Connect with us

ದಿನದ ಸುದ್ದಿ

ಜಮ್ಮು-ಕಾಶ್ಮೀರದ ತ್ವರಿತ ಅಭಿವೃದ್ಧಿಗಾಗಿ 20ಸಾವಿರ ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಉಪಕ್ರಮಗಳಿಗೆ ಪ್ರಧಾನಮಂತ್ರಿ ಶಿಲಾನ್ಯಾಸ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಜಮ್ಮು-ಕಾಶ್ಮೀರದಲ್ಲಿ ತ್ವರಿತ ಗತಿಯ ಅಭಿವೃದ್ಧಿಗಾಗಿ ಸುಮಾರು 20 ಸಾವಿರ ಕೋಟಿ ರೂಪಾಯಿ ವೆಚ್ಚದ ಹಲವು ಅಭಿವೃದ್ಧಿ ಉಪಕ್ರಮಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಶಿಲಾನ್ಯಾಸ ನೆರವೇರಿಸಿದರು.

ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯಿತ್‌ನಲ್ಲಿ ದೇಶದ ಎಲ್ಲ ಗ್ರಾಮ ಸಭೆಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಅಭಿವೃದ್ಧಿ ಉಪಕ್ರಮಗಳು ಜಮ್ಮು-ಕಾಶ್ಮೀರದ ಅಭಿವೃದ್ಧಿಯನ್ನು ಹೆಚ್ಚಿಸಲಿವೆ ಎಂದರು. ಕಾಶ್ಮೀರದಲ್ಲಿ ಇಂದು ಪಂಚಾಯಿತಿರಾಜ್ ದಿನ ಆಚರಿಸುತ್ತಿರುವುದು ಬದಲಾವಣೆಯ ಸಂಕೇತ ಎಂದು ಬಣ್ಣಿಸಿದರು.

ಪ್ರಜಾಪ್ರಭುತ್ವ ಜಮ್ಮು ಮತ್ತು ಕಾಶ್ಮೀರದಲ್ಲಿ ಬೇರು ಮಟ್ಟಕ್ಕೆ ತಲುಪಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳು ಇಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಹಲವಾರು ವರ್ಷಗಳಿಂದ ಮೀಸಲಾತಿಯ ಪ್ರಯೋಜನದಿಂದ ವಂಚಿತವಾದ ಜನರು ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ. ಮೀಸಲಾತಿಯ ಪ್ರಯೋಜನ ಹೊಂದುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ದೆಹಲಿ-ಅಮೃತ್‌ಸರ್-ಕತ್ರಾ ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆಗೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದರು. ಸಾಂಬಾದ ಪಲ್ಲಿ ಗ್ರಾಮದಲ್ಲಿ 108 ಜನೌಷಧಿ ಕೇಂದ್ರಗಳೊಂದಿಗೆ 500 ಕಿಲೋ ವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಲೋಕಾರ್ಪಣೆಗೊಳಿಸಿದರು.

ಸುಮಾರು ಮೂರು ಸಾವಿರದ 100ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬನಿಹಾಲ್-ಕಾಜಿಗುಂಡ್ ಸುರಂಗಮಾರ್ಗವನ್ನು ಉದ್ಘಾಟಿಸಿದರು.8.45 ಕಿಲೋ ಮೀಟರ್ ಉದ್ದದ ಈ ಸುರಂಗ ಮಾರ್ಗದಿಂದಾಗಿ ಬನಿಹಾಲ್-ಕಾಜಿಗುಂಡ್ ನಡುವಣ 16ಕಿಲೋ ಮೀಟರ್ ಅಂತರ ತಗ್ಗಲಿದೆ. ಇದರಿಂದ ಎರಡು ಸ್ಥಳಗಳ ನಡುವಣ ಪ್ರಯಾಣದ ಅಂತರ ಒಂದೂವರೆ ಗಂಟೆ ತಗ್ಗಲಿದೆ.
ಕಿಸ್ತ್‌ವಾರ್ ಜಿಲ್ಲೆಯ ಚೀನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಎರಡು ಜಲವಿದ್ಯುತ್ ಯೋಜನೆಗಳಿಗೂ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಜನತೆಯನ್ನು ಅಭಿನಂದಿಸಿದ ಪ್ರಧಾನಿ, ಪಲ್ಲಿ ಪಂಚಾಯಿತಿ ದೇಶದ ಮೊಟ್ಟ ಮೊದಲ ಇಂಗಾಲ-ರಹಿತ ಪಂಚಾಯಿತಿಯಾಗುವ ಮಾರ್ಗದಲ್ಲಿದೆ ನುಡಿದರು.

ಸರ್ವರ ಪ್ರಯತ್ನದಿಂದ ಏನೆಲ್ಲಾ ಮಾಡಬಹುದು ಎಂಬುದನ್ನು ಪಲ್ಲಿ ಪಂಚಾಯಿತಿ ದೇಶಕ್ಕೆ ತೋರಿಸಿಕೊಟ್ಟಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದ ಪ್ರತಿಯೊಂದು ಜಿಲ್ಲೆಯ 75ಕೆರೆಗಳ ಪುನಶ್ಚೇತನ ಹಾಗೂ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿರುವ ಅಮೃತ ಸರೋವರ ಉಪಕ್ರಮಕ್ಕೆ ಪ್ರಧಾನಿ ಈ ಸಂದರ್ಭದಲ್ಲಿ ಚಾಲನೆ ನೀಡಿದರು.

ವಿಜೇತ ಪಂಚಾಯಿತಿಗಳಿಗೆ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಯ ಮೊತ್ತವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರು. ’ಏಕ ಭಾರತ್-ಶ್ರೇಷ್ಠ ಭಾರತ್’ ಎಂದು ನಾವು ಘೋಷಿಸಿದಾಗ ನಮ್ಮ ಲಕ್ಷ್ಯ ಸಂಪರ್ಕ ಹಾಗೂ ದೂರವನ್ನು ತಗ್ಗಿಸುವುದಾಗಿದೆ. ಜಮ್ಮು-ಕಾಶ್ಮೀರಕ್ಕೆ ಸರ್ವಋತು ಸಂಪರ್ಕ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಕನ್ಯಾಕುಮಾರಿಯಿಂದ ವೈಷ್ಣೋದೇವಿಯನ್ನು ಒಂದೇ ಹೆದ್ದಾರಿಯ ಮೂಲಕ ಸಂಪರ್ಕಿಸುವ ದಿನ ದೂರವಿಲ್ಲ ಎಂದು ಹೇಳಿದರು.

ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯಗಳ ನಿರ್ಮಾಣ, ನೀರು ಹಾಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಪ್ರಯೋಜನಗಳನ್ನು ಜಮ್ಮು-ಕಾಶ್ಮೀರ ಪಡೆದುಕೊಳ್ಳುತ್ತಿದೆ ಎಂದರು. ರಾಷ್ಟ್ರೀಯ ಪಂಚಾಯಿತಿರಾಜ್ ದಿನದ ಅಂಗವಾಗಿ ಪಲ್ಲಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ತಂತ್ರಜ್ಞಾನ ವಸ್ತುಪ್ರದರ್ಶನಕ್ಕೂ ಪ್ರಧಾನಿ ಭೇಟಿ ನೀಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರಕ್ತದಾನದಿಂದ ಜೀವ ಉಳಿಸಿ, ಶ್ರವಣ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ : ಯೋಗೀಶ್ ಸಹ್ಯಾದ್ರಿ

Published

on

ಚಿತ್ರದುರ್ಗ : ರಕ್ತದಾನವು ಅತ್ಯಂತ ಶ್ರೇಷ್ಠವಾದ ಮಾನವೀಯ ಸೇವೆಯಾಗಿದ್ದು, ಒಬ್ಬ ವ್ಯಕ್ತಿ ಮಾಡುವ ರಕ್ತದಾನದಿಂದ ಮತ್ತೊಬ್ಬರ ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯವಿದೆ. ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ಅರಿತು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ರೋಟರಿ ಕ್ಲಬ್ ಚಿತ್ರದುರ್ಗ ಅಧ್ಯಕ್ಷ ರೊ. ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ರೋಟರಿ ಕ್ಲಬ್ ಚಿತ್ರದುರ್ಗ, ವಾಸವಿ ಬ್ಲಡ್ ಸೆಂಟರ್ ಹಾಗೂ ಸೋನಿಕ್ ಹಿಯರಿಂಗ್ ಏಡ್ ಸೆಂಟರ್, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಶ್ರವಣ ದೋಷ ಪರೀಕ್ಷಾ ಶಿಬಿರವನ್ನು ಬುಧವಾರ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಸೇವಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ಅಪಘಾತಗಳು, ಶಸ್ತ್ರಚಿಕಿತ್ಸೆಗಳು, ಹೆರಿಗೆ ಸಂದರ್ಭಗಳು ಹಾಗೂ ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ರಕ್ತದ ಅವಶ್ಯಕತೆ ಅತ್ಯಂತ ಮಹತ್ವದ್ದಾಗಿದೆ. ನಾವು ನೀಡುವ ರಕ್ತವು ಮತ್ತೊಂದು ಕುಟುಂಬದ ಬದುಕಿನಲ್ಲಿ ಸಂತೋಷವನ್ನು ಮರಳಿ ತರಬಹುದು. ರಕ್ತದಾನದಿಂದ ದಾನಿಯೊಬ್ಬರಿಗೆ ಯಾವುದೇ ನಷ್ಟವಾಗುವುದಿಲ್ಲ; ಬದಲಾಗಿ ಸಮಾಜಕ್ಕೆ ಜೀವ ಉಳಿಸುವ ಅಮೂಲ್ಯ ಕೊಡುಗೆಯನ್ನು ನೀಡಿದಂತಾಗುತ್ತದೆ. ರಕ್ತದಾನದ ಕುರಿತು ಜನರಲ್ಲಿ ಇರುವ ತಪ್ಪು ಕಲ್ಪನೆ ಮತ್ತು ಅನಗತ್ಯ ಭಯವನ್ನು ದೂರ ಮಾಡಿ ಯುವಜನತೆ ಸೇರಿದಂತೆ ಅರ್ಹ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರವಣ ಆರೋಗ್ಯದ ಮಹತ್ವವನ್ನು ವಿವರಿಸಿದ ಅವರು, ಕಿವಿಗಳು ಕೇವಲ ಶಬ್ದಗಳನ್ನು ಕೇಳುವ ಅಂಗಗಳಲ್ಲ; ಅವು ಮನುಷ್ಯನನ್ನು ಕುಟುಂಬ, ಸಮಾಜ ಮತ್ತು ಜಗತ್ತಿನೊಂದಿಗೆ ಸಂಪರ್ಕಿಸುವ ಪ್ರಮುಖ ಮಾಧ್ಯಮಗಳಾಗಿವೆ. ಮಕ್ಕಳಲ್ಲಿ ಶ್ರವಣ ದೋಷ ಕಂಡುಬಂದರೆ ಅವರ ಮಾತಿನ ಬೆಳವಣಿಗೆ, ಭಾಷಾ ಕಲಿಕೆ, ಶಿಕ್ಷಣ ಮತ್ತು ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು. ಹಿರಿಯರಲ್ಲಿ ಶ್ರವಣ ಸಾಮರ್ಥ್ಯ ಕಡಿಮೆಯಾದರೆ ಕುಟುಂಬದವರೊಂದಿಗೆ ಸಂವಹನ ನಡೆಸಲು ತೊಂದರೆಯಾಗಬಹುದು ಎಂದರು. ಕೇಳುವ ಸಾಮರ್ಥ್ಯ ಕಡಿಮೆಯಾಗುತ್ತಿರುವುದನ್ನು ವಯಸ್ಸಿನ ಸಹಜ ಪ್ರಕ್ರಿಯೆ ಎಂದು ನಿರ್ಲಕ್ಷಿಸಬಾರದು. ಆರಂಭಿಕ ಹಂತದಲ್ಲಿಯೇ ಶ್ರವಣ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಸಮಸ್ಯೆಯನ್ನು ಗುರುತಿಸಿ ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಅತಿಯಾದ ಶಬ್ದ, ಮೊಬೈಲ್ ಮತ್ತು ಹೆಡ್‌ಫೋನ್‌ಗಳ ದುರ್ಬಳಕೆಯಿಂದ ಕಿವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಶ್ರವಣ ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಕ್ಲಬ್ ಚಿತ್ರದುರ್ಗ ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾ ಗವರ್ನರ್ ರೊ. ಮಧುಪ್ರಸಾದ್ ಕೆ. ಅವರು ಮಾತನಾಡಿ, ರೋಟರಿ ಸಂಸ್ಥೆಯು ಸಮಾಜದ ಆರೋಗ್ಯ, ಶಿಕ್ಷಣ ಹಾಗೂ ಮಾನವೀಯ ಸೇವೆಯ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಆರೋಗ್ಯ ಸೇವಾ ಶಿಬಿರಗಳು ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ ಎಂದು ಅಭಿಪ್ರಾಯಪಟ್ಟರು. ಶ್ರವಣ ದೋಷವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.

ವಾಸವಿ ಬ್ಲಡ್ ಸೆಂಟರ್‌ನ ಡಾ. ಶ್ರೀನಿವಾಸ್ ಶೆಟ್ಟಿ ಅವರು ರಕ್ತದಾನದ ಮಹತ್ವ, ರಕ್ತದ ಅವಶ್ಯಕತೆ ಹಾಗೂ ರಕ್ತದಾನದಿಂದ ಸಮಾಜಕ್ಕೆ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ಸಾರ್ವಜನಿಕರಿಗೆ ರಕ್ತದಾನ ಮಾಡಲು ಹಾಗೂ ಉಚಿತವಾಗಿ ಶ್ರವಣ ದೋಷ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ರೋಟರಿ ಕ್ಲಬ್ ಚಿತ್ರದುರ್ಗದ ಸದಸ್ಯರಾದ ರೊ. ಮಾಧುರಿ ಮಧುಪ್ರಸಾದ್, ರೊ. ವೆಂಕಟೇಶ್ ಎಂ.ಸಿ, ರೊ. ತರುಣ್ ಷಾ, ಸೂರ್ಯನಾರಾಯಣ್, ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ ಕಾರ್ಯದರ್ಶಿ ಚೈತ್ರ ಸಿ, ಸೋನಿಕ್ ಹಿಯರಿಂಗ್ ಏಡ್ ಸೆಂಟರ್ ಮೊಹಮ್ಮದ್ ಸುಹೇಲ್ ಸೇರಿದಂತೆ ರೋಟರಿ ಸೇವಾ ಭವನ ಸಿಬ್ಬಂದಿ, ವಾಸವಿ ಬ್ಲಡ್ ಸೆಂಟರ್ ಹಾಗೂ ಸೋನಿಕ್ ಹಿಯರಿಂಗ್ ಏಡ್ ಸೆಂಟರ್‌ನ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Continue Reading

ದಿನದ ಸುದ್ದಿ

ನೀತಿ ಸಂಹಿತೆ ಉಲ್ಲಘನೆ, ಬೋಧನೆ ಶೂನ್ಯ ; ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಲೇಪಾಕ್ಷ ವಿರುದ್ಧ ದೂರು

Published

on

ದಾವಣಗೆರೆ,ಸುದ್ದಿದಿನ: ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ ಇಲ್ಲಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಲೇಪಾಕ್ಷ ಎಸ್.ಆರ್ ಇವರು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹಾಜರಾಗದೆ ಇರುವುದು ಮಾತ್ರವಲ್ಲದೆ ವೇಳಾಪಟ್ಟಿಯಂತೆ ಇವರಿಗೆ ನಿಗಧಿಪಡಿಸಿದ ಯಾವುದೇ ತರಗತಿಗಳನ್ನು ತೆಗೆದುಕೊಳ್ಳದೆ ರಾಜಕೀಯ ಪಕ್ಷವೊಂದರ ಪ್ರಚಾರ ಹಾಗೂ ಸ್ಥಳೀಯ ರಾಜಕಾರಣದಲ್ಲಿ ಸಕ್ರಿಯವಾಗಿ ವಿದ್ಯಾರ್ಥಿಗಳಿಗೆ ವಂಚಿಸುತ್ತಿರುವ ನಡೆಯನ್ನು ಸೂಕ್ತ ತನಿಖೆಗೆ ಒಳಪಡಿಸಿ, ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಜಂಟಿ ನಿರ್ದೇಶಕರಿಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.

ಡಾ. ಲೇಪಾಕ್ಷ ಎಸ್.ಆರ್ ಇವರನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ತರಗತಿಗಳನ್ನು ಹಂಚಿಕೆ ಮಾಡಿದ್ದು, ಯಾವುದೇ ತರಗತಿಗಳನ್ನು ತೆಗೆದುಕೊಳ್ಳದ ಮಾಹಿತಿಯ ಮೇರೆಗೆ ಕಾಲೇಜಿನಲ್ಲಿ ಅಳವಡಿಸಿದ ಸಿ.ಸಿ.ಟಿ.ವಿ ಹಾಗೂ ಬಯೋಮೆಟ್ರಿಕ್ ಹಾಜರಾತಿಯನ್ನು ನೀಡುವಂತೆ ಮಾಹಿತಿ ಕೋರಿದ್ದು, ಕಾಲೇಜಿನ ಪ್ರಾಂಶುಪಾಲರು ಕಾಲೇಜಿಗೆ ಸರಿಯಾಗಿ ಹಾಜರಾಗದ ಮತ್ತು ಬೋದನೆ ಮಾಡದ ಅಧ್ಯಾಪಕರನ್ನು ರಕ್ಷಿಸುವ ಸಲುವಾಗಿ ನಿಯಮಬಾಹಿರವಾಗಿ ಹಿಂಬರಹ ನೀಡಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ, ಲೇಪಾಕ್ಷ ಇವರು ರಾಜಕೀಯ ಪಕ್ಷದ ಪ್ರಚಾರ ಮತ್ತು ಸಂಭ್ರಮದಲ್ಲಿ ಭಾಗಿಯಾಗಿರುವ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ದಾಖಲೆಗಳನ್ನು ಲಗತ್ತಿಸಿ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರಿಗೆ ದೂರು ನೀಡಿರುತ್ತಾರೆ.

Continue Reading

ದಿನದ ಸುದ್ದಿ

ಮಂಗಳೂರು | ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಕೆ.ಆರ್ ಕವಿತಾ ವಿರುದ್ಧ ಲೋಕಾಗೆ ದೂರು

Published

on

ಮಂಗಳೂರು | ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಕೆ.ಆರ್ ಕವಿತಾ ವಿರುದ್ಧ ಲೋಕಾಗೆ ದೂರು:

ದಾವಣಗೆರೆ, ಸುದ್ದಿದಿನ; ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿ, ಮಂಗಳೂರು ಇಲ್ಲಿನ ಕಛೇರಿ ನಿರ್ವಹಣೆಗೆ 2024-25 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಂಟಿ ನಿರ್ದೇಶಕರಾದ ಶ್ರೀಮತಿ ಕೆ.ಆರ್.ಕವಿತಾ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿ, ಮಂಗಳೂರು ಇಲ್ಲಿಗೆ 2024-25 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾಗಿರುವ ಕಛೇರಿಯ ನಿರ್ವಹಣೆಯ ಅನುದಾನದಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಕೆ.ಟಿ.ಪಿ.ಪಿ ನಿಯಮವನ್ನು ಉಲ್ಲಂಘಿಸಿ ನಡೆದಿರುವ ಕಾನೂನುಬಾಹಿರ ಚಟುವಟಿಕೆಗಳ ಅಧಿಕೃತ ಮಾಹಿತಿಯ ಮೇರೆಗೆ 2024-25 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಕಛೇರಿ ನಿರ್ವಹಣೆಗಾಗಿ ಸರ್ಕಾರದಿಂದ ಮಂಜೂರಾದ ಅನುದಾನದ ಖರ್ಚು ವೆಚ್ಚದ ದಾಖಲೆಗಳನ್ನು ಮಾಹಿತಿಹಕ್ಕು ಅಡಿ ಪಡೆದು ಪರಿಶೀಲನೆ ಮಾಡಿದಾಗ ಸಾಕಷ್ಟು ಲೋಪಗಳು ಕಂಡುಬಂದಿರುತ್ತವೆ. ಆದ ಕಾರಣ ಲೋಕಾಯುಕ್ತದಲ್ಲಿ ಜಂಟಿ ನಿರ್ದೇಶಕರಾದ ಕೆ.ಆರ್.ಕವಿತಾ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವಂತೆ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.

Continue Reading

Trending