತಿದಿಯೋ ಏನೋ ಎಂದು ನೋಡುತಿದ್ದಾರೆ. ಬಂದೂಕು ಜಿಂಕೆ ಮರಿಯ ಕಡೆಗೇ ಇದೆ. ಜಿಂಕೆಯ ಕೂಗು ಹೆಚ್ಚಾಯಿತು. ಒಂದೇ ಸಾರಿಗೆ ಸಾವಿನ ಕೂಗು ಕೂಗಿತು. ವೀರಶಿವನ ಕೈಯೊಳಗಿನ ಬಂದೂಕು ರ‍್ಜಿಸಿತು. ತೋಟ ತೂರಿ ನುಗ್ಗಿಹೊರಟಿತು. ಹುಲಿ ಎಗರಿಬಿತ್ತು. ಹುಲಿ…ಹುಲಿ… ಜಿಂಕೆಗಾಗಿ ಬಂದಿತ್ತು. ವೀರಶಿವನ ಗುರಿ ಗೆದ್ದಿತು. ಆ ಕ್ಷಣದಲ್ಲೇ ಹಗ್ಗದ ಮೊಲಕು ಬಿಡಿಸಿಕೊಂಡ ಜಿಂಕೆ ಅಷ್ಟೇ ಹೆದರಿಕೆಯಲ್ಲಿ ಜಿಗಿದು ಹಾರಿ ಪೊದೆಯೊಳಗೆ ತೂರಿಹೋಯಿತು. ಗುಡ್ಡ ನಾಲ್ಕು ಹೆಜ್ಜೆ ಇಳಿದು ಮತ್ತೆ ಬಂದೂಕನ್ನು ಸರಿಪಡಿಸಿಕೊಂಡು ಕೆಳಗೆ ಬಿದ್ದು ವಿಲವಿಲನೇ ವದ್ದಾಡುತಿದ್ದ ಹುಲಿಯನ್ನು ಗುರಿಯಿಟ್ಟು ಮತ್ತೆ ಹೊಡೆದನು. ಅದು ರ‍್ಜಿಸುತ್ತಾ ವದ್ದಾಡಿ ಸತ್ತಿತು. ಇದನ್ನೆಲ್ಲಾ ಗದಗದನೇ ನಡುಗುತ್ತಾ ನೋಡುತಿದ್ದ ಜೊತೆಗಾರರೆಲ್ಲಾ ಅಂಗೇ ಕೇಕೆ ಹಾಕಿದರು. ಇದು ಪರಶಿವನ ಬೇಟೆಯ ಕಥೆ.
ಹುಲಿಯನ್ನು ಹೊಡೆದನೆಂದು ಊರೆಲ್ಲಾ ತಿಳಿದಮೇಲೆ ಎತ್ತನ ಬಂಡಿಯಮೇಲೆ ಸತ್ತ ಹುಲಿಯನ್ನೂ, ವೀರ ಶಿವನನ್ನೂ ಕೂರಿಸಿ ಮೆರವಣಿಗೆ ಮಾಡಿದರು ಊರಜನ. ಸುತ್ತು ಮುತ್ತಲ ಅರವತ್ತು ಹಳ್ಳಿಗಳವರೂ ಬಂದು ಹಬ್ಬ ಮಾಡಿದರು.ಆ ಹುಲಿ ರ‍್ಮ ತೆಗೆದು ರ‍್ಪದಿಂದ ಪರಶಿವನ ಮನೆಗೆ ನೇತು ಹಾಕಿದರು.ಹುಲಿಯುಗುರು ತೆಗೆದು ಬಂಗಾರದ ಸರಕ್ಕೆ ಹಾಕಿಕೊಂಡರು.
***
ಪರಶಿವನ ವಿವಾಹ ನಿಶ್ಚಯವಾಯಿತು. ಕರವಾಗಿ ಮಾವನಿಗೆ ಕೊಮಾರನ ಹಳ್ಳಿ ತಾಂಡಾದ ಬಳಿಯ ಬೆದ್ದಲು ಭೂಮಿಯನ್ನು ನೀಡಿದನು. ವಿವಾಹದ ದಿನ ವಧು ಪರ‍್ವತಿಗೆ ಏಳು ಗಜದ ರೇಷಿಮೆ ಸೀರಿ,ಝರಿ ರವಿಕೆ, ಬಂಗಾರದ ಬಳೆಗಳು,ಮೂಗು ನತ್ತು,ಬುಗುಡಿ,ಬೆಂಡೋಲಿ,ತೀಕಿ,ನಾಗರ,ಬೆಳ್ಳಿ ಡಾಬು, ಏಳುವರಹದ ವಡವೆಗಳು ಎಲ್ಲಾ ಪರಶಿವನೇ ಕನ್ನೆಗೆ ಇತ್ತನು.
“ ಬರಗಾಲವು ಕಿತ್ತು ತಿನ್ನುವಾಗ ಇದೇನಪೋ ಮದುವಿ” ಎಂದರು ಸರೀಕರು.
“ ನಮ್ಮೂರ ಗೌಡಪ್ಪನ ಮದುವಿ ನಾವು ಘನವಾಗೇ ಮಾಡಿಕೊಳ್ಳತೀವಿ” ಅಂದು ಆಕಾಸದಂಗ ಹಂದರ ಹಾಕಿ,ಊರೆಲ್ಲಾ ರಂಗೋಲಿ ಬಿಟ್ಟು,ದೊಡ್ಡ ಊರ ಹಬ್ಬದಂತೆ ಹನ್ನೆರಡು ದಿನಗಳ ಮದುವಿ ಮಾಡಿದರು. ಸುತ್ತು ಹಳ್ಳಿಗಳೂ ಸಂಭ್ರಮದಿಂದ ಕುಣಿದವು.
ಮದುವಿ ಹೆಣ್ಣು ಪರ‍್ವತಿ ಅದೆಷ್ಟು ಅದೃಷ್ಟವಂತಳೋ..!? ಎಂದು ಊರೆಲ್ಲಾ ಗಲಗಲನೇ ಅಂದುಕೊಂಡರು. ಅದೇನು ಗಾಚಾರನೋ…ಆಯಮ್ಮನು ಊರೊಳಗೆ ಕಾಲಿಟ್ಟೊಡನೆಯೇ ಬರವು ಬೆನ್ನುಬಿದ್ದಿತು. ಮನಿ ಮನಿಗೆ ಅರಿಷ್ಟವು ಬಡಿಯಿತು. ಬಾವಿಗಳೆಲ್ಲಾ ಒಣಗಿ ಹೋಗಿ, ಹಳ್ಳಗಳೆಲ್ಲಾ ಇಂಗಿ ಹೋಗಿ, ಊರು ನಂಬಿದ ಚಿನ್ನದ ಹಗರಿ ಎಂಬ ಕಿರು ನದಿಯು ಒಣಗಲು ಶುರುವಾಗಿದೆ. ಅವ್ವನ ಜಾತ್ರೆಯ ದಿನ ಮಾಯವ್ವನಿಗೆ ಬೋನಗಳ ಎಡೆ ಇಟ್ಟರು,ಅಂಗಳದಲ್ಲಿ ಕುರಿಕೋಣ,ಆಡು ಕೋಳಿಗಳೆಂಬೋ ನೂರಾರು ಜೀವಿಗಳ ರಕ್ತದ ಮುಖಗಳನ್ನ ಚಲ್ಲಿ, ಬಂಡಿಗಳ ಕಟ್ಟಿ, ಸಿಡಿಗೆ ತೋರಣಗಳನ್ನು ಕಟ್ಟಿಸಿದ್ದಾರೆ. ಗುಡಿಯಲ್ಲಿ ತಾಯಿಮರ‍್ತಿಗೆ ಬೆಳ್ಳಿಯ ಮುಖ,ಕಣ್ಣು,ಕೋರೆಗಳ ಮಾಡಿ ಇಟ್ಟಿದ್ದಾರೆ. ಜಾತ್ರಿಯ ಪೂಜಿ ಜೋರಾಗಿ ನಡೆಯುತ್ತಿದ್ದಾಗಲೇ ತಳವಾರ ಲಕ್ಷ್ಮಿಯ ಮೈಮ್ಯಾಲೆ ಆ ಮಾಯವ್ವ ತಾಯಿ ಮೈದುಂಬಿ ಬಂದಳು…
“ಅಲಲಲಲ ಮಕ್ಕಳೇ…ನಾನು ಯಾರು!?
ಈ ಭೂಮಿ ಆಕಾಶ ಹುಟ್ಟಿದಾಗಿಂದಲೂ…
ಮಹಾಶಕ್ತಿ; ಲೋಕ ಮಾತೆ
ಆದಿಶಕ್ತಿ ; ಲೋಕ ಮಾತೆ
ಕಾಲ ಮೀರಿದವಳು ಗುಡುಗು,ಸಿಡಿಲು,ಗಾಳಿ,ಮಳೆ,ಮುಗಿಲು..
ಈಗ ಒಂದು ಪಕ್ಷಿಯಾಗಿ ಹುಟ್ಟಿ…
ಕೂರಬೇಕೆಂಬ ತಾವು ಸಿಗದಾಗಿ…..
ಕಲ ಕಲನೆ ಗಾಳಿ ಗಾಳಿಯಾಗಿ ಅಂತರ ಅಂತರವಾಗಿ ಆಡುತ್ತಾ…
ಮಹಾ ಬಲಿದಾನವನ್ನ ಕೋರುತ್ತಿದೆ….” ಎಂದು ಹೇಳಿ ದೇವಾಲಯದ ಸುತ್ತಾ ಕಾರ ಮತ್ತು ಮಣ್ಣು ಚಲ್ಲುತ್ತಾ ತಿರುಗಿದಳು. ಜಾತರೆಯು ಪರ‍್ತಿಯಾಯಿತು. ಆದರೆ ಆ ತಾಯಿ ಶಾಂತಿಯಾಗಲಿಲ್ಲವೆಂದು ತಿಳಿದುಹೋಯಿತು.

ಹಸಿರು ಮರಗಿಡಗಳು ಒಣಗಿ ಹೋಗಿವೆ. ಎಲ್ಲಿಯೂ ಕೂಡಾ ಹನಿ ನೀರಿರದ ಪರಿಸ್ಥಿತಿ. ಬರಗಾಲ …ಬರಗಾಲಕ್ಕೆ ಕಾರಣ ಆಯಮ್ಮ ಪರ‍್ವತಿಯೇ…
“ಎಲ್ಲಿಂದಲೋ ಇಲ್ಲಿಗೆ ಸೊಸೆಯಾಗಿ ಬಂದಳು.ಇದೆಲ್ಲವೂ ಆಯಮ್ಮನ ಕಾಲ್ಗುಣವೇ ಎಂದು ಕೆಲವರು ಹೇಳಿದರೆ, ಅದೇನಿಲ್ಲ ಬರಕ್ಕೆ ಕಾರಣ ಆಯಮ್ಮನದೇಗಾಗುತ್ತದೆ ಎಂದು ಕೆಲವರು ಹೇಳಿದರು. ಅದೇನಲ್ಲ ಆಕೆ ಅರಿಷ್ಟ ಊರಿಗೆ ಶಾಪವಾಗಿದ್ದಾಳೆ ಎನ್ನಲು ಪ್ರಾರಂಭಿಸಿದರು. ಆಕೆಯ ಇಂತಹ ಮುಳ್ಳು ಮೊನೆಯ ಮಾತುಗಳನ್ನು ಭರಿಸದಾದಳು.ತನ್ನೊಳಗೆ ತಾನು ಕುಗ್ಗಿ ಕುಗ್ಗಿ ಅಳತೊಡಗಿದಳು. ತನ್ನ ಅರಿಷ್ಟದ ಕಾರಣದಿಂದಾಗಿಯೇ ಊರು ಬಂಜರು ನೆಲವಾಗುತ್ತಿದೆ ಎಂದು ಅಂದುಕೊಂಡಳು.
ಪರಶಿವನು ಸಮಾಧಾನಿಸಿದರೂ ಕೇಳಲಿಲ್ಲ.
ಗಂಡ ಹೊಲದ ಕಡೆಗೆ ಹೋದಾಗ ಆ ನಡು ಮದ್ಯಾನ್ಹದಲ್ಲಿ ಕಣಗಿಲೆಯ ಹೂಗಳನ್ನು ಬಟ್ಟಲತುಂಬಾ ಬಿಡಿಸಿಕೊಂಡು ಬಂದು ಅರೆದು ಮನಸಿನೊಳಗೆ ಆ ಮಾಯಮ್ಮ ತಾಯಿಗೆ ಅಡ್ಡ ಬಿದ್ದು ಹರಕೆ ಮಾಡಿಕೊಂಡಳು. “ ಊರು ಜನರ ಕಷ್ಟಗಳು ಕೊನಿಯಾಗಲಿ,ಕಣ್ಣೀರು ಬತ್ತಿ ಹೋಗಲಿ, ನೀರು ನೀರ ಸೆಲೆ ಹರಿದುಬರಲಿ…ಮಳೆ ಸುರಿದು ಸುರಿದೂ ನೆಲವೆಲ್ಲಾ ತೊಯ್ದು ಹಸಿರಾಗಲಿ. ಕರೆಗಳೆಲ್ಲಾ ತುಂಬಿಕೊಳ್ಳಲಿ…ಬೆಳೆ ಬೆಳೆದು ಸುಗ್ಗಿಯಾಗಲಿ… ಬರಗಾಲ ಹೋಗಲಿ… ಚಿನ್ನದ ಹಗರಿ ನದಿ ಮತ್ತೆ ಹರಿದಾಡಲಿ…. ತಾಯಿ ನನ್ನ ಆತ್ಮ ಬಲಿದಾನವನ್ನು ತೆಗೆದುಕೋ. ತಗೆದು ಕೋ ತಾಯಿ. ಎಂದು ಬಟ್ಟಲನ್ನು ಎತ್ತಿಕೊಂಡು ಗಟ ಗಟನೆ ಗಂಟಲಿಗೆ ಹಾಕಿಕೊಂಡಳು. ಕುಡಿದ ಕೆಲವೇ ಕ್ಷಣಗಳಲ್ಲಿ ಉಸಿರು ನಿಂತಿತು. ಕಾಲು ಕೈಗಳು ತಣ್ಣಗಾದವು.
ಚೆಂಜೆಗೆ ವೀರಶಿವನು ಬಂದು ನೋಡೋ ವೇಳೆಗೆ ಆಯಮ್ಮನ ಶರೀರವು ಕಪ್ಪಾಗಿ ಹೋಗಿತ್ತು.ಇನ್ನ ಯಾರೇನು ಮಾಡುತ್ತಾರೆ? ಪರಶಿವನ ದುಃಖವನ್ನು ಪದಗಳು ಹಿಡಿಯಲಾಗಲಿಲ್ಲ. ಬಿದ್ದು ಬಿದ್ದು ಅತ್ತನು. ಬಂಗಾರದಂತಹ ಹುಡುಗಿ ಮದುವಿ ಆಗಿ ಆರು ತಿಂಗಳು ಕಳೆಯಲಿಲ್ಲವಲ್ಲೋ…ಊರಿಗಾಗಿ ಪ್ರಾಣವನ್ನೇ ಕಳಕೊಂಡಳು ಎಂದು ಜನರೆಲ್ಲರೂ ಅಂದುಕೊಂಡರು. ಆಕೆಯನ್ನು ಚಿನ್ನದ ಹಗರಿ ನದಿ ದಡದಲ್ಲೇ ಹೂತರು. ಇನ್ನ ಆ ದಿನದಿಂದಲೇ ವೀರ ಶಿವನು ಆ ಮನೆಗೆ ಹೋಗದೆ ತೋಟದ ಬಳಿಯೇ ಇರತೊಡಗಿದನು. ಮನೆ ಬಳಿಗೆ ಹೋದರೆ ತನ್ನ ಪರ‍್ವತಿಯೇ ಗರ‍್ತಿಗೆ ಬರುತ್ತಾಳೆಂದು ಹೋಗುವುದನ್ನು ಬಿಟ್ಟು ಬಿಟ್ಟನು. ಮತ್ತೆ ಮದುವೆ ಮಾಡಿಕೊ ಎಂದು ಯಾರೇಳಿದರೂ ಕೇಳದಾದನು.
ನೀರಿನ ಪರಿಸ್ಥಿತಿ ಇನ್ನಾ ಅದ್ವಾನವಾಯಿತು. ಎಲ್ಲೆಲ್ಲಿಂದಲೋ ಗುಂಡೆಯೊಳಗಿನ ಗಬ್ಬು ನೀರನ್ನು ಕೂಡಾ ದೇವಿಕೊಂಡು ತರುತಿದ್ದಾರೆ.
***
ದಿನಗಳು ಕಳೆದು ಹೋಗುತ್ತಿದ್ದಂತೆ ಊರಿಗೆ ಪರ‍್ಲಬ್ಬವು ಬಂದಿತು.ಊರಿನೊಳಗೆ ಯಾವ ಸಂಭ್ರಮವೂ ಇಲ್ಲ. ಆಗ ಪರಶಿವನೇ ಮುಂದೆ ಬಂದು ಚಾವಡಿಯ ಬಳಿ ಸಮಾವೇಶ ನಡೆಸಿದನು. ನಾವಿರುವ ಊರೊಳಗೆ ಬರಗಾಲ ಹೋಗಬೇಕೆಂದರೆ ಅಲಾಯಿ ಹಬ್ಬವನ್ನು ಮಾಡಬೇಕು. ಬರಗಾಲ ಹೋಗಲು, ಮಳೆಹನಿ ಸುರಿಯಲು,ನಾವು ಊರಲ್ಲಿ ಪೀರ ದೇವರ ಅಲೆಗುಣಿ ತೋಡಬೇಕು.ಪೀರಲು ದೇವರನ್ನು ಕೂಡಿಸಿ, ಕತ್ತಲ ರಾತ್ರಿಯ ಅಲೆ ಕುಣಿಯ ಕೆಂಡದ ಕರ‍್ಯವು ಜರುಗಿಸಬೇಕು ಎಂದನು. ರ‍್ಮಕ್ಕಾಗಿ ಬಲಿದಾನವಾದ ಹಸನ ಹುಸೇನರಂತೆ ನಮ್ಮೂರಿನ ಒಳ್ಳೇದಕ್ಕಾಗಿಯೇ ಬಲಿದಾನವಾದ ಊರ ಪರ‍್ವತವ್ವನನ್ನು ನೆನೆದು ಯಾರಿಂದಲಾದರೂ ಊರಿಗೆ ಒಳ್ಳೆಯದಾದರೆ ಸಾಕು ಎಂದು ಊರಿನ ಹಿರಿಯರು ಹಾಗೇ ಆಗಲಿ ಎಂದು ಒಪ್ಪಿಕೊಂಡರು.

ಅಮಾಸಿ ಆದ ಮರುದಿನ ಅಲೆ ಕುಣಿ ತೋಡಿದರು. ಸುತ್ತಿಟ್ಟ ಪಂಜಾ ದೇವರುಗಳನ್ನು ಪೂಜೆಗಿಟ್ಟರು. ಹುಲಿಗಳು ಊರತುಂಬಾ ಕುಣಿಯತೊಡಗಿದವು. ಅಳ್ಳಳ್ಳಿ ಬುವ್ವಗಳು ಸೊಂಟಕ್ಕೆ ಗಂಟೆಯ ಪಟಗಾಣಿ ಕಟ್ಟಿಕೊಂಡು ಚಡ್ಡು ಹಿಡಿದು ಹೊರಟರು. ಮಸೂತಿಗೆ ಜನ ಬಂದು ಬಂದು ಸಕ್ಕರಿ ಓದಕಿ ಓದಿಸಿ ಸಿಹಿ ಪಡೆದು ಲಾಡಿ ಕಟ್ಟಿಕೊಂಡು ಹೊರಟರು.ಮಸೂತಿ ದೇವರುಗಳು ಊರೊಳಗೆ ಹೊರಟು ಎಲ್ಲಾ ದೇವರುಗಳನ್ನು ಬೇಟಿ ಮಾಡತೊಡಗಿದವು. ತಂಗಿ ಮಯಮ್ಮನ ಗುಡಿ ಹತ್ತಿರ ಬಂದು ಎರಡೂ ದೈವಗಳು ಅಪ್ಪಿಕೊಂಡು ಅತ್ತವು. ಬಿಡಿಸಿಕೊಂಡು ಬಿಡು ಊರಿಗೆ ಒಳಿತಾಗಲಿ ಎಂದು ಬಿಡಿಸಿಕೊಂಡು ಎರಡು ದಿಕ್ಕಿಗೆ ತಿರುಗಿದವು. ಕತ್ತಲ ರಾತ್ರಿಯ ದಿನ ಕಡಿದು ತಂದ ಮರದ ಬಡ್ಡೆಗಳು ಹೊತ್ತಿಕೊಂಡವು. ಕೆಂಪನೆಯ ಕೆಂಡದ ಕೆನ್ನಾಲಿಗೆಗಳು ಎದ್ದವು. ಜನ ಉಪ್ಪು ಹಿಡಿದು ಕಟ್ಟಿಗೆಗಳನ್ನು ಹೊತ್ತು ತಂದು ಕ್ವಾವ್‌ ಸೇನ್‌ ಬಾವ್‌ ಸೇನ್‌ ಎಂದು ಕುಣಿಗೆ ಹಾಕಿ ಉರಿ ಹೆಚ್ಚು ಮಾಡಿ ಸುತ್ತಿ ಸುತ್ತಿ ಹೊರಟರು.ಅಲೆ ಕುಣಿಯ ಕೆಂಡದ ಹಾಸಿಗೆಯೇನೋ ತಯಾರಾಯಿತು ಆದರೆ ಅದರಲ್ಲಿ ನಡೆಯುವವರು ಯಾರು? ಯಾವಾಗಲೂ ನಡೆಯೋ ಪೀರಣ್ಣ ಮಾವ ಮಂಚ ಹಿಡಿದಿದ್ದಾನೆ. ಮಗ ಜಮಾಲ ಕಮ್ಮಾರ ಹುಡುಗಿ ಕಾಂತಮ್ಮನನ್ನು ಎಬಿಸಿಗೊಂಡು ಊರು ಬಿಟ್ಟು ಓಡಿದ್ದಾನೆ.

ಕುಣಿ ಉರಿಯುತ್ತಲೇ ಇದೆ. ಆಗ ಪರಶಿವನೇ ಮುಂದಕ್ಕೆ ಬಂದನು. ಕೈಯೊಳಗೆ ದೊಡ್ಡ ಪೀರದೇವರ ಪಂಜಾವನ್ನು ಹಿಡಿದುಕೊಂಡು ಕುಣಿಯೊಳಗೆ ಹೆಜ್ಜೆ ಇಟ್ಟನು. ಹೆಜ್ಜೆ ಕದಲಲು ಕೆಂಡಗಳು ಹೂತು ಬಿಡುವಂತೆ ಎಗರಿ ಎಗರಿ ಬೀಳುತ್ತಿವೆ.ಅಲೆ ಕುಣಿಯ ತುಂಬಾ ಜನ…ತಾಗಿ ಕೊಳ್ಳುತ್ತಾ…ದಬ್ಬಿಕೊಳ್ಳುತ್ತಾ ನೋಡಲಿಕ್ಕೆ ಮೇಲೆ ಮೇಲೆ ಬೀಳುತಿದ್ದಾರೆ.
ಆ ಕಡೆಯಿಂದ ಈ ಕಡೆಗೆ , ಈ ಕಡೆಯಿಂದ ಆ ಕಡೆಗೆ ಮೂರು ಸಲ ಕೆಂಡದೊಳಗೆ ನಡೆದು ಪೀರದೇವರನ್ನು ಗದ್ದುಗೆ ಮೇಲಿಟ್ಟು ಕಣ್ಣು ತಿರುಗಿ ಕುಸಿದು ಬಿದ್ದನು ಪರಶಿವ.
“ ಅಭ್ಯಾಸವಿಲ್ಲದ ಕೆಲಸವನ್ನು ಯಾಕೆ ಮಾಡಬೇಕಪ್ಪಾ ಸ್ವಾಮಿ” ಎಂದನು ಪಕ್ಕದಲ್ಲಿದ್ದ ಹಿರಿಯ ಕತ್ಲಪ್ಪ.
“ ಈ ಬರಗಾಲ ನೋಡಲಾಗದೇ ಬಂದೆ ಕಣಜ್ಜೋ..” ಎಂದನು ವೀರ ಶಿವ ಬಿಗಿದ ಪಾದಗಳನ್ನು ನೋಡಿಕೊಳ್ಳುತ್ತಾ.
ಆದರೂ ಮಳೆರಾಯ ತಿರುಗಿ ನೋಡುತ್ತಿಲ್ಲ. ಹನಿ ಬೀಳುತ್ತಿಲ್ಲ. ಮಾಡಗಳೆಲ್ಲಾ ಮೊಂಡು ಬಿದ್ದುಬಿಟ್ಟಂಗದೆ.
ಅಲೆ ಕುಣಿಯ ಕೆಂಡ ಚೆಲ್ಲಾಡಿ ದೇವರು ಹೊರಟ ಬಳಿಕ ಆ ಬೂದಿಯನ್ನು ವಿಭೂತಿಯಾಗಿ ಬಳಸಲಿಕ್ಕೆ ,ಆಧಾರವಾಗಿ ಇಟ್ಟುಕೊಳ್ಳಲಿಕ್ಕೆ ಜನರು ಪೈಪೋಟಿಗೆ ಬಿದ್ದಿದ್ದಾರೆ. ಆ ಬೂದಿ ಇದ್ದರೆ ಮನೆಯೊಳಗೆ ದೆವ್ವಗಳ ಕಾಟ ಬರೋದಿಲ್ಲ. ಹತ್ತಿರ ಸುಳಿಯಲಾರವು ಎಂಬುದು ಅವರ ನಂಬಿಕೆ. ಉಳಿದ ಬೂದಿಯನ್ನ ಜನರು ಆಕಾಶಕ್ಕೆ ತೂರಿದರು. ಮಳೆರಾಯನಿಗೆ ಬಾರಪ್ಪೋ ಸ್ವಾಮಿ ಎಂದು ಕೈ ಮುಗಿದರು. ಆದರೂ ಆಕಾಶರಾಯ ಕರಗಲಿಲ್ಲ.
ಜನ ಗುಳೇ ಹೋಗಲು ಶುರು ಮಾಡಿದರು. ನೀರಿಲ್ಲದ ಊರಲ್ಲಿ ಬಿದ್ದು ಸಾಯುವುದಕ್ಕಿಂತಾ ಎಲ್ಯಾನ ಕಾಡಲ್ಲಾದರೂ ಗಡ್ಡೆ ಗೆಣಸು ತಿಂದು ಇರೋದೇ ಪಾಡೆಂದು ಊರ ಜನರು ಮನೆಗಳ ತೊರೆದು ಹೋಗುತಿದ್ದಾರೆ. ಇಷ್ಟು ಕಾಲ ನಂಬಿಕೊಂಡಿದ್ದ ನೆಲವನ್ನು ಬಿಟ್ಟು ಕೊಟ್ಟು ದೇಸಾಂತರ ಹೋಗುತ್ತಿರುವವರ ನೋಡಿದಾಗ ಪರಶಿವನಿಗೆ ನೋವಾಗುತ್ತಿದೆ.
ಆದರೂ ಪಾಪ ಆತನೇನು ಮಾಡುತ್ತಾನೆ. ಕರುಣ ರಸವನ್ನು ಹೊಮ್ಮಿಸುವ ಭಕ್ತ ಕುಮಾರವ್ಯಾಸನ ಕಥೆ ಹೇಳಿಸಿದರೆ ಆ ಮಾಡಗಳು ಕರಗಿ ಕರುಣಿಸುತ್ತವೆಂದು ಯಾರೋ ಹಿರಿಯ ಹೇಳಿದರೆ ಆಗಲಿ ಬಿಡೆಂದು ಶಿವಮೊಗ್ಗದ ಕಡೆಯಿಂದ ಕಲಾ ಕಾರರನ್ನು ಕರೆಕಳಿಸಿದನು. ರಾತ್ರಿಯೆಲ್ಲಾ ಮಾಯವ್ವ ತಾಯಿಗೆ ಕಾವ್ಯದ ರಸವನ್ನು ಉಣಿಸತೊಡಗಿದನು.
ಅಳಿದುಳಿದವರು ಕೂಡಿ ಮಳೆಯ ಹಾಡುಗಳ ಹಾಡುತಿದ್ದಾರೆ.
“ ಯಾತಕ್ಕೆ ಮಳೆ ಹೋದವೋ ಶಿವ ಶಿವಾ
ಲೋಕ ತಲ್ಲಣಿಸುತಾವೋ ಶಿವ ಶಿವಾ…
ಬೇಕಿಲ್ಲಾದಿದ್ದರೆ ಬೆಂಕಿಯ ಮಳೆ ಸುರಿದು
ಉರಿಸಿ ಕೊಲ್ಲಲು ಬಾರದೇ.
ಹೊಟ್ಟೆಗೆ ಅನ್ನ ಇಲ್ಲದಲೆ
ನಡೆದರೆ ಜೋಲಿ ಹೊಡೆಯುತಲೆ
ಪಟ್ಟದಾನೆಯಂತ ಸ್ತ್ರೀಯಾರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟಾದ ಮೇಲೆ.
ಹಸುಗೂಸು ಹಸುವಿಗೆ ತಾಲದೆಲೆ
ಅಳುತಾವೆ ರೊಟ್ಟಿ ಕೇಳುತಲೇ
ಹಡೆದ ಬಾಣಂತಿಗೆ ಅನ್ನವು ಇಲ್ಲದಲೆ
ಏರುತಾವೆ ಮೊಳಕೈಗೆ ಬಳೆ.
ಒಕ್ಕಾಲು ಮಕ್ಕಳಂತೆ
ಅವರಿನ್ನು ಮಕ್ಕಳನು ಮಾರುಂಡರು
ಮಕ್ಕಳನು ಮಾರುಂಡು ರೊಕ್ಕವನು ಮಾಡುತಾರೆ
ಮುಕ್ಕಣ್ಣ ಮಳೆ ಕರುಣಿಸೋ..
ಸ್ತ್ರೀಯರು ಅಳುತ್ತಿದ್ದಾರೆ. ಹಳ್ಳಿ ಜನರು ಮುತ್ತಿಕೊಳ್ಳುತಿದ್ದಾರೆ. ಬಂಗಾರದಂತ ಮಕ್ಕಳನ್ನು ಮಾರುವುದೇಗೆ ಎಂದು , ಅಂತ ಘಳಿಗೆ ತಂದ ಮಳೆರಾಯನಿಗೆ ತಾಯಂದಿರು ಬರಕ್ಕೆ ಶಪಿಸುತಿದ್ದಾರೆ. ಇದನ್ನು ಕಂಡ ಪರಶಿವನಿಗೆ ಬಾಯಿ ಕಟ್ಟಿತು. ಕಾಲು, ಕೈಗಳು ಬಿಗಿಯಲಾರಂಭಿಸಿದವು. ನಾಟಿ ವೈದ್ಯರು ಬಂದು ಹಸಿರು ಸೊಪ್ಪಿನ ರಸ ಹಿಂಡಿ ಕೂಡಿಸಿದರು. ಹಾಡು ಕಾವ್ಯಗಳು ಮಧ್ಯದಲ್ಲೇ ನಿಂತು ಹೋದವು.
ಆ ದಿನ ಮೊದ ಮೊದಲು ಪರಶಿವನಿಗೆ ಸ್ವಲ್ಪ ಸ್ವಲ್ಪ ಮತಿ ತಪ್ಪುವುದು ಶುರುವಾಯಿತು. ಹುಚ್ಚು ಹುಚ್ಚಾಗಿ ಮಾತಾಡುವುದು…. ವಿಚಿತ್ರವಾಗಿ ನಗುವುದು..ಅಳುವುದು….ಆಕಾಶಕ್ಕೆ ತಿರುಗಿ ಉಗಿವುದು… ಈ ರ‍್ತನೆಯನ್ನು ನೋಡಿದವರಿಗೆ ಮನವೆಲ್ಲಾ ನೊಂದಿತು.
ಬಂಗಾರದಂತಹ ಮನೆಯ ನಡುಗಂಬ ಕುಸಿದು ಬಿದ್ದಾಗ, ಭೂಮಿಗಳೆಲ್ಲಾ ಪಾಳು ಬಿದ್ದಾಗ ವೀರಶಿವನನ್ನು ನೋಡಿಕೊಳ್ಳರ‍್ಯಾರೂ ಇಲ್ಲದಾದರು. ಕಾಲದೊಂದಿಗೆ ಆತನ ವಯಸ್ಸೂ ಕರಗಿ ಹೋಗುತ್ತಿದೆ. ಪ್ರಾಯ ಹಾರಿ ಹೋಗಿದೆ.
ಮನುಷ್ಯನೇನೂ ಕುಗ್ಗಲಿಲ್ಲ ಆದರೂ ಆಗಾಗ ಬಿದಿರುಕೋಲು ಹಿಡಕೊಂಡು ಊರೊಳಗೆ ಕಾಣಿಸುತಿರುತ್ತಲೇ ಇರುತ್ತಾನೆ. ಆದರೂ ಆ ಮನುಷ್ಯ ಸುಮ್ಮನಿರುತಾನಾ…
***
ಬೆಳಗಾದಗಿಂದಲೂ ಬೆಳ್ಳನೆಯ ಮೋಡಗಳನ್ನು ಬೈಯುತ್ತಲೇ ಇದ್ದವನು ಈಗ ಹೊರಟಿದ್ದಾನೆ.ವೀರಾಪುರದ ಬಳಿಯ ಕಾಕಿ ಚಣ್ಣದ ಎಲ್ಲಜ್ಜನನ್ನು ಕಲೆತು ಅಂಜನ ಹಾಕಿ ನೋಡು ಎಂದನು. ಚಿನ್ನದ ಹಗರಿ ನದಿ ಕತೆಯೇನೋ. ಆತ ನೋಡಿ ಹೇಳಿದನು.” ನೆಲದ ಕೆಳಗಿನಿಂದ ಆಕಾಶದ ಮೋಡದ ತನಕ ಅರಿಷ್ಟವು ಸುತ್ತಿಕೊಂಡಿದೆ. ದೊಡ್ಡ ಬಲಿದಾನ ನಡೆಯದ ಹೊರತು ಇದು ಹೋಗದು. “ ಹೌದೌದು. ಹುಣ್ಣಿಮೆ ದಿನವೂ ಮಾಯವ್ವ ತಾಯಿ ಮೈದುಂಬಿ ಇದೇ ಮಾತೇಳಿದಳು.” ಎನ್ನುತ್ತಾ ಜೋರು ಜೋರಾಗಿ ನಡೆದು ಮಾಯಮ್ಮ ದೇವಿ ಗುಡಿಯ ಬಳಿಗೆ ಬಂದನು. ವಿಗ್ರಹಕ್ಕೆ ಹತ್ತಿದ ಮಸಿಗುಡ್ಡೆಯನ್ನು ತೆಗೆದು ಹಾಕಿದನು. ಹರಿಷಿಣ ಕುಂಕುಮಗಳನ್ನು ಹಚ್ಚಿ ಹೂಗಳನ್ನು ಏರಿಸಿ ಪೂಜೆಗಳನ್ನು ಮಾಡಿದನು. ಗುಡಿಯೊಳಗೆ ಸೇರಿಕೊಂಡ ಬಾವಲಿಗಳನ್ನು ಓಡಿಸಿದನು. ಕಸಕಡ್ಡಿ ,ಮಲಿನಗಳನ್ನೆಲ್ಲಾ ತೆಗೆದು ದಿಬ್ಬದ ಮೇಲೆ ಒಗೆದನು. ಬಾಯಿಗೆ ಬಂದ ಮಂತ್ರಗಳೇನೋ ಆ ತಾಯಿಯ ಮುಂದೆ ಕೂತು ಹೇಳಿದನು. ಹಾಡಿದನು. ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದನು. ಅತ್ತನು. ರಾತ್ರಿಯೆಲ್ಲಾ ಆ ತಾಯಿಯ ವಿಗ್ರಹದ ಬಳಿಯೇ ಕೂತು ಪ್ರರ‍್ಥಿಸಿದನು. ಬೆಳ್ಳಿ ಮೂಡುವ ವೇಳೆಗೆ ಯಾವುದೋ ರಹಸ್ಯವನ್ನು ಕಂಡು ಹಿಡಿದವನಂತೆ ಪರಶಿವನ ಸಂಭ್ರಮದಿಂದ ಊರಿನೊಳಗೆ ಬಂದನು.
“ ಇನ್ನ ಇರಲ್ಲ ಬಿಡು… ಈ ಬರಗಾಲವನ್ನ ಅವ್ನವೌನ್‌ ಅದರ ಹೆಣ ನೋಡ್ತಾನಿ” ಎಂದು ಊರೆಲ್ಲಾ ತಿರುಗುತ್ತಾ ಹೇಳಿದನು. ಜನರೆಲ್ಲಾ ಈ ಹುಚ್ಚು ಮಾತುಗಳನ್ನ ಆಶ್ರ‍್ಯದಿಂದ ಕೇಳಿದರು.
ಬಿದಿರು ಕೋಲನ್ನು ಪಕ್ಕಕ್ಕೆ ಬಿಸಾಕಿ ಮಾಯಮ್ಮ ತಾಯಿ ದೇವರ ಗುಡಿ ಮುಂದೆ ಆ ದೇವಿಗೆ ಧಿಡನಮಸ್ಕಾರ ಮಾಡಿದನು. ಅಂಗೇ ಹೊರ ಹೊಂಟನು… ಎಲ್ಲಿಗೆ ಸಿದ್ದಯ್ಯನ ಗುಡ್ಡದ ಮೇಲಕ್ಕೆ. ರ‍್ಮಾನುಷವಾಗಿ ಒಣಗಿ ಬೀಳು ಬಿದ್ದಿರುವ ಭೂಮಿಗಳು. ಕೆಂಪು ಧೂಳಿನಿಂದ ಸುತ್ತೂ ತಿರುಗಿ ಬರುತ್ತಲಿದೆ. ಏನು ಧೂಳಿನ ದೆವ್ವ ಗಾಳಿ. ಹಾಗೇ ಮುಂದಕ್ಕೆ ಸಾಗಿದನು. ಒಣಗಿದ ಕೆರೆಯ ಬಳಿ ನಿಂತು ಸುತ್ತೂ ಮಾಯಮ್ಮ ತಾಯಿಯನ್ನ ಬಿಡದಂತೆ ಕಂಡನು. ದುಃಖಿಸಿದನು. ದೂರದಲ್ಲಿ ಊರ ಜನರು ಓಡುತ್ತಾ ಇತ್ತ ಕಡೆಗೇ ಬರುತಿದ್ದಾರೆ.
ರಾತ್ರಿಯೆಲ್ಲಾ ಕುಳಿತು ಮಸೆದು ಇಟ್ಟ ರ‍್ಧಚಂದ್ರಾಕಾರದ ಗಂಡು ಗೊಡಲಿಗೆ ಮುತ್ತಿಟ್ಟನು. ನೆಲದ ಮಣ್ಣನ್ನು ತೆಗೆದುಕೊಂಡು ಕಣ್ಣಿಗೆ ತೀಡಿಕೊಂಡನು. “ ನಮಗೇಕೆ ತಾಯಿ ಈ ನರಕ. ಆ ಕಡಿಗೆ ಎಲ್ಲರನ್ನ ಸಾಯಿಸಾದರೂ ಸಾಯಿಸು. ಇಲ್ಲದಿದ್ದರೆ ಎಲ್ಲರಿಗನ್ನಾ ಹೊಟ್ಟೆತುಂಬಿಸು. ನಡುವಿನ ಈ ಬರಗಾಲವೇಕೆ” ಕೈಯೊಳಗೆ ಉಳಿದ ಮಣ್ಣನ್ನು ನೆಲಕ್ಕೆ ಹಾಕಿದನು.
“ ನನ್ನ ಪ್ರಾಣ ತಗಂಡನ್ನಾ ಶಾಂತವಾಗಿ ನಾಲ್ಕು ಚುಕ್ಕೆಗಳ ಕಣ್ಣೀರ ಹನಿಸು… ಎನ್ನುತ್ತಾ ಕೈಯೊಳಗಿನ ಗಂಡಗೊಡಲಿಯನ್ನ ಬಲವಾಗಿ ಗಿರ ಗಿರನೇ ತಿರುಗಿಸಿ ಮುಗಿಲ ಕಡೆಗೆ ಎಸೆದನು ಅದು ತಿರುಗುತ್ತಾ ತಿರುಗುತ್ತಾ ಕೆಳಕ್ಕೆ ಬರುತ್ತಿದೆ…ಬರುತ್ತಿದೆ..ಬರೋ ಕಡೆಗೇ ಶಿರ ಬಾಗಿಸಿದನು ವೀರ ಶಿವ. ತಲೆ ಬಾಗಿಸಿದವನನ್ನ ಪಕ್ಕಕ್ಕೆ ಎಳೆದುಕೊಂಡರು ಊರ ಜನರು.
“ ಬಿಡ್ರೋ… ಬಿಡ್ರೋ…” ಅಂತ ಬಿಡಿಸಿಕೊಂಡನು ವೀರಶಿವ.
ಮೇಲಿಂದ ಬೀಳುತಿದ್ದ ಗಂಡು ಗೊಡಲಿ ನೆಲದ ಮಣ್ಣಲ್ಲಿ ನಾಟಿಕೊಂಡಿತು.
“ ಏನು ಸ್ವಾಮಿ ಹಿಂಗ ಮಾಡಿದಿರಿ” ಜನರೊಳಗಿನ ಯಾರೋ ಕೇಳಿದರು.
“ ಸಾಯಲು ಬಿಡ್ರಿ ನನ್ನನ್ನು ಸಾಯಲು ಬಿಡ್ರಿ” ನಿಮಗೆ ಮಳೆ ರ‍್ತಾವು. ನೀವು ಸುಖವಾಗಿರುತ್ತೀರಿ..” ದುಃಖದಿಂದಲೇ ಹೇಳುತಿದ್ದಾನೆ.
“ ಸತ್ತರೇ ಮಳೆ ಬರುತಾದ ಅಂದ್ರ ದಿನಕ್ಕೊಬ್ಬರು ಸಾಯುತಿಲ್ಲವೇ ಸ್ವಾಮಿ. ಸಾವೇ ಸಮಾಧಾನವಾ…” ಎಂದು ಹೇಳಿದ ಜನರೊಳಗಿನ ಹಿರೀಕ.
“ ಮಾಯಮ್ಮ ತಾಯಿಗೆ ಕರುಣೆ ಹುಟ್ಟಿದರೆ ಈಗಲೇ ಮಳೆ ಬರುತ್ತದೆ. ನಾವ್ಯಾಕೆ ಪ್ರಾಣ ಕಳಕೋ ಬೇಕು. ಯಾರದೋ ಹೆಣ್ಣು ಧ್ವನಿ ಕೇಳುತ್ತಿದೆ.
ಓ… ತನೇನು ಮಾಡುತಿದ್ದೇನೆ. ಯಾಕೆ ಹೀಗೆ ರ‍್ತಿಸುತಿದ್ದೇನೆ. ಇಲ್ಲ. ನಾನು ಜನರಿಗಾಗಿ ವೀರಶಿವನಾಗಿಯೇ ಬದುಕಬೇಕು. ಜನರಿಗಾಗಿ ಬದುಕಬೇಕು. ಊರಿಗಾಗಿ ಬದುಕಬೇಕು. ಕಾಲ ಕೆಳಗೆ ತಣ್ಣನೆಯ ತಂಪು…ತಣ್ಣಗೆ ತಂಪಾದ ಸಣ್ಣನೆಯ ಅನುಭವ… ನೀರ ತೇವ…ಭೂಮಿ ಬಿರಿಯಿತು. ಭೂಮಿ ಉರಿಯಿತು. ಮುಗಿಲು ಬೆದರಿತು.
ಕವಿದುಕೊಂಡ ಕಪ್ಪು ಮೋಡಗಳು ಒಂದಕ್ಕೊಂದು ತಿವಿದುಕೊಂಡು ಅಪ್ಪಳಿಸಿದವು. ಮಿಂಚು ಮಿಂಚು ಹೆಣೆದುಕೊಂಡು ಬೆಂಕಿ ಬೆಳಗಿದವು. ಗುಡುಗು ಸಿಡಿಲು ಸಿಡಿದುಕೊಂಡು ಬೆಂಕಿ ಉಗಿದವು. ಆ ಬಿಸಿಗೆ ಕಪ್ಪು ಮೋಡಗಳು ಕದಲಿ ಕೆಳಗಿಳಿದವು. ಎಲ್ಲಿದ್ದವೋ ಅಲ್ಲೇ. ಎಲ್ಲಿ ನಿಂತ ಮೋಡ ಅಲ್ಲೇ ಹೃದಯವನ್ನು ತೆರೆದು ಕಣ್ಣೀರು ಸುರಿಸಿದಂತಹ ಹನಿಗಳು.
ಒಂದರ ನಂತರ ಒಂದು ನೆಲಕ್ಕೆ ಹಾರಿ ಹಾರಿ ಬರುತ್ತಲಿವೆ ಮಳೆ…ಮಳೆ..ಸುರಿಯುತ್ತಲೇ ಹೋಯಿತು. ಹಗಲೂ ಇರುಳು. ಹೊಳೆಗಳು ತುಂಬಿ ಹೊರಳತೊಡಗಿದವು.
ತಗ್ಗು ಹಳ್ಳ ದಿನ್ನೆಗಳೆಲ್ಲಾ ನೀರು…ನೀರು …ನೀರು.
ಎತ್ತ ನೋಡಿದರೂ ನೀರು… ಕರೆ ಕೋಡಿ ಬೀಳುತ್ತಿದೆ.
ತಾಯಿ ಮಹಾತಾಯಿ.ಮಾಯಮ್ಮ ತಾಯಿ ಹರಿಯುತ್ತಿದ್ದಾಳೆ.
ಚಿನ್ನದ ಹಗರಿಯಾಗಿ ಹರಿಯುತಿದ್ದಾಳೆ. ಪ್ರವಾಹವಾಗಿ ಉಕ್ಕುತಿದ್ದಾಳೆ.
ಹಸಿರಾಗಿ ನಗುತ್ತಾ ಹಾಡುತಿದ್ದಾಳೆ.
ಒಣಗಿದ ಬೇರುಗಳಿಗೆ ಉಸಿರು ಬಂದಿತು.
ಬಾಡಿದ ಎಲೆಗಳಿಗೆ ಪ್ರಾಣ ಬಂದಿದೆ… ಬಂದಿದೆ …ಬಂದಿದೆ.
ಊರಿಗೆ ಉಸಿರು ಬಂದಿದೆ. ಊರು ಹಸಿರ ಮರವಾಗಿದೆ.
ಪಕ್ಷಿಗಳ ಗೂಡಾಗಿದೆ…ಸುಗ್ಗಿಯ ನೆಲವಾಗಿದೆ… ಹಾಡುಗಳ ಕಣವಾಗಿದೆ…ಜಾತ್ರೆಯ ನದಿಯಾಗಿದೆ….ಮಾಯಮ್ಮ ತಾಯಿಯ ಬೆಳ್ಳಿ ಮುಖವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ7 days ago

ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಸೋಮವಾರ(ಫೆ.23) ರಂದು ನಗರದ...

ದಿನದ ಸುದ್ದಿ1 week ago

ಫೆಬ್ರವರಿ ಮಾಹೆಗೆ ಪಡಿತರ ಹಂಚಿಕೆ

ಸುದ್ದಿದಿನ,ದಾವಣಗೆರೆ:ಫೆಬ್ರವರಿ-26ರ ಮಾಹೆಗೆ ಅನ್ವಯವಾಗುವಂತೆ ವಿವಿಧ ವರ್ಗದ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆ ಮಾಡಲಾಗಿದೆ. ಅಂತ್ಯೋದಯ ಕಾರ್ಡದಾರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ ಅಕ್ಕಿ,...

ದಿನದ ಸುದ್ದಿ1 week ago

ಜನರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸುವುದು ಅಧಿಕಾರಿಗಳ ಕರ್ತವ್ಯ : ಡಾ.ಹೆಚ್.ಕೃಷ್ಣ

ಸುದ್ದಿದಿನ,ದಾವಣಗೆರೆ:ಆಹಾರ ಪಡೆಯುವುದು ಜನರ ಹಕ್ಕು, ಅದನ್ನು ಅನುಷ್ಠಾನಗೊಳಿಸುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯ. ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ಸಹ ನಮ್ಮೆಲ್ಲರ ಜವಾಬ್ದಾರಿ. ಜನರಿಗೆ ಕೇವಲ ಆಹಾರ ಧಾನ್ಯಗಳನ್ನು...

ದಿನದ ಸುದ್ದಿ2 weeks ago

ದಾವಣಗೆರೆ | ಕಂದಾಯ ಹಕ್ಕು ಪತ್ರ ಮತ್ತು ಪಾವತಿ ಆಂದೋಲನ

ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ 298 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಈಗಾಗಲೇ 12,000ಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಬಾಕಿ ಇರುವವರು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ...

ದಿನದ ಸುದ್ದಿ2 weeks ago

ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು. ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ...

ದಿನದ ಸುದ್ದಿ2 weeks ago

ಏ.1 ರಿಂದ 2026ರ ಡಿಜಿಟಲ್ ಜನಗಣತಿ

ಸುದ್ದಿದಿನ,ದಾವಣಗೆರೆ :2026ರ ಜನಗಣತಿ ಪ್ರಕ್ರಿಯೆ ಏಪ್ರಿಲ್ 1 ರಿಂದ ಆರಂಭವಾಗಲಿದ್ದು, ಈ ಬಾರಿ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ ನಡೆಯಲಿದೆ. ಸಾರ್ವಜನಿಕರು ಆನ್‌ಲೈನ್ ಮೂಲಕ ಸ್ವಯಂ ದೃಢೀಕರಣ...

ದಿನದ ಸುದ್ದಿ2 weeks ago

ದುರ್ಗಾಂಬಿಕ ಜಾತ್ರೆ ; ಫ್ಲೆಕ್ಸ್ ಹಾವಳಿ ವಿರುದ್ಧ ಕಠಿಣ ಕ್ರಮ

ಸುದ್ದಿದಿನ,ದಾವಣಗೆರೆ:ದುರ್ಗಾಂಬಿಕಾ ಜಾತ್ರೆಯ ಸಂದರ್ಭದಲ್ಲಿ ನಗರದ ಪರಿಸರ ಮಾಲಿನ್ಯಕ್ಕೆ ಧಕ್ಕೆ ತರುವಂತೆ ಅನಧಿಕೃತ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ‘ಡಿ ಫಿಗರ್‌ಮೆಂಟ್ ಆಕ್ಟ್’ ಅಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಎಫ್‌ಐಆರ್ ದಾಖಲಿಸಲಾಗುವುದು ಎಂದು...

ದಿನದ ಸುದ್ದಿ2 weeks ago

ಎಸ್.ಎಸ್.ಎಲ್.ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಕ್ರಮ: ಡಿಸಿ ಜಿ.ಎಂ.ಗಂಗಾಧರಸ್ವಾಮಿ

ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ ಮುಂಬರುವ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಸುಸೂತ್ರವಾಗಿ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ನಿವಾರಿಸಿ ಫಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ...

ದಿನದ ಸುದ್ದಿ2 weeks ago

ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ – ಪ್ರಾಣಿಬಲಿ ಮತ್ತು ಮದ್ಯಪಾನ ನಿಷೇಧ, ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ

ಸುದ್ದಿದಿನ,ದಾವಣಗೆರೆ:ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯು ಫೆ. 22 ರಿಂದ 25 ರವರೆಗೆ 3 ದಿನಗಳ ಕಾಲ ನಡೆಯಲಿದ್ದು, ಭಕ್ತಿಪೂರಕವಾಗಿ ವಿಜೃಂಭಣೆಯಿಂದ ನಡೆಯಲು ಕ್ರಮವಹಿಸಲಾಗಿದೆ, ಜಾತ್ರೆ ಸಮಯದಲ್ಲಿ...

ದಿನದ ಸುದ್ದಿ2 weeks ago

ಯಶಸ್ವಿ ಬೃಹತ್ ಉದ್ಯೋಗ ಮೇಳಕ್ಕೆ ಕ್ರಮವಹಿಸಿ: ಡಿಸಿ ಗಂಗಾಧರ್ ಸ್ವಾಮಿ

ಸುದ್ದಿದಿನ,ದಾವಣಗೆರೆ:ನಗರದ ಎಂಸಿಸಿ ಬ್ಲಾಕ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆಬ್ರವರಿ 23 ರಂದು ಉದ್ಯೋಗ ಮೇಳ ನಡೆಯಲಿದೆ, ಮೇಳದಲ್ಲಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಕಾರ್ಯಕ್ರಮ ಯಶಸ್ವಿಗೆ...

Trending