ದಿನದ ಸುದ್ದಿ
ನೈತಿಕತೆ ಜಾರುತ್ತಿದೆ ಅಂತ ತೋರಿಸಿತು ಜಾರಕಿಹೊಳಿ ಎಪಿಸೋಡು
- ಆರ್.ಟಿ.ವಿಠ್ಠಲಮೂರ್ತಿ
ಕರ್ನಾಟಕದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಹಲ ಸಚಿವರು ಕೂಡಾ ತಮ್ಮ ಸುತ್ತ ಇಂತಹ ವಿವಾದಗಳು ಸುತ್ತಿಕೊಳ್ಳಬಹುದು ಎಂಬ ಆತಂಕದಿಂದ ನ್ಯಾಯಾಲಯದ ಕಟಕಟೆ ಏರಿದ್ದಾರೆ.
ಜಾರಕಿಹೊಳಿ ಅವರ ಪ್ರಕರಣದ ಬಗ್ಗೆ ಹಲವು ರೀತಿಯ ಚರ್ಚೆಗಳಾಗುತ್ತಿವೆ.ಇದು ಬ್ಲಾಕ್ ಮೇಲ್ ಎಂಬುದರಿಂದ ಹಿಡಿದು ಮಹಿಳೆಯ ಜತೆಗಿನ ಸಂಬಂಧ ಪರಸ್ಪರ ಸಮ್ಮತಿಯದೇ ಹೊರತು ಕಿರುಕುಳ ಅಲ್ಲ ಎಂಬಲ್ಲಿಯವರೆಗೆ ಚರ್ಚೆ ಸಾಗಿದೆ. ಆದರೆ ಪ್ರಶ್ನೆ ಇರುವುದು ನೈತಿಕತೆಯದು.
ಯಾಕೆಂದರೆ ಅವರಿಗೆ ಧರ್ಮಪತ್ನಿ ಇದ್ದಾರೆ.ಧರ್ಮಪತ್ನಿ ಇರುವಾಗ ಈ ರೀತಿಯ ಸಂಬಂಧ ಸಾಧಿತವಾಗುವುದು ಸರಿಯೇ?ಎಂಬುದರಲ್ಲಿ. ಅದೇನೇ ಇರಲಿ,ಇವತ್ತು ರಮೇಶ್ ಜಾರಕಿಹೊಳಿ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆಗಳು ಒಂದು ವಿಷಯವನ್ನು ಸ್ಪಷ್ಟವಾಗಿ ಎತ್ತಿ ತೋರಿಸಿವೆ.ಅದೆಂದರೆ ನೈತಿಕತೆಯ ಚೌಕಟ್ಟನ್ನು ವ್ಯವಸ್ಥೆಯೇ ಸಡಿಲಿಸುತ್ತಾ ಬಂದಿರುವುದು.
ವಾಸ್ತವವಾಗಿ,ಇಂತಹದೊಂದು ಪ್ರಕರಣ ನಡೆದಿದೆ ಎಂಬುದು ಗೊತ್ತಾದ ಕೂಡಲೇ ನಮ್ಮ ವ್ಯವಸ್ಥೆ ರಮೇಶ್ ಜಾರಕಿಹೊಳಿ ಮಾಡಿದ್ದು ತಪ್ಪು ಎಂದು ಸ್ಪಷ್ಟವಾಗಿ ಹೇಳಬೇಕಿತ್ತು.
ಆದರೆ ರಮೇಶ್ ಜಾರಕಿಹೊಳಿ ಅವರು ಮಾಡಿದ್ದು ತಪ್ಪು ಎನ್ನುವ ಕೂಗು ಎದ್ದಾಗಲೇ,ಇದು ಕೆಲವರ ಷಡ್ಯಂತ್ರ ಎಂಬ ಅಪಸ್ವರ ಕೇಳಿ ಬಂತು.ಹಾಗೆಯೇ ಇದು ಪರಸ್ಪರ ಸಮ್ಮತಿಯ ಸಂಬಂಧ ಎಂಬ ಕೂಗು ತೇಲಿ ಬಂತು.
ಅದು ನಿಜವೂ ಇರಬಹುದು.ಆದರೆ ಪ್ರಶ್ನೆ ಇದ್ದುದು ಅಲ್ಲಲ್ಲ,ಜವಾಬ್ದಾರಿಯುತ ಸ್ಥಾನದಲ್ಲಿದ್ದ ರಮೇಶ್ ಜಾರಕಿಹೊಳಿ ಮಾಡಿದ್ದು ಸರಿಯೇ?ಎಂಬಲ್ಲಿ. ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ ಸಮಾಜದ ನೈತಿಕತೆಯ ಬೇರುಗಳು ಹೇಗೆ ಸಡಿಲವಾಗುತ್ತಾ ನಡೆದಿವೆ?ಎಂಬುದು ಸ್ಪಷ್ಟವಾಗುತ್ತದೆ.
ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಟಿ.ಸಿದ್ಧಲಿಂಗಯ್ಯ ಮಂತ್ರಿಯಾಗಿದ್ದರು.ಒಂದು ಸಂದರ್ಭದಲ್ಲಿ ಅವರ ಸಹೋದರನಿಗೆ ವಿದ್ಯುತ್ ಇಲಾಖೆಯ ಗುತ್ತಿಗೆಯೊಂದು ಸಿಕ್ಕಿತು.
ಇದನ್ನೂ ಓದಿ | ರಾಜ್ಯ ಬಜೆಟ್ | 60 ಸಾವಿರ ಮಹಿಳೆಯರಿಗೆ ಉದ್ಯೋಗ : ಸಿಎಂ ಯಡಿಯೂರಪ್ಪ
ಇದು ಗೊತ್ತಾಗುತ್ತಿದ್ದಂತೆಯೇ ಸಿದ್ಧಲಿಂಗಯ್ಯ ಅವರು ಕೆಂಗಲ್ ಹನುಮಂತಯ್ಯ ಅವರನ್ನು ನೋಡಲು ಹೋದರು.ಅವರನ್ನು ನೋಡುತ್ತಲೇ ಕೆಂಗಲ್ ಹನುಮಂತಯ್ಯ ಅವರು:ನೀವು ಬಂದೇ ಬರುತ್ತೀರಿ ಎಂದು ನನಗೆ ಗೊತ್ತಿತ್ತು ಎಂದರು. ಸಿದ್ಧಲಿಂಗಯ್ಯ ಅವರು ಮರುಮಾತನಾಡದೆ ತಮ್ಮ ರಾಜೀನಾಮೆ ಪತ್ರವನ್ನು ಅವರಿಗೆ ಸಲ್ಲಿಸಿದರು.ವಸ್ತುಸ್ಥಿತಿ ಎಂದರೆ ತಮ್ಮ ಸಹೋದರನಿಗೆ ಇಂತಹ ಕಾಂಟ್ರಾಕ್ಟು ಕೊಡಿ ಎಂದು ಸಿದ್ಧಲಿಂಗಯ್ಯನವರು ಹೇಳಿರಲೇ ಇಲ್ಲ.
ಹಾಗಂತ ಹೇಳಿ ಕೆಂಗಲ್ ಹನುಮಂತಯ್ಯನವರು:ನಿಮ್ಮ ರಾಜೀನಾಮೆಯ ಅಗತ್ಯವಿಲ್ಲ ಎಂದರಾದರೂ ಸಿದ್ದಲಿಂಗಯ್ಯನವರು ಒಪ್ಪಲಿಲ್ಲ.ಬದಲಿಗೆ:ನಿಮಗೆ ಇದು ಗೊತ್ತಿದೆ.ಆದರೆ ಜನರಿಗೆ ಗೊತ್ತಾಗುವುದು ಹೇಗೆ?ಇದರ ನೈತಿಕ ಹೊಣೆ ಹೊರದೆ ಬೇರೆ ದಾರಿಯೇ ಇಲ್ಲ ಎಂದು ಹೇಳಿ ಬಂದರು.
ನಿಜಲಿಂಗಪ್ಪ ಅವರು ಮೊದಲು 1956 ರಲ್ಲಿ ಮುಖ್ಯಮಂತ್ರಿಯಾದರಲ್ಲ?ಆ ಸಂದರ್ಭದಲ್ಲಿ ತಮ್ಮ ಸಚಿವ ಸಂಪುಟಕ್ಕೆ ಸೇರುವಂತೆ ಅವರು ಶ್ರೀಮತಿ ಯಶೋದರಮ್ಮ ತುಳಸೀದಾಸಪ್ಪ ಅವರನ್ನು ಕೋರಿದ್ದರು.ಆಗವರು:ನೀವು ಪಾನ ನಿಷೇಧ ಮಾಡಲು ಒಪ್ಪಿಕೊಂಡರೆ ನಿಮ್ಮ ಸಂಪುಟ ಸೇರುತ್ತೇನೆ ಎಂದರು.
ಪಾನ ನಿಷೇಧ ಮಾಡುವ ವಿಷಯದಲ್ಲಿ ನಿಜಲಿಂಗಪ್ಪನವರಿಗೂ ಒಲವಿತ್ತು.ಹಾಗಂತಲೇ:ಖಂಡಿತ ಮಾಡೋಣ.ನೀವು ಮಂತ್ರಿ ಮಂಡಲಕ್ಕೆ ಸೇರಿ ಎಂದರು.ಆದರೆ ಮುಂದೆ ಪಾನ ನಿಷೇಧದ ಮಾತು ಬಂದಾಗ ನಿಜಲಿಂಗಪ್ಪ ಸಂಪುಟದ ಬಹುತೇಕ ಸಚಿವರು ಅಪಸ್ವರ ತೆಗೆದರು.
ಸರ್ಕಾರದ ಪ್ರಮುಖ ಆದಾಯ ಮೂಲ ಅದು.ಹೀಗಿರುವಾಗಿ ಪಾನನಿಷೇಧ ಮಾಡಿ ಸರ್ಕಾರವನ್ನು ಹೇಗೆ ನಡೆಸುತ್ತೀರಿ?ಏಂದು ಪ್ರಶ್ನಿಸಿದರು.ಆಗ ನಿಜಲಿಂಗಪ್ಪ ಅಸಹಾಯಕರಾಗಬೇಕಾಯಿತು.
ಆದರೆ ಇದನ್ನು ಒಪ್ಪದ ಶ್ರೀಮತಿ ಯಶೋದರಮ್ಮ ದಾಸಪ್ಪ ಅವರು ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹೊರಬಂದರು.
ಇದೇ ರೀತಿ ಮುಂದೆ ನಿಜಲಿಂಗಪ್ಪ ಅವರ ಸಚಿವ ಸಂಪುಟದಲ್ಲಿ ಎಂ.ವಿ.ರಾಮರಾವ್ ಅವರು ಗೃಹ ಸಚಿವರಾಗಿದ್ದಾಗ ಒಂದು ಘಟನೆ ನಡೆಯಿತು.
ಅವತ್ತು ಪೋಲೀಸ್ ಠಾಣೆಯೊಂದರಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆದು ಆಕೆ ಅನಾಹುತ ಮಾಡಿಕೊಂಡಿದ್ದಳು.ಈ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪವಾಯಿತು.
ಪ್ರತಿಪಕ್ಷದ ನಾಯಕರೊಬ್ಬರು:ಗೃಹ ಸಚಿವರೇ ಈ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ಬೇಡ.ಆ ನೊಂದ ಹೆಣ್ಣು ಮಗಳ ಜಾಗದಲ್ಲಿ ನಿಮ್ಮ ಮಗಳು ಇದ್ದಿದ್ದರೆ ನೀವೇನು ಮಾಡುತ್ತಿದ್ದಿರಿ?ಎಂದು ಪ್ರಶ್ನಿಸಿದರು.
ಅವರ ಪ್ರಶ್ನೆ ಕೇಳಿ ಅರೆಕ್ಷಣ ಸ್ತಂಭೀಭೂತರಾದ ರಾಮರಾವ್ ಅವರು:ನೀವು ಹೇಳಿದ್ದು ನನ್ನ ಮನಸ್ಸು ಮುಟ್ಟಿದೆ ಎಂದು ಹೇಳಿದವರೇ ಮುಖ್ಯಮಂತ್ರಿಗಳಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ಇದೇ ರೀತಿ ನಿಜಲಿಂಗಪ್ಪ ಅವರ ಕಾಲದಲ್ಲಿ ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದ ರಾಮಕೃಷ್ಣ ಹೆಗಡೆ ಅವರು ಪಂಚಾಯ್ತ್ ಮಸೂದೆಯೊಂದನ್ನು ತಂದರು.ಅದನ್ನು ವಿಧಾನಮಂಡಲದಲ್ಲಿಟ್ಟು ಅಂಗೀಕಾರ ಪಡೆಯುವ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಂಡಿಸಿದರು.
ಆಗೆಲ್ಲ ಒಂದು ಕಾಯ್ದೆಯನ್ನು ತರುವ ಮುನ್ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಸಂಪ್ರದಾಯವಿತ್ತು.ಅದರನುಸಾರ ಹೆಗಡೆ ಕೂಡಾ ಆ ಮಸೂದೆಯನ್ನು ಪಕ್ಷದ ಶಾಸಕಾಂಗ ಸಭೆಯಲ್ಲಿ ಮಂಡಿಸಿದ್ದರು.
ಆದರೆ ಒಂದೇ ಮತದ ಅಂತರದಲ್ಲಿ ಹೆಗಡೆ ಅವರು ಶಾಸಕಾಂಗ ಸಭೆಯಲ್ಲಿ ಮಂಡಿಸಿದ ಮಸೂದೆಗೆ ಸೋಲಾಯಿತು.
ಇದರಿಂದ ನೊಂದ ಹೆಗಡೆ:ಇನ್ನು ಗ್ರಾಮೀಣಾಭಿವೃದ್ಧಿ ಸಚಿವನಾಗಿ ಮುಂದುವರಿಯುವುದು ನೈತಿಕತೆಯಲ್ಲ ಎಂದವರೇ ಮುಖ್ಯಮಂತ್ರಿಗಳಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು.
ಇದೇ ರೀತಿ ದೇವರಾಜ ಅರಸರ ಕಾಲದಲ್ಲಿ ಸಚಿವರಾಗಿದ್ದ ಆರ್.ಡಿ.ಕಿತ್ತೂರು ಅವರ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯೊಬ್ಬರು ನಾಪತ್ತೆಯಾದರು.ವಿಷಯ ಭಾರೀ ಕೋಲಾಹಲಕ್ಕೆ ಕಾರಣವಾಯಿತು.
ಆ ಸಂದರ್ಭದಲ್ಲಿ ಹಲವು ರೀತಿಯ ಮಾತುಗಳು ಕೇಳಿ ಬಂದವು.ಪರಿಣಾಮ?ಆರ್.ಡಿ.ಕಿತ್ತೂರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆ ಸಂದರ್ಭದಲ್ಲಿ ಪ್ರತಿಪಕ್ಷಗಳ ನಾಯಕರೇ:ಬಾಳೇ ಹಣ್ಣು ತಿಂದವರು ಯಾರೋ?ಆದರೆ ಸಿಪ್ಪೆ ಹಿಡಿದುಕೊಂಡಿದ್ದ ಕಾರಣಕ್ಕಾಗಿ ಅರ್.ಡಿ.ಕಿತ್ತೂರ್ ರಾಜೀನಾಮೆ ಕೊಡಬೇಕಾಯಿತು ಎಂದು ಮಾತನಾಡಿಕೊಂಡರು.
ಮುಂದೆ ತಾವೇ ಮುಖ್ಯಮಂತ್ರಿಯಾದ ಕಾಲದಲ್ಲಿ ಬಾಟ್ಲಿಂಗ್ ಹಗರಣ ಮತ್ತು ಟೆಲಿಫೋನ್ ಟ್ಯಾಪಿಂಗ್ ಹಗರಣ ನಡೆದಾಗ ಹೆಗಡೆ ರಾಜೀನಾಮೆ ನೀಡಿದರು.
ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಂಬೇಡ್ಕರ್ ಪ್ರತಿಮೆಗೆ ತಮ್ಮ ಪುತ್ರ ಮಧ್ಯಾಭಿಷೇಕ ಮಾಡಿದ ಆರೋಪ ಕೇಳಿ ಬಂದಾಗ ಸಚಿವರಾಗಿದ್ದ ಬಿ.ಟಿ.ಲಲಿತಾನಾಯಕ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಆದರೆ ಇಂತಹ ಸತ್ಸಂಪ್ರದಾಯಗಳು ಕ್ರಮೇಣ ಮರೆಯಾಗುತ್ತಾ ಹೋಗಿ ಈಗ ಯಾವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರೆ ತಪ್ಪು ಮಾಡಿದವರನ್ನೂ ಸಮರ್ಥನೆ ಮಾಡುವ ದೊಡ್ಡ ಜನಸಮೂಹ ಬೆಳೆದುನಿಂತಿದೆ.
ವಿಪರ್ಯಾಸವೆಂದರೆ ಮಾಡಿದ ತಪ್ಪು ಕಣ್ಣೆದುರಿಗಿದ್ದರೂ ತಪ್ಪು ಮಾಡಿದವರೇ ಸ್ವಾತಂತ್ರ್ಯ ಹೋರಾಟಗಾರರ ಫೋಜು ಕೊಡುತ್ತಾ ತಮ್ಮ ಕೈನ ಎರಡೂ ಬೆರಳುಗಳನ್ನು ಎತ್ತಿ ತೋರಿಸುತ್ತಾ,ವಿಜಯೋತ್ಸವ ಆಚರಿಸುತ್ತಾರೆ.
ಅಂದ ಹಾಗೆ ಆರೋಪಗಳಿಗೆ ನಾನಾ ಮುಖಗಳಿರಬಹುದು.
ಯಾರದೋ ಷಡ್ಯಂತ್ರವೂ ಇದಕ್ಕೆ ಕಾರಣವಾಗಿರಬಹುದು,ಆದರೆ ನಡೆದಿದ್ದು ತಪ್ಪು ಎಂಬುದು ಸ್ಪಷ್ಟವಾದಾಗ ಶಿಕ್ಷೆಯನ್ನು ಸ್ವೀಕರಿಸುವ ಮತ್ತು ತನಿಖೆಯನ್ನು ಎದುರಿಸುವ ಗುಣ ಇರಬೇಕು.ಇಂತಹ ವಾತಾವರಣ ಸೃಷ್ಟಿಗೆ ವ್ಯವಸ್ಥೆಯೂ ಬಲ ನೀಡಬೇಕು. ಆದರೆ ರಮೇಶ್ ಜಾರಕಿಹೊಳಿ ಪ್ರಕರಣ ಅಂತಹ ವಾತಾವರಣ ಸೃಷ್ಟಿಸಲು ವ್ಯವಸ್ಥೆಯೇ ತಯಾರಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


