ಬಹಿರಂಗ
‘ಕೋರೆಗಾಂವ್’ ಎಂಬ ಶೋಷಿತರು ನಡೆಸಿದ ಶ್ರೇಷ್ಠ ಯುದ್ಧದ ಬಗ್ಗೆ
- ರಘೋತ್ತಮ ಹೊಬ
ಭಾರತದ ಇತಿಹಾಸದಲ್ಲಿ ನಡೆದಿರುವ ವಿವಿಧ ಯುದ್ಧಗಳಲ್ಲಿ, ಬರೇ ಆ ರಾಜರು ಈ ರಾಜರ ವಿರುದ್ಧ, ಮಹಮ್ಮದೀಯರು ಬ್ರಿಟಿಷರ ವಿರುದ್ಧ, ಬ್ರಿಟಿಷರು ಫ್ರೆಂಚರ ವಿರುದ್ಧ, ಫ್ರೆಂಚರು ಡಚ್ಚರ ವಿರುದ್ಧ… ಹೀಗೆ ಸಾಮ್ರಾಜ್ಯಶಾಹಿಗಳು ನಡೆಸಿದ ಯುದ್ಧಗಳ ಬಗ್ಗೆಯಷ್ಟೆ ಚರಿತ್ರೆ ದಾಖಲಿಸಲಾಗಿದೆ.
ಆದರೆ ಶೋಷಿತರು ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿದ, ನಡೆಸಿ ಗೆಲುವು ದಾಖಲಿಸಿದ ಬಗ್ಗೆ ಎಲ್ಲಿಯೂ ದಾಖಲಾಗಿಲ್ಲ! ಇತಿಹಾಸ ಕೃತಿಯ ಯಾವ ಪುಟದಲ್ಲೂ ಅಂತಹದ್ದೊಂದು ಯುದ್ಧದ ಬಗ್ಗೆ ಉಲ್ಲೇಖವಿಲ್ಲ. ಯಾಕೆ? ಖಂಡಿತ ಅದು ಶೋಷಿತ ಸಮುದಾಯದ ಬಗೆಗಿನ ಇತಿಹಾಸಕಾರರ ದಿವ್ಯ ತಾತ್ಸಾರವಷ್ಟೆ!
ಈ ನಿಟ್ಟಿನಲ್ಲಿ ಶೋಷಿತರು ಶೋಷಕ ಶಕ್ತಿಗಳ ವಿರುದ್ಧ ಸಾರಿದ ಯುದ್ಧದ ಬಗ್ಗೆ ಹೇಳಲೇಬೇಕಾಗುತ್ತದೆ. ಖಂಡಿತ, ಆ ಯುದ್ಧ ಕೋರೇಗಾಂವ್ ಯುದ್ಧ. ಭೀಮಾ ನದಿಯ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೇಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ.
ಹಾಗಿದ್ದರೆ ಆ ಯುದ್ಧ ಯಾರ ವಿರುದ್ಧ ನಡೆಯಿತು? ಯಾರು ನಡೆಸಿದರು? ಎಂಬ ಪ್ರಶ್ನೆ ಮೂಡುತ್ತದೆ. ಈ ನಿಟ್ಟಿನಲ್ಲಿ 1818ರ ಹೊಸ ವರ್ಷದ ಸಂದರ್ಭದಲ್ಲಿ ನಡೆದ ಆ ಯುದ್ಧದ details ಹೇಳುವುದಕ್ಕೂ ಮುನ್ನ ಆ ಸಮಯದಲ್ಲಿ ಇದ್ದ ಸಾಮಾಜಿಕ ಸ್ಥಿತಿಗತಿಯನ್ನು ದಾಖಲಿಸುವುದು ಸೂಕ್ತವೆನಿಸುತ್ತದೆ.
ಹೌದು, 1818 ಅದು ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದ ಕಾಲ. ಆಗಿನ ಪೇಶ್ವೆ ಅಥವಾ ಬ್ರಾಹ್ಮಣ ಮಂತ್ರಿ 2ನೇ ಬಾಜೀರಾಯನಾಗಿದ್ದ. ಹಾಗಿದ್ದರೆ ಪೇಶ್ವೆಗಳ ಆ ಕಾಲದಲ್ಲಿ ಸಾಮಾಜಿಕ ಪರಿಸ್ಥಿತಿ ಹೇಗಿತ್ತು? ಬಾಬಾಸಾಹೇಬ್ ಅಂಬೇಡ್ಕರರ ಪ್ರಕಾರವೇ ಹೇಳುವುದಾದರೆ “ಮರಾಠರ ರಾಜ್ಯದಲ್ಲಿ ಪೇಶ್ವೆಗಳ ಆಡಳಿತದಲ್ಲಿ, ಅಸ್ಪೃಶ್ಯರ ನೆರಳು ಹಿಂದೂವೊಬ್ಬನ ಮೇಲೆ ಬಿದ್ದು ಆತ ಮಲಿನವಾಗುವುದನ್ನು ತಪ್ಪಿಸಲು ಸಾರ್ವಜನಿಕ ಬೀದಿಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು.
ಒಂದು ವೇಳೆ by mistake ಅಸ್ಪೃಶ್ಯನೊಬ್ಬನನ್ನು ಹಿಂದೂವೊಬ್ಬ ಮುಟ್ಟಿದರೆ ಆಗ ಆ ಹಿಂದೂ ಮಲಿನಗೊಳ್ಳುವುದನ್ನು ತಪ್ಪಿಸಲು ಅಸ್ಪೃಶ್ಯನು ತನ್ನ ಕುತ್ತಿಗೆಗೆ ಅಥವಾ ಮುಂಗೈಗೆ ಕಪ್ಪು ದಾರವೊಂದನ್ನು ಕಟ್ಟಿಕೊಳ್ಳುವುದು ಆ ದಿನಗಳಲ್ಲಿ ಕಡ್ಡಾಯವಾಗಿತ್ತು. ಅಲ್ಲದೆ ಪೇಶ್ವೆಗಳ ಆಗಿನ ರಾಜಧಾನಿಯಾದ ಪೂನಾದಲ್ಲಿ ಅಸ್ಪೃಶ್ಯನೋರ್ವ ನಡೆದ ದಾರಿಯಲ್ಲಿ ಹಿಂದೂಗಳು ನಡೆದು ಸದರಿ ಹಿಂದೂ ಮಲಿನಗೊಳ್ಳುವುದನ್ನು ತಡೆಯಲು ಅಸ್ಪೃಶ್ಯನು ತನ್ನ ನಡುವಿಗೆ ಹಗ್ಗವೊಂದನ್ನು ಬಿಗಿದು ಅದಕ್ಕೆ ಕಸಪೊರಕೆಯೊಂದನ್ನು ಕಟ್ಟಿ ತಾನು ನಡೆದ ದಾರಿಯನ್ನು ತಾನೇ ಗುಡಿಸಬೇಕಾಗಿತ್ತು!
ಅದಲ್ಲದೆ ಅದೇ ಪೂನಾ ನಗರದಲ್ಲಿ ಅಕಸ್ಮಾತ್ ಅಸ್ಪೃಶ್ಯನೊಬ್ಬ ದಾರಿಯಲ್ಲಿ ಉಗಿದರೆ ಮತ್ತು ಆ ಉಗುಳನ್ನು ಹಿಂದೂವೊಬ್ಬ ತುಳಿದು ಆತ ಮಲಿನವಾಗುವುದನ್ನು ತಪ್ಪಿಸಲು ಅಸ್ಪೃಶ್ಯ ತನ್ನ ಕೊರಳಿಗೆ ಮಣ್ಣಿನ ಮಡಕೆಯೊಂದನ್ನು ನೇತುಹಾಕಿಕೊಳ್ಳಬೇಕಾಗುತ್ತಿತ್ತು ಮತ್ತು ಉಗಿಯಬೇಕೆಂದಾಗ ಆತ ಆ ಮಡಕೆಯಲ್ಲಿ ಉಗಿಯಬೇಕಾಗಿತ್ತು”! ಪೇಶ್ವೆಗಳ ಕಾಲದ ಅಸ್ಪೃಶ್ಯರ ಸ್ಥಿತಿಗತಿಯನ್ನು ಅಂಬೇಡ್ಕರರು ಹೀಗೆ ವಿವರಿಸುತ್ತಾ ಹೋಗುತ್ತಾರೆ.
ಹೀಗಿರುವಾಗ ಇಂತಹ ವಿಚಿತ್ರ ಸಾಮಾಜಿಕ ದುಸ್ಥಿತಿಯ ಸಂದರ್ಭದಲ್ಲಿ ಮಾಹಾರಾಷ್ಟ್ರದ ಅಸ್ಪೃಶ್ಯರಾದ ಮಹಾರರಿಗೆ ದೌರ್ಜನ್ಯಕೋರ ಇಂತಹ ಪೇಶ್ವೆಗಳ, ಮತ್ತವರ ಸಾಮ್ರಾಜ್ಯದ ವಿರುದ್ಧ ಹೋರಾಡುವ ಅದ್ಭುತ ಅವಕಾಶವೊಂದು ಬರುತ್ತದೆ. ಹೌದು, ಅದೇ ಕೋರೇಗಾಂವ್ ಯುದ್ಧ!
ಅಂದಹಾಗೆ ಇದೇನು ಅಸ್ಪೃಶ್ಯರು ಮೇಲ್ಜಾತಿಗಳ ವಿರುದ್ಧ, ಅವರ ದೌರ್ಜನ್ಯದ ವಿರುದ್ಧ ನೇರಾನೇರ ಕಾದಾಟಕ್ಕಿಳಿದದ್ದಲ್ಲ. ಆದರೆ ಯಾವ ಜಾತಿ/ವರ್ಣವ್ಯವಸ್ಥೆಯಲ್ಲಿ ಶಸ್ತ್ರಹಿಡಿಯುವುದು ಇಂತಹ ಜಾತಿಗೆ/ವರ್ಣಕ್ಕೆ ಎಂದು ಮೀಸಲಾಗಿತ್ತೋ ಅಂತಹ ಶ್ರೇಣೀಕೃತ ಜಾತಿವ್ಯವಸ್ಥೆಯ ಸಮಯದಲ್ಲಿ ಬ್ರಿಟಿಷರ ಪರವಾಗಿ, ಅವರ ಸೇನೆಯಲ್ಲಿ ಸೈನಿಕರಾಗಿಯಷ್ಟೆ ಅಸ್ಪೃಶ್ಯ ಮಹಾರರು ಕಾದಾಡಿದ್ದು.
ಹಾಗಿದ್ದರೆ ಆ ಹೋರಾಟ ಹೇಗಿತ್ತು? ಬಾಬಾಸಾಹೇಬ್ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು, ಸಂಪುಟ 17, ಭಾಗ 3(ಇಂಗ್ಲೀಷ್ ಆವೃತ್ತಿ) ಪುಟ.4ರ ಪ್ರಕಾರ ಹೇಳುವುದಾದರೆ “ಭೀಮಾನದಿಯ ತೀರದಲ್ಲಿದ್ದ ಆ ಕೋರೇಗಾಂವ್ ರಣಾಂಗಣದಲ್ಲಿ ಬಾಂಬೆ ರೆಜಿಮೆಂಟ್‍ನ ಕೇವಲ 500 ಜನ ಮಹಾರ್ ಕಾಲ್ದಳದ ಸೈನಿಕರು ಪೂನಾದ 250 ಅಶ್ವದಳದವರ ನೆರವಿನೊಂದಿಗೆ, ಜೊತೆಗೆ ಮದ್ರಾಸ್‍ನ 24 ಗನ್‍ಮೆನ್‍ಗಳ ಸಹಾಯದಿಂದ 20000 ಅಶ್ವದಳವಿದ್ದ, 8000ದಷ್ಟು ಕಾಲ್ದಳವಿದ್ದ ಪೇಶ್ವೆಯ ಬೃಹತ್ ಸೇನೆಯ ವಿರುದ್ಧ 1818 ಜನವರಿ 1ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಸತತ 12ಗಂಟೆಗಳು ಯಾವುದೇ ವಿಶ್ರಾಂತಿ ಆಯಾಸವಿಲ್ಲದೆ, ಆಹಾರ-ನೀರಿನ ಪರಿವಿಲ್ಲದೆ ಕ್ಯಾಪ್ಟನ್ ಎಫ್.ಎಫ್.ಸ್ಟಾಂಟನ್‍ನ ನೇತೃತ್ವದಲ್ಲಿ ಹೋರಾಡಿ ಅಭೂತಪೂರ್ವ
ಗೆಲುವು ಸಾಧಿಸುತ್ತಾರೆ”!
ಸವಿಸ್ತಾರವಾಗಿ ಹೇಳುವುದಾದರೆ ಕ್ಯಾಪ್ಟನ್ ಸ್ಟಾಂಟನ್‍ನ ನೇತೃತ್ವದಲ್ಲಿ ಸಿರೂರ್‍ನಿಂದ 1818 ಡಿಸೆಂಬರ್ 31ರ ರಾತ್ರಿ ಹೊರಟ ಮಹಾರ್ ಸೇನೆ ಸತತ 27 ಕಿ.ಮೀ ನಡೆದು ಮಾರನೇ ದಿನ 1ನೇ ತಾರೀಖು ಬೆಳಿಗ್ಗೆ ಕೋರೇಗಾಂವ್ ರಣಾಂಗಣವನ್ನು ತಲುಪುತ್ತದೆ. ಅದೇ ಸಮಯದಲ್ಲಿ ಮೂರೂ ದಿಕ್ಕುಗಳಿಂದಲೂ ತಲಾ 600ರಷ್ಟಿದ್ದ ಪೇಶ್ವೆಯ ಕಾಲ್ದಳದ 3 ತುಕಡಿಗಳು ಕ್ಯಾಪ್ಟನ್ ಸ್ಟಾಂಟನ್‍ನ ಪಡೆಯನ್ನು ಸುತ್ತುವರೆಯುತ್ತವೆ.
ಅಲ್ಲದೆ ಪೇಶ್ವೆಯ ಈ ಸೈನ್ಯದ ಬೆಂಬಲಕ್ಕೆ ಬೃಹತ್ ಅಶ್ವದಳ, ರಾಕೆಟ್‍ದಳ ಬೇರೆ! ಒಟ್ಟಾರೆ ಸಂದಿಗ್ಧ ಸ್ಥಿತಿಯಲ್ಲಿ ಬ್ರಿಟಿಷ್ ಸೇನೆಯು ಪೇಶ್ವೆಗಳ ಕಾಲ್ದಳ ಮತ್ತು ಫಿರಂಗಿದಳಗಳಿಂದ ಸಂಪೂರ್ಣ ವೃತ್ತಾಕಾರ ಮಾದರಿಯಲ್ಲಿ ಸುತ್ತುವರಿಯಲ್ಪಡುತ್ತದೆ. ಹೇಗೆಂದರೆ ಪಕ್ಕದಲ್ಲೇ ಇದ್ದ ಭೀಮಾನದಿಗೆ ಹೋಗುವ ದಾರಿಗಳೆಲ್ಲ ಬಂದ್ ಆಗುವ ಮಟ್ಟಿಗೆ! ಕಡೆಗೆ ವಿಧಿಯಿಲ್ಲದೆ ಎರಡೂ ದಳಗಳೂ ಕೋರೇಗಾಂವ್ ಗ್ರಾಮವನ್ನು ಪ್ರವೇಶಿಸುತ್ತವೆ.
ಕೋರೇಗಾಂವ್ ಗ್ರಾಮವನ್ನು ಪ್ರವೇಶಿಸಿದ್ದೇ ತಡ ಎರಡೂ ಪಡೆಗಳೂ ಬೀದಿಬೀದಿಗಳಲ್ಲಿ, ಮನೆ-ಗುಡಿಸಲುಗಳ ಮುಂದೆ ಕೈಕೈ ಮಿಲಾಯಿಸುತ್ತಾ ನೇರಾ-ನೇರ ಕಾದಾಟಕ್ಕಿಳಿಯುತ್ತವೆ. ಅದರಲ್ಲೂ ಬಹುತೇಕ ಮಹಾರರೇ ತುಂಬಿದ್ದ ಬ್ರಿಟಿಷ್ ಸೈನ್ಯಕ್ಕೆ ಬಹಳ ಹಾನಿಯಾಗುತ್ತದೆ. ಆದರೂ ಎದೆಗುಂದದ ಮಹಾರ್ ಸೈನಿಕರು ಅತ್ಯುತ್ಕೃಷ್ಟ ಧೈರ್ಯದಿಂದ ಮುನ್ನುಗ್ಗುತ್ತಲೇ ಹೋಗುತ್ತಾರೆ. ಪಡೆಯ ನೇತೃತ್ವ ವಹಿಸಿದ್ದ ಕ್ಯಾಪ್ಟನ್ ಸ್ಟಾಂಟನ್‍ನಂತೂ “ಕಡೆಯ ಸೈನಿಕನಿರುವ ತನಕ, ಕಡೆಯ ಬುಲೆಟ್ ಇರುವ ತನಕ ಹೋರಾಡುತ್ತಲೇ ಇರಿ” ಎಂದು ಹುರಿದುಂಬಿಸುತ್ತಲೇ ಇರುತ್ತಾನೆ.
ಪರಿಣಾಮವಾಗಿ ಮಹಾರ್ ಸೈನಿಕರು ಅತ್ಯಮೋಘ ಧೈರ್ಯದಿಂದ, ಎಲ್ಲಾ ದುರಾದೃಷ್ಟಗಳ ನಡುವೆ ಹೋರಾಡುತ್ತ ವೀರಾವೇಶದಿಂದ ಮುನ್ನುಗ್ಗುತ್ತಾರೆ. ಅಂದಹಾಗೆ ಮಹಾರ್ ಸೈನಿಕರ ಅಂತಹ ಮುನ್ನುಗ್ಗುವಿಕೆಯಲ್ಲಿ ಅದೆಂತಹ, ಅದೆಷ್ಟು ಶತಮಾನಗಳ ನೋವಿನ ಆಕ್ರೋಶವಿತ್ತು? ತತ್ಫಲವಾಗಿ ಬಹುಸಂಖ್ಯೆಯಲ್ಲಿದ್ದರೂ ಕೂಡ ಪೇಶ್ವೆಯ ಸೈನ್ಯ ಹಿಮ್ಮೆಟ್ಟಿ ಸೋತು ರಾತ್ರಿ 9 ಗಂಟೆಗೆ ಧಾಳಿಯನ್ನು ನಿಲ್ಲಿಸುತ್ತದೆ ಹಾಗೂ ವಿಧಿಯಿಲ್ಲದೆ ಕೋರೇಗಾಂವ್‍ನಿಂದ ರಾತ್ರೋರಾತ್ರಿ ಕಾಲ್ಕೀಳುತ್ತದೆ!
ಒಟ್ಟಾರೆ ಅತ್ಯಮೋಘ ಧೈರ್ಯ ಮತ್ತು ಶಿಸ್ತುಬದ್ಧ ಶೌರ್ಯವನ್ನು ಪ್ರದರ್ಶಿಸಿದ ಮಹಾರ್ ಸೈನಿಕರು ಶೋಷಕ ಪೇಶ್ವೆಗಳ ವಿರುದ್ಧ ಅಭೂತಪೂರ್ವ ಜಯ ದಾಖಲಿಸುತ್ತಾರೆ.ಅಂದಹಾಗೆ ಈ ಯುದ್ಧದ ನಂತರ ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತ ಕೊನೆಗೊಳ್ಳುತ್ತದೆ. ಹಾಗೆಯೇ ಅಸ್ಪೃಶ್ಯರ ದಯನೀಯ ಸ್ಥಿತಿ ಕೂಡ ಸುಧಾರಣೆ ಕಾಣಲು ಆರಂಭಿಸುತ್ತದೆ.
ಈ ಯುದ್ಧದಲ್ಲಿ ಜಯ ತಂದುಕೊಟ್ಟು ಮಡಿದ 22 ಮಹಾರ್ ಸೈನಿಕರ ಸ್ಮರಣಾರ್ಥ ಕೋರೇಗಾಂವ್‍ನಲ್ಲಿ ಮಹಾರ್ ಸೈನಿಕರು ಪ್ರಥಮ ಗುಂಡು ಸಿಡಿಸಿದ ಸ್ಥಳದಲ್ಲೇ 65 ಅಡಿ ಎತ್ತರದ ಒಂದು ಶಿಲಾ ಸ್ಮಾರಕ ಕೂಡ 1821 ಮಾರ್ಚ್ 26ರಂದು ನಿರ್ಮಾಣಗೊಳ್ಳುತ್ತದೆ. ಹಾಗೂ ಆ ಸ್ಮಾರಕದಲ್ಲಿ ಮಡಿದ 22 ಸೈನಿಕರ ಜೊತೆಗೆ ಗಾಯಗೊಂಡವರ ಹೆಸರನ್ನೂ ಕೆತ್ತಿಸಲಾಗುತ್ತದೆ.
ಒಂದು ವಾಸ್ತವ, ಅದೆಂದರೆ “ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು” ಎಂದು ಹೇಳಿದ ಬಾಬಾಸಾಹೇಬ್ ಅಂಬೇಡ್ಕರರಿಗೆ ತನ್ನ ಜನರ ಇಂತಹ ಅದ್ಭುತ ಐತಿಹಾಸಿಕ ಜಯದ ಬಗ್ಗೆ ಬಹಳ ಹೆಮ್ಮೆ ಇತ್ತು. ಆ ಕಾರಣಕ್ಕಾಗಿ ಕೋರೆಗಾಂವ್‍ನಲ್ಲಿನ ಮಹಾರ್ ಸೈನಿಕರ ಈ ಸ್ಮಾರಕಕ್ಕೆ ಅಂಬೇಡ್ಕರರು ಪ್ರತೀ ವರ್ಷ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದರು.
ಅಲ್ಲದೆ ಅಗಲಿದ ಯೋಧರಿಗೆ ಬಾಬಾಸಾಹೇಬರು ತಮ್ಮ ಅಭೂತಪೂರ್ವ ನಮನ ಸಲ್ಲಿಸುತ್ತಿದ್ದರು. ಯಾಕೆಂದರೆ ಬಾಬಾಸಾಹೇಬರಿಗೆ ತಿಳಿದಿತ್ತು ಕೋರೇಗಾಂವ್‍ನಲ್ಲಿ ಮಹಾರ್ ಸೈನಿಕರು ಹೋರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ಧವಲ್ಲ ವ್ಯವಸ್ಥೆಯ ವಿರುದ್ಧ, ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿತ್ತೋ ಅಂತಹ ದೌರ್ಜನ್ಯಕೋರ ಸಂಸ್ಕೃತಿಯ ವಿರುದ್ಧ ಎಂದು.
ಒಂದು ವೇಳೆ ಕೋರೇಗಾಂವ್ ಯುದ್ಧ ನಡೆಯದಿದ್ದರೆ ಪೇಶ್ವೆಗಳ ಅಟ್ಟಹಾಸ ಮತ್ತೂ ಮುಂದುವರಿದಿರುತ್ತಿತ್ತು. ಅಂದಹಾಗೆ ಅಂತಹ ಅಟ್ಟಹಾಸದ ವಾತಾವರಣದಲ್ಲಿ ಆ ಯುದ್ಧ ನಡೆದು 73 ವರ್ಷಗಳ ನಂತರ(1891) ಹುಟ್ಟಿದ ಬಾಬಾಸಾಹೇಬ್ ಅಂಬೇಡ್ಕರರು ಶಿಕ್ಷಣ ಪಡೆಯಲಾಗುತ್ತಿತ್ತೇ? ವಿದೇಶಿ ವ್ಯಾಸಂಗಕ್ಕೆ ತೆರಳಲಾಗುತ್ತಿತ್ತೆ? ಸಂವಿಧಾನ ಶಿಲ್ಪಿಯಾಗಲು ಸಾಧ್ಯವಿತ್ತೆ? ಈ ನಿಟ್ಟಿನಲ್ಲಿ ಕೋರೇಗಾಂವ್ ಯುದ್ಧ ಅಸ್ಪೃಶ್ಯರ ಹೋರಾಟದ ಇತಿಹಾಸದಲ್ಲಿ ಒಂದು ಅಪರೂಪದ ಮೈಲುಗಲ್ಲಾಗಿ ಉಳಿಯುತ್ತದೆ. ಹಾಗೆಯೇ ಸ್ಫೂರ್ತಿಯ ಸಂಕೇತವೂ ಅದಾಗುತ್ತದೆಯೆಂದರೆ ಅತಿಶಯೋಕ್ತಿಯೇನಲ್ಲ.
(ಈ ಲೇಖನ 2014 ರಲ್ಲಿ ಬಿಡುಗಡೆಯಾದ ನನ್ನ ಮೂರನೇ ಕೃತಿ “ಎದೆಗೆ ಬಿದ್ದ ಗಾಂಧಿ” ಯಲ್ಲಿ ಪ್ರಕಟವಾಗಿದೆ. – ರಹೊಬ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



