Connect with us

ದಿನದ ಸುದ್ದಿ

ಆತ್ಮೀಯ ಮುಸ್ಲಿಂ ಗೆಳೆಯರಿಗಾಗಿ, ಗೌರವಪೂರ್ವಕವಾಗಿ..!

Published

on

  • ವಿವೇಕಾನಂದ. ಹೆಚ್.ಕೆ.

ಹೌದು, ನಿಮಗೆ ತ್ರಿವಳಿ ತಲ್ಲಾಖ್ ವಿಷಯದಲ್ಲಿ, ಬಾಬರಿ ಮಸೀದಿ ವಿವಾದದ ತೀರ್ಪಿನ ವಿಷಯದಲ್ಲಿ, ಗೋ ಮಾಂಸ ನಿಷೇಧದ ವಿಚಾರದಲ್ಲಿ, ಸಿಎಎ – ಎನ್ ಆರ್ ಸಿ ತಿದ್ದುಪಡಿಯಲ್ಲಿ ಒಟ್ಟಾರೆಯಾಗಿ ಭಾರತದ ಈಗಿನ ಸರ್ಕಾರದ ಧೋರಣೆಯ ಬಗ್ಗೆ ಅಸಮಾಧಾನ ಇರಬಹುದು ಅಥವಾ ಇದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಅದರ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ಸಹ ಇತ್ತೀಚಿನ ವರೆಗೂ ನಡೆಯುತ್ತಿತ್ತು. ಅದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನಾತ್ಮಕ ಹಕ್ಕು.

ಆದರೆ ಈ ನಡುವೆ ಅನಿರೀಕ್ಷಿತವಾಗಿ ಕೊರೋನಾ ವೈರಸ್ ಇಡೀ ದೇಶವನ್ನು ಆಕ್ರಮಿಸಿ ಜೀವ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸಾಹಸವಾಗಿದೆ. ಜಾತಿ ಧರ್ಮ ಭಾಷೆ ಪಕ್ಷ ಪಂಥ ದೇವರು ಎಲ್ಲವೂ ಹಿನ್ನೆಲೆಗೆ ಸರಿದಿದೆ ಮತ್ತು ಸರಿಯಲೇಬೇಕು.

ಮಾಧ್ಯಮಗಳಲ್ಲಿ ಸ್ವಲ್ಪ ಪಕ್ಷಪಾತ, ದುಡುಕುತನ, ಅತಿರಂಜಿತ ವರದಿಗಳು ಇದೆ ಎಂದೇ ಭಾವಿಸಿದರೂ,ಇತರೆ ಧರ್ಮದ ಕೆಲವು ಕಾರ್ಯಕ್ರಮಗಳು ಸಹ ನಡೆದವು ಎಂಬುದು ನಿಜವಾದರೂ ಇಲ್ಲಿ ಯಾವುದೇ ನೆಪ ಹೇಳದೆ, ಯಾವುದೇ ಕಾರಣ ನೀಡದೆ ವೈದ್ಯಕೀಯ ಕ್ಷೇತ್ರದ ಸಲಹೆಯಂತೆ ಸರ್ಕಾರಗಳು ತೆಗೆದುಕೊಳ್ಳುವ ತೀರ್ಮಾನಗಳನ್ನು ಸಂಪೂರ್ಣ ಬೆಂಬಲಿಸುವ ಕರ್ತವ್ಯ ಮತ್ತು ಜವಾಬ್ದಾರಿ ಎಲ್ಲರಿಗೂ ಇದೆ.

ವಿರೋಧಿ ಗುಂಪಿನವರು ಒಂದಷ್ಟು ರಾಜಕೀಯ ಗೊಳಿಸುವುದು, ಪ್ರಚೋದಿಸುವುದು ಇದ್ದರೂ ಅದಕ್ಕೆ ಈಗ ಹೆಚ್ಚಿನ ಮಹತ್ವ ಕೊಡಬಾರದು. ಈ ದೇಶದ ಹಕ್ಕು ಮತ್ತು ಕರ್ತವ್ಯಗಳು ನಿಮಗೂ ಸಹ ಸಮ ಪ್ರಮಾಣದಲ್ಲಿ ಇದೆ. ಇದನ್ನು ಈಗ ಏಕೆ ಹೇಳಬೇಕಾಯಿತೆಂದರೆ ಮಸೀದಿಗಳಲ್ಲಿ ಈಗಲೂ ಸಾಮೂಹಿಕ ಪ್ರಾರ್ಥನೆಯ‌ ವರದಿಗಳು ಅಲ್ಲಲ್ಲಿ‌ ಕೇಳಿ ಬರುತ್ತಿರುವುದರಿಂದ.

ಇದು ಸಾವು ಬದುಕಿನ ಮತ್ತು ಹಸಿವು ಅಸ್ತಿತ್ವದ ಪ್ರಶ್ನೆ. ಇಡೀ ಭಾರತೀಯ ಜನ ಸಮುದಾಯ ಆತಂಕದಿಂದ ಇದ್ದು ಪ್ರತಿ ಕ್ಷಣವನ್ನೂ ತುಂಬಾ ಎಚ್ಚರಿಕೆಯಿಂದ ಗಮನಿಸುತ್ತಿದೆ. ಈಗ ಇಡುವ ಪ್ರತಿ ಹೆಜ್ಜೆಯೂ ಬಹಳಷ್ಟು ಚರ್ಚೆಗೆ ಗ್ರಾಸವಾಗುತ್ತದೆ ಮತ್ತು ಜನರ ಮನಸ್ಸಿನಲ್ಲಿ ಉಳಿಯುತ್ತದೆ.

ಈಗಾಗಲೇ ಮನಸ್ಸುಗಳು ಒಡೆದಿವೆ. ಎರಡೂ ಕಡೆ ಪ್ರಚೋದನಾತ್ಮಕ ಮಾತುಗಳು ಪರಿಸ್ಥಿತಿ ಕೈ ಮೀರುವಂತೆ ಮಾಡಿದೆ. ಧರ್ಮ, ರಾಜಕೀಯ ಮನೆಯೊಳಗೆ ಮನಸ್ಸುಗಳೊಳಗೆ ಬಂದಾಗಿದೆ. ಧರ್ಮಾಂಧತೆ ದೇಶವನ್ನು ಆಕ್ರಮಿಸಿಕೊಂಡಿದೆ. ಮೊದಲಿನಿಂದಲೂ ಇದ್ದ ಹಿಂದೂ ಮುಸ್ಲಿಂ ವೈಮನಸ್ಯ ಈಗ ಇನ್ನೂ ದೊಡ್ಡದಾಗಿದೆ.

ಮುಸ್ಲಿಂ ಭಾಂಧವರೆ ನಿಮ್ಮ ಆತ್ಮಾವಲೋಕನಕ್ಕಾಗಿ ಇತ್ತೀಚಿನ ಒಂದು ವರದಿ

38.40 ಲಕ್ಷ ಜನರ ಸಾವು. ಕೇವಲ 9 ವರ್ಷಗಳಲ್ಲಿ.2011 ರಿಂದ ಇಲ್ಲಿಯವರೆಗೆ.ಸಿರಿಯಾ ದೇಶದ ಆಂತರಿಕ ಯುದ್ಧದಿಂದಾಗಿ.ಗಂಡಸರೆಷ್ಟೋ, ಹೆಂಗಸರೆಷ್ಟೋ, ಮಕ್ಕಳೆಷ್ಟೋ,.ಯಾವ ಯಾವ ಭೀಕರ ರೀತಿಯಲ್ಲಿ ಯಾತನೆ ಅನುಭವಿಸಿ ಸತ್ತರೋ. ಬಹುತೇಕ ತಮ್ಮ ಅರ್ಧ ಆಯಸ್ಸನ್ನೂ ಮುಗಿಸದೇ ತೀರಿ ಹೋದರು.ಅವರನ್ನು ಅಲ್ಲಾ ಎಂಬ ದೇವರು ಸೃಷ್ಟಿಸಿದ್ದರು, ಇಸ್ಲಾಂ ಎಂಬ ಧರ್ಮ ಬೆಳೆಸಿತ್ತು, ಷಿಯಾ ಸುನ್ನಿ ಖುರ್ದ್ ಎಂಬ ಹೆಸರುಗಳು ವಿಭಜಿಸಿದ್ದವು ಎಂದು ನಂಬಲಾಗುತ್ತದೆ. ಆದರೆ ಯಾವುದೂ ಅವರ ರಕ್ಷಣೆಗೆ ಬರಲಿಲ್ಲ, ಕೇವಲ ಸುಮಾರು 1.80 ಕೋಟಿ ಜನಸಂಖ್ಯೆಯ ದೇಶದಲ್ಲಿ ಘರ್ಷಣೆಗೆ ಸತ್ತವರು 38.40 ಲಕ್ಷ ಜನರು.

ನನಗವರು ಮನುಷ್ಯರು ಮಾತ್ರ

ಸೃಷ್ಟಿಯಲ್ಲಿ ಗಂಡು ಹೆಣ್ಣಿನ ಮಿಲನದಿಂದ ಮತ್ತೊಂದು ಜೀವ ಜನ್ಮ ತಾಳುತ್ತದೆ.‌ಸಿರಿಯಾದಲ್ಲಿ ಮಗು ಜನಸಿದರೆ ಮುಸ್ಲಿಂ ಎನ್ನುತ್ತಾರೆ. ಇಂಗ್ಲೆಂಡ್ ನಲ್ಲಿ ಜನಸಿದರೆ ಕ್ರಿಶ್ಚಿಯನ್, ಇಸ್ರೇಲ್ ನಲ್ಲಿ ಯಹೂದಿ, ಜಪಾನ್ ನಲ್ಲಿ ಬೌದ್ದ, ಭಾರತದಲ್ಲಿ ಹಿಂದೂ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ .ಈ ವ್ಯತ್ಯಾಸಗಳೇ ಮಾನವ ಕುಲಕ್ಕೆ ಶಾಪವಾಗಿ ಪರಿಣಮಿಸಿದೆ.

ಹಿಂದೆ ಕ್ರಿಶ್ಚಿಯನ್ ಧರ್ಮದ ಯೂರೋಪಿಯನ್ ದೇಶಗಳಲ್ಲೂ ಇದಕ್ಕಿಂತ ಭಯಂಕರ ಮಾನವ ಹತ್ಯಾಕಾಂಡಗಳು ನಡೆದಿವೆ.ಫ್ರೆಂಚ್‌ ಕ್ರಾಂತಿಯ ರಕ್ತಪಾತ, ಎರಡು ಮಹಾಯುದ್ಧಗಳು, ಇಟಲಿ ದಂಗೆ, ಹಿಟ್ಲರನ ಸಾವಿನ ಶಿಬಿರಗಳು, ರಷ್ಯಾ ದೌರ್ಜನ್ಯ ಎಲ್ಲವೂ ಇತಿಹಾಸದಲ್ಲಿ ದಾಖಲಾಗಿದೆ.

ಹಾಗೆಯೇ ಹಿಂದೂ ಜೀವನಶೈಲಿಯ ಭಾರತದಲ್ಲೂ ಹಿಂಸೆಯ ಪ್ರಮಾಣ ಕಡಿಮೆ ಏನಿಲ್ಲ. ಕ್ರಿಸ್ತ ಪೂರ್ವದಲ್ಲೇ ಬುದ್ದ ಮಹಾವೀರರು ಅಹಿಂಸೆಯ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ ಎಂದರೆ ಆಗಲೇ ಹಿಂಸೆಯ ಪ್ರಮಾಣ ಎಷ್ಟಿತ್ತು ಎಂದು ಊಹಿಸಬಹುದು.

ಕಾರಣಗಳು ಏನೇ ಇರಲಿ
ಈ ಕ್ಷಣದಲ್ಲಿ ಪಾಕಿಸ್ತಾನ, ಇರಾನ್, ಇರಾಕ್, ಸಿರಿಯಾ, ಆಪ್ಘನಿಸ್ತಾನ, ಯೆಮೆನ್, ಟರ್ಕಿ ಮುಂತಾದ ಇಸ್ಲಾಮಿಕ್ ದೇಶಗಳೇ ಹೆಚ್ಚು ಸಾವು ನೋವಿಗೆ, ಆಂತರಿಕ ಕಲಹಗಳಿಗೆ ತುತ್ತಾಗುತ್ತಿವೆ.

ಈಗ ಗಂಭೀರವಾಗಿ ಯೋಚಿಸುವ ಸಮಯ ಬಂದಿದೆ. ಎಲ್ಲಾ ಧರ್ಮಗಳ ಮೂಲ ಆಶಯ ಮೂಲೆಗುಂಪಾಗಿ ಕೇವಲ ಆಚರಣೆಗಳು ಮಾತ್ರ ಜಾರಿಯಲ್ಲಿವೆ. ಇದಕ್ಕೆ ಇಸ್ಲಾಂ ಸಹ ಹೊರತಲ್ಲ.

ಹೌದು, ಭಾರತೀಯ ಮುಸ್ಲಿಮರಲ್ಲಿ ಬಡತನ ಅಜ್ಞಾನ ಗಾಢ ಧಾರ್ಮಿಕ ನಂಬಿಕೆಗಳು ಮನೆ ಮಾಡಿವೆ. ಧರ್ಮ ಗುರುಗಳ ಮಾತಿಗೆ ಅತಿ ಹೆಚ್ಚಿನ ಮಹತ್ವ ನೀಡುತ್ತಾರೆ. ಪ್ರಚೋದನಕಾರಿಯಾಗಿ ಮಾತನಾಡುವ ಹಿಂದೂಗಳು ಸಹ ಇದನ್ನು ಗಮನಿಸಬೇಕು. ಆತಂಕದಿಂದ ಎಲ್ಲಾ ತಪ್ಪುಗಳನ್ನು ಒಂದು ಸಮುದಾಯದ ತಲೆಗೆ ಕಟ್ಟಬಾರದು. ಸಂಯಮ ಅಗತ್ಯ.

ವಿವೇಚನೆ ಅಗತ್ಯ. ಕರೋನ ಬಂದಿದೆ ಎಂಬ ಒಂದೇ ಕಾರಣದಿಂದ ದಿನ ಬೆಳಗಾಗುವುದರಲ್ಲಿ ಎಲ್ಲರಲ್ಲೂ ದಿಡೀರನೇ ಪ್ರಬುದ್ದತೆ ನಿರೀಕ್ಷಿಸಲಾಗುವುದಿಲ್ಲ. ಸಬ್ ಕಾ ಸಾಥ್ ಸಬ್ ವಿಕಾಸ್ ಕೇವಲ ಘೋಷಣೆಯಾಗಬಾರದು. ಅದು ನಡವಳಿಕೆಯಾಗಬೇಕು. ಮಾಧ್ಯಮಗಳಂತೆ ವಿವೇಚನಾರಹಿತವಾಗಿ ಕೂಗಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳನ್ನು ಹರಡಬಾರದು. ಅದರಿಂದ ದೇಶಕ್ಕೆ ಅಪಾಯವೇ ಹೆಚ್ಚು.

ಎಲ್ಲಾ ಅಲ್ಪಸಂಖ್ಯಾತರಿಗೆ ಇರುವ ಅಭದ್ರತೆಯ ನಡುವೆಯೂ, ಮುಸ್ಲಿಂ ಸಮುದಾಯದಲ್ಲಿ ಪ್ರಗತಿಪರ ಚಿಂತನೆಗಳು ಸಮೂಹ ಪ್ರಜ್ಞೆಯಾಗಿ ಜಾಗೃತವಾಗಬೇಕು. ಧರ್ಮದ ಮೇಲಿನ ಅವಲಂಬಿನೆ ಕಡಿಮೆಯಾಗಬೇಕಿದೆ. ಅದಕ್ಕೆ ಹಿಂದೂಗಳು ಸಹ ಪ್ರೇರಣೆಯಾಗಬೇಕೆ ಹೊರತು ಪ್ರಚೋದಕರಾಗಬಾರದು. ಸುಮಾರು 18 ಕೋಟಿ ಜನಸಂಖ್ಯೆಯ ಒಂದು ಸಮುದಾಯವನ್ನು ಅಭದ್ರತೆಗೆ ತಳ್ಳಿ ದೇಶದ ಅಭಿವೃದ್ಧಿ ಶಾಂತಿ ಸಾಧ್ಯವೇ ಇಲ್ಲ.

ಎರಡೂ ಧರ್ಮಗಳಲ್ಲಿ ಕ್ರಿಯೆ ಪ್ರತಿಕ್ರಿಯೆಗಳು ಪ್ರಚೋದನಾತ್ಮಕವಾಗಿದ್ದು ಇದೇ ಕಾರಣದಿಂದ ಧೈರ್ಯವಾಗಿ ಮಾತನಾಡುವ ಖಂಡಿಸುವ ಸತ್ಯವನ್ನು ಬಯಲಿಗೆ ಎಳೆಯುವ ಜನರು ಕಡಿಮೆಯಾಗಿದ್ದಾರೆ. ಧರ್ಮ ಒಂದು ಸೂಕ್ಷ್ಮ ವಿಷಯ ಎಂಬ ನೆಪದಿಂದ ಮಾತನಾಡಲು ಹೆದರುತ್ತಾರೆ. ತಮ್ಮ ತಮ್ಮ ‌ಧರ್ಮ ದೇವರು ಗ್ರಂಥಗಳಲ್ಲಿ ಅಡಗಿರುವವರನ್ನು ನಾಗರಿಕ ಪ್ರಜ್ಞೆಗೆ ಎಳೆದು ತರಬೇಕಿದೆ. ಇದು ತುಂಬಾ ಕಷ್ಟ. ಆದರೂ ಮನುಷ್ಯನ ಉಳಿವಿಗಾಗಿ ನಿಂತ ನೀರಾಗಿ ಕೊಳೆತು ನಾರುತ್ತಿರುವ ಧಾರ್ಮಿಕತೆಯನ್ನು ಬಯಲಿಗೆ ಎಳೆಯಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳು ಇನ್ನಷ್ಟು ಭಯಂಕರ ಸ್ಥಿತಿ ತಲುಪುತ್ತದೆ. ಬಲವೇ ನ್ಯಾಯ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

Published

on

ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು

Published

on

ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.

ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.

ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending