ನೆಲದನಿ
ಕಂದಗಲ್ಲು ಓಬಕ್ಕನ ಸೋಬಾನೆ ಪದಗಳಲ್ಲಿ ಬಸವದರ್ಶನ
ಭಾರತದ ಚರಿತ್ರೆಯನ್ನು ತಿಳಿಯುವುದಕ್ಕೆ ಶಿಷ್ಟ ಸಾಹಿತ್ಯದಷ್ಟೆ ಮೌಖಿಕ ಸಾಹಿತ್ಯವೂ ಮಹತ್ವದ ದಾಖಲೆಯನ್ನು ಒದಗಿಸುತ್ತದೆ. ಈ ಮೌಖಿಕ ಚರಿತ್ರೆಯು ನೆಲಮೂಲ ಬದುಕಿನ ಪ್ರತಿದನಿಯಾಗಿದೆ. ಇಂತಹ ಮೌಖಿಕ ಚರಿತ್ರೆಯು ನೆಲದನಿಯಾಗಿ ತನ್ನ ಸಂವೇದನೆಗಳನ್ನು ಅನಾವರಣಗೊಳಿಸುತ್ತ ಬಂದಿದೆ. ಆದರೆ ನಾವು ನಮ್ಮ ಚರಿತ್ರೆಯನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ನಮ್ಮ ಮನೆಯಲ್ಲಿಯೇ ಇರುವ ಚರಿತ್ರೆಯನ್ನು ಅರಿಯದೆ ಯಾರೋ ತಮ್ಮಿಚ್ಚೆಯಂತೆ ಬರೆದು ಸಿದ್ಧಪಡಿಸಿದ ದಾಖಲೆಯೆ ನಿಜವಾದ ಚರಿತ್ರೆಯೆಂದು ಭಾವಿಸಿ, ನಮ್ಮ ನಡುವೆ ಇರಬಹುದಾದ ವಾಸ್ತವ ಚರಿತ್ರೆಯನ್ನು ಲೆಕ್ಕಿಸದೆ ತಿರಸ್ಕಾರಕ್ಕೆ ಗುರಿಪಡಿಸಿದ್ದೇವೆ.
‘ಹಿತ್ತಲಗಿಡ ಮದ್ದಲ್ಲ’ ಎಂಬ ಮನಸ್ಥಿತಿಯು ಒಂದು ಕಾಲದಲ್ಲಿ ಮನೆ ಮಾಡಿಕೊಂಡಿತ್ತು. ಇದಕ್ಕೆ ಕಾರಣವೆಂದರೆ, ಈ ಪ್ರಕಾರದ ಸಾಹಿತ್ಯಕ್ಕೆ ಯಾವುದೇ ಮನ್ನಣೆ ಇಲ್ಲ ಎಂಬುದು ಬಹುತೇಕರ ನಂಬಿಕೆಯಾಗಿತ್ತು. ಆದರೆ ಇಂದು ಪಾಶ್ಚಿಮಾತ್ಯ ವಿಚಾರಧಾರೆಗಳ ಪ್ರಭಾವ ಹಾಗೂ ಕೆಲವು ವಿಶ್ವವಿದ್ಯಾಲಯಗಳು ಕೈಗೊಂಡಿರುವ ಅಲಕ್ಷಿತ ಸಮುದಾಯ ಕೇಂದ್ರಿತ (ಸಬಾಲ್ಟ್ರನ್) ಅಧ್ಯಯನದ ಫಲವಾಗಿ ಇಂದು ಗ್ರಾಮೀಣ ಬದುಕಿನಲ್ಲಿರುವ ಮೌಖಿಕ ಸಾಹಿತ್ಯದ ಬಗ್ಗೆ ಹೆಚ್ಚು ಒಲವುಗಳು ಬೆಳೆಯಲಾರಂಭಿಸಿವೆ. ಇದರಿಂದಾಗಿ ಮೌಖಿಕ ಚರಿತ್ರೆಯನ್ನು ಪ್ರಮುಖ ನೆಲೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ.
ಗ್ರಾಮೀಣ ಜನತೆಯು ತಮ್ಮದೆ ಆದ ಬದುಕನ್ನು ಕಟ್ಟಿಕೊಂಡು, ತಮ್ಮ ಬದುಕಿನ ಬವಣೆಗಳನ್ನು ಮೌಖಿಕ ಸಾಹಿತ್ಯದಲ್ಲಿ ಮುಂದುವರೆಸಿಕೊಂಡು ಬಂದಿದ್ದಾರೆ. ಇಂತಹ ಗ್ರಾಮೀಣ ಬದುಕಿನಲ್ಲಿ ಅಂತರ್ಗತವಾಗಿರುವ ಚರಿತ್ರೆಯೊಂದನ್ನು ತಮ್ಮ ಸಾಹಿತ್ಯದಲ್ಲಿ ವ್ಯಕ್ತಪಡಿಸುವ ಜಾನಪದ ಹಾಡುಗಾರ್ತಿಯರಲ್ಲಿ ಕಂದಗಲ್ಲು ಓಬಕ್ಕನವರು ಒಬ್ಬರಾಗಿದ್ದಾರೆ.
ದಾವಣಗೆರೆ ತಾಲ್ಲೂಕು ಕಂದಗಲ್ಲು ಗ್ರಾಮದಲ್ಲಿ ನೆಲೆಸಿರುವ ಓಬಕ್ಕ ಸುಮಾರು ನೂರು ವರ್ಷಗಳ ಗಡಿಯಲ್ಲಿದ್ದಾರೆ. ತಮ್ಮ ಬದುಕಿನ ಒಂದು ಭಾಗವಾಗಿ ಸೋಬಾನೆ ಪದಗಳನ್ನು ಮೌಖಿಕವಾಗಿ ಹಾಡಿಕೊಂಡು ಬಂದ ಇವರು, ಜನಪದ ಸಾಹಿತ್ಯದ ಗಣ ಯನ್ನು ತಮಗರಿವಿಲ್ಲದಂತೆ ಕಾಪಾಡಿಕೊಂಡು ಬಂದಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಮುಂದುವರೆದುಕೊಂಡು ಬಂದಿರುವ ಈ ಪ್ರಕಾರವು ಇಂದಿನ ಜಾಗತಿಕ ಭರಾಟೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳುವ ಹಂತಕ್ಕೆ ಬಂದು ನಿಂತಿದೆ.
ಓಬಕ್ಕನಿಗೆ ತಾನು ಕಾಪಾಡಿಕೊಂಡು ಬಂದಿರುವ ಈ ಸಾಹಿತ್ಯದ ಸೊಬಗನ್ನು ತನ್ನ ಮುಂದಿನ ಪೀಳಿಗೆಗೂ ಕಲಿಸಬೇಕೆಂಬ ಹಂಬಲವಿದೆ. ಆದರೆ ಇಂದಿನ ಜಾಯಮಾನದ ಮನಸುಗಳಿಗೆ ಇದು ವಲ್ಲದ ತುತ್ತಾಗಿದ್ದು, ನಮ್ಮ ಹೆಣ್ಣು ಮಕ್ಕಳು ಸಿನಿಮಾ ಧಾರಾವಾಹಿಗೆ ಜೋತುಬಿದ್ದಿರುವುದರ ಫಲವಾಗಿ ಸತ್ವಯುತವಾದ ತಮ್ಮ ಮನೆಯ ಸಾಹಿತ್ಯದ ಸೊಬಗನ್ನು ಹೊರಹಾಕಿ, ಅನ್ಯ ಸಂಸ್ಕಕೃತಿಯ ಅನುಕರಣೆ ಮತ್ತು ಸ್ವೀಕಾರದ ಕಾಲಘಟ್ಟದಲ್ಲಿದ್ದೇವೆ. ಇದಕ್ಕೆ ಪ್ರಮುಖವಾದ ಕಾರಣ ನಮ್ಮ ಸಂಸ್ಕಕೃತಿ, ಆಚಾರ, ವಿಚಾರಗಳಲ್ಲಿರುವ ಮೌಲ್ಯಗಳ ತಿಳುವಳಿಕೆಯ ಕೊರತೆಯು ಒಂದಾಗಿದೆ.
ಓಬಕ್ಕನಲ್ಲಿ ನೆಲೆಯೂರಿರುವ ಮೌಖಿಕ ಸಾಹಿತ್ಯದ ಸಾಮಥ್ರ್ಯವನ್ನು ಕುರಿತು ವಿಚಾರಿಸಿದಾಗ ನನಗೆ ದನಿಗೆ ಜೊತೆಗೂಡಿಸುವವರು ಸಿಕ್ಕರೆ ರಾತ್ರಿಯಿಡಿ ನಿರಂತರವಾಗಿ ತಾನು ಕಲಿತಿರುವ ಪದಗಳನ್ನು ಹಾಡುವುದಾಗಿ ಧೈರ್ಯದಿಂದ ಸವಾಲು ಹಾಕುತ್ತಿದ್ದರು. ಓಬಕ್ಕ ನೂರು ವರ್ಷದ ಆಜುಭಾಜಿನಲ್ಲಿದ್ದರೂ ತುಂಬು ಕ್ರಿಯಾಶೀಲತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ, ಇಂದಿನ ಮಹಿಳೆಯರು ತಮ್ಮ ಮನೆಯಲ್ಲಿ ಮಾಡುವಂತಹ ಸಣ್ಣಪುಟ್ಟ ಕಸೂತಿಯಂತಹ ಕೆಲಸಗಳನ್ನು ಅನುಕರಣೆಯಿಂದ ಕಲಿತು ವಿವಿಧ ಬಗೆಯ ಕಸೂತಿಯ ವಸ್ತುಗಳನ್ನು ತಯಾರಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ.
ಸುಮಾರು ಮೂವತ್ತನೇ ವಯಸ್ಸಿನಲ್ಲಿ ತನ್ನ ಗಂಡನನ್ನು ಕಳೆದುಕೊಂಡ ಓಬಕ್ಕ ಬದುಕನ್ನು ಧೈರ್ಯವಾಗಿ ಎದುರಿಸುವ ಎದೆಗಾರಿಕೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಓಬಕ್ಕನಿಗೆ ತಾನು ಕಲಿತಿರುವ ಪದಗಳನ್ನು ಇಂದು ಪ್ರದರ್ಶಿಸುವುದಕ್ಕೆ ಹಲವಾರು ಅಡೆತಡೆಗಳಿವೆ. ಅವುಗಳಲ್ಲಿ ಒಂದು, ತಾನು ವಂಶಪಾರಂಪರ್ಯವಾಗಿ ಉಳಿಸಿಕೊಂಡು ಬಂದಿರುವ ಪದಗಳನ್ನು ಹಾಡುವುದಕ್ಕೆ ದನಿಗೂಡಿಸುವಂತಹ ಸಮಾನ ಮನಸ್ಕರ ಕೊರತೆಯು ಒಂದಾಗಿದೆ. ಎರಡು, ನೂರರ ಗಡಿಯಲ್ಲಿರುವ ಇವರು ದನಿ ಎತ್ತಿ ಹಾಡುವಷ್ಟು ಸಾಮಥ್ರ್ಯವನ್ನು ಕಳೆದುಕೊಂಡಿದ್ದು, ಹೆಚ್ಚು ಸಮಯ ಹಾಡುವುದಕ್ಕೆ ಇವರ ದನಿಯಲ್ಲಿ ಸಾಮಥ್ರ್ಯವಿಲ್ಲ. ಹೀಗಾಗಿ ಇವರ ದನಿಯಲ್ಲಿ ನಡುಕವಿದೆ.
ಇದರಿಂದ ಇಂದು ಈ ಪದಗಳನ್ನು ಹಾಡುವುದಕ್ಕೆ ಅಡಚಣೆ ಉಂಟಾಗುತ್ತದೆ. ಮೂರು, ಇವರಿಗೆ ಪ್ರೊತ್ಸಾಹ ನೀಡಿ ಇವರ ಪದಗಳ ಮಹತ್ವವನ್ನು ಗುರುತಿಸುವವರ ಕೊರತೆಯಿದೆ. ನಾಲ್ಕು, ಇವರಲ್ಲಿನ ಈ ಸಾಹಿತ್ಯವನ್ನು ಆಸಕ್ತಿಯಿಂದ ತಿಳಿಯಬೇಕೆಂಬ ಹಂಬಲವುಳ್ಳವರ ಎದುರು ಹಾಡುವುದಕ್ಕೆ ಇವರಿಗೆ ಮುಜುಗರವಿದೆ. ಇದಕ್ಕೆ ಕಾರಣ ಇಂದಿನ ಕಾಲದಲ್ಲಿ ನಾವು ಹಾಡಿಕೊಂಡು ಬಂದಿರುವ ಹಾಡು (ಪದ)ಗಳಿಗೆ ಬೆಲೆಯಿಲ್ಲ ಎಂಬ ಕೀಳರಿಮೆಯ ಭಾವವನ್ನು ತಮ್ಮಲ್ಲಿ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಈ ಪದಗಳನ್ನು ಸಂಗ್ರಹಿಸುವುದು ಹಾಗೂ ಇವರಿಗೆ ಸಂಗ್ರಹದ ಅಗತ್ಯತೆಯ ಅರಿವು ಮೂಡಿಸುವುದು ಕೂಡ ತ್ರಾಸದಾಯಕವಾದ ಕೆಲಸವಾಗಿದೆ.
ಇದು ಇಂದು ಈ ಮೌಖಿಕ ಸಾಹಿತ್ಯವನ್ನು ಕಡೆಗಣಿಸಿ ಆಧುನಿಕ ಸಂಗೀತ ಪ್ರಕಾರಕ್ಕೆ ಹೆಚ್ಚು ಜೋತುಬಿದ್ದಿರುವ ಪರಿಣಾಮದಿಂದಾಗಿ ಇಂತಹ ಸಾಹಿತ್ಯ ಪ್ರಕಾರವು ಇಂದು ಅವನತಿಯ ಅಂಚಿನಲ್ಲಿದೆ. ಓಬಕ್ಕನಂತಹ ಎಷ್ಟೋ ಜನಪದರಲ್ಲಿ ಕರಗತವಾಗಿರುವ ಸಾಹಿತ್ಯದ ಸೊಬಗು ಅಳಿವಿನಂಚಿನಲ್ಲಿದೆ.
ನಾನು ನನ್ನ ಬಾಲ್ಯದ ದಿನಗಳಿಂದಲೂ ಓಬಕ್ಕನನ್ನು ಹತ್ತಿರದಿಂದ ನೋಡಿದವನು. ಆದರೆ ನನಗೆ ಓಬಕ್ಕನ ಸಾಹಿತ್ಯದ ಮಹತ್ವ ದರ್ಶನವಾಗಿದ್ದು ನಾನು ಸಂಶೋಧನೆಗೆ ತೊಡಗಿಕೊಂಡ ಬಹುದಿನಗಳ ನಂತರ. ನನಗೆ ಓಬಕ್ಕ ಸಂಬಂಧದಲ್ಲಿ ಅಜ್ಜಿಯಾಗಬೇಕು ಎಂದುಕೊಂಡಿದ್ದೆ. ಆದರೆ ಓಬಕ್ಕನ ಪ್ರಕಾರ ನಾನು ಓಬಕ್ಕನಿಗೆ ತಮ್ಮನಾಗಿದ್ದೆ.
ನೂರು ವರ್ಷದ ಗಡಿಯಲ್ಲಿರು ಓಬಕ್ಕನಿಗೂ ಮೂವತ್ತರ ಗಡಿಯಲ್ಲಿರುವ ನನಗೂ ಅಕ್ಕ-ತಮ್ಮನ ಸಂಬಂಧ ಹೇಗೆ ಸಾಧ್ಯ ಎಂಬುದು ನನಲ್ಲಿ ಗೊಂದಲವನ್ನು ಮೂಡಿಸಿತ್ತು. ಆದರೆ ಓಬಕ್ಕ ಕಟ್ಟಿಕೊಡುವ ವಂಶವೃಕ್ಷದ ಪ್ರಕಾರ ಆಕೆಗೆ ನಾನು ತಮ್ಮನೆ ಆಗಿದ್ದೆ. ಈ ಕಾರಣದಿಂದಾಗಿ ನೂರರ ಪ್ರಾಯದ ಓಬಜ್ಜಿಯನ್ನು ಇಲ್ಲಿ ಓಬಕ್ಕ ಎಂಬುದಾಗಿಯೇ ಸಂಬೋಧಿಸುತ್ತಿದ್ದೇನೆ. ಓಬಕ್ಕನಲ್ಲಿ ಕರಗತವಾಗಿರುವ ಪದಗಳನ್ನು ಸಂಗ್ರಹ ಮಾಡುವಾಗ ನಾನು ಸಂಶೋಧನೆ ಮಾಡುತ್ತಿದ್ದೇನೆ. ನೀನು ಕಲಿತಿರುವ ಪದಗಳನ್ನು ಹಾಡು ಎಂದರೆ ಓಬಕ್ಕ ಹೇಳುವಂತಿರಲಿಲ್ಲ. ಇದಕ್ಕೆ ಕಾರಣ ತನ್ನ ಕಾಲದ ಪದಗಳು (ಸಾಹಿತ್ಯ) ಮಹತ್ವ ಕಳೆದುಕೊಂಡಿದೆ ಎಂಬ ಆತಂಕದಿಂದಲೊ ಅಥವಾ ಬದಲಾದ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮಾನವ ಸಹಜ ಗುಣದಿಂದಲೊ ಓಬಕ್ಕ ಆಧುನಿಕ ಬದುಕಿನಲ್ಲಿ ಬೆರೆತುಕೊಂಡಿರುವ ಸಿನಿಮಾ ಮತ್ತು ಧಾರವಾಹಿ ಪ್ರಪಂಚಕ್ಕೆ ತನ್ನನ್ನು ತೆರೆದುಕೊಂಡಿದ್ದಳು.
ಇಂತಹ ಸಂದರ್ಭದಲ್ಲಿ ಓಬಕ್ಕನನ್ನು ಆಕೆಯ ಸಾಹಿತ್ಯ ಜಗತ್ತಿಗೆ ಕೊಂಡೊಯ್ಯಲು ವಿವಿಧ ತೆರನಾದ ಕಸರತ್ತುಗಳನ್ನು ಪ್ರದರ್ಶಿಸಬೇಕಾಯಿತು. ಕೊನೆಗೆ ನಿನಗೆ ವಯಸ್ಸಾಗಿದೆ, ನಿನ್ನ ಕಾಲದಲ್ಲಿ ಹಾಡುತ್ತಿದ್ದ ಪದಗಳನ್ನೆಲ್ಲ ಮರೆತಿರುವೆ. ನಿನಗೆ ‘ಅರವುಮರುವು’ ಎಂದಾಗ ತನ್ನ ಸಾಮಥ್ರ್ಯವನ್ನು ಪ್ರದರ್ಶಿಸುವ ನೆಲೆಯಲ್ಲಿ ಒಂದೊಂದಾಗಿಯೇ ತನ್ನ ಮನದ ಮೂಲೆಯಲ್ಲಿ ಕೇಂದ್ರಿಕರಿಸಿಕೊಂಡಿದ್ದ ಪದಗಳನ್ನು ಹಾಡುವ ಪ್ರಯತ್ನ ಮಾಡಿದರು.
ಓಬಕ್ಕನ ದನಿಯ ಸಮಸ್ಯೆಯನ್ನರಿತ ನಾನು ಅವರ ಬಳಿ ಒಂದೊಂದೆ ಸಾಲುಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು ಬರೆಯಲು ಪ್ರಾರಂಭಿಸಿದೆ. ಒಂದು ಪದವನ್ನು ಸಂಪೂರ್ಣವಾಗಿ ಸಂಗ್ರಹಿಸಿದ ತರುವಾಯ ಅದರ ರಾಗ ಮತ್ತು ಲಯವನ್ನು ತಿಳಿಯುವ ಕಾತುರದಿಂದ ನಿಧಾನವಾಗಿ ಅವರಿಂದಲೇ ಪದಗಳನ್ನು ಹಾಡಿಸಿ, ಅವರ ಹಾಡಿನ ರಾಗವನ್ನು ಆಧುನಿಕ ವಿದ್ಯುನ್ಮಾನಗಳಲ್ಲಿ ಸಂಗ್ರಹಿಸಲು ಪ್ರಾರಂಭಿಸಿದೆ.
ಹೀಗೆ ಸಂಗ್ರಹಿಸಿದ ಪದಗಳಲ್ಲಿ ಬಸವಣ್ಣನ ಬದುಕಿಗೆ ಸಂಬಂಧಿಸಿದ ಕೆಲವು ಪದಗಳನ್ನು ಓಬಕ್ಕ ಹಾಡಿದ್ದರು. ನಾವು ಈಗಾಗಲೇ ಚರಿತ್ರೆಯ ಪಠ್ಯಗಳಲ್ಲಿ ಓದಿರುವುದಕ್ಕಿಂತ ಭಿನ್ನವಾದ ದರ್ಶನವೊಂದು ಓಬಕ್ಕನ ಪದಗಳಲ್ಲಿ ಕಂಡುಬಂದಿತು. ಆದ್ದರಿಂದ ಈ ನೆಲೆಯ ಜಾಡುಹಿಡಿದು ಜನಪದರ ಬದುಕಲ್ಲಿ ಕಂಡುಬರುವ ಸಮಾಜ ಸುಧಾರಕನಾದ ಬಸವಣ್ಣನ ಬದುಕನ್ನು ಅನಾವರಣಗೊಳಿಸುವ ನೆಲೆಯಲ್ಲಿ ‘ಓಬಕ್ಕನ ಬಸವದರ್ಶನ’ ಎಂಬ ಈ ಲೇಖನವನ್ನು ರಚಿಸುವ ಪ್ರಯತ್ನವನ್ನು ಇಲ್ಲಿ ಕೈಗೊಳ್ಳಲಾಗಿದೆ.
–2–
ಪ್ರಸ್ತುತ ಲೇಖನದಲ್ಲಿ ಓಬಕ್ಕ ಹಾಡಿದ ಸೋಬಾನೆ ಪದಗಳ (ಹಾಡು) ಮೂಲಕ ಜನಪದರು ಅಥವಾ ಸಾಮಾನ್ಯ ಜನತೆಯು ಸಮಾಜ ಸುಧಾರಕನಾದ ಬಸವಣ್ಣನನ್ನು ಕಾಣುವ ಬಗೆಯನ್ನು ಇಲ್ಲಿ ಚರ್ಚೆಗೆ ಒಳಪಡಿಸಲಾಗುವುದು. ನಮ್ಮ ಜನಪದ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ತಳವರ್ಗದ ಜನತೆಯ ಪರವಾಗಿ ಹೋರಾಡಿದ ಬಸವಣ್ಣನನ್ನು ಶಿವನ ಪ್ರತಿರೂಪವಾಗಿ ಸ್ವೀಕರಿಸಲಾಗಿದೆ.
ಇಲ್ಲಿ ಶಿವ ಬೇರೆಯಲ್ಲ, ಬಸವಣ್ಣ ಬೇರೆಯಲ್ಲ. ಇದಕ್ಕೆ ಕಾರಣ ಈ ನಾಡಿನ ಮೂಲ ಸಂಸ್ಕೃತಿಯು ಶೈವ ನೆಲೆಯದಾಗಿರುವುದು. ಹೀಗಾಗಿ ನಮ್ಮ ಜನಪದರು ಶಿವನ ಆರಾಧಕರಾಗಿ ಕಂಡುಬರುತ್ತಾರೆ. ತಮ್ಮ ಸಮುದಾಯದ ಜನತೆಯ ಪರವಾಗಿ ಹೋರಾಟ ನಡೆಸಿದ ಕ್ರಾಂತಿಕಾರರನ್ನು ಶಿವನ ಪ್ರತಿರೂಪವಾಗಿ ಕಾಣುತ್ತಾರೆ. ಆದ್ದರಿಂದ ಇಲ್ಲಿ ಶಿವ ಮತ್ತು ಬಸವಣ್ಣ ಒಂದೆಯಾಗಿ ಕಂಡುಬರುತ್ತಾರೆ. ತಳಸಮುದಾಯದ ಪ್ರಗತಿಗಾಗಿ ಬಸವಣ್ಣ ತನ್ನ ಹೋರಾಟವನ್ನು ನಡೆಸಿದ್ದು ಕ್ರಿ.ಶ 12ನೇ ಶತಮಾನದಲ್ಲಿ. ಆದರೆ ಬಸವಣ್ಣನ ಮೂಲ ಆಶಯಗಳನ್ನು ಸ್ಥಾಪಿತ ಹಿತಾಸಕ್ತಿಗಳು ಅವರ ಇಚ್ಚಾನುಸಾರವಾಗಿ ಬಳಸಿಕೊಂಡು, ಆತನ ವಿಚಾರಗಳ ಅಡಿಯಲ್ಲಿ ಮೂಲಭೂತವಾದ ಧರ್ಮವೊಂದನ್ನು ಸ್ಥಾಪಿಸಿಕೊಂಡು ಬಂದಿವೆ.
ಈ ಸ್ಥಾಪಿತ ಮೌಲ್ಯಗಳಿಂದಾಗಿ ಬಸವಣ್ಣನ ಉದಾರವಾದಿ ನಿಲುವುಗಳನ್ನು ಇಂದು ಹುಡುಕುವುದು ಕೂಡ ಸಾಧ್ಯವಾಗದಷ್ಟು ದೂರ ಸರಿದಿವೆ. ಆದರೆ ತನ್ನ ಹಿತಕ್ಕಾಗಿ ಹೊರಾಡಿದ ಗುರುವನ್ನು ನಿಜದ ನೆಲೆಯಲ್ಲಿ ಆರಾಧಿಸಿಕೊಂಡು ಬಂದಿರುವುದನ್ನು ಜನಪದ ಪರಂಪರೆಯಲ್ಲಿ ಇಂದಿಗೂ ಗುರುತಿಸಬಹುದಾಗಿದೆ.
ಜನಪದರು ಬಸವಣ್ಣನನ್ನು ತಮ್ಮ ವಿಮೋಚನೆಗಾಗಿ ಹೋರಾಡಿದ ದೇವರೆಂದು ಆರಾಧಿಸುವುದು ಮಾತ್ರವಲ್ಲ, ಬಸವಣ್ಣನ ಸಂಕಷ್ಟಗಳನ್ನು ತಮ್ಮ ನೋವುಗಳೆಂಬಂತೆ ಆತನ ನೋವುಗಳಿಗೆ ಮಿಡಿಯುತ್ತಾ ಬಂದಿದ್ದಾರೆ. ಈ ಮನೋಭಾವವು ಜನಪದರಲ್ಲಿನ ಹೃದಯ ವೈಶಾಲ್ಯವನ್ನು ಕಟ್ಟಿಕೊಡುತ್ತದೆ. ಇವರ ಈ ತುಡಿತ ಯಾವುದೇ ಸ್ವಾರ್ಥದಿಂದ ಕೂಡಿದ್ದಲ್ಲ, ಬದಲಾಗಿ ಇಲ್ಲಿ ಸಾಮಾಜಿಕ ಕಳಕಳಿ ಕಂಡುಬರುತ್ತದೆ.
ಶಿಷ್ಟ ಪರಂಪರೆಯು ಬಸವಣ್ಣನ ಮಹಿಮೆಯನ್ನು ತಮ್ಮ ಇಚ್ಚಾನುಸಾರ ವರ್ಣನಾತ್ಮಕ ನೆಲೆಯಲ್ಲಿ ಚಿತ್ರಿಸಿಕೊಂಡು, ಹಲವಾರು ಕಡೆಗಳಲ್ಲಿ ಪ್ರಕ್ಷಿಪ್ತಗಳನ್ನು ಉಂಟುಮಾಡಿದೆ. ಇದಕ್ಕೆ ಕಾರಣ ಸ್ಥಾಪಿತ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಕಾಪಾಡುವ ಮೂಲಕ ಅಸಮಾನತೆಯ ಸಾಮಾಜಿಕ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಬಂದಿರುವುದಾಗಿದೆ.
ಇಂತಹ ಪ್ರಕ್ಷಿಪ್ತ ಮಾದರಿಗಳನ್ನು ಹಲವಾರು ಶಿಷ್ಟ ಸಾಹಿತ್ಯ ಕೃತಿಗಳಲ್ಲಿ ಗುರುತಿಸಬಹುದಾಗಿದೆ. ಆದರೆ ಇದಕ್ಕೆ ಪರ್ಯಾಯ ನೆಲೆಯಲ್ಲಿ ಸಾಮಾನ್ಯ ಜನರ ಬದುಕಿಗಾಗಿ ಹೋರಾಡಿದ ಬಸವಣ್ಣನ ನೋವಿಗೆ ಜನಪದರು ತುಡಿಯುತ್ತ ಬಂದಿರುವ ಕೆಲವು ಸೋಬಾನೆ ಪದಗಳು ಈ ಮುಂದಿನಂತಿವೆ.
ಯಾರೇನೆಂದರು ನಿನಗೆ ಸದ್ಗುರು ದೇವ ||
ಬಾರ ದ್ರೋಹಿರಿ ಮನಗೆ
ಸದ್ಗರು ದೇವ | ನಿನಗ್ಯಾರೇನೆಂದರು ||
ಸಣ್ಣನಾಗಲಿ ಬಾಲ | ಲೋಲನಾಗಲಿ ಗುಣ
ಶೀಲನಾಗಲಿ ಮುಕ್ತಿ | ಕೀಲು ತೋರಿದೆ ಗುರುವೆ
ಸದ್ಗುರು ದೇವ | ನಿನಗ್ಯಾರೇನೆಂದರು ||
ಚಾರನೆಂಬುವರೇನು | ಸೂರನೆಂಬುವರೇನು
ಪರಮಾತ್ಮಕ ಸುವ್ವಿ
ಸದ್ಗುರು ದೇವ | ಯಾರೇನೆಂದರು ನಿನಗೆ ||
ಧರೆಯೊಳು ಕೂಡಲಿ | ಪುರದೊಳು ನೆಲೆಸಿರುವ
ವರಶ್ರೀಸಂಗಮ ಬಸವೇಸ್ಪುರಗೆ | ಯಾರೇನೆಂದರು
ಸದ್ಗುರು ದೇವ | ಯಾರೇನೆಂದರು ನಿನಗೆ ||
ಈ ಜನಪದ ಸಾಹಿತ್ಯವು ಬಸವಣ್ಣನ ಅಂತಿಮ ದಿನದ ಬದುಕಿನ ಸಂಕಷ್ಟಗಳನ್ನು ಅನಾವರಣಗೊಳಿಸುತ್ತದೆ. ಇಲ್ಲಿ ಬಸವಣ್ಣ ಮೌನ ತಾಳಿರುವುದಕ್ಕೆ ಹಲವಾರು ಕಾರಣಗಳಿವೆ. ತನ್ನ ಹೋರಾಟದ ಭಕ್ತಿಯ ಮಾರ್ಗವನ್ನು ಕುರಿತು ಬಸವಣ್ಣ ಹೇಳುವ ‘ಭಕ್ತಿಯೆಂಬುದು ಮಾಡಬಾರದು ಕಾಣ| ಗರಗಸವಿದ್ದಂತೆ’ ಎಂಬ ಮಾತು ಆತನ ಬದುಕಿನ ಸಂಕಷ್ಟಗಳನ್ನು ಕಟ್ಟಿಕೊಡುತ್ತದೆ.
ಇಲ್ಲಿ ತನ್ನ ಹೋರಾಟದ ಹಾದಿಯಲ್ಲಿ ಈತನು ಹಲವಾರು ಬಗೆಯ ನೋವನ್ನು ಅನುಭವಿಸಿರುತ್ತಾನೆ. ಒಂದೆಡೆ ಬ್ರಾಹ್ಮಣ್ಯವನ್ನು ಧಿಕ್ಕರಿಸುವ ಮೂಲಕ ಶೂದ್ರ ಸಮುದಾಯದ ಸಮಾನತೆಗಾಗಿ ಹೋರಾಟ ನಡೆಸುತ್ತಾನೆ. ಮತ್ತೊಂದೆಡೆ ಸಮಾಜದ ಪ್ರಬಲ ವರ್ಗವಾದ ಪುರೋಹಿತಶಾಹಿಯನ್ನು ಎದುರು ಹಾಕಿಕೊಳ್ಳುತ್ತಾನೆ.
ಈ ಸಂದರ್ಭದಲ್ಲಿ ರಾಜಾಶ್ರಯದಲ್ಲಿದ್ದ ಬಸವಣ್ಣನಿಗೆ ತಳಸಮುದಾಯದ ಪರವಾದ ಹೋರಾಟ ಮಾಡುವುದಕ್ಕೆ ಸ್ವತಂತ್ರ ಅಸ್ತಿತ್ವ ಇರಲಿಲ್ಲ. ಇಲ್ಲಿ ರಾಜನ ಆಜ್ಞೆಯನ್ನು ತಿರಸ್ಕರಿಸಿದರೆ ತನ್ನ ಪದವಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಕಠಿಣ ಶಿಕ್ಷೆಗೂ ಗುರಿಯಾಗಬೇಕಾದ ಸಂಕಷ್ಟದ ದಿನಗಳು ಬಸವಣ್ಣನ ಮುಂದಿದ್ದವು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಾನು ಕಟ್ಟಿದ ಸಮಾನತೆಯ ಆಶಯಹೊತ್ತ ಅನುಭವ ಮಂಟಪವನ್ನು ಸಮಾನ ನೆಲೆಯಲ್ಲಿ ಮುನ್ನಡೆಸಬೇಕಾಗಿತ್ತು. ಇಂತಹ ಚಾರಿತ್ರಿಕ ಒತ್ತಡದ ಪರಿಸ್ಥಿತಿಯಲ್ಲಿನ ಬಸವಣ್ಣನ ಬದುಕನ್ನು ಕುರಿತು ಜನಪದರು ಆತನ ನೋವಿಗೆ ಮಿಡಿಯುತ್ತ ಬಂದಿದ್ದಾರೆ.
ಜಾನಪದವು ಶಿಷ್ಟ ಸಾಹಿತ್ಯ ಪರಂಪರೆಯಂತೆ ಬಸವಣ್ಣನ ಬದುಕನ್ನು ಹಾಗೂ ಆತನ ಹೋರಾಟದ ನೆಲೆಗಳನ್ನು ದೈವಾಂಶ ಸಂಭೂತ ನೆಲೆಯಲ್ಲಿ ವೈಭವಿಕರಿಸುವುದಿಲ್ಲ. ಜನಪದ ಪರಂಪರೆಯಲ್ಲಿ ಯಾವುದೇ ವೈಭವವಿಲ್ಲದೆ ಆತನ ವಾಸ್ತವ ಬದುಕನ್ನು ತಮ್ಮ ಮೌಖಿಕ ಸಾಹಿತ್ಯದಲ್ಲಿ ಅನಾವರಣಗೊಳಿಸುತ್ತಾರೆ. ಜನಪದರು ಬಸವಣ್ಣನನ್ನು ಶಿಷ್ಟ ಸಾಹಿತ್ಯದಿಂದ ರಚನೆಯಾದ ಚರಿತ್ರೆಯ ಮೂಲಕ ಅಧ್ಯಯನ ಮಾಡಿ ಕಂಡುಕೊಂಡವರಲ್ಲ. ಬದಲಾಗಿ ಕಾಲದಿಂದ ಕಾಲಕ್ಕೆ ಹರಿದುಬಂದ ಮೌಖಿಕ ಪರಂಪರೆಯಿಂದ ಆತನನ್ನು ಕಂಡುಕೊಂಡವರು.
ಹೀಗಾಗಿ ಇಲ್ಲಿ ಆತನ ನೋವು ನಲಿವುಗಳನ್ನು ಯಥಾ ಪ್ರಕಾರವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ‘ಯಾರೇನೆಂದರು ನಿನಗೆ ಸದ್ಗುರು ದೇವ’ ಮತ್ತು ‘ಬಾರ ದ್ರೋಹಿರಿ ಮನಗೆ’ ಎಂಬ ನುಡಿಗಳು ಜನಪದರು ಕಂಡುಕೊಂಡಿರುವ ಬಸವ ದರ್ಶನವನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಶಿಷ್ಟ ಸಾಹಿತ್ಯವು ಕಟ್ಟಿಕೊಡುವ ಚರಿತ್ರೆಗಿಂತ ಭಿನ್ನವಾದ ಚರಿತ್ರೆಯೊಂದು ನಮ್ಮ ಜಾನಪದರ ಬದುಕಿನೊಳಗೆ ಅಂತರ್ಗತವಾಗಿದೆ.
ಜನಪದರು ಬಸವಣ್ಣನ ನೋವು ನಲಿವುಗಳನ್ನು ಸಮಾನ ನೆಲೆಯಲ್ಲಿ ಚಿತ್ರಿಸಿಕೊಂಡು ಬಂದಿದ್ದಾರೆ. ಇಲ್ಲಿ ಆತನ ಕಲ್ಯಾಣ ಹಾಗೂ ಸರಸ ಸಲ್ಲಾಪಗಳು ಮಾನವ ಸಹಜ ನೆಲೆಯಲ್ಲಿ ವ್ಯಕ್ತವಾಗುತ್ತವೆ. ಬಸವಣ್ಣ ಮತ್ತು ಗಂಗಾಭಿಕೆಯ ಕಲ್ಯಾಣದ ಸಂದರ್ಭವನ್ನು ಹಾಗೂ ಅಲ್ಲಿನ ಸಲ್ಲಾಪದ ಕ್ಷಣಗಳನ್ನು ತಮ್ಮ ಬದುಕಿನೊಂದಿಗೆ ಸಮೀಕರಿಸಿಕೊಂಡು ಬಂದಿರುವುದನ್ನು ನಾವು ಜಾನಪದ ಪರಂಪರೆಯಲ್ಲಿ ಮಾತ್ರ ಗುರುತಿಸಬಹುದಾಗಿದೆ.
ಜನಪದರು ನಿರಂತರವಾಗಿ ಕಾಲದಿಂದ ಕಾಲಕ್ಕೆ ತಾವು ಆಚರಿಸಿಕೊಂಡು ಬಂದಿರುವ ಸಂಪ್ರದಾಯ, ಆಚರಣೆ, ಹಾಸ್ಯ, ವಿನೋದವನ್ನು ಬಸವಣ್ಣನ ಕಲ್ಯಾಣದೊಂದಿಗೆ ಸಮೀಕರಿಸಿಕೊಂಡು ಪದ ಕಟ್ಟಿ ಹಾಡುತ್ತಾ ಬಂದಿದ್ದಾರೆ. ಅದು ಓಬಕ್ಕನ ಸೋಬಾನೆ ಪದಗಳಲ್ಲಿ ಹೀಗೆ ವ್ಯಕ್ತವಾಗಿದೆ.
ಗುರುವಿನ ಮನೆಯಾಗೆ
ಅರುವಿನ ಲಯದಾಗೆ
ಅರುವಿನ ಮಂಟಪದ ಮನೆಯಾಗೆ
ಕರುಣ ಕನೆಂದುಕರೆವರು ಸೋಬಾನೆ||
ಬಸವಯ್ಯ ಶ್ರೀಗಂಗೆ
ಕುಶಲದಿಂ ಕರವಿಡಿದು | ಬಸವಣ್ಣ
ಬಂದು ಹಸೆಯಲ್ಲಿ ಕುಳಿತರು ಸೋಬಾನೆ||
ಪದ್ಮಲೋಚನೆ ಗಂಗೆ
ಎದ್ದು ಸೆರಗ ಬಿಗಿದು | ಮುದ್ದು ಬಸವಯ್ಯಗೆ
ಅರಿಶಿಣವ ಧರಿಸ್ಯಾಳೆ ಸೋಬಾನೆ ||
ಗಂಧ ಹಾಕುಸ್ತಿ ಹಿಡುಲಾಗ ಸೋಬಾನೆ
ಗಂಧ ಮೇಲಕ್ಕೆ ಎಳವುತ ಸೋಬಾನೆ
ಅಂದು ಆರುತಿಯಾ ಬೆಳಗುತ ಸೋಬಾನೆ
ಗಂಧ ಮೇಲಕ್ಕೆ ಎಳವುತ ಶ್ರೀಗಂಗೆ
ಬಂದು ಹಸೆಯಲ್ಲಿ ಕುಳಿತಳು ಸೋಬಾನೆ ||
ಬಸವಯ್ಯ ನೀನೊಮ್ಮೆ
ಎಣ್ಣೆ ಅರಿಶಿಣವ ಧರಿಸಪ್ಪ ಸೋಬಾನೆ
ಬಸವಯ್ಯ ಗಂಧ ಹಾಕುಸ್ತಿ ಹಿಡುಲಾಗ
ಅಂದು ಆರುತಿಯಾ ಬೆಳಗುತ
ಬಂದು ಹಸೆಯಲ್ಲಿ ಕುಳಿತರು ಸೋಬಾನೆ ||
ಬಂದು ಹಸೆಯಲ್ಲಿ ಕುಳಿತರು ಬಸವಣ್ಣ
ಸಸಿಮುಖಿಯರೆಲ್ಲ ನಗುತಾರೆ ಸೋಬಾನೆ ||
ಶರ್ತೆಶ ಕೋಟಿಗೆ ವರ್ಕಾಳ ಸಲಹುತ
ನಿತ್ಯಗೆ ಪರಮ ವಿರಕ್ತನಿಗೆ | ಭೂಗಳಿಯ ಕರ್ತನಿಗೆ
ಜೀವ ಕಮ್ಯಾರ್ತನಿಗೆ ಸೋಬಾನೆ
ಇವ ಸದ್ಗುರು ಬಸವದೇವನಿಗೆ ಸೋಬಾನೆ ||
ಅಂತರಂಗನ ಪೇಟೆ ಸಂತೆಗೊಗನ ತಂಗಿ
ಸಿಂತಿಸುತ ಕೊಂಡೆ ರತುನಾವ ಸೋಬಾನೆ ||
ಸಿಂತುಸುತ ಕೊಂಡೆ ರತುನಾದ ಬೆಳಕಿಲಿ
ಕಾಂತೆ ಕೇಳಮ್ಮ ಕೌತುಕವ ಸೋಬಾನೆ ||
ರತುನಾದ ಬೆಳಕಲಿ ಕಾಂತೆ ಕೇಳಮ್ಮ
ಕೌತುಕವ ಶ್ರೀಗುರು ಬಸವಂಗೆ | ಶಿವನ ಕುಮಾರಂಗೆ
ನಾಗಭೂಷಣ ನಮಿತನಿಗೆ ಸೋಬಾನೆ ||
ಸದ್ಗುರು ಬಸವಯ್ಯ ದೇವನಿಗೆ
ಸತ್ಯ ಸದ್ಗುರುವಂಗೆ | ನಿತ್ಯಸುಳ್ಳಾಡಿ ದಿನಗಳಿದೆ
ಮತ್ತುಟ್ಟೊ ಬಾದೆ ಬಿಡದಮ್ಮ ಸೋಬಾನೆ ||
ಪ್ರಸ್ತುತ ದಿನಗಳಲ್ಲಿ ಸ್ಥಾಪಿತ ನೆಲೆಗೆ ತಳ್ಳಿರುವ ಬಸವಣ್ಣನನ್ನು ಒಂದು ಜಾತಿಯ ನಾಯಕನೆಂದು ಬಿಂಬಿಸುವ ಮೂಲಕ ಉಳಿದಂತ ಸಮುದಾಯಗಳು ‘ಇವ ನಮ್ಮವನಲ್ಲ’ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಬಸವಣ್ಣನ ಸುತ್ತ ಸುತ್ತುವರೆದಿರುವ ಮೂಲಭೂತವಾದ ಧೋರಣೆಯು ಪ್ರಮುಖ ಕಾರಣವಾಗಿದೆ. ಈ ಮೂಲಭೂತವಾದಿ ನೆಲೆಗಳು ಜೀವ ತಳೆಯುವುದು ಶಿಷ್ಟ ಸಮುದಾಯದಲ್ಲಿ ಮತ್ತು ಆಧುನಿಕ ಸಂದರ್ಭದ ಶಿಕ್ಷಿತ ಸಮುದಾಯದಲ್ಲಿ. ಆದರೆ ಈ ಅಸಮಾನತೆಯ ಧೋರಣೆಗಳು ಜನಪದರಲ್ಲಿ ವ್ಯಕ್ತವಾಗಿರುವುದು ಕಂಡುಬರುವುದಿಲ್ಲ. ಇದು ಜನಪದರಲ್ಲಿರುವ ವಿಶ್ವಮಾನವ ಪ್ರಜ್ಞೆಯನ್ನು ಅನಾವರಣಗೊಳಿಸುತ್ತದೆ. ಸಮಾಜದ ಒಳಿತಿಗಾಗಿ ನಿಸ್ವಾರ್ಥದಿಂದ ಹೋರಾಡಿದವರು ಯಾರೇ ಆಗಿರಲಿ, ಅವನು ಯಾವುದೇ ಜಾತಿ, ಸಮುದಾಯಕ್ಕೆ ಸೇರಿದ್ದರು ಸಹ ಅವನನ್ನು ತಮ್ಮ ನಾಯಕನೆಂದು, ದೈವವೆಂದು ಆರಾಧಿಸುತ್ತಾರೆ. ಈ ಕಾರಣದಿಂದ ಮೂಲತಃ ಬ್ರಾಹ್ಮಣನಾದ ಶಿವಶರಣ ಬಸವಣ್ಣನನ್ನು ಕೂಡ ಶಿವ ಸ್ವರೂಪಿಯಾಗಿ ಕಂಡುಕೊಡಿದ್ದಾರೆ. ಆತನ ನೋವು ನಲಿವುಗಳನ್ನು ತಮ್ಮ ನೋವು ನಲಿವುಗಳೊಂದಿಗೆ ಸಮೀಕರಿಸಿಕೊಂಡು ಪದಕಟ್ಟಿ ಹಾಡುತ್ತ ಬಂದಿದ್ದಾರೆ.
ಜಾನಪದರು ಸೃಷ್ಟಿಸಿಕೊಂಡು ಬಂದಿರುವ ಈ ಮೇಲಿನ ಹಾಡಿನಲ್ಲಿ ಬಸವಣ್ಣ ಎಲ್ಲಿಯೂ ರಾಜಪ್ರಭುತ್ವದ ಪ್ರತಿನಿಧಿಯಾಗಿ ಕಂಡುಬರುವುದಿಲ್ಲ.
ಜಾನಪದರ ಬದುಕಿನೊಳಗಿನ ಸಾಮಾನ್ಯ ವ್ಯಕ್ತಿಯಾಗಿ ಪ್ರತಿನಿಧಿಸುತ್ತಾನೆ. ಇಲ್ಲಿ ಬಸವಣ್ಣ ಮತ್ತು ಗಂಗಾಬಿಕೆಯರ ಕಲ್ಯಾಣವನ್ನು ಶಿವ ಮತ್ತು ಗಂಗೆಯರೊಂದಿಗೆ ಸಮೀಕರಿಸಿಕೊಂಡು ಬಂದಿದ್ದಾರೆ. ಇದು ಜನಪದ ಪರಂಪರೆಯಲ್ಲಿನ ವಿಶಿಷ್ಟ ದರ್ಶನವಾಗಿ ಕಂಡುಬರುತ್ತದೆ. ಶಿಷ್ಟ ಪರಂಪರೆಯು ಎಲ್ಲವನ್ನು ಹೊಡೆದು ನೋಡುವಂತಹ ಮೂಲಭೂತವಾದಿ ಗುಣಗಳನ್ನು ಸೃಷ್ಟಿಸುತ್ತ ಬಂದಿರುವ ಸಂದರ್ಭದಲ್ಲಿ, ಇದಕ್ಕೆ ಪರ್ಯಾಯವೆಂಬಂತೆ ಜನಪದ ಪರಂಪರೆಯು ಎಲ್ಲವನ್ನು ಸಮೀಕರಿಸಿಕೊಂಡು ಬಂದಿರುವುದನ್ನು ಈ ಪದಗಳಲ್ಲಿ ಗುರುತಿಸಬಹುದಾಗಿದೆ. ಇದು ಶಿಷ್ಟ ಪರಂಪರೆಗೆ ಜನಪದ ಪರಂಪರೆಯು ಒಡ್ಡುತ್ತ ಬಂದಿರುವ ಪ್ರತಿರೋಧದ ನೆಲೆಯೂ ಹೌದು. ಶಿಷ್ಟರು ಅಸಮಾನತೆಯ ವಿರುದ್ಧ ಹೋರಾಡಿದ ಬಸವಣ್ಣನ್ನು ಒಂದು ಜಾತಿ, ಸಮುದಾಯಕ್ಕೆ ಕೇಂದ್ರಿಕರಿಸುವ ಮೂಲಕ ಅನಾರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುತ್ತ ಬಂದಿದ್ದಾರೆ. ಆದರೆ ಜನಪದರು ಸಮಾಜ ಸುಧಾರಕ ಬಸವಣ್ಣನನ್ನು ಶಿವನೊಂದಿಗೆ ಸಮೀಕರಿಸುವ ಮೂಲಕ ಗುಪ್ತಗಾಮಿನಿಯಂತೆ ಆರೋಗ್ಯಕರವಾದ ಸಮಾಜವನ್ನು ಕಟ್ಟುತ್ತ ಬಂದಿದ್ದಾರೆ. ಹೀಗಾಗಿಯೆ ಇಂದಿಗೂ ಬಸವಣ್ಣ ತಳಸಮುದಾಯದ ಜನತೆಯ ಅಂತರಾಳದಲ್ಲಿ ನೆಲೆಯೂರಿದ್ದಾನೆ.
ಇದೇ ಪದ (ಹಾಡು) ದಲ್ಲಿ ಕೊನೆಯದಾಗಿ ಕಂಡುಬರುವ ಸಾಲು ಜನಪದರ ಸ್ವಾಮಿ ನಿಷ್ಠೆಯನ್ನು ಎತ್ತಿಹಿಡಿಯುತ್ತದೆ. ‘ಸತ್ಯ ಸದ್ಗುರುವಂಗೆ ನಿತ್ಯಸುಳ್ಳಾಡಿ ದಿನಗಳಿದೆ ಮತ್ತುಟ್ಟೊ ಬಾದೆ ಬಿಡದಮ್ಮ ಸೋಬಾನೆ’ ಎಂಬುದು ಇವರ ಸ್ವಾಮಿನಿಷ್ಠೆಯ ಪ್ರತೀಕವಾಗಿದೆ. ಈ ನಿಷ್ಠೆಯಿಂದಾಗಿಯೇ ತಳಸಮುದಾಯವು ಮೂಲಭೂತವಾದಿಗಳು ತಮ್ಮ ಅನುಕೂಲಕ್ಕಾಗಿ ಸೃಷ್ಠಿಸಿರುವ ಕಪಟ ತಂತ್ರಗಳನ್ನು ತಮ್ಮ ಬದುಕಿನ ಭಾಗವೆಂಬಂತೆ ಅನಿವಾರ್ಯವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ.
ಬಸವಣ್ಣನ ವಿಚಾರಗಳನ್ನು ಮೀರಿದರೆ, ಆತನ ತತ್ವ ಚಿಂತನೆಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಮುಂದಿನ ಜನ್ಮದಲ್ಲೂ ಇದೇ ನರಕವನ್ನು ಅನುಭವಿಸಬೇಕಾಗುತ್ತದೆ ಎಂಬುದು ಇವರ ನಂಬಿಕೆಯಾಗಿದೆ. ಹೀಗಾಗಿಯೇ ಬಸವಣ್ಣನ ಮೂಲ ತತ್ವ ಸಿದ್ಧಾಂತಗಳು ಇಂದಿಗೂ ಜೀವಂತಿಕೆಯನ್ನು ಪಡೆದುಕೊಂಡಿದ್ದು, ಇವನ್ನು ತಮ್ಮ ಬದುಕಿನ ಒಂದು ಭಾಗವೆಂಬಂತೆ ಮುಂದುವರೆಸಿಕೊಂಡು ಬಂದಿದ್ದಾರೆ.
ಆದರೆ ಮೂಲಭೂತವಾದಿ ಮನಸ್ಥಿತಿಗಳು ಬಸವಣ್ಣನ ವಿಚಾರಧಾರೆಗಳನ್ನು ತೊಡೆದುಹಾಕಿ, ಆತನ ಪ್ರತಿಮೆಯ ಮೂಲಕವೇ ಮೂಲಭೂತವಾದ ಧರ್ಮವೊಂದನ್ನು ಪ್ರತಿಷ್ಠಾಪಿಸಿಕೊಂಡು ರಾಜರೋಷವಾಗಿ ವೈಚಾರಿಕತೆಯ ಹರಿಕಾರನಾದ ಬಸವಣ್ಣನಿಗೆ ಅಪಮಾನವೆಸಗುತ್ತಿದ್ದಾರೆ. ಇಲ್ಲಿ ಜನಪದರು ಬಸವನಿಗೆ ಸುಳ್ಳಾಡಿದರೆ, ತಪ್ಪಾಗಿ ನಡೆದುಕೊಂಡರೆ ನಮಗೆ ಶಿಕ್ಷೆ ತಪ್ಪಿದ್ದಲ್ಲ ಎಂಬುದಾಗಿ ತಮ್ಮೆಲ್ಲ ಕಾರ್ಯಗಳನ್ನು ಆತ್ಮವಿಮರ್ಶೆ ಮಾಡಿಕೊಂಡರೆ, ಶಿಷ್ಟ ಸಮುದಾಯವು ತಾವು ಮಾಡುತ್ತಿರುವ ಕಾರ್ಯ ಬಸವನಿಗೆ ಸಂಪೂರ್ಣ ವಿರುದ್ಧವಾದುದೆಂದು ತಿಳಿದಿದ್ದರೂ ಇವರೆಲ್ಲಿಯೂ ಇಂತಹ ಆತ್ಮವಿಮರ್ಶೆಗೆ ಮುಂದಾಗಿರುವ ನಿದರ್ಶನಗಳು ಚರಿತ್ರೆಯಲ್ಲಾಗಲಿ, ಇವರ ಧರ್ಮಗ್ರಂಥ, ಪುರಾಣಗಳಲ್ಲಾಗಲಿ ಕಂಡುಬರುವುದಿಲ್ಲ. ಇದು ಜನಪದರು ಕಂಡುಕೊಂಡಿರುವ ಬಸವದರ್ಶನ, ಹಾಗೆಯೇ ಅವರ ಜೀವನ ದರ್ಶನವಾಗಿದೆ.
ಜನಪದರು ಅಕ್ಷರ ವಂಚಿರಾದರೂ ಲೋಕಜ್ಞಾನವನ್ನು ದಾರ್ಶನಿಕ ನೆಲೆಯಲ್ಲಿ ಅರಿತುಕೊಂಡವರು. ಇಲ್ಲಿನ ಹಾಡಿನಲ್ಲಿ ಕಂಡುಬರುವಂತೆ ಬಸವಣ್ಣನು ಬಿಜ್ಜಳನ ಆಸ್ಥಾನದಲ್ಲಿ ಆರ್ಥಿಕ ಮಂತ್ರಿಯಾಗಿದ್ದ ವಾಸ್ತವವನ್ನು ಅರಿತುಕೊಂಡಿದ್ದಾರೆ. ಆದರೆ ಈ ಸತ್ಯ ಜನಪದರಿಗೆ ತಿಳಿದಿದ್ದಾದರೂ ಹೇಗೆ ಎಂಬ ಅನುಮಾನ ಕಾಡುತ್ತದೆ. ಅಷ್ಟೇ ಅಲ್ಲದೆ ಇವರು ಬಸವಣ್ಣನನ್ನು ಕೇವಲ ಮಂತ್ರಿಯಾಗಿ ನೋಡುವುದಿಲ್ಲ. ಬಸವಣ್ಣನನ್ನು ಅಧಿಕಾರದ ನೆಲೆಯಲ್ಲಿ ನೋಡದೆ ಸಮಾನತೆಯನ್ನು ಸಾರಿದ ಕ್ರಾಂತಿ ಪುರುಷನಾಗಿ ನೋಡುತ್ತಾರೆ. ಹೀಗಾಗಿಯೇ ಇಲ್ಲಿ ಬಸವಣ್ಣನನ್ನು ಕುರಿತು ವಣ ್ಸುವಾಗ ‘ಗುರುವಿನ ಮನೆಯಾಗೆ ಅರುವಿನ ಲಯದಾಗೆ, ಅರುವಿ ಮಂಟಪದ ಮನೆಯಾಗೆ ಕರುಣ ಕನೆಂದು ಕರೆವರು’ ಎಂಬುದಾಗಿ ಆತನ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಈ ಮಂತ್ರಿಯಾದ ಬಸವಣ್ಣನನ್ನು ತಮ್ಮ ಬದುಕಿಗೆ ಹತ್ತಿರವಾದ ನೆಲೆಯಲ್ಲಿ ಜನಪದರು ಸೃಷ್ಟಿಸಿಕೊಂಡಿದ್ದಾರೆ. ಗುರುವಿನ ಮನೆ ಮತ್ತು ಅರುವಿನ ಲಯ ಎಂಬ ಜನಪದರ ಪರಿಕಲ್ಪನೆಯು ಅನುಭವ ಮಂಟಪದ ಕುರಿತಾಗಿದೆ. ಜನಪದರಿಗೆ ಅನುಭವ ಮಂಟಪವು ಗುರುವಿನ ಮನೆಯಷ್ಟೆ ಅಲ್ಲದೆ ಅರಿವಿನ ತಾಣವು ಹೌದು. ಈ ಸೃಷ್ಟಿಯು ನಾವು ಲಿಖಿತ ಚಾರಿತ್ರಿಕ ದಾಖಲೆಗಳಾದ ವಚನಗಳು ಹಾಗೂ ಶಾಸನಗಳಲ್ಲಿ ಬಸವಣ್ಣನನ್ನು ನೋಡಿರುವುದಕ್ಕಿಂತ ಭಿನ್ನವಾದ ಬಸವ ದರ್ಶನವು ಜನಪದರಲ್ಲಿ ಕಂಡುಬರುತ್ತದೆ.
ಚಿನ್ನದ ಸಿಂಬೆಯ ಸುತ್ತಿ ರನ್ನದ ಕೊಡವ ತಗುದೆ
ಜಲದಿ ಲಗ್ಣಿಯ ಮಗುವಳೆ ಸೋಬಾನೆ ||
ಜಲದಿ ಲಗ್ಣಿಯ ಮಗುವ ಶರಣ ಯ ಕಂಡೆ
ಶಿವಶರಣರು ಜಪವ ಮರೆತಾರೆ ಸೋಬಾನೆ ||
ಶಿವಶರಣರು ಜಪವಿನ್ನು ಮರೆತು ಕೇಳ್ಯಾರೆ
ಯಾವ ಜಂಗಮರ ಮಗಳಮ್ಮ ಸೋಬಾನೆ ||
ಜಂಗಮರ ಸೊಸಿಯಯ್ಯ ಲಿಂಗ ಉಳ್ಳರು ಮಗಳು
ಬಿಂಗಿಬ್ರಹ್ಮನ ಕಿರಿ ತಂಗಿ ಸೋಬಾನೆ ||
ಬಿಂಗಿನೇ ಬ್ರಹ್ಮರ ಕಿರಿ ತಂಗಿ ಗುರುಗಳೇ
ನೀವ್ ಬನ್ನಿರಿ ನಮ್ಮ ಅರಮನೀಗೆ ಸೋಬಾನೆ ||
ಲಿಂಗೇನ ಉಳ್ಳರೇ ನಿಜವುಳ್ಳ ಭಕ್ತರೇ
ಸಂಗಮನಯ್ಯ ಬಸವಣ್ಣ ಸೋಬಾನೆ ||
ಸಂಗುಮನಯ್ಯ ಬಸವಣ್ಣ ಮೂವರೇ
ಬಂದಾರು ಗಿರಿರಾಜರ ಅರಮನೆಗೆ ಸೋಬಾನೆ ||
ಎಂದು ಬರದ ಬಸವಣ್ಣ ಈಗ್ಯಾಕೆ ಬಂದ್ಯಪ್ಪ
ಕುಂದಾರಗೊಳ್ಳ ಮಣ ಗೊಳ್ಳ ಸೋಬಾನೆ ||
ಕುಂದ್ರಾಕೆ ಬಂದಿಲ್ಲ ನಿದ್ರಾಕೆ ಬಂದಿಲ್ಲ
ಸಣ್ಣಳು ಗಿರಿಜಮ್ಮನ ಕೇಳಾ ಬಂದೆ ಸೋಬಾನೆ ||
ತುಪ್ಪನ್ನ ಉಣ್ಣವಳೆ ಪಟ್ಟೆಸೀರೆ ಉಡುವೋಳೆ
ಪಟ್ಟೆ ಮಂಚುದುಲೆ ಮಲಗೋಳೆ ಸೋಬಾನೆ ||
ಪಟ್ಟೇನೆ ಮಂಚುದುಲೇ ಮಲಗುವಳೆ ಗಿರಿಜಮ್ಮ
ಚಿಕ್ಕೊಳು ಗಿರಿಜಮುನ ಕೊಡುಲಾರೆ ಸೋಬಾನೆ ||
ಹಾಲನ್ನ ಉಣ್ಣವಳೇ ಸಾಗಿಸೀರುಡುವೋಳೆ
ಸಾಮ ಮಂಚುದುಲೆ ಮಲಗೋಳೆ ಸೋಬಾನೆ ||
ಸಾಮೇನೆ ಮಂಚುದುಲೆ ಮಲಗೋಳೆ ಗಿರಿಜಮ್ಮ
ಸಣ್ಣಳು ಗಿರಿಜಮುನ ಕೊಡುಲಾರೆ ಸೋಬಾನೆ ||
ಹಟ್ಯಾಗೆ ಗಿರಿಜಮ್ಮ ಕುಟ್ಟುತೇನ್ ಪಾಡ್ಯಾಳೆ
ಅಪ್ಪೋಜಿ ನನ್ನ ಕೊಡುತಾರೆ ಸೋಬಾನೆ ||
ಅಪ್ಪೋಜಿ ನನ್ನ ಕೊಡುತಾರೆ ಕೈಲಾಸದ
ಎಪ್ಪತ್ತೊಂದ್ ಜಡಿಯ ತ್ರಬಸಿಗೆ ಸೋಬಾನೆ ||
ಒಣ್ಯಾಗೆ ಗಿರಿಜಮ್ಮ ಹಾಡುತೇನ್ ಪಾಡ್ಯಾಳೆ
ಅಣ್ಣೋಜಿ ನನ್ನ ಕೊಡುತಾರೆ ಸೋಬಾನೆ ||
ಅಣ್ಣೋಜಿ ನನ್ನ ಕೊಡುತಾರೆ ಕೈಲಾಸದ
ಹನ್ನೊಂದೇ ಜಡೆಯ ತ್ರಬಸಿಗೆ ಸೋಬಾನೆ ||
ಊರಾಗೆ ಮನೆಯಿಲ್ಲ ಅಡುವ್ಯಾಗೆ ಹೊಲವಿಲ್ಲ
ಎತ್ತ ಕಟ್ಟುವರ ಅರಮನೆ ಸೋಬಾನೆ ||
ಎತ್ತೇನೆ ಕಟ್ಟುವ್ರ ಅರಮನೆ ಗಿರಿಜಮ್ಮ
ಅವ್ರನ ನೀನು ಭ್ರಮಿಸಿದ ಸೋಬಾನೆ ||
ಹೋಳಿಗೆ ಕರ್ಜಿಕಾಯಿ ಜೋಳಿ ತುಂಬೈದಾವೆ
ಹೋಳಿಗೆ ಮೂರುಲೋಕ ಸಲುವೈದಾವೆ ಸೋಬಾನೆ ||
ಹೋಳಿಗೆ ಮೂರುಲೋಕ ಸಲುವ್ಯಾವೆ ಕೈಲಾಸದ
ಮುಕ್ಕಣ್ಣ ನೀನು ಜರುದಿಯೋ ಸೋಬಾನೆ ||
ಚಕ್ಕುಲಿ ಕರ್ಜಿಕಾಯಿ ಕಕ್ಕುಸುತುಂಬೈದಾವೆ
ಕಕ್ಕುಸು ಮೂರುಲೋಕ ಸಲಿವ್ಯಾವೆ ಸೋಬಾನೆ ||
ಕಕ್ಕಸ ಮೂರುಲೋಕ ಸಲುವ್ಯಾವೆ ಕೈಲಾಸದ
ಮಾದೇವ್ರು ನೀನು ಜರುದಿಯೋ ಸೋಬಾನೆ ||
ಚಿನ್ನದ ಸರ ಹರಿದಿರಿ ಕೆನ್ನೆಮೇಲ್ ಹೊಡದೀರಿ
ಬಿಟ್ಟು ಬನ್ನಿ ಗಿರಿಜೆ ಗಿರಿದೂರ ಸೋಬಾನೆ ||
ಮುತ್ತಿನ ಸರ ಹರಿದಿರಿ ನೆತ್ತಿಮ್ಯಾಲ್ ಹೊಡದೀರಿ
ಬಿಟ್ಟು ಬನ್ನಿ ಗಿರಿಜೆ ಗಿರಿದೂರ ಸೋಬಾನೆ ||
ಈ ಹಿಂದೆ ತಿಳಿಸಿದಂತೆ ಜಾನಪದರು ಶಿವ ಮತ್ತು ಬಸವಣ್ಣನನ್ನು ಬೇರೆ ಬೇರೆಯಾಗಿ ನೋಡುವುದಿಲ್ಲ. ಇವರಿಬ್ಬರನ್ನು ಒಂದೆಯಾಗಿ ಸ್ವೀಕರಿಸಿದ್ದಾರೆ. ಶಿವ, ಬಸವಣ್ಣ ಹಾಗೂ ಗಿರಿಜೆಯ ಪ್ರಸ್ತಾಪವಿರುವ ಈ ಹಾಡಿನಲ್ಲಿ ಶಿವಶರಣನಾದ ಬಸವಣ್ಣನನ್ನು ಶಿವ ಸ್ವರೂಪಿಯಾಗಿಸಿರುವುದನ್ನು ಕಾಣಬಹುದಾಗಿದೆ. ಮಾನವನ ಸಹಜ ಬದುಕಿನ ನೆಲೆಯಲ್ಲಿ ಚಿತ್ರಿತವಾಗಿರುವ ಬಸವನನ್ನು ಜಾನಪದ ಪರಂಪರೆಯಲ್ಲಿ ಗುರುತಿಸಬಹುದಾಗಿದೆ. ಶಿವ ಮತ್ತು ದಕ್ಷಬ್ರಹ್ಮರ ಕಥೆಯನ್ನು ಹೋಲುವ ಈ ಜಾನಪದ ಹಾಡಿನಲ್ಲಿ ಬಸವನನ್ನು ಸಮೀಕರಿಸಿಕೊಂಡು ಬಂದಿದ್ದಾರೆ. ಇಲ್ಲಿ ಶಿವ ಪಾರ್ವತಿಯರ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಚಿತ್ರಣಗಳನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಬಸವಣ್ಣನ್ನು ಸಮೀಕರಿಸಿಕೊಂಡಿರುವ ಬಗೆಯು ವಿಶೇಷವಾಗಿ ಕಂಡುಬರುತ್ತದೆ. ಇದು ಜಾನಪದ ಬದುಕಿನ ದಾರ್ಶನಿಕ ಆಯಾಮವಾಗಿ ಕಂಡುಬರುತ್ತದೆ.
ಜಾನಪದ ಬದುಕಿನಲ್ಲಿ ದರ್ಶನಗೊಳ್ಳುವ ಬಸವಣ್ಣ ಯಾವುದೇ ಜಾತಿ, ಮತ, ಪಂಥಕ್ಕೆ ಸೀಮಿತವಾಗುವುದಿಲ್ಲ. ಇಲ್ಲಿ ಇವನೊಬ್ಬ ವಿಶ್ವಮಾನವನಾಗಿ ಮುಖಾಮುಖಿಯಾಗುತ್ತಾನೆ. ನಾವು ಹೀಗಾಗಲೇ ಓದಿ ತಿಳಿದಿರುವ ಬಸವಣ್ಣನಿಗಿಂತ ಭಿನ್ನವಾದ ಬಸವಣ್ಣ ನಮ್ಮ ಮೌಖಿಕ ಪರಂಪರೆಯಲ್ಲಿ ಕಂಡುಬರುತ್ತಾನೆ. ನಮ್ಮ ಲಿಖಿತ ಪಠ್ಯ, ಶಾಸನ ಹಾಗೂ ಚರಿತ್ರೆಯ ಗ್ರಂಥಗಳು ಬಸವಣ್ಣನನ್ನು ಒಬ್ಬ ಮಂತ್ರಿಯಾಗಿ, ಯುದ್ದ, ಹೋರಾಟದ ಭಾಗವಾಗಿ ಮಾತ್ರ ಪರಿಚಯಿಸುತ್ತವೆ. ಆದರೆ ಅದರಾಚೆಗಿನ ಮಾನವ ಸಹಜವಾದ ಬಸವಣ್ಣನನ್ನು ನಾವು ಈ ಪ್ರಕಾರಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ಆದರೆ ಮೌಖಿಕ ಪ್ರಕಾರದಲ್ಲಿ ಬಸವಣ್ಣ ರಾಜಪ್ರಭುತ್ವದಿಂದ ಹೊರಬಂದು ಮಾನವ ಸಹಜ ನೆಲೆಯಲ್ಲಿ ಕಂಡುಬರುತ್ತಾನೆ. ಜನಪದ ಪರಂಪರೆಯಲ್ಲಿ ಕಂಡುಬರುವ ಈ ಮಾನವ ಸಹಜ ಬಸವ ದರ್ಶನಕ್ಕೆ ಕಾರಣವೂ ಇದೆ. ಜನಪದ ಬದುಕು ಪ್ರಕೃತಿ ಸಹಜವಾಗಿರುವಂತದ್ದು. ಇಲ್ಲಿ ಯಾರು ರಾಜನಾದರೇನು ಸಾಮಾನ್ಯ ಜನತೆಗೆ ಇದರಿಂದ ಯಾವುದೇ ಪ್ರಯೋಜನವಾಗಿರುವುದು ಕಂಡುಬರುವುದಿಲ್ಲ. ಗ್ರಾಮೀಣ ಭಾಗದಲ್ಲಿ ಒಂದು ಗಾದೆ ಮಾತಿದೆ; ‘ಯಾರು ಮಂತ್ರಿಯಾದರೇನು ರಾಗಿ ಬೀಸುವುದು ತಪ್ಪುವುದಿಲ್ಲ’, ಹಾಗೆಯೇ ‘ರಾಮರಾಜ್ಯದಲ್ಲೂ ರಾಗಿ ಬೀಸುವುದು ತಪ್ಪಿದ್ದಲ್ಲ’ ಎಂಬ ಗಾದೆಮಾತುಗಳು ಸಾಮಾನ್ಯ ಜನತೆಯ ಬದುಕಿನ ಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಅದರಂತೆ ಜಾನಪದರಿಗೆ ರಾಜಪ್ರಭುತ್ವ ಮುಖ್ಯವಾಗುವುದಿಲ್ಲ. ಸಾಮಾನ್ಯ ಜನತೆಯ ಪರವಾಗಿ ಹೋರಾಡಿದ ಸಾಂಸ್ಕøತಿಕ ನಾಯಕ ಮುಖ್ಯವಾಗುತ್ತಾನೆ. ಈ ಕಾರಣದಿಂದಾಗಿಯೇ ನಮ್ಮ ಜನಪದರು ಮಲೆಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಗಾದ್ರಿಪಾಲನಾಯಕ, ಕುಮಾರ ರಾಮರಂತಹ ಸಾಂಸ್ಕøತಿಕ ನಾಯಕರನ್ನು ಸ್ಮರಿಸುತ್ತ ಬಂದಿದ್ದಾರೆಯೇ ಹೊರತು ರಾಜ್ಯಭಾರ ಮಾಡಿದ ಬಿಜ್ಜಳ, ಕೃಷ್ಣದೇವರಾಯರಂತಹ ರಾಜರನ್ನು ಮುಖ್ಯವೆಂದು ಪರಿಗಣ ಸಿರುವುದು ಕಂಡುಬರುವುದಿಲ್ಲ. ಈ ಕಾರಣದಿಂದಾಗಿಯೇ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನಿಗಿಂತ ಮುಖ್ಯವಾಗಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಮಾನವ ಸಹಜ ವ್ಯಕ್ತಿಯಾದ ಬಸವಣ್ಣನನ್ನು ಆರಾಧಿಸುತ್ತ ಬಂದಿದ್ದಾರೆ.
ಶಿಷ್ಟ ಪರಂಪರೆಯು ಬಸವಣ್ಣನನ್ನು ರಾಜಪ್ರಭುತ್ವದ ಒಂದು ಭಾಗವಾಗಿಯೇ ಚಿತ್ರಿಸಿಕೊಂಡು ಬಂದಿದೆ. ಇವರಿಗೆ ಮಾನವ ಸಹಜವಾದ ಬಸವ ಮುಖ್ಯವಾಗುವುದಿಲ್ಲ.
ಅಷ್ಟೇ ಅಲ್ಲದೇ ಈ ಶಿಷ್ಟ ಪ್ರಕಾರವು ಬಸವನನ್ನು ಜಾತಿ, ಮತ, ಪಂಥಗಳಾಚೆ ಹೋಗಲು ಬಿಡುವುದಿಲ್ಲ. ಜಾತಿ, ಮತ, ಪಂಥಗಳನ್ನು ಮೀರಿ ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಬಸವನನ್ನು ಬಲವಂತವಾಗಿ ಸ್ಥಾಪಿತ ವ್ಯವಸ್ಥೆಯ ಅಡಿಯಲ್ಲಿ ಬಂಧಿಸುವ ತಂತ್ರಗಾರಿಕೆ ಶಿಷ್ಟ ಸಾಹಿತ್ಯದ ಒಂದು ಭಾಗವಾಗಿ ಕಂಡುಬರುತ್ತದೆ. ಆದರೆ ಬಸವಣ್ಣನ ಮೂಲ ಆಶಯಗಳು ಮಾತ್ರ ಜಾನಪದ ಬದುಕಿನೊಳಗೆ ಯಥಾ ಪ್ರಕಾರವಾಗಿ ಮುಂದುವರೆದಿವೆ. ಬಸವ ಇನ್ನು ಜೀವಂತವಾಗಿರುವುದಾದರೆ ಅದು ಜಾನಪದರ ಬದುಕಿನಲ್ಲಿ ಮಾತ್ರ ಎಂಬುದನ್ನು ಈ ಮೇಲೆ ಉಲ್ಲೇಖಿಸಿರುವ ಸೋಬಾನೆ ಹಾಡುಗಳಲ್ಲಿ ಗುರುತಿಸಬಹುದಾಗಿದೆ.
( ಲೇಖಕರು: ಕೆ.ಎ.ಓಬಳೆಶ್, ಸಂಶೋಧನ ವಿದ್ಯಾರ್ಥಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ, ಹಂಪಿ)

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243




