Connect with us

ಬಹಿರಂಗ

ಸಾಮಾಜಿಕ ಪ್ರಜ್ಞೆಯೂ ಸಾಂಸ್ಕೃತಿಕ ಭೂಮಿಕೆಗಳೂ

Published

on


ಬೌದ್ಧಿಕ ಆಲೋಚನಾಕ್ರಮವನ್ನು ಮೊಳಕೆಯಲ್ಲೇ ಚಿವುಟುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.


  • ನಾ ದಿವಾಕರ

ಳುವ ವರ್ಗಗಳು ಸದಾ ಸಮಾಜದಲ್ಲಿನ ಪ್ರಬಲ ವರ್ಗಗಳ ಭಾಷೆಯಲ್ಲೇ ಮಾತನಾಡಲಿಚ್ಚಿಸುತ್ತದೆ. ಪ್ರಜಾಪ್ರಭುತ್ವದಲ್ಲೂ ಸಹ ಸಾಂವಿಧಾನಿಕ ಮಾರ್ಗಗಳ ಮೂಲಕವೇ ಪ್ರಬಲ ವರ್ಗಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಗಳಿರುವುದರಿಂದ ಆಡಳಿತ ವ್ಯವಸ್ಥೆಯ ಎಲ್ಲ ಕವಲುಗಳಲ್ಲೂ ಇದೇ ವರ್ಗಗಳ ಅಭಿಪ್ರಾಯ, ಪ್ರತಿಪಾದನೆ ಮತ್ತು ತಾತ್ವಿಕ ನೆಲೆಗಳು ತಮ್ಮ ಪಾರಮ್ಯ ಕಂಡುಕೊಳ್ಳುತ್ತವೆ.

ವರ್ತಮಾನ ಭಾರತದ ಸಂದರ್ಭದಲ್ಲಿ ಈ ವರ್ಗಗಳನ್ನು ನಾವು ಮೂರು ಮಜಲುಗಳಲ್ಲಿ ಗುರುತಿಸಬಹುದು. ಮೊದಲನೆಯದು ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳಾಗಿಯೇ ಈಗ ಕಾರ್ಪೋರೇಟ್‌ ಮಾರುಕಟ್ಟೆಯ ವಾರಸುದಾರರಾಗಿ ರೂಪಾಂತರಗೊಂಡಿರುವ ಔದ್ಯಮಿಕ ವರ್ಗ. ಎರಡನೆಯದು ಪ್ರಜಾಪ್ರಭುತ್ವದ ನೆರಳಿನಲ್ಲೇ, ಸಾಂವಿಧಾನಿಕ ಮಾರ್ಗದಲ್ಲೇ ಜನಪ್ರಾತಿನಿಧ್ಯದ ವಾರಸುದಾರಿಕೆ ವಹಿಸಿಕೊಂಡಿರುವ ಅಧಿಕಾರ ರಾಜಕಾರಣದ ಉತ್ತರಾಧಿಕಾರಿಗಳು.

ಮೂರನೆಯದು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಆಧುನಿಕತೆಯ ಕವಚದೊಂದಿಗೆ ಯಥಾವತ್ತಾಗಿ ಕಾಪಾಡಿಕೊಂಡು ಬಂದಿರುವ ಸಾಂಸ್ಕೃತಿಕ ಆಧಿಪತ್ಯದ ವಾರಸುದಾರರು. ಈ ಮೂರೂ ವರ್ಗಗಳನ್ನು ಚುನಾವಣಾ ರಾಜಕಾರಣದ ಅಂಗಳದಲ್ಲಿ ಪ್ರತ್ಯೇಕಿಸಬಹುದಾದರೂ, ಪ್ರಭುತ್ವದ ಆಡಳಿತ ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ಏಕಾಭಿಪ್ರಾಯ ಹೊಂದಿರುವ ಒಂದು ಗುಂಪಾಗಿ ಕಾಣಬಹುದು.

ಸಾಮಾಜಿಕವಾಗಿ ಭಾರತ ತನ್ನ ಸಾಂವಿಧಾನಿಕ ಮೌಲ್ಯಗಳಿಗನುಗುಣವಾಗಿ ಎಷ್ಟೇ ಸಮಾನತೆಯ ಹಾದಿಯಲ್ಲಿ ಸಾಗುತ್ತಿದ್ದರೂ, ಪ್ರಬಲ ಜಾತಿ ಸಮುದಾಯಗಳು ಗ್ರಾಮದಿಂದ ದೆಹಲಿಯವರೆಗೆ ತಮ್ಮ ಆಧಿಪತ್ಯವನ್ನು ಸಾಧಿಸಿವೆ. ಸಮತಲ ನೆಲೆಯಲ್ಲಿ ಕಾಣಬಹುದಾದ ಸಮಾನತೆಯ ಹಾದಿಗಳು ಲಂಬ ನೆಲೆಯಲ್ಲಿ ಸಮತೋಲನವನ್ನು ಕಳೆದುಕೊಳ್ಳುವುದನ್ನೂ ಗಮನಿಸುತ್ತಿದ್ದೇವೆ. ಹಾಗಾಗಿಯೇ ಮೀಸಲಾತಿಯ ಫಲಾನುಭವಿಗಳೂ ಕೆಲವೊಮ್ಮೆ ಲಂಬನೆಲೆಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಊಳಿಗಮಾನ್ಯ ಧೋರಣೆ ಮತ್ತು ಪಿತೃಪ್ರಧಾನ ಮನಸ್ಥಿತಿ ಇಂದಿಗೂ ಜೀವಂತವಾಗಿರುವ ಭಾರತೀಯ ಸಮಾಜದಲ್ಲಿ ಈ ಮೇಲರಿಮೆಯ ಅಹಮಿಕೆಗಳು ಮತ್ತು ಶ್ರೇಷ್ಠತೆಯ ಜೀವಂತಿಕೆಯೇ ಇಲ್ಲಿನ ಕಾರ್ಪೋರೇಟ್‌ ಮಾರುಕಟ್ಟೆ ವ್ಯವಸ್ಥೆಯ ಬಂಡವಾಳಶಾಹಿ ಅಭಿವೃದ್ಧಿ ಮಾರ್ಗಗಳನ್ನು ಇಂದಿಗೂ ರಕ್ಷಿಸುತ್ತಿವೆ. ಸಾಮಾಜಿಕ ಸಮಾನತೆಯೊಂದಿಗೆ ಆರ್ಥಿಕ ಸಮಾನತೆಯನ್ನೂ ಸಾಧಿಸದಿದ್ದರೆ ಪ್ರಜಾಪ್ರಭುತ್ವ ಪರಿಪೂರ್ಣವಾಗುವುದಿಲ್ಲ ಎಂಬ ಅಂಬೇಡ್ಕರ್‌ ಅವರ ಮಾತುಗಳನ್ನು ಇಲ್ಲಿ ಗಮನಿಸಬೇಕಾಗುತ್ತದೆ.

ಬಂಡವಾಳಶಾಹಿ ಆರ್ಥಿಕತೆಯನ್ನೇ ಪೋಷಿಸಿಕೊಂಡು ಬಂದಿರುವ ಭಾರತದ ಆಳುವ ವರ್ಗಗಳು, ಪಕ್ಷಾತೀತವಾಗಿ ಈ ತರತಮಗಳನ್ನೂ ಕಾಪಾಡಿಕೊಂಡು ಬಂದಿವೆ. ಭಾರತದ ಮೇಲ್ಪದರದ ಶೇ 10ರಷ್ಟು ಜನರ ಬಳಿ ದೇಶದ ಶೇ 77ರಷ್ಟು ಸಂಪತ್ತು ಕ್ರೋಢೀಕೃತವಾಗಿದ್ದರೆ, ಶೇ 57ರಷ್ಟು ರಾಷ್ಟ್ರೀಯ ಆದಾಯದ ಪಾಲನ್ನು ಹೊಂದಿದೆ. ಶೇ 1ರಷ್ಟು ಜನರ ಬಳಿ ಶೇ 22ರಷ್ಟು ರಾಷ್ಟ್ರೀಯ ಆದಾಯ ಶೇಖರಣೆಯಾಗಿದೆ. 2017ರ ನಂತರ ಉತ್ಪಾದನೆಯಾದ ಶೇ 73ರಷ್ಟು ರಾಷ್ಟ್ರೀಯ ಸಂಪತ್ತು ಮೇಲ್ಪದರದ ಶೇ 1ರಷ್ಟು ಜನರ ಪಾಲಾಗಿದೆ.

ಭಾರತ ಜಾಗತಿಕ ಬಂಡವಾಳ ಮಾರುಕಟ್ಟೆಯಲ್ಲಿ ಯಾವ ಸ್ಥಾನವನ್ನು ಗಳಿಸಿದರೂ, ತಳಮಟ್ಟದ ವಾಸ್ತವ ಸನ್ನಿವೇಶವನ್ನು ಗಮನಿಸಿದಾಗ ಅನೌಪಚಾರಿಕ ಕ್ಷೇತ್ರವೇ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿರುವುದು ಕಂಡುಬರುತ್ತದೆ. ಎನ್‌ಎಸ್‌ಎಸ್‌ಒ ಬಿಡುಗಡೆ ಮಾಡಿರುವ ಇತ್ತೀಚಿನ ಅಧಿಕೃತ ವರದಿಯ ಪ್ರಕಾರ ಭಾರತದ ಕಾರ್ಮಿಕರಲ್ಲಿ ಶೇ 93ರಷ್ಟು ಅನೌಪಚಾರಿಕ ವಲಯದಲ್ಲಿದ್ದಾರೆ.

ಕೋವಿದ್‌ ಲಾಕ್‌ಡೌನ್‌ ಸಂದರ್ಭದಲ್ಲಿ ತೀವ್ರ ಆಘಾತಕ್ಕೊಳಗಾದ ಈ ವಲಯ ನಂತರ ಚೇತರಿಸಿಕೊಂಡಿದ್ದರೂ, ಮುಂಚಿನ ಸ್ಥಿತಿಗೆ ತಲುಪಲು ಸಾಧ್ಯವಾಗಿಲ್ಲ. 2021ರ ಸಮೀಕ್ಷೆಯ ಪ್ರಕಾರ ದೇಶದಲ್ಲಿರುವ ಒಟ್ಟು 6.36 ಕೋಟಿ ಉದ್ಯಮಗಳ ಪೈಕಿ ಶೇ 99.7ರಷ್ಟು ಉದ್ದಿಮೆಗಳು ಅಸಂಘಟಿತ ಕ್ಷೇತ್ರದಲ್ಲಿದೆ.

ನೋಂದಣಿಯಾಗಿರುವ ಔಪಚಾರಿಕ ಕ್ಷೇತ್ರದ ಉದ್ದಿಮೆಗಳ ಸಂಖ್ಯೆ ಕೇವಲ 1 ಲಕ್ಷ 70 ಸಾವಿರ ಅಥವಾ ಶೇ 0.3ರಷ್ಟಿದೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವ ಶ್ರಮಿಕರ ನೆರವಿಗೆ ಸೂಕ್ತ ಯೋಜನೆಗಳನ್ನು ರೂಪಿಸುವ ಸಲುವಾಗಿ ರಚಿಸಿರುವ ಇ-ಶ್ರಮ್‌ ಪೋರ್ಟಲ್‌ನಲ್ಲಿ ಅನೌಪಚಾರಿಕ ಕ್ಷೇತ್ರದ ಎಲ್ಲ ದುಡಿಮೆಗಾರರೂ ನೋಂದಣಿ ಮಾಡಿಸಬೇಕಿದೆ. ನಿಖರವಾಗಿ ಈ ವಲಯದಲ್ಲಿರುವ ಕಾರ್ಮಿಕರನ್ನು ಗುರುತಿಸುವುದೇ ಸಾಧ್ಯವಾಗದೆ ಇರುವುದರಿಂದ ನೋಂದಾಯಿತ 27.69 ಕೋಟಿ ಕಾರ್ಮಿಕರ ಪೈಕಿ ಶೇ 94ರಷ್ಟು ಕಾರ್ಮಿಕರ ಮಾಸಿಕ ಆದಾಯ 10 ಸಾವಿರ ರೂಗಳಿಗಿಂತಲೂ ಕಡಿಮೆ ಇದೆ.

ನೋಂದಾಯಿತವಾಗಿರುವ 27.69 ಕೋಟಿ ಕಾರ್ಮಿಕರ ಪೈಕಿ ಶೇ 74ರಷ್ಟು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಕಾರ್ಮಿಕರಿದ್ದಾರೆ. ಶೇ 45.32 ಒಬಿಸಿ, ಶೇ 20.95 ಪರಿಶಿಷ್ಟ ಜಾತಿ ಮತ್ತು ಶೇ 8.17ರಷ್ಟು ಪರಿಶಿಷ್ಟ ಪಂಗಡಗಳ ಕಾರ್ಮಿಕರಿದ್ದಾರೆ. ಅನೌಪಚಾರಿಕ ಕ್ಷೇತ್ರದಲ್ಲಿ ಶೇ 94.11ರಷ್ಟು ಕಾರ್ಮಿಕರ ಮಾಸಿಕ ಆದಾಯ 10 ಸಾವಿರ ರೂಗಳಿಗಿಂತಲೂ ಕಡಿಮೆ ಇದೆ. ಶೇ 4.36ರಷ್ಟು ಕಾರ್ಮಿಕರ ಮಾಸಿಕ ಆದಾಯ 10 ರಿಂದ 15 ಸಾವಿರ ರೂಗಳಷ್ಟಿದೆ.

ದೇಶದಲ್ಲಿ ಒಟ್ಟು 38 ಕೋಟಿ ಅನೌಪಚಾರಿಕ ವಲಯದ ಕಾರ್ಮಿಕರಿರುವುದಾಗಿ ಅಂದಾಜು ಮಾಡಲಾಗಿದ್ದು, ಈ ದತ್ತಾಂಶಗಳನ್ನು ಪರಿಶೀಲಿಸಿದರೆ ದೇಶದ ಆರ್ಥಿಕತೆಯಲ್ಲಿ ಅಸಮಾನತೆ ಢಾಳಾಗಿ ಕಾಣುತ್ತದೆ. ಈ ಕಾರ್ಮಿಕ ಕುಟುಂಬಗಳಿಗೆ ಸರ್ಕಾರದ ಕಲ್ಯಾಣ ಯೋಜನೆಗಳನ್ನು ತಲುಪಿಸುವುದು ಇ-ಶ್ರಮ್‌ ಪೋರ್ಟಲ್‌ನ ಸ್ಥಾಪಿತ ಉದ್ದೇಶವಾಗಿದೆ.

ಈ ಸಮೀಕ್ಷೆಯ ಅನುಸಾರ ನೋಂದಾಯಿತ ಶೇ 61.72ರಷ್ಟು ಕಾರ್ಮಿಕರ ವಯಸ್ಸು 18 ರಿಂದ 40 ವರ್ಷಗಳಷ್ಟಿದೆ. ಶೇ 22.12ರಷ್ಟು ಕಾರ್ಮಿಕರು 40 ರಿಂದ 40 ವಯೋಮಾನದವರಾಗಿದ್ದಾರೆ. ಶೇ 2.98ರಷ್ಟು ಕಾರ್ಮಿಕರ ವಯೋಮಾನ 16 ರಿಂದ 18 ವರ್ಷಗಳಾಗಿವೆ. ನೋಂದಾಯಿತ ಮಹಿಳಾ ಕಾರ್ಮಿಕರ ಸಂಖ್ಯೆ ಶೇ 52.18ರಷ್ಟಿದೆ. ಕೃಷಿ ಕ್ಷೇತ್ರವನ್ನು ಅವಲಂಬಿಸಿದ ಕಾರ್ಮಿಕರ ಸಂಖ್ಯೆಯೇ ಶೇ 52.11ರಷ್ಟಿದೆ. ಅಂದರೆ ಅರ್ಧಕ್ಕಿಂತಲೂ ಹೆಚ್ಚಿನ ಅಸಂಘಟಿತ ಕಾರ್ಮಿಕರು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನೇ ಅವಲಂಬಿಸಿರುವುದು ಭಾರತೀಯ ಆರ್ಥಿಕತೆಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.

ಈ ಅಸಮಾನತೆಗಳು ಢಾಳಾಗಿ ಕಾಣುತ್ತಿರುವಂತೆಯೇ ದೇಶದ ಅನೌಪಚಾರಿಕ ವಲಯದ ಲಕ್ಷಾಂತರ ದುಡಿಮೆಯ ಕೈಗಳು ಬೀದಿಪಾಲಾಗುತ್ತಿವೆ. ಓಲಾ, ಊಬರ್‌, ಜಮೋಟೋ, ಸ್ವಿಗಿ ಮುಂತಾದ ಆದಾಯ ಮಾರ್ಗಗಳಲ್ಲಿ ಎದುರಾಗುತ್ತಿರುವ ಬಿಕ್ಕಟ್ಟು ಈ ದೇಶದ ನಿರುದ್ಯೋಗಿ ಯುವ ಜನತೆಯನ್ನು ಬಾಣಲೆಯಿಂದ ಬೆಂಕಿಗೆ ಬೀಳಿಸುತ್ತಿವೆ. ತಾತ್ಕಾಲಿಕವಾಗಿ ಜೀವನ ನಿರ್ವಹಣೆಗೆ ನೆರವಾಗುವ ಯಾವುದೇ ಉದ್ಯೋಗವೂ ಒಂದು ಸುಸ್ಥಿರ ಸಮಾಜವನ್ನು ನಿರ್ಮಿಸಲು ಪೂರಕವಾಗಿರುವುದಿಲ್ಲ. ಬಹುಶಃ ಇನ್ನು ಹತ್ತು ವರ್ಷಗಳಲ್ಲಿ ಭಾರತ ಈ ಸಂದಿಗ್ಧತೆಯನ್ನು ಎದುರಿಸುತ್ತದೆ.

ಸ್ವಯಂ ಉದ್ಯೋಗ, ಕೌಶಲ್ಯಾಧಾರಿತ ಉದ್ಯೋಗ ಮತ್ತು ತ್ವರಿತ ಆದಾಯ ಗಳಿಕೆಯ ಮಾರ್ಗಗಳು ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಅದ್ಭುತ ಫಲಿತಾಂಶಗಳನ್ನು ತೋರುವುದಾದರೂ, ದೀರ್ಘಾವಧಿಯಲ್ಲಿ ಒಂದು ಅಸ್ಥಿರ ಸಮಾಜವನ್ನು ಸೃಷ್ಟಿಸುವುದನ್ನು ಹಲವು ದೇಶಗಳಲ್ಲಿ ಕಾಣಬಹುದು. ಹಾಗೆಯೇ ಮಾರುಕಟ್ಟೆ ವ್ಯವಸ್ಥೆ ರೂಪಿಸುವ ಉದ್ಯೋಗಾವಕಾಶಗಳು ಹಣಕಾಸು ಬಂಡವಾಳದ ಅವಶ್ಯಕತೆಗಳಿಗನುಗುಣವಾಗಿಯೇ ಇರುವುದರಿಂದ, ಈ ನೌಕರಿಯನ್ನು ಅವಲಂಬಿಸುವವರು ಮಾರುಕಟ್ಟೆ ವ್ಯತ್ಯಯಗಳ ಮೊದಲ ಬಲಿ ಆಗುತ್ತಾರೆ.

ಈ ಬಲಿಪೀಠಗಳನ್ನು ಸೃಷ್ಟಿಸಲೆಂದೇ ಸರ್ಕಾರಗಳು ಹಲವು ಯೋಜನೆಗಳನ್ನೂ, ಆಡಳಿತ ನೀತಿಗಳನ್ನೂ ರೂಪಿಸುತ್ತಿರುತ್ತವೆ. ಹಾಗಾಗಿಯೇ ಇಂದು ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಬಿಸಿಯೂಟ ಯೋಜನೆಯ ನೌಕರರು ತಮ್ಮ ಬದುಕಿನ ಘನತೆಗಾಗಿ, ಹಕ್ಕಿಗಾಗಿ ಹೋರಾಡುವಂತಾಗಿದೆ.

ದೇಶದ ಒಂದು ಬೃಹತ್‌ ಜನಸಮೂಹ ತಮ್ಮ ಜೀವನ ನಿರ್ವಹಣೆಗೆ ಪರದಾಡುತ್ತಿರುವುದನ್ನು ಅಧಿಕೃತ ಅಂಕಿಅಂಶಗಳೇ ಸಾಬೀತುಪಡಿಸುತ್ತವೆ. ಕರ್ನಾಟಕದಲ್ಲೇ 42 ಸಾವಿರ ಆಶಾ ಕಾರ್ಯಕರ್ತೆಯರು ತಮ್ಮ ಸೇವಾ ಭತ್ಯೆಗಳಿಗಾಗಿ, ಸುಭದ್ರ ನೌಕರಿಗಾಗಿ ಹೋರಾಡುತ್ತಿದ್ದಾರೆ. ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಆಶಾ ಕಾರ್ಯಕರ್ತೆಯರು ಕನಿಷ್ಟ ವೇತನದೊಂದಿಗೆ, ಉದ್ಯೋಗ ಭದ್ರತೆ ಇಲ್ಲದೆ ಅನಿಶ್ಚಿತ ಬದುಕು ಎದುರಿಸುತ್ತಿದ್ದಾರೆ.

ಕರ್ನಾಟಕದಲ್ಲಿ 60 ವರ್ಷ ದಾಟಿದ ಕಾರಣಕ್ಕಾಗಿಯೇ ಹೊರಹಾಕಲ್ಪಟಿರುವ 12 ಸಾವಿರ ಬಿಸಿಯೂಟ ಯೋಜನೆಯ ಮಹಿಳೆಯರು ತಮ್ಮ ಜೀವನ ಭದ್ರತೆಗಾಗಿ ಹೋರಾಡುತ್ತಿದ್ದಾರೆ. ದೇಶಾದ್ಯಂತ 13 ಲಕ್ಷ ಅಂಗನವಾಡಿ ನೌಕರರು, ಬಹುಪಾಲು ಮಹಿಳೆಯರು, ಹೊಸ ಶಿಕ್ಷಣ ನೀತಿಯ ಪರಿಣಾಮ ತಮ್ಮ ನೆಲೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ದೇಶದ ಬಹುದೊಡ್ಡ ಉದ್ಯೋಗದಾತ ಸಾರ್ವಜನಿಕ ಸಂಸ್ಥೆ ರೈಲ್ವೆ ಇಲಾಖೆಯಲ್ಲಿ 72 ಸಾವಿರ ಹುದ್ದೆಗಳನ್ನು ರದ್ದುಪಡಿಸಲಾಗಿದೆ. ಬಿಜೆಪಿ ಸಂಸದ ವರುಣ್‌ ಗಾಂಧಿ ಇತ್ತೀಚೆಗೆ ಹೇಳಿದಂತೆ 60 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ.

ಭಾರತದ ಬೃಹತ್‌ ಜನಸಮೂಹದ ಬದುಕಿನ ಪ್ರಶ್ನೆಯಾಗಿರುವ ಈ ಸಮಸ್ಯೆಗಳು ಇಂದಿನ ಸಾರ್ವಜನಿಕ ಸಂಕಥನದ ಒಂದು ಭಾಗವಾಗಬೇಕಿತ್ತು. ಆದರೆ ಭಾರತ ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ, 45 ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗ ಪ್ರಮಾಣ ದಾಖಲಾಗಿದ್ದರೂ, ಎಂಟು ವರ್ಷಗಳಲ್ಲೇ ಅತಿ ಹೆಚ್ಚು ಹಣದುಬ್ಬರ ದಾಖಲಾಗಿದ್ದರೂ ಸಾರ್ವಜನಿಕ ಹಾಗೂ ಬೌದ್ಧಿಕ ವಲಯದ ಸಂಕಥನಗಳು ಭಿನ್ನ ಮಾರ್ಗದಲ್ಲಿ ಸಾಗುತ್ತಿವೆ. ಈ ವಿಕೃತ ಬೆಳವಣಿಗೆಯ ಮೂಲವನ್ನು ನಾವು ಸಾಂಸ್ಕೃತಿಕ ಹಾಗೂ ರಾಜಕೀಯ ಭೂಮಿಕೆಗಳಲ್ಲಿ ಶೋಧಿಸಬೇಕಿದೆ.

ಇಲ್ಲಿ ಬೌದ್ಧಿಕ ವಲಯದ ತಾತ್ವಿಕ ಗ್ರಹಿಕೆ ಮತ್ತು ಸಾಂಸ್ಕೃತಿಕ ವಲಯದ ಪ್ರಾಮಾಣಿಕತೆ ಮುಖ್ಯವಾಗುತ್ತದೆ. ರಾಜಕೀಯ ಮತ್ತು ಸೈದ್ಧಾಂತಿಕ ನಿಲುಮೆಗಳು ವಸ್ತುನಿಷ್ಠವಾಗದೆ ಹೋದರೆ ಸತ್ಯದ ಸಮಾಧಿಯಾಗುತ್ತದೆ. ತಾವು ಅನುಕರಿಸುವ ನಾಯಕರಲ್ಲಿ ಸರ್ವಶ್ರೇಷ್ಠತೆಯನ್ನು, ಸಾರ್ವಭೌಮತ್ವವನ್ನು ಕಾಣುವಂತಹ ವಂಧಿಮಾಗದ ಸಂಸ್ಕೃತಿಯನ್ನು ತಳಮಟ್ಟದವರೆಗೂ ತಲುಪಿಸಿರುವ ಭಾರತದ ರಾಜಕೀಯ ಪರಂಪರೆ ಇಂದು ದೇಶದ ಭವಿಷ್ಯತ್ತಿಗೆ ಮುಳುವಾಗಲಿದೆ. ಆಂತರಿಕ ಪ್ರಜಾತಂತ್ರದ ಮೌಲ್ಯಗಳನ್ನೇ ಮರೆತಿರುವ ರಾಜಕೀಯ ಪಕ್ಷಗಳು ಅಧಿಕಾರ ರಾಜಕಾರಣವನ್ನು ಒಂದು ಅವಕಾಶದ ಭೂಮಿಕೆ ಎಂದು ಭಾವಿಸದೆ, ತಮ್ಮ ವಾರಸುದಾರಿಕೆ ಅಥವಾ ಉತ್ತರಾಧಿಕಾರದ ವೇದಿಕೆ ಎಂದು ಭಾವಿಸುತ್ತಿರುವುದೇ ಇಂದಿನ ಸಕಲ ಸಮಸ್ಯೆಗಳಿಗೆ ಕಾರಣವಾಗಿದೆ.

ವರ್ತಮಾನದ ಭಾರತ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಈ ದೇಶದ ಸಂಸ್ಕೃತಿಯಷ್ಟೇ ವೈವಿಧ್ಯಮಯ ಅಷ್ಟೇ ಜಟಿಲ. ಆದರೆ ಈ ಸಮಸ್ಯೆಗಳಿಗೆ ಅಧಿಕಾರ ರಾಜಕಾರಣ ಸೂಚಿಸುತ್ತಿರುವ ಪರಿಹಾರ ಮಾರ್ಗಗಳು ಜನಸಾಮಾನ್ಯರಿಗೆ ಅರ್ಥವೇ ಆಗದಷ್ಟು ಸಂಕೀರ್ಣವಾಗಿರುತ್ತವೆ. ಹಾಗಾಗಿಯೇ ಎಲ್ಲ ಅಭಿವೃದ್ಧಿ ಕಾರ್ಯಗಳನ್ನೂ ಡ್ರೋನ್‌ ಮೂಲಕ ವೀಕ್ಷಿಸುತ್ತಿದ್ದೇನೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯಿಂದ ಇಡೀ ದೇಶವೇ ಪುಳಕಿತವಾಗುತ್ತದೆ.

ಆದರೆ ಈ ಡ್ರೋನ್‌ ವೀಕ್ಷಣೆಗೆ ಕರ್ನಾಟಕದ ಭ್ರಷ್ಟಾಚಾರದ ಕೂಪಗಳು ನಿಲುಕದೆ ಹೋಗುತ್ತವೆ. ರಾಜಕೀಯ ಭ್ರಷ್ಟಾಚಾರ ಭಾರತದ ಆಡಳಿತ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗ ಎನ್ನುವ ವಾಸ್ತವವನ್ನು ಅರಿತಿದ್ದರೂ ಜನಸಾಮಾನ್ಯರು ಭ್ರಷ್ಟರನ್ನೇ ಪೋಷಿಸಲು ತತ್ವ ಸಿದ್ಧಾಂತಗಳ ಮೊರೆ ಹೋಗುತ್ತಿದ್ದಾರೆ. ಕರ್ನಾಟಕದಲ್ಲಿ ಕೇಳಿಬರುತ್ತಿರುವ 40 % ಕಮಿಷನ್‌ ದಂಧೆ, ಪಿಎಸ್‌ಐ ಪರೀಕ್ಷೆಯ ಹಗರಣ, ಕೆಪಿಎಸ್‌ಸಿ ಹಗರಣ ಇವೆಲ್ಲವೂ ಕೇವಲ ಅಧಿಕಾರಶಾಹಿಯ ಚೌಕಟ್ಟಿನಲ್ಲೇ ಕಂಡುಬರುತ್ತವೆ.

ಸಾರಿಗೆ ನೌಕರರ ಸಂಘಟಿತ ಶಕ್ತಿಯನ್ನು ಭಂಗಗೊಳಿಸುವ ಉದ್ದೇಶದಿಂದಲೇ ತಮ್ಮ ಪರಿಣತ ಕ್ಷೇತ್ರವನ್ನು ಬಿಟ್ಟು ಕಾರ್ಮಿಕ ಸಂಘಟನೆಗೆ ಮುಂದಾದ ಕೋಡಿಹಳ್ಳಿ ಚಂದ್ರಶೇಖರ್‌ ಈಗ ಬೃಹತ್‌ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದರೂ, ಪ್ರಾಮಾಣಿಕತೆಯನ್ನೇ ಹೊದ್ದಿಕೊಂಡಿರುವ ಆಮ್‌ ಆದ್ಮಿ ಪಕ್ಷ ಅವರನ್ನು ಉಚ್ಚಾಟಿಸಲು ಹಿಂಜರಿಯುತ್ತದೆ. ಕಾನೂನು ಪಾಲನೆ ರಕ್ಷಣೆ ಮತ್ತು ಸಾರ್ವಜನಿಕ ಸ್ವಾಸ್ಥ್ಯದ ಹೊಣೆ ಹೊರಬೇಕಾಗಿರುವ ಪೊಲೀಸ್‌ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವಾಡುತ್ತಿದೆ. ತಾಂಡವಾಡುತ್ತಿದೆ

ಈ ಎಲ್ಲ ಬೆಳವಣಿಗೆಗಳೂ ಅಭಿವೃದ್ಧಿ ಕಾಮಗಾರಿಗಳ ಒಂದು ಭಾಗವಾಗಿಯೇ ಇರುವಾಗ, ಡ್ರೋನ್‌ ವೀಕ್ಷಣೆಯಲ್ಲಿ ಕಾಣದೆ ಹೋಗುವುದಾದರೂ ಹೇಗೆ ? ಇಷ್ಟೆಲ್ಲಾ ಅಕ್ರಮಗಳ ನಡುವೆಯೂ ಸರ್ಕಾರಗಳು ಅಬಾಧಿತವಾಗಿರುತ್ತವೆ, ಸಂಬಂಧಪಟ್ಟ ಸಚಿವರು ʼಮೇಲಿನವರʼ ಕೃಪಾಕಟಾಕ್ಷದೊಂದಿಗೆ ನಿರಾಳವಾಗಿರುತ್ತಾರೆ. ಸಾರ್ವಜನಿಕ ವಲಯದಲ್ಲೂ ಇದು ಯಾವುದೇ ಪ್ರತಿರೋಧದ ದನಿಗಳನ್ನು ಮೂಡಿಸುವುದಿಲ್ಲ. ಏಕೆಂದರೆ ಜನಸಾಮಾನ್ಯರ ಸಾಮಾಜಿಕ ಪ್ರಜ್ಞೆ ಯಾವುದೋ ಒಂದು ನಿಷ್ಠೆಗೊಳಗಾಗಿ ನಿಷ್ಕ್ರಿಯವಾಗಿರುತ್ತದೆ.

ಈ ತಾರತಮ್ಯಗಳನ್ನು ಯಥಾವತ್ತಾಗಿ ಕಾಪಾಡಲೆಂದೇ ಅಥವಾ ಮತ್ತಷ್ಟು ಕಂದರಗಳನ್ನು ಸೃಷ್ಟಿಸುವ ಸಲುವಾಗಿಯೇ ರೂಪಿಸಲಾಗುವ ಆಡಳಿತ ನೀತಿಗಳನ್ನು ಜಾರಿಗೊಳಿಸಲು ಗ್ರಾಮ ಮಟ್ಟದಿಂದ ದೆಹಲಿಯವರೆಗೂ ಒಂದು ಸಾಮಾಜಿಕ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಈ ಸಾಮಾಜಿಕ ಚೌಕಟ್ಟು ಶತಮಾನಗಳ ಬುನಾದಿ ಇರುವ ಜಾತಿ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುತ್ತದೆ. ದಿನನಿತ್ಯ ಕೇಳಿಬರುವ ಜಾತಿ ದೌರ್ಜನ್ಯಗಳು ನಮ್ಮ ಆಂತರಿಕ ಪ್ರಜ್ಞೆಯನ್ನು ಕದಡುತ್ತಿಲ್ಲ. ಏಕೆಂದರೆ ದೌರ್ಜನ್ಯಕ್ಕೊಳಗಾಗುತ್ತಿರುವುದು ಆರ್ಥಿಕ ನೆಲೆಯಲ್ಲಿ ಕೆಳಸ್ತರಕ್ಕೆ ಸೇರಿದವರಾಗಿದ್ದಾರೆ.

ಇಲ್ಲಿರುವ ಜಾತ್ಯತೀತ ಲಕ್ಷಣ ರಾಜಕೀಯ ನೆಲೆಯಲ್ಲಾಗಲೀ, ಸಾಂಸ್ಕೃತಿಕ ನೆಲೆಯಲ್ಲಾಗಲೀ ಕಂಡುಬರುವುದಿಲ್ಲ. ಅಂದರೆ, ಮತನಿರಪೇಕ್ಷವಾಗಿ, ಜಾತಿ ಗೋಡೆಗಳನ್ನು ಮೀರಿದ ಒಂದು ಅಸಮಾನತೆ ನಮ್ಮ ಸಮಾಜದಲ್ಲಿ ಬೇರೂರುತ್ತಿದೆ. ಶ್ರೀಮಂತಿಕೆ ಮತ್ತು ದಾರಿದ್ರ್ಯತೆಯ ನಡುವಿನ ಕಂದರದಲ್ಲಿ ಹುದುಗಿಹೋಗುವ ಅಸಂಖ್ಯಾತ ಅಸಹಾಯಕ ದನಿಗಳು ತಮ್ಮ ಪ್ರತಿರೋಧವನ್ನು ದಾಖಲಿಸಲೂ ಸಾಧ್ಯವಾಗದಂತೆ ಕಾಯ್ದೆ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಎಲ್ಲ ಜಾತಿ ಮತದ ನೆಲೆಗಳಲ್ಲಿ ವಿಸ್ತರಿಸಿರುವ ಈ ತಾರತಮ್ಯಗಳನ್ನು ವಿರೋಧಿಸಲು ಅತ್ಯವಶ್ಯವಾದ ಒಂದು ಜಾತ್ಯತೀತ ಭೂಮಿಕೆಯನ್ನು ಶೈಶಾವಸ್ಥೆಯಲ್ಲೇ ಭಗ್ನಗೊಳಿಸಲಾಗುತ್ತಿದೆ.

ಯಾವುದೇ ಭೌಗೋಳಿಕ ರಾಷ್ಟ್ರದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ಜಾಗೃತವಾಗಿರಬೇಕಾದ ಸಾರ್ವಜನಿಕ ಅರಿವು ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮೊಳಕೆಯಲ್ಲೇ ಚಿವುಟಿ, ಯಾವುದೋ ಒಂದು ಆಧಿಪತ್ಯಕ್ಕೊಳಪಡಿಸುವ ನಿಟ್ಟಿನಲ್ಲಿ ಇಂದು ರಾಷ್ಟ್ರ ರಾಜಕಾರಣ ಬೆಳೆಯುತ್ತಿದೆ. ಅಂತರಿಕವಾಗಿ ಜಾತಿ, ಉಪಜಾತಿ, ಒಳಜಾತಿ ಮತ್ತು ಮೇಲ್ಜಾತಿಗಳ ಆಧಿಪತ್ಯಗಳು ಬಲವಾಗುತ್ತಿರುವಂತೆಯೇ ವ್ಯಾಪಕ ನೆಲೆಯಲ್ಲಿ ಮತಧರ್ಮಗಳ ಆಧಿಪತ್ಯದ ನೆಲೆಗಳೂ ಪ್ರಬಲವಾಗುತ್ತಿವೆ.

ಈ ಆಧಿಪತ್ಯದ ನೆಲೆಗಳು ತಮ್ಮ ಸಾಂಸ್ಥಿಕ, ಸಾಂಘಿಕ ಅಸ್ತಿತ್ವವನ್ನು ಕಾಪಾಡಿಕೊಳ್ಳಲೆಂದೇ ಸಾರ್ವಜನಿಕ ಸಂಕಥನಗಳ ನಿರೂಪಣೆಗಳನ್ನೂ ನಿರ್ಧರಿಸುತ್ತವೆ. ಆಳುವ ವರ್ಗಗಳು ಈ ಆಧಿಪತ್ಯದ ನೆಲೆಗಳನ್ನೇ ಬಳಸಿಕೊಂಡು ಇಂತಹ ಸಾಪೇಕ್ಷ ನಿರೂಪಣೆಗಳಿಗೆ ಸಾರ್ವತ್ರಿಕತೆಯನ್ನು ಕಲ್ಪಿಸಲು ಸಾಂವಿಧಾನಿಕ ಮಾರ್ಗಗಳನ್ನೇ ಅನುಸರಿಸುತ್ತವೆ. ತಂತ್ರಜ್ಞಾನ ಯುಗದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಡಿಜಿಟಲ್‌ ವೇದಿಕೆಗಳು ಇದಕ್ಕೆ ಸಹಾಯಕವಾಗಿರುತ್ತವೆ. ಇಂದು ಸಾರ್ವಜನಿಕವಾಗಿ ಬಹುಚರ್ಚಿತವಾಗಿರುವ ಪಠ್ಯ ಪರಿಷ್ಕರಣೆಯೂ ಇದರ ಒಂದು ಭಾಗವಷ್ಟೇ ಆಗಿದೆ.

ಹಿಂದುತ್ವ ರಾಜಕಾರಣ ಈ ಮೇಲ್ಜಾತಿ, ಮೇಲ್ವರ್ಗ ಮತ್ತು ವೈದಿಕಶಾಹಿ ಸಾಂಸ್ಕೃತಿಕ ನೆಲೆಗಳ ಸಮ್ಮಿಶ್ರಣವಾಗಿರುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಈ ಆಧಿಪತ್ಯ ರಾಜಕಾರಣದ ಮಹತ್ವಾಕಾಂಕ್ಷೆಗೆ ಒಂದು ಪ್ರಜಾಸತ್ತಾತ್ಮಕ ಪ್ರತಿರೋಧದ ನೆಲೆಯನ್ನು ರೂಪಿಸುವುದು ಈ ಸಂದರ್ಭದ ಅನಿವಾರ್ಯತೆಯೂ ಆಗಿದೆ. ಭಾರತದ ಸಂವಿಧಾನ ಈ ನಿಟ್ಟಿನಲ್ಲಿ ನಮಗೆ ದಾರಿದೀಪವಾಗಬಹುದು ಹಾಗೆಯೇ ನಮ್ಮೊಳಗಿನ ಜಾಗೃತ ಸಾಮಾಜಿಕ ಪ್ರಜ್ಞೆ ಬೆಳಕಿನ ಕಿಂಡಿಯೂ ಆಗಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!

Published

on

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

  • ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
  • ಇಂಡಿಯಾ ಗೇಟ್‌ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
  • NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
  • “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP 

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.

CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.

http://Visit : www.suddidina.com

ಇಂಡಿಯಾ ಗೇಟ್‌ನಿಂದ ಮೆರವಣಿಗೆ

ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.

ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ

‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’

ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.

“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.

“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ” 

  • CJP ಆರೋಪ

ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ

ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.

ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.

ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್‌ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

Continue Reading

ದಿನದ ಸುದ್ದಿ

KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ

Published

on

KPSC ಹಗರಣಕ್ಕೆ ಬಿಗ್ ಟ್ವಿಸ್ಟ್! 329 ಅಭ್ಯರ್ಥಿಗಳಿಗೆ CID ನೋಟಿಸ್; IAS ಅಧಿಕಾರಿ ವಿರುದ್ಧ ₹1.1 ಕೋಟಿ ಆರೋಪ
KPSC ಹಗರಣಕ್ಕೆ ಬಿಗ್ ಟ್ವಿಸ್ಟ್! 329 ಅಭ್ಯರ್ಥಿಗಳಿಗೆ CID ನೋಟಿಸ್; IAS ಅಧಿಕಾರಿ ವಿರುದ್ಧ ₹1.1 ಕೋಟಿ ಆರೋಪ

KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ

  • 329 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ವಿಚಾರಣಾ ನೋಟಿಸ್

  • 658 OMR ಕಾರ್ಬನ್ ಶೀಟ್‌ಗಳು FSLಗೆ

  • IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ED ಗಂಭೀರ ಆರೋಪ

  • ₹70–80 ಲಕ್ಷ ಲಂಚದ ಆರೋಪವೂ ತನಿಖೆಯಲ್ಲಿದೆ

  • ಪ್ರಶ್ನೆಪತ್ರ ಸಿದ್ಧತೆ, ಮುದ್ರಣದ CCTV ದೃಶ್ಯಗಳ ಬಗ್ಗೆಯೂ ಅನುಮಾನ 

ಸುದ್ದಿದಿನ,ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ (ED) ರಾಜ್ಯದ ವಿವಿಧೆಡೆ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಅದರ ಬೆನ್ನಲ್ಲೇ ಅಪರಾಧ ತನಿಖಾ ಇಲಾಖೆ (CID) ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

http://Visit : www.suddidina.com

329 ಅಭ್ಯರ್ಥಿಗಳಿಗೆ ನೋಟಿಸ್ ಏಕೆ?

ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಈಗಾಗಲೇ 658 OMR ಕಾರ್ಬನ್ ಶೀಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಮೂಲ OMR ಉತ್ತರ ಪತ್ರಿಕೆಗಳೊಂದಿಗೆ ಹೋಲಿಕೆ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಅಭ್ಯರ್ಥಿಗಳು ಗುರುತಿಸಿದ್ದ ಉತ್ತರಗಳ ಕಾರ್ಬನ್ ಪ್ರತಿಯಲ್ಲಿ ಮತ್ತು ಮೂಲ OMRನಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಪರಿಶೀಲಿಸುವುದು ತನಿಖೆಯ ಪ್ರಮುಖ ಭಾಗವಾಗಿದೆ.

ಇದೀಗ 329 ಅಭ್ಯರ್ಥಿಗಳನ್ನೂ ವಿಚಾರಣೆಗೆ ಒಳಪಡಿಸುವ CID ಕ್ರಮ ಪ್ರಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ವಿಚಾರಣೆಯ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ, ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಥವಾ ಉತ್ತರಗಳ ಮಾಹಿತಿ ಮುಂಚಿತವಾಗಿ ಸಿಕ್ಕಿತೇ, OMR ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ನಡೆದಿದೆಯೇ ಎಂಬುದರ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

IAS ಅಧಿಕಾರಿಯತ್ತ ತನಿಖೆಯ ಚಿತ್ತ

ಈ ಪ್ರಕರಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಅವರು ಫೆಬ್ರವರಿ 2024ರಿಂದ ಮಾರ್ಚ್ 2026ರವರೆಗೆ KPSCಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ MSME ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬೆಂಗಳೂರಿನ ನಿವಾಸ ಸೇರಿದಂತೆ ಉತ್ತರ ಪ್ರದೇಶದ ಬರೇಲಿಯಲ್ಲಿರುವ ನಿವಾಸದ ಮೇಲೂ ED ಶೋಧ ನಡೆಸಿದೆ.

ED ಆರೋಪದ ಪ್ರಕಾರ, ಗಂಗ್ವಾರ್ ಅವರು ತಮ್ಮ ಇಬ್ಬರು ಪುತ್ರರಿಗೆ KPSC ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ದೊರಕಿಸಿಕೊಡಲು ವ್ಯಕ್ತಿಯೊಬ್ಬರಿಂದ ಸುಮಾರು ₹1.1 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಆರೋಪ ಇನ್ನೂ ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾಗಿಲ್ಲ.

ಪ್ರಶ್ನೆಪತ್ರಿಕೆ ಸಿದ್ಧತೆಯಲ್ಲೂ ಅನುಮಾನ

ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಮುದ್ರಿಸುವ ಪ್ರಕ್ರಿಯೆಗೆ ಸಂಬಂಧಿಸಿದ CCTV ದೃಶ್ಯಾವಳಿಗಳ ಅನುಪಸ್ಥಿತಿಯನ್ನೂ ED ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕ್ರಿಯೆಯಲ್ಲಿ CCTV ದಾಖಲೆಗಳು ಪ್ರಮುಖ ಭದ್ರತಾ ಕ್ರಮವಾಗಿರುವುದರಿಂದ, ಅವುಗಳ ಲಭ್ಯತೆ ಮತ್ತು ನಿರ್ವಹಣೆಯೂ ತನಿಖೆಯ ಪ್ರಮುಖ ಅಂಶವಾಗಿದೆ.

ಇದರ ಜೊತೆಗೆ, ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹70–80 ಲಕ್ಷದವರೆಗೆ ಲಂಚ ಕೇಳಲಾಗಿದೆ ಎಂಬ ಆರೋಪಗಳೂ ತನಿಖೆಯಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆ, OMR ತಿದ್ದುಪಡಿ ಮತ್ತು ನೇಮಕಾತಿ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.

KPSCಯಂತಹ ನೇಮಕಾತಿ ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವ ಆರೋಪಗಳಾಗಿರುವುದರಿಂದ, CID ಮತ್ತು ED ತನಿಖೆಯ ಮುಂದಿನ ಹಂತಗಳು ಮಹತ್ವ ಪಡೆದುಕೊಂಡಿವೆ. 329 ಅಭ್ಯರ್ಥಿಗಳ ವಿಚಾರಣೆ, OMR ಕಾರ್ಬನ್ ಶೀಟ್‌ಗಳ FSL ವರದಿ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆಯ ಬಳಿಕ ಪ್ರಕರಣದ ನಿಜವಾದ ಚಿತ್ರಣ ಇನ್ನಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.

ಮೇಲಿನ ಹಣ, ಅಕ್ರಮ ಮತ್ತು ಅಧಿಕಾರಿಯ ವಿರುದ್ಧದ ಆರೋಪಗಳು ತನಿಖಾ ಸಂಸ್ಥೆಗಳು ಮುಂದಿಟ್ಟಿರುವ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಆರೋಪಗಳೆಂದೇ ಪರಿಗಣಿಸಬೇಕೆಂದು ಕೋರ್ಟ್ ತಿಳಿಸಿದೆ.

 

Continue Reading

ದಿನದ ಸುದ್ದಿ

₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ

Published

on

₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
ಅನಧಿಕೃತ ನಿರ್ಮಾಣಕ್ಕೆ ಬಿಡಿಎ ‘ಬುಲ್ಡೋಜರ್’ ಆ್ಯಕ್ಷನ್: ₹25 ಕೋಟಿ ಮೌಲ್ಯದ ಆಸ್ತಿ ವಶ!

ರಾಜಾಜಿನಗರದಲ್ಲಿ ಬಿಡಿಎ ಭರ್ಜರಿ ಕಾರ್ಯಾಚರಣೆ: 13,000 ಚದರ ಅಡಿ ಜಾಗ ವಶಕ್ಕೆ

  • 13,000 ಚದರ ಅಡಿ ಪ್ರದೇಶ ತೆರವು; ಪೊಲೀಸ್ ಭದ್ರತೆಯಲ್ಲಿ ಬಿಡಿಎ ಕಾರ್ಯಾಚರಣೆ
    ನಿವೇಶನ 13 ಮತ್ತು 17ರಲ್ಲಿ ಅನಧಿಕೃತ ನಿರ್ಮಾಣ ತೆರವು; ಪೊಲೀಸ್ ಸಹಕಾರದಲ್ಲಿ ಕಾರ್ಯಾಚರಣೆ

ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣಗಳ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ರಾಜಾಜಿನಗರ ಬಡಾವಣೆಯ ಇಂಡಸ್ಟ್ರೀಯಲ್ ಸಬರ್ಬ್ 2ನೇ ಹಂತದಲ್ಲಿ ಮಹತ್ವದ ತೆರವು ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಸುಮಾರು ₹25 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಾಧಿಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಗ್ರಾಮದ ಸರ್ವೆ ನಂಬರ್ 79 ಮತ್ತು 70ರಲ್ಲಿ ಬರುವ ಇಂಡಸ್ಟ್ರೀಯಲ್ ಸಬರ್ಬ್, 2ನೇ ಹಂತ, ರಾಜಾಜಿನಗರ ಬಡಾವಣೆಯ ನಿವೇಶನ ಸಂಖ್ಯೆ 13 ಮತ್ತು 17ರಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸುಮಾರು 13,000 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡ ಹಾಗೂ ನಿರ್ಮಾಣಗಳನ್ನು ತೆರವುಗೊಳಿಸಿ, ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.

‘ನನ್ನ ಖಾತಾ ನನ್ನ ಹಕ್ಕು’ ಮುಗಿದರೂ ಸಂಕಷ್ಟ ಮುಗಿಯಲಿಲ್ಲ: 7.50 ಲಕ್ಷ ಆಸ್ತಿಗಳಲ್ಲಿ ಎ-ಖಾತೆ ಸಿಕ್ಕಿದ್ದು 20 ಸಾವಿರಕ್ಕೆ ಮಾತ್ರ!

http://Visit : www.suddidina.com

ಅನಧಿಕೃತ ನಿರ್ಮಾಣಕ್ಕೆ ಬಿಡಿಎ ಬ್ರೇಕ್:

ಬಿಡಿಎಗೆ ಸೇರಿದ ಅಥವಾ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಜಾಗಗಳಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ತೆರವು ಕಾರ್ಯಾಚರಣೆಯ ಬಳಿಕ ಆಸ್ತಿಯನ್ನು ಪ್ರಾಧಿಕಾರದ ನೇರ ಸುಪರ್ದಿಗೆ ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗಳ ಸಂರಕ್ಷಣೆಗೆ ಬಿಡಿಎ ಕೈಗೊಳ್ಳುತ್ತಿರುವ ಕ್ರಮಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.

ಸುಮಾರು ₹25 ಕೋಟಿ ಮೌಲ್ಯದ ಆಸ್ತಿ ಇರುವುದರಿಂದ, ಈ ಕಾರ್ಯಾಚರಣೆ ನಗರದ ಆಸ್ತಿ ಸಂರಕ್ಷಣೆ ಹಾಗೂ ಅನಧಿಕೃತ ನಿರ್ಮಾಣಗಳ ನಿಯಂತ್ರಣದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ದೊಡ್ಡ ಪ್ರಮಾಣದ ಭೂಮಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ನಡೆಸಿದರೆ ಯಾವುದೇ ಕಾರಣಕ್ಕೂ ಅದನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಕ್ರಮ ನೀಡಿದೆ.

https://x.com/BDAOfficialGok/status/2092121239175512436?s=20

ಬಹು ಇಲಾಖೆಗಳ ಸಮನ್ವಯದಲ್ಲಿ ಕಾರ್ಯಾಚರಣೆ:

ತೆರವು ಕಾರ್ಯಾಚರಣೆಯನ್ನು ಬಿಡಿಎಯ ವಲಯ ಆಯುಕ್ತರು, ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-1, ಕಾರ್ಯನಿರತ ಆರಕ್ಷಕ ಪಡೆ, ಪಶ್ಚಿಮ ವಿಭಾಗದ ಅಭಿಯಂತರರು ಹಾಗೂ ಸರ್ವೆಯರ್‌ಗಳು ಒಳಗೊಂಡ ತಂಡ ಕೈಗೊಂಡಿತು. ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಸ್ಥಳ ಪರಿಶೀಲನೆ, ನಿರ್ಮಾಣ ತೆರವು ಹಾಗೂ ಜಾಗದ ಸ್ವಾಧೀನ ಪ್ರಕ್ರಿಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಪೂರ್ಣಗೊಳಿಸಿದರು. ಕಾರ್ಯಾಚರಣೆ ಬಳಿಕ ತೆರವುಗೊಳಿಸಲಾದ ಪ್ರದೇಶವನ್ನು ಬಿಡಿಎ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ನಗರದ ಭೂ ಸಂಪತ್ತಿನ ರಕ್ಷಣೆಗೆ ಕಠಿಣ ಹೆಜ್ಜೆ

ಬೆಂಗಳೂರು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಹಾಗೂ ಪ್ರಾಧಿಕಾರಕ್ಕೆ ಸೇರಿದ ಜಾಗಗಳ ಮೇಲೆ ಅಕ್ರಮ ನಿರ್ಮಾಣಗಳು ನಡೆಯದಂತೆ ನಿಗಾ ವಹಿಸುವುದು ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಕೈಗೊಂಡಿರುವ ₹25 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವ ಕ್ರಮ, ಅನಧಿಕೃತ ನಿರ್ಮಾಣಗಳ ವಿರುದ್ಧದ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಿದೆ.

ಬೆಂಗಳೂರು ನಗರದ ಭೂ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಬಿಡಿಎಯ ಈ ತೆರವು ಕಾರ್ಯಾಚರಣೆ, ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಮುಂದುವರಿಯುವ ಸಾಧ್ಯತೆ ಇದೆ.

Continue Reading

Trending