ದಿನದ ಸುದ್ದಿ
ಹೇಡಿಯೊಬ್ಬ ಧೈರ್ಯಶಾಲಿಯಂತೆ ಕಾಣುವುದು ಅವನ ಕೈಯಲ್ಲಿ ಅಧಿಕಾರ ಇದ್ದಾಗ ಮಾತ್ರ : ಮಹುವಾ ಮೊಯಿತ್ರಾ
- ದಿನೇಶ್ ಕುಮಾರ್ ಎಸ್.ಸಿ
ಮಹುವಾ ಮೊಯಿತ್ರಾ ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ್ದು ಕೇವಲ 21 ನಿಮಿಷಗಳು ಮಾತ್ರ. ಅದರಲ್ಲಿ ಕೆಲವು ನಿಮಿಷಗಳು ಗದ್ದಲದಲ್ಲಿ ಕಳೆದುಹೋದವು. ಆದರೆ ಮಹುವಾ ತನಗೆ ಸಿಕ್ಕ ಪ್ರತಿ ಸೆಕೆಂಡನ್ನೂ ಸಮರ್ಪಕವಾಗಿ ಬಳಸಿಕೊಂಡರು, ಉಸಿರಾಡಲೂ ಅವಕಾಶವಿಲ್ಲದಂತೆ ಸರಸರನೆ ಮಾತನಾಡುತ್ತ ಹೋದರು.
ಅದು ಏಳು ವರ್ಷಗಳ ಮೋದಿ ಸರ್ಕಾರದ ಅನಧಿಕೃತ ಪೋಸ್ಟ್ ಮಾರ್ಟಂ. ಇಂಗ್ಲಿಷ್ ಸಲೀಸಾಗಿ ಅರ್ಥವಾಗದ ಕೆಲವು ಗೆಳೆಯರು, ಮಹುವಾ ಅವರ ಭಾಷಣದ ಮುಖ್ಯ ಅಂಶಗಳನ್ನು ಕನ್ನಡದಲ್ಲೂ ಹೇಳಿ ಅಂತ ಕೋರಿದರು. ಅವರಿಗಾಗಿ ಈ ಟಿಪ್ಪಣಿ.
ಮಹುವಾ ಅವರ ಈ ಐತಿಹಾಸಿಕ ಭಾಷಣಕ್ಕೊಂದು ತಲೆಬರೆಹ ಕೊಡಿ ಎಂದರೆ ನಾನು ಹೇಳುವುದು “ಧೈರ್ಯ ಮತ್ತು ಹೇಡಿತನ” ಎಂಬ ವಾಕ್ಯವನ್ನೇ. ಮಹುವಾ ಈ ಎರಡು ಪದಗಳನ್ನು ಇಟ್ಟುಕೊಂಡೇ ಒಂದು ಪ್ರತಿರೋಧ ಕಾವ್ಯವನ್ನು ಕಟ್ಟಿದರು. ಅವರು ಹೇಡಿಗಳನ್ನು ಬಹಳ ಚೆನ್ನಾಗಿ ವರ್ಣಿಸಿದರು. ಧೀರರಿಗೂ ಹೇಡಿಗಳಿಗೂ ಮೂಲಭೂತವಾದ ವ್ಯತ್ಯಾಸವಿದೆ. ಹೇಡಿಯೊಬ್ಬ ಧೈರ್ಯಶಾಲಿಯಂತೆ ಕಾಣುವುದು ಅವನ ಕೈಯಲ್ಲಿ ಅಧಿಕಾರ ಇದ್ದಾಗ ಮಾತ್ರ.
ನಾವು ನಿಜವಾದ ಧೈರ್ಯವಂತರು, ಬರಿಗೈಯಲ್ಲಿ ಇದ್ದರೂ ಹೋರಾಡೋಣ ಎಂದರು ಮಹುವಾ. ದ್ವೇಷ ಮತ್ತು ಧರ್ಮಾಂಧತೆಯನ್ನು ತಲೆಗೇರಿಸಿಕೊಂಡ ಪ್ರಭುತ್ವ ಹೇಗೆ ದೇಶದ ಅಸ್ತಿತ್ವವನ್ನು ಅಲುಗಾಡಿಸುತ್ತ ಬರುತ್ತಿದೆ ಎಂಬುದನ್ನು ಹೇಳುತ್ತ ಹೋದರು. ಅವರು ಕೇವಲ ಸರ್ಕಾರವನ್ನು ದೂಷಿಸಲಿಲ್ಲ, ಇವತ್ತಿನ ಸ್ಥಿತಿಗೆ ನ್ಯಾಯಾಂಗ ಮತ್ತು ಮೀಡಿಯಾ ಕೂಡ ಹೊಣೆ ಹೊರಬೇಕು ಎಂದರು.
ಸರ್ಕಾರ ಅಧಿಕಾರಬಲದ ಹಿಂದೆ ಅಡಗಿಕೊಂಡು ದೇಶವನ್ನು ‘ಪೊಲೀಸ್ ರಾಜ್ಯ’ವನ್ನಾಗಿ ಮಾಡಿದೆ. ಟೀಕಿಸುವ ಧ್ವನಿಗಳ ಮೇಲೆ ರಾಜದ್ರೋಹದ ಕೇಸುಗಳನ್ನು ಹೂಡುತ್ತಿದೆ. ಇದನ್ನು ನೀವು ಧೈರ್ಯ ಎಂದು ಭಾವಿಸಬೇಡಿ. ಹೇಡಿಗಳಷ್ಟೆ ಇದನ್ನು ಮಾಡಬಲ್ಲರು ಎನ್ನುತ್ತಲೇ ಸರ್ಕಾರದ ಜತೆಗಿರುವ ಮೀಡಿಯಾ ಹೌಸ್ ಒಂದರ ಮುಖ್ಯಸ್ಥನ ವಾಟ್ಸಾಪ್ ಚಾಟ್ ಉಲ್ಲೇಖಿಸಿ, ಮೀಡಿಯಾ ಹೇಗೆ ಪಾತಾಳ ತಲುಪಿದೆಎನ್ನುವುದನ್ನು ಸೂಚ್ಯವಾಗಿ ಹೇಳಿದರು.
ಮಹುವಾ ಭಾಷಣದಲ್ಲಿ ಎಷ್ಟೊಂದು ವಿಷಯಗಳಿದ್ದವು. ಒಂದರ ಹಿಂದೊಂದು ಬಾಣಗಳು ಹೊರಡುತ್ತಿದ್ದವು. ಟ್ರಜರಿ ಬೆಂಚ್ ನಲ್ಲಿ ಕುಳಿತವರ ಮುಖಗಳು ಸೀದುಹೋಗತೊಡಗಿದವು.
ನೆರೆಯ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ಅಪಾರ ಕಾಳಜಿ ಇಟ್ಟುಕೊಂಡವರಂತೆ ಸಿಎಎ ಕಾಯ್ದೆಯನ್ನು ಅಷ್ಟು ಆತುರವಾಗಿ ಜಾರಿಗೆ ತಂದಿರಲ್ಲ. ಕಾಯ್ದೆಯ ನಿಯಮಗಳನ್ನು ರಚಿಸಲು ಇನ್ನೂ ಈ ಸರ್ಕಾರಕ್ಕೆ ಯಾಕೆ ಸಾಧ್ಯವಾಗಿಲ್ಲ? ಯಾಕೆ ಒಂದಾದ ಮೇಲೊಂದರಂತೆ ಡೆಡ್ ಲೈನ್ ಗಳನ್ನು ನೀಡಲಾಗುತ್ತಿದೆ ಎಂಬ ಪ್ರಶ್ನೆ ಎಸೆದರು.
ನೀವು ನಾಲ್ಕೇ ಗಂಟೆಗಳ ಅವಕಾಶ ನೀಡಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದಿರಿ. ಲಕ್ಷಾಂತರ ಜನರು ನೂರಾರು ಕಿ.ಮೀ. ನಡೆದುಕೊಂಡು ಹೋಗುವಂತೆ ಮಾಡಿದಿರಿ. ಎಷ್ಟೋ ಪ್ರಾಣಗಳು ಬಲಿಯಾದವು. ಇದೇ ನೀವು ಪ್ರದರ್ಶಿಸಿದ ಧೈರ್ಯ ಎಂದು ಮಹುವಾ ಚುಚ್ಚಿದರು.
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಬಗ್ಗೆ ಕಾಳಜಿ ವಹಿಸಲು ನಿಮ್ಮ ಒಂದೇ ಒಂದು ಸಚಿವಾಲಯವನ್ನು ದೆಹಲಿ ಗಡಿಗೆ ಕಳುಹಿಸಲಿಲ್ಲ. ಆದರೆ ಹದಿನೆಂಟು ವರ್ಷ ವಯಸ್ಸಿನ ಪರಿಸರ ಕಾರ್ಯಕರ್ತೆ, ಒಬ್ಬ ಪಾಪ್ ಗಾಯಕಿ ಟ್ವೀಟ್ ಮಾಡಿದ ಕೂಡಲೇ ವಿದೇಶಾಂಗ ಸಚಿವಾಲಯವನ್ನೇ ಕಣಕ್ಕೆ ಇಳಿಸಿದಿರಿ. ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ವಿಷಯದಲ್ಲಿ ನೈತಿಕವಾಗಿ ನಡೆದುಕೊಳ್ಳಬೇಕಾಗಿದ್ದ ನೀವು ಆಯ್ದುಕೊಂಡಿದ್ದು ಕ್ರೌರ್ಯದ ಮಾರ್ಗವನ್ನು. ಇದು ನಿಮ್ಮ ಧೈರ್ಯಶಾಲಿತನವೇ? ಅಲ್ಲ, ಇದು ಹೇಡಿತನ.
ದೇಶದ ಅತ್ಯುನ್ನತ ನ್ಯಾಯಾಲಯದ ಸರ್ವೋಚ್ಛ ನ್ಯಾಯಮೂರ್ತಿಯ ಮೇಲೆ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಯಿತು. ಶತ ತನ್ನ ಮೇಲಿನ ಆರೋಪ ಪ್ರಕರಣವನ್ನು ತಾನೇ ಕ್ಲಿಯರ್ ಮಾಡಿಕೊಂಡು, ನಿವೃತ್ತಿಯಾದ ಮೂರೇ ತಿಂಗಳಲ್ಲಿ ರಾಜ್ಯಸಭೆಯ ಸದಸ್ಯನೂ ಆಗಿಬಿಟ್ಟ ಎಂದು ಮಹುವಾ ಹೇಳಿದ ಕೂಡಲೇ ಸದನದಲ್ಲಿ ಬಾಂಬ್ ಬಿದ್ದ ಹಾಗಾಯಿತು. ಇದನ್ನು ಹೇಳುವ ಮೊದಲು, ನಾನು ಈಗ ಏನನ್ನು ಪ್ರಸ್ತಾಪಿಸಲಿದ್ದೇನೋ ಅದನ್ನು ಹೇಳಿಯೇ ತೀರುತ್ತೇನೆ. ಯಾರೂ ಅಡ್ಡಿ ಮಾಡಬೇಡಿ, ಇದನ್ನು ದಾಖಲೆಗಳಿಂದಲೂ ತೆಗೆಯಕೂಡದು ಎಂದು ತಾಕೀತು ಮಾಡಿದ್ದರು ಮಹುವಾ.
ಬಿಜೆಪಿ ಮಂತ್ರಿಗಳು ಎಷ್ಟೇ ಗದ್ದಲ, ಅಡೆತಡೆ ಮಾಡಿದರೂ ಮಹುವಾ ಹೇಳಬೇಕಾಗಿದ್ದನ್ನು ಹೇಳಿಯೇ ಬಿಟ್ಟರು. ನ್ಯಾಯಾಂಗ ಇವತ್ತು ಪವಿತ್ರವಾಗಿ ಉಳಿದಿಲ್ಲ. ಅದು ತನ್ನ ಘನತೆ ಕಳೆದುಕೊಂಡಿದೆ. ಅದು ಈಗೀಗ ಯಕಶ್ಚಿತ್ ಕಾಮಿಡಿಯನ್ ಗಳ ಹಾಸ್ಯವನ್ನೂ ಸಹಿಸಿಕೊಳ್ಳುತ್ತಿಲ್ಲ. ಈ ನೆಲದ ಅತ್ಯಂತ ಮಹತ್ವದ ಸಾಮಾಜಿಕ ಹೋರಾಟಗಾರರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ನಡೆದುನಡೆದೇ ಸತ್ತು ಹೋದಾಗ ನ್ಯಾಯಾಂಗ ನೋಡಿಕೊಂಡು ಸುಮ್ಮನಿತ್ತು ಎಂದು ಇವತ್ತಿನ ಸನ್ನಿವೇಶಕ್ಕೆ ನ್ಯಾಯಾಂಗದ ಕೊಡುಗೆಗಳನ್ನು ಪಟ್ಟಿ ಮಾಡಿದರು.
ಸರ್ಕಾರ ಭಿನ್ನಧ್ವನಿಗಳನ್ನು ಅಡಗಿಸುವ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿದೆ. ಇವರು ಎಮರ್ಜೆನ್ಸಿಯ ಬಗ್ಗೆ ಮಾತಾಡುವವರು.ಆದರೆ ದೇಶದಲ್ಲೀಗ ಅಘೋಷಿತ ತುರ್ತುಪರಿಸ್ಥಿತಿ ಇದೆ. ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತುವ ಎಲ್ಲರನ್ನೂ ಬಗ್ಗು ಬಡಿಯುತ್ತದೆ. ಅದು ವಿದ್ಯಾರ್ಥಿಗಳು, ರೈತರಿಂದ ಹಿಡಿದು ಶಾಹೀನ್ ಬಾಗ್ ನ ದಾದಿಯವರೆಗೆ ಎಲ್ಲರೂ ಈ ಸರ್ಕಾರದಿಂದ ಶಿಕಾರಿಯಾದವರೇ ಆಗಿದ್ದಾರೆ. ನಿಮ್ಮನ್ನು ಧೈರ್ಯವಂತರೆಂದು ಹೇಗೆ ಕರೆಯುವುದು? ನೀವು ಅಕ್ಷರಶಃ ಹೇಡಿಗಳು!… ಹೀಗೆ ಏನನ್ನೇ ಮಾತಾಡಿದರೂ ಧೈರ್ಯ ಮತ್ತು ಹೇಡಿತನದ ನಡುವಿನ ಅಂತರ ಹೇಳಲು ಬಳಸಿಕೊಂಡರು.
ಮಹುವಾ ಪಶ್ಚಿಮ ಬಂಗಾಳದ ಸಂಸದೆ. ತಾಯ್ನೆಲದ ಇಬ್ಬರು ಮಹಾನ್ ವ್ಯಕ್ತಿಗಳನ್ನು ಅವರು ಉಲ್ಲೇಖಿಸಿದರು. ರವೀಂದ್ರನಾಥ ಠಾಗೋರ್ ಅವರ ಕಲ್ಪನೆಯ ಭಾರತವನ್ನು ಅರ್ಥ ಮಾಡಿಕೊಳ್ಳಲು ಜನಗಣಮನದ ಪೂರ್ಣ ಪಾಠ ಓದಿಕೊಳ್ಳಿ. ಭಾರತದ ಬಹುತ್ವ ನಿಮಗೆ ಅರ್ಥವಾಗಬಹುದು ಎಂದು ಹೇಳುತ್ತಲೇ, ನಾವು ಈಗ ಹಾಡುವ ಜನಗಣಮನದಲ್ಲಿ ಇಲ್ಲದ ಮೂಲ ಗೀತೆಯ ಚರಣವೊಂದನ್ನು ಹೇಳಿದರು.
ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯಲ್ಲಿ ತನ್ನ ಸಂಕುಚಿತ ನೆರೇಟಿವ್ ಗಳನ್ನು ಹೇರಲು ಯತ್ನಿಸಿತು. ನೇತಾಜಿ ಎಲ್ಲರೂ ಒಪ್ಪುವ ‘ಜೈ ಹಿಂದ್’ ಘೋಷಣೆಯನ್ನು ನೀಡಿದರು. ನೀವು ಒಂದು ಧರ್ಮಕ್ಕೆ ಮಾತ್ರ ಅನ್ವಯಿಸುವ ಸಂಕುಚಿತ ಘೋಷಣೆಯನ್ನು ವಿರೋಧಿಗಳನ್ನು ಹಣಿಯಲು ಬಳಸುತ್ತಿದ್ದೀರಿ. ಈ ಘೋಷಣೆ ಅಲ್ಪಸಂಖ್ಯಾತರಿಗೆ ತಾವು ಯಾರಿಂದ ಆಳಲ್ಪಡುತ್ತಿದ್ದೇವೆ ಎಂದು ಪದೇಪದೇ ನೆನಪಿಸುವ ಕುಟಿಲ ಉದ್ದೇಶದಿಂದ ಕೂಡಿದೆ. ನೇತಾಜಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ‘ಚಲೋ ದಿಲ್ಲಿ’ ಎಂಬ ಕರೆ ನೀಡಿದ್ದರು. ನೇತಾಜಿಯ ಹಾಗೆಯೇ ನಿಮ್ಮೊಂದಿಗೆ ಮಾತಾಡಲು, ನಿಮ್ಮ ಕಾಯ್ದೆಗಳನ್ನು ಧಿಕ್ಕರಿಸಲು ಬರುತ್ತಿದ್ದ ರೈತರನ್ನು ದಿಲ್ಲಿಯ ಗಡಿಗಳಲ್ಲೇ ತಡೆದುಬಿಟ್ಟಿರಿ.
ನೇತಾಜಿಯನ್ನು ಹೈಜಾಕ್ ಮಾಡಿಕೊಳ್ಳುವ ಬಿಜೆಪಿ ಯತ್ನಗಳ ಕುರಿತು ಮಮತಾ ಬ್ಯಾನರ್ಜಿಯವರು ಮಾತಾಡಿದ್ದು ಕೇಳಿದ್ದೆವು. ಮಹುವಾ ಅದನ್ನು ಇಲ್ಲಿ ಮುಂದುವರೆಸಿದರು.
ಮಹುವಾ ಭಾಷಣ ಅತ್ಯಂತ inclusive ಆಗಿತ್ತು. ಅವರು ಕೇವಲ ಪಶ್ಚಿಮ ಬಂಗಾಳದ ಕುರಿತು ಮಾತನಾಡಲಿಲ್ಲ. ಹರಿಯಾಣದ ಉದಾಹರಣೆ ತೆಗೆದುಕೊಂಡರು. ವಾಯುಸೇನೆಯ ಶೇ.10ರಷ್ಟು, ನೌಕಾದಳದ ಶೇ.11 ಸೈನಿಕರು ಹರಿಯಾಣ್ವಿಗಳು. ನೀವು ಅವರನ್ನು ಭಯೋತ್ಪಾದಕರು, ದೇಶದ್ರೋಹಿಗಳು ಎಂದು ಕರೆಯುತ್ತೀರಾ ಎಂದು ಕಿಡಿಕಿಡಿಯಾದರು.
ಹೆಸರುಗಳನ್ನು ಹೇಳದಿದ್ದರೂ ಅವರ ಭಾಷಣ ಕೇಳುವಾಗ ನಿಮಗೆ ರೋಹಿತ್ ವೇಮುಲಾರಿಂದ ಹಿಡಿದು ಕನ್ಹಯ್ಯ, ಮುನಾವರ್, ಸುಧಾ ಭಾರದ್ವಾಜ್, ಉಮರ್ ಖಾಲಿದ್ ವರವರರಾವ್, ಶಶಿ ತರೂರ್, ರಾಜದೀಪ್ ಸರದೇಸಾಯಿ, ಆನಂದ್ ತೇಲ್ತುಂಬೆವರೆಗೆ ಪ್ರಭುತ್ವದ ಕ್ರೌರ್ಯಕ್ಕೆ ಬಲಿಯಾದವರ, ಕೇಸು ಎದುರಿಸುತ್ತಿರುವವರ, ಜೈಲು ಸೇರಿರುವವರ ಮುಖಗಳೆಲ್ಲ ಕಣ್ಣಮುಂದೆ ಹಾದು ಹೋದಂತಾಗುತ್ತದೆ. ಕ್ರೂರ UAPA ಕಾಯ್ದೆ ಮತ್ತು ಬ್ರಿಟಿಷರ ಕಾಲದ ರಾಜದ್ರೋಹದ ಸೆಕ್ಷನ್ ಗಳನ್ನು ಸರ್ಕಾರ ಹೇಗೆ ನಿರ್ಲಜ್ಜತೆಯಿಂದ ಬಳಸಿಕೊಳ್ಳುತ್ತಿದೆ ಎಂಬುದನ್ನು ಮಹುವಾ ಹೇಳುತ್ತ ಹೋದರು. ಒಟ್ಟಾರೆಯಾಗಿ ಮಹುವಾ ಎಲ್ಲರ ಪರವಾಗಿ ಮಾತನಾಡಿದರು.
ಮಹುವಾ ಭಾಷಣ ಮಾಡುವಾಗ ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಿದ್ದು ಕೇರಳದ ಸಂಸದ ಎನ್.ಕೆ.ಪ್ರೇಮಚಂದ್ರನ್. Revolutionary Socialist Party ಸದಸ್ಯರು. ಕೊನೆಯಾದಾಗಿ ಸಮಯಾವಕಾಶ ಮುಗಿದು ಭಾಷಣ ನಿಲ್ಲಿಸಲು ಹೇಳಿದಾಗ ಮಹುವಾ ಟೇಬಲ್ ಗುದ್ದಿ ‘ರಿಪೀಲ್ ಆರ್ ನಂಥಿಂಗ್’ ಎಂದು ಅಬ್ಬರಿಸಿ ಕುಳಿತುಕೊಂಡರು. ಪ್ರೇಮಚಂದ್ರನ್ ‘ವೆರಿಗುಡ್’ ಎಂದರು. ಅವರು ವೆರಿಗುಡ್ ಎಂದಿದ್ದು ಭಾಷಣ ನಿಲ್ಲಿಸಿದ್ದಕ್ಕಾ? ಅಥವಾ ಇಡಿಯ ಭಾಷಣಕ್ಕಾ? ಅದು ನಮ್ಮ ಊಹೆಗೆ ಬಿಟ್ಟ ವಿಷಯ.
ನಾವು ಪ್ರಜಾಪ್ರಭುತ್ವವಾದಿಗಳು ಮಹುವಾ ಮೊಯಿತ್ರ ಭಾಷಣವನ್ನು ಇಷ್ಟಪಡುವುದಕ್ಕೆ ಹಲವು ಕಾರಣಗಳಿವೆ. ಇಡೀ ದೇಶದಲ್ಲಿ ಪ್ರಜಾಸತ್ತೆ ಸತ್ತೇ ಹೋಯಿತು ಎಂಬ ಭೀತಿ ಆವರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ಮಹುವಾ ಭಾಷಣ ನಿಜಕ್ಕೂ ಸಣ್ಣ ಧೈರ್ಯ ತುಂಬುತ್ತದೆ. ಒಂದು ಸಣ್ಣ ಕಿಡಿ ಜ್ವಾಲೆಯಾಗಿ ಹರಡುವುದಲ್ಲವೇ? ಮಹುವಾ ಅವರ ಧೈರ್ಯದ ಭಾಷಣ ನೂರಾರು ಭೀತಿ ತೊರೆದು ಮಾತನಾಡಲು ಶಕ್ತಿ ತುಂಬಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್ ಕುಣಿಗಲ್ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್. ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್. ಎನ್ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್ ಹಿರಿಯಡಕ ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ ʼಬಾವಿಗೆ ಬಿದ್ದರೂʼ, ಒಟ್ಟು ಈ ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.
ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.
ಕವಿತೆ ಸ್ಪರ್ಧೆ ಫಲಿತಾಂಶ
ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ಫೈಜ್ನಟ್ರಾಜ್ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


