ರಾಜಕೀಯ
ರಾಜಕೀಯ ವಿವಾದೋದ್ಯಮ: ಪ್ರತಿರೋಧದ ಹಾದಿ
ಏರ್ಪಡುವ ಘಟನಾವಳಿಗಳು ಮತ್ತು ಅಭಿವ್ಯಕ್ತ ವಿಚಾರಗಳು ವಿವಾದದ ಸ್ವರೂಪ ಪಡೆದು ಪ್ರಚಲಿತ ವಿದ್ಯಮಾನಗಳ ಆವರಣ ಕಲುಷಿತಗೊಂಡಿರುವ ಸಂದರ್ಭ ಈಗಿನದು. ಒಬ್ಬೊಬ್ಬರು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದಕ್ಕೆ ವಿವಾದಗಳನ್ನು ಬಳಸಿಕೊಳ್ಳುವುದರ ಕಡೆಗೇ ಗಮನ ಹರಿಸುತ್ತಿದ್ದಾರೆ. ಈ ಬಗೆಯ ಹಿತಾಸಕ್ತಿ ರಕ್ಷಣೆಯ ಸ್ವಾರ್ಥಪರ ನಡೆಗಳನ್ನು ರಾಷ್ಟ್ರ ರಾಜಕಾರಣ ಅತ್ಯಂತ ಚಾಣಾಕ್ಷಯುತವಾಗಿ ಪೋಷಿಸುತ್ತಿದೆ. ಪ್ರಾದೇಶಿಕ ವೈವಿಧ್ಯತೆ ಮತ್ತು ಸಾಂಸ್ಕøತಿಕ ಪರಂಪರೆಯ ಉದಾತ್ತತೆಯನ್ನು ಒಡೆದು ಆಕ್ರಾಮಕವೆನ್ನಿಸುವ ಸಮೂಹ ವರ್ತನಾ ಧಾಟಿಯನ್ನು ನಿರ್ದೇಶಿಸುತ್ತಿದೆ. ತನ್ನೊಳಗಿನ ಸಂಕುಚಿತತೆಯನ್ನು ಸಾಮಾಜಿಕವಾಗಿಸಿ ಜನಸಮೂಹದೊಳಗೆ ಬೆರೆಸಿಬಿಡುವ ಅದರ ಕಾರ್ಯಸೂಚಿ ಈಗಾಗಲೇ ಅಭೂತಪೂರ್ವ ಯಶಸ್ಸು ಪಡೆದಿದೆ. ಮತ್ತೆ ಮತ್ತೆ ಯಶಸ್ಸು ಪಡೆಯುವುದರ ಗಮ್ಯದ ಕಡೆಗೇ ಚಲಿಸುತ್ತಲೇ ಇದೆ. ಇದನ್ನು ದೃಢೀಕರಿಸುವಂತೆ ಜನವರ್ಗವು ಅಧಿಕಾರದಲ್ಲಿರುವವರನ್ನು ಆರಾಧಿಸುತ್ತಾ ತಮ್ಮ ಪ್ರಜ್ಞೆಯನ್ನು ಆಳ್ವಿಕೆಯ ಪಾದಕ್ಕರ್ಪಿಸಿಬಿಟ್ಟಿದೆ.
ದೇಶವೊಂದರ ರಾಜಕಾರಣವು ಜನಸಮೂಹವನ್ನು ಸರಿದಾರಿಯಲ್ಲಿರುವಂತೆ ನೋಡಿಕೊಳ್ಳುವ ನಾಯಕತ್ವವನ್ನು ಪೋಷಿಸಬೇಕು. ಹಾಗೆ ಪೋಷಿಸುತ್ತಲೇ ರಾಜಕೀಯಕ್ಕೆ ಉದಾತ್ತ ತಾತ್ವಿಕತೆಯ ಗುಣಲಕ್ಷಣದ ಸಂಸ್ಕಾರವನ್ನು ಒದಗಿಸಬೇಕು. ಆಡಳಿತಾರೂಢ ಸರ್ಕಾರವನ್ನು ಪ್ರತಿನಿಧಿಸುವ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಸಂವಾದಾತ್ಮಕ ನಂಟು ಜನರ ಪ್ರಜ್ಞೆಯನ್ನು ಎತ್ತರಿಸುವ ರೀತಿಯಲ್ಲಿ ರೂಪುಗೊಳ್ಳುತ್ತಿರಬೇಕು. ಈ ನಂಟು ಅಪವಿತ್ರವಾಗಿರದೇ ದೇಶದ ಬೆಳವಣಿಗೆಯ ಹೆಜ್ಜೆಗಳನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ನೆರವಾಗುವಂತಿರಬೇಕು. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಾರ್ಕಿಕ ಪರಿಹಾರ ಕಂಡುಕೊಳ್ಳುವ ಉತ್ಸಾಹದೊಂದಿಗೆ ಮುಂದಡಿಯಿಡಬೇಕು. ಸಮಸ್ಯೆಗಳನ್ನು ಜೀವಂತವಾಗಿಟ್ಟು ಅವುಗಳ ಆಧಾರದಲ್ಲಿ ಅಧಿಕಾರದ ಬೆಳೆ ತೆಗೆಯುವ ಅಪೇಕ್ಷೆಗಳು ವಿವಾದಗಳನ್ನು ಸೃಷ್ಟಿಸುವುದಕ್ಕಷ್ಟೇ ಬಳಕೆಯಾಗುತ್ತವೆ. ದೇಶಕ್ಕೆ ಪ್ರಯೋಜನವಾಗುವುದಿಲ್ಲ. ಜನರ ಒಳಿತಿನ ದೃಷ್ಟಿಯಿಂದಲೂ ಅವು ಅಪಾಯಕಾರಿ. ಈ ಹಂತದಲ್ಲಿಯೇ ಅವು ವಾಣಿಜ್ಯಿಕ ಹಿತಾಸಕ್ತಿಗಳನ್ನು ಪೋಷಿಸುವಂಥ ಉದ್ಯಮಗಳ ನಿರೀಕ್ಷೆಗಳನ್ನು ಈಡೇರಿಸುವ ಮೂಲಗಳಾಗುತ್ತವೆ. ರಾಜಕಾರಣವನ್ನು ವಿವಾದೋದ್ಯಮವಾಗಿಸುತ್ತವೆ. ಸದ್ಯದ ವಿದ್ಯಮಾನಗಳು ಈ ವಿಲಕ್ಷಣತೆಯನ್ನು ದೃಢೀಕರಿಸುತ್ತಿವೆ.
ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಆಡಳಿತಾರೂಢ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡೆಗಳನ್ನು ನಿದರ್ಶನಗಳನ್ನಾಗಿ ಚರ್ಚಿಸಬಹುದು. ಭಾರತದಲ್ಲಿ ಕಾಂಗ್ರೆಸ್, ಭಾರತೀಯ ಜನತಾ ಪಕ್ಷ ಎಂಬ ಎರಡು ರಾಷ್ಟ್ರೀಯ ಪಕ್ಷಗಳಿವೆ. ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಸ್ತಿತ್ವದಲ್ಲಿವೆ. ಇತ್ತೀಚಿಗಿನ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ವ್ಯಾಪಕವಾಗಿ ಸಮ್ಮಿಶ್ರ ಸರ್ಕಾರದ ಪ್ರಯೋಗಗಳು ಮುಂಚೂಣಿಗೆ ಬಂದಿವೆ. ಮೈತ್ರಿ ಸರ್ಕಾರದ ಹೆಜ್ಜೆಗಳ ನಡಿಗೆಯ ದ್ವಂದ್ವಗಳೂ ಅರಿವಿಗೆ ಬಂದಿವೆ. ರಾಷ್ಟ್ರೀಯ ಪಕ್ಷಗಳೆರಡೂ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವ ತಮ್ಮೊಳಗಿನ ಹಂಬಲಗಳನ್ನು ಹತ್ತಿಕ್ಕಿಕೊಂಡು ಅವುಗಳ ನೆರವಿನ ಹಸ್ತವನ್ನು ಜೊತೆಗಿಟ್ಟುಕೊಂಡೇ ಮುನ್ನಡೆಯಬೇಕಾದ ಅನಿವಾರ್ಯತೆಯನ್ನು ಮನಗಂಡಿವೆ. ಇದರ ಮಧ್ಯೆಯೇ ಭಾರತೀಯ ಜನತಾಪಕ್ಷವು ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಪಡೆದು ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರವೂ ಮಿತ್ರಪಕ್ಷಗಳನ್ನು ಜೊತೆಗಿರಿಸಿಕೊಂಡು ಎನ್‍ಡಿಎ (ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್) ಬಂಧವನ್ನು ಚಾಲ್ತಿಯಲ್ಲಿರಿಸಿಕೊಂಡಿದೆ. ಕಾಂಗ್ರೆಸ್ ಕೂಡಾ ಯುಪಿಎ (ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್) ಎಂಬ ಮೈತ್ರಿಕೂಟವನ್ನು ನೆಚ್ಚಿಕೊಂಡು ಚುನಾವಣಾ ಅಖಾಡಕ್ಕಿಳಿಯುತ್ತಿದೆ. ಇದೀಗ ಎಲ್ಲ ಪಕ್ಷಗಳೂ ಒಗ್ಗೂಡಿ ತೃತೀಯ ಶಕ್ತಿಯನ್ನು ರೂಪಿಸಿ ಎನ್.ಡಿ.ಎಯನ್ನು ಮಣಿಸುವ ಪ್ರಯತ್ನಗಳಲ್ಲಿ ನಿರತವಾಗಿವೆ.
ರಾಷ್ಟ್ರೀಯ ಪಕ್ಷಗಳನ್ನು ಅಲ್ಲಗಳೆದು ಅಸ್ತಿತ್ವಕ್ಕೆ ಬಂದ ಪ್ರಾದೇಶಿಕ ಪಕ್ಷಗಳು ಭಿನ್ನ ಹಾದಿಯನ್ನೇನೂ ತುಳಿಯಲಿಲ್ಲ. ಹಿಂದಿನ ರಾಜಕಾರಣದ ಸಾಂಪ್ರದಾಯಿಕ ಸಂಕುಚಿತತೆಯನ್ನೇ ಮತ್ತಷ್ಟು ವಿಸ್ತರಿಸಿದವು. ಅವುಗಳ ಹೆಸರುಗಳು ಉದಾತ್ತತೆಯ ಅರ್ಥವನ್ನು ಧ್ವನಿಸಿದರೂ ಮಾಡಿದ್ದೆಲ್ಲವೂ ಸಂಕುಚಿತ ರಾಜಕಾರಣ. ರಾಜ್ಯಗಳ ನಡುವಿನ ಸೌಹಾರ್ದದ ಬಂಧವನ್ನು ಒಡೆಯುವ ಹಾಗೆ ಭಾಷಿಕ ಮೂಲಭೂತವಾದಿತ್ವವನ್ನೇ ಬಂಡವಾಳವಾಗಿಸಿಕೊಂಡು ಮತಬೆಳೆ ದಕ್ಕಿಸಿಕೊಳ್ಳುವ ಪ್ರಯತ್ನಗಳಲ್ಲಿಯೇ ತಲ್ಲೀನವಾದವು. ಜಲವಿವಾದಗಳು ಈ ನೆಲೆಯಲ್ಲಿಯೇ ಹುಟ್ಟಿಕೊಂಡವು. ಬೇರೊಂದು ದೇಶದ ವಿರುದ್ಧದ ಯುದ್ಧಸನ್ನದ್ಧ ಮನಸ್ಥಿತಿ ರಾಷ್ಟ್ರರಾಜಕಾರಣದ ವಿಲಕ್ಷಣ ಗುಣವಾಗುವುದಕ್ಕೆ ಧಾರ್ಮಿಕ ಕೇಂದ್ರಿತ ಸಂಕುಚಿತತೆಯೇ ಕಾರಣ.
ತಮಿಳುನಾಡಿನಲ್ಲಿ ಜನಪ್ರಿಯತೆ ಗಳಿಸಿದ ನಟ-ನಟಿಯರು ತಮ್ಮ ಪ್ರಭಾವವನ್ನು ಅಧಿಕಾರಕೇಂದ್ರಿತ ದೃಷ್ಟಿಕೋನಕ್ಕಾಗಿ ಬಳಸಿಕೊಂಡರು. ಜನಪ್ರಿಯತೆಯ ಸರಕು ಕುಸಿಯುವ ಭೀತಿಯಲ್ಲಿ ವಿವಾದದ ವಿಷ ಹರಡುವ ಕೃಷಿಯಲ್ಲಿ ಖುಷಿ ಕಂಡರು. ಮಹಾರಾಷ್ಟ್ರದ ಪ್ರಾದೇಶಿಕ ರಾಜಕಾರಣವಂತೂ ಅಧಾರ್ಮಿಕ ಮದೋನ್ಮತ್ತ ಭಾವನೆಗಳು ಮತ್ತು ಭಾಷಿಕ ಅಂಧಾಭಿಮಾನದ ವರ್ತುಲದಲ್ಲಿ ಸಿಲುಕಿಕೊಂಡು ಅದೇ ಪರಮ ಮಾದರಿ ಎನ್ನುವಂತೆ ವೈಭವೀಕರಿಸಲ್ಪಟ್ಟಿತು. ಬಿಹಾರದಲ್ಲಂತೂ ಪರ್ಯಾಯ ಪ್ರಾದೇಶಿಕ ಪಕ್ಷದ ಅಸ್ತಿತ್ವ ಜನರ ಉದ್ಧಾರಕ್ಕೆ ಬಳಕೆಯಾಗುವ ಬದಲು ಪ್ರಭಾವೀ ನಾಯಕರೆನ್ನಿಸಿಕೊಂಡವರ ಸಮೃದ್ಧಿಗೆ ಪೂರಕ ವೇದಿಕೆಯನ್ನು ರೂಪಿಸಿಕೊಟ್ಟಿತು. ಆಂಧ್ರದ ಅಸ್ಮಿತೆಯ ಹೆಮ್ಮೆಯ ಭಾವಾವೇಶ ಅಲ್ಲಿಯ ಪ್ರಾದೇಶಿಕ ಪಕ್ಷಗಳು ಚಿಗುರೊಡೆದು ಅಧಿಕಾರ ಹಿಡಿಯುವುದಕ್ಕೆ ನೆರವಾಯಿತು. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲೂ ಪ್ರಬಲ ತಾತ್ವಿಕತೆಯೊಂದಿಗಿನ ಪರ್ಯಾಯ ಪ್ರಾದೇಶಿಕ ರಾಜಕಾರಣ ರೂಪುಗೊಳ್ಳಲೇ ಇಲ್ಲ. ಮೇಲ್ನೋಟದಲ್ಲಿ ರೂಪುಗೊಂಡಿವೆ ಎಂಬ ಭಾವವನ್ನು ಮೂಡಿಸಿದ ಪಕ್ಷಗಳು ಮತ್ತೆ ರಾಷ್ಟ್ರೀಯ ಪಕ್ಷಗಳ ಆಲದ ಮರಗಳ ನೆರಳನ್ನೇ ನೆಚ್ಚಿಕೊಂಡುಬಿಟ್ಟವು.
ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅತ್ಯಂತ ಎಚ್ಚರದ ರಕ್ಷಣಾತ್ಮಕ ತಂತ್ರಗಾರಿಕೆಯನ್ನೇ ( Defense Mechanism) ನೆಚ್ಚಿಕೊಂಡು ತಮ್ಮೊಳಗಿನ ಅಧಿಕಾರದಾಹವನ್ನು ಕಾಯ್ದುಕೊಳ್ಳುವಂಥ ರಾಜಿಸ್ವಭಾವಕ್ಕೇ ಪಕ್ಕಾದವು. ಒಂದು ನಿರ್ದಿಷ್ಟ ಉದಾತ್ತ ಸೈದ್ಧಾಂತಿಕ ಆದರ್ಶವಾದಿ ಮಾದರಿಯನ್ನು ಸ್ಥಾಪಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳು ಆಲೋಚಿಸಲೇ ಇಲ್ಲ. ಇಬ್ಬರು ಬ್ಯಾಟ್ಸ್‍ಮನ್ ಅತ್ತ ಔಟ್ ಆಗದೆಯೇ, ಇತ್ತ ರನ್‍ಗಳನ್ನೂ ಗಳಿಸದೇ ಉಳಿದು ಇಡೀ ತಂಡಸ್ಫೂರ್ತಿಯನ್ನು ಅಂತ್ಯಗೊಳಿಸುವ ಹಾಗೆ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಅತ್ತ ನಿಜದ ಮೌಲಿಕ ರಾಜಕಾರಣವನ್ನೂ ಮಾಡದೇ, ಇತ್ತ ಪರ್ಯಾಯ ರಾಜಕಾರಣದ ವಿನೂತನ ಮಾದರಿಗಳನ್ನೂ ಹುಟ್ಟುಹಾಕದೇ ಮುಂದಡಿಯಿಟ್ಟವು. ಅವು ಭೌತಿಕವಾಗಿ ಜೀವಂತ. ಅಂತಃಸತ್ವದ ದೃಷ್ಟಿಯಿಂದ ಅವು ದುರ್ಬಲ. ಕಾರ್ಯಾನುಷ್ಠಾನದ ನೆಲೆಯಲ್ಲಿ ಅವುಗಳದ್ದು ಶೂನ್ಯಸಂಪಾದನೆ. ರಾಷ್ಟ್ರೀಯ ಪಕ್ಷಗಳಿಗೂ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಈ ಆಯಾಮದಲ್ಲಿಯೇ ಸಾಮ್ಯತೆಗಳನ್ನು ಗುರುತಿಸಬಹುದು.
ಭಾರತದಂಥ ವೈವಿಧ್ಯತೆಯ ರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳು ಜನರ ನಾಡಿಮಿಡಿತವನ್ನು ಗ್ರಹಿಸಿಕೊಳ್ಳುವುದು ಅತ್ಯಂತ ಸವಾಲಿನ ಕ್ರಿಯೆ. ನಂಬಿಕೆಯ ಜಗತ್ತು ಒಂದು ಕಡೆ. ಅದೇ ನಂಬಿಕೆಯ ಬಲದಲ್ಲಿ ಮೌಢ್ಯ ಬಿತ್ತುವ ಹುನ್ನಾರಿಗಳೊಂದಿಗಿನ ಪ್ರಬಲ ಸಾಮಾಜಿಕ ವ್ಯವಸ್ಥೆ ಮತ್ತೊಂದು ಕಡೆ. ಇವೆರಡರ ನಡುವೆ ಪಕ್ಷಗಳು ಮತ್ತು ನಾಯಕರು ತಮ್ಮನ್ನು ಪ್ರತಿಷ್ಠಾಪಿಸಿಕೊಳ್ಳುವ ಅನಿವಾರ್ಯತೆಯ ಬಿಕ್ಕಟ್ಟು. ಈ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ವಿಫಲವಾಗಿದ್ದೇ ಸದ್ಯದ ಎಲ್ಲ ವಿಕೃತಿಗಳಿಗೆ ಕಾರಣ. ಶೈಕ್ಷಣಿಕ ಅರ್ಹತೆಗಳ ನೆರವಿನೊಂದಿಗೆ ಪ್ರತಿಯೊಬ್ಬ ಪ್ರಜೆಗಳ ವ್ಯಕ್ತಿಗತ ಸಾಮಥ್ರ್ಯವನ್ನು ವಿವೇಚನಾತ್ಮಕ ಬೌದ್ಧಿಕತೆಗೆ ತಿರುಗಿಸುವ ದಾರ್ಶನಿಕ ಹೊಣೆಗಾರಿಕೆ ನಿಭಾಯಿಸಬೇಕಿದ್ದ ನಾಯಕತ್ವವು ಸಮಾಜದ ಸಾಂಪ್ರದಾಯಿಕ ಜಾಡ್ಯಗಳ ಕೈಗೊಂಬೆಯಾಗಿದ್ದರಿಂದ ಪಕ್ಷಗಳ ಬಹುಮುಖೀ ಶಕ್ತಿ ಸಾಬೀತಾಗಲೇ ಇಲ್ಲ. ಸದ್ಯದ ಸ್ಥಿತಿ ಹೇಗಿದೆ ಎಂದರೆ ಅಧಿಕಾರದಲ್ಲಿರುವವರನ್ನು ಕೆಳಗಿಳಿಸಲು ಸಾಮಾಜಿಕ ಸಂಘರ್ಷಗಳನ್ನೇ ಪ್ರಬಲ ಅಸ್ತ್ರಗಳನ್ನಾಗಿಸಿಕೊಳ್ಳುವ ಪಕ್ಷಗಳ ರಹಸ್ಯ ಕಾರ್ಯಸೂಚಿ ನಡೆಗಳೇ ನಿರ್ಣಾಯಕವಾಗಿವೆ. ಇವುಗಳನ್ನೇ ಪರಿಹಾರೋಪಾಯ ಎಂದುಕೊಳ್ಳಬೇಕೇ, ಅಥವಾ ತಿರಸ್ಕರಿಸಬೇಕೇ ಎಂಬ ದ್ವಂದ್ವಗಳಲ್ಲಿ ಜನರು ಸಿಲುಕಿದ್ದಾರೆ.ಪ್ರತಿರೋಧವನ್ನೊಡ್ಡಿದವರ ತೇಜೋವಧೆಗೈದು ಕಾನೂನು ಬಲಪ್ರಯೋಗದೊಂದಿಗೆ ಧ್ವನಿ ಹತ್ತಿಕ್ಕುವ ಆಡಳಿತಾತ್ಮಕ ವರ್ತನೆಗಳು ಪ್ರಜಾಪ್ರಭುತ್ವದ ಸಾಧ್ಯತೆಗಳನ್ನೇ ಮೊಟಕುಗೊಳಿಸುತ್ತಿವೆ. ಈ ಹಂತದಲ್ಲಿ ಜನರೊಳಗಿಂದಲೇ ಸಕಾರಾತ್ಮಕ ಧ್ವನಿ ಹೊಮ್ಮಬೇಕಾಗುತ್ತದೆ. ಇದಕ್ಕೂ ಮುನ್ನ ಜನರಿಗೆ ಕೆಲವು ಸತ್ಯಗಳು ಗೊತ್ತಾಗಬೇಕು. ಗೊತ್ತಾಗುವಂತೆ ಪ್ರಾಜ್ಞವಲಯ ಹಿಂದೆಂದಿಗಿಂತಲೂ ಹೆಚ್ಚಿನ ಶ್ರದ್ಧೆಯೊಂದಿಗೆ ಶ್ರಮಿಸಬೇಕು. ವಿವಿಧ ಪಕ್ಷಗಳ ನಾಯಕರು ಅಧಿಕಾರದಲ್ಲಿರಲಿ, ಇಲ್ಲದಿರಲಿ, ತಮ್ಮದೇ ಆದ ಪ್ರಭಾವಳಿಯೊಂದಿಗೆ ಅಸ್ತಿತ್ವವನ್ನು ಕಾಯ್ದುಕೊಂಡಿರುತ್ತಾರೆ. ಭ್ರಷ್ಟಾಚಾರ ಮತ್ತಿತರ ಅಕ್ರಮದ ಹಾದಿಯಲ್ಲಿ ಸಮಾನಮಸ್ಕರಾಗಿರುತ್ತಾರೆ. ಸಂಘರ್ಷಗಳಿಗೆ ಜನರನ್ನೇ ದಾಳಗಳನ್ನಾಗಿಸುತ್ತಾರೆ. ಪರಸ್ಪರ ಕೆಸೆರೆರಚಾಟದೊಂದಿಗೆ ಧರ್ಮಾಂಧ ನಡೆಗಳೊಂದಿಗೆ ಗುರುತಿಸಿಕೊಳ್ಳುವ ಜಾಯಮಾನವನ್ನೇ ಶಾಶ್ವತ ಗುಣಲಕ್ಷಣವಾಗಿಸಿಕೊಳ್ಳುವ ಹಾದಿಹಿಡಿದಿರುತ್ತಾರೆ. ಒಂದು ಪಕ್ಷದವರು ಅಧಿಕಾರದಲ್ಲಿದ್ದಾಗ ಮತ್ತೊಬ್ಬರು ತಾರ್ಕಿಕ ಆಂದೋಲನವನ್ನು ಕಟ್ಟುವ ಬದಲು ಸಂಕುಚಿತತೆಯೊಂದಿಗಿನ ವಿತಂಡವಾದಿ ಹೇಳಿಕೆಗಳು ಮತ್ತು ಸಮಾಜವನ್ನು ಯಥಾಸ್ಥಿತಿಯಲ್ಲಿಡುವಂಥ ಹುನ್ನಾರದ ಹೆಜ್ಜೆಗಳೊಂದಿಗೆ ಗುರುತಿಸಿಕೊಂಡು ಯಾಂತ್ರಿಕ ವಿರೋಧದ ನಾಟಕವಾಡುತ್ತಾರೆ.
ಹಾಗೆ ನಾಟಕವಾಡುತ್ತ ಜನರಿಗೆ ಹತ್ತಿರ ಎಂದು ಬಿಂಬಿಸಿಕೊಳ್ಳುತ್ತಾ ಮುಂದೊಂದು ದಿನ ಅಧಿಕಾರಕ್ಕೆ ಬಂದು ಅವರೂ ಹಿಂದಿನವರಂತೆಯೇ ನಿರ್ಲಕ್ಷ್ಯ ಧೋರಣೆಗಳೊಂದಿಗೇ ಮುಂದಡಿಯಿಟ್ಟು ಇಡೀ ಸಮಾಜವನ್ನು ಸ್ಥಗಿತತೆಯ ಅಪಾಯಕ್ಕೆ ಸಿಲುಕಿಸಿಬಿಡುತ್ತಾರೆ. ಜನರು ಅವರ ಈ ನಡೆಗಳನ್ನು ಪ್ರಶ್ನಿಸುವಂತಾಗಬೇಕು. “ನೀವು ವಿತಂಡವಾದಿ ಸಂಕುಚಿತತೆಯೊಂದಿಗೆ ಇರಬೇಡಿ. ಸಂಘರ್ಷದ ಮಾತುಗಳನ್ನಾಡಬೇಡಿ. ಒಂದಾಗಿರುವ ನಮ್ಮ ನಡುವೆ ಗೋಡೆಗಳನ್ನು ಕಟ್ಟಬೇಡಿ. ಆ ಗೋಡೆಗಳ ಮೇಲೆ ರಾಜಕಾರಣದ ಅಟ್ಟಹಾಸ ಮೆರೆಯಬೇಡಿ.
ಧರ್ಮ, ಜಾತಿ ನೆಲೆಗಳಲ್ಲಿ ಅಮಾನವೀಯಗೊಳ್ಳುವ ವ್ಯಕ್ತಿಗತ ಮನಸ್ಥಿತಿಯನ್ನು ತಪ್ಪಿಸಿ ಮನುಷ್ಯತ್ವದ ಗಮ್ಯದ ಕಡೆಗೆ ಸಾಮಾಜಿಕ ಚಲನೆ ಇರುವಂತೆ ನೋಡಿಕೊಳ್ಳಿ. ಈ ದೇಶದಲ್ಲಿ ಮನುಷ್ಯಪರ ಮತ್ತು ಜೀವಪರ ಬೆಳವಣಿಗೆಯ ಹೆಜ್ಜೆಗಳನ್ನು ಪೋಷಿಸುವುದರ ಕಡೆಗೆ ಗಮನಹರಿಸಿ. ಸುಳ್ಳುಗಳನ್ನು ಹೇಳಿ ನಮ್ಮನ್ನು ಯಾಮಾರಿಸುವುದನ್ನು ನಿಲ್ಲಿಸಿ. ಮಾಧ್ಯಮಗಳನ್ನು ಸಾಕಿಕೊಂಡು ಅವುಗಳ ಮೂಲಕ ನಮ್ಮನ್ನು ದಾರಿತಪ್ಪಿಸಬೇಡಿ. ನಿಮ್ಮನ್ನು ಪ್ರಶ್ನಿಸುವವರ ಒಡಲಾಳದ ನೋವುಗಳನ್ನು ಅರ್ಥೈಸಿಕೊಳ್ಳುವ ಅಂತಃಕರಣ ಪ್ರದರ್ಶಿಸಿ. ಎಲ್ಲಕ್ಕಿಂತ ಹೆಚ್ಚಾಗಿ ನೀವೂ ಮನುಷ್ಯರಾಗಿ. ನಮ್ಮನ್ನೂ ಮನುಷ್ಯರಾಗಿಯೇ ಉಳಿಯುವುದಕ್ಕೆ ಅವಕಾಶ ಮಾಡಿಕೊಡಿ. ಇಡೀ ದೇಶದೊಳಗೆ ನಿಜವಾದ ದೇಶಪ್ರೇಮದ ಬೆಳೆ ತೆಗೆಯಿರಿ. ಅದರೊಂದಿಗೆ ಪ್ರತಿಯೊಬ್ಬರ ಬದುಕಿನ ಸಮೃದ್ಧಿಯ ಸಾಧ್ಯತೆಗಳನ್ನು ವಿಸ್ತರಿಸಿರಿ” ಎಂದು ನಾವೆಲ್ಲರೂ ಒಕ್ಕೊರಲ ಧ್ವನಿಯೊಂದಿಗೆ ಸ್ಪಷ್ಟ ಸಂದೇಶ ಸಾರಬೇಕಿದೆ. ಹುನ್ನಾರಗಳೊಂದಿಗಿನ ರಾಜಕಾರಣದ ವಿವಾದೋದ್ಯಮವನ್ನು ಹತ್ತಿಕ್ಕಬೇಕಿದೆ. ನಾಯಕರ ಅಧಿಕಾರದಾಹದೊಂದಿಗಿನ ವ್ಯಾವಹಾರಿಕ ಮನೋಧರ್ಮಗಳನ್ನು ಕೊನಗಾಣಿಸಬೇಕಿದೆ.
(-ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ
ಇ-ಮೇಲ್ :nkpadmanabh@gmail.com)

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.
ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.
ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.
ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.
ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.
ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ


