Connect with us

ಲೈಫ್ ಸ್ಟೈಲ್

ಹೃದ್ರೋಗದ ಹಟಾತ್ ಸಾವುಗಳ ಬಗ್ಗೆ ನಾಗೇಶ್ ಹೆಗಡೆ ಬರಹ : ಕೋವಿಡ್ ಬದಿಗಿಟ್ಟು CVD ನೋಡೋಣವೆ..?

Published

on

(ಕೋವಿಡ್‌-19ರಿಂದಾಗಿ ಇದುವರೆಗೆ ನಮ್ಮ ದೇಶದಲ್ಲಿ 1,23,456 ಜನ ಸತ್ತಿದ್ದಾರೆ ಅಂದುಕೊಳ್ಳಿ. ಇದೇ 100 ದಿನಗಳ ಅವಧಿಯಲ್ಲಿ CVD ಕಾಯಿಲೆಯಿಂದ ಭಾರತದಲ್ಲಿ ಅಂದಾಜು ಆರು ಲಕ್ಷ ಜನ ಸತ್ತಿದ್ದಾರೆ. ಸುದ್ದಿ ಮಾಧ್ಯಮಗಳಲ್ಲಿ ಅದರ ಸದ್ದೇ ಇಲ್ಲ.)

CVD ಅಂದರೆ ಕಾರ್ಡಿಯೊ ವಾಸ್ಕುಲರ್ ಡಿಸೀಸ್. ಅಂದರೆ ಹೃದ್ರೋಗ. ಈ ಕಾಯಿಲೆಯಿಂದ ಪ್ರತಿ ದಿನ ನಮ್ಮಲ್ಲಿ ಸರಾಸರಿ ಆರು ಸಾವಿರ ಜನರು ಸಾಯುತ್ತಾರೆ.

ಕಳೆದ ಹತ್ತು ವರ್ಷಗಳಿಂದ ಸಿವಿಡಿ ಸಾವಿನ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಸ್ಟೆಂಟ್ ತಯಾರಿಸುವವರ ವೆಬ್ ಸೈಟ್‌ಗಳನ್ನು ನೋಡಿದರೆ ಹೃದ್ರೋಗಿಗಳ ಸಂಖ್ಯೆ ಹತ್ತು ಪಟ್ಟು ಏರಲಿದೆ ಎಂದು ಖುಷಿಯಿಂದೆಂಬಂತೆ ಸಾರುತ್ತಾರೆ.

ಹೃದ್ರೋಗಗಳ ಹೆಚ್ಚಳಕ್ಕೆ ಮುಖ್ಯ ಕಾರಣ ಏನೆಂದರೆ ಕಳಪೆ ಖಾದ್ಯತೈಲ, ವ್ಯಾಯಾಮವಿಲ್ಲದ ದಿನಚರಿ, ಮತ್ತು ಆತಂಕ. ಈ ಮೂರು ಹೆಚ್ಚಾದಾಗ ಬರುವ ಬೊಜ್ಜು, ಬಿಪಿ, ಕೊಲೆಸ್ಟೆರಾಲ್ ಶೇಖರಣೆ, ಲಿವರ್ನಲ್ಲಿ ಉತ್ಪನ್ನವಾಗುವ LP(a) ಎಂಬ ಕೊಬ್ಬು ಇವೆಲ್ಲ ಸೇರಿ ರಕ್ತನಾಳಗಳಲ್ಲಿ ಗಂಟುಮೂಟೆ ಇಡುತ್ತವೆ. ಬ್ಯಾಂಕಿನಲ್ಲಿ ಡಿಪಾಸಿಟ್ ಇಟ್ಟ ಹಾಗೆ. ಹೃದಯ ಪಾಪ, ಏದುಸಿರು ಬಿಡುತ್ತ ರಕ್ತವನ್ನು ಪಂಪ್ ಮಾಡಿ ಮಾಡಿ ಹೈರಾಣಾಗುತ್ತದೆ. ಈ ಮೂರರ ಜೊತೆಗೆ ತಂಬಾಕು ಸೇವನೆ ಇದ್ದರೆ ಅದೂ ಹೃದಯ ಬಡಿತವನ್ನು ಹೆಚ್ಚಿಸುತ್ತ ಇನ್ನಷ್ಟು ಕಷ್ಟ ಕೊಡುತ್ತಿರುತ್ತದೆ.

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಇವೆಲ್ಲವುಗಳ ಬಳಕೆ ಹೆಚ್ಚಾಗಿದೆ. ಮನೆಯಲ್ಲಿ ಕೂತು ಮಾಡಿದ್ದೆಲ್ಲ ಇದೇ ತಾನೆ? (ಸಿಗರೇಟು ಪೂರೈಕೆ ಮಾಡಲೆಂದು 60 ಲಕ್ಷ ಲಂಚ ಪಡೆವರದ್ದೂ ಇದೇ ಗತಿ). ಲಾಕ್‌ಡೌನ್ ಮುಗಿದ ನಂತರ ಇವೆಲ್ಲ ಇನ್ನೂ ಹೆಚ್ಚಾಗಿದೆ. ರಸ್ತೆಗಳಲ್ಲಿ ಪಕೋಡಾ ಮಾರುವವರಿಗೆ ಗಿರಾಕಿಗಳು ಹೆಚ್ಚಾಗಿದ್ದಾರೆ. ಬೇಕರಿಗಳಲ್ಲಿ ಮೊದಲಿಗಿಂತ ಜಾಸ್ತಿ ನೂಕು ನುಗ್ಗಲು.

ತಿಂಡಿ-ಊಟಗಳಲ್ಲಿ ಟ್ರಾನ್ಸ್‌ ಫ್ಯಾಟ್ (ಕಳಪೆ ತೈಲ) ಬಳಕೆ ಜಾಸ್ತಿ ಇದ್ದರೆ ಹೃದಯಕ್ಕೆ ಡಬಲ್ ಟ್ರಬಲ್ ಎನ್ನುತ್ತಾರೆ ತಜ್ಞರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ಐದು ಲಕ್ಷ ಜನರು ಇದರಿಂದಾಗಿಯೇ ಸಾಯುತ್ತಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಎಲ್ಲ ದೇಶಗಳೂ ಇದನ್ನು ನಿಷೇಧಿಸಬೇಕೆಂದು ಕರೆ ಕೊಟ್ಟಿದೆ. ಬಹಳಷ್ಟು ದೇಶಗಳು (ಕೆನಡಾ, ಬ್ರಿಟನ್, ಸಿಂಗಪೂರ್, ಸ್ವೀಡನ್, ಯುಎಸ್, ಸಿಂಗಪೂರ್ ಇತ್ಯಾದಿ) ಆಗಲೇ ಇದರ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಬಂಧನೆಗಳನ್ನು ಹಾಕಿವೆ.

ನಮ್ಮಲ್ಲಿ ಅಂಥ ನಿಬಂಧನೆ ಜಾರಿಗೆ ಬರುವುದೇ ಕಷ್ಟ. ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಳಸಬೇಡಿ ಎಂದು ರಸ್ತೆ ಪಕ್ಕದಲ್ಲಿ ಪಕೋಡಾ ಕರಿದು ಮಾರುವವನ ಮೇಲೆ ಎಂಥ ನಿಬಂಧನೆ ಜಾರಿಗೆ ಬಂದೀತು? ಬೇಕರಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅವುಗಳ ಪಕ್ಕದಲ್ಲೇ ಔಷಧ ಅಂಗಡಿಗಳೂ ಹೆಚ್ಚುತ್ತಿವೆ. ಗೋಭಿ ಮಂಚೂರಿಗೆ ಬೇಡಿಕೆಯೂ ಹೆಚ್ಚುತ್ತಿದೆ.

ಬೇರೆ ದೇಶಗಳಲ್ಲಿ ನಿರ್ಬಂಧಿಸಲಾದ 57 ಬಗೆಯ ಕೀಟನಾಶಕ ವಿಷಗಳು ನಮ್ಮಲ್ಲಿ ಸಲೀಸಾಗಿ ಮಾರಾಟವಾಗುತ್ತವೆ. ಹೂಕೋಸು (ಗೋಭಿ) ಬೆಳೆಯಲು ಭಾರೀ ವಿಷದ ಸಿಂಪಡನೆ ಆಗಲೇಬೇಕು. ಅತ್ತ ಬೆಳೆದವನಿಗೂ ವಿಷ ಸಿಂಚನ, ಇತ್ತ ಬಳಸುವವನಿಗೂ ಕಂಟಕ. ಚಿಕ್ಕವರು, ದೊಡ್ಡವರು, ನಗರದವರು, ಹಳ್ಳಿಯವರು ಅವರಿವರೆನ್ನದೆ ಯಾರನ್ನು ಬೇಕಾದರೂ ಬಲಿತೆಗೆದುಕೊಳ್ಳುತ್ತದೆ ಈ ಕೊರೊನರಿ ಹಾರ್ಟ್ ಡಿಸೀಸ್.

ಇದಕ್ಕೂ ಕೊರೊನಾ ಸಂಬಂಧ ಇದೆ. ದೇಹಕ್ಕೆ ಶುದ್ಧರಕ್ತವನ್ನು ಪೂರೈಸುವ ರಕ್ತನಾಳಗಳು ಹೃದಯವನ್ನು ಕಿರೀಟದಂತೆ ಸುತ್ತಿಕೊಂಡಿದ್ದರಿಂದ ಇದಕ್ಕೆ ಕೊರೊನರಿ ಆರ್ಟರಿ ಎನ್ನುತ್ತಾರೆ. ಕೊರೊನಾ ಕುರಿತು ಗಾಬರಿ ಹುಟ್ಟಿಸುವ ಅಂಕಿಸಂಖ್ಯೆಗಳನ್ನೂ ಗ್ರಾಫಿಕ್‌ಗಳನ್ನೂ ತೋರಿಸುತ್ತ ಭಯಾನಕ ದೃಶ್ಯಗಳನ್ನು ಬಿತ್ತರಿಸುವವರು ಸದ್ಯಕ್ಕೇನೊ ದೇಶದ ಗಮನವನ್ನು ಗಡಿಯ ಕಡೆ ಸೆಳೆಯುತ್ತಿದ್ದಾರೆ. ರಸ್ತೆ ಪಕ್ಕ ಗೋಭೀ ಮಂಚೂರಿ ತಿನ್ನುತ್ತ ನಾವೆಲ್ಲ ಚೀನೀ ವಸ್ತುಗಳನ್ನು ನಿಷೇಧಿಸುವ ಚರ್ಚೆಯಲ್ಲಿ ತೊಡಗಿದ್ದೇವೆ. ಚಾನೆಲ್‌ಗಳ ಕೆಲವರು ರಕ್ತ ಹೆಪ್ಪುಗಟ್ಟುವಂಥ ಗ್ರಾಫಿಕ್‌ಗಳನ್ನು ಹಾಕುತ್ತಿದ್ದಾರೆ.

ಯಾಕೆ ಯಾರೂ ಖಾದ್ಯ ತೈಲಗಳ ಗುಣಮಟ್ಟದ ಬಗ್ಗೆ, ಆಹಾರದಲ್ಲಿರುವ ವಿಷಗಳ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ? ದಿನಕ್ಕೆ ಆರೇಳು ಸಾವಿರ ಸಾವಾಗುತ್ತಿದ್ದರೂ ಯಾರೂ ಯಾಕೆ ಹೃದ್ರೋಗವನ್ನು ತಡೆಗಟ್ಟಬಲ್ಲ ಸರಳ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ? ಯಾಕೆ ಫೋನ್ ನಲ್ಲಿ ಎಚ್ಚರಿಕೆಯ ಮಾತುಗಳು ಬರುತ್ತಿಲ್ಲ?

ಯಾಕೆಂದರೆ CVDಯನ್ನು ತಡೆಗಟ್ಟುವಲ್ಲಿ ಮತ್ತು ಎಕ್ಸ್-ರೇ, ಇಸಿಜಿ, ಆಂಜಿಯೊಗ್ರಾಮ್, ಕೊರೊನರಿ ಬೈಪಾಸ್‌ ಅಥವಾ ಸ್ಟೆಂಟ್ ಬಳಕೆಯನ್ನು ಕಡಿಮೆ ಮಾಡುವಲ್ಲಿ ಯಾವ ಲಾಭವೂ ಇಲ್ಲ. ಅದಕ್ಕೇ ಸಿವಿಡಿಗೆ ಯಾರೂ ಕ್ಯಾರೇ ಅನ್ನುವವರಿಲ್ಲ. ಬದಲಿಗೆ ಕೊರೊನಾ ಮಾರಿಯ ಬಗ್ಗೆ ಬ್ರೆಕಿಂಗ್ ನ್ಯೂಸ್ ಕೊಟ್ಟು ಕೊಟ್ಟು ಹೃದಯ ಬಡಿತವನ್ನು ಹೆಚ್ಚಿಸುವ ಯತ್ನಗಳೇ ಎದ್ದು ಕಾಣುತ್ತಿವೆ. ಒಂದು ದಿನ ಈ ಸುದ್ದಿಯೂ ನೇಪಥ್ಯಕ್ಕೆ ಸೇರುತ್ತದೆ.

ನೋಡುತ್ತಿರಿ, ಇಂದು ಸಿವಿಡಿಗೆ ಬಂದ ಸ್ಥಿತಿಯೇ ಮುಂದೆ ಕೋವಿಡ್‌-19ಕ್ಕೂ ಬರಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್

Published

on

ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.

ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.

ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.

ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ

Published

on

ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.

ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.

ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.

ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.

ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending