Connect with us

ದಿನದ ಸುದ್ದಿ

ಸರ್ಕಾರಿ ಪದವಿ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳಿಗೆ ಆರ್ಥಿಕ ಸ್ವಾಯತ್ತತೆ ; ವಿದ್ಯಾರ್ಥಿಗಳ ಶುಲ್ಕ ಆಯಾ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲು : ಸಚಿವ ಅಶ್ವತ್ಥನಾರಾಯಣ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಬೆಂಗಳೂರು: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಡಿ ಬರುವ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು, 91 ಪಾಲಿಟೆಕ್ನಿಕ್‌ಗಳು ಮತ್ತು 14 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ಸರಕಾರಿ ನಿಗದಿತ ನಾನಾ ಶುಲ್ಕಗಳನ್ನು ಆಯಾ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಬಳಸಿಕೊಳ್ಳಲು ಅನುವು ನೀಡಿ, ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸ್ವಾಯತ್ತತೆ ನೀಡಬೇಕು ಮತ್ತು ಈ ಮೂಲಕ ಆಯಾಯ ಸಂಸ್ಥೆಗಳು ಸುಗಮವಾಗಿ ಸಂಪನ್ಮೂಲ ಕ್ರೋಡೀಕರಣ ಮಾಡಿಕೊಳ್ಳಲು ಅವಕಾಶ ನೀಡಬೇಕೆನ್ನುವುದು ಸರಕಾರದ ಆಶಯವಾಗಿದೆ. ಹೀಗಾಗಿ, ಸರ್ಕಾರಿ ಶುಲ್ಕಗಳ ಸದ್ಬಳಕೆಗೆ ಕ್ರೋಡೀಕೃತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ’ ಎಂದಿದ್ದಾರೆ.

ಇದಕ್ಕಾಗಿ ಮೇಲ್ಕಂಡ ಸಂಸ್ಥೆಗಳ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಸಮಿತಿಗಳು ಅಸ್ತಿತ್ವಕ್ಕೆ ಬರಲಿವೆ. ಇದರಲ್ಲಿ ಐಕ್ಯೂಎಸಿ ಸಂಚಾಲಕರು, ನಿಕಾಯವಾರು ಹಿರಿಯ ಉಪನ್ಯಾಸಕರು, ಅಧೀಕ್ಷಕರು, ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ತಲಾ ಇಬ್ಬರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಸದಸ್ಯರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಈ ಸಮಿತಿಗಳು ಆಯಾ ಶೈಕ್ಷಣಿಕ ವರ್ಷದ ಜೂನ್‌ನಲ್ಲಿ ರಚನೆಗೊಂಡು, ಆಗಸ್ಟ್‌ ಹೊತ್ತಿಗೆ ಈ ಶುಲ್ಕ ಬಳಕೆಗೆ ಸಂಬಂಧಿಸಿ ವಾರ್ಷಿಕ ಸಾಂಸ್ಥಿಕ ಅಭಿವೃದ್ಧಿ ಯೋಜನೆ ಮತ್ತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಅನುಮೋದನೆಗಾಗಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತರ ಕಚೇರಿಗೆ ಕಳಿಸುವುದು ಕಡ್ಡಾಯವಾಗಿದೆ. ಹೀಗೆ ಬಂದ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಆಯುಕ್ತರ ಕಚೇರಿಯು ಸೆಪ್ಟೆಂಬರ್‍‌ ಹೊತ್ತಿಗೆ ಒಪ್ಪಿಗೆ ನೀಡಲಿವೆ. ಇದಕ್ಕಾಗಿ ಈ ಹಂತದಲ್ಲೂ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯ ಒಂದು ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ವಿವರಿಸಿದ್ದಾರೆ.

ಈ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ, ಬೋಧನೆ, ಪ್ರಯೋಗಾಲಯ, ವೈದ್ಯಕೀಯ ತಪಾಸಣೆ, ವರ್ಗಾವಣೆ ಪತ್ರ, ಪ್ರಮಾಣಪತ್ರ, ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‌ಕ್ರಾಸ್, ಎನ್‌ಎಸ್‌ಎಸ್‌, ಗ್ರಂಥಾಲಯ ಬಳಕೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕಾಲೇಜು ಮ್ಯಾಗಜೈನ್, ಪರಿಚಯ ಪುಸ್ತಕ ಮತ್ತು ಗುರುತಿನ ಚೀಟಿ ಶುಲ್ಕಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೊಸ ಆದೇಶದ ಪ್ರಕಾರ, ಈ ಶುಲ್ಕಗಳ ಹೆಚ್ಚಿನ ಭಾಗವನ್ನು ಆಯಾ ಕಾಲೇಜುಗಳಿಗೇ ಕೊಡಲಾಗುವುದು. ಈ ನಿಧಿಯನ್ನು ಬಳಸಿಕೊಂಡು ಕಟ್ಟಡಗಳ ನಿರ್ವಹಣೆ, ದುರಸ್ತಿ, ಗ್ರಂಥಾಲಯಕ್ಕೆ ಪುಸ್ತಕ ಮತ್ತು ನಿಯತಕಾಲಿಕೆಗಳ ಖರೀದಿ, ಪ್ರಯೋಗಾಲಯಗಳ ಉಪಕರಣ, ಇಂಟರ್‍‌ನೆಟ್‌, ಕಚೇರಿ ವೆಚ್ಚ, ಎನ್‌ಎಸ್‌ಎಸ್‌ ಘಟಕ ಸ್ಥಾಪನೆ, ಕಂಪ್ಯೂಟರ್‍‌, ಸಿ.ಸಿ. ಕ್ಯಾಮರಾ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮುಂತಾದವುಗಳಿಗೆ ಬಳಸಿಕೊಳ್ಳಬಹುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಹೊಸ ನಿಯಮದ ಪ್ರಕಾರ, ಆಯಾ ಕಾಲೇಜುಗಳು ಈ ರೀತಿಯಲ್ಲಿ ಸಂಗ್ರಹವಾಗಿರುವ ನಿಧಿ ಮತ್ತು ಅವುಗಳ ಖರ್ಚುವೆಚ್ಚದ ರೀತಿಗಳನ್ನು ತಮ್ಮ ಸೂಚನಾ ಫಲಕ ಮತ್ತು ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಜೊತೆಗೆ, ಎಲ್ಲ ರೀತಿಯ ವ್ಯವಹಾರಗಳನ್ನೂ ಆನ್‌ಲೈನ್‌ ಮೂಲಕ ಮಾತ್ರವೇ ಮಾಡಬೇಕು. ಇದರಲ್ಲಿ ಭೌತಿಕ ಸ್ವರೂಪದ ವ್ಯವಹಾರಗಳಿಗೆ ಅವಕಾಶ ಇರುವುದಿಲ್ಲ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಚನ್ನಗಿರಿ | ಎಸ್ ಎಸ್ ಎಲ್ ಸಿ ಫಲಿತಾಂಶ ; ಕಬ್ಬಳ ಶಾಲೆಯ ವಿದ್ಯಾರ್ಥಿ ಭರತ್ ಜಿ ರಾಜ್ಯಕ್ಕೆ ಟಾಪರ್

Published

on

ಸುದ್ದಿದಿನ,ದಾವಣಗೆರೆ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಣಿವೆಬಿಳಚಿ ಗ್ರಾಮದ ವಿದ್ಯಾರ್ಥಿ ಭರತ್ ಜಿ. ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

625ಕ್ಕೆ 625 ಅಂಕಗಳನ್ನು ಪಡೆದ ಭರತ್ ಅವರು ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ವಿದ್ಯಾರ್ಥಿ. ರಾಜ್ಯದ ಇತರ ಐದು ವಿದ್ಯಾರ್ಥಿಗಳೊಂದಿಗೆ ಅಗ್ರಸ್ಥಾನವನ್ನು ಭರತ್ ಅವರು ಹಂಚಿಕೊಂಡಿದ್ದಾರೆ. ಭರತ್ ಅವರ ತಂದೆ ಗಿರೀಶ್ ಕೃಷಿ ಹಾಗೂ ಗುತ್ತಿಗೆ ದಾರರು, ತಾಯಿ ಶಿಲ್ಪ ಗೃಹಿಣಿ.

ಗ್ರಾಮೀಣ ಭಾಗದಿಂದ ಬಂದ ಭರತ್ ರಾಜ್ಯಕ್ಕೆ ಟಾಪರ್ ಆಗಿ ದೊಡ್ಡ ಸಾಧನೆ ಮಾಡಿದ್ದಾರೆ.ನಮ್ಮ ಶಾಲೆಯು ಎರಡು ಬಾರಿ ಜಿಲ್ಲೆಗೆ ಹಾಗೂ ಎರಡು ಬಾರಿ ತಾಲ್ಲೂಕಿಗೆ ಟಾಪ‌ರ್ ಆಗಿತ್ತು. ಇದೀಗ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯು ನಿರಂತರವಾಗಿ ಸಾಧನೆ ಮಾಡುತ್ತಿದ್ದು ಈ ಬಾರಿಯೂ ಶೇ 100ರಷ್ಟು ಫಲಿತಾಂಶ ನೀಡಿದೆ ಎಂದು ಮುಖ್ಯ ಶಿಕ್ಷಕಿ ಲಕ್ಷ್ಮೀದೇವಿ ಎ.ಎನ್ ಹರ್ಷ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ

Published

on

ಸುದ್ದಿದಿನ,ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 23) ಮಧ್ಯಾಹ್ನ 12ಕ್ಕೆ ಪ್ರಕಟಿಸಲಾಗುತ್ತದೆ.

ಫಲಿತಾಂಶವನ್ನು ವೆಬ್‌ಸೈಟ್ (https://karresults.nic.in) ಲಿಂಕ್ ಮೂಲಕ ಹಾಗೂ KarnatakaOne mobile app ಮೂಲಕವೂ ಪಡೆಯಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್‌ಗೆ ವಾಟ್ಸ್‌ಆ್ಯಪ್/ ಎಸ್‌ಎಂಎಸ್‌ ಮೂಲಕ ಫಲಿತಾಂಶದ ಮಾಹಿತಿಯನ್ನು ಮಂಡಳಿಯಿಂದ ರವಾನಿಸಲಾಗುತ್ತದೆ.

ಈ ವರ್ಷ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್‌ (https://www.digilocker.gov.in) ಮೂಲಕ ಲಭ್ಯಗೊಳಿಸಲಾಗುತ್ತದೆ. ಈ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಫಲಿತಾಂಶ ಪಟ್ಟಿಯನ್ನು ಸಂಬಂಧಿತ ಶಾಲೆಗಳಿಗೆ ಮಧ್ಯಾಹ್ನ 12 ಗಂಟೆಗೆ ಲಭ್ಯಗೊಳಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಮ್ಮ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದರೆ ತಮ್ಮ ಶ್ರೇಣಿಗಳ ಬಗ್ಗೆ ಅತೃಪ್ತರಾಗಿರುವ ವಿದ್ಯಾರ್ಥಿಗಳು ಮಂಡಳಿಯು ಏರ್ಪಡಿಸಿದ ಕರ್ನಾಟಕ SSLC ಸುಧಾರಣಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಇದು ನಿರ್ದಿಷ್ಟ ವಿಷಯಗಳಲ್ಲಿ ಅಂಕಗಳನ್ನು ಸುಧಾರಿಸಲು ಅವಕಾಶವನ್ನು ನೀಡುತ್ತದೆ.

ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ಒಬ್ಬ ವಿದ್ಯಾರ್ಥಿ ಅನುತ್ತೀರ್ಣನಾದರೆ, ಅವರು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳದೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಾಳೆ ಸಸಿಗಳ ಮಾರಾಟ : ಸಂಪರ್ಕಿಸಿ

Published

on

ಸುದ್ದಿದಿನ,ದಾವಣಗೆರೆ: ಉತ್ತಮ ಗುಣಮಟ್ಟದ ಜಿ-9 ತಳಿಯ ಅಂಗಾಂಶ ಕೃಷಿ ಬಾಳೆಗಳನ್ನು ಕೃಷಿ ಇಲಾಖೆ ಮಾರಾಟ ಮಾಡಲಾಗುತ್ತಿದೆ.

ಆಸಕ್ತ ರೈತರು ಸಹಾಯಕ ತೋಟಗಾರಿಕಾ ಅಧಿಕಾರಿ, ಅಂಗಾಂಶ ಕೃಷಿ ಬಾಳೆ, ಜೈವಿಕ ಕೇಂದ್ರ, ಎಪಿಎಂಸಿ ಈ ಬ್ಲಾಕ್, ಹಣ್ಣಿನ ಮಾರುಕಟ್ಟೆ ಹತ್ತಿರ ಮೊ.ಸಂ:6360950904, 8192296196 ಸಂಪರ್ಕಿಸಿ ಇಲಾಖೆ ದರದಲ್ಲಿ ಬಾಳೆಸಸಿಗಳನ್ನು ಕೊಂಡುಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending