ನೆಲದನಿ
ನೆಲನುಡಿಗೆ ದನಿಯಾದ ಡಾ. ಎಂ.ಜಿ ಈಶ್ವರಪ್ಪ ಅವರ ಸಾಹಿತ್ಯ ಮತ್ತು ಕಲಾ ಬದುಕಿನ ಸುತ್ತ
ಭಾರತೀಯ ಸಂಸ್ಕøತಿಯು ನೆಲಮೂಲ ಬದುಕಿನೊಂದಿಗೆ ಅನುಸಂಧಾನಗೊಂಡು, ನೆಲದ ಸೊಗಡು ಮತ್ತು ಕಸುವನ್ನು ತನ್ನ ಜೀವಾಳವಾಗಿಸಿಕೊಂಡಿದೆ. ಇಂತಹ ನೆಲಮೂಲ ಸಂಸ್ಕøತಿಯ ಜೀವಾಳದಂತಿರುವ ಜನಪದ ಸಾಹಿತ್ಯಕ್ಕೆ ಕಸುವು ನೀಡಿ, ತಮ್ಮ ಬದುಕಿನ ಭಾಗವೆಂಬಂತೆ ಕಾಪಾಡಿಕೊಂಡು ಬಂದವರು ಈ ನಾಡಿನ ಮೂಲನಿವಾಸಿಗಳು. ಜನಪದ ಸಾಹಿತ್ಯವು ಸಾಮಾನ್ಯ ಜನತೆಯ ಬದುಕಿನಲ್ಲಿ ಮಹತ್ತರವಾದ ಸ್ಥಾನಮಾನವನ್ನು ಪಡೆದುಕೊಂಡಿದೆ. ನಮ್ಮ ಜನಪದರು ಅಕ್ಷರವಂಚಿತರಾದರೂ ಶಿಕ್ಷಿತವರ್ಗದ ಕಟ್ಟುಪಾಡುಗಳಿಗೆ ಪ್ರತಿರೋಧ ಒಡ್ಡುವ ಮೂಲಕವಾಗಿ ತಮ್ಮದೆ ಆದ ಪರ್ಯಾಯ ಬದುಕನ್ನು ರೂಪಿಸಿಕೊಂಡು, ತಮ್ಮ ವಿಶ್ವಭ್ರಾತೃತ್ವದ ಮೌಲ್ಯಗಳನ್ನು ಜನ ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕವಾಗಿ ಪಸರಿಸಿಕೊಂಡು ಬಂದಿದ್ದಾರೆ. ಇಂದಿನ ಜಾಗತೀಕರಣ, ಔದ್ಯೋಗಿಕರಣ ಹಾಗೂ ಉದಾರೀಕರಣದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಎಲ್ಲಾ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಇಲ್ಲಿನ ಜನ ಸಾಹಿತ್ಯದಲ್ಲಿದೆ. ಇಂತಹ ಜನ ಅಥವಾ ಜನಪದ ಸಾಹಿತ್ಯವನ್ನು ಯಾವುದೇ ಅಕಾಡೆಮಿಕ್ ಶಿಸ್ತಿಗೆ ಒಳಪಡದೆ ನಮ್ಮ ಜನಪದರು ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಶಿಷ್ಟ ಸಾಹಿತ್ಯದ ಎದುರು ಸ್ಪರ್ಧೆಗೊಳ್ಳದೆ ಮೂಲೆಗುಂಪಾಗಿದ್ದ ಜನಪದ ಸಾಹಿತ್ಯವನ್ನು ಸಮಾಜದ ಮುನ್ನೆಲೆಗೆ ತಂದು, ಅದರ ಆಳ ಅಗಲ ಹಾಗೂ ಕಸುವನ್ನು ಗುರುತಿಸುವ ನೆಲೆಯಲ್ಲಿ ನಮ್ಮ ನೆಲದ ವಿದ್ವಾಂಸರು ಅವಿರತ ಶ್ರಮಿಸಿದ್ದಾರೆ.
ಇಂತಹ ಅಥವಾ ಜನ ಸಾಹಿತ್ಯಕ್ಕೆ ದನಿಯಾದವರಲ್ಲಿ ಡಾ.ಎಂ.ಜಿ ಈಶ್ವರಪ್ಪನವರು ಒಬ್ಬರಾಗಿದ್ದಾರೆ.
ಶೀಯುತ ಎಂ.ಜಿ ಈಶ್ವರಪ್ಪನವರು ಶಿವಮೊಗ್ಗ ಜಿಲ್ಲೆಯ ಹಾಡೊನಹಳ್ಳಿ ಗ್ರಾಮದಲ್ಲಿ ಶ್ರೀಮತಿ ಗಿರಿಜಮ್ಮ ಶ್ರೀ ರುದ್ರಪ್ಪ ದಂಪತಿಗಳ ಪುತ್ರರಾಗಿ ಜನಿಸಿದರು. ಶ್ರೀಯುತರ ತಂದೆಯವರಾದ ರುದ್ರಪ್ಪನವರು ಕೃಷಿ ಮೂಲ ಕುಟುಂಬದವರಾಗಿದ್ದು, ಇವರ ಪ್ರೇರಣೆಯು ಎಂ.ಜಿ ಈಶ್ವರಪ್ಪನವರ ಮೇಲೆ ಸಾಕಷ್ಟು ಪ್ರಭಾವ ಬೀರಿತು. ಬಾಲ್ಯದ ದಿನಗಳಿಂದಲೂ ಕೃಷಿ ಚಟುವಟಿಕೆಗಳನ್ನು ಹತ್ತಿರದಿಂದ ನೋಡಿದ ಇವರು, ಈ ಕೃಷಿ ಕಾರ್ಯಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದರು. ಶಾಲಾ ಶಿಕ್ಷಣದಲ್ಲಿನ ಆಸಕ್ತಿಯೊಂದಿಗೆ, ಬಿಡುವಿನ ವೇಳೆಯಲ್ಲಿ ಕೃಷಿಯ ವಿವಿಧ ಕಾರ್ಯಗಳಾದ ಕುಂಟೆ ಹೊಡೆಯುವ, ಜಾನುವಾರುಗಳನ್ನು ಸಾಕುವ ಕಾಯಕದಲ್ಲಿ ತಲ್ಲಿನರಾಗಿರುತ್ತಿದ್ದರು. ಇವರು ಪದವಿ ಶಿಕ್ಷಣವನ್ನು ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿ, ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಪೂರೈಸಿದರು. ಈ ಅವಧಿಯಲ್ಲಿ ಇವರಿಗೆ ಕರಗತವಾಗಿದ್ದ ಜಾನಪದ ಹಾಗೂ ಕೃಷಿ ಜ್ಞಾನವನ್ನು ಸೂಕ್ಷ್ಮವಾಗಿ ಗಮನಿಸಿದ ಹೆಸರಾಂತ ಜಾನಪದ ವಿದ್ವಾಂಸರಾದ ಜಿ.ಶಂ.ಪರಮಶಿವಯ್ಯನವರು ‘ವ್ಯವಸಾಯ ಜಾನಪದ’ ಎಂಬ ವಿಷಯದ ಕುರಿತಾಗಿ ಪಿಎಚ್.ಡಿ ಅಧ್ಯಯನ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿದರು. ಇವರ ಒತ್ತಾಸೆ ಹಾಗೂ ತನ್ನಲ್ಲಿ ಅಂತರ್ಗತವಾಗಿದ್ದ ಕೃಷಿ ಮತ್ತು ಜಾನಪದ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಅಧ್ಯಯನ ನಡೆಸಿದರು. ಜಾನಪದ ಲೋಕದ ಕೃಷಿಯ ಮಹತ್ತು ಹಾಗೂ ಅದರ ಜೀವಪರ ಧೋರಣೆಗಳನ್ನು ಗುರುತಿಸುವ ಮೂಲಕ ಜಾನಪದ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡುವ ಮುಖಾಂತರ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದರು. ಶ್ರೀಯುತ ಎಂ.ಜಿ ಈಶ್ವರಪ್ಪನವರಿಗೆ ಬಾಲ್ಯದ ದಿನಗಳಿಂದಲೂ ಕೃಷಿ ಹಾಗೂ ಜಾನಪದ ಕ್ಷೇತ್ರದ ಕುರಿತು ಹೆಚ್ಚು ಪ್ರೇರಣೆಯಾದವರು ಇವರ ದೊಡ್ಡಪ್ಪನವರಾದ ಶ್ರೀ ಮಲ್ಲಪ್ಪನವರು. ಜಾನಪದದ ಗಣಿಯಂತಿದ್ದ ಇವರು ದೇಶಿ ಸೊಗಡನ್ನು ಮೈಗೂಡಿಸಿಕೊಂಡು, ತಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಸನ್ನಿವೇಶಗಳ ಕುರಿತು ಹಲವಾರು ಕಥೆ, ಪುರಾಣ ಹಾಗೂ ಐತಿಹ್ಯಗಳನ್ನು ತಮ್ಮಲ್ಲಿ ಕರಗತ ಮಾಡಿಕೊಂಡಿದ್ದರು. ಇವರಲ್ಲಿ ಕರಗತವಾದ ಈ ಕಲೆಯನ್ನು ಒಂದೊಂದಾಗಿಯೇ ಸಂದರ್ಭಾನುಸಾರವಾಗಿ ಇವರ ಮುಂದೆ ಪ್ರಸ್ತಾಪಿಸುತ್ತಿದ್ದರು. ಬಾಲ್ಯದ ದಿನಗಳಿಂದಲೂ ತಮ್ಮ ದೊಡ್ಡಪ್ಪನವರಿಂದ ಕಲಿತ ಈ ಪಾಠವು ಮುಂದೆ ಇವರ ಜಾನಪದ ಅಧ್ಯಯನದ ಸಂದರ್ಭದಲ್ಲಿ ಹೆಚ್ಚು ಆಪ್ತವಾಗತೊಡಗಿತು. ಈ ಎಲ್ಲಾ ಪಾಠಗಳು ಮುಂದೊಂದು ದಿನ ಜಾನಪದ ಕ್ಷೇತ್ರದ ವಿದ್ವತ್ತಿಗೆ ದಾರಿ ದೀಪವಾದವು. ಹೀಗಾಗಿ ಶ್ರೀಯುತ ಎಂ.ಜಿಯವರ ಜಾನಪದ ವಿದ್ವತ್ತಿಗೆ ಅವರ ದೊಡ್ಡಪ್ಪನವರು ಸಾಕಷ್ಟು ಪ್ರೇರಣೆಯಾಗಿ ನಿಂತಿದ್ದಾರೆ.
ಜಾನಪದ ವಿದ್ವತ್ತ್ ವಲಯದಲ್ಲಿ ಶ್ರೀಯುತ ಎಂ.ಜಿ ಈಶ್ವರಪ್ಪನವರದು ಬಹುದೊಡ್ಡ ಹೆಸರು. ಬಹುಮುಖಿ ಪ್ರತಿಭೆಯುಳ್ಳ ಇವರು ತಮ್ಮ ಅಧ್ಯಯನ ವಿಷಯಕ್ಕೆ ಮಾತ್ರ ಸೀಮಿತಗೊಳ್ಳದೆ, ಸಾಹಿತ್ಯ ವಲಯದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಬ್ಬ ಅಧ್ಯಯನಕಾರ, ವಿದ್ವಾಂಸ, ಒಬ್ಬ ಚಿಂತಕ ಕೇವಲ ಅಧ್ಯಯನದಲ್ಲಿ ಕಾರ್ಯಪ್ರವೃತ್ತವಾದಾಗ ಅಲ್ಲಿನ ಆಳ ಅಗಲ ತಿಳಿಯುವುದಿಲ್ಲ. ಅಧ್ಯಯನದ ಜೊತೆ ಜೊತೆಯಲ್ಲಿ ತಾನು ಅಧ್ಯಯನ ಮಾಡುವ ವಿಷಯದ ಒಂದು ಭಾಗವಾಗಿ ಬೆರೆತಾಗ, ತನ್ನನ್ನು ಆ ಕ್ಷೇತ್ರದ ಪ್ರತಿನಿಧಿಯಾಗಿ ಗುರುತಿಸಿಕೊಂಡಾಗ ಮಾತ್ರವೇ ಒಂದು ಕ್ಷೇತ್ರದ ಸ್ಷಷ್ಟವಾದ ಚಿತ್ರಣವನ್ನು ಅರಿಯುವುದಕ್ಕೆ, ಅರಿತಿರುವುದನ್ನು ಸಂವೇದನಾತ್ಮಕ ನೆಲೆಯಲ್ಲಿ ಕಟ್ಟಿಕೊಡುವುದಕ್ಕೆ ಸಹಕಾರಿಯಾಗುತ್ತದೆ. ಈ ನೆಲೆಯಲ್ಲಿ ತಾನು ಆಯ್ದುಕೊಂಡ ಪ್ರತಿಯೊಂದು ಕ್ಷೇತ್ರದೊಂದಿಗೆ ಬೆರೆತು ದುಡಿಮೆ ಮಾಡಿದ ಕೀರ್ತಿ ಶ್ರೀಯುತ ಎಂ.ಜಿಯವರಿಗೆ ಸಲ್ಲುತ್ತದೆ. ತಾನು ಅಧ್ಯಯನಕ್ಕೆ ಆಯ್ದುಕೊಂಡ ಜಾನಪದ, ಕೃಷಿ, ನಾಟಕ, ರಂಗಭೂಮಿ, ಸಾಹಿತ್ಯ, ಸಂಸ್ಕøತಿ, ಅಧ್ಯಾಪನ, ಶೈಕ್ಷಣಿಕ ಶಿಸ್ತು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿರುವ ಇವರು, ಈ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕವಾಗಿ ವಿಶಿಷ್ಟವಾದ ಅನುಭವವನ್ನು ಪಡೆದುಕೊಂಡಿದ್ದಾರೆ. ಮಣ್ಣಿನೊಂದಿಗೆ ಬೆರೆತಾಗ ಮಾತ್ರ ಮಣ್ಣಿನ ಸೊಗಡು ತಿಳಿಯುವುದು ಎನ್ನುವಂತೆ ಈ ಎಲ್ಲಾ ವಿದ್ವತ್ತ್ ಕ್ಷೇತ್ರಗಳ ಮಣ್ಣಿನ ವಾಸನೆಯನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ.
ಶ್ರೀಯುತ ಎಂ.ಜಿ ಈಶ್ವರಪ್ಪನವರು ಜಾನಪದ ವಿದ್ವಾಂಸರಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದವರು. ‘ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ’ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದ ಇವರು, ಇಲ್ಲಿ ದೇಶಿ ಕೃಷಿ ಪದ್ಧತಿಯ ಮಹತ್ವವನ್ನು ಎತ್ತಿಹಿಡಿದಿದ್ದಾರೆ. ಹಾಗೇಯೆ ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದಂತಹ ಹಲವಾರು ವಿಷಯಗಳ ಕುರಿತು ಅಧ್ಯಯನ ನಡೆಸಿ, ಸಾಕಷ್ಟು ಲೇಖನ ಹಾಗೂ ಕೃತಿಗಳನ್ನು ಸಾಹಿತ್ಯ ವಲಯಕ್ಕೆ ನೀಡಿದ್ದಾರೆ. ಇವರ ಜಾನಪದ ಕೃತಿಗಳಲ್ಲಿ ‘ಮ್ಯಾಸಬೇಡರು’ ಎಂಬ ಕೃತಿಯು ಇವರ ಮೊದಲ ಅಧ್ಯಯನ ಕೃತಿಯಾಗಿದೆ. ಹಾಗೆಯೇ ಬೇಸಾಯ ಪದ್ಧತಿ, ನಮ್ಮ ಬೇಸಾಯ, ಬಂಗಾರ ಕೂದಲ ಜೈರಾಣಿ, ಜಾನಪದ ಇಬ್ಬನಿಗಳು ಎಂಬ ಕೃತಿಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಜಾನಪದಕ್ಕೆ ಸಂಬಂಧಿಸಿದ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಸುಮಾರು ನಲವತ್ತಕ್ಕೂ ಹೆಚ್ಚು ಲೇಖನಗಳನ್ನು ನಾಡಿನ ವಿವಿಧ ಪತ್ರಿಕೆಗಳನ್ನು ಪ್ರಕಟಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಶ್ರೀಯುತರಿಗೆ ಜಾನಪದ ಕ್ಷೇತ್ರದಲ್ಲಿನ ವಿಶೇಷ ಕಾಳಜಿಯಿಂದಾಗಿ ಜಾನಪದ ವಿದ್ವತ್ತ್ ಲೋಕದಲ್ಲಿ ಇವರು ತಮ್ಮದೆ ಆದ ಹೆಸರು ಗಳಿಸಿದ್ದಾರೆ.
ಶ್ರೀಯುತರು ಜಾನಪದ ಕ್ಷೇತ್ರ ಮಾತ್ರವಲ್ಲದೆ, ಸಾಹಿತ್ಯ ಮತ್ತು ನಾಟಕ ವಲಯದಲ್ಲಿಯೂ ಸಾಕಷ್ಟು ಸೇವೆಯನ್ನು ಸಲ್ಲಿಸುವ ಮೂಲಕ ಹೆಸರು ಗಳಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ನಾಟಕ ಕ್ಷೇತ್ರದಲ್ಲಿ ವಿಶೇಷವಾದ ಆಸಕ್ತಿಯನ್ನು ಮೈಗೂಡಿಸಿಕೊಂಡಿದ್ದ ಇವರು, ಕನ್ನಡ ಸಾಹಿತ್ಯದಲ್ಲಿ ಪ್ರಕಟಗೊಂಡ ಸಾಕಷ್ಟು ನಾಟಕಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಹಾಗೆಯೇ ನಾಟಕ ಕಲಾವಿದರಾಗಿಯೂ ಬಣ್ಣದ ಬದುಕಿನೊಳಗೆ ತಮ್ಮನ್ನು ಗುರುತಿಸಿಕೊಂಡಿರುತ್ತಾರೆ. 1979 ರಲ್ಲಿ ಕೇರಳದ ತ್ರಿಚೂರಿನಲ್ಲಿ ವಿಶ್ವವಿದ್ಯಾಲಯದ ಧನಸಹಾಯ ಆಯೋಗವು ಸ್ಕೂಲ್ ಆಫ್ ಡ್ರಾಮಾದ ವತಿಯಿಂದ ನಡೆಸಿದ ರಾಷ್ಟ್ರಮಟ್ಟದ ರಂಗಭೂಮಿ, ರಂಗನಟನೆ, ರಂಗ ನಿರ್ದೇಶನ ಕುರಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ನಾಟಕದ ಕುರಿತು ಅನುಭವವನ್ನು ಪಡೆದುಕೊಂಡಿರುತ್ತಾರೆ. ಹಾಗೆಯೇ 1983 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ನೀಡಿದ ಧನಸಹಾಯ ಪಡೆದು ರಂಗದಿಗ್ಗಜರಾದ ಶ್ರೀ ಬಿ.ವಿ. ಕಾರಂತರ ಮಾರ್ಗದರ್ಶನದಲ್ಲಿ ಮಧ್ಯಪ್ರದೇಶದ ಭೂಪಾಲ್ ಮತ್ತು ದೇಹಲಿಯಲ್ಲಿ ರಂಗಭೂಮಿ ಕುರಿತು ಅಧ್ಯಯನ ಕೈಗೊಂಡಿರುತ್ತಾರೆ. ಇಷ್ಟೇ ಅಲ್ಲದೆ, 1979 ರಲ್ಲಿ ಹೆಗ್ಗೋಡಿನಲ್ಲಿ ನಡೆದ ‘ಚಲನಚಿತ್ರ ಸಹೃದಯ ಶಿಬಿರ’ ಹಾಗೂ 1983ರಲ್ಲಿ ನಾಟಕ ಅಕಾಡೆಮಿ ಕೊಂಡಾಜಿಯಲ್ಲಿ ನಡೆಸಿದ ನಾಟಕ ರಚನಾ ಶಿಬಿರದಲ್ಲಿ ಪಾಲ್ಗೊಂಡು ನಾಟಕ ಮತ್ತು ರಂಗಭೂಮಿ ಕ್ಷೇತ್ರದ ಬಗೆಗೆ ವಿದ್ವತ್ತನ್ನು ಗಳಿಸಿರುತ್ತಾರೆ. ನಾವು ಈ ಹಿಂದೆ ಗುರುತಿಸಿದಂತೆ ಶ್ರೀಯುತ ಎಂ.ಜಿಯವರು ಕೇವಲ ಅಧ್ಯಯನಕಾರರಾಗಿ ಗುರುತಿಸಿಕೊಂಡವರಲ್ಲ. ತಾವು ಅಧ್ಯಯನ ಮಾಡಿದ ಕ್ಷೇತ್ರದೊಳಗೆ ಬೆರೆತು ಬಂದವರು. ಇದಕ್ಕೆ ನಿದರ್ಶನ ಎನ್ನುವಂತೆ ನಾಟಕ ಹಾಗೂ ರಂಗಭೂಮಿಯ ಅಧ್ಯಯನ ಜೊತೆಯಲ್ಲಿ ರಂಗನಟರಾಗಿಯೂ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ.
ದಾವಣಗೆರೆಯ ಪ್ರತಿಷ್ಠಿತ ಸಾಹಿತ್ಯಕ ಮತ್ತು ಸಾಂಸ್ಕøತಿಕ ಸಂಸ್ಥೆಯಾದ ‘ಪ್ರತಿಮಾಸಭಾ’ದ ರಂಗಶಿಬಿರದಲ್ಲಿ ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡು, ಮೆರವಣಿಗೆ, ಈಡಿಪಸ್, ಸಂಕ್ರಾಂತಿ, ಸಂತೆಯಲ್ಲಿ ನಿಂತ ಕಬೀರ, ಸೆಜುವಾನಿನ ಸಾಧ್ವಿ, ಕೊಡೆಗಳು ಹಾಗೂ ಮುಂತಾದ ನಾಟಕಗಳಲ್ಲಿ ತಮ್ಮ ನಟನೆಯನ್ನು ಪ್ರದರ್ಶಿಸಿರುತ್ತಾರೆ. ಹಾಗೆಯೇ ಜಾತ್ರೆ, ಸಾಯೋ ಆಟ, ಅಪ್ಪ, ಕಡೇಮನೆ ಕಡೇಗಲ್ಲಿ, ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಮಾರೀಚನ ಬಂಧುಗಳು, ಇಲಿಬೋನು, ನಾಗನ ಕತೆ ಮುಂತಾದ ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಶ್ರೀಯುತರು ನಾಟಕ ಮತ್ತು ರಂಗಭೂಮಿ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಮತ್ತು ನಿಸ್ವಾರ್ಥ ಸೇವೆಗೆ ಹಲವಾರು ಪುರಸ್ಕಾರಗಳು ಲಭಿಸಿವೆ. ಇವರ ‘ನಾಗನ ಕತೆ’ ನಾಟಕಕ್ಕೆ ಸಾಹಿತ್ಯ ಪರಿಷತ್ತು ನಡೆಸಿದ ಅಖಿಲ ಕರ್ನಾಟಕ ಮಕ್ಕಳ ಸಮ್ಮೇಳನದಲ್ಲಿ ಪ್ರಥಮ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ನಾಟಕ ಮತ್ತು ರಂಗಭೂಮಿ ಇವರ ಅಧ್ಯಯನ ಕ್ಷೇತ್ರ ಮಾತ್ರವಾಗಿರದೆ, ಹವ್ಯಾಸ ಮತ್ತು ಅಭಿರುಚಿಯ ತಾಣವಾಗಿದೆ. ನಾಟಕ ಮತ್ತು ರಂಗಭೂಮಿಯಲ್ಲಿನ ಇವರ ವಿಶೇಷವಾದ ಕಾಳಜಿ ಹಾಗೂ ಶ್ರದ್ಧೆಯ ಫಲವಾಗಿ ಹಲವಾರು ಜಾನಪದ ವಸ್ತುಗಳನ್ನು ಕೇಂದ್ರವಾಗಿಟ್ಟುಕೊಂಡು ನಾಟಕ ರಚನೆಯಂತಹ ಕಾರ್ಯಕ್ಕೆ ಮುಂದಾಗಿ ಯಶಸ್ವಿಯನ್ನು ಪಡೆದುಕೊಂಡಿದ್ದಾರೆ. ಇದರ ಫಲವಾಗಿ ಹಲವಾರು ಜಾನಪದ ಕಲೆಗಳನ್ನು ರಂಗ ಪ್ರಯೋಗ ನಡೆಸುವ ಮೂಲಕವಾಗಿ ಜಾನಪದವನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ತಮ್ಮ ನಾಟಕ ಮತ್ತು ರಂಗಭೂಮಿಯಲ್ಲಿನ ವಿದ್ವತ್ತಿನಿಂದಾಗಿ ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರರಂತಹ ಹಲವಾರು ಪ್ರಸಿದ್ಧ ನಾಟಕಕಾರರೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿರುತ್ತಾರೆ.
ಶ್ರೀಯುತ ಎಂ.ಜಿ ಈಶ್ವರಪ್ಪನವರು ಬಾಲ್ಯದ ದಿನಗಳಿಂದಲೂ ಜಾನಪದ ಪರಿಸರದೊಳಗೆ ಬೆಳೆದುಬಂದವರು. ಹೀಗಾಗಿ ಜಾನಪದ ಅನ್ನೊದು ಇವರಿಗೆ ತನ್ನತನದ ಸೊಗಡು. ಇದು ತನ್ನತನ ಮಾತ್ರವಲ್ಲದೆ, ತಾಯ್ತನದ ಸೊಗಡು ಕೂಡ ಹೌದು. ಇಂತಹ ತಾಯ್ತನದ ಸೊಗಡನ್ನು ಮೈಗೂಡಿಕೊಂಡ ಇವರು, ಈ ಜಾನಪದ ಸೊಗಡಿನ ಮೂಲಕವೇ ಮೌಲ್ಯಯುತವಾದ ಬದುಕಿಗೆ ಅಗತ್ಯವಾದ, ಜೀವಪರವಾದ ಆಶಯಗಳನ್ನು ಎತ್ತಿಹಿಡಿಯುವ ನೆಲೆಯಲ್ಲಿ ನಾಲ್ಕು ಸಿದ್ಧಾಂತಗಳನ್ನು ಕಂಡುಕೊಂಡಿದ್ದಾರೆ. ಅವುಗಳೆಂದರೆ, ಒಂದು, ಕೈ ಕೆಸರಾದರೆ ಬಾಯಿ ಮೊಸರು. ಎರಡು, ತುಂಬಿದಕೊಡ ತುಳುಕುವುದಿಲ್ಲ. ಮೂರು, ಹಾಸಿಗೆ ಇದ್ದಷ್ಟು ಕಾಲುಚಾಚು. ನಾಲ್ಕು, ತಾಳಿದವನು ಬಾಳಿಯಾನು. ಇವು ಶ್ರೀಯುತರು ತಮ್ಮ ಜನಪದ ಬದುಕಿನ ತಾಯ್ತನದ ಸೊಗಡಿನಲ್ಲಿ ಕಂಡುಕೊಂಡ ಪ್ರಮುಖವಾದ ಸಿದ್ಧಾಂತ. ಈ ಸಿದ್ಧಾಂತಗಳು ಅತ್ಯಂತ ಸರಳವಾಗಿದ್ದು, ಸರಳವಾದ ಬದುಕಿಗೆ ದಾರಿದೀಪದಂತಿವೆ. ನಮ್ಮ ನೆಲದಲ್ಲಿ ಜೀವಪರ ಕಾಳಜಿಯನ್ನು ಮೆರೆದ ಬುದ್ಧ, ಬಸವ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರಂತಹ ಮಹಾಶಯರು ವಿವಿಧ ರೂಪದಲ್ಲಿ ಸಾರಿದ್ದು ಇದೇ ಆಶಯಗಳನ್ನು. ಇವರೆಲ್ಲರ ಸಾರವನ್ನು ಶ್ರೀಯುತ ಎಂ.ಜಿಯವರು ತಮ್ಮ ಸುತ್ತಮುತ್ತಲಿನ ಜನಪದ ಬದುಕಿನೊಳಗೆ ಈ ಜೀವಪರವಾದ ಆಶಯಗಳನ್ನು ಕಂಡುಕೊಂಡಿದ್ದಾರೆ. ಇದು ಇವರ ಜನಪದೀಯ ಸಿದ್ಧಾಂತ. ಇದು ಅನ್ಯ ಪರಿಸರ, ಅನ್ಯ ಸಂಸ್ಕøತಿಯಿಂದ ಎರವಲು ಪಡೆದಿರುವುದಲ್ಲ. ತಮ್ಮ ನಿತ್ಯದ ಜನಪದ ಬದುಕಿನೊಳಗೆ ಕಂಡುಕೊಂಡ ನೆಲದನಿಯಾಗಿದೆ. ಈ ನೆಲದನಿಯೇ ನಮ್ಮ ಜನಪದ ಬದುಕಿನ ಸಾರ.
ಶ್ರೀಯುತರು ಜಾನಪದ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ನಡೆಸುವ ಮೂಲಕವಾಗಿ ತಮ್ಮ ನೆಲದ ಸೊಗಡನ್ನು ಅರಿತವರು. ಈ ಅಧ್ಯಯನದ ಮೂಲಕವಾಗಿ ತಮ್ಮ ನೆಲದ ದನಿಯನ್ನು, ತಮ್ಮ ನೆಲದ ಸಾರವನ್ನು ಅರಿತವರು. ತಮ್ಮ ಈ ಅಧ್ಯಯನದ ಮೂಲಕ ತಾವು ಕಂಡುಕೊಂಡ ಸತ್ಯಗಳನ್ನು ವೈಜ್ಞಾನಿಕ ನೆಲೆಯಲ್ಲಿ ಗುರುತಿಸುವ ಪ್ರಯತ್ನವನ್ನು ಮಾಡಿರುತ್ತಾರೆ.
ಜಾನಪದ ಎಂದರೆ ಅವೈಜ್ಞಾನಿಕ, ಮೌಢ್ಯತೆಯಿಂದ ಕೂಡಿದ್ದು ಎಂದು ಬಿಂಬಿಸಲು ಹೊರಟಿರುವ ವೈಜ್ಞಾನಿಕ ಜಗತ್ತಿಗೆ ಜಾನಪದದಲ್ಲಿ ಅಂತರ್ಗತವಾಗಿರುವ ಮೌಲ್ಯಯುತವಾದ ಹಾಗೂ ವೈಚಾರಿಕ ಅಂಶಗಳನ್ನು ಗುರುತಿಸಿದ್ದಾರೆ. ಹಾಗೆಯೇ ಜಾನಪದ ಬದುಕು ಹಾಗೂ ಸಂಸ್ಕøತಿಯಲ್ಲಿ ಅಂತರ್ಗತವಾಗಿರುವ ಅವೈಜ್ಞಾನಿಕವಾದ ಮತ್ತು ಸಮಾಜದ ಪ್ರಗತಿಗೆ ಮಾರಕವಾದ ಅಂಶಗಳನ್ನು ಸಹ ಗುರುತಿಸುವ ಮೂಲಕ ಜಾನಪದವನ್ನು ಪರಿಷ್ಕರಣೆ ಮಾಡುವತ್ತ ತಮ್ಮ ವಿದ್ವತ್ತನ್ನು ಪ್ರದರ್ಶಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ನಮ್ಮ ಜನಪದ ಬದುಕಿನೊಳಗೆ ಅಂತರ್ಗತವಾಗಿರುವ ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಪ್ರಾಣಿ ಬಲಿಯಂತಹ ಮಾರಕ ಅಂಶಗಳನ್ನು ವಿರೋಧಿಸುವ ಮೂಲಕ, ನಮ್ಮ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವಂತಹ ಕಲೆ ಹಾಗೂ ಸಂಸ್ಕøತಿಯನ್ನು ಪೋಷಿಸುವ ಮೂಲಕವಾಗಿ ಜಾನಪದದ ಉಳಿವಿಗಾಗಿ ತಮ್ಮದೆ ಆದ ನಿಲುವುಗಳನ್ನು ಎತ್ತಿಹಿಡಿದಿದ್ದಾರೆ. ಹಾಗೆಯೇ ತಮ್ಮಲ್ಲಿ ಅಂತರ್ಗತವಾದ ವಿದ್ವತ್ತಿನಿಂದಾಗಿ ಹಲವಾರು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿರುತ್ತಾರೆ.
ಶ್ರೀಯುತರು ಜಾನಪದ, ಸಾಹಿತ್ಯ ಮತ್ತು ಸಾಂಸ್ಕøತಿಕ ವಲಯದಲ್ಲಿ ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿರುತ್ತಾರೆ. ಇದರ ಫಲವಾಗಿ 2011 ರಲ್ಲಿ ಶಿವಮೊಗ್ಗ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, 2014 ರಲ್ಲಿ ದಾವಣಗೆರೆ ಜಿಲ್ಲಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಹಾಗೆಯೇ 2017 ರಲ್ಲಿ ದಾವಣಗೆರೆ ತಾಲ್ಲೂಕು ಶ್ಯಾಗಲೆ ಗ್ರಾಮದಲ್ಲಿ ನಡೆದ ‘ಕುವೆಂಪು ನುಡಿಜಾತ್ರೆ’ಯ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಶ್ರೀಯುತರ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ. ಅವುಗಳಲ್ಲಿ ಗುಂಡ್ಮಿ ಜಾನಪದ ಪ್ರಶಸ್ತಿ, ಕು.ಶಿ. ಹರಿದಾಸಭಟ್ಟ ಪ್ರಶಸ್ತಿ, ಕರ್ನಾಟಕ ಅಕಾಡೆಮಿ ಗೌರವ ಫೆಲೋಶಿಫ್, ಕರ್ನಾಟಕ ಜಾನಪದ ಅಕಾಡೆಮಿಯ ತಜ್ಞ ಪ್ರಶಸ್ತಿ, ರಂಗಸಂಸ್ಥಾನ ಜಾನಪದ ಪ್ರಶಸ್ತಿ, ಮಹಾಲಿಂಗ ರಂಗ ಪ್ರಶಸ್ತಿಗಳು ಪ್ರಮುಖವಾಗಿವೆ. ಮಹಾತ್ಮ ಗಾಂದೀಜಿಯವರ ತತ್ವಾದರ್ಶಗಳು, ತಮ್ಮ ದೊಡ್ಡಪ್ಪನವರಾದ ಶ್ರೀ ಮಲ್ಲಪ್ಪನವರಿಂದ ಕಲಿತ ಜನಪದೀಯ ಜ್ಞಾನವನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವ ಶ್ರೀಯುತ ಡಾ.ಎಂ.ಜಿ ಈಶ್ವರಪ್ಪನವರು ಸಾಹಿತ್ಯ, ಸಾಂಸ್ಕøತಿಕ, ಬೋಧನೆ ಹಾಗೂ ಆಡಳಿತಾತ್ಮಕ ವಲಯದಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಸರಳ ಹಾಗೂ ಸಜ್ಜನಿಕೆಗೆ ಹೆಸರಾದ ಶ್ರೀಯುತರಿಂದ ಸಾಹಿತ್ಯ ಮತ್ತು ಸಾಂಸ್ಕøತಿಕ ವಲಯವು ಮತ್ತಷ್ಟು ಶ್ರೀಮಂತಿಕೆಯನ್ನು ಪಡೆಯುಂತಾಗಲಿ ಎಂಬುದು ನಮ್ಮ ಹಾರೈಕೆ.

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

-
ದಿನದ ಸುದ್ದಿ2 days agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ2 days agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ2 days agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
-
ದಿನದ ಸುದ್ದಿ2 days agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ2 days ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ2 days agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ2 days agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್
-
ದಿನದ ಸುದ್ದಿ1 day agoಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!


