Connect with us

ದಿನದ ಸುದ್ದಿ

ಜನಗಣರಾಜ್ಯೋತ್ಸವದ ಸಂದೇಶಕ್ಕೆ ಕಿವಿಗೊಡೋಣ

Published

on

  • ನಾ ದಿವಾಕರ

ಕಳೆದ 60 ದಿನಗಳಿಂದ ದೆಹಲಿಯ ಸುತ್ತಲೂ ಬೀಡುಬಿಟ್ಟಿರುವ ದೇಶದ ರೈತ ಸಮುದಾಯದ ದಿಟ್ಟ ಹೋರಾಟಕ್ಕೆ ಕೊನೆಗೂ ಆಡಳಿತ ವ್ಯವಸ್ಥೆ ಮಣಿದಿದೆ. ಗಣರಾಜ್ಯೋತ್ಸವ ದಿನದಂದು ರೈತರು ರಾಜಧಾನಿ ದೆಹಲಿಯಲ್ಲಿ ಟ್ರಾಕ್ಟರ್ ಮೆರವಣಿಗೆಯ ಮೂಲಕ ಜನಗಣರಾಜ್ಯೋತ್ಸವ ಆಚರಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಇಡೀ ದೇಶದಲ್ಲಿ ಹೋರಾಟದ ಅಲೆಗಳನ್ನು ಸೃಷ್ಟಿಸಿದೆ.

ಟ್ರಾಕ್ಟರ್ ಪೆರೇಡ್‍ಗೆ ಅನುಮತಿ ನೀಡುವುದಿಲ್ಲ ಎಂಬ ಹಠಮಾರಿ ಧೋರಣೆಯಿಂದ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸ್ ಇಲಾಖೆ ಹಿಂದೆ ಸರಿದಿದ್ದರೆ ಅದು ಔದಾರ್ಯವೇನೂ ಅಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಾಗ್ರಹಕ್ಕೆ ಎಂತಹುದೇ ಸರ್ಕಾರವಾದರೂ ಮಣಿಯಲೇಬೇಕು ಎನ್ನುವುದನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ. ರೈತರ ಟ್ರಾಕ್ಟರ್ ಪೆರೇಡ್‍ನಲ್ಲಿ ಎರಡು ಲಕ್ಷ ಟ್ರಾಕ್ಟರ್‍ಗಳ ಮೆರವಣಿಗೆಯೇ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಲಿದೆ. ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಇದೇ ರೀತಿಯ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ಸರ್ಕಾರವೂ ಸೇರಿದಂತೆ ಬಿಜೆಪಿ ಆಡಳಿತದ ಎಲ್ಲ ರಾಜ್ಯಗಳಲ್ಲಿ ಈ ಜನಗಣರಾಜ್ಯೋತ್ಸವಕ್ಕೆ ಅಡ್ಡಿ ಆತಂಕ ಉಂಟುಮಾಡುವ ಪ್ರಯತ್ನಗಳು ನಡೆದಿವೆ. ಉತ್ತರಪ್ರದೇಶದ ಪೆಟ್ರೋಲ್ ಬಂಕ್ ಗಳಲ್ಲಿ ಟ್ರಾಕ್ಟರ್ ಗಳಿಗೆ ಪೆಟ್ರೋಲ್/ಡೀಸೆಲ್ ನೀಡುವುದಿಲ್ಲ ಎಂಬ ಬೋರ್ಡ್‍ಗಳನ್ನು ನೇತುಹಾಕಲಾಗಿದೆ. ಕರ್ನಾಟಕದ ಬೆಳಗಾವಿಯಲ್ಲಿ ಬೆಂಗಳೂರಿಗೆ ಹೊರಟಿದ್ದ ರೈತರ ಟ್ರಾಕ್ಟರ್ ಗಳನ್ನು ವಶಪಡಿಸಿಕೊಳ್ಳುವ ಬೆದರಿಕೆ ಹಾಕಲಾಗಿದೆ.

ದೆಹಲಿಯ ಸುತ್ತ ನೆರೆದಿರುವ ರೈತರ ಮುಷ್ಕರವನ್ನು ಭಂಗಗೊಳಿಸಲು ಸಾಕಷ್ಟು ವಿಧ್ವಂಸಕ ಪ್ರಯತ್ನಗಳು ನಡೆದಿವೆ. ಲಕ್ಷಾಂತರ ರೈತರು ಸೇರಿರುವ ಕಡೆ ಪ್ರಕ್ಷುಬ್ಧ ವಾತಾವರಣ ಉಂಟುಮಾಡಲು, ಗಲಭೆ ಸೃಷ್ಟಿಸಲು ಸಂಚು ನಡೆಸಿದ್ದನ್ನು ರೈತರೇ ಕಂಡುಹಿಡಿದು, ಈ ಕೃತ್ಯಕ್ಕೆ ಮುಂದಾಗಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಂತಹ ಮೂರು ನಾಲ್ಕು ಘಟನೆಗಳು ಈಗಾಗಲೇ ನಡೆದಿವೆ.

ದೆಹಲಿಯಲ್ಲಿ ನೆರೆದಿರುವುದು ರೈತರೇ ಅಲ್ಲ ಎಂದಿದ್ದಾಯಿತು, ದಲ್ಲಾಳಿಗಳು , ಕಾಂಗ್ರೆಸ್ ಏಜೆಂಟರು ಎಂದು ಹೀಗಳೆದಿದ್ದಾಯಿತು. ಇದು ವಿರೋಧ ಪಕ್ಷಗಳ ಕುಮ್ಮಕ್ಕು, ಪಿತೂರಿ ಎಂದು ಆರೋಪ ಹೊರಿಸಿದ್ದಾಯಿತು. ದೆಹಲಿಯ ಸುತ್ತ ಐದು ಗಡಿಗಳಲ್ಲಿ ರಸ್ತೆ ಕಂದಕಗಳನ್ನು ತೋಡಿ ಮಾರ್ಗ ಬಂದ್ ಮಾಡಲಾಯಿತು. ಬೃಹತ್ ಗಾತ್ರದ ಸಿಮೆಂಟ್ ಬ್ಯಾರಿಕೇಡ್, ಮುಳ್ಳು ತಂತಿ, ಜೆಸಿಬಿ ಹೀಗೆ ಕೃತಕ ಗೋಡೆಗಳನ್ನು ನಿರ್ಮಿಸುವ ಮೂಲಕ ರೈತರು ರಾಜಧಾನಿಗೆ ಪ್ರವೇಶಿಸದಂತೆ ತಡೆಹಿಡಿಯಲಾಯಿತು.

ರೈತರ ನಡುವೆ ಖಲಿಸ್ತಾನಿಗಳಿದ್ದಾರೆ, ಭಯೋತ್ಪಾದಕರಿದ್ದಾರೆ, ನಗರ ನಕ್ಸಲರಿದ್ದಾರೆ, ತುಕಡೆ ತುಕಡೆ ಗ್ಯಾಂಗ್ ಇದೆ, ಇಸ್ಲಾಮಿಕ್ ಉಗ್ರರಿದ್ದಾರೆ, ಹೀಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಲೇ ದೇಶದ ಜನಸಾಮಾನ್ಯರ ದಿಕ್ಕು ತಪ್ಪಿಸಲು ಕೇಂದ್ರ ಸರ್ಕಾರ, ಗೃಹ ಸಚಿವಾಲಯ, ಆಡಳಿತಾರೂಢ ಬಿಜೆಪಿ ಮತ್ತು ಸಂಘಪರಿವಾರ ಮತ್ತು ಅವರ ಬಾಲಂಗೋಚಿ ಸಂಘಟನೆಗಳು, ಚಿಂತಕರು ಹುಯಿಲೆಬ್ಬಿಸಿದ್ದೂ ಆಯಿತು.

ಆದರೆ ಈ ಎಲ್ಲ ಆರೋಪಗಳನ್ನೂ ತಮ್ಮ ಶಾಂತಿಯುತ, ಪ್ರಜಾಸತ್ತಾತ್ಮಕ ಹೋರಾಟದ ಮೂಲಕ, ತಮ್ಮ ದಿಟ್ಟ ಛಲ, ಬದ್ಧತೆ ಮತ್ತು ಶಿಸ್ತುಬದ್ಧ ನಡವಳಿಕೆಯ ಮೂಲಕ ರೈತ ಸಮುದಾಯ ಒಮ್ಮೆಲೆ ತೊಡೆದುಹಾಕಿದೆ. ಮುಷ್ಕರವನ್ನು ಭಂಗಗೊಳಿಸಲು ನ್ಯಾಯಾಂಗವನ್ನೂ ಬಳಸಿಕೊಂಡ ಕೇಂದ್ರ ಸರ್ಕಾರ ,ನ್ಯಾಯಾಲಯದ ಮೂಲಕ ಕೃಷಿ ಮಸೂದೆಗಳ ಬಗ್ಗೆ ಚರ್ಚಿಸಲು ಏಕಪಕ್ಷೀಯ ಸಮಿತಿಯನ್ನು ರಚಿಸಲೂ ಮುಂದಾಗಿತ್ತು. ಮಹಿಳೆಯರೇಕೆ ಮುಷ್ಕರದಲ್ಲಿದ್ದಾರೆ ಎಂದು ಕೇಳುವ ಮೂಲಕ ದೇಶದ ಸರ್ವೋಚ್ಚ ನ್ಯಾಯಾಲಯ ಹೋರಾಟವನ್ನು ಭಂಗಗೊಳಿಸುವ ಮತ್ತೊಂದು ಮಾರ್ಗವನ್ನು ಅನುಸರಿಸಿತ್ತು. ಒಂದೂವರೆ ವರ್ಷದ ಕಾಲ ಮಸೂದೆಗಳನ್ನು ಅಮಾನತಿನಲ್ಲಿಡುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನೂ ರೈತ ಸಂಘಟನೆಗಳು ತಿರಸ್ಕರಿಸಿದವು.

ಭಾರತದ ರೈತರ ಪಾಲಿಗೆ ಮತ್ತು ಜನಸಾಮಾನ್ಯರ ಪಾಲಿಗೆ ಮರಣಶಾಸನವಾಗಿರುವ ಮೂರು ಕೃಷಿ ಮಸೂದೆಗಳು ನೇಣುಗಂಬದಂತೆ ನಮ್ಮೆದುರು ನಿಂತಿವೆ. “ ಇಂದು ಗಲ್ಲಿಗೇರಿಸುವ ಬದಲು ಇನ್ನು ಎರಡು ವರ್ಷದ ನಂತರ ಗಲ್ಲಿಗೇರಿಸುತ್ತೇವೆ ” (ಖ್ಯಾತ ಚಿಂತಕ ಶಿವಸುಂದರ್ ಅವರ ಮಾತುಗಳು) ಎನ್ನುವ ಕೇಂದ್ರ ಸರ್ಕಾರದ ವಿಕೃತ ಧೋರಣೆಗೆ ರೈತ ಸಂಘಟನೆಗಳು ಜಗ್ಗದೆ ಇರುವುದೇ ಜನಪರ ಹೋರಾಟಕ್ಕೆ ಸಂದ ದಿಗ್ವಿಜಯ. ಈ ಹೋರಾಟ ದೇಶದ ಶ್ರಮಜೀವಿಗಳಿಗೆ, ಕಾರ್ಮಿಕರಿಗೆ ಮತ್ತು ಶೋಷಿತ ಜನಸಮುದಾಯಗಳಿಗೆ ಹೊಸ ಶಕ್ತಿ ನೀಡುವ ಒಂದು ಜನಾಂದೋಲನವಾಗಿ ರೂಪುಗೊಂಡಿದೆ. ಜನಗಣರಾಜ್ಯೋತ್ಸವ ಮತ್ತು ಟ್ರಾಕ್ಟರ್ ಪೆರೇಡ್‍ಗೆ ದೇಶಾದ್ಯಂತ ದೊರೆಯುತ್ತಿರುವ ಜನಬೆಂಬಲವೇ ಇದಕ್ಕೆ ಸಾಕ್ಷಿಯಾಗಿದೆ.

ಇಷ್ಟಾಗಿಯೂ ಈ ಮಸೂದೆಗಳು ಜನಪರವಾಗಿವೆ, ಇದನ್ನು ವಿರೋಧಿಸುವವರು ದೇಶದ್ರೋಹಿಗಳು ಎಂದು ವಾದಿಸುವ ಒಂದು ವರ್ಗ ನಮ್ಮ ನಡುವೆ ಇರುವುದು ದುರಂತ. ಒಬ್ಬ ವ್ಯಕ್ತಿಯ ಸುತ್ತ ಪ್ರಭಾವಳಿಯನ್ನು ಸೃಷ್ಟಿಸುವುದು, ವ್ಯಕ್ತಿ ಆರಾಧನೆಯನ್ನು ಪೋಷಿಸುವುದು ಮತ್ತು ಅಂಧ ಅನುಸರಣೆ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗುತ್ತದೆ ಎಂದು ಡಾ ಬಿ ಆರ್ ಅಂಬೇಡ್ಕರ್ ಹೇಳಿದ್ದುದನ್ನು ಇಲ್ಲಿ ಸ್ಮರಿಸಬೇಕಾಗುತ್ತದೆ. ದೆಹಲಿಯ ಸುತ್ತ ನೆರೆದಿರುವ ಮುಷ್ಕರ ನಿರತರು ರೈತರೇ ಅಲ್ಲ ದಲ್ಲಾಳಿಗಳು ಎಂದು ವಾದಿಸುವ ಅಪ್ರಬುದ್ಧ ಸುಶಿಕ್ಷಿತರಿಗೆ, ಹಿತವಲಯದ ವಂದಿಮಾಗಧರಿಗೆ ಈ 26ರಂದು ನಡೆಯುವ ಪರ್ಯಾಯ ಗಣರಾಜ್ಯೋತ್ಸವ ಅಥವಾ ಜನಗಣರಾಜ್ಯೋತ್ಸವ ತಕ್ಕ ಉತ್ತರ ನೀಡಲಿದೆ.

ಇಂದು ಈ ‘ ದಲ್ಲಾಳಿಗಳಿಗೇ ’ ಸುಪ್ರೀಂಕೋರ್ಟ್ ಮನ್ನಣೆ ನೀಡಿದೆ. ಈ ‘ ದಲ್ಲಾಳಿಗಳ ’ ಆಗ್ರಹಗಳಿಗೆ ಕೇಂದ್ರ ಸರ್ಕಾರ ಮಣಿದಿದೆ. ಈ ‘ ದಲ್ಲಾಳಿಗಳ ’ ಟ್ರಾಕ್ಟರ್ ಪೆರೇಡ್‍ಗೆ ದೆಹಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಆತ್ಮನಿರ್ಭರ ಭಾರತದ ಭ್ರಮಾಲೋಕದಲ್ಲಿ ತೇಲಾಡುತ್ತಿರುವ ಹಿತವಲಯದ ಸುಶಿಕ್ಷಿತರು, ಇದೇ 26ರಂದು ತಾವು ಪರಿಭಾವಿಸಿರುವ ಖಲಿಸ್ತಾನಿಗಳು-ಭಯೋತ್ಪಾದಕರು-ನಗರ ನಕ್ಸಲರು- ಉಗ್ರರು-ತುಕಡೆ ತುಕಡೆ ಗುಂಪುಗಳು, ಭಾರತದ ತ್ರಿವರ್ಣ ಧ್ವಜವನ್ನು ಹೊತ್ತು ಲಕ್ಷ ಲಕ್ಷ ಸಂಖ್ಯೆಯಲ್ಲಿ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ದನಿ ಎತ್ತುವ ಒಂದು ಅದ್ಭುತ ಪ್ರದರ್ಶನವನ್ನು ನೋಡಲಿದ್ದಾರೆ.

ಈ ಪ್ರದರ್ಶನ ಮನರಂಜನೆಯಲ್ಲ, ದೇಶಭಕ್ತಿಯ ಉನ್ಮಾದದಲ್ಲಿ ಕುಣಿದು ಕುಪ್ಪಳಿಸುವ ಪ್ರಹಸನವಲ್ಲ, ಸೇನಾಬಲ-ಪ್ರಭುತ್ವದ ಸಾಮರ್ಥ್ಯ ಪ್ರದರ್ಶಿಸುವ ಮೆರವಣಿಗೆಯಲ್ಲ. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಗಣತಂತ್ರದಲ್ಲಿ ಸಾರ್ವಭೌಮ ಪ್ರಜೆಗಳಿಗೆ ಇರುವ ಶಕ್ತಿ ಪ್ರದರ್ಶನ. ಇದು ಅಭೂತಪೂರ್ವ, ಚಾರಿತ್ರಿಕ ಮತ್ತು ಭವಿಷ್ಯದ ದೃಷ್ಟಿಯಿಂದ ಮಹತ್ತರವಾದ ಒಂದು ಘಳಿಗೆ.

ಈ ಶಕ್ತಿ ಪ್ರದರ್ಶನದ ಹಿಂದೆ ದಮನಿಸುವ ದನಿ ಇಲ್ಲ, ಕೂಡಿ ಬಾಳುವ ದನಿ ಇದೆ. ವಿಧ್ವಂಸಕ ಛಾಯೆ ಇಲ್ಲ ಸೌಹಾರ್ದತೆಯ ಧ್ವನಿ ಇದೆ. ಗುಂಡಿಟ್ಟು ಕೊಲ್ಲುವ ಮನಸುಗಳಿಲ್ಲ, ಪರಸ್ಪರ ಅಪ್ಪಿಕೊಂಡು ಬದುಕುವ ಪ್ರೀತಿ ಇದೆ. ಅನ್ಯರ ಚಿಂತನೆ ಇಲ್ಲ ಐಕ್ಯತೆಯ ಭಾವ ಇದೆ. ನಾವು-ಅವರು ಎನ್ನುವ ಭೇದ ಇಲ್ಲ. ನಾವು ಎನ್ನುವ ಉದಾತ್ತ ಭಾವನೆ ಮಾತ್ರ ಇದೆ. ಇದೇ ನಿಜವಾದ ಗಣತಂತ್ರ, ನೈಜ ಪ್ರಜಾತಂತ್ರ.

26ರಂದು ನಾವು ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡ ದಿನವನ್ನು ಆಚರಿಸುತ್ತಿದ್ದೇವೆ.. ಈ ಸಂವಿಧಾನ ನಮ್ಮನ್ನು, ಅಂದರೆ ಈ ದೇಶದ ಕಟ್ಟಕಡೆಯ ಮನುಷ್ಯನನ್ನೂ ಒಳಗೊಂಡಂತಹ ಪ್ರಜೆಗಳನ್ನು, ಸಾರ್ವಭೌಮ ಪ್ರಜೆಗಳು ಎಂದೇ ಪರಿಗಣಿಸುತ್ತದೆ. ಈ ಸಾರ್ವಭೌಮತ್ವವೇ ಪ್ರಜಾತಂತ್ರದ ಅಂತಃಸತ್ವ ಎನ್ನುವುದನ್ನು ಆಳುವ ವರ್ಗಗಳು, ಜನಪ್ರತಿನಿಧಿಗಳು, ಆಳುವವರ ಭಟ್ಟಂಗಿಗಳು, ವಂದಿಮಾಗಧರು ಮತ್ತು ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡಿರುವ ಮಾಧ್ಯಮಗಳು, ಸುದ್ದಿಮನೆಗಳು ಅರ್ಥಮಾಡಿಕೊಳ್ಳಬೇಕಿದೆ. ತಮ್ಮ ಜೀವನೋಪಾಯದ ಹಕ್ಕುಗಳಿಗಾಗಿ, ಬದುಕುವ ಹಕ್ಕುಗಳಿಗಾಗಿ ಹೋರಾಡುವ ಜನರಲ್ಲಿ ವಿಧ್ವಂಸಕರನ್ನು ಕಾಣುವ ವಿಕೃತ ಮನೋಭಾವದಿಂದ ಈ ವರ್ಗ ಹೊರಬರಬೇಕಿದೆ. ಇಂದು ರೈತರು, ನಾಳೆ ಕಾರ್ಮಿಕರು ಮತ್ತೊಂದು ದಿನ ಸಮಸ್ತ ಶೋಷಿತರು.

ಶೋಷಕ ವ್ಯವಸ್ಥೆಯಲ್ಲಿ ಶೋಷಣೆಯ ಬಿಂದುಗಳು ತೊಟ್ಟಿಕ್ಕುತ್ತಲೇ ಕೆಳಹಂತವನ್ನು ನಿಧಾನವಾಗಿ ತಲುಪುತ್ತವೆ. ನೆಲಮಟ್ಟದಿಂದ ಆರಂಭವಾಗುವ ಶೋಷಣೆಯ ಹೆಜ್ಜೆಗಳು ಪಾತಾಳ ತಲುಪುವವರೆಗೂ ಜೀವಂತವಾಗಿರುತ್ತವೆ. ನೆಲದ ಮೇಲಿರುವವರು ಇದರ ಬಿಸಿ ತಮಗೆ ತಟ್ಟುವುದಿಲ್ಲ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಏಕೆಂದರೆ ಶೋಷಣೆಗೆ ಹಲವು ಮುಖಗಳಿವೆ, ಹಲವು ಆಯಾಮಗಳೂ ಇವೆ. ಶೋಷಕರಿಗೆ ವಿಭಿನ್ನ ಮುಖವಾಡಗಳೂ ಇರುತ್ತವೆ. ಶೋಷಣೆಗೊಳಗಾಗುವವರಿಗೆ ಇರುವುದು ಒಂದೇ ಮುಖ. ಅದು ಶೋಷಿತರದ್ದು. ರೈತ ಚಳುವಳಿ ಇದನ್ನು ಸ್ಪಷ್ಟಪಡಿಸಿದೆ. ಟ್ರಾಕ್ಟರ್ ಪೆರೇಡ್ ಇದನ್ನು ಸಾಂಕೇತಿಕವಾಗಿ ಧೃಡೀಕರಿಸುತ್ತದೆ.

26ರಂದು ನಡೆಯಲಿರುವ ಜನಗಣರಾಜ್ಯೋತ್ಸವ ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಒಂದು ಹೊಸ ಆಯಾಮವನ್ನು ನೀಡುವ ಜನಾಂದೋಲನವಾಗಿ ರೂಪುಗೊಳ್ಳಲಿದೆ. ಈ ಸದಾಶಯದೊಂದಿಗೆ ಮುನ್ನಡೆಯೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆಯಡಿ ವಿವಿಧ ಯೋಜನೆಗಳಾದ ಸಾಫ್ಟ್ ಸೀಡ್ ಕ್ಯಾಪಿಟಲ್, ಶೇ.60 ರಷ್ಟು ಸಹಾಯಧನ ಸಾಲ ಶುಲ್ಕ ಮರುಪಾವತಿ ಮತ್ತು ವಿದ್ಯುಚ್ಚಕ್ತಿ ಸಹಾಯಧನ ಯೋಜನೆಯಡಿ ಅರ್ಹ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆದು ಘಟಕಗಳನ್ನು ಸ್ಥಾಪಿಸಿರುವ ಅರ್ಹ ಉದ್ದಿಮೆದಾರರು ಹಾಗೂ ಬ್ಯಾಂಕ ಸಾಲ ಪಡೆದು ಉದ್ದಿಮೆ ಸ್ಥಾಪಿಸಲು ಇಚ್ಚಿಸಿರುವ ಉದ್ದಿಮೆದಾರರು ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಪಿ.ಬಿ ರಸ್ತೆ ದಾವಣಗೆರೆ ಇವರನ್ನು ಸಂಪರ್ಕಿಸಬಹುದೆಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!

Published

on

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

  • ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
  • ಇಂಡಿಯಾ ಗೇಟ್‌ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
  • NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
  • “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP 

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.

CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.

http://Visit : www.suddidina.com

ಇಂಡಿಯಾ ಗೇಟ್‌ನಿಂದ ಮೆರವಣಿಗೆ

ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.

ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’

ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.

“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.

“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ” 

  • CJP ಆರೋಪ

ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ

ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.

ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.

ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್‌ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

Continue Reading

ದಿನದ ಸುದ್ದಿ

KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ

Published

on

KPSC ಹಗರಣಕ್ಕೆ ಬಿಗ್ ಟ್ವಿಸ್ಟ್! 329 ಅಭ್ಯರ್ಥಿಗಳಿಗೆ CID ನೋಟಿಸ್; IAS ಅಧಿಕಾರಿ ವಿರುದ್ಧ ₹1.1 ಕೋಟಿ ಆರೋಪ
KPSC ಹಗರಣಕ್ಕೆ ಬಿಗ್ ಟ್ವಿಸ್ಟ್! 329 ಅಭ್ಯರ್ಥಿಗಳಿಗೆ CID ನೋಟಿಸ್; IAS ಅಧಿಕಾರಿ ವಿರುದ್ಧ ₹1.1 ಕೋಟಿ ಆರೋಪ

KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ

  • 329 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ವಿಚಾರಣಾ ನೋಟಿಸ್

  • 658 OMR ಕಾರ್ಬನ್ ಶೀಟ್‌ಗಳು FSLಗೆ

  • IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ED ಗಂಭೀರ ಆರೋಪ

  • ₹70–80 ಲಕ್ಷ ಲಂಚದ ಆರೋಪವೂ ತನಿಖೆಯಲ್ಲಿದೆ

  • ಪ್ರಶ್ನೆಪತ್ರ ಸಿದ್ಧತೆ, ಮುದ್ರಣದ CCTV ದೃಶ್ಯಗಳ ಬಗ್ಗೆಯೂ ಅನುಮಾನ 

ಸುದ್ದಿದಿನ,ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ (ED) ರಾಜ್ಯದ ವಿವಿಧೆಡೆ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಅದರ ಬೆನ್ನಲ್ಲೇ ಅಪರಾಧ ತನಿಖಾ ಇಲಾಖೆ (CID) ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

http://Visit : www.suddidina.com

329 ಅಭ್ಯರ್ಥಿಗಳಿಗೆ ನೋಟಿಸ್ ಏಕೆ?

ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಈಗಾಗಲೇ 658 OMR ಕಾರ್ಬನ್ ಶೀಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಮೂಲ OMR ಉತ್ತರ ಪತ್ರಿಕೆಗಳೊಂದಿಗೆ ಹೋಲಿಕೆ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಅಭ್ಯರ್ಥಿಗಳು ಗುರುತಿಸಿದ್ದ ಉತ್ತರಗಳ ಕಾರ್ಬನ್ ಪ್ರತಿಯಲ್ಲಿ ಮತ್ತು ಮೂಲ OMRನಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಪರಿಶೀಲಿಸುವುದು ತನಿಖೆಯ ಪ್ರಮುಖ ಭಾಗವಾಗಿದೆ.

ಇದೀಗ 329 ಅಭ್ಯರ್ಥಿಗಳನ್ನೂ ವಿಚಾರಣೆಗೆ ಒಳಪಡಿಸುವ CID ಕ್ರಮ ಪ್ರಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ವಿಚಾರಣೆಯ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ, ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಥವಾ ಉತ್ತರಗಳ ಮಾಹಿತಿ ಮುಂಚಿತವಾಗಿ ಸಿಕ್ಕಿತೇ, OMR ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ನಡೆದಿದೆಯೇ ಎಂಬುದರ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

IAS ಅಧಿಕಾರಿಯತ್ತ ತನಿಖೆಯ ಚಿತ್ತ

ಈ ಪ್ರಕರಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಅವರು ಫೆಬ್ರವರಿ 2024ರಿಂದ ಮಾರ್ಚ್ 2026ರವರೆಗೆ KPSCಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ MSME ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬೆಂಗಳೂರಿನ ನಿವಾಸ ಸೇರಿದಂತೆ ಉತ್ತರ ಪ್ರದೇಶದ ಬರೇಲಿಯಲ್ಲಿರುವ ನಿವಾಸದ ಮೇಲೂ ED ಶೋಧ ನಡೆಸಿದೆ.

ED ಆರೋಪದ ಪ್ರಕಾರ, ಗಂಗ್ವಾರ್ ಅವರು ತಮ್ಮ ಇಬ್ಬರು ಪುತ್ರರಿಗೆ KPSC ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ದೊರಕಿಸಿಕೊಡಲು ವ್ಯಕ್ತಿಯೊಬ್ಬರಿಂದ ಸುಮಾರು ₹1.1 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಆರೋಪ ಇನ್ನೂ ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾಗಿಲ್ಲ.

ಪ್ರಶ್ನೆಪತ್ರಿಕೆ ಸಿದ್ಧತೆಯಲ್ಲೂ ಅನುಮಾನ

ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಮುದ್ರಿಸುವ ಪ್ರಕ್ರಿಯೆಗೆ ಸಂಬಂಧಿಸಿದ CCTV ದೃಶ್ಯಾವಳಿಗಳ ಅನುಪಸ್ಥಿತಿಯನ್ನೂ ED ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕ್ರಿಯೆಯಲ್ಲಿ CCTV ದಾಖಲೆಗಳು ಪ್ರಮುಖ ಭದ್ರತಾ ಕ್ರಮವಾಗಿರುವುದರಿಂದ, ಅವುಗಳ ಲಭ್ಯತೆ ಮತ್ತು ನಿರ್ವಹಣೆಯೂ ತನಿಖೆಯ ಪ್ರಮುಖ ಅಂಶವಾಗಿದೆ.

ಇದರ ಜೊತೆಗೆ, ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹70–80 ಲಕ್ಷದವರೆಗೆ ಲಂಚ ಕೇಳಲಾಗಿದೆ ಎಂಬ ಆರೋಪಗಳೂ ತನಿಖೆಯಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆ, OMR ತಿದ್ದುಪಡಿ ಮತ್ತು ನೇಮಕಾತಿ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.

KPSCಯಂತಹ ನೇಮಕಾತಿ ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವ ಆರೋಪಗಳಾಗಿರುವುದರಿಂದ, CID ಮತ್ತು ED ತನಿಖೆಯ ಮುಂದಿನ ಹಂತಗಳು ಮಹತ್ವ ಪಡೆದುಕೊಂಡಿವೆ. 329 ಅಭ್ಯರ್ಥಿಗಳ ವಿಚಾರಣೆ, OMR ಕಾರ್ಬನ್ ಶೀಟ್‌ಗಳ FSL ವರದಿ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆಯ ಬಳಿಕ ಪ್ರಕರಣದ ನಿಜವಾದ ಚಿತ್ರಣ ಇನ್ನಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.

ಮೇಲಿನ ಹಣ, ಅಕ್ರಮ ಮತ್ತು ಅಧಿಕಾರಿಯ ವಿರುದ್ಧದ ಆರೋಪಗಳು ತನಿಖಾ ಸಂಸ್ಥೆಗಳು ಮುಂದಿಟ್ಟಿರುವ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಆರೋಪಗಳೆಂದೇ ಪರಿಗಣಿಸಬೇಕೆಂದು ಕೋರ್ಟ್ ತಿಳಿಸಿದೆ.

 

Continue Reading

Trending