Connect with us

ದಿನದ ಸುದ್ದಿ

ಪರಿಸರದ ಪ್ರಜ್ಞೆ ಇಲ್ಲದಾಗ, ಸೃಷ್ಟಿಸುತ್ತಿರುವ ಜಾಗತಿಕ ತಲ್ಲಣಗಳು..!

Published

on

  • ಸೋಮನಗೌಡ. ಎಸ್.ಎಂ ಕಟ್ಟಿಗೆಹಳ್ಳಿ,ಪತ್ರಕರ್ತರು, ಬೆಂಗಳೂರು

ರಮಾಣು ಬಾಂಬುಗಳನ್ನು ಒಂದಾದ ಮೇಲೆ ಒಂದರಂತೆ ಸಿಡಿಸಿ ಈ ಜಗತ್ತಿನ ಪವರ್ ಫುಲ್ ರಾಷ್ಟ್ರ ಅಮೆರಿಕವನ್ನೇ ನಿರ್ನಾಮ ಮಾಡುತ್ತೇನೆ ಎಂದಿದ್ದ ಉತ್ತರ ಕೋರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಈಗ ಅನಾರೋಗ್ಯದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ತನ್ನಲ್ಲಿರುವ ಪರಮಾಣು ಸಿಡಿತಲೆಗಳಿಂದ ಇರಾನ್ ದೇಶವನ್ನೇ ನಿರ್ನಾಮ ಮಾಡಬಲ್ಲೆ ಅಂತ ಹೇಳಿದ್ದ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇಡೀ ವಿಶ್ವವನ್ನೇ ದಂಗು ಬಡಿಸುತ್ತಿರುವ ಕೋವಿಡ್-19 ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ.

ಅತ್ಯಾಧುನಿಕ ಮಿಸೈಲ್‍ಗಳು, ಅಣುಬಾಂಬ್‍ಗಳು, ಶಸ್ತ್ರಸಜ್ಜಿತ ಸೈನ್ಯನಿಂದ ತಮ್ಮ ತಮ್ಮ ದೇಶಗಳನ್ನು ರಕ್ಷಿಸಿಕೊಂಡಿರುವ ಬಹುತೇಕ ಎಲ್ಲಾ ದೇಶಗಳನ್ನು ಕಾಣದ ಒಂದು ವೈರಣು ಜಗತ್ತನ್ನೇ ನಾಶ ಮಾಡಲು ತನ್ನ ಕಬಂಧಬಾಹುವನ್ನು ಚಾಚುತ್ತಲೇ ಇದೆ.

ವಿಶ್ವದ ಜನರೆಲ್ಲರೂ ಕೊರೋನಾ ವೈರಸ್ ಎಂಬ ಯಃಕಶ್ಚಿತ್ ಸೂಕ್ಷ್ಮಾಣುವಿಗೆ ಹೆದರಿ ಮನೆಯಲ್ಲೇ ಅವಿತು ಕುಳಿತಿದ್ದಾರೆ. ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪ್ರಪಂಚದ ಎಲ್ಲಾ ನಗರಗಳು ಬಿಕೋ ಎನ್ನುತ್ತಿವೆ. ಆಕಾಶ ಶುಭ್ರವಾಗಿದೆ. ನದಿಗಳು ಶುದ್ಧವಾಗಿ ಹರಿಯುತ್ತಿವೆ. ಕಾಡುಪ್ರಾಣಿ, ಪಕ್ಷಿಗಳೆಲ್ಲವೂ ನಗರಗಳತ್ತ ಮುಖಮಾಡುತ್ತಿವೆ.

ಲೇಖಕರು : ಸೋಮನಗೌಡ. ಎಸ್.ಎಂ ಕಟ್ಟಿಗೆಹಳ್ಳಿ, ಪತ್ರಕರ್ತರು, ಬೆಂಗಳೂರು

ಮತ್ತೊಂದೆಡೆ ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಬಡತನದ ರೇಖೆ ಹೆಚ್ಚಾಗುತ್ತಿದೆ. ಕೋವಿಡ್ ಎಂಬ ಸೂಕ್ಷ್ಮಾಣು ಅಕ್ಷರಶಃ ಜಗತ್ತನ್ನೇ ತಲ್ಲಣಗೊಳಿಸಿದೆ. ಈಗ ನಾವು ವಿಜ್ಞಾನದ ಯುಗದಲ್ಲಿದ್ದೇವೆ. ನಮ್ಮ ಮುಂದೆ ವಿಜ್ಞಾನ ಹೊಸ ತರ್ಕ ಮತ್ತು ಹೊಸ ಸತ್ಯ ಶೋಧನೆಯನ್ನು ಮುಂದಿಟ್ಟಿದೆ.

ಆದರೆ ಮನುಷ್ಯ ಇಂದಿಗೂ ಎದುರಿಸುತ್ತಿರುವ ಹಳೆಯ ಯಕ್ಷಪ್ರಶ್ನೆ ನಾವು ಪರಿಸರ ಮುಂದೆ ಕೇವಲ ಬುದ್ಧಿ ಜೀವಿಗಳಷ್ಟೇ? ಜೀವ ಜಗತ್ತಿನ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಮುಂದೆ ಮನುಷ್ಯ ಎದುರಿಸುವ ಅತ್ಯಂತ ದೊಡ್ಡ ವಿಪತ್ತು ಜೈವಿಕ ಪ್ರಳಯ!

ಇಡೀ ವಿಶ್ವ ಒಂದು ಬೀಜರೂಪದ ಮಹಾನ್ ಅಗ್ನಿ. ಬಿಂದುವಿನಿಂದ ಆಸ್ಫೋಟಗೊಂಡು ವಿಶ್ವರೂಪ ತಳೆಯುತ್ತಾ ಸಾಗುತ್ತಿದೆ. ಸೃಷ್ಟಿ ಸ್ಥಿತಿ ಲಯಗಳ ನಿರಂತರ ಆವರ್ತದಲ್ಲಿ ವಿಶ್ವ ಇದೆ ಎಂದು ಪ್ರತಿಪಾದಿಸುತ್ತಾರೆ ಖ್ಯಾತ ಖಭೌತ ವಿಜ್ಞಾನಿ ಹಬಲ್ ಮತ್ತು ರಾಬರ್ಟ್ ಸನ್.

ಭೂಮಿಯ ಅವೈಜ್ಞಾನಿಕ ಮೂಲದಿಂದ ಜೈವಿಕ ಸೃಷ್ಟಿಯ ದಾರಿಯಲ್ಲಿ ಜೀವಿಗಳ ಬೆಳವಣಿಗೆ ಹೇಗಾಯಿತು ಎಂಬುದಕ್ಕೆ ನಿಖರವಾದ ಉತ್ತರ ಇನ್ನೂ ದೊರೆಯದಿದ್ದರೂ ವಿಶ್ವಸ್ಥಾಯಿ ವಾದ ಸಿದ್ಧಾಂತದ ಪ್ರವರ್ತಕರಲ್ಲಿ ಮುಖ್ಯವಾದ ಖಗೋಳ ವಿಜ್ಞಾನಿಗಳಾದ ಫ್ರೆಡ್‍ಹಾಯ್ಲ್ ಮತ್ತು ಭಾರತೀಯ ಗಣಿತ ಶಾಸ್ತ್ರಜ್ಞ ವಿಷ್ಣುಜಯಂತ್, ನಾರ್ಲೀಕರ್ ಮುಂತಾದವರು ವಿಶ್ವವನ್ನು ಅನಾದಿ, ಅನಂತ ಎನ್ನುತ್ತಾರೆ.

ಭೂಮಿ ಲಕ್ಷಾಂತರ ವರ್ಷಗಳ ಹಿಂದೆ ಸೂಕ್ಷ್ಮಾಣು ಜೀವಿಯಿಂದ ಪ್ರಾರಂಭಗೊಂಡ ಜೀವ ಸಂಕುಲ ಮನುಷ್ಯ ಸೇರಿದಂತೆ ಸಕಲ ಚರಾಚರ ಜೀವಿಗಳಿಗೆ ಆವಾಸಸ್ಥಾನ ಈ ವಸಂಧರೆ. ಜೀವವಿಕಾಸದ ಅತ್ಯಂತ ಸಂಕೀರ್ಣವೂ, ವಿಸ್ಮಯಗಳ ಮ್ಯಾಜಿಕ್ ಬಾಲ್ ಈ ಧರೆ.

ನಾವು ಭೂಮಿಯ ಒಂದು ಭಾಗ ಮಾತ್ರ ಎನ್ನುವುದನ್ನು ಮನವರಿಕೆ ಮಾಡಿ ಕೊಳ್ಳಬೇಕು. ಇಲ್ಲಿ ಇರುವುದು ಮನುಷ್ಯ ಜೀವಿ ಮಾತ್ರವಲ್ಲ. ಜೀವ ಪರಿಸರದ ಒಂದು ಅಂಗ ಮಾತ್ರ. ಈ ಧರೆಯಲ್ಲಿ ಮನುಷ್ಯನಂತೆಯೇ ಲಕ್ಷಾಂತರ ಜೀವಿಗಳಿಗೂ ಬದುಕುವ ಹಕ್ಕಿದೆ, ಸ್ವಾತಂತ್ರವಿದೆ.

ಮನುಷ್ಯನಿಗೆ ತಗುಲಿರುವ ಕೊರೋನಾ ಸೂಕ್ಷ್ಮಾಣು ಈಗ ಪ್ರಾಣಿ ಸಂಕುಲವನ್ನು ಆವರಿಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಅಮೆರಿಕದ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿರುವ ನಾಲ್ಕು ವರ್ಷದ ‘ಮಲಯನ್’ ಎಂಬ ಹೆಸರಿನ ಹುಲಿಗೆ ಕೋವಿಡ್-19 ವೈರಸ್ ತಗುಲಿದೆ.

ಈಗ ಮನುಷ್ಯನನ್ನಷ್ಟೇ ಅಲ್ಲ ಪ್ರಾಣಿಗಳಿಗೂ ಮಾರಕ ವೈರಾಣು ದಾಂಗುಡಿ ಇಟ್ಟಿರುವುದು ಪ್ರಾಣಿ ತಜ್ಞರಲ್ಲಿ ಆತಂಕ ಸೃಷ್ಟಿಸಿದೆ. ಮನುಷ್ಯನಿಂದ-ಪ್ರಾಣಿಗಳಿಗೆ ಸೋಂಕು ತಗುಲಿರುವುದು ಆತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಮನುಷ್ಯ ಸಮಾಜದಿಂದ ದೂರವಿರುವ ಕಾಡು ಪ್ರಾಣಿಗಳನ್ನು ಕೊರೋನಾ ಮತ್ತಿತರ ರೋಗಾಣುಗಳು ಬಾಧಿಸಿದರೆ ಭವಿಷ್ಯದಲ್ಲಿ ಜೈವಿಕ ಸರಪಳಿಯ ಕೊಂಡಿ ಕಳಚಿ ಈ ಪರಿಸರವೇ ನಾಶವಾದೀತು! ಕಾಡುಪ್ರಾಣಿಗಳಿಗೆ ಕೊರೋನಾ ವೈರಸ್ ಹಬ್ಬುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಇವುಗಳನ್ನು Zoonatic ಕಾಯಿಲೆಗಳೆಂದು ಕರೆಯಬಹುದು. ಇವು ಮನುಷ್ಯನ ಹಲವು ಕಾರ್ಯ ಚಟುವಟಿಕೆಗಳಿಂದಲೇ ಹರಡಬಹುದು.

ಉದಾಹರಣೆಗೆ ಕೊರೋನಾದಂತೆಯೇ ಎಬೊಲ, ಸಾರ್ಸ್ ವೈರಸ್‍ಗಳು ವನ್ಯಜೀವಿಗಳಿಂದಲೇ ಬಂದಿವೆ. ಅಂದರೆ ಹಾವು, ಬಾವಲಿ ಮತ್ತು ಇತರ ಪ್ರಾಣಿಗಳಿಂದ, ಗಿಡ ಮತ್ತು ಕೀಟಗಳಿಂದ. ಜೊನಾಟಿಕ್ ಕಾಯಿಲೆಗಳು ಹೆಚ್ಚಾಗಿ ಹರಡುವುದು ಮನುಷ್ಯನ ಚಟುವಟಿಕೆಗಳಿಂದಲೇ. ಆತ ಕಡಿಯುವ ಕಾಡು, ಸೃಷ್ಟಿಸುವ ಪರಿಸರ ಮಾಲಿನ್ಯ ಮತ್ತು ಜಾಗತಿಕ ವ್ಯಾಪಾರ ವಹಿವಾಟುಗಳು ಈ ವಿಷಯದಲ್ಲಿ ಬೃಹತ್ ಪಾತ್ರವನ್ನೇ ಸೃಷ್ಟಸಿದೆ.

ನೋವೆಲ್ ಕೊರೋನಾ ಅಥವಾ ಕೋವಿಡ್-19 ಎನ್ನುವ ಮಾರಕ ಕಾಯಿಲೆ ಬಂದಿದ್ದು ಮಾತ್ರ ಚೀನಾದ ವುಹಾನ್ ಮಾರುಕಟ್ಟೆಯಿಂದ. ಒಂದು ಬಾವಲಿಯೊಳಗಿನ ಸೂಕ್ಷ್ಮಾಣು ಮನುಷ್ಯಲೋಕದ ಎಲ್ಲಾ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿದೆ. ಲಸಿಕೆಯೇ ಇಲ್ಲದ ಈ ವೈರಸ್‍ಗೆ ಲಾಕ್‍ಡೌನ್, ಸೀಲ್‍ಡೌನ್ ಮತ್ತು ಕ್ವಾರಂಟೈನ್ ಎನ್ನುವ ಸ್ವಯಂ ನಿಯಂತ್ರಣವೇ ಮದ್ದು.

ಇದರಿಂದಾಗಿ ಭೂಮಿಯ ಕಲುಷಿತ ಪರಿಸರದ ಮೇಲೆ ಎಂತಹ ಪರಿಣಾಮ ಉಂಟುಮಾಡಿದೆ ಎನ್ನುವುದು ನಾವೆಲ್ಲಾ ನೋಡುತ್ತಿದ್ದೇವೆ. ಪ್ರಕೃತಿ ಮಾತೆ ಮನುಷ್ಯನಿಗೆ ಅನೇಕ ಎಚ್ಚರಿಕೆಗಳನ್ನು ನೀಡುತ್ತಾಬಂದಿದೆ.

ಸಾಂಕ್ರಾಮಿಕ ರೋಗಗಳು ಈ ಜಗತ್ತಿನಲ್ಲಿ ಮಹತ್ವದ ಬದಲಾವಣೆಗೆ ಹಲವು ಬಾರಿ ಮುನ್ನುಡಿ ಬರೆದಿವೆ.
ಈ ಹಿಂದೆ ಜಗತ್ತನ್ನೇ ಕಾಡಿದ ಮಹಾಮಾರಿಗಳಿಗೆ ಬಹುದೊಡ್ಡ ಇತಿಹಾಸವೇ ಇದೆ. 12 ಸಾವಿರ ವರ್ಷಗಳಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಜಗತ್ತನ್ನು ದಂಗು ಬಡಿಸಿವೆ. ಚೀನಾದ ಹಮೀನ್ ಮಂಘಿ ಎಂಬಲ್ಲಿ ಪತ್ತೆ ಮಾಡಲಾದ ಸುಮಾರು 5000 ವರ್ಷಗಳಷ್ಟು ಹಳೆಯ ಮನೆಯೊಂದರಲ್ಲಿ ಉತ್ಕನನದ ವೇಳೆ ಸುಟ್ಟು ಕರಕಲಾದ ನೂರಾರು ಅಸ್ತಿಪಂಜರಗಳು ಕಂಡವು.

ಯಾವುದೋ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಇಡೀ ಊರಿಗೂರೇ ಬಲಿಯಾಗಿರಬಹುದು. ಎಲ್ಲ ಶವಗಳನ್ನು ಒಂದೇ ಮನೆಯಲ್ಲಿ ಸುಟ್ಟುಹಾಕಿರಬಹುದು ಎಂದು ಪುರಾತತ್ವ ಸಂಶೋಧಕರು ವಿಶ್ಲೇಷಿಸಿದ್ದಾರೆ. ಕ್ರಿ.ಪೂ 430ರಲ್ಲಿ ಗ್ರೀಸ್ ದೇಶದ ಅಥೆನ್ಸ್‌ನಲ್ಲಿ ಕಂಡ ವಿಚಿತ್ರ ಕಾಯಿಲೆಗೆ ಲಕ್ಷಾಂತರ ಮಂದಿ ಸತ್ತರು. ಇದನ್ನು ಪ್ಲೇಗ್ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.

ಕ್ರಿ.ಶ. 165 ರಿಂದ 180 ಹಾಗೂ 250 ರಿಂದ 271 ಮತ್ತು 541-542ರಲ್ಲಿ ರೋಮ್‍ನಲ್ಲಿ ಪ್ಲೇಗ್ ರೋಗಕ್ಕೆ ಲಕ್ಷಾಂತರ ಮಂದಿ ಪ್ರಾಣತೆತ್ತರು. ಕ್ರಿ.ಶ. 250ರಿಂದ271ರ ಪ್ಲೇಗ್ ಎಷ್ಟು ಭೀಕರವಾಗಿತ್ತು ಎಂದರೆ ಇದು ಉತ್ತುಂಗಕ್ಕೇರಿದಾಗ ದಿನಕ್ಕೆ 5000 ಮಂದಿ ರೋಮ್ ನಗರವೊಂದರಲ್ಲೇ ಸಾಯುತ್ತಿದ್ದರು ಎಂದು ಇತಿಹಾಸಗಳೇ ಹೇಳುತ್ತವೆ.

1346-53ರಲ್ಲಿ ಏಷ್ಯಾದಿಂದ ಯೂರೋಪ್‍ವರೆಗೆ ಹಬ್ಬಿದ ಪ್ಲೇಗ್ ಮಹಾಮಾರಿಗೆ ಯೂರೋಪ್‍ನ ಅರ್ಧಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಇಲಿಗಳ ಮೂಲಕ ಬ್ಯಾಕ್ಟೀರಿಯಾಗಳು ಹರಡಿ ಲಕ್ಷಾಂತರ ಜನರು ಪ್ರಾಣ ಬಿಟ್ಟರು.

ಕೊಕೊಲಿಸ್ಟಲಿ (ಟೈಫಾಯ್ಡ್ ಮಾದರಿಯ ಜ್ವರ) ಕ್ರಿ.ಶ 1545-48ರಲ್ಲಿ ಸ್ಪೇನ್‍ನಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ರೋಗಕ್ಕೆ ಮೆಕ್ಸಿಕೋ ಮತ್ತು ಮಧ್ಯ ಅಮೆರಿಕದ ಸುಮಾರು 1.50 ಕೋಟಿ ಜನರು ಬಲಿಯಾದರು. ಕ್ರಿ.ಶ. 1665-66 ರಲ್ಲಿ ಇಲಿಗಳ ಮೂಲಕ ಕಾಣಿಸಿಕೊಂಡ ವೈರಸ್ ಬ್ರಿಟನ್‍ನಲ್ಲಿ 1ಲಕ್ಷಕ್ಕೂ ಅಧಿಕ ಜನರ ಸಾವಿಗೆ ಕಾರಣವಾಯಿತು.
ಜಸ್ಪೀನಿಯರ್ ಪ್ಲೇಗ್, ಥರ್ಡ್‍ಪ್ಲೇಗ್, ಆಂಟೋನೈನ್ ಪ್ಲೇಗ್, ಗ್ರೇಟ್ ಪ್ಲೇಗ್‍ಗಳಿಂದ ಲೆಕ್ಕವಿಲ್ಲದಷ್ಟು ಜನ ಬಲಿಯಾಗಿದ್ದಾರೆ.

ಇತ್ತೀಚಿನ ಕಾಯಿಲೆಗಳ ಬಗ್ಗೆ ನಮ್ಮ ಹಿರಿಕರು ಹೇಳುವ ಭೀಕರ ಕಾಯಿಲೆ ಎಂದರೆ ಸ್ಪ್ಯಾಮೊಷ್ ಫ್ಲೂ. ಆ ರೋಗಕ್ಕೆ 1918-19ರಲ್ಲಿ ಜಗತ್ತಿನಲ್ಲಿ 4ರಿಂದ5 ಕೋಟಿ ಜನ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿ ಹೇಳಿರುವುದು ದಾಖಲೆಗಳೇ ಸ್ಪಷ್ಟಪಡಿಸುತ್ತವೆ. 2002-2003ರಲ್ಲಿ ಸಾರ್ಸ್‍ಗೆ 770, 2012ರಲ್ಲಿ ಕಾಣಿಸಿಕೊಂಡ ಮರ್ಸ್ 850ಜನ, ಎಬೊಲಾ ಮಾರಣಾಂತಿಕ ರೋಗಕ್ಕೆ 2014-16ರಲ್ಲಿ 11.300 ಜನರು ಪ್ರಾಣಬಿಟ್ಟಿದ್ದಾರೆ.

ಸ್ಪ್ಯಾಮೊಷ್ ಫ್ಲೂ (1918-19)ಬಂದು ಹೋದ ನಂತರ ಬರೊಬ್ಬರಿ 100 ವರ್ಷಗಳ ಬಳಿಕ 2019 ಡಿಸೆಂಬರ್-19 ರಂದು ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್‍ಗೆ 1.62 ಲಕ್ಷಕ್ಕೂ ಹೆಚ್ಚಿನ ಮಂದಿ ಜಗತ್ತಿನಾದ್ಯಂತ ಜೀವ ಕಳೆದುಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈ ಕೋವಿಡ್ ರೋಗವನ್ನು ಜಾಗತಿಕ ಪಿಡುಗು ಎಂದು ಕಳೆದ ತಿಂಗಳು 11 ಘೋಷಿಸಿದೆ. ಕ್ರಿ.ಪೂರ್ವ, ಕ್ರಿ.ಶಕ ಎನ್ನುವ ಕಾಲಘಟ್ಟಗಳ ಇತಿಹಾಸ ಹೇಳುವಂತೆ ಕೊರೋನಾ ಪೂರ್ವ ಮತ್ತು ಕೊರೋನಾ ನಂತರದ ಜಗತ್ತು ಎಂದು ವಿಭಜಿಸಿ ಹೇಳಬೇಕಾಗಿರುವ ಕಾಲ ಬಂದಿದೆ.

ಇದೇ ವರ್ಷ ಜನವರಿಯಲ್ಲಿ ದಾವೋಸ್ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಹವಮಾನ ಬದಲಾವಣೆ ತಡೆ ಕುರಿತ ಸಮಾಲೋಚನೆಯಲ್ಲಿ ಪರಿಸರ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಉಂಟು ಮಾಡುತ್ತಿರುವ ಹವಮಾನ ವೈಪರೀತ್ಯ ಮತ್ತು ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಂದಿದ್ದ ಜಾಗತಿಕ ನಾಯಕರ ಮುಂದೆ ಸ್ವೀಡನ್ 16ರ ಬಾಲೆ ಗ್ರೇತಾ ಥನ್‍ಬರ್ಗ್ ‘ಇನ್ನು ಸಮಯವಿಲ್ಲ ಭೂಮಿಯ ತಾಪಮಾನ ತಗ್ಗಿಸಲು ಏನಾದರೂ ಕ್ರಮ ಕೈಗೊಳ್ಳಿ.

2030-2050 ಅಂತ ಕಥೆ ಹೇಳಬೇಡಿ’ ಎಂದು ಹೇಳಿದರೂ ದೊಡ್ಡಣ್ಣ ಅಮೆರಿಕ ನಿರ್ಲಕ್ಷಿಸಿತು. ಈಗ ನೋಡಿ ಭೌತಿಕ ಯುದ್ಧವಿಲ್ಲದೇ ಶೀತಲ ಯುದ್ಧದ ಸ್ಥಿತಿಗೆ ಕಾಣದ ಕೊರೋನಾ ಸೂಕ್ಷ್ಮಾಣುಗಳು ಮನುಷ್ಯನ ವಿರುದ್ಧ ಹೋರಾಟಕ್ಕಿಳಿದಿವೆ.
ಮನುಷ್ಯನ ಅತಿ ಆಸೆಗೆ ಸಿಲುಕಿ ಭೂಮಿ ಬಿಸಿಯಾಗುತ್ತಿದೆ. ಪಾತಾಳದ ಕಲ್ಲಿದ್ದಲು ಕರಗಿ ವಿದ್ಯುತ್ ಆಗಿ ಪರಿವರ್ತಿಯಾಗಿ ಓಝೋನ್ ಪದರವನ್ನೇ ರಂಧ್ರ ಮಾಡುತ್ತಿದೆ.

ಪೆಟ್ರೋಲ್ ಉತ್ಪನ್ನಗಳ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಸಿಮೆಂಟ್, ಉಕ್ಕು ಕಾರ್ಖಾನೆಗಳಿಂದ ಭೂಮಿ ಕೆಂಡವಾಗುತ್ತಿದೆ. ಆಕಾಶವನ್ನು ಕಲುಷಿತಗೊಳಿಸುತ್ತಿದ್ದೇವೆ. ಇಂತಿಪ್ಪ ಪರಿಸರದ ಮೇಲೆ ನಡೆಯುತ್ತಿರುವ ಮನುಷ್ಯನ ದುರಾಸೆಗೆ ಇಡೀ ಭೂ ಮಂಡಲದ ವಿನಾಶದ ಅಂಚಿಗೆ ಹೋಗುತ್ತಿದೆ.

ಅಣ್ವಸ್ತ್ರಗಳನ್ನು ಬಳಸಿ ನಡೆಸುವ ಹತ್ಯಾಕಾಂಡವು ಮನುಷ್ಯ ಕುಲಕ್ಕೆ ಎಷ್ಟು ಕಂಟಕವಾಗಬಲ್ಲದೋ ವೈರಸ್‍ಗಳು ಕೂಡ ಅಷ್ಟೇ ಮಟ್ಟಿನ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ವಸುಂಧರೆಯ ಸಂಪತ್ತನ್ನು ಅತಿಯಾಗಿ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ನಿಸರ್ಗದ ದೇವತೆಗಳು ಕೊಟ್ಟಿರುವ ಈ ಶಿಕ್ಷೆಯೇ ಸಾಂಕ್ರಾಮಿಕ ಪಿಡುಗು ಕೊರೋನಾ ವೈರಸ್.

ಈ ಕೊರೋನಾ ವೈರಸ್‍ಗೆ ಅತ್ಯಂತ ಹೆಚ್ಚು ಬಲಿಯಾಗುತ್ತಿರುವುದು 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 8 ವರ್ಷದ ಒಳಗಿನ ಮಕ್ಕಳು. ಸಾವಿನ ದವಡೆಯಿಂದ ರಕ್ಷಿಸಲು ವೈದ್ಯರು ತಮ್ಮ ಪ್ರಾಣವನ್ನೂ ಲೆಕ್ಕಿಸದ ಹೋರಾಡುತ್ತಿದ್ದಾರೆ. ಅವರಿಗೆ ಕೋಟಿ ಕೋಟಿ ನಮನಗಳು.

ಇದು ವಿಶ್ವಮಟ್ಟದ ಬಿಕ್ಕಟ್ಟಿನ ಸಂದರ್ಭ. ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಯೋಚಿಸಬೇಕಾದ ಕಾಲ. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚಲೇ ಬೇಕು. ‘ಸಾಲು ಮನೆಗೆ ಬೆಂಕಿ ಬಿದ್ದರೆ ಸಂಪನ್ನರ ಮನೆ ಉಳಿಯುತ್ತದಾ’? ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲು ಬಾರದು’ ಬಸವಣ್ಣನವರ ಈ ವಚನ ಆಗಾಗ ನೆನಪಾಗುತ್ತದೆ.

ಪರಿಸರದಲ್ಲಿ ಆಗುವ ಏರಿಳಿತಳನ್ನು ಅಥವಾ ಬದಲಾವಣೆಗಳನ್ನು ಕಡಿಮೆ ಅವಧಿಯಲ್ಲಿ ಅಂದಾಜಿಸುವುದು ಕಷ್ಟ. ಇತಿಹಾಸಕಾರ ‘ಲಾ ಮಾರ್ಟಿನ್’ ಹೇಳುವಂತೆ ‘ಇತಿಹಾಸ ಕೇವಲ ಭೂತಕಾಲವನ್ನಷ್ಟೇ ಹೇಳುವುದಿಲ್ಲ. ಭವಿಷ್ಯವನ್ನು ನುಡಿಯುತ್ತದೆ’ ಎಂಬ ಮಾತು ಸರ್ವಕಾಲಿಕವು ಸತ್ಯವಾದುದು. ಅದುವೇ ಸೂಕ್ಷ್ಮಾಣು ಸೃಷ್ಟಿಸುತ್ತಿರುವ ಜಾಗತಿಕ ತಲ್ಲಣಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ

Published

on

ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಆತಂಕ ವ್ಯಕ್ತಪಡಿಸಿದ್ದಾರೆ.

ಎಸಿ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ಗ್ರಾಮದ ಮುಖಂಡರೊಂದಿಗೆ ಐಮಂಗಲ ಸಮೀಪದ ಹರಳಯ್ಯ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿಕ ಮಠಕ್ಕೆ ಶ್ರೀಗಳು ಬಂದಿದ್ದಾರೆಂದು ಭಾವಿಸಿ ಧೈರ್ಯ ಹೇಳಲು ಬಂದಿದ್ದೇನೆ. ಆದರೆ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದು ಅವರ ಆರೋಗ್ಯ ಸ್ಥಿತಿ ಕುರಿತು ಕಳವಳ ವ್ಯಕ್ತವಾಗಿದೆ ಎಂದರು.

ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರು ಎಲ್ಲ ಶೋಷಿತ, ದಲಿತ, ಹಿಂದುಳಿದ ವರ್ಗಗಳಿಗೆ ಧಾರ್ಮಿಕ ಸ್ಥಾನ ನೀಡಲು ಹಲವರಿಗೆ ದೀಕ್ಷೆ ನೀಡಿ, ಜಮೀನು ಸೇರಿ ಅಗತ್ಯ
ಸಹಕಾರ ನೀಡಿದ್ದು ಸ್ಮರಣೀಯ. ಆ ಸಂದರ್ಭದಲ್ಲಿ ಹರಳಯ್ಯ ಮಠ ಸ್ಥಾಪನೆಗಾಗಿ ಜಮೀನು ಖರೀದಿಸಲು ಹಣ ಕೊಟ್ಟಿದ್ದರು. ಆ ಹಣದಲ್ಲಿ ಭೂಮಿ ಖರೀದಿಸಿ ಮಠ, ಶಾಲೆ ನಿರ್ಮಿಸಲು ಬಸವ ಹರಳಯ್ಯ ಸ್ವಾಮೀಜಿ ಶ್ರಮಿಸಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.

ಮಠ-ಮಾನ್ಯಗಳು ಮಾಡಬೇಕಾದ ಕಾರ್ಯವನ್ನು ಅತ್ಯಂತ ಶ್ರದ್ಧೆ, ಸವಾಲುಗಳ ಮಧ್ಯೆ,‌ ಹಗಲು-ರಾತ್ರಿ ಶ್ರಮಪಟ್ಟು ಹರಳಯ್ಯ ಸ್ವಾಮೀಜಿ ಮಾಡಿದ್ದಾರೆ. ಸಮಾಜ ಕಲ್ಯಾಣ
ಸಚಿವನಾಗಿದ್ದ ವೇಳೆ 1 ಕೋಟಿ ರೂ. ಅನುದಾನ ಕೊಡಿದ್ದೇ. ಬಳಿಕ ಅಸ್ಥಿತ್ವಕ್ಕೆ ಬಂದ ಸರ್ಕಾರ ಹಾಗೂ ಭಕ್ತರು, ಜನರಿಗೆ ದೇಣಿಗೆ ಸಂಗ್ರಹಿಸಿ ಭವ್ಯವಾದ ಮಠ ನಿರ್ಮಿಸಿದ್ದಾರೆ.
ಸುತ್ತಮುತ್ತಲ ಬಡ ಮಕ್ಕಳಿಗಾಗಿ ಶಾಲೆ, ಸತ್ ಚಿಂತನೆ ಮೂಡಿಸಲು ಧಾರ್ಮಿಕ ಕಾರ್ಯಕ್ಕಾಗಿ ಸಭಾಂಗಣ ನಿರ್ಮಿಸಿದ್ದಾರೆ ಎಂದರು.

ಈ ಸಂದರ್ಭ ತಗ್ಗುಗುಂಡಿ ಆಗಿದ್ದ ಅನುಪಯುಕ್ತ ಎರಡು ಗುಂಟೆ ಜಮೀನು ಗೊಂದಲದಿಂದ ಒತ್ತುವರಿ ಆಗಿದೆ. ಈ ವಿಷಯಕ್ಕಾಗಿ ಹಲವು ಬಾರಿ ವ್ಯಕ್ತಿಯೊರ್ವ ಗಲಾಟೆ ಮಾಡಿದ್ದಾನೆ. ಗೊತ್ತಿಲ್ಲದೆ ಎರಡು ಗುಂಟೆ ಜಾಗ ಒತ್ತುವರಿ ಆಗಿದ್ದು, ತಪ್ಪು ನನ್ನಿಂದಲೇ ಆಗಿದೆಯೆಂದು ಶ್ರೀಗಳು ಒಪ್ಪಿಕೊಂಡಿದ್ದಾರೆ. ಜತೆಗೆ ಆ ಜಾಗಕ್ಕೆ ಈಗಿನ ಮಾರುಕಟ್ಟೆ ಮೌಲ್ಯದಷ್ಟು ಹಣ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ವ್ಯಕ್ತಿ ನಿರಾಕರಿಸಿದಾಗ ಒತ್ತುವರಿ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡನ್ನು ಸ್ವಾಮೀಜಿ ಕೆಡವಿಸಿದ್ದಾರೆ. ಆದರೂ ಆ ವ್ಯಕ್ತಿ ದ್ವೇಷ ಮುಂದುವರಿಸಿದ್ದು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿ ಮೇಲೆ
ಮಾರಾಣಾಂತಿಕ ಹಲ್ಲೆ ನಡೆಸಿದ್ದು, ದೂರು ಕೊಡಲು ಠಾಣೆಗೆ ತೆರಳಿರುವ ವಿಷಯ ತಿಳಿದು ಅಲ್ಲಿಗೆ ತೆರಳಿ ಕಾಲಿನಿಂದ ಸ್ವಾಮೀಜಿ ಎದೆಗೆ ಒದ್ದಿದ್ದಾನೆ ಎಂದರು.

ಧಾರ್ಮಿಕ ನೇತಾರರನ್ನು ಗೌರವಿಸುವ ನಾಡು ಭಾರತ. ಇಂತಹ ಸಂದರ್ಭ ಖಾವಿಧಾರಿಯೊಬ್ಬರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂಧಿಸಿರುವುದು ಎಚ್ಚರಿಕೆ
ಗಂಟೆಯಾಗಿದೆ. ಈ ದುಷ್ಕೃತ್ಯವನ್ನು ನಾಡಿನ ಎಲ್ಲ ಮಠಾಧೀಶರು ಖಂಡಿಸಬೇಕು, ಸ್ವಾಮೀಜಿಗೆ ನೈತಿಕವಾಗಿ ಬೆಂಬಲಿಸಬೇಕು. ಇಲ್ಲದಿದ್ದರೇ ಇಂತಹ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.

ಹಲ್ಲೆ ನಡೆಸಿದ ಮೂವರನ್ನು ಮಟ್ಟಹಾಕುವ ಶಕ್ತಿ ನಮ್ಮಲ್ಲೂ ಇದೆ. ಆದರೆ, ನಾವು ವಾಮಮಾರ್ಗದಲ್ಲಿ ಸಾಗುವವರಲ್ಲ, ಕಾನೂನು ಪರಿಪಾಲಕರು. ನಮ್ಮ ಹಕ್ಕೋತ್ತಾಯ ಬಸವ
ತತ್ವದಡಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆ ಭೀತಿ ಹುಟ್ಟಿಸುವಂತದ್ದಾಗಿದೆ. ಈ ಕುರಿತು ತಕ್ಷಣವೇ ಎಲ್ಲ ಮಠಾಧೀಶರು, ಧರ್ಮಗಳ ಪ್ರತಿಪಾದಕರು ಖಂಡಿಸಬೇಕು ಎಂದು ಕೋರಿದರು.

ಈಗ ಯಾವುದೇ ಕಾರಣಕ್ಕೂ ಸಂಧಾನ-ಚರ್ಚೆ ಅಗತ್ಯವಿಲ್ಲ. ಮಠದ ಸಾಮಾಜಿಕ ಕಾರ್ಯಕ್ಕಾಗಿ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಅದಕ್ಕೆ ತಗಲುವ ವೆಚ್ಚವನ್ನು ನಾನೇ‌ ಸ್ವಂತವಾಗಿ ಭರಿಸುತ್ತೇನೆ. ತಕ್ಷಣ ಅಧಿಕಾರಿಗಳು ಈ ಸಂಬಂಧ ಕಾರ್ಯಪ್ರವೃತ್ತರಾಗಬೇಕೆಂದು ಆಂಜನೇಯ ಆಗ್ರಹಿಸಿದರಲ್ಲದೇ ಒಂದು ವೇಳೆ ಭೂಮಿ ಯಾರದ್ದಾಗಿದ್ದರೇ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪರಿಹಾರ ನೀಡಬಹುದು. ಈ ನಿಟ್ಟಿನಲ್ಲಿ ನಾನು ತಗಲುವ ಸಂಪೂರ್ಣ ವೆಚ್ಚ ಭರಿಸುವೆ ಎಂದು ತಿಳಿಸಿದರು.

ಐಮಂಗಲ ಸುತ್ತಮುತ್ತಲ ಗ್ರಾಮಗಳ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು, ಅನಾಥಾಲಯ ಸ್ಥಾಪನೆಯ ಸದುದ್ದೇಶ ಹೊಂದಿರುವ ಶ್ರೀಗಳ ಮೇಲೆ ಹಲ್ಲೆ ಇಡೀ ಧಾರ್ಮಿಕ ಮುಖಂಡರಿಗೆ ಮಾಡಿರುವ ಅಪಮಾನ ಮತ್ತು ಅವರಲ್ಲಿ ಭೀತಿ ಸೃಷ್ಠಿಸುವಂತದ್ದಾಗಿದೆ. ಆದ್ದರಿಂದ‌ ಮಾರಾಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ತಕ್ಷಣವೇ ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಜೊತೆಗೆ ಕಠಿಣ ಶಿಕ್ಷೆ ಆಗುವ ರೀತಿ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ‌ ಸಂದರ್ಭದಲ್ಲಿ ಎಸಿ ಕಾಂತರಾಜ್, ಡಿವೈಎಸ್ಪಿ ಶಿವಕುಮಾರ್, ಸಿಪಿಐ ಗುಡ್ಡಪ್ಪ ಹಾಗೂ ಗ್ರಾಮದ ಹಿರಿಯರು
ಉಪಸ್ಥಿತರಿದ್ದರು.

*ಪೋಟೊ ಕ್ಯಾಪ್ಷನ್* ಐಮಂಗಲದ ಹರಳಯ್ಯ ಗುರುಪೀಠಕ್ಕೆ ಶುಕ್ರವಾರ ಸಂಜೆ ಮಾಜಿ‌ಸಚಿವ ಎಚ್.ಆಂಜನೇಯ ‌ಅಧಿಕಾರಿಗಳೊಂದಿಗೆ ಭೇಟಿ‌ ನೀಡಿ‌ ಪರಿಶೀಲಿಸಿದರು.

Continue Reading

ದಿನದ ಸುದ್ದಿ

ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು

Published

on

ಮುಖ್ಯಾಂಶಗಳು


ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ

​ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ

ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್

ಸುದ್ದಿದಿನ,​ದಾವಣಗೆರೆ: ತಾಲೂಕು ಪಂಚಾಯಿತಿಯ 2022-23ನೇ ಸಾಲಿನ ಅನಿರ್ಬಂಧಿತ ಅನುದಾನದಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಖರೀದಿ ವ್ಯವಹಾರದಲ್ಲಿ ನಿಯಮ ಉಲ್ಲಂಘಿಸಿ, ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪದ ಬೆನ್ನತ್ತಿರುವ ಲೋಕಾಯುಕ್ತ ಸಂಸ್ಥೆಯು ತನಿಖೆಯನ್ನು ತೀವ್ರಗೊಳಿಸಿದೆ.

​ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ಅಧಿಕಾರಿಗಳು ಜುಲೈ 7 ರಿಂದ 10 ರವರೆಗೆ ಜಿಲ್ಲೆಯಲ್ಲಿ ಬೀಡುಬಿಡಲಿದ್ದು, ಸ್ಥಳ ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ.

ನಿಯಮ ಗಾಳಿಗೆ: ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ– ಕರ್ನಾಟಕ’ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎ. ಓಬಳೇಶ್ ಅವರು 2025ರ ಜನೆವರಿ 21ರಂದು ಲೋಕಾಯುಕ್ತಕ್ಕೆ ಈ ಕುರಿತು ಅಧಿಕೃತ ದೂರು ನೀಡಿದ್ದರು. 2022-23ನೇ ಸಾಲಿನಲ್ಲಿ ದಾವಣಗೆರೆ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಸಾಮಗ್ರಿಗಳನ್ನು ಖರೀದಿಸುವಾಗ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಅಧಿಕೃತ ಮಾರಾಟಗಾರರಿಂದ ದರಪಟ್ಟಿ (ಕೊಟೇಷನ್) ಪಡೆಯದೆ, ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಸರ್ಕಾರದ ಹಣ ಪೋಲು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ತನಿಖೆ ಎದುರಿಸುತ್ತಿರುವವರು

ಶ್ರೀ ಎನ್.ಜೆ. ಆನಂದ್, ಕಾರ್ಯನಿರ್ವಾಹಕ ಅಧಿಕಾರಿ (ಇಒ), ತಾಲೂಕು ಪಂಚಾಯಿತಿ, ದಾವಣಗೆರೆ.

​ಶ್ರೀ ನಾಗರಾಜ್ ನಾಯ್ಕ್, ಸಹಾಯಕ ಲೆಕ್ಕಾಧಿಕಾರಿ, ತಾಲೂಕು ಪಂಚಾಯಿತಿ, ದಾವಣಗೆರೆ.

​ಶ್ರೀ ಚನ್ನಪ್ಪ ಎ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಜಿಲ್ಲಾ ಪಂಚಾಯತ್, ದಾವಣಗೆರೆ.

ಕಚೇರಿಯಲ್ಲಿ ತಪಾಸಣೆ

ದೂರಿನ ಅನ್ವಯ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ತನಿಖಾಧಿಕಾರಿ ಟಿ.ಸಿ. ಜಯರಾಮಯ್ಯ ಅವರು ತನಿಖಾ ವೇಳಾಪಟ್ಟಿ ಸಿದ್ಧಪಡಿಸಿದ್ದಾರೆ. ಜುಲೈ 7 ರಂದು ಬೆಳಗ್ಗೆ 11.30ಕ್ಕೆ ದಾವಣಗೆರೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತನಿಖಾ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 10 ರವರೆಗೆ ಸರಣಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಸ್ಥಳ ತನಿಖೆಯ ಸಂದರ್ಭದಲ್ಲಿ ಖುದ್ದಾಗಿ ಹಾಜರಿದ್ದು, ಪೂರಕ ದಾಖಲೆಗಳೊಂದಿಗೆ ಸಹಕರಿಸುವಂತೆ ದೂರುದಾರರಿಗೂ ನೋಟಿಸ್ ನೀಡಲಾಗಿದೆ.

​ಜಿಲ್ಲೆಯ ಪ್ರಭಾವಿ ಅಧಿಕಾರಿಗಳೇ ಲೋಕಾಯುಕ್ತ ತನಿಖೆಯ ಬಿಸಿಗೆ ಸಿಲುಕಿರುವುದು ಆಡಳಿತ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ 

Published

on

ಸುದ್ದಿದಿನ,ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ತಿಳಿಸಿದರು.

ಅವರು ಸೋಮವಾರ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಎಲ್ಲೂ ಕೂಡ ಸಾಮೂಹಿಕವಾಗಿ ಫಾರಂ ವಿತರಣೆ ಮಾಡುತ್ತಿಲ್ಲ ಮತ್ತು ಮಾಡುವುದೂ ಇಲ್ಲ, ಕೆಲವು ಬೂತ್‌ಗಳಲ್ಲಿ ಸಾರ್ವಜನಿಕರೇ ಗುಂಪುಗೂಡಿ ಇಲ್ಲೇ ಫಾರಂ ನೀಡಿ ಎಂದು ಕೇಳಿರುವ ಉದಾಹರಣೆಗಳು ಇವೆಯೇ ಹೊರತು, ಇಲಾಖೆಯಿಂದ ಸಾಮೂಹಿಕ ವಿತರಣೆ ನಡೆದಿಲ್ಲ ಎಂದರು.

ಪ್ರತಿಯೊಬ್ಬ ಬೂತ್ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಲಿಖಿತ ಸೂಚನೆ ಹಾಗೂ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಅವರು ಕಡ್ಡಾಯವಾಗಿ ಪ್ರತಿಯೊಬ್ಬರ ಮನೆ ಮನೆಗೆ ಭೇಟಿ ನೀಡಿ ಫಾರಂಗಳನ್ನು ವಿತರಿಸುವರು. ಭೇಟಿ ನೀಡಿದ ನಂತರ ಮನೆಯ ಬಾಗಿಲಿನ ಮೇಲೆ ಕಡ್ಡಾಯವಾಗಿ ಸ್ಟಿಕ್ಕರ್ ಅಂಟಿಸಬೇಕೆಂದು ಆದೇಶಿಸಲಾಗಿದೆ. ಹಳ್ಳಿಗಳಲ್ಲಿ ಹಾಗೂ ಕೆಲವು ಕಡೆ ಸಾರ್ವಜನಿಕರು ತಮ್ಮ ಫಾರಂಗಳನ್ನು ಬೇಗ ಮಾಡಿಕೊಡಿ ಎಂದು ಬಿ.ಎಲ್.ಓಗಳ ಬಳಿ ಗುಂಪುಗೂಡುತ್ತಿರುವುದು ಕಂಡುಬಂದಿದೆ. ಆದರೆ, ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲು ನಮ್ಮ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಂಪೂರ್ಣ ತಂಡವು ಬಿ.ಎಲ್.ಓ.ಗಳಿಗೆ ನೆರವಾಗಲಿದ್ದಾರೆ ಎಂದು ತಿಳಿಸಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 40 ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ನೇರವಾಗಿ ಈ ಸಹಾಯ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಫಾರಂಗಳನ್ನು ಭರ್ತಿ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಫಾರಂಗಳನ್ನು ಕಡ್ಡಾಯವಾಗಿ ಬಿ.ಎಲ್.ಓ.ಗಳಿಗೆ ಹಸ್ತಾಂತರಿಸಬೇಕು ಎಂದರು
ರಾಷ್ಟ್ರೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿ.ಎಲ್.ಎ (ಬೂತ್ ಮಟ್ಟದ ಏಜೆಂಟ್‌ಗಳು) ಸಾರ್ವಜನಿಕರಿಗೆ ಫಾರಂ ಭರ್ತಿ ಮಾಡಲು ಸಹಾಯ ಮಾಡಬಹುದು. ಅವರು ಮೊದಲ ಹಂತದಲ್ಲಿ ತಲಾ 50 ಫಾರಂಗಳನ್ನು ಸಂಗ್ರಹಿಸಿ, ಭರ್ತಿ ಮಾಡಿ ನಮ್ಮ ಬಿ.ಎಲ್.ಓ.ಗಳಿಗೆ ತಂದುಕೊಡಲು ಅವಕಾಶ ಕಲ್ಪಿಸಲಾಗಿದೆ. ಇದು ಗುಂಪಾಗಿ ಮಾಡುವುದಲ್ಲ, ಬದಲಿಗೆ ಮನೆ ಮನೆಗೆ ಹೋಗಿ ಬಿ.ಎಲ್.ಓಗಳ ಸಹಯೋಗದೊಂದಿಗೆ ಮಾಡುವ ಕಾರ್ಯವಾಗಿದೆ ಎಂದರು.

ಸಹಿ ಮಾಡುವ ಪ್ರಕ್ರಿಯೆಯು ಮತದಾರರದ್ದೇ ಆಗಿರುತ್ತದೆ. ಮೊಬೈಲ್ ಬಳಸಲು ಬಾರದ ಅನಕ್ಷರಸ್ಥರಿಗೆ ಅಥವಾ ತಾಂತ್ರಿಕ ತೊಂದರೆ ಇರುವವರಿಗೆ ಬಿ.ಎಲ್.ಓ ಹಾಗೂ ಬಿ.ಎಲ್.ಎ.ಗಳು ಸಹಾಯ ಮಾಡಲಿದ್ದಾರೆ. ಭಾರತೀಯ ಚುನಾವಣಾ ಆಯೋಗದ ನಿರ್ದೇಶನದ ಅಡಿಯಲ್ಲೇ ನಮ್ಮ ಇಡೀ ತಂಡ ಕೆಲಸ ಮಾಡುತ್ತಿದೆ ಎಂದರು.

ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಶಿಫ್ಟ್ ಮಾಡಿಕೊಂಡಿರುವ ಮತದಾರರು, ತಮ್ಮ ಹೆಸರು ಕೈಬಿಟ್ಟು ಹೋಗುವ ಆತಂಕ ಪಡಬೇಕಾಗಿಲ್ಲ. ಅಂತಹ ಮತದಾರರು ‘ಫಾರಂ-8’ ಅನ್ನು ಸಲ್ಲಿಸುವ ಮೂಲಕ ತಮ್ಮ ವಿಳಾಸವನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದು ಎಂದರು.

ಈಗಾಗಲೇ ಮ್ಯಾಪಿಂಗ್ ಆಗಿರುವ ಮತದಾರರು ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿರುವುದಿಲ್ಲ. ಒಂದು ವೇಳೆ ತಪ್ಪಾಗಿ ಮ್ಯಾಪಿಂಗ್ ಆಗಿದ್ದರೆ ಅಥವಾ ತಂದೆ-ತಾಯಿಯ ಹೆಸರುಗಳಲ್ಲಿ ತಪ್ಪುಗಳಾಗಿದ್ದರೆ, 2002ರ ಹಳೆಯ ವೋಟರ್ ಐಡಿ ವಿವರಗಳ ಆಧಾರದ ಮೇಲೆ ಬಿ.ಎಲ್.ಓ ಮೊಬೈಲ್ ಆಪ್ (BLO Mobile App) ಮೂಲಕ ತಿದ್ದುಪಡಿ ಹಾಗೂ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

18 ವರ್ಷ ತುಂಬಿರುವ ಅರ್ಹ ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಿಗದಿಪಡಿಸಿದ ಫಾರಂಗಳನ್ನು ಪಡೆದು ಭರ್ತಿ ಮಾಡಬಹುದಾಗಿದೆ. ಇದಕ್ಕಾಗಿ ಸಾರ್ವಜನಿಕರು ಯಾರೂ ಮತಗಟ್ಟೆಗಳನ್ನಾಗಲಿ ಅಥವಾ ಬಿ.ಎಲ್.ಓಗಳನ್ನಾಗಲಿ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ, ನಾವೇ ನಿಮ್ಮ ಮನೆ ಬಾಗಿಲಿಗೆ ಬರುತ್ತೇವೆ ಎಂದು ತಿಳಿಸಿದರು.

ಅನಾಥಾಶ್ರಮಗಳಲ್ಲಿರುವ ಹಾಗೂ ತಂದೆ-ತಾಯಿಯರ ಮಾಹಿತಿ ಇಲ್ಲದವರಿಗೂ ಸಹ ಮತದಾನದ ಹಕ್ಕನ್ನು ಕಲ್ಪಿಸಲು ಚುನಾವಣಾ ಆಯೋಗವು ವಿಶೇಷ ಕ್ರಮ ಕೈಗೊಂಡಿದೆ. ಸರ್ಕಾರಿ ಅನಾಥಾಶ್ರಮವೊಂದರಲ್ಲಿರುವ 43 ಯುವಕರು 2025ನೇ ಇಸವಿಯಲ್ಲೂ ಮತದಾರರ ಪಟ್ಟಿಯಲ್ಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸರ್ಕಾರವೇ ಅವರಿಗೆ ಪೋಷಕರಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರೆ ಅವರ ಅಧಿಕೃತ ಪೋಷಕರಾಗಿರುತ್ತಾರೆ ಎಂದರು.

ದೇವದಾಸಿಯರಂತಹ ಪ್ರಕರಣಗಳಲ್ಲಿ ತಂದೆಯ ವಿವರಗಳು ಲಭ್ಯವಿಲ್ಲದಿದ್ದರೆ, ತಾಯಿಯ ವಿವರಗಳನ್ನು ನೀಡಿ ಹೆಸರು ನಮೂದಿಸಲು ಅವಕಾಶವಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ತಂದೆ-ತಾಯಿ ಇಬ್ಬರೂ ಇಲ್ಲದಿದ್ದರೆ, ಅಂತವರು ತಮ್ಮ ಅಜ್ಜ ಅಥವಾ ಅಜ್ಜಿಯ ಹೆಸರನ್ನು ಸಂಬಂಧದ ಕಾಲಂನಲ್ಲಿ ನಮೂದಿಸಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗವು ಇಂತಹ ಎಲ್ಲಾ ಸವಾಲುಗಳಿಗೂ ಕಾನೂನಾತ್ಮಕವಾಗಿ ಹಾಗೂ ecinet ಮೊಬೈಲ್ ಆಪ್ ಮತ್ತು https://voters.eci.gov.in ಮೂಲಕ ಸೂಕ್ತ ಪರಿಹಾರವನ್ನು ಕಲ್ಪಿಸಿದೆ. ಹೀಗಾಗಿ ಯಾವುದೇ ಮತದಾರರು ಆತಂಕ ಪಡುವ ಅಗತ್ಯವಿಲ್ಲ. ಬಿ.ಎ.ಲ್.ಓ ಗಳು ಮನೆಗೆ ಬಂದಾಗ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸಾರ್ವಜನಿಕರು ಸ್ಪಂದಿಸಿ, ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಫಾರಂ ಹಂಚಿಕೆಯಲ್ಲಿ ರಾಜ್ಯದಲ್ಲೇ ದಾವಣಗೆರೆ ಜಿಲ್ಲೆಗೆ 2ನೇ ಸ್ಥಾನ; ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಪ್ರಗತಿಯಲ್ಲಿದ್ದು, ಜಿಲ್ಲಾದ್ಯಂತ ಒಟ್ಟಾರೆ ಶೇ. 94 ರಷ್ಟು ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಫಾರಂಗಳನ್ನು ಹಂಚಿಕೆ ಮಾಡುವ ಮೂಲಕ ದಾವಣಗೆರೆ ಜಿಲ್ಲೆಯು ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದು ಅಭೂತಪೂರ್ವ ಸಾಧನೆ ಮಾಡಿದೆ. ಇದೇ ವೇಳೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಶೇ. 99.81 ರಷ್ಟು ದಾಖಲೆ ಪ್ರಮಾಣದ ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಪಾರಂಗಳನ್ನು ಅತ್ಯಂತ ಯಶಸ್ವಿಯಾಗಿ ಹಂಚಿಕೆ ಮಾಡಲಾಗಿದ್ದು, ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ಹಾಗೂ ಶೇ. 10.8 ರಷ್ಟು ಗಣಕೀಕರಣವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮನೆ ಮನೆ ಭೇಟಿ ಹಾಗೂ ಮಾಹಿತಿ ಸಂಗ್ರಹ ಪ್ರಗತಿಯಲ್ಲಿ

ದಾವಣಗೆರೆ ಜಿಲ್ಲೆಯಲ್ಲಿ ಜೂನ್‌ 16 ರ ವೇಳೆಗೆ ಒಟ್ಟು 14,99,282 ಮತದಾರರಿದ್ದು, ಇವರಿಗೆ ಸಂಬಂಧಿಸಿದ ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಮುದ್ರಿಸಿ ಬಿಎಲ್‌ಓಗಳಿಗೆ ವಿತರಿಸಲಾಗಿದೆ. ಜಿಲ್ಲಾದ್ಯಂತ ಜೂನ್‌ 06 ರಿಂದ ಜುಲೈ 29 ರ ಅವಧಿಯಲ್ಲಿ ಬಿಎಲ್‌ಓಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದು, ಇದೇ ಅವಧಿಯಲ್ಲಿ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಕಾರ್ಯವೂ ಪ್ರಗತಿಯಲ್ಲಿದೆ.

ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮತ್ತು ಪ್ರಗತಿ ವಿವರ

ಜಿಲ್ಲೆಯ ಒಟ್ಟು 14,99,282 ಮತದಾರರ ಪೈಕಿ ಬಿಎಲ್‌ಓಗಳು ಇದುವರೆಗೆ ಒಟ್ಟು 14,06,472 ಎನ್ಯುಮರೇಷನ್ ನಮೂನೆಗಳನ್ನು ವಿತರಿಸಿದ್ದು, 1,54,504 ನಮೂನೆಗಳನ್ನು ಗಣಕೀಕರಿಸಿದ್ದಾರೆ.

103-ಜಗಳೂರು: ಒಟ್ಟು 2,00,836 ಮತದಾರರಿದ್ದು, 1,88,446 ನಮೂನೆಗಳನ್ನು ವಿತರಿಸಲಾಗಿದ್ದು, 18,003 ನಮೂನೆಗಳನ್ನು ಗಣಕೀಕರಿಸಲಾಗಿದೆ. 105-ಹರಿಹರ: ಒಟ್ಟು 2,11,023 ಮತದಾರರಿದ್ದು, 2,06,550 ನಮೂನೆಗಳನ್ನು ವಿತರಿಸಲಾಗಿದ್ದು, 32,630 ನಮೂನೆಗಳನ್ನು ಗಣಕೀಕರಿಸಲಾಗಿದೆ. 106-ದಾವಣಗೆರೆ ಉತ್ತರ: ಒಟ್ಟು 2,58,718 ಮತದಾರರಿದ್ದು, 2,44,948 ನಮೂನೆಗಳನ್ನು ವಿತರಿಸಲಾಗಿದ್ದು, 7,120 ನಮೂನೆಗಳನ್ನು ಗಣಕೀಕರಿಸಲಾಗಿದೆ. 107-ದಾವಣಗೆರೆ ದಕ್ಷಿಣ : ಒಟ್ಟು 2,27,996 ಮತದಾರರಿದ್ದು, 194,785 ನಮೂನೆಗಳನ್ನು ವಿತರಿಸಲಾಗಿದ್ದು, 5,085 ನಮೂನೆಗಳನ್ನು ಗಣಕೀಕರಿಸಲಾಗಿದೆ. 108-ಮಾಯಕೊಂಡ: ಒಟ್ಟು 197,048 ಮತದಾರರಿದ್ದು, 196,486 ನಮೂನೆಗಳನ್ನು ವಿತರಿಸಲಾಗಿದ್ದು, 42,785 ನಮೂನೆಗಳನ್ನು ಗಣಕೀಕರಿಸಲಾಗಿದೆ. 109-ಚನ್ನಗಿರಿ ಒಟ್ಟು 2,03,628 ಮತದಾರರಿದ್ದು, 192,838 ನಮೂನೆಗಳನ್ನು ವಿತರಿಸಲಾಗಿದ್ದು, 36,531 ನಮೂನೆಗಳನ್ನು ಗಣಕೀಕರಿಸಲಾಗಿದೆ. 110- ಹೊನ್ನಾಳಿ ಒಟ್ಟು 2,00,033 ಮತದಾರರಿದ್ದು, 182,419 ನಮೂನೆಗಳನ್ನು ವಿತರಿಸಲಾಗಿದ್ದು, 12,350 ನಮೂನೆಗಳನ್ನು ಗಣಕೀಕರಿಸಲಾಗಿದೆ.

ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಮತದಾರರ ಗುರುತಿಸುವಿಕೆ ಪ್ರಗತಿ

ಜೂನ್‌ 6 ರಿಂದ ಜಿಲ್ಲೆಯಲ್ಲಿ ಮತದಾರರ ಎನ್ಯುಮರೇಷನ್ ಫಾರ್ಮ್ಸ್ ಹಂಚಿಕೆ ಹಾಗೂ ಮಾಹಿತಿ ಸಂಗ್ರಹಣೆಯ ವೇಳೆ ಒಟ್ಟು 1,707 ವಿವಿಧ ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ ಒಟ್ಟು 30 ನಮೂನೆಗಳು ಸಂಗ್ರಹವಾಗದ/ಗೈರು ಹಾಜರಿ ಪ್ರಕರಣಗಳಾಗಿದ್ದು, 641 ಶಾಶ್ವತ ವಲಸೆ, 751 ಮರಣ ಹಾಗೂ 271 ದ್ವಿಪ್ರತಿ (Duplicate) ಪ್ರಕರಣಗಳಾಗಿವೆ.
ಜಗಳೂರು ಕ್ಷೇತ್ರದಲ್ಲಿ 122 ಪ್ರಕರಣಗಳನ್ನು ಗುರುತಿಸಲಾಗಿದ್ದು (2 ಗೈರು, 31 ಶಾಶ್ವತ ವಲಸೆ, 47 ಮರಣ, 40 ದ್ವಿಪ್ರತಿ, 2 ಇತರೆ), ಹರಿಹರ ಕ್ಷೇತ್ರದಲ್ಲಿ 149 ಪ್ರಕರಣಗಳು (2 ಗೈರು, 48 ಶಾಶ್ವತ ವಲಸೆ, 71 ಮರಣ, 26 ದ್ವಿಪ್ರತಿ, 2 ಇತರೆ), ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 246 ಪ್ರಕರಣಗಳು (5 ಗೈರು, 98 ಶಾಶ್ವತ ವಲಸೆ, 112 ಮರಣ, 31 ದ್ವಿಪ್ರತಿ), ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 235 ಪ್ರಕರಣಗಳು (6 ಗೈರು, 123 ಶಾಶ್ವತ ವಲಸೆ, 60 ಮರಣ, 44 ದ್ವಿಪ್ರತಿ, 2 ಇತರೆ), ಮಾಯಕೊಂಡ ಕ್ಷೇತ್ರದಲ್ಲಿ 337 ಪ್ರಕರಣಗಳು (4 ಗೈರು, 113 ಶಾಶ್ವತ ವಲಸೆ, 174 ಮರಣ, 45 ದ್ವಿಪ್ರತಿ,1 ಇತರೆ), ಚನ್ನಗಿರಿ ಕ್ಷೇತ್ರದಲ್ಲಿ 386 ಪ್ರಕರಣಗಳು (10 ಗೈರು, 139 ಶಾಶ್ವತ ವಲಸೆ, 167 ಮರಣ, 63 ದ್ವಿಪ್ರತಿ, 7 ಇತರೆ) ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 232 ಪ್ರಕರಣಗಳ (1 ಗೈರು, 89 ಶಾಶ್ವತ ವಲಸೆ, 120 ಮರಣ, 22 ದ್ವಿಪ್ರತಿ) ಗುರುತಿಸಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಗೂ ಮುನ್ನ ವಿವಿಧ ರಾಷ್ಟ್ರೀಯ ಪಕ್ಷಗಳೊಂದಿಗೆ ಸಭೆ ನಡೆಸಿದ್ದು, ರಾಷ್ಟ್ರೀಯ ಪಕ್ಷಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಬಿ.ಎಲ್.ಎ ಗಳನ್ನು ನೇಮಕ ಮಾಡಿದ್ದು ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಪಾರಂಗಳನ್ನು ನಮೂದಿಸಿ ಬಿ.ಎಲ್.ಓ ಗಳಿಗೆ ನೀಡಲು ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕಾರ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್‌, ಉಪ ಕಾರ್ಯದರ್ಶಿ ಮಮತ ಹಸ ಗೌಡರ್‌, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಪಾಲಿಕೆ ಆಯುಕ್ತ ಮಹಾಂತೇಶ್‌ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending