Connect with us

ಬಹಿರಂಗ

ಬೀದರ್ ದೇಶದ್ರೋಹ ಪ್ರಕರಣದ ಸುತ್ತ ಮುತ್ತ

Published

on

  • ಕುಮಾರ ಬುರಡಿಕಟ್ಟಿ

ಬೀದರ್‌ನ ಶಾಹೀನ್ ಶಾಲೆಯ ಮೇಲೆ ಹಾಗೂ ಮೈಸೂರಿನ ವಿದ್ಯಾರ್ಥಿನಿಯ ಮೇಲೆ ಹಾಕಲಾದ ದೇಶದ್ರೋಹ ಪ್ರಕರಣಗಳು ಸಧ್ಯಕ್ಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಹೇಗೆ ದುರ್ಬಳಕೆಯಾಗುತ್ತಿದೆ ಎಂಬುದಕ್ಕೆ ಇತ್ತೀಚಿನ ಜೀವಂತ ಪ್ರತಿಮೆಗಳಾಗಿ ನಿಂತಿವೆ.

ಬೀದರ್ ಪ್ರಕರಣವನ್ನು ತುಸು ಹತ್ತಿರದಿಂದಲೇ ನೋಡುತ್ತಾ ವರದಿ ಮಾಡುತ್ತಿರುವುದರಿಂದ ಹಾಗೂ ನಿನ್ನೆ (ಸೋಮವಾರ) ಬೀದರ್‌ಗೆ ಹೋಗಿ ಇಡೀ ದಿನ ಆ ಪ್ರಕರಣದ ಬಲಿಪಶುಗಳನ್ನು ಮಾತಾಡಿಸಿದ ನಂತರ ನನಗೆ ಕಂಡ ಒಂದಿಷ್ಟು ಬಿಡಿಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ.

ಕಳೆದ ಜನವರಿ 21ರಂದು ಬೀದರ್‌ನ ಪ್ರತಿಷ್ಠಿತ ಶಾಹೀನ್ ಸ್ಕೂಲಿನಲ್ಲಿ ವಾರ್ಷಿಕೋತ್ಸವ ಸಮಾರಂಭವಿತ್ತು. ವಿದ್ಯಾರ್ಥಿಗಳು ವಿಭಿನ್ನ ರೀತಿಯ, ಸೃಜನಶೀಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಅಂತಹ ಕಾರ್ಯಕ್ರಮಗಳಲ್ಲಿ ಆರನೇ ತರಗತಿಯ ಮಕ್ಕಳು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಕುರಿತು ಪ್ರದರ್ಶಿಸಿದ ಕಿರುನಾಟಕ ಕೂಡ ಒಂದು.

ಈ ನಾಟಕದಲ್ಲಿ ಕೆಲವು ಪಾತ್ರಗಳು ಎನ್ಆರ್‌ಸಿ ಕುರಿತು ಚರ್ಚೆ ಮಾಡುತ್ತವೆ. “ಸತ್ತು ಗೋರಿಯಲ್ಲಿರುವ ನನ್ನ ಅಜ್ಜ, ಮುತ್ತಜ್ಜನ ದಾಖಲೆಗಳನ್ನು ಕೇಳಿದರೆ ನಾನೆಲ್ಲಿಂದ ತಂದುಕೊಡಲಿ?” “ಏನೇ ಆದ್ರೂ ನಾನಂತೂ ನನ್ನ ಪೌರತ್ವ ಸಾಬೀತು ಪಡಿಸಲು ದಾಖಲೆ ಕೊಡಲ್ಲ”, “ನನ್ನ ದಾಖಲೆಗಳನ್ನು ಕೇಳಲು ಬಂದರೆ ಚಪ್ಪಲಿಯಿಂದ ಹೊಡೆಯುತ್ತೇನೆ” ಎಂಬಿತ್ಯಾದಿ ಮಾತುಗಳನ್ನು ಒಂದೊಂದು ಪಾತ್ರ ಆಡುತ್ತದೆ. ಈ ಕೊನೆಯ ಡೈಲಾಗನ್ನು ಹೇಳಿದ್ದು ಆಯೇಷಾ (ಹೆಸರನ್ನು ಬದಲಾಯಿಸಲಾಗಿದೆ) ಎಂಬ ಹನ್ನೊಂದು ವರ್ಷದ ಹುಡುಗಿ.

ಸೂಕ್ಷ್ಮವಾಗಿ ನೋಡಿದರೆ ಇದೊಂದು ವಿಡಂಬನಾತ್ಮಕ ನಾಟಕ. ಚಪ್ಪಲಿಯಿಂದ ಹೊಡೆಯುತ್ತೇನೆ ಎಂಬುದು ಉರ್ದು/ ಹಿಂದಿ ಭಾಷೆಯಲ್ಲಿ ಜನಸಾಮಾನ್ಯರು ಬಹಳ ಸಲೀಸಾಗಿ, ಮಾಮೂಲಿಯಾಗಿ ಸಣ್ಣಪುಟ್ಟ ವಿಷಯಕ್ಕೆಲ್ಲಾ ಆಡುವ ಮಾತು (ಜ್ಯೂತೆ ಸೆ ಮಾರುಂಗ). ಅದರೆ ಇಲ್ಲಿ ಆ ಡೈಲಾಗೇ ಬಹಳ ಜನರಿಗೆ ಮುಳುವಾಗಿ ಪರಿಣಮಿಸಿದೆ.

ಈ ನಾಟಕದ ವೀಡಿಯೋ ತುಣುಕೊಂದನ್ನು ಮೊಹಮ್ಮದ್ ಯೂಸೂಫ್ ಎಂಬ ಸ್ಥಳೀಯ ಉರ್ದು ಪತ್ರಿಕೆಯ ವರದಿಗಾರನೊಬ್ಬ ಫೇಸ್ಬುಕ್ಕಿನಲ್ಲಿ ಪೋಸ್ಟ್ ಮಾಡುತ್ತಾನೆ. ಇದು ನೀಲೇಶ್ ರಕ್ಷ್ಯಾಳ್ ಎಂಬ ಬಲಪಂಥೀಯ ವ್ಯಕ್ತಿಯೊಬ್ಬನ ಗಮನಕ್ಕೆ ಬರುತ್ತದೆ. ಆತ ಈ ನಾಟಕದಲ್ಲಿರುವ ಸಂಭಾಷಣೆಗಳು, ಅದರಲ್ಲೂ ವಿಶೇಷವಾಗಿ “ಚಪ್ಪಲಿಯಿಂದ ಹೊಡೆಯುತ್ತೇನೆ” ಎನ್ನುವ ಡೈಲಾಗು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮಾಡಿದ ಅವಮಾನ ಎಂಬುದಾಗಿ ಹಾಗೂ ಅದೊಂದು ದೇಶದ್ರೋಹದ ಕೃತ್ಯ ಎಂಬುದಾಗಿ ಆರೋಪಿಸಿ ಈ ನಾಟಕ ಪ್ರದರ್ಶನ ಮಾಡಿದ ಶಾಹೀನ್ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೀದರ್ನ ನ್ಯೂಟೌನ್ ಪೊಲೀಸ್ ಸ್ಟೇಷನ್ನಿನಲ್ಲಿ ಜನವರಿ 26ರಂದು ದೂರು ದಾಖಲಿಸುತ್ತಾನೆ.

ಇದನ್ನು ಆಧರಿಸಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿಭಂಗ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 124ಎ (ದೇಶದ್ರೋಹ) ಮತ್ತು ಇತರ ಸೆಕ್ಷನ್ನುಗಳ ಅಡಿಯಲ್ಲಿ ಶಾಹಿನ್ ಸಂಸ್ಥೆಯ ಅಧ್ಯಕ್ಷ, ಆಡಳಿತ ಮಂಡಳಿ ಮತ್ತು ಮೊಹಮ್ಮದ್ ಯೂಸೂಫ್ ಮೇಲೆ ಪ್ರಕರಣ ದಾಖಲಿಸುತ್ತಾರೆ.

ಮರುದಿನದಿಂದಲೇ ಪೊಲೀಸರು ಶಾಲೆಗೆ ಬಂದು ಪ್ರಕರಣದ ವಿಚಾರಣೆ ಶುರು ಮಾಡುತ್ತಾರೆ. ಶಾಲೆಯ ಸಿಸಿಟೀವಿ ಕ್ಯಾಮೆರಾದ ದೃಶ್ಯಗಳನ್ನು ವಶಪಡಿಸಿಕೊಳ್ಳುತ್ತಾರೆ. ಶಾಲೆಯ ಶಿಕ್ಷಕರು ಮತ್ತು ಇತರ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುತ್ತಾರೆ.

ಮರುದಿನ, ಅಂದರೆ ಜನವರಿ 28ನೇ ತಾರೀಖು ಡಿವೈಎಸ್ಪಿ ಬಸವೇಶ್ವರ ಹೀರಾ ನೇತೃತ್ವದಲ್ಲಿ ಸಮವಸ್ತ್ರದಲ್ಲೇ ಬರುವ ಪೊಲೀಸರು ಸುಮಾರು 46 ಮಕ್ಕಳನ್ನು ವಿಚಾರಣೆಗೊಳಪಡಿಸುತ್ತಾರೆ. ಮಕ್ಕಳನ್ನು ವಿಚಾರಣೆಗೆ ಒಳಪಡಿಸುವಾಗ ಪೊಲೀಸರು ಸಮವಸ್ತ್ರದಲ್ಲಿರಬಾರದು ಹಾಗೂ ಮಕ್ಕಳ ಹಿತರಕ್ಷಣಾ ಸಮಿತಿಯ ಸದಸ್ಯರು ಜೊತೆಯಲ್ಲಿರಬೇಕು ಎಂಬ ಕನಿಷ್ಠ ಜ್ಞಾನವನ್ನೂ ಹೊಂದಿರದ ಬೀದರ್ ಪೊಲೀಸರು ಈ ಬಾಲನ್ಯಾಯ ನಿಯಮಗಳನ್ನು ಗಾಳಿಗೆ ತೂರುತ್ತಾರೆ.

ಸಮವಸ್ತ್ರಧಾರಿ ಪೊಲೀಸರು ಪುಟ್ಟ ಪುಟ್ಟ ಮಕ್ಕಳನ್ನು ವಿಚಾರಣೆಗೊಳಪಡಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಾದ್ಯಂತ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬೀದರ್ ಪೊಲೀಸರು ಮರುದಿನ ಶಾಲೆಗೆ ಸಿವಿಲ್ ಡ್ರೆಸ್ಸಿನಲ್ಲಿ ಬರುತ್ತಾರೆ. ಆದರೆ ಆವತ್ತು ಯಾವ ಮಕ್ಕಳನ್ನೂ ವಿಚಾರಣೆಗೆ ಒಡಪಡಿಸದೇ ಕೇವಲ ಸಿಬ್ಬಂದಿಯನ್ನು ವಿಚಾರಣೆ ಮಾಡಿ ಹಿಂತಿರುಗುತ್ತಾರೆ.

ಅದರ ಮರುದಿನ, ಅಂದರೆ, ಜನವರಿ 29ರಂದು ಮತ್ತೆ ಸಿವಿಲ್ ಡ್ರೆಸ್ಸಿನಲ್ಲಿ ಬರುವ ಪೊಲೀಸರು ತಮ್ಮೊಂದಿಗೆ ಮಕ್ಕಳ ಹಿತರಕ್ಷಣಾ ಸಮಿತಿಯ ಇಬ್ಬರು ಮಹಿಳಾ ಸದಸ್ಯರನ್ನು ಕರೆದುಕೊಂಡು ಬಂದಿರುತ್ತಾರೆ. ಈ ಬಾರಿ ಅವರು ಮತ್ತೆ ಮಕ್ಕಳನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಈ ಬಾರಿ ಅವರು ಸುಮಾರು ಮೂರು ತಾಸು ವಿಚಾರಣೆ ಮಾಡುತ್ತಾರೆ.

ಪ್ರತೀ ವಿಚಾರಣೆಯ ಸಮಯದಲ್ಲೂ ನಾಟಕದಲ್ಲಿ “ಚಪ್ಪಲಿಯಿಂದ ಹೊಡೆಯುತ್ತೇನೆ” ಎಂಬ ಡೈಲಾಗ್ ಹೇಳಿದ ಆರನೆಯ ತರಗತಿಯ ಆಯೇಶಾಳನ್ನೇ ತೀವ್ರವಾಗಿ ವಿಚಾರಣೆ ಮಾಡುತ್ತಾರೆ. ವಿಚಾರಣೆಯ ಸಮಯದಲ್ಲಿ ಆ ಹುಡುಗಿ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಆ ಡೈಲಾಗನ್ನು ತನ್ನ ತಾಯಿ ಹೇಳಿಕೊಟ್ಟಿರುವುದಾಗಿ ಹೇಳುತ್ತಾಳೆ.

ಅದನ್ನೇ ಆಧಾರವಾಗಿಟ್ಟುಕೊಂಡ ಪೊಲೀಸರು ಮಾರನೆಯ ದಿನ, ಅಂದರೆ ಜನವರಿ 30ರಂದು ಮತ್ತೆ ಶಾಲೆಗೆ ಬಂದು ಸಿಬ್ಬಂದಿಯನ್ನು ವಿಚಾರಣೆ ಮಾಡುತ್ತಾರೆ. ಈ ಸಮಯದಲ್ಲಿ ಆ ನಾಟಕ ಪ್ರದರ್ಶನದ ಉಸ್ತುವಾರಿ ವಹಿಸಿದ್ದು ಶಾಲೆಯ ಮುಖ್ಯಶಿಕ್ಷಕಿ ಫರೀದಾ ಬೇಗಂ ಎಂಬುದನ್ನು ಕಂಡುಕೊಳ್ಳುತ್ತಾರೆ.

ಆಯೇಶಾಳ ಹೇಳಿಕೆ ಆಧಾರದಲ್ಲಿ ಆಕೆಯ ತಾಯಿ ನಜ್ಬುನ್ನೀಸಾಳನ್ನು ಹಾಗೂ ಶಾಲೆಯ ಸಿಬ್ಬಂದಿಯ ಹೇಳಿಕೆಯ ಆಧಾರದಲ್ಲಿ ನಾಟಕದ ಉಸ್ತುವಾರಿ ನೋಡಿಕೊಂಡಿದ್ದ ಮುಖ್ಯಶಿಕ್ಷಕಿ ಫರಿದಾ ಬೇಗಂ ಅವರನ್ನು ಸುಮಾರು ಮಧ್ಯಾಹ್ನ 4 ಗಂಟೆಯ ಹೊತ್ತಿಗೆ ಬಂಧಿಸಿ ಕರೆದೊಯ್ಯುತ್ತಾರೆ.

ಮಾರನೆಯ ದಿನ, ಅಂದರೆ ಜನವರಿ 31ನೇ ತಾರೀಖಿನಂದು ಮತ್ತೆ ಶಾಲೆಗೆ ಬರುವ ಪೊಲೀಸರು ಕೆಲವು ಮಕ್ಕಳ ಪಟ್ಟಿಯನ್ನು ಕೊಟ್ಟು ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುವಂತೆ ಒತ್ತಾಯಿಸುತ್ತಾರೆ. ಆದರೆ ಅದಕ್ಕೆ ಶಾಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತೌಸೀಫ್ ಮಡಿಕೇರಿ ಖಂಡಿತ ಒಪ್ಪುವುದಿಲ್ಲ. ಅಷ್ಟೊತ್ತಿಗಾಗಲೇ ಬೀದರ್ ದೇಶದ್ರೋಹದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುತ್ತದೆ.

ಪೊಲೀಸರು ಸಮವಸ್ತ್ರದಲ್ಲೇ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದಕ್ಕೆ ತೀವ್ರ ವೀರೋಧ ವ್ಯಕ್ತವಾಗಿದ್ದು ಮಾತ್ರವಲ್ಲದೇ ರಾಷ್ಟ್ರೀಯ ಮತ್ತು ರಾಜ್ಯ ಮಾನವ/ಮಕ್ಕಳ ಹಕ್ಕುಗಳ ಸಂಸ್ಥೆಗಳು ಶಾಲೆಯನ್ನು, ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಪೊಲೀಸ್ ಠಾಣೆಗೆ ಕಳಿಸಿಕೊಡಲು ಶಾಲೆಯ ಆಡಳಿತ ಮಂಡಳಿ ಸುತಾರಾಂ ಒಪ್ಪುವುದಿಲ್ಲ. ಈ ವಿಷಯದಲ್ಲಿ ಪೊಲೀಸರಿಗೂ ಮತ್ತು ಶಾಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತೌಸಿಫ್ ಮಡಿಕೇರಿ ನಡುವೆ ಸಣ್ಣದೊಂದು ಮಾತಿನ ಚಕಮಕಿಯೂ ನಡೆಯುತ್ತದೆ.

ಬಾಲ ನ್ಯಾಯ ವ್ಯವಸ್ಥೆಯ ಬಗ್ಗೆ ತನಗೆ ಪಾಠ ಮಾಡಬೇಡ ಎಂದು ವಿಚಾರಣಾಧಿಕಾರಿ ಡಿವೈಎಸ್ಪಿ ಬಸವೇಶ್ವರ ಹೀರಾ ಅವರು ತೌಸಿಫ್ ಮಡಿಕೇರಿಗೆ ಧಮಕಿಯನ್ನೂ ಹಾಕುತ್ತಾರೆ. ಇಷ್ಟೆಲ್ಲಾ ಆದರೂ ಮಕ್ಕಳನ್ನು ಪೊಲೀಸ್ ಸ್ಟೇಷನ್ನಿಗೆ ಕಳಿಸಿಕೊಡಲು ಶಾಲೆಯ ಆಡಳಿತ ಮಂಡಳಿ ಒಪ್ಪದಿದ್ದುದರಿಂದ ಅನಿವಾರ್ಯವಾಗಿ ಶಾಲೆಯಲ್ಲೇ ವಿಚಾರಣೆ ಮಾಡುತ್ತಾರೆ.

ನಂತರ ಫೆಬ್ರವರಿ 1, 3 ಮತ್ತು 4ನೇ ತಾರೀಖಿನಂದು ಮತ್ತೆ ಮತ್ತೆ ಶಾಲೆಗೆ ಬಂದು ವಿದ್ಯಾರ್ಥಿಗಳನ್ನು ವಿಚಾರಣೆ ಮಾಡುತ್ತಾರೆ. ಹೀಗೆ, ಪೊಲೀಸರು ಒಟ್ಟು ಐದು ಬಾರಿ ಮಕ್ಕಳನ್ನು ವಿಚಾರಣೆಗೆ ಒಳಪಡಿಸುತ್ತಾರೆ. ವಿಚಾರಣೆಗೆ ಒಳಗಾದ ಒಟ್ಟು ಮಕ್ಕಳ ಸಂಖ್ಯೆ ಸುಮಾರು 80. ನಾಟಕದಲ್ಲಿ ಪಾತ್ರಗಳನ್ನು ಮಾಡಿದ ಮಕ್ಕಳನ್ನಂತೂ ಪೊಲೀಸರು ಪದೇಪದೇ ವಿಚಾರಣೆಗೆ ಒಳಪಡಿಸಿದರೆ ಉಳಿದ ಮಕ್ಕಳನ್ನು ಒಂದೆರಡು ಬಾರಿ ಮಾತ್ರ ವಿಚಾರಣೆ ಮಾಡುತ್ತಾರೆ.

ಈ ನಾಟಕದ ಸ್ಕ್ರಿಪ್ಟ್ ಬರೆದದ್ದು ಯಾರು? ಈ ನಾಟಕದ ಡೈಲಾಗ್ ಯಾರು ಹೇಳಿಕೊಟ್ಟರು? ಪ್ರಧಾನಮಂತ್ರಿ ಮುಸ್ಲೀಂ ಆಗಿದ್ರೆ ಹೀಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಅಂತಿದ್ತಾ? ನಾಟಕದ ರಿಹರ್ಸಲ್ ಎಲ್ಲಿ ಮಾಡಿದ್ರಿ? ನೋಡೋದಕ್ಕೆ ತಂದೆತಾಯಿ ಬಂದಿದ್ರಾ? ಎಂಬಿತ್ಯಾದಿ ಪ್ರಶ್ನೆಗಳನ್ನೇ ಪ್ರತೀದಿನ ಕೇಳುತ್ತಿದ್ದರು. ಸಿಸಿಟೀವಿ ಕ್ಯಾಮೆರಾದ ಕವರೇಜ್ ಇಲ್ಲದ ಶಾಲಾ ಕಟ್ಟಡದ ಮೂಲೆಯ ಕೋಣೆಯೊಂದನ್ನು ಅವರು ವಿಚಾರಣೆಗಾಗಿ ಆಯ್ಕೆ ಮಾಡಿಕೊಂಡಿದ್ದರು. ಫೆಬ್ರುವರಿ 4ನೇ ತಾರೀಖಿನ ನಂತರ ಪೊಲೀಸರು ಮತ್ತೆ ಶಾಲೆಯ ಕಡೆ ಬಂದಿಲ್ಲವಂತೆ.

ಈ ಇಡೀ ಪ್ರಕರಣದಲ್ಲಿ ಅತಿ ಹೆಚ್ಚು ನೋವು ಅನುಭವಿಸಿದವರು ಮತ್ತು ಈಗಲೂ ಅನುಭವಿಸುತ್ತಿರುವವರು ಎಂದರೆ ನಜ್ಬುನ್ನಿಸಾ ಮತ್ತು ಅವಳ ಮಗಳು ಆಯೇಶಾ. ನಜ್ಬುನ್ನಿಸಾ ಬೀದರಿನಿಂದ ಸುಮಾರು ನಲ್ವತ್ತು ಕಿ.ಮೀ. ದೂರದಲ್ಲಿರುವ ಹಳ್ಳಿಕೇಡ್ ಗ್ರಾಮದವಳು. ಸುಮಾರು 27 ವರ್ಷ ಇರಬಹುದು. ಮಗಳು ಆಯೇಶಾಳಿಗೆ ಸುಮಾರು 11 ವರ್ಷ ಇರಬಹುದು. ಸುಮಾರು ಏಳು ವರ್ಷಗಳ ಹಿಂದೆಯೇ ಅವಳ ಗಂಡ ಕ್ಯಾನ್ಸರಿನಿಂದ ಬಳಲಿ ಅಸುನೀಗಿದ್ದಾನೆ. ಅಂದಿನಿಂದಲೂ ನಜ್ಬುನ್ನೀಸಾಳೇ ತನ್ನ ಮತ್ತು ತನ್ನ ಮಗಳ ಹೊಟ್ಟೆಪಾಡನ್ನು ನೋಡಿಕೊಳ್ಳುತ್ತಿರುವುದು.

ಶಾಹೀನ್ ಸಂಸ್ಥೆಯು ಹಳ್ಳಿಕೇಡದಲ್ಲೂ ಒಂದು ಪ್ರಾಥಮಿಕ ಶಾಲೆಯನ್ನು ನಡೆಸುತ್ತಿದೆ. ಅಲ್ಲಿ ಶಿಕ್ಷಕಿಯೊಬ್ಬಳ ಮಗಳು ಮುಂದೆ ಬೀದರಿಗೆ ಬಂದು ಶಾಹೀನ್ ಸಂಸ್ಥೆಯ ಹೈಸ್ಕೂಲಿನಲ್ಲಿ, ಪಿಯೂಸಿ ಕಾಲೇಜಿನಲ್ಲಿ ಓದಿ ಸರ್ಕಾರಿ ಕೋಟದಡಿಯಲ್ಲಿ ಉಚಿತ ಮೆಡಿಕಲ್ ಸೀಟು ಪಡೆದಿರುತ್ತಾಳೆ. ಇಂತಹ ಒಂದೆರಡು ಉದಾಹರಣೆಗಳು ನಜ್ಬುನ್ನೀಸಾಳಲ್ಲೂ ತನ್ನ ಮಗಳ ಬಗ್ಗೆ ಆಸೆ, ಆಕಾಂಕ್ಷೆಗಳನ್ನು ಹುಟ್ಟಿಸಿರುತ್ತವೆ. ಆಯೇಶಾಳನ್ನೂ ಬೀದರಿನ ಶಾಹೀನ್ ಶಾಲೆಗೆ ಸೇರಿಸಿದರೆ ಅವಳೂ ಡಾಕ್ಟರ್ ಅಥವಾ ಎಂಜಿನೀಯರ್ ಆಗಬಹುದು ಎಂಬ ಕನಸುಗಳು ಆಕೆಯಲ್ಲಿ ಮೊಳೆಯುತ್ತವೆ. ಈ ಕನಸುಗಳೇ ಅವಳನ್ನು ಮಗಳ ಜೊತೆ ಹಳ್ಳಿಕೇಡ್ ತೊರೆದು ಬೀದರಿಗೆ ಬರುವುದಕ್ಕೆ ಪ್ರೇರೇಪಿಸುತ್ತವೆ.

ಈಗ್ಗೆ ನಾಲ್ಕೈದು ತಿಂಗಳ ಹಿಂದಷ್ಟೇ ಕಣ್ಣತುಂಬಾ ಕನಸು ಕಟ್ಟಿಕೊಂಡು ಆಯೇಶಾ ಜೊತೆ ಬೀದರಿಗೆ ಬಂದಿದ್ದ ನಜ್ಬುನ್ನಿಸಾ ಬೀದರಿನ ದುಡಿಯುವ ಜನ ವಾಸಿಸುವ ಏರಿಯಾದಲ್ಲಿ ಒಂದು ಸಣ್ಣ ರೂಮನ್ನು ಬಾಡಿಗೆಗೆ ಪಡೆದು ನೆಲೆಸುತ್ತಾಳೆ. ತಾನು ಅವರಿವರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದು ಮಗಳನ್ನು ತನ್ನ ಆಸೆಯಂತೆಯೇ ಶಾಹೀನ್ ಶಾಲೆಗೆ ಸೇರಿಸುತ್ತಾಳೆ.

ಅಸಲಿಗೆ ಶಾಹಿನ್ ಶಾಲೆ ಮುಸ್ಲಿಂ ಸಮುದಾಯದ ಶಾಲೆ ಎಂದೇ ಪರಿಚಿತವಾಗಿದ್ದರೂ ಇಲ್ಲಿ ಶೇಕಡ 50ರಷ್ಟು ಮುಸ್ಲೀಮೇತರ ಮಕ್ಕಳು ಕಲಿಯುತ್ತಿದ್ದಾರೆ. ಹಿಂದೂ, ಸಿಖ್, ಕ್ರಿಶ್ಚಿಯನ್, ಮುಸ್ಲಿಂ – ಎಲ್ಲಾ ಧರ್ಮದ ಬಡ ಮಕ್ಕಳಿಗೆ ಇಲ್ಲಿ ಪ್ರವೇಶ ಸಿಗುತ್ತದೆ. ಇದು ಒಳ್ಳೆಯ ಹೆಸರು ಮಾಡಿರುವ ಸಂಸ್ಥೆ. ದೇಶಾದ್ಯಂತ ಸುಮಾರು 40 ಕಡೆ ಈ ಸಂಸ್ಥೆಯ ಶಾಲೆಗಳಿವೆ. ಬೀದರ್ ಶಾಲೆಯೊಂದರಿಂದಲೇ ಕಳೆದ ವರ್ಷ 327 ವಿದ್ಯಾರ್ಥಿಗಳು ನೀಟ್ ಮೂಲಕ ಸರ್ಕಾರಿ ಕೋಟಾದಲ್ಲಿ ಉಚಿತ ಮೆಡಿಕಲ್ ಸೀಟುಗಳನ್ನು ಪಡೆದಿದ್ದಾರೆ.

ಇಂತಹ ಶಾಲೆಗೆ ಮಗಳನ್ನು ಸೇರಿಸಿ ಇನ್ನೂ ನಾಲ್ಕು ತಿಂಗಳು ತುಂಬುವ ಮೊದಲೇ ನಜ್ಬುನ್ನೀಸಾ ದೇಶದ್ರೋಹದ ಆರೋಪ ಹೊತ್ತು, ಆಯೇಶಾಳನ್ನು ಅನಾಥಳನ್ನಾಗಿ ಮಾಡಿ ಜೈಲು ಸೇರಬೇಕಾಗಿ ಬಂದಿದೆ. ಅತ್ತ ಆಕೆ ಜೈಲು ಸೇರಿದ ನಂತರ ಪಕ್ಕದ ಮನೆಯ ಮೊಹ್ಮದ್ ಹಫೀಜುದ್ದೀನ್ ಕುಟುಂಬ ಆಯೇಶಾಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಸುಮಾರು 8-10 ದಿನ ಆರೈಕೆ ಮಾಡಿದೆ. ನಂತರ ಮಕ್ಕಳ ಹಿತರಕ್ಷಣಾ ಸಮಿತಿಯ ಸಲಹೆಯ ಮೇರೆಗೆ ಆಕೆಯನ್ನು ಶಾಹೀನ್ ಸಂಸ್ಥೆ ನಡೆಸುವ ಹಾಸ್ಟೆಲ್ ಒಂದಕ್ಕೆ ವರ್ಗಾಯಿಸಿ ಅಲ್ಲಿನ ವಾರ್ಡನ್ ಜೊತೆ ಇರುವುದಕ್ಕೆ ಕಳಿಸಲಾಗಿದೆ.

“ಆಯೇಶಾ ಬಹಳ ಲವಲವಿಕೆಯ ಹುಡುಗಿಯಾಗಿದ್ದಳು. ಪದೇ ಪದೇ ಪೊಲೀಸರ ವಿಚಾರಣೆ, ಅವಳ ಅಮ್ಮಿಯ ಬಂಧನ ಅವಳ ಮನಸ್ಸಿನ ಮೇಲೆ ದೊಡ್ಡ ಆಘಾತ ಉಂಟು ಮಾಡಿದೆ. ತಾಯಿಯ ಬಂಧನದ ನಂತರ ಯಾವಗಲೂ ಬಹಳ ಸಪ್ಪೆಯಾಗಿರುತ್ತಿದ್ದಳು. ಮಧ್ಯರಾತ್ರಿ ದಿಢೀರನ್ ಎದ್ದು ಅಳುತ್ತಿದ್ದಳು. ಕೆಟ್ಟ ಕನಸು ಕಂಡು ಥಟ್ಟನೇ ಚೀರುತ್ತಿದ್ದಳು. ಸಮಾಧಾನಿಸಿ ಮಲಗಿಸುತ್ತಿದ್ದೆವು. ಒಮ್ಮೆ ಮಧ್ಯರಾತ್ರಿ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದೆವು.

ಅಪ್ಪ ತೀರಿಕೊಂಡಿದ್ದಾರೆ, ಅಮ್ಮ ಜೈಲು ಸೇರಿದ್ದಾರೆ. ನೆರೆಹೊರೆಯವರಾಗಿ ನಾವು ಇಷ್ಟಾದರೂ ಮಾಡಬೇಕಲ್ಲವೆ?” ಎಂದು ಮೊಹ್ಮದ್ ಹಫೀಜುದ್ದೀನ್ ಹೇಳಿದರು. ಬೀದರಿನ ದರ್ಜಿ ಗಲ್ಲಿಯಲ್ಲಿ ಅವರು ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಆಯೇಶಾ ಮತ್ತು ನಜ್ಬುನ್ನಿಸಾ ವಾಸಿಸುತ್ತಿದ್ದ ಮನೆಯನ್ನು ತೋರಿಸಿ ಎಂದು ಸ್ವಲ್ಪ ಒತ್ತಾಯ ಮಾಡಿದ ಮೇಲೆ ಅವರು ಅಂಗಡಿಯನ್ನು ಬೇರೆಯವರಿಗೆ ಒಪ್ಪಿಸಿ ಬೈಕಿನಲ್ಲಿ ಕರೆದುಕೊಂಡು ಹೋಗಿ ತೋರಿಸಿದರು. ನಾನು ಮನೆಯದೊಂದು ಫೋಟೋ ತೆಗೆದುಕೊಂಡೆ.

“ಆಯೇಶಾ ಬಹಳ ಹಸನ್ಮುಖಿ ಹುಡುಗಿ. ಅಮ್ಮಿ ನಜ್ಬುನ್ನಿಸಾ ಬಂಧನವಾದ ಮೇಲೆ ಅವಳು ಮುಖ ಪೂರ್ಣವಾಗಿ ಬಾಡಿಬಿಟ್ಟಿದೆ. ನಗು ಮುಖದಿಂದ ಮರೆಯಾಗಿಬಿಟ್ಟಿದೆ. ಯಾವಾಗಲೂ ಖಿನ್ನತೆಯಲ್ಲಿ ಇರುತ್ತಾಳೆ. ಅಮ್ಮಿಯ ಬಂಧನವಾದ ಮೇಲೂ ಸ್ವಲ್ಪ ದಿನ ಆಯೇಶಾ ಶಾಲೆಗೆ ಬರುತ್ತಿದ್ದಳು. ಶಾಲೆಯ ಆವರಣದಲ್ಲಿ ದಿನಾಲೂ ನನ್ನನ್ನು ಕಂಡ ತಕ್ಷಣ ಅಳುತ್ತಾ ಓಡಿ ಬಂದು ತಬ್ಬಿಕೊಂಡುಬಿಡುತ್ತಿದ್ದಳು.

ಆಕೆ ದಿನಾಲು ಕೇಳುವ ಮೊದಲ ಪ್ರಶ್ನೆ ಎಂದರೆ ‘ಅಮ್ಮಿ ಯಾವಾಗ ಬರ್ತಾಳೆ’ ಅಂತ. ನಾನು ಆವಾಗ ಬರ್ತಾಳೆ, ಈವಾಗ ಬರ್ತಾಳೆ ಅಂತ ಹೇಳುತ್ತಾ ಹೇಗೋ ಸಮಾಧಾನ ಮಾಡ್ತಿದ್ದೆ. ‘ನಾನು ಮಾಡಿದ ತಪ್ಪಿಗೆ ಅಮ್ಮಿನ ಯಾಕೆ ಕರ್ಕೊಂಡು ಹೋಗಿದ್ದಾರೆ’ ಅಂತ ಮತ್ತೆ ಮತ್ತೆ ಕೇಳುತ್ತಿದ್ದಳು. ಈಗ ಕೆಲವು ದಿನಗಳಿಂದ ಆಕೆ ಶಾಲೆಗೂ ಬಂದಿಲ್ಲ. ಇವತ್ತಿನಿಂದ ಪರೀಕ್ಷೆಗಳು ಶುರುವಾಗಿವೆ. ಆಕೆ ಪರೀಕ್ಷೆಯನ್ನೂ ಬರೆಯುತ್ತಿಲ್ಲ. ದಯವಿಟ್ಟು ಏನಾದ್ರೂ ಮಾಡಿ ನಜ್ಬುನ್ನಿಸಾಳ ಬಿಡುಗಡೆಗೆ ಸಹಾಯ ಮಾಡಿ. ನಮಗೂ ಆಯೇಶಾಳ ಸ್ಥಿತಿಯನ್ನು ನೋಡೋಕೆ ಆಗ್ತಿಲ್ಲ,” ಎಂದು ಆಯೇಶಾಳ ಕ್ಲಾಸ್ ಟೀಚರ್ ಆಸ್ಮಾ ತರನ್ನುಮ್ ಹೇಳಿದ್ರು.

ಸೀದಾ ಜೈಲಿಗೆ ಹೋಗಿ ನಜ್ಬುನ್ನೀಸಾಳನ್ನೂ ಮಾತಾಡಿಸಿದೆ. “ನಾನೇನೂ ಆಯೇಶಾಳಿಗೆ ಇಂತಹ ಡೈಲಾಗನ್ನೇ ಹೇಳು ಅಂತ ಏನೂ ಹೇಳಿಕೊಟ್ಟಿರಲಿಲ್ಲ. ಜ್ಯೂತೆಸೆ ಮಾರುಂಗಿ ಎಂಬುದು ನಾವು ಆಡುಭಾಷೆಯಲ್ಲಿ, ಸಣ್ಣಪುಟ್ಟ ವಿಷಯಗಳಿಗೂ ಬಳಸುತ್ತೇವೆ. ನಾನು ಎಂದಾದರೂ ಆ ರೀತಿ ಬೈದಿದ್ದನ್ನು ನೋಡಿ ಆಯೇಶಾ ಅದನ್ನು ನಾಟಕದಲ್ಲಿ ಬಳಸಿರಬಹುದು ಅನ್ನಿಸುತ್ತದೆ. ಅದನ್ನೇ ಇಷ್ಟೊಂದು ರಾದ್ಧಾಂತ ಮಾಡೋ ಅವಶ್ಯಕತೆ ಇತ್ತಾ? ಆಯೇಶಾಳ ಓದು, ಭವಿಷ್ಯದ ಬಗ್ಗೆ ಏನೇನೋ ಕನಸು ಕಟ್ಟಿಕೊಂಡು ಬಂದಿದ್ದೆವು. ಬಂದ ನಾಲ್ಕೇ ತಿಂಗಳಲ್ಲಿ ಹೀಗೆಲ್ಲಾ ಆಗಿಹೋಯ್ತು. ನಂಗೆ ಆಯೇಶಾಳದ್ದೇ ಚಿಂತೆ. ಹೇಗಿದ್ದಾಳೋ, ಏನು ಮಾಡುತ್ತಿದ್ದಾಳೋ… ಸಬ್ ಅಲ್ಲಾ ಕಿ ಮರ್ಜಿ…” ಅಂತ ಹೇಳಿದಳು.

ಶಾಹಿನ್ ಶಾಲೆಯಲ್ಲಿ ಪದೇ ಪದೇ ಪೊಲೀಸರ ವಿಚಾರಣೆಗೆ ಒಳಗಾದ ಇಬ್ಬರು ವಿದ್ಯಾರ್ಥಿಗಳನ್ನೂ ಮಾತಾಡಿಸಿದೆ. ಅದರಲ್ಲಿ ಉತ್ತರ ಪ್ರದೇಶ ಮೂಲದ, ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನಾದ ಒಬ್ಬ ವಿದ್ಯಾರ್ಥಿ ಮಾತ್ರ ‘ನನಗೆ ಪೊಲೀಸರ ವಿಚಾರಣೆಯಿಂದ ಹೆದರಿಕೆ ಆಗಲಿಲ್ಲ’ ಎಂದ. ಇನ್ನೊಬ್ಬ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿ, ವಯಸ್ಸಿನಲ್ಲಿ ಸ್ವಲ್ಪ ಸಣ್ಣವನು ಮಾತ್ರ ಬಹಳ ಹೆದರಿದ್ದಾಗಿ ಹೇಳಿದ.

“ಪೊಲೀಸರು ಎದೆಯ ಮೇಲೆಯೇ ನುಗ್ಗಿದಂತೆ ಬರುವ ರೀತಿ, ಅವರು ಪ್ರಶ್ನೆ ಕೇಳುವ ಶೈಲಿ, ನಮ್ಮನ್ನು ದಿಟ್ಟಿಸಿ ನೋಡುವ ರೀತಿ – ಎಲ್ಲವೂ ಭಯ ಹುಟ್ಟಿಸುತ್ತಿದ್ದವು. ಎರಡು ದಿನ ಬಹಳ ಹೆದರಿಕೆಯಾಗಿತ್ತು. ನಂತರ ಮೇಸ್ಟ್ರು ಸ್ವಲ್ಪ ಧೈರ್ಯ ಹೇಳಿದ ಮೇಲೆ ಸ್ವಲ್ಪ ಧೈರ್ಯ ಬಂತು,” ಎಂದು ಹೇಳಿದ ಆ ಪುಟ್ಟ ಬಾಲಕ.

“ಪ್ರಧಾನಮಂತ್ರಿ ನರೇಂದ್ರ ಮೋದಿಗೆ ವಿರೋಧ ಪಕ್ಷದ ನಾಯಕರು ಪಾರ್ಲಿಮೆಂಟಿನಲ್ಲೇ ಚೋರ್ (ಕಳ್ಳ) ಅಂತ ಕರೀತಾರೆ. ಕೆಲವು ಟೀವಿ ಚಾನೆಲ್ಲುಗಳ ಕಾರ್ಯಕ್ರಮಗಳಂತೂ ಮೋದಿಯನ್ನೂ ಒಳಗೊಂಡಂತೆ ಎಲ್ಲಾ ರಾಜಕೀಯ ನಾಯಕರನ್ನು ಎಷ್ಟೊಂದು ಅವಮಾನ, ಅಪಹಾಸ್ಯ ಮಾಡುತ್ತವೆ. ಅವುಗಳಿಗೆಲ್ಲಾ ಹೋಲಿಸಿದರೆ ನಮ್ಮ ಮಕ್ಕಳು ಒಂದು ವಿಡಂಬನಾತ್ಮಕ ನಾಟಕದಲ್ಲಿ ಆಡಿರುವ ಮಾತುಗಳು ಏನೂ ಅಲ್ಲ.

ಆದರೂ ನಮ್ಮ ಸಂಸ್ಥೆಯ ಮೇಲೆ ದೇಶದ್ರೋಹದಂತ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಒಂದು ಮಾನನಷ್ಟ ಮೊಕದ್ದಮೆ ದಾಖಲಿಸಲೂ ಯೋಗ್ಯವಲ್ಲದ ಡೈಲಾಗುಗಳು ಅವು. ಕಾರ್ಯಾಂಗ ವಿಫಲವಾದಾಗ ಇಂತಹ ಅವಘಡಗಳು ನಡೆಯುತ್ತವೆ. ಪೊಲೀಸರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ ಅಂತ ಕಾಣುತ್ತೆ. ಅದಕ್ಕೆ ಇಂತಹ ಚಿಕ್ಕಪುಟ್ಟ ವಿಷಯವನ್ನು ಇಷ್ಟೊಂದು ದೊಡ್ಡ ರಾದ್ಧಾಂತ ಮಾಡುತ್ತಿದ್ದಾರೆ,” ಎನ್ನುತ್ತಾರೆ ಶಾಹೀನ್ ಸಂಸ್ಥೆಯ ತೌಸೀಫ್ ಮಡಿಕೇರಿ.

ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಏನು ಹೇಳ್ತಾರೆ ಕೇಳೋಣ ಅಂತ ಎಸ್ಪಿ ಆಫೀಸಿಗೆ ಹೋದೆ. ಈ ಪ್ರಕರಣ ದಾಖಲಾದಾಗ ಎಸ್ಪಿಯಾಗಿ ಇದ್ದವರು ಶ್ರೀಧರ್. ಈಗ ಅವರು ವರ್ಗಾವಣೆಯಾಗಿ ಹೋಗಿ ನಾಗೇಶ್ ಡಿ.ಎಲ್. ಎಂಬುವವರು ಆ ಸ್ಥಾನಕ್ಕೆ ಬಂದಿದ್ದಾರೆ. ಇದು ಎಸ್ಪಿಯಾಗಿ ಅವರಿಗೆ ಮೊದಲ ಪೋಸ್ಟಿಂಗ್ ಅನ್ನಿಸುತ್ತದೆ.

ಅವರನ್ನು ಭೇಟಿಯಾಗಿ ಇಂತಹದ್ದೊಂದು ವಿಡಂಬನಾ ನಾಟಕದಲ್ಲಿ ಮಕ್ಕಳು ಆಡಿರುವ ಡೈಲಾಲ್ ಅನ್ನು ಮುಂದಿಟ್ಟುಕೊಂಡು ದೇಶದ್ರೋಹ ಪ್ರಕರಣ ದಾಖಲಿಸುವ ಅಗತ್ಯವಿತ್ತಾ? ನಾಟಕದಲ್ಲಿನ ಮಕ್ಕಳ ಡೈಲಾಗುಗಳು ನಿಜಕ್ಕೂ ದೇಶದ್ರೋಹಕ್ಕೆ ಸಮ ಅನ್ನಿಸುತ್ತಾ? ಪ್ರಕರಣ ದಾಖಲಾದ ಮೇಲೆ ಶಾಲೆಗೆ ಹೋಗಿ ಐದು ಬಾರಿ ಮಕ್ಕಳನ್ನು ವಿಚಾರಣೆ ಮಾಡುವ ಅಗತ್ಯವಿತ್ತಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದೆ.

ಅದು ನಿಜಕ್ಕೂ ದೇಶದ್ರೋಹವಾಗುತ್ತಾ ಇಲ್ಲವಾ ಎಂಬುದರ ಬಗ್ಗೆ ಅವರೇನೂ ಹೆಚ್ಚು ಮಾತಾಡಲಿಲ್ಲ. ವಿಚಾರಣೆಯಲ್ಲಿ ನೋಡೋಣ ಏನು ಬರುತ್ತೋ ಅಂತ ಅಂದರು. ಆದರೆ, ಶಾಲೆಗೆ ಹೋಗಿ ವಿಚಾರಣೆ ಮಾಡಿದ್ದರ ಬಗ್ಗೆ ಮಾತಾಡಿ ಅಷ್ಟು ಸಲ ಶಾಲೆಗೆ ಹೋಗಿ ವಿಚಾರಣೆ ಮಾಡುವ ಅಗತ್ಯವಿರಲಿಲ್ಲ ಎನ್ನುವ ಮೂಲಕ ಅಷ್ಟರ ಮಟ್ಟಿಗೆ ಪ್ರಾಮಾಣಿಕತೆಯನ್ನು ತೋರಿದರು.

“ವೈಯಕ್ತಿಕವಾಗಿ ನನಗನ್ನಿಸುವುದೇನೆಂದರೆ ಪದೇ ಪದೇ ಶಾಲೆಗೆ ಹೋಗಿ ವಿಚಾರಣೆ ನಡೆಸುವ ಅಗತ್ಯ ಇರಲಿಲ್ಲ. ಪ್ರಾಯಶಃ ವಿಚಾರಣಾಧಿಕಾರಿಗೆ ಒಮ್ಮೆ ಹೋದಾಗಲೇ ಎಲ್ಲಾ ಮಕ್ಕಳು ವಿಚಾರಣೆಗೆ ಸಿಕ್ಕಿರಲಿಕ್ಕಿಲ್ಲ ಅಥವಾ ಎಲ್ಲರನ್ನೂ ಒಂದೇ ದಿನ ವಿಚಾರಣೆ ಮಾಡುವುದಕ್ಕೆ ಆಗಿರಲಿಕ್ಕಿಲ್ಲ. ಹಾಗಾಗಿ ಮತ್ತೆ ಮತ್ತೆ ಹೋಗಬೇಕಾಗಿ ಬಂದಿರಬಹುದು. ಒಂದೇ ಮಗುವನ್ನು ಹಲವು ಬಾರಿ ವಿಚಾರಣೆ ನಡೆಸಿದ್ದು ಬಳಹ ಕಡಿಮೆ ಪ್ರತೀ ದಿನ ಬೇರೆ ಬೇರೆ ಮಕ್ಕಳನ್ನು ವಿಚಾರಣೆ ಮಾಡಲಾಗಿದೆ,” ಎಂದರು.

ಆಯೇಶಾಳನ್ನು ಭೇಟಿಯಾಗುವುದಕ್ಕೆ ಅವಕಾಶ ಇರಲಿಲ್ಲ. ಮಾಧ್ಯಮದವರು, ಇನ್ನಿತರ ಸಂಘಸಂಸ್ಥೆಗಳು ಮತ್ತು ಹೊರಗಿನವರು ಯಾರೂ ಆಕೆಯನ್ನು ಭೇಟಿಯಾಗುವುದಕ್ಕೆ ಅವಕಾಶ ಕೊಡಬಾರಂದೆಂದು ಮಕ್ಕಳ ಹಿತರಕ್ಷಣಾ ಸಮಿತಿ ಶಾಲೆಗೆ ತಿಳಿಸಿದೆ. ಹಾಗಾಗಿ, ಆಯೇಶಾ ಭೇಟಿ ಸಾಧ್ಯವಾಗಲಿಲ್ಲ.

ಆದರೆ, ಫೋನಿನಲ್ಲಿ ಸಿಕ್ಕಳು. ಅವಳ ತಾಯಿಯನ್ನು ನ್ಯಾಯಾಲಯದಲ್ಲಿ ಭೇಟಿಯಾಗಿದ್ದನ್ನು ಮತ್ತೆ ಜೈಲಿಗೆ ಹೋಗಿ ಭೇಟಿಯಾಗಲಿರುವುದನ್ನು ಹೇಳಿದೆ. ನಾನೂ ಭೇಟಿಯಾಗಬೇಕು ಎಂದಳು. ಅಮ್ಮನನ್ನು ನೋಡಬೇಕು ಎಂದಳು. ಏನು ಹೇಳಬೇಕು ಎಂಬುದು ತಿಳಿದಯದೇ ನನಗೆ ತೋಚಿದ ರೀತಿಯಲ್ಲಿ ಒಂದಿಷ್ಟು ಸಮಾಧಾನ ಮಾಡಿ ಫೋನ್ ಕಟ್ ಮಾಡಿದೆ.

ಅಂದಹಾಗೆ, ಬಂಧಿತರಾಗಿರುವ ನಜ್ಬುನ್ನಿಸಾ ಮತ್ತು ಫರೀದಾ ಬೇಗಂ ಅವರಿಗೆ ಮಧ್ಯಂತರ ಜಾಮೀನು ಕೊಡಬೇಕೆಂದು ಸಲ್ಲಿಸಿರುವ ಅರ್ಜಿ ಹಾಗೂ ಶಾಹೀನ್ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಖದೀರ್ ಮತ್ತು ಇತರ ಐವರು ಮ್ಯಾನೇಜ್ಮೆಂಟ್ ಸದಸ್ಯರನ್ನು ಬಂಧಿಸಬಾರದು ಎಂದು ಸಲ್ಲಿಸಿರುವ ನಿರೀಕ್ಷಣಾ ಜಾಮೀನಿನ ಅರ್ಜಿ ನ್ಯಾಯಾಲಯದ ಮುಂದೆ ಇಂದು ವಿಚಾರಣೆಗೆ ಬರುತ್ತಿವೆ. ಬೀದರ್ ರಾಜದ್ರೋಹ ಪ್ರಕರಣದ ಬಲಿಪಶುಗಳಿಗೆ ಒಳ್ಳೆಯದಾಗಲಿ ಎಂದು ನೀವೂ ಹಾರೈಸಿ.

(ಈ ಕುರಿತು ದಿ ಹಿಂದೂ ಪತ್ರಿಯಲ್ಲಿ ನನ್ನದೊಂದು ವರದಿ ಇದೆ. ಆಸಕ್ತರು ಓದಿಕೊಳ್ಳಬಹುದು – ಕುಮಾರ ಬುರಡಿಕಟ್ಟಿ )

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading

Trending