Connect with us

ದಿನದ ಸುದ್ದಿ

ಹೆಚ್ಚುತ್ತಿರುವ ಅತ್ಯಾಚಾರ-ಕೊಲೆ ಪ್ರಕರಗಳು | ಜನರ ಆಕ್ರೋಶ ಮತ್ತು ಆತಂಕ : ಹಲವು ಅಭಿಪ್ರಾಯಗಳ ಸಂಗ್ರಹ ಇಲ್ಲಿವೆ, ಮಿಸ್ ಮಾಡ್ದೆ ಓದಿ

Published

on

  • ನಮ್ಮ ದೇಶದ ಜನರು ಪೇಶ್ವೆ ಕಾಲದಲ್ಲಿ ದಲಿತರ ಮೇಲೆಸಗಿದ ಅನ್ಯಾಯ, ಅತ್ಯಾಚಾರ ಎಲ್ಲವೂ ನನಗೆ ನೆನಪಿದೆ. ಹಾಗೂ ಮುಂಬರುವ ಸ್ವಾಂತಂತ್ರ್ಯ ದೇಶದಲ್ಲೂ ಇದೇ ಅತ್ಯಾಚಾರಗಳಾಗುತ್ತವೆಯೇನೋ ಎನ್ನುವ ಭಯವೂ ನನಗಿದೆ.

ಡಾ.ಬಿ.ಆರ್. ಅಂಬೇಡ್ಕರ್


ತ್ತರ ಪ್ರದೇಶದ ‘ಹತ್ರಾಸ್‘ ನಲ್ಲಿ ಮನಿಷಾ ವಾಲ್ಮೀಕಿ ಎಂಬ ದಲಿತ ಯುವತಿಯನ್ನು ಅತ್ಯಾಚಾರವೆಸಗಿ ನಂತರ ಕತ್ತುಹಿಸುಕಿ, ನಾಲಗೆ ಕತ್ತರಿಸಿ ಸಾಯಿಸಲು ಪ್ರಯತ್ನಿಸಿದ ನಂತರ ಬಿಟ್ಟು ಓಡಿಹೋಗಿದ್ದ ಕಾರಣ ಆಕೆಯ ಗೋಣು ಮುರಿದಿತ್ತು, ಬೆನ್ನುಮೂಳೆಗೆ ಹಾನಿಯಾಗಿತ್ತು. ಅರೆಪ್ರಜ್ಞೆಯಲ್ಲಿದ್ದ ಆಕೆಯನ್ನು ಮನೆಗೆ ಹೊತ್ತುತರುತ್ತಾರೆ. ಅಲ್ಲಿಂದ ಮೋಟಾರ್ ಸೈಕಲ್ ನಲ್ಲಿ ಕೂರಿಸಿ ಸಮೀಪದ ಠಾಣೆಗೆ ಕರೆದೊಯ್ದು ಕಲ್ಲುಚಪ್ಪಡಿ ಮೇಲೆ ಮಲಗಿಸುತ್ತಾರೆ. ಪೊಲೀಸರು ದೂರು ದಾಖಲಿಸಿಕೊಳ್ಳಲು ನೂರೆಂಟು ಪ್ರಶ್ನೆ ಕೇಳಿ ಸತಾಯಿಸಿ ಸಮಯ ಕೊಲ್ಲುತ್ತಾರೆ. ಅಲ್ಲಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಅಟೋ ರಿಕ್ಷಾದಲ್ಲಿ ಕಳಿಸುತ್ತಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕರಿಸಿದ ಕಾರಣ ಆಕೆಯನ್ನು ಆಲಿಗಡ್ ಗೆ ಕೊಂಡೊಯ್ಯಲು ಕುಟುಂಬದ ಸದಸ್ಯರು ಅಂಬ್ಯುಲೆನ್ಸ್ ಗೆ ಪೋನ್ ಮಾಡ್ತಾರೆ. ಎರಡು ಗಂಟೆ ನಂತರ ಅಂಬ್ಯುಲೆನ್ಸ್ ಬರುತ್ತದೆ. ಅಲ್ಲಿಂದ ಆಲಿಗಡ್ ಆಸ್ಪತ್ರೆಗೆ ಸಾಗಿಸುತ್ತಾರೆ. ಅಲ್ಲಿ ಹದಿನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿ ಕೊನೆಗೆ ದೆಹಲಿ ಸಫ್ದರ್ ಜಂಗ್ ಆಸ್ಪತ್ರೆಗೆ ಕೊಂಡೊಯ್ಯುತ್ತಾರೆ. ಅಲ್ಲಿ 24 ಗಂಟೆಗಳ ಕಳೆಯುವುದರಲ್ಲಿ ಯುವತಿ ಸೆಪ್ಟೆಂಬರ್ 29 ರಂದು ಪ್ರಾಣ ಬಿಡುತ್ತಾಳೆ.

ಕೇವಲ ಎರಡು ದಿನಗಳಲ್ಲಿ ಆದಿತ್ಯನಾಥನ ಆಡಳಿತದ ಉತ್ತರಪ್ರದೇಶದಲ್ಲಿ ದಾಖಲಾಗಿರುವ ಅತ್ಯಾಚಾರ-ಸಾಮೂಹಿಕ ಅತ್ಯಾಚಾರ, ಅತ್ಯಾಚಾರ ಪ್ರಯತ್ನದ ಪ್ರಕರಣಗಳು ಒಟ್ಟು ಹದಿನೆಂಟು. ಅಂದರೆ ಸರಾಸರಿ‌ ದಿನಕ್ಕೆ ಒಂಭತ್ತು. ಮನೀಷಾ ಪ್ರಕರಣವನ್ನು ಬಯಲಿಗೆಳೆದು ದೇಶದ ಗಮನ ಸೆಳೆಯಲು ಯಶಸ್ವಿಯಾದ ರೋಹಿಣಿ ಸಿಂಗ್ ಈ‌ ಮಾಹಿತಿಯನ್ನು ನೀಡಿದ್ದಾರೆ.

ಮೀರತ್ ನಲ್ಲಿ ನಿರ್ಭಯ ಪ್ರಕರಣದ ಮಾದರಿಯಲ್ಲೇ ಚಲಿಸುವ ಬಸ್ ನಲ್ಲಿ ಡ್ರೈವರ್ ಸುನಿಲ್ ಚೌಧರಿ, ಕಂಡಕ್ಟರ್, ಕ್ಲೀನರ್ ಅತ್ಯಾಚಾರವೆಸಗಿದ್ದಾರೆ.‌‌ ಮೀರತ್ ಅಲ್ಲದೆ ಅಯೋಧ್ಯೆ, ಫತೇಪುರ್, ಬಹರೈಚ್, ಬಲರಾಮಪುರ, ಆಜಂಗಡ, ಕಾನ್ಪುರ, ಲಕ್ನೋ, ಸಂತ ಕಬೀರ್ ನಗರಗಳಲ್ಲಿ ಪ್ರಕರಣಗಳು ನಡೆದಿವೆ. ಅಯೋಧ್ಯೆ ಒಂದರಲ್ಲೇ ಕಳೆದ 48 ಗಂಟೆಗಳಲ್ಲಿ ನಾಲ್ಕು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಇವೆಲ್ಲ ವರದಿಯಾಗಿರುವ ಪ್ರಕರಣಗಳಷ್ಟೆ. ಅತ್ಯಾಚಾರದಂಥ ಪ್ರಕರಣಗಳು ವರದಿಯಾಗುವುದು ಕಡಿಮೆ, ಜನರು‌‌ ಮರ್ಯಾದೆಗಂಜಿ‌‌ ಪ್ರಕರಣ ದಾಖಲಿಸುವುದಕ್ಕೆ ಹಿಂದೇಟು ಹಾಕುತ್ತಾರೆ. ವರದಿಯಾದ ಪ್ರಕರಣಗಳೇ ಹದಿನೆಂಟಾದರೆ ಆಗದ ಪ್ರಕರಣಗಳು ಎಷ್ಟಿರಬಹುದು..?

ಈ‌ ಘಟನೆಯ ಹಿನ್ನೆಲೆಯಲ್ಲಿ ವಿವಿಧ ಸ್ತರದ ಜನರನ್ನು ‘ಸುದ್ದಿದಿನ.ಕಾಂ‘ ಮಾತನಾಡಿಸಿದ್ದು, ಅತ್ಯಾಚಾರಿಗಳು – ಉತ್ತರ ಪ್ರದೇಶದ ಯೋಗಿ ಆದಿಥ್ಯನಾಥನ ಸರ್ಕಾರದ ವಿರುದ್ಧ ಆಕ್ರೋಶ, ವ್ಯಕ್ತಪಡಿಸಿದ್ದು, ಕಾನೂನು ವ್ಯವಸ್ಥೆ ಬಲಗೊಳ್ಳಬೇಕು, ಅತ್ಯಾಚಾರಿಗಳಿಗೆ ಕ್ರೂರ ಶಿಕ್ಷೆಯಾಗಬೇಕು ಹಾಗೇ ಕೆಲವು ಆತಂಕದ ಮಾತುಗಳನ್ನು ಕೂಡ ಹೇಳಿದ್ದಾರೆ. ಅವರ ಅಭಿಪ್ರಾಯಗಳು ಈ ಕೆಳಕಂಡಂತಿವೆ.


ಥ್ರಾಸ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವು ಈ ದೇಶದ ಸಾಮಾಜಿಕ ಹಿನ್ನಡೆಯ ಜ್ವಲಂತ ಉದಾಹರಣೆ. ಇಂತಹ ಘಟನೆಗಳಾದಾಗ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನಗಳು ವ್ಯಾಪಕವಾಗಿ ಬೇಕು. ಅವುಗಳಿಗೆ ಆಡಳಿತ ಸಕಾರಾತ್ಮಕವಾಗಿ ಸ್ಪಂದಿಸಬೇಕು.

ಆದರೆ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತವರು ವಿಕೃತರ ರಕ್ಷಣೆಗೆ ನಿಂತಾಗ ಅಧಿಕಾರರೂಢರು ಮತ್ತು ವಿರೋಧ ಪಕ್ಷಗಳವರು ಪ್ರಬಲ ರಾಜಕೀಯ ಇಚ್ಛಾಶಕ್ತಿಯೊಂದಿಗೆ ಅತ್ಯಾಚಾರವೆಸಗಿದವರಿಗೆ ಶಿಕ್ಷೆ ಕೊಡಿಸುವುದರೊಂದಿಗೆ ಕಾನೂನನ್ನು ಮತ್ತಷ್ಟು ಬಲಗೊಳಿಸುವುದರ ಕಡೆಗೆ ಆದ್ಯತೆ ನೀಡಬೇಕು. ವಿಕೃತಿಯನ್ನು ರಕ್ಷಿಸುವ ವಿಚಿತ್ರ ಮನಸ್ಥಿತಿಯಿಂದ ಹೊರಬಂದು ಸಾಮಾಜಿಕ ಮುನ್ನಡೆಗೆ ಪೂರಕ ವಾತಾವರಣ ಸೃಷ್ಟಿಸಬೇಕು.”

| ಡಾ.ಎನ್.ಕೆ. ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಉಜಿರೆ

ಡಾ.ಪದ್ಮನಾಭ ಎನ್.ಕೆ


“ದೇಶದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಎಲ್ಲಾ ದೌರ್ಜನ್ಯ ಪ್ರಕರಣಗಳು ಹಾಗೂ
ನಿರಂತರಅತ್ಯಾಚಾರ ಪ್ರಕರಣ ಗಳು ದೇಶದ ತಳ ಸಮುದಾಯಗಳ ಮೇಲೆ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಭಾರತೀಯ ಆಳುವ ವರ್ಗಗಳ ಅಮಾನವೀಯ ನಡವಳಿಕೆ ಅಸಹ್ಯ ಹುಟ್ಟಿಸುತ್ತಿದೆ.

ದೌರ್ಜನ್ಯ ದಬ್ಬಾಳಿಕೆಗಳು, ಅತ್ಯಾಚಾರಗಳು ಆಳುವ ವರ್ಗಗಳ ಮೇಲೆ ಎಂದು ನಡೆಯುವುದಿಲ್ಲ. ಶೋಷಿತ ಸಮುದಾಯ ಆಳುವ ವರ್ಗವಾಗುವುದೊಂದೇ ಇದಕ್ಕೆ ಪರಿಹಾರ ವಾಗಬಲ್ಲದು. ಸಂತಾಪ ಸೂಚನೆ, ಮೇಣದ ಬತ್ತಿ, ಮೆರವಣಿಗೆಗಳಿಂದ ಏನು ಪ್ರಯೋಜನ ವಾಗಲಾರದು.”

| ಎ.ಡಿ. ಈಶ್ವರಪ್ಪ, ಪ್ರಜಾ ಪರಿವರ್ತನಾ ವೇದಿಕೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಹೊನ್ನಾಳಿ

ಎ.ಡಿ.ಈಶ್ಚರಪ್ಪ


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ವತಂತ್ರವಾಗಿ ಬಾಳುವ ಹಕ್ಕಿದೆ. ಆದರೆ ಇದೇ ಪ್ರಜಾತಂತ್ರದಲ್ಲಿ ನಮ್ಮ ಅಕ್ಕ ತಂಗಿಯರ ಮೇಲೆ ದಿನದಿಂದ ದಿನಕ್ಕೆ ಹಲ್ಲೆ, ಅತ್ಯಾಚಾರಗಳು ಅಧಿಕವಾಗುತ್ತಿವೆ. ಇದು ಆಳುವ ವರ್ಗ ವೈಫಲ್ಯ ಮತ್ತು ಪ್ರಚೋದನೆಯೂ ಹೌದು.

ಆಡು ಹಗಲೇ ಅಪಹರಣ, ಅತ್ಯಾಚಾರ, ಹಲ್ಲೆಗಳು ನಡೆಯುತ್ತಿದ್ದರು ಮೌನ ತಾಳುವ ಸರ್ಕಾರದ ನಡೆಯನ್ನು ಗಮನಿಸಿದರೆ ಇದರಲ್ಲಿ ಪ್ರಭುತ್ವದ ಪಾಲು ಎದ್ದು ಕಾಣುತ್ತದೆ. ರಾಮರಾಜ್ಯದ ಹೆಸರಿನಲ್ಲಿ ಗೂಂಡಾ ರಾಜ್ಯ ನಿರ್ಮಾಣವಾಗುತ್ತಿದೆ. ಇದು ಜಗತ್ತಿನ ಎದುರು ಭಾರತ ತಲೆ ತಗ್ಗಿಸುವಂತಹ ನಡೆ. ಹೆಣ್ಣಿಗೆ ಸೂಕ್ತ ರಕ್ಷಣೆ ನೀಡಲು ವಿಫಲವಾಗಿರುವ ಸರ್ಕಾರದ ನಡೆಯು ಅತ್ಯಂತ ಖಂಡನೀಯ.”

| ಡಾ.ಕೆ.ಎ.ಓಬಳೇಶ್
ರಾಜ್ಯ ಪ್ರಧಾನ ಕಾರ್ಯದರ್ಶಿ
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ

ಡಾ‌.ಕೆ.ಎ.ಓಬಳೇಶ್


ಪ್ರತಿಯೊಂದು ಅತ್ಯಾಚಾರದ ಘಟನೆಗಳು ನಡೆದಾಗಲೂ ಮುನ್ನೆಲೆಗೆ ಬರುವ ವಿಷಯ ಕ್ರಿಮಿನಲ್ಗಳಿಗೆ ಶಿಕ್ಷೆಯಾಗಬೇಕು. ಆದರೆ ನಾವ್ಯಾಕೆ ಇಂತಹ ಕೃತ್ಯಗಳನ್ನು ನಡೆಯದಂತೆ ಮುಂಜಾಗ್ರತೆ ವಹಿಸಲು ಸಾಧ್ಯವಾಗಿಲ್ಲ ಎಂಬುದನ್ನು ಯೋಚಿಸಲು ಮರೆತಿದ್ದೇವೆ.

ನಿರ್ಭಯಾ, ಆಸೀಫಾ,ಉನ್ನಾವೋ, ದಿಶಾ ಈಗ ಮನಿಷಾ ಮತ್ತು ಪಟ್ಟಿ ಮುಂದುವರೆಯಲೂ ಬಹುದು! ಪ್ರತಿ ಘಟನೆಗಳು ನಡೆದಾಗಲೂ ಕಾನೂನನ್ನು ಬಿಗಿಗೊಳಿಸಿದ್ದೇವೆ,‌ ಇನ್ನೂ ಅತ್ಯಾಚಾರಿಗಳಿಗೆ ಉಳಿಗಾಲವಿಲ್ಲ ಎಂಬ ಉದ್ದುದ್ದ ಭಾಷಣಗಳನ್ನು ನಂಬಿ ಇನ್ನೇನು ನಮ್ಮನೆ ಹೆಣ್ಮಕ್ಕಳು ಸುರಕ್ಷಿತ ಎಂದು ಮಲಗವಷ್ಟರಲ್ಲಿ ಮತ್ತೊಬ್ಬ ಹೆಣ್ಣು ಜೀವ ಕಳೆದುಕೊಂಡಿರುತ್ತಾಳೆ.

ಹಾಗಿದ್ದರೆ ಕಾನೂನುಗಳು ನಿಜಕ್ಕೂ ಅಷ್ಟು ಬಿಗಿಯಾಗಿವೆಯೇ.,ಅಥವಾ ಕಾನೂನಿನ ಭಯ ಜನಕ್ಕೆ ಇಲ್ಲದಾಗಿದೆಯೇ? ನಿರ್ಭಯ ಹತ್ಯೆಯ ನಂತರ ಒಂದಷ್ಟು ಸುಧಾರಣೆಗಳನೋ ಆದವು ಆದರೂ ಹೆಣ್ಣಿನ ಚೀರಾಟವೇನೂ ನಿಂತಿಲ್ಲ,‌ಗಲ್ಲು ಶಿಕ್ಷೆಯಂತಹ ಕಾನೂನನ್ನು ತಂದರೂ ಯಾವ ಸುಧಾರಣೆಯನ್ನೂ ಕಾಣಲಾಗಿಲ್ಲ..ಆದರೂ ಮನುಷ್ಯನ ಕಾಮ ವಾಂಛೆಯನ್ನ ಕಾನೂನಿನ ಮೂಲಕ ನಿಯಂತ್ರಿಸ ಬೇಕಾಗಿರುವುದು ದುರಂತವೇ ಸರಿ.

ಕಾನೂನು ಚೌಕಟ್ಟಿನಾಚೆ ನಮ್ಮ ಜವಾಬ್ದಾರಿಗಳೇನು ಎಂದು ಯೋಚಿಸಬೇಕಾಗಿದೆ.. ಅತ್ಯಾಚಾರ ಮಾಡುವುದು ಎಂದರೆ ವ್ಯಕ್ತಿಯು ತನ್ನ ಪೌರುಷವನ್ನು ಅವಳ ಒಪ್ಪಿಗೆ ಇಲ್ಲದೆ ಸ್ಥಾಪಿಸಲು ಮಾಡುವ ಬಲವಂತದ ಪ್ರಯತ್ನವಷ್ಟೆ. ಇದಕ್ಕೆ ಮುಖ್ಯ ಕಾರಣ ಗಂಡು ತಾನು ಮಾಡಿದ್ದೆಲ್ಲವೂ ಸರಿ., ಸಮಾಜದಲ್ಲಿ ತಾನೊಂದು ಮೇಲ್ಪಂಕ್ತಿ ಎಂಬ ಅಹಂಭಾವವೇ ಆಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಹೆಣ್ಣನ್ನು ಸುಖಿಸುವುದು ಎಂದರೆ ಹಿಂಸಿಸುವದು ಎಂದೇ ಮನದಟ್ಟು ಮಾಡುವಂತಹ ವಿಡಿಯೋಗಳಿಗೇನೂ ಕೊರತೆ ಇಲ್ಲ!‌ ಗಂಡಸ್ತನದ ಅಹಮ್ಮಿನಿಂದ ಆಚೆ ಹೆಣ್ಣು ಗಂಡಿಗೆ ಸರಿಸಮಾನಳು, ಅವಳನ್ನು ಗೌರವಿಸುದ ಹೊರತು ನಿನ್ನ ಗಂಡುಜನ್ಮಕ್ಕೆ ಬೆಲೆ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ.

ಪುರುಷ ಪ್ರಧಾನ ವ್ಯವಸ್ಥೆಯಿಂದ ಆಚೆ ಬಂದು ಮಾನವೀಯ ಮೌಲ್ಯಗಳನ್ನು ಕಲಿಸದ ಹೊರತು ಹೆಣ್ಣೆತ್ತವರ ಕಣ್ಣೀರಿಗೆ ಕೊನೆಯಿಲ್ಲ. ಅತ್ಯಾಚಾರದ ಭೀಕರ ಹಿಂಸೆ ಅನುಭವಿಸಿ ವಾರಗಟ್ಟಲೆ ಸಾವು ಬದುಕಿನೊಡನೆ ಒದ್ದಾಡಿ ಜೀವ ಬಿಡುವ ಹೆಣ್ಣು ಯಾಕಾದರೂ ಹುಟ್ಟಿದೆನೋ ಎಂದು ಅದೆಷ್ಟು ನಿಟ್ಟುಸಿರು ಬಿಟ್ಟಿರುತ್ತಾಳೋ ಅದು ಕಲ್ಪನಾತೀತ.”

| ವೈಶಾಲಿ ದುರ್ಗಪ್ಪ, ಚಿತ್ರದುರ್ಗ

ವೈಶಾಲಿ ದುರ್ಗಪ್ಪ


“ಅತ್ಯಾಚಾರ ಅಂದ್ರೆ ಏನು ಅಂತ ಅರಿಯದ ಮಕ್ಕಳ ಮೇಲೂ ಅತ್ಯಾಚಾರ ಆಗ್ತಾ ಇರೋ ದೇಶ ನಮ್ಮದು. ಭಯ ಆಗುತ್ತೆ ಹೊರಗೆ ಹೋಗೋಕೆ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ಅತ್ಯಾಚಾರಕ್ಕೆ ಜಾತಿ ಇಲ್ಲ ಹೆಣ್ಣೊಂದೇ ಜಾತಿ. ಆದರೆ ನ್ಯಾಯಕ್ಕೆ ಮಾತ್ರ ಜಾತಿ ಯಾಕೆ ಅಂತ ಗೊತ್ತಿಲ್ಲ.

ಏನೇ ಆದರೂ ಅತ್ಯಾಚಾರ ನಡೆಯದೇ ಇರೋ ಹಾಗೆ ಮಾಡೋದು ಹೇಗೆ? ಗೊತ್ತಿಲ್ಲ. ನಾವು ನಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸದೆ ಇದ್ದರೆ ನಾಳೆ ನಮ್ಮ ಮಕ್ಕಳು ನಮ್ಮನ್ನೇ ಅತ್ಯಾಚಾರ ಮಾಡೋ ಕಾಲ ದೂರ ಇಲ್ಲ. ಸರ್ಕಾರ ಸರಿಯಾದ ಕ್ರಮ ತಗೋಬೇಕು. ಕಾನೂನು ಬಲವಾಗಬೇಕು.”

| ಬಿಂದು ರಕ್ಷಿದಿ, ನಟಿ

ಬಿಂದು ರಕ್ಷಿದಿ


ಕೆಲವು ವರ್ಷಗಳ ಹಿಂದೆ ಟೀವಿ ಮಾದ್ಯಮವೊಂದರ ಸಂದರ್ಶನದಲ್ಲಿ ಚಿಂತಕರೊಬ್ಬರು ಮುಂದೆ ಅತ್ಯಾಚಾರ ಕಾನೂನುಬದ್ಧವಾಗುವ ಅಪಾಯವನ್ನು ಕುರಿತು ಮಾತನಾಡಿದ್ದರು. ಆ ಎಲ್ಲಾ ಸಾಧ್ಯತೆಗಳನ್ನು ನಾವೀಗ ಕಣ್ಮುಂದೆ ಕಾಣುತ್ತಿದ್ದೇವೆ.

ಪ್ರಭುತ್ವದ ಪ್ರತಿಕ್ರಿಯೆಗಳು ಅತ್ಯಂತ ಆತಂಕಕಾರಿಯಾಗಿದ್ದು ಅದು ಬಲಿಷ್ಠ ಜಾತಿಗಳ ಪರವಾಗಿ ಮೃಧು ಧೋರಣೆಯನ್ನು ತಾಳುತ್ತ ಅಪರಾಧಿಗಳನ್ನು ರಕ್ಷಿಸಲು ಹೊರಟಿರುವುದು ಮುಂಬರಲಿರುವ ಕರಾಳ ಅಧ್ಯಾಯದ ಆರಂಭವಾಗಿದೆ.

ಇತ್ತೀಚೆಗಷ್ಟೇ ಎಲ್ಲಾ ಸಮುದಾಯದ ಹೆಣ್ಣುಮಕ್ಕಳ ಮೇಲೆ ಬಂಧನ ಸಡಿಲಗೊಳ್ಳುತ್ತಿರುವ ಪರಿವರ್ತನೆಯನ್ನು ಕಂಡು ಸಮಾಧಾನ ಪಟ್ಟುಕೊಳ್ಳುತ್ತಿದ್ದೆವು ಆದರೆ ಈ ನಿತ್ಯದ ಸರಣಿ ಅತ್ಯಾಚಾರಗಳು ಹೆಣ್ಣನ್ನು ಮತ್ತೆ ಬಂಧನದ ಅವಸ್ಥೆಗೆ ತಳ್ಳುತ್ತಿವೆ ಎಂಬುದಂತೂ ಸತ್ಯ‌.

ಮೇಲ್ಜಾತಿಗಳು ಯಾವೇ ಆಗಿದ್ದರೂ ಎಲ್ಲಿಯೇ ಇದ್ದರು ಅವು ತಳ ಜಾತಿಗಳನ್ನು ಅದರಲ್ಲೂ ತಳ ಸಮುದಾಯದ ಹೆಣ್ಣುಮಕ್ಕಳನ್ನು ಭೋಗದ ವಸ್ತುವಾಗಿಯೇ ಕಾಣುತ್ತವೆ ಎಂಬುದಕ್ಕೆ ಚಾರಿತ್ರಿಕ ಆಧಾರಗಳಿವೆ. ಪ್ರಭುತ್ವದ ಬಲ ಅದರ ರಕ್ಷಣೆಗಿದ್ದಾಗಲಂತೂ ಮುಗಿದೇ ಹೋಯಿತು‌. ನಮ್ಮ ದೇಶ ಈಗ ಈ ಅವಸ್ಥೆಯಲ್ಲಿದೆ.”

| ಸುರೇಶ ಎನ್ ಶಿಕಾರಿಪುರ, ಉಪನ್ಯಾಸಕರು

ಸುರೇಶ ಎನ್ ಶಿಕಾರಿಪುರ


ಒಂದು ಹೆಣ್ಣು ನಿರ್ಭಯವಾಗಿ ರಾತ್ರಿ 12 ಗಂಟೆಯಲ್ಲಿ ನಡೆಯುವಳೋ ಅಂದು ನಿಜವಾದ ಸ್ವಾತಂತ್ರ್ಯ. ನಿಜವಾದರೂ ನಮ್ಮ ಮುಂದಿರುವ ಪ್ರಶ್ನೆಯೆಂದರೆ, ಜನನಿಬೀಡ ಪ್ರದೇಶದಲ್ಲೂ ಹಗಲಲ್ಲೆ ಸುರಕ್ಷತೆ ಇಲ್ಲ. ಹೆಣ್ಣಿನ ಮೇಲಿನ ಅತ್ಯಚಾರ ಸರಣಿಯಂತೆ ನಡೆಯುತ್ತಲಿದೆ, ಇದಕ್ಕೆ ತಿಂಗಳ ಮಗುವಿನಿಂದ ಹಿಡಿದು, ವೃದ್ದೆಯನ್ನು ಬಿಡುತಿಲ್ಲ ಕಾಮ ಪಿಶಾಚಿಗಳು.

ಭಿಕ್ಷುಕಿಯರಾದಿಯಾಗಿ ಬಲಿಯಾಗುತ್ತಿದ್ದಾರೆ. ಹೆಚ್ಚಾಗಿ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಲಿವೆ. ಇದಕ್ಕೆ ಉದಾಹರಣೆಯಾಗಿ ಮನಿಷಾ ವಾಲ್ಮೀಖಿ ಎಂಬ ದಲಿತಮಗಳು ಕಾಮುಕರ ಕಪಿ ಮುಷ್ಟಿಯಲ್ಲಿ ನರಳಿ ಜೀವ ಬಿಟ್ಟಳು. ಸರ್ಕಾರ ಯಾಕೆ ಮೌನವಾಗಿದೆ.

ಇದ್ದಕಿದ್ದಂತೆ ನಡುರಾತ್ರಿಯಲ್ಲಿ ಬದಲಾಗುವ ಕಾನುನುಗಳು, ಮಸೂದೆಗಳು ಎಂದಿಗೂ ಅತ್ಯಚಾರಿಗಳ ವಿರುದ್ದ ಕಠಿಣಕ್ರಮ ಜಾರಿ ಮಾಡುವುದೇ ಇಲ್ಲ. ನಮ್ಮ ರಕ್ಣಣೆಗೆ ಸದಾ ಇರುತ್ತಾರೆ ಎಂದು ಅರಕ್ಷರನ್ನು ನಂಬಿದರೆ, ಅವರೆ ಇಂದು ಮಾನವೀಯತೆಯನ್ನು ಮರೆತಂತಿದೆ.

ಹೆಣ್ಣಿಲ್ಲದ ಜೀವಜಗತ್ತು ಅದು ಸ್ಮಶಾನಕ್ಕೆ ಸಮಾನ, ಅದು ಜೀವಜಗತ್ತಿನವಿನಾಶ ಕೂಡ ಹೌದು. ಹೆಣ್ಣಿನ ಮೇಲಿನ ಮೃಗೀಯ ವರ್ತನೆಯನ್ನು ದಯಮಾಡಿ ನಿಲ್ಲಿಸಿ, ಮನಿಷಾಳ ಸಾವಿಗೆ ನ್ಯಾಯ ಸಿಗಲಿ.ಇವಳ ಅತ್ಯಾಚಾರ ಪ್ರಕರಣವೇ ಕೊನೆಯದಾಗಲಿ. ಕೊನೆಯಾಗುವಂತೆ ನಾವೆಲ್ಲರು ಒಗ್ಗಟ್ಟಾಗಿ ಹೋರಾಡುವ ತುರ್ತಿದೆ.”

| ಡಾ.ಪುಷ್ಪಲತ.ಸಿ, ಭದ್ರಾವತಿ

ಡಾ. ಪುಷ್ಪಲತಾ ಸಿ


ಹಾಥರಸ್ ಅತ್ಯಾಚಾರ ಪ್ರಕರಣ ಡಿಜಿಟಲೀಕರಣದ ಹೊತ್ತಿನಲ್ಲಿ ಉಳ್ಳವರ ದಬ್ಬಾಳಿಕೆಯ ಮತ್ತಿನಲ್ಲಿ,
ಏನೂ ಆಗಿಯೇ ಇಲ್ಲವೆಂಬ ಸಮರ್ಥ ನೆಗೆ ರಾಜಕಾರಣದ ಸಂರಕ್ಷಣೆಯಲ್ಲಿ ಯಾವುದೇ ಹೆಣ್ಣಿನ
ಮೇಲೆ ನಡೆಯುವ ಅತ್ಯಾಚಾರವು
ಎಗ್ಗಿಲ್ಲದೆ ಸಾಗುವುದಕ್ಕೆ ನೈತಿಕ
ಶಿಕ್ಷಣದ ಒತ್ತಾಸೆಯಿಲ್ಲದಿರುವುದೇ
ಕಾರಣ.

ಅಂತೆಯೇ ಎಲ್ಲವೂ ನಾನೇ, ನನಗಾಗಿ ಎನ್ನುವ ಹಪಾಹಪಿಯನ್ನು ಕಲಿಸುತ್ತಿರುವ ಸಮಾಜದ ಧುರೀಣ ರು,ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳು,ಎಲ್ಲವೂ ಮನೆ ಬಾಗಿಲಿಗೆ ಎಂಬ ಘನಘೋರ ಸಂಚು ಕೂಡ ದುರ್ಬಲರು, ಮಹಿಳೆಯರ ಮೇಲೆ
ನಿರಂತರ ಅತ್ಯಾಚಾರವೆಸಗಲು
ರಹದಾರಿಯಾಗಿದೆ. ಅತ್ಯಾಚಾರ ಖಂಡನೆಗಿಂತ,ಪ್ರಜ್ಞಾವಂತರೆಲ್ಲರೂ
ನಮ್ಮ ಬದುಕಿನ ಭಾಗವಾಗಿ
ಅಂತಃಕರಣವನ್ನು ರೂಪಿಸಿಕೊಂಡಿದ್ದೇ ಆದರೆ ಅತ್ಯಾಚಾರ ಪ್ರಕರಣಗಳಿಗೆ ತೆರೆಬೀಳಬಹುದು.”

| ಪಂಚಾಕ್ಷರಯ್ಯ ಕೆ.ಎಂ.,ಅಧ್ಯಾಪಕರು, ದಾವಣಗೆರೆ

ಪಂಚಾಕ್ಷರಯ್ಯ ಕೆ.ಎಂ

“ಈ ದೇಶದ ಮಣ್ಣಿನಲ್ಲಿ ಒಂದು ಜೀವ,ಹೆಣ್ಣಾಗಿ ಬಂದು ಈ ಸಮಾಜದ ಕಣ್ಣಾಗುವ ಹೊತ್ತಿಗೆ, ಅವಳ ಮೇಲೆ ಹಲ್ಲೆಯಾಗಿ, ಅತ್ಯಾಚಾರವಾಗಿ, ಅವಳು ನರಳಿ ನರಳಿ ನಾಶವಾದ ಘಟನೆಯಷ್ಟು ಭೀಕರವಾದ ಮತ್ತೊಂದು ಘಟನೆ ಇರಲಾರದು! ಇದು ಪ್ರತಿ ಹೆತ್ತೊಡಲ ಮಡಿಲಿನ ತಾಯ್ತನಕ್ಕೆ, ಹೆಣ್ತನಕ್ಕೆ ಮಾಡಿದ ದ್ರೋಹ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜಾಗೃತಿಯ ದಿನಗಳಲ್ಲೂ ಸಾಮೂಹಿಕ ಅತ್ಯಾಚಾರಗಳಾಗುತ್ತಿರುವುದು ವಿಕೃತ ಮನಸ್ಸುಗಳ ಅತಿರೇಕ ವರ್ತನೆಯ ತುತ್ತ ತುದಿ. ಆಡಳಿತ ವ್ಯವಸ್ಥೆ ಇಂತಹ ಹೀನಕೃತ್ಯಗಳ ವಿರುದ್ಧ ಮೊದಲು ಸಿಡಿದೇಳಬೇಕು. ನಂತರ ನೊಂದ ಮನಸ್ಸುಗಳ ಪರ ಮನಮಿಡಿಯುವ ಪ್ರಾಥಮಿಕ ವರ್ತನೆ ಮೊದಲಾಗಬೇಕು. ಪ್ರತಿ ನೋವಿಗೂ ಜೀವಂತ ಸಂಬಂಧಿಗಳಾಗಬೇಕು. ಆಗ ಮಾತ್ರ ಮನುಷ್ಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ಸಾಧ್ಯ.”

| ಡಾ.ಗಿರೀಶ್ ಮೂಗ್ತಿಹಳ್ಳಿ, ಚಿಕ್ಕಮಗಳೂರು

ಡಾ.ಗಿರೀಶ್ ಮೂಗ್ತಿಹಳ್ಳಿ


“ಭಾರತದಂತಹ ಶಾಂತಿಯ ನೆಲವನ್ನು ಹಲ್ಲೆ, ಅತ್ಯಾಚಾರದಂತಹ ಹೀನ‌ ಕೃತ್ಯಗಳು ಕಂಗೆಡಿಸುತ್ತಿವೆ. ಹೆಣ್ಣು ಈ ಜಗದ ಕಣ್ಣು. ಅಂತಹ ಕಣ್ಣನ್ನು ನೀವು ಕಳೆದುಕೊಂಡರೆ ಏನನ್ನು ಸಾಧಿಸಲಾರಿರಿ. ಹೆಣ್ಣನ್ನು ಗೌರವಿಸಿ, ಅತ್ಯಾಚಾರದಂತಹ ಹೀನತೆಯನ್ನು ವಿರೋಧಿಸಿ. ಅತ್ಯಾಚಾರಕ್ಕೆ ಮುಂದಾಗುವ, ಅತ್ಯಾಚಾರವನ್ನು ಬೆಂಬಲಿಸುವ ಮತ್ತು ಅತ್ಯಾಚಾರಕ್ಕೆ ಪ್ರಚೋದಿಸುವ ಹೀನ ಮನಸುಗಳಿಗೆ ಧಿಕ್ಕಾರ.”

| ಡಾ.ರೇಖಾ,ಪೋಸ್ಟ್ ಡಾಕ್ಟರಲ್ ಫೆಲೋ,
ಕನ್ನಡ ವಿಶ್ವವಿದ್ಯಾಲಯ, ಹಂಪಿ

ಡಾ.ರೇಖಾ


“ಹೆಣ್ಣಿನ‌ ಮೇಲೆ ನಡೆಯುವಂತಹ ಅತ್ಯಾಚಾರದಿಂದ ಮಾನವ ಕುಲವ ತಲೆ ತಗ್ಗಿಸುವಂತಾಗಿದೆ. ಇದು ಅತ್ಯಂತ ನೋವಿನ ಸಂಗತಿ. ಸಂವಿಧಾನದಂತಹ ಪ್ರಬಲವಾದ ರಕ್ಷಣೆ ಇದ್ದಾಗಲೂ ಹೆಣ್ಣು ಧೈರ್ಯವಾಗಿ ಹೊರ ಬರಲಾರದ ಸ್ಥಿತಿಯೊಂದು ನಿರ್ಮಾಣವಾಗಿರುವುದು ಆಳುವ ವರ್ಗದ ದೌರ್ಬಲ್ಯವನ್ನು ಎತ್ತಿ ಹಿಡಿಯುತ್ತದೆ. ಅತ್ಯಾಚಾರದ ಮನಸ್ಥಿತಿಯುಳ್ಳವರಿಗೆ ನಮ್ಮ ಧಿಕ್ಕಾರ.”

| ಡಾ.ರೇಣುಕುಮಾರಿ ಆರ್.ಟಿ, ಚಿತ್ರದುರ್ಗ

ಡಾ.ರೇಣು ಕುಮಾರಿ


“ಗೋವಿಗೆ ಮಾತೆ ಎಂದು ಪೂಜಿಸುವ ಯೋಗಿ ನಾಡಲ್ಲಿ ( ಉತ್ತರ ಪ್ರದೇಶ) ಅತಿ ಹೆಚ್ಚು ಮಹಿಳೆಯರ ಮತ್ತು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರಗಳು ನಡಿಯುತ್ತಲೆ ಇವೆ. ಅದರಲ್ಲೂ ದಲಿತ ಮತ್ತು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳೆಗೆ ನಮ್ಮ ದೇಶದಲ್ಲಿ ರಕ್ಷಣೆ ಇಲ್ಲದಂತಾಗಿದೆ. 19 ವರ್ಷದ ಮನಿಷಾಳನ್ನು ಕಾಮುಕರು ನಾಲಿಗೆ ಕತ್ತರಿಸಿ ಬೆನ್ನುಮೂಳೆಯ ಮೂರಿದು ಅವಳ ಮೇಲೆ ವಿಕೃತವಾಗಿ ಅತ್ಯಾಚಾರ ಎಸಗಿದ್ದಾರೆ.

ಅಷ್ಟೇ ಅಲ್ಲದೆ ರಾತ್ರೋರಾತ್ರಿ ಅಲ್ಲಿಯ ಸರ್ಕಾರದ ಮನಿಷಾಳ ಶವವನ್ನು ಯಾರಿಗೂ ತಿಳಿಯದಂತೆ ಸುಟ್ಟು ಹಾಕಿದ್ದಾರೆ. ಈ ವಿಕೃತ ಕೃತ್ಯವೆಸಗಿದ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಈ ಪ್ರಕರಣವನ್ನು ಮುಚ್ಚ ಹಾಕಲು ಯತ್ನಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕು.

ಹೆಣ್ಣಿಗೆ ರಕ್ಷಣೆ ನೀಡದ ಬಿಜೆಪಿ ಸರ್ಕಾರ ಕೆಳಗಿಳಿಸಬೇಕು ಎಲ್ಲದಕ್ಕೂ ಕುಮ್ಮಕ್ಕು ನೀಡುತ್ತಿರುವ ಯೋಗಿ ಆದಿತ್ಯನಾಥ ರಾಜಿನಾಮೆ ಕೊಡಬೇಕು. ಹೆಣ್ಣನ್ನು ರಕ್ಷಿಸುವ ನೆಲದಲ್ಲಿ ಕಾಮುಕರ ರಕ್ಷಣೆ ಮಾಡುತ್ತಿರುವ ನಾಲಾಯಕ ಸರ್ಕಾರಕ್ಕೆ ನನ್ನ ಧಿಕ್ಕಾರವಿದೆ.”

| ಪ್ರಿಯಾಂಕ ಮಾವಿನಕರ್, ವರದಿಗಾರರು, ಬೆಂಗಳೂರು

ಪ್ರಿಯಾಂಕ ಮಾವಿನಕರ್


ತ ಶತಮಾನಗಳ ಕಾಲ ಶೋಷಣೆಗೆ ಒಳಗಾದ ಹೆಣ್ಣು ಈಗ ತಾನೇ ಸ್ವಾಭಿಮಾನದಿಂದ ಸ್ವಾವಲಂಭಿ ಬದುಕು ರೂಪಿಸಿಕೊಳ್ಳಲು ಮುಂದಾಗುತ್ತಿದ್ದಾಳೆ‌. ಇಂತಹ ಸಂದರ್ಭದಲ್ಲಿ ಅತ್ಯಾಚಾರದಂತಹ ಹೇಯ್ಯ ಕೃತ್ಯಗಳು ಸ್ತ್ರೀ ಕುಲವನ್ನು ಕಂಗೆಡಿಸುತ್ತಿವೆ. ಇಂತಹ ನೀಚ ಮನಸ್ಥಿತಿ ಅತ್ಯಂತ ಅಪಾಯಕಾರಿ. ಇದನ್ನು ಸ್ತ್ರೀ ಕುಲ ಮಾತ್ರವಲ್ಲ, ಮಾನವ ಜಗತ್ತೇ ಖಂಡಿಸಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು.”

| ಡಾ. ನಿರ್ಮಲ ಮಂಜು,ಕನ್ನಡ ವಿಶ್ವವಿದ್ಯಾಲಯ, ಹಂಪಿ

ಡಾ. ನಿರ್ಮಲ ಮಂಜು


ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

Published

on

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.

ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending