ಬಹಿರಂಗ
ಬುದ್ಧನೋ..? ಕಾರ್ಲ್ ಮಾರ್ಕ್ಸೊ ..?
- ಅಂಬೇಡ್ಕರರು ಮೇಲಿನ ಹೆಸರಿನ ತಮ್ಮ ಲೇಖನದಲ್ಲಿ ಒಂದು ಮಹತ್ವದ ಸಂಶ್ಲೇಷಣೆಗೆ ಪ್ರಯತ್ನಪಟ್ಟರು. 20ನೇ-ಶತಮಾನದ ಚಾರಿತ್ರಿಕ ಸನ್ನಿವೇಶದಲ್ಲಿ ಮಾರ್ಕ್ಸ್ ವಾದ ಮತ್ತು ಬೌದ್ಧಧರ್ಮ ಪರಸ್ಪರ ವಿರುದ್ಧವೆಂಬಂತೆ ಕಾಣಿಸಿಕೊಂಡರೂ, ಅವುಗಳೊಳಗಿನ ಸಾಮ್ಯವನ್ನು ಹೊರಗೆಳೆಯಲು ಅಂಬೇಡ್ಕರ್ ಪ್ರಯತ್ನ ನಡೆಸಿದರು. ಈ ಲೇಖನದಲ್ಲಿ ವ್ಯಕ್ತಿ ಸಮಾಜಗಳೆರಡರ ಅಗತ್ಯಗಳನ್ನು ಒಳಗೊಳ್ಳುವ ಹೊಸ ವಿಚಾರಧಾರೆಯನ್ನು ನಿರ್ಮಿಸುವ ಒಳನೋಟವನ್ನು ಅಂಬೇಡ್ಕರ್ ನೀಡಲು ಪ್ರಯತ್ನಿಸುತ್ತಾರೆ. ಹೀಗಾಗಿ, ಅಂಬೇಡ್ಕರರ ಇಡೀ ವಿಚಾರಧಾರೆಯಲ್ಲಿ ಈ ಲೇಖನ ತುಂಬಾ ಮುಖ್ಯವಾದದು.
–ಅನುವಾದ : ವಿ.ಎಸ್.ಬಾಬು
ಕಾರ್ಲ್ ಮಾರ್ಕ್ಸ್ ಮತ್ತು ಬುದ್ಧರ ನಡುವಣ ಹೋಲಿಕೆಯೇ ಒಂದು ತಮಾಷೆಯಾಗಿ ಕಾಣಲು ಸಾಧ್ಯವಿದೆ. ಮಾರ್ಕ್ಸ್ ಮತ್ತು ಬುದ್ಧರ ನಡುವೆ 2381 ವರ್ಷಗಳಷ್ಟು ಅಂತರವಿದೆ. ಕ್ರಿ.ಪೂ. 563 ರಲ್ಲಿ ಬುದ್ಧ ಹುಟ್ಟದ್ದು, ಮಾರ್ಕ್ಸ್ 1818 ಎ.ಡಿ. ನಲ್ಲಿ ಹುಟ್ಟದ್ದು. ಹೊಸ ಆರ್ಥಿಕ ವ್ಯವಸ್ಥೆಯೊಂದರ ಪ್ರವಾದಿ ಮಾರ್ಕ್ಸ್. ಬುದ್ಧ ರಾಜಕೀಯ ಅಥವಾ ಅರ್ಥಶಾಸ್ತ್ರಕ್ಕೆ ಸಂಬಂಧವಿರದ ಹೊಸ ಧರ್ಮದ ಸ್ಥಾಪಕ ಎಂದು ಹೇಳಲಾಗಿದೆ. ಹೀಗಾಗಿ, ಈ ಹೋಲಿಕೆಯ ಪ್ರಯತ್ನವೇ ವಿಚಿತ್ರವಾಗಿ ಕಾಣಲು ಸಾಧ್ಯ. ಮಾರ್ಕ್ಸ್ ವಾದಿಗಳು ಈ ವಿಚಾರದ ಬಗ್ಗೆ ಗೇಲಿಮಾಡಿ ನಗಬಹುದು. ಆದರೆ, ಅವರು ತಮ್ಮ ಧೋರಣೆ ಬದಲಾಯಿಸಿ, ಗಂಭೀರವಾಗಿ ಗಮನಕೊಟ್ಟರೆ ಮಾರ್ಕ್ಸ್ ವಾದಿಗಳ ಧೋರಣೆಯೇ ಬದಲಾಗಲು ಸಾಧ್ಯವಿದೆ.
ಬುದ್ಧನ ವಿಚಾರಸಾರ
ಅಹಿಂಸೆಯ ಜೊತೆಗೆ ಬುದ್ಧನ ಹೆಸರನ್ನು ಸಾಮಾನ್ಯವಾಗಿ ಸೇರಿಸಲಾಗುತ್ತದೆ. ಅದೇ ಮೊದಲು ಮತ್ತು ಕೊನೆ ಎಂಬಂತೆಯೂ ಹೇಳಲಾಗಿದೆ. ಆದರೆ, ಬುದ್ಧ ಗುರುವಿನ ವಿಚಾರ ಬರೀ ಅಷ್ಟೇ ಅಲ್ಲ. ತ್ರಿಪಿಟಕ ದಲ್ಲಿನ ಬುದ್ಧನ ವಿಚಾರ ಹಾಗೂ ಮೌಲ್ಯಗಳನ್ನು ಮುಂದೆ
ಸಂಗ್ರಹಿಸಿದ್ದೇನೆ.
- ಮುಕ್ತ ಸಮಾಜದಲ್ಲಿ ಧರ್ಮದ ಅವಶ್ಯಕತೆಯಿದೆ.
- ಎಲ್ಲ ಧರ್ಮಗಳು ಅನುಸರಿಸಲು ಅರ್ಹವಲ್ಲ.
- ಧರ್ಮವೆನ್ನುವುದು ಜೀವನದ ಸತ್ಯ ಸಂಗತಿಗಳಿಗೆ ಸಂಬಂಧಿಸಿರಬೇಕು.ದೇವರ ಬಗೆಗಿನ ಸಿದ್ಧಾಂತ ಮತ್ತು ತತ್ವಗಳಿಗೆ ಅಲ್ಲ ; ಅಥವಾ ಆತ್ಮ ಸ್ವರ್ಗಗಳ ಬಗೆಗೂ ಅಲ್ಲ.
- ದೇವರನ್ನು ಧರ್ಮದ ಕೇಂದ್ರನೆಲೆ ಮಾಡುವುದು ಸರಿಯಲ್ಲ.
- ಪ್ರಾಣಿಬಲಿಯನ್ನು ಧರ್ಮದ ಕೇಂದ್ರವನ್ನಾಗಿ ನೋಡುವುದು ತಪ್ಪು.
- ನಿಜವಾದ ಧರ್ಮ ಮನುಷ್ಯನ ಹೃದಯದಲ್ಲಿರುತ್ತದೇ ಶಾಸ್ತ್ರಗಳಲ್ಲ.
- ಮನುಷ್ಯ ಮತ್ತು ನೈತಿಕತೆಯೇ ಧರ್ಮದ ಕೇಂದ್ರವಾಗಿರಬೇಕು ಅದಿಲ್ಲದಿದ್ದರೆ, ಧರ್ಮ ಕ್ರೂರ ಮೂಢನಂಬಿಕೆಯಾಗಿಬಿಡುತ್ತದೆ.
- ನೈತಿಕತೆ ಎನ್ನುವುದು ಜೀವನದ ಆದರ್ಶವಾಗಿದ್ದಾರೆ ಮಾತ್ರ ಸಾಲದು. ದೇವರಿಲ್ಲದ ಕಾರಣ ಅದು ಜೀವನದ ನಿಯಮ, ಕಾನೂನು ಕೂಡ ಆಗಬೇಕು.
- ಈ ಜಗತ್ತಿನಲ್ಲಿ ದುಃಖವೆನ್ನುವುದು ವಿವಿಧ ಆಸಕ್ತಿಗಳ ಘರ್ಷಣೆಯ ಕಾರಣಕ್ಕಾಗಿ, ಅದನ್ನು ಪರಿಹರಿಸಲು ಇರುವ ದಾರಿಯೆಂದರೆ ಅಷ್ಟಾಂಗ ಮಾರ್ಗ ಮಾತ್ರ.
- ಆಸ್ತಿಯ ಕಾಸಿಗೆ ಒಡೆತನ ಒಂದು ವರ್ಗಕ್ಕೆ ಶಕ್ತಿಯನ್ನೂ, ಇನ್ನೊಂದು ವರ್ಗಕ್ಕೆ ದುಃಖವನ್ನೂ ತರುತ್ತದೆ.
- ಸಮಾಜದ ಒಳಿತಿಗಾಗಿ ಈ ದುಃಖದ ಮೂಲ ಕಾರಣ ಆಸ್ತಿಯನ್ನೇ ಇಲ್ಲವಾಗಿಸಬೇಕು.
- ಎಲ್ಲ ಮಾನವರೂ ಸಮಾನರು.
- ಹುಟ್ಟಿನಿಂದ ಮನುಷ್ಯ ದೊಡ್ಡವನಾಗುವುದಿಲ್ಲ. ಗುಣದಿಂದ ಆಗುತ್ತಾರೆ.
- ಒಳ್ಳೆಯ ವಂಶದ ಹುಟ್ಟು ಮುಖ್ಯವಲ್ಲ. ಉನ್ನತಾರ್ದಶಗಳು ಮುಖ್ಯ.
- ಎಲ್ಲರ ಬಗೆಗೆ ಮೈತ್ರಿಯೇ ಮುಖ್ಯ. ಶತ್ರುವಿಗೂ ಕೂಡ ಅದು ಸಲ್ಲಬೇಕು.
- ಪ್ರತಿಯೊಬ್ಬನಿಗೂ ಕಲಿಯುವ ಹಕ್ಕಿದೆ. ಜ್ಞಾನವೆನ್ನುವುದು ಅನ್ನದಷ್ಟೇ ಮುಖ್ಯ.
- ಚಾರಿತ್ರ್ಯವಿಲ್ಲದ ಜ್ಞಾನ ಅಪಾಯಕಾರಿ.
- ಯಾವುದೂ ಶಾಶ್ವತವಲ್ಲ. ಪ್ರತಿಯೊಂದು ಕೂಡ ವಿಮರ್ಶೆಗೆ, ವಿಶ್ಲೇಷಣೆಗೆ ಒಳಗಾಗಬೇಕು.
- ಯಾವುದೂ ಅಂತಿಮವಲ್ಲ.
- ಎಲ್ಲವೂ ಕಾರ್ಯ–ಕಾರಣ ಸಂಬಂಧಕ್ಕೆ ಬದ್ಧ.
- ಪ್ರತಿಯೊಂದು ಪರಿವರ್ತನಶೀಲವೇ.
- ಸತ್ಯ ಮತ್ತು ಅಹಿಂಸೆಗಳಿಲ್ಲದಿದ್ದರೆ ಯುದ್ಧ ತಪ್ಪು.
- ಗೆದ್ದವನಿಗೆ ಸೋತವರ ಬಗೆಗೂ ಜವಾಬ್ದಾರಿ ಇರುತ್ತದೆ.
ಇದೆ ಬುದ್ಧ ವಿಚಾರ ಸಾರ ! ಎಷ್ಟು ಹಳೆಯದಾದರೂ ಎಷ್ಟೊಂದು ಹೊಸದಾಗಿ ಕಾಣುತ್ತದೆ !
ಮಾರ್ಕ್ಸ್ ನ ವಿಚಾರಗಳ ಸಾರ
- ತತ್ವಜ್ಞಾನದ ಗುರಿ ಜಗತ್ತಿನ ಮೂಲ ಸ್ವರೂಪವನ್ನು ವಿವರಿಸುವುದಲ್ಲ, ಬದಲಾಗಿ ಜಗತ್ತನ್ನು ಪುನರ್ ರಚಿಸುವುದು.
- ಚರಿತ್ರೆಯನ್ನು ರೂಪಿಸುವ ಶಕ್ತಿಗಳು ಪ್ರಧಾನವಾಗಿ ಆರ್ಥಿಕ ಶಕ್ತಿಗಳು
- ಸಮಾಜ ಯಾವಾಗಲೂ ಮಾಲೀಕರು ಮತ್ತು ಆಳುಗಳೆಂಬ ಎರಡು ವರ್ಗಗಳಾಗಿ ವಿಭಜನೆಯಾಗಿರುತ್ತದೆ. ಅವರುಗಳ ನಡುವೆ ಯಾವಾಗಲೂ ಘರ್ಷಣೆ ಸಾಗಿರುತ್ತದೆ.
- ಕೂಲಿಗಳ ದುಡಿಮೆಗಳ ಫಲವಾದ ಹೆಚ್ಚಳ ಮೌಲ್ಯವನ್ನು ಮಾಲೀಕರು ಯಾವಾಗಲೂ ಕಬಳಿಸುತ್ತಾರೆ.
- ಖಾಸಗಿ ಆಸ್ತಿಯ ರದ್ಧತಿ ಅಥವಾ ಉತ್ಪಾದನಾ ಸಾಧನಗಳ ರಾಷ್ಟ್ರೀಕರಣದಿಂದ ಮಾತ್ರ ಈ ಶೋಷಣೆ ನಿಲ್ಲುತ್ತದೆ.
- ಈ ಬಡತನ ಕಾರ್ಮಿಕರಲ್ಲಿ ಕ್ರಾಂತಿಕಾರಿ ಚೈತನ್ಯ ತುಂಬಿ ವರ್ಗಗಳ ಘರ್ಷಣೆವರ್ಗಯುದ್ಧವಾಗಿ ಮಾರ್ಪಾಡಾಗುತ್ತದೆ.
- ಕೂಲಿಕಾರರು ಮಾಲೀಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ, ಅವರು ಪ್ರಭುತ್ವವನ್ನು ವಶಪಡಿಸಿಕೊಂಡು ತಮ್ಮದೇ ಆದ ರಾಜ್ಯವನ್ನು ಸ್ಥಾಪಿಸುತ್ತಾರೆ. ಇದನ್ನೇ ಮಾರ್ಕ್ಸ್ ದುಡಿಮೆಗಾರರ ಸರ್ವಾಧಿಕಾರತ್ವ ಎಂದು ಕರೆಯುತ್ತಾನೆ,
ಈ ವಿದ್ಯಮಾನಗಳನ್ನು ಪಡೆಯಲಾಗುವುದಿಲ್ಲ. ಹೀಗಾಗಿ ಸಮಾಜವಾದ ಅನಿವಾರ್ಯ.
ಮಾರ್ಕ್ಸ್ ಸಿದ್ಧಾಂತದಲ್ಲಿ ಉಳಿಯುವುದೇನು..?
ಮಾರ್ಕ್ಸ್–ಬುದ್ಧರ ಹೋಲಿಕೆಗೆ ಮುಂಚೆ ಮಾರ್ಕ್ಸ್ ಸಿದ್ಧಾಂತದ ಮೂಲ ವಿಚಾರಗಳು ಎಷ್ಟರಮಟ್ಟಿಗೆ ಉಳಿದುಬಂದಿವೆ ಎಂದು ನೋಡಬೇಕು. 19ನೇ ಶತಮಾನದಲ್ಲಿ ಹುಟ್ಟಿದ ಈ ವಿಚಾರ ದಾರಿಯಲ್ಲಿ ಈಗ ಎಷ್ಟು ಉಳಿದಿದೆ ಎಂಬುದನ್ನು ನೋಡಬೇಕು. 1917 ರಲ್ಲಿ ರಷ್ಯದಲ್ಲಿ ಮಾತ್ರ ಕ್ರಾಂತಿಯಾಯಿತು. ಅಲ್ಲಿ ಸಾಕಷ್ಟು ಹಿಂಸೆ ರಕ್ತಪಾತವೂ ಆಯಿತು. ಜಗತ್ತಿನ ಇನ್ನೂ ಬಹಳಷ್ಟು ಭಾಗ ಕ್ರಾಂತಿಗಾಗಿ ಕಾಯುತ್ತಲೇ ಇದೆ. ಮಾರ್ಕ್ಸ್ ನ ವಿಚಾರಗಳಲ್ಲಿ ಸಾಕಷ್ಟನ್ನು ಚರಿತ್ರೆ ಮತ್ತು ಅನುಭವ ತಳ್ಳಿಹಾಕಿದೆ. ಆರ್ಥಿಕ ಸಿದ್ಧಾಂತವೇ ಪರಿಪೂರ್ಣ ಎಂದು ಈಗ ಯಾರೂ ಒಪ್ಪುವುದಿಲ್ಲ. ಕಾರ್ಮಿಕ ವರ್ಗ ದಿನೇ ದಿನೇ ಬಡವಾಗುತ್ತಿದೆ ಎಂಬ ಸಿದ್ಧಾಂತವನ್ನು ಕೂಡ ಈಗ ಯಾರೂ ಒಪ್ಪುವುದಿಲ್ಲ.
ಹೀಗಾಗಿ, ಮಾರ್ಕ್ಸ್ ನ ವಿಚಾರಗಳಲ್ಲಿ ಈಗ ಒಂದು ಚಿಕ್ಕ ಚಿಂತೆ ಆದರೆ ತುಂಬಾ ಪ್ರಬಲವಾದ ಚಿಂತೆ ಉಳಿದಿದೆ. ಅವು ನಾಲ್ಕು :
- ತತ್ವಜ್ಞಾನದ ಕೆಲಸ ಜಗತ್ತನ್ನು ಪುನರ್ ರಚಿಸುವುದು, ಬರೀ ವಿವರಣೆ ಅಲ್ಲ.
- ವರ್ಗಗಳ ನಡುವೆ ಆಕರ್ಷಣೆ ಇರುತ್ತದೆ.
- ಖಾಸಗಿ ಆಸ್ತಿ ಒಂದು ವರ್ಗಕ್ಕೆ ಶಕ್ತಿಯನ್ನು, ಇನ್ನೊಂದಕ್ಕೆ ದುಃಖವನ್ನು ತರುತ್ತದೆ.
- ಖಾಸಗಿ ಆಸ್ತಿಯ ನಿರ್ಮೂಲನದಿಂದ ಈ ದುಃಖ ನಿವಾರಣೆಯ ಅಗತ್ಯವಿದೆ.
ಇಲ್ಲಿಯ ಮೊದಲ ವಿಚಾರದ ಮಟ್ಟಿಗೆ ಬುದ್ಧ ಮತ್ತು ಮಾರ್ಕ್ಸ್ ರಲ್ಲಿ ಸಂಪೂರ್ಣ ಒಪ್ಪಿಗೆ ಇದೆ. ಎರಡನೆಯದರ ಬಗೆಗೂ ಒಪ್ಪಿಗೆ ಇದೆ ಎಂದೇ ಹೇಳಬೇಕು. ಬುದ್ಧನ ಅಷ್ಟಾಂಗ ಮಾರ್ಗವೇ ಇದಕ್ಕೆ ಸಾಕ್ಷಿ. ಬಳಸಿದ ಭಾಷೆ ಬೇರೆಯಾದರೂ ಅರ್ಥ ಒಂದೇ. ಖಾಸಗಿ ಆಸ್ತಿಯ ಬಗ್ಗೆಯೂ ಅಷ್ಟೇ, ಪರಸ್ಪರ ಒಪ್ಪಿಗೆ ಇದೆ. ಇನ್ನು ನಾಲ್ಕನೇ ಅಂಶದ ಬಗೆಗೆ ಬೇರೆ ಸಾಕ್ಷ್ಯದ ಅಗತ್ಯವೇ ಇಲ್ಲ. ಬಿಕ್ಷು ಸಂಘದ ನಿಯಮಗಳೇ ಅದನ್ನು ಸ್ಪಷ್ಟಪಡಿಸುತ್ತವೆ.
ಭಿಕ್ಷು ಸಂಘದ ನಿಯಮದ ಪ್ರಕಾರ ಒಬ್ಬ ಬೌದ್ಧ ಭಿಕ್ಷುಕನಿಗೆ 8 ವಸ್ತುಗಳು ಮಾತ್ರ ಇರಬೇಕು. ಅವುಗಳು ಹೀಗಿವೆ :
1,2,3,– ಮೂರು ತುಂಡುಬಟ್ಟೆ
4 – ಒಂದು ಲಂಗೋಟ
5. ಭಿಕ್ಷಾ ಪಾತ್ರೆ
6. ಒಂದು ಕತ್ತಿ
7. ಒಂದು ಸೂಜಿ
8. ನೀರಿನ ಪಾತ್ರೆ
ಚಿನ್ನ ಬೆಳ್ಳಿಯನ್ನು ಭಿಕ್ಷೆಯಾಗಿ ಸ್ವೀಕರಿಸಲೇಬಾರದು.ರಷ್ಯಾದ ನಿಯಮಗಳಿಗಿಂತ ಇವು ಹೆಚ್ಚು ನಿಷ್ಠುರ.
ಸಾಧನದ ಬಗ್ಗೆ
ತನ್ನ ಕಲ್ಪನೆಯ ಸಮತಾವಾದವನ್ನು ತರುವಲ್ಲಿ ಬುದ್ಧನ ವಿಚಾರಗಳು ನಿರ್ದಿಷ್ಟವಾಗಿ ಇದ್ದವು. ಅದನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, ಒಬ್ಬ ಮನುಷ್ಯನನ್ನು ನೈತಿಕ ಮಾರ್ಗ ಬಳಸಿ ಬದಲಾಯಿಸಬೇಕು. ಕಮ್ಯುನಿಸ್ಟರ ಸಾಧನ ಕೂಡ ಸ್ಪಷ್ಟ–ಹಿಂಸೆ ಮತ್ತು ಕಾರ್ಮಿಕ ವರ್ಗದ ಸರ್ವಾಧಿಕಾರತ್ವ. ಇದರಿಂದ ಸ್ಪಷ್ಟವಾಗುವುದೇನೆಂದರೆ, ಬುದ್ಧ ಮತ್ತು ಮಾರ್ಕ್ಸ್ ರ ಅಂತಿಮ ಗುರಿ ಒಂದೇ ಆದರೂ, ದಾರಿಗಳು ಮಾತ್ರ ಬೇರೆ. ಬುದ್ಧ ಮಾರ್ಗದ ಪರಮಗುರಿ ಎಂದರೆ ನೈತಿಕ ಶಕ್ತಿಯನ್ನು ಯಾವುದೇ ರೀತಿಯ ಮೃಗೀಯ ಶಕ್ತಿ ತಳ್ಳಿಹಾಕಬಾರದು ಎಂದು. ಪ್ರತಿಯೊಬ್ಬ ಮನುಷ್ಯನೂ ಉತ್ತಮ ರಾಜ್ಯದ ಸಾಧನವಾಗಬೇಕು ಎಂದು.
ಪ್ರಭುತ್ವದ ನಿರ್ನಾಮದ ಪ್ರಶ್ನೆ
ತಮ್ಮ ರಾಜಕೀಯ ತತ್ವಜ್ಞಾನದ ಪ್ರಮುಖ ದೋಷವೆಂದರೆ ಕಾರ್ಮಿಕರ ಶಾಶ್ವತ ಸರ್ವಾಧಿಕಾರತ್ವದ ಪರಿಕಲ್ಪನೆ ಎಂದು ಕಮ್ಯುನಿಸ್ಟರು ಕೂಡ ಒಪ್ಪಿಕೊಳ್ಳುತ್ತಾರೆ. ಅಂತಿಮವಾಗಿ ಪ್ರಭುತ್ವ ಶಿಥಿಲವಾಗಿ ಉದುರಿಹೋಗುತ್ತದೆ ಎಂಬ ವಾದದ ಅಡಿಯಲ್ಲಿ ಅವರು ರಕ್ಷಣೆ ಪಡೆಯಲು ಯತ್ನಿಸುತ್ತಾರೆ. ಆದರೆ ಯಾವಾಗ ಅದು ನಿರ್ನಾಮವಾಗುತ್ತದೆ? ನಿರ್ದಿಷ್ಟ ಕಾಲಾವಧಿ ಕೊಡಲು ಮಾರ್ಕ್ಸ್ ವಿಫಲರಾಗುತ್ತಾರೆ. ಈ ರೀತಿಯ ಕಾರ್ಮಿಕ ಸರ್ವಾಧಿಕಾರತ್ವ ಅಲ್ಪಕಾಲಾವಧಿಗೆ ಒಳ್ಳೆಯದು; ಮತ್ತು ಅಗತ್ಯವೂ ಇರುತ್ತದೆ.
ತನ್ನ ಕೆಲಸ ಮುಗಿದ ನಂತರ ಕಾರ್ಮಿಕ ವರ್ಗದ ಸರ್ವಾಧಿಕಾರತ್ವ ಯಾಕೆ ಬೇರೆಯದಕ್ಕೆ ಮಾಡಿಕೊಳ್ಳಬಾರದು ?
ಅಶೋಕನದೇ ಸ್ವತಃ ಆ ರೀತಿಯ ಉದಾಹರಣೆ ಇದೆಯಲ್ಲ ! ಅಶೋಕ ಕಳಿಂಗ ಯುದ್ಧದ ನಂತರ ಅಪೂರ್ಣ ಅಹಿಂಸೆಯನ್ನೇ ಸ್ವೀಕರಿಸಿದನಲ್ಲ. ಈ ರೀತಿ ಪ್ರಭುತ್ವ ವಾಪಸಾದ ಮೇಲೆ ಅದರ ಜಾಗವನ್ನು ಯಾವುದು ತುಂಬುತ್ತದೆ ? ಧರ್ಮ ಮಾತ್ರ. ಆದರೆ, ಧರ್ಮ ಎಂದರೇನೆ ಕಮ್ಯುನಿಸ್ಟರಿಗೆ ಅಸಹ್ಯ.
ಸ್ವಾತಂತ್ರ್ಯ ಸಮಾನತೆ, ಸೋದರತೆಗಳ ಜತೆಗೆ ಮಾನವನ ಬೌದ್ಧಿಕ ಸುಖ, ಸಂಪತ್ತಿನ ಅಗತ್ಯವನ್ನೂ ಮೇಳೈಸಬಲ್ಲ ಏಕೈಕ ಧರ್ಮವೆಂದರೆ ಬೌದ್ಧಧರ್ಮ ಮಾತ್ರ. ಕಮ್ಯುನಿಸಂ ಒಂದನ್ನು ಮಾತ್ರ ಕೊಡಬಲ್ಲದು ಉಳಿದವನಲ್ಲ.
ಆಕರ ಗ್ರಂಥಗಳು
- ಅಂಬೇಡ್ಕರ್ ವಿಚಾರ ಸಂಗ್ರಹಮಾಲೆ 2 ಧಾರ್ಮಿಕ ಚಿಂತನೆ
- The Buddha and His Dhamma – B. R. Ambedkar
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.



