Connect with us

ದಿನದ ಸುದ್ದಿ

ಇಂಡಿಯಾ ಲಾಕ್ ಡೌನ್ : ಇದರ ಸೈಡ್ ಎಫೆಕ್ಟ್ ನಿಯಂತ್ರಣ ಹೇಗೆ..?

Published

on

  • ವಿವೇಕಾನಂದ. ಹೆಚ್.ಕೆ.

ವಿಶ್ವದಲ್ಲಿ ನಾಗರಿಕತೆಯ ಉಗಮ ದಾಖಲಾಗಿರುವ ದಿನದಿಂದ ಇಂದಿನವರೆಗೂ ಆಗಾಗ ಅನೇಕ ಆಘಾತಗಳನ್ನು ಅನುಭವಿಸುತ್ತಾ ಬಂದಿದೆ.

ಕಾಡಿನ ಕ್ರೂರ ಮೃಗಗಳಿಂದ, ಪ್ರಾಕೃತಿಕ ಅವಘಡಗಳಿಂದ, ರಾಜರುಗಳು ಆಕ್ರಮಣಗಳಿಂದ, ಭಯಂಕರ ಯುದ್ದಗಳಿಂದ, ಹುಚ್ಚು ಸರ್ವಾಧಿಕಾರಿಗಳಿಂದ ಬರಗಾಲದಿಂದ, ಅನೇಕ ರೋಗ ರುಜಿನಗಳಿಂದ ಎಲ್ಲಾ ಶತಮಾನಗಳಲ್ಲೂ ಆತಂಕ ಎದುರಿಸಿದೆ.

ಇದೀಗ ಕೊರೋನಾ ವೈರಸ್ ಆ ರೀತಿಯ ಒಂದು ಆತಂಕವಷ್ಟೆ. ಆಯಾ ಕಾಲಕ್ಕೆ ಅದೇ ಭಯಾನಕ. ಯಾವುದೂ ಹೆಚ್ಚು ಅಲ್ಲ ಕಡಿಮೆಯೂ ಅಲ್ಲ. ಕೆಲವು ಇಂಗ್ಲೀಷ್ ಸಿನಿಮಾಗಳಲ್ಲಿ ಬೇರೆ ಲೋಕದಿಂದ ದಾಳಿ ಇಡುವ ಏಲಿಯನ್ ಗಳ ವಿರುದ್ಧ ಹೋರಾಡುವ ದೃಶ್ಯಗಳನ್ನು ನೋಡಿರಬಹುದು. ಅವು ಮಾಡುವ ಅನಾಹುತಗಳು ಮತ್ತು ಕೊನೆಗೆ ಅವುಗಳ ವಿರುದ್ಧ ಜಯ. ಇದೂ ಸಹ ಅದೇ ರೀತಿ. ಆದರೆ ಅದು ಸಿನಿಮಾ ಇದು ವಾಸ್ತವ.

ಡಾರ್ವಿನ್‌ನ ಸಾರ್ವಕಾಲಿಕ ಸಿದ್ದಾಂತದಂತೆ ಬಲಿಷ್ಠವಾದದ್ದು ಮಾತ್ರ ಉಳಿಯುತ್ತದೆ. ಕೊರೋನಾ ವೈರಸ್ ಎಂಬ ಜೀವಾಣು ಮನುಷ್ಯನ ಮೇಲೆ ಯುದ್ಧ ಸಾರಿದೆ. ಸದ್ಯಕ್ಕೆ ಅದು ವಿಜಯದ ರಣಕೇಕೆ ಹಾಕುತ್ತಿದೆ. ಅದರ ವಿರುದ್ಧ ಮನುಷ್ಯ ಉಳಿವಿಗಾಗಿ ಹೋರಾಡುತ್ತಿದ್ದಾನೆ.

ಇದೀಗ ಅದರ ಹೋರಾಟದ ಭಾಗವಾಗಿ ಇಡೀ ಭಾರತವನ್ನು ಬಹುತೇಕ ಬಂದ್ ಮಾಡಲಾಗಿದೆ. ಆಧುನಿಕ ಕಾಲದ ಸುಮಾರು 50 ವಯಸ್ಸು ಆಸುಪಾಸಿನ ಜನರಿಗೆ ಇದರ ನೇರ ಅನುಭವ ಇರಲೇ ಇಲ್ಲ. ಅವರಿಗೆ ಇದೊಂದು ಅನಿರೀಕ್ಷಿತ ಆಘಾತ.

ಇರಲಿ ಈಗ ಮನೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಸಮಯ ಕಳೆಯುವ ಅನಿವಾರ್ಯತೆಗೆ ಸಿಲುಕಿದ್ದೇವೆ. ಈ ಸಮಯದಲ್ಲಿ ನಿಜವಾಗಲೂ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಬಹಳಷ್ಟು ಅಗ್ನಿ ಪರೀಕ್ಷೆಗೆ ಒಳಪಡುತ್ತದೆ. ಇಂದು ನಾಳೆ ನಾಡಿದ್ದು ಹಬ್ಬ, ಅದರ ಆಚರಣೆ,
ಸಾವಿನ ಭಯ ಆತಂಕ ಹೊಸ ಜೀವನ ಶೈಲಿಯ ಒತ್ತಡದಲ್ಲಿ ಅಷ್ಟಾಗಿ ಗೊತ್ತಾಗುವುದಿಲ್ಲ. ಆದರೆ ‌ನಂತರ ದಿನಗಳು ಕಷ್ಟವಾಗುತ್ತದೆ. ಮಾನಸಿಕ ಕಿರಿಕಿರಿ ಉಂಟುಮಾಡುತ್ತದೆ. ಅದಕ್ಕಾಗಿ ಸ್ವಲ್ಪ ಅನುಕೂಲಕರ ಪರಿಸ್ಥಿತಿಯ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು ಈ ಕೆಲವು ವಿಧಾನಗಳನ್ನು ಅನುಸರಿಸಬಹುದು.

ಯೋಗ ಪ್ರಾಣಾಯಾಮ ಧ್ಯಾನ ವ್ಯಾಯಾಮ ನೃತ್ಯಗಳ ಮೊರೆ ಹೋಗಬಹುದು. ದೈಹಿಕವಾಗಿ ದುರ್ಬಲರಾದವರು ಧ್ಯಾನ ಮತ್ತು ಪ್ರಾಣಾಯಾಮದಿಂದ ಸಾಕಷ್ಟು ಮಾನಸಿಕ ಲಾಭ ಪಡೆಯಬಹುದು.

ಇಲ್ಲಿಯವರೆಗೂ ಓದಲು ಸಾಧ್ಯವಾಗದ ಯಾವುದಾದರೂ ಆಸಕ್ತಿಯ ಪುಸ್ತಕಗಳನ್ನು ಓದಲು ಪ್ರಾರಂಭಿಸಬೇಕು. ಖಂಡಿತ ಓದು ನಿಮ್ಮನ್ನು ಮಾನಸಿಕ ಖಿನ್ನತೆಯಿಂದ ಪಾರು ಮಾಡುತ್ತದೆ.

ನಿಮ್ಮ ಆಸಕ್ತಿಯ ಏನನ್ನಾದರೂ ಬರೆಯಲು ಪ್ರಾರಂಭಿಸಿ. ಕನಿಷ್ಠ ದಿನಚರಿ ಅಥವಾ ಬದುಕಿನ ನೆನಪ ಪುಟಗಳಾದರೂ ದಾಖಲಿಸಿರಿ. ಇದು ಓದಿಗಿಂತ ಹೆಚ್ಚು ಸಮಾಧಾನಕರ ಪರಿಣಾಮ ನಿಮ್ಮ ಮನಸ್ಸಿನ ಮೇಲೆ ಬೀರುತ್ತದೆ.

ಹಳೆಯ ಗೆಳೆಯರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ತೃಪ್ತಿಯಾಗುವಷ್ಟು ಮಾತನಾಡಿ. ಅದನ್ನು ಈ ವಿರಾಮದ ಎಲ್ಲಾ ದಿನಗಳಲ್ಲಿಯೂ ಮುಂದುವರಿಸಿ. ಅಕ್ಷರದ ಚಾಟ್ ಗಳಿಗಿಂತ ನೇರ ಮಾತುಗಳು ನಿಮ್ಮನ್ನು ‌ಉಲ್ಲಸಿತರಾಗಿಡುತ್ತದೆ.

ಮಕ್ಕಳು ಮನೆಯವರೊಂದಿಗೆ ಚೆಸ್ ಕೇರಂ ಹಾವು ಏಣಿಯಾಟ ಚೌಕಾಬಾರ ಮುಂತಾದ ಆಟಗಳನ್ನು ಹಾಡಬಹುದು. ಇದು ನಿಮ್ಮ ಬಹುತೇಕ ಸಮಯ ಆಕ್ರಮಿಸುತ್ತದೆ. ಸಮಯ ಕಳೆಯುವುದೇ ತಿಳಿಯುವುದಿಲ್ಲ.

ಕುಟುಂಬ ಸ್ವಲ್ಪ ದೊಡ್ಡದಿದ್ದರೆ ಚೀಟಿ ಬರೆದು ಕಳ್ಳ ಪೋಲೀಸ್ ಆಟ, ಅಂತ್ಯಾಕ್ಷರಿ, ಖಾಲಿ ಹಾಳೆಯ ಮೇಲೆ ಚುಕ್ಕಿಯಿಟ್ಟು ಜೋಡಿಸುವುದು, ಕಣ್ಣಾ ಮುಚ್ಚಾಲೆ, ಯಾವುದಾದರೂ ವಸ್ತುಗಳನ್ನು ಮನೆಯಲ್ಲಿ ಮುಚ್ಚಿಟ್ಟು ಹುಡುಕುವುದು ಮುಂತಾದ ಆಟಗಳನ್ನು ಆಡಬಹುದು. ಇದು ಸ್ವಲ್ಪ ಖುಷಿ ಕೊಡುತ್ತದೆ.

ಸರಳ ರೀತಿಯ ಅಡುಗೆಗಳ ಪ್ರಯೋಗ ಮಾಡಬಹುದು. ಇಲ್ಲಿಯವರೆಗೂ ಮನೆಯಲ್ಲಿ ಯಾರು ಅಡುಗೆ ಮಾಡುತ್ತಿದ್ದರೋ ಅದನ್ನು ಬದಲಾಯಿಸಿ ಮತ್ತೊಬ್ಬರು ಒಂದಷ್ಟು ಪ್ರಯತ್ನಿಸಬಹುದು. ಆದರೆ ಮಿತ ಆಹಾರ ಒಳ್ಳೆಯದು.

ಆರೋಗ್ಯದ ಕಾರಣಕ್ಕಾಗಿ ಉಪವಾಸ ವೃತಗಳನ್ನು ಸಹ ಮಾಡಬಹುದು. ಹೌದು ಏಕತಾನತೆ ಮುರಿಯಲು ವೈದ್ಯರ ಸಲಹೆ ಮೇರೆಗೆ ಉಪವಾಸ ದೇಹ ಮತ್ತು ಮನಸ್ಸಿನ ನಿಯಂತ್ರಣಕ್ಕೆ ಒಳ್ಳೆಯ ಮದ್ದು.
ಅದು ಅವರವರ ಆರೋಗ್ಯ ಸ್ಥಿತಿ ಅವಲಂಬಿಸಿರುತ್ತದೆ.

ಅನುಕೂಲ ಇದ್ದರೆ ಅತ್ಯುತ್ತಮ ಸಿನಿಮಾ ನೋಡಬಹುದು ಮತ್ತು ಸಂಗೀತ ಆಲಿಸಬಹುದು. ಇವು ಖಂಡಿತವಾಗಿ ನಿಮ್ಮನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ಕೆಲವೊಮ್ಮೆ ಆಳವಾಗಿ ಯೋಚಿಸುವಂತೆ ಪ್ರೇರೇಪಿಸುತ್ತದೆ.

ಮೊಬೈಲ್ ನಲ್ಲಿರುವ ಅನೇಕ ಹೊಸ ಹೊಸ ತಾಂತ್ರಿಕ ಸಾಧ್ಯತೆಗಳನ್ನು ಕಲಿಯಲು ಪ್ರಯತ್ನಿಸಬಹುದು. ಸದಾ ವೇಗದ ಜೀವನದಲ್ಲಿ ನಾವು ಕನಿಷ್ಠ ಉಪಯೋಗ ಮಾತ್ರ ತಿಳಿದಿರುತ್ತೇವೆ. ಆದರೆ ಇಂದಿನ ಸ್ಮಾರ್ಟ್ ಫೋನ್ ಗಳಲ್ಲಿ ವಿಶ್ವ ರೂಪ ದರ್ಶನ ಪಡೆಯಬಹುದು.

ಮಾತಿನ ಸಂತೆಯಲ್ಲಿ ಮರೆಯಾಗಿದ್ದ ಮೌನದ ದಿವ್ಯತೆಯನ್ನು ಹಿಡಿದಿಡಲು ಪ್ರಯತ್ನಿಸಬಹುದು. ಮೌನ ತುಂಬಾ ಕಠಿಣ. ಆದರೆ ‌ ಅದು ಒಮ್ಮೆ ಅನುಭವಕ್ಕೆ ಸಿಕ್ಕರೆ ತುಂಬಾ ಪರಿಣಾಮಕಾರಿ. ಅದೊಂದು ಅನುಭಾವ. ಸಾಧ್ಯವಾದರೆ ಪ್ರಯತ್ನಿಸಿ.

ಇದು ನನಗೆ ಹೊಳೆದ ಕೆಲವು ವಿಷಯಗಳು ಮಾತ್ರ. ಇದರ ಜೊತೆಗೆ ನಿಮಗೂ ಹಲವಾರು ವಿಧಾನಗಳು ತಿಳಿದಿರುತ್ತದೆ. ನಾನು ಈ ಮೂಲಕ ಮತ್ತೊಮ್ಮೆ ನೆನಪಿಸುತ್ತಿದ್ದೇನೆ ಅಷ್ಟೆ.

ಇದರ ಜೊತೆ ಖಂಡಿತವಾಗಿಯೂ ಬಡಜನರನ್ನು ಜ್ಞಾಪಿಸಿಕೊಳ್ಳಲೇ ಬೇಕು. ಕರೋನ ವಿರುದ್ಧ ಈ ಕರ್ಪ್ಯೂ ಹೋರಾಟದ ಬಹುದೊಡ್ಡ ಸೈಡ್ ಎಪೆಕ್ಟ್ ಎಂದರೆ ಬೀದಿ ಬದಿಯ ಮನೆ ಇಲ್ಲದ ಸುಮಾರು 10 ಕೋಟಿ ಕಡುಬಡವರ ಬಹುತೇಕ ಸರ್ವನಾಶ.

ಸರ್ಕಾರಗಳು ಏನೇ ಹೇಳಿದರು ಈ‌ ಸಂದರ್ಭದಲ್ಲಿ ಆಡಳಿತ ಯಂತ್ರ ಅವರನ್ನು ಮುಟ್ಟುವುದು ತುಂಬಾ ಕಷ್ಟವಿದೆ. ಅವರು ಯಾವುದೇ ದಾಖಲೆ ಹೊಂದಿರದೆ ಲೆಕ್ಕಕ್ಕೇ ಸಿಗುವುದಿಲ್ಲ. ಉಳ್ಳವರು ಮತ್ತು ದಾನ ಮಾಡುವ ಮನಸ್ಸಿರುವವರು ಕೂಡ ಅವರಿಗೆ ಕೈಲಾದ ಸಹಾಯ ಮಾಡಲಾಗದ ಅಸಹಾಯಕ ಸ್ಥಿತಿ ಏರ್ಪಟ್ಟಿದೆ. ಹೊರಗೆ ಹೋಗುವಂತಿಲ್ಲ.

ಮುಖ್ಯವಾಗಿ ರಾಜ್ಯ ರಾಜಧಾನಿಗಳ, ದೊಡ್ಡ ನಗರಗಳ ಬಸ್ ನಿಲ್ದಾಣ, ರೈಲು ನಿಲ್ದಾಣ, ಫ್ಲೈ ಓವರ್ ಗಳ ಬಳಿ ಮಲಗುವವರ ಸ್ಥಿತಿ ನಾಯಿಗಿಂತ ಕಡೆಯಾಗಿರುತ್ತದೆ. ಇಲ್ಲ ಬೀದಿ ನಾಯಿಗಳು ಇನ್ನೂ ದುಸ್ಥಿತಿಗೆ ಹೋಗಿ ಜೀವ ಕಳೆದುಕೊಳ್ಳುತ್ತವೆ.

ನಾವು ಎಷ್ಟು ಸಾಧ್ಯವೋ ಎಲ್ಲಿ ಸಾಧ್ಯವೋ ಎಷ್ಟು ಅನುಕೂಲವೋ ಅದನ್ನು ಬಳಸಿಕೊಂಡು ಇಂತಹವರಿಗೆ ಸಹಾಯ ಮಾಡಲು ಪ್ರಯತ್ನಿಸೋಣ. ಅದು ಉಪಕಾರವಲ್ಲ ಕರ್ತವ್ಯ ಎಂದು ಭಾವಿಸೋಣ. ದಿನಗೂಲಿ ನೌಕರರು ಸಹ ಇದೇ ವ್ಯಾಪ್ತಿಯಲ್ಲಿ ಬರುತ್ತಾರೆ.

ಇಷ್ಟೆಲ್ಲದರ ನಡುವೆಯೂ ಈ ಸಿನೆಮಾ ಹಾಡು ಗುನುಗುನಿಸುತ್ತಿರಿ…ನಗುನಗುತಾ ನಲಿ ನಲಿ,
ಏನೇ ಆಗಲಿ..

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

Published

on

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.

ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.

ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

Published

on

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್‌ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್‌, ಚೇತನ್‌ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.

ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್‌ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್‌ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.

ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending