ಸಿನಿ ಸುದ್ದಿ
ಕ್ಯೂಟ್ ಬೆಡಗಿ ಅದಿತಿ ಪ್ರಭುದೇವಾಗೆ ‘ಕ್ರಶ್’..!
ಚಂದನವನದ ಕ್ಯೂಟ್ ಬೆಡಗಿ ಅದಿತಿ ಪ್ರಭುದೇವಾ ಸ್ಯಾಂಡಲ್‍ವುಡ್‍ನಲ್ಲಿ ಇತೀಚೆಗೆ ಕಿಕ್ಕೇರಿಸುತ್ತಿರುವ ಬೆಡಗಿ ಎಂದರೆ ತಪ್ಪಾಗಲಾರದು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಅದಿತಿ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ತಮ್ಮದೇಯಾದ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಪಡ್ಡೆ ಹುಡುಗರ ಕನಸಿನಲ್ಲಿ ಕಾಡುತ್ತಾರೆ ಸಹ.
ಅಲ್ಲದೆ ಇತ್ತೀಚಿನ ಬ್ಯುಸಿಯೆಸ್ಟ್ ನಟಿಯರಲ್ಲಿ ಅದಿತಿ ಕೂಡ ಒಬ್ಬರು. ಹೀಗಿರುವಾಗ ತಮ್ಮ ಕ್ರಶ್ ಕುರಿತು ಹೇಳಿದರೆ ಯಾರ ಕಿವಿ ನಿಮಿರುವುದಿಲ್ಲ ಹೇಳಿ. ಈ ಹಿಂದೆ ಬ್ರಹ್ಮಚಾರಿ ಸಿನಿಮಾದಲ್ಲಿ ಹೆಂಡತಿ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದ ಅದಿತಿ, ಈಗ ವೃದ್ಧೆಯ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಓಲ್ಡ್ ಮಾಂಕ್ ಸಿನಿಮಾಗೆ ಸಹ ಸಹಿ ಹಾಕಿದ್ದಾರೆ.
ಹೀಗೆ ನಾನಾ ಪಾತ್ರಗಳಲ್ಲಿ ಅದಿತಿ ಪ್ರಯೋಗ ನಡೆಸುತ್ತಿದ್ದಾರೆ. ಆದರೆ ಇದೀಗ ತಮ್ಮ ಕ್ರಶ್ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇವಲ ಹುಡುಗರಿಗೆ ಮಾತ್ರವಲ್ಲ, ಬಹುತೇಕ ಹುಡುಗಿಯರಿಗೂ ಬೈಕ್‍ಗಳ ಮೇಲೆ ಕ್ರಶ್ ಆಗುತ್ತದೆ. ವಿಶೇಷವಾಗಿ ರಾಯಲ್ ಎನ್ಫೀಲ್ಡ್ ಎಂದು ಬರೆದುಕೊಂಡಿದ್ದಾರೆ. ಹಳೆಯ ರಾಯಲ್ ಎನ್ಫೀಲ್ಡ್ ಬೈಕ್ ಮೇಲೆ ಕುಳಿತಿರುವ ಫೋಟೋಗಳನ್ನು ಹಾಕಿದ್ದಾರೆ. ಈ ಮೂಲಕ ರಾಯಲ್ ಎನ್ಫೀಲ್ಡ್ ಬೈಕ್ ಮೇಲಿನ ತಮ್ಮ ಕ್ರಶ್ ಹೊರ ಹಾಕಿದ್ದಾರೆ.
ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.instagram.com/p/B_bhG02DJzg/?igshid=1bftoxooivtdt
ಕೃಪೆ : ಸಿನಿತಾರಾ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
ವಿದ್ಯಾನಾಯ್ಕ್ ಅರೇಹಳ್ಳಿ
ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.
ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.
ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.
ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.
ನಾಯಕ ನಟನಾಗಿ ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.
ಇನ್ನು 2022ರಲ್ಲಿ ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪರಿಶ್ರಮ ಮತ್ತು ಫಿಟ್ನೆಸ್
ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್‌ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.
ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್
ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ
ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
ಬಂಜಾರ ಹವೇಲಿಯ ಹರಿಕಾರ
ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.
ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.
ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
ಸುದ್ದಿದಿನ ಡೆಸ್ಕ್:ಆರಂಭಿಕ ಜೀವನ – 1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಿಂದಲೇ ಕಲೆಯತ್ತ ಒಲವು ಹೊಂದಿದ್ದರು.
ಚಲನಚಿತ್ರ ರಂಗ – 2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಅವರು, 2007ರಲ್ಲಿ ಪುನೀತ್ ರಾಜ್‌ಕುಮಾರ್ ಅವರ ‘ಮಿಲನ’ ಚಿತ್ರದಲ್ಲಿ ಹೇಮಂತ್ ಎಂಬ ವಿಲನ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದರು.
ಇತ್ತೀಚಿನ ಜನಪ್ರಿಯತೆ – ‘ಲವ್ ಮಾಕ್ಟೇಲ್’ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟ-ನಿರ್ಮಾಪಕರಾಗಿ ದೊಡ್ಡ ಹೆಸರು ಮಾಡಿದ್ದರು.
ದಿಲೀಪ್ ರಾಜ್ ಅವರ ಸಾವು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟ. ಇವರ ಈ ಹಠಾತ್ ನಿಧನವು ಒತ್ತಡದ ಜೀವನಶೈಲಿ ಮತ್ತು ಆರೋಗ್ಯದ ಕಡೆಗೆ ನಾವು ನೀಡಬೇಕಾದ ಹೆಚ್ಚಿನ ಗಮನದ ಬಗ್ಗೆ ಎಚ್ಚರಿಕೆ ನೀಡುವಂತಿದೆ.

ದಿನದ ಸುದ್ದಿ
ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್‌ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!
ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್‌ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;
ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್‌ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.
ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್‌ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.
ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್‌ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



