ಬಹಿರಂಗ
ಧ್ವಂಸ ಕಾರ್ಯಾಚರಣೆ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ
ದಂಗೆಕೋರರನ್ನು ಸಾಮೂಹಿಕ ಶಿಕ್ಷೆಗೊಳಪಡಿಸುವ ಧ್ವಂಸ ಕಾರ್ಯಾಚರಣೆ ಸಂವಿಧಾನಬದ್ಧವಲ್ಲ.
- ಮೂಲ : ಪ್ರಭಾಶ್ ರಂಜನ್ ಮತ್ತು ಅಮನ್ ಕುಮಾರ್, ಅನುವಾದ : ನಾ ದಿವಾಕರ
ಈ ವರ್ಷದ ರಾಮನವಮಿ ಆಚರಣೆಯ ಮೆರವಣಿಗೆಗಳ ಸಂದರ್ಭದಲ್ಲಿ ಮಧ್ಯಪ್ರದೇಶದ ಕರ್ಗೋನ್ ಸೇರಿದಂತೆ ದೇಶದ ಹಲವೆಡೆ ಕೋಮು ಸಂಘರ್ಷ ಏರ್ಪಟ್ಟಿತ್ತು. ಮಧ್ಯಪ್ರದೇಶ ಸರ್ಕಾರವು ಈ ಗಲಭೆಗಳಲ್ಲಿ ಪಾಲ್ಗೊಂಡಿದ್ದವರ ಮನೆಗಳನ್ನು ಧ್ವಂಸ ಮಾಡುವಂತೆ ಅಧಿಕೃತವಾಗಿ ಆದೇಶ ಹೊರಡಿಸಿತ್ತು.
ಈ ಕಟ್ಟಡ ಧ್ವಂಸ ಕಾರ್ಯಾಚರಣೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳ ವಿರುದ್ಧ ನಡೆಸಲಾಯಿತು ಎಂದು ಮಧ್ಯಪ್ರದೇಶ ಸರ್ಕಾರ ಹೇಳಿದೆ. ಆದರೆ ಈ ಧ್ವಂಸ ಕಾರ್ಯಾಚರಣೆಯನ್ನು ಕೋಮು ದಂಗೆಗಳ ತರುವಾಯ ಒಂದು ನಿರ್ದಿಷ್ಟ ಕೋಮಿಗೆ ಸೇರಿದ ದಂಗೆಕೋರರ ವಿರುದ್ಧ, ಸ್ವೇಚ್ಚಾನುಸಾರ ಕೈಗೊಳ್ಳಲಾಗಿರುವುದನ್ನು ಗಮನಿಸಿದರೆ, ಈ ಕಾರ್ಯಾಚರಣೆಯ ಉದ್ದೇಶ ಸಾಮೂಹಿಕ ಶಿಕ್ಷೆಗೊಳಪಡಿಸುವುದೇ ಆಗಿದೆ ಎನ್ನುವುದು ಸ್ಪಷ್ಟ.
ಪ್ರಭುತ್ವದ ಕ್ರೂರ ಬಲದ ಸಂಕೇತವೇ ಆಗಿರುವ ಈ ಧ್ವಂಸ ಮಾಡುವ ಯಂತ್ರಗಳು ಕೇವಲ ಮನೆಗಳನ್ನು, ಕಟ್ಟಡಗಳನ್ನು ಮಾತ್ರವೇ ಧ್ವಂಸ ಮಾಡುತ್ತಿಲ್ಲ, ಬದಲಾಗಿ ಸಾಂವಿಧಾನಿಕ ನಿಯಮಗಳನ್ನೂ, ಕಾನೂನು ಕಟ್ಟಳೆಗಳನ್ನೂ ಧ್ವಂಸ ಮಾಡುತ್ತಿವೆ. ಕ್ಷಿಪ್ರಗತಿಯಲ್ಲಿ ನ್ಯಾಯ ವಿತರಣೆ ಮಾಡುವ ಈ ಕ್ರೂರ ಪದ್ಧತಿ ಆರಂಭವಾದದ್ದು ಉತ್ತರಪ್ರದೇಶದಲ್ಲಿ.
2019ರ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರವು ಯಾವುದೇ ಸಮೂಹ ಗಲಭೆಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾದರೆ ಅದರ ನಷ್ಟವನ್ನು ದಂಗೆಕೋರರಿಂದಲೇ ವಸೂಲಿ ಮಾಡುವ ಆದೇಶವೊಂದನ್ನು ಹೊರಡಿಸಿತ್ತು ಈ ನಿಯಮವನ್ನು ಸಾಂಸ್ಥೀಕರಿಸುವ ಸಲುವಾಗಿಯೇ ಉತ್ತರಪ್ರದೇಶ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ವಸೂಲಾತಿ ಕಾಯ್ದೆ 2020ನ್ನು ಜಾರಿಗೊಳಿಸಲಾಯಿತು.
ಈ ರೀತಿಯ ಪ್ರಭುತ್ವದ ಕ್ರೂರ ಬಲ ಪ್ರಯೋಗವು ಅನೇಕ ಸ್ಥಳೀಯ ಕಾನೂನುಗಳ ಉಲ್ಲಂಘನೆಯಾಗುತ್ತದೆ ಎಂದು ಈಗಾಗಲೇ ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸೂಕ್ತ ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ, ಕಾನೂನು ಸಮ್ಮತಿ ಪಡೆಯದೆ, ಈ ರೀತಿ ಮನೆಗಳನ್ನು ಧ್ವಂಸ ಮಾಡುವುದು ಭಾರತವು ಒಪ್ಪಿರುವಂತಹ ಹಲವು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗುತ್ತದೆ ಎನ್ನುವುದನ್ನು ಗಮನಿಸಬೇಕಿದೆ.
ಸಮರ್ಪಕ ವಸತಿಯ ಹಕ್ಕು
ವಸತಿ ಅಥವಾ ಸೂರಿನ ಹಕ್ಕು ಭಾರತೀಯ ಸಂವಿಧಾನದ ಅನುಚ್ಚೇದ 21ರ ಅನ್ವಯ ಮೂಲಭೂತ ಹಕ್ಕು ಎಂದೇ ಪರಿಗಣಿಸಲ್ಪಟ್ಟಿದ್ದು, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಚೌಕಟ್ಟಿನಲ್ಲೂ ಸಹ ಇದನ್ನು ಮೂಲಭೂತ ಹಕ್ಕು ಎಂದೇ ಪರಿಗಣಿಸಲಾಗುತ್ತದೆ. ಈ ಅಂತರರಾಷ್ಟ್ರೀಯ ಕಾನೂನು ನಿಯಮಗಳಿಗೆ ಭಾರತವೂ ಒಳಪಟ್ಟಿರುತ್ತದೆ. ಉದಾಹರಣೆಗೆ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (ಯುಡಿಹೆಚ್‌ಆರ್)ಯ ಅನುಚ್ಚೇದ 25ರ ಅನ್ವಯ “ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಕುಟುಂಬದೊಡನೆ, ಸಮರ್ಪಕ ಆಹಾರ, ವಸ್ತ್ರ ವಸತಿ ಮತ್ತು ಆರೋಗ್ಯ ಸೇವೆಯನ್ನೊಳಗೊಂಡಂತೆ ಆರೋಗ್ಯಕರವಾದ, ಯೋಗಕ್ಷೇಮದ ಜೀವನಮಟ್ಟವನ್ನು ಕಾಪಾಡಿಕೊಳ್ಳುವ ಹಕ್ಕು ಇರುತ್ತದೆ ”.
ಇದೇ ರೀತಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತರರಾಷ್ಟ್ರೀಯ ಒಡಂಬಡಿಕೆ(ಐಸಿಇಎಸ್‌ಸಿಆರ್) ಅನುಚ್ಚೇದ 11.1ರಲ್ಲಿ “ ಪ್ರತಿಯೊಬ್ಬ ವ್ಯಕ್ತಿಯೂ ತನಗಾಗಿ ಮತ್ತು ತನ್ನ ಕುಟುಂಬದವರಿಗಾಗಿ ಸಮರ್ಪಕವಾದ ಆಹಾರ, ಆರೋಗ್ಯ, ವಸ್ತ್ರ ಮತ್ತು ವಸತಿ ಸೌಲಭ್ಯಗಳನ್ನು ಹೊಂದಿರುವ ಜೀವನಮಟ್ಟವನ್ನು ಕಾಪಾಡಿಕೊಳ್ಳುವ ಹಕ್ಕು ಇರುವುದೇ ಅಲ್ಲದೆ, ತನ್ನ ಜೀವನಮಟ್ಟವನ್ನು ನಿರಂತರವಾಗಿ ಉತ್ತಮಪಡಿಸಿಕೊಳ್ಳುವ ಹಕ್ಕು ಸಹ ಇರುತ್ತದೆ ” ಎಂದು ಹೇಳಲಾಗಿದೆ. ಇದೇ ಅನುಚ್ಚೇದದ ಅಡಿಯಲ್ಲಿ ಪ್ರತಿಯೊಂದು ದೇಶವೂ “ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ” ಎಂದೂ ಹೇಳಲಾಗಿದ್ದು, ಸಮರ್ಪಕ ವಸತಿ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವ್ಯಕ್ತಿಗಳ ಹಕ್ಕುಗಳನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.
ಅನುಚ್ಚೇದ 4ರ ಅನ್ವಯ, ಐಸಿಇಎಸ್‌ಸಿಆರ್ ಒಡಂಬಡಿಕೆಯಲ್ಲಿ ಮಾನ್ಯ ಮಾಡಲಾಗಿರುವ ಹಕ್ಕುಗಳನ್ನು ಯಾವುದೇ ದೇಶದ ಸರ್ಕಾರಗಳು ಅಮಾನ್ಯ ಮಾಡಬೇಕಾದಲ್ಲಿ, ಸರ್ಕಾರಗಳು ವಿಧಿಸುವ ನಿರ್ಬಂಧಗಳು ಈ ಹಕ್ಕುಗಳ ಮೂಲ ಲಕ್ಷಣಗಳಿಗೆ ಪೂರಕವಾಗಿರಬೇಕಾಗುತ್ತದೆ ಮತ್ತು ಸಮಾಜದ ಸಮಗ್ರ ಒಳಿತಿನ ಉದ್ದೇಶವನ್ನು ಹೊಂದಿರಬೇಕಾಗುತ್ತದೆ. ಆದಾಗ್ಯೂ ಈ ಒಡಂಬಡಿಕೆಯಲ್ಲಿ ಸ್ವೀಕೃತವಾಗಿರುವ ಯಾವುದೇ ಹಕ್ಕುಗಳಿಗೆ ನಿರ್ಬಂಧ ಹೇರುವುದು, ಅದರಲ್ಲೂ ವಸತಿ ಹಕ್ಕಿನ ಮೇಲೆ ನಿರ್ಬಂಧ ಹೇರುವುದು, ಮೂಲತಃ ಈ ಹಕ್ಕುಗಳ ಉಲ್ಲಂಘನೆಯೇ ಆಗುತ್ತದೆ. ಈ ಅಂಶವನ್ನು ಒಡಂಬಡಿಕೆಯ ಅನುಚ್ಚೇದ 5ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಅಷ್ಟೇ ಅಲ್ಲದೆ ಯಾವುದೇ ವ್ಯಕ್ತಿಯ ಖಾಸಗಿ ಆಸ್ತಿಯ ಹಕ್ಕುಗಳಲ್ಲಿ ಸ್ವೇಚ್ಚಾನುಸಾರದಿಂದ ಹಸ್ತಕ್ಷೇಪ ಮಾಡುವುದು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗುತ್ತದೆ. ಉದಾಹರಣೆಗೆ ಯುಡಿಹೆಚ್‌ಆರ್ ಒಡಂಬಡಿಕೆಯ ಅನುಚ್ಚೇದ 12ರಲ್ಲಿ “ ಯಾವುದೇ ವ್ಯಕ್ತಿಯ ವ್ಯಕ್ತಿಗತ ಅಥವಾ ಕೌಟುಂಬಿಕ ಖಾಸಗಿತನ, ವಸತಿ ಅಥವಾ ಸಂವಹನ ಪ್ರಕ್ರಿಯೆಯಲ್ಲಿ ಸ್ವೇಚ್ಚಾನುಸಾರದ ಹಸ್ತಕ್ಷೇಪ ಮಾಡುವಂತಿಲ್ಲ ಅಥವಾ ಆತನ/ಆಕೆಯ ಗೌರವ ಮತ್ತು ಘನತೆಯ ಮೇಲಿನ ದಾಳಿ ಮಾಡುವಂತಿಲ್ಲ” ಎಂದು ಹೇಳಲಾಗಿದೆ. “ ಇಂತಹ ಯಾವುದೇ ಹಸ್ತಕ್ಷೇಪದ ವಿರುದ್ಧ ಅಥವಾ ಆಕ್ರಮಣದ ವಿರುದ್ಧ ಕಾನೂನು ರಕ್ಷಣೆ ಪಡೆಯುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇರುತ್ತದೆ ” ಎಂದು ಅನುಚ್ಚೇದ 12ರಲ್ಲಿ ಹೇಳಲಾಗಿದೆ.
ಇದೇ ಹಕ್ಕುಗಳನ್ನು ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಡಂಬಡಿಕೆ (ಐಸಿಸಿಪಿಆರ್)ಯ ಅನುಚ್ಚೇದ 17ರಲ್ಲಿ ಮಾನ್ಯ ಮಾಡಲಾಗಿದ್ದು , ಈ ಅನುಚ್ಚೇದದ ಅನ್ವಯ ಪ್ರತಿಯೊಬ್ಬ ವ್ಯಕ್ತಿಯೂ ವೈಯಕ್ತಿಕವಾಗಿ ಅಥವಾ ಇತರರ ಜೊತೆಗೂಡಿ ತನ್ನದೇ ಆದ ಆಸ್ತಿಯನ್ನು ಹೊಂದುವ ಹಕ್ಕು ಹೊಂದಿರುತ್ತಾನೆ ಹಾಗೂ ಯಾವುದೇ ವ್ಯಕ್ತಿಯ ಆಸ್ತಿಯ ಹಕ್ಕನ್ನು ಸ್ವೇಚ್ಚಾನುಸಾರದಿಂದ ಕಸಿದುಕೊಳ್ಳಲಾಗುವುದಿಲ್ಲ. ಈ ದೃಷ್ಟಿಯಿಂದ ನೋಡಿದಾಗ ವ್ಯಕ್ತಿಗಳ ಆಸ್ತಿಯ ಹಕ್ಕುಗಳಲ್ಲಿ ಸ್ವೇಚ್ಚಾನುಸಾರ ಹಸ್ತಕ್ಷೇಪ ಮಾಡುವುದು ಐಸಿಸಿಪಿಆರ್ ಒಡಂಬಡಿಕೆಯ ಉಲ್ಲಂಘನೆಯೇ ಆಗುತ್ತದೆ.
ಬಲಾತ್ಕಾರದ ಎತ್ತಂಗಡಿಗಳು
ಸಂಯುಕ್ತ ರಾಷ್ಟ್ರಗಳ ಮಾನವ ಹಕ್ಕುಗಳ ಕಚೇರಿ ಎಂದೇ ಪರಿಗಣಿಸಲ್ಪಡುವ ಮಾನವ ಹಕ್ಕುಗಳ ಉನ್ನತ ಆಯುಕ್ತರ ಕಚೇರಿ (ಓಹೆಚ್‌ಸಿಹೆಚ್‌ಆರ್) ಅಂತರರಾಷ್ಟ್ರೀಯ ಕಾನೂನುಗಳ ಅನ್ವಯ ಒದಗಿಸಲಾಗುವ ಮಾನವ ಹಕ್ಕುಗಳನ್ನು ರಕ್ಷಿಸಲೆಂದೇ ಸ್ಥಾಪಿಸಲಾಗಿರುವ ಒಂದು ಸಂಸ್ಥೆ. ಈ ಸಂಸ್ಥೆಯು ಸಮರ್ಪಕ ವಸತಿ ಸೌಕರ್ಯದ ಬಗ್ಗೆ ಸೂಕ್ತವಾದ ನಿಯಮಗಳನ್ನು ಸಹ ರೂಪಿಸಿದೆ. ಸಂಯುಕ್ತ ರಾಷ್ಟ್ರಗಳ ಮಾನವ ಹಕ್ಕುಗಳ ಕಚೇರಿಯ ನಿಯಮಗಳ ಅನ್ವಯ, ಯಾವುದೇ ವ್ಯಕ್ತಿಯ ಸಮರ್ಪಕ ವಸತಿಯ ಹಕ್ಕು ರಕ್ಷಣೆ ಎಂದರೆ ಬಲಾತ್ಕಾರದ ಎತ್ತಂಗಡಿ ಅಥವಾ ಉಚ್ಚಾಟನೆಯಿಂದ ರಕ್ಷಣೆ ಪಡೆಯುವುದೇ ಆಗಿರುತ್ತದೆ.
ಐಸಿಇಎಸ್‌ಸಿಆರ್ ಒಡಂಬಡಿಕೆಯ ಅನುಚ್ಚೇದ 11.1ರಲ್ಲಿ “ ಬಲಾತ್ಕಾರದ ಎತ್ತಂಗಡಿ ಅಥವಾ ಉಚ್ಚಾಟನೆ ಎನ್ನುವುದು, ವ್ಯಕ್ತಿ, ಕುಟುಂಬ ಅಥವಾ ಸಮುದಾಯಗಳನ್ನು ಅವರು ನೆಲೆಸಿರುವ ಮನೆಗಳಿಂದ ಅಥವಾ ಭೂಮಿಯಿಂದ, ಯಾವುದೇ ಕಾನೂನು ರಕ್ಷಣೆ ಅಥವಾ ನೆರವು ಇಲ್ಲದೆಯೇ, ಶಾಶ್ವತವಾಗಿ ಬೇರ್ಪಡಿಸುವುದೇ ಆಗಿರುತ್ತದೆ ”. ಸಮರ್ಪಕ ವಸತಿಯ ಹಕ್ಕು ಎಂದರೆ ಯಾವುದೇ ವ್ಯಕ್ತಿಯ ವಸತಿ, ಖಾಸಗಿತನ, ಕುಟುಂಬದ ಹಕ್ಕುಗಳು ಸ್ವೇಚ್ಚಾನುಸಾರದ ಹಸ್ತಕ್ಷೇಪದಿಂದ ಮುಕ್ತವಾಗಿರುವುದು ಎಂದೇ ಪರಿಗಣಿಸಬೇಕಾಗುತ್ತದೆ.
ಮಧ್ಯಪ್ರದೇಶ ಸರ್ಕಾರವು ಆರೋಪಿತ ದಂಗೆಕೋರರ ಮನೆಗಳ ಮೇಲೆ ಧ್ವಂಸ ಕಾರ್ಯಾಚರಣೆ ನಡೆಸಿರುವುದು ಬಲಾತ್ಕಾರದ ಎತ್ತಂಗಡಿಯೇ ಆಗುತ್ತದೆ. ಹಾಗೆಯೇ ವ್ಯಕ್ತಿಯ ವಸತಿ ಹಕ್ಕುಗಳಲ್ಲಿ ಸ್ವೇಚ್ಚಾನುಸಾರದ ಹಸ್ತಕ್ಷೇಪ ಮಾಡಿದಂತಾಗುವುದರಿಂದ ಇದು ಐಸಿಇಎಸ್‌ಸಿಆರ್ ಒಡಂಬಡಿಕೆಯ ಅನುಚ್ಚೇದ 11.1ರ ಉಲ್ಲಂಘನೆಯೇ ಆಗುತ್ತದೆ. ಈ ಎತ್ತಂಗಡಿಯ ಕಾರ್ಯಾಚರಣೆ ಕಾನೂನು ಪ್ರಕಾರ ಕೈಗೊಳ್ಳಲಾಗಿದೆ ಮತ್ತು ಮಾನವ ಹಕ್ಕು ಒಡಂಬಡಿಕೆಗಳ ಅನ್ವಯ ಕೈಗೊಳ್ಳಲಾಗಿದೆ ಎಂದು ನಿರೂಪಿಸಿದಲ್ಲಿ ಮಾತ್ರ ಈ ಧ್ವಂಸ ಕಾರ್ಯಾಚರಣೆಯನ್ನು ಅಂತರರಾಷ್ಟ್ರೀಯ ಕಾನೂನುಗಳಡಿ ಸಮರ್ಥಿಸಿಕೊಳ್ಳಲು ಸಾಧ್ಯ. ಹಾಗೆಯೇ ರಾಜ್ಯ ಸರ್ಕಾರಗಳ ಈ ಕಾರ್ಯಾಚರಣೆ ಅವಶ್ಯಕವಾಗಿತ್ತೇ ಮತ್ತು ಪರಿಸ್ಥಿತಿಗೆ ಪೂರಕವಾಗಿತ್ತೇ ಎನ್ನುವುದೂ ಮುಖ್ಯವಾಗುತ್ತದೆ.
ಆದರೆ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿರುವ ಸಮಯವನ್ನು ಗಮನಿಸಿದರೆ ಈ ಬಲಾತ್ಕಾರದ ಎತ್ತಂಗಡಿಯನ್ನು ಕಾನೂನಾತ್ಮಕವಾಗಿ ಸಮರ್ಥಿಸಿಕೊಳ್ಳಲಾಗುವುದಿಲ್ಲ. ಒಂದು ವೇಳೆ ಈ ಧ್ವಂಸ ಕಾರ್ಯಾಚರಣೆಗೆ ಅಕ್ರಮ ಒತ್ತುವರಿಯೇ ಕಾರಣ ಎಂದಾದಲ್ಲಿ, ಕೋಮು ದಂಗೆಗಳು ಸಂಭವಿಸಿದ ದಿನದಂದು ಅಧಿಕಾರಿಗಳು ಮುನ್ಸೂಚನೆ ಅಥವಾ ನೋಟಿಸ್ ನೀಡಿದ್ದರೇ ಎಂದು ಗಮನಿಸಬೇಕಾಗುತ್ತದೆ. ಅಥವಾ ಮುಂಚಿತವಾಗಿಯೇ ಎತ್ತಂಗಡಿಯ ಆದೇಶವನ್ನು ಹೊಂದಿದ್ದರೇ ಎಂದು ಪ್ರಶ್ನಿಸಬೇಕಾಗುತ್ತದೆ. ಅಥವಾ ದಂಗೆಗಳ ನಂತರವೇ ಈ ನಿರ್ಧಾರವನ್ನು ಕೈಗೊಳ್ಳಲಾಯಿತೇ ? ಈ ಎತ್ತಂಗಡಿಯ ಆದೇಶ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವೇ ಸೀಮಿತವಾಗಿದೆಯೇ ? ಈ ಪ್ರಶ್ನೆಗಳೂ ಉದ್ಭವಿಸುತ್ತವೆ.
ನ್ಯಾಯಾಂಗದ ನಿಯಮಗಳು
ಮೇಲಾಗಿ, ಮೇಲೆ ಉಲ್ಲೇಖಿಸಲಾದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು, ಒಡಂಬಡಿಕೆಗಳನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಭಾರತೀಯ ನ್ಯಾಯ ವ್ಯವಸ್ಥೆಯಲ್ಲೂ ಅಳವಡಿಸಿದೆ. ಬಚ್ಚನ್ ಸಿಂಗ್ ಮತ್ತು ಪಂಜಾಬ್ ರಾಜ್ಯದ ಪ್ರಕರಣ, ವಿಶಾಖ ಮತ್ತು ರಾಜಸ್ತಾನ ಸರ್ಕಾರದ ಪ್ರಕರಣ ಮತ್ತು ಇತ್ತೀಚಿನ ಪುಟ್ಟಸ್ವಾಮಿ ಮತ್ತು ಒಕ್ಕೂಟ ಸರ್ಕಾರ ಪ್ರಕರಣಗಳ ಸಂದರ್ಭದಲ್ಲಿ ಸುಪ್ರೀಂಕೋರ್ಟ್ “ ಭಾರತದ ಸಂವಿಧಾನದಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ವ್ಯಾಖ್ಯಾನ ಮಾಡುವ ಸಂದರ್ಭದಲ್ಲಿ ಈ ಹಕ್ಕುಗಳನ್ನು ಅಂತರರಾಷ್ಟ್ರೀಯ ಮಾನವ ಹಕ್ಕು ಕಾನೂನುಗಳ ವ್ಯಾಪ್ತಿಯೊಳಗೆ ಅಳವಡಿಸಿ ವ್ಯಾಖ್ಯಾನಕ್ಕೊಳಪಡಿಸಬೇಕು ” ಎಂದು ಹೇಳಿದೆ.
ಭಾರತದ ಸಾಂವಿಧಾನಿಕ ವ್ಯವಸ್ಥೆಯನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ಹೊಂದಿರುವ ನ್ಯಾಯಾಂಗವು ಕಾರ್ಯಾಂಗ ಕೈಗೊಳ್ಳುತ್ತಿರುವ ಈ ಅನಿರ್ಬಂಧಿತ ಕಾರ್ಯಾಚರಣೆಯ ಮೇಲೆ ನಿರ್ಬಂಧಗಳನ್ನು ಹೇರಲು ಮುಂದಾಗಬೇಕಿದೆ. ರಾಷ್ಟ್ರೀಯವಾದಿ-ಜನಪ್ರಿಯ ರಾಜಕಾರಣದ ಸಂಕಥನಕ್ಕೆ ಪ್ರತಿಯಾಗಿ ನ್ಯಾಯಾಲಯಗಳು ಅಂತರರಾಷ್ಟ್ರೀಯ ಕಾನೂನುಗಳನ್ನು ಬಳಸಲು ಮುಂದಾಗಬೇಕಿದೆ.
ಕೃಪೆ : ದ ಹಿಂದೂ : 20-04-22
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
- ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
- ಇಂಡಿಯಾ ಗೇಟ್‌ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
- NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
- “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.
CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.
http://Visit : www.suddidina.com
ಇಂಡಿಯಾ ಗೇಟ್‌ನಿಂದ ಮೆರವಣಿಗೆ
ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.
ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.
‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’
ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.
“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.
“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ”
|
ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.
ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.
ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್‌ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

ದಿನದ ಸುದ್ದಿ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
329 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ವಿಚಾರಣಾ ನೋಟಿಸ್
-
658 OMR ಕಾರ್ಬನ್ ಶೀಟ್‌ಗಳು FSLಗೆ
-
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ED ಗಂಭೀರ ಆರೋಪ
-
₹70–80 ಲಕ್ಷ ಲಂಚದ ಆರೋಪವೂ ತನಿಖೆಯಲ್ಲಿದೆ
-
ಪ್ರಶ್ನೆಪತ್ರ ಸಿದ್ಧತೆ, ಮುದ್ರಣದ CCTV ದೃಶ್ಯಗಳ ಬಗ್ಗೆಯೂ ಅನುಮಾನ
ಸುದ್ದಿದಿನ,ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ (ED) ರಾಜ್ಯದ ವಿವಿಧೆಡೆ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಅದರ ಬೆನ್ನಲ್ಲೇ ಅಪರಾಧ ತನಿಖಾ ಇಲಾಖೆ (CID) ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
http://Visit : www.suddidina.com
329 ಅಭ್ಯರ್ಥಿಗಳಿಗೆ ನೋಟಿಸ್ ಏಕೆ?
ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಈಗಾಗಲೇ 658 OMR ಕಾರ್ಬನ್ ಶೀಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಮೂಲ OMR ಉತ್ತರ ಪತ್ರಿಕೆಗಳೊಂದಿಗೆ ಹೋಲಿಕೆ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಅಭ್ಯರ್ಥಿಗಳು ಗುರುತಿಸಿದ್ದ ಉತ್ತರಗಳ ಕಾರ್ಬನ್ ಪ್ರತಿಯಲ್ಲಿ ಮತ್ತು ಮೂಲ OMRನಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಪರಿಶೀಲಿಸುವುದು ತನಿಖೆಯ ಪ್ರಮುಖ ಭಾಗವಾಗಿದೆ.
ಇದೀಗ 329 ಅಭ್ಯರ್ಥಿಗಳನ್ನೂ ವಿಚಾರಣೆಗೆ ಒಳಪಡಿಸುವ CID ಕ್ರಮ ಪ್ರಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ವಿಚಾರಣೆಯ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ, ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಥವಾ ಉತ್ತರಗಳ ಮಾಹಿತಿ ಮುಂಚಿತವಾಗಿ ಸಿಕ್ಕಿತೇ, OMR ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ನಡೆದಿದೆಯೇ ಎಂಬುದರ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
IAS ಅಧಿಕಾರಿಯತ್ತ ತನಿಖೆಯ ಚಿತ್ತ
ಈ ಪ್ರಕರಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಅವರು ಫೆಬ್ರವರಿ 2024ರಿಂದ ಮಾರ್ಚ್ 2026ರವರೆಗೆ KPSCಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ MSME ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬೆಂಗಳೂರಿನ ನಿವಾಸ ಸೇರಿದಂತೆ ಉತ್ತರ ಪ್ರದೇಶದ ಬರೇಲಿಯಲ್ಲಿರುವ ನಿವಾಸದ ಮೇಲೂ ED ಶೋಧ ನಡೆಸಿದೆ.
ED ಆರೋಪದ ಪ್ರಕಾರ, ಗಂಗ್ವಾರ್ ಅವರು ತಮ್ಮ ಇಬ್ಬರು ಪುತ್ರರಿಗೆ KPSC ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ದೊರಕಿಸಿಕೊಡಲು ವ್ಯಕ್ತಿಯೊಬ್ಬರಿಂದ ಸುಮಾರು ₹1.1 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಆರೋಪ ಇನ್ನೂ ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾಗಿಲ್ಲ.
ಪ್ರಶ್ನೆಪತ್ರಿಕೆ ಸಿದ್ಧತೆಯಲ್ಲೂ ಅನುಮಾನ
ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಮುದ್ರಿಸುವ ಪ್ರಕ್ರಿಯೆಗೆ ಸಂಬಂಧಿಸಿದ CCTV ದೃಶ್ಯಾವಳಿಗಳ ಅನುಪಸ್ಥಿತಿಯನ್ನೂ ED ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕ್ರಿಯೆಯಲ್ಲಿ CCTV ದಾಖಲೆಗಳು ಪ್ರಮುಖ ಭದ್ರತಾ ಕ್ರಮವಾಗಿರುವುದರಿಂದ, ಅವುಗಳ ಲಭ್ಯತೆ ಮತ್ತು ನಿರ್ವಹಣೆಯೂ ತನಿಖೆಯ ಪ್ರಮುಖ ಅಂಶವಾಗಿದೆ.
ಇದರ ಜೊತೆಗೆ, ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹70–80 ಲಕ್ಷದವರೆಗೆ ಲಂಚ ಕೇಳಲಾಗಿದೆ ಎಂಬ ಆರೋಪಗಳೂ ತನಿಖೆಯಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆ, OMR ತಿದ್ದುಪಡಿ ಮತ್ತು ನೇಮಕಾತಿ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.
KPSCಯಂತಹ ನೇಮಕಾತಿ ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವ ಆರೋಪಗಳಾಗಿರುವುದರಿಂದ, CID ಮತ್ತು ED ತನಿಖೆಯ ಮುಂದಿನ ಹಂತಗಳು ಮಹತ್ವ ಪಡೆದುಕೊಂಡಿವೆ. 329 ಅಭ್ಯರ್ಥಿಗಳ ವಿಚಾರಣೆ, OMR ಕಾರ್ಬನ್ ಶೀಟ್‌ಗಳ FSL ವರದಿ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆಯ ಬಳಿಕ ಪ್ರಕರಣದ ನಿಜವಾದ ಚಿತ್ರಣ ಇನ್ನಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಮೇಲಿನ ಹಣ, ಅಕ್ರಮ ಮತ್ತು ಅಧಿಕಾರಿಯ ವಿರುದ್ಧದ ಆರೋಪಗಳು ತನಿಖಾ ಸಂಸ್ಥೆಗಳು ಮುಂದಿಟ್ಟಿರುವ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಆರೋಪಗಳೆಂದೇ ಪರಿಗಣಿಸಬೇಕೆಂದು ಕೋರ್ಟ್ ತಿಳಿಸಿದೆ.

ದಿನದ ಸುದ್ದಿ
₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
ರಾಜಾಜಿನಗರದಲ್ಲಿ ಬಿಡಿಎ ಭರ್ಜರಿ ಕಾರ್ಯಾಚರಣೆ: 13,000 ಚದರ ಅಡಿ ಜಾಗ ವಶಕ್ಕೆ
- 13,000 ಚದರ ಅಡಿ ಪ್ರದೇಶ ತೆರವು; ಪೊಲೀಸ್ ಭದ್ರತೆಯಲ್ಲಿ ಬಿಡಿಎ ಕಾರ್ಯಾಚರಣೆ
ನಿವೇಶನ 13 ಮತ್ತು 17ರಲ್ಲಿ ಅನಧಿಕೃತ ನಿರ್ಮಾಣ ತೆರವು; ಪೊಲೀಸ್ ಸಹಕಾರದಲ್ಲಿ ಕಾರ್ಯಾಚರಣೆ
ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣಗಳ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ರಾಜಾಜಿನಗರ ಬಡಾವಣೆಯ ಇಂಡಸ್ಟ್ರೀಯಲ್ ಸಬರ್ಬ್ 2ನೇ ಹಂತದಲ್ಲಿ ಮಹತ್ವದ ತೆರವು ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಸುಮಾರು ₹25 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಾಧಿಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಗ್ರಾಮದ ಸರ್ವೆ ನಂಬರ್ 79 ಮತ್ತು 70ರಲ್ಲಿ ಬರುವ ಇಂಡಸ್ಟ್ರೀಯಲ್ ಸಬರ್ಬ್, 2ನೇ ಹಂತ, ರಾಜಾಜಿನಗರ ಬಡಾವಣೆಯ ನಿವೇಶನ ಸಂಖ್ಯೆ 13 ಮತ್ತು 17ರಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸುಮಾರು 13,000 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡ ಹಾಗೂ ನಿರ್ಮಾಣಗಳನ್ನು ತೆರವುಗೊಳಿಸಿ, ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.
http://Visit : www.suddidina.com
ಅನಧಿಕೃತ ನಿರ್ಮಾಣಕ್ಕೆ ಬಿಡಿಎ ಬ್ರೇಕ್:
ಬಿಡಿಎಗೆ ಸೇರಿದ ಅಥವಾ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಜಾಗಗಳಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ತೆರವು ಕಾರ್ಯಾಚರಣೆಯ ಬಳಿಕ ಆಸ್ತಿಯನ್ನು ಪ್ರಾಧಿಕಾರದ ನೇರ ಸುಪರ್ದಿಗೆ ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗಳ ಸಂರಕ್ಷಣೆಗೆ ಬಿಡಿಎ ಕೈಗೊಳ್ಳುತ್ತಿರುವ ಕ್ರಮಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
ಸುಮಾರು ₹25 ಕೋಟಿ ಮೌಲ್ಯದ ಆಸ್ತಿ ಇರುವುದರಿಂದ, ಈ ಕಾರ್ಯಾಚರಣೆ ನಗರದ ಆಸ್ತಿ ಸಂರಕ್ಷಣೆ ಹಾಗೂ ಅನಧಿಕೃತ ನಿರ್ಮಾಣಗಳ ನಿಯಂತ್ರಣದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ದೊಡ್ಡ ಪ್ರಮಾಣದ ಭೂಮಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ನಡೆಸಿದರೆ ಯಾವುದೇ ಕಾರಣಕ್ಕೂ ಅದನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಕ್ರಮ ನೀಡಿದೆ.
https://x.com/BDAOfficialGok/status/2092121239175512436?s=20
ಬಹು ಇಲಾಖೆಗಳ ಸಮನ್ವಯದಲ್ಲಿ ಕಾರ್ಯಾಚರಣೆ:
ತೆರವು ಕಾರ್ಯಾಚರಣೆಯನ್ನು ಬಿಡಿಎಯ ವಲಯ ಆಯುಕ್ತರು, ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-1, ಕಾರ್ಯನಿರತ ಆರಕ್ಷಕ ಪಡೆ, ಪಶ್ಚಿಮ ವಿಭಾಗದ ಅಭಿಯಂತರರು ಹಾಗೂ ಸರ್ವೆಯರ್‌ಗಳು ಒಳಗೊಂಡ ತಂಡ ಕೈಗೊಂಡಿತು. ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಸ್ಥಳ ಪರಿಶೀಲನೆ, ನಿರ್ಮಾಣ ತೆರವು ಹಾಗೂ ಜಾಗದ ಸ್ವಾಧೀನ ಪ್ರಕ್ರಿಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಪೂರ್ಣಗೊಳಿಸಿದರು. ಕಾರ್ಯಾಚರಣೆ ಬಳಿಕ ತೆರವುಗೊಳಿಸಲಾದ ಪ್ರದೇಶವನ್ನು ಬಿಡಿಎ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ನಗರದ ಭೂ ಸಂಪತ್ತಿನ ರಕ್ಷಣೆಗೆ ಕಠಿಣ ಹೆಜ್ಜೆ
ಬೆಂಗಳೂರು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಹಾಗೂ ಪ್ರಾಧಿಕಾರಕ್ಕೆ ಸೇರಿದ ಜಾಗಗಳ ಮೇಲೆ ಅಕ್ರಮ ನಿರ್ಮಾಣಗಳು ನಡೆಯದಂತೆ ನಿಗಾ ವಹಿಸುವುದು ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಕೈಗೊಂಡಿರುವ ₹25 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವ ಕ್ರಮ, ಅನಧಿಕೃತ ನಿರ್ಮಾಣಗಳ ವಿರುದ್ಧದ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಿದೆ.
ಬೆಂಗಳೂರು ನಗರದ ಭೂ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಬಿಡಿಎಯ ಈ ತೆರವು ಕಾರ್ಯಾಚರಣೆ, ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಮುಂದುವರಿಯುವ ಸಾಧ್ಯತೆ ಇದೆ.

-
ದಿನದ ಸುದ್ದಿ7 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ4 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ3 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ18 hours agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ
-
ದಿನದ ಸುದ್ದಿ19 hours agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ15 hours agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ15 hours agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ19 hours agoಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅಡ್ಡಬಂದ ವಾಹನ ತಪ್ಪಿಸಲು ಹೋಗಿ ಅವಘಡ !







