Connect with us

ಸಿನಿ ಸುದ್ದಿ

ನನ್ನ ನೆನಪಲ್ಲಿ ಡಾ ರಾಜಕುಮಾರ್..!

Published

on

  • ಕ್ರಾಂತಿರಾಜ್ ಒಡೆಯರ್, ಪ್ರಾಧ್ಯಾಪಕರು, ಮೈಸೂರು

ಸನ್ 2000 ಅನ್ಸುತ್ತೆ. ಶಬ್ದವೇದಿ ಚಿತ್ರ ರಿಲೀಸ್ ಆಗಿದ್ದ ಸಂದರ್ಭ. 10 ನೇ ತರಗತಿ ಪರೀಕ್ಷೆ ಮುಗಿಸಿ ರಜಾ ದಿನಗಳನ್ನು ಅನುಭವಿಸಲು ಶಿವಾರಗುಡ್ಡದಿಂದ ಮೈಸೂರಿನ ಮಾರ್ಗವಾಗಿ ನಮ್ಮೂರಾದ ಪೂರಿಗಾಲಿಗೆ ಹೋಗುವ ಯೋಜನೆ. ಅಂದಿನ ದಿನಗಳಲ್ಲಿ ಮೈಸೂರಿನಿಂದ ನಮ್ಮೂರಿಗೆ ಇದ್ದ ಕೊನೆಯ ಬಸ್ಸು 7 ಗಂಟೆಗೆ. ಮ್ಯಾಟನಿ ಶೋ ನೋಡ್ಕಂಡು ಊರಿಗೆ ಹೋದರೆ ಆಯಿತು ಅಂತ, ಪ್ರಭಾ ಥೀಯೇಟರ್ ಗೆ ಹೋಗಿ, ಅಲ್ಲಿ ಟಿಕೆಟ್ ತೆಗೆದುಕೊಳ್ಳಲು ನಿಂತಿದ್ದ ಉದ್ದದ ಸಾಲಿನಲ್ಲಿ ನಿಂತಿದ್ದು ಬೆಳಿಗ್ಗೆ 11.30 ಗಂಟೆಗೆ.

ಆದರೆ ನಾನು ಟಿಕೆಟ್ ಕೌಂಟರ್ ಬಳಿ ಬರುವಷ್ಟರಲ್ಲಿ ಮ್ಯಾಟನಿ ಟಿಕೆಟ್ ಮುಗಿದು ಫಸ್ಟ್ ಶೋ ಟಿಕೆಟ್ ಕೊಡೋಕೆ ಶುರು ಮಾಡಿದ್ರು. 4.30 ಗೆ ಫಸ್ಟ್ ಶೋ ಶುರು ಆದ್ರೂ 7 ಗಂಟೆಗೆ ಚಿತ್ರ ಮುಗಿದು, ಹೇಗಾದ್ರು ಮಾಡಿ ಕೊನೆಯ ಬಸ್ ಹಿಡಿದು ಪೂರಿಗಾಲಿ ತಲುಪಬಹುದು ಎಂಬ ಧೈರ್ಯದಲ್ಲಿ ಫಸ್ಟ್ ಶೋ ಟಿಕೆಟ್ ತಕೊಂಡು ಚಿತ್ರ ನೋಡೋಕೆ ಕೂತೆ. ಚಿತ್ರ ಮುಗಿದಾಗ 7 ಗಂಟೆ 10 ನಿಮಿಷ. ಪ್ರಭಾ ಥಿಯೇಟರ್ ನಿಂದ ಓಡೋಡಿ ಛತ್ರಿ ಮರ ಬಸ್ ಸ್ಟಾಪ್ ತಲುಪುವಷ್ಟರಲ್ಲಿ 7 ಗಂಟೆ 15 ನಿಮಿಷ. ಅಷ್ಟು ಹೊತ್ತಿಗಾಗಲೇ ಲಾಸ್ಟ್ ಬಸ್ ಹೊರಟು ಹೋಗಿತ್ತು. ದಿಕ್ಕು ತೋಚದೆ ಅಲ್ಲೇ ನಿಂತಿದ್ದಾಗ ಚಾಮರಾಜನಗರಕ್ಕೆ ಹೋಗುವ ಬಸ್ಸು ಬಂತು.

ಆ ಬಸ್ಸಿನ ಕಂಡೆಕ್ಟರ್, “ಈಗ ಹೊರಟರೆ ನರಸೀಪುರದಲ್ಲಿ ನನಗೆ ಮಿಸ್ ಆದ ಬಸ್ ಸಿಗುತ್ತದೆ” ಎಂದು ಹೇಳಿದ. ಅವನ ಮಾತನ್ನು ನಂಬಿ, ಅದೇ ಬಸ್ಸಿನಲ್ಲಿ ಹೊರಟು ನರಸೀಪುರದಲ್ಲಿ ಇಳಿದುಕೊಂಡೆ. ಅಷ್ಟರಲ್ಲಾಗಲೇ ನಮ್ಮೂರಿನ ಲಾಸ್ಟ್ ಬಸ್ಸು ನರಸೀಪುರವನ್ನೂ ಬಿಟ್ಟು ಹೊರಟಿತ್ತು. ಅಂದು ರಾತ್ರಿ ನರಸೀಪುರದ ಬಸ್ ಸ್ಟ್ಯಾಂಡಿನಲ್ಲೇ ಮಲಗಿ, ಬೆಳಗ್ಗೆ ಎದ್ದು ಮೊದಲ ಬಸ್ಸಿನಲ್ಲೇ ಊರ ಕಡೆ ಪಯಣ. ಊರಲ್ಲಿ ಕಾದಿತ್ತು ನನಗೆ ಸುಪ್ರಭಾತ. ರಾತ್ರಿಯೆಲ್ಲಾ ಎಲ್ಲಿದ್ದೆ? ಏನು ಮಾಡ್ತಾ ಇದ್ದೆ? ಎಸ ಟಿ ಡಿ ಬೂತ್ ಇಂದ ಒಂದು ಫೋನ್ ಆದ್ರೂ ಮಾಡಬಾರದ? ಎಂಬ ಹಲವಾರು ಪ್ರಶ್ನೆಗಳಿಗೆ, ನಾನು ರಾಜಕುಮಾರ್ ಪಿಕ್ಚರ್ ನೋಡೋಕೆ ಹೋಗಿ ಹೀಗಾಯಿತು ಎಂಬ ಸತ್ಯವನ್ನು ಹೇಳಿದರೆ ಮತ್ತಷ್ಟು ಬೊಗಳವನ್ನು ಕೇಳಬೇಕಾದೀತು ಎಂದು ಅರಿತು, ಮನೆಯವರು ಏನಾದ್ರೂ ಅಂದುಕೊಳ್ಳಲಿ ಎಂದು ತೀರ್ಮಾನಿಸಿ, ಮೌನಕ್ಕೆ ಶರಣಾದೆ. ಇದು ರಾಜಕುಮಾರ್ ಅವರ ಅಭಿಮಾನಿಯಾಗಿ ನಾನು ಪಟ್ಟ ಪಾಡು.

ಅಂದ ಹಾಗೆ, ಅಂದಿನ ದಿನಗಳಲ್ಲಿ ನನ್ನ ಸಮಕಾಲೀನರಾಗಲಿ ಅಥವಾ ನಮ್ಮ ಊರಿನಲ್ಲಾಗಲಿ, ರಾಜಕುಮಾರ್ ಅವರ ಅಭಿಮಾನಿಗಳು ಅಂತ ಯಾರೂ ಇರಲಿಲ್ಲ. ಅವಾಗ ಬಂಧನ ವಿಷ್ಣುವರ್ಧನ್, ಏಕಲವ್ಯ ಅಂಬರೀಷ್, ಎಸ್ ಪಿ ಸಾಂಗ್ಲಿಯಾನ ಶಂಕರ್ ನಾಗ್ ಅವರ ಯುಗ. ನಮ್ಮೂರಿನಲ್ಲಿ ಹೆಚ್ಚಿನ ಅಭಿಮಾನಿಗಳು ಇವರಿಗಿದ್ದರೆ, ಕೆಲವರು ಬಾ ನಲ್ಲೆ ಮಧುಚಂದ್ರಕೆಯ ಶಿವರಾಂ ಹಾಗು ಎ ಚಿತ್ರದ ಉಪೇಂದ್ರ ಅವರ ಭಕ್ತರು। ಆಗ ನಾನು ವಿಷ್ಣುವರ್ಧನ್ ಅವರ ಅಭಿಮಾನಿ.

ವಯಸ್ಸಾಗ್ತಾ ಮನಸ್ಸು ಪರಿಪಕ್ವ ಆಗ್ತಾ ಆಗ್ತಾ ಸೆಲೆಕ್ಟಿವ್ ಚಿತ್ರಗಳನ್ನ ನೋಡೋಕೆ ಶುರು ಆಯಿತು. ಆವಾಗ ನಾನು ಟಿ ವಿ ಗಳಲ್ಲಿ ಬರುತ್ತಿದ್ದ ರಾಜಕುಮಾರ್ ಅವರ ಚಿತ್ರಗಳನ್ನು ನೋಡ್ತಾ ನೋಡ್ತಾ ಅವರು ಅಭಿನಯಿಸಿರುವ ಚಿತ್ರಗಳೂ ಇಷ್ಟ ಆದ್ವು. ಹೆಚ್ಚಾಗಿ ರಾಜಕುಮಾರ್ ಅವರ ಅದ್ಬುತ ಅಭಿನಯ ನನ್ನನ್ನು ಅವರಿಸಿಕೊಳ್ಳುತ್ತ ಹೋಯಿತು. ಹಾಗೆ ಶುರುವಾದದ್ದು ರಾಜಕುಮಾರ್ ಅವರ ಮೇಲಿನ ಅಭಿಮಾನ. ವಯಸ್ಸಾಗ್ತಾ ಆಗ್ತಾ ಚಿತ್ರಗಳ ವಿಶ್ಲೇಷಣೆ ಮಾಡೋಕೆ ಶುರು ಮಾಡಿದೆ ನೋಡಿ, ಅವಾಗ ರಾಜಣ್ಣ ಇನ್ನೂ ಇಷ್ಟ ಆಗಿ ಬಹಳ ಹತ್ತಿರವಾದ್ರು.

“ಆಡು ಮುಟ್ಟದ ಸೊಪ್ಪಿಲ್ಲ, ರಾಜಕುಮಾರ್ ಅವರು ಮಾಡದ ಪಾತ್ರಗಳಿಲ್ಲ” ಅಂತ ಸುಮ್ನೇನಾ ಹೇಳೋದು! ಎಂಥಾ ಅದ್ಬುತ ನಟ… ನಿರ್ದೇಶಕರ ನಟ ರಾಜಣ್ಣ. ಕನ್ನಡ ಚಿತ್ರರಂಗದಲ್ಲಿ ಬಂದ ಪೌರಾಣಿಕ ಕಥೆಯ ಚಿತ್ರಗಳು, ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳು, ಸಂಸಾರದ ಕಥೆಯುಳ್ಳ ಚಿತ್ರಗಳು ಹಾಗು ಡಿಟೆಕ್ಟಿವ್ ಕಥೆ ಆಧಾರಿತ ಚಿತ್ರಗಳಿಗೆಲ್ಲ ಬಣ್ಣ ಹಚ್ಚಿದ ರಾಜಕುಮಾರ್ ಅವರು, ಚಿತ್ರರಂಗದಲ್ಲಿ ಆದ ಎಲ್ಲಾ ಬದಲಾವಣೆಗಳಿಗೂ ತಮ್ಮನ್ನು ಒಡ್ಡುಕೊಂಡು, ಎಲ್ಲಾ ತರಹದ ಪಾತ್ರಗಳಲ್ಲೂ ತಮ್ಮ ಮನೋಜ್ಞ ಅಭಿನಯದಿಂದ ಕನ್ನಡ ನಾಡಿನ ಚಿತ್ರರಸಿಕರ ಮನಸ್ಸನ್ನ ಗೆದ್ದವರು. ಅವರು ನಿರ್ವಹಿಸುವ ಪಾತ್ರದ ಆಳಕ್ಕೆ ಇಳಿದು ಅಭಿನಯಿಸುತ್ತಿದ್ದುದ್ದನ್ನು ನೋಡಿದರೆ, ಆ ಕಥೆ ನಿಜವಾಗಿಯೂ ನಮ್ಮ ಕಣ್ಣ ಮುಂದೆ ನೆಡೆಯುತ್ತಿರುವುದೇನೋ ಎಂದು ಭಾಸವಾಗುತ್ತದೆ.

ಅವರು ಅಭಿನಯಿಸಿದ ಚಿತ್ರದ ಪಾತ್ರಗಳಲ್ಲಷ್ಟೇ ಸರಳತೆಯನ್ನು ತೋರದೇ, ನಿಜಜೀವನದಲ್ಲಿಯೂ ಕೂಡ ತುಂಬ ಸರಳವಾಗಿ, ತಾವು ನಂಬಿರುವ ಸಿದ್ದಾಂತಕ್ಕೆ ಅನುಗುಣವಾಗಿ, ದೊಡ್ಡ ನಟನಾದರೂ ಕೂಡ ಯಾವುದೇ ಅಹಂ ಇಲ್ಲದೆ ಬದುಕಿ, ಬರೀ ಚಿತ್ರರಸಿಕರಿಗಲ್ಲದೇ ಎಲ್ಲರಿಗೂ ಆದರ್ಶವಾದ ಬಂಗಾರದ ಮನುಷ್ಯ ಡಾ ರಾಜಕುಮಾರ್ ಅವರ ಹುಟ್ಟಿದ ದಿನ ಈವತ್ತು. ಅವರ ಹುಟ್ಟಿದ ದಿನವೊಂದೇ ಅಲ್ಲದೇ, ಸರ್ವಕಾಲಕ್ಕೂ ನೆನಪಿನಲ್ಲಿ ಇಡಬೇಕಾದ ವ್ಯಕ್ತಿತ್ವ ನಮ್ಮ ರಾಜಣ್ಣನವರದು.

ಇಂತಹ ವ್ಯಕ್ತಿಯ 92 ನೇ ವರ್ಷದ ಹುಟ್ಟಿದ ದಿನಾಚರಣೆಯ ಸಂದರ್ಭದಲ್ಲಿ, ಬೆಳಿಗ್ಗೆಯೇ ಲೇಖನ ಬರೆಯಬೇಕೆಂದುಕೊಂಡಿದ್ದೆ. ಆದರೆ, ಹಲವು ಟಿ ವಿ ಚಾನಲ್ಲುಗಳಲ್ಲಿ ಬೆಳಿಗ್ಗೆಯಿಂದ ಪ್ರಸಾರವಾಗುತ್ತಿದ್ದ ರಾಜಣ್ಣ ಅವರ ಚಿತ್ರ ನೋಡುವುದರಲ್ಲಿ ಮಗ್ನನಾಗಿದ್ದು, ದಿನದ ಕೊನೆಯಲ್ಲಿ ಬಿಡುವು ಮಾಡಿಕೊಂಡು ಬರೆದಿರುವೆ. ರಾಜಣ್ಣ ಅವರ ಸರಳತೆ ಹಾಗು ಚಿಂತನೆ ಅಮರವಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಾಗರ | ಇಂದು ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಪುಸ್ತಕಗಳ ಬಿಡುಗಡೆ

Published

on

ಸುದ್ದಿದಿನ,ಸಾಗರ : ಅ.ರಾ.ಶ್ರೀನಿವಾಸರು ಬರೆದ ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಈ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಇಂದು ಸಂಜೆ ಪಟ್ಟಣದ ಸಿಜಿಕೆ ಸಭಾಭವನದಲ್ಲಿ ಅಂತರಂಗ ಪ್ರಕಾಶನ ಹಮ್ಮಿಕೊಂಡಿದೆ.

ಪುಸ್ತಕಗಳ ಬಿಡುಗಡೆಯನ್ನು ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಎಂ.ವಿ ಮಾಡಲಿದ್ದು, ಅಧ್ಯಕ್ಷತೆಯನ್ನುನಿವೃತ್ತ ಪ್ರಾಂಶುಪಾಲರಾದ ಅ.ರಾ.ಲಂಬೋದರ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ‘ಆರು ಲಘು ನಾಟಕಗಳು’ ಕುರಿತು ನಿವೃತ್ತ ಪ್ರಾಂಶುಪಾಲರು ಡಾ. ಜಯಪ್ರಕಾಶ್ ಮಾವಿನಕುಳಿ ಹಾಗೂ ‘ಗುಚ್ಛ’ ಕುರಿತು ಸಹಕಾರ ಸಂಘಗಳ ನಿವೃತ್ತ ಉಪ ನಿಬಂಧಕರು ಜಯಪ್ರಕಾಶ್ ತಲವಾಟ ಅವರು ಮಾತನಾಡಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ

Published

on

ಸುದ್ದಿದಿನಡೆಸ್ಕ್: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್(93) ಅವರು ಅನಾರೋಗ್ಯದಿಂದ ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ತಿಂಗಳಲ್ಲಿ ಕುಸಿದು ಬಿದ್ದಿರುವುದರಿಂದ ಅವರ ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಬೆಳಿಗ್ಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶ್ರೇಷ್ಠ ಭಾರತೀಯ ಶಾಸ್ತ್ರೀಯ ಸಂಗೀತಗಾರ ಆಗಿರುವ ಅವರು ಸರೋದ್ ವಾದಕರೂ ಆಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೊಲೆ ಕೇಸ್ ; ನಾಳೆ ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಪ್ರತಿಭಟನೆ

Published

on

ಸುದ್ದಿದಿನಡೆಸ್ಕ್: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡದ ಚಲನಚಿತ್ರ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ.

ಈ ಸಂಬಂಧ ನಾಳೆ ಚಿತ್ರದುರ್ಗದಲ್ಲಿನ ವಿವಿಧ ಸಂಘಟನೆಗಳು ದರ್ಶನ್ ವಿರುದ್ಧ ಪ್ರತಿಭಟಿಸಿ ತನಿಖೆ ಪಾರದರ್ಶಕವಾಗಿರ ಬೇಕು ಹಾಗೂ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಡಿಸಿಗೆ ಮನವಿಯನ್ನು ಸಲ್ಲಿಸಲಿದ್ದಾರೆ.

ಮೈಸೂರಿನ ದರ್ಶನ್ ಒಡೆತನದ ಫಾರ್ಮ್ ಹೌಸ್‌ನಲ್ಲಿ ೧೦ ಮಂದಿಯನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ತಿಳಿಸಿವೆ. ಹೆಚ್ಚಿನ ವಿಚಾರಣೆಗಾಗಿ ದರ್ಶನ್ ಅವರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಬೆಂಗಳೂರಿನ ಸುಮನಹಳ್ಳಿ ಬಳಿಯ ವೃಷಭಾವತಿ ನಾಲೆಯಲ್ಲಿ ಅಪಾರ್ಟ್‌ಮೆಂಟ್ ಕಟ್ಟಡದ ಮುಂಭಾಗದಲ್ಲಿ ರೇಣುಕಾಸ್ವಾಮಿಯ ಶವ ಪತ್ತೆಯಾಗಿತ್ತು. ದರ್ಶನ್ ಚಿತ್ರದುರ್ಗ ಅಭಿಮಾನಿಗಳ ಸಂಘದ ಅಧ್ಯಕ್ಷರಿಗೆ ಕರೆ ಮಾಡಿ ರೇಣುಕಾಸ್ವಾಮಿ ಎಲ್ಲಿದ್ದಾರೆ ಎಂಬುದನ್ನು ಪತ್ತೆಮಾಡಿ ಬೆಂಗಳೂರಿಗೆ ಕರೆತರುವಂತೆ ಹೇಳಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending