ನೆಲದನಿ
ಮಾಗಿದ ಕಾಲದಲ್ಲಿ ಸಾಹಿತ್ಯ ಕೃಷಿಗೆ ನಿಂತ ಪ್ರೊ.ಜಿ.ಪರಮೇಶ್ವರಪ್ಪ ಅವರ ಸಾಹಿತ್ಯ ಪಯಣ
- ಡಾ.ಕೆ.ಎ.ಓಬಳೇಶ್
ಭಾರತದಂತಹ ವಿಶಿಷ್ಟ ಸಾಂಸ್ಕೃತಿಕ ನಾಡಿನಲ್ಲಿ ವಿಭಿನ್ನ ಪ್ರಕಾರದ ಕಲೆಗಳು ಜನ್ಮತಳೆದಿವೆ. ಈ ಎಲ್ಲಾ ವಿಭಿನ್ನ ಕಲಾ ಪ್ರಕಾರಗಳು ಈ ನೆಲದ ಬಹುತ್ವವನ್ನು ಎತ್ತಿಹಿಡಿಯುವ ಪ್ರಯತ್ನ ಮಾಡಿವೆ. ಇಂತಹ ಬಹುತ್ವವೇ ಭಾರತದ ಸೌಹಾರ್ದತೆಗೆ ಸಾಕ್ಷಿಯಾಗಿರುವುದು ಈ ನೆಲದ ಹೆಮ್ಮೆಯ ಪ್ರತೀಕ.
ಇದಕ್ಕೆ ಪೂರಕವೆಂಬಂತೆ ಕನ್ನಡ ನಾಡಿನಲ್ಲಿ ಹಲವಾರು ಸಾಹಿತಿಗಳು ಈ ನೆಲದ ವಿವಿಧತೆಯನ್ನು ಅನಾವರಣಗೊಳಿಸುವ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಇಂತಹ ದೇಶಿ ಸೊಗಡನ್ನು ಸಾಹಿತ್ಯದ ಮೂಲಕ ಸೆರೆಹಿಡಿಯುತ್ತ ಬಂದಿರುವ ಸಾಹಿತಿಗಳಲ್ಲಿ ಪ್ರೊ.ಜಿ.ಪರಮೇಶ್ವರಪ್ಪನವರು ಒಬ್ಬರಾಗಿದ್ದಾರೆ.
ಮಧ್ಯ ಕರ್ನಾಟಕದ ಐತಿಹಾಸಿಕ ನಗರವಾಗಿರುವ ಚಿತ್ರದುರ್ಗ ಪ್ರಾಂತ್ಯವು ಕರ್ನಾಟಕದ ಸಾಂಸ್ಕೃತಿಕ ಹಿರಿಮೆ ಮತ್ತು ಗರಿಮೆಗೆ ತನ್ನದೇ ಆದ ವಿಶಿಷ್ಟ ಕಾಣಿಕೆಯನ್ನು ನೀಡಿರುವುದು ಚಾರಿತ್ರಿಕ ಸತ್ಯ. ಇಂತಹ ಸಾಂಸ್ಕೃತಿಕ ಶ್ರೀಮಂತ ನೆಲದಲ್ಲಿ ಹುಟ್ಟಿ ಬೆಳೆದು, ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಅಂತರ್ಗತವಾಗಿರುವ ಸಾಹಿತ್ಯದ ದೇಶೀಯತೆ ಹಾಗೂ ಅದರ ವೈಶಿಷ್ಟ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯ ಚಟುವಟಿಕೆಗೆ ತೊಡಗಿಸಿಕೊಂಡ ಜಿ.ಪರಮೇಶ್ವರಪ್ಪನವರ ಬದುಕಿನ ಸುತ್ತ ಒಂದು ಕೀರುನೋಟ ಬೀರುವುದು ಪ್ರಸ್ತುತ ಲೇಖನದ ಆಶಯವಾಗಿದೆ.
ಶ್ರೀಯುತ ಜಿ.ಪರಮೇಶ್ವರಪ್ಪನವರು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು ಹರ್ತಿಕೋಟೆ ಸಮೀಪದ ಕಪಿಲೆಹಟ್ಟಿ ಗ್ರಾಮದಲ್ಲಿ ದಿನಾಂಕ 15 ನವಂಬರ್1950ರಲ್ಲಿ ಜಡಿಯಪ್ಪ ಹಾಗೂ ಸಕ್ರಮ್ಮ ದಂಪತಿಗಳ ತೃತೀಯ ಪುತ್ರನಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರ್ತಿಕೋಟೆಯಲ್ಲಿ, ಪ್ರೌಢ ಶಿಕ್ಷಣವನ್ನು ಐಮಂಗಳದಲ್ಲಿ, ಪದವಿಪೂರ್ವ ಶಿಕ್ಷಣವನ್ನು ಚಿತ್ರದುರ್ಗದಲ್ಲಿ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮೈಸೂರಿನಲ್ಲಿ ಪಡೆದರು.
ಕನ್ನಡ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ನಂತರದ ದಿನಮಾನಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಾದ ಬೀದರ್, ಅಥಣಿ, ಮಾಯಕೊಂಡ, ಚಳ್ಳಕೆರೆ ಹಾಗೂ ಚಿತ್ರದುರ್ಗದಲ್ಲಿ 1980 ರಿಂದ 2020 ರವರೆಗೆ ಸುಮಾರು 30 ವರ್ಷಗಳ ಕಾಲ ಬೋಧಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ.
ಬಾಲ್ಯದ ದಿನಗಳಿಂದಲೂ ಗ್ರಾಮೀಣ ಬದುಕಿನೊಂದಿಗೆ ನಂಟನ್ನು ಹೊಂದಿದ್ದ ಇವರಿಗೆ ಜಾನಪದ ಕಲೆ ಹಾಗೂ ಸಾಹಿತ್ಯದೊಂದಿಗೆ ಬೆರೆತು ಹೋಗಿದ್ದರು. ಹಾಗೆಯೇ ಸಾಹಿತ್ಯದ ವಿದ್ಯಾರ್ಥಿಯಾದ ಇವರಿಗೆ ಕನ್ನಡ ಸಾಹಿತ್ಯ ಹಾಗೂ ಹಲವಾರು ಕನ್ನಡ ಸಾಹಿತಿಗಳಿಗೆ ಮಾರುಹೋಗಿದ್ದರು. ಆದರೆ ಸಾಹಿತ್ಯದ ಬರವಣಿಗೆಯ ಬಗ್ಗೆ ಇವರಿಗೆ ಒಂದಷ್ಟು ಭಯವನ್ನು ಕಟ್ಟಿಕೊಂಡ ಕಾರಣ ತಮ್ಮ ಬೋಧನಾ ಅವಧಿಯುದ್ದಕ್ಕೂ ಬರವಣಿಗೆಯಿಂದ ದೂರವೇ ಉಳಿದಿದ್ದರು.
ಶ್ರೀಯುತರು ಬರವಣಿಗೆಯಿಂದ ದೂರ ಉಳಿದಿದ್ದರೂ ಬೋಧನೆಯೊಂದಿಗೆ ಸಾಹಿತ್ಯ ಪ್ರೀತಿಯನ್ನು ಸದಾ ಕಾಪಾಡಿಕೊಂಡಿದ್ದರು. ಪಂಪ, ರನ್ನ, ಕುಮಾರವ್ಯಾಸರಂತಹ ಪ್ರಾಚೀನ ಕವಿಗಳು ಹಾಗೆಯೇ ಕುವೆಂಪು, ಬೇಂದ್ರೆ, ಶಿವರಾಮ ಕಾರಂತ್, ಸಿ.ಪಿ.ಕೃಷ್ಣಮೂರ್ತಿ, ಜಿ.ಎಚ್.ನಾಯಕರಂತಹ ಆಧುನಿಕ ಸಾಹಿತಿಗಳ ಬರಹಗಳು ಇವರ ಮೇಲೆ ಸಾಕಷ್ಟು ಪ್ರೇರಣೆ ಮತ್ತು ಪ್ರಭಾವವನ್ನು ಬೀರಿದ್ದವು.
ಇಂತಹ ಸಾಹಿತ್ಯ ಪರಂಪರೆಯಿಂದ ಸಾಹಿತ್ಯಾಭಿರುಚಿಯನ್ನು ಮೈಗೂಡಿಸಿಕೊಂಡಿರುವ ಜಿ.ಪರಮೇಶ್ವರಪ್ಪನವರು ತಮ್ಮ ವಿದ್ಯಾರ್ಥಿಗಳಿಗೂ ಸಾಹಿತ್ಯಾಸಕ್ತಿಯನ್ನು ಮೂಡಿರುವ ಕಾಯಕದಲ್ಲಿ ತಮ್ಮ ಬೋಧನಾ ವೃತ್ತಿಯನ್ನು ಮುನ್ನಡೆಸಿಕೊಂಡು ಬಂದವರು. ಹಾಗೆಯೇ ಹಳಗನ್ನಡ, ವ್ಯಾಕರಣ, ಛಂದಸ್ಸಿನಲ್ಲಿ ವಿಶೇಷವಾದ ಪರಿಣಿತಿಯನ್ನು ಹೊಂದಿದ್ದ ಇವರು, ತಮ್ಮ ವೃತ್ತಿ ಬದುಕಿನಲ್ಲಿ ಹೆಚ್ಚು ಬೋಧನೆ ಮಾಡಿ, ಇವುಗಳನ್ನು ಕರಗತ ಮಾಡಿಕೊಂಡಿದ್ದರು. ಹೀಗಾಗಿ ಕನ್ನಡ ಸಾಹಿತ್ಯದ ಛಂದೋ ಪ್ರಕಾರದ ತಾಳ, ಲಯವನ್ನು ಸ್ಪಷ್ಟವಾಗಿ ಅರಿತವರಾಗಿದ್ದರು. ಇದು ಮುಂದೆ ಶ್ರೀಯುತರ ಸಾಹಿತ್ಯ ಚಟುವಟಿಕೆಗೆ ವರವಾಗಿ ಪರಿಣಮಿಸಿತು.
ಶ್ರೀಯುತ ಜಿ.ಪರಮೇಶ್ವರಪ್ಪನವರು ತಮ್ಮ ವೃತ್ತಿ ಬದುಕಿನ ಅವಧಿಯಲ್ಲಿ ಸಾಹಿತ್ಯ ರಚನೆಗೆ ತೊಡಗಿದ್ದು ತೀರಾ ವಿರಳ. ಕೆಲವು ಸ್ನೇಹಿತರ ಒತ್ತಡ, ಸಭೆ ಸಮಾರಂಭಗಳಲ್ಲಿ ಉಪನ್ಯಾಸ ನೀಡುವುದಕ್ಕಾಗಿ ಮಾಡಿಕೊಂಡ ಟಿಪ್ಪಣಿಗಳು ಹಾಗೂ ವಿಶೇಷ ದಿನಗಳಿಗಾಗಿ ಪತ್ರಿಕೆಗಳಿಗೆ ಕೆಲವೊಂದು ಲೇಖನಗಳನ್ನು ಬರೆದಿರುವುದನ್ನು ಬಿಟ್ಟರೆ ಸಾಹಿತ್ಯದ ಯಾವುದೇ ಪ್ರಕಾರದಲ್ಲೂ ತಮ್ಮನ್ನು ಗುರುತಿಸಿಕೊಂಡವರಲ್ಲ. ಈ ಎಲ್ಲಾ ಲೇಖನಗಳನ್ನು ಸಂಗ್ರಹಿಸಿ ‘ಚದುರಿದ ಚಿಂತನೆಗಳು’ ಎಂಬ ಕೃತಿಯನ್ನು 2020ರಲ್ಲಿ ಹೊರತಂದಿದ್ದಾರೆ.
ಪ್ರಸ್ತುತ ಕೃತಿಯಲ್ಲಿ ಜಾನಪದ, ಹಳಗನ್ನಡ ಸಾಹಿತ್ಯ, ವಚನಸಾಹಿತ್ಯ ಹಾಗೂ ವೈಚಾರಿಕ ಚಿಂತನೆಗಳ ಮೇಲೆ ಬೆಳಕು ಚೆಲ್ಲಿರುವುದು ಕಂಡುಬರುತ್ತದೆ. ಈ ಕೃತಿಯು ಅವರ ಓದಿನ ವಿಸ್ತಾರ ಹಾಗೂ ಅವರಿಗಿದ್ದ ಸಾಹಿತ್ಯದ ತುಡಿತವನ್ನು ಅನಾವರಣಗೊಳಿಸುತ್ತದೆ. ಆದರೆ ಪರಮೇಶ್ವರಪ್ಪನವರಿಗೆ ಸವಾಲಾಗಿ ಪರಿಣಮಿಸಿದ್ದು ಮಾತ್ರ ಶಾಸ್ತçಬದ್ಧವಾದ ಸಾಹಿತ್ಯ ರಚನೆಗೆ ಮುಂದಾದ ಸಂದರ್ಭ. ತಮ್ಮ ಸುತ್ತಮುತ್ತಲಿನ ಸಾಂಸ್ಕೃತಿಕ ಪರಿಸರದಲ್ಲಿ ತಲಾತಲಾಂತರದಿಂದ ಬಾಯಿಂದ ಬಾಯಿಗೆ ಹರಿದು ಬಂದು, ಜನಜೀವನದಲ್ಲಿ ಬೆರೆತು ಹೋಗಿದ್ದ ಜಾನಪದೀಯ ಮಹಾಕಾವ್ಯವಾದ ‘ಪಾರ್ಥಲಿಂಗ ಚಾರಿತಾಮೃತ’ ಎಂಬ ಕೃತಿಯನ್ನು ಸಂಪಾದಿಸುವುದಕ್ಕೆ ತೊಡಗಿಸಿಕೊಂಡರು.
ಈ ಸಂದರ್ಭದಲ್ಲಿ ಗದ್ಯ ಪ್ರಕಾರದಲ್ಲಿಯೇ ಸಾಹಿತ್ಯ ರಚನೆಗೆ ಮುಂದಾದರು. ಆಗ ಅಲ್ಲಿನ ವಕ್ತೃ ಹಾಗೂ ಪಾರ್ಥಲಿಂಗ ಭಕ್ತರ ಅಭಿಲಾಷೆಯು ಇದನ್ನು ಭಾಮಿನಿ ಷಟ್ಟದಿಯಲ್ಲಿಯೇ ರಚಿಸಬೇಕು ಎಂಬುದಾಗಿತ್ತು. ಇದಕ್ಕೆ ಕಾರಣ ಗದ್ಯದಲ್ಲಿ ಪಾರ್ಥಲಿಂಗನ ಕಾವ್ಯವನ್ನು ಬರೆದರೆ ಯಾರೋ ಓದು ಬರಹ ಕಲಿತವರು ಓದಿ ಸುಮ್ಮನಾಗುತ್ತಾರೆ. ಆದರೆ ರಾಗ, ತಾಳ, ಲಯಬದ್ಧವಾದ ಭಾಮಿನಿ ಛಂದೋ ಪ್ರಕಾರದಲ್ಲಿ ರಚಿಸಿದರೆ ಯಾರೋ ಒಬ್ಬ ಹಾಡಿದರೆ ಅಕ್ಷರ ಬಲ್ಲವರು ಹಾಗೂ ಅಕ್ಷರ ವಂಚಿತರೆಲ್ಲ ಆಸಕ್ತಿಯಿಂದ ಕುಳಿತು ಕೇಳಿ ಆಸ್ವಾದಿಸುತ್ತಾರೆ ಎಂಬುದು ಅವರ ನಿಲುವಾಗಿತ್ತು.
ಆಗ ಕುಮಾರವ್ಯಾಸ ಮಾಡಿದ ಅಂತಹ ಸಾಧನೆಯು ನನ್ನಿಂದ ಸಾಧ್ಯವೇ ಎಂಬ ಅನುಮಾನ ಲೇಖಕರಲ್ಲಿ ಮೂಡಿತು. ಆಗ ಹಳಗನ್ನಡದ ಜನಪ್ರಿಯ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿರುವ ಷಟ್ಪದಿಯ ಭಾಮಿನಿ ಛಂದೋ ಪ್ರಕಾರದಲ್ಲಿಯೇ ಈ ಕಾವ್ಯವನ್ನು ರಚಿಸಬೇಕು ಎಂದು ಮುಂದಾದ ಸಂದರ್ಭದಲ್ಲಿ ಇದೊಂದು ಸವಾಲಿನ ಕೆಲಸವಾಗಿ ಪರಿಣಮಿಸಿತು. ಸುಮಾರು ಆರು ತಿಂಗಳ ಕಾಲ ನಿರಂತರವಾದ ಪ್ರಯತ್ನ ಮಾಡುತ್ತ ಬರೆಯುವ, ಹರಿಯುವ ಕಾಯಕದಲ್ಲಿ ನಿರತರಾದರು.
ಆಗ ಇದು ಭಾಮಿನಿ ಷಟ್ಪದಿಯ ಪಾಠ ಮತ್ತು ಪ್ರವಚನದಷ್ಟು ಸುಲಭವಾಗಿ ಛಂದೋ ಪ್ರಕಾರದ ಸಾಹಿತ್ಯ ರಚನೆ ಮಾಡಲಾಗದು ಎಂಬ ಅನುಭವವಾಯಿತು. ಈ ಯೋಜನೆಯಿಂದ ದೂರ ಉಳಿದು, ಇದು ನನ್ನಿಂದ ಸಾಧ್ಯವಾಗದ ಕೆಲಸವೆಂದು ಕೈಚೆಲ್ಲಿ ಕುಳಿತರು. ಇಂತಹ ಸಂದರ್ಭದಲ್ಲಿ ಪಾಥಲಿಂಗ ದೈವದ ಭಕ್ತರು ಹಾಗೂ ಕಾವ್ಯವನ್ನು ಹಾಡುವ ವಕ್ತೃಗಳು ಇದು ನಿಮ್ಮಿಂದ ಮಾತ್ರ ಸಾಧ್ಯ. ಪಾರ್ಥಲಿಂದ ದೈವವು ಕೂಡ ಅದು ನಿಮ್ಮಿಂದ ಮಾತ್ರವೇ ಸಾಧ್ಯವಾಗುವ ಕೆಲಸವೆಂದು ಅಪ್ಪಣೆ ನೀಡಿದೆ ಎಂದು ಒತ್ತಡ ಹಾಕಿದಾಗ, ಅವರ ದೈವಕೇಂದ್ರಿತವಾದ ನಂಬಿಕೆಗೆ ಕಟ್ಟುಬಿದ್ದು ಮತ್ತೇ ಛಂದೋಬದ್ಧ ಸಾಹಿತ್ಯ ಪ್ರಯೋಗದಲ್ಲಿ ತಮ್ಮನ್ನು ದುಡಿಮೆಗಚ್ಚಿದರು.
ಪಾರ್ಥಲಿಂಗನ ಭಕ್ತಾಧಿಗಳ ಒತ್ತಡ ಹಾಗೂ ಅವರ ಪ್ರೀತಿಯ ಹಠಕ್ಕೆ ಮಣಿದು, ಕವಿ ಕುಮಾರವ್ಯಾಸ ಹರಿ ಸ್ಮರಣೆಯಿಂದ ಕಾವ್ಯ ರಚನೆಗೆ ಮುಂದಾದಂತೆ ಶ್ರೀಯುತ ಜಿ.ಪರಮೇಶ್ವರಪ್ಪನವರು ಪಾರ್ಥಲಿಂಗನ ಸ್ಮರಣೆಯೊಂದಿಗೆ ಕಾವ್ಯಾಭ್ಯಾಸದ ಗರಡಿಯಲ್ಲಿ ಗಟ್ಟಿಗರಾಗಿ ನಿಂತರು. ಹೀಗೆ ಸಂಪ್ರದಾಯ ಬದ್ಧವಾಗಿ ಮೂಡಿ ಬಂದ ಛಂದೋ ಪ್ರಕಾರದಲ್ಲಿ ಸಾಹಿತ್ಯ ರಚನೆಗೆ ಮುಂದಾದ ಶ್ರೀಯುತರು ಪ್ರಸ್ತುತ ಕಥೆ ರಚನೆಯ ಕುರಿತಾದ ತಮ್ಮ ನಿಲುವನ್ನು ಕುಮಾರವ್ಯಾಸನಂತೆಯೇ ಹಂಚಿಕೊಂಡಿದ್ದಾರೆ;
ಬಾಯಿ ಮಾತಲಿ ಬಸವ ಹೇಳಿದ ತಾಯಿ ಭೂಮಿಯ ಜನರ ಕಿವಿಯಲಿ ಮಾಯೆಯಿಲ್ಲದ ನಿಗಮ ಗೋಚರನಾ ಪುರಾಣವನು ದಾಯಕನೊಲಿದು ಬರೆಸಿದ ಜನಪದೀಯರಾಡುವ ಪಾರ್ಥಕಥೆಯನು ಶಾಯಿಯಿಂದಲಿ ಕೃತಿ ರಚಿಸಿದೆನು ವಿಮಲ ಮನಸಿನಲಿ
ಇಲ್ಲಿ ಲೇಖಕರು ಕುಮಾರವ್ಯಾಸನಂತೆ ತನ್ನನ್ನು ಕೇವಲ ಲಿಪಿಕಾರ ಎಂಬುದಾಗಿ ಬಿಂಬಿಸಿಕೊಂಡಿದ್ದಾರೆ. ಹಾಗೆಯೇ ಇಲ್ಲಿ ತಾನೊಬ್ಬ ಕವಿಯೆಂಬುದನ್ನು ಕೂಡ ಕುಮಾರವ್ಯಾಸನಂತೆ ಛಂದೋ ನೆಲೆಯಲ್ಲಿ ಅಭಿವ್ಯಕ್ತಿಸಿರುವುದನ್ನು ಕಾಣಬಹುದಾಗಿದೆ.
ವೇದ ಶಾಸ್ತ್ರಾಗಮ ಪುರಾಣಗಳೋದಿ ತಲೆಗಳು ಚಿಟ್ಟು ಹಿಡಿದಿವೆ ವಾದ ಗೈವರಿಗೋದು ಬರದವರಿಗೆಡೆಯಿಲ್ಲಲ್ಲಿ ಓದು ಬರದವರಿಲ್ಲಿ ತಿಳಿವುದು ವಾದ ಮಾಡುವರಿಲ್ಲಿ ಬರಬಹು ದೋದಿ ಕುಣಿಸುವನಿಲ್ಲಿ ಕವಿ ಪರಮೇಶ್ವರೆಂಬುವನು
ಹೀಗೆ ತನ್ನನ್ನು ಪರಮೇಶ್ವರ ಕವಿ ಎಂಬುದಾಗಿ ಗುರುತಿಸಿಕೊಂಡು ಪಾರ್ಥಲಿಂಗ ಸ್ಮರಣೆಯ ಮೂಲಕವೇ ಕಾವ್ಯ ರಚನೆಗೆ ಗಟ್ಟಿಯಾಗಿ ನಿಂತರು. ಇಂತಹ ಗಟ್ಟಿತನದ ಪ್ರತೀಕವಾಗಿ ಆರಂಭಿಕ ದಿನಗಳಲ್ಲಿ ದಿನಕ್ಕೊಂದು ಕಾವ್ಯವನ್ನು ಛಂದೋಬದ್ಧವಾಗಿ ರೂಪಿಸುವಲ್ಲಿ ಯಶಸ್ವಿಯಾದರು.
ಹೀಗೆ ಅಳುಕಿನಿಂದಲೇ ಆರಂಭವಾದ ಛಂದೋಬದ್ಧ ಸಾಹಿತ್ಯ ಕೃಷಿಯನ್ನು ಕರಗತ ಮಾಡಿಕೊಂಡು ಸುಮಾರು 497 ಪದ್ಯಗಳಿಂದ ಕೂಡಿದ ಒಟ್ಟು ಏಳು ಅಧ್ಯಾಯಗಳ ‘ಶ್ರೀ ಪಾರ್ಥಲಿಂಗ ಚರಿತಾಮೃತ’ ಎಂಬ ಭಾಮಿನಿ ಷಟ್ಪದಿ ಕಾವ್ಯ ಕೃತಿಯನ್ನು ಛಂದೋ ವಿನ್ಯಾಸಕ್ಕೆ ಚ್ಯುತಿಯಾಗದಂತೆ ಬರೆದು ಮುಗಿಸಿದ ಕೀರ್ತಿ ಕವಿ ಜಿ.ಪರಮೇಶ್ವರಪ್ಪ ಅವರಿಗೆ ಸಲ್ಲುತ್ತದೆ. ‘ಕನ್ನಡದಲ್ಲಿ ಮಹಾಕಾವ್ಯಗಳ ಕಾಲ ಮುಗಿಯಿತು.
ಛಂದೋಬದ್ಧವಾದ ರಚನೆಗಳ ಕಾಲ ಮುಗಿಯಿತು ಎಂಬ ಮಾತುಗಳು ಹುಸಿಯಾಗಿವೆ’ ಎಂಬ ಡಾ.ಬಿ.ವಿ.ವಸಂತಕುಮಾರ್ ಅವರ ಮಾತುಗಳಿಗೆ ಜಿ.ಪರಮೇಶ್ವರಪ್ಪ ಅವರು ರಚಿಸಿರುವ ಛಂದೋಬದ್ಧ ‘ಪಾರ್ಥಲಿಂಗ ಚರಿತಾಮೃತ’ ಸಾಕ್ಷಿಯಾಗಿ ನಿಲ್ಲುತ್ತದೆ.
ಪ್ರಸ್ತುತ ಕೃತಿಯು ಶ್ರೀಯುತ ಜಿ.ಪರಮೇಶ್ವರಪ್ಪನವರಿಗೆ ಸಾಹಿತಿ ಎಂಬ ಬಿರುದಾವಳಿಯನ್ನು ಮಾತ್ರವಲ್ಲದೆ, ಅವರನ್ನು ಪಾರ್ಥಲಿಂಗ ಚರಿತಾಮೃತದ ಕವಿಯೆಂದು ಗುರುತಿಸುವಷ್ಟು ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.
ಹಾಗೆಯೇ ಈ ಕೃತಿಯು ಸಾಕಷ್ಟು ಜನಮಾನಸದಲ್ಲಿ ಬೆರೆತು ಹೋಗಿದ್ದು, ಈಗಾಗಲೇ ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಪಠನ ಮಾಡಲಾಗಿದೆ. ಇದು ಕವಿಗಳ ಶ್ರಮಕ್ಕೆ ಸಿಕ್ಕ ನಿಜವಾದ ಪ್ರತಿಫಲ. ಕವಿಯಾದವನು ಇದರಾಚೆ ಏನನ್ನು ನಿರೀಕ್ಷಿಸಲಾರ.
ಅಳುಕಿನಿಂದಲೇ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಜಿ.ಪರಮೇಶ್ವರಪ್ಪನವರು ಛಂದೋಬದ್ಧ ಕಾವ್ಯ ರಚನೆಯಲ್ಲಿ ಮೊದಲ ಯಶಸ್ಸು ಗಳಿಸಿದ ತರುವಾಯ ‘ವದ್ದಿಕೆರೆ ಸಿದ್ಧೇಶ್ವರ ಚರಿತೆ’ಯನ್ನು ಇದೇ ಛಂದೋ ವಿನ್ಯಾಸದಲ್ಲಿ ರಚನೆಗೆ ಮುಂದಾಗಿದ್ದು, ಇದನ್ನು ಒಂದೇ ವರ್ಷದಲ್ಲಿ ಮುಗಿಸುವಷ್ಟು ಛಂದೋಬದ್ಧ ಸಾಹಿತ್ಯ ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
ಪ್ರಸ್ತುತ ಕೃತಿಯು ಕೂಡ ದೈವ ಕೇಂದ್ರಿತವಾದ ಪುರಾಣ ನೆಲೆಯಿಂದ ಕೂಡಿದ್ದು, ಜನಪದರ ಬದುಕಿನೊಳಗೆ ಬೆರೆತು ಹೋದ ಮೌಖಿಕ ಕಥನವೊಂದನ್ನು ಛಂದೋಬದ್ಧ ಹಾಡುಗಬ್ಬವಾಗಿ ರೂಪಿಸುವ ಮಹತ್ತರ ಕಾರ್ಯವೊಂದನ್ನು ಇವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಶ್ರೀಯುತ ಪರಮೇಶ್ವರಪ್ಪನವರ ಎರಡನೇ ಕೃತಿಯಾಗಿರುವ ‘ವದ್ದಿಕೆರೆ ಸಿದ್ಧೇಶ್ವರ ಚರಿತೆ’ಯು ಹರಿಹರನ ‘ಶಿವಶರಣರ ರಗಳೆ’ಯ ಕಥನ ಮಾದರಿಯಿಂದ ಪ್ರಭಾವಿತಗೊಂಡಂತಿದೆ.
ಇದನ್ನೂ ಓದಿ |ವಿಮರ್ಶೆ | ಸ್ವಪ್ನದಲ್ಲಿ ಸೊರಗಿದ ಪ್ರೀತಿ
ಈ ಕೃತಿಯು ಒಟ್ಟು 311ಷಟ್ಪದಿ ಪದ್ಯಗಳಿಂದ ಕೂಡಿದೆ. ಇಲ್ಲಿಯೂ ಕೂಡ ಕವಿಗಳು ಪ್ರಾಚೀನ ಕಾವ್ಯ ಪರಂಪರೆಯ ಮುಂದುವರಿಕೆಯ ಭಾಗವೆಂಬಂತೆ ದೈವ ಸ್ತುತಿಯೊಂದಿಗೆ ಕಾವ್ಯಾರಂಭಕ್ಕೆ ಮುಂದಾಗಿರುವುದನ್ನು ಕಾಣಬಹುದಾಗಿದೆ.
ಶುದ್ಧಮನದಲಿ ಖುದ್ದು ಹೇಳುವೆ ಸಿದ್ಧ ಪುರುಷನ ಸಿದ್ಧ ಕಥೆಯನು ಬುದ್ಧ ಜನಗಳು ಮೆಚ್ಚುವಂದದಿ ಹಾಡುಗಬ್ಬದಲಿ ಬಿದ್ದು ಗಂಗೆಯಲೆದ್ದು ಬಂದಂತೆದ್ದು ಹೋಗುವವಿದ್ದ ರುಜಿನಗ ಳೆದ್ದು ಬರುವಾ ಜನ್ಮ ಚಕ್ರವನೊದ್ದು ಹೋಗುವುದು
ಹೀಗೆ ಪ್ರಾಚೀನ ಕಾವ್ಯ ಪರಂಪರೆಯ ತಂತ್ರವನ್ನು ಅನುಸರಿಸುತ್ತಲೇ ಜಾನಪದೀಯ ಕಥನವನ್ನು ಶಿಷ್ಟ ಸಾಹಿತ್ಯದ ಚೌಕಟ್ಟಿಗೆ ಒಳಪಡಿಸುವ ಮೂಲಕ ಛಂದೋಬದ್ಧಗೊಳಿಸುವಲ್ಲಿ ಕವಿ ಜಿ.ಪರಮೇಶ್ವರಪ್ಪನವರ ಪಾತ್ರ ಮಹತ್ವದ್ದಾಗಿದೆ. ಜನಪದರ ಸಾಂಸ್ಕೃತಿಕ ಬದುಕಿನಲ್ಲಿ ಬೆರೆತುಕೊಂಡಿರುವ ಮೌಖಿಕ ಕಥನವನ್ನು ಶಿಷ್ಟ ಪರಂಪರೆಯೊಂದಿಗೆ ಅನುಸಂಧಾನಗೊಳಿಸುವ ಮೂಲಕ ಹಾಡುಗಬ್ಬಗೊಳಿಸಿದ ಕವಿಯ ತಂತ್ರಗಾರಿಕೆಯ ಹಿಂದೆ ನೆಲಮೂಲದ ತುಡಿತ-ಮಿಡಿತವಿದೆ.
ಜನಪದ ಮತ್ತು ಶಿಷ್ಟ ಪರಂಪರೆಯ ನಡುವಿನ ಬೇಲಿ ಹಾಗೂ ಅಂತರವನ್ನು ಕಡಿದು ಹಾಕಿ ಇವೆರಡ ನಡುವೆ ಸಂಕರವನ್ನು ಸಾಧಿಸಿದ್ದಾರೆ. ಈ ಕಾರಣದಿಂದಾಗಿ ಇವರು ನಮ್ಮ ಮುಂದಿನ ಅಪರೂಪದ ಸಾಹಿತಿಗಳಲ್ಲಿ ಒಬ್ಬರಾಗಿ ಕಂಡುಬರುತ್ತಾರೆ.
ಶ್ರೀಯುತರ ಈ ಛಂದೋಬದ್ಧ ಕಾವ್ಯದ ದುಡಿಮೆಯ ಹಿಂದೆ ಒಂದು ಪ್ರಾಮಾಣಿಕ ಪ್ರಯತ್ನವಿದೆ. ಈ ಪ್ರಯತ್ನ ಕಾಯಕ ಪ್ರಧಾನತೆಯಿಂದ ಕೂಡಿದೆ. ಇಂತಹ ಕಾಯಕ ಪ್ರಧಾನ ಕೃಷಿಯು ಇವರ ಸತತ ಪ್ರಯತ್ನವೆಂಬ ತಪಸ್ಸಿನ ಪ್ರತೀಕವಾಗಿ ಕಂಡುಬರುತ್ತದೆ.
ಇಂತಹ ತಪದ ಪ್ರತೀಕ ಹಾಗೂ ಬಾಲ್ಯದ ದಿನಗಳಿಂದ ಮೈಮನಗಳಲ್ಲಿ ಬೆರತು ಹೋದ ಜನಪದ ಸೊಗಡು, ಅಧ್ಯಯನದೊಂದಿಗೆ ಆಸಕ್ತಿಯಾಗಿ ವಿಷಯವಾಗಿ ಪ್ರಭಾವ ಬೀರಿದ ಸಾಹಿತ್ಯಾಭಿರುಚಿ, ಸುದೀರ್ಘವಾದ ಬೋಧನಾನುಭವ ಹಾಗೂ ನಿವೃತ್ತಿಯ ಸಮಯದಲ್ಲಿನ ಸಾಹಿತ್ಯಾಸಕ್ತ ಸಮಾನ ಮನಸ್ಕರ ಪ್ರೇರಣೆ ಮತ್ತು ಪ್ರೋತ್ಸಾಹದ ಫಲವಾಗಿ ಕನ್ನಡ ಸಾರಸ್ವತ ಲೋಕಕ್ಕೆ ‘ಪಾರ್ಥಲಿಂಗ ಚರಿತಾಮೃತ’, ವದ್ದಿಕೆರೆ ಸಿದ್ಧೇಶ್ವರ ಚರಿತೆ’, ‘ವೀರ ಕರಿಯಣ್ಣ’, ‘ಚಿತ್ತಯ್ಯ-ಕಾಟಯ್ಯ’ ಎಂಬ ಛಂದೋ ವಿನ್ಯಾಸದ ಮೌಲ್ಯಯುತ ಷಟ್ಪದಿ ಕೃತಿಗಳನ್ನು ಹಾಗೂ ‘ಚದುರಿದ ಚಿಂತನೆಗಳು’ ಎಂಬ ವೈಚಾರಿಕ ಕೃತಿಯನ್ನು ನೀಡಿದ ಕವಿ, ಸಾಹಿತಿ, ಚಿಂತಕರಾಗಿರುವ ಶ್ರೀಯುತ ಜಿ.ಪರಮೇಶ್ವರಪ್ಪ ಅವರಿಂದ ಕನ್ನಡ ಸಾಹಿತ್ಯಲೋಕ ಮತ್ತಷ್ಟು ಶ್ರೀಮಂತಗೊಳ್ಳಲಿ ಎಂಬುದು ನಮ್ಮ ಹಾರೈಕೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.



