Connect with us

ದಿನದ ಸುದ್ದಿ

ಸಂವಿಧಾನ ಸೃಷ್ಟಿಯ ಕತೆ..!

Published

on

  • ರಘೋತ್ತಮ ಹೊ.ಬ

Constituent Assembly ಅಥವಾ ಸಂವಿಧಾನ ಸಭೆಯ ಉಗಮದ ಇತಿಹಾಸವನ್ನು ಸಂಕ್ಷಿಪ್ತವಾಗಿ ದಾಖಲಿಸುವುದಾದರೆ 1945 ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿತು. ಹಾಗೆ ಇದಕ್ಕೆ ಪರಿಹಾರ ಸೂಚಿಸಲು ಬ್ರಿಟಿಷರು ಮೂವರು ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ಭಾರತಕ್ಕೆ ಕಳುಹಿಸಿದರು.

ಆ ಸಮಿತಿಯ ಹೆಸರು ‘ಕ್ಯಾಬಿನೆಟ್ ಮಿಷನ್ ಆಯೋಗ’. ಸದರಿ ಆಯೋಗವು 1946 ಮಾರ್ಚ್ 16 ರಂದು ‘ಭವಿಷ್ಯದ ಭಾರತದ ಸರ್ಕಾರಕ್ಕಾಗಿ ಒಂದು ಸಂವಿಧಾನ ರಚಿಸಲು ಸಂವಿಧಾನ ಸಭೆಯೊಂದನ್ನು ರಚಿಸುವ ಅಗತ್ಯವಿದೆ’ ಎಂದು ಘೋಷಿಸಿತು. ಅಂತೆಯೇ ಆ ಸಭೆ ಪ್ರಜಾಸತ್ತಾತ್ಮಕವಾಗಿರಬೇಕೆಂಬ ನಿಟ್ಟಿನಲ್ಲಿ ವಿವಿಧ ಪ್ರಾಂತ್ಯಗಳ ಅಸೆಂಬ್ಲಿಗಳ ಮೂಲಕ ಸದಸ್ಯರನ್ನು ಆರಿಸಲಾಯಿತು.

ಆ ಸಭೆಗೆ ಭಾರತದ ಪಶ್ಚಿಮದ ತುದಿ ಬಾಂಬೆ ಪ್ರಾಂತ್ಯದಿಂದ ಸ್ಪರ್ಧಿಸಿದ್ದ ಅಂಬೇಡ್ಕರರು ಅಂದಿನ ರಾಜಕೀಯ ಪಕ್ಷಗಳ ಅವಿಚ್ಛಿನ್ನ ವಿರೋಧದಿಂದ ಸೋಲಬೇಕಾಯಿತು. ಆದರೂ, ಎದೆಗುಂದದೆ ಪೂರ್ವದ ದೂರದ ಬಂಗಾಳದಿಂದ ಅಲ್ಲಿಯ ಪರಿಶಿಷ್ಟ ಜಾತಿಯ ನಾಯಕ ಜೋಗೇಂದ್ರನಾಥ ಮಂಡಲ್‍ರ ಬೆಂಬಲದ ಮೂಲಕ ಅವರು ಸಂವಿಧಾನ ಸಭೆಗೆ ಆರಿಸಿ ಬರುವಲ್ಲಿ ಸಫಲರಾರದು.

ಒಟ್ಟಾರೆ 296 ಸದಸ್ಯ ಬಲದ ಮೂಲಕ ಸಂವಿಧಾನ ಸಭೆ ತನ್ನ ಪ್ರಥಮ ಸಭೆಯನ್ನು 1946 ಡಿಸೆಂಬರ್ 6ರ ಬೆಳಿಗ್ಗೆ 11ಗಂಟೆಗೆ ನವದೆಹಲಿಯ ಕಾನ್‍ಸ್ಟಿಟ್ಯೂಶನ್ ಹಾಲ್‍ನಲ್ಲಿ ಆರಂಭಿಸಿತು.

ಸಭೆ ಆರಂಭವಾದಾಗ ಒಟ್ಟು 296 ಸದಸ್ಯರಲ್ಲಿ ಭಾಗವಹಿಸಿದ್ದು 207 ಮಂದಿಯಷ್ಟೆ. ಇನ್ನುಳಿದ ಮಂದಿ ಅಂದಿನ ಮುಸ್ಲಿಂಲೀಗ್‍ಗೆ ಸೇರಿದವರಾಗಿದ್ದು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ಅವರೆಲ್ಲ ಗೈರುಹಾಜರಾಗಿದ್ದರು. ಹೀಗಿದ್ದರೂ ಪಂಡಿತ್ ಜವಹರಲಾಲ್ ನೆಹರೂ “ಭಾರತ ಸಾರ್ವಭೌಮ ಸ್ವತಂತ್ರ ಗಣರಾಜ್ಯವಾಗಲು ತನ್ನ ಭವಿಷ್ಯದ ಸರ್ಕಾರಕ್ಕಾಗಿ ಅದು ತನ್ನದೇ ಆದಂತಹ ಸಂವಿಧಾನವೊಂದನ್ನು ಹೊಂದುವುದನ್ನು ಬಯಸುತ್ತದೆ” ಎಂದು ಗೊತ್ತುವಳಿಯೊಂದನ್ನು ಮಂಡಿಸಿದರು.

ಆದರೆ ಸದಸ್ಯರಾದ ಎಂ.ಆರ್.ಜಯಕರ್ “ಸಭೆಗೆ ಮುಸ್ಲಿಂ ಲೀಗ್ ಮತ್ತು ಇತರೆ ರಾಜ ಸಂಸ್ಥಾನಗಳ ಸದಸ್ಯರು ಗೈರುಹಾಜರಾಗಿರುವುದರಿಂದ ಅವರೆಲ್ಲ ಭಾಗವಹಿಸುವಂತಾಗಲು ಈ ಸಭೆಯನ್ನು ಮುಂದೂಡಬೇಕು” ಎಂದು ತಮ್ಮ ಆಕ್ಷೇಪವ್ಯಕ್ತಪಡಿಸಿದರು ಮತ್ತು ನೆಹರೂರವರು ಮಂಡಿಸಿದ್ದ ಆ ಗೊತ್ತುವಳಿಯ ಚರ್ಚೆಯನ್ನು ಮುಂದೂಡಲು ಸಭೆಯ ಕಲಾಪಕ್ಕೆ ತಿದ್ದುಪಡಿಯೊಂದನ್ನು ಮಂಡಿಸಿದರು.

ಗೌರವಾನ್ವಿತ ಸದಸ್ಯರ ಇಂತಹ ಆಕ್ಷೇಪ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿತು. ಆಶ್ಚರ್ಯವೆಂದರೆ ಈ ಸಮಯದಲ್ಲಿ ಇಂತಹ ಅನಿರೀಕ್ಷಿತ ಕೋಲಾಹಲದ ನಡುವೆ ಮುಂದುವರಿದ ಸಭೆಯಲ್ಲಿ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದ್‍ರವರು ಡಿಸೆಂಬರ್ 17 ರಂದು ಡಾ.ಅಂಬೇಡ್ಕರರನ್ನು ಸಭೆಯನ್ನುದೇಶಿಸಿ ಮಾತನಾಡಲು ಆಹ್ವಾನಿಸಿದರು.

ಸತ್ಯ ಹೇಳಬೇಕೆಂದರೆ ಯಾವ ಸಂವಿಧಾನ ಸಭೆ ನಿಂತುಹೋಗಬೇಕಿತ್ತೋ, ಅನಿರ್ದಿಷ್ಟ ಅವಧಿಗೆ ಮುಂದೂಡಬೇಕಾಗಿತ್ತೋ ಅದು ಮುಂದುವರಿಯಿತು! ಹೋಲಿಕೆ ಮಾಡುವುದಾದರೆ ಭಾರತದ ಸಂವಿಧಾನದ ಚಕ್ರ ಅಂಬೇಡ್ಕರರ ಮೂಲಕ ಉರುಳಲಾರಂಭಿಸಿತು! ಯಾಕೆಂದರೆ ತಮ್ಮ ಭಾಷಣದಲ್ಲಿ ಅಂಬೇಡ್ಕರರು ನೆಹರೂರವರು ಮಂಡಿಸಿದ್ದ ಗೊತ್ತುವಳಿಯ 8 ಅಂಶಗಳನ್ನು ಪದ ಪದವಾಗಿ, ಪದರು ಪದರಾಗಿ ಬಿಡಿಸಿ ಸಂವಿಧಾನ ಎತ್ತ ಸಾಗಬೇಕು, ಹೇಗಿರಬೇಕು ಎಂದು ವಿವಿಧ ರಾಷ್ಟ್ರಗಳ ಸಂವಿಧಾನಗಳನ್ನು ಉಲ್ಲೇಖಿಸುತ್ತಾ ಮಾರ್ಗ ತೋರಿಸಲಾಂಭಿಸಿ ಸಭೆಯನ್ನು ಗಂಭೀರತೆಯೆಡೆಗೆ ತಂದರು.

ಮುಸ್ಲಿಂಲೀಗ್ ಸದಸ್ಯರು ಗೈರಾಗಿದ್ದಕ್ಕೆ ಮುಂದಿನ ಸಭೆಯಲ್ಲಿ ಅವರು ಭಾಗವಹಿಸುತ್ತಾರೆ ಎಂಬ ಏಕತೆಯ ಆಶಾಭಾವ ವ್ಯಕ್ತಪಡಿಸುತ್ತಾ ಅಂಬೇಡ್ಕರರು “ವಿವಿಧ ಜಾತಿ-ಜನಾಂಗಗಳಾಗಿದ್ದಾಗ್ಯೂ ನಾವೆಲ್ಲಾ ಸದಾ ಒಂದಾಗಿರುವುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ” ಎಂದರು.

ಹೀಗೆ ತನ್ನ ಆರಂಭಿಕ ದಿನಗಳನ್ನು ಪ್ರಾರಂಭಿಸಿದ ಸಂವಿಧಾನಸಭೆ ಸರ್ದಾರ್ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ 1947 ಜನವರಿ 24 ರಂದು ಅಂಬೇಡ್ಕರರನ್ನು ಒಳಗೊಂಡಂತೆ 50 ಜನ ಸದಸ್ಯರ ಸಲಹಾ ಸಮಿತಿಯೊಂದನ್ನು ನೇಮಿಸಿತು. ಆ ಸಮಿತಿ ಇತರೆ 4 ಪ್ರಮುಖ ಉಪಸಮಿತಿಗಳನ್ನು ನಿಯುಕ್ತಿಗೊಳಿಸಿತು. ಅವುಗಳಲ್ಲಿ ಬಹುಮುಖ್ಯದ್ದೆಂದರೆ ಮೂಲಭೂತ ಹಕ್ಕುಗಳ ಉಪಸಮಿತಿ ಮತ್ತು ಅಲ್ಪಸಂಖ್ಯಾತರ ಉಪಸಮಿತಿ.

ಅಂಬೇಡ್ಕರರು ಈ ಎರಡೂ ಪ್ರಮುಖ ಸಮಿತಿಗಳ ಸದಸ್ಯರಾದರು. ಮುಂದುವರಿದು ಸಭೆ ಇನ್ನೂ 3 ಕಾರ್ಯಾಚರಣಾ ಸಮಿತಿಗಳನ್ನು ರಚಿಸಿತು. ಅವುಗಳೆಂದರೆ ..

  1. ಕೇಂದ್ರ ಅಧಿಕಾರ ಸಮಿತಿ
  2. ಕೇಂದ್ರ ಸಂವಿಧಾನ ಸಮಿತಿ
  3. ಪ್ರಾಂತ್ಯಗಳ ಸಂವಿಧಾನ ಸಮಿತಿ

ಇಲ್ಲಿಯೂ ಅಷ್ಟೆ ಅಂಬೇಡ್ಕರ್ ಕೇಂದ್ರ ಸಂವಿಧಾನ ಸಮಿತಿಯ ಸದಸ್ಯರಾದರು. ಹೀಗೆ ಅವರು ಪ್ರಮುಖ ಸಮಿತಿಗಳ ಸದಸ್ಯರಾಗುವುದಕ್ಕೆ ಕಾರಣವೂ ಇತ್ತು.

ಯಾಕೆಂದರೆ ಮುಂದೆ ಸಂವಿಧಾನ ಅರ್ಪಿಸುವ ಸಮಯದಲ್ಲಿ ಅವರೇ ಹೇಳಿಕೊಂಡಿರುವಂತೆ “ಪರಿಶಿಷ್ಟ ಜಾತಿಗಳ ಹಿತ ಕಾಯುವ ಮಹದಾಸೆ ಹೊತ್ತಷ್ಟೆ ತಾನು ಸಂವಿಧಾನ ಸಭೆಗೆ ಬಂದೆ…”. ಹೌದು, ಡಾ.ಅಂಬೇಡ್ಕರರು ಪರಿಶಿಷ್ಟರ ಹಿತ ಕಾಯುವ ನೆಪ ಮಾತ್ರಕ್ಕೆ ಬಂದರೂ ತಮಗರಿವಿಲ್ಲದಂತೆ ಅವರು ಇಡೀ ದೇಶದ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು! ಯಾವ ಪರಿ ಎಂದರೆ ಇಡೀ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಸಕ್ರಿಯರಾಗುವ ಮಟ್ಟಿಗೆ. ಅದೂ ಅದೆಂತಹ ಸಕ್ರಿಯತೆಯೆಂದರೆ ಶತೃಗಳೂ ಮೆಚ್ಚಿ ಅಹುದಹುದು ಎನ್ನುವ ಮಟ್ಟಿಗೆ!

ಏಕೆಂದರೆ ಸಂವಿಧಾನ ರಚನೆಯ ಇಂತಹ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡು ಸ್ವಾತಂತ್ರ್ಯದ ಸಮಯದಲ್ಲಿ ದೇಶ ವಿಭಜನೆಯ ಸಂದರ್ಭ ಬಂದಾಗ ಅಂಬೇಡ್ಕರರು ಗೆದ್ದಿದ್ದ ಬಂಗಾಳದ ಕ್ಷೇತ್ರ ಕಾಂಗ್ರೆಸ್ಸಿಗರ ತಂತ್ರದಿಂದಾಗಿ ಪೂರ್ವ ಪಾಕಿಸ್ತಾನಕ್ಕೆ ಸೇರಲ್ಪಟ್ಟು ಅವರ ಸದಸ್ಯತ್ವ ರದ್ದಾಯಿತು. ಸೋಜಿಗವೆಂದರೆ ಈ ಸಮಯದಲ್ಲಿ ಅಂಬೇಡ್ಕರರ ಸಂವಿಧಾನ ರಚನಾ ಚಾಕಚಕ್ಯತೆ ಕೆಲಸ ಮಾಡಿತು.

ಹೇಗೆಂದರೆ ಸ್ವತಃ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದರು 1947 ಜೂನ್ 30 ರಂದು ಬಾಂಬೆ ಪ್ರಾಂತ್ಯದ ಅಂದಿನ ಪ್ರಧಾನಿ ಡಾ.ಬಿ.ಜಿ.ಖೇರ್ ರವರಿಗೆ ಪತ್ರ ಬರೆದು “ಬೇರೆ ವಿಷಯಗಳೇನೆ ಇರಲಿ, ಸಂವಿಧಾನ ಸಭೆ ಮತ್ತದರ ವಿವಿಧ ಉಪಸಮಿತಿಗಳಲ್ಲಿ ಅಂಬೇಡ್ಕರರ ಕಾರ್ಯ ಎಂತಹ ಮಟ್ಟದ್ದೆಂದರೆ, ಖಂಡಿತ ಅವರ ಸೇವೆಯನ್ನು ನಾವು ಕಳೆದುಕೊಳ್ಳಬಾರದು. ಅದಕ್ಕಾಗಿ ಜುಲೈ 14ರ ಮುಂದಿನ ಸಭೆಯೊಳಗೆ he should be relected”ಎಂದರು! (Dr.Ambedkar: The Principal Architect of The Constitution of India, Published by Government of India. Pp.26)

ಹೌದು, ಬಾಬಾಸಾಹೇಬರು ತಕ್ಷಣ ಮರು ಆಯ್ಕೆಯಾದರು. ಹಾಗೇ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಕೂಡ ಸಿಕ್ಕಿತು ಮತ್ತು ಅವರು ಸ್ವತಂತ್ರ ಭಾರತದಲ್ಲಿ ನೆಹರೂ ಸಂಪುಟದಲ್ಲಿ ಕಾನೂನು ಸಚಿವರಾಗಿ ಕೂಡ ನೇಮಕಗೊಂಡರು. ಅಂದಹಾಗೆ ಆಗಸ್ಟ್ 29ರಂದು ಮರುಸಮಾವೇಶಗೊಂಡ ಸಂವಿಧಾನಸಭೆ ಸಹಜವಾಗಿ ಕಾನೂನು ಸಚಿವರಾದ ಡಾ.ಅಂಬೇಡ್ಕರರನ್ನು “ಸಂವಿಧಾನ ಪ್ರತಿ ರಚಿಸುವ ಸಮಿತಿ (drafting committee)”ಯ ಅಧ್ಯಕ್ಷರನ್ನಾಗಿ ಆರಿಸಿತು‌. ಜೊತೆಗೆ ಆರು ಮಂದಿ ಸದಸ್ಯರ ತಂಡ. ಒಟ್ಟಾರೆ ಸಂವಿಧಾನ ಸಭೆಯ ಇಂತಹ ನಡಾವಳಿಗಳ ಮೂಲಕ ಭಾರತದ ಭವಿಷ್ಯ ಬರೆವ ಕೆಲಸ ಬಾಬಾಸಾಹೇಬರ ಮುಡಿಗೇರಿತು.

ಸಂವಿಧಾನ ರಚನೆಯ ಜವಾಬ್ದಾರಿಯೇನೋ ಅಂಬೇಡ್ಕರರ ಮುಡಿಗೇರಿತು. ಆದರೆ ಆ ಜವಾಬ್ದಾರಿಯನ್ನು ಅವರು ನಿರ್ವಹಿಸಿದ ಪರಿ? ಖಂಡಿತ, ಅಂಬೇಡ್ಕರರು ಮತ್ತವರ ಸಂವಿಧಾನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಅವರು ಮತ್ತು ಇತರರು ಸಂವಿಧಾನ ಸಭೆಗಳಲ್ಲಿ ಮಾಡಿದ ಭಾಷಣಗಳಲ್ಲಿ ನಮಗೆ ಉಲ್ಲೇಖ ಸಿಗುತ್ತದೆ.

1949 ನವೆಂಬರ್ 25 ರಂದು ಡಾ.ಅಂಬೇಡ್ಕರರು ಸಂವಿಧಾನ ಸಮರ್ಪಿಸುತ್ತಾ ಮಾಡಿದ ಅಂತಿಮ ಭಾಷಣವನ್ನು ಉಲ್ಲೇಖಿಸುವುದಾದರೆ “ಮಾನ್ಯರೆ, ಸಂವಿಧಾನ ಸಭೆಯ ಕಾರ್ಯಕಲಾಪದ ಬಗ್ಗೆ ಹಿನ್ನೋಟ ನೋಡುವುದಾದರೆ 1946 ಡಿಸೆಂಬರ್ 9ರಿಂದ ಇಲ್ಲಿಯವರೆಗೆ ಸಂವಿಧಾನ ಸಭೆ ಸಮಾವೇಶಗೊಂಡು 2 ವರ್ಷ, 11 ತಿಂಗಳು, 17ದಿನಗಳು ಕಳೆಯುತ್ತಿವೆ. ಇದುವರೆಗೆ ಸಭೆ 11 ಸಮಾವೇಶಗಳನ್ನು ನಡೆಸಿದೆ.

ಈ 11 ಸಮಾವೇಶಗಳು 165 ದಿನಗಳನ್ನು ಬಳಸಿಕೊಂಡಿದೆ. ಈ 165 ದಿನಗಳಲ್ಲಿ 114 ದಿನಗಳನ್ನು ಸಭೆ ಕರಡು ಸಂವಿಧಾನವನ್ನು ಪರಿಗಣಿಸಲು ತೆಗೆದುಕೊಂಡಿದೆ. ಇನ್ನು ಕರಡು ಸಮಿತಿ ಅಥವಾ ಸಂವಿಧಾನ ರಚನಾ ಸಮಿತಿಯ ಬಗ್ಗೆ ಹೇಳುವುದಾದರೆ 1947 ಆಗಸ್ಟ್ 29 ರಂದು ಅದನ್ನು ಆಯ್ಕೆಮಾಡಲಾಯಿತು ಮತ್ತು ಅದು ತನ್ನ ಪ್ರಥಮ ಸಭೆಯನ್ನು 30ನೇ ಆಗಸ್ಟ್ ರಂದು ನಡೆಸಿತು. ಆಗಸ್ಟ್ 30 (1947) ರಿಂದ ಇಲ್ಲಿಯವರೆಗೆ ಸಮಿತಿ 141 ದಿನಗಳು ಸಭೆ ನಡೆಸಿ ಒಟ್ಟು ಈ ಅವಧಿಯನ್ನು ಕರಡು ಸಂವಿಧಾನವನ್ನು ತಯಾರಿಸಲು ಬಳಸಿಕೊಂಡಿದೆ” ಹೀಗೆ ವಿವರಿಸುತ್ತಾ ಹೋಗುತ್ತಾರೆ.

ಅಂದಹಾಗೆ ಬಾಬಾಸಾಹೇಬರ ನೇತೃತ್ವದ ಸಮಿತಿ ಸಿದ್ಧಪಡಿಸಿದ ಈ ಸಂವಿಧಾನ 1948 ಫೆಬ್ರವರಿ 26ರಂದು ಭಾರತ ಸರ್ಕಾರದ ಗೆಜೆಟ್‍ನಲ್ಲಿ ಪ್ರಕಟಗೊಂಡಿತು ಮತ್ತು ಹಾಗೆ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನದ ಆ ಪ್ರತಿ ತನ್ನ ಆರಂಭದ ಪುಟದಲ್ಲಿ ರಚನಾ ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರು ಸಭೆಯ ಅಧ್ಯಕ್ಷರಿಗೆ ಬರೆದ ಪತ್ರವೊಂದನ್ನೂ ಕೂಡ ಒಳಗೊಂಡಿತ್ತು.

ಆ ಪತ್ರದ ಪ್ರಾರಂಭದ ಒಕ್ಕಣೆಯನ್ನು ಉಲ್ಲೇಖಿಸುವುದಾದರೆ “Dear Sir, On behalf of the Drafting Committee… I submit herewith the Draft of the new Constitution of India… I have been authorized to sign the Draft… Yours truly, B.R.AMBEDKAR”.

ಖಂಡಿತ, ಹೀಗೆ ಪ್ರತಿ ಅಕ್ಷರವನ್ನೂ ಉಲ್ಲೇಖಿಸುವ ಅಗತ್ಯವಿಲ್ಲ. ಆದರೂ ಕೆಲವು ಕೋಮುವಾದಿ ಕಿತಾಪತಿಗಳಿಸ್ಕೋರ ಇದನ್ನು ಉಲ್ಲೆಖಿಸಬೇಕಿದೆ. ಅಲ್ಲದೆ ಮತ್ತೊಂದು ಅಂಶವನ್ನು ಇಲ್ಲಿ ದಾಖಲಿಸಬೇಕಿದೆ. ಅದೆಂದರೆ ಫೆಬ್ರವರಿ 26, 1948 ರಂದು ಗೆಜೆಟ್‍ನಲ್ಲಿ ಪ್ರಕಟಗೊಂಡ ಭಾರತ ಸಂವಿಧಾನದ ಕರಡು ಪ್ರತಿ ಅಂಬೇಡ್ಕರರು ವಯಕ್ತಿಕವಾಗಿ ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಸಮಿತಿಗೆ ತಮ್ಮ ಪಕ್ಷ ‘ಪರಿಶಿಷ್ಟ ಜಾತಿಗಳ ಒಕ್ಕೂಟ’ದ ಪರವಾಗಿ ಮಾರ್ಚ್ 15, 1947 ರಂದು ಸಲ್ಲಿಸಿದ ಮನವಿಯ ಡಿಟೋ ಕಾಪಿಯಂತೇ ಇದೆ ಎಂಬುದು!

ಈ ನಿಟ್ಟಿನಲ್ಲಿ ಆಸಕ್ತರು ಅಂಬೇಡ್ಕರರ ಆ ಮನವಿಯನ್ನು ಅವರ ಬರಹಗಳು ಭಾಷಣಗಳ ಸಂಪುಟ 1ರಲ್ಲಿ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿರುವುದನ್ನು ನಾವು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಹೇಳಬಹುದು “ಭಾರತದ ಸಂವಿಧಾನ ಅಂಬೇಡ್ಕರರ ಮೆದುಳಿನ ಕೂಸು” ಎಂದು.

ಪ್ರಶ್ನೆಯೇನೆಂದರೆ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನ ಫೆಬ್ರವರಿ 26, 1948 ರಂದೇ ಜಾರಿಯಾಯಿತೇ? ಖಂಡಿತ ಇಲ್ಲ. ಯಾಕೆಂದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಈ ದಿಸೆಯಲ್ಲಿ ಪ್ರಜೆಗಳ ಪ್ರತಿನಿಧಿಗಳ ನಡುವೆ ಅದು ಅಂದರೆ ಸಂವಿಧಾನ ಚರ್ಚೆಗೆ ಬರುವುದು ಬೇಡವೆ? ಹೌದು, 15 ನವೆಂಬರ್ 1948ರಲ್ಲಿ ಅನುಚ್ಛೇದ 1ರಿಂದ ಪ್ರಾರಂಭಿಸಿ 17 ಅಕ್ಟೋಬರ್ 1949ರವರೆಗೆ ಕೊನೆಯ ಅನುಚ್ಛೇದ ಅಂದರೆ ಅನುಚ್ಛೇದ 395ರವರೆಗೆ ಸಂವಿಧಾನ ಸಭೆ ಇಡೀ ಕರಡು ಸಂವಿಧಾನದ ಬಗ್ಗೆ ಭರಪೂರ ಚರ್ಚೆ ನಡೆಸಿತು.

ಆಶ್ಚರ್ಯ ಬೇಡ, ಈ ಇಷ್ಟೂ ದಿನಗಳಲ್ಲಿ ಪ್ರತಿಯೊಂದೂ ಅನುಚ್ಛೇದದ ಚರ್ಚೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಅಂಬೇಡ್ಕರರು ಗೌರವಾನ್ವಿತ ಸದಸ್ಯರ ಪ್ರತಿಯೊಂದು ಸಲಹೆಗೂ ಕಿವಿಯಾದರು ಮತ್ತು ಸಂಬಂಧಪಟ್ಟ ಅನುಚ್ಛೇದದ ಪದಪದದ ವಿವರಣೆ ನೀಡಿ ಸದಸ್ಯರ ಸಲಹೆಗಳನ್ನು ಗೌರವಯುತವಾಗಿ ಸ್ವೀಕರಿಸಿ ಅಗತ್ಯ ತಿದ್ದುಪಡಿಗಳನ್ನು ಅಂಗೀಕರಿಸಿದರು. ಈ ಸಂಬಂಧ ಅಂಬೇಡ್ಕರರು ನೀಡಿರುವ ಮಾಹಿತಿಯನ್ನೇ ದಾಖಲಿಸುವುದಾದರೆ “ಕರಡು ಸಂವಿಧಾನಕ್ಕೆ ಸೂಚಿಸಲಾದ ಒಟ್ಟು ತಿದ್ದುಪಡಿಗಳು 7635.

ಅವುಗಳಲ್ಲಿ ಅಂಗೀಕಾರಗೊಂಡಂತಹವು 2473”. ಒಟ್ಟಾರೆ ಇಂತೆಲ್ಲ ತಿದ್ದುಪಡಿಗಳ ನಂತರ 1949 ನವೆಂಬರ್ 17ರಂದು ಅಂತಿಮವಾಗಿ ಸಮಾವೇಶಗೊಂಡ ಸಂವಿಧಾನ ಸಭೆಯಲ್ಲಿ ಡಾ.ಅಂಬೇಡ್ಕರರು “ಅಧ್ಯಕ್ಷ ಮಹೋದಯರೇ, ಈ ಸಭೆ ಸ್ಥಿರೀಕರಿಸಿರುವ ಈ ಸಂವಿಧಾನವನ್ನು ಅಂಗೀಕರಿಸಬೇಕೆಂಬ ನಿರ್ಣಯವನ್ನು ನಾನು ಮಂಡಿಸುತ್ತೇನೆ” ಎನ್ನುತ್ತಿದ್ದಂತೆ ಇಡೀ ಸಭೆ ಹರ್ಷದ ಹೊನಲು ಹರಿಸಿ ಕರತಾಡನದೊಂದಿಗೆ ತನ್ನ ಒಪ್ಪಿಗೆ ಸೂಚಿಸಿತು. ಹಾಗೆಯೇ ಅಂಬೇಡ್ಕರರಿಗೆ ಅಭಿನಂದನೆಯ ಸುರಿಮಳೆಗಳು.

ಅವುಗಳಲ್ಲಿ ಒಂದಷ್ಟನ್ನು ದಾಖಲಿಸುವುದಾದರೆ ಮದ್ರಾಸಿನ ಮುನಿಸ್ವಾಮಿ ಪಿಳ್ಳೈ ಎಂಬುವವರು “ಪರಿಶಿಷ್ಟ ಜಾತಿಯು ನಂದನಾರ್, ತಿರುಪಳನಾಳ್ವರ್, ತಿರುವಳ್ಳುವರ್ ಹೀಗೆ ಶ್ರೇಷ್ಠ ಸಂತರನ್ನು, ಜ್ಞಾನಿಗಳನ್ನು ನೀಡಿದೆ. ನಿಸ್ಸಂಶಯವಾಗಿ ಡಾ.ಅಂಬೇಡ್ಕರರು ಅಂತಹವರ ಸಾಲಿಗೆ ಸೇರ್ಪಡೆಯಾಗುತ್ತಾರೆ. ಯಾಕೆಂದರೆ ಅವಕಾಶ ಸಿಕ್ಕರೆ ಪರಿಶಿಷ್ಟರು ಎಷ್ಟು ಎತ್ತರಕ್ಕೆ ಏರಬಲ್ಲರು ಎಂಬುದನ್ನು ಅಂಬೇಡ್ಕರರು (ತಮ್ಮ ಈ ಸಾಧನೆಯ ಮೂಲಕ) ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ”. ಇನ್ನು ಸೇಠ್ ಗೋವಿಂದದಾಸ್ ಎನ್ನುವವರು “ಡಾ.ಅಂಬೇಡ್ಕರರನ್ನು ‘ವರ್ತಮಾನ ಕಾಲದ ಮನು’ ಎನ್ನಬಹುದು” ಎನ್ನುತ್ತಾರೆ!

ಎಂ.ಅನಂತಶಯನಂ ಅಯ್ಯಂಗಾರ್ ಎನ್ನುವವರಂತೂ “ಯಾವ ವ್ಯಕ್ತಿ ನಮ್ಮನ್ನು ಟೀಕಿಸುವ ಮತ್ತು ಅನುಮಾನದಿಂದ ನೋಡುವ ಉದ್ದೇಶದಿಂದ ಸಭೆಗೆ ಬಂದರೋ, ಕಡೆಗೆ ಅವರೇ ಸಂವಿಧಾನದ ಹೊಣೆಹೊತ್ತುಕೊಂಡರು ಮತ್ತು ಅದನ್ನು ರಚಿಸಿದರು” ಎಂದರು! ಹಾಗೆ ಪಂಡಿತ್ ಠಾಕೂರ್ ದಾಸ್ ಭಾರ್ಗವ ಎಂಬುವವರು ಮಾತನಾಡುತ್ತಾ “ಡಾ.ಅಂಬೇಡ್ಕರರು ನಮ್ಮ ಹೃದಯಗಳಲ್ಲಿ ಇಂದು ಉನ್ನತ ಸ್ಥಾನ ಅಲಂಕರಿಸಿದ್ದಾರೆ” ಎನ್ನುವ ಮೂಲಕ ತಮ್ಮ ಅಭೂತಪೂರ್ವ ಪ್ರೀತಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದುವರಿದು ಮತ್ತೋರ್ವ ಸದಸ್ಯರಾದ ಟಿ.ಪ್ರಕಾಶಂ‘”ತಮ್ಮ ಈ ಕಾರ್ಯದ ಮೂಲಕ ಡಾ.ಅಂಬೇಡ್ಕರರು ತಾವು ಗ್ರೇಟ್ ಬ್ರಿಟನ್ನಿನ ರಾಜನ ಸಲಹೆಗಾರನಾಗಿ ಅಲ್ಲಿಯ ಆಸ್ಥಾನ ವೂಲ್‍ಸ್ಯಾಕ್‍ನಲ್ಲಿ ಕುಳಿತುಕೊಳ್ಳುವಷ್ಟು ಸಮರ್ಥರು” ಎಂದು ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ. ಕಡೆಯದಾಗಿ ಶ್ರೀ ಹೆಚ್.ಜೆ.ಖಾಂಡೇಕರ್ ಎಂಬುವವರ ಹೇಳಿಕೆಯನ್ನು ದಾಖಲಿಸುವುದಾದರೆ “ಮಾನ್ಯರೆ, ನಾವು ಅಂಬೇಡ್ಕರರಂತಹ ಪ್ರತಿಭಾಶಾಲಿಯಿಂದ ರೂಪಿತಗೊಂಡ ಕಾನೂನನ್ನು ಸ್ವತಂತ್ರ ಭಾರತದಲ್ಲಿ ಇಂದು ಕಾರ್ಯಾಚರಣೆಗಿಳಿಸುತ್ತಿದ್ದೇವೆ.

ಹಾಗೆ ಈ ಕಾನೂನನ್ನು ನಾನು ಮಹಾರ್ ಕಾನೂನು ಎನ್ನಲಿಚ್ಚಿಸುತ್ತೇನೆ ಯಾಕೆಂದರೆ ಡಾ.ಅಂಬೇಡ್ಕರರು ಮಹಾರ್ ಸಮುದಾಯದವರು ಮತ್ತು ಮುಂದೆ 1950 ಜನವರಿ 26ರಂದು ಈ ಕಾನೂನು ಉದ್ಘಾಟನೆಗೊಂಡಾಗ ನಾವು ಮನುವಿನ ಕಾನೂನಿನ ಬದಲು ಮಹಾರರ ಕಾನೂನನ್ನು ಹೊಂದುತ್ತೇವೆ. ಮನುವಿನ ಕಾನೂನಿನ ಅಡಿಯಲ್ಲಿ ಈ ದೇಶದಲ್ಲಿ ಸುಖ ನೆಮ್ಮದಿಯೇ ಇರಲಿಲ್ಲ, ಆದರೆ ಮಹಾರರ ಕಾನೂನು, ಖಂಡಿತ ಈ ದೇಶವನ್ನು ಸ್ವರ್ಗವನ್ನಾಗಿ ಮಾಡುತ್ತದೆ… ನನಗೆ ಭರವಸೆ ಆ ಇದೆ”.

ಖಂಡಿತ, ಸಂವಿಧಾನ ದಿನಾಚರಣೆಯ ಈ ಶುಭ ದಿನದಂದು ಡಾ.ಖಾಂಡೇಕರರ ಭರವಸೆ ಎಲ್ಲರದ್ದಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಡಾಲಿಯ ಕನಸು ಒಂದೇ ಹೀರೋ ಆಗೋದು

Published

on

ಮೈಸೂರಿನ ರಂಗಾಯಣದಲ್ಲಿ ನಾಟಕ ತಂಡಗಳಲ್ಲಿ ಗುರುತಿಸಿಕೊಂಡ ದಿನಗಳಿಂದಲೇ ಡಾಲಿ ಧನಂಜಯ್ ಅವರದ್ದು ಒಂದೇ ಕನಸು—ಸಿನಿಮಾ ಹೀರೋ ಆಗಬೇಕು!

ಕಾಲೇಜು ಯುವಕರಾಗಿದ್ದಾಗಲೂ ಮೌನ ಸ್ವಭಾವದ, ವಿಧೇಯ, ಪರಿಶ್ರಮಿ ಮತ್ತು ಗುರಿಯ ಮೇಲೆ ಸಂಪೂರ್ಣ ಗಮನ ಹೊಂದಿದ್ದವರು. ಯಾವುದೇ ಡೈವರ್ಷನ್ ಇಲ್ಲ, ಸಿನಿಮಾ ಕನಸಿನ ಕಡೆ ಮಾತ್ರ ಗಮನ!

ಇಂದು ಬಹುಭಾಷಾ ನಟನಾಗಿ ದೊಡ್ಡ ಎತ್ತರಕ್ಕೇರಿದ್ದರೂ, ತಮ್ಮ ಬೇರುಗಳನ್ನು ಅವರು ಮರೆತಿಲ್ಲ. ಇಂದಿಗೂ ತಮ್ಮ ಹಳೆಯ ಸ್ನೇಹಿತರ ಜೊತೆಗೂಡಿ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಅವರು, ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ.

ಅಂದಿನ ಅದೇ ಸರಳತೆ, ಅದೇ ನಡವಳಿಕೆ ಇಂದಿಗೂ ಇದೆ!

ಒಬ್ಬ ಕಾಲೇಜು ಯುವಕನಿಂದ ಬಹುಭಾಷಾ ತಾರೆಯವರೆಗೆ—ಎಂತಹ ಸ್ಪೂರ್ತಿದಾಯಕ ಪಯಣ! ಹ್ಯಾಪಿ ಬರ್ತ್ಡೇ ಡಾಲಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆಯಡಿ ವಿವಿಧ ಯೋಜನೆಗಳಾದ ಸಾಫ್ಟ್ ಸೀಡ್ ಕ್ಯಾಪಿಟಲ್, ಶೇ.60 ರಷ್ಟು ಸಹಾಯಧನ ಸಾಲ ಶುಲ್ಕ ಮರುಪಾವತಿ ಮತ್ತು ವಿದ್ಯುಚ್ಚಕ್ತಿ ಸಹಾಯಧನ ಯೋಜನೆಯಡಿ ಅರ್ಹ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆದು ಘಟಕಗಳನ್ನು ಸ್ಥಾಪಿಸಿರುವ ಅರ್ಹ ಉದ್ದಿಮೆದಾರರು ಹಾಗೂ ಬ್ಯಾಂಕ ಸಾಲ ಪಡೆದು ಉದ್ದಿಮೆ ಸ್ಥಾಪಿಸಲು ಇಚ್ಚಿಸಿರುವ ಉದ್ದಿಮೆದಾರರು ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಪಿ.ಬಿ ರಸ್ತೆ ದಾವಣಗೆರೆ ಇವರನ್ನು ಸಂಪರ್ಕಿಸಬಹುದೆಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!

Published

on

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

  • ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
  • ಇಂಡಿಯಾ ಗೇಟ್‌ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
  • NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
  • “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP 

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.

CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.

http://Visit : www.suddidina.com

ಇಂಡಿಯಾ ಗೇಟ್‌ನಿಂದ ಮೆರವಣಿಗೆ

ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.

ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’

ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.

“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.

“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ” 

  • CJP ಆರೋಪ

ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ

ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.

ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.

ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್‌ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

Continue Reading

Trending