Connect with us

ದಿನದ ಸುದ್ದಿ

‘ಮತದಾರ ದೇವರು’ ಎಂದ‌ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಘನತೆವೆತ್ತ ರಾಜ್ಯಪಾಲರಿಗೆ ನೀಡಿ ಬಂದಿದ್ದೇನೆ. ಸಾಂವಿಧಾನಿಕ ವಿಧಿ-ವಿಧಾನಗಳ ಮೂಲಕ ರಾಜ್ಯಪಾಲರು ಕ್ರಮಕೈಗೊಳ್ಳುತ್ತಾರೆ. ಶೀಘ್ರದಲ್ಲಿಯೇ ನೂತನ ಮುಖ್ಯಮಂತ್ರಿಯನ್ನು ರಾಜ್ಯದ ಜನತೆ ಕಾಣಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಇಂದಿನ ವರೆಗೂ ನನಗೆ ನಿರೀಕ್ಷೆಗೂ ಮೀರಿ ಪ್ರೀತಿ ನೀಡಿದ, ಅಭಿಮಾನಿಸಿದ, ಕೈಹಿಡಿದು ನಡೆಸಿದ ರಾಜ್ಯದ ಜನತೆಯನ್ನು ಉದ್ದೇಶಿಸಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮೇರು ನಟ ಡಾ.ರಾಜ್‌ಕುಮಾರ್ ಅವರು ಅಭಿಮಾನಿಗಳನ್ನು ‘’ಅಭಿಮಾನಿ ದೇವರು’’ ಎಂದು ಕರೆಯುತ್ತಿದ್ದರು, ನಾನೊಬ್ಬ ಸಂವಿಧಾನವನ್ನೇ ಧರ್ಮ ಎಂದು ತಿಳಿದುಕೊಂಡಿರುವ ರಾಜಕಾರಣಿ. ನನ್ನ ಪಾಲಿಗೆ ಮತದಾರರು ‘’ಮತದಾರ ದೇವರು”. ಆ ದೇವರುಗಳ ಮುಂದೆ ನನ್ನ ಮನದಾಳದ ಕೆಲವು ಮಾತುಗಳನ್ನು ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ ಎಂದರು.

ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿರುವ ನನ್ನ ಬಗ್ಗೆ ರಾಜ್ಯದ ಜನತೆಗೆ ತಿಳಿದಿದೆ. ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಜಾಯಮಾನದವನಲ್ಲ. ಈ ರಾಜೀನಾಮೆ ಪತ್ರವನ್ನು ಕೂಡಾ ಅತ್ಯಂತ ಸಂತೋಷದಿಂದ ಮನಪೂರ್ವಕವಾಗಿ ನೀಡಿದ್ದೇನೆ.

ಹಳ್ಳಿಗಾಡಿನ ರೈತಾಪಿ ಕುಟುಂಬದಿಂದ ಬಂದ ನಾನು ರಾಜಕಾರಣಕ್ಕೆ ಪ್ರವೇಶ ಮಾಡುವಾಗ ಮುಂದೊಂದು ದಿನ ಶಾಸಕನಾಗುತ್ತೇನೆ, ಸಚಿವನಾಗುತ್ತೇನೆ, ನಾಡಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸನ್ನೂ ಕಂಡವನಲ್ಲ. ಇಂತಹದ್ದೊಂದು ದುಬಾರಿ ಕನಸನ್ನು ನನಸು ಮಾಡಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ. ಈ ಸಂವಿಧಾನದ ಬಲ ಇಲ್ಲದೆ ಹೋಗಿದ್ದರೆ ನಾನು ಎಲ್ಲೋ ಕುರಿ ಮೇಯಿಸಿಕೊಂಡೋ, ಇನ್ನೇನೋ ಆಗಿ ಇರುತ್ತಿದ್ದೆ. ಈ ಕಾರಣಕ್ಕಾಗಿ ಮೊದಲಿಗೆ ನಮ್ಮ ಸಂವಿಧಾನ ಮತ್ತು ಸಂವಿಧಾನದ ಶಿಲ್ಪಿಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಈ ಸಂದರ್ಭದಲ್ಲಿ ತಲೆಬಾಗಿ ನಮಿಸುತ್ತೇನೆ.

ಎರಡನೆಯದಾಗಿ ರಾಜ್ಯದ ಜನತೆ. ಹೆಚ್ಚುಕಡಿಮೆ ನಾಲ್ಕುವರೆ ದಶಕಗಳ ಸುದೀರ್ಘ ರಾಜಕಾರಣದ ಪಯಣದಲ್ಲಿ ಜನ ನನ್ನನ್ನು ಶಾಸಕ, ಸಚಿವ, ಕೊನೆಗೆ ಎರಡುಬಾರಿ ಮುಖ್ಯಮಂತ್ರಿ ಸ್ಥಾನದ ಕಿರೀಟವನ್ನು ನನ್ನ ತಲೆ ಮೇಲೆ ಇಟ್ಟು ಹರಸಿ ಅವರ ಸೇವೆ ಮಾಡುವ ಭಾಗ್ಯವನ್ನು ನನಗೆ ಕರುಣಿಸಿದ್ದಾರೆ. ಆ ಮತದಾರ ದೇವರುಗಳಿಗೆ ನಾನು ಆಭಾರಿಯಾಗಿದ್ದೇನೆ.

ಮೂರನೆಯದಾಗಿ, ನನ್ನ ಸೈದ್ಧಾಂತಿಕ ಬದ್ಧತೆ ಮತ್ತು ರಾಜಕೀಯ ಹೋರಾಟಕ್ಕೆ ಮನ್ನಣೆ ನೀಡಿದ ಕಾಂಗ್ರೆಸ್‌ ಪಕ್ಷವು ನನ್ನ ಮೇಲೆ ವಿಶ್ವಾಸ ಇರಿಸಿ ನನ್ನನ್ನು ಬರಮಾಡಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಅವಕಾಶ ನೀಡಿದೆ. ಎರಡು ಬಾರಿ ಮುಖ್ಯಮಂತ್ರಿ ಮಾಡಿದೆ, ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲು ಅವಕಾಶ ನೀಡಿದೆ. ಆ ಮೂಲಕ ಈ ನಾಡಿನ ಜನತೆಗೆ ನಾನು ನಂಬಿರುವ ತತ್ವಾದರ್ಶಗಳ ಅನುಸಾರ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಈ ಕಾರಣಕ್ಕಾಗಿ ಶ್ರೀಮತಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಸದಾ ಆಭಾರಿಯಾಗಿರುತ್ತೇನೆ.

ನಾನೆಂದೂ ರಾಜಕಾರಣವನ್ನು ಅಧಿಕಾರದ ದಂಡ ಎಂದಾಗಲಿ, ವ್ಯಾಪಾರದ ಗಲ್ಲಾ ಪೆಟ್ಟಿಗೆ ಎಂದಾಗಲಿ ತಿಳಿದುಕೊಂಡವನಲ್ಲ, ಅದು ಬಡವರಿಗೆ, ಶೋಷಿತರಿಗೆ, ನೊಂದವರಿಗೆ ನೆರವಾಗುವ ಒಂದು ಅವಕಾಶ ಎಂದು ತಿಳಿದುಕೊಂಡವನು. ಈ ಸಮುದಾಯಗಳಿಗೆ ನೆರವಾಗುವ ಉದ್ದೇಶದಿಂದಲೇ ವಕೀಲನಾಗಿ ಸೇವೆ ಮಾಡುತ್ತಿದ್ದ ನಾನು ರಾಜಕಾರಣವನ್ನು ಪ್ರವೇಶ ಮಾಡಿದವನು.

ನನ್ನ 77 ವರ್ಷಗಳ ಜೀವನ ಪಯಣದಲ್ಲಿ ಹಲವಾರು ವ್ಯಕ್ತಿಗಳು ಪ್ರೀತಿ-ವಿಶ್ವಾಸದಿಂದ ಕೈಹಿಡಿದು ಮುನ್ನಡೆಸಿದ್ದಾರೆ. ನನ್ನ ಬದುಕು ಒಂದು ತೆರೆದ ಪುಸ್ತಕ. ಈ ಪುಸ್ತಕದಲ್ಲಿ ಮೊದಲ ಬರವಣಿಗೆ ಮಾಡಿದ್ದು ವೀರ ಕುಣಿತವನ್ನು ಕಲಿಯುತ್ತಾ ಸಮಯ ಸಿಕ್ಕಾಗ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುತ್ತಿದ್ದ ನನ್ನನ್ನು ಶಾಲೆಗೆ ಕರೆದೊಯ್ದು ವಿದ್ಯೆ ಕಲಿಯುವ ಅವಕಾಶ ನೀಡಿದವರು ರಾಜಪ್ಪ ಮಾಸ್ತರ್.

ವಕೀಲನಾಗಿದ್ದ ನನ್ನಲ್ಲಿನ ಸೇವಾಕಾಂಕ್ಷೆಯನ್ನು ಗುರುತಿಸಿ ಸಮಾಜವಾದದ ಪಾಠ ಮಾಡಿ, ರಾಜಕಾರಣಿಗಳಿಗೆ ಇರಬೇಕಾದ ಸೈದ್ಧಾಂತಿಕ ಬದ್ಧತೆ, ಜನಪರ ಕಾಳಜಿ ಮತ್ತು ಹೋರಾಟದ ಗುಣವನ್ನು ಕಲಿಸಿದವರು ರೈತನಾಯಕ ಎಂ.ಡಿ.ನಂಜುಂಡಸ್ವಾಮಿ

ಮೊದಲ ಬಾರಿ 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ನನ್ನನ್ನು ಗುರುತಿಸಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಲ್ಲದೆ ಎರಡನೇ ಬಾರಿ ಶಾಸಕನಾದ ನನ್ನನ್ನು ಸಚಿವನನ್ನಾಗಿ ಮಾಡಿದವರು ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ.

ಇವರೆಲ್ಲರ ನೆರವು, ಕಾಳಜಿ ಮತ್ತು ಮಾರ್ಗದರ್ಶನಗಳು ಇಲ್ಲದೆ ಹೋಗಿದ್ದರೆ ನಾನು ಇಷ್ಟು ದೂರ ಸಾಗಿ ಬರುತ್ತಿರಲಿಲ್ಲ ಮತ್ತು ಇಷ್ಟು ಎತ್ತರಕ್ಕೆ ಏರಲು ಕೂಡಾ ಆಗುತ್ತಿರಲಿಲ್ಲ ಎನ್ನುವುದನ್ನು ವಿನಮ್ರವಾಗಿ ನಿವೇದಿಸಬಯಸುತ್ತೇನೆ.

ನಾನು ದುಡ್ಡು, ಆಸ್ತಿಪಾಸ್ತಿ ಮಾಡಲು ರಾಜಕಾರಣಿ ಆದವನಲ್ಲ. ಮತದಾರ ದೇವರುಗಳು ಅಧಿಕಾರದ ಮೂಲಕ ಅವಕಾಶ ನೀಡಿದಾಗೆಲ್ಲ ಅವರ ಕಲ್ಯಾಣಕ್ಕಾಗಿ ಶ್ರಮಿಸಿದ್ದೇನೆ. ಈ ಸಂದರ್ಭದಲ್ಲಿ ನನ್ನ ಸಾಧನೆಗಳ ದಾಖಲೆಗಳನ್ನು ನಾನು ನಿಮ್ಮ ಮುಂದೆ ಇಟ್ಟ ನನ್ನನ್ನು ಸಾಬೀತುಪಡಿಸುವ ವ್ಯರ್ಥಪ್ರಯತ್ನವನ್ನು ನಾನು ಮಾಡುವುದಿಲ್ಲ. ಅವೆಲ್ಲವೂ ತೆರೆದ ಪುಸ್ತಕದ ರೀತಿಯಲ್ಲಿ ರಾಜ್ಯದ ಜನತೆಯ ಕಣ್ಣಮುಂದಿದೆ.

ಜಾತಿ, ದುಡ್ಡು ಮತ್ತು ತೋಳ್ಬಲಗಳ ನೆರವಿಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಹೆಜ್ಜೆ ಇಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು ಜನಜನಿತವಾಗಿದೆ. ಇದು ಈ ಕಾಲದ ಸತ್ಯವೂ ಹೌದು. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಭಾತೃತ್ವದಂತಹ ಸಂವಿಧಾನದ ಆಶಯಗಳಿಗೆ ಬದ್ದರಾಗಿ ರಾಜಕಾರಣ ಮಾಡುವುದು ಎಷ್ಟೊಂದು ಕಷ್ಟದ ಕೆಲಸ ಎನ್ನುವ ಅನುಭವ ನಾಲ್ಕುವರೆ ದಶಕಗಳ ರಾಜಕೀಯ ಪಯಣದಲ್ಲಿ ನನಗಾಗಿದೆ.

ನನ್ನ ರಾಜಕೀಯ ವಿರೋಧಿಗಳು ರಾಜಕಾರಣಕ್ಕಿಂತ ಬಹುದೂರ ಇದ್ದುಕೊಂಡು ಕುಟುಂಬದ ಪಾಲನೆ-ಪೋಷಣೆಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡ ನನ್ನ ಪತ್ನಿಯ ವಿರುದ್ದವೂ ಸುಳ್ಳು ಆರೋಪಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಿದ್ದರು. ಆದರೆ ಶತ್ರುಗಳ ದಾಳಿಗೆ ಹೆದರಿ ಪಲಾಯನವಾದಿಯಾಗ ಬೇಡ, ಜನಸೇವೆಯ ಪಥದಿಂದ ಹಿಂದಡಿ ಇಡಬೇಡ ಎಂದು ನನ್ನ ಅಂತಾರಾತ್ಮ ಎಚ್ಚರಿಸಿತು. ಅನ್ಯಾಯದ ವಿರುದ್ಧ ನ್ಯಾಯದ ಹೋರಾಟವನ್ನು ಮುಂದುವರಿಸಿ ಆರೋಪಿತ ಕಳಂಕವನ್ನು ನಿವಾರಿಸಿಕೊಂಡು ನಿರಾಳನಾದೆ.

ಈ ಸಂಘರ್ಷದ ಹಾದಿಯಲ್ಲಿ ನಾನೆಂದೂ ನಂಬಿದ ಮೌಲ್ಯಗಳ ಜೊತೆ ರಾಜಿಮಾಡಿಕೊಂಡಿಲ್ಲ. ನಂಬಿದ ಜನತೆಗೆ ದ್ರೋಹ ಬಗೆದಿಲ್ಲ, ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಂಡಿಲ್ಲ. ಹೋರಾಟವನ್ನೇ ಬದುಕಾಗಿಸಿ ಸ್ವೀಕರಿಸಿ ಇಷ್ಟು ದೂರ ಬಂದಿದ್ದೇನೆ.

ಇಂದಿನ ವರ್ತಮಾನ ನನ್ನನ್ನು ಎಷ್ಟು ಅರ್ಥಮಾಡಿಕೊಂಡಿದೆಯೋ ಗೊತ್ತಿಲ್ಲ, ಸಾಮಾನ್ಯವಾಗಿ ಸಾಮಾಜಿಕ ಪರಿವರ್ತನೆಯ ಹರಿಕಾರರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ. ಆದರೆ ಇತಿಹಾಸ ಮಾತ್ರ ಅವರನ್ನು ನೆನಪಲ್ಲಿಟ್ಟುಕೊಂಡು ಸ್ಮರಿಸುತ್ತದೆ. ಹನ್ನೆರಡನೇ ಶತಮಾನದ ಬಸವಣ್ಣನವರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ವರೆಗೆ ಎಲ್ಲರ ಪಾಲಿನ ಸತ್ಯ ಇದು. ಈ ಭರವಸೆಯ ಆಸರೆಯೊಂದಿಗೆ ನನ್ನ ರಾಜಕೀಯ ಹೋರಾಟವನ್ನು ಮುಂದುವರಿಸಿಕೊಂಡು ಬಂದಿದ್ದೇನೆ, ಅಧಿಕಾರ ಇರಲಿ, ಇಲ್ಲದೆ ಇರಲಿ ಈ ಹೋರಾಟ ಮುಂದುವರಿಯಲಿದೆ.

ನಾನು ರಾಜಕಾರಣಕ್ಕೆ ಪ್ರವೇಶ ಮಾಡಿದಾಗ ನುಡಿದಂತೆ ನಡೆಯಬೇಕು, ಜನತೆ ಇಟ್ಟಿರುವ ವಿಶ್ವಾಸಕ್ಕೆ ಭಂಗ ಉಂಟು ಮಾಡಬಾರದೆಂಬ ಪ್ರಮಾಣವನ್ನು ಮನಸ್ಸಿನೊಳಗೆ ಮಾಡಿದ್ದೆ. ಜನರಿಗೆ ನೀಡಿದ ವಚನಪಾಲನೆಯೇ ನಿಜವಾದ ರಾಜಧರ್ಮ ಎಂದು ನಂಬಿದವನು ನಾನು. ಅದನ್ನು ತ್ರಿಕರಣಪೂರ್ವಕವಾಗಿ ಪಾಲಿಸಿದ್ದೇನೆ ಎಂಬ ವಿಶ್ವಾಸ ನನಗಿದೆ. ನುಡಿದಂತೆಯೇ ನಡೆದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.

ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಬದುಕಿನ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು. ಬಡವ-ಬಲ್ಲಿದನೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವರಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕೃಷಿ ಸಂಪತ್ತು ಬೆಳೆಯಬೇಕು. ಉದ್ಯಮ ಕ್ಷೇತ್ರದಲ್ಲಿ ಪ್ರಗತಿಯಾಗಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಮೂಲಸೌಲಭ್ಯಗಳು ವೃದ್ಧಿಯಾಗಬೇಕು. ನೆಮ್ಮದಿಯಿಂದ ಬದುಕುವಷ್ಟು ಆದಾಯ ಪ್ರತಿ ಕುಟುಂಬದ ಪಾಲಿಗಿರಬೇಕು. ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮಾನವಾಗಿ ಎಲ್ಲರಿಗೂ ಹಂಚಿಕೆಯಾಗಬೇಕು- ಇದು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವಾಗ ನಾನು ಕಂಡ ಕನಸು.

ಆ ಕನಸು ನನಸಾಗುವ ದಾರಿಯಲ್ಲಿ ಕರ್ನಾಟಕ ಭರದಿಂದ ಮುನ್ನಡೆದಿದೆ. ಇಂದು ಕರ್ನಾಟಕವು ದೇಶದಲ್ಲಿಯೇ ತಲಾದಾಯದಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಾವು ಮೇಲಕ್ಕೇರುತ್ತಿದ್ದೇವೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಜನತೆಗೆ ಸಾಮಾಜಿಕ ಭದ್ರತೆಯನ್ನು ಒದಗಿಸಿದ್ದೇವೆ. ಹಸಿವುಮುಕ್ತ ಕರ್ನಾಟಕ ನಿರ್ಮಾಣಗೊಳ್ಳುತ್ತಿದೆ, ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ, ಆರೋಗ್ಯ ಸೇವೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಅತಿವೃಷ್ಟಿ-ಅನಾವೃಷ್ಟಿಗಳು ಎದುರಾದರೂ ಸಮರ್ಥವಾಗಿ ಎದುರಿಸಿದ್ದೇವೆ, ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನ ಮತ್ತು ಬೆಳೆದ ಬೆಳೆಗೆ ವೈಜ್ಞಾನಿಕವಾದ ಬೆಲೆ ನಿಗದಿಯಿಂದಾಗಿ ಸರ್ಕಾರದ ಬಗ್ಗೆ ರೈತರಲ್ಲಿ ಭರವಸೆ ಮೂಡಿದೆ. ನೀರಿನ ಹಕ್ಕಿನ ರಕ್ಷಣೆಗಾಗಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ಅವರಿಗೆ ಸಮಾಧಾನ ತಂದಿದೆ. ನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ರಾಜಿ ಇಲ್ಲದ ನಮ್ಮ ನಿಲುವು ಕನ್ನಡಿಗರ ಮನ ಗೆದ್ದಿದೆ.

ನಾಡಿನ ಇತಿಹಾಸದಲ್ಲಿಯೇ ಅತಿಹೆಚ್ಚು ಬಜೆಟ್‌ಗಳನ್ನು ಮಂಡಿಸುವ ಅವಕಾಶ ಲಭ್ಯವಾಗಿದ್ದರ ಬಗ್ಗೆ ನನಗೆ ತೃಪ್ತಿ ಇದೆ. ನಾನು ಮಂಡಿಸಿದ ಹದಿನೇಳು ಬಜೆಟ್‌ಗಳಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿಪರವಾದ ಯೋಜನೆಗಳಿಗೆ ಸಮಾನ ಪ್ರಾಶಸ್ತ್ಯವನ್ನು ನೀಡಿದ್ದೇನೆ.

ನಾಡು ಕಂಡ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಇತಿಹಾಸದಲ್ಲಿ ದಾಖಲಾಗುವುದಕ್ಕಿಂತ ಹೆಚ್ಚಾಗಿ ನಾಡಿನ ಅಭಿವೃದ್ಧಿಗೆ, ನಾಡಿನ ಜನತೆಯ ಏಳಿಗೆಗೆ ಕಾರಣವಾಗುವಂತಹ ಮಹತ್ವದ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿ ನಾನಾಗಬೇಕು ಎನ್ನುವ ಹಂಬಲದಿಂದ ಇಲ್ಲಿಯವರೆಗೆ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ.

ಕರ್ನಾಟಕದ ಜನತೆ, ವಿಶೇಷವಾಗಿ ನಾಡಿನ ಮೂಲೆಮೂಲೆಗಳಲ್ಲಿರುವ ದೀನದಲಿತರು, ದಮನಿತರು, ದನಿಯಿಲ್ಲದವರು, ಅಶಕ್ತರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ನನ್ನನ್ನು ತಮ್ಮ ದನಿಯಾಗಿಸಿಕೊಂಡಿದ್ದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಅವರು ನನ್ನಲ್ಲಿ ತುಂಬಿದ ಶಕ್ತಿಯಿಂದಾಗಿಯೇ ನಾನು ನಾಡಿನ ಜನತೆಯ ಸೇವೆಯನ್ನು ಇಷ್ಟು ದೀರ್ಘಕಾಲ ಮಾಡಲು ಸಾಧ್ಯವಾಗಿದೆ.

ನನ್ನನ್ನು ನಾಯಕನನ್ನಾಗಿ ಸ್ವೀಕರಿಸಿ ಬೆಂಬಲ ನೀಡಿದ ನನ್ನ ಎಲ್ಲ ಶಾಸಕ ಮಿತ್ರರಿಗೆ, ಸರ್ಕಾರದ ಯಂತ್ರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಹಕಾರ ನೀಡಿದ ಅಧಿಕಾರಿವರ್ಗಕ್ಕೆ ನಾನು ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ, ನಾನು ಚುನಾವಣಾ ರಾಜಕಾರಣದಿಂದ ದೂರ ಸರಿಯಬಹುದು, ಆದರೆ ರಾಜಕೀಯ ಕ್ಷೇತ್ರದಲ್ಲಿರುತ್ತೇನೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇಲ್ಲವೆ ಪಕ್ಷ ನೀಡುವ ಕರೆಗೆ ಓಗೊಟ್ಟು ಸಹಕಾರ ನೀಡುತ್ತೇನೆ.. ಮತ್ತೊಮ್ಮೆ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬೆಂಗಳೂರು ಜಲಸಂಚಾರಕ್ಕೆ ಹೊಸ ವೇಗ: ಬಿನ್ನಿಗಾನಹಳ್ಳಿ-ಬೈಯಪ್ಪನಹಳ್ಳಿ ನಡುವೆ 65 ಕಿ.ಮೀ. ನೀರು ಮಾರ್ಗ!

Published

on

ಮಳೆಗಾಲದ ನೀರು ನಿರ್ವಹಣೆಗೆ ಮಹತ್ವದ ಯೋಜನೆ; ರೈಲು ಸಂಚಾರಕ್ಕೂ ಹೊಸ ಸುರಕ್ಷತಾ ಕ್ರಮ

ಸುದ್ದಿದಿನ,ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲಾ ಎದುರಾಗುವ ನೀರು ನಿಲ್ಲುವಿಕೆ ಹಾಗೂ ಪ್ರವಾಹದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾಂತ್ರಿಕ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ ಬಿನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ನೀರಿನ ಹರಿವನ್ನು ನಿಯಂತ್ರಿಸುವ ವಿಶೇಷ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಸುಮಾರು 65 ಕಿ.ಮೀ. ಉದ್ದದ ನೀರಿನ ಮಾರ್ಗ ನಿರ್ಮಿಸುವ ಚಿಂತನೆ ನಡೆದಿದೆ.

ನಗರದಲ್ಲಿ ಮಳೆ ಸುರಿದಾಗ ರಸ್ತೆಗಳು ಜಲಾವೃತವಾಗುವುದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೀರಿನ ಹರಿವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಪ್ರಮುಖ ಗುರಿಯಾಗಿದೆ.

http://Visit : www.suddidina.com

ಮೆಟ್ರೋ ಮಾರ್ಗದ ಸಮೀಪ ವಿಶೇಷ ವ್ಯವಸ್ಥೆ

ಬಿನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ಮಧ್ಯದಲ್ಲಿರುವ ಓಲ್ಡ್‌ ಮದ್ರಾಸ್‌ ಗರ್ದನ್‌ಸೇತುವೆಯಲ್ಲಿ ಪ್ರಸಕ್ತ ನೀರು ಹರಿವಿಗೆ ಸಂಬಂಧಿಸಿದ ನಿಯಂತ್ರಣ ಕಾಮಗಾರಿ ನಡೆಯುತ್ತಿದೆ. ತಾಂತ್ರಿಕ ತಂಡದ ಪರಿಶೀಲನೆ ಬಳಿಕ ಗರ್ದನ್‌ಸೇತುವೆ ಸುರಕ್ಷತಾ ತಪಾಸಣೆ ನಡೆಸಲಾಗಿದ್ದು, ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸುವುದರಿಂದ ಜಲಾವೃತ ಸಮಸ್ಯೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ನಿಂತು ಉಂಟಾಗುವ ಸಮಸ್ಯೆಗಳಿಗೆ ಇದು ಪ್ರಮುಖ ಪರಿಹಾರ ಕ್ರಮವಾಗಬಹುದು.

ರೈಲು ಸಂಚಾರಕ್ಕೂ ಸುರಕ್ಷತೆ

ರೈಲು ಸುರಕ್ಷತಾ ನಿಯಮಗಳ ಪ್ರಕಾರ ತಾಂತ್ರಿಕ ಮೇಲ್ವಿಚಾರಣೆ ನಡೆಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಿರಂತರ ಮಳೆ ಸುರಿದ ಸಂದರ್ಭದಲ್ಲೂ ರೈಲು ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಲಾಗಿದೆ.

ರೈಲು ಸಂಪರ್ಕ ಇರುವ ಪ್ರದೇಶಗಳಲ್ಲಿ ನೀರು ಸಂಗ್ರಹವಾಗುವುದರಿಂದ ಹಳಿಗಳ ಸುರಕ್ಷತೆ ಹಾಗೂ ರೈಲು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ನೀರು ಹರಿವಿನ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ರೈಲು ಮೂಲಸೌಕರ್ಯದ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸಲಾಗುತ್ತಿದೆ.

ಮುಂದಿನ ಹಂತದಲ್ಲಿ ದೊಡ್ಡ ಯೋಜನೆ

ಈ ನೀರಿನ ನಿರ್ವಹಣಾ ಕಾಮಗಾರಿಯ ಆಚ್ಚೋಬಲದಂದೇ ವಾರದೊಳಗೆ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಕಾಮಗಾರಿ ಮುಗಿದ ಬಳಿಕ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ. ಮುಂದಿನ ಹಂತದಲ್ಲಿ ಮಳೆ ನೀರು ಸಂಗ್ರಹಣೆ ಹಾಗೂ ನೀರಿನ ಹರಿವಿನ ನಿರ್ವಹಣೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಗಳೂ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ನಗರದ ವೇಗದ ಬೆಳವಣಿಗೆಗೆ ತಕ್ಕಂತೆ ಮೂಲಸೌಕರ್ಯ ವಿಸ್ತರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಳೆ ನೀರು ನಿರ್ವಹಣೆ ಬೆಂಗಳೂರಿಗೆ ಅತ್ಯಂತ ಅಗತ್ಯವಾಗಿದೆ. 65 ಕಿ.ಮೀ. ನೀರು ಮಾರ್ಗದ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾದರೆ, ಮಳೆಗಾಲದ ಜಲಾವೃತ ಸಮಸ್ಯೆ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯಾಗಲಿದೆ.

Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್‌-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!

Published

on

kalaburagi-municipal-corporation-mayor-deputy-mayor-election-congress-win
ಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್‌-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!

ಸುದ್ದಿದಿನ,ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 35 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದು, ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿದ್ದಾರೆ. ಬಿಜೆಪಿಯ ಅಭ್ಯರ್ಥಿಗಳು 29 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಈ ಫಲಿತಾಂಶದೊಂದಿಗೆ ಕಲಬುರಗಿ ಮಹಾನಗರ ಪಾಲಿಕೆಯ ರಾಜಕೀಯದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ.

ಮೇಯರ್ ಸ್ಥಾನಕ್ಕೆ ಅಜಿಲ್ ಅಹಮದ್ ಗೋಲಾ

ಈ ಚುನಾವಣೆಯಲ್ಲಿ 21ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಅಜಿಲ್ ಅಹಮದ್ ಗೋಲಾ ಅವರು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಮತದಾನದ ಬಳಿಕ ಕಾಂಗ್ರೆಸ್ ಅಭ್ಯರ್ಥಿಗೆ ಬಹುಮತ ದೊರೆತಿದ್ದು, ಅವರು ಮೇಯರ್ ಸ್ಥಾನವನ್ನು ಅಲಂಕರಿಸಿದ್ದಾರೆ.

ಪಾಲಿಕೆಯ ಮುಂದಿನ ಆಡಳಿತದಲ್ಲಿ ಮೇಯರ್ ಸ್ಥಾನ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಅಜಿಲ್ ಅಹಮದ್ ಗೋಲಾ ಅವರ ಆಯ್ಕೆ ಇದೀಗ ಗಮನ ಸೆಳೆದಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ 35 ಮತಗಳು ದೊರೆತಿರುವುದು ಚುನಾವಣೆಯಲ್ಲಿ ಪಕ್ಷದ ಬಲವನ್ನು ತೋರಿಸಿದೆ.

ಉಪ ಮೇಯರ್ ಸ್ಥಾನವೂ ಕಾಂಗ್ರೆಸ್ ಪಾಲು

20ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಫಹಾನಾ ಖಮ್ರೋ ಜಗೀರ್ದಾರ್ ಅವರು ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊರೆತ ಬಹುಮತದ ಹಿನ್ನೆಲೆಯಲ್ಲಿ ಫಹಾನಾ ಖಮ್ರೋ ಜಗೀರ್ದಾರ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮೇಯರ್ ಹಾಗೂ ಉಪ ಮೇಯರ್ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿರುವುದರಿಂದ ಪಾಲಿಕೆಯ ಆಡಳಿತದ ಮೇಲೆ ಪಕ್ಷದ ಹಿಡಿತ ಮತ್ತಷ್ಟು ಬಲಗೊಂಡಿದೆ.

ಆಗಸ್ಟ್ 7ರಿಂದ ಆಗಸ್ಟ್ 29ಕ್ಕೆ ಮುಂದೂಡಿಕೆ

ಆರಂಭದಲ್ಲಿ ಈ ಚುನಾವಣೆ ಆಗಸ್ಟ್ 7ರಂದು ನಡೆಯಬೇಕಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಚುನಾವಣೆ ಮುಂದೂಡಲ್ಪಟ್ಟಿತ್ತು. ಬಳಿಕ ಪ್ರಾದೇಶಿಕ ಆಯುಕ್ತರ ಆದೇಶದ ನಂತರ ಪರಿಷ್ಕೃತ ದಿನಾಂಕ ನಿಗದಿಪಡಿಸಿ ಆಗಸ್ಟ್ 29ರಂದು ಚುನಾವಣೆ ನಡೆಸಲಾಯಿತು.

ಅದರಂತೆ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಒಟ್ಟು ಮತಗಳ ಲೆಕ್ಕಾಚಾರದಲ್ಲಿ ಕಾಂಗ್ರೆಸ್ 35 ಮತಗಳನ್ನು ಪಡೆದರೆ, ಬಿಜೆಪಿ 29 ಮತಗಳಿಗೆ ಸೀಮಿತವಾಯಿತು.

ಈ ಮೂಲಕ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಆಡಳಿತದ ಚುಕ್ಕಾಣಿ ಮತ್ತೊಮ್ಮೆ ಕಾಂಗ್ರೆಸ್ ಕೈಗೆ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಪಾಲಿಕೆಯ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ಹೊಸ ಮೇಯರ್ ಮತ್ತು ಉಪ ಮೇಯರ್ ಅವರ ಕಾರ್ಯವೈಖರಿ ಹೇಗಿರಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

Continue Reading

Trending