Connect with us

ಕ್ರೀಡೆ

ಫೆ. 5 ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ : ಕೋವಿಡ್ ಮಾರ್ಗಸೂಚಿ ಅನುಸರಿಸಿ ಸ್ಪರ್ಧೆಗಳ ಆಯೋಜನೆ : ಮಹಾಂತೇಶ್ ಬೀಳಗಿ

Published

on

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಸಾಲಿನ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೌಕರರ ಸಂಘದ ಸಹಯೋಗದೊಂದಿಗೆ ದಾವಣಗೆರೆಯಲ್ಲಿ ಫೆ. 5 ರಿಂದ ಮೂರು ದಿನಗಳ ಕಾಲ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಅಚ್ಚುಕಟ್ಟಾಗಿ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ಆಯೋಜನೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈ ಬಾರಿ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಫೆ. 5, 6 ಮತ್ತು 7 ರಂದು ಮೂರು ದಿನಗಳ ಕಾಲ ಕೋವಿಡ್ ಮಾರ್ಗಸೂಚಿ ಅನುಸರಿಸಿ, ಅಚ್ಚುಕಟ್ಟಾಗಿ ಆಯೋಜಿಸಲು ನಿರ್ಧರಿಸಲಾಗಿದೆ.

ಕ್ರೀಡಾಕೂಟ ಆಯೋಜನೆ ಸ್ಥಳಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಬೇಕು. ಅಧಿಕಾರಿಗಳು ಹಾಗೂ ನೌಕರರ ಸಂಘದವರು ಸರ್ಕಾರದ ಶಿಷ್ಠಾಚಾರದಂತೆ ಚುನಾಯಿತ ಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳನ್ನು ಸಮಾರಂಭಕ್ಕೆ ಆಹ್ವಾನಿಸಬೇಕು.

ನೌಕರರ ಸಂಘದ ತಾಲ್ಲೂಕು ಘಟಕಗಳು ಆಯಾ ತಾಲ್ಲೂಕಿನಲ್ಲಿ ಸಭೆ ನಡೆಸಿ, ಕ್ರೀಡಾಕೂಟ ಆಯೋಜನೆ ಬಗ್ಗೆ ಮಾಹಿತಿ ದೊರೆಯುವಂತೆ ಮಾಡಿ, ಎಲ್ಲ ನೌಕರರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು. ಕ್ರೀಡಾಕೂಟದ ಯಶಸ್ವಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಅಗತ್ಯ ಸಹಕಾರ, ನೆರವು ನೀಡಲಿದೆ. ಒಟ್ಟಾರೆ ಕ್ರೀಡಾಕೂಟದಲ್ಲಿ ನೌಕರರು ಸಂತಸ, ಸಂಭ್ರಮದಿಂದ ಪಾಲ್ಗೊಳ್ಳುವಂತಾಗಬೇಕು.

ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರರಿಗೆ ವ್ಯವಸ್ಥಿತ ರೀತಿಯಲ್ಲಿ ಊಟೋಪಹಾರ, ಟೀಶರ್ಟ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ತಾವೂ ಸಹ ಷಟಲ್ ಬ್ಯಾಡ್ಮಿಂಟನ್ ಆಟಗಾರನಾಗಿದ್ದು, ಖುದ್ದು ಸ್ಪರ್ಧೆಯಲ್ಲಿ ಪಾಲ್ಗೊಂಡು ನೌಕರರಿಗೆ ಪ್ರೋತ್ಸಾಹಿಸುತ್ತೇನೆ ಎಂದು ಹೇಳಿದರು.

ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಪಾಲಾಕ್ಷಿ ಅವರು ಮಾತನಾಡಿ, ಕ್ರೀಡಾಕೂಟ ಆಯೋಜನೆಗೆ ಸರ್ಕಾರದಿಂದ 1.5 ಲಕ್ಷ ರೂ. ಹಾಗೂ ಜಿಲ್ಲಾ ಪಂಚಾಯತ್‍ನಿಂದ 3 ಲಕ್ಷ ಸೇರಿದಂತೆ 4.5 ಲಕ್ಷ ರೂ. ಅನುದಾನದ ಲಭ್ಯತೆಯಾಗಲಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಯಸುವ ನೌಕರರು ತಮ್ಮ ಹೆಸರು ಹಾಗೂ ವಿವರದೊಂದಿಗೆ ನೊಂದಣಿ ಮಾಡಿಸಲು ಜ. 28 ಕೊನೆಯ ದಿನವಾಗಿದೆ. ನಿಗದಿತ ಅವಧಿಯೊಳಗೆ ನೊಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಕೊನೆಯ ಹಂತದಲ್ಲಿ ಸ್ಪರ್ಧೆಗಳಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶವಿಲ್ಲ ಎಂದರು.

ಈ ಬಾರಿಯ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆ ಅಂಗವಾಗಿ, ನೌಕರರ ಸಮುದಾಯ ಭವನದಲ್ಲಿ ಸ್ಪರ್ಧೆಗಳ ಆಯೋಜನೆ ಬಳಿಕ ಸಂಜೆ ವೇಳೆ ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಏಪ್ರಿಲ್ 21 ರ ದಿನವನ್ನು ರಾಜ್ಯ ಸರ್ಕಾರಿ ನೌಕರರ ದಿನವನ್ನಾಗಿ ಆಚರಿಸಲು ಸರ್ಕಾರ ಆದೇಶಿಸಿದ್ದು, ಅದರಂತೆ ಅತ್ಯುತ್ತಮ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಗಣರಾಜ್ಯೋತ್ಸವ ಸಮಾರಂಭದ ಬದಲಿಗೆ ಏ. 21 ರಂದು ಜರುಗುವ ನೌಕರರ ದಿನಾಚರಣೆಯಂದು ಪ್ರದಾನ ಮಾಡುವಂತೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಪಾಲಾಕ್ಷಿ ಅವರು ಮನವಿ ಮಾಡಿದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಅವರು ಮಾತನಾಡಿ, ನೌಕರರ ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ವಯೋಮಿತಿ ಆಧಾರದಲ್ಲಿ ಜರುಗಲಿವೆ. ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಫುಟ್ಬಾಲ್, ಹಾಕಿ, ಕ್ರಿಕೆಟ್, ಬ್ಯಾಸ್ಕೇಟ್‍ಬಾಲ್ ಮತ್ತಿತರೆ ಕ್ರೀಡೆಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ, ಕುಸ್ತಿ- ಆಂಜನೇಯ ಬಡಾವಣೆಯ ಕುಸ್ತಿ ಒಳಾಂಗಣ ಕ್ರೀಡಾಂಗಣ, ಚೆಸ್, ಕೇರಂ, ಷಟಲ್ ಬ್ಯಾಡ್ಮಿಂಟನ್- ಎಸ್‍ಎಸ್ ಬಡಾವಣೆಯ ನೇತಾಜಿ ಸುಭಾಷ್‍ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಅಲ್ಲದೆ ಸಾಂಸ್ಕøತಿಕ ಸ್ಪರ್ಧೆಗಳನ್ನು ರಿಂಗ್ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗುವುದು ಎಂದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸಿದ್ದಲಿಂಗಸ್ವಾಮಿ, ಖಜಾಂಚಿ ಕಲ್ಲೇಶ್ವರಪ್ಪ, ಸಂಘಟನಾ ಕಾರ್ಯದರ್ಶಿ ಮಂಜಮ್ಮ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಜಗಳೂರು- ಎನ್.ಸಿ. ಅಜ್ಜಯ್ಯ, ಹೊನ್ನಾಳಿ-ಚಂದ್ರಶೇಖರ್, ಹರಿಹರ-ರೇವಣಸಿದ್ದಪ್ಪ, ನ್ಯಾಮತಿ-ನಾಗರಾಜ್ ಹಾಗೂ ಚನ್ನಗಿರಿ ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ ಮುಂತಾದವರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಕಲ್ಲು-ಮುಳ್ಳಿನ ದಾರಿಯಲ್ಲೂ ನಿಲ್ಲದ ಹೆಜ್ಜೆ; ತಾಯಿಯ ಛಲಕ್ಕೆ ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ

Published

on

ಬರಿಗಾಲಿನ ಓಟದಲ್ಲಿ ಗೆದ್ದ ತಾಯಿ: ಮಕ್ಕಳ ಭವಿಷ್ಯಕ್ಕಾಗಿ ನೋವನ್ನೇ ಮರೆತ ರಮಾಬಾಯಿಯ ಸ್ಫೂರ್ತಿಗಾಥೆ

ಸುದ್ದಿದಿನ,ಮುಂಬಯಿ: ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು ಕೆಲವೊಮ್ಮೆ ಮನುಷ್ಯನನ್ನು ಕುಗ್ಗಿಸುತ್ತವೆ. ಆದರೆ ತಾಯಿಯೊಬ್ಬಳಿಗೆ ಮಕ್ಕಳ ಭವಿಷ್ಯದ ಕನಸು ದೊಡ್ಡದಾಗಿದ್ದರೆ, ಆಕೆಯ ಮುಂದೆ ನೋವು, ಬಡತನ, ಅಡೆತಡೆ ಯಾವುದೂ ನಿಲ್ಲುವುದಿಲ್ಲ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನ 47 ವರ್ಷದ ರಮಾಬಾಯಿ ರಣವೀರ್ ಅವರ ಕಥೆ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಪತಿಯ ಅಕಾಲಿಕ ಅಗಲಿಕೆಯ ಬಳಿಕ ಇಬ್ಬರು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಿರುವ ರಮಾಬಾಯಿ, ಬರಿಗಾಲಿನಲ್ಲಿ ಮ್ಯಾರಥಾನ್ ಓಡಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

http://Visit : www.suddidina.com

ಕೂಲಿ ಕೆಲಸದಿಂದ ಅಡುಗೆ ಕೆಲಸದವರೆಗೆ

ಮುಂಬಯಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಬಳಿಕ ರಮಾಬಾಯಿ ಕುಟುಂಬದ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಮ್ಮ ಹೆಗಲ ಮೇಲೆ ಹೊತ್ತರು. ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಮಕ್ಕಳನ್ನು ಬೆಳೆಸಿದ ಅವರು, ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಅಂಬಾಜೋಗೈನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವೊಂದರಲ್ಲಿ ಅಡುಗೆ ಕೆಲಸಕ್ಕೂ ಸೇರಿದರು.

ದಿನವಿಡೀ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಸೇರಿದಂತೆ ದುಡಿಮೆಯ ನಡುವೆಯೂ ಅವರ ಮನಸ್ಸಿನಲ್ಲಿದ್ದದ್ದು ಒಂದೇ ಕನಸು—ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸ್ವಾವಲಂಬಿಗಳನ್ನಾಗಿ ಮಾಡುವುದು.

₹3 ಸಾವಿರಕ್ಕಾಗಿ ಆರಂಭವಾದ ಓಟ

ಮಕ್ಕಳ ವಿದ್ಯಾಭ್ಯಾಸದ ಅಗತ್ಯಕ್ಕೆ ಪುಸ್ತಕಗಳನ್ನು ಖರೀದಿಸಲು ಹಣ ಬೇಕಾಗಿತ್ತು. ಇದೇ ಸಂದರ್ಭದಲ್ಲಿ ‘ಅಮೃತ್ ದೌಡ್’ ಮ್ಯಾರಥಾನ್ ಕುರಿತು ಅವರಿಗೆ ಮಾಹಿತಿ ದೊರೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹3 ಸಾವಿರ ನೀಡಲಾಗುತ್ತದೆ ಎಂಬುದು ತಿಳಿದ ತಕ್ಷಣ ರಮಾಬಾಯಿ ಓಟದಲ್ಲಿ ಭಾಗವಹಿಸಲು ನಿರ್ಧರಿಸಿದರು.

ಯುವಕರು ಟ್ರ್ಯಾಕ್‌ಸೂಟ್ ಮತ್ತು ಶೂ ಧರಿಸಿ ಓಟಕ್ಕೆ ಸಜ್ಜಾಗಿದ್ದರೆ, ರಮಾಬಾಯಿ ಮಾತ್ರ ಸಾಮಾನ್ಯ ಸೀರೆಯಲ್ಲೇ ಸ್ಪರ್ಧೆಯ ಕಣಕ್ಕಿಳಿದರು. ಆರಂಭದಲ್ಲಿ ಕಾಲಿಗೆ ಚಪ್ಪಲಿ ಇದ್ದರೂ ಓಟದ ವೇಗ ಹೆಚ್ಚಾದಂತೆ ಅದು ಜಾರಲಾರಂಭಿಸಿತು.

ಚಪ್ಪಲಿ ಬಿಟ್ಟು ಬರಿಗಾಲಿನಲ್ಲಿ ಓಟ

ಗುರಿ ಮುಟ್ಟಬೇಕೆಂಬ ಛಲದ ಮುಂದೆ ಚಪ್ಪಲಿ ಅಡ್ಡಿಯಾಗಬಾರದು ಎಂದು ನಿರ್ಧರಿಸಿದ ರಮಾಬಾಯಿ, ಚಪ್ಪಲಿಯನ್ನು ಕೈಗೆತ್ತಿಕೊಂಡು ಬರಿಗಾಲಿನಲ್ಲೇ ಓಡತೊಡಗಿದರು. ರಸ್ತೆಯ ಕಲ್ಲು-ಮುಳ್ಳುಗಳು ಕಾಲಿಗೆ ಚುಚ್ಚಿದರೂ ಅವರು ಓಟ ನಿಲ್ಲಿಸಲಿಲ್ಲ.

ಸೀರೆಯ ಅಂಚನ್ನು ಸರಿಪಡಿಸಿಕೊಳ್ಳುತ್ತಾ, ನೋವನ್ನು ಮರೆತು ಗುರಿಯತ್ತ ಮುನ್ನುಗ್ಗಿದ ಅವರು ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲಿಗರಾಗಿ ಫಿನಿಶ್ ಲೈನ್ ತಲುಪಿದರು. ಈ ಗೆಲುವಿನ ಹಿಂದೆ ಬಹುಮಾನದ ಹಣಕ್ಕಿಂತಲೂ ದೊಡ್ಡದಾದ ಒಂದು ಕನಸು—ಮಕ್ಕಳ ಭವಿಷ್ಯ—ಇತ್ತು.

ತಾಯಿಯ ಹಾದಿಯಲ್ಲೇ ಮಗಳ ಗೆಲುವು

ಈ ಮ್ಯಾರಥಾನ್‌ನಲ್ಲಿ ರಮಾಬಾಯಿಯ ಮಗಳು ಪೂಜಾ ಕೂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ. ತಾಯಿಯ ಪರಿಶ್ರಮದಿಂದ ಪ್ರೇರಣೆ ಪಡೆದ ಪೂಜಾ, ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಯಾಗುವ ಸಂಕಲ್ಪ ಮಾಡಿದ್ದಾರೆ. ಮತ್ತೊಬ್ಬ ಮಗಳು ಬ್ಯಾಂಕಿಂಗ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಪೂಜಾಳ ಪರಿಶ್ರಮ ಮತ್ತು ರಮಾಬಾಯಿಯ ತ್ಯಾಗವನ್ನು ಗಮನಿಸಿದ ತರಬೇತಿ ಅಕಾಡೆಮಿಯ ನಿರ್ದೇಶಕರು ಪೂಜಾಳ ಶಿಕ್ಷಣ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಿದ್ದಾರೆ. ಹೀಗಾಗಿ ಒಂದು ಮ್ಯಾರಥಾನ್ ಗೆಲುವು ಕೇವಲ ₹3 ಸಾವಿರದ ಬಹುಮಾನಕ್ಕೆ ಸೀಮಿತವಾಗದೆ, ಕುಟುಂಬದ ಭವಿಷ್ಯಕ್ಕೆ ಹೊಸ ಆಶಾಕಿರಣವನ್ನೇ ಮೂಡಿಸಿದೆ.

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಹಿರಿಯ ಕ್ರಿಕೆಟ್ ಪಟು ಎನ್ಆರ್‌ಎಚ್ ರಮೇಶ್ ನಿಧನ

Published

on

ಸುದ್ದಿದಿನ,ದಾವಣಗೆರೆ: ನಗರದ ಎನ್ಆರ್‌ಎಚ್‌ ಸೈಕಲ್ ಮಾರ್ಟ್ ಮಾಲೀಕ, ದಾವಣಗೆರೆ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ನ ನಾಯಕನಾಗಿದ್ದ ಎನ್.ಆರ್‌.ಎಚ್‌.ರಮೇಶ ಇಲ್ಲಿನ ಕೆಟಿಜೆ ನಗರದ 15ನೇ ಕ್ರಾಸ್‌, 2ನೇ ಮೇನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸಂಜನೆ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಓರ್ವ ಸಹೋದರ, ಮೂವರು ಸಹೋದರಿಯರು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ದಾವಣಗೆರೆ ಗಾಂಧಿ ನಗರ ಸಮೀಪದ ವೀರಶೈವ ರುದ್ರಭೂಮಿಯಲ್ಲಿ ಮೇ.7ರಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

90ರ ದಶಕದಲ್ಲಿ ದಾವಣಗೆರೆ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಲ್ಲಿ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯ, ಪಂದ್ಯಾವಳಿಗಳಲ್ಲಿ ಭರ್ಜರಿ ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಆಟಗಾರನಾಗಿ ರಮೇಶ ಸಾಧನೆ ಮಾಡಿದ್ದರು. ಎನ್ಆರ್‌ಎಚ್‌ ರಮೇಶ ನಿಧನಕ್ಕೆ ಎಫ್‌ಸಿಸಿ ತಂಡದ ಹಿರಿಯ ಆಟಗಾರರು, ದಾವಣಗೆರೆ ಕ್ರಿಕೆಟ್ ಕ್ಲಬ್‌ ಸೇರಿದಂತೆ ವಿವಿಧ ಕ್ರಿಕೆಟ್ ಕ್ಲಬ್‌ಗಳ ಹಿರಿಯ ಆಟಗಾರರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending