ಬಹಿರಂಗ
‘ಭೀಮ ಕೋರೆಗಾಂವ್ ದಂಗೆ’ಯ ಬಗ್ಗೆ ನೀವು ಓದಲೇ ಬೇಕಾದ ಲೇಖನ..!
ಭೀಮ ಕೋರೆಗಾಂವ್ ದಂಗೆ : ಜನವರಿ – 1 , 1818 ( ಸಿಪಾಯಿ ದಂಗೆಗಿಂತ 40 ವರ್ಷಗಳ ಮೊದಲೇ ನಡೆದ ಅಸ್ಪಶ್ಯರ ಮಹಾದಂಗೆ )
ಯುದ್ಧದಲ್ಲಿ ಮಡಿದ ಅಸ್ಪಶ್ಯ ವೀರರು
1 . ಸಿದ್ದನಾಕ ಮಕಲನಾಕ ನಾಯಕ
2 . ರಾಮನಾಕ ಯಶನಾಕ ಸಿಪಾಯಿ
3 , ಗೋದನಾಕ ಮೋಡೆನಾಕ ಸಿಪಾಯಿ
4 , ರಾಮನಾಕ ಯಶನಾಕ ಸಿಪಾಯಿ
5 . ಭಾಗನಾಕ ಹರನಾಕ ಸಿಪಾಯಿ
6 . ಅಂಬನಾಕ ಕಾನನಾಕ ಸಿಪಾಯಿ
7 . ಗಣನಾಕ ಬಾಳನಾಕ ಸಿಪಾಯಿ
8 . ಬಾಳನಾಖ ದೊಂಡನಾಕ ಸಿಪಾಯಿ
9 , ರೂಪನಾಕ ಲಖನಾಕ ಸಿಪಾಯಿ
10 . ಬಾಲನಾಕ ರಾಮನಾಕ ಸಿಪಾಯಿ
11 . ವಟಿನಾಕ ಧಾನನಾಕ ಸಿಪಾಯಿ
12 . ಗಜನಾಕ ಗಣನಾಕ gಸಿಪಾಯಿ
13 . ಬಾಪನಾಕ ಹಬನಾಕ ಸಿಪಾಯಿ
14 . ಕೋನಾಕ ಜಾನನಾಕ ಸಿಪಾಯಿ
15 . ಸಮನಾಕ ಯಸನಾಕ ಸಿಪಾಯಿ
16 , ಗಣನಾಕ ಧರಮನಾಕ ಸಿಪಾಯಿ
17 . ದೇವನಾಕ ಅಂಕನಾಕ ಸಿಪಾಯಿ
18 . ಗೋಪಾಲನಾಕ ಬಾಲಿನಾಕ ಸಿಪಾಯಿ
19 , ಹರನಾಕ ಹರಿನಾಕ ಸಿಪಾಯಿ
20 . ಜೇಠನಾಕ ದೌನಾಕ ಸಿಪಾಯಿ
21 . ಗಣನಾಕ ಲಖನಾಕ ಸಿಪಾಯಿ
22 . ಸೀನನಾಕ ಮಕಲನಾಕ ಸಿಪಾಯಿ
ಅಸ್ಪಶ್ಯರನ್ನು ಗುರುತಿಸಲು ಅಂದು ಅವರ ಹೆಸರಿನ ಮುಂದೆ ನಾಕ ಎಂದು ಸೇರಿಸಲಾಗುತ್ತಿತ್ತು .
ಡಾ . ಬಾಬಾ ಸಾಹೇಬ್ ಅಂಬೇಡ್ಕರ್ರವರು ಎಷ್ಟೇ ತುರ್ತು ಕೆಲಸಕಾರ್ಯಗಳಿದ್ದರೂ ಸಹ ಅವುಗಳೆಲ್ಲವನ್ನೂ ಬದಿಗಿರಿಸಿ , ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಸಹ ಅಲ್ಲಿಂದ ಹೊರಟು ಜನವರಿ ಒಂದನೇ ತಾರೀಖಿನಂದು ‘ ಕೋರೆಗಾಂವ್ ‘ ಗೆ ತಮ್ಮ ಕುಟುಂಬ ಸಮೇತರಾಗಿ ಬಂದು , ಅಲ್ಲಿರುವ ಹುತಾತ್ಮ ಅಸ್ಪಶ್ಯ ಯೋಧರ ಸ್ಮಾರಕಕ್ಕೆ ( ವಿಜಯ ಸ್ಥಂಬಕ್ಕೆ ) ಶ್ರದ್ದಾಂಜಲಿ ಸಲ್ಲಿಸುತ್ತಿದ್ದ ಅವರು ಬದುಕಿರುವ ತನಕವೂ ಒಂದೇ ಒಂದು ವರ್ಷವೂ ಸಹ ಜನವರಿ 1ನೇ ತಾರೀಖು ಇಲ್ಲಿ ಬರುವುದನ್ನು ಬಾಬಾಸಾಹೇಬರು ತಪಿಸಲಿಲ್ಲ . ಪ್ರತಿವರ್ಷ ಜನವರಿ 1ನೇ ತಾರೀಖು ಜಗತ್ತಿಗೆ ಹೊಸವರ್ಷದ ಸಂಭ್ರಮದ ದಿನವಾದರೆ ಭಾರತದ ದಲಿತರ ಪಾಲಿಗೆ ಇದು ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಅಸ ಶರ ಗುಂಪೊಂದು ಮಹಾರಾಷ್ಟ್ರದ ಪೇಶ್ವಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ದಿಗ್ವಿಜಯ ಸಾಧಿಸಿದ ದಿನ , ಈ ದಿನ ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ದ . ಈ ಘಟನೆ ಡಾ . ಅಂಬೇಡ್ಕರ್ರವರ ಹೋರಾಟಗಳ ಬದುಕಿನ ಪ್ರೇರಣೆಗಳಲ್ಲಿ ಒಂದೂ ಹೌದು . ಕ್ರಿ . ಶ . 1800ರಲ್ಲಿ ಮಹಾರಾಷ್ಟ್ರದಲ್ಲಿ ಪೇಶ್ವಗಳು ಆಡಳಿತ ನಡೆಸುತ್ತಿದ್ದರು . ಇವರ ಆಡಳಿತವು ಅಸಶರ ಪಾಲಿನ ಕರಾಳ ಚರಿತ್ರೆಯಾಗಿತ್ತು . ಅಸ್ಪಶ್ಯತೆ ಆಚರಣೆಯ ಕಠೋರತೆಯು ಅಮಾನುಷವಾಗಿತು .ಅಸ್ಪೃಶರ ನೆರಳು ಹಿಂದೂ ಸವರ್ಣಿಯ ಮೇಲೆ ಬಿದ್ದರೆ , ಹಿಂದೂ ಸವರ್ಣಿಯರಿಗೆ ಮೈಲಿಗೆಯಾಗುತ್ತದೆಂಬ ಕಾರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪಶ್ಯರಿಗೆ ಪ್ರವೇಶವನ್ನೇ ನಿಷೇಧಿಸಲಾಗಿತ್ತು . ಅಸ ಶ್ಯರು ಊರ ಮಧ್ಯೆ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮಾತ್ರ ನಡೆದುಕೊಂಡು ಹೋಗಬೇಕಾಗಿತ್ತು .
ಏಕೆಂದರೆ ಈ ಸಮಯದಲ್ಲಿ ಅವನ ನೆರಳು ಬೇರೆಕಡೆ ಬೀಳುವುದಿಲ್ಲ ಎನ್ನುವ ಕಾರಣಕ್ಕಾಗಿ . ಹೋಗುವಾಗ ಕುತ್ತಿಗೆಗೆ ಒಂದು ಮಣ್ಣಿನ ಮಡಿಕೆಯನ್ನು ನೇತು ಹಾಕಿಕೊಳ್ಳಬೇಕಾಗಿತ್ತು . ಏಕೆಂದರೆ ಅಸ್ಪಶ್ಯರು ನೆಲಕ್ಕೆ ಉಗುಳುವ ಹಾಗಿರಲಿಲ್ಲ . ಆ ಮಡಿಕೆಯಲ್ಲಿ ಉಗುಳಿಕೊಳ್ಳಬೇಕಾಗಿತ್ತು . ಅದೇ ರೀತಿ ಸೊಂಟಕ್ಕೆ ಒಂದು ಕಸಪೊರಕೆ ಕಟ್ಟಿಕೊಂಡು ತಾನು ನಡೆದ ದಾರಿಯನ್ನು ತಾನೇ ಗುಡಿಸಿಕೊಂಡು ಹೋಗಬೇಕಾಗಿತ್ತು . ಅಸ್ಪಶ್ಯರು ತಮ್ಮ ಗುರುತು ಪತ್ತೆಗಾಗಿ ತಮ್ಮ ಕುತ್ತಿಗೆ ಮತ್ತು ಮುಂಗೈಗೆ ದಪ್ಪದಾದ ಕಪ್ಪು ದಾರವನ್ನು ಕಡ್ಡಾಯವಾಗಿ ಕಟ್ಟಿಕೊಳ್ಳಬೇಕಾಗಿತ್ತು . ಊರಿನೊಳಗೆ ಸತ್ತ ದನಗಳನ್ನು ಊರಿನಿಂದ ಹೊರಗೆ ಹೊತ್ತುಕೊಂಡು ಹೋಗಿ ಅದರ ಮಾಂಸವನ್ನು ಬೇಯಿಸಿ ತಿನ್ನಬೇಕಾಗಿತ್ತು . ಅವರಿಗೆ ವಿದ್ಯೆ ಕಲಿಯುವ ಹಕ್ಕನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು . ಅಸ್ಪಶ್ಯ ಹೆಂಗಸರು ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ತೊಡುವ ಹಾಗಿರಲಿಲ್ಲ . ಹಿಂದೂ ಸವರ್ಣಿಯರು ಮತ್ತು ಪೇಳ್ವೆ ಸೈನಿಕರು ಅಸ್ಪಶ್ಯ ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು . ಈ ಎಲ್ಲಾ ಅನ್ಯಾಯ ಮತ್ತು ದೌರ್ಜನ್ಯಗಳನ್ನು ನಿಲ್ಲಿಸಬೇಕೆಂದು ಅಸ್ಪೃಶ್ಯರು 1817ರಲ್ಲಿ ರಾಜ್ಯಭಾರ ನಡೆಸುತ್ತಿದ್ದ ಪೇಶ್ವಿರಾಜ ಎರಡನೇ ಬಾಜೀರಾಯನಲ್ಲಿ ವಿನಂತಿಸಿಕೊಂಡಾಗ ಎರಡನೇ ಬಾಜೀರಾಯನು “ ನೀವುಗಳು ಹುಟ್ಟಿರುವುದೇ ನಮ್ಮಗಳ ಸೇವೆ ಮಾಡಲಿಕ್ಕಾಗಿ & ನಿಮ್ಮ ಹೆಂಗಸರು ಇರುವುದೇ ನಮ್ಮನ್ನು ಸುಖಪಡಿಸಲಿಕ್ಕಾಗಿ , ಇದೇ ನಮ್ಮ ಮನು ಸಂವಿಧಾನ ” ಎಂದು ಅಸ್ಪೃಶ್ಯರಿಗೆ ಖಡಕ್ಕಾಗಿ ತಿಳಿಸಿದನು . ಇದರಿಂದ ಗಾಯಗೊಂಡ ವ್ಯಾಘ್ರಗಳಂತಾದ ಅಸ್ಪೃಶ್ಯರು ಸೇಡುತೀರಿಸಿಕೊಳ್ಳಲಿಕ್ಕಾಗಿ ಸಮಯ ಕಾಯತೊಡಗಿದರು . ಇದೇ ಸಮಯದಲ್ಲಿ ಸರಿಯಾಗಿ ಕೊಲ್ಕತ್ತಾವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಬಹುತೇಕ ಉತ್ತರ ಭಾರತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ಬ್ರಿಟಿಷರು ಮಹಾರಾಷ್ಟ್ರದ ಪೇಶ್ವ ರಾಜ ಎರಡನೇ ಬಾಜೀರಾಯನನ್ನು ಬಗ್ಗುಬಡಿದು ದಕ್ಷಿಣ ಭಾರತದಲ್ಲಿ ಅಮ್ಮಗಳ ಆಳ್ವಿಕೆಗೆ ವಿಸ್ತರಿಸಿಕೊಳ್ಳಲು ಸಮಯ ಕಾಯುತ್ತಿದ್ದರು .
ಪೇಶ್ವಗಳ ದೌರ್ಜನ್ಯ , ದಬ್ಬಾಳಿಕೆಗಳಿಂದ ಇನ್ನಿಲ್ಲದಂತೆ ರೋಸಿಹೋಗಿದ್ದ ಮಹಾರಾಷ್ಟ್ರದ ಅಸ್ಪ ಶ್ಯರು ಅದರಲ್ಲೂ ಅಸ್ಪಶ್ಯ ಯುವಕರು ಪೇಶ್ವಗಳ ಬಿಸಿ ರಕ್ತ ಕುಡಿಯಲು ಹಾತೊರೆಯುತ್ತಿದ್ದರು . ಇದನ್ನು ಗಮನಿಸಿದ ಚಾಣಾಕ್ಷ ಬ್ರಿಟೀಷರು ಪೇಶ್ವಗಳ ವಿರುದ್ಧ ಯುದ್ಧ ಮಾಡಲು ಅಸ್ಪಶ್ಯರನ್ನು ಕೋರಿಕೊಂಡರು , ತಮ್ಮಗಳ ಕಷ್ಟ – ಅಪಮಾನಗಳ ಪರಿಹಾರಕಾಗಿ ಒದಗಿ ಬಂದ ಈ ಸುವರ್ಣಾವಕಾಶವನ್ನು ಮನಃಪೂರ್ವಕವಾಗಿ ಸ್ವೀಕರಿಸಿದ ಅಸ್ಪಶ್ಯರು “ ಸಿದನಾಕ , ಎಂಬ ಅಸ್ಪಶ್ಯ ಯುವಕನ ನಾಯಕತ್ವದಲ್ಲಿ 500 ಜನ ಅಸ್ಪಶ್ಯ ಯುವಕರು ಪೇಶೆಗಳ ವಿರುದ ಯುದ್ಧ ಮಾಡಲು ಬ್ರಿಟೀಷರ ಕೋರಿಕೆಗೆ ಒಪ್ಪಿಕೊಂಡರು . ಕಡೆಗೂ ಆ ಐತಿಹಾಸಿಕ ಯುದ್ದದ ದಿನ ಬಂದೇ ಬಿಟ್ಟಿತು . ಅದೇ 1818ರ ಜನವರಿ 1ನೇ ತಾರೀಖು . ಬ್ರಿಟೀಷ್ ಕ್ಯಾಪನ್ ಎಸ್ . ಎಸ್ . ಸಂಡನ್ ನೇತೃತ್ವದಲ್ಲಿ ಸಿದ್ದನಾಕ ‘ ನ ನಾಯಕತ್ವದ 500 ಅಸ ಶ ಯೋಧರ ಪಡೆ ( ಈ ಎಲ್ಲಾ ಯೋಧರಿಗೆ ಬಂದೂಕು ಉಪಯೋಗಿಸುವ ತರಬೇತಿಯನು . ಬ್ರಿಟೀಷರು ಚೆನ್ನಾಗಿ ನೀಡಿರುತ್ತಾರೆ . ) 1817ರ ಡಿಸೆಂಬರ್ 31ನೇ ತಾರೀಖು ರಾತ್ರಿ ಸಿರೂರ್ನಿಂದ ಹೊರಡುತ್ತಾರೆ . ಆ ಇಡೀ ರಾತ್ರಿ ಸತತವಾಗಿ 27 ಕಿಲೋಮೀಟರ್ ನಡೆದು ಮಾರನೇ ದಿನ ಅಂದರೆ 1818ರ ಜನವರಿ 1ರಂದು ಪೂನಾ ನಗರದಿಂದ 15 ಕಿ . ಮೀ . ದೂರದಲ್ಲಿರುವ ಬೀಮಾ ನದಿ ತೀರದಲ್ಲಿರುವ ಕೋರೆಗಾಂವ್ ಎಂಬ ಸ್ಥಳವನ್ನು ಸಿದ್ಧನಾಕನ ಪಡೆ ತಲುಪುತ್ತದೆ . ಇಡೀ ರಾತ್ರಿ ನಿದ್ದೆಯಿಲ್ಲದೆ 27 ಕಿ . ಮೀ . ದೂರವನ್ನು ನಡೆದುಕೊಂಡು ಬಂದಿದ್ದ ಈ ಅಸ್ಪಶ್ಯ ಯೋಧರ ಪಡೆ ನಿದ್ದೆ , ಅನ್ನ – ನೀರು ಯಾವುದನ್ನೂ ಬಯಸದೆ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಪೇಶ್ವ ಸೈನಿಕರ ಮೇಲೆ ಎರಗುತ್ತಾರೆ . 20 ಸಾವಿರ ಅಶ್ವದಳ , 8 ಸಾವಿರ ಕಾಲ್ದಳ ಸೇರಿ ಒಟ್ಟು 28 ಸಾವಿರ ಪೇಳ್ವೆ ಸೈನಿಕರು ಮೂರೂ ದಿಕ್ಕಿನಿಂದ ಅಸ್ಪಶ್ಯ ಯೋಧರಿಗೆ ಎದುರಾಗುತ್ತಾರೆ . ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಯುದ್ದದಲ್ಲಿ ಹಸಿದ ಹೆಬ್ಬುಲಿಗಳಂತಿದ್ದ ಅಸ್ಪಶ್ಯಯೋಧರು ಪೇಶ್ವ ಸೈನ್ಯವನ್ನು ಧೂಳಿಪಟ ಮಾಡುತ್ತಾರೆ . ಇಡೀ ಯುದ್ಧ ಭೂಮಿಯ ತುಂಬ ರಕ್ತದ ಕೋಡಿಯೇ ಹರಿಯುತ್ತದೆ . ಸಾವಿರಾರು ಸೈನಿಕರು ಯುದ್ಧಭೂಮಿಯಲ್ಲಿ ಸಾವನ್ನಪ್ಪುತ್ತಾರೆ .
ಬೃಹತ್ ಸಂಖ್ಯೆಯಲ್ಲಿದ್ದ ಅಂದರೆ ಅಸ್ಪಶ್ಯಯೋಧರಿಗಿಂತ 56 ಪಟ್ಟು ಹೆಚ್ಚು ಇದ್ದ ಪೇಶ್ವಗಳ ರಣಹೇಡಿ ಸೈನ್ಯ ಗಂಡು ಸಿಂಹಗಳಂತಿದ್ದ ಅಸ್ಪೃಶ್ಯ ಸೈನಿಕರ ಮುಂದೆ ನಿಲ್ಲಲಾಗದೆ ಕೊನೆಗೆ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡತೊಡಗಿದರು . ಅಂತಿಮವಾಗಿ ಈ ಯುದ್ದದಲ್ಲಿ ಅಸ್ಪಶ್ಯ ಸೈನಿಕರು ಪ್ರಚಂಡ ಜಯ ಗಳಿಸುತ್ತಾರೆ . ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಕಾಳಗದಲ್ಲಿ 5000ಕ್ಕೂ ಹೆಚ್ಚು ಪೇಳ್ವೆ ಸೈನಿಕರು ಯುದ್ಧ ಭೂಮಿಯಲ್ಲಿ ಸಾವನ್ನಪ್ಪಿದರೆ ಕೇವಲ 22 ಜನ ಅಸ ಶ್ಯಯೋಧರು ವೀರಮರಣವನ್ನಪ್ಪಿದರು . ( ಈ ಯುದ್ಧದಲ್ಲಿ ಒಬ್ಬೊಬ್ಬ ಅಸ್ಪಶ್ಯಯೋಧ ಸರಾಸರಿ ಕನಿಷ್ಠ 100ಜನ ಪೇಳ್ವೆ ಸೈನಿಕರನ್ನು ಕೊಂದುಹಾಕಿರುತ್ತಾನೆ . ಈ ಯುದ್ಧದಲ್ಲಿ ಅಸ್ಪಶ್ಯಯೋಧರ ಪಡೆಯ ನಾಯಕನಾಗಿದ್ದ ಸಿದ್ದನಾಕ ‘ ನು ಸಹ ವೀರಮರಣವನ್ನಪ್ಪುತ್ತಾನೆ . ಅಂದು ರಾತ್ರಿ 10 ಗಂಟೆಗೆ ಸರಿಯಾಗಿ ಬ್ರಿಟೀಷರು ಯುದ್ಧ ನಡೆದ ಆ ಸ್ಥಳದಲ್ಲಿ ( ಪೇಶ್ವಗಳ ಸಾಮ್ರಾಜ್ಯದಲ್ಲಿ ಬ್ರಿಟೀಷ್ ಬಾವುಟವನ್ನು ಹಾರಿಸುತ್ತಾರೆ . ವಿಜಯದ ಬಳಿಕ ಕ್ಯಾಪ್ಟನ್ ಸ್ಟಂಡನ್ ಗೆ ರೀತಿ ಹೇಳಿದನು . ನಿಮ್ಮ ಕೆಚ್ಚೆದೆಯ ಹೋರಾಟವು ನಾವು ಇಂಡಿಯಾದಲ್ಲಿ ಉಳಿಯಲು ಅಧಿಕಾರವನ್ನು ವಿಸ್ತರಿಸಲು ತುಂಬಾ ಸಹಾಯಕವಾಗಿದೆ ಬ್ರಿಟಿಷ್ ಸತ್ಕಾರವು ನಿಮಗೆ ಎಂದೂ ಮರೆಯಲಾಗದ ಕಾಣಿಕೆ ಬಹುಮಾನವನ್ನು ಉಡುಗೊರೆಯಾಗಿ ಮತ್ತು ಮಡದಿ ಮಹಾಯೋಧರ ವಿಜಯ ಸ್ತಂಭವನ್ನು ಸ್ಥಾಪಿಸುವುದರ ಮೂಲಕ ಗೌರವವನ್ನು ಸಲ್ಲಿಸುತ್ತದೆ . ಹಾಗೆಯೇ ನಿಮಗೆ ನಮ್ಮ ಬ್ರಿಟಿಷ್ ಸೈನ್ಯದಲ್ಲಿ ವಿಶೇಷ ಸ್ಥಾನವನ್ನು ಕಲ್ಪಿಸಿ ನಿಮ್ಮ ಕುಟುಂಬದವರಿಗೆ ಸಕಲ ಸೌಲಭ್ಯವನ್ನು ಒದಗಿಸುವ ಏರ್ಪಾಡು ಮಾಡುತ್ತದೆ . ( ಮಹಾರ್ ಸೈನಿಕರು ಸಂತೋಷದಿಂದ ‘ ಬ್ರಿಟೀಷ್ ಸತ್ಕಾರಕ್ಕೆ ಜಯವಾಗಲಿ ಮಹಾರ್ ಸೈನ್ಯ ಚಿರಾಯು ” ಎಂದು ಘೋಷಣೆ ಕೂಗಿದರು . ) ರಣರಂಗದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಪೇಶ್ವ ಸೈನಿಕರ ಜೊತೆ ವೀರಾವೇಶದಿಂದ ಹೋರಾಡಿ ಜಯ ತಂದುಕೊಟ್ಟು ಹುತಾತ್ಮರಾದ 22 ಅಸ್ಪಶ್ಯಯೋಧರ ನೆನಪಿಗಾಗಿ ಬ್ರಿಟೀಷರು 1921ರ ಮಾರ್ಚ್ 21ರಂದು ಯುದ್ಧ ನಡೆದ ಸ್ಥಳದಲ್ಲಿ ( ಕೋರೆಗಾಂವ್ನಲ್ಲಿ ) 65ಅಡಿ ಎತ್ತರದ ಭವ್ಯ ‘ ವಿಜಯ ಸ್ತಂಭ ‘ ವನ್ನು ನಿರ್ಮಿಸಿ , ಆ ಸ್ಥಂಬದ ಮೇಲೆ 22 ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಿಸಿದರು . ಆ ಭವ್ಯ ವಿಜಯ ಸಂಬಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಬ್ರಿಟೀಷರು 22 ಸುತ್ತು ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಹುತಾತ್ಮರಿಗೆ ರಾಜ ಮರ್ಯಾದೆಯ ಶ್ರದ್ದಾಂಜಲಿ ಸಲ್ಲಿಸಿದ್ದರು . ಈ ವಿಜಯ ಸಂಬದ ಮೇಲೆ ಬ್ರಿಟಿಷರು “ One of the Proudest truimphs of the British Army in the East ” ( ಬ್ರಿಟೀಷ್ ಯೋಧರಿಗೆ ಭಾರತದ ಪೂರ್ವಭಾಗದಲ್ಲಿ ಸಿಕ್ಕಿದ ಹೆಮ್ಮೆಯ ವಿಜಯವಾಗಿದೆ ) ಎಂದೂ ಸಹ ಕೆತ್ತಿಸಿದರು . ಈ ವಿಜಯದ ನಂತರ ಬ್ರಿಟೀಷ್ ಬೋರ್ಡ್ ಆಫ್ ಕಂಟ್ರೋಲ್ನ ಅಧ್ಯಕ್ಷ ಜಾರ್ಜ್ ಕ್ಯಾನಿಂಗ್
ಈ ವಿಜಯದ ಬಗ್ಗೆ ಅಚ್ಚರಿ ವ್ಯಕ್ತ ಪಡಿಸುತ್ತಾ “ ಸಣ್ಣ ಸಂಖ್ಯೆಯ ಸೈನ್ಯವು ಒಂದು ಬಲಾಢ ಸಂಖ್ಯೆಯ ಸೈನ್ಯವನ್ನು ಮಣ್ಣು ಮುಕ್ಕಿಸಿದ ಉದಾಹರಣೆ ಚಿಕ್ಕ ಸಂಖ್ಯೆ ಹೊಂದಿರುವ ಎಲ್ಲಾ ಸೈನಿಕ ಬೆಟಾಲಿಯನ್ಗಳಿಗೂ ಅನುಕರಣೀಯವಾಗಿದೆ ” , ಎಂದು ಹೇಳಿದರು .
ಅದೇ ರೀತಿ ಜನರಲ್ ಸ್ಮಿತ್ ಕೂಡ ಈ ಗೆಲುವನ್ನು ಉತ್ಸಾಹಪೂರ್ವಕವಾಗಿ ಅಭಿನಂದಿಸಿ “ ಇಂಡಿಯಾದ ಬ್ರಿಟಿಷ್ ಸೇನಾ ಇತಿಹಾಸದಲ್ಲಿ ಕೋರೆಗಾಂವ್ ಯುದ್ಧದ ವಿಜಯವೆಂದರೆ ಶೌರ್ಯ ಮತ್ತು ಪರಾಕ್ರಮದ ಯಶೋಗಾಥೆಯೇ ಆಗಿದೆ ” ಎಂದು ಉದ್ದಾರವೆತ್ತಿದ್ದಾನೆ . ಈ ಯುದ್ದದ ಇತಿಹಾಸವನ್ನು ಬಗೆದು ಹೊರತೆಗೆದ ಡಾ . ಅಂಬೇಡ್ಕರ್ 1957ರಲ್ಲಿ ನಡೆದ ‘ ಸಿಪಾಯಿ ದಂಗೆ ‘ ಗಿಂತ ಸುಮಾರು 40 ವರ್ಷಗಳ ಹಿಂದೆಯೇ ನಡೆದ ಕೋರೆಗಾಂವ್ ದಂಗೆ ‘ ಯ ಬಗ್ಗೆ ಭಾರತದ ಮನುವಾದಿ ಲೇಖಕರು ಬೇಕೆಂತಲೇ ಬೆಳಕು ಚೆಲ್ಲಿರಲಿಲ್ಲ . ಈ ಯುದ್ಧದ ಇತಿಹಾಸವನ್ನು ಹೂತುಹಾಕಿದ್ದರು . ಹುತಾತ್ಮ ಯೋಧರ ನೆನಪಿಗಾಗಿ ಕೋರೆಗಾಂವ್ನಲ್ಲಿ ಆಲೀಷರು ನಿರ್ಮಿಸಿದ್ದ ‘ ವಿಜಯ ಸ್ಥಂಬ ‘ ವು ಯಾರ ಕಣ್ಣಿಗೂ ಬೀಳದ ರೀತಿಯಲ್ಲಿ ಆ ಸ್ಟಂಬದ ಸುತ್ತ ‘ ಗಳು ಬೆಳೆದುಕೊಂಡು ಅನಾಥವಾಗಿತ್ತು . ಡಾ . ಅಂಬೇಡ್ಕರ್ರವರು 1922ರಲ್ಲಿ ಬ್ರಿಟನ್ನಲ್ಲಿ
‘ ಬಾರ್ – ಅತ್ – ಲಾ ‘ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಭಾರತದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಬಗ್ಗೆ ಬ್ರಿಟಿಷ್ ಮ್ಯೂಸಿಯಂ ಲೈಬ್ರರಿಯಲ್ಲಿ ಇಟ್ಟಿದ್ದ ದಾಖಲೆಗಳನ್ನು ಅಧ್ಯಯನ ನಡೆಸುತ್ತಿದ್ದ ಸಂದರ್ಭದಲ್ಲಿ 1818ರಂದು ನಡೆದ ಕೋರೆಗಾಂವ್ ಯುದ್ದದ ಬಗ್ಗೆ ಪ್ರಥಮವಾಗಿ ಮಾಹಿತಿ ಸಿಕ್ಕಿತು . ಈ ಮಾಹಿತಿಯ ಆಧಾರದ ಮೇಲೆ ಕೋರೆಗಾಂವ್ ಯುದ್ದದ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ನಡೆಸಲು ಪ್ರಾರಂಭಿಸಿದರು . ಕೊನೆಗೆ ಈ ಯುದ್ಧದ ಬಗ್ಗೆ ಸಂಪೂರ್ಣ ಮಾಹಿತಿಯನು ಕಲೆ ಹಾಕಿದರು , ನಂತರ ಮಹಾರಾಷ್ಟ್ರದ ಪೂನಾ ನಗರದಿಂದ 15 ಕಿ . ಮೀ . ದೂರದಲ್ಲಿರುವ ಕೋರೆಗಾಂವ್ಗೆ ( ಭೀಮಾನದಿ ತೀರದಲ್ಲಿದೆ ) ತೆರಳಿ ‘ ವಿಜಯಸ್ಥಂಬ ‘ ವನ್ನು ಪತ್ತೆ ಹಚ್ಚಿ ಆ ಸ್ಥಳವನ್ನು ಸ್ವಚ್ಛಗೊಳಿಸಿದರು . ಕೊನೆಗೆ ಯುದ್ಧ ನಡೆದು 109 ವರ್ಷಗಳ ನಂತರ ಅಂದರೆ 1927ರ ಜನವರಿ 1ನೇ ತಾರೀಖಿನಂದು ಡಾ . ಅಂಬೇಡ್ಕರ್ರವರು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಪ್ರಥಮ ಬಾರಿಗೆ ‘ ವಿಜಯ ಸ್ಟಂಬ ‘ ಕ್ಕೆ ದೀರ್ಘದಂಡ ನಮಸ್ಕಾರ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು . ಡಾ . ಅಂಬೇಡ್ಕರ್ರವರು ಪ್ರಥಮ ಬಾರಿಗೆ ( 1927ರ ಜನವರಿ 1 ) ಕೋರೆಗಾಂವ್ನಲ್ಲಿ ‘ ವಿಜಯ ಸ್ಥಂಬ ‘ ಕ್ಕೆ ಗೌರವ ವಂದನೆ ಸಲ್ಲಿಸಿದ ನಂತರ ನಡೆದ ಸಭೆಯಲ್ಲಿ ಮಾತನ್ನಾಡುತ್ತಾ ಈ ರೀತಿ ಹೇಳಿದರು . ಅಂದು ಬ್ರಿಟಿಷರ ಪರವಾಗಿ ಅಸ್ಪಶ್ಯಯೋಧರು ಯುದ್ಧ ಮಾಡಿದ್ದು ಅಭಿಮಾನ ಪಡುವ ಸಂಗತಿಯಲ್ಲದಿದ್ದರೂ , ಅಸ್ಪಶ್ಯಯೋಧರು ಬ್ರಿಟಿಷರ ಪರ ಯಾಕೆ ಹೋಗಬೇಕಾಯಿತು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುವುದು ಸಹಜವೇ ಆಗಿದೆ . ಅಸ್ಪಶ್ಯರು ಮತ್ತೇನು ಮಾಡಲು ಸಾಧ್ಯವಿತ್ತು ? ಹಿಂದೂಗಳ ದಬ್ಬಾಳಿಕೆಯನ್ನು ಸುಮ್ಮನೆ ಸಹಿಸಿಕೊಂಡು ಜೀವನ ನಡೆಸಬೇಕಾಗಿತ್ತೆ ? ಹಿಂದೂಗಳು ಅವರನ್ನು ಕೀಳು ಎಂದು ಪರಿಗಣಿಸಿ ನಾಯಿ – ನರಿಗಳಿಗಿಂತಲೂ ಕೀಳಾಗಿ ಕಂಡಾಗ , ಇನ್ನಿಲ್ಲದಂತೆ ದಬ್ಬಾಳಿಕೆ ನಡೆಸಿದಾಗ , ಅಪಮಾನಿಸಿದಾಗ ಎಲ್ಲವನ್ನೂ ಸಹಿಸಿಕೊಂಡು ಎಷ್ಟು ದಿನ ಬದುಕಬೇಕಾಗಿತ್ತು ? ಸ್ವಾಭಿಮಾನದ ನೆಲೆಯಲ್ಲಿ ಮತ್ತು ಹೊಟ್ಟೆಗೆ ಅನ್ನ ದೊರಕಿಸಿಕೊಳ್ಳಲು ಅವರು ಅನಿವಾರ್ಯವಾಗಿ ಬ್ರಿಟೀಷರ ಪರವಾಗಿ ಯುದ್ದ ಮಾಡಿದರೆಂಬುದನ್ನು ಪ್ರತಿಯೊಬ್ಬರೂ ಲಕ್ಷ್ಮದಲ್ಲಿಡಬೇಕು . – ಗತಿಸಿದ ಕಾಲವೊಂದರಲ್ಲಿ ನಡೆದ ಈ ಘಟನೆಯಲ್ಲಿ ಅಸ್ಪಶ್ಯರು ಅನುಭವಿಸಿದ ಸೋಲು ಗೆಲುವಿನ ನಡುವೆ ಇಂಡಿಯಾದ ಸಾಮಾಜಿಕ ಬದುಕಿನ ಸತ್ಯಗಳನ್ನು ನೀವೇ ನೋಡಿದಿರ . ಇಂತಹ ಅದೆಷ್ಟೋ ಘಟನೆಗಳು ನಡೆದು ಈ ದೇಶದಲ್ಲಿ ಅಸ್ಪಶ್ಯರ ಕೌಶಲ್ಯ ಸಾಹಸ , ಮಾನವೀಯ ಮೌಲ್ಯಗಳು ಮಣ್ಣಲ್ಲಿ ಮುಚ್ಚಿ ಹೋಗಿವೆ.
ಅವುಗಳೆಲ್ಲವನೂ ನಾನು ಬಗೆದು ಹೊರತೆಗೆದೇ ತೀರುತ್ತೇನೆ . ( ಈ ಯುದ್ದವನ್ನಾಧರಿಸಿ ಶ್ರೀ ಅರುಣ್ ಶೌರಿಯವರು ತಮ್ಮ ‘ ವರ್ಷಿಪಿಂಗ್ ಫಾಲ್ಸ್ ಗಾಡ್ ಎಂಬ ಪುಸ್ತಕದಲ್ಲಿ “ ಅಸ್ಪ ಶ್ಯರು ಬ್ರಿಟೀಷರ ಪರವಾಗಿ ಹೋರಾಡಿ ಬ್ರಿಟಿಷರಿಗೆ ಗೆಲುವನ್ನು ಕೊಟ್ಟಿದ್ದಾರೆ , ಆ ಮೂಲಕ ಅವರು ಭಾರತದ ವಿರುದ್ದವೇ ಹೋರಾಡಿದಂತಾಗಿದೆ ” ಎಂದು ಬರೆದಿದ್ದಾರೆ.ಒಂದೆಡೆ ಅಸ್ಪ್ರಶ್ಯರು ಬ್ರಿಟೀಷರ ಪರ ಹೋರಾಡಲು ಕಾರಣಗಳೇನು ಎಂದು ಗೊತ್ತಿದ್ದರೂ ಸಹ ಆ ಪುಸ್ತಕದಲ್ಲಿ ಬರೆದಿಲ್ಲ . ) ಆ ಸಭೆಯಲ್ಲಿ ಡಾ . ಅಂಬೇಡ್ಕರ್ರವರು ಮುಂದುವರಿದು ಮಾತನಾಡುತ್ತಾ ಈ ರೀತಿ ಹೇಳಿದರು . “ ಯಾವ ಅಸ್ಪಶ್ಯ ಯೋಧರು ಹಲವಾರು ಯುದ್ಧಗಳಲ್ಲಿ ತಮ್ಮಗಳ ಪರಾಕ್ರಮದಿಂದ ಬ್ರಿಟೀಷರಿಗೆ ವಿಜಯ ತಂದುಕೊಟ್ಟರೋ , ಇಂದು ಅಂತಹ ವೀರತನವನ್ನೇ ಹೊಂದಿರುವ ಅಸ್ಪಶ್ಯ ಯುವಕರನ್ನು ಸೇವೆಗೆ ಸೇರಿಸಿಕೊಳ್ಳಲು ಬ್ರಿಟೀಷ್ ಸರ್ಕಾರ ನಿರ್ಬಂಧ ಹೇರಿದ್ದು ನಂಬಿಕೆ ದ್ರೋಹವೇ ಆಗಿದೆ . ಅಸ್ಪಶ್ಯ ಯುವಕರು ಸೇನೆ ಸೇರುವುದನ್ನು ನಿಷೇಧಿಸಿರುವ ಬ್ರಿಟೀಷ್ ಸರ್ಕಾರ ಅದನ್ನು ತಕ್ಷಣವೇ ಹಿಂಪಡೆದು ಅಸ್ಪಶ್ಯ ಯುವಕರು ಸೇವೆ ಸೇರಲು ಮುಕ್ತ ಅವಕಾಶ ಕಲ್ಪಿಸಿಕೊಡಬೇಕು . ಒಂದು ವೇಳೆ ಬ್ರಿಟೀಷ್ ಸರ್ಕಾರದ ವಿರುದ್ದ ಉಗ್ರ ಚಳುವಳಿಯನ್ನು ಮಾಡಬೇಕಾಗುತ್ತದೆ . ” ( 1892ರಿಂದ ಬ್ರಿಟೀಷ್ ಸರ್ಕಾರವು ಭಾರತದಲ್ಲಿ ಅಸ್ಪಶ್ಯರು ಸೇನೆ ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದರು .
ಡಾ . ಅಂಬೇಡ್ಕರ್ರವರ ಸತತ ಹೋರಾಟದ ಫಲವಾಗಿ 1941ರಲ್ಲಿ ಈ ನಿಷೇಧವನ್ನು ತೆಗೆದುಹಾಕಲಾಯಿತು . ) 1927ರಿಂದ ಪ್ರಾರಂಭಿಸಿ ತಾವು ಬದುಕಿರುವವರೆಗೂ ಬಾಬಾ ಸಾಹೇಬ್ ಅಂಬೇಡ್ಕರ್ರವರು ಪ್ರತಿವರ್ಷ ಜನವರಿ 1ನೇ ತಾರೀಖಿನಂದು ತಮ್ಮ ಕುಟುಂಬ ಹಾಗೂ ತನ್ನ ಸಾವಿರಾರು ಅನುಯಾಯಿಗಳೊಂದಿಗೆ ಆ ಸ್ಥಳಕ್ಕೆ ಭೇಟಿ ನೀಡಿ ‘ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಿದ್ದರು . ಈಗ ಪ್ರತಿವರ್ಷ ಜನವರಿ 1ನೇ ತಾರೀಖಿನಂದು ಭಾರತದ ಮೂಲೆ ಮೂಲೆಗಳಿಂದ ನಿವೃತ್ತಯೋಧರುಗಳು ಸೇರಿದಂತೆ ಲಕ್ಷಾಂತರ ಜನರು ಕೋರೆಗಾಂವ್ಗೆ ಭೇಟಿ ನೀಡಿ ‘ ವಿಜಯ ಸ್ಟಂಬ ‘ ಕ್ಕೆ ನಮಿಸಿ ಹುತಾತ್ಮ ಅಸ್ಪಶ್ಯ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾರೆ . ವರ್ಷದಿಂದ ವರ್ಷಕ್ಕೆ ಅಲ್ಲಿಗೆ ತೆರಳುವ ಜನರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜನವರಿ 1ನೇ ತಾರೀಖಿನಂದು ನಡೆಯುವ ಸ್ಥತಿ ದಿನ ಕಾರ್ಯಕ್ರಮವು ಸುವ್ಯವಸ್ಥಿತವಾಗಿ ನಡೆಯಲೆಂದು ಅದರ ಉಸ್ತುವಾರಿಗಾಗಿ ಒಂದು ಕಾರ್ಯಕಾರಿಣಿ ಮಂಡಳಿಯನ್ನು ಸ್ಥಾಪಿಸಲಾಗಿದೆ . “ ನನ್ನ ಜನರಿಗೆ ಆಯುಧ ಹಿಡಿಯುವ ಅಧಿಕಾರ ನೀಡಿದ್ದರೆ ಈ ದೇಶ ಎಂದೂ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿರಲಿಲ್ಲ ಹಾಗೂ ನನ್ನ ಸಾಮಾಜಿಕ ತತ್ವವು ಮೂರು ಪದಗಳಲ್ಲಿ ಅಡಕವಾಗಿದೆ . ಅವುಗಳೆಂದರೆ ; ಸ್ವಾತಂತ್ರ್ಯ , ಸಮಾನತೆ ಮತ್ತು ಭ್ರಾತೃತ್ವ ಎಂದಿದ್ದಾರೆ ಡಾ . ಬಿ . ಆರ್ . ಅಂಬೇಡ್ಕರ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂಕಣ
ನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ
~ಡಾ.ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಭಾರತದ ವೈದ್ಯಕೀಯ ಶಿಕ್ಷಣ ರಂಗದಲ್ಲಿ ಏಕರೂಪತೆ ಮತ್ತು ಪಾರದರ್ಶಕತೆಯನ್ನು ತರುವ ಆಶಯದೊಂದಿಗೆ ಜಾರಿಗೆ ಬಂದರೂ, ಪ್ರಾಯೋಗಿಕವಾಗಿ ಅದು ದೇಶದ ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ನೆಲೆಗಳಲ್ಲಿ ತೀವ್ರ ಸ್ವರೂಪದ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಕೇವಲ ಒಂದು ತಾಂತ್ರಿಕ ಪ್ರವೇಶ ಪರೀಕ್ಷೆಯಾಗಿ ಕಾಣುವ ಈ ವ್ಯವಸ್ಥೆಯು, ವಾಸ್ತವದಲ್ಲಿ ಭಾರತದ ಬಹುಸಂಸ್ಕೃತಿ ಮತ್ತು ಒಕ್ಕೂಟ ತತ್ತ್ವದ ಆಳವಾದ ರಚನೆಗಳ ಮೇಲೆ ಪ್ರಹಾರ ನಡೆಸುತ್ತಿದೆ. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ತರಲಾದ ಈ ಕೇಂದ್ರೀಕೃತ ಮಾದರಿಯು ಹೇಗೆ ಸಾಮಾನ್ಯ ವಿದ್ಯಾರ್ಥಿ ಸಮೂಹವನ್ನು ಶೈಕ್ಷಣಿಕ ಪ್ರಕ್ರಿಯೆಯಿಂದ ಹೊರದೂಡುತ್ತಿದೆ, ಪ್ರಾದೇಶಿಕ ಸ್ವಾಯತ್ತತೆಯನ್ನು ಧ್ವಂಸಗೊಳಿಸುತ್ತಿದೆ ಮತ್ತು ಸಾಂಪ್ರದಾಯಿಕ ಶ್ರೇಣೀಕೃತ ಅಸಮಾನತೆಗಳನ್ನು ಆಧುನಿಕ ರೂಪದಲ್ಲಿ ಮರುಸ್ಥಾಪಿಸುತ್ತಿದೆ ಎಂಬುದನ್ನು ಸಾಮಾಜಿಕ ನ್ಯಾಯ ಮತ್ತು ವಿಮರ್ಶಾತ್ಮಕ ಸಿದ್ಧಾಂತಗಳ ಹಿನ್ನೆಲೆಯಲ್ಲಿ ವಿವರವಾಗಿ ವಿಶ್ಲೇಷಿಸಬೇಕಾಗಿದೆ.
1. ತಾರತಮ್ಯದ ಆರ್ಥಿಕ ಮತ್ತು ಪಠ್ಯಕ್ರಮದ ನೆಲೆಗಳು (Socio-Economic and Curricular Discrimination)
ನೀಟ್ ಪರೀಕ್ಷೆಯು “ಎಲ್ಲರಿಗೂ ಸಮಾನ ಅವಕಾಶ” ಎಂಬ ಭ್ರಮೆಯನ್ನು ಸೃಷ್ಟಿಸುತ್ತದೆಯಾದರೂ, ಅದರ ಒಳಗಣ್ಣು ಕೇವಲ ಒಂದು ನಿರ್ದಿಷ್ಟ ವರ್ಗದ ಪರವಾಗಿ ಕೆಲಸ ಮಾಡುತ್ತಿದೆ. ಈ ಪರೀಕ್ಷಾ ಪದ್ಧತಿಯು ಭಾರತೀಯ ಸಮಾಜದಲ್ಲಿ ಹೊಸದೊಂದು ಆರ್ಥಿಕ ತಾರತಮ್ಯವನ್ನು ಕಾನೂನುಬದ್ಧಗೊಳಿಸಿದೆ. ಇಂದು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕೇವಲ ವಿದ್ಯಾರ್ಥಿಯ ಪ್ರತಿಭೆಯನ್ನಷ್ಟೇ ಅವಲಂಬಿಸಿಲ್ಲ, ಬದಲಿಗೆ ಆ ಪೋಷಕರ ಆರ್ಥಿಕ ಸೌಲಭ್ಯವನ್ನು ಅವಲಂಬಿಸಿದೆ. ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡುವ ಕಾರ್ಪೊರೇಟ್ ಕೋಚಿಂಗ್ ಉದ್ಯಮದ (Coaching Industry) ಹಬ್ಗಳಾದ ಹಲವಾರು ಪ್ರತಿಷ್ಠಿತ ಕೇಂದ್ರಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗದ ಬಡ ಮತ್ತು ಕೆಳಮಧ್ಯಮ ವರ್ಗದ ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧೆಯ ಆರಂಭಿಕ ಹಂತದಲ್ಲೇ ಸೋಲಿಸಲ್ಪಡುತ್ತಿದ್ದಾರೆ. ಇದರೊಂದಿಗೆ, ಪಠ್ಯಕ್ರಮದ ತಾರತಮ್ಯವು ಈ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ. ದೇಶದ ವೈವಿಧ್ಯಮಯ ರಾಜ್ಯಗಳು ತಮ್ಮದೇ ಆದ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಅಗತ್ಯಗಳಿಗನುಗುಣವಾಗಿ ರೂಪಿಸಿಕೊಂಡ ರಾಜ್ಯ ಪಠ್ಯಕ್ರಮಗಳನ್ನು (State Syllabus) ಸಂಪೂರ್ಣವಾಗಿ ನಿರ್ಲಕ್ಷಿಸಿ, ಕೇವಲ ಸಿಬಿಎಸ್ಇ (NCERT) ಪಠ್ಯಕ್ರಮವನ್ನು ಮಾತ್ರ ಮಾನದಂಡವಾಗಿರಿಸಿಕೊಳ್ಳಲಾಗಿದೆ. ಇದು ಪ್ರಾದೇಶಿಕ ಭಾಷಾ ಮಾಧ್ಯಮಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದಿದ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದ ಕನಸಿನಿಂದಲೇ ವಂಚಿಸುವ ವ್ಯವಸ್ಥಿತ ತಾರತಮ್ಯವಾಗಿದೆ.
2. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆಯ ಕುಸಿತ
ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಮತ್ತು ಭ್ರಷ್ಟಾಚಾರ ಮುಕ್ತ ಎಂಬ ವಾದವನ್ನು ನೀಟ್ ಪರೀಕ್ಷೆಯ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆಗಳು (Paper Leaks) ಮತ್ತು ಅಕ್ರಮಗಳು ಸಂಪೂರ್ಣವಾಗಿ ಬೆತ್ತಲೆಗೊಳಿಸಿವೆ. ಇಡೀ ದೇಶಕ್ಕೆ ಒಂದೇ ಪರೀಕ್ಷೆ ಎಂಬ ಹಠದ ಪರಿಣಾಮವಾಗಿ, ಪ್ರಶ್ನೆ ಪತ್ರಿಕೆಗಳು ವ್ಯವಸ್ಥಿತ ಜಾಲಗಳ ಮೂಲಕ ಕೋಟ್ಯಂತರ ರೂಪಾಯಿಗಳಿಗೆ ಮಾರಾಟವಾಗುತ್ತಿರುವುದು ಪರೀಕ್ಷಾ ಮಂಡಳಿಗಳ ಸಾಂಸ್ಥಿಕ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸಿದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯವು, ಕಪ್ಪುಹಣ ಮತ್ತು ರಾಜಕೀಯ ಪ್ರಭಾವ ಬಳಸಿ ಪ್ರಶ್ನೆ ಪತ್ರಿಕೆಯನ್ನು ಮೊದಲೇ ಖರೀದಿಸುವ ಪ್ರಭಾವಿ ತರಬೇತಿ ಕೇಂದ್ರಗಳು ಹಾಗೂ ದಲ್ಲಾಳಿಗಳ ಪಾಲಾಗುತ್ತಿದೆ. ಇಂತಹ ವ್ಯವಸ್ಥಿತ ಹಗರಣಗಳು ಕೇವಲ ಅರ್ಹ ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯವಷ್ಟೇ ಅಲ್ಲ; ಇಡೀ ಶೈಕ್ಷಣಿಕ ಆಡಳಿತದ ಮೇಲಿರುವ ಸಾರ್ವಜನಿಕ ವಿಶ್ವಾಸಾರ್ಹತೆಯನ್ನೇ ಧ್ವಂಸಗೊಳಿಸಿವೆ. ಪಾರದರ್ಶಕತೆಯ ಹೆಸರಿನಲ್ಲಿ ತರಲಾದ ವ್ಯವಸ್ಥೆಯು ಇಂದು ಭ್ರಷ್ಟಾಚಾರದ ಅತಿ ದೊಡ್ಡ ಆಡುಂಬೊಲವಾಗಿ ಮಾರ್ಪಟ್ಟಿರುವುದು ಈ ಪರೀಕ್ಷಾ ಮಾದರಿಯ ನೈತಿಕ ಪತನಕ್ಕೆ ಸಾಕ್ಷಿಯಾಗಿದೆ.
3. ವ್ಯವಸ್ಥೆ ಸೃಷ್ಟಿಸಿದ ಆತ್ಮಹತ್ಯೆಗಳು ಮತ್ತು ಮಾನಸಿಕ ಹಿಂಸೆ (Institutional Tragedies and Mental Trauma)
ನೀಟ್ ಹೇರಿರುವ ಕಠಿಣ ಪರೀಕ್ಷಾ ಸ್ವರೂಪ ಮತ್ತು ಪದೇಪದೇ ಉಂಟಾಗುವ ಸಾಂಸ್ಥಿಕ ಲೋಪಗಳು ದೇಶದ ಯುವ ಸಮುದಾಯದ ಮೇಲೆ ಅಭೂತಪೂರ್ವ ಮಾನಸಿಕ ಒತ್ತಡವನ್ನು ಸೃಷ್ಟಿಸಿವೆ. ಇವು ಕೇವಲ ವೈಯಕ್ತಿಕ ವೈಫಲ್ಯದ ಸಾವುಗಳಲ್ಲ, ಬದಲಿಗೆ ಇವುಗಳನ್ನು “ಸಾಂಸ್ಥಿಕ ಕೊಲೆಗಳು” (Institutional Murders) ಎಂದು ಕರೆಯಬೇಕಾಗುತ್ತದೆ. ವಿದ್ಯಾರ್ಥಿಯೊಬ್ಬನ ಸುದೀರ್ಘ ವರ್ಷಗಳ ಶ್ರಮ, ಅರ್ಹತೆ ಮತ್ತು ಇಡೀ ಬದುಕಿನ ಸಾಮರ್ಥ್ಯವನ್ನು ಕೇವಲ ಮೂರು ಗಂಟೆಗಳ ಒಂದು ಅಮಾನವೀಯ ವಸ್ತುನಿಷ್ಠ (MCQ) ಪರೀಕ್ಷೆಯಲ್ಲಿ ನಿರ್ಧರಿಸುವ ಕ್ರೂರ ನಡೆ ಇದು. ಕೃಷಿ ಅಥವಾ ಶ್ರಮಿಕ ಹಿನ್ನೆಲೆಯಿಂದ ಬಂದ ಪೋಷಕರು ತಮ್ಮ ಇಡೀ ಜೀವಮಾನದ ದುಡಿಮೆಯನ್ನು ಸಾಲದ ರೂಪದಲ್ಲಿ ಸುರಿದು ಮಕ್ಕಳನ್ನು ಓದಿಸುತ್ತಿರುವಾಗ, ಆ ಸಾಲದ ಹೊರೆ, ಪರೀಕ್ಷಾ ಅಕ್ರಮಗಳ ಆತಂಕ ಮತ್ತು ಸಾಮಾಜಿಕ ನಿರೀಕ್ಷೆಗಳು ವಿದ್ಯಾರ್ಥಿಗಳ ಮೇಲೆ ಅತಿಯಾದ ಮಾನಸಿಕ ಹಿಂಸೆಯಾಗಿ ರೂಪಾಂತರಗೊಳ್ಳುತ್ತವೆ. ತಮಿಳುನಾಡಿನ ಅನಿತ್ಯಾಳಿಂದ ಹಿಡಿದು ದೇಶದ ನೂರಾರು ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿ ಹಾಗೂ ಕೋಟಾದಲ್ಲಿ ತರಬೇತಿ ಪಡೆಯುತ್ತಿದ್ದ ಅಭ್ಯರ್ಥಿಗಳ ಸಾಲು ಸಾಲು ಆತ್ಮಹತ್ಯೆಗಳು ಈ ಕಠಿಣ ಶೈಕ್ಷಣಿಕ ವ್ಯವಸ್ಥೆಯ ಕ್ರೂರತೆಗೆ ಸಾಕ್ಷಿಯಾಗಿವೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದನ್ನು ಇಡೀ ಬದುಕಿನ ಸೋಲು ಎಂಬಂತೆ ಬಿಂಬಿಸುವ ಇಂತಹ ಮಾರುಕಟ್ಟೆ ಕೇಂದ್ರಿತ ವ್ಯವಸ್ಥೆಯು, ಶಿಕ್ಷಣದ ಮೂಲ ಆಶಯವಾದ ವ್ಯಕ್ತಿತ್ವ ವಿಕಸನವನ್ನು ಕೊಲೆ ಮಾಡಿ ಯುವ ಮನಸ್ಸುಗಳಲ್ಲಿ ಕೀಳರಿಮೆ ಹಾಗೂ ತೀವ್ರ ಖಿನ್ನತೆಯನ್ನು ಬಿತ್ತುತ್ತಿದೆ.
4. ಪ್ರಾದೇಶಿಕ ಪ್ರಾಬಲ್ಯ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ಪ್ರಹಾರ
ಭಾರತೀಯ ಸಂವಿಧಾನದ ಆಶಯದಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಜಂಟಿ ಪಟ್ಟಿಯಲ್ಲಿದ್ದು (Concurrent List), ಪ್ರಾದೇಶಿಕ ಅಗತ್ಯಗಳಿಗೆ ತಕ್ಕಂತೆ ನೀತಿಗಳನ್ನು ರೂಪಿಸಿಕೊಳ್ಳುವ ಹಕ್ಕು ರಾಜ್ಯ ಸರ್ಕಾರಗಳಿಗಿದೆ. ಆದರೆ ನೀಟ್ ಪದ್ಧತಿಯು ರಾಜ್ಯಗಳ ಈ ಸಾಂವಿಧಾನಿಕ ಹಕ್ಕುಗಳನ್ನು ಸಂಪೂರ್ಣವಾಗಿ ಹರಣ ಮಾಡಿದೆ. ರಾಜ್ಯ ಸರ್ಕಾರಗಳು ತಮ್ಮ ತೆರಿಗೆದಾರರ ಹಣದಿಂದ, ತಮ್ಮದೇ ಭೂಮಿಯಲ್ಲಿ ನಿರ್ಮಿಸಿದ ವೈದ್ಯಕೀಯ ಕಾಲೇಜುಗಳ ಸೀಟುಗಳ ಮೇಲಿನ ನಿಯಂತ್ರಣವನ್ನು ಕೇಂದ್ರದ ಏಜೆನ್ಸಿಯೊಂದು ಕಸಿದುಕೊಂಡಿರುವುದು ಒಕ್ಕೂಟ ವ್ಯವಸ್ಥೆಯ (Federalism) ಮೇಲಿನ ಗಂಭೀರ ಪ್ರಹಾರವಾಗಿದೆ. ಇದರ ಪರಿಣಾಮವಾಗಿ, ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳ ಅರಿವಿಲ್ಲದ ಭಿನ್ನ ಪ್ರಾಂತ್ಯಗಳ ವಿದ್ಯಾರ್ಥಿಗಳು ದಕ್ಷಿಣದ ಅಥವಾ ನಿರ್ದಿಷ್ಟ ರಾಜ್ಯಗಳ ಗ್ರಾಮೀಣ ಕೋಟಾಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ಥಳೀಯ ರೋಗಿಗಳೊಂದಿಗೆ ಭಾಷಾ ಸಂವಹನ ನಡೆಸಲಾಗದ ಇಂತಹ ವೈದ್ಯರಿಂದಾಗಿ ಗ್ರಾಮೀಣ ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯು (Public Healthcare) ಸಂಪೂರ್ಣವಾಗಿ ದುರ್ಬಲಗೊಳ್ಳುತ್ತಿದೆ. ಸ್ಥಳೀಯ ಸಮುದಾಯಗಳ ಅಗತ್ಯಗಳಿಗೆ ಸ್ಪಂದಿಸುವ ಮತ್ತು ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರುವ ವೈದ್ಯರ ಲಭ್ಯತೆಯನ್ನು ಕಡಿತಗೊಳಿಸುವ ಮೂಲಕ ಈ ವ್ಯವಸ್ಥೆಯು ಪ್ರಾದೇಶಿಕ ಜನಸಂಖ್ಯಾಶಾಸ್ತ್ರ ಮತ್ತು ಆರೋಗ್ಯ ಸಮತೋಲನವನ್ನು ಏರುಪೇರು ಮಾಡಿದೆ.
5. ಜಾತೀಯತೆಯ ಕರಾಳತೆ ಮತ್ತು ಯಜಮಾನಿಕೆಯ ಮರುಸ್ಥಾಪನೆ (Perpetuation of Caste Hegemony)
ಸಮಕಾಲೀನ ಸನ್ನಿವೇಶದಲ್ಲಿ ನೀಟ್ ಪರೀಕ್ಷೆಯು “ಮೆರಿಟ್” (Meritocracy) ಮತ್ತು “ಪ್ರತಿಭೆ” ಎಂಬ ಅತ್ಯಂತ ಆಕರ್ಷಕ ಮುಖವಾಡವನ್ನು ಧರಿಸಿ ಬಂದಿದೆ. ಆದರೆ, ವಿಮರ್ಶಾತ್ಮಕವಾಗಿ ನೋಡಿದಾಗ ಈ ‘ಮೆರಿಟ್’ ಎನ್ನುವುದು ಕೇವಲ ವೈಯಕ್ತಿಕ ಸಾಮರ್ಥ್ಯವಲ್ಲ, ಬದಲಿಗೆ ಅದು ತಲೆಮಾರುಗಳಿಂದ ಒಂದು ನಿರ್ದಿಷ್ಟ ವರ್ಗವು ಅನುಭವಿಸಿಕೊಂಡು ಬಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಂಡವಾಳದ (Cultural Capital) ಹೊಸ ರೂಪವೇ ಹೊರತು ಬೇರೇನಲ್ಲ. ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿ, ಈಗಷ್ಟೇ ಮೊದಲ ತಲೆಮಾರಿನ ಶಿಕ್ಷಣ ಪಡೆಯುತ್ತಿರುವ ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ವಿದ್ಯಾರ್ಥಿಗಳಿಗೆ ಆಧುನಿಕ ಇಂಗ್ಲಿಷ್ ತರಬೇತಿ, ದುಬಾರಿ ಕೋಚಿಂಗ್ ಅಥವಾ ಇತ್ತೀಚಿನ ಪತ್ರಿಕೆ ಸೋರಿಕೆಯಂತಹ ಕರಾಳ ದಂಧೆಗಳ ರಹಸ್ಯ ಜಾಲಗಳಿಗೆ ಪ್ರವೇಶ ಪಡೆಯುವ ಸಾಮಾಜಿಕ ಹಿನ್ನೆಲೆ ಇರುವುದಿಲ್ಲ. ನೀಟ್ ವ್ಯವಸ್ಥೆಯು ಇಂತಹ ಐತಿಹಾಸಿಕ ಅಸಮಾನತೆಗಳನ್ನು ಸಂಪೂರ್ಣವಾಗಿ ಕಣ್ಣುಮುಚ್ಚಿ ಕುಳಿತು, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ತಾಂತ್ರಿಕವಾಗಿ ತಲೆಕೆಳಗು ಮಾಡುತ್ತಿದೆ. ಇದರ ಪರಿಣಾಮವಾಗಿ, ವೈದ್ಯಕೀಯ ಕ್ಷೇತ್ರವು ಸಮಾಜದ ಬಹುಪಾಲು ಶ್ರಮಿಕ ಮತ್ತು ತಳಸಮುದಾಯಗಳ ಕೈತಪ್ಪಿ, ಮತ್ತೆ ಕೇವಲ ಆಯ್ದ ಕೆಲವು ಉನ್ನತ ವರ್ಗಗಳ ಯಜಮಾನಿಕೆಯ (Hegemony) ತಾಣವಾಗಿ ಬದಲಾಗುತ್ತಿದೆ. ಇದು ಸಾಂಪ್ರದಾಯಿಕ ಜಾತೀಯತೆಯ ಶ್ರೇಣೀಕೃತ ಕರಾಳತೆಯನ್ನು ಅತ್ಯಂತ ಸೂಕ್ಷ್ಮ ಹಾಗೂ ಆಧುನಿಕ ಶೈಕ್ಷಣಿಕ ನಿಯಮಗಳ ಮೂಲಕ ಪುನರುತ್ಪಾದಿಸುವ ಅಪಾಯಕಾರಿ ನೆಲೆಯಾಗಿದೆ.
6. ಸಮನ್ವಯದ ದಾರಿ….
ನೀಟ್ ಸೃಷ್ಟಿಸಿರುವ ಈ ಸಾಂಸ್ಥಿಕ, ಆರ್ಥಿಕ ಮತ್ತು ಸಾಮಾಜಿಕ ಅವಾಂತರಗಳು ನಮಗೆ ಶಿಕ್ಷಣ ವ್ಯವಸ್ಥೆಯ ಮರುಚಿಂತನೆಯ ತುರ್ತು ಅಗತ್ಯವನ್ನು ನೆನಪಿಸುತ್ತವೆ. ಪ್ರಜಾಪ್ರಭುತ್ವದ ನಿಜವಾದ ಆಶಯವಿರುವುದು ಕೇವಲ ಕಾಗದದ ಮೇಲಿನ ತಾಂತ್ರಿಕ “ಏಕರೂಪತೆ”ಯಲ್ಲಲ್ಲ, ಬದಲಿಗೆ ಭಿನ್ನ ಹಿನ್ನೆಲೆಯ ಜನರನ್ನು ಒಳಗೊಳ್ಳುವ “ಸಮಾನತೆ” ಮತ್ತು “ಸಾಮಾಜಿಕ ನ್ಯಾಯ”ದಲ್ಲಿ ಮಾತ್ರ. ಕೇವಲ ಬಂಡವಾಳಶಾಹಿ ಮಾರುಕಟ್ಟೆಯ, ಕೋಚಿಂಗ್ ಮಾಫಿಯಾಗಳ ಮತ್ತು ಪ್ರಶ್ನೆ ಪತ್ರಿಕೆ ಮಾರಾಟ ಮಾಡುವ ಕರಾಳ ಜಾಲಗಳ ಹಿತಾಸಕ್ತಿಯನ್ನು ಕಾಯುವ ಇಂತಹ ಪ್ರವೇಶ ಪರೀಕ್ಷೆಗಳು ವೈದ್ಯಕೀಯ ಕ್ಷೇತ್ರವನ್ನು ಕೇವಲ ವ್ಯಾಪಾರೀಕರಣದ ಕೇಂದ್ರವನ್ನಾಗಿ ಮಾಡುತ್ತವೆಯೇ ಹೊರತು ಮಾನವೀಯತೆಯುಳ್ಳ ವೈದ್ಯರನ್ನು ಸೃಷ್ಟಿಸಲಾರವು. ಈ ಹಿನ್ನೆಲೆಯಲ್ಲಿ, ಪ್ರಾದೇಶಿಕ ಸ್ವಾಯತ್ತತೆ, ಬಹುತ್ವ ಮತ್ತು ತಳಸಮುದಾಯಗಳ ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸಲು ನೀಟ್ ಮಾದರಿಯ ಕೇಂದ್ರೀಕೃತ ಪರೀಕ್ಷೆಗಳ ತಾರತಮ್ಯದ ನೆಲೆಗಳನ್ನು ತಕ್ಷಣವೇ ಮರುಪರಿಶೀಲಿಸಬೇಕಾಗಿದೆ; ಇಲ್ಲದಿದ್ದರೆ ಇದು ದೇಶದ ಒಕ್ಕೂಟ ರಚನೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡುವುದು ಖಂಡಿತ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
~ಗೋವರ್ಧನ ನವಿಲೇಹಾಳು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಖಾಲಿಯಾದ ಈ ಕ್ಷೇತ್ರವು ಕುಟುಂಬದ ರಾಜಕೀಯ ಉತ್ತರಾಧಿಕಾರ, ಅಲ್ಪಸಂಖ್ಯಾತರ ಅಸಮಾಧಾನ ಮತ್ತು ಪಕ್ಷಾಂತರದ ಆರೋಪಗಳ ನಡುವೆ ತೀವ್ರ ಸ್ಪರ್ಧೆಯನ್ನು ಕಂಡಿತು. ಸುಮಾರು 5,708 ಮತಗಳ ಅಂತರದಿಂದ ಗೆದ್ದ ಸಮರ್ಥ್ ಅವರು ಶಾಮನೂರು ಕುಟುಂಬದ ಮೂರನೇ ಪೀಳಿಗೆಯ ಪ್ರತಿನಿಧಿಯಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಗೆಲುವು ಕಾಂಗ್ರೆಸ್ಗೆ ಸಂತೋಷದ ಸುದ್ದಿಯಾದರೂ, ಎಸ್ಡಿಪಿಐ ಪಡೆದ ಗಣನೀಯ 18,975 ಮತಗಳು ಮತ್ತು ಬಿಜೆಪಿಯ ತೀವ್ರ ಪೈಪೋಟಿ ರಾಜಕೀಯ ಸಮೀಕರಣಗಳಲ್ಲಿ ಹೊಸ ತಿರುವುಗಳನ್ನು ಸೂಚಿಸುತ್ತವೆ.
ಈ ಉಪಚುನಾವಣೆಯು ಕೇವಲ ಕ್ಷೇತ್ರೀಯ ಘಟನೆಯಾಗಿರದೆ, ಕರ್ನಾಟಕ ರಾಜಕೀಯದಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್, ಕುಟುಂಬ ರಾಜಕೀಯ ಮತ್ತು ಪ್ರತಿಪಕ್ಷದ ತಂತ್ರಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಯಿತು. ಶಾಮನೂರು ಕುಟುಂಬದ ದೀರ್ಘಕಾಲದ ಸೇವೆಯನ್ನು ಜನರು ಮೆಚ್ಚಿದ್ದರೂ, ಕಾಂಗ್ರೆಸ್ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆಯಿಂದಾಗಿ ಉಂಟಾದ ಅಸಮಾಧಾನವು ಎಸ್ಡಿಪಿಐಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ತೀವ್ರ ಪ್ರಚಾರ ನಡೆಸಿದ್ದರೂ, ಕಾಂಗ್ರೆಸ್ನ ಅಭಿವೃದ್ಧಿ ಕಾರ್ಯಗಳು ಮತ್ತು ಐದು ಗ್ಯಾರಂಟಿಗಳ ಪ್ರಭಾವವು ಗೆಲುವಿಗೆ ನೆರವಾಯಿತು. ಆದರೆ ಈ ಗೆಲುವು ಸುಲಭವಾಗಿರಲಿಲ್ಲ; ಅದು ಎಲ್ಲಾ ಪಕ್ಷಗಳಿಗೂ ಪಾಠವನ್ನು ಕಲಿಸುತ್ತದೆ.
ಸಮರ್ಥ್ ಶಾಮನೂರು ಅವರ ಮುಂದಿನ ನಡೆ
ಕಿರಿಯ ವಯಸ್ಸಿನಲ್ಲಿ (ದೇಶದ ಎರಡನೇ ಅತಿ ಕಿರಿಯ ಶಾಸಕರಾಗಿ) ಗೆದ್ದ ಸಮರ್ಥ್ ಅವರು ತಮ್ಮ ಅಜ್ಜರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯಲ್ಲಿದ್ದಾರೆ. ಮುಂದಿನ ನಡೆಯು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರೀಕರಣಗೊಳ್ಳಬೇಕು. ದಾವಣಗೆರೆಯಂತಹ ನಗರ-ಗ್ರಾಮೀಣ ಮಿಶ್ರ ಕ್ಷೇತ್ರದಲ್ಲಿ ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವುದು ಮುಖ್ಯ. ಶಾಮನೂರು ಕುಟುಂಬದ ಹೆಸರು ಅಭಿವೃದ್ಧಿಗೆ ಸಮಾನವಾಗಿದೆ; ಇದನ್ನು ಮುಂದುವರಿಸಿ, ಎಲ್ಲಾ ಸಮುದಾಯಗಳ ನಡುವೆ ಸೇತುವೆಯಾಗಬೇಕು.
ವಿಶೇಷವಾಗಿ ಅಲ್ಪಸಂಖ್ಯಾತರ ಅಸಮಾಧಾನವನ್ನು ನಿವಾರಿಸುವುದು ಅಗತ್ಯ. ಟಿಕೆಟ್ ವಿವಾದದ ನಂತರ ಉಂಟಾದ ಬಿರುಕುಗಳನ್ನು ತುಂಬುವ ಮೂಲಕ ಏಕತೆಯ ಸಂದೇಶ ನೀಡಬೇಕು. ಯುವಕರಾಗಿರುವುದರಿಂದ ಆಧುನಿಕ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪಾರದರ್ಶಕ ಆಡಳಿತದ ಮೂಲಕ ಹೊಸ ಚಿಂತನೆ ತರಬಹುದು. ರಾಜಕೀಯದಲ್ಲಿ ವೈಯಕ್ತಿಕ ದಾಳಿ ಬದಲು ನಿರ್ಮಾಣಾತ್ಮಕ ವಿಮರ್ಶೆಯನ್ನು ಪ್ರೋತ್ಸಾಹಿಸುವುದು ಅವರ ಯಶಸ್ಸಿಗೆ ಕಾರಣವಾಗುತ್ತದೆ. ಜನಸಂಪರ್ಕವನ್ನು ನಿರಂತರವಾಗಿ ಉಳಿಸಿಕೊಂಡು, ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸುವುದು ಅವರ ಮುಂದಿನ ಗುರಿಯಾಗಬೇಕು. ಗೆಲುವು ಕುಟುಂಬದ ಆಸ್ತಿಯಲ್ಲ, ಜನರ ವಿಶ್ವಾಸದ ಫಲ; ಇದನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲು.
ಬಿಜೆಪಿಯ ಮುಂದಿನ ಸವಾಲುಗಳು
ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ನ ಒಳಜಗಳಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಬಿಜೆಪಿಗೆ ಸವಾಲುಗಳು ಹಲವು: ಮೊದಲನೆಯದು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ನಡುವೆ ವಿಶ್ವಾಸಾರ್ಹತೆಯನ್ನು ಕಟ್ಟುವುದು. ಧ್ರುವೀಕರಣದ ತಂತ್ರಗಳು ಸೀಮಿತ ಯಶಸ್ಸು ನೀಡುತ್ತವೆ ಎಂಬುದು ಈ ಫಲಿತಾಂಶ ಸೂಚಿಸುತ್ತದೆ.
ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ಬಲಪಡಿಸುವುದು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನಸಂಪರ್ಕ ಹೆಚ್ಚಿಸುವುದು ಅಗತ್ಯ. ರಾಜ್ಯ ಮಟ್ಟದಲ್ಲಿ ಪ್ರತಿಪಕ್ಷದ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ. ಈ ಗೆಲುವು ಕಾಂಗ್ರೆಸ್ಗೆ ಎಚ್ಚರಿಕೆಯಾಗಿದ್ದರೆ, ಬಿಜೆಪಿಗೆ ಕ್ರಿಯಾಶೀಲತೆಯ ಅಗತ್ಯವನ್ನು ತೋರಿಸುತ್ತದೆ.
ಎಸ್ಡಿಪಿಐ ಮುಂದಿನ ಸವಾಲು
ಎಸ್ಡಿಪಿಐ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದು ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಿದೆ. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಂ ಸಮುದಾಯದ ಅಸಮಾಧಾನವನ್ನು ಬಳಸಿಕೊಂಡು ತನ್ನ ಮತಬ್ಯಾಂಕ್ನ್ನು ವಿಸ್ತರಿಸಿದೆ. ಆದರೆ ಇದು ಸವಾಲುಗಳನ್ನೂ ತಂದಿದೆ. ಮುಂದೆ ಎಸ್ಡಿಪಿಐಗೆ ಬ್ರಾಡ್ ಆಪೀಲ್ ಅಗತ್ಯ – ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಆರ್ಥಿಕ-ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಉದ್ಯೋಗದಂತಹ ವಿಷಯಗಳಲ್ಲಿ ಎಲ್ಲರಿಗೂ ಸ್ಪಂದಿಸುವ ಧೋರಣೆ ಬೆಳೆಸಬೇಕು.
ಚುನಾವಣಾ ಅನಿಯಮಗಳ ಆರೋಪಗಳು ಮತ್ತು ಮುಖ್ಯ ಪಕ್ಷಗಳ ನಡುವಿನ ತಂತ್ರಗಳ ನಡುವೆ ಸಿಲುಕದೆ, ಸ್ವತಂತ್ರ ರಾಜಕೀಯವನ್ನು ಬಲಪಡಿಸುವುದು ಮುಖ್ಯ. ದೀರ್ಘಕಾಲದ ಯಶಸ್ಸಿಗೆ ಸಮುದಾಯಗಳ ನಡುವಿನ ಸೇತುವೆಯಾಗುವುದು ಅಗತ್ಯ; ಇಲ್ಲದಿದ್ದರೆ ಮತ ವಿಭಜನೆಯ ಆರೋಪಗಳು ಮುಂದುವರಿಯುತ್ತವೆ.
ಈ ಫಲಿತಾಂಶವು ಭಾರತೀಯ ಜನತಂತ್ರದ ಜೀವಂತತೆಯನ್ನು ತೋರಿಸುತ್ತದೆ. ಗೆಲುವು ಸಂಭ್ರಮಿಸುವುದರ ಜೊತೆಗೆ, ಸೋಲಿನಿಂದ ಪಾಠ ಕಲಿಯುವುದು ಎಲ್ಲಾ ಪಕ್ಷಗಳ ಕರ್ತವ್ಯ. ಸಮರ್ಥ್ ಶಾಮನೂರು ಅವರು ತಮ್ಮ ಯುವಕರ ಉತ್ಸಾಹ ಮತ್ತು ಕುಟುಂಬ ಪರಂಪರೆಯನ್ನು ಸಂಯೋಜಿಸಿ, ಎಲ್ಲಾ ವರ್ಗಗಳ ಜನರ ಸೇವೆಗೆ ಮುಂದಾಗಬೇಕು. ಕಾಂಗ್ರೆಸ್ ಅಂತರ್ಗತ ಏಕತೆಯನ್ನು ಬಲಪಡಿಸಬೇಕು. ಬಿಜೆಪಿ ಮತ್ತು ಎಸ್ಡಿಪಿಐ ತಮ್ಮ ತಂತ್ರಗಳನ್ನು ಪುನರ್ ಪರಿಶೀಲಿಸಿ, ಜನಕೇಂದ್ರಿತ ರಾಜಕೀಯಕ್ಕೆ ಮರಳಬೇಕು.
ದಾವಣಗೆರೆ ದಕ್ಷಿಣದ ಜನರು ಅಭಿವೃದ್ಧಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಹೊಸ ಶಾಸಕರು ಈ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ರಾಜಕೀಯವು ಸೇವೆಯಾಗಬೇಕೇ ವಿನಾ ಕುಟುಂಬ ಅಥವಾ ಸಮುದಾಯ ದ್ವೇಷದ ಆಟವಾಗಬಾರದು. ಈ ಉಪಚುನಾವಣೆಯ ಪಾಠಗಳು ರಾಜ್ಯದ ಭವಿಷ್ಯದ ಚುನಾವಣೆಗಳಿಗೆ ದಾರಿ ತೋರಿಸುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಫಸಲ್ ಭೀಮಾ ಯೋಜನೆಯಲ್ಲಿ ಅಕ್ರಮ | ಗ್ರಾಮ ಆಡಳಿತಾಧಿಕಾರಿ ಕೆ.ಸುರೇಶ ಸೇರಿ 8 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoವಂಚನೆ | ಗಜೇಂದ್ರಗಡ ಶ್ರೀ ಅನ್ನದಾನೇಶ್ವರ ಐ.ಟಿ.ಐ ಕಾಲೇಜು ಪ್ರಾಂಶುಪಾಲ ಅಮರಪ್ಪ ಗಾಣಿಗೇರ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoದಾವಣಗೆರೆ | ಇಂದು ಕರೆಂಟ್ ಇರಲ್ಲ
-
ದಿನದ ಸುದ್ದಿ3 days agoಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಭವ್ಯ ‘ವಜ್ರ ಮಹೋತ್ಸವ’ ಆಚರಣೆ; ಉಪರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳ ಆಗಮನ
-
ದಿನದ ಸುದ್ದಿ1 day ago‘ಮತದಾರ ದೇವರು’ ಎಂದ ಸಿದ್ದರಾಮಯ್ಯ

