Connect with us

ದಿನದ ಸುದ್ದಿ

ಕೊರೋನ ಕಾಲದಲ್ಲಿ ಹೃದಯವನ್ನು ಕಾಪಾಡಿ..!

Published

on

  • ಶ್ರೀನಿವಾಸ ಕಕ್ಕಿಲಾಯ

ಕೊರೋನ ಸೋಂಕಿನ ನೆಪದಲ್ಲಿ ಆಗಿರುವ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಕೊರೋನ ಸೋಂಕಿಗೆ ಹೊರತಾದ ಇತರ ಸಮಸ್ಯೆಗಳನ್ನು ಹೊಂದಿರುವವರಿಗೆ, ಅದರಲ್ಲೂ, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಆದವರಿಗೆ, ತುರ್ತು ಸಮಸ್ಯೆಗಳಾದವರಿಗೆ ಹಾಗೂ ಗರ್ಭಿಣಿಯರಿಗೆ, ಕ್ಲಪ್ತ ಸಮಯದಲ್ಲಿ ಸೂಕ್ತ ಆರೋಗ್ಯ ಸೇವೆಗಳನ್ನು ಪಡೆಯುವುದಕ್ಕೆ ಬಹಳಷ್ಟು ಕಷ್ಟಗಳಾಗಿವೆ.

ಕೊರೋನ ಸೋಂಕನ್ನು ನಿಯಂತ್ರಿಸುವ ಹೆಸರಲ್ಲಿ ಅತಿ ಕಠಿಣ ದಿಗ್ಬಂಧನ ವಿಧಿಸಿದ್ದರಿಂದ ಜನರು ಆಸ್ಪತ್ರೆಗೆ ಹೋಗುವುದಕ್ಕೆ ಅಡ್ಡಿಗಳಾದವು. ಎಲ್ಲಾ ಆಸ್ಪತ್ರೆಗಳಲ್ಲೂ ಕೊರೋನ ಪೀಡಿತರಿಗೆ ಹೊರರೋಗಿ, ಒಳರೋಗಿ ಚಿಕಿತ್ಸೆ ನೀಡುವಂತೆ ಕಡ್ಡಾಯ ನಿಯಮಗಳನ್ನು ಮಾಡಿದ್ದರಿಂದ, ಅನ್ಯ ರೋಗಿಗಳ ಚಿಕಿತ್ಸೆಗೆ ಸಮಸ್ಯೆಗಳಾದವು.

ಕೊರೋನ ಬಗ್ಗೆ ವಿಪರೀತವಾದ ಭೀತಿಯನ್ನು ಹುಟ್ಟಿಸಿದ್ದರಿಂದ ಅನ್ಯ ಸಮಸ್ಯೆಗಳುಳ್ಳವರು ವೈದ್ಯರ ಬಳಿಗೆ, ಆಸ್ಪತ್ರೆಗಳಿಗೆ ಹೋಗುವುದಕ್ಕೆ ಅಂಜುವಂತೆ ಆಯಿತು. ಅನ್ಯ ರೋಗಗಳಿಗಾಗಿ ಆಸ್ಪತ್ರೆಗಳಿಗೆ ಬಂದವರೆಲ್ಲರಿಗೆ, ಹೆರಿಗೆಗಾಗಿ ಬಂದ ಎಲ್ಲಾ ಗರ್ಭಿಣಿಯರಿಗೆ ಕೊರೋನ ಲಕ್ಷಣಗಳಿಲ್ಲದಿದ್ದರೂ ಕಡ್ಡಾಯವಾಗಿ ಕೊರೋನ ಪರೀಕ್ಷೆ ಮಾಡಿ, ಆ ಬಳಿಕವೇ ಚಿಕಿತ್ಸೆ ನೀಡುವುದೆಂಬ ವ್ಯವಸ್ಥೆ ಮಾಡಿದ್ದು ಇನ್ನಷ್ಟು ಆತಂಕ, ಹೆದರಿಕೆ, ಗೊಂದಲಗಳಿಗೆ ಕಾರಣವಾಯಿತು.

ಕೊರೋನ ಒಂದೇ ಮಹಾವ್ಯಾಧಿ ಎಂಬಂತೆ ಎಲ್ಲವನ್ನೂ ಮುಚ್ಚಿ ಹಾಕಿದ ನಂತರದ ಈ ಆರು ತಿಂಗಳಲ್ಲಿ ಅನೇಕರು ತಮ್ಮ ಬಂಧುಮಿತ್ರರನ್ನು ಹೃದಯಾಘಾತದ ಕಾರಣಕ್ಕೆ ಕಳೆದುಕೊಂಡಿದ್ದಾರೆ. ಈ ಕೊರೋನ ಕಾಲದಲ್ಲಿ ಹೃದ್ರೋಗದ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ 35% ಇಳಿಕೆಯಾಗಿದೆ.

ಆದರೆ ಹೃದ್ರೋಗಗಳಿಂದ ಸಾವುಂಟಾಗುವ ಪ್ರಮಾಣದಲ್ಲಿ 4% ಏರಿಕೆಯಾಗಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರೂ, ಹಿರಿಯ ಹೃದ್ರೋಗ ತಜ್ಞರೂ ಆಗಿರುವ ಡಾ|| ಸಿ.ಎನ್. ಮಂಜುನಾಥ್ ಹೇಳಿರುವುದು, ಇನ್ನೊಂದೆಡೆ, ಹಲವರು ತಮ್ಮ ಮನೆಗಳಲ್ಲೇ ಹೃದಯಾಘಾತದಿಂದ ಮೃತರಾದರು ಎಂಬ ವರದಿಗಳಾಗುತ್ತಿರುವುದು, ಹೃದ್ರೋಗದ ಲಕ್ಷಣಗಳಿರುವವರು ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿದ್ದಾರೆ, ಅಥವಾ ಹೋಗಲು ಸಾಧ್ಯವಾಗುತ್ತಿಲ್ಲ, ಅಥವಾ ತೀರಾ ತಡವಾಗಿ ಹೋಗುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತವೆ.

ಇದಲ್ಲದೆ, ಕೊರೋನ ಸೋಂಕು ಕೂಡ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ, ರಕ್ತವು ಹೆಪ್ಪುಗಟ್ಟುವುದನ್ನು ಪ್ರಚೋದಿಸುತ್ತದೆ. ಆದ್ದರಿಂದ ಅದಾಗಲೇ ರಕ್ತನಾಳಗಳಲ್ಲಿ ಸಮಸ್ಯೆಯಿದ್ದವರಿಗೆ ಕೊರೋನ ಸೋಂಕು ತಗಲಿದರೆ ಹೃದಯಾಘಾತವಾಗುವುದಕ್ಕೆ, ಹೃದಯದ ಸ್ನಾಯುಗಳಿಗೆ ಸಮಸ್ಯೆಯಾಗುವುದಕ್ಕೆ ಕಾರಣವಾಗಬಹುದು.

ಒಟ್ಟಿನಲ್ಲಿ, ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಗಳಿರುವವರಿಗೆ ಈ ಕೊರೋನ ಸೋಂಕು ಕಷ್ಟಕರವಾಗಿ ಪರಿಣಮಿಸಿದೆ. ಆದ್ದರಿಂದ ಅವರೆಲ್ಲರೂ ವಿಶೇಷ ಎಚ್ಚರಿಕೆಗಳನ್ನು ವಹಿಸಬೇಕು, ರಕ್ತನಾಳಗಳ ಸಮಸ್ಯೆಯಿಂದ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆಯಲ್ಲಿ ಕೊರತೆಯಾಗುತ್ತಿರುವ ಯಾವುದೇ ಲಕ್ಷಣಗಳು ಗೋಚರಿಸಿದರೆ ತಕ್ಷಣವೇ ಅದಕ್ಕೆ ತಕ್ಕ ಪರೀಕ್ಷೆಗಳನ್ನು ಮತ್ತು ಚಿಕಿತ್ಸೆಯನ್ನು ಪಡೆಯಬೇಕು.

ವ್ಯಕ್ತಿಯು ಯಾವುದೇ ಕೆಲಸವನ್ನು ಮಾಡುವಾಗ ಹೃದಯದ ಸ್ನಾಯುಗಳಿಗೆ ಇನ್ನಷ್ಟು ರಕ್ತವು ಹರಿಯಬೇಕಾಗುತ್ತದೆ. ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಯಾಗಿ, ಅವುಗಳಲ್ಲಿ ರಕ್ತಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೆ ಹೆಚ್ಚುವರಿಯಾಗಿ ರಕ್ತವನ್ನು ಹರಿಯುವುದಕ್ಕೆ ಸಾಧ್ಯವಾಗುವುದಿಲ್ಲ.

ಆದ್ದರಿಂದ, ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಯಿದ್ದವರು ಯಾವುದೇ ಕೆಲಸವನ್ನು ಹೆಚ್ಚು ಮಾಡತೊಡಗಿದಾಗ ಕಷ್ಟವೆನಿಸತೊಡಗುತ್ತದೆ. ಈ ಕಷ್ಟವು ಹಲವು ಬಗೆಯಲ್ಲಿ ವ್ಯಕ್ತವಾಗಬಹುದು. ಹೃದಯದ ಸಮಸ್ಯೆಯುಳ್ಳವರಿಗೆ ಎದೆ ನೋವುಂಟಾಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆಯಾದರೂ ಅದು ಸಂಪೂರ್ಣ ಸತ್ಯವಲ್ಲ; ಹೃದ್ರೋಗವುಳ್ಳವರಿಗೆ ಎದೆ ನೋವು ಇಲ್ಲದಿರಬಹುದು, ಅದರ ಬದಲಿಗೆ ಇತರ ಲಕ್ಷಣಗಳಿರಬಹುದು, ಎದೆ ನೋವು ಹೃದ್ರೋಗವಲ್ಲದೆ ಇತರ ಹಲವು ಕಾರಣಗಳಿಂದಲೂ ಉಂಟಾಗಬಹುದು. ಹಾಗಾಗಿ, ಹೃದ್ರೋಗವು ಹೆಚ್ಚು ಸಾಮಾನ್ಯವಾಗುತ್ತಿರುವಾಗ, ಯುವಜನರಲ್ಲೂ ಕಾಣಿಸಿಕೊಳ್ಳುತ್ತಿರುವಾಗ, ಹೃದ್ರೋಗದ ಲಕ್ಷಣಗಳ ಬಗ್ಗೆ ಎಲ್ಲರಲ್ಲೂ ಸ್ಪಷ್ಟವಾದ ಅರಿವಿರುವುದು ಒಳ್ಳೆಯದು.

ಹೃದಯದ ರಕ್ತನಾಳಗಳ ಕಾಯಿಲೆಯಿದ್ದರೆ, ಹೃದ್ರೋಗದ ಸಮಸ್ಯೆಯಿದ್ದರೆ, ವ್ಯಕ್ತಿಯು ಶ್ರಮ ವಿನಿಯೋಗಿಸಿದಾಗ ಹೃದಯಕ್ಕೆ ಅದನ್ನು ನಿಭಾಯಿಸುವುದಕ್ಕೆ ಕಷ್ಟವಾಗುತ್ತದೆ, ಅದು ಬೇರೆ ಬೇರೆ ರೀತಿಗಳಲ್ಲಿ ಪ್ರಕಟಗೊಳ್ಳಬಹುದು. ವ್ಯಕ್ತಿಯು ನಿತ್ಯದಂತೆ ನಡೆದಾಡುವಾಗ, ಮೆಟ್ಟಲುಗಳನ್ನೇರುವಾಗ, ಕೆಲಸಗಳನ್ನು ಮಾಡುವಾಗ ಅಥವಾ ತುಂಬು ಊಟವನ್ನು ಮಾಡಿದಾಗ ದೇಹದ ಆಯಾ ಭಾಗಗಳಿಗೆ ಹೆಚ್ಚಿನ ರಕ್ತ ಪೂರೈಕೆಯ ಅಗತ್ಯವುಂಟಾಗುವುದರಿಂದ ಇಂಥ ಸಂದರ್ಭಗಳಲ್ಲಿ ಹೃದ್ರೋಗವನ್ನು ಸೂಚಿಸುವ ಲಕ್ಷಣಗಳು ಅನುಭವಕ್ಕೆ ಬರುತ್ತವೆ.

ಹೃದಯದ ಸ್ನಾಯುಗಳಲ್ಲಿ ನೋವನ್ನು ಗ್ರಹಿಸುವ ನರಗಳಿಲ್ಲದಿರುವುದರಿಂದ ನಮ್ಮ ಕೈಕಾಲುಗಳಿಗೆ ಗಾಯವಾದಾಗ ಉಂಟಾಗುವಂಥ ನೋವು ಹೃದಯದ ಸಮಸ್ಯೆಗಳಲ್ಲಿ ಉಂಟಾಗುವುದಿಲ್ಲ. ಬದಲಿಗೆ ಹೃದಯದ ಸುತ್ತುಮುತ್ತಲಿನ ಅಂಗಗಳಲ್ಲಿ ಬಗೆಬಗೆಯ ವೇದನೆಗಳು, ಅಥವಾ ‘ಕಷ್ಟಗಳು’, ಕಂಡುಬರಬಹುದು.

ನಡೆದಾಡುವಾಗ ಅಥವಾ ದುಡಿಯುವಾಗ ಅಥವಾ ತುಂಬು ಊಟ ಮಾಡಿದಾಗ ಕುತ್ತಿಗೆ ಅಥವಾ ಗಂಟಲು ಅಥವಾ ಎದೆ ಬಿಗಿದಂತಾಗುವುದು ಅಥವಾ ಭಾರವೆನಿಸುವುದು, ಎದೆ ಅಥವಾ ಗಂಟಲು ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ಉಬ್ಬಿ ಬಂದಂತಾಗುವುದು (‘ಗ್ಯಾಸ್’ ತುಂಬಿದಂತಾಗುವುದು), ಎದೆ ಹಿಂಡಿದಂತಾಗುವುದು ಅಥವಾ ನೋವಾಗುವುದು (ಎದೆಯ ಎಡ, ಬಲ, ಮಧ್ಯ, ಎಲ್ಲೇ ಆಗಿರಬಹುದು), ಭುಜ, ತೋಳು, ದವಡೆ, ಕತ್ತಿನ ಬದಿಗಳು, ಬೆನ್ನಿನ ಮೇಲ್ಭಾಗಗಳಲ್ಲಿ ಸೆಳೆದಂತಾಗುವುದು ಅಥವಾ ನೋಯುವುದು, ಆಯಾಸವಾಗುವುದು, ಉಸಿರಾಡಲು ಕಷ್ಟವೆನಿಸುವುದು, ಎದೆ ಬಡಿತ ಹೆಚ್ಚುವುದು, ತಲೆ ಸುತ್ತುವುದು, ಇತ್ಯಾದಿಗಳೆಲ್ಲವೂ ಹೃದ್ರೋಗದ ಲಕ್ಷಣಗಳಾಗಿರಬಹುದು.

ಆದ್ದರಿಂದ ಯಾರಲ್ಲೇ ಆಗಲಿ, ಯಾವುದೇ ಶ್ರಮವುಳ್ಳ ಕೆಲಸಗಳಲ್ಲಿ ತೊಡಗಿದಾಗ ಹೊಕ್ಕಳಿಂದ ಮೇಲಕ್ಕೆ ಯಾವುದೇ ಅನುಭವಗಳಾದರೆ, ಮತ್ತು ಪ್ರತೀ ಬಾರಿ ಅದೇ ಕೆಲಸವನ್ನು ಮಾಡುವಾಗ ಆ ತೊಂದರೆಯು ಮರುಕಳಿಸುತ್ತಿದ್ದರೆ, ಅದನ್ನು ಹೃದ್ರೋಗದ ಸೂಚನೆಯೆಂದು ಪರಿಗಣಿಸುವುದೇ ಒಳ್ಳೆಯದು.

ಯಾವುದೇ ಶ್ರಮದ ಕೆಲಸವನ್ನು ಮಾಡುವಾಗ ಇಂತಹ ಲಕ್ಷಣಗಳುಳ್ಳವರು ಕೂಡಲೇ ತಜ್ಞ ವೈದ್ಯರನ್ನು ಕಾಣಲೇ ಬೇಕು ಮತ್ತು ಹೃದ್ರೋಗಕ್ಕೆ ಪರೀಕ್ಷೆಗಳನ್ನು ನಡೆಸುವಂತೆ ಒತ್ತಾಯಿಸಬೇಕು. ಕೆಲವೊಮ್ಮೆ ವೈದ್ಯರು ಕೂಡ ಈ ಲಕ್ಷಣಗಳನ್ನು ಲಘುವಾಗಿ ಪರಿಗಣಿಸಿ, ‘ಗ್ಯಾಸಿಗೋ’, ನೋವಿಗೋ ಮಾತ್ರೆಗಳನ್ನು ಕೊಟ್ಟು ಕಳುಹಿಸಬಹುದು, ಅದರಿಂದ ಹೃದ್ರೋಗದ ಪರೀಕ್ಷೆಗಳು ನಡೆಯದೆ ಸಮಸ್ಯೆಗಳಾಗಬಹುದು.

ಇಂಥ ಲಕ್ಷಣಗಳಿದ್ದವರು ಈ ಕೊರೋನ ಕಾಲದಲ್ಲಿ ಪರೀಕ್ಷೆಗೆ ಹೋಗಲು ಹಿಂಜರಿದಿರುವುದು, ವೈದ್ಯರು ಲಭ್ಯವಾಗದಿರುವುದು, ಹಾಗೊಮ್ಮೆ ದೊರೆತರೂ ಕೊರೋನ ಕಳೆಯಲಿ ಎಂದು ಮುಂದಕ್ಕೆ ಹಾಕಿರುವುದು, ಹೃದಯದ ಪರೀಕ್ಷೆಗೆ ಮುನ್ನ ಕೊರೋನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದಾಗ ಒಪ್ಪದೆ ವಿಮುಖರಾಗಿರುವುದು ಎಲ್ಲವೂ ಘಟಿಸಿವೆ, ಅದರಿಂದ ಕೆಲವರಿಗೆ ಅಪಾಯಗಳಾಗಿರುವ ಸಾಧ್ಯತೆಗಳು ಇದ್ದೇ ಇವೆ.

ಆದ್ದರಿಂದ ಯಾರಿಗೇ ಆಗಲಿ, ಮೇಲೆ ಹೇಳಿದ ಲಕ್ಷಣಗಳಿದ್ದರೆ ಕೂಡಲೇ ಇಸಿಜಿ, ಅಥವಾ ಇನ್ನೂ ಒಳ್ಳೆಯದಾಗಿ, ಹೃದಯತಜ್ಞರನ್ನು ಕಂಡು ಟ್ರೆಡ್ ಮಿಲ್ ಪರೀಕ್ಷೆ ಇತ್ಯಾದಿ ಮಾಡಿಸಿಕೊಳ್ಳಬೇಕು, ಅದರಲ್ಲೇನಾದರೂ ಹೃದ್ರೋಗದ ಸೂಚನೆಗಳು ಕಂಡುಬಂದು ಇನ್ನಷ್ಟು ಉನ್ನತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕೆಂದು ವೈದ್ಯರು ಹೇಳಿದರೆ ಹಿಂಜರಿಯದೆ ಮಾಡಿಸಿಕೊಳ್ಳಬೇಕು.

ಹೃದಯದ ರಕ್ತನಾಳಗಳ ಕಾಯಿಲೆಗೆ ನಮ್ಮ ಆಧುನಿಕ ಆಹಾರವೇ ಅತಿ ಮುಖ್ಯ ಕಾರಣವಾಗಿದೆ. ಅದರ ಜೊತೆಗೆ, ವ್ಯಾಯಾಮವಿಲ್ಲದ ಜೀವನ, ಧೂಮಪಾನ, ಮದ್ಯಪಾನಗಳು ಕೂಡ ಕಾರಣಗಳಾಗಿವೆ. ಸಕ್ಕರೆ, ಎಲ್ಲಾ ಸಿಹಿ ತಿನಿಸುಗಳು, ಹಣ್ಣು ಮತ್ತು ಹಣ್ಣಿನ ರಸಗಳು (ಹಣ್ಣು – ತರಕಾರಿ ಸೇವಿಸಿದರೆ ಒಳ್ಳೆಯದು ಎಂದೇ ಹೆಚ್ಚಿನ ವೈದ್ಯರು ಹೇಳುತ್ತಿರುತ್ತಾರೆ, ಆದರೆ ಹಣ್ಣು ಮತ್ತು ತರಕಾರಿ ಒಂದೇ ಅಲ್ಲ, ಬೇರೆ ಬೇರೆಯೇ ಆಗಿವೆ ಎಂಬುದನ್ನು ಗಮನಿಸಿ, ಹಣ್ಣು ಅಂದರೆ ಸಕ್ಕರೆ, ಅಷ್ಟೇ), ಸಂಸ್ಕರಿತ ತಿನಿಸುಗಳು (ಮೈದಾ, ಬ್ರೆಡ್ಡು, ಬಿಸ್ಕತ್ತು ಇತ್ಯಾದಿ), ರಿಫೈನ್ಡ್ ಎಣ್ಣೆ, ಕರಿದ ತಿನಿಸುಗಳು ಮತ್ತು ವಿಪರೀತ ಪ್ರಮಾಣದಲ್ಲಿ ಧಾನ್ಯಗಳ ಸೇವನೆ ಹೃದ್ರೋಗವೂ ಸೇರಿದಂತೆ ಎಲ್ಲಾ ಆಧುನಿಕ ರೋಗಗಳಿಗೆ ಮುಖ್ಯ ಕಾರಣಗಳಾಗಿವೆ. ಇವೆಲ್ಲವನ್ನು ತ್ಯಜಿಸಿ, ನಿಯತವಾಗಿ ವ್ಯಾಯಾಮ ಮಾಡಿದರೆ ಈ ರೋಗಗಳನ್ನು ದೂರವಿಡಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆಯಡಿ ವಿವಿಧ ಯೋಜನೆಗಳಾದ ಸಾಫ್ಟ್ ಸೀಡ್ ಕ್ಯಾಪಿಟಲ್, ಶೇ.60 ರಷ್ಟು ಸಹಾಯಧನ ಸಾಲ ಶುಲ್ಕ ಮರುಪಾವತಿ ಮತ್ತು ವಿದ್ಯುಚ್ಚಕ್ತಿ ಸಹಾಯಧನ ಯೋಜನೆಯಡಿ ಅರ್ಹ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆದು ಘಟಕಗಳನ್ನು ಸ್ಥಾಪಿಸಿರುವ ಅರ್ಹ ಉದ್ದಿಮೆದಾರರು ಹಾಗೂ ಬ್ಯಾಂಕ ಸಾಲ ಪಡೆದು ಉದ್ದಿಮೆ ಸ್ಥಾಪಿಸಲು ಇಚ್ಚಿಸಿರುವ ಉದ್ದಿಮೆದಾರರು ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಪಿ.ಬಿ ರಸ್ತೆ ದಾವಣಗೆರೆ ಇವರನ್ನು ಸಂಪರ್ಕಿಸಬಹುದೆಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!

Published

on

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

  • ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
  • ಇಂಡಿಯಾ ಗೇಟ್‌ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
  • NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
  • “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP 

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.

CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.

http://Visit : www.suddidina.com

ಇಂಡಿಯಾ ಗೇಟ್‌ನಿಂದ ಮೆರವಣಿಗೆ

ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.

ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’

ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.

“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.

“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ” 

  • CJP ಆರೋಪ

ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ

ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.

ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.

ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್‌ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

Continue Reading

ದಿನದ ಸುದ್ದಿ

KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ

Published

on

KPSC ಹಗರಣಕ್ಕೆ ಬಿಗ್ ಟ್ವಿಸ್ಟ್! 329 ಅಭ್ಯರ್ಥಿಗಳಿಗೆ CID ನೋಟಿಸ್; IAS ಅಧಿಕಾರಿ ವಿರುದ್ಧ ₹1.1 ಕೋಟಿ ಆರೋಪ
KPSC ಹಗರಣಕ್ಕೆ ಬಿಗ್ ಟ್ವಿಸ್ಟ್! 329 ಅಭ್ಯರ್ಥಿಗಳಿಗೆ CID ನೋಟಿಸ್; IAS ಅಧಿಕಾರಿ ವಿರುದ್ಧ ₹1.1 ಕೋಟಿ ಆರೋಪ

KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ

  • 329 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ವಿಚಾರಣಾ ನೋಟಿಸ್

  • 658 OMR ಕಾರ್ಬನ್ ಶೀಟ್‌ಗಳು FSLಗೆ

  • IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ED ಗಂಭೀರ ಆರೋಪ

  • ₹70–80 ಲಕ್ಷ ಲಂಚದ ಆರೋಪವೂ ತನಿಖೆಯಲ್ಲಿದೆ

  • ಪ್ರಶ್ನೆಪತ್ರ ಸಿದ್ಧತೆ, ಮುದ್ರಣದ CCTV ದೃಶ್ಯಗಳ ಬಗ್ಗೆಯೂ ಅನುಮಾನ 

ಸುದ್ದಿದಿನ,ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ (ED) ರಾಜ್ಯದ ವಿವಿಧೆಡೆ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಅದರ ಬೆನ್ನಲ್ಲೇ ಅಪರಾಧ ತನಿಖಾ ಇಲಾಖೆ (CID) ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

http://Visit : www.suddidina.com

329 ಅಭ್ಯರ್ಥಿಗಳಿಗೆ ನೋಟಿಸ್ ಏಕೆ?

ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಈಗಾಗಲೇ 658 OMR ಕಾರ್ಬನ್ ಶೀಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಮೂಲ OMR ಉತ್ತರ ಪತ್ರಿಕೆಗಳೊಂದಿಗೆ ಹೋಲಿಕೆ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಅಭ್ಯರ್ಥಿಗಳು ಗುರುತಿಸಿದ್ದ ಉತ್ತರಗಳ ಕಾರ್ಬನ್ ಪ್ರತಿಯಲ್ಲಿ ಮತ್ತು ಮೂಲ OMRನಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಪರಿಶೀಲಿಸುವುದು ತನಿಖೆಯ ಪ್ರಮುಖ ಭಾಗವಾಗಿದೆ.

ಇದೀಗ 329 ಅಭ್ಯರ್ಥಿಗಳನ್ನೂ ವಿಚಾರಣೆಗೆ ಒಳಪಡಿಸುವ CID ಕ್ರಮ ಪ್ರಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ವಿಚಾರಣೆಯ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ, ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಥವಾ ಉತ್ತರಗಳ ಮಾಹಿತಿ ಮುಂಚಿತವಾಗಿ ಸಿಕ್ಕಿತೇ, OMR ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ನಡೆದಿದೆಯೇ ಎಂಬುದರ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

IAS ಅಧಿಕಾರಿಯತ್ತ ತನಿಖೆಯ ಚಿತ್ತ

ಈ ಪ್ರಕರಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಅವರು ಫೆಬ್ರವರಿ 2024ರಿಂದ ಮಾರ್ಚ್ 2026ರವರೆಗೆ KPSCಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ MSME ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬೆಂಗಳೂರಿನ ನಿವಾಸ ಸೇರಿದಂತೆ ಉತ್ತರ ಪ್ರದೇಶದ ಬರೇಲಿಯಲ್ಲಿರುವ ನಿವಾಸದ ಮೇಲೂ ED ಶೋಧ ನಡೆಸಿದೆ.

ED ಆರೋಪದ ಪ್ರಕಾರ, ಗಂಗ್ವಾರ್ ಅವರು ತಮ್ಮ ಇಬ್ಬರು ಪುತ್ರರಿಗೆ KPSC ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ದೊರಕಿಸಿಕೊಡಲು ವ್ಯಕ್ತಿಯೊಬ್ಬರಿಂದ ಸುಮಾರು ₹1.1 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಆರೋಪ ಇನ್ನೂ ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾಗಿಲ್ಲ.

ಪ್ರಶ್ನೆಪತ್ರಿಕೆ ಸಿದ್ಧತೆಯಲ್ಲೂ ಅನುಮಾನ

ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಮುದ್ರಿಸುವ ಪ್ರಕ್ರಿಯೆಗೆ ಸಂಬಂಧಿಸಿದ CCTV ದೃಶ್ಯಾವಳಿಗಳ ಅನುಪಸ್ಥಿತಿಯನ್ನೂ ED ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕ್ರಿಯೆಯಲ್ಲಿ CCTV ದಾಖಲೆಗಳು ಪ್ರಮುಖ ಭದ್ರತಾ ಕ್ರಮವಾಗಿರುವುದರಿಂದ, ಅವುಗಳ ಲಭ್ಯತೆ ಮತ್ತು ನಿರ್ವಹಣೆಯೂ ತನಿಖೆಯ ಪ್ರಮುಖ ಅಂಶವಾಗಿದೆ.

ಇದರ ಜೊತೆಗೆ, ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹70–80 ಲಕ್ಷದವರೆಗೆ ಲಂಚ ಕೇಳಲಾಗಿದೆ ಎಂಬ ಆರೋಪಗಳೂ ತನಿಖೆಯಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆ, OMR ತಿದ್ದುಪಡಿ ಮತ್ತು ನೇಮಕಾತಿ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.

KPSCಯಂತಹ ನೇಮಕಾತಿ ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವ ಆರೋಪಗಳಾಗಿರುವುದರಿಂದ, CID ಮತ್ತು ED ತನಿಖೆಯ ಮುಂದಿನ ಹಂತಗಳು ಮಹತ್ವ ಪಡೆದುಕೊಂಡಿವೆ. 329 ಅಭ್ಯರ್ಥಿಗಳ ವಿಚಾರಣೆ, OMR ಕಾರ್ಬನ್ ಶೀಟ್‌ಗಳ FSL ವರದಿ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆಯ ಬಳಿಕ ಪ್ರಕರಣದ ನಿಜವಾದ ಚಿತ್ರಣ ಇನ್ನಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.

ಮೇಲಿನ ಹಣ, ಅಕ್ರಮ ಮತ್ತು ಅಧಿಕಾರಿಯ ವಿರುದ್ಧದ ಆರೋಪಗಳು ತನಿಖಾ ಸಂಸ್ಥೆಗಳು ಮುಂದಿಟ್ಟಿರುವ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಆರೋಪಗಳೆಂದೇ ಪರಿಗಣಿಸಬೇಕೆಂದು ಕೋರ್ಟ್ ತಿಳಿಸಿದೆ.

 

Continue Reading

Trending