ದಿನದ ಸುದ್ದಿ
‘ನ್ಯೂಸ್ನೇಶನ್’ ಸಂದರ್ಶನ : ‘ಅಚ್ಛೇ ದಿನ್’ ಗೆ ತಕ್ಕ ಸಮಾರೋಪ..!
ಮೇ 11 ರಂದು, ಈ ಬಾರಿಯ ಸಾರ್ವತ್ರಿಕ ಚುನಾವಣೆಗಳ 6ನೇ ಘಟ್ಟದಲ್ಲಿ ದೇಶದ ರಾಜಧಾನಿ ದಿಲ್ಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳ ಮತದಾರರು ತಾವು ಮರುದಿನ ಯಾರಿಗೆ ಮತನೀಡಬೇಕು ಎಂದು ಯೋಚಿಸುತ್ತಿರುವ ಸಮಯದಲ್ಲಿ , ‘ನ್ಯೂಸ್ ನೇಶನ್’ ಎಂಬೊಂದು ಸುದ್ದಿ ವಾಹಿನಿ ಪ್ರಸಾರ ಮಾಡಿರುವ ಪ್ರಧಾನ ಮಂತ್ರಿಗಳ ಸಂದರ್ಶನ ಈಗ ಇಡೀ ದೇಶದ ಗಮನ ಸೆಳೆದಿದೆ-ಮುಖ್ಯವಾಗಿ ಬಾಲಾಕೋಟ್ ‘ವಾಯು ಪ್ರಹಾರ’ದ ಕೀರ್ತಿ ತನ್ನದಾಗಿಸಿಕೊಳ್ಳುವ ಭರದಲ್ಲಿ ಪ್ರಧಾನಿಗಳು ಪ್ರದರ್ಶಿಸಿದ ಮೋಡಗಳು ಮತ್ತು ರಾಡಾರ್ ಕುರಿತಂತೆ ‘ಪಂಡಿತರನ್ನು ಬೆರಗಾಗಿಸಿದ’ ತನ್ನ ‘ಕಚ್ಚಾ ಜಾಣ್ಮೆ’ಯಿಂದಾಗಿ.
ಆದರೆ ಈ ಸಂದರ್ಶನದ ಹೆಚ್ಚುಗಾರಿಕೆ ಅಷ್ಟೇ ಅಲ್ಲ, ಒಂದರ್ಥದಲ್ಲಿ, ಬಹಳ ಸಮಯದ ನಂತರ ಕೇಂದ್ರದಲ್ಲಿ, ಕೇವಲ 31% ಮತಗಳಿಂದಲೇ ಆದರೇನಂತೆ, ಸ್ಪಷ್ಟ ಬಹುಮತ ಪಡೆದ ಒಂದು ಪಕ್ಷದ ನೇತೃತ್ವದ ‘ಮಜಬೂತ್’ ಸರಕಾರದ ಐದು ವರ್ಷಗಳ ಆಳ್ವಿಕೆಯ ಒಂದು ಸಾರಾಂಶವನ್ನು ಈ ಸಂದರ್ಶನ ದೇಶದ ಮುಂದೆ ಇಟ್ಟಿದೆ ಎನ್ನಬಹುದು.
ರಾಡಾರ್ಗಳು ಮತ್ತು ಮೋಡಗಳು ಮಾತ್ರವೇ ಈ ‘ಐತಿಹಾಸಿಕ’ ಎನ್ನಬಹುದಾದ ಸಂದರ್ಶನದ ‘ಹೈಲೈಟ್’ ಅಲ್ಲ ಎಂಬುದು ಈಗ ಜನಜನಿತವಾಗಿದೆ. “ತಾವು ಹಣದ ಪರ್ಸ್ ಇಟ್ಟುಕೊಳ್ಳುತ್ತೀರಾ?” ಎಂಬ ಸಂದರ್ಶಕರುಗಳ ಅಮೋಘ ಪ್ರಶ್ನೆಯನ್ನು ಉತ್ತರಿಸುತ್ತ ಜೇಬಲ್ಲಿ ಹಣವೇ ಇಲ್ಲದಿರುವಾಗ ಪರ್ಸ್ ಏಕೆ ಎಂದರು. 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ಸರಕಾರವನ್ನು ಸೇರುವ ವರೆಗೆ, ಅಂದರೆ ಸುಮಾರು 50ವರ್ಷ ವಯಸ್ಸಿನ ವರೆಗೆ ಅವರಿಗೆ ಏನೇನೂ ಆದಾಯವಿರಲಿಲ್ಲವಂತೆ, ಸರಕಾರಕ್ಕೆ ಬಂದಾಗಲೇ ಅಧಿಕಾರಿಗಳು ಅವರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದರಂತೆ. ಹಾಗಿದ್ದರೆ ಅದುವರೆಗೆ ಆರೆಸ್ಸೆಸ್ನ ಸಂಘಟನಾ ಕೆಲಸ ಮಾಡುತ್ತಿದ್ದ ಅವರಿಗೆ ಸಂಘಟನೆ ಏನೂ ಕೊಡುತ್ತಿರಲಿಲ್ಲವೇ ಎಂದು ಹಲವರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
1988ರಲ್ಲೇ ಅವರು ಡಿಜಿಟಲ್ ಕ್ಯಾಮರಾ ಬಳಸಿದ್ದರು, ಟಚ್ ಸ್ಕರೀನ್ ಟ್ಯಾಬ್ಲೆಟ್ ಬಳಿಸಿದ್ದರು, ಇ ಮೇಲ್ ಕೂಡ ಬಳಸುತ್ತಿದ್ದರು ಎಂಬ ಸಂಗತಿಗಳ ಮೇಲೆ ಸಂದರ್ಶನದ ವೇಳೆಯಲ್ಲಿ ಅವರು ಬೆಳಕು ಚೆಲ್ಲಿದರು. ಆ ವೇಳೆಗೆ ಇವೆಲ್ಲ ಭಾರತದಲ್ಲಿ ಬಳಕೆಗೇ ಬಂದಿರಲಿಲ್ಲ ಎಂದು ಕೆಲವು ಪರಿಣಿತರು ಹೇಳುತ್ತಿದ್ದಾರೆ. 1988ರಲ್ಲಿ ಡಿಜಿಟಲ್ ಕ್ಯಾಮರಾದ ತಂತ್ರಜ್ಞಾನ ರೂಪುಗೊಂಡಿತ್ತಷ್ಟೇ, ಅದ್ದರಿಂದ ಅಂತಹ ಕ್ಯಾಮರಾಗಳು ಎಲ್ಲೋ ಕೆಲವು ಇದ್ದು ದುಬಾರಿಯಾಗಿದ್ದವು.10-15 ಲಕ್ಷ ರೂ.ಗಳಷ್ಟು. ಇ ಮೇಲ್ ಬಳಕೆಗೆ ಬಂದದ್ದು 1990ರ ದಶಕದ ನಂತರವೇ. ಚಿಕ್ಕಾಸೂ ಜೇಬಿನಲ್ಲಿರದ ಇವರು ಅದನ್ನೆಲ್ಲ ಹೇಗೆ ಪಡೆದಿರಬಹುದು ಎಂದು ಇನ್ನು ಕೆಲವರು ಬೆರಗಾಗಿದ್ದಾರೆ.
ಬಹುಶಃ ಇವೆಲ್ಲದಕ್ಕೂ ಉತ್ತರದ ಹೊಳಹು ಸಿಕ್ಕಿದ್ದು ಸಂದರ್ಶಕರು ‘ತಾವು ಕಳೆದ ಐದು ವರ್ಷಗಳಲ್ಲಿ ಏನಾದರೂ ಬರೆದಿದ್ದೀರಾ’, ಅಂದರೆ ಕವನ ಬರೆದಿದ್ದೀರಾ ಎಂದು ಕೇಳಿದಾಗ. ಹೌದು, ಇವತ್ತಷ್ಟೇ ಒಂದು ಕವನವನ್ನು ಬರೆದಿದ್ದೇನೆ ಎಂದರು ಮಾನ್ಯ ಪ್ರಧಾನಿಗಳು. ಹಿಂದಿನ ಬಿಜೆಪಿ ಪ್ರಧಾನಿಗಳಂತೆ ಇವರೂ ಕವನ ಬರೆಯುತ್ತಾರೆ ಎಂಬುದು ಬಹಳಷ್ಟು ಮಂದಿಗೆ ಆಶ್ಚರ್ಯವಾದ್ದು ಆಗಲೇ. ಮತ್ತು ಈ ಸಂದರ್ಶನದ ನಿಜ ಚಿತ್ರದ ಆ ಹೊಳಹು ಸಿಕ್ಕಿದ್ದು ಕೂಡ ಆಗಲೇ.
ಕವನ ಓದಿ ಎಂದು ಸಂದರ್ಶಕರು ಹೇಳಿದಾಗ ಪ್ರಧಾನಿಗಳು ಅಲ್ಲಿದ್ದ ಸೇವಕರಿಂದ ತನ್ನ ಫೈಲ್ ಕೇಳಿ ಪಡೆಯುತ್ತಾರೆ, ಒಂದು ಕಾಗದವನ್ನು ಎತ್ತಿಕೊಳ್ಳುತ್ತಾರೆ, ಅದನ್ನು ತೋರಿಸಿ ಎನ್ನುತ್ತಾರೆ ಸಂದರ್ಶಕರು, ಇಲ್ಲ ಅದು ಕೈಬರಹದಲ್ಲಿದೆ, ತನ್ನ ಕೈಬರಹ ಸೊಟ್ಟ-ಸೊಟ್ಟಗಾಗಿದೆ ಎನ್ನುತ್ತಾರೆ. ಈ ವೇಳೆಗೆ ಅವರು ನೋಡುತ್ತಿದ್ದ ಕಾಗದದ ದೃಶ್ಯ ಸಂದರ್ಶನ ನೋಡುತ್ತಿರುವವರಿಗೂ ಕಾಣುತ್ತದೆ. ಆದರೆ ಅಲ್ಲಿ ಕಾಣಿಸುವುದು ಕೈಬರಹದ ಕವನವಲ್ಲ, ಮುದ್ರಿತ ಕವನ, ಅಲ್ಲದೆ ಸಂದರ್ಶಕರು ಕೇಳಿದ ಪ್ರಶ್ನೆಯೂ ಅಲ್ಲಿ ಕಾಣುತ್ತದೆ. ಅದರ ಮುಂದೆ 27 ಎಂದಿದೆ. ಅಂದರೆ 27ನೇ ಪ್ರಶ್ನೆ.
ಈ ಐದು ವರ್ಷಗಳಲ್ಲಿ ಎಂದೂ ಪತ್ರಿಕಾ ಸಮ್ಮೇಳನ ನಡೆಸಿಯೇ ಇರದ ದಾಖಲೆ ನಿರ್ಮಿಸಿರುವ ಈ ಪ್ರಧಾನಿಗಳ ಸಂದರ್ಶನಗಳು ಅಲ್ಲೋ-ಇಲ್ಲೋ ನಡೆದಿವೆ. ಚುನಾವಣೆಗಳು ಹತ್ತಿರ ಬಂದ ಮೇಲೆ ತುಸು ಹೆಚ್ಚಾಗಿವೆ. ಆದರೆ ಇವೆಲ್ಲವೂ ಸಹಾನುಭೂತಿಪರ ಸಂದರ್ಶಕರು ನಡೆಸಿದ್ದು, ಅಂದರೆ ಪ್ರಧಾನ ಮಂತ್ರಿಗಳಿಗೆ ಇಷ್ಟವಾಗುವ ಪ್ರಶ್ನೆಗಳನ್ನು ಮಾತ್ರ ಕೇಳುವ ‘ಸಹೃದಯ’ ಪತ್ರಕರ್ತರದ್ದು. ಅವೆಲ್ಲವೂ ‘ಸ್ಕ್ರಿಪ್ಟೆಡ್’ ಸಂದರ್ಶನಗಳು ಎನ್ನಲಾಗುತ್ತಿತ್ತು. ಅಂದರೆ ಅವರು ಮೊದಲೇ ಪ್ರಶ್ನೆಗಳನ್ನು ಕಳಿಸುತ್ತಾರೆ, ಪ್ರಧಾನಿಗಳ ಕಚೇರಿ ಅವುಗಳಲ್ಲಿ ಉತ್ತರಿಸುವ ಪ್ರಶ್ನೆಗಳನ್ನು ಆಯ್ದು ಕಳಿಸುತ್ತದೆ, ಪತ್ರಕರ್ತರು ಅವನ್ನೇ ಕೇಳುತ್ತಾರೆ. ಆದರೆ ಇದು ಕೇವಲ ಊಹೆಯಾಗಿರುತ್ತಿತ್ತು, ಪ್ರಧಾನಿಗಳ ಬಗ್ಗೆ ಅಸೂಯೆ ಇರುವವರ ಅಪಪ್ರಚಾರ ಇರಬಹುದು ಎಂದೂ ಭಾವಿಸಲಾಗಿತ್ತು.
ಆದರೆ ಈ ಸಂದರ್ಶನ ಅದನ್ನು ದೃಢಪಡಿಸಿದೆ ಎಂದು ಬಹಳಷ್ಟು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ. ಅದೇನೇ ಇರಲಿ, ಬಾಲಾಕೋಟ್ ವಿಮಾನ ದಾಳಿಯ ಬಗ್ಗೆ ಹೇಳಿದ್ದು ಚುನಾವಣೆಯ ಸಂದರ್ಭದಲ್ಲಿ ಅರ್ಥವಾಗುತ್ತದೆ, ಆದರೆ ಉಳಿದವುಗಳು- ಪರ್ಸ್ ಇಲ್ಲದಿರುವುದು, ಡಿಜಿಟಲ್ ಕ್ಯಾಮರಾ, ಇ-ಮೇಲ್, ಟ್ಯಾಬ್ಲೆಟ್ ಮತ್ತು ಈ ಮುದ್ರಿತ ಕವನ, ಈ ಮೇಲ್ನೋಟಕ್ಕೆ ಸುಳ್ಳಿರಬಹುದು ಎಂದೇ ಸಂದೇಹ ಮೂಡಿಸುವ ವಿಚಾರಗಳು ಯಾಕೆ ಬೇಕಿತ್ತು ಎಂಬ ಪ್ರಶ್ನೆ ಹಲವರಲ್ಲಿ ಎದ್ದಿದೆ.
ಆದರೆ ಕಳೆದ ಐದು ವರ್ಷಗಳಲ್ಲಿ ಒಂದೊಂದಾಗಿ ಆಶ್ವಾಸನೆಗಳು ಜುಮ್ಲಾಗಳಾಗಿ ಬಿಟ್ಟದ್ದು, ಮತ್ತು ನಡುನಡುವೆ ಸಮಾರಂಭಗಳಲ್ಲಿ, ಪ್ರತಿಪಕ್ಷಗಳನ್ನು ಟೀಕಿಸುವ ಸಂದರ್ಭಗಳಲ್ಲಿ, ವಿಶೇಷವಾಗಿ ಚುನಾವಣೆಗಳ ಸಂದರ್ಭದಲ್ಲಿ, ಹೊಮ್ಮಿ ಬಂದು ಆಮೇಲೆ ಶುದ್ಧ ಸುಳ್ಳುಗಳು ಒಂದು ದೃಢಪಟ್ಟಿದ್ದು(ಉದಾ: ಯಾವ ಕಾಂಗ್ರೆಸ್ ಮುಖಂಡರೂ ಭಗತ್ ಸಿಂಗ್ರನ್ನು ಜೈಲಿನಲ್ಲಿ ಭೇಟಿಯಾಗಿರಲಿಲ್ಲ!) ನೆನಪಿರುವವರಿಗೆ ಇದರಿಂದ ಆಶ್ಚರ್ಯವಾಗಲಿಕ್ಕಿಲ್ಲ.
ಆದರೂ, ಬಾಲಾಕೋಟ್ ವಾಯುದಾಳಿಗೆ ಆದೇಶ ನೀಡಿದ ಪರಿಯ ಬಗ್ಗೆ ಅವರು ಹೇಳಿರುವುದು ನಿಜವೇನು, ನಿಜವಾಗಿದ್ದರೆ ಪರಿಣಿತರಾರೂ ಅದು ತಪ್ಪು ಎಂದು ಹೇಳುವ ಧೈರ್ಯ ತೋರಲಿಲ್ಲವೇ, ದೇಶದ ಭದ್ರತೆಯಂತಹ ಗಹನವಾದ ಪ್ರಶ್ನೆಗಳಲ್ಲಿ ಇಂತಹ ‘ಕಚ್ಚಾ ಜಾಣ್ಮೆ’ ಮತ್ತು ಪರಿಣಿತರ ಮೌನ ಅಪಾಯಕಾರಿಯಲ್ಲವೇ ಎಂದು ಹಲವರಿಗೆ ಆತಂಕ ಉಂಟಾಗಿದೆ. ನೋಟುರದ್ಧತಿಯ ಅನುಭವ ನಮ್ಮ ಮುಂದಿದೆ ಎನ್ನುತ್ತಾರೆ ಅವರು. ಈ ಬಾಲಾಕೋಟ್ ವಾಯುದಾಳಿಯನ್ನು ಮಳೆ ಸುರಿಯುತ್ತಿದ್ದಾಗ ಮಾಡಿದ್ದರಿಂದಲೇ ನಮ್ಮ ಯುದ್ಧವಿಮಾನಗಳು ಹೊತ್ತಿದ್ದ ಒಂದು ಕ್ಷಿಪಣಿ ಕೆಲಸ ಮಾಡದೆ ಈ ದಾಳಿಯ ನಿಜವಾದ ಫಲಿತಾಂಶ ನಮಗೆ ತಿಳಿಯದಂತೆ ಆಗಿರಬಹುದೇ ಎಂದೂ ಕೆಲವು ರಕ್ಷಣಾ ಪರಿಣಿತರು ಊಹಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.
( ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ: ವಿವಿಐಎಸ್‌ನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ
ಸುದ್ದಿದಿನ,ಬೆಂಗಳೂರು: ವಿಶ್ವ ವೆಂಕಟೇಶ್ವರ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ “ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ” ಎಂಬ ಆಶಯದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಟ್ಟಾ ಬಾಲಾಜಿ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಅವರು, ದೇಶಭಕ್ತಿ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬರೂ ತಮ್ಮ ಮೂಲಭೂತ ಕರ್ತವ್ಯಗಳನ್ನು ಅರಿತು, ತಮ್ಮ ಸಾಮರ್ಥ್ಯ, ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದರಲ್ಲಿ ಅಡಗಿದೆ ಎಂದು ಕರೆ ನೀಡಿದರು. ಪ್ರಾಮಾಣಿಕ ಪರಿಶ್ರಮ ಮತ್ತು ಜವಾಬ್ದಾರಿಯುತ ನಾಗರಿಕತ್ವವೇ ಬಲಿಷ್ಠ ಭಾರತದ ನಿರ್ಮಾಣಕ್ಕೆ ಅಡಿಪಾಯ ಎಂದರು.
ವಿದ್ಯಾರ್ಥಿಗಳ ಮನೋಜ್ಞ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಪ್ರದರ್ಶನಗಳು ಹಾಗೂ ಶಿಸ್ತುಬದ್ಧ ಮೆರವಣಿಗೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಕೊಡಿಪಾಳ್ಯ ಮತ್ತು ಕೆಂಗೇರಿಯಲ್ಲಿ 445 ಮೀಟರ್ ಇರುವ ವಿಶೇಷ ಧ್ವಜದೊಂದಿಗೆ ವಿದ್ಯಾರ್ಥಿಗಳ ಮೆರವಣಿಗೆ ಗಮನ ಸೆಳೆಯಿತು. ಶತಪ್ರತಿಶತ ಫಲಿತಾಂಶ ಸಾಧಿಸಿದ ಬೋಧಕ ಸಿಬ್ಬಂದಿಯನ್ನು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನೇರ ಪ್ರಸಾರವೂ ನಡೆಯಿತು. 2,500 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ವಿಶೇಷ ಮಧ್ಯಾಹ್ನದ ಊಟ ಮತ್ತು ಸಿಹಿತಿಂಡಿ ವ್ಯವಸ್ಥೆ ಮಾಡಲಾಗಿದ್ದು, ಒಗ್ಗಟ್ಟು ಮತ್ತು ದೇಶಪ್ರೇಮದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಈ ಸಂದರ್ಭದಲ್ಲಿ ವಿವಿಐಎಸ್ ನ ಅಕಾಡೆಮಿಕ್ ಅಡ್ವೈಸರ್ ಡಾ. ರಾಜೇಶ್ವರಿ ದತ್ತಾತ್ರಿ, ವಿವಿ ವಿದ್ಯಾಸಂಸ್ಥೆಯ ಡೀನ್ ಶ್ರೀ ಕಿಶೋರ್ ಕಟ್ಟ, ಪ್ರಾಂಶುಪಾಲೆ ಶ್ರೀಮತಿ ಲಕ್ಷ್ಮಿ ಟಿ.ಎನ್, ಕೆಪಿಸಿ ಪಿಯು ಕಾಲೇಜು ಪ್ರಾಂಶುಪಾಲರಾದ ಡಾ. ಐ. ಚೆನ್ನಾರೆಡ್ಡಿ, ಸಿಬಿಎಸ್‌ಇ ಪ್ರಾಂಶುಪಾಲರಾದ ಪ್ರೊ. ಪ್ರಹ್ಲಾದ, ಉಪಪ್ರಾಂಶುಪಾಲರಾದ ಶ್ರೀ ಮದನ್ ರಾಜ್, ಪ್ರಾಂಶುಪಾಲರಾದ ಡಾ. ಸುರೇಶ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ
ಸುದ್ದಿದಿನ,ಚಿತ್ರದುರ್ಗ : ಸ್ವಾತಂತ್ರ್ಯವೆಂದರೆ ಕೇವಲ ಹಕ್ಕುಗಳ ಅನುಭವವಲ್ಲ, ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಸಹ ಹೌದು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸದಾ ಸ್ಮರಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಬೆಳೆಸಿಕೊಂಡು ರಾಷ್ಟ್ರದ ಭವಿಷ್ಯದ ಉತ್ತಮ ನಾಗರಿಕರಾಗಬೇಕು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷರಾದ ರೊ. ಯೋಗೀಶ್ ಸಹ್ಯಾದ್ರಿ ತಿಳಿಸಿದರು.
ನಗರದ ರೋಟರಿ ವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಬಳಿಕ ಮಾತನಾಡಿದ ಅವರು ಮಾತನಾಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿರುವುದು ಅನೇಕ ಮಹನೀಯರ ತ್ಯಾಗದ ಫಲ. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅಸಂಖ್ಯಾತ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅವರು ಕಂಡ ಕನಸಿನ ಭಾರತವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸದಾ ಸ್ಮರಿಸಿ, ಏಕತೆ, ಶಿಸ್ತು, ಶಿಕ್ಷಣ ಮತ್ತು ಸೇವೆಯ ಮೂಲಕ ಶ್ರೇಷ್ಠ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಅವರು ಕರೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ದೇಶದ ಹೆಮ್ಮೆ ಮತ್ತು ಭವಿಷ್ಯದ ಆಶಾಕಿರಣಗಳಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ. PHF. PDG. ಮಧುಪ್ರಸಾದ್ ಕೆ. ಅವರು ವಹಿಸಿದ್ದರು. ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವುದು ಇಂದಿನ ಯುವಜನತೆಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ನಮಗೆ ಹಕ್ಕುಗಳನ್ನು ನೀಡಿದಂತೆ ಕರ್ತವ್ಯಗಳನ್ನೂ ನೀಡಿದೆ. ಸಂವಿಧಾನವನ್ನು ಗೌರವಿಸುವುದು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು, ಪರಿಸರವನ್ನು ಸಂರಕ್ಷಿಸುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಟ್ರಸ್ಟ್ ನ ಖಜಾಂಚಿ ರೊ. ಸತ್ಯನಾರಾಯಣಾಚಾರ್,
ರೊ. ಜಿ.ಎ. ವಿಶ್ವನಾಥ್ ಬಾಬು, ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ಸದಸ್ಯರು, ಹಾಗೂ ರೊ. ಶಂಕರಪ್ಪ, ಆಡಳಿತಾಧಿಕಾರಿ, ರೋಟರಿ ವಿದ್ಯಾಲಯ, ಉಪಸ್ಥಿತರಿದ್ದು , ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ, ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಮಾಡಲು ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ರಾಷ್ಟ್ರದ ಅಭಿವೃದ್ಧಿಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಭಾಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ವಿದ್ಯಾರ್ಥಿಗಳ ಪೋಷಕರು ಕೂಡ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಉಮಾದೇವಿ ಹೆಚ್.ಎಂ. ಅವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಶಿಕ್ಷಕಿ ಜ್ಯೋತಿ ಆರ್. ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಹಿರಿಯ ಶಿಕ್ಷಕಿ ಗೌರಮ್ಮ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ರೋಟರಿ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ
ಸುದ್ದಿದಿನ,ದಾವಣಗೆರೆ: ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ, ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನವಿಲೇಹಾಳು ಗ್ರಾಮದಲ್ಲಿ ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಏಕತೆ, ಸಾಮರಸ್ಯ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕುರಿತು ಸಂದೇಶ ನೀಡಲಾಯಿತು.
ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಜಾಫರ್ ಅವರು ಮಾತನಾಡಿ, ಸ್ವಾತಂತ್ರ್ಯವೆಂಬುದು ಕೇವಲ ಆಚರಣೆಗೆ ಸೀಮಿತವಾಗದೆ, ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ನ್ಯಾಯ ಹಾಗೂ ಅಭಿವೃದ್ಧಿಯ ಅವಕಾಶ ದೊರೆಯುವಂತಾಗಬೇಕು. ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ಕೋರಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ
-
ದಿನದ ಸುದ್ದಿ21 hours agoನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ
-
ದಿನದ ಸುದ್ದಿ17 hours agoಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ
-
ದಿನದ ಸುದ್ದಿ57 minutes agoಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ: ವಿವಿಐಎಸ್‌ನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ

