ದಿನದ ಸುದ್ದಿ
ಜ.20 ಹಾಗೂ 21 ರಂದು ಗ್ರೂಪ್ ಸಿ ಹುದ್ದೆಗಳಿಗೆ ಪರೀಕ್ಷೆ ; ಸಕಲ ಸಿದ್ದತೆ : ಎಡಿಸಿ ಪಿ.ಎನ್ ಲೋಕೇಶ್
ಸುದ್ದಿದಿನ,ದಾವಣಗೆರೆ : ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ ಪರಿವೀಕ್ಷಕರ ಗ್ರೂಪ್ ಸಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಜ.20, 21 ರಂದು ನಗರದ ಹದಿನಾಲ್ಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ತಿಳಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪರೀಕ್ಷಾ ಸಿದ್ದತಾ ಸಭೆಯಲ್ಲಿ ಪರೀಕ್ಷಾ ವೀಕ್ಷಕರು, ಮೇಲ್ವಿಚಾರಕರು, ಮಾರ್ಗಾಧಿಕಾರಿಗಳು ಪರೀಕ್ಷೆ ಸಂಧರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ಜ.20 ರಂದು ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ. ಜ.21 ರಂದು ಬೆಳಿಗ್ಗೆ 10 ರಿಂದ 11.30 ರವರಗೆ ಸಾಮಾನ್ಯ ಜ್ಞಾನ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರಗೆ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್, ಕಂಪ್ಯೂಟರ್ ಜ್ಞಾನ ವಿಷಯದ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆಗಳಲ್ಲಿ ಎಷ್ಟೇ ಎಚ್ಚರವಹಿಸಿದರೂ ಕೆಲವು ತಪ್ಪುಗಳಾಗುತ್ತವೆ, ಹಾಗಾಗಿ ಪರೀಕ್ಷಾ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ಪರೀಕ್ಷಾ ಮಾರ್ಗಸೂಚಿಗಳನ್ನು ಸರಿಯಾಗಿ ಓದಿಕೊಂಡು ಕರ್ತವ್ಯ ನಿರ್ವಹಿಸಬೇಕು. ತಾಂತ್ರಿಕತೆ ಬಹಳ ಮುಂದುವರೆದಿದ್ದು ಪರೀಕ್ಷೆಗಳಲ್ಲಿ ತಾಂತ್ರಿಕಕತೆ ಬಳಸುವ ಅಪಾಯವಿರುಚುದರಿಂದ ಹೆಚ್ಚು ಜಾಗರೂಕರಾಗಿರಬೇಕೆಂದರು.
ಪರೀಕ್ಷಾ ಕೇಂದ್ರಗಳಲ್ಲಿ ಎಲೆಕ್ಟ್ರಾನಿಕ್ಸ್ ಸಾಧನಗಳಾದ ಮೊಬೈಲ್, ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಬ್ಲೂ ಟೂತ್ ಡಿವೈಸ್, ಪೇಜರ್, ವೈರ್‍ಲೆಸ್, ಕ್ಯಾಲ್ಕುಲೇಟರ್, ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳಿಗೆ ನಿರ್ಬಂಧವಿರುತ್ತದೆ, ಆದಾಗ್ಯೂ ಯಾವುದೇ ವ್ಯಕ್ತಿಗಳು ಇವುಗಳನ್ನು ಕೇಂದ್ರದೊಳಗೆ ತಂದರೆ ಅವರ ಅಭ್ಯರ್ಥಿತನವನ್ನು ರದ್ದುಗೊಳಿಸಿ ಆಯೋಗ ನಡೆಸುವ ಎಲ್ಲಾ ಪರೀಕ್ಷೆಗಳಿಂದ ಡಿಬಾರ್ ಮಾಡಲಾಗುವುದೆಂದರು.
ಪರೀಕ್ಷಾ ಉಪ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು, ಪರೀಕ್ಷಾ ಉಪ ಕೇಂದ್ರಗಳ ವೀಕ್ಷಕರಿಗಳಿಗೆ ಬಾಡಿ ಕ್ಯಾಮರಾ ಒದಗಿಸಬೇಕು. ಪ್ರವೇಶ ಪತ್ರ ಮತ್ತು ಮೂಲ ಗುರುತಿನ ಚೀಟಿ ಹೊಂದಿರುವ ಅಭ್ಯರ್ಥಿಗಳಿಗೆ ಸ್ಯಾನಿಟೈಜೇಷನ್ ಮಾಡಿಸಿದ ನಂತರವೇ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ನೀಡಿ, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ನಮೂದಿಸಿದ ಆಸನದಲ್ಲಿ ಕುಳಿತಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ನಾಮಿನಲ್ ರೋಲ್‍ನಲ್ಲಿರುವ ಫೋಟೋ ಮತ್ತು ಸಹಿಯನ್ನು ಪರಾಮರ್ಶಿಸಿ ಅಭ್ಯರ್ಥಿಯ ಗುರುತನ್ನು ಖಚಿತಪಡಿಸಿಕೊಳ್ಳಬೇಕು. ಆಸೀನರಾಗಿರುವ ಅಭ್ಯರ್ಥಿಗಳಿಗೆ ಮಾತ್ರ ಅವರದೇ ನೋಂದಣಿ ಸಂಖ್ಯೆಯುಳ್ಳ ಒ.ಎಂ.ಆರ್. ಹಾಳೆಗಳನ್ನು ನೀಡಿ ಅದರಲ್ಲಿರುವ ಅಂಕಣಗಳನ್ನು ಸೂಕ್ತವಾಗಿ ಭರ್ತಿ ಮಾಡುವಂತೆ ಕೊಠಡಿ ವೀಕ್ಷಕರು ಆಭ್ಯರ್ಥಿಗಳಿಗೆ ಸೂಚಿಸಬೇಕು.
ಕೊಠಡಿ ವೀಕ್ಷಕರು ಆಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಅದರಲ್ಲಿರುವ ಸೂಚನೆಗಳನ್ನು ಓದಿಕೊಂಡ ನಂತರ ಉತ್ತರಿಸಲು ತಿಳಿಸಬೇಕು.
ಹೆಚ್ಚುವರಿ ಪೊಲೀಸ್ ಅಧಿಕಾರಿ ಮಂಜುನಾಥ, ಡಿಡಿಪಿಐ ಕೊಟ್ರೇಶ್, ಡಯಟ್ ಅಧಿಕಾರಿ ಗೀತಾ ಸೇರಿದಂತೆ ಪರೀಕ್ಷೆ ನಿಯೋಜಿತ ಅಧಿಕಾರಿಗಳಿದ್ದರು.
ಪರೀಕ್ಷಾ ಕೆಂದ್ರಗಳ ಸುತ್ತ 200 ಮೀ ನಿಷೇಧಿತ ಪ್ರದೇಶ : ಡಿ.ಸಿ
ದಾವಣಗೆರೆ ನಗರದ 14 ಪರೀಕ್ಷಾ ಕೇಂದ್ರಗಳಲ್ಲಿ ಜ.20 ಮತ್ತು 21 ರಂದು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಪರಿವೀಕ್ಷಕರ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕ ನಿಷೇಧಿತ ಪ್ರದೇಶವೆಂದು ಘೋಷಿಸಿದ್ದು ಈ ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳು ಹಾಗೂ ಸೈಬರ್ ಕೆಫೆಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚಲು ಜಿಲ್ಲಾಧಿಕಾರಿ ಡಾ.ವೆಂಕಟೇಶ.ಎಂ.ವಿ. ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್ಕಿಟ್ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಇಲಾಖಾ ತನಿಖೆ ನಡೆಸದೆ ಕಾಲ ವಿಳಂಬ ಮಾಡುತ್ತಿರುವ ಚಿತ್ರದುರ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ 06 ಅರ್ಜಿ ಸಲ್ಲಿಸಿ, ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಗಳಿಗೆ ಬಿಡುಗಡೆಯಾದ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿದ್ದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ಸದರಿ ಪ್ರಕರಣವನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿದ್ದರು.
ನಿಯಮಾನುಸಾರ ಇಲಾಖೆ ತನಿಖೆ ನಡೆಸದೆ ಕಾಲ ವಿಳಂಬ ಮಾಡುವ ಉದ್ದೇಶದಿಂದ 6 ತಾಲ್ಲೂಕು ಉಪ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಆದೇಶ ಹೊರಡಿದ್ದು, ಇದರಂತೆ ವಕೀಲ ಡಾ.ಕೆ.ಎ.ಓಬಳಪ್ಪ ಇವರು ಎಲ್ಲಾ ಉಪವಿಭಾಗಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿದಾಗ ದಾಖಲೆಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ.
ಈ ಬಗ್ಗೆ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿದರೂ ನಿರ್ಲಕ್ಷö್ಯ ತೋರಿದ ಕಾರಣ, ಕರ್ತವ್ಯ ಲೋಪದ ಅಡಿಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಶ್ ಪಠ್ಯಕ್ರಮ ಕಾರ್ಯಗಾರ
ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರ ವೇದಿಕೆಯ (FODCET) ಸಂಯುಕ್ತ ಆಶ್ರಯದಲ್ಲಿ “ರಾಜ್ಯ ಶಿಕ್ಷಣ ನೀತಿ (S.E.P) ಇಂಗ್ಲೀಷ್ ಪಠ್ಯಕ್ರಮ” ಕುರಿತ ಒಂದು ದಿನದ ಕಾರ್ಯಗಾರವನ್ನು ದಿನಾಂಕ 02-03-2026 ರಂದು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಬಸಪ್ಪ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ದಾವಣಗೆರೆ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಡಾ. ಲೋಕೇಶ್ ಎಂ.ಯು. ಭಾಗವಹಿಸಿ, ಎಸ್.ಇ.ಪಿ ಪಠ್ಯಕ್ರಮದ ಉದ್ದೇಶ, ವಿನ್ಯಾಸ ಮತ್ತು ಪರಿಣಾಮಕಾರಿತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲೀಷ್ ವಿಭಾಗದ ಸಂಯೋಜಕರಾದ ಡಾ. ಫಕ್ಕೀರೇಶ ಹಳ್ಳಳ್ಳಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಈ ಕಾರ್ಯಗಾರದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಪದವಿ ಕಾಲೇಜುಗಳಲ್ಲಿ ಇಂಗ್ಲೀಷ್ ಭಾಷೆ ಮತ್ತು ಸಾಹಿತ್ಯ ಬೋಧಿಸುವ ಪ್ರಾಧ್ಯಾಪಕರು ಭಾಗವಹಿಸಿ, ಪಠ್ಯಕ್ರಮದ ಅನುಷ್ಠಾನ, ಬೋಧನಾ ವಿಧಾನಗಳು ಹಾಗೂ ಮೌಲ್ಯಮಾಪನ ಕ್ರಮಗಳ ಕುರಿತು ವಿಚಾರ ವಿನಿಮಯ ನಡೆಸಿದರು.ಸ.ಪ್ರ.ದ. ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ್ ಪಠ್ಯಕ್ರಮ ಕುರಿತ ಮಹತ್ವದ ಕಾರ್ಯಗಾರ ಯಶಸ್ವಿ.
ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಡಾ. ಜಯಪ್ಪ, ಡಾ. ಭೀಮಪ್ಪ, ಡಾ. ಮಹೇಶ್ ನಾಯ್ಕ್, ಡಾ.ಮಧುಸೂದನ್, ಡಾ. ವಿಜಯಕುಮಾರ್, ಡಾ. ನಾಗನಗೌಡ ಹಾಗೂ ಡಾ. ಶಿವರಾಜ್, ಡಾ. ತ್ರಿವೇಣಿ, ಡಾ. ಶಶಿಕಲಾ ಉಪಸ್ಥಿತರಿದ್ದರು.
ಐ ಕ್ಯೂ ಏ ಸಿ ಸಂಯೋಜಕರು ಮತ್ತು ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಭೀಮಪ್ಪ ಎಂ ಪಿ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿ ಮತ್ತು ಸ್ವಾಗತಿಸಿದರು, ಇತಿಹಾಸ ವಿಭಾಗದ ಮುಖ್ಯಸ್ಥರು ವಂದಿಸಿದರು ಮತ್ತು ಪ್ರೂ. ಮಂಜುನಾಥ ಜಿ ಕಾರ್ಯಕ್ರಮವನ್ನು ನಿರೂಪಿಸಿದರು.
ಇಂಗ್ಲೀಷ್ ಮೇಜರ್ ನಲ್ಲಿ ರ್ಯಾಂಕ್ ಪಡೆದವಿದ್ಯಾರ್ಥಿನಿಯರನ್ನು ಇಂಗ್ಲಿಷ್ ವಿಭಾಗದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


