ದಿನದ ಸುದ್ದಿ
ಆತ್ಮನಿರ್ಭರ ಭಾರತದ ಆತ್ಮವಂಚಕ ಮುಖಗಳು..!
- ನಾ ದಿವಾಕರ
ಒಂದು ಪ್ರಜಾಸತ್ತಾತ್ಮಕ ಗಣತಂತ್ರದ ಸಂಸದೀಯ ಪ್ರಜಾಸತ್ತೆಯ ಚೌಕಟ್ಟಿನಲ್ಲಿ , ಪ್ರಜೆಗಳಿಂದಲೇ ಚುನಾಯಿತವಾದ ಸರ್ಕಾರ ಆಡಳಿತ ನಡೆಸುತ್ತಿರುವ ದೇಶದಲ್ಲಿ, ಸಾರ್ವಭೌಮ ಪ್ರಜೆಗಳ ಒಂದು ವರ್ಗ ತನ್ನ ನ್ಯಾಯಯುತ ಹಕ್ಕುಗಳಿಗಾಗಿ ನೂರು ದಿನಗಳ ಕಾಲ ಮುಷ್ಕರ ನಡೆಸುವುದು ಪ್ರಜಾಸತ್ತೆಯ ಜೀವಂತಿಕೆಗೆ ಸಾಕ್ಷಿ. ಹಾಗೆಯೇ ಆಳುವ ವರ್ಗಗಳ ನಿಷ್ಕ್ರಿಯತೆಗೂ ಸಾಕ್ಷಿ. ಪ್ರಜಾಸತ್ತೆಯ ಜೀವಂತಿಕೆಯ ಹಿಂದೆ 220 ಜೀವಗಳ ಬಲಿದಾನ, ಲಕ್ಷಾಂತರ ರೈತರ, ಸಾವಿರಾರು ರೈತ ಕುಟುಂಬಗಳ ಬವಣೆ, ಜನಸಾಮಾನ್ಯರ ನೋವು ಅಡಗಿರುವುದನ್ನು ಗಮನಿಸಿದಾಗ ಈ ಜೀವಂತಿಕೆಯ ಔಚಿತ್ಯವೇ ಪ್ರಶ್ನಾರ್ಹವಾಗಿಬಿಡುತ್ತದೆ.
ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನೂರು ದಿನಗಳ ಕಾಲ ಬಿಸಿಲು, ಮಳೆ, ಚಳಿ ಲೆಕ್ಕಿಸದೆ, ಪ್ರಭುತ್ವದ ದಮನಕಾರಿ ನೀತಿಗಳನ್ನು ದಿಟ್ಟತನದಿಂದ ಎದುರಿಸಿ, ದೆಹಲಿಯ ಗಡಿಗಳಲ್ಲಿ ಕುಳಿತಿರುವ ಲಕ್ಷಾಂತರ ರೈತರು ಇಂದಿಗೂ ಬಸವಳಿದಿಲ್ಲ, ಅವರ ಉತ್ಸಾಹ ಕುಂದಿಲ್ಲ ಎನ್ನುವುದನ್ನು ಗಮನಿಸಿದಾಗ ಪ್ರಜಾಸತ್ತೆಯ ಉಳಿವು ಇರುವುದು ಯಾರ ಕೈಯ್ಯಲ್ಲಿ ಎನ್ನುವುದು ಸ್ಪಷ್ಟವಾಗುತ್ತದೆ. ಹೌದು, ಭಾರತದಲ್ಲಿ ಪ್ರಜಾಸತ್ತೆ ಉಳಿದಿದೆ ಎನ್ನುವುದೇ ಆದರೆ ಅದು ಈ ದೇಶದ ಶೋಷಿತ ವರ್ಗಗಳ, ದಮನಿತ ಜನಸಮುದಾಯಗಳ ಮತ್ತು ಅನ್ಯಾಯಕ್ಕೊಳಗಾದ ಶ್ರಮಜೀವಿಗಳ ದೃಢ ನಂಬಿಕೆ ಮತ್ತು ವಿಶ್ವಾಸದಿಂದ ಮಾತ್ರ.
ಪ್ರಜಾತಂತ್ರವನ್ನು ಗ್ರಾಂಥಿಕವಾಗಿ ಉಳಿಸಲು ಆಳುವ ವರ್ಗಗಳು ಪ್ರಯತ್ನಿಸುತ್ತಲೇ ಇವೆ. ಆದರೆ ಸಾಂಸ್ಥಿಕವಾಗಿ ಪ್ರಜಾಸತ್ತೆ ಶಿಥಿಲವಾಗುತ್ತಲೇ ಇದೆ. ಈ ಶಿಥಿಲ ಸಾಂಸ್ಥಿಕ ನೆಲೆಗಳನ್ನು ಬಲಪಡಿಸುವ ಹೊಣೆ ಇದೇ ಹೋರಾಟನಿರತ ಜನತೆಯ ಮೇಲಿದೆ. ಈ ದ್ವಂದ್ವದ ನಡುವೆಯೇ ಆತ್ಮನಿರ್ಭರ ಭಾರತ ಮತ್ತೊಂದು ಹೊಸ ಪರ್ವವನ್ನು ಪ್ರವೇಶಿಸುತ್ತಿದೆ.
“ ರೈತರು ನೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ, ನಮ್ಮ ಸರ್ಕಾರ ಅವರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಂಡಿಲ್ಲ ” ಎಂದು ಎದೆತಟ್ಟಿ ಹೇಳಿಕೊಳ್ಳುವ ನೈತಿಕತೆಯನ್ನು ಕೇಂದ್ರ ಸರ್ಕಾರ ಎಂದೋ ಕಳೆದುಕೊಂಡುಬಿಟ್ಟಿದೆ. ಏಕೆಂದರೆ ಈ ಮುಷ್ಕರ ನಿರತ ರೈತರು ಅಶ್ರುವಾಯು, ಜಲಫಿರಂಗಿ, ರಸ್ತೆ ಕಂದಕಗಳು, ಬೃಹತ್ ತಡೆಗೋಡೆಗಳು, ಮುಳ್ಳಿನ ಬೇಲಿಗಳು, ಪೊಲೀಸರ ಲಾಠಿ ಪ್ರಹಾರ ಮತ್ತು ಶರಮಂಚದ ಹಾಸುಗಳನ್ನೂ ದಾಟಿ ಮುನ್ನಡೆದಿದ್ದಾರೆ.
ಇಡೀ ದೇಶದ ಜನತೆ ‘ ಅನ್ನದಾತ ’ ಎಂದು ಗೌರವಿಸುವ ರೈತಾಪಿಯನ್ನು ಖಲಿಸ್ತಾನಿ, ಪಾಕಿಸ್ತಾನಿ, ದೇಶದ್ರೋಹಿ, ನಗರ ನಕ್ಸಲರು ಎಂದು ಹೀಗಳೆಯುವ ಮೂಲಕ ಅಪಮಾನಿಸುತ್ತಲೇ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ ಒಂದು ಸರ್ಕಾರ ತನ್ನ ತಣ್ಣನೆಯ ಕ್ರೌರ್ಯಕ್ಕೆ ತಾನೇ ನಾಚಿ ತಲೆ ತಗ್ಗಿಸುವಂತಾಗಿರುವುದು ಸ್ಪಷ್ಟ.
ಭಾರತದ ರೈತರ ಪಾಲಿಗೆ, ಜನಸಾಮಾನ್ಯರ ಪಾಲಿಗೆ ಮತ್ತು ಸಮಸ್ತ ಕೃಷಿ ಚಟುವಟಿಕೆಗಳ ದೃಷ್ಟಿಯಿಂದ ಮರಣ ಶಾಸನವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬ ರೈತ ಸಮುದಾಯದ ಆಗ್ರಹಕ್ಕೆ ಮಾನ್ಯತೆಯನ್ನೇ ನೀಡದೆ ಕಾಲಹರಣ ಮಾಡುತ್ತಿರುವ ಕೇಂದ್ರ ಸರ್ಕಾರ ಚಳುವಳಿಯನ್ನು ವಿಫಲಗೊಳಿಸಲು ವಿಭಿನ್ನ ವಾಮ ಮಾರ್ಗಗಳನ್ನು ಅನುಸರಿಸುತ್ತಿರುವುದು ಈ ತಣ್ಣನೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ.
ಸರ್ಕಾರ ಯಾರನ್ನು ಉದ್ದೇಶಿಸಿ ಅಥವಾ ಯಾರ ಏಳಿಗೆಗಾಗಿ ಹೊಸ ಕಾಯ್ದೆಗಳನ್ನು ಜಾರಿಗೊಳಿಸಿರುವುದೋ, ಆ ಜನಸಮುದಾಯಗಳೇ ಈ ಕಾಯ್ದೆಯ ಕರಾಳ ಸ್ವರೂಪವನ್ನು ಬಹಿರಂಗಪಡಿಸಿ, ಇದು ಹೇಗೆ ಇತರ ಜನಸಾಮಾನ್ಯರ ಜೀವನೋಪಾಯಕ್ಕೂ ಸಂಚಕಾರ ತರುತ್ತದೆ ಎನ್ನುವುದನ್ನು ನಿರೂಪಿಸಿದ ನಂತರವೂ, ಈ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂಬ ಹಠಮಾರಿ ಧೋರಣೆ ಪ್ರದರ್ಶಿಸುವುದು ಸರ್ವಾಧಿಕಾರದ ಲಕ್ಷಣ.
ಈ ಹಠಮಾರಿ ಧೋರಣೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ, ರೈತರ ಹೋರಾಟ ಮತ್ತು ಬೇಡಿಕೆಗಳನ್ನು ಬೆಂಬಲಿಸಿದವರೆಲ್ಲರೂ ದೇಶದ್ರೋಹಿಗಳು ಎಂದು ಬಿಂಬಿಸುವುದು ತಣ್ಣನೆಯ ಕ್ರೌರ್ಯದ ಅಮಾನುಷ ಸ್ವರೂಪ. ಈ ಎರಡೂ ಧೋರಣೆಗಳು ಪ್ರಜಾಸತ್ತೆಗೆ ಶೋಭಿಸುವುಂತಹುದಲ್ಲ.
ಭಾರತದ ಪ್ರಜಾತಂತ್ರ ವ್ಯವಸ್ಥೆ ಪರ್ವಕಾಲದಲ್ಲಿದೆ ಎನಿಸಲು ರೈತ ಮುಷ್ಕರವೊಂದೇ ಕಾರಣವಲ್ಲ. ಇಂದು ಸಮೂಹ ಸನ್ನಿಗೊಳಗಾದ ಮಧ್ಯಮ ವರ್ಗಗಳ ಹಿತವಲಯಗಳನ್ನು ಹೊರತುಪಡಿಸಿ, ದೇಶದ ಸಮಸ್ತ ಜನತೆ, ಶ್ರಮಜೀವಿ ವರ್ಗಗಳು, ದುಡಿಯುವ ವರ್ಗಗಳು ಮತ್ತು ಶೋಷಿತ ಸಮುದಾಯಗಳು ಅನಿಶ್ಚಿತತೆಯನ್ನು ಎದುರಿಸುತ್ತಿವೆ.
ಸಾಮಾಜಿಕ-ಆರ್ಥಿಕ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸದಿದ್ದರೆ ರಾಜಕೀಯ ಸಮಾನತೆ ಅಥವಾ ರಾಜಕೀಯ ನ್ಯಾಯ ಅರ್ಥಹೀನವಾಗುತ್ತದೆ ಎಂದು ಡಾ ಅಂಬೇಡ್ಕರ್ ಹೇಳಿರುವುದನ್ನು ಇಂದು ಮತ್ತೊಮ್ಮೆ ನೆನೆಯಬೇಕಿದೆ. ಭಾರತ ಇಂದು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಹೊಸಕಿ ಹಾಕುವ ಹೊಸ ಮಾರ್ಗವನ್ನು ಅನುಸರಿಸುತ್ತಿದೆ.
ಅಧಿಕಾರ ರಾಜಕಾರಣದ ನೆಲೆಯಲ್ಲಿ ನಿಂತು ನೋಡಿದರೆ ಇಂದು ಭಾರತ ಸುಸ್ಥಿರ ಸರ್ಕಾರ ಮತ್ತು ಸುಸ್ಥಿರ ಆಡಳಿತ ವ್ಯವಸ್ಥೆಯನ್ನು ಹೊಂದಿದೆ. ಆದರೆ ಈ ಸುಸ್ಥಿರತೆಯ ಮಂಜಿನ ಪರದೆಯನ್ನು ಸರಿಸಿ ನೋಡಿದಾಗ ಅರಾಜಕತೆ ತಾಂಡವಾಡುತ್ತಿರುವುದೂ ಕಾಣುತ್ತದೆ.
ಆಡಳಿತಾರೂಢ ಸರ್ಕಾರವನ್ನು ‘ ಭಾರತ ದೇಶ ’ಕ್ಕೆ ಸಮೀಕರಿಸುವ ಮೂಲಕ ಸರ್ಕಾರವನ್ನು, ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುವುದೇ ದೇಶದ್ರೋಹ ಎನ್ನುವ ಅಭಿಪ್ರಾಯ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಹಾಗಾಗಿಯೇ ಕೃಷಿ ಕಾಯ್ದೆಯನ್ನು ವಿರೋಧಿಸುವ ಪರಿಸರ ಹೋರಾಟಗಾರ್ತಿ ದಿಶಾ ರವಿ ರಾತ್ರೋರಾತ್ರಿ ಬಂಧನಕ್ಕೊಳಗಾಗಿ, ದೇಶದ್ರೋಹದ ಆರೋಪ ಎದುರಿಸಬೇಕಾಗುತ್ತದೆ.
ಆತ್ಮನಿರ್ಭರ ಭಾರತದಲ್ಲಿ ಜನಸಾಮಾನ್ಯರ ಬದುಕು ದುರ್ಭರವಾಗುತ್ತಿರುವುದನ್ನು ಕಂಡೂ ಕಾಣದಂತೆ ವ್ಯಕ್ತಿ ಪೂಜೆಯಲ್ಲಿ ತೊಡಗಿರುವ ಭಾರತದ ಬಹುದೊಡ್ಡ ಮಧ್ಯಮ ವರ್ಗ ಇಂದು ತಲೆತಗ್ಗಿಸಿ ನಿಲ್ಲುವಂತಾಗಿದೆ. ಜನರು ದಿನನಿತ್ಯ ಬಳಸುವ ಅವಶ್ಯ ವಸ್ತುಗಳ ಬೆಲೆಗಳು ನಿರಂತರವಾಗಿ ಏರುತ್ತಲೇ ಇವೆ. ಇಂಧನ ಬೆಲೆಗಳು ಕೈಗೆಟುಕದಂತಾಗುತ್ತಿದೆ. ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂ ಗಡಿ ದಾಟುವುದರಲ್ಲಿದೆ.
ಡೀಸೆಲ್ ಬೆಲೆಗಳು ಇದರೊಂದಿಗೆ ಪೈಪೋಟಿ ನಡೆಸುತ್ತಿವೆ. ಅಡುಗೆ ಅನಿಲ 1000ದ ಗಡಿ ದಾಟುವುದರಲ್ಲಿದೆ. ಬೇಳೆ ಕಾಳುಗಳು, ಅಡುಗೆ ಎಣ್ಣೆ ಬೆಲೆಗಳು ಗಗನಕ್ಕೇರಿವೆ. ಇದು ಮುಕ್ತ ಮಾರುಕಟ್ಟೆ ನೀತಿಯ ಪರಿಣಾಮ ಎನ್ನುವ ಸಾಮಾನ್ಯ ಪರಿಜ್ಞಾನಕ್ಕೆ ಅರ್ಥಶಾಸ್ತ್ರದ ಪರಿಣತಿಯೇನೂ ಬೇಕಿಲ್ಲ. ಭಾರತದಲ್ಲಿ ಈ ರೀತಿಯ ಬೆಲೆ ಏರಿಕೆ ಹೊಸತೂ ಅಲ್ಲ.
ಆದರೆ ಹೊಸತಾಗಿ ಕಾಣುವುದು ಮಧ್ಯಮ ವರ್ಗಗಳ ನಿಷ್ಕ್ರಿಯ ಮೌನ. ತಾವೇ ಕಟ್ಟಿ ಬೆಳೆಸಿದ ಬದುಕು ಕಟ್ಟಿಕೊಡುವ ಸಾಂಸ್ಥಿಕ ನೆಲೆಗಳು ತಮ್ಮ ಕಣ್ಣೆದುರಿನಲ್ಲೇ ಹರಾಜು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವುದನ್ನು ‘ ದೇಶದ ಒಳಿತಿಗಾಗಿ ’ ಸಹಿಸಿಕೊಳ್ಳುವುದು ಬೌದ್ಧಿಕ ದಾರಿದ್ರ್ಯದ ಸಂಕೇತ. ಸ್ವತಂತ್ರ ಭಾರತದ ಸಾರ್ವಭೌಮ ಪ್ರಜೆಗಳು ಹಿಂದೆಂದೂ ಈ ಸಹನೆ (?)ಯನ್ನು ತೋರಿರುವ ಉದಾಹರಣೆಗಳಿಲ್ಲ.
ಈ ಬೆಲೆ ಏರಿಕೆಗೆ ಕೇಂದ್ರ ಸಚಿವರು ನೀಡುವ ಕಾರಣಗಳು ಅಧಿಕಾರಸ್ಥರ ಬೌದ್ಧಿಕ ದಾರಿದ್ರ್ಯವನ್ನೂ ಪ್ರದರ್ಶಿಸುತ್ತಿದೆ. ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ಬೆಲೆಗಳನ್ನು ಹತ್ತು ರೂಗಳಿಂದ ಐವತ್ತು ರೂಗಳಿಗೆ ಏರಿಸಿ, ಜನಸಂದಣಿ ಕಡಿಮೆ ಮಾಡಲು ಬೆಲೆ ಏರಿಸಿಲಾಗಿದೆ ಎಂದು ಹೇಳುವ ರೈಲ್ವೆ ಸಚಿವರು ದೆಹಲಿಯಲ್ಲಿ ಕುಳಿತಿದ್ದಾರೆ.
ಅತಿ ಹೆಚ್ಚು ಜನರು ಪ್ರಯಾಣಿಸುವ ಪ್ಯಾಸೆಂಜರ್ ರೈಲುಗಳು ಭಾರತದ ದುಡಿಯುವ ವರ್ಗಗಳ, ಶ್ರಮಜೀವಿಗಳ ಮತ್ತು ವಲಸೆ ಕಾರ್ಮಿಕರ ಜೀವನಾಡಿಯಂತೆ. ನಿಜವಾದ ಭಾರತವನ್ನು ನೋಡಬೇಕೆಂದರೆ ಪ್ಯಾಸೆಂಜರ್ ರೈಲುಗಳಲ್ಲಿ ಓಡಾಡಬೇಕು. ಕೂಲಿನಾಲಿ ಮಾಡಲು ಊರಿಂದ ಊರಿಗೆ ಹೋಗುವ ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಇತರ ದುಡಿಯುವ ಜನರು ಅಲ್ಪ ದರದ ಪ್ಯಾಸೆಂಜರ್ ರೈಲುಗಳನ್ನೇ ಅವಲಂಬಿಸಿ ಬದುಕುತ್ತಾರೆ.
ಈ ರೈಲುಗಳ ಪ್ರಯಾಣ ದರವನ್ನೂ ಹೆಚ್ಚಿಸಲಾಗಿದ್ದು, ಅನಗತ್ಯ ಓಡಾಟ ತಪ್ಪಿಸಲು ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳುತ್ತದೆ. ರೈಲು ದರ ಹೆಚ್ಚಳಕ್ಕಿಂತಲೂ ಹೆಚ್ಚು ಕ್ರೂರ ಎನಿಸುವುದು ಸಚಿವರ ಈ ಹೇಳಿಕೆ. ಯಾವುದೇ ವಸ್ತು, ಪದಾರ್ಥ ಅಥವಾ ಸೇವೆಯ ಬೆಲೆ, ಮೌಲ್ಯ ಮಾರುಕಟ್ಟೆಯಲ್ಲಿ ಹೆಚ್ಚಾದರೆ ಅದಕ್ಕೆ ಮಾರುಕಟ್ಟೆಯ ನಿಯಮಗಳು ಮತ್ತು ಆರ್ಥಿಕ ನೀತಿಗಳು ಕಾರಣ ಎನ್ನುವುದು ಸಾಮಾನ್ಯರಿಗೂ ಅರ್ಥವಾಗುವ ಸಂಗತಿ. ಆದರೆ ಈ ಶ್ರೀಸಾಮಾನ್ಯ ಇಂದು ತನ್ನ ಪ್ರಜ್ಞೆ ಮತ್ತು ಸ್ವಂತಿಕೆಯನ್ನು ಒಂದು ನಿರ್ದಿಷ್ಟ ವ್ಯಕ್ತಿ-ಸಿದ್ಧಾಂತ(?)ಕ್ಕೆ ಅಡಮಾನ ಇಟ್ಟಿರುವುದು ದುರಂತ.
ಭಾರತದ ಸುಶಿಕ್ಷಿತ ವರ್ಗದ ಬೃಹತ್ ಸಂಖ್ಯೆಯ ಜನರು ತಮ್ಮ ಹಿತವಲಯದ ಹಿತಾನುಭವದಲ್ಲಿ ಮುಳುಗಿ ಶ್ರೀಸಾಮಾನ್ಯರ ಬವಣೆಯನ್ನು ನಿರ್ಲಕ್ಷಿಸುತ್ತಿರುವುದು ಆತ್ಮನಿರ್ಭರ ಭಾರತದ ದುರಂತಗಳಲ್ಲಿ ಒಂದು. ಕೋವಿದ್ ಲಾಕ್ ಡೌನ್ ಸಂದರ್ಭದಲ್ಲಿ ಜೀವನ ಮತ್ತು ಜೀವನೋಪಾಯದ ಬಗ್ಗೆ ಪುಂಖಾನುಪುಂಖವಾಗಿ ಭಾಷಣಗಳನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ಇಂದು ಬಹುಸಂಖ್ಯೆಯ ಜನರ ಜೀವನ ಮೂರಾಬಟ್ಟೆಯಾಗಿ, ಜೀವನೋಪಾಯದ ಮಾರ್ಗಗಳು ಮುಚ್ಚಿಹೋಗುತ್ತಿದ್ದರೂ ತಮ್ಮ ಮನದ ಮಾತುಗಳಲ್ಲಿ ಇದನ್ನು ಉಲ್ಲೇಖಿಸಲೂ ಹಿಂಜರಿಯುತ್ತಾರೆ. ಇಂದಿನ ಬೆಲೆ ಏರಿಕೆಗೆ ಏಳು ವರ್ಷದ ಹಿಂದಿನ ಸರ್ಕಾರ ಕಾರಣ ಎಂದು ಹೇಳುವ ಒಂದು ಸರ್ಕಾರ ಪಡೆಯಲು ಭಾರತ 70 ವರ್ಷ ಕಾಯಬೇಕಾಯಿತು !!!!!
ಇಂತಹ ಒಂದು ಅಪ್ರಬುದ್ಧ ಆಡಳಿತ ವ್ಯವಸ್ಥೆಯ ನಡುವೆ ಭಾರತದ ಶ್ರಮಜೀವಿಗಳು ನಿತ್ಯ ಬದುಕಿಗಾಗಿ ಹೆಣಗಾಡಬೇಕಿದೆ. ಈ ಕ್ರಮಗಳೆಲ್ಲವೂ ‘ ದೇಶದ ಹಿತಕ್ಕಾಗಿ ’ ಎನ್ನುವುದಾದರೆ ‘ ದೇಶ ’ ಎಂದರೇನು ಎಂದು ಪ್ರಶ್ನಿಸಬೇಕಾಗುತ್ತದೆ. ದೇಶವನ್ನು ಕಟ್ಟಿದ ಬೃಹತ್ ಸಾರ್ವಜನಿಕ ಉದ್ದಿಮೆಗಳು ಇಂದು ಖಾಸಗಿಯವರ ಪಾಲಾಗುತ್ತಿದೆ.
ನಷ್ಟ ಅನುಭವಿಸುತ್ತಿರುವ ಸಾರ್ವಜನಿಕ ಬ್ಯಾಂಕುಗಳನ್ನು ಲಾಭದಾಯಕ ಬ್ಯಾಂಕುಗಳೊಡನೆ ವಿಲೀನಗೊಳಿಸುವ ಮೂಲಕ ಬಲಿಷ್ಠ ಬ್ಯಾಂಕುಗಳನ್ನೂ ದುರ್ಬಲಗೊಳಿಸಲಾಗುತ್ತಿದೆ. ಮತ್ತೊಂದೆಡೆ ಲಾಭದಾಯಕ ಬ್ಯಾಂಕುಗಳನ್ನು ಖಾಸಗೀಕರಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಪಾರದರ್ಶಕತೆಯೇ ಪ್ರಾಧಾನ್ಯತೆ ಪಡೆಯಬೇಕಾದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ತೆರೆಮರೆಯಲ್ಲಿ ಆಡಳಿತ ನೀತಿಗಳನ್ನು ಜಾರಿಗೊಳಿಸುವ ವಿಕೃತಿಯನ್ನು ಕಾಣುತ್ತಿದ್ದೇವೆ. ಇದು ಸಮಸ್ತ ಭಾರತೀಯರನ್ನು ಕತ್ತಲಲ್ಲಿರಿಸುವ ತಂತ್ರ ಎಂದು ಹೇಳಬೇಕಿಲ್ಲ.
“ ವ್ಯಾಪಾರ ವಹಿವಾಟು ಸರ್ಕಾರದ ಕೆಲಸ ಅಲ್ಲ ” ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ಹಿಂದೆ ಇಡೀ ಸಾರ್ವಜನಿಕ ಉದ್ದಿಮೆಯನ್ನು ಖಾಸಗೀಕರಿಸುವ ಸೂಚನೆ ಇರುವುದನ್ನು ಗ್ರಹಿಸಬೇಕಿದೆ. ಈಗಾಗಲೇ ಬಿಪಿಸಿಎಲ್ ಹರಾಜು ಮಾರುಕಟ್ಟೆಯಲ್ಲಿದೆ, ಬಿಇಎಂಎಲ್ ಮಾರಾಟಕ್ಕೆ ಸಿದ್ಧವಾಗುತ್ತಿದೆ, ಬಿಎಸ್ಎ್ನ್ಎಸಲ್ಗೆರ ಶವಪೆಟ್ಟಿಗೆಯನ್ನು ಸಿದ್ಧಪಡಿಸಿ ಹಲವು ತಿಂಗಳುಗಳೇ ಕಳೆದಿವೆ.
ಬ್ಯಾಂಕುಗಳು ಸದ್ದಿಲ್ಲದೆ ಒಂದರೊಳಗೊಂದು ವಿಲೀನವಾಗಿ ಕಣ್ಮರೆಯಾಗುತ್ತಿವೆ. ದೇಶದ ಅತಿ ದೊಡ್ಡ ಸಾರ್ವಜನಿಕ ಉದ್ದಿಮೆ ರೈಲ್ವೆ ಇಲಾಖೆ ಹಂತ ಹಂತವಾಗಿ ಅವಸಾನ ಕಾಣುತ್ತಿದೆ. ಉದ್ದಿಮೆ, ವ್ಯಾಪಾರ, ವ್ಯವಹಾರ ಸರ್ಕಾರದ ಹೊಣೆ ಅಲ್ಲ ಎನ್ನುವ ತತ್ವವೇ ಭಾರತದ ಅರ್ಥವ್ಯವಸ್ಥೆಯ ಬುನಾದಿಯಾಗಿದ್ದಲ್ಲಿ ಭಾರತ ಎಂದೋ ಮತ್ತೊಮ್ಮೆ ಸಾಮ್ರಾಜ್ಯಶಾಹಿಗಳ ಗುಲಾಮಗಿರಿಗೆ ಒಳಗಾಗುತ್ತಿತ್ತು. ಇಂದು ಸರ್ಕಾರ ಹೆಮ್ಮೆಯಿಂದ “ ಆತ್ಮನಿರ್ಭರ ” ಭಾರತದ ಬಗ್ಗೆ ಮಾತನಾಡುವಷ್ಟು ಸಾಮರ್ಥ್ಯ ಗಳಿಸಿದ್ದರೆ ಅದಕ್ಕೆ ಆರು ದಶಕಗಳ ಸ್ವಾವಲಂಬಿ ಭಾರತವೇ ಆಧಾರ ಎನ್ನುವುದನ್ನು ಸಮೂಹ ಸನ್ನಿಗೊಳಗಾದ ವಿದ್ಯಾವಂತರು ಅರ್ಥಮಾಡಿಕೊಳ್ಳಬೇಕಿದೆ.
ತಮ್ಮ ಬದುಕಿಗೆ ಅಡಿಪಾಯ ಹಾಕಿದ, ತಾವೇ ಕಟ್ಟಿ ಬೆಳೆಸಿದ, ತಮ್ಮ ಅಪ್ಪ ಅಮ್ಮಂದಿರುವ ಕಟ್ಟಿ ಬೆಳೆಸಿದ ಮತ್ತು ತಮ್ಮ ಇಂದಿನ ಹಿತವಲಯವನ್ನು ರೂಪಿಸಲು ನೆರವಾದ ನೂರಾರು ಸಾರ್ವಜನಿಕ ಉದ್ದಿಮೆಗಳು, ಸಂಸ್ಥೆಗಳು ಇಂದು ಮಾರುಕಟ್ಟೆಯ ಶಕ್ತಿಗಳಿಗೆ ಬಲಿಯಾಗುತ್ತಿರುವುದನ್ನು ಮೌನವಾಗಿ ಸಹಿಸಿಕೊಳ್ಳುತ್ತಿರುವ ಬೃಹತ್ ಜನಸಮುದಾಯಕ್ಕೆ ಆತ್ಮಸಾಕ್ಷಿ ಇದ್ದರೆ ಇಂದಿನ ಆತ್ಮನಿರ್ಭರ ಭಾರತವನ್ನು ಎದುರಿಸಿ, ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಸಜ್ಜಾಗಬೇಕಿದೆ.
ಬಹುಸಂಖ್ಯೆಯ ಜನರ ಬದುಕು ದುರ್ಭರವಾಗಿರುವ ಆತ್ಮನಿರ್ಭರ ಭಾರತ ಮತ್ತೊಮ್ಮೆ ದೇಶವನ್ನು ಬಂಡವಾಳ ಮಾರುಕಟ್ಟೆಯ ದಾಸ್ಯಕ್ಕೆ ದೂಡುತ್ತಿರುವುದನ್ನು “ ದೇಶಭಕ್ತಿ ”ಯ ಹೆಸರಿನಲ್ಲಿ, “ ಭವಿಷ್ಯ ಭಾರತ ” ದ ಹೆಸರಿನಲ್ಲಿ ಸಮರ್ಥಿಸುವುದು ಬೌದ್ಧಿಕ ದಾರಿದ್ರ್ಯದ ಸಂಕೇತ.
ನೂತನ ಕೃಷಿ ಕಾಯ್ದೆಗಳು ಈ ದೇಶದ ರೈತರಿಗೆ ಮಾತ್ರವೇ ಅಲ್ಲ, ಜನಸಾಮಾನ್ಯರ ಬದುಕಿಗೂ ಮರಣ ಶಾಸನವಾಗುತ್ತದೆ ಎನ್ನುವ ವಾಸ್ತವವನ್ನು ಅರ್ಥಮಾಡಿಕೊಳ್ಳಲು, ಈ ಬೌದ್ಧಿಕ ದಾರಿದ್ರ್ಯದಿಂದ ಹೊರಬರಬೇಕಿದೆ. ಸರ್ಕಾರ ಸೃಷ್ಟಿಸಿರುವ ಸಮೂಹ ಸನ್ನಿಯಿಂದ ಹೊರಬರಬೇಕಿದೆ. ವಾಟ್ಸಾಪ್ ವಿಶ್ವವಿದ್ಯಾಲಯದಿಂದ ನಿರ್ಗಮಿಸಬೇಕಿದೆ.
ವಂದಿಮಾಗಧ ಭಟ್ಟಂಗಿ ಮಾಧ್ಯಮಗಳ ಸುಳಿಯಿಂದ ವಿಮೋಚನೆ ಪಡೆಯಬೇಕಿದೆ. ಹಾಗಾದಲ್ಲಿ ಮಾತ್ರ ಭಾರತದ ಭವಿಷ್ಯ ಉಜ್ವಲವಾಗಲು ಸಾಧ್ಯ. ಭಾರತ ಹೀಗಿರಲಿಲ್ಲ. ಈ ದೇಶದ ಸಾರ್ವಭೌಮ ಜನತೆ ಅಪಾಯಕ್ಕೆ ಸಿಲುಕಿದಾಗಲೆಲ್ಲಾ ಇಲ್ಲಿನ ಬೌದ್ಧಿಕ ಶಕ್ತಿಯೇ ಶತ್ರುಗಳನ್ನು ಹಿಮ್ಮೆಟ್ಟಿಸಿದೆ. ಇಂದು ಈ ಬೌದ್ಧಿಕ ಶಕ್ತಿ ತನ್ನ ಸ್ವಂತಿಕೆಯನ್ನು ಕಳೆದುಕೊಂಡಿದೆ.
ಪ್ರತಿರೋಧದ ದನಿಗಳಿಗೆ ದನಿಯಾಗುತ್ತಿರುವ ಒಂದು ಬೌದ್ಧಿಕ ವಲಯವನ್ನು ದೇಶದ್ರೋಹಿಗಳಂತೆ ಕಾಣುವ ಈ ಪ್ರಜ್ಞಾಶೂನ್ಯ ಸಮುದಾಯವೇ ಇಂದು ಭಾರತಕ್ಕೆ ಮಾರಕವಾಗಿ ಪರಿಣಮಿಸಲಿದೆ. 70 ವರ್ಷಗಳ ಸ್ವತಂತ್ರ ಇತಿಹಾಸದಲ್ಲಿ ಭಾರತ ಎಂದೂ ಇಂತಹ ಸಮೂಹ ಸನ್ನಿಯನ್ನು ಕಂಡಿರಲಿಲ್ಲ. ಈ ಮಟ್ಟಿನ ನಿಷ್ಕ್ರಿಯತೆಯನ್ನೂ ಕಂಡಿರಲಿಲ್ಲ. ಈ ನಿಷ್ಕ್ರಿಯತೆಗೆ ತದ್ವಿರುದ್ಧವಾಗಿ ದೆಹಲಿಯ ಗಡಿಯಲ್ಲಿನ ರೈತ ಹೋರಾಟ ಉಜ್ವಲ ಭಾರತದ ಕನಸುಗಳನ್ನು ಚಿಗುರಿಸುತ್ತಿದೆ.
ಆತ್ಮನಿರ್ಭರ ಭಾರತವನ್ನು ಕಾಣುವುದೇ ಆದರೆ ನೂರು ದಿನಗಳನ್ನು ಪೂರೈಸಿರುವ ಈ ರೈತ ಹೋರಾಟದಲ್ಲಿ ಕಾಣಬೇಕಿದೆಯೇ ಹೊರತು, ಆತ್ಮವಂಚಕ ವ್ಯವಸ್ಥೆಯ ಮತ್ತು ಈ ವ್ಯವಸ್ಥೆಯ ಸಮರ್ಥಕರ ರಂಗುರಂಗಿನ ಮಾತುಗಳಲ್ಲಿ ಅಲ್ಲ.
ಪ್ರಭುತ್ವದಿಂದ ಯಾವುದೇ ಪರಿಹಾರ ಮಾರ್ಗಗಳನ್ನು ಕಾಣದೆ ಒಂದು ನ್ಯಾಯಯುತ ಜನಾಂದೋಲನ ನೂರು ದಿನಗಳನ್ನು ಪೂರೈಸುವುದು ಪ್ರಜಾತಂತ್ರ ವ್ಯವಸ್ಥೆಯ ಗೆಲುವು ಎನ್ನಬಹುದಾದರೂ, ಇದು ಆಡಳಿತ ವ್ಯವಸ್ಥೆಗೆ ನಾಚಿಕೆಗೇಡಿನ ವಿಚಾರವಾಗಬೇಕು. ಸಾರ್ವಭೌಮ ಪ್ರಜೆಗಳ ದನಿಗೆ ದನಿಯಾಗದ ಒಂದು ಆಡಳಿತ ವ್ಯವಸ್ಥೆಯ ಆತ್ಮನಿರ್ಭರತೆಯ ಮತ್ತೊಂದು ಮುಖ ಆತ್ಮವಂಚನೆಯಲ್ಲಿ ಕಾಣುವಂತಾಗಿರುವುದು ನವ ಭಾರತದ ಅತಿ ದೊಡ್ಡ ದುರಂತ. ಇದು ಶತಮಾನದ ದುರಂತವೂ ಹೌದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ದಿನದ ಸುದ್ದಿ
ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.
ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.
ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.
ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ ವಿಧಾನಗಳು, ಹೊಸ ಸಂಶೋಧನಾ ಕಲ್ಪನೆಗಳ ಸೃಷ್ಟಿ ಹಾಗೂ ಟೈಯರ್-1 ಸಂಶೋಧನಾ ಲೇಖನಗಳ ಬರಹದ ಪ್ರಮುಖ ಅಂಶಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ, ಗುಣಮಟ್ಟದ ಸಂಶೋಧನೆಯೇ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ ಮತ್ತು ಜಾಗತಿಕ ಮಾನ್ಯತೆಯ ಮೂಲಾಧಾರವಾಗಿದೆ ಎಂದು ಹೇಳಿದರು.
ಸಂಶೋಧನೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಾಗಬಾರದು, ಅದು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ದಿಕ್ಕಿನಲ್ಲಿ ಸಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಪ್ರಕಟಣೆಗಳು ವಿಶ್ವವಿದ್ಯಾಲಯದ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯು ಕೆ ಮಾಂಚೆಸ್ಟರ್‌ನ ‘ಯೂನಿವರ್ಸಿಟಿ ಆಫ್ ಸ್ಯಾಲ್‌ಫೋರ್ಡ್’ನ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಡಾ. ಶಿವಕುಮಾರ ಪಿ. ಮಾತನಾಡಿ, ಸಂಶೋಧನಾ ಸಮಸ್ಯೆ ಗುರುತಿಸುವಿಕೆ, ಸಂಶೋಧನಾ ಅಂತರ (Research Gap) ಪತ್ತೆ, ಸಾಹಿತ್ಯ ಸಮೀಕ್ಷೆ, ಪ್ರಯೋಗಾತ್ಮಕ ವಿನ್ಯಾಸ (Experimental Design), ಟೈಯರ್-1 ಜರ್ನಲ್ ಲೇಖನ ಬರಹ, ಪ್ರಕಟಣಾ ನೈತಿಕತೆ ಹಾಗೂ ವಿಮರ್ಶಕರ ಅಭಿಪ್ರಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
“ಒಂದು ಉತ್ತಮ ಸಂಶೋಧನಾ ಲೇಖನದ ಯಶಸ್ಸು ಅದರ ಹೊಸತನ, ವೈಜ್ಞಾನಿಕ ವಿಧಾನ ಮತ್ತು ಸ್ಪಷ್ಟವಾದ ಪ್ರಸ್ತುತೀಕರಣದಲ್ಲಿ ಅಡಗಿದೆ. ಸಂಶೋಧಕರು ಗುಣಮಟ್ಟದ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರಕಟಣೆಗೆ ಸಿದ್ಧರಾಗಬೇಕು,” ಎಂದು ಅವರು ಕರೆ ನೀಡಿದರು.
ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು ಭಾಗವಹಿಸಿದ್ದರು. ಪೋಸ್ಟರ್ ಪ್ರಸೆಂಟೇಷನ್‌ಗಳು, ಸಂವಾದಾತ್ಮಕ ಚರ್ಚೆಗಳು ಮತ್ತು ಸಂಶೋಧನಾ ಲೇಖನ ಬರಹದ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಭವಿಷ್ಯದಲ್ಲೂ ಇಂತಹ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಲಸಚಿವ ಶ್ರೀ ಎಸ್. ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಕೆ. ರಮೇಶ್, ಡಾ. ಬಸವಣ್ಣ ಎಮ್. ಅಧ್ಯಕ್ಷರು, ಎಮ್.ಸಿ.ಎ ವಿಭಾಗ, ಡಾ. ಚಂದ್ರಕಾಂತ ಎನ್. ಅಧ್ಯಕ್ಷರು, ಕಂಪ್ಯೂಟರ್ ಸೈನ್ಸ್ ವಿಭಾಗ, ಹಣಕಾಸು ಅಧಿಕಾರಿ ಡಾ. ಆರ್. ಶಶಿಧರ್ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ದಿನದ ಸುದ್ದಿ2 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
-
ದಿನದ ಸುದ್ದಿ17 hours agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ಅಂತರಂಗ2 hours agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

