ರಾಜಕೀಯ
ಮಂಡ್ಯ ಲೋಕಸಭಾ ಉಪಚುನಾವಣೆ : ವಿಕಲಚೇತನರಿಗೆ ಮತದಾನ ಮಾಡಲು ವಾಹನ ಸೌಲಭ್ಯ
ಸುದ್ದಿದಿನ,ಮಂಡ್ಯ : ನವೆಂಬರ್ 3 ರಂದು ನಡೆಯುವ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ವಿಕಲಚೇತನರು ಮತದಾನದಲ್ಲಿ ಭಾಗಿಯಾಗಲು ಪ್ರತಿ ಗ್ರಾಮಪಂಚಾಯತಿಗಳಿಂದ ವಾಹನ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ತಿಳಿಸಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 1609, ಪಾಂಡವಪುರ ತಾಲ್ಲೂಕಿನಲ್ಲಿ 307, ನಾಗಮಂಗಲ ತಾಲ್ಲೂಕಿನಲ್ಲಿ 343, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 1976, ಮಂಡ್ಯ ತಾಲ್ಲೂಕಿನಲ್ಲಿ 851, ಮದ್ದೂರು ತಾಲ್ಲೂಕಿನಲ್ಲಿ 491, ಮಳವಳ್ಳಿ ತಾಲ್ಲೂಕಿನಲ್ಲಿ 572 ಹಾಗೂ ಕೆ.ಆರ್.ನಗರ ತಾಲ್ಲೂಕಿನಲ್ಲಿ 2318 ವಿಕಲಚೇತನರು ಮಂಡ್ಯ ಲೋಕಸಭಾ ಉಪಚುನಾವಣೆಯ ಮತದಾನದಲ್ಲಿ ಭಾಗಿಯಾಗುತ್ತಿದ್ದು, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕ ಕಲ್ಯಾಣಾಧಿಕಾರಿಗಳ ಸಮನ್ವಯದೊಂದಿಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಮತ್ತು ಯೋಜನಾಧಿಕಾರಿಗಳು ಅಗತ್ಯಕ್ಕೆ ಅನುಗುಣವಾಗಿ ವಿಕಲಚೇತನರಿಗೆ ಬೇಕಾದಂತಹ ವಾಹನ ಸೌಲಭ್ಯದ ವ್ಯವಸ್ಥೆಯ ಮೇಲುಸ್ತುವಾರಿ ಮಾಡುವರು ಎಂದು ಅವರು ತಿಳಿಸಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ 22 ಗ್ರಾಮಪಂಚಾಯತಿಗಳಿಗೆ, ಪಾಂಡವಪುರ ತಾಲ್ಲೂಕಿನ 24 ಗ್ರಾಮಪಂಚಾಯತಿಗಳಿಗೆ, ನಾಗಮಂಗಲ ತಾಲ್ಲೂಕಿನ 27 ಗ್ರಾಮಪಂಚಾಯತಿಗಳಿಗೆ, ಕೆ.ಆರ್.ಪೇಟೆ ತಾಲ್ಲೂಕಿನ 35 ಗ್ರಾಮಪಂಚಾಯತಿಗಳಿಗೆ, ಮಂಡ್ಯ ತಾಲ್ಲೂಕಿನ 43 ಗ್ರಾಮಪಂಚಾಯಿತಿಗಳಿಗೆ, ಮದ್ದೂರು ತಾಲ್ಲೂಕಿನ 42 ಗ್ರಾಮಪಂಚಾಯತಿಗಳಿಗೆ, ಮಳವಳ್ಳಿ ತಾಲ್ಲೂಕಿನ 39 ಗ್ರಾಮಪಂಚಾಯಿತಿಗಳಿಗೆ, ಕೆ.ಆರ್.ನಗರ ತಾಲ್ಲೂಕಿನ 33 ಗ್ರಾಮಪಂಚಾಯತಿಗಳಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲ ಪಡಿಸಲು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ವಿಕಲಚೇತನರ ಮನೆ ಬಾಗಿಲಿಗೆ ಸೌಲಭ್ಯ ನೀಡಲಾಗಿದ್ದು, ವಿಕಲಚೇತನರಾದವರು ಮತದಾನದ ದಿನದಂದು ಮನೆಯಿಂದ ಕರೆದುಕೊಂಡು ಹೋಗುವ ಹಾಗೂ ಬಿಡುವ (ಪಿಕ್ಅಪ್ ಅಂಡ್ ಡ್ರಾಫ್) ಸೇವೆಯನ್ನು ಪಡೆಯಬಹುದಾಗಿದೆ. ಇದಕ್ಕಾಗಿ “chunavana” ಹೆಸರಿನ ಆಪ್ ಅನ್ನು ಅಭಿವೃದ್ಧಿ ಪಡಿಸುವ ಮೂಲಕ ವಿಕಲಚೇತನರ ಮತದಾನದ ಹಕ್ಕಿಗೆ ವಿಶೇಷ ಮಾನ್ಯತೆ ನೀಡಲಾಗಿದೆ. “chunavana” ಆ್ಯಪ್ನಲ್ಲಿ ನೋಂದಣಿ ಮಾಡುವ ಮೂಲಕ ನವೆಂಬರ್ 3 ರಂದು ಮನೆ ಬಾಗಿಲಿಗೆ ಸಾರಿಗೆ ಸೌಲಭ್ಯವನ್ನು ಪಡೆಯಬಹುದು. ಅಕ್ಟೋಬರ್ 29 ರಿಂದ ನವೆಂಬರ್ 1 ರ ರಾತ್ರಿ 11.59 ಗಂಟೆಯವರೆಗೆ ನೊಂದಣಿ ಮಾಡಿಕೊಳ್ಳಲು ಸಮಯಾವಕಾಶವಿರುತ್ತದೆ. ಈ ಸೌಲಭ್ಯವನ್ನು ವಿಕಲಚೇತನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 1795 ಮತಗಟ್ಟೆ ಕೇಂದ್ರಗಳಿದ್ದು, ಗಾಲಿಕುರ್ಚಿಗಳ ಅವಶ್ಯವಿರುವ 1297 ಮತಗಟ್ಟೆ ಕೇಂದ್ರಗಳಿಗೆ 1297 ಗಾಲಿಕುರ್ಚಿಗಳನ್ನು ಖರೀದಿಸಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಬಡವರ ಪಾಲಿನ ಸಂಜೀವಿನಿ ವೈದ್ಯ ಡಾ. ಎಸ್.ಎಂ. ಎಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ
ವಿಶೇಷ ವರದಿ : ಗೋವರ್ಧನ ನವಿಲೇಹಾಳು
ಸುದ್ದಿದಿನ,ದಾವಣಗೆರೆ: ವೈದ್ಯಕೀಯ ವೃತ್ತಿ ಇಂದು ಸೇವೆಯ ಜೊತೆಗೆ ವಾಣಿಜ್ಯೀಕರಣದ ಸ್ವರೂಪವನ್ನೂ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ವೈದ್ಯಕೀಯ ಸೇವೆಯೇ ಮಾನವೀಯ ಧರ್ಮ ಎಂದು ನಂಬಿ ಬದುಕುತ್ತಿರುವ ದಾವಣಗೆರೆಯ ಹಿರಿಯ ವೈದ್ಯ ಡಾ. ಸಿದ್ದಲಿಂಗಪ್ಪ ಮುರುಗೆಪ್ಪ ಎಲಿ (ಡಾ. ಎಸ್.ಎಂ. ಎಲಿ) ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಮಾಜಸೇವೆ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸುದೀರ್ಘ, ನಿಸ್ವಾರ್ಥ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ಗೌರವಕ್ಕೆ ಆಯ್ಕೆ ಮಾಡಿದೆ.
ವೈದ್ಯಕೀಯ ವೃತ್ತಿಯನ್ನು ಕೇವಲ ಜೀವನೋಪಾಯದ ಮಾರ್ಗವಾಗಿ ನೋಡದೆ, ಬಡವರು ಮತ್ತು ಅಸಹಾಯಕರ ನೋವಿಗೆ ಸ್ಪಂದಿಸುವ ಮಾನವೀಯ ಕಾಯಕವನ್ನಾಗಿ ರೂಪಿಸಿಕೊಂಡಿರುವ ಡಾ. ಎಲಿ ಅವರು ದಾವಣಗೆರೆಯಲ್ಲಿ ‘ಬಡವರ ವೈದ್ಯರು’ ಎಂದೇ ಜನಪ್ರಿಯರಾಗಿದ್ದಾರೆ. ಅವರ ಪಾಲಿಗೆ ರೋಗಿಯ ಆರ್ಥಿಕ ಸ್ಥಿತಿಗಿಂತ ಆತನ ಆರೋಗ್ಯ ಮತ್ತು ಜೀವದ ಮೌಲ್ಯವೇ ಮುಖ್ಯ. ಇದೇ ಮೌಲ್ಯಾಧಾರಿತ ಬದುಕು ಅವರನ್ನು ಸಾವಿರಾರು ಜನರ ಪಾಲಿನ ಆತ್ಮೀಯ ವೈದ್ಯರನ್ನಾಗಿಸಿದೆ.
ಐದು ದಶಕಗಳ ಸೇವೆಯ ಪಯಣ
ಮೂಲತಃ ಧಾರವಾಡ ಜಿಲ್ಲೆಯ ಹಂಸಭಾವಿ ಗ್ರಾಮದವರಾದ ಡಾ. ಎಲಿ ಅವರು 1969ರಿಂದ ವೈದ್ಯಕೀಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ವೃತ್ತಿಪರ ಜ್ಞಾನ, ಅನುಭವ ಮತ್ತು ಸೇವಾ ಮನೋಭಾವದ ಮೂಲಕ ವಿಶಿಷ್ಟ ಗುರುತನ್ನು ಗಳಿಸಿದ್ದಾರೆ.
ನಿವೃತ್ತಿಯ ನಂತರವೂ ವಿಶ್ರಾಂತ ಜೀವನಕ್ಕೆ ಮೊರೆಹೋಗದೆ, ರೋಗಿಗಳ ಸೇವೆಯನ್ನು ಮುಂದುವರಿಸಿದ್ದಾರೆ. ನಗರದ ಎಂ.ಸಿ.ಸಿ. ‘ಬಿ’ ಬ್ಲಾಕ್ನಲ್ಲಿರುವ ತಮ್ಮ ಸರಳ ಕ್ಲಿನಿಕ್ನಲ್ಲಿ ಇಂದಿಗೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಾಮಾನ್ಯವಾಗಿ ವೈದ್ಯಕೀಯ ಸಮಾಲೋಚನೆಗೆ ಹೆಚ್ಚಿನ ಶುಲ್ಕ ವಿಧಿಸುವ ಇಂದಿನ ವ್ಯವಸ್ಥೆಯಲ್ಲಿ, ಅವರು ಕೇವಲ 10ರಿಂದ 30 ರೂಪಾಯಿಗಳ ಅತ್ಯಲ್ಪ ಶುಲ್ಕದಲ್ಲಿ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿರುವುದು ಅವರ ಸೇವಾ ಬದ್ಧತೆಗೆ ಸಾಕ್ಷಿಯಾಗಿದೆ.
ಬಡವರ ಕಣ್ಣೀರೊರೆಸುವ ವೈದ್ಯ
ದಾವಣಗೆರೆ ಮಾತ್ರವಲ್ಲದೆ ಚಿತ್ರದುರ್ಗ, ಹಾವೇರಿ, ರಾಣೆಬೆನ್ನೂರು, ಶಿವಮೊಗ್ಗ ಸೇರಿದಂತೆ ವಿವಿಧ ಭಾಗಗಳಿಂದಲೂ ಬಡ ಮತ್ತು ಮಧ್ಯಮ ವರ್ಗದ ಜನರು ಇವರ ಬಳಿ ಚಿಕಿತ್ಸೆಗಾಗಿ ಬರುತ್ತಾರೆ. ಹಣದ ಕೊರತೆಯಿಂದ ಯಾರೂ ಚಿಕಿತ್ಸೆ ವಂಚಿತರಾಗಬಾರದು ಎಂಬ ಕಾಳಜಿ ಅವರದ್ದು. ಬಡ ರೋಗಿಗಳಿಗೆ ಉಚಿತ ಔಷಧ ಮಾದರಿಗಳನ್ನು ನೀಡುವುದು, ವೈದ್ಯಕೀಯ ಪರೀಕ್ಷೆಗಳಿಗೆ ರಿಯಾಯಿತಿ ದೊರಕಿಸಿಕೊಡುವುದು, ಅಗತ್ಯವಿದ್ದಾಗ ಪ್ರಯಾಣ ವೆಚ್ಚವನ್ನೂ ಭರಿಸುವುದು ಅವರ ಸೇವೆಯ ಭಾಗವಾಗಿದೆ.
ಕೆಲವೊಮ್ಮೆ ರೋಗಿಗಳ ಬಳಿ ಆಟೊ ಬಾಡಿಗೆಗೂ ಹಣವಿಲ್ಲದಿರುವುದನ್ನು ಗಮನಿಸಿ, ಅವರ ಪ್ರಯಾಣದ ವೆಚ್ಚವನ್ನೂ ತಾವೇ ನೀಡುತ್ತಾರೆ. ರೋಗಿಯ ಸಂಕಷ್ಟವನ್ನು ಕೇವಲ ವೈದ್ಯಕೀಯ ಸಮಸ್ಯೆಯಾಗಿ ನೋಡದೆ, ಅದರ ಹಿಂದಿರುವ ಸಾಮಾಜಿಕ ಮತ್ತು ಆರ್ಥಿಕ ನೋವನ್ನೂ ಅರ್ಥಮಾಡಿಕೊಳ್ಳುವ ಅವರ ಗುಣವೇ ಅವರನ್ನು ಜನಮಾನಸದಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲಿಸಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಸೇವಾ ಮನೋಭಾವಕ್ಕೆ ಹೊಸ ಅರ್ಥ ನೀಡಿರುವ ಡಾ. ಎಲಿ ಅವರ ಬದುಕು, ವೃತ್ತಿಯ ಯಶಸ್ಸು ಹಣ ಮತ್ತು ಆಸ್ತಿಯಲ್ಲಿ ಮಾತ್ರ ಅಳೆಯಲಾಗದು ಎಂಬುದನ್ನು ಸಾರುತ್ತದೆ. ಬಡವರ ಪಾಲಿಗೆ ವೈದ್ಯರು ಕೇವಲ ಚಿಕಿತ್ಸಕರಲ್ಲ, ಸಂಕಷ್ಟದ ಸಮಯದಲ್ಲಿ ಭರವಸೆ ನೀಡುವವರೂ ಆಗಿರಬೇಕು ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ.
ಅವರ ಈ ಸುದೀರ್ಘ ಸೇವಾ ಪಯಣದಲ್ಲಿ ಕುಟುಂಬದ ಬೆಂಬಲವೂ ಮಹತ್ವದ್ದಾಗಿದೆ. ಪತ್ನಿ ನಾಗರತ್ನಮ್ಮ ಅವರು ಅವರ ಸೇವಾ ಕಾರ್ಯಕ್ಕೆ ನಿರಂತರ ಪ್ರೋತ್ಸಾಹ ನೀಡಿದ್ದಾರೆ. ಮಕ್ಕಳಾದ ಡಾ. ವಿನಯ್ ಎಸ್. ಎಲಿ ಮತ್ತು ಡಾ. ಸುಮನ್ ಎಸ್. ಎಲಿ ಕೂಡ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಸಮಾಜಸೇವೆ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಎಸ್.ಎಂ. ಎಲಿ ಅವರ ಸಾಧನೆ ಕೇವಲ ವೈಯಕ್ತಿಕ ಗೌರವವಲ್ಲ; ಮಾನವೀಯ ವೈದ್ಯಕೀಯ ಸೇವೆಗೆ ಸಂದ ಮನ್ನಣೆಯಾಗಿದೆ. ವೈದ್ಯಕೀಯ ವೃತ್ತಿಯ ಮೂಲ ಆಶಯವಾದ ರೋಗಿಗಳ ಸೇವೆ, ಕರುಣೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ತಮ್ಮ ಬದುಕಿನುದ್ದಕ್ಕೂ ಎತ್ತಿಹಿಡಿದಿರುವ ಅವರ ಕಾರ್ಯ ಇಂದಿನ ಯುವ ವೈದ್ಯರಿಗೆ ಮಾದರಿಯಾಗಿದೆ.
ದಾವಣಗೆರೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಬಡ ಕುಟುಂಬಗಳ ಪಾಲಿಗೆ ಆಸರೆಯಾಗಿರುವ ಎಲಿ ಅವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ನೀಡಿರುವ ಈ ಪ್ರಶಸ್ತಿ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ. ಪ್ರಶಸ್ತಿಗಳು ಸಾಧಕರನ್ನು ಗುರುತಿಸುತ್ತವೆ; ಆದರೆ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯುವುದು ಅವರ ಸೇವೆಯಿಂದ ಮಾತ್ರ ಸಾಧ್ಯ ಎಂಬುದಕ್ಕೆ ಡಾ. ಎಸ್.ಎಂ. ಎಲಿ ಅವರ ಬದುಕೇ ಸಾಕ್ಷಿಯಾಗಿದೆ.

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್ಲೈನ್ ಕೌನ್ಸಿಲಿಂಗ್ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.
ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.
ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.




