Connect with us

ದಿನದ ಸುದ್ದಿ

ನನ್ನೊಡನೆ ಬಹಿರಂಗ ಚರ್ಚೆಗೆ ಬನ್ನಿ, ನಿಮ್ಮದೇ ಸ್ಥಳ, ನಿಮ್ಮದೇ ಸಮಯ : ಮೋದಿಗೆ ಸಿದ್ದು ಓಪನ್ ಚಾಲೆಂಜ್

Published

on

ಸಾಂದರ್ಭಿಕ ಚಿತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಮಾಡಿರುವ ಆರೋಪಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಪ್ರತಿಕ್ರಿಯೆ

ಕಾಂಗ್ರೆಸ್ ಪಕ್ಷ ಮಾಧ್ಯಮಗಳ ಸುಳ್ಳು ಸಮೀಕ್ಷೆಗಳನ್ನು ಪ್ರಸಾರ ಮಾಡಿ ಬೆಂಬಲ ಗಳಿಸಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೊಟ್ಟೆ ಉರ್ಕೊಳ್ಳುತ್ತಿರುವುದು ನೋಡಿದಾಗ ಕನಿಕರ ಹುಟ್ಟುತ್ತಿದೆ.
ಏನಿದರ ಅರ್ಥ ಮೋದಿಯವರೇ? ನಿಮ್ಮನ್ನು ಹಾಡಿ ಹೊಗಳುತ್ತಿರುವ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ನೀವೇ ಸಂಶಯಿಸುತ್ತಿದ್ದೀರಾ? ಮನುಷ್ಯ ಇಷ್ಟೊಂದು ಕೃತಘ್ನರಾಗಬಾರದು.

ನರೇಂದ್ರ ಮೋದಿಯವರು ರಾಜ್ಯ ಬಿಜೆಪಿಯ ಪ್ರಣಾಳಿಕೆಯನ್ನು ಸಂಕಲ್ಪಪತ್ರ ಎಂದು ಬಣ್ಣಿಸಿದ್ದಾರೆ.
2018ರ ತನ್ನ ಪ್ರಣಾಳಿಕೆಯ ಶೇಕಡಾ 90ರಷ್ಟು ಭರವಸೆಗಳನ್ನು ಬಿಜೆಪಿ ಸರ್ಕಾರ ಈಡೇರಿಸಿಲ್ಲ. 2013ರ ಕಾಂಗ್ರೆಸ್ ಪ್ರಣಾಳಿಕೆಯ 165 ಭರವಸೆಗಳಲ್ಲಿ 158 ಭರವಸೆಗಳನ್ನು ನಮ್ಮ ಸರ್ಕಾರ ಈಡೇರಿಸಿದೆ. ನಿಮ್ಮ ಸಂಕಲ್ಪ ಪ್ರಾಮಾಣಿಕವಾದುದಾಗಿದ್ದರೆ 2013ರ ನಮ್ಮ ಪ್ರಣಾಳಿಕೆ ಮತ್ತು 2018ರ ನಿಮ್ಮ ಪ್ರಣಾಳಿಕೆಯನ್ನು ಮುಂದಿಟ್ಟು ಈಡೇರಿಸಿದ ಭರವಸೆಗಳ ಬಗ್ಗೆ ನನ್ನೊಡನೆ ಬಹಿರಂಗ ಚರ್ಚೆಗೆ ಬನ್ನಿ, ಸಿದ್ಧ ಇದ್ದೀರಾ? ನಿಮ್ಮದೇ ಸ್ಥಳ, ನಿಮ್ಮದೇ ಸಮಯ, ಉತ್ತರಕ್ಕಾಗಿ ಕಾಯುತ್ತಿರುವೆ.

ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಮೂರುವರೆ ವರ್ಷಗಳ ಅಧಿಕಾರವಧಿಯಲ್ಲಿ ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸವುದರಲ್ಲಿಯೇ ಕಳೆದುಹೋಯಿತು ಎಂದು ನರೇಂದ್ರ ಮೋದಿಯವರು ನೊಂದುಕೊಂಡಿದ್ದಾರೆ.
ಮೂರುವರೆ ವರ್ಷಗಳಲ್ಲಿ ಡಬಲ್ ಎಂಜಿನ್ ಸರ್ಕಾರದ ಸಾಧನೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಕೋಮುದ್ವೇಷವನ್ನಷ್ಟೇ ಡಬಲ್ ಮಾಡಿದೆ. ಬಿಜೆಪಿ ಮಾಡಿಟ್ಟ ಪಾಪವನ್ನು ತೊಳೆಯಲು ಕಾವೇರಿ ಮತ್ತು ಕೃಷ್ಣಾ ನದಿಗಳ ನೀರು ಸಾಲದು.

ರಾಜ್ಯದಲ್ಲಿರುವುದು ಡಬಲ್ ಎಂಜಿನ್ ಸರ್ಕಾರ ಅಲ್ಲ, ಟ್ರಿಪಲ್ ಎಂಜಿನ್ ಸರ್ಕಾರ. ಒಂದು ರಾಜ್ಯದಲ್ಲಿ, ಇನ್ನೊಂದು ದೆಹಲಿಯಲ್ಲಿ ಮತ್ತೊಂದು ನಾಗಪುರದಲ್ಲಿ. ಪ್ರಧಾನಿಯಿಂದ ಹಿಡಿದು ಮುಖ್ಯಮಂತ್ರಿ ಮತ್ತು ಸಚಿವರ ವರೆಗೆ ಎಲ್ಲರೂ ನಾಗಪುರದ ಗೊಂಬೆಯಾಟದವರ ಕೈಯಲ್ಲಿರುವ ಗೊಂಬೆಗಳು ಅಷ್ಟೆ. ಝಂಡಾ ಮಾತ್ರ ಪಕ್ಷದ್ದು ಅಜೆಂಡಾ ಆರ್.ಎಸ್.ಎಸ್ ನದ್ದು.

ಡಬಲ್ ಎಂಜಿನ ಸರ್ಕಾರ ಇದ್ದರೂ
ಅರ್ಧ ಕರ್ನಾಟಕ ನೆರೆನೀರಿನಲ್ಲಿ ಮುಳುಗಿರುವಾಗ ನೆರವು ಹರಿದುಬರಲಿಲ್ಲ. ಕೇಂದ್ರಕ್ಕೆ ಕೊಟ್ಟ ಒಂದು ರೂಪಾಯಿಯಲ್ಲಿ ವಾಪಸ್ ರಾಜ್ಯಕ್ಕೆ ಬಂದದ್ದು ಕೇವಲ 16ಪೈಸೆ.
ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿಪ್ರದೇಶಕ್ಕೆ ಅತಿಕ್ರಮಣ ಮಾಡಿದರೂ ಮಧ್ಯೆ ಪ್ರವೇಶ ಮಾಡಲಿಲ್ಲ. ಇಂಥ ಡಬ್ಬಲ್ ಇಂಜಿನ್ ಸರ್ಕಾರ ಯಾಕೆ ಬೇಕಿದೆ?

ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದ ಕೆಲವು ಶಬ್ದಗಳನ್ನು ತಪ್ಪುತಪ್ಪಾಗಿಯಾದರೂ ಆಡುತ್ತಿರುವುದು ಸ್ವಾಗತಾರ್ಹ. ಆದರೆ ಈ ನಾಟಕದ ಮಾತುಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಕನ್ನಡಿಗರಿಗೆ ಮಾಡಿರುವ ಅನ್ಯಾಯವನ್ನು ಮುಚ್ಚಿಡಲಾಗದು. ನಿಜವಾದ ಕನ್ನಡಿಗನಾಗುವುದೆಂದರೆ ನಾಡಭಾಷೆ, ನಾಡಗೀತೆ ಮತ್ತು ನಾಡಧ್ವಜವನ್ನು ಒಪ್ಪಿಕೊಳ್ಳುವುದು. ಕರ್ನಾಟಕದ ನಾಡಧ್ವಜಕ್ಕೆ ಅಂಗೀಕಾರ ನೀಡಿ ನೀವು ನಿಜವಾದ ಕನ್ನಡಿಗರಾಗುವಿರಾ ಮೋದಿಯವರೇ?

ಭಯೋತ್ಪಾದನೆ ತಡೆಯಲು ಕಾಂಗ್ರೆಸ್ ಸರ್ಕಾರ ಸೋತಿತ್ತು ಎಂದು ಹೇಳಿರುವ ಪ್ರಧಾನಿ ಮೋದಿಯವರೇ,
ಭಯೋತ್ಪಾದನೆಯನ್ನು ದಿಟ್ಟತನದಿಂದ ಎದುರಿಸಿ ಹುತಾತ್ಮರಾದ ಇಬ್ಬರು ಪ್ರಧಾನಿಗಳು ಯಾವ ಪಕ್ಷದವರು ಎನ್ನುವುದನ್ನು ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ಕೇಳಿ ನೋಡಿ, ಉತ್ತರ ಸಿಗಬಹುದು.

ಕಳೆದ ಕೆಲವು ದಿನಗಳಿಂದ ಇಡೀ ಮಣಿಪುರ ಹೊತ್ತಿ ಉರಿಯುತ್ತಿದೆ. ದೇಶದ ಪ್ರಧಾನಮಂತ್ರಿ ಮತ್ತು ಗೃಹಸಚಿವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಆರಾಮಾಗಿದ್ದಾರೆ, “ರೋಮ್ ಹೊತ್ತಿ ಉರಿಯುವಾಗ ದೊರೆ ನೀರೊ ಪಿಟೀಲು ಬಾರಿಸುತ್ತಿದ್ದನಂತೆ”, ಹಾಗಾಯಿತು ನಿಮ್ಮ ಕತೆ. ಚೀನಾದ ಗಡಿ ಅತಿಕ್ರಮಣವನ್ನು ಹಿಮ್ಮೆಟ್ಟಿಸಲಾಗಲಿಲ್ಲ, ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿಯಂತ್ರಿಸಿ ಶಾಂತಿ ಸ್ಥಾಪಿಸಲಾಗಲಿಲ್ಲ. ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ಯಾವ ನೈತಿಕತೆ ನಿಮಗಿದೆ ನರೇಂದ್ರ ಮೋದಿಯವರೇ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

Published

on

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.

ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.

ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

Published

on

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್‌ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್‌, ಚೇತನ್‌ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.

ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್‌ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್‌ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.

ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending