Connect with us

ಬಹಿರಂಗ

ಸಾಂತ್ವನದ ನೆಲೆಗಳ ಸಾಂಸ್ಥೀಕರಣವೂ ಸೌಹಾರ್ದತೆಯ ಹಂಬಲವೂ

Published

on


  • ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಂಸ್ಕೃತಿಕ ಸೌಂದರ್ಯದ ಸಾಧನಗಳು ರಾಗದ್ವೇಷಗಳ ನೆಲೆಯಾಗಬಾರದು.

  • ನಾ ದಿವಾಕರ

ಯಾವುದೇ ರೀತಿಯ ಸಮಾಜದಲ್ಲಿ ಸಾಮಾನ್ಯ ಜನರಿಗೆ ತಮ್ಮ ನಿತ್ಯ ಬದುಕಿನ ಬವಣೆಯಿಂದ ಹೊರಬರಲು ಕೆಲವು ಮಾರ್ಗಗಳು, ಸಾಧನಗಳು, ವಾಹಿನಿಗಳು ಅತ್ಯವಶ್ಯವಾಗಿರುತ್ತವೆ.

ವಿಶೇಷವಾಗಿ ಮನೆಯಿಂದ ಹೊರಹೋಗಿ ದುಡಿಯುವವರಿಗೆ ಮತ್ತು ದಿನವಿಡೀ ಮನೆಯಲ್ಲೇ ದುಡಿದು ಹೈರಾಣಾಗುವ ಮಹಿಳೆಯರಿಗೆ ನೆಮ್ಮದಿಯ ಕ್ಷಣಗಳು ಲಭ್ಯವಾಗುವುದು ಮುಸ್ಸಂಜೆಯ ನಂತರ ಮತ್ತು ಮುಂಜಾವಿನ ಮುನ್ನ.

ಕಳೆದ ಐದು ದಶಕಗಳಿಂದಲೂ ಬ್ರಾಹ್ಮೀ ಮುಹೂರ್ತ ಎನ್ನಲಾಗುವ ಬೆಳ್ಳಂಬೆಳಗಿನ ಜಾವದಲ್ಲಿ ಎದ್ದು ನಿತ್ಯ ಜೀವನದ ಚಕ್ರ ಉರುಳಿಸುವ ಅಭ್ಯಾಸವಿರುವ ನನಗೆ ಮತ್ತು ನನ್ನಂತಹ ಲಕ್ಷಾಂತರ ಜನಕ್ಕೆ ಮುಂಜಾವಿನ ಮುನ್ನ ಇರುವಂತಹ ಶಾಂತತೆ, ನಿರ್ಲಿಪ್ತ ವಾತಾವರಣ, ಶಬ್ದರಹಿತ ಪರಿಸರ, ಸೂರ್ಯೋದಯದ ವೇಳೆ ಕೇಳಿಬರುವ ಹಕ್ಕಿಗಳ ಚಿಲಿಪಿಲಿ ಮತ್ತು ನಿರ್ಜನ ರಸ್ತೆಗಳು ಎಂತಹ ಮಹದಾನಂದ ಉಂಟುಮಾಡುತ್ತದೆ ಎಂದು ಹೇಳಬೇಕಿಲ್ಲ. ರಸ್ತೆಯಲ್ಲಿ ನಡೆದುಹೋಗುವಾಗಲೂ ಧ್ಯಾನಸ್ಥ ಮನಸ್ಥಿತಿಯನ್ನು ಹೊಂದಬಹುದಾದಂತಹ ವಾತಾವರಣ ಅಲ್ಲಿರುತ್ತದೆ. ಬಹುಶಃ ಬೆಂಗಳೂರಿನಂತಹ ಕಾಂಕ್ರೀಟ್‌ ಕಾಡುಗಳ ದಟ್ಟಣೆಯಲ್ಲಿ ಇವೆಲ್ಲವೂ ಮಾಯವಾಗಿರುತ್ತದೆ.

ಶಾಲೆ, ಕಾಲೇಜು, ಕಾರ್ಖಾನೆ, ಕಚೇರಿ ಮತ್ತು ಸ್ವಂತ ಉದ್ದಿಮೆಗಳಿಗಾಗಿ ಮುಂಜಾನೆದ್ದು ಹೊರಡುವವರಿಗೆ ಈ ಸುಂದರ ಗಳಿಗೆಗಳೇ ದಿನವಿಡೀ ದುಡಿಮೆ ಮಾಡುವ ಶಕ್ತಿಯನ್ನು ಸದ್ದಿಲ್ಲದೆ ತುಂಬಿರುತ್ತವೆ. ಹೊರಗಣ ದುಡಿಯುವವರಿಗಿಂತಲೂ ಹೆಚ್ಚಿನ ದುಡಿಮೆಯನ್ನು ಮನೆಯೊಳಗಿದ್ದೇ ಮಾಡುವ ಹೆಣ್ಣುಮಕ್ಕಳ ವೇತನರಹಿತ ಶ್ರಮಕ್ಕೆ ಈ ಪ್ರಶಾಂತ ಗಳಿಗೆಗಳೇ ನಿತ್ಯ ಮುಂಗಡ ಕೂಲಿಯಂತೆ.

ಈ ಸಂದರ್ಭದಲ್ಲಿ ನಿತ್ಯ ಕಾರ್ಖಾನೆಗೆ ಹೋಗುವ ಕಾರ್ಮಿಕರ ಬವಣೆಯನ್ನೂ ಸಹ ಗಮನಿಸಬೇಕಾದ್ದೇ. ದಿನಕ್ಕೆ ಮೂರು ಪಾಳಿಗಳಿರುವ ಬಹುತೇಕ ಕಾರ್ಖಾನೆಗಳಲ್ಲಿ ಕಾರ್ಮಿಕರು ಕೆಲವು ದಿನ ನಸುಕಿನಲ್ಲೇ ಹೊರಡಬೇಕಾಗುತ್ತದೆ. ಇನ್ನು ಕೆಲವು ದಿನ ರಾತ್ರಿ ಮನೆಯಿಂದ ತೆರಳಿ ಬೆಳ್ಳಂಬೆಳಗ್ಗೆ ಮನೆಗೆ ಹಿಂದಿರುಗುವುದು ಸಾಮಾನ್ಯ ದೃಶ್ಯ. ಸಾರ್ವಜನಿಕ ಉದ್ದಿಮೆಗಳ ತವರು ಎನ್ನಬಹುದಾದ ಬೆಂಗಳೂರಿನ ಹಿಂದಿನ ಎರಡು ಪೀಳಿಗೆಯವರಿಗೆ ಇದರ ಪರಿಚಯ ಇದ್ದೇ ಇರುತ್ತದೆ.

ಅರ್ದಂಬರ್ಧ ನಿದ್ದೆಯಲ್ಲೇ ತಿಂಗಳಾರ್ಧವನ್ನು ಕಳೆಯುವ ಈ ಕಾರ್ಮಿಕರು , ಯಾವುದೇ ಕೆಲಸ ಮಾಡಿದರೂ, ತಮ್ಮ ದುಡಿಮೆಯ ಮೂಲಕವೇ ಭಾರತದ ಅರ್ಥ ವ್ಯವಸ್ಥೆಯನ್ನು ಒಂದು ಭದ್ರಕೋಟೆಯನ್ನಾಗಿ ಮಾಡಿರುವುದು ಈ ಸಂದರ್ಭದಲ್ಲಿ ಸ್ಮರಿಸಲೇಬೇಕಾದ ಅಂಶ. ಇದರ ಶ್ರೇಯ ಮನೆಯಲ್ಲಿ ಇವರ ಊಟ, ತಿಂಡಿ, ವಿಶ್ರಾಂತಿ ಮತ್ತು ಅಬ್ಬರ ಎಲ್ಲವನ್ನೂ ಸಹಿಸಿಕೊಂಡು ತಾಳ್ಮೆಯಿಂದ ನಡೆಸಿಕೊಂಡು ಹೋಗುವ ಹೆಣ್ಣುಮಕ್ಕಳಿಗೂ ಸಮಭಾಗದಲ್ಲಿ ಸಲ್ಲಬೇಕಲ್ಲವೇ ?

ರಸ್ತೆಗಳಲ್ಲಿ ವಾಹನದಟ್ಟಣೆಯೇ ಇಲ್ಲದ ಕಾಲವನ್ನೂ ಮೀರಿ ನಾವು ಬಂದಿದ್ದೇವೆ. ಇಂದಿನ ಯುವ ಪೀಳಿಗೆಗೆ ಖಾಲಿ ರಸ್ತೆ ನೋಡುವುದೇ ಒಂದು ಸುಂದರ ಅನುಭವದಂತೆ ಕಾಣಬಹುದು. ಆದರೆ ಕೇವಲ ನಾಲ್ಕೈದು ದಶಕಗಳ ಹಿಂದೆ ರಸ್ತೆಯಲ್ಲಿ ಡುರ್‌ರ್‌ರ್‌ರ್‌,,,, ಪೀಪೀಪೀ,,,,, ಎಂದು ಸದ್ದುಮಾಡುತ್ತಾ, ಅತ್ತಿಂದಿತ್ತ ಓಲಾಡುತ್ತಾ ಓಡುತ್ತಿದ್ದ ಹುಡುಗರು ಮುಖ್ಯ ರಸ್ತೆಗಳಲ್ಲೂ ಕಾಣುತ್ತಿದ್ದರು. ಆದರೂ ಅಮ್ಮಂದಿರು ಹುಷಾರಾಗಿ ಹೋಗು ಎಂದು ಹೇಳುವುದನ್ನು ತಪ್ಪಿಸುತ್ತಿರಲಿಲ್ಲ.

ಇಂದು ರಸ್ತೆಯಲ್ಲಿ ನಡೆದು ಹೋಗುವುದೇ ದುಸ್ತರವಾದ ಸನ್ನಿವೇಶ ಎದುರಾಗಿದೆ. ಅನೇಕ ನಗರಗಳ ಮುಖ್ಯರಸ್ತೆಗಳಲ್ಲಿ ಪಾದಚಾರಿಗಳಿಗೆ ಜಾಗವೇ ಇರುವುದಿಲ್ಲ. ಆಧುನಿಕ ಯುವ ಪೀಳಿಗೆಗೆ ಇದರ ಪರಿವೆಯೂ ಇರುವುದಿಲ್ಲ, ಏಕೆಂದರೆ ಮಧ್ಯಮ ವರ್ಗಗಳಲ್ಲಿ ನಡೆದಾಡುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ. ವಾಹನದಟ್ಟಣೆಯ ಸದ್ದೂ ಕೇಳಿಸದಂತೆ ದಿನವಿಡೀ ಇಯರ್‌ ಫೋನ್‌ ಸಿಕ್ಕಿಸಿಕೊಂಡು ಓಡಾಡುವ ಒಂದು ಪೀಳಿಗೆಗೆ ಶಬ್ದಮಾಲಿನ್ಯದ ಪರಿಜ್ಞಾನವೇ ಇರಲಿಕ್ಕಿಲ್ಲ. ಏಕೆಂದರೆ ಅವರ ಮಿದುಳಿನ ಮೇಲೆ ಉಂಟಾಗಬಹುದಾದ ಶಬ್ದತರಂಗಗಳ ಅಡ್ಡಪರಿಣಾಮಗಳ ಪರಿವೆ ಅವರಿಗೆ ಇರಲಿಕ್ಕಿಲ್ಲ. ರಸ್ತೆಗಳಲ್ಲಿ ವಾಹನಗಳ ಹಾರ್ನ್‌, ಅತಿ ಹೆಚ್ಚು ಸದ್ದುಮಾಡುವ ಸೈಲೆನ್ಸರ್‌ಗಳು(!) ಮತ್ತು ಹೆಚ್ಚಿನ ಜನದಟ್ಟಣೆ ಜನಸಾಮಾನ್ಯರಲ್ಲಿ ಶಬ್ದಮಾಲಿನ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸುವಂತೆ ಮಾಡಿವೆ.

ಐವತ್ತು ವರ್ಷಗಳಷ್ಟು ಹಿಂದಕ್ಕೆ ಚಲಿಸಿದರೆ ನಮಗೆ ಗೋಚರಿಸಬಹುದಾದ ಸಾಂತ್ವನದ ನೆಲೆಗಳು ಇಂದು ಮರೆಯಾದಂತೆ ಕಾಣುತ್ತವೆ. ಇತ್ತೀಚೆಗೆ ವಿವಾದ ಸೃಷ್ಟಿಸಿರುವ ಅಜಾನ್-ಸುಪ್ರಭಾತ-ಭಜನೆಯ ಜಿದ್ದಾಜಿದ್ದಿಯ ಹಿನ್ನೆಲೆಯಲ್ಲಿ ಇದನ್ನು ಪರಾಮರ್ಶಿಸಬಹುದು. ದೇವಸ್ಥಾನ, ಮಸೀದಿ ಮತ್ತು ಚರ್ಚುಗಳು ಆಧುನಿಕತೆಗೊಳಗಾದಷ್ಟೇ ವಾಣಿಜ್ಯೀಕರಣಕ್ಕೊಳಗಾಗಿರುವುದನ್ನೂ ಅಲ್ಲಗಳೆಯದೆ ಈ ಪೂಜಾ ಸ್ಥಳಗಳ ಸುತ್ತ ಹಬ್ಬಿರುವ ವಿವಾದದ ಸಿಕ್ಕುಗಳನ್ನು ಅರ್ಥಮಾಡಿಕೊಳ್ಳಬಹುದು.

ಕೇವಲ ನಾಲ್ಕು ದಶಕಗಳ ಹಿಂದೆ ದೇವಸ್ಥಾನಗಳೆಂದರೆ ಶ್ರದ್ಧಾ ಭಕ್ತಿಯ ಕೇಂದ್ರಗಳಾಗಿದ್ದವು, ನಿತ್ಯ ಕಾಯಕಗಳಿಂದ ದಣಿದ ಮನಸುಗಳಿಗೆ ಸಾಂತ್ವನದ ನೆಲೆಗಳಾಗಿದ್ದವು. ಅಲ್ಲಿ ನಡೆಯುತ್ತಿದ್ದ ಪೂಜಾ ಕೈಂಕರ್ಯಗಳಿಗೆ ಮಾರುಕಟ್ಟೆ ಸ್ಪರ್ಶ ಇರಲಿಲ್ಲ. ಶ್ರದ್ಧೆ ಮತ್ತು ನಂಬಿಕೆಯ ಸ್ಪರ್ಶ ಹೆಚ್ಚಾಗಿತ್ತು. ಗಂಟೆಯ ಸದ್ದು ಪಕ್ಕದ ಮನೆಗೂ ಕೇಳುತ್ತಿರಲಿಲ್ಲ. ನಗಾರಿಯ ಬಳಕೆ ಬಹುಪಾಲು ಇರಲಿಲ್ಲ.

ಆಸ್ತಿಕರು ತಮ್ಮ ಆತಂಕಗಳನ್ನು ದೂರ ಮಾಡಿಕೊಳ್ಳಲು, ಮನಸಿನ ದುಗುಡಗಳನ್ನು ನೀಗಿಸಿಕೊಳ್ಳಲು, ಚಿಂತೆಗಳನ್ನು ನಿವಾರಿಸಿಕೊಳ್ಳಲು ದೇವಸ್ಥಾನಗಳನ್ನು ಒಂದು ಸಾಂತ್ವನದ ನೆಲೆಯಂತೆ ಭಾವಿಸುತ್ತಿದ್ದರು. ಸಂಕಷ್ಟಿ, ಪ್ರದೋಷ, ನಾಗದೋಷ, ಶನೀಕಾಟ ಮುಂತಾದ ನಂಬಿಕೆಗಳು ವ್ಯಕ್ತಿಗತ ನೆಲೆಯಲ್ಲಿದ್ದವೇ ಹೊರತು, ಸಾರ್ವಜನಿಕವಾಗಿ ಪರಿಹರಿಸಬಹುದಾದ ವಿಧಾನಗಳಾಗಿರಲಿಲ್ಲ.

ಅಂದಿನ ದೇವಾಲಯದ ಪ್ರಾಂಗಣಗಳಲ್ಲಿ ಹಾಡುಗಾರಿಕೆ, ಸಂಗೀತ, ಭಜನೆ ನೆರೆದ ಭಕ್ತರಿಂದಲೇ ನಡೆಯುತ್ತಿದ್ದುದೂ ಒಂದು ವಿಶೇಷ. ಆಸ್ತಿಕರಿಗೆ ಮತ್ತು ಕೆಲವೊಮ್ಮೆ ಆಸ್ತಿಕರಲ್ಲದವರಿಗೂ ಭಜನೆ ಕೆಲವೊಮ್ಮೆ ಮಾನಸಿಕವಾಗಿ ನೆಮ್ಮದಿ ತರುವ ಒಂದು ಕ್ರಿಯೆಯಾಗಿ ಪರಿಣಮಿಸುತ್ತದೆ. ಸಂಜೆ ತಮ್ಮ ನಿತ್ಯ ದುಡಿಮೆಯ ದಣಿವಾರಿಸಿಕೊಳ್ಳಲು ಭಜನಾ ಮಂದಿರಗಳಲ್ಲಿ ಕುಳಿತು ಮನಶ್ಶಾಂತಿ ಕಂಡುಕೊಳ್ಳುವುದು ಸಾಮಾನ್ಯವಾಗಿತ್ತು.

ಗೃಹಿಣಿಯರಿಗೂ ಈ ಭಜನೆ ಎನ್ನುವುದು ನೆಮ್ಮದಿ ಮೂಡಿಸುವಂತಹ ಸಾಂತ್ವನದ ನೆಲೆಯಾಗಿತ್ತು. ಬೆಳಗಿನ ಸುಪ್ರಭಾತ ನಿದ್ರಾತೀತ ದೇವರನ್ನು ಎಬ್ಬಿಸುವುದಕ್ಕಿಂತಲೂ ಸುತ್ತಲಿನ ಜನರನ್ನು ನಿದ್ರೆಯಿಂದ ಎಚ್ಚರಿಸುವ ಒಂದು ನಾದಮಯ ವಾಹಿನಿಯಂತೆ ಅಲ್ಲಲ್ಲಿ ಮೊಳಗುತ್ತಿದ್ದುದು ಸಾಮಾನ್ಯ ಸಂಗತಿ. ಹಾಗೆಯೇ ಚರ್ಚುಗಳಲ್ಲಿನ ಗಂಟೆಯ ಸದ್ದು, ಮಸೀದಿಯ ಅಜಾನ್‌ ಸಹ ಜನರಿಗೆ ವೇಳೆಯನ್ನು ಸೂಚಿಸುವ ಮಟ್ಟಿಗೆ ಕರಾರುವಾಕ್ಕಾಗಿ ಸಮಯಸೂಚಕವಾಗಿದ್ದವು.

ರಂಜಾನ್‌ ವೇಳೆಯಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಮುಸಲ್ಮಾನರನ್ನು ಎಬ್ಬಿಸಲು ರಸ್ತೆಯಲ್ಲಿ ಜೋಳಿಗೆ ಹೊತ್ತ ಫಕೀರರು ಹಾಡು ಹೇಳಿಕೊಂಡು ಬರುತ್ತಿದ್ದರು. ಶಿವರಾತ್ರಿಯ ದಿನ ನಡುರಾತ್ರಿಯಲ್ಲಿ ಭಕ್ತಿಪರವಶ ಗೀತೆಗಳನ್ನು ಹಾಡುವ ಒಂದು ಸಮುದಾಯವೂ ನಮ್ಮ ನಡುವೆ ಇತ್ತು. ಇದಾವುದೂ ನಮಗೆ ಶಬ್ದ ಮಾಲಿನ್ಯ ಎನಿಸಿರಲಿಲ್ಲ. ಜಾತಿ ಭೇದ, ಅಸ್ಪೃಶ್ಯತೆ, ಸಾಮಾಜಿಕ ತಾರತಮ್ಯಗಳ ನಡುವೆಯೇ ಸಮಾಜದಲ್ಲಿ ದಣಿದ ಜೀವಗಳಿಗೆ ಸಾಂತ್ವನ ನೀಡುವ ತಾಣಗಳಂತೆ ಈ ಭಕ್ತಿ ಕೇಂದ್ರಗಳು ಕಾಣುತ್ತಿದ್ದವು.

ಆದರೆ ಆಧುನಿಕ ಸಮಾಜ ಮಾರುಕಟ್ಟೆ ವ್ಯವಸ್ಥೆಗೆ ತೆರೆದುಕೊಳ್ಳುತ್ತಿರುವಂತೆಲ್ಲಾ ಮತಧಾರ್ಮಿಕ ನೆಲೆಗಳು ತಮ್ಮ ಬಾಹುಗಳನ್ನು ವಿಸ್ತರಿಸಿಕೊಳ್ಳತೊಡಗಿದವು. ನಗರೀಕರಣ ಪ್ರಕ್ರಿಯೆ ಚುರುಕಾದಂತೆ ಸಣ್ಣ ಪುಟ್ಟ ಪಟ್ಟಣಗಳಲ್ಲೂ ಬಡಾವಣೆಗಳು ಹುಟ್ಟಿಕೊಂಡವು. ಊರಿನ ಕೇಂದ್ರ ಬಿಂದು ಆಗಿರುತ್ತಿದ್ದ ದೇವಸ್ಥಾನಗಳೊಂದಿಗೇ ರಸ್ತೆಗೊಂದು ದೇವಸ್ಥಾನ ನಿರ್ಮಾಣ ಮಾಡುವುದು, ರಾಜಗೋಪುರಗಳನ್ನು ಕಟ್ಟುವುದು ಮತ್ತು ಎಲ್ಲ ದೇವಲಗಳನ್ನೂ ಸರ್ವದೈವ ಪೂಜಾ ಕೇಂದ್ರದಂತೆ ಮಾರ್ಪಡಿಸುವುದರ ಮೂಲಕ ಪೂಜಾಸ್ಥಳಗಳ ವಾಣಿಜ್ಯೀಕರಣಕ್ಕೆ ಹೆಚ್ಚು ಒತ್ತು ನೀಡಲಾಯಿತು.

ನಾಗರಿಕರ ನಡುವಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಘಟನೆಗಳಿಗೆ, ಕ್ರಮೇಣ ರಾಜಕೀಯ ಸಂಘಟನೆಗಳಿಗೂ ಸಹ, ದೇವಾಲಯಗಳೇ ಕೇಂದ್ರ ಸ್ಥಾನಗಳಾಗಿ ಪರಿಣಮಿಸಿದವು. ಆಗಮ ಶಾಸ್ತ್ರಗಳಿಂದ, ವೈದಿಕ ಪೂಜಾ ವಿಧಿವಿಧಾನಗಳನ್ನು ಹೆಕ್ಕಿ ತೆಗೆಯುವ ಮೂಲಕ ಸಾಂತ್ವನಕ್ಕಾಗಿ ಅಲೆಯುವ ದಣಿದ ಮನಸುಗಳಿಗೆ ಹೊಸ ಅಚರಣೆಗಳನ್ನು ಪರಿಚಯಿಸಲು ದೇವಸ್ಥಾನಗಳು ತಮ್ಮದೇ ಆದ ದರಪಟ್ಟಿಗಳನ್ನು ಪೈಪೋಟಿಯ ಮೇಲೆ ಪ್ರಕಟಿಸಿ ಶುಲ್ಕ ವಿಧಿಸುವ ಒಂದು ಪದ್ಧತಿಗೆ ಮುಂದಾದವು.

ಈ ವಾಣಿಜ್ಯೀಕರಣ ಪ್ರಕ್ರಿಯೆಯಲ್ಲಿ ಕಳೆದುಹೋಗಿರುವುದು ಶ್ರದ್ಧಾಭಕ್ತಿಯ ಸ್ಪರ್ಶ ಮತ್ತು ಮುನ್ನೆಲೆಗೆ ಬಂದಿರುವುದು ಮಾರುಕಟ್ಟೆ ಮನೋಭಾವ. ಈ ಪ್ರಕ್ರಿಯೆಯಲ್ಲೇ ಸುಪ್ರಭಾತ, ಭಜನೆ ಮತ್ತು ಪೂಜಾ ವಿಧಿವಿಧಾನಗಳ ಆಚರಣೆಗಳು ದೇವಸ್ಥಾನಗಳ ಸ್ಥಾನಮಾನ, ಪ್ರತಿಷ್ಠೆ ಮತ್ತು ಶ್ರೀಮಂತಿಕೆಯ ದ್ಯೋತಕಗಳಾಗಿ ಪರಿಣಮಿಸಿದ್ದವು. ಮೈಕಾಸುರನ ಹಾವಳಿ ಆರಂಭವಾಗಿದ್ದು ಈ ಹಂತದಲ್ಲೇ.

ಈ ನಗರೀಕರಣ ಮತ್ತು ಆಧುನಿಕೀಕರಣ ಪ್ರಕ್ರಿಯೆಯಲ್ಲೇ ಮಸೀದಿಗಳೂ ಹೆಚ್ಚಾಗಿರುವುದನ್ನು ಗಮನಿಸಬೇಕು. ಮಸೀದಿಗಳ ನಿರ್ಮಾಣವೂ ಆಧುನಿಕತೆ ಮತ್ತು ಮಾರುಕಟ್ಟೆ ಸ್ಪರ್ಶದೊಂದಿಗೆ ಭವ್ಯತೆ ಮತ್ತು ಶೀಮಂತಿಕೆಯನ್ನು ಪ್ರದರ್ಶಿಸುವ ತಾಣಗಳಾಗಿದ್ದು ವಾಸ್ತವ. ಹಲವು ಪಂಗಡಗಳನ್ನು ಹೊಂದಿರುವ ಇಸ್ಲಾಂ ಅನುಯಾಯಿಗಳಿಗೆ ತಮ್ಮದೇ ಆದ ಮಸೀದಿಗಳನ್ನು ಹೊಂದುವ ಹಂಬಲವೂ ಹೆಚ್ಚಾಗತೊಡಗಿತ್ತು. ಹಾಗಾಗಿಯೇ ದೇವಸ್ಥಾನಗಳು ಹೆಚ್ಚಾದಂತೆಯೇ ಮಸೀದಿಗಳೂ ಹೆಚ್ಚಾದವು.

ಮಿನಾರುಗಳ ಎತ್ತರ ಮತ್ತು ಕಟ್ಟಡದ ವಿನ್ಯಾಸ, ಅಲಂಕಾರಿಕವಾದ ಶೈಲಿ ಮತ್ತು ಅತ್ಯಾಧುನಿಕತೆಯನ್ನು ಬಿಂಬಿಸುವಂತಹ ಸೌಲಭ್ಯಗಳೊಂದಿಗೆ ಮಸೀದಿಗಳು ಸಾಮಾನ್ಯ ಜನತೆಯ ದೃಷ್ಟಿಯಲ್ಲಿ ಸಾಮುದಾಯಿಕ ಉನ್ನತಿಯ ಪ್ರತೀಕಗಳಾದವು. ಹಾಗೆಯೇ ಅಜಾನ್‌ ಕೂಗಲು ಬಳಸುವ ಮೈಕಾಸುರರೂ ಶ್ರೇಣೀಕರಣಕ್ಕೊಳಗಾದರು. ಹೆಚ್ಚು ಜನರನ್ನು ತಲುಪಲು ಮೈಕಾಸುರನಿಗೆ ಏರಿದ ಧ್ವನಿ ಅಗತ್ಯವಾಗುತ್ತದೆ.

ಮಿನಾರುಗಳ ಸುತ್ತ ಕಟ್ಟಿರುವ ಲೌಡ್‌ ಸ್ಪೀಕರುಗಳ ಸಂಖ್ಯೆ ಹೆಚ್ಚಾದಂತೆಲ್ಲಾ ದಶದಿಕ್ಕುಗಳಿಗೂ ಅಜಾನ್‌ ಕೇಳಿಸುತ್ತದೆ. ಈ ಪರಿಕಲ್ಪನೆಯಲ್ಲೇ ಮಸೀದಿಗಳ ಅಜಾನ್‌ ಒಂದು ಹಂತದಲ್ಲಿ ಸಾರ್ವಜನಿಕ ಪರಿಸರಲ್ಲಿ ಶಬ್ದ ಮಾಲಿನ್ಯ ಉಂಟುಮಾಡುವ ಮಟ್ಟಕ್ಕೆ ಬೆಳೆದಿತ್ತು. ದೇವಸ್ಥಾನಗಳು ಭಕ್ತಾದಿಗಳನ್ನು ಆಕರ್ಷಿಸಲು ಮೈಕಾಸುರನ ಮೊರೆ ಹೋದಂತೆಯೇ ಮಸೀದಿಗಳು ಪ್ರಾರ್ಥನೆಗೆ ಆಹ್ವಾನಿಸಲು ಮೊರೆ ಹೋದವು.

ಈ ಎರಡೂ ಪ್ರಕ್ರಿಯೆಗಳು ಹಿಂದೆಯೂ ಇದ್ದವು. ಇಂದಿಗೂ ಇದೆ. ವ್ಯತ್ಯಾಸವೆಂದರೆ ವಾಣಿಜ್ಯೀಕರಣಗೊಂಡ ಸನ್ನಿವೇಶದಲ್ಲಿ ಸ್ಪರ್ಧಾತ್ಮಕತೆಯೂ ಹೆಚ್ಚಾಗಿದೆ. ಇಂದು ಮಾರುಕಟ್ಟೆಗೂ ಪೂಜಾಸ್ಥಳಗಳಿಗೂ ನೇರವಾದ ಸಂಬಂಧವಿದೆ. ಮಸೀದಿ, ದೇವಾಲಯ ಮತ್ತು ಚರ್ಚುಗಳ ಮುಂದೆ ಇರುವ ವ್ಯಾಪಾರ ಮಳಿಗೆಗಳು, ತಿಂಡಿ ತಿನಿಸುಗಳ ಅಂಗಡಿಗಳು ಈ ಮಾರುಕಟ್ಟೆಯನ್ನು ಬೆಳೆಸುವ ಕೇಂದ್ರಗಳಾಗಿರುತ್ತವೆ. ಭಕ್ತಾದಿಗಳು ಮುಖ್ಯ ಗ್ರಾಹಕರಾಗಿರುತ್ತಾರೆ. ಹಾಗಾಗಿಯೇ ಇಂದು ಯಾವುದೇ ಪೂಜಾ ಸ್ಥಳಗಳಲ್ಲೂ ಪ್ರಶಾಂತ ವಾತಾವರಣ ಇರುವುದಿಲ್ಲ. ಧಾರ್ಮಿಕ ಕೇಂದ್ರಗಳು ಅತಿ ಹೆಚ್ಚು ಜನಸಾಂದ್ರತೆ ಇರುವ ಪ್ರದೇಶಗಳಾಗಿ ಪರಿವರ್ತನೆಯಾಗುವುದನ್ನು ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆ ಅಪೇಕ್ಷಿಸುತ್ತದೆ.

ರಂಜಾನ್‌ ಸಂದರ್ಭದಲ್ಲಿ ಸಂಜೆಯ ಪ್ರಾರ್ಥನೆಯ ನಂತರ ಮನೆಗೆ ಹೋಗಿ ಆಹಾರ ಸೇವಿಸುತ್ತಿದ್ದ ಕಾಲ ಎಂದೋ ಸಂದುಹೋಗಿದೆ. ಇಂದು ಮಸೀದಿಗಳ ಸುತ್ತ ತಿಂಡಿ ತಿನಿಸುಗಳ ನೂರಾರು ಅಂಗಡಿಗಳು ತೆರೆದಿರುತ್ತವೆ. ಮಾರುಕಟ್ಟೆ ಮತ್ತು ಧಾರ್ಮಿಕ ಆಚರಣೆಗಳ ಈ ಸಂಬಂಧವೇ ಮಸೀದಿ, ದೇವಾಲಯಗಳನ್ನು ಪೋಷಿಸುವ ಮೂಲ ಶಕ್ತಿಯೂ ಆಗಿರುತ್ತದೆ. ಹಿಂದೂ ದೇವಾಲಯಗಳಲ್ಲಿ ಪೂಜಾ ವಿಧಾನಗಳು ಹೆಚ್ಚಾದಂತೆಲ್ಲಾ ಪೂಜಾ ಸಾಮಗ್ರಿಗಳ ಮಾರುಕಟ್ಟೆಯೂ ವಿಸ್ತರಿಸುತ್ತದೆ. ಮಾರುಕಟ್ಟೆ ತನ್ನ ವಿಸ್ತರಣೆಗಾಗಿ ಸಮಾಜದ ಎಲ್ಲ ವಲಯಗಳನ್ನೂ ಸಮರ್ಪಕವಾಗಿ ಬಳಸಿಕೊಳ್ಳುತ್ತದೆ. ಇದಕ್ಕೆ ದೈವ ಸನ್ನಿಧಿಗಳೂ ಅಪವಾದವೇನಲ್ಲ.

ಮತಾಚರಣೆ ಮತ್ತು ಧಾರ್ಮಿಕ ಆಚರಣೆಗಳು ವಾಣಿಜ್ಯೀಕರಣಕ್ಕೊಳಗಾಗಿರುವ ಈ ಸಂದರ್ಭದಲ್ಲೇ ಅಜಾನ್‌ ಎನ್ನುವ ಒಂದು ಸರಳ ಆಚರಣೆಯೂ ವಿವಾದಕ್ಕೊಳಗಾಗಿದೆ. ಅಜಾನ್‌ ವೇಳೆ ಮೈಕಾಸುರನ ದನಿ ತಗ್ಗಿಸಿ ಶಬ್ದ ಸ್ವಾಸ್ಥ್ಯವನ್ನು ಕಾಪಾಡಲು ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬೇಕಿರಲಿಲ್ಲ. ಸಮುದಾಯದ ನೇತಾರರು, ಧಾರ್ಮಿಕ ನಾಯಕರೇ ಈ ನಿಟ್ಟಿನಲ್ಲಿ ಯೋಚಿಸಬಹುದಿತ್ತು. ಅಜಾನ್‌ನಿಂದ ಶಬ್ದಮಾಲಿನ್ಯ ಉಂಟಾಗುತ್ತದೆ ಎನ್ನುವುದಕ್ಕಿಂತಲೂ ಈ ಶಬ್ದವನ್ನು ಸಹಿಸಿಕೊಳ್ಳುವ ವ್ಯವಧಾನ ನಮ್ಮಲ್ಲಿ ಕಡಿಮೆಯಾಗಿದೆ ಎನ್ನುವುದು ಹೆಚ್ಚು ಸೂಕ್ತ.

ಇದನ್ನು ವಿರೋಧಿಸಲು ಕೆಲವು ಹಿಂದೂ ಪರ ಸಂಘಟನೆಗಳು ಆಯ್ದುಕೊಂಡ ಮಾರ್ಗ ಮುಂಜಾವಿನ ವೇಳೆ ಅಬ್ಬರದ ಭಜನೆ, ಸುಪ್ರಭಾತ ಹಾಡುವುದು. ಭಜನೆ ಮತ್ತು ಸುಪ್ರಭಾತ ಈ ಎರಡೂ ಪ್ರಕಾರಗಳು ಆಸ್ತಿಕರಿಗೆ ಸಮಾಧಾನ ತರುವ ಪ್ರಕಾರಗಳಾದರೆ, ದಣಿದ ಮನಸುಗಳಿಗೆ ಸಾಂತ್ವನ ತರುವ ಸಾಧನಗಳು. ಈ ಸಾಂತ್ವನದ ಸಾಧನಗಳನ್ನು, ನೆಲೆಗಳನ್ನು ಪ್ರತಿರೋಧದ ನೆಲೆಗಳನ್ನಾಗಿ ಬಳಸಿ, ದ್ವೇಷಾಸೂಯೆಯ ಅಸ್ತ್ರಗಳನ್ನಾಗಿ ಬಳಸುವ ಅವಶ್ಯಕತೆ ಇಲ್ಲ.

ತಮ್ಮ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿ ಜನರು ಅನ್ಯರ ಗೊಡವೆಗೆ ಹೋಗದೆ, ತಮ್ಮದೇ ಆದ ಸಾಂತ್ವನದ ಮಾರ್ಗಗಳನ್ನು ಕಂಡುಕೊಳ್ಳಲು ಭಜನೆ, ಪ್ರಾರ್ಥನೆ, ಸುಪ್ರಭಾತ, ಪೂಜೆ ಮತ್ತು ದೇವಸ್ಥಾನಗಳು ನೆರವಾಗುತ್ತವೆ. ದುಡಿಮೆಯ ಜೀವಗಳಿಗೆ, ದಣಿದ ಜೀವಗಳಿಗೆ ಮತ್ತು ಜೀವನದ ಜಂಜಾಟದಿಂದ ನೊಂದವರಿಗೆ ಇಂದಿಗೂ ಈ ಸಾಂತ್ವನದ ನೆಲೆಗಳು ಅತ್ಯಗತ್ಯವಾಗಿದೆ. ವೈಚಾರಿಕ ನೆಲೆಯಲ್ಲಿ, ವೈಜ್ಞಾನಿಕ ಮನೋಭಾವದೊಂದಿಗೆ ಇದನ್ನು ವಿಮರ್ಶಾತ್ಮಕವಾಗಿ ನೋಡಿದರೂ, ವರ್ತಮಾನದ ನಿತ್ಯ ಬದುಕಿನಲ್ಲಿ ಈ ನೆಲೆಗಳು ಸಾಮಾನ್ಯ ಜನತೆಯ ಬದುಕಿನ ಒಂದು ಭಾಗವಾಗಿಯೇ ಕಾಣುತ್ತವೆ.

ಮುಸ್ಲಿಮರ ನಮಾಜು, ಕ್ರೈಸ್ತರ ಪ್ರಾರ್ಥನೆ ಮತ್ತು ಹಿಂದೂಗಳ ಭಜನೆ-ಪ್ರಾರ್ಥನೆ-ಪೂಜೆ ಇತ್ಯಾದಿಗಳು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಬಹುದಾದರೂ, ಎಂದಿಗೂ ಸಮಾಜ ಕಂಟಕವಾಗುವುದಿಲ್ಲ. ವ್ಯಕ್ತಿಗತ ನೆಲೆಯಲ್ಲಿ, ಕೌಟುಂಬಿಕ ಚೌಕಟ್ಟುಗಳಲ್ಲಿ ಈ ಆಚರಣೆಗಳು ನಿರುಪದ್ರವಿಯಾಗಿ, ಸಾಮಾನ್ಯ ಜನರ ಆತಂಕ, ದುಗುಡ, ತುಮುಲ ಮತ್ತು ಬೇಗುದಿಗಳಿಗೆ ಯಾವುದೋ ಒಂದು ರೀತಿಯಲ್ಲಿ ಸಾಂತ್ವನ ಒದಗಿಸುತ್ತವೆ.

ಬಡತನ, ಹಸಿವು, ಸಾಮಾಜಿಕ ಅನ್ಯಾಯ ಮತ್ತು ತಾರತಮ್ಯಗಳಿಂದ ಹೊರತಾದ ಸಮಾಜಗಳು ಮಾತ್ರವೇ ಇದರಿಂದಾಚೆಗೆ, ವೈಚಾರಿಕ ನೆಲೆಯಲ್ಲಿ ಯೋಚಿಸಲು ಸಾಧ್ಯ. ಆದರೆ ಈ ಆಚರಣೆಗಳನ್ನು, ಕೈಂಕರ್ಯಗಳನ್ನು ಸಾಂಸ್ಥೀಕರಿಸಿದಾಗ, ಮತಾಚರಣೆಯ ಕಟ್ಟುಪಾಡುಗಳಲ್ಲಿ ಬಂಧಿಸಿದಾಗ, ಸಾಂಸ್ಥೀಕರಣಗೊಂಡ ಮತೀಯ ನೆಲೆಗಳನ್ನು ಸಾಮುದಾಯಿಕ ಆಧಿಪತ್ಯದ ನೆಲೆಗಳಂತೆ ಬಳಸಲಾರಂಭಿಸಿದಾಗ, ಇವೆಲ್ಲವೂ ಸಹ ಸಾಂಘಿಕ ಸ್ವರೂಪ ಪಡೆದು ಸಾಮುದಾಯಿಕ ಅಸ್ಮಿತೆಗಳ ರಕ್ಷಣಾ ಕವಚಗಳಾಗಿಬಿಡುತ್ತವೆ.

ಇಸ್ಲಾಂ ಹಾಗೂ ಕ್ರೈಸ್ತ ಮತಗಳು ಈಗಾಗಲೇ ಇಂತಹ ಸಾಂಸ್ಥೀಕರಣ ಪ್ರಕ್ರಿಯೆಗೊಳಗಾಗಿ ಅನೇಕ ದೇಶಗಳಲ್ಲಿ ಆಧಿಪತ್ಯ ರಾಜಕಾರಣದ ಕೈಬಂಧಿಯಾಗಿವೆ. ಹಿಂದುತ್ವ ರಾಜಕಾರಣ ಹಿಂದೂ ಮತವನ್ನು ಸಾಂಸ್ಥೀಕರಿಸಲು ಯತ್ನಿಸುತ್ತಿದೆ. ಈ ಪ್ರಯತ್ನದ ನಡುವೆಯೇ ಸಾಮಾನ್ಯ ಜನತೆಯ ಧಾರ್ಮಿಕ ಬದುಕಿನ ಕೆಲವು ಸಾಂತ್ವನದ ನೆಲೆಗಳನ್ನೂ ಸಹ ಸಾಂಸ್ಥೀಕರಿಸಲು ಪ್ರಯತ್ನಿಸಲಾಗುತ್ತಿದೆ. ಹಿಂದೂ ಸಮಾಜದ ಆಸ್ತಿಕರು ಯೋಚಿಸಬೇಕಾದ ವಿಚಾರ ಇದು.

ಶಬ್ದ ಮಾಲಿನ್ಯಕ್ಕಿಂತಲೂ ನಮ್ಮನ್ನು ಕಾಡಬೇಕಿರುವುದು ನಮ್ಮೊಳಗಿನ ಬೌದ್ಧಿಕ ಮಾಲಿನ್ಯ, ಇದನ್ನು ಸ್ವಚ್ಚಗೊಳಿಸಿದರೆ, ಸ್ವಚ್ಚ ಭಾರತ ಅಭಿಯಾನಕ್ಕೆ ಬೌದ್ಧಿಕ ಸ್ಪರ್ಶವೂ ದೊರೆತೀತು. ಎಲ್ಲ ಜಾತಿ-ಮತ-ಧರ್ಮದ ವಾರಸುದಾರರು ಈ ನಿಟ್ಟಿನಲ್ಲಿ ಯೋಚಿಸುವಂತಾದರೆ ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading

Trending