ಬಹಿರಂಗ
ಕಾರ್ಪೋರೇಟ್ ಆಧಿಪತ್ಯವೂ ಮಾಧ್ಯಮವೆಂಬೋ ಉದ್ಯಮವೂ
ನವ ಉದಾರವಾದದ ಮಾರುಕಟ್ಟೆ ವ್ಯವಸ್ಥೆಯಲ್ಲಿ ದೃಶ್ಯ ಮಾಧ್ಯಮಗಳೂ ಸಂವಹನದ ಸರಕುಗಳು
- ನಾ ದಿವಾಕರ
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಾರ್ವಜನಿಕ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಾದ ವಿದ್ಯುನ್ಮಾನ ಮಾಧ್ಯಮಗಳ ಸ್ವರೂಪ ಹೇಗಿರಬೇಕು ? ಡಿಜಿಟಲೀಕರಣದತ್ತ ದಾಪುಗಾಲು ಹಾಕುತ್ತಿರುವ ಭಾರತದಲ್ಲಿ ಈ ಪ್ರಶ್ನೆ ಇನ್ನೂ ಹೆಚ್ಚು ಪ್ರಸ್ತುತ ಎನಿಸುತ್ತದೆ. ಮುದ್ರಣ ಮಾಧ್ಯಮ ಎಷ್ಟೇ ವ್ಯಾಪಕವಾದರೂ ಅದು ಅಕ್ಷರಸ್ತರನ್ನು ತಲುಪುವ ಒಂದು ಸಾಧನ. ಆದರೆ ದೃಶ್ಯ ಮಾಧ್ಯಮ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬಹುದಾದ ಒಂದು ಸಂವಹನ ಸಾಧನವಾಗಿದೆ. ಕಳೆದ ಎರಡು ದಶಕಗಳಲ್ಲಿ ಭಾರತದ ರಾಜಕಾರಣ, ಸಾಮಾಜಿಕ ಪಲ್ಲಟಗಳು, ಸಾಂಸ್ಕೃತಿಕ ತಲ್ಲಣಗಳು ಮತ್ತು ಸಾರ್ವಜನಿಕ ಜೀವನದ ಏಳುಬೀಳುಗಳನ್ನು ದಾಖಲಿಸುತ್ತಲೇ ಬಂದಿರುವ ವಿದ್ಯುನ್ಮಾನ ದೃಶ್ಯ ಮಾಧ್ಯಮಗಳ ಸ್ವರೂಪ ಮತ್ತು ಕಾರ್ಯವೈಖರಿ ಇಂದಿನ ಸನ್ನಿವೇಶದಲ್ಲಿ ಹೆಚ್ಚು ಚರ್ಚೆಗೊಳಗಾಗಬೇಕಿದೆ.
ಇದೇ ಫೆಬ್ರವರಿ 19ರಂದು ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳ, ವಿಶೇಷವಾಗಿ ಕನ್ನಡ ಸುದ್ದಿಮನೆಗಳ, ನೈತಿಕತೆ ಮತ್ತು ವೃತ್ತಿಪರತೆಯೇ ಪ್ರಶ್ನಾರ್ಹವಾಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಯಚೂರಿನ ಜಿಲ್ಲಾ ನ್ಯಾಯಾಧೀಶರು, ಅಂಬೇಡ್ಕರ್ ಭಾವಚಿತ್ರವನ್ನು ತೆಗೆಯಲು ಒತ್ತಾಯಿಸುವ ಮೂಲಕ ಅಂಬೇಡ್ಕರರಿಗೆ ಮತ್ತು ಸಂವಿಧಾನಕ್ಕೆ ಅಪಚಾರ ಎಸಗಿದ್ದು ರಾಜ್ಯಾದ್ಯಂತ ಜನರ ಆಕ್ರೋಶಕ್ಕೆ ತುತ್ತಾಗಿದ್ದು ಸಹಜ. ಅಂಬೇಡ್ಕರ್ ಅವರನ್ನು ಅಪಮಾನಿಸಿದ ನ್ಯಾ ಮಲ್ಲಿಕಾರ್ಜುನ ಗೌಡ್ ಅವರನ್ನು ವಜಾ ಮಾಡಲು ಒತ್ತಾಯಿಸಿ ರಾಜ್ಯದ ಎಲ್ಲ ದಲಿತ ಸಂಘಟನೆಗಳು, ಪ್ರಗತಿಪರ ಗುಂಪುಗಳು ಮತ್ತು ವಿಚಾರವಂತರು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಿಧಾನಸೌಧ ಚಲೋ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ.
ಬಹುಶಃ ಇತ್ತೀಚೆಗೆ ತಾನೇ ಅಂತ್ಯಗೊಂಡ ದೆಹಲಿಯ ರೈತಮುಷ್ಕರವನ್ನು ಹೊರತುಪಡಿಸಿದರೆ, ಫೆಬ್ರವರಿ 19ರ ಪ್ರತಿಭಟನಾ ಮೆರವಣಿಗೆ ಒಂದು ಚಾರಿತ್ರಿಕ ಗಳಿಗೆಯಾಗಿ ಕಾಣುತ್ತದೆ. ಸಾಗರೋಪಾದಿಯಲ್ಲಿ ನೆರೆದ ಜನರ ಆಕ್ರೋಶದ ದನಿಗಳು ಆಳುವವರನ್ನು ತಲುಪಿದ್ದರೂ, ರಸ್ತೆಗಳನ್ನು ನೀಲಿಮಯವಾಗಿಸಿದ ಈ ಜನಸ್ತೋಮ ಕನ್ನಡದ ಸುದ್ದಿಮನೆಗಳನ್ನು ತಲುಪದೆ ಹೋದದ್ದು, ಕನ್ನಡ ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮರಾ ಕಣ್ಣುಗಳಿಗೆ ಕಾಣದೆ ಹೋದದ್ದು ಸಹಜವಾಗಿಯೇ ಜನಾಕ್ರೋಶಕ್ಕೆ ಗುರಿಯಾಗಿದೆ. ಕನ್ನಡದ ಸುದ್ದಿಮನೆಗಳು ಏಕೆ ಶೋಷಿತ ಜನರ ದನಿಗೆ ಕಿವುಡಾಗಿವೆ ? ಏಕೆ ಶೋಷಿತ ಆಕ್ರೋಶಕ್ಕೆ, ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ ಕುರುಡಾಗಿವೆ ? ಹಿಜಾಬ್ ತೊಟ್ಟ ಪುಟ್ಟ ಹುಡುಗಿಯನ್ನು ಅಟ್ಟಿಸಿಕೊಂಡು ಹೋಗುವ ಕ್ಯಾಮರಾಗಳಿಗೆ, ಬೈಟ್‍ಗಳಿಗಾಗಿ ಪೀಡಿಸುವ, ರೋಚಕ ಸುದ್ದಿಗಾಗಿ ಹಪಹಪಿಸುವ ಸುದ್ದಿಮನೆಗಳ ಕ್ಯಾಮರಾವಾಹಕರಿಗೆ ಈ ಸಾವಿರಾರು ನೀಲವಸ್ತ್ರದ ಜನರು ಏಕೆ ಗೋಚರಿಸುವುದಿಲ್ಲ. ದೇಶಾದ್ಯಂತ ಬೀದಿಗಿಳಿದು ಪ್ರತಿಭಟಿಸುತ್ತಿರುವ ಲಕ್ಷಾಂತರ ಕಾರ್ಮಿಕರು, ಶ್ರಮಜೀವಿಗಳು, ಮಹಿಳೆಯರು, ಆದಿವಾಸಿಗಳು ಏಕೆ ಕಾಣುವುದಿಲ್ಲ ?
ಬಂಡವಾಳಶಾಹಿ ಅರ್ಥವ್ಯವಸ್ಥೆ ಮತ್ತು ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಹಾಗೂ ಭಾರತೀಯ ಸಮಾಜದಲ್ಲಿ ಇಂದಿಗೂ ಬೇರೂರಿರುವ ಊಳಿಗಮಾನ್ಯ ಧೋರಣೆಯ ಮೇಲರಿಮೆ ಈ ಮೂರೂ ವಿದ್ಯಮಾನಗಳನ್ನು ಭಾರತದ ಮಾಧ್ಯಮಗಳ ಕಾರ್ಯವೈಖರಿಯಲ್ಲಿ ಗುರುತಿಸಬಹುದು. ವಿದ್ಯುನ್ಮಾನ ಮಾಧ್ಯಮಗಳ ಅಸೂಕ್ಷ್ಮತೆಗೆ ಮಾರುಕಟ್ಟೆ ಪ್ರೇರಿತ ಟಿಆರ್‍ಪಿ ಗಣನೆಯೊಂದೇ ಕಾರಣವಲ್ಲ. ಈ ಮಾಧ್ಯಮಗಳನ್ನು ನಿಯಂತ್ರಿಸುವ ಬಂಡವಳಿಗ ಸಮೂಹ, ನಿರ್ವಹಿಸುವ ಮೇಲ್ಜಾತಿಯ ಮನಸುಗಳು ಮತ್ತು ಇವೆರಡನ್ನೂ ಪ್ರಭಾವಿಸುವ ಮಾರುಕಟ್ಟೆಯ ಅನಿವಾರ್ಯತೆಗಳು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳ ಜನಸ್ಪಂದನೆಯ ಪ್ರಮಾಣವನ್ನೂ ನಿರ್ಧರಿಸುತ್ತವೆ. ಕನ್ನಡದ ಸುದ್ದಿಮನೆಗಳು ಮತ್ತು ವಾರ್ತಾಭಾರತಿಯನ್ನು ಹೊರತುಪಡಿಸಿ ಉಳಿದೆಲ್ಲಾ ಪತ್ರಿಕೆಗಳೂ ಬೆಂಗಳೂರಿನ ಪ್ರತಿಭಟನೆಯ ಸುದ್ದಿಗೆ ಪ್ರಾಶಸ್ತ್ಯ ನೀಡದಿರುವುದನ್ನು ಈ ನೆಲೆಯಲ್ಲೇ ವ್ಯಾಖ್ಯಾನಿಸಬೇಕಿದೆ.
ಮಾಧ್ಯಮಗಳು ದಲಿತ ಸಮುದಾಯಗಳ ದನಿಗೆ ದನಿಯಾಗುತ್ತಿಲ್ಲ ಎಂಬ ಹಲುಬುವಿಕೆಯ ನಡುವೆಯೇ ಈ ಮಾಧ್ಯಮಗಳ ಮೂಲ ಸ್ವರೂಪವನ್ನೂ ಪರಾಮರ್ಶಿಸಬೇಕಾಗುತ್ತದೆ. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಸಂಸ್ಥೆಯಾಗಿ, ಸಾಮಾನ್ಯ ಪ್ರಜೆಗಳ ಸಾರ್ವಜನಿಕ ಧ್ವನಿಯಾಗಿ ಕಾರ್ಯನಿರ್ವಹಿಸಬೇಕಾದ ಮಾಧ್ಯಮಗಳು ತಮ್ಮ ಹೊಣೆಗಾರಿಕೆಯನ್ನು ಮರೆತಿರುವುದಷ್ಟೇ ಅಲ್ಲದೆ, ಆಡಳಿತ ವ್ಯವಸ್ಥೆಯೊಡನೆ, ಆಡಳಿತಾರೂಢ ಅಧಿಕಾರ ಕೇಂದ್ರಗಳೊಡನೆ ಮತ್ತು ಸ್ಥಾಪಿತ ಸಾಮಾಜಿಕ ವ್ಯವಸ್ಥೆಯೊಡನೆ ಗುರುತಿಸಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಒಂದು ವರ್ಷದ ಕಾಲ ದೆಹಲಿ ಗಡಿಗಳಲ್ಲಿ ನಡೆದ ಚಾರಿತ್ರಿಕ ರೈತ ಮುಷ್ಕರದ ಸಂದರ್ಭದಲ್ಲೂ ವಿದ್ಯುನ್ಮಾನ ಮಾಧ್ಯಮಗಳು ಇದೇ ನಿಷ್ಕ್ರಿಯತೆ ಮತ್ತು ಅಸೂಕ್ಷ್ಮತೆಯನ್ನು ಪ್ರದರ್ಶಿಸಿದ್ದವು. 2019-20ರಲ್ಲಿ ಸಿಎಎ-ಎನ್‍ಆರ್‍ಸಿ ವಿರುದ್ಧ ನಡೆದ ಜನಾಂದೋಲನಗಳ ಸಂದರ್ಭದಲ್ಲೂ ಬಹುಪಾಲು ಸುದ್ದಿಮನೆಗಳು ಆಡಳಿತ ವ್ಯವಸ್ಥೆಯ ವಕ್ತಾರರಂತೆ ವರ್ತಿಸಿದ್ದವು.
ಇಲ್ಲಿ ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆ ಮತ್ತು ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಜ್ಜಾಗಿರುವ ಔದ್ಯಮಿಕ ವಲಯದ ಹಿತಾಸಕ್ತಿಗಳು ಮುನ್ನೆಲೆಗೆ ಬರುತ್ತವೆ. ದೇಶದ ಪ್ರಜೆಗಳ ದನಿಗೆ ದನಿಯಾಗಬೇಕಾದ ಮಾಧ್ಯಮ ವಲಯ ಪ್ರಭುತ್ವದ ದನಿಗೆ ದನಿಗೂಡಿಸಿದರೆ ಏನಾಗಬಹುದು ಎಂಬ ಪ್ರಶ್ನೆಗೆ ಭಾರತದ ವಿದ್ಯುನ್ಮಾನ ಮಾಧ್ಯಮಗಳು, ವಿಶೇಷವಾಗಿ ಕನ್ನಡದ ಸುದ್ದಿಮನೆಗಳು ನಿದರ್ಶನವಾಗಿ ಕಾಣುತ್ತವೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಇಂದು ತಮ್ಮ ವೃತ್ತಿಧರ್ಮದ ಚೌಕಟ್ಟನ್ನು ದಾಟಿ, ಮಾರುಕಟ್ಟೆಯ ಒಂದು ಭಾಗವಾಗಿವೆ. ಕಾರ್ಪೋರೇಟ್ ಉದ್ಯಮಿಗಳ ಒಡೆತನದಲ್ಲೇ ಇರುವ ಬಹುಪಾಲು ಸುದ್ದಿಮನೆಗಳು ಮತ್ತು ವಾಹಿನಿಗಳು ಒಂದೆಡೆ ಮಾರುಕಟ್ಟೆ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಮತ್ತೊಂದೆಡೆ ಆಡಳಿತಾರೂಢ ಬಿಜೆಪಿ ಮತ್ತು ಅದರ ಹಿಂದುತ್ವ ರಾಜಕಾರಣದೊಂದಿಗೆ ಗುರುತಿಸಿಕೊಳ್ಳುವ ಮೂಲಕ ತಮ್ಮ ಅಸ್ತಿತ್ವವನ್ನೂ ಕಾಪಾಡಿಕೊಳ್ಳಲು ಶ್ರಮಿಸುತ್ತವೆ.
ಬಹುಪಾಲು ಮಾಧ್ಯಮ ಸಮೂಹಗಳ ಒಡೆತನವನ್ನು ಹಿಂದುತ್ವ ರಾಜಕಾರಣದ ಕಾಲಾಳು ಉದ್ಯಮಿಗಳೇ ಹೊಂದಿರುವುದರಿಂದಲೇ ಇಂದು ಕನ್ನಡದ ಮತ್ತು ಹಿಂದಿಯ ಸುದ್ದಿಮನೆಗಳು ಭಟ್ಟಂಗಿತನದ ಪರಾಕಾಷ್ಠೆ ತಲುಪಿವೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಕೋವಿದ್ ಸಾಂಕ್ರಾಮಿಕದ ಸಂದರ್ಭದಲ್ಲೇ ಕನ್ನಡದ ಸುದ್ದಿಮನೆಗಳ ಭ್ರಷ್ಟಾತಿಭ್ರಷ್ಟ ಅವತಾರವನ್ನು ಕಂಡಿದ್ದಾಗಿದೆ. ಹಿಂದುತ್ವ ರಾಜಕಾರಣವನ್ನು ವಿರೋಧಿಸುವ ಅಥವಾ ಜನಪರ ಧ್ವನಿಯನ್ನು ಪ್ರತಿನಿಧಿಸುವ ಯಾವುದೇ ಒಂದು ಪ್ರತಿಭಟನೆ, ಪ್ರತಿರೋಧ, ಆಂದೋಲನ ಅಥವಾ ಮುಷ್ಕರ ಈ ವಾಹಿನಿಗಳ ಪಾಲಿಗೆ ನಗಣ್ಯ ಎನಿಸುತ್ತದೆ. ಪ್ರಸ್ತುತ ಹಿಜಾಬ್ ವಿವಾದದಲ್ಲೂ ಇದೇ ಮಾದರಿಯನ್ನು ಗಮನಿಸುತ್ತಿದ್ದೇವೆ. ತಮ್ಮ ಮಾರುಕಟ್ಟೆ ಟಿಆರ್‍ಪಿ ಹೆಚ್ಚಿಸಿಕೊಳ್ಳುವುದರೊಂದಿಗೇ, ಅತಿಯಾದ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸುವ ಮೂಲಕ ಕನ್ನಡದ ಸುದ್ದಿಮನೆಗಳು ಜನಸಮೂಹಗಳ ಸಾರ್ವತ್ರಿಕ ಸಮಸ್ಯೆಗಳಿಗೆ ವಿಮುಖವಾಗುತ್ತಿವೆ.
ಒಂದು ಔದ್ಯಮಿಕ ಸಂಸ್ಥೆಯಾಗಿ ಯಾವುದೇ ಮಾಧ್ಯಮ ಸಮೂಹ/ವಾಹಿನಿ/ಸುದ್ದಿಮನೆ ಮಾರುಕಟ್ಟೆಯ ಅನಿವಾರ್ಯತೆಗಳಿಗೆ ತಕ್ಕಂತೆ ವರ್ತಿಸುವುದು ಸಹಜವೇ ಆದರೂ, ಈ ಮಾಧ್ಯಮಗಳನ್ನು ಪ್ರತಿನಿಧಿಸುವ ಪತ್ರಿಕೋದ್ಯೋಗಿಗಳು, ಪತ್ರಕರ್ತರು, ಸುದ್ದಿ ಸಂಪಾದಕರು ಮತ್ತು ವರದಿಗಾರರು ತಮ್ಮ ವೃತ್ತಿಧರ್ಮವನ್ನು ಪಾಲಿಸಬೇಕಲ್ಲವೇ ? ಸಂಘಪರಿವಾರದ ವಕ್ತಾರರಂತೆ ಮಾತನಾಡುವ ಕನ್ನಡದ ಸುದ್ದಿಮನೆಗಳ ಸಂಪಾದಕರು, ನಿರೂಪಕರು ಮತ್ತು ವರದಿಗಾರರು ಈ ವೃತ್ತಿಧರ್ಮವನ್ನು ಮರೆತಿರುವುದರಿಂದಲೇ ಕನ್ನಡದ ಮಾಧ್ಯಮ ಲೋಕ ನೈತಿಕವಾಗಿ ಅಧೋಗತಿಗಿಳಿದಿದೆ. ಈ ಅಧಃಪತನದ ಮೂಲ ಕಾರಣ ಇರುವುದು ಮಾಧ್ಯಮಗಳನ್ನು ಪ್ರತಿನಿಧಿಸುವ ವ್ಯಕ್ತಿಗಳ ಜಾತಿ ಶ್ರೇಷ್ಠತೆಯ ಮೇಲರಿಮೆ ಮತ್ತು ಅಹಮಿಕೆಯಲ್ಲಿ. ತಳಸಮುದಾಯಗಳೊಡನೆ, ಶೋಷಿತ, ತುಳಿತಕ್ಕೊಳಗಾದ, ದಮನಿತ ಜನತೆಯೊಡನೆ ಗುರುತಿಸಿಕೊಳ್ಳಲಾಗದಂತಹ ಒಂದು ತಾತ್ವಿಕ ನೆಲೆಗಳಲ್ಲಿ ಈ ಸಂಪಾದಕರ ವರ್ಗ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಂಡುಕೊಂಡಿರುತ್ತದೆ.
ಪತ್ರಿಕಾವಲಯದಲ್ಲಿ ಅಥವಾ ವಿದ್ಯುನ್ಮಾನ ಮಾಧ್ಯಮ ವಲಯದಲ್ಲಿರುವ ಪತ್ರಿಕೋದ್ಯೋಗಿಗಳಿಗೆ ಸಮಷ್ಟಿ ಪ್ರಜ್ಞೆ ಸದಾ ಜಾಗೃತಾವಸ್ಥೆಯಲ್ಲಿರಬೇಕಾದ್ದು ಅತ್ಯವಶ್ಯ. ತಾವು ಪ್ರತಿನಿಧಿಸುವ ಮಾಧ್ಯಮ ಸಮೂಹದ ಒಡೆತನಕ್ಕೂ ತಾವು ನಿರ್ವಹಿಸುವ ಸಮಾಜಮುಖಿ ಚಟುವಟಿಕೆಗೂ ನಡುವೆ ಒಂದು ಗೋಡೆ ಅತ್ಯವಶ್ಯವಾಗಿ ಇರಬೇಕು. ಸುದ್ದಿ ವಾಹಕರಾಗಿ, ಸುದ್ದಿ ಸಂಪಾದಕರಾಗಿ ಮತ್ತು ಟಿವಿ ವಾಹಿನಿಯ ನಿರೂಪಕರಾಗಿ ಲಕ್ಷಾಂತರ ಜನರನ್ನು ಕ್ಷಣಮಾತ್ರದಲ್ಲಿ ತಲುಪುವ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿಗಳಲ್ಲಿ ಸಮಷ್ಟಿ ಪ್ರಜ್ಞೆಯೊಡನೆ ಸಮಾಜದ ಆಂತರಿಕ ತುಮುಲಗಳನ್ನು ಗ್ರಹಿಸುವ ತೀಕ್ಷ್ಣತೆಯೂ ಇರಬೇಕಾಗುತ್ತದೆ. ಒಬ್ಬ ಜನಪ್ರತಿನಿಧಿಯಲ್ಲಿ ಇರಬೇಕಾದ ಸೂಕ್ಷ್ಮ ಸಂವೇದನೆಯೇ ಸುದ್ದಿವಾಹಕರಲ್ಲೂ ಇರಬೇಕಾಗುತ್ತದೆ.(ಇಲ್ಲ ಎನ್ನುವುದು ವಾಸ್ತವ.)ಏಕೆಂದರೆ ತಮ್ಮ ಜೀವನೋಪಾಯಕ್ಕಾಗಿ ಮಾಧ್ಯಮದ ಒಡೆಯನನ್ನು ಆಶ್ರಯಿಸಬೇಕಾದರೂ, ಈ ಸುದ್ದಿವಾಹಕರು ಬೌದ್ಧಿಕವಾಗಿ ಜನಸಾಮಾನ್ಯರನ್ನೇ ಪ್ರತಿನಿಧಿಸುತ್ತಾರೆ. ಜನಸಮೂಹಗಳನ್ನು ಕಾಡುವ ಜ್ವಲಂತ ಸಮಸ್ಯೆಗಳು, ಸಂದಿಗ್ಧತೆಗಳು ಮತ್ತು ಜಟಿಲ ಬಿಕ್ಕಟ್ಟುಗಳು ಪ್ರತಿಯೊಬ್ಬ ಸುದ್ದಿವಾಹಕರಲ್ಲೂ ಪ್ರಕ್ಷುಬ್ಧತೆಯನ್ನು ಸೃಷ್ಟಿಸದೆ ಹೋದರೆ, ಅಂಥವರನ್ನು ಸ್ಥಾಪಿತ ವ್ಯವಸ್ಥೆಯ ಏಜೆಂಟರೆಂದಷ್ಟೇ ಪರಿಗಣಿಸಲು ಸಾಧ್ಯ.
ಇಂದು ಕನ್ನಡದ ಸುದ್ದಿಮನೆಗಳಲ್ಲಿ ಇಂತಹ ಏಜೆಂಟರೇ ಪ್ರಧಾನವಾಗಿ ಕಂಡುಬರುತ್ತಿದ್ದಾರೆ. ನೋಟು ಅಮಾನ್ಯೀಕರಣದಿಂದ ಸಿಎಎ-ಎನ್‍ಆರ್‍ಸಿವರೆಗೆ, ಜೆಎನ್‍ಯು ವಿವಾದದಿಂದ ಮೈಸೂರಿನ ರಂಗಾಯಣದವರೆಗೆ, ಕೋವಿದ್ ಸಾಂಕ್ರಾಮಿಕದಿಂದ ಹಿಜಾಬ್ ವಿವಾದದವರೆಗೆ, ಕನ್ನಡದ ಸುದ್ದಿಮನೆಗಳ ಸುದ್ದಿವಾಹಕರು ತಮ್ಮ ವೃತ್ತಿಧರ್ಮಕ್ಕಿಂತಲೂ ಸ್ವಾಮಿನಿಷ್ಠೆಗೇ ಹೆಚ್ಚು ಪ್ರಾಮುಖ್ಯತೆ ನೀಡಿರುವುದನ್ನು ಗಮನಿಸಬೇಕು. ಇದಕ್ಕೆ ಕಾರಣ ಈ ಸುದ್ದಿವಾಹಕರು ತಮ್ಮ ಜಾತಿ ಅಸ್ಮಿತೆಯ ಚೌಕಟ್ಟಿನಿಂದ ಹೊರಬರುವ ಪ್ರಯತ್ನವನ್ನೇ ಮಾಡದಿರುವುದು. ಒಂದೆಡೆ ಧನದಾಹಿ ಬಂಡವಾಳ ವ್ಯವಸ್ಥೆಯ ಆರಾಧಕರಾಗಿ ತಮ್ಮ ಜೀವನೋಪಾಯ ಕಂಡುಕೊಳ್ಳುತ್ತಲೇ ಮತ್ತೊಂದೆಡೆ ತಮ್ಮ ವ್ಯಕ್ತಿಗತ ಜಾತಿ ಅಸ್ಮಿತೆಯ ಚೌಕಟ್ಟಿನಿಂದ ಹೊರಬರಲಾರದೆ, ಮನುಜ ಸೂಕ್ಷ್ಮತೆ ಮತ್ತು ಸಂವೇದನೆಯನ್ನೂ ಕಳೆದುಕೊಂಡು, ಹಿಂದುತ್ವ ರಾಜಕಾರಣದ ಸಾಂಸ್ಕೃತಿಕ ನೆಲೆಗಳಿಗೆ ಮೇವುಣಿಸುತ್ತಿರುವುದು ಕನ್ನಡ ಸುದ್ದಿಮನೆಗಳ ಸುದ್ದಿವಾಹಕರ ಲಕ್ಷಣ.
ಹಾಗಾಗಿಯೇ ಕನ್ನಡದ ಸುದ್ದಿಮನೆಗಳಿಗೆ ಕೊಪ್ಪಳದ ದೇವಸ್ಥಾನದ ಘಟನೆಯಂತಹ ಅಸ್ಪೃಶ್ಯತೆಯ ದೌರ್ಜನ್ಯಗಳು, ಹಾಥ್ರಸ್‍ನಂತಹ ಶೋಷಿತ ಮಹಿಳೆಯರ ಮೇಲಿನ ಅತ್ಯಾಚಾರಗಳು, ಹಿಜಾಬ್ ವಿವಾದದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕುಚ್ಯುತಿ, ದಿನನಿತ್ಯ ನಡೆಯುತ್ತಿರುವ ಜಾತಿ ದೌರ್ಜನ್ಯದ ಪ್ರಕರಣಗಳು ಪ್ರಮುಖ ಸುದ್ದಿಯಾಗಿ ಕಾಣುವುದಿಲ್ಲ. ಈ ಸುದ್ದಿಮನೆಗಳ ಕ್ಯಾಮರಾ ಕಣ್ಣುಗಳಿಗೆ ಶೋಷಣೆಯ ನೆಲೆಗಳು ಗೋಚರಿಸುವುದಿಲ್ಲ ಹಾಗೆಯೇ ಶೋಷಣೆಯ ವಿರುದ್ಧ ಸಮಾಜದಲ್ಲಿ ಗಟ್ಟಿಯಾಗಿಯೇ ಕೇಳಿಬರುವ ಪ್ರತಿರೋಧದ ಧ್ವನಿಗಳೂ ಕೇಳಿಸುವುದಿಲ್ಲ. ಹಾಗಾಗಿಯೇ ದೆಹಲಿಯ ರೈತಮುಷ್ಕರದಲ್ಲಿ ಆಳುವ ವರ್ಗಗಳಿಗೆ ಕಂಡ ಕಲ್ಪಿತ ಭಯೋತ್ಪಾದಕರು, ಖಲಿಸ್ತಾನಿಗಳು, ಉಗ್ರಗಾಮಿಗಳೇ ಈ ಸುದ್ದಿಮನೆಯ ಸಂಪಾದಕರಿಗೂ ಹಾಗೆಯೇ ಕಾಣುತ್ತಾರೆ. ಸುದ್ದಿಮನೆಗಳ ಸಂಪಾದಕರಿಗೆ ತಮ್ಮದೇ ಆದ ಕಣ್ಣೋಟ/ಮುನ್ನೋಟ ಇದ್ದಿದ್ದರೆ ದೆಹಲಿಯ ಗಡಿಗಳಲ್ಲಿ ರೈತರೇ ಕಾಣುತ್ತಿದ್ದರು. ಆದರೆ ಈ ಮಾಧ್ಯಮ ವಕ್ತಾರರರ ದೃಷ್ಟಿಗೆ ಮಾರುಕಟ್ಟೆಯ ಪರದೆ, ಜಾತಿ ಶ್ರೇಷ್ಠತೆಯ ಮಸುಕು ಕವಿದಿರುತ್ತದೆ.
ಬಂಡವಾಳಶಾಹಿ ಅರ್ಥವ್ಯವಸ್ಥೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಸ್ಥಾಪಿತ ವ್ಯವಸ್ಥೆಯೊಳಗಿನ ಇಂತಹ ಒಳಬಿರುಕುಗಳನ್ನೇ ಹೆಚ್ಚಾಗಿ ಆಶ್ರಯಿಸುತ್ತದೆ. ಭಾರತದ ಸಂದರ್ಭದಲ್ಲಿ ಇಲ್ಲಿನ ಜಾತಿ ವ್ಯವಸ್ಥೆ, ಅದರೊಳಗಿನ ಶ್ರೇಷ್ಠತೆಯ ವ್ಯಸನ ಮತ್ತು ಅದು ಉಂಟುಮಾಡುವ ಬಿರುಕುಗಳು, ಈ ಜಾತಿ ವ್ಯವಸ್ಥೆಯನ್ನು ಪೋಷಿಸುವ ವೈದಿಕಶಾಹಿ ಸಾಂಸ್ಕೃತಿಕ ರಾಜಕಾರಣ ಇವೆಲ್ಲವೂ ಮಾರುಕಟ್ಟೆಯನ್ನು ಮತ್ತಷ್ಟು ಬಲಪಡಿಸುವ ಸಾಧನಗಳಾಗಿ ಬಳಕೆಯಾಗುತ್ತವೆ. ಹಾಗಾಗಿಯೇ ಪ್ರಜಾವಾಣಿಯಂತಹ ಪತ್ರಿಕೆಯೂ ಸಹ ತನ್ನ ಅಸೂಕ್ಷ್ಮತೆಯನ್ನು ಆಗಿಂದಾಗ್ಗೆ ಪ್ರದರ್ಶಿಸುತ್ತಲೇ ಇರುತ್ತದೆ. ಬಂಡವಾಳಶಾಹಿಯು ತನ್ನ ಉಳಿವಿಗಾಗಿ ಅವಲಂಬಿಸುವ ಪ್ರತಿಯೊಂದು ಸಾಮಾಜಿಕ ನೆಲೆಗಳನ್ನೂ ತನ್ನ ಬಂಡವಾಳದ ಮೂಲಕವೇ ಬಲಪಡಿಸುತ್ತಿರುತ್ತದೆ. ಇದರಲ್ಲಿ ಜಾತಿ ವ್ಯವಸ್ಥೆ ಮತ್ತು ಅದು ಪ್ರತಿನಿಧಿಸುವ ವೈದಿಕಶಾಹಿಯ ಶೋಷಕ ವ್ಯವಸ್ಥೆಯೂ ಒಂದು.
ತನಗೆ ಅತ್ಯವಶ್ಯವಾದ ಸಂವಹನ ಮಾಧ್ಯಮಗಳನ್ನು ಸಂರಕ್ಷಿಸಲು ಬಂಡವಾಳಶಾಹಿ ಮಾರುಕಟ್ಟೆ ಸಮಾಜದ ಬೌದ್ಧಿಕ ನೆಲೆಗಳನ್ನೂ ತನ್ನ ಬಾಹುಗಳಲ್ಲಿ ಬಂಧಿಸಲಾರಂಭಿಸುತ್ತದೆ. ಸಾಮಾನ್ಯ ಅಧ್ಯಯನ, ಸಂಶೋಧನೆ ಮತ್ತು ಪರಿಶೋಧನೆಯ ನೆಲೆಗಳನ್ನೂ ಸಹ ವಾಣಿಜ್ಯೀಕರಣಗೊಳಿಸುವ ಮೂಲಕ, ಸಂವಹನದ ಸೇತುವೆಗಳಲ್ಲಿ ತನ್ನದೇ ಆದ ನಿಯಂತ್ರಕ ಶಕ್ತಿಗಳನ್ನು ರೂಪಿಸುತ್ತಾ ಹೋಗುತ್ತದೆ. ಮಾಧ್ಯಮಗಳು ಏಕೆ ಹೀಗಾಗಿವೆ ? ಶೈಕ್ಷಣಿಕ ವಲಯ, ಬೌದ್ಧಿಕ ವಲಯ, ಅಕಾಡೆಮಿಕ್ ವಲಯ ಏಕೆ ನಿಷ್ಕ್ರಿಯವಾಗಿವೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿ ಕಂಡುಕೊಳ್ಳಬೇಕಿದೆ. ಸಂಸ್ಕೃತಿ, ಕಲೆ, ಜ್ಞಾನ ಮತ್ತು ಬೌದ್ಧಿಕ ಸಂಪತ್ತನ್ನು ಮಾರುಕಟ್ಟೆಯ ಸರಕುಗಳಂತೆಯೇ ಪರಿಗಣಿಸುವ ಮಾರುಕಟ್ಟೆ ವ್ಯವಸ್ಥೆ ಈ ವಲಯಗಳ ಸಂವಹನ ಸೇತುವೆಗಳನ್ನೂ ಹರಾಜು ಮಾರುಕಟ್ಟೆಯ ಜಗುಲಿಯಂತೆಯೇ ಪರಿವರ್ತಿಸಿಬಿಡುತ್ತದೆ. ಹಾಗಾಗಿಯೇ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಗಳು ಬಿಕರಿಯಾಗುವಂತೆಯೇ ಸಂವಹನ ವಾಹಿನಿಗಳ ಸಂಪಾದಕ, ನಿರೂಪಕ, ಸುದ್ದಿವಾಹಕ ಹುದ್ದೆಗಳೂ ಬಿಕರಿಯಾಗತೊಡಗುತ್ತವೆ.
ಭಾರತದ ಸಂದರ್ಭದಲ್ಲಿ ಇಲ್ಲಿನ ಜಾತಿ ಶ್ರೇಷ್ಠತೆಯ ನೆಲೆಗಳು ಮಾರುಕಟ್ಟೆ ಬಂಡವಾಳದೊಡನೆ ಸುಲಭವಾಗಿ ರಾಜಿಯಾಗುವುದರಿಂದಲೇ ಬಹುತೇಕ ಸಂವಹನದ ನೆಲೆಗಳು ತಮ್ಮ ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡು ದಿನದಿಂದ ದಿನಕ್ಕೆ ಬೆತ್ತಲಾಗುತ್ತಿವೆ. ಆಳುವ ವರ್ಗಗಳ ಸುಳ್ಳುಗಳನ್ನು ವೈಭವೀಕರಿಸುವಷ್ಟೇ ರೋಚಕವಾಗಿ, ವಿನಾಶಕಾರಿ ಯುದ್ಧವನ್ನೂ ವೈಭವೀಕರಿಸುವ, ಕ್ರೂರ ಅತ್ಯಾಚಾರವನ್ನೂ ರಂಜನೀಯವಾಗಿಸುವ ಒಂದು ವಿಕೃತ ಧೋರಣೆಯನ್ನು ಭಾರತದ ಸುದ್ದಿವಾಹಿನಿಗಳಲ್ಲಿ ಕಾಣಬಹುದಾದರೆ ಅದಕ್ಕೆ ಕಾರಣ ಈ ರಾಜೀ ಸೂತ್ರವೇ ಆಗಿರುತ್ತದೆ. ಹಾಗಾಗಿಯೇ ಆಳುವ ವರ್ಗಗಳ, ಪ್ರಭುತ್ವದ ಮತ್ತು ಸ್ಥಾಪಿತ ಹಿತಾಸಕ್ತಿಗಳ ಪರಿಭಾಷೆಯೇ ಮಾಧ್ಯಮದ ಪರಿಭಾಷೆಯೂ ಆಗುತ್ತದೆ. ಜೆಎನ್‍ಯು ಸಂಘರ್ಷದಲ್ಲಿ, ಹಾಥ್ರಸ್ ಅತ್ಯಾಚಾರ ಪ್ರಕರಣದಲ್ಲಿ, ಕೋವಿದ್ ನಿರ್ವಹಣೆಯಲ್ಲಿ ಇದನ್ನು ನೇರವಾಗಿಯೇ ಕಂಡಿದ್ದೇವೆ. ಹಿಜಾಬ್ ವಿವಾದದಲ್ಲೂ ಕಾಣುತ್ತಿದ್ದೇವೆ.
ಇಲ್ಲಿ ಆಧುನಿಕ ವಿದ್ಯುನ್ಮಾನ ಲೋಕದ ಸಾಮಾಜಿಕ ಮಾಧ್ಯಮಗಳ ಪಾತ್ರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಬಂಡವಾಳಶಾಹಿ ಮಾರುಕಟ್ಟೆಯ ಹಂಗಿಲ್ಲದೆ ಸಮಾಜಮುಖಿಯಾಗಿ, ಜನಸ್ಪಂದನೆಯೊಂದಿಗೆ, ಜನಸಮೂಹಗಳಿಗೆ ದನಿಗೆ ದನಿಯಾಗುವ ನೂತನ ಸಂವಹನ ಸೇತುವೆಗಳನ್ನು ನಾವಿಂದು ನಿರ್ಮಿಸಬೇಕಿದೆ. ಇಲ್ಲಿಯೂ ಸಹ ವ್ಯವಸ್ಥೆಯನ್ನು ಪ್ರತಿನಿಧಿಸುವ ಸಾಮಾಜಿಕ ಮಾಧ್ಯಮಗಳು ಮತ್ತಷ್ಟು ಒಳಬಿರುಕುಗಳನ್ನು ಸೃಷ್ಟಿಸುತ್ತಲೇ ಹೋಗುವ ಸಾಧ್ಯತೆಗಳಿರುತ್ತವೆ. ಇವೆಲ್ಲವನ್ನೂ ಮೀರಿ ಜನಪರ ವಾಹಿನಿಗಳು ವೈಚಾರಿಕತೆಯ ನೆಲೆಯಲ್ಲಿ, ವೈಜ್ಞಾನಿಕ ಮನೋಭಾವದೊಂದಿಗೆ, ಸಾಂವಿಧಾನಿಕ ಬದ್ಧತೆಯೊಂದಿಗೆ, ಪ್ರಜಾಸತ್ತಾತ್ಮಕ ಪ್ರಜ್ಞಾವಂತಿಕೆಯೊಂದಿಗೆ, ಜನಸಮುದಾಯಗಳ ನೋವಿನ ದನಿಗೆ ದನಿಯಾಗಿ ರೂಪುಗೊಳ್ಳಬೇಕಿದೆ. ಭಾರತದ ಸಂವಿಧಾನದ ಆಶಯದಂತೆ ದೇಶವನ್ನು ಒಂದು ಸರ್ವಜನಾಂಗದ ಶಾಂತಿಯ ತೋಟದಂತೆ ರೂಪಿಸಬೇಕಾದರೆ, ಈ ಸಂವಹನ ಸೇತುವೆಗಳು ಬಲಿಷ್ಠವಾಗುವುದು ಅತ್ಯವಶ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.
ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್‌ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.
ಆರಂಭಿಕ ಜೀವನ ಮತ್ತು ಶಿಕ್ಷಣ
ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.
ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ
ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.
ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.
ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.
ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.
1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.
ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.
ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’
ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.
ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ
2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.
ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್‌ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.
ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.
ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.
ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.
ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.
ಭವಿಷ್ಯದ ರಾಜಕೀಯ ಪಾತ್ರ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.
ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.
ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ
~ಡಾ.ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಭಾರತದ ವೈದ್ಯಕೀಯ ಶಿಕ್ಷಣ ರಂಗದಲ್ಲಿ ಏಕರೂಪತೆ ಮತ್ತು ಪಾರದರ್ಶಕತೆಯನ್ನು ತರುವ ಆಶಯದೊಂದಿಗೆ ಜಾರಿಗೆ ಬಂದರೂ, ಪ್ರಾಯೋಗಿಕವಾಗಿ ಅದು ದೇಶದ ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ನೆಲೆಗಳಲ್ಲಿ ತೀವ್ರ ಸ್ವರೂಪದ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಕೇವಲ ಒಂದು ತಾಂತ್ರಿಕ ಪ್ರವೇಶ ಪರೀಕ್ಷೆಯಾಗಿ ಕಾಣುವ ಈ ವ್ಯವಸ್ಥೆಯು, ವಾಸ್ತವದಲ್ಲಿ ಭಾರತದ ಬಹುಸಂಸ್ಕೃತಿ ಮತ್ತು ಒಕ್ಕೂಟ ತತ್ತ್ವದ ಆಳವಾದ ರಚನೆಗಳ ಮೇಲೆ ಪ್ರಹಾರ ನಡೆಸುತ್ತಿದೆ. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ತರಲಾದ ಈ ಕೇಂದ್ರೀಕೃತ ಮಾದರಿಯು ಹೇಗೆ ಸಾಮಾನ್ಯ ವಿದ್ಯಾರ್ಥಿ ಸಮೂಹವನ್ನು ಶೈಕ್ಷಣಿಕ ಪ್ರಕ್ರಿಯೆಯಿಂದ ಹೊರದೂಡುತ್ತಿದೆ, ಪ್ರಾದೇಶಿಕ ಸ್ವಾಯತ್ತತೆಯನ್ನು ಧ್ವಂಸಗೊಳಿಸುತ್ತಿದೆ ಮತ್ತು ಸಾಂಪ್ರದಾಯಿಕ ಶ್ರೇಣೀಕೃತ ಅಸಮಾನತೆಗಳನ್ನು ಆಧುನಿಕ ರೂಪದಲ್ಲಿ ಮರುಸ್ಥಾಪಿಸುತ್ತಿದೆ ಎಂಬುದನ್ನು ಸಾಮಾಜಿಕ ನ್ಯಾಯ ಮತ್ತು ವಿಮರ್ಶಾತ್ಮಕ ಸಿದ್ಧಾಂತಗಳ ಹಿನ್ನೆಲೆಯಲ್ಲಿ ವಿವರವಾಗಿ ವಿಶ್ಲೇಷಿಸಬೇಕಾಗಿದೆ.
1. ತಾರತಮ್ಯದ ಆರ್ಥಿಕ ಮತ್ತು ಪಠ್ಯಕ್ರಮದ ನೆಲೆಗಳು (Socio-Economic and Curricular Discrimination)
ನೀಟ್ ಪರೀಕ್ಷೆಯು “ಎಲ್ಲರಿಗೂ ಸಮಾನ ಅವಕಾಶ” ಎಂಬ ಭ್ರಮೆಯನ್ನು ಸೃಷ್ಟಿಸುತ್ತದೆಯಾದರೂ, ಅದರ ಒಳಗಣ್ಣು ಕೇವಲ ಒಂದು ನಿರ್ದಿಷ್ಟ ವರ್ಗದ ಪರವಾಗಿ ಕೆಲಸ ಮಾಡುತ್ತಿದೆ. ಈ ಪರೀಕ್ಷಾ ಪದ್ಧತಿಯು ಭಾರತೀಯ ಸಮಾಜದಲ್ಲಿ ಹೊಸದೊಂದು ಆರ್ಥಿಕ ತಾರತಮ್ಯವನ್ನು ಕಾನೂನುಬದ್ಧಗೊಳಿಸಿದೆ. ಇಂದು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕೇವಲ ವಿದ್ಯಾರ್ಥಿಯ ಪ್ರತಿಭೆಯನ್ನಷ್ಟೇ ಅವಲಂಬಿಸಿಲ್ಲ, ಬದಲಿಗೆ ಆ ಪೋಷಕರ ಆರ್ಥಿಕ ಸೌಲಭ್ಯವನ್ನು ಅವಲಂಬಿಸಿದೆ. ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡುವ ಕಾರ್ಪೊರೇಟ್ ಕೋಚಿಂಗ್ ಉದ್ಯಮದ (Coaching Industry) ಹಬ್‌ಗಳಾದ ಹಲವಾರು ಪ್ರತಿಷ್ಠಿತ ಕೇಂದ್ರಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗದ ಬಡ ಮತ್ತು ಕೆಳಮಧ್ಯಮ ವರ್ಗದ ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧೆಯ ಆರಂಭಿಕ ಹಂತದಲ್ಲೇ ಸೋಲಿಸಲ್ಪಡುತ್ತಿದ್ದಾರೆ. ಇದರೊಂದಿಗೆ, ಪಠ್ಯಕ್ರಮದ ತಾರತಮ್ಯವು ಈ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ. ದೇಶದ ವೈವಿಧ್ಯಮಯ ರಾಜ್ಯಗಳು ತಮ್ಮದೇ ಆದ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಅಗತ್ಯಗಳಿಗನುಗುಣವಾಗಿ ರೂಪಿಸಿಕೊಂಡ ರಾಜ್ಯ ಪಠ್ಯಕ್ರಮಗಳನ್ನು (State Syllabus) ಸಂಪೂರ್ಣವಾಗಿ ನಿರ್ಲಕ್ಷಿಸಿ, ಕೇವಲ ಸಿಬಿಎಸ್ಇ (NCERT) ಪಠ್ಯಕ್ರಮವನ್ನು ಮಾತ್ರ ಮಾನದಂಡವಾಗಿರಿಸಿಕೊಳ್ಳಲಾಗಿದೆ. ಇದು ಪ್ರಾದೇಶಿಕ ಭಾಷಾ ಮಾಧ್ಯಮಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದಿದ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದ ಕನಸಿನಿಂದಲೇ ವಂಚಿಸುವ ವ್ಯವಸ್ಥಿತ ತಾರತಮ್ಯವಾಗಿದೆ.
2. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆಯ ಕುಸಿತ
ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಮತ್ತು ಭ್ರಷ್ಟಾಚಾರ ಮುಕ್ತ ಎಂಬ ವಾದವನ್ನು ನೀಟ್ ಪರೀಕ್ಷೆಯ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆಗಳು (Paper Leaks) ಮತ್ತು ಅಕ್ರಮಗಳು ಸಂಪೂರ್ಣವಾಗಿ ಬೆತ್ತಲೆಗೊಳಿಸಿವೆ. ಇಡೀ ದೇಶಕ್ಕೆ ಒಂದೇ ಪರೀಕ್ಷೆ ಎಂಬ ಹಠದ ಪರಿಣಾಮವಾಗಿ, ಪ್ರಶ್ನೆ ಪತ್ರಿಕೆಗಳು ವ್ಯವಸ್ಥಿತ ಜಾಲಗಳ ಮೂಲಕ ಕೋಟ್ಯಂತರ ರೂಪಾಯಿಗಳಿಗೆ ಮಾರಾಟವಾಗುತ್ತಿರುವುದು ಪರೀಕ್ಷಾ ಮಂಡಳಿಗಳ ಸಾಂಸ್ಥಿಕ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸಿದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯವು, ಕಪ್ಪುಹಣ ಮತ್ತು ರಾಜಕೀಯ ಪ್ರಭಾವ ಬಳಸಿ ಪ್ರಶ್ನೆ ಪತ್ರಿಕೆಯನ್ನು ಮೊದಲೇ ಖರೀದಿಸುವ ಪ್ರಭಾವಿ ತರಬೇತಿ ಕೇಂದ್ರಗಳು ಹಾಗೂ ದಲ್ಲಾಳಿಗಳ ಪಾಲಾಗುತ್ತಿದೆ. ಇಂತಹ ವ್ಯವಸ್ಥಿತ ಹಗರಣಗಳು ಕೇವಲ ಅರ್ಹ ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯವಷ್ಟೇ ಅಲ್ಲ; ಇಡೀ ಶೈಕ್ಷಣಿಕ ಆಡಳಿತದ ಮೇಲಿರುವ ಸಾರ್ವಜನಿಕ ವಿಶ್ವಾಸಾರ್ಹತೆಯನ್ನೇ ಧ್ವಂಸಗೊಳಿಸಿವೆ. ಪಾರದರ್ಶಕತೆಯ ಹೆಸರಿನಲ್ಲಿ ತರಲಾದ ವ್ಯವಸ್ಥೆಯು ಇಂದು ಭ್ರಷ್ಟಾಚಾರದ ಅತಿ ದೊಡ್ಡ ಆಡುಂಬೊಲವಾಗಿ ಮಾರ್ಪಟ್ಟಿರುವುದು ಈ ಪರೀಕ್ಷಾ ಮಾದರಿಯ ನೈತಿಕ ಪತನಕ್ಕೆ ಸಾಕ್ಷಿಯಾಗಿದೆ.
3. ವ್ಯವಸ್ಥೆ ಸೃಷ್ಟಿಸಿದ ಆತ್ಮಹತ್ಯೆಗಳು ಮತ್ತು ಮಾನಸಿಕ ಹಿಂಸೆ (Institutional Tragedies and Mental Trauma)
ನೀಟ್ ಹೇರಿರುವ ಕಠಿಣ ಪರೀಕ್ಷಾ ಸ್ವರೂಪ ಮತ್ತು ಪದೇಪದೇ ಉಂಟಾಗುವ ಸಾಂಸ್ಥಿಕ ಲೋಪಗಳು ದೇಶದ ಯುವ ಸಮುದಾಯದ ಮೇಲೆ ಅಭೂತಪೂರ್ವ ಮಾನಸಿಕ ಒತ್ತಡವನ್ನು ಸೃಷ್ಟಿಸಿವೆ. ಇವು ಕೇವಲ ವೈಯಕ್ತಿಕ ವೈಫಲ್ಯದ ಸಾವುಗಳಲ್ಲ, ಬದಲಿಗೆ ಇವುಗಳನ್ನು “ಸಾಂಸ್ಥಿಕ ಕೊಲೆಗಳು” (Institutional Murders) ಎಂದು ಕರೆಯಬೇಕಾಗುತ್ತದೆ. ವಿದ್ಯಾರ್ಥಿಯೊಬ್ಬನ ಸುದೀರ್ಘ ವರ್ಷಗಳ ಶ್ರಮ, ಅರ್ಹತೆ ಮತ್ತು ಇಡೀ ಬದುಕಿನ ಸಾಮರ್ಥ್ಯವನ್ನು ಕೇವಲ ಮೂರು ಗಂಟೆಗಳ ಒಂದು ಅಮಾನವೀಯ ವಸ್ತುನಿಷ್ಠ (MCQ) ಪರೀಕ್ಷೆಯಲ್ಲಿ ನಿರ್ಧರಿಸುವ ಕ್ರೂರ ನಡೆ ಇದು. ಕೃಷಿ ಅಥವಾ ಶ್ರಮಿಕ ಹಿನ್ನೆಲೆಯಿಂದ ಬಂದ ಪೋಷಕರು ತಮ್ಮ ಇಡೀ ಜೀವಮಾನದ ದುಡಿಮೆಯನ್ನು ಸಾಲದ ರೂಪದಲ್ಲಿ ಸುರಿದು ಮಕ್ಕಳನ್ನು ಓದಿಸುತ್ತಿರುವಾಗ, ಆ ಸಾಲದ ಹೊರೆ, ಪರೀಕ್ಷಾ ಅಕ್ರಮಗಳ ಆತಂಕ ಮತ್ತು ಸಾಮಾಜಿಕ ನಿರೀಕ್ಷೆಗಳು ವಿದ್ಯಾರ್ಥಿಗಳ ಮೇಲೆ ಅತಿಯಾದ ಮಾನಸಿಕ ಹಿಂಸೆಯಾಗಿ ರೂಪಾಂತರಗೊಳ್ಳುತ್ತವೆ. ತಮಿಳುನಾಡಿನ ಅನಿತ್ಯಾಳಿಂದ ಹಿಡಿದು ದೇಶದ ನೂರಾರು ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿ ಹಾಗೂ ಕೋಟಾದಲ್ಲಿ ತರಬೇತಿ ಪಡೆಯುತ್ತಿದ್ದ ಅಭ್ಯರ್ಥಿಗಳ ಸಾಲು ಸಾಲು ಆತ್ಮಹತ್ಯೆಗಳು ಈ ಕಠಿಣ ಶೈಕ್ಷಣಿಕ ವ್ಯವಸ್ಥೆಯ ಕ್ರೂರತೆಗೆ ಸಾಕ್ಷಿಯಾಗಿವೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದನ್ನು ಇಡೀ ಬದುಕಿನ ಸೋಲು ಎಂಬಂತೆ ಬಿಂಬಿಸುವ ಇಂತಹ ಮಾರುಕಟ್ಟೆ ಕೇಂದ್ರಿತ ವ್ಯವಸ್ಥೆಯು, ಶಿಕ್ಷಣದ ಮೂಲ ಆಶಯವಾದ ವ್ಯಕ್ತಿತ್ವ ವಿಕಸನವನ್ನು ಕೊಲೆ ಮಾಡಿ ಯುವ ಮನಸ್ಸುಗಳಲ್ಲಿ ಕೀಳರಿಮೆ ಹಾಗೂ ತೀವ್ರ ಖಿನ್ನತೆಯನ್ನು ಬಿತ್ತುತ್ತಿದೆ.
4. ಪ್ರಾದೇಶಿಕ ಪ್ರಾಬಲ್ಯ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ಪ್ರಹಾರ
ಭಾರತೀಯ ಸಂವಿಧಾನದ ಆಶಯದಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಜಂಟಿ ಪಟ್ಟಿಯಲ್ಲಿದ್ದು (Concurrent List), ಪ್ರಾದೇಶಿಕ ಅಗತ್ಯಗಳಿಗೆ ತಕ್ಕಂತೆ ನೀತಿಗಳನ್ನು ರೂಪಿಸಿಕೊಳ್ಳುವ ಹಕ್ಕು ರಾಜ್ಯ ಸರ್ಕಾರಗಳಿಗಿದೆ. ಆದರೆ ನೀಟ್ ಪದ್ಧತಿಯು ರಾಜ್ಯಗಳ ಈ ಸಾಂವಿಧಾನಿಕ ಹಕ್ಕುಗಳನ್ನು ಸಂಪೂರ್ಣವಾಗಿ ಹರಣ ಮಾಡಿದೆ. ರಾಜ್ಯ ಸರ್ಕಾರಗಳು ತಮ್ಮ ತೆರಿಗೆದಾರರ ಹಣದಿಂದ, ತಮ್ಮದೇ ಭೂಮಿಯಲ್ಲಿ ನಿರ್ಮಿಸಿದ ವೈದ್ಯಕೀಯ ಕಾಲೇಜುಗಳ ಸೀಟುಗಳ ಮೇಲಿನ ನಿಯಂತ್ರಣವನ್ನು ಕೇಂದ್ರದ ಏಜೆನ್ಸಿಯೊಂದು ಕಸಿದುಕೊಂಡಿರುವುದು ಒಕ್ಕೂಟ ವ್ಯವಸ್ಥೆಯ (Federalism) ಮೇಲಿನ ಗಂಭೀರ ಪ್ರಹಾರವಾಗಿದೆ. ಇದರ ಪರಿಣಾಮವಾಗಿ, ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳ ಅರಿವಿಲ್ಲದ ಭಿನ್ನ ಪ್ರಾಂತ್ಯಗಳ ವಿದ್ಯಾರ್ಥಿಗಳು ದಕ್ಷಿಣದ ಅಥವಾ ನಿರ್ದಿಷ್ಟ ರಾಜ್ಯಗಳ ಗ್ರಾಮೀಣ ಕೋಟಾಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ಥಳೀಯ ರೋಗಿಗಳೊಂದಿಗೆ ಭಾಷಾ ಸಂವಹನ ನಡೆಸಲಾಗದ ಇಂತಹ ವೈದ್ಯರಿಂದಾಗಿ ಗ್ರಾಮೀಣ ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯು (Public Healthcare) ಸಂಪೂರ್ಣವಾಗಿ ದುರ್ಬಲಗೊಳ್ಳುತ್ತಿದೆ. ಸ್ಥಳೀಯ ಸಮುದಾಯಗಳ ಅಗತ್ಯಗಳಿಗೆ ಸ್ಪಂದಿಸುವ ಮತ್ತು ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರುವ ವೈದ್ಯರ ಲಭ್ಯತೆಯನ್ನು ಕಡಿತಗೊಳಿಸುವ ಮೂಲಕ ಈ ವ್ಯವಸ್ಥೆಯು ಪ್ರಾದೇಶಿಕ ಜನಸಂಖ್ಯಾಶಾಸ್ತ್ರ ಮತ್ತು ಆರೋಗ್ಯ ಸಮತೋಲನವನ್ನು ಏರುಪೇರು ಮಾಡಿದೆ.
5. ಜಾತೀಯತೆಯ ಕರಾಳತೆ ಮತ್ತು ಯಜಮಾನಿಕೆಯ ಮರುಸ್ಥಾಪನೆ (Perpetuation of Caste Hegemony)
ಸಮಕಾಲೀನ ಸನ್ನಿವೇಶದಲ್ಲಿ ನೀಟ್ ಪರೀಕ್ಷೆಯು “ಮೆರಿಟ್” (Meritocracy) ಮತ್ತು “ಪ್ರತಿಭೆ” ಎಂಬ ಅತ್ಯಂತ ಆಕರ್ಷಕ ಮುಖವಾಡವನ್ನು ಧರಿಸಿ ಬಂದಿದೆ. ಆದರೆ, ವಿಮರ್ಶಾತ್ಮಕವಾಗಿ ನೋಡಿದಾಗ ಈ ‘ಮೆರಿಟ್’ ಎನ್ನುವುದು ಕೇವಲ ವೈಯಕ್ತಿಕ ಸಾಮರ್ಥ್ಯವಲ್ಲ, ಬದಲಿಗೆ ಅದು ತಲೆಮಾರುಗಳಿಂದ ಒಂದು ನಿರ್ದಿಷ್ಟ ವರ್ಗವು ಅನುಭವಿಸಿಕೊಂಡು ಬಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಂಡವಾಳದ (Cultural Capital) ಹೊಸ ರೂಪವೇ ಹೊರತು ಬೇರೇನಲ್ಲ. ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿ, ಈಗಷ್ಟೇ ಮೊದಲ ತಲೆಮಾರಿನ ಶಿಕ್ಷಣ ಪಡೆಯುತ್ತಿರುವ ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ವಿದ್ಯಾರ್ಥಿಗಳಿಗೆ ಆಧುನಿಕ ಇಂಗ್ಲಿಷ್ ತರಬೇತಿ, ದುಬಾರಿ ಕೋಚಿಂಗ್ ಅಥವಾ ಇತ್ತೀಚಿನ ಪತ್ರಿಕೆ ಸೋರಿಕೆಯಂತಹ ಕರಾಳ ದಂಧೆಗಳ ರಹಸ್ಯ ಜಾಲಗಳಿಗೆ ಪ್ರವೇಶ ಪಡೆಯುವ ಸಾಮಾಜಿಕ ಹಿನ್ನೆಲೆ ಇರುವುದಿಲ್ಲ. ನೀಟ್ ವ್ಯವಸ್ಥೆಯು ಇಂತಹ ಐತಿಹಾಸಿಕ ಅಸಮಾನತೆಗಳನ್ನು ಸಂಪೂರ್ಣವಾಗಿ ಕಣ್ಣುಮುಚ್ಚಿ ಕುಳಿತು, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ತಾಂತ್ರಿಕವಾಗಿ ತಲೆಕೆಳಗು ಮಾಡುತ್ತಿದೆ. ಇದರ ಪರಿಣಾಮವಾಗಿ, ವೈದ್ಯಕೀಯ ಕ್ಷೇತ್ರವು ಸಮಾಜದ ಬಹುಪಾಲು ಶ್ರಮಿಕ ಮತ್ತು ತಳಸಮುದಾಯಗಳ ಕೈತಪ್ಪಿ, ಮತ್ತೆ ಕೇವಲ ಆಯ್ದ ಕೆಲವು ಉನ್ನತ ವರ್ಗಗಳ ಯಜಮಾನಿಕೆಯ (Hegemony) ತಾಣವಾಗಿ ಬದಲಾಗುತ್ತಿದೆ. ಇದು ಸಾಂಪ್ರದಾಯಿಕ ಜಾತೀಯತೆಯ ಶ್ರೇಣೀಕೃತ ಕರಾಳತೆಯನ್ನು ಅತ್ಯಂತ ಸೂಕ್ಷ್ಮ ಹಾಗೂ ಆಧುನಿಕ ಶೈಕ್ಷಣಿಕ ನಿಯಮಗಳ ಮೂಲಕ ಪುನರುತ್ಪಾದಿಸುವ ಅಪಾಯಕಾರಿ ನೆಲೆಯಾಗಿದೆ.
6. ಸಮನ್ವಯದ ದಾರಿ….
ನೀಟ್ ಸೃಷ್ಟಿಸಿರುವ ಈ ಸಾಂಸ್ಥಿಕ, ಆರ್ಥಿಕ ಮತ್ತು ಸಾಮಾಜಿಕ ಅವಾಂತರಗಳು ನಮಗೆ ಶಿಕ್ಷಣ ವ್ಯವಸ್ಥೆಯ ಮರುಚಿಂತನೆಯ ತುರ್ತು ಅಗತ್ಯವನ್ನು ನೆನಪಿಸುತ್ತವೆ. ಪ್ರಜಾಪ್ರಭುತ್ವದ ನಿಜವಾದ ಆಶಯವಿರುವುದು ಕೇವಲ ಕಾಗದದ ಮೇಲಿನ ತಾಂತ್ರಿಕ “ಏಕರೂಪತೆ”ಯಲ್ಲಲ್ಲ, ಬದಲಿಗೆ ಭಿನ್ನ ಹಿನ್ನೆಲೆಯ ಜನರನ್ನು ಒಳಗೊಳ್ಳುವ “ಸಮಾನತೆ” ಮತ್ತು “ಸಾಮಾಜಿಕ ನ್ಯಾಯ”ದಲ್ಲಿ ಮಾತ್ರ. ಕೇವಲ ಬಂಡವಾಳಶಾಹಿ ಮಾರುಕಟ್ಟೆಯ, ಕೋಚಿಂಗ್ ಮಾಫಿಯಾಗಳ ಮತ್ತು ಪ್ರಶ್ನೆ ಪತ್ರಿಕೆ ಮಾರಾಟ ಮಾಡುವ ಕರಾಳ ಜಾಲಗಳ ಹಿತಾಸಕ್ತಿಯನ್ನು ಕಾಯುವ ಇಂತಹ ಪ್ರವೇಶ ಪರೀಕ್ಷೆಗಳು ವೈದ್ಯಕೀಯ ಕ್ಷೇತ್ರವನ್ನು ಕೇವಲ ವ್ಯಾಪಾರೀಕರಣದ ಕೇಂದ್ರವನ್ನಾಗಿ ಮಾಡುತ್ತವೆಯೇ ಹೊರತು ಮಾನವೀಯತೆಯುಳ್ಳ ವೈದ್ಯರನ್ನು ಸೃಷ್ಟಿಸಲಾರವು. ಈ ಹಿನ್ನೆಲೆಯಲ್ಲಿ, ಪ್ರಾದೇಶಿಕ ಸ್ವಾಯತ್ತತೆ, ಬಹುತ್ವ ಮತ್ತು ತಳಸಮುದಾಯಗಳ ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸಲು ನೀಟ್ ಮಾದರಿಯ ಕೇಂದ್ರೀಕೃತ ಪರೀಕ್ಷೆಗಳ ತಾರತಮ್ಯದ ನೆಲೆಗಳನ್ನು ತಕ್ಷಣವೇ ಮರುಪರಿಶೀಲಿಸಬೇಕಾಗಿದೆ; ಇಲ್ಲದಿದ್ದರೆ ಇದು ದೇಶದ ಒಕ್ಕೂಟ ರಚನೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡುವುದು ಖಂಡಿತ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
-
ದಿನದ ಸುದ್ದಿ4 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ2 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ4 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ5 hours agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ


