Connect with us

ದಿನದ ಸುದ್ದಿ

ಸಾಮಾಜಿಕ ಜಾಲತಾಣ ಬಳಸುವ ಪ್ರತಿಯೊಬ್ಬರು ಅಧ್ಯಯನ ನಡೆಸಬೇಕಾದ ದಿಶಾ ಕೇಸ್..! ದೆಹಲಿ ಹೈಕೋರ್ಟ್ ನಲ್ಲಿ ನಡೆದ ವಾದದ ಇಂಚಿಂಚೂ ಮಾಹಿತಿ..!

Published

on

  • ನವೀನ್ ಸೂರಿಂಜೆ

ಪಬ್ಲಿಕ್ ಪ್ರಾಸಿಕ್ಯೂಟ್ ಇರ್ಫಾನ್ : ಸಹಾಯಕ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಮಧ್ಯಾಹ್ನ 2 ಗಂಟೆಗೆ ಈ ವಿಷಯದಲ್ಲಿ ವಾದ ಮಂಡಿಸುತ್ತಾರೆ

ಕೋರ್ಟ್ : ನನಗೆ ಅದನ್ನು ಮೊದಲೇ ಹೇಳಬೇಕಿತ್ತು. ನಾನು ಈ ಕೇಸ್ ಗಾಗಿ ಬಂದೆ

ಆನ್ ಲೈನ್ ಮೂಲಕ ಸಹಾಯಕ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಕೋರ್ಟ್ ಸಂಪರ್ಕಕ್ಕೆ ಬಂದರು.

ಕೋರ್ಟ್ : ಒಕೆ. ನಾವು ಇದನ್ನು ಮದ್ಯಾಹ್ನ 2 ಗಂಟೆ ಇಟ್ಟುಕೊಳ್ಳೋಣಾ

ಕಲಾಪ ಮದ್ಯಾಹ್ನ 2 ಗಂಟೆಗೆ ಮುಂದೂಡಲಾಯ್ತು

ಮದ್ಯಾಹ್ನ 2.05 ಕ್ಕೆ ಕಲಾಪ ಮತ್ತೆ ಪ್ರಾರಂಭವಾಯ್ತು

ವಕೀಲ ಸಿದ್ದಾರ್ಥ್ ಅಗರ್ವಾಲ್ ದಿಶಾ ಪರವಾಗಿ ವಾದ ಮಂಡಿಸಲು ಹಾಜರಾಗಿದ್ದರು.

ಪಬ್ಲಿಕ್ ಪ್ರಾಸಿಕ್ಯೂಟರ್ ಇರ್ಫಾನ್ ಅಹಮ್ಮದ್ : ನನಗೆ ಒಂದು ಲೀಗಲ್ ಸಬ್ಮೀಷನ್ ಮಾಡಲಿಕ್ಕಿದೆ. ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಸಹ ಆರೋಪಿಗಳನ್ನು ವಿಚಾರಣೆ ನಡೆಸಬೇಕಿದೆ. ಆರೋಪಿಗಳನ್ನು ಪರಸ್ಪರ ಸಮ್ಮುಖದಲ್ಲಿ ವಿಚಾರಣೆ ನಡೆಸಬೇಕಿದೆ. ಆರೋಪಿ ಶಾಂತನುಗೆ ನೋಟಿಸ್ ನೀಡಲಾಗಿದೆ. ಹಾಗಾಗಿ ನ್ಯಾಯಾಂಗ ಬಂಧನವನ್ನು ಫೆಬ್ರವರಿ 22 ರವರೆಗೆ ಮುಂದುವರೆಸಬೇಕು

ಪಿಪಿ ಇರ್ಫಾನ್ ಅಹಮ್ಮದ್ : ಫೆಬ್ರವರಿ 22 ಕ್ಕೆ ಮತ್ತೆ ನಾವು ಪೊಲೀಸ್ ಕಸ್ಟಡಿ ಕೇಳಲಿದ್ದೇವೆ. ನಮ್ಮ ಮನವಿ ಪುರಸ್ಕೃತಗೊಂಡಿದೆ ಮತ್ತು ಆ ಆದೇಶವನ್ನು ಪ್ರಶ್ನಿಸಲಾಗಿಲ್ಲ.

ಪಿಪಿ ಇರ್ಫಾನ್ ಅಹಮ್ಮದ್ : ಆದ್ದರಿಂದ ಈ ಜಾಮೀನು ಅರ್ಜಿಯ ಅಕಾಲಿಕ ಅಥವಾ ಆತುರದ್ದಾಗಿದೆ.

ಕೋರ್ಟ್ : ಹಾಗಂತ ಯಾವ ಕಾನೂನು ಹೇಳುತ್ತದೆ ?

ಕೋರ್ಟ್ : ನೀವು ಹೇಳಿದ ವಿಷಯಗಳು ಯಾವ ಕಾನೂನಿನ ಅಂಶದಲ್ಲಿ ಬರುತ್ತೆ ?

ಪಿಪಿ ಇರ್ಫಾನ್ ಅಹಮ್ಮದ್ : ನಮ್ಮ ಸಬ್ಮೀಷನ್ ಏನೆಂದರೆ, ಈ ಜಾಮೀನು ಅರ್ಜಿಯೇ ಆತುರದ್ದಾಗಿದೆ (ಪ್ರಿ ಮೇಚೂರ್). ನಮ್ಮ ಪ್ರಾಥಮಿಕ ಮನವಿಯೇನೆಂದರೆ ಆರೋಪಿಯನ್ನು ದಯವಿಟ್ಟು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ.

ಕೋರ್ಟ್ : ನಿಮ್ಮ ಸಬ್ಮೀಷನ್ ಅನ್ನು ಕೋರ್ಟ್ ದಾಖಲಿಸಿಕೊಂಡಿದೆ.

ಪಿಪಿ ಇರ್ಫಾನ್ ಅಹಮ್ಮದ್ : ಕೆಲವು ರಹಸ್ಯವಾದ ಸಾಕ್ಷ್ಯಗಳು ನಮ್ಮ ಬಳಿ ಇದೆ. ಅದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ

ಕೋರ್ಟ್ : ಮುಚ್ಚಿದ ಲಕೋಟೆಯಲ್ಲಿ ಕೊಡಬಹುದಲ್ವೇ ?

ಪಿಪಿ ಇರ್ಫಾನ್ ಅಹಮ್ಮದ್ : ಯೆಸ್

ಕೋರ್ಟ್ : ಅಫಿದಾವಿತ್ ಹಾಕುತ್ತೇವೆ ಅಂತ ಹೇಳಿದ್ರಿ. ಎಲ್ಲಿದೆ ಅಫಿದಾವಿತ್ ?

ಎಎಸ್ ಜಿ ರಾಜು : ನಾವು ಅಫಿದಾವಿತ್ ಹಾಕುತ್ತೇವೆ

ಕೋರ್ಟ್ : ಇವತ್ತೇ ಅಫಿದಾವಿತ್ ಹಾಕಿ ಬಿಡಿ

ಕೋರ್ಟ್ : ನನಗೆ ಮೂರು ವಿಷಯದಲ್ಲಿ ನೀವು ವಾದ ಮಂಡಿಸಬೇಕು. ತನಿಖೆಯ ವಿವರ, ಆರೋಪಗಳು ಮತ್ತು ಸಾಕ್ಷ್ಯಗಳ ಮೇಲೆ ವಾದ ಮಾಡಿ

ಎಎಸ್ ಜಿ ರಾಜು : ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಅನ್ನೋ ಸಂಘಟನೆ ಇದೆ. ಧಲಿವಾಲ್ ಮತ್ತು ಅಮಿತಾಲಾಲ್ ಅದರ ಸ್ಥಾಪಕರು. ಈ ಸಂಘಟನೆ ಖಲೀಸ್ಥಾನ ಪ್ರತ್ಯೇಕತೆಗಾಗಿ ಹೋರಾಡುತ್ತೆ. ಅದರ ಟ್ವೀಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದೆ.

ಎಎಸ್ ಜಿ ರಾಜು : ಈ ಸಂಘಟನೆಯು ಅದಕ್ಕಾಗಿ ಜನರನ್ನು ಒಟ್ಟುಗೂಡಿಸುತ್ತದೆ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಸಂಘಟನೆಯು ರೈತರ ಹೋರಾಟವನ್ನು ಬಳಸಿಕೊಂಡು ಅದರ ಚಟುವಟಿಕೆಯನ್ನು ವಿಸ್ತರಿಸಲು ಸಂಚು ಮಾಡಿತ್ತು. ( ದೆಹಲಿ ಪೊಲೀಸರ ಉತ್ತರವನ್ನು ಓದಿ ಹೇಳಲಾಯ್ತು)

ಎಎಸ್ ಜಿ ರಾಜು : ಈ ವಾಕ್ಯದಲ್ಲಿ ಪ್ರಸ್ತುತ ಅರ್ಜಿದಾರ ಆರೋಪಿಯೂ ಇದ್ದಾರೆ. ಈ ಟೂಲ್ ಕಿಟ್ ಉದ್ದೇಶ ಸಂಚು. ಕೆನಡಾದಲ್ಲಿ ಆರೋಪಿ ಜೊತೆ ಸೇರಿಕೊಂಡು ಈ ಸಂಚು ರೂಪಿಸಿರುವುದರಿಂದ 124A ಈ ಕೇಸ್ ನಲ್ಲಿ ಸೇರಿಕೊಂಡಿದೆ.

ಎಎಸ್ ಜಿ ರಾಜು : ಅವರು ಒಂದು ವಾಟ್ಸಪ್ ಗ್ರೂಪ್ ಮಾಡಿಕೊಳ್ಳುತ್ತಾರೆ. ಇಂಟರ್ ನ್ಯಾಶನಲ್ ಫಾರ್ಮರ್ಸ್ ಸ್ಟ್ರೈಕ್ ಎಂದು ವಾಟ್ಸಪ್ ಗ್ರೂಪ್ ಗೆ ಹೆಸರಿಡುತ್ತಾರೆ.‌ಅದರ ಮೂಲಕ ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಅನ್ನು ಸಂಪರ್ಕಿಸುತ್ತಾರೆ.

ಎಎಸ್ ಜಿ ರಾಜು : 11.01.2021 ರಂದು ಧಲಿವಾಲ್ ಮತ್ತು ಇತರ ಆರೋಪಿಗಳು ಜೂಮ್ ಕಾಲ್ ಮೂಲಕ ಮಾತನಾಡಿಕೊಳ್ಳುತ್ತಾರೆ. ಈ ಅರ್ಜಿದಾರಳು ಆ ಆರೋಪಿಗಳ ಸಹವರ್ತಿಗಳು. ಅದು ಇವರಿಗೆ ಅಗತ್ಯ ಇರಲಿಲ್ಲ.

ಎಎಸ್ ಜಿ ರಾಜು : ಮೀಟಿಂಗ್ ಬಳಿ ಒಬ್ಬ ಸಂಚುಕೋರ, ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಗೆ ಧನ್ಯವಾದ ಹೇಳಿ ಮೆಸೇಜ್ ರವಾನಿಸಿದ್ದಾನೆ.

ಎಎಸ್ ಜಿ ರಾಜು : ದಿಶಾ ಇವರ ಜೊತೆ ನಿಕಟ ಸಂಬಂಧ ಹೊಂದಿದ್ದಾಳೆ. ಮತ್ತೆ ಝೂಮ್ ಮೀಟಿಂಗ್ ಮಾಡಲು ದಿಶಾ ಮನವಿ ಮಾಡಿದ್ದಾಳೆ. ಎರಡರಿಂದ ಮೂರು ಬಾರಿ ಇಂತಹ ಮೀಟಿಂಗ್ ಆಗುತ್ತೆ.

ಎಎಸ್ ಜಿ ರಾಜು : ಕೆಲವು ವಿಷಯಗಳನ್ನು ವೆಬ್ ಸೈಟ್ ನಲ್ಲಿ ನೋಡಬಹುದು. ಟೂಲ್ ಕಿಟ್ ನೋಡಲು ಅಪಾಯಕಾರಿ ಅಲ್ಲದಂತೆ ಕಾಣಬಹುದು. ಆದರೆ ಅದು ಹಾಗಿಲ್ಲ. ಟೂಲ್ ಕಿಟ್ ಡ್ರಾಫ್ಟ್ ಮಾಡಿದ ಬಳಿಕ ಅದನ್ನು ಅಭಿಪ್ರಾಯ ಸಂಗ್ರಹಿಸಲು ವಾಟ್ಸ್ ಅಪ್ ಗ್ರೂಪಲ್ಲಿ ಹಾಕಲಾಯ್ತು. ಅದು ಕೊನೆಗೆ ತಲುಪಿದ್ದು ಪೊಯೆಟಿಕ್ ಜಸ್ಟಿಸ್ ಫೌಂಡೇಶನ್. ಇದರ ಅಗತ್ಯ ಇರಲಿಲ್ಲ.

ಕೋರ್ಟ್ : ಈ ಟೂಲ್ ಕಿಟ್ ಅಂದ್ರೆ ಏನು ?

ಎಎಸ್ ಜಿ ರಾಜು : ಅದನ್ನು ಲಗತ್ತಿಸಲಾಗಿದೆ. ಪೇಜ್ 21 ರಿಂದ ಟೂಲ್ ಕಿಟ್ ಬಗ್ಗೆ ಶುರುವಾಗುತ್ತೆ.

ಸಿದ್ದಾರ್ಥ್ ಅಗರ್ವಾಲ್ : ಟೂಲ್ ಕಿಟ್ ಅಂದ್ರೆ ಕರಪತ್ರ ಎನ್ನಬಹುದು

ಎಎಸ್ ಜಿ ರಾಜು : ಸಿಖ್ ಫಾರ್ ಜಸ್ಟಿಸ್ ಎಂಬ ಸಂಘಟನೆ ಯುಎಪಿಎ ಅಡಿಯಲ್ಲಿ ನಿಷೇಧಕ್ಕೊಳಗಾಗಿರೋ ಸಂಘಟನೆ.

ಎಎಸ್ ಜಿ ರಾಜು : ಈ ಖಲೀಸ್ತಾನ್ ದುಷ್ಕರ್ಮಿಗಳು ಇದರ ಹಿಂದೆ ಇದ್ದಾರೆ. ದ್ವಜವನ್ನು ಹಾರಿಸಿದ್ದು ಅವರೇ. ಅದರ ಇನ್ನೊಂದು ಮುಖವೇ ಪೊಯೆಟಿಕ್ ಜಸ್ಟಿಸ್. ಟೂಲ್ ಕಿಟ್ ಇಲ್ಲೇ ಸಿದ್ದವಾಗುತ್ತೆ.

ಎಎಸ್ ಜಿ ರಾಜು : ಅವರು ಹ್ಯಾಶ್ ಟ್ಯಾಗ್ ಸೃಷ್ಟಿಸಿದರು. ಸಾಮಾಜಿಕ ಜಾಲತಾಣದ ಮೂಲಕ ಅದನ್ನು ಕೆಲವೇ ವ್ಯಕ್ಯಿಗಳ ಮಧ್ಯೆ ಮಾತ್ರ ಹಂಚಲಾಯಿತು. ಆದರೆ ಅದು ಲೀಕ್ ಆಯ್ತು. ಇದರಿಂದ ಬಚಾವಾಗಲು ಕಸರತ್ತು ನಡೆಸಲಾಯ್ತು. ಹಾಗಾಗಿ ಅದನ್ನು ಡಿಲೀಟ್ ಮಾಡಲಾಯ್ತು.

ಎಎಸ್ ಜಿ ರಾಜು : ಹ್ಯಾಶ್ ಟ್ಯಾಗ್ ಮಾಡಿದ್ದು ತಪ್ಪು ಅಲ್ಲವೆಂದಾದರೆ ಅದನ್ನು ಡಿಲೀಟ್ ಮಾಡುವ ಅಗತ್ಯ ಏನಿತ್ತು ?

ಎಎಸ್ ಜಿ ರಾಜು : ಅವರು ರೈತರ ಹೋರಾಟವನ್ನು ಬಳಸಿಕೊಂಡು ಅವರ ಅಜೆಂಡಾ ಜಾರಿಗೆ ಮುಂದಾಗಿದ್ದರು. ಆ ಇಮೇಲ್ ಕೂಡಾ ಡಿಲೀಟ್ ಮಾಡಲಾಗಿದೆ. ಅದರಲ್ಲಿ ಅರ್ಜಿದಾರಳ ಪಾತ್ರವೂ ಬಯಲಾಗಿದೆ. ಅರ್ಜಿದಾರಳ ಅದರ ಹಿಂದೆ ಇದ್ದಾಳೆ. ( ಟೂಲ್ ಕಿಟ್ ಎಡಿಟ್ ವಿಚಾರ )

ಫಾರ್ಮರ್ಸ್ ಪ್ರೊಟೆಸ್ಟ್ ಚೀಟ್ ಶೀಟ್, ಕರೆಂಟ್ ಜೆನೊಸೈಡ್ ಅಲರ್ಟ್, ಆಸ್ಕ್ ಇಂಡಿಯಾ ಹ್ಯಾಶ್ ಟ್ಯಾಗ್ ಬಗ್ಗೆ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ರಾಜು ಮಾತನಾಡುತ್ತಾ..

ಎಎಸ್ ಜಿ ರಾಜು : ಭಾರತದ ಸೈನ್ಯವನ್ನು ಅವಹೇಳನ ಮಾಡುವ ಸೈಟ್ ಗೂ ಈ ಟೂಲ್ ಕಿಟ್ ಹ್ಯಾಶ್ ಟ್ಯಾಗ್ ಸಂಪರ್ಕಿಸುತ್ತೆ‌. ಹೇಗೆ ಭಾರತದ ಸೇನೆ ಕಾಶ್ಮೀರದಲ್ಲಿ ಹತ್ಯಾಕಾಂಡ ಮಾಡಿತ್ತು ಎಂಬ ಬಗ್ಗೆಯೂ ಇದೆ.‌ ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಪಿತೂರಿ ಮಾಡಿ ದೆಹಲಿಗೆ ನುಗ್ಗಿದ್ದರು. ಅವರು ರೈತ ಹೋರಾಟವನ್ನು ತಮ್ಮ ಅಜೆಂಡಾ ಜಾರಿಗೆ ಬಳಸಿದ್ದರು. ಅದಕ್ಕೆ ಇವರ ಟೂಲ್ ಕಿಟ್ ಬಳಕೆ ಆಗಿತ್ತು. ಅವರು ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದರು. ಇಮೇಲ್ ಮಾಡಿದ್ದರು.‌ ನಂತರ ಇಮೇಲ್ ಡಿಲೀಟ್ ಮಾಡಿದ್ದಾರೆ. ಎಲ್ಲವೂ ಸರಿ ಇದ್ದರೆ ಡಿಲೀಟ್ ಯಾಕೆ ಮಾಡಬೇಕಿತ್ತು ?

ಕೋರ್ಟ್ : ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡಿ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ನಿಷೇಧಿತ ಸಂಘಟನೆಯೇ ?

ಎಎಸ್ ಜಿ ರಾಜು : ಅಲ್ಲ

ಕೋರ್ಟ್ : ಅದರ ಸ್ಥಾಪಕರ ಮೇಲೆ ಯಾವುದಾದರೂ ಎಫ್ ಐಆರ್ ದಾಖಲಾಗಿದೆಯೆ ?

ಎಎಸ್ ಜಿ ರಾಜು : ಈವರೆಗೂ ಆಗಿಲ್ಲ

ಕೋರ್ಟ್ : ಮತ್ತೆ ಹೇಗೆ ನೀವು ಅವರ ಮೇಲೆ ಕೆಟ್ಟ ಅಭಿಪ್ರಾಯ ದಾಖಲಿಸುತ್ತಿರಿ ?

ಎಎಸ್ ಜಿ ರಾಜು : ಅವರ ಟ್ವೀಟ್ ಗಳ ಆಧಾರದ ಮೇಲೆ

ಕೋರ್ಟ್ – ಏನಾದರೂ ದಾಖಲೆ ಇದ್ಯಾ ?

ಪಿಪಿ ಇರ್ಫಾನ್ ಅಹಮ್ಮದ್ – ಪೊಯೆಟಿಕ್ ಜಸ್ಟಿಸ್ ಮತ್ತು ಸಿಖ್ ಫಾರ್ ಜಸ್ಟಿಸ್ ಎರಡೂ ಒಂದೇ. ಅದಕ್ಕೆ ಸಂಬಂಧಿಸಿದ ವಿಡಿಯೋ ಕೂಡಾ ಇದೆ. ನಾನು ಖಲೀಸ್ಥಾನಿ ಎಂಬ ಹೆಮ್ಮೆ ಇದೆ ಎಂದು ದಲೀವಾಲ್ ಹೇಳುವ ವಿಡಿಯೋ ಕೂಡಾ ಇದೆ.

ಪಿ ಪಿ ಇರ್ಫಾನ್ ಅಹಮ್ಮದ್ – ಇವರೆಲ್ಲರ ಉದ್ದೇಶ ಖಲೀಸ್ಥಾನವನ್ನು ಬೆಂಬಲಿಸುವುದು.

ಕೋರ್ಟ್ : ನಾನೇನಾದರೂ ಯಾವುದಾದರೂ ಚಳುವಳಿಯಲ್ಲಿದ್ದು, ವೈಯುಕ್ತಿಕವಾಗಿ ಯಾವುದೋ ಉದ್ದೇಶಕ್ಕೆ ಯಾರನ್ನೋ ಸಂಪರ್ಕಿಸಿದರೆ ನಾನೂ ಅವರ ಉದ್ದೇಶಗಳ ಭಾಗ ಎಂದು ಅರ್ಥವೇ ?

ಎಎಸ್ ಜಿ ರಾಜು : ಆದರೆ ಇವರು ಯಾರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ

ಕೋರ್ಟ್ : ಹಾಗೇನಿಲ್ಲ. ಎಲ್ಲರಿಗೂ ಗೊತ್ತಿರಬೇಕೆಂದೇನಿಲ್ಲ

ಎಎಸ್ ಜಿ ರಾಜು : ಈ ಅರೋಪಿಗಳು ಅನಕ್ಷರಸ್ಥರಲ್ಲ. ಯಾವ ಸಂಘಟನೆ ಯಾವ ಉದ್ದೇಶ ಹೊಂದಿದೆ ಎಂಬುದು ಆಕೆಗೆ ತಿಳಿದಿದೆ. ಹಾಗಿಲ್ಲದಿದ್ದರೆ ಪ್ರಕರಣ ಹೊರ ಬರುತ್ತಿದ್ದಂತೆ ಆಕೆ ಹೆದರಿದ್ದು ಯಾಕೆ ?

ಕೋರ್ಟ್ : ನಾನು ದೇವಸ್ಥಾನಕ್ಕೆ ದಾನ ಕೊಡಿ ಎಂದು ದರೋಡೆಕೋರನನ್ನು ಸಂಪರ್ಕಿಸುತ್ತೇನೆ. ಆಗ ನಾನು ದರೋಡೆಯ ಭಾಗವಾಗುತ್ತೇನೆಯೇ ? ಆಕೆಯ ವಿರುದ್ದ ಇರೋ ಸಾಕ್ಷ್ಯಗಳನ್ನು ತೋರಿಸಿ.

ಎಎಸ್ ಜಿ ರಾಜು : ಅದು ಅಷ್ಟು ಸರಳವಲ್ಲ. ಆಕೆ ಉದ್ದೇಶಪೂರ್ವಕವಾಗಿಯೇ ಅವರ ಸಂಪರ್ಕ ಹೊಂದಿದ್ದಾಳೆ

ಕೋರ್ಟ್ – ಟೂಲ್ ಕಿಟ್ ಗೂ ಹಿಂಸಾಚಾರಕ್ಕೂ ಏನು ಸಂಬಂಧ ? ಅದಕ್ಕೆ ಸಂಬಂಧಿಸಿದ ದಾಖಲೆ ಏನಿದೆ ?

ಎಎಸ್ ಜಿ ರಾಜು : ಅದೊಂದು ಪಿತೂರಿ. ಹಲವರು ಹಲವು ಪಾತ್ರ ವಹಿಸಿದ್ದಾರೆ. ಹಿಂಸಾಚಾರದ ಹಿಂದೆ ಟೂಲ್ ಕಿಟ್ ಪ್ರಚೋದನೆ ಇದೆ

ಎಎಸ್ ಜಿ ರಾಜು : ಟೂಲ್ ಕಿಟ್ ಮೂಲಕ ಪ್ರಚೋದನೆ ಪಡೆದುಕೊಂಡು ಜನ ದೆಹಲಿಗೆ ಬಂದರು. ದೆಹಲಿಗೆ ಹೋಗಿ, ಅದು ಮಾಡಿ, ಇದು ಮಾಡಿ ಎಂದು ಟೂಲ್ ಕಿಟ್ ಮೂಲಕ ಸೂಚಿಸಲಾಗಿತ್ತು ?

ಕೋರ್ಟ್ : ಅದು ಮಾಡಿ, ಇದು ಮಾಡಿ ಅಂದ್ರೆ ಏನು ? ಸರಿಯಾದ ಲಿಂಕ್ ಕೊಡಿ. ಸರಿಯಾದ ದಾಖಲೆ ಕೊಡಿ.

ಕೋರ್ಟ್ : ನನ್ನ ಆತ್ಮಸಾಕ್ಷಿಗೆ ಮನವರಿಕೆಯಾಗದೆ ನಾನು ಮುಂದುವರೆಯಲಾರೆ.

ಎಎಸ್ ಜಿ ರಾಜು : ಟೂಲ್ ಕಿಟ್ ಅನ್ನು ಇನ್ನೊಮ್ಮೆ ಗಮನಿಸಿ. ಅದರ ಮೂಲಕವೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗಿದೆ.

ಕೋರ್ಟ್ : ಈ ಪ್ರಕರಣಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕೊಡ್ತೀರಾ ? ಅಥವಾ ಊಹೆಗಳನ್ನೇ ಮಾಡಿಕೊಂಡಿರಬೇಕಾ ?

ಎಎಸ್ ಜಿ ರಾಜು : ಸನ್ನಿವೇಶದ ಆಧಾರದ ಮೇಲೆ ನೋಡಬೇಕು

ಕೋರ್ಟ್ : ನಿಮ್ಮ ವಾದ ಮುಗಿಯಿತೇ ? ನಾನು ಸಿದ್ದಾರ್ಥ್ ಅಗರ್ ವಾಲ್ ಗೆ ಸಮಯ ನೀಡಬೇಕಿದೆ.

ಸುಪ್ರಿಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶ/ತೀರ್ಪುಗಳನ್ನು ಎಎಸ್ ಜಿ(ಅಸಿಸ್ಟೆಂಟ್ ಸಾಲಿಸಿಟರ್ ಜನರಲ್) ರಾಜು ಓದಿ ಹೇಳಿದರು. ಬಳಿಕ…

ಎಎಸ್ ಜಿ ರಾಜು : ನ್ಯಾಯಾಲಯ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಟೂಲ್ ಕಿಟ್ ತಿದ್ದುವಿಕೆಯಲ್ಲಿ ಈಕೆಯ ಪಾತ್ರವಿದೆ. ಅದು ಪಿತೂರಿಯ ಭಾಗ. ಜೊತೆಗೆ ದಲೀವಾಲ್ ಪ್ರತ್ಯೇಕ ಖಲೀಸ್ಥಾನಿ ಎಂದು ಹೇಳಿಕೆ ನೀಡಿರುವ ವಿಡಿಯೋ ಕೂಡಾ ಇದೆ.

ಕೋರ್ಟ್ : ಅದೇನು ಚರ್ಚೆಯ ವಿಷಯವೇ ಅಲ್ಲ. ಈಗಾಗಲೇ ಪಬ್ಲಿಕ್ ಪ್ರಾಸಿಕ್ಯೂಟರ್ ನಮ್ಮ ಗಮನಕ್ಕೆ ತಂದಿದ್ದಾರೆ.

ಕೋರ್ಟ್ : ದೆಹಲಿ ಹಿಂಸಾಚಾರಕ್ಕೂ ಈ ಹುಡುಗಿಗೂ ಇರುವ ನೇರ ಸಂಬಂಧದ ಸಾಕ್ಷ್ಯಾಧಾರಗಳು ಇದ್ದರೆ ಹೇಳಿ

ಕೋರ್ಟ್ : ದಯವಿಟ್ಟು ಖಲೀಸ್ಥಾನ ಗುಂಪುಗಳ ಬಗ್ಗೆ ಪುನರಾವರ್ತಿಸಬೇಡಿ. ಬೇರೆ ನಿಖರ ಸಾಕ್ಷ್ಯಗಳಿದ್ದರೆ ಹೇಳಿ

ಎಎಸ್ ಜಿ ರಾಜು : ಇಲ್ಲಿ ಪಿತೂರಿಯ ಜಾರಿ ಮತ್ತು ಪಿತೂರಿ ಎರಡೂ ಬೇರೆ ಬೇರೆಯಾಗಿ ನಡೆದಿದೆ.

ಕೋರ್ಟ್ : ಹಾಗಾದರೆ ನಾನು ಈ ಆರೋಪಿಗೆ ನೇರ ಸಂಪರ್ಕ ಇಲ್ಲ ಎಂದು ಭಾವಿಸಲೇ ?

ಎಎಸ್ ಜಿ ರಾಜು : ತನಿಖೆ ಮುಂದುವರೆಯುತ್ತಿದೆ

ಕೋರ್ಟ್ : ನೀವು ಆ ನಟನನ್ನು ಅರೆಸ್ಟ್ ಮಾಡಿದ್ದಾರೆ.‌

ಡಿಸಿಪಿ : ಹೌದು.

ಕೋರ್ಟ್ : ಅವನಿಗೂ ಈ ಆರೋಪಿಗೂ ನೇರ ಲಿಂಕ್ ಇದ್ಯಾ ?

ಡಿಸಿಪಿ : ತನಿಖೆ ನಡೆಸುತ್ತಿದ್ದೇವೆ

ಕೋರ್ಟ್ : ಒಂದೋ ನಾನು ಸರಿಯಾಗಿ ಪ್ರಶ್ನೆ ಕೇಳುತ್ತಿಲ್ಲ. ಅಥವಾ ನಿಮಗೆ ಉತ್ತರಿಸಲು ಮನಸ್ಸಿಲ್ಲ. ನೀವು ಹೇಳುವ ಪಿತೂರಿಗೂ ಈ ಘಟನೆಗೂ ಏನ್ ಸಂಬಂಧ ? ಏನಾದರೂ ಸಾಕ್ಷಿ ಇದ್ಯಾ?

ದಿಶಾ ಪರ ವಕೀಲ ಸಿದ್ದಾರ್ಥ್ ಅಗರ್ವಾಲ್ ವಾದ ಶುರು ಮಾಡಿದ್ರು.‌

ಸಿದ್ದಾರ್ಥ್ ಅಗರ್ವಾಲ್ : ತನಿಖೆಯನ್ನೇ ನಿಲ್ಲಿಸಿ ಎಂದು ನಾನು ಹೇಳುತ್ತಿಲ್ಲ‌. ತನಿಖೆ ನಡೆಯಲಿ. 21 ವರ್ಷ ವಯಸ್ಸಿನ ಬೆಂಗಳೂರು ನಿವಾಸಿ ದಿಶಾ, ಈವರೆಗೂ ಖಲಿಸ್ತಾನ್ ಜೊತೆ ಸಂಪರ್ಕ ಹೊಂದಿರೋ ಇತಿಹಾಸ ಹೊಂದಿಲ್ಲ. ಅವರ ಜೊತೆಗಿನ ಹಣಕಾಸು ವ್ಯವಹಾರವೂ ಆಕೆಗೆ ಇಲ್ಲ.

ಕೋರ್ಟ್ : ಮೂರನೇ ಅ್ಯಂಗಲ್ ಕೂಡಾ ಇರಬಹುದಲ್ವೇ ? ಶತ್ರುವಿನ ಶತ್ರು ಮಿತ್ರ ಎಂಬಂತೆ…

ಸಿದ್ದಾರ್ಥ್ ಅಗರ್ವಾಲ್ : ಅಂತಹ ಯಾವುದೇ ಪ್ರವೃತ್ತಿ ಆಕೆಯಲ್ಲಿ ಇಲ್ಲ. ಕಾರಣವಿಲ್ಲದೆ ಆಕೆ ಬಂಡಾಯವೆದ್ದಿಲ್ಲ. ಆಕೆಯದ್ದು ಪರಿಸರ ಮತ್ತು ಕೃಷಿ, ರೈತರ ಕುರಿತಾದ ಹೋರಾಟ.

ಕೋರ್ಟ್ : ಅವರು ಪೊಯೆಟಿಕ್ ಜಸ್ಟಿಸ್ ಬಗ್ಗೆ ಆರೋಪಿಸುತ್ತಾರೆ.

ಸಿದ್ದಾರ್ಥ್ ಅಗರ್ವಾಲ್ : ದಿಶಾ ಅದರ ಭಾಗವಲ್ಲ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಗಾಗಲೀ, ಸಿಖ್ ಫಾರ್ ಜಸ್ಟಿಸ್ ಗಾಗಲೀ ದಿಶಾ ಜೊತೆ ಇರೋ ಸಂಪರ್ಕದ ಆರೋಪದ ಬಗ್ಗೆ ಯಾವ ದಾಖಲೆಗಳೂ ಇಲ್ಲ. ಅಂತಹ ಸಂಪರ್ಕವೇ ಇಲ್ಲ. ಸಂಬಂಧವೂ ಇಲ್ಲ.

ಸಿದ್ದಾರ್ಥ್ ಅಗರ್ವಾಲ್ : ಒಂದು ವೇಳೆ ನಾನೇನಾದರೂ ಯಾರನ್ನಾದರೂ ಬೇಟಿಯಾದರೆ ಆತ ಪ್ರತ್ಯೇಕತಾವಾದಿ ಹೌದೋ ಅಲ್ಲವೋ ಎಂದು ನನಗೆ ಹೇಗೆ ತಿಳಿಯಬೇಕು ? ಆತನಿಗೂ ನನಗೂ ಸಂಬಂಧವೇ ಇರುವುದಿಲ್ಲ.

ಡಿಸಿಪಿ : ನಿಮ್ಮ ಗಮನಕ್ಕೆ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಅಕ್ಟೋಬರ್ 2020 ಕ್ಕೆ ಶುರುವಾಯಿತು.

ಸಿದ್ದಾರ್ಥ್ ಅಗರ್ವಾಲ್ : ನನಗೆ ಅದರಲ್ಲಿ ಆಸಕ್ತಿ ಇಲ್ಲ. ನೀವೇ ಹೇಳಿದಂತೆ ನಿನ್ನೆ ಮೊನ್ನೆ ಹುಟ್ಟಿದ ಸಂಘಟನೆ ಎಲ್ಲರಿಗೂ ಗೊತ್ತಿರಲು ಸಾಧ್ಯವಿಲ್ಲ

ಸಿದ್ದಾರ್ಥ್ ಅಗರ್ವಾಲ್ : ನಿಖಿತಾ ಮತ್ತು ಶಂತನೂ 60-70 ಜನರ ಝೂಮ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದರು.‌ ದಿಶಾ ಭಾಗಿಯಾಗಿಲ್ಲ.

ಸಿದ್ದಾರ್ಥ್ ಅಗರ್ವಾಲ್ : ರೈತರ ಹೋರಾಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಕೊಡಿಸುವುದು ದೇಶದ್ರೋಹವಾದರೆ, ಹೌದು ನಾನು(ದಿಶಾ) ತಪ್ಪಿತಸ್ಥೆ.

ಸಿದ್ದಾರ್ಥ್ ಅಗರ್ವಾಲ್ : ನಾನು ಝೂಮ್ ಮೀಟಿಂಗ್ ಗೆ ಹಾಜರಾಗಿದ್ದೇನೆ ಎಂದು ಯಾರದರೂ ದಾಖಲೆಯಿಲ್ಲದೇ ಊಹಿಸಿಕೊಂಡರೆ ನಾನು ಏನು ಮಾಡಲಿ? ನಾನು ಎಲ್ಲೂ ದೇಶದ ವಿರುದ್ದ ಭಾಷಣ ಮಾಡಿಲ್ಲ. ಟೂಲ್ಕಿಟ್ ಎಂಬುದು ಆಕ್ರಮಣಕಾರಿಯೇ? ಅಥವಾ ಅದರ ಹೊರಗಡೆ ಪಿತೂರಿ ನಡೆದಿತ್ತೇ ?. ದಯವಿಟ್ಟು ಸೆಕ್ಷನ್ 124 ಎ ನೋಡಿ. ನಾನು(ದಿಶಾ) ದೇಶದ್ರೋಹಿಯಲ್ಲ.

ಅಗರ್ವಾಲ್ ಸೆಕ್ಷನ್ 124 ಎ ಐಪಿಸಿ ಓದುತ್ತಾರೆ.

ಸಿದ್ದಾರ್ಥ್ ಅಗರ್ವಾಲ್ : ದೇಶದ್ರೋಹ ಪ್ರಕರಣಕ್ಕೆ ದಾಖಲೆಗಳು ಬೇಕು. ಮಾತು, ಹೇಳಿಕೆ, ಬರಹ, ಕೃತ್ಯ ಇರಬೇಕು. ಸಂವಹನವು ದೇಶದ ವಿರುದ್ದ ಸಮಾದಾನವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು. ಟೂಲ್ಕಿಟ್ಗೆ ಅಂತಹ ಯಾವುದೇ ಸಾಮರ್ಥ್ಯ ಇಲ್ಲ. ಪ್ರಾಸಿಕ್ಯೂಷನ್ ಕೂಡಾ ಅದನ್ನು ಸ್ಪಷ್ಟಪಡಿಸಿದೆ. ಆದರೆ ಟೂಲ್ ಕಿಟ್ ಕೆಟ್ಟ ಜನರ ಕೈ ಸೇರಿದೆ ಎನ್ನುವುದು ಆರೋಪ. ಅದು ದೇಶದ್ರೋಹವಲ್ಲ.

ಇಡೀ ಪ್ರಕರಣ ಊಹೆಯನ್ನು ಆಧರಿಸಿದ್ದಾಗಿದೆ. ನ್ಯಾಯಾಲಯವು ಜಾಮೀನು ಅರ್ಜಿ ಪರಿಶೀಲಿಸುವಾಗ ದಯವಿಟ್ಟು ಇದನ್ನು ಪರಿಗಣಿಸಿ. ಎಲ್ಲಾ ವಿಚಾರಣೆ ಮುಗಿಸಿ ದಂಡ ಕಟ್ಟಿ ಹೊರಬರಬಹುದಾದ ಪ್ರಕರಣವಷ್ಟೆ. ನನ್ನನ್ನು(ದಿಶಾರನ್ನು) ಐದು ದಿನಗಳ ಪೊಲೀಸ್ ಕಸ್ಟಡಿ ಕೊಟ್ಟಿದ್ರು. ಹೆಚ್ಚಿನ ತನಿಖೆ ಮಾಡಲು ಇದೆ ಅಂದ್ರು. ಸರ್ಚ್ ಮಾಡಲು ನೀವು ಒಂದು ಬಾರಿಯೂ ನನ್ನನ್ನು ಬೆಂಗಳೂರಿಗೆ ಕರೆದೊಯ್ಯಲಿಲ್ಲ. ಮತ್ಯಾಕೆ ಕಸ್ಟಡಿ ತಗೊಂಡ್ರಿ ? ಇನ್ನೂ ಮೂರು ದಿನ ಏನಾಗುತ್ತೆ? ಫೆಬ್ರವರಿ 22 ರಂದು ಮತ್ತೆ ಯಾಕೆ ಕಸ್ಟಡಿ ಕೇಳುತ್ತಿದ್ದಾರೆ? ಇದೆಂತ ತನಿಖೆ ?

ಸಿದ್ದಾರ್ಥ್ ಅಗರ್ವಾಲ್ : ನಾನು ಮೆರಿಟ್ ಆಧಾರದಲ್ಲಿ ಕೇಸ್ ನ ಚರ್ಚೆಗೆ ಹೋಗುವುದಿಲ್ಲ. ಪಿಜೆಎಫ್ ಅನ್ನು ನಿಷೇಧಿಸಲಾಗಿಲ್ಲ. ಧಲಿವಾಲ್ ಮತ್ತು ಲಾಲ್ ಅನ್ನು ಕೂಡಾ ನಿಷೇಧಿಸಲಾಗಿಲ್ಲ. ಅವರು ಇಲ್ಲಿ, ಅಲ್ಲಿ ಅಂತ ಸುಖಾಸುಮ್ಮನೆ ವಿಷಯಗಳನ್ನು ಲಿಂಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಂಪು ಕೋಟೆಯಲ್ಲಿ ಧ್ವಜವನ್ನು ಹಾರಿಸಿದ ಅಥವಾ ಹಿಂಸಾಚಾರದಲ್ಲಿ ಪಾಲ್ಗೊಂಡ ವ್ಯಕ್ತಿಗಳಲ್ಲಿ ನಿಮಗೆ ಟೂಲ್‌ಕಿಟ್ ಏನಾದ್ರೂ ಪತ್ತೆಯಾಯ್ತೆ ? ಪೊಲೀಸರ ಹೊರತಾಗಿ ಬೇರೆ ಯಾರೂ ಕೂಡಾ ಈ ಆರೋಪಗಳಿಗೆ ಸಾಕ್ಷಿ ಇಲ್ಲ. ಹಿಂಸಾಚಾರ ಸಂಬಂಧ 149 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ನನ್ನೊಂದಿಗೆ ಮಾತನಾಡಿದ ಯಾರಾದರೂ ಇದ್ದಾರೆಯೇ?

ಸಿದ್ದಾರ್ಥ್ ಅಗರ್ವಾಲ್ : ಕೆಂಪುಕೋಟೆಯ ಮೇಲೆ ಧ್ವಜವನ್ನು ಹಾರಿಸಿರೋ ಬಗ್ಗೆ, ಅಥವಾ ಹಿಂಸಾಚಾರದ ಬಗ್ಗೆ ನಾನೇನೂ ಹೇಳಲ್ಲ. ಕೆಂಪುಕೋಟೆಗೆ ಮೆರವಣಿಗೆ ಹೋಗಿದ್ದೇ ತಪ್ಪಾಗಿರಬಹುದು. ಮೆರವಣಿಗೆಗೆ ಅವಕಾಶ ಕೊಟ್ಟಿದ್ದು ಯಾರು ? ದೆಹಲಿ ಪೊಲೀಸರು ಅವಕಾಶ ಕೊಟ್ಟವರು ತಾನೆ ?

ಸಿದ್ದಾರ್ಥ್ ಅಗರ್ವಾಲ್ : ದೆಹಲಿ ನಗರದಲ್ಲಿ ಮೆರವಣಿಗೆ ನಡೆಸಲು ಅವಕಾಶ ಕೊಡೋ ವಿವಾದ ಸುಪ್ರೀಂ ಕೋರ್ಟ್ ಮುಂದೆ ಇತ್ತು. ದೆಹಲಿ ಪೊಲೀಸರು ತೀರ್ಮಾನ ತೆಗೆದುಕೊಳ್ಳಬೇಕೆಂದು ಸುಪ್ರಿಂ ಕೋರ್ಟ್ ಹೇಳಿತ್ತು. ದೆಹಲಿ ಪೊಲೀಸರು ಮೆರವಣಿಗೆಗೆ ಅನುಮತಿ ನೀಡಿದರು. ಆಗ ನಾನು ( ದಿಶಾ) ಜನರಿಗೆ ಅದರ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದರೆ, ಅದು ದೇಶದ್ರೋಹವೇ? ನಾನು ಪ್ರತಿಭಟನೆಯ ಅಥವಾ ಮೆರವಣಿಗೆಯ ಸಂಘಟಕಿಯಲ್ಲ. ಸಂಘಟಕರು ದೇಶದ್ರೋಹವನ್ನು ಎದುರಿಸುತ್ತಿದ್ದಾರೆ? ರ್ಯಾಲಿಯು ನ್ಯಾಯಸಮ್ಮತವಾಗಿದ್ದರೆ, ಅದಕ್ಕಾಗಿ ಕೆಲಸ ಮಾಡಿದ ನಾನು ಯಾವುದೇ ತಪ್ಪು ಮಾಡಿಲ್ಲ.

ಕೋರ್ಟ್ : ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ರವರೇ,
ನೀವು ಇನ್ನೂ ಹೆಚ್ಚಿನದನ್ನು ಹೇಳಲಿಕ್ಕಿದೆಯೋ? ಏನಾದರೂ ಸಾಕ್ಷ್ಯ ಕೊಡುವುದಿದೆಯೋ ಅಥವಾ ಆದೇಶಕ್ಕಾಗಿ ನಾನು ಲಿಸ್ಟ್ ಮಾಡಲೇ ?

ಎಎಸ್ ಜಿ ರಾಜು : ಇಲ್ಲಿ ಅವಳ ಇತಿಹಾಸ ಅಪ್ರಸ್ತುತ. ನೀವು ಯಾರೊಂದಿಗೆ ಸಂವಹನ ನಡೆಸುತ್ತೀರೋ ಅವರು ಖಲಿಸ್ತಾನಿ. ಟೂಲ್ಕಿಟ್ ಅನ್ನು ಪ್ರತ್ಯೇಕವಾಗಿ ನೋಡಬಾರದು. ಖಂಡಿತವಾಗಿಯೂ ಹಿಂಸಾಚಾರದಲ್ಲಿ ಟೂಲ್ ಕಿಟ್ ಕಂಡುಬರುವುದಿಲ್ಲ. ಆದರೆ ನೀವು ಅವರನ್ನು ಪ್ರಚೋದಿಸಿದ್ದೀರಿ. ಅದಕ್ಕೆ ಸಾಕ್ಷ್ಯಚಿತ್ರವಿದೆ.

ಕೋರ್ಟ್ : ಈ ಸಾಕ್ಷ್ಯಚಿತ್ರ ಪುರಾವೆ ಎಲ್ಲಿದೆ?

ಎಎಸ್ ಜಿ ರಾಜು : ಲಿಂಕ್ ಇದೆ. ನೀವು ಲಿಂಕ್ ಅನ್ನು ಕ್ಲಿಕ್ ಮಾಡಿ, ಅದು ಖಲಿಸ್ತಾನಿ ಚಳುವಳಿ ಲಿಂಕ್ ಎಂದು ನಿಮಗೆ ತಿಳಿಯುತ್ತದೆ.

ಸಿದ್ದಾರ್ಥ್ ಅಗರ್ವಾಲ್ : ಐಟಿ ಕಾಯ್ದೆಯಡಿ, ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಆದರೆ ಈ ವೆಬ್‌ಸೈಟ್‌ಗಳನ್ನು ಏಕೆ ನಿರ್ಬಂಧಿಸಲಾಗಿಲ್ಲ?

ಕೋರ್ಟ್ : ಟೂಲ್ಕಿಟ್ ಚಹಾ ಮತ್ತು ಯೋಗವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದೀರಿ. ಅದಕ್ಕೇನು ದಾಖಲೆ ಇದೆ ?

ಡಿಸಿಪಿ : ನಿರ್ಧಿಷ್ಟ ದಾಖಲೆ ಇಲ್ಲ. ಟೆಂಪ್ಲೇಟ್‌ಗಳು, ವೆಬ್‌ಸೈಟ್‌ಗಳು ಇತ್ಯಾದಿಗಳಿವೆ. ಕೆಲವು ನಿರ್ದಿಷ್ಟ ಕೆಲಸಗಳು ಭಾರತದ ಚಿಹ್ನೆಗಳನ್ನು ಗುರಿಯಾಗಿಸಿಕೊಂಡವು. ಇದು ಕೇವಲ ಯೋಗ ಮತ್ತು ಚಹಾ ಎಂದಲ್ಲ.

ದಿಶಾ ಜಾಮೀನು ಅರ್ಜಿ ಆದೇಶವನ್ನು ಫೆಬ್ರವರಿ 22 ರಂದು ಪ್ರಕಟಿಸಲಿದೆ.

(ಮಾಹಿತಿ ಮೂಲ : www.barandbench.com)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲ್ಯ ಅಗತ್ಯ : ಡಾ. ವೆಂಕಟೇಶ್ ಬಾಬು

Published

on

ಸುದ್ದಿದಿನ,ಚನ್ನಗಿರಿ:ವಿದ್ಯಾರ್ಥಿಗಳು ಇಂದಿನ ಯುಗಕ್ಕೆ ಅಗತ್ಯವಿರುವ ಎಲ್ಲಾ ಜೀವನ ಹಾಗೂ ತಂತ್ರಜ್ಞಾನ, ವಿಶೇಷವಾಗಿ ಡಿಜಿಟಲ್ ಕೌಶಲ್ಯಗಳನ್ನು ಅರಿತಿರಬೇಕು ಎಂದು ಪ್ರಾಧ್ಯಾಪಕ ಡಾ. ವೆಂಕಟೇಶ್ ಬಾಬು ಅವರು ತಿಳಿಸಿದರು.

ಬುಧವಾರ ಶ್ರೀ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಕೋಶದ ಪ್ರೇರಣಾ ವಿಭಾಗದ ವತಿಯಿಂದ ಸ್ನಾತಕೊತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಡಿಜಿಟಲ್ ಸ್ಕಿಲ್ಸ್ ಸರ್ಟಿಫಿಕೇಟ್ ಕೋರ್ಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಂಪ್ಯೂಟರ್ ಆಧರಿತ ಉದ್ಯೋಗದ ಕೌಶಲಗಳನ್ನು ಹೊಂದಿದ್ದರೆ ಉದ್ಯೋಗಗಳು ನಮ್ಮನ್ನ ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.

ಕಾಲೇಜಿನ ಅಲ್ಮನಿ ವಿದ್ಯಾರ್ಥಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿರುವ ಶ್ರೀ ಮಧು ಜಿ.ಟಿ ರವರು ತಾನು ಈ ಕಾಲೇಜಿನಲ್ಲಿ ಕಲಿಯುವಾಗ ಇಲ್ಲದಿರುವ ಎಲ್ಲಾ ಸೌಲಭ್ಯಗಳು/ ಅವಕಾಶಗಳು ಈಗ ದೊರೆಯುತ್ತಿವೆ ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಂಡು ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಅಮೃತೇಶ್ವರ ಬಿ.ಜಿ ಅವರು ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಡಿಜಿಟಲ್ ಸ್ಕಿಲ್ ಹಾಗೂ ಇಂಗ್ಲಿಷ್ ಸಂವಹನ ಜ್ಞಾನದ ಅವಶ್ಯಕತೆ ಇದ್ದು ಪದವಿಯೊಂದಿಗೆ ಡಿಜಿಟಲ್ ಕೌಶಲ್ಯಗಳ ಅರಿ ವನ್ನು ವಿದ್ಯಾರ್ಥಿಗಳಿಗೆ ಕಾಲೇಜಿನ ಉದ್ಯೋಗ ಕೋಶ ವೇದಿಕೆಯು ಉಚಿತವಾಗಿ ನೀಡುತ್ತಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಕರೆ ನೀಡಿದರು.

ಡಾ. ಮಂಜುಳಾ ಟಿ ಪ್ಲೇಸ್ಮೆಂಟ್ ಸೆಲ್ ಸಂಚಾಲಕರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವರ್ತಮಾನದ ಜಗತ್ತಿಗೆ ಡಿಜಿಟಲ್ ಕೌಶಲ ವಿಶೇಷವಾಗಿ ವಿದ್ಯಾರ್ಥಿ ಗಳು ಅತಿ ತುರ್ತಾಗಿ ಕಲಿಯುವ ಅವಶ್ಯಕತೆ ಇದೆ ಎಂದರು.

ಬಿ ಸಿ ಎ/ ಸಿ ಎಸ್ ವಿಭಾಗದ ಮುಖ್ಯಸ್ಥರು ಶ್ರೀಮುರುಳಿಧರವರು, ವಾಣಿಜ್ಯಶಾಸ್ತ್ರ ವಿಭಾಗದ ಲಕ್ಷ್ಮಿ ರಂಗನಾಥ್, ಐಕ್ಯೂ ಏ ಸಿ ಸಂಚಾಲಕರಾದ ಶ್ರೀವಿಜಯಕುಮಾರ್ ಎನ್ ಸಿ ಡಾ. ಪ್ರದೀಪ್ ಕುಮಾರ್. ಡಾ. ದಾಕ್ಷಾಯಿಣಿ ಡೋಂಗ್ರೆ ಹಾಗೂ ಬೋಧಕ/ ಬೋಧಕೇತ ತರರು ಹಾಜರಿದ್ದರು.

ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ನಡೆದ ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಸ್ಕಿಲ್ಸ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ವಾರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉದ್ಘಾಟಿಸಲಾಯಿತು ಇಂದಿನಿಂದ ಸತತ 15 ದಿನಗಳು ಮದ್ಯಾಹ್ನ 2:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಡಿಜಿಟಲ್ ಸ್ಕಿಲ ಬಗ್ಗೆ ಪ್ರಾಯೋಗಿಕ ತರಗತಿಗಳು ಮತ್ತು ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಪಿಜಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಇದೇ ಸಂದರ್ಭದಲ್ಲಿ ಸೂಚಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಖರೀದಿಸಲು ನೋಂದಣಿ ಆರಂಭ

Published

on

ಸುದ್ದಿದಿನ,ದಾವಣಗೆರೆ:ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಸಾಮಾನ್ಯ ಪ್ರತಿ ಕ್ವಿಂಟಾಲ್ ರೂ.2300 ಹಾಗೂ ಎ ಗ್ರೇಡ್ ಪ್ರತಿ ಕ್ವಿಂಟಾಲ್‍ಗೆ ರೂ.2320 ರಂತೆ ಹಾಗೂ ಪ್ರತಿ ಕ್ವಿಂಟಾಲ್‍ಗೆ ರಾಗಿಗೆ ರೂ.4290 ರಂತೆ ಖರೀದಿಸಲು ತಾಲ್ಲೂಕು ಕೇಂದ್ರಗಳಲ್ಲಿ ನೊಂದಣಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ.

ನೋಂದಣಿ ಕೇಂದ್ರಗಳು

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ದಾವಣಗೆರೆ , ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಹೊನ್ನಾಳ್ಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಜಗಳೂರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಹರಿಹರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಚನ್ನಗಿರಿ ಇಲ್ಲಿ ಕೃಷಿ ಇಲಾಖೆಯವರು ಸಿದ್ಧಪಡಿಸಿದ ಫ್ರೂಟ್ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು. ಒಂದು ವೇಳೆ ಫ್ರೂಟ್ ತಂತ್ರಾಂಶದಲ್ಲಿ ತೊಂದರೆ ಇದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಲು ತಿಳಿಸಿದೆ. ನೊಂದಣಿ ಆರಂಭವಾಗಿದ್ದು 2025 ರ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಖರೀದಿಸಲಾಗುವುದು.

ರೈತರು ಕೃಷಿ ಇಲಾಖೆ ನೀಡಿರುವ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಫೂಟ್ ನೊಂದಣಿ ಕೇಂದ್ರಕ್ಕೆ ಬಂದು ಬಯೋಮೆಟ್ರಿಕ್ ಸಾಧನದ ಮುಖಾಂತರ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಫೂಟ್ಸ್ ದತ್ತಾಂಶದಲ್ಲಿ ರೈತರು ನೀಡಿರುವ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ ನೇರವಾಗಿ ರೈತರ ಖಾತೆಗೆ ಹಣ ಸಂದಾಯ ಮಾಡಲಾಗುವುದು. ಆದ್ದರಿಂದ ರೈತರು ಬ್ಯಾಂಕ್ ಖಾತೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವುದನ್ನು ಮತ್ತು ಎನ್‍ಪಿಸಿಎಲ್ ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಖರೀದಿ ಕೇಂದ್ರಕ್ಕೆ ಆಧಾರ್ ಕಾರ್ಡ್, ಪಹಣಿ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ನೀಡಬೇಕು.

ರೈತರು ತಾವು ನೀಡುವ ಎಲ್ಲಾ ದಾಖಲಾತಿಗಳಲ್ಲಿಯೂ ಒಂದೇ ಹೆಸರು ನಮೂದಾಗಿರತಕ್ಕದ್ದು, ಮತ್ತು ರಾಗಿ ತಂದು ಖರೀದಿ ಕೇಂದ್ರದಲ್ಲಿ ರಾಶಿ ಹಾಕಬೇಕು. ರಾಗಿ ಗುಣಮಟ್ಟ ಪರಿಶೀಲಿಸಲು ನೇಮಿಸಲ್ಪಟ್ಟ ಗ್ರೇಡರ್ಸ್ ದಾಸ್ತಾನಿನ ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ಗುಣಮಟ್ಟವೆಂದು ಧೃಢಪಟ್ಟರೆ ಮಾತ್ರ ಖರೀದಿಸಲಾಗುವುದು. ಗುಣಮಟ್ಟ ಸರಿಯಿಲ್ಲವೆಂದು ದೃಢಪಡಿಸಿದ್ದಲ್ಲಿ ರೈತರು ತಮ್ಮ ಸ್ವಂತ ಖರ್ಚಿನಿಂದ ಹಿಂದಕ್ಕೆ ತೆಗೆದುಕೊಂಡು ಹೋಗಬೇಕು.

ಪ್ರತಿ ರೈತರಿಂದ ಪ್ರತಿ ಎಕರೆಗೆ ರಾಗಿ 10.00 ಕ್ವಿಂಟಾಲ್ ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಮತ್ತು ರೈತರಿಂದ ಭತ್ತವನ್ನು ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಟ 50 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುವುದು. ಖರೀದಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ತಹಶೀಲ್ದಾರರು, ಉಪವಿಭಾಗಾಧಿಕಾರಿ, ಜಂಟಿ ನಿರ್ದೇಶಕರು (ಆಹಾರ), ಹಾಗೂ ಕೃಷಿ ಮಾರುಕಟ್ಟೆ ಅಧಿಕಾರಿಗಳ ಗಮನಕ್ಕೆ ತರಬಹುದು. ಅಥವಾ ದೂರವಾಣಿ ಸಂಖ್ಯೆ -08192-296770 ಗೆ ಕರೆಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನ ; ನಾಳೆ ಸರ್ಕಾರಿ ರಜೆ ಘೋಷಣೆ

Published

on

ಸುದ್ದಿದಿನಡೆಸ್ಕ್:ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿದೆ. ನಾಳೆ ಅವರ ಹುಟ್ಟೂರಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಒಂದು ದಿನ ಸರ್ಕಾರಿ ರಜೆಯನ್ನು ಘೋಷಿಸಿ ಡಿಸಿಎಂ ಡಿ.ಕೆ ಶಿವಕುಮಾ‌ರ್ ಆದೇಶಿಸಿದ್ದಾರೆ.

ಕರ್ನಾಟಕ ರಾಜಕಾರಣದ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು ನಸುಕಿನ ಜಾವ 2:30ರ ಸುಮಾರಿಗೆ ನಿಧನರಾಗಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ನಾಳೆ ಬೆಳಗಾವಿ ಸೌಧದಲ್ಲಿ ನಡೆಯ ಬೇಕಾಗಿದ್ದ ಕಲಾಪಗಳನ್ನು ಗುರುವಾರಕ್ಕೆ ಮುಂದೂಡಲಾಗಿದೆ.

ವಯೋಸಹಜ ಅನಾರೋಗ್ಯದ ಕಾರಣ ಅವರು ಇತ್ತೀಚೆಗಷ್ಟೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದರು. ಆದಾಗ್ಯೂ ನಂತರ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು.

ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಮೃತರ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2009 ರಿಂದ 2012ರ ಅಕ್ಟೋಬರ್ 28ರವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಸ್. ಎಂ. ಕೃಷ್ಣ ಅವರು, 2004ರಿಂದ 2008ರವರೆಗೆ ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

1999ರ ಅಕ್ಟೋಬರ್ 11ರಿಂದ 2004ರ ಮೇ 28ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಎಸ್. ಕೃಷ್ಣ ಅವರು, ಉಪಮುಖ್ಯಮಂತ್ರಿಯಾಗಿ, ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಹಿರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು, ರಾಜಕೀಯ ನಿವೃತ್ತಿಯ ಅಂಚಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending