ನೆಲದನಿ
‘ಶರಣ ಶ್ರೇಷ್ಠ ಅಂಬಿಗರ ಚೌಡಯ್ಯ’ ರ ಬಗ್ಗೆ ನೀವಿಷ್ಟು ತಿಳಿಯಲೇ ಬೇಕು..!
ತೀಕ್ಷ್ಣವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅಂಬಿಗರ ಚೌಡಯ್ಯ. ಬಸವ ಬಾನಂಗಳದಲ್ಲಿ ಶಿವಶರಣರೆಂಬ ಅಮೂಲ್ಯ ನಕ್ಷತ್ರಗಳು ಮಿನುಗಿದವು. ಈ ನಕ್ಷತ್ರಗಳಲ್ಲಿ ಧ್ರುವತಾರೆಯಂತೆ ಮಿನುಗಿದವರು ಚೌಡಯ್ಯ. ನ್ಯಾಯನಿಷ್ಠುರಿ, ಖಂಡಿತವಾದಿ ಎನಿಸಿದ ಅವರ ಜಯಂತಿಯನ್ನು ಇದೇ ಜ. 21 ಮಂಗಳವಾರದಂದು ರಾಜ್ಯಾದ್ಯಂತ ಆಚರಿಸಲಾಯಿತು.
ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸುಮಾರು ಏಳು ಶತಮಾನಗಳಷ್ಟು ಮೊದಲೇ ಮುನ್ನುಡಿ ಬರೆದವರು 12ನೇ ಶತಮಾನದ ಶಿವಶರಣರು. ಪ್ರಜೆಗಳಿಗೆ ಪರಮಾಧಿಕಾರ, ವ್ಯಕ್ತಿಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳಿಗೆ ಸರ್ವಸಮಾನತೆಯೆಂಬ ಕನ್ನಡಿ ಹಿಡಿದವರೇ ಅವರು. ತಮ್ಮ ವಚನಗಳ ಮೂಲಕ ಶರಣರು ಅಂದು ಸಾರಿದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಶಿವಪುರದಲ್ಲಿ (ಇಂದಿನ ಚೌಡದಾನಪುರ) ಜನಿಸಿದ ಈ ಮಹಾಶಿವಶರಣರಿಗೆ ಉದ್ದಾಲಕರೆಂಬ ಗುರುಗಳು. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂಬ ವಚನಕ್ಕೆ ತಕ್ಕಂತೆ ಇರುವ ಧರ್ಮಪತ್ನಿ ಮತ್ತು ಪುರವಂತ ಎಂಬ ಪುತ್ರ. ಸದ್ಗುರುವಿನ ಕೃಪಾಕಟಾಕ್ಷದಿಂದ ಶ್ರೇಷ್ಠ ತತ್ವಜ್ಞಾನಿಯಾದ ಇವರು ವಚನಗಳನ್ನು ರಚಿಸಿ ಶಿವಶರಣರ ಪಂಕ್ತಿಯಲ್ಲಿ ಅಗ್ರಸ್ಥಾನಕ್ಕೇರಿದರು.
ಚೌಡದಾನಪುರದಲ್ಲಿ ಪೂರ್ವ ಪಶ್ಚಿಮವಾಹಿನಿಯಾಗಿ ಹರಿಯುತ್ತಿರುವ ತುಂಗಭದ್ರಾನದಿಯಲ್ಲಿ ದೋಣಿ ಮೂಲಕ ನದಿ ದಾಟಿಸುವ ಕಾಯಕ ಮಾಡುತ್ತ ವಚನಗಳನ್ನು ರಚಿಸಿದ್ದಾರೆ. ಗುರುವಿನ ಘನಕೃಪೆಗೆ ಪಾತ್ರರಾಗಿ ಅವರ ಮೂಲಕ ಲಿಂಗಾಂಗ ಸಾಮರಸ್ಯವನ್ನರಿತು ಅಪಾರ ಪಾಂಡಿತ್ಯವನ್ನು ಗಳಿಸಿದರು. ಕಲ್ಯಾಣದ ಕೀರ್ತಿಯನ್ನು ಕೇಳಿ ಅನುಭವಮಂಟಪಕ್ಕೆ ಬಂದ ಈ ಶರಣದಂಪತಿಯನ್ನು ಶರಣ ಪ್ರಮಥರೆಲ್ಲ ಆದರದಿಂದ ಬರಮಾಡಿಕೊಂಡರಂತೆ. ಬಸವಪ್ರಭುವನ್ನು ಕಂಡು ಆನಂದಪರವಶರಾಗಿ ಭಕ್ತಿಯಿಂದ ಕೈ ಮುಗಿದ ಚೌಡಯ್ಯನವರು;
‘ಬಸವಣ್ಣನೇ ಭಕ್ತ ಪ್ರಭುದೇವರೇ ಜಂಗಮರು
ಇಂತೆಂಬ ಭೇದವಿಲ್ಲಯ್ಯ, ಅರಿವೇ ಗುರು,
ಗುರುವೇ ಪರಶಿವನು ಇದು ತಿಳಿದವನೇ
ಪರಂಜ್ಯೋತಿಯೆಂದ ಅಂಬಿಗರ ಚೌಡಯ್ಯ’
ಎಂಬ ವಚನದ ಮೂಲಕ ಮನಸಾರೆ ಹೊಗಳಿದ್ದಾರೆ. ಶಿವಶರಣರ ಸಂಗದಲ್ಲಿ ಕಾಲಕಳೆದು ಪರಿಪಕ್ವರಾದ ಇವರು ರಚಿಸಿದ ವಚನಗಳು ಹಸಿಗೋಡೆಯಲ್ಲಿ ಹರಳು ಎಸೆದಂತಿವೆ. ಇವರ ವಚನಗಳನ್ನು ಕಂಡ ಕವಿ ಕಾವ್ಯಾನಂದರು ‘ನಿಜದ ನಗಾರಿ ನಿರ್ಭಯತೆಯ ಭೇರಿ ಈ ಅಂಬಿಗರ ಚೌಡಯ್ಯ’ ಎಂದಿದ್ದಾರೆ. ಮುಪ್ಪಿನ ಷಡಕ್ಷರಿಯವರು ತಮ್ಮ ಸುಬೋಧ ಸಾಗರದಲ್ಲಿ ‘ಅಂಬಿಗರ ಚೌಡಯ್ಯನ ಮುಂಬಾಗಿಲನ್ನು ಕಾಯುವ ನಂಬಿಗೆಯ ಸೇವಕರು ಕುಂಭಿನಿಯೊಳಗಿನ್ನು ಸರಿಯದಾರು?’ ಎಂದು ಹಾಡಿ ಹರಸಿದ್ದಾರೆ.
ಘನಲಿಂಗದೇವನು (1480) ‘ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯಯಿಂತಿಪ್ಪ ಶಿವಶರಣರ ಮನೆ ಬಾಗಿಲನಿಕ್ಕುವ ಸೊಣಗನ ಮಾಡಿ ಎನ್ನಿರಿಸಯ್ಯ ಎಂದು ತಮ್ಮ ವಚನವೊಂದರಲ್ಲಿ ಹೇಳಿರುವುದೇ ಇದಕ್ಕೆ ನಿದರ್ಶನವಾಗಿದೆ. ಮಹಾಕವಿ ಷಡಕ್ಷರಿಯವರು ತಮ್ಮ ‘ಬಸವರಾಜ ವಿಜಯ’ದಲ್ಲಿ ‘ನಿಡುಗುಡಿಮಾರನಂಬಿಗರ ಚೌಡಯ್ಯ’ ಎಂದು ಸ್ಮರಿಸಿದ್ದರೆ, ಮಹಾಲಿಂಗ ವಿರಚಿತ ಗುರುಬೋಧಾಮೃತದ ‘ಕುಂಬಾರ ಗುಂಡಯ್ಯ, ಅಂಬಿಗರ ಚೌಡಯ್ಯ, ಕೆಂಭಾವಿಯೊಳಗೆ ಮೆರೆವ ಬೋಗಣ್ಣನಿಗೆ ಸಂಭ್ರಮದೊಳೆರಗಿ ನಮಿಸುವೆ’ ಎಂಬ ಪದಗಳು ಹೃದಯರ್ಸಯಾಗಿವೆ.
ಮಹಾಶಕ್ತಿಸಂಪನ್ನರಾದ ಅಂಬಿಗರ ಚೌಡಯ್ಯನವರ ಮಹಿಮೆಯಿಂದ ಸರ್ಪ ಕಚ್ಚಿ ಮೃತಪಟ್ಟ ಸೈನಿಕನು ಮರುಜೀವ ಪಡೆದ. ಕ್ಷಯ, ಕುಷ್ಠರೋಗಿಗಳು ಗುಣಮುಖರಾದರು. ಅವರು ನುಡಿದ ವಾಣಿಯಿಂದ ಭಕ್ತರ ಸಕಲ ಬೇಡಿಕೆಗಳು ಈಡೇರಿದವು. ಚೌಡಯ್ಯನವರ ಪಾರಮಾರ್ಥ ಸಾಧನೆಯನ್ನು ಕಂಡು ಮಾರುಹೋದ ಗುತ್ತಲ ಅರಸನು ಅವರಿಗೆ ದಾಸೋಹಕ್ಕೆಂದು ಶಿವಪುರಕ್ಕೆ ಹೊಂದಿಕೊಂಡಿರುವ ಭೂಮಿಯನ್ನು ಕಾಣಿಕೆಯಾಗಿ ನೀಡಿದನು.
ತಮಗೆ ನೀಡಿದ ಈ ಭೂಮಿಯನ್ನು ಚೌಡಯ್ಯನವರು ತಮ್ಮ ಮಗ ಪುರವಂತ ಹಾಗೂ ಶಿವದೇವರಿಗೆ ದಾನವಾಗಿ ನೀಡಿದರು. ಅದೇ ಕಾರಣಕ್ಕಾಗಿ ಶಿವಪುರಕ್ಕೆ ‘ಚೌಡಯ್ಯ ದಾನಪುರ’ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತಿದ್ದು, ಅದೇ ಇಂದು ಚೌಡದಾನಪುರವಾಗಿದೆ. ಬಸವಣ್ಣನವರ ಗರಡಿಯಲ್ಲಿ ಪಳಗಿದ ಇವರ ಅನುಭವವು ಅಮೃತಧಾರೆಯಾಗಿ ವಚನಗಳ ರೂಪದಲ್ಲಿ ಹರಿದುಬಂದಿವೆ. ನಿಜವಾದ ಭಕ್ತನಾರು? ಎಂಬುದನ್ನು ಕುರಿತು ತಮ್ಮ ವಚನದಲ್ಲಿ
‘ಓಡುವಾತ ಲೆಂಕನಲ್ಲ ಬೇಡುವಾತ ಭಕ್ತನಲ್ಲ
ಓಡಲಾಗದು ಲೆಂಕನು, ಬೇಡಲಾಗದು ಭಕ್ತನು
ಓಡೆನಯ್ಯ, ಬೇಡೆನಯ್ಯ ಎಂದ ಅಂಬಿಗರ ಚೌಡಯ್ಯ’ಎಂದು ಸಾರಿದ್ದು ಅಮೋಘವಾಗಿದೆ.
ಪರಮಾತ್ಮನ ನಿಜಸ್ವರೂಪವನ್ನು ಕುರಿತು
‘ಅಸುರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ
ಬ್ರಹ್ಮಕಪಾಲವಿಲ್ಲ ಭಸ್ಮಭೂಷಣನಲ್ಲ
ವೃಷಭ ವಾಹನನಲ್ಲ, ಋಷಿಯ ಮಗಳೊಡನಿರ್ದಾತನಲ್ಲ
ಎಸಗುವ ಸಂಸಾರದ ಕುರುಹಿಲ್ಲದಾತಂಗೆ
ಹೆಸರಾವುದೆಂದಾತ ಅಂಬಿಗರ ಚೌಡಯ್ಯ’
ಎಂದಿದ್ದಾರೆ.
ಸ್ಥಿತಪ್ರಜ್ಞರಾದ ಅವರು ಕೊನೆಯಲ್ಲಿ ಚೌಡದಾನಪುರದ ನದಿಯ ದಡದಲ್ಲಿ ಸಮಾಧಿಸ್ಥರಾದರೆಂದು ತಿಳಿದುಬರುತ್ತದೆ. ಆದ್ದರಿಂದ ಈ ನದಿದಡದಲ್ಲಿರುವ ದಿಬ್ಬದ ಮೇಲಿರುವ ಸಮಾಧಿಯನ್ನು ‘ಅಂಬಿಗರ ಚೌಡಯ್ಯನವರ ಸಮಾಧಿ’ ಎಂದು ಗುರುತಿಸಲಾಗಿದೆ. ಪ್ರತಿವರ್ಷ ಅಂಬಿಗರ ಚೌಡಯ್ಯನವರ ಜಯಂತಿಯ ನಿಮಿತ್ಯ ಸಂಕ್ರಮಣದ ಪರ್ವ ಕಾಲದಲ್ಲಿ ಬಹು ಸಡಗರ ಸಂಭ್ರಮದಿಂದ ಇಲ್ಲಿ ಜಾತ್ರಾಮಹೋತ್ಸವವು ಜರಗುತ್ತಲಿತ್ತು. ಈಗ ಪ್ರತಿವರ್ಷ ಜನವರಿ 21ರಂದು ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಗುತ್ತದೆ.
ಹನ್ನೆರಡನೇ ಶತಮಾನ ಎನ್ನುವುದು ಈಗಲೂ ನಮ್ಮನ್ನು ಭಾವನಾತ್ಮಕವಾಗಿಯೇ ಆಳುತ್ತಿದೆ. ಆಚರಣೆಗಳ ಭಾರಕ್ಕೆ ಬಗ್ಗಿ ಹೋಗಿದ್ದ ಸನಾತನ ಸಂಸ್ಕೃತಿಯಲ್ಲಿ ಬೆಳೆದಿದ್ದ ವರ್ಣಕಳೆಯನ್ನು ಅಂದು ವಚನ ಸಂಸ್ಕೃತಿಯೆಂಬ ಧಾರ್ಮಿಕ ಕ್ರಾಂತಿಯು ಆವರಿಸಿಕೊಂಡಿತ್ತು. ತನ್ನ ಸರಳವಾದ ಭಾಷೆಯ ಮೂಲಕ ಜನರ ನಾಡಿ ಮಿಡಿತದೊಳಗೆ ಮಿಳಿತವಾಗಿ ಎಲ್ಲ ವರ್ಗಗಳ ವಿವೇಕ ಜಾಗೃತಿಯ ಕೆಲಸವನ್ನು ಅದು ಪರಿಣಾಮಕಾರಿಯಾಗಿ ಮಾಡಿತ್ತು. ಆ ಧಾರ್ಮಿಕ ಕ್ರಾಂತಿಗೆ ಶೋಷಿತ ವರ್ಗಕ್ಕೆ ಬೆನ್ನೆಲುಬಾಗುವ ಆಶಯವಷ್ಟೇ ಇರಲಿಲ್ಲ. ಎಲ್ಲೆಡೆಯೂ ಸಮಾನತೆಯ ತತ್ವವನ್ನು, ಜಾತಿ ರಹಿತ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಷ್ಕಳಂಕ ಕಾಳಜಿಯೂ ಅದಕ್ಕಿತ್ತು.
ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಒಬ್ಬರೇ ಇಬ್ಬರೇ! ಹತ್ತಾರು ಶಿವಶರಣರು ವರ್ಣತಂತುಗಳನ್ನು ಕಿತ್ತೊಗೆಯಲು ಪಣತೊಟ್ಟು ಸಮಾಜದ ಅಂತ:ಸತ್ವವನ್ನು ಬಡಿದೆಬ್ಬಿಸಿದ್ದರು. ವಚನ ಸಂಸ್ಕೃತಿಯು ಸಮಾಜಕ್ಕೆ ನೀಡಿದ ಕ್ರಿಯಾತ್ಮಕ ಬೆರಗು, ಒದಗಿಸಿದ ಆರೋಗ್ಯಕರ ಸಂದೇಹ ಮತ್ತು ಹರವಿಟ್ಟ ಅವಿಚ್ಛಿನ್ನ ದೃಢತೆಯ ಅಭಿವ್ಯಕ್ತಿ ಇಂದಿಗೂ ಆದರ್ಶಯುತವೇ ಆಗಿ ಉಳಿದಿದೆಯೆಂದರೆ ಅದು ನಮ್ಮ ಭಾಷೆಯ, ಸಂಸ್ಕೃತಿಯ ಉತ್ಕೃಷ್ಟತೆಯನ್ನು ಆ ದಿನಗಳಲ್ಲಿಯೇ ಸ್ಪರ್ಶಿಸಿದ್ದಲ್ಲಿ ಯಾವುದೇ ಸಂದೇಹ ಇಲ್ಲ.
ಇಂತಹ ಶರಣ ಸಂಸ್ಕೃತಿಯಲ್ಲಿ ಸಾಗಿಹೋದ ಮಹಾಚೇತನಗಳ ಕುರಿತು ಸ್ವಲ್ಪ ಸಂಯಮದೊಂದಿಗೆ ಅವಲೋಕಿಸಿದಾಗ ಒಬ್ಬ ವ್ಯಕ್ತಿ ನಮ್ಮನ್ನು ಬಿಟ್ಟೂಬಿಡದ ರೀತಿಯಲ್ಲಿ ಆವರಿಸಿಕೊಂಡು ಅಂತರಂಗವನ್ನು ತಟ್ಟುತ್ತಾನೆ. ರಭಸ ನೀರಿನ ವಿರುದ್ಧ ಈಜುವ ಹಾಯಿದೋಣಿ, ತೆಪ್ಪದಲ್ಲಿ ಕುಳಿತ ಅಮಾಯಕ ಜನ, ಧೀರನಂತೆ ನಿಂತ ಹರಿಗೋಲು ಕೈಯಲ್ಲಿ ಹಿಡಿದ ಆ ಅಂಬಿಗ- ಹೀಗೆಯೇ ಆತನನ್ನು ನಾವು ಕಲ್ಪಿಸಿಕೊಳ್ಳಬೇಕು. ಆ ಅಂಬಿಗನ ಕೈಯಲ್ಲಿದ್ದದ್ದು ಅಂತಿಂತಹ ಹರಿಗೋಲಲ್ಲ. ಅದು ತನ್ನ ಜೊತೆಗಿದ್ದವರನ್ನು ಮನೋಸ್ವಾತಂತ್ರ್ಯದ ನೆಲೆಗೆ ಕರೆದೊಯ್ಯುವ ಭರವಸೆಯ, ಬಂಡಾಯದ ಹರಿಗೋಲು ಎನ್ನುವುದನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.
ಅಂಬಿಗರ ಚೌಡಯ್ಯ ವಚನಕಾರರರೆಲ್ಲರಲ್ಲಿ ಇದ್ದ ಸುಶಿಕ್ಷವಾದ ಅಭಿವ್ಯಕ್ತಿ ಮಾರ್ಗವನ್ನು ತುಳಿಯಲಿಲ್ಲ. ತನ್ನ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ಆತ ತನ್ನದೇ ತೀಕ್ಷ್ಣಪದಗಳ ಆಡುನುಡಿಯ ಮೂಲಕ ನಿರ್ಭಿಡೆಯಿಂದ ಬೆತ್ತಲಾಗಿಸುತ್ತಾ ಹೋದ. ಅಲ್ಲದೇ ಎಲ್ಲಾ ವಚನಕಾರರ ಹಾದಿಯಲ್ಲಿ ತಾನು ನಡೆಯದೇ ಇಷ್ಟ ದೈವದ ಬದಲಿಗೆ ತನ್ನದೇ ಹೆಸರನ್ನು ತನ್ನ ವಚನಗಳ ಅಂಕಿತವಾಗಿ ಬಳಸಿಕೊಂಡು ಸಮಾಜದ ಓರೆಕೋರೆಗಳನ್ನು ತಿದ್ದುವ ಯತ್ನ ಮಾಡಿದ. ಅಂಬಿಗರ ಚೌಡಯ್ಯ ನಿಜಾರ್ಥದಲ್ಲಿ ಬಂಡಾಯ ವಚನ ಸಂಸ್ಕೃತಿಯ ಹರಿಕಾರ. ವಚನ ಸಂಸ್ಕೃತಿಯ ಆ ತರ್ಕದ ಲೆಕ್ಕಾಚಾರಗಳಿಂದ ದೂರವುಳಿದು ಗಟ್ಟಿ ಮೌಲ್ಯಗಳ, ನಿರ್ಭಿಡೆಯ ನುಡಿಗಟ್ಟುಗಳ ಮೂಲಕ ಸಮಾಜದ ಓರೆಕೋರೆಗಳನ್ನು ಬೆತ್ತಲೆಯಾಗಿಸಿದ ಚೌಡಯ್ಯನ ಆಕ್ರೋಶದ ಅಭಿವ್ಯಕ್ತಿಯ ಹಾದಿ ಇಂದಿಗೂ ನಮ್ಮನ್ನು ಬೆಚ್ಚಿಸಿ ವಿಸ್ಮಯಗೊಳಿಸುತ್ತದೆ. ಆತ, ಮುನ್ನೂರರ ಆಸುಪಾಸಿನ ಸಂಖ್ಯೆಯ ವಚನಗಳನ್ನು ಬರೆದಿದ್ದಾನೆ. ಒಂದೆರಡನ್ನು ಓದಿಕೊಳ್ಳಿ. ಆತನ ಆಶಯ, ಧಾಟಿ ನಿಮಗೆ ಅರ್ಥವಾದೀತು.
ಉಚ್ಚೆಯ ಬಚ್ಚಲಲ್ಲಿ ಹುಟ್ಟಿ, ನಾ ಹೆಚ್ಚು
ನೀ ಹೆಚ್ಚು ಎಂಬುವವರನ್ನು ಮಚ್ಚಿಲೇ ಹೊಡೆಯೆಂದಾನಂಬಿಗರ ಚೌಡಯ್ಯ
ಕಂತೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ
ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯಿ ಮೇಲೆ
ಅರ್ಧ ಮಣೆಯ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟಕನೆ
ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ
ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ
ಎಂದು ಹೊಡೆದಾಡುವಂತಹ ಅಣ್ಣಗಳನ್ನು
ಹಿಡಿತಂದು ಮೂಗನೆ ಸವರಿ ಮೆಣಸಿನ ಹಿಟ್ಟು
ತುಪ್ಪವ ತುಂಬಿ ನಮ್ಮ ಪಡಿಹಾರಿ ಉತ್ತಣ್ಣನ
ವಾಮ ಪಾದುಕೆಯಿಂದ ಫಡಫಡನೆ ಹೊಡೆಯಬೇಕೆಂದ
ನಮ್ಮ ಅಂಬಿಗರ ಚೌಡಯ್ಯ
ಮೊಲೆ ಮೂಡಿ ಬಂದರೆ ಆ ಪಿಂಡವನು ಹೆಣ್ಣೆಂಬರು
ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು
ಆ ಇಬ್ಬರ ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ
ನೋಡಿರೆಂದನಮ್ಮಂಬಿಗರ ಚೌಡಯ್ಯ
ಈಶ್ವರನನ್ನು ಕಾಂಬುದೊಂದಾಶೆಯುಳ್ಳೊಡೆ
ಪರದೇಶಕ್ಕೆ ಹೋಗಿ ಬಳಲದಿರು!
ಕಾಶಿಯಲ್ಲಿ ಕಾಯುವ ವಿನಾಶ ಮಾಡಬೇಡ!
ನಿನ್ನಲ್ಲಿ ನೀ ತಿಳಿದು ನೋಡಾ, ಜಗವು ನಿನ್ನೊಳಗೆಂತಾದ ಅಂಬಿಗರ ಚೌಡಯ್ಯ
ಅಂತರಂಗದ ಬೇಗುದಿಯನ್ನು, ಕಳಕಳಿಯನ್ನು ನಿರ್ಭಿಡೆಯಿಂದ ಪ್ರಕಟಿಸಿದ ಅಂಬಿಗರ ಚೌಡಯ್ಯನ ಧಾಟಿ ಓದುಗನಿಗೆ ತೀವ್ರ ಒರಟೆನಿಸುವುದು ಸಹಜ. ಆದರೆ ಪ್ರಮುಖವಾಗಿ ನಾವು ಗಮನಿಸಬೇಕಾದ್ದು ಆ ಸಂವೇದನಾಶೀಲ ವಿಡಂಬನೆಯ ವಿಚಾರ ಸಿರಿವಂತಿಕೆ ಶತಮಾನಗಳು ಕಳೆದರೂ ಪ್ರಸ್ತುತವೇ ಆಗಿ ಉಳಿಯಬೇಕಿರುವ ಅವಶ್ಯಕತೆ.ಒಂದು ಕ್ಷಣ ನಿಲ್ಲಿ! ಇಲ್ಲಿ ನಾನು ವಿವರಿಸಹೊರಟಿರುವುದು, ಅಂಬಿಗರ ಚೌಡಯ್ಯನ ಬಂಡಾಯ ಮನೋಧರ್ಮದ ಕ್ರಾಂತಿ ಹಾದಿಯ ವೈಭವವನ್ನಲ್ಲ. ದುಷ್ಟ ಸಮಾಜದೆಡೆಗಿನ ಆತನ ತಾರ್ಕಿಕ ವಿಚಾರಣೆಯ ದಿಟ್ಟ ಧಾಟಿಯೂ ಅಲ್ಲ. ಮನೋದಾಸ್ಯದ ವಿರುದ್ಧ, ಜಾತಿ ವ್ಯವಸ್ಥೆಯ ವಿರುದ್ಧ ತನ್ನದೇ ಕಟು ನಿಃಸ್ವಾರ್ಥ ರೀತಿಯಲ್ಲಿ ಹೋರಾಡಿ ವಿಶ್ವಮಾನವ ಸಂದೇಶವನ್ನು ಬಿತ್ತಿ ಹೋದ ಛಡಿ ಏಟಿನ ಚೌಡಯ್ಯ ಇಂದಿನ ವ್ಯವಸ್ಥೆಗೆ ಅಪ್ರಸ್ತುತನಾಗುತ್ತಿದ್ದಾನೆಯೇ? ಇಂದಿನ ಅಂಬಿಗರ ಚೌಡಯ್ಯ, ಕಾಲಘಟ್ಟವೊಂದರ ಸಮಾಜವನ್ನು ಹೊಸಸ್ತರಕ್ಕೆ ಕರೆದೊಯ್ದಿದ್ದ ವಚನ ಸಂಸ್ಕೃತಿಯ ವೈಫಲ್ಯದ ಒಂದು ಪಾರ್ಶ್ವವನ್ನು ಬಿಂಬಿಸುತ್ತಿದ್ದಾನೆಯೇ? ಜಗತ್ತಿನ ಮುನ್ನಡೆಯೂ ಕಾಲದ ದೃಷ್ಟಿಯಿಂದ ಹಿನ್ನೆಡೆಯನ್ನು ಕಾಣುತ್ತದೆಯೇ? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಕಾಲ ಇದು ಎನ್ನಿಸುತ್ತದೆ.
ಅಂಬಿಗರ ಚೌಡಯ್ಯನಂಥಹ ನಿಜಶರಣನ ಆ ಅಪೂರ್ವ ಸಂದೇಶಗಳು ಶತಮಾನಗಳು ಕಳೆಯುತ್ತಾ ಹೋದಂತೆ ಸಾಮಾಜಿಕ ವ್ಯವಸ್ಥೆಯಲ್ಲಿ ಗಟ್ಟಿಯಾಗುತ್ತಾ ಸಾಗಬೇಕಿತ್ತು. ಶೋಷಣೆಗೆ ಒಳಗಾದ ಸಮಾಜ ವರ್ಗದ ಅಂತಃಶಕ್ತಿ ಸ್ವಾವಲಂಬನೆಯಿಂದ ಸುಭದ್ರವಾಗಬೇಕಿತ್ತು. ವ್ಯವಸ್ಥೆಯಲ್ಲಿ ರೂಪಿತವಾದ ಜನಪರ ಕಲ್ಯಾಣ ಕಾರ್ಯಕ್ರಮಗಳು ಆ ವರ್ಗಗಳ ಅಂತರಂಗದಲ್ಲಿದ್ದ ಬೇಗುದಿಯನ್ನು ಭಸ್ಮ ಮಾಡಬೇಕಿತ್ತು. ಮತ್ತು ಇಡೀ ಸಮಾಜ, ಜಾತಿ-ವರ್ಗಗಳನ್ನು ಮೀರಿ ವಿಶ್ವಮಾನವ ಪ್ರಜ್ಞೆಯ ಉದಾರತೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರಬೇಕಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿದಾಗ ಇಡೀ ವಚನ ಸಂಸ್ಕೃತಿಯ ಪರಿಣಾಮಗಳ ಬಗ್ಗೆ ವಿಷಾದವೆನಿಸುವ ಸಿನಿಕತೆ ಮೂಡುತ್ತದೆ.
ಚೌಡಯ್ಯ ಈಗ ಒಂದು ಜಾತಿಯ ಸ್ವತ್ತಾಗಿ ಸೊರಗಿದ್ದಾನೆ ಮತ್ತು ಆತನಷ್ಟೇ ಅಲ್ಲ, ಎಲ್ಲ ಶರಣರೂ ಒಂದೊಂದು ಜಾತಿಗೆ ಸೀಮಿತವಾಗಿಬಿಟ್ಟಿದ್ದಾರೆ. ಆಯಾ ಜಾತಿಯ ಇಂದಿನ ಜನಸಂಖ್ಯೆಯ ಪ್ರಾಬಲ್ಯದ ಮೇಲೆ ಆಯಾ ಶರಣರ ಸಂದೇಶಗಳು ಪ್ರಸ್ತುತತೆಯ ಕೀರ್ತಿಯನ್ನು ಗಳಿಸಿಕೊಳ್ಳುತ್ತಿರುವುದೂ ವಿಷಾದದ ಸತ್ಯ. ಅಂಬಿಗರ ಚೌಡಯ್ಯನ ವಿಷಯದಲ್ಲಿಯಂತೂ, ಶರಣನಾಗಲು ಆತ ದೀಕ್ಷೆ ನೀಡಿದ ಒಂದು ಜಾತಿ ಅವನನ್ನು ಒಂದೆಡೆಗೆ ಎಳೆಯುತ್ತಿದ್ದರೆ ಅವನು ಜನಿಸಿದ ಮೂಲಜಾತಿಯ ಮತಸ್ಥರು ಆತನನ್ನು ತಮ್ಮ ಸಾಮಾಜಿಕ ಅಸ್ತಿತ್ವದ ಕುರುಹಾಗಿ ಸ್ವೀಕರಿಸಿ ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆತ, ಇಂದು ರಾಜಕಾರಣಿಗಳಿಗೆ ಮತಬ್ಯಾಂಕನ್ನು ಸೃಷ್ಟಿಸುವ ಮೋಡಿಗಾರ.
ಇಂದು ಆತನ ಹೆಸರಿನಲ್ಲಿ ಎರಡು ವಿಶ್ವ ವಿದ್ಯಾಲಯಗಳಲ್ಲಿ ‘ಪೀಠ’ ಎನ್ನುವ ಗದ್ದುಗೆಗಳನ್ನು ಸ್ಥಾಪಿಸಲಾಗಿದೆ. ರಾಜಕೀಯ ಪ್ರಾಬಲ್ಯದ ಕಾರಣ ಆತನ ಜಯಂತಿಯ ಆಚರಣೆಗೆ ಸರ್ಕಾರದ ಅಧಿಕೃತ ಮುದ್ರೆಯೂ ಬಿದ್ದಿದೆ. ಆತನ ವಚನಗಳಲ್ಲಿದ್ದ ಧರ್ಮ ನಿರ್ಭಿಡತೆಯ, ಜೀವನ ಪ್ರೀತಿಯ ಆಶಯ ಅವನತಿಯೆಡೆಗೆ ಮುಖ ಮಾಡಿ ನಿಲ್ಲುತ್ತಿದೆ. ಜಾತಿಯೆಂಬ ವಿಹೀನ ಆಚರಣೆ ಸಂಸ್ಕೃತಿಯೆಂಬ ಜೀವನತತ್ವವನ್ನೇ ಬುಡಮೇಲು ಮಾಡಲು ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು, ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರಗಳು ಆತನ ತಾತ್ವಿಕ ಸಂದೇಶಗಳನ್ನು, ಜಾತಿ-ಧರ್ಮಗಳ ಸಂಕೋಲೆಗಳಿಂದ ಮುಕ್ತಗೊಳಿಸಿ ಇಡೀ ಸಾಮಾಜಿಕ ವ್ಯವಸ್ಥೆಯೊಳಗೆ ಹರಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿವೆಯೇ? ಈ ಜಾಡಿನಲ್ಲಿ ಸಿಗುವ ಕೆಲವು ಸತ್ಯಗಳು ಇಂದಿನ ಮಟ್ಟಿಗಂತೂ ನಿರಾಶೆಯನ್ನೇ ಮೂಡಿಸುತ್ತವೆ.
1. ರಾಣಿಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ಗ್ರಾಮದ ಪಕ್ಕದಲ್ಲಿಯೇ ವಿಶಾಲವಾಗಿ ಹರಿಯುವ ತುಂಗಭದ್ರೆಯ ತಟದಲ್ಲಿ ಚೌಡಯ್ಯ ಲಿಂಗೈಕ್ಯನಾದ ಸ್ಥಳ ಇದೆ. ಪ್ರತಿ ಮಳೆಗಾಲದಲ್ಲಿನ ನೆರೆಗೆ ಅದಕ್ಕೆ ಮುಳುಗುವ ಭಾಗ್ಯವೂ, ದೌರ್ಭಾಗ್ಯವೂ ಇದೆ. ಅಂಬಿಗನ ಆತ್ಮವಾದ ಕಾರಣ, ಮುಳುಗದೇ ಉಳಿದೆನೆನ್ನುವ ಹಾಗೆ ದರ್ಶನ ನೀಡುವ ಸೌಭಾಗ್ಯವೂ ಅದಕ್ಕಿದೆ. ಈ ಚೌಡಯ್ಯದಾನಪುರದ ಜಾಗವನ್ನು ಅಂಬಿಗರ ಚೌಡಯ್ಯ ತನ್ನ ಗುರುವಾದ ಶಿವದೇವಮುನಿಗಳಿಗೆ ದಾನವಾಗಿ ಕೊಟ್ಟಿರುವ ಬಗ್ಗೆ ಶಿಶುನಾಳ ಷರೀಫರು ರಚಿಸಿದ ‘ಶಿವದೇವ ವಿಜಯಂ’ ಎಂಬ ಪುಸ್ತಕದಲ್ಲಿ ಉಲ್ಲೇಖವಿದೆ. ಹಾಗಾಗಿಯೇ ಊರಿಗೆ ಆ ಹೆಸರು ರೂಢಿಗೆ ಬಂದಿತೆಂದೂ ಅದರಲ್ಲಿ ವಿವರಿಸಲಾಗಿದೆ.
ವೀರಶೈವ ಸಮುದಾಯದ ಶಿವದೇವಮುನಿಗಳು ಆತನಿಗೆ ಲಿಂಗದೀಕ್ಷೆ ನೀಡಿದರೆಂಬ ಕಾರಣಕ್ಕೆ, ಅನುಜನೆಂಬ ಮಮತೆಗೆ ಶ್ರೀ ಶಿವದೇವ ಒಡೆಯರ ಎಂಬ ವಕೀಲರು ಚೌಡಯ್ಯ ಲಿಂಗೈಕ್ಯನಾದ ಸ್ಥಳದಲ್ಲಿ ಗದ್ದುಗೆಯ ಜೀರ್ಣೋದ್ಧಾರ ಮಾಡಿ ೧೯೬೮ರಷ್ಟು ಹಿಂದೆಯೇ ಪುಟ್ಟದಾದ ಐಕ್ಯ ಮಂಟಪವನ್ನು ನಿರ್ಮಿಸಿದ್ದಾರೆ. ಕಾಲಾನುಕ್ರಮದಲ್ಲಿ ಸಾಮಾಜಿಕ ಪರಿಸ್ಥಿತಿಗಳ ಮನ್ವಂತರದ ಹಿನ್ನೆಲೆಯಲ್ಲಿ ರಾಜಕೀಯ ಪ್ರಾಬಲ್ಯಗಳು ಹೆಚ್ಚಿದಂತೆಲ್ಲಾ ಅಂಬಿಗರ ಚೌಡಯ್ಯನ ಮೂಲ ಸಮಾಜಸ್ಥರು ‘ಸಬಲತೆ’ಯನ್ನು ಗಳಿಸಿಕೊಂಡಿದ್ದಾರೆ. ಅದು ಸಹಜವೂ ಹೌದು. ಈ ಕಾರಣಕ್ಕೆ ಅಂಬಿಗರ ಚೌಡಯ್ಯ ತಮ್ಮವನೆಂದು ಹೇಳಿಕೊಳ್ಳುವ ಕಸುವು ಅವರಲ್ಲಿ ವೃದ್ಧಿಯಾಗಿ ಎರಡೂ ವರ್ಗಗಳಲ್ಲಿ ಹಬ್ಬಿದ ವಿಚಾರಭೇದಗಳು ಚೌಡಯ್ಯನ ಆತ್ಮವನ್ನು ಅನಾಥನನ್ನಾಗಿ ಮಾಡಿವೆ! ಇಂದು ಅಂಬಿಗರ ಚೌಡಯ್ಯನ ಐಕ್ಯಮಂಟಪದ ಸುತ್ತಲೂ, ಒಳಗೂ ಕಸ, ಕಡ್ಡಿ, ಕೊಳಚೆಗಳು ನಾರುತ್ತಿವೆ.
ಪಕ್ಕದಲ್ಲಿಯೇ ಮರಳು ಸಾಗಾಣಿಕೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೆ ಸುತ್ತಮುತ್ತಲಿನ ಜಾಗ ಗ್ರಾಮಸ್ಥರ ಬಹಿರ್ದೆಸೆಯ ನಿರಾಳತೆಗೂ ಸಾಕ್ಷಿಯಾಗಿ ನಿಂತಿದೆ. ಪಕ್ಕದಲ್ಲಿಯೇ, ಮೇಲ್ಮಟ್ಟದಲ್ಲಿ ಇದ್ದುದರಲ್ಲಿ ಸುರಕ್ಷಿತವಾಗಿರುವ ಚಾಲುಕ್ಯರ ಕಾಲದ ಮುಕ್ತೇಶ್ವರ ದೇವಸ್ಥಾನ ಪಾರಂಪರಿಕ ಪಟ್ಟ ಗಿಟ್ಟಿಸಿಕೊಂಡು ಅದನ್ನು ಅಣಕಿಸುವಂತೆ ತೋರುತ್ತದೆ.ಒಡೆಯರ ಮತದ ಇಂದಿನ ಮಠಾಧೀಶರು ಅಂಬಿಗರ ಚೌಡಯ್ಯನನ್ನು ಆತನ ಮೂಲ ಸಮುದಾಯ ರಾಜಕೀಯವಾಗಿ ಅಪಹರಿಸಿಕೊಂಡಿರುವ ವಿಷಯದ ಬಗ್ಗೆ ಖಿನ್ನತೆಯ ಉಪೇಕ್ಷೆಯನ್ನು ತೋರಿದಂತೆ ಕಂಡರೆ, ಚೌಡಯ್ಯನ ಮೂಲ ಮತಸ್ಥರು ರಾಜಕೀಯ ನಾಯಕರ ಸಹಕಾರದೊಂದಿಗೆ ಹೊಸದಾಗಿ ಬೇರೊಂದು ಸ್ಥಳದಲ್ಲಿ ‘ಅಂಬಿಗರ ಚೌಡಯ್ಯನ ಪೀಠ’ವನ್ನು ನಿರ್ಮಿಸುವ ಬೃಹತ್ ಕಾರ್ಯದಲ್ಲಿ ತೊಡಗಿದ್ದಾರೆ. ಐಕ್ಯ ಮಂಟಪ ಅನಾಥವಾಗಿದೆ. ತುಂಗಭದ್ರೆಯೂ ಸಹನೆಯಿಂದ ಸೊರಗಿದ್ದಾಳೆ.
2. ಕಳೆದ ಎಂಟು ವರ್ಷಗಳ ಹಿಂದೆ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ‘ಅಂಬಿಗರ ಚೌಡಯ್ಯನ ಪೀಠ’ ಸ್ಥಾಪನೆಯಾಗಿದೆ. ಸರ್ಕಾರ ನೀಡಿದ ಎರಡು ಕೋಟಿ ಅನುದಾನದಲ್ಲಿ ಒಂದೂವರೆ ಕೋಟಿಯಷ್ಟು ಹಣವನ್ನು ಸ್ಮಾರಕ ಭವನ ನಿರ್ಮಿಸಿ ಅದರೊಳಗೆ ಮೌನ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ. ಉಳಿದ ಐವತ್ತು ಲಕ್ಷವನ್ನು ಬ್ಯಾಂಕಿನಲ್ಲಿ ಸ್ಥಿರಠೇವಣಿ ಇಟ್ಟು ಅದರಿಂದ ಬರುವ ಸಣ್ಣ ಮೊತ್ತದ ಬಡ್ಡಿಯ ಮೂಲಕ ವರ್ಷಕ್ಕೊಮ್ಮೆ ‘ಅಂಬಿಗರ ಚೌಡಯ್ಯ ಜಯಂತಿ’ಯನ್ನು ಆಚರಿಸಲಾಗುತ್ತದೆ. ಆಗಾಗ್ಗೆ ಒಂದೆರಡು ವಿಚಾರ ಸಂಕಿರಣಗಳನ್ನೂ ನಡೆಸಿ ಖರ್ಚು ಭರಿಸುವ ಶಾಸ್ತ್ರ ಮಾಡಲಾಗುತ್ತದೆ.
ವಿಶ್ವವಿದ್ಯಾಲಯದಲ್ಲಿ ದೈನಂದಿನ ಪಾಠ ಮಾಡಲೂ ಲಭ್ಯವಿಲ್ಲದ ಹಾಗಿರುವ ಪ್ರೊಫೆಸರ್ ಗಳ ಕೊರತೆ ಪೀಠ ನಿರ್ವಹಣೆಗೂ ವ್ಯಾಪಿಸಿದೆ. ಆ ಸ್ಥಳಕ್ಕೆ ಆಗಾಗ್ಗೆ ಎಡತಾಕುವ ಅಂಬಿಗರ ಚೌಡಯ್ಯನ ‘ಸಮಾಜ’ದ ವ್ಯಕ್ತಿಗಳು ತಮ್ಮ ಜಾತಿಯವರನ್ನೇ ಪೀಠದ ನಿರ್ದೇಶಕರನಾಗಿ ಮಾಡಬೇಕೆಂದು ಆಗ್ರಹಿಸುತ್ತಾರೆ. ಅಲ್ಲಿರುವ ಪ್ರತಿಕೂಲ ಪರಿಸ್ಥಿತಿಯ ಕಾರಣ ಉತ್ತರ ದೊರಕದೇ ಇನ್ನೊಮ್ಮೆ ಬರುತ್ತೇವೆಂದು ಗಡುವು ನೀಡಿ ಹೋಗುತ್ತಾರೆ.
ಮಂಗಳೂರು ವಿಶ್ವವಿದ್ಯಾಲಯದಲ್ಲೂ ಅಂಬಿಗರ ಚೌಡಯ್ಯನ ಪೀಠ ೨೦೧೨ರಿಂದ ಇದ್ದು ಅಲ್ಲಿಯೂ ಪರಿಸ್ಥಿತಿ ಭಿನ್ನವಿಲ್ಲ. ವಿಚಾರ ಸಂಕಿರಣ, ಜಯಂತಿಗಳನ್ನು ಹೊರತು ಪಡಿಸಿದರೆ ಚೌಡಯ್ಯನ ತತ್ವ, ಜೀವನ, ಸಿದ್ಧಾಂತಗಳನ್ನು, ಜನಸಾಮಾನ್ಯರ ಮನಸ್ಸುಗಳಲ್ಲಿ ಬಿತ್ತುವ ವಿಶಿಷ್ಟ ಪ್ರಯತ್ನಗಳೇನೂ ಆಗಿಲ್ಲ. ಒಂದು ಪುಸ್ತಕ ಪ್ರಕಟವಾಗಿದ್ದರೂ ಸಾಮಾನ್ಯ ಜನರ ಮನಸ್ಸುಗಳನ್ನೂ ಹೇಗೆ ಮುಟ್ಟಿದೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಅಂಬಿಗರ ಚೌಡಯ್ಯನ ಮತಸ್ಥರೆನ್ನುವ ಮೊಗವೀರರು ಈ ಪೀಠದ ಕಾರಣ ಎಷ್ಟು ಲಾಭ ಪಡೆದಿದ್ದಾರೆ? ತಿಳಿಯುವುದಿಲ್ಲ. ಅಲ್ಲಿಗೂ ಸರ್ಕಾರ ನೀಡಿರುವ ಐವತ್ತೇ ಲಕ್ಷದ ಅನುದಾನದಲ್ಲಿ ಬೇರೇನಾದರೂ ಹೇಗೆ ಮಾಡಲು ಸಾಧ್ಯ?ಅಂಬಿಗರ ಚೌಡಯ್ಯ ನಮ್ಮನ್ನು ಬಿಟ್ಟೂ ಬಿಡದೇ, ಶಿಲುಬೆಯೇರಿದ ಏಸುಕ್ರಿಸ್ತನನ್ನು ನೆನಪಿಸುತ್ತಾನೆ.
ಒಂಟಿಯಾಗಿ ನಡೆದು ಹೋದ ಬುದ್ಧನನ್ನೂ ಜ್ಞಾಪಿಸುತ್ತಾನೆ. ಏಸು ಕ್ರಿಸ್ತ ಯಹೂದಿಯಾಗಿಯೇ ಶಿಲುಬೆಗೇರಿದ. ತದನಂತರ ಕ್ರೈಸ್ತಧರ್ಮ ಉದಯವಾಯಿತು. ಗೌತಮ ಬುದ್ಧ ಸಾಗಿಹೋದ ಬಳಿಕವೇ ಬೌದ್ಧ ಧರ್ಮ ಚಿಗುರೊಡೆಯಿತು. ಅವರಿಬ್ಬರಿಗೂ, ಮಾನವಪ್ರೀತಿಯ ಹೊರತು ಹೊಸದೊಂದು ಧರ್ಮ ಸ್ಥಾಪನೆಯ ಕನಸಿರಲಿಲ್ಲ. ಅಂಬಿಗರ ಚೌಡಯ್ಯನೂ ಸನಾತನ ಧರ್ಮದ ಓರೆಕೋರೆಗಳನ್ನು ಖಂಡಿಸಿದ್ದಷ್ಟೇ ಅಲ್ಲ, ಜಾತಿ ಪದ್ಧತಿಯನ್ನು ನಿರಾಕರಿಸಿದ. ತನ್ನದೇ ರೀತಿಯಲ್ಲಿ ವಿಶ್ವ ಮಾನವತಾವಾದವನ್ನು ಪ್ರತಿಪಾದಿಸಿ ಸಾಗಿಹೋದ. ಆದರೆ, ಆತನ ಆತ್ಮವನ್ನು ಇಂದು ಜಾತಿಯ ಸಂಕೋಲೆಗಳಿಂದ ಬಿಗಿದು ಬಂಧಿಸಲಾಗಿದೆ. ಮಗ್ಗುಲು ಬದಲಿಸಲು ಆತನ ಚೇತನ ಇನ್ನೆಷ್ಟು ದಿನ ಕಾಯಬೇಕೋ?
ಕುವೆಂಪುರವರು ಭಾರತೀಯತೆಯ ಹೆಸರಿನಲ್ಲಿ ಎಲ್ಲಾ ಜಾತಿ ಮತಗಳನ್ನು ಉಳಿಸಿಕೊಳ್ಳುವುದಾದರೆ ಅಂತಹ ಭಾರತೀಯತೆ ಎಂದಿಗೂ ಪ್ರಸ್ತುತವಾಗುವುದಿಲ್ಲ. ವಿಶ್ವಮಾನವ ತತ್ವದ ಹೊರತು ಬದುಕಿಗೆ ಬೇರೆ ಯಾವುದೇ ಪರ್ಯಾಯವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು. ಈ ಪ್ರಸ್ತುತತೆ ಎಂಬ ಪದದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಬೇಕೇ ಎನ್ನುವ ಪ್ರಶ್ನೆಗೆ ಮನಸ್ಸು ಮೌನವನ್ನು ಮುರಿಯುವುದಿಲ್ಲ.
ಅಂದಹಾಗೆ ಅಂಬಿಗರ ಚೌಡಯ್ಯನ ಜಯಂತಿಯನ್ನು ಸರ್ಕಾರ ಅಧಿಕೃತವಾಗಿ ಜನವರಿ 21ರಂದು ಆಚರಿಸುತ್ತದೆ. ಅಂದು, ಚೌಡಯ್ಯನ ಸಮುದಾಯಕ್ಕೆ ಇನ್ನೂ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಕ್ಕಬೇಕು, ಮತ್ತು ರಾಜಕೀಯ ಪ್ರಾತಿನಿಧ್ಯ ಸಿಕ್ಕಾಗಲೇ ಸಮುದಾಯದ ಬೇಡಿಕೆಗಳಿಗೆ ಬಲ ದಕ್ಕುತ್ತದೆ ಎಂದು ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಆತನ ಸಂದೇಶಗಳು ಇಂದಿಗೂ ಅತ್ಯಂತ ಪ್ರಸ್ತುತ ಎಂದು ಸಾಹಿತಿಗಳು ತಮ್ಮ ಮಾತುಗಳನ್ನು ಪುನರಾವರ್ತಿಸುತ್ತಾರೆ. ಜನಸಾಮಾನ್ಯರ ಬದುಕು ತುಂಗಭದ್ರೆಯ ತಿಳಿನೀರಿನಂತೆಯೇ ಎಲ್ಲವನ್ನೂ ಉಪೇಕ್ಷಿಸುತ್ತಾ, ಮರೆಯುತ್ತಾ ಮುಂದೆ ಸಾಗುತ್ತದೆ.
–ಯಲ್ಲಾಲಿಂಗ ದಂಡಿನ್
ಚಿಮ್ಮಾಇದಲ್ಲಾಯಿ
ಚಿಂಚೋಳಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.


