Connect with us

ಅಂತರಂಗ

ಕನ್ನಡ ಕಾವ್ಯಲೋಕದ ವಿಶಿಷ್ಟ ಧ್ವನಿ ಸ. ಉಷಾ ಇನ್ನಿಲ್ಲ

Published

on

ಸುದ್ದಿದಿನ ಡೆಸ್ಕ್ :ಹಿರಿಯ ಲೇಖಕಿ ಸ.ಉಷಾ ಅವರು ಅನಾರೋಗ್ಯದಿಂದ ಶನಿವಾರ ರಾತ್ರಿ (ನವೆಂಬರ್ 28 ರಂದು ಎಂಟೂವರೆ‌ ಹೊತ್ತಿಗೆ ) ಬೆಂಗಳೂರಿನಲ್ಲಿ ನಿಧನರಾದರು.ಅವರಿಗೆ 72 ವರ್ಷ ವಯಸ್ಸಾಗಿತ್ತು.ಅವರ ಅಂತ್ಯಕ್ರಿಯೆ ಭಾನುವಾರ (ನವೆಂಬರ್ 29) ಮಧ್ಯಾಹ್ನ ಬೆಂಗಳೂರಿನ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಆಪ್ತ ವಲಯ ತಿಳಿಸಿದೆ.

ಕನ್ನಡದ ಹಿರಿಯ ಕವಯತ್ರಿ, ವಿಮರ್ಶಕಿ ಹಾಗೂ ಪ್ರಾಧ್ಯಾಪಕಿ ಸ. ಉಷಾ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಮಹತ್ವದ ಕೊಂಡಿಯೊಂದು ಕಳಚಿದಂತಾಗಿದೆ. ತಮ್ಮ ವಿಶಿಷ್ಟ ಕಾವ್ಯಾಭಿವ್ಯಕ್ತಿ, ವೈಚಾರಿಕ ನಿಲುವು ಹಾಗೂ ಸಾಮಾಜಿಕ ಸಂವೇದನೆಗಳಿಂದ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಸಂಪಾದಿಸಿದ್ದ ಅವರು, ಮಹಿಳಾ ಕಾವ್ಯದ ದಿಟ್ಟ ಹಾಗೂ ಪರಿಪಕ್ವ ಧ್ವನಿಯಾಗಿ ಗುರುತಿಸಿಕೊಂಡಿದ್ದರು.

ಮೈಸೂರಿನಲ್ಲಿ 1954ರ ಏಪ್ರಿಲ್ 5ರಂದು ಜನಿಸಿದ ಸ. ಉಷಾ ಅವರು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಅವರು, ಬೋಧನೆಯ ಜೊತೆಗೆ ಸಾಹಿತ್ಯ ಸೃಜನಶೀಲತೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಕವಿತೆಗಳನ್ನು ಬರೆಯಲು ಆರಂಭಿಸಿದ್ದರು.

ಅವರ ಮೊದಲ ಕವನ ಸಂಕಲನ ತೊಗಲುಗೊಂಬೆಯ ಆತ್ಮಕಥೆ ಕನ್ನಡ ಕಾವ್ಯಲೋಕದಲ್ಲಿ ಗಮನ ಸೆಳೆದ ಕೃತಿಯಾಗಿದೆ. ನಂತರ ಈ ನೆಲದ ಹಾಡು, ಹವಳ ಹಾರಿದ ಹೊತ್ತು, ಕಸೂತಿ ಮೊದಲಾದ ಕವನ ಸಂಕಲನಗಳ ಮೂಲಕ ತಮ್ಮದೇ ಆದ ಕಾವ್ಯಲೋಕವನ್ನು ಕಟ್ಟಿಕೊಂಡರು. ವೈದೇಹಿ ಅವರ ಸಾಹಿತ್ಯದ ಕುರಿತು ವಿಮರ್ಶಾ ಬರಹಗಳನ್ನೂ ರಚಿಸಿದ್ದರು.

ಅವರ ಕವಿತೆಗಳಲ್ಲಿ ಹೆಣ್ಣಿನ ಅಂತರಂಗ, ಸಾಮಾಜಿಕ ಅಸಮಾನತೆ, ಶೋಷಣೆ, ಮಾನವೀಯ ಸಂಬಂಧಗಳು ಹಾಗೂ ಬದುಕಿನ ಸೂಕ್ಷ್ಮ ಸಂವೇದನೆಗಳು ಅಭಿವ್ಯಕ್ತಿಗೊಂಡಿವೆ. ಅನುಭವ, ಕಲ್ಪನೆ ಮತ್ತು ವೈಚಾರಿಕತೆಯ ಸಮನ್ವಯ ಅವರ ಕಾವ್ಯದ ಪ್ರಮುಖ ಲಕ್ಷಣವಾಗಿತ್ತು. ಮಹಿಳೆಯರ ಬದುಕಿನ ತಲ್ಲಣಗಳನ್ನು ಕೇವಲ ಭಾವನಾತ್ಮಕವಾಗಿ ಕಟ್ಟಿಕೊಡದೆ, ಸಾಮಾಜಿಕ ಪ್ರಜ್ಞೆಯ ನೆಲೆಯಲ್ಲಿ ವಿಶ್ಲೇಷಿಸುವ ಮೂಲಕ ತಮ್ಮ ಕಾವ್ಯಕ್ಕೆ ವಿಭಿನ್ನ ಆಯಾಮ ನೀಡಿದ್ದರು. ಅವರ ಕವಿತೆಗಳು ಇಂಗ್ಲಿಷ್, ಹಿಂದಿ, ಬೆಂಗಾಲಿ ಹಾಗೂ ಮಲಯಾಳಂ ಭಾಷೆಗಳಿಗೂ ಅನುವಾದಗೊಂಡಿವೆ.

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಅವರಿಗೆ ವರ್ಧಮಾನ ಉದಯೋನ್ಮುಖ ಲೇಖಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ 2017ನೇ ಸಾಲಿನ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿದ್ದವು.

ಕವಯತ್ರಿಯಾಗಿ, ವಿಮರ್ಶಕಿಯಾಗಿ, ಅಧ್ಯಾಪಕಿಯಾಗಿ ಹಲವು ತಲೆಮಾರುಗಳ ಸಾಹಿತ್ಯಾಸಕ್ತರಿಗೆ ಪ್ರೇರಣೆಯಾಗಿದ್ದ ಸ. ಉಷಾ ಅವರ ಅಗಲಿಕೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾಹಿತ್ಯ ಕೃತಿಗಳು ಹಾಗೂ ವೈಚಾರಿಕ ಬರಹಗಳು ಕನ್ನಡ ಓದುಗರ ನಡುವೆ ಸದಾ ಜೀವಂತವಾಗಿರಲಿವೆ.

ಸಾಹಿತ್ಯದ ಮೂಲಕ ಬದುಕಿನ ನೋವು, ನಲಿವು ಮತ್ತು ಸಂಘರ್ಷಗಳಿಗೆ ಧ್ವನಿಯಾದ ಸ. ಉಷಾ ಅವರ ನೆನಪು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಕ್ರೈಸ್ ಇಲಾಖೆಯ ನೇಮಕಾತಿ ಪರೀಕ್ಷೆ: ಶೇ. 49.69ರಷ್ಟು ಅಭ್ಯರ್ಥಿಗಳು ಹಾಜರು

Published

on

ಸುದ್ದಿದಿನ,​ದಾವಣಗೆರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ಕ್ರೈಸ್ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ಸಂಸ್ಥೆಯ ಉಳಿಕೆ ಮೂಲ ವೃಂದ ಮತ್ತು ಕಾರಾಗೃಹ ಇಲಾಖೆಯ ಕಲ್ಯಾಣ ಕರ್ನಾಟಕ ವೃಂದದ ಜೈಲರ್, ವಾರ್ಡರ್ ( ವೀಕ್ಷಕರು ), ವಾರ್ಡರ್ ಕಮ್ ನರ್ಸಿಂಗ್, ದ್ವಿತೀಯ ದರ್ಜೆ ಭೋದಕರು -2, ಹುದ್ದೆಗಳ ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ನವೆಂಬರ್ 28 ರಂದು ದಾವಣಗೆರೆ ನಗರದ ಒಟ್ಟು 05 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು.

​ಪರೀಕ್ಷೆ ಬರೆಯಲು ಒಟ್ಟು 2998 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 1490 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1508 ಅಭ್ಯರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ. ಎಂ ಅವರು ತಿಳಿಸಿದ್ದಾರೆ.

Continue Reading

ಅಂತರಂಗ

ಕವಿತೆ | ಬಿಡಿಸಿಕೊಳ್ಳುತ್ತದೊಂದು ಚಿತ್ರ

Published

on

~ರಮ್ಯ ಕೆ.ಜಿ.ಮೂರ್ನಾಡು

ಕುಂಚ ತಾಕುವ ಮೊದಲೇ
ಮೂಡುತ್ತದೊಂದು ಚಿತ್ರ!
ಎದೆನೆತ್ತರು ನಡುಗಿ
ಪ್ರವಾಹದಂತೆ ತೆರೆದುಕೊಂಡ
ಬ್ರಹ್ಮಾಂಡದಲಿ ಗಡಿ ಮರೆತ
ಗೆರೆಗಳು ಕ್ಯಾನ್ವಾಸಿಂದಾಚೆ
ಅಲೆದು ಜೀವದ್ರವ್ಯಗಳಲಿ
ಈಜಿ ಮೂಲೆಗಳ ತುದಿ ಮುಟ್ಟಿ
ಬರೆಯುತ್ತದೆ ಬೆರಳ
ಗುರುತಿನ ಇತಿಹಾಸನು…

ಖಾಲಿತನಗಳಲಿ ಉಸಿರಾಡುವ
ಮೌನ-ಮಾತುಗಳ ವೇಗವನು
ಅಣಕಿಸುವಾಗ ತೂರುವ
ಬೆಳಕು ಸರಿದೂಗಿಸುತ್ತದೆ
ಒಡಕುಗಳ…
ಅಳಿಸಿದ ಮುಖಗಳು ಬಣ್ಣಗಳ
ಎರಕ ಹೊಮ್ಮಿಸಿಕೊಂಡು
ಬದಲಿಸುತ್ತವೆ ಬಣ್ಣಾ!

ಪದರುಗಳಾಗಿ ತೆರೆದುಕೊಳ್ಳುವ ಚಿತ್ರ
ನೆರಳಿನಲಿ ಸರಿದಾಡುವ
ಆತ್ಮದಂತೆ ಕಲೆಗಳ
ಉಳಿಸಿಬಿಡುತ್ತದೆ ಪೂರ್ತಿಯಾಗದ
ಆಕಾರದೊಳಗೆ ಚಿತ್ರಕಾರನೇ
ಲಯವಾಗುತ್ತಿರುವಾಗ
‘ಬಿಡಿಸಿ’ಕೊಳ್ಳುತ್ತದೆ ಚಿತ್ರ
ಗೆರೆಗಳಿಂದ ಬಣ್ಣಗಳಿಂದ
ಹಾಳೆಗಳಿಂದ ಚೌಕಟ್ಟಿನಿಂದ.

 

Continue Reading

ಅಂತರಂಗ

ಸಂತೆಬೆನ್ನೂರು ಫೈಜ್ನಟ್ರಾಜ್ ಕೃತಿಗೆ ಸೇಡಂ ನ ಅಮ್ಮ ಪ್ರಶಸ್ತಿ ಪ್ರದಾನ

Published

on

ಸಂತೆಬೆನ್ನೂರು ಫೈಜ್ನಟ್ರಾಜ್ ಕೃತಿಗೆ ಅಮ್ಮ ಪ್ರಶಸ್ತಿ ಪ್ರದಾನ

ಸುದ್ದಿದಿನ ಡೆಸ್ಕ್ : ಸೇಡಂನ ಸಾಹಿತ್ಯಿಕ, ಸಾಂಸ್ಕೃತಿಕ ಹಿರಿಮೆಗೆ ಅಮ್ಮ ಪ್ರಶಸ್ತಿ ಮಹತ್ವದ ಕೊಡುಗೆ ನೀಡಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಗೂ ತೆರಳಿದಾಗ ಸಾಹಿತ್ಯಿಕರು, ಕವಿಗಳು ಹಾಗೂ ರಾಜಕಾರಣಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸೇಡಂ ಎಂದಾಕ್ಷಣ ಬಸವರಾಜ ಪಾಟೀಲ್ ಸೇಡಂ ಹಾಗೂ ಅಮ್ಮ ಪ್ರಶಸ್ತಿ ನೆನಪಾಗುತ್ತದೆ. ಇದು ಸೇಡಂಗೆ ಗೌರವದ ಕಿರೀಟವಾಗಿದೆ ಎಂದು ಸೇಡಂ ನ ಮಾಜಿ ಶಾಸಕರಾದ ರಾಜಕುಮಾರ ತೇಲ್ಕೂರ ಹೇಳಿದರು.

ತಾಯಿಯ ಪ್ರೀತಿ, ತ್ಯಾಗ, ಬಲಿದಾನ, ದೇಶಪ್ರೇಮ ಹಾಗೂ ಬದುಕಿನ ಮೌಲ್ಯಗಳನ್ನು ನೆನಪಿಸುವ ಉದ್ದೇಶದಿಂದ 26 ವರ್ಷಗಳಿಂದ ಪ್ರಶಸ್ತಿ ನೀಡುತ್ತಿರುವ ಸಂಸ್ಥಾಪಕ ಮಹಿಪಾಲರೆಡ್ಡಿ ಮುನ್ನೂರು ಅವರ ಕಾರ್ಯ ಶ್ಲಾಘನೀಯ. ಪ್ರಶಸ್ತಿ ಯನ್ನು ಹಣದ ಮೌಲ್ಯದಲ್ಲಿ ಅಳೆಯಲು ಸಾಧ್ಯವಿಲ್ಲ ಎಂದರು.

ಹಿರಿಯ ಸಾಹಿತಿ ಸಂಗಮೇಶ ಬಾದವಾಡಗಿ ಮಾತನಾಡಿ, ಪ್ರಶಸ್ತಿ ಆಯ್ಕೆಯಲ್ಲಿ ಪಾರದರ್ಶಕತೆ ಹಾಗೂ ಶಿಫಾರಸಿಗೆ ಅವಕಾಶವಿಲ್ಲದಿರುವುದರಿಂದ ಅಮ್ಮ ಪ್ರಶಸ್ತಿ ಕನ್ನಡ ಸಾಹಿತ್ಯ ವಲಯದಲ್ಲಿ ತನ್ನದೇ ಮಹತ್ವ ಗಳಿಸಿದೆ ಎಂದರು.
ಹಿರಿಯ ಪತ್ರಕರ್ತ ಟಿ.ವಿ. ಶಿವಾನಂದನ್ ಮಾತನಾಡಿ, ಎಲ್ಲರ ಅಮ್ಮನ ಅಂತಃಕರಣದಿಂದ ಹುಟ್ಟಿದ ಈ ಪ್ರಶಸ್ತಿ ತನ್ನದೇ ಮೌಲ್ಯ ಹೊಂದಿದೆ ಎಂದರು.

ಈ ಬಾರಿ ಪ್ರಶಸ್ತಿಗೆ ಹತ್ತು ಜನ ಭಾಜನರಾಗಿದ್ದರು. ಅದರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದ ಕನ್ನಡ ಉಪನ್ಯಾಸಕರಾದ ಸಂತೆಬೆನ್ನೂರು ಫೈಜ್ನಟ್ರಾಜ್ ಕೂಡ ಒಬ್ಬರು.

ಅವರ ದ್ರೌಪದಿಯ ವಾಷಿಂಗ್ ಮಿಷನ್ ಕವನ ಸಂಕಲನಕ್ಕೆ ಅಮ್ಮ ಪ್ರಶಸ್ತಿ ಲಭಿಸಿದೆ ಇವರ ಜೊತೆಯಲ್ಲಿ ಉಳಿದ ಸಾಧಕರಿಗೂ ಅಮ್ಮ ಪ್ರಶಸ್ತಿ ಪ್ರದಾನಿಸಲಾಯಿತು.ಮಾತೋಶ್ರೀ ಪ್ರತಿಷ್ಟಾನದ ವತಿಯಿಂದ ನೀಡುವ ಈ ಪ್ರಶಸ್ತಿ ನೀಡುವ ಸಂಸ್ಥಾಪಕ ಮಹಿಪಾಲರೆಡ್ಡಿ ಅವರ ಕಾರ್ಯ ಶ್ಲಾಘನೀಯ. ಪ್ರಶಸ್ತಿ ಯನ್ನು ಹಣದ ಮೌಲ್ಯದಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಸಂಚಾಲಕಿ ಚಂದ್ರಕಲಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅಮ್ಮ ಪ್ರಶಸ್ತಿ ಕೇವಲ ವ್ಯಕ್ತಿಯ ಸಾಧನೆಗೆ ನೀಡುವ ಗೌರವವಲ್ಲ; ತಾಯಿಯ ಪ್ರೀತಿ, ತ್ಯಾಗ ಮತ್ತು ಅಂತಃಕರಣಕ್ಕೆ ಸಲ್ಲಿಸುವ ಗೌರವವಾಗಿದೆ. 26 ವರ್ಷಗಳಿಂದ ನಿರಂತರವಾಗಿ ಪ್ರಶಸ್ತಿ ನೀಡುತ್ತಿರುವುದು ಸೇಡಂನ ಸಾಹಿತ್ಯಿಕ ಹಿರಿಮೆಗೆ ಹೆಮ್ಮೆಯ ಸಂಗತಿಯಾಗಿದೆ. ಎಂದು ಪ್ರಸಯೋಜಕರಾದ ಮಹಿಪಾಲ ರೆಡ್ಡಿ ಹೇಳಿದರು.

ಸಂತೆಬೆನ್ನೂರು ಫೈಜ್ನಟ್ರಾಜ್ ಈಗಾಗಲೇ ‌ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯ ಜೊತೆಗೆ ನಾಡಿನ ಪ್ರತಿಷ್ಠಿತ ಹಲವಾರು ಪ್ರಶಸ್ತಿಗಳನ್ನು ಸಾಹಿತ್ಯ ಸೇವೆಗೆ ಪಡೆದಿದ್ದಾರೆ
ಕಥೆ, ಕವನ, ಪ್ರಬಂಧ, ಆಧುನಿಕ ವಚನ ಮುಂತಾದ ಪ್ರಕಾರ ಗಳಲ್ಲಿ ಹದಿನೈದಕ್ಕೂ ಹೆಚ್ಚು ಕೃತಿ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ
ಇವರಿಗೆ ಈ ಅಮ್ಮ ಪ್ರಶಸ್ತಿ ಗೆ ಕವಿ ಸನಾವುಲ್ಲಾ ನವಿಲೇಹಾಳು, ಕತೆಗಾರ ಇಂದ್ರಕುಮಾರ್, ಕವಿ ಫಕ್ಕಿತೇಶ ಅದಾಪುರ ಮುಂತಾದವರು ಅಭಿನಂದನೆ ತಿಳಿಸಿದ್ದಾರೆ.

Continue Reading

Trending