ಲೈಫ್ ಸ್ಟೈಲ್
ಹೊಕ್ಕುಳ ಬಳ್ಳಿಯ ಸುತ್ತ..!
- ಯಶೋಧ ಪೂಜಾರಿ, ಮುಂಬೈ
ಮನುಷ್ಯನ ದೇಹದಲ್ಲಿಯ ಉಳಿದೆಲ್ಲ ಅಂಗಗಳಿಗಿಂತ ಮೊಟ್ಟ ಮೊದಲಿಗೆ ರಚನೆಯಾಗುವ ಮಹತ್ವದ ಅಂಗ ಅಂದರೆ ಅದು ಹೊಕ್ಕುಳು . ಇದನ್ನು ನಾಭಿ , ಹೊಕ್ಕುಳು, ನಾವೇಲ್ (Naval) ಬೆಲ್ಲಿ ಬಟನ್ (Belly button) ಮತ್ತು ಸಂಸ್ಕೃತದಲ್ಲಿ ನಭಿ ಅನ್ನುತ್ತಾರೆ. ನಾವು ದೇಹದಲ್ಲಿಯ ಉಳಿದ ಭಾಗಗಳಿಗೆ ಗಮನ ಕೊಡುವಂತೆ ಹೊಕ್ಕುಳಕ್ಕೆ ಕೊಡುವುದಿಲ್ಲ. ಕಾರಣ ಆ ಭಾಗಕ್ಕೆ ಯಾವ ರೋಗವು ತಗುಲುವ ಚಿಂತೆ ಇರುವುದಿಲ್ಲವೆಂದು. ಹಾಗಾಗಿ ನಾಭಿಯ ಬಗ್ಗೆ ಸದಾ ದುರ್ಲಕ್ಷ ಮಾಡುವುದು ಸಾಮಾನ್ಯ.
ಶಿಶು ಗರ್ಭದಲ್ಲಿದ್ದಾಗ ಅದು ದೈಹಿಕ ಮತ್ತು ಮಾನಸಿಕ ಬೆಳವಣಿಗಾಗಿ ಹೊಕ್ಕುಳು ಬಳ್ಳಿಯನ್ನೆ ಅವಲಂಬಿತವಾಗಿರುತ್ತದೆ. ಶಿಶುವಿನ ಸಂಪೂರ್ಣ ಶರೀರದ ವಿಕಾಸಗೊಳ್ಳವುದು ಹೊಕ್ಕುಳದ ಸಹಾಯದಿಂದ. ಒಮ್ಮೆ ಶಿಶು ತಾಯಿ ದೇಹದಿಂದ ಬೇರ್ಪಟ್ಟ ನಂತರ ಹೊಕ್ಕುಳ ಬಳ್ಳಿಯ ಕತ್ತರಿಸಿ ಅದಕ್ಕೆ ಯಾವುದೆ ತರಹದ ಇನ್ಫೆಕ್ಷನ್ ಆಗದಂತೆ ಕ್ಲಿಪ್ ಹಾಕಲಾಗುತ್ತದೆ . ಮುಂದೆ ಎರಡು ಮೂರು ವಾರಗಳ ನಂತರ ಈ ಬಳ್ಳಿಯು ಒಣಗಿ ನೈಸರ್ಗಿಕವಾಗಿ ಶಿಶುವಿನ ದೇಹದಿಂದ ಉದುರುವುದು.
ಹಾಗೆ ಹೊರಚಾಚಿದ ಹೊಕ್ಕುಳಿನ ಭಾಗ ತುಸು ಒಣಗಿದ ನಂತರ ನಿಧಾನ ಸುರುಟಿಯಾಗಿ ಒಳ ಸರಿದು ಆದರ ಮೇಲೆ ಚರ್ಮದ ತೆಳು ಪದರು ಹಬ್ಬಿ ಒಳಮುಖವಾಗಿ ಮುಚ್ಚಿಕೊಂಡು ಬಿಡುತ್ತದೆ. ಹೀಗೆ ಸಹಜವಾಗಿ ನಮ್ಮ ದೇಹ ಯಾವ ವೈದ್ಯಕೀಯ ಸಹಾಯವಿರದೆ ತನ್ನನ್ನು ತಾನು ಸರಿ ಪಡಿಸಿಕೊಳ್ಳುವುದು. ಇಲ್ಲಿಗೆ ಹೊಕ್ಕುಳಿನ ಬಾಹ್ಯ ರೂಪದಿಂದ ಚಟುವಟಿಕೆ ಮುಗಿದರು ದೇಹದ ಒಳಗಡೆ ಅದು ಕೊನೆಯ ತನಕ ಸಕ್ರೀಯವಾಗಿರುವ ಅಂಗವಾಗಿದೆ. ಹಾಗಾಗಿ ಅದನ್ನು ಕಡೆಗಣಿಸಲಾಗದು.
ನಿರ್ಜಿವವಾಗಿರುವಂತೆ ಕಾಣುವ ನಾಭಿಯ ಮಹತ್ವವನ್ನು ಸರಿಯಾಗಿ ತಿಳಿದುಕೊಂಡಲ್ಲಿ ದೇಹದಲ್ಲಿನ ಹಲವು ರೋಗಗಳನ್ನು ವೈದ್ಯರ ಬಳಿ ಹೋಗದೆಯೆ ನಿವಾರಿಸಿಕೊಳ್ಳಲು ಸಾಧ್ಯವಿದೆ.
ನಮ್ಮ ದೇಹಕ್ಕೆ ಬರುವ ಹಲವು ಅನಾರೋಗ್ಯಗಳಿಂದ ಗುಣಪಡಿಸಿ ದೇಹದ ಆಂತರಿಕ ಶಕ್ತಿಯನ್ನು ಬಲಪಡಿಸುವ ಮತ್ತು ಸಕ್ರಿಯಗೊಳಿಸುವ ಸರ್ವೋಚ್ಚ ಶಕ್ತಿ ಈ ಹೊಕ್ಕುಳಕ್ಕೆ ಇದೆ. ಹೊಕ್ಕುಳದ ಸುತ್ತಲು ಶರೀರದ ಪ್ರಮುಖ ಅಂಗಗಳು ಇರುವುದು. ಹೊಕ್ಕುಳವು ಸಂಪೂರ್ಣ ದೇಹಕ್ಕೆ ಶಕ್ತಿಯನ್ನು ಹರಿಸುವುದು ಮತ್ತು ಪ್ರಮುಖ ನರಗಳೆಲ್ಲಾ ನಾಭಿಯ ಮೇಲೆ ಇರುವುದಲ್ಲದೆ ನಮ್ಮ ದೇಹದಲ್ಲಿರುವ ಎಪ್ಪತ್ತೆರಡು ಸಾವಿರಗಿಂತಲೂ ಹೆಚ್ಚು ನರನಾಡಿಗಳು ಈ ನಾಭಿಗೆ ಹಾಯ್ದು ಹೋಗುವವು ಹಾಗಾಗಿ ಹೊಕ್ಕಳ ದೇಹಕ್ಕೆ ಹೆದ್ದಾರಿ ಸಂಪರ್ಕವಿದ್ದಂತೆ.
ಭ್ರೂಣವು ಗರ್ಭದಲ್ಲಿದ್ದಾಗ ನೇರವಾಗಿ ತಾಯಿಯ ದೇಹಕ್ಕೆ ಜೊತೆಯಾಗಿರದೆ ಅದು ಜರಾಯು ಎಂಬ ಅಂಗದ ಮೇಲೆ ಅವಲಂಬಿತವಾಗಿರುತ್ತದೆ. ಭ್ರೂಣವನ್ನು ಗರ್ಭಶಯದ ಭಿತ್ತಿಗೆ ಜೋಡಿಸುವ ಜರಾಯು ಎಂಬ ಈ ಅಂಗವು ಚಪ್ಪಟೆಯಾಗಿ ಗೋಲಾಕಾರದ ಕೆಂಪು ಬಣ್ಣದ ಡಿಸ್ಕ್ ನಂತೆ ಇದ್ದು ಸ್ಪೋಂಜಿಯಾಗಿ ಅಂದರೆ ಮೃದುವಾಗಿ ಇರುವುದು.
ಇದು ಗರ್ಭಧಾರಣೆಯ ಸಂದರ್ಭದಲ್ಲಿ ಬೆಳೆದು ಶಿಶುವಿನಂತೆ ಇದು ಕೂಡ ಬೆಳೆಯುತ್ತಾ ಕೊನೆಯವರೆಗೆ ಸುಮಾರು 1 ಪೌಂಡ್ ನಷ್ಟು ದೊಡ್ಡದಾಗುವುದು. ಇದು ಗರ್ಭಶಯ ಮತ್ತು ಭ್ರೂಣದ ನಡುವೆ ಪೊರೆ, ತೆಳು ಪದರದಂತಿರುವುದು. ಜರಾಯುಗೆ ಪ್ಲಾಸೆಂಟಾ (Placenta) ಅನ್ನುತ್ತಾರೆ. ಭ್ರೂಣದ ಹೊಕ್ಕುಳು ಬಳ್ಳಿಯಂತೆ ಜರಾಯುಗೆ ಕೂಡ ಬಳ್ಳಿ ಇರುತ್ತದೆ. ಜರಾಯು ಬಳ್ಳಿಗೆ placental cord ಎನ್ನುತ್ತಾರೆ. ಶಿಶುವಿನ ಹೊಕ್ಕುಳ ಬಳ್ಳಿಯ ಮತ್ತೊಂದು ತುದಿಯು ಜರಾಯು ಬಳ್ಳಿಗೆ ಜೋಡಣೆಯಾಗಿದ್ದು ಶಿಶು ತನಗೆ ಬೆಳೆಯಲು ಬೇಕಾಗಿರುವ ಅವಶ್ಯಕತೆಯನ್ನು ಈ ಜರಾಯು ಮುಖಾಂತರ ಪಡೆಯುವುದು.
ಈ ಜರಾಯು ಮಗು ಮತ್ತು ಗರ್ಭಕೋಶದ ಒಳಗೋಡೆಯ ನಡುವಣ ಮೆತ್ತೆಯಂತಿದ್ದು ಮಗುವಿಗೆ ಪ್ರತಿಜೀವಕಗಳನ್ನು ನೀಡುತ್ತಾ ಸೋಂಕಿನಿಂದ ರಕ್ಷಿಸುತ್ತದೆ. ಇದು ಗರ್ಭಶಯದೊಳಗಿದ್ದು ತಾಯಿಯ ರಕ್ತದಿಂದ ಮಗುವಿಗೆ ಬೇಕಾಗುವ ಪೌಷ್ಟಿಕಾಂಶಗಳ್ಳನ್ನು ಹೀರಿ ಮಗುವಿಗೆ ತಲುಪಿಸುವುದಲ್ಲದೆ ಶಿಶುವಿಗೆ ಬೇಕಾಗಿರುವ ಅನಿಲದ ವಿನಿಮಯವನ್ನು ಮತ್ತು ವ್ಯರ್ಥ ಪದಾರ್ಥಗಳ ವಿಸರ್ಜನೆಯ ಹೊಣೆಯನ್ನು ನಿರ್ವಹಿಸುತ್ತದೆ.
ಜರಾಯು ಸ್ತ್ರೀಯರ ದೇಹದಲ್ಲಿ ಅಂಡಾಣು ಫಲಿತವಾದ ಕ್ಷಣದಿಂದಲೇ ಮೊತ್ತಾ ಮೊದಲಿಗೆ ಬೆಳೆಯುವುದು. ಭ್ರೂಣ ಗರ್ಭಾಶಯದೊಳಗೆ ಬೆಳೆದಂತೆ ಅದು ಬೆಳೆಯುತ್ತಾ ಶಿಶುವಿನ ಸಂಪೂರ್ಣ ಸಂರಕ್ಷಣೆ ಮಾಡುವುದಲ್ಲದೆ ಗರ್ಭಿಣಿಯ ಶರೀರದ ಹಾರ್ಮೋನ್ ಗ್ರಂಥಿ ಯನ್ನು ನಿಯಂತ್ರಿಸುವುದು. ಶಿಶು ತಾಯಿಯ ಗರ್ಭದಿಂದ ಹೊರಬಂದ ಬಳಿಕ ಈ ಜರಾಯು ಕೂಡ ಗರ್ಭಕೋಶದಿಂದ ಹೊರ ಹಾಕಲ್ಪಡುತ್ತದೆ.
ಹೊರಗೆ ಬಂದ ಜರಾಯು ತನ್ನಲ್ಲಿರುವ ಪೌಷ್ಟಿಕಾಂಶಗಳನೆಲ್ಲಾ ಕರುಳು ಬಳ್ಳಿಯ ಮೂಖಾಂತರ ಮಗುವಿಗೆ ವರ್ಗಾವಣೆ ಮಾಡಿ ಕೊನೆಗೆ ನಿಷ್ಫಲವಾಗುತ್ತದೆ. ಹೀಗೆ ಸ್ತ್ರೀಯರ ದೇಹದಲ್ಲಿ ಪ್ರತಿ ಹೆರಿಗೆಯಲ್ಲು ಹೊಸ ಜರಾಯು ತಯಾರಾಗಿ ಹೆರಿಗೆಯ ಸಮಯದಲ್ಲಿ ಕೊನೆಗೆ ಕಸದಂತೆ ಹೊರ ಬರುವುದು. ಇದನ್ನು ಮಾಸುಚೀಲ ಅಥವಾ ಕಸ ಅನ್ನುವ ವಾಡಿಕೆ ಇದೆ.
ತಾಯಿಯ ಗರ್ಭದಿಂದ ಹೊರಕ್ಕೆ ಬರುವ ಶಿಶುವಿನ ನಾಭಿ ಬಳ್ಳಿಯನ್ನು ಜರಾಯು ಬಳ್ಳಿಯಿಂದ ಬೇರ್ಪಡಿಸಿದ ಬಳಿಕ ಶಿಶು ತನ್ನ ಅವಶ್ಯಕತೆಗಳಿಗಾಗಿ ಬಾಹ್ಯ ಸಂಪರ್ಕಗಳಿಗೆ ಹೊಂದಿಕೊಳ್ಳುವುದು. ಅಲ್ಲಿಂದ ನಾಭಿಯ ದ್ವಾರ ಹೊರಗಡೆಯಿಂದ ಮುಚ್ಚಿದರೂ ಒಳಗಡೆಯಿಂದ ನಮ್ಮ ಇಡಿ ದೇಹಕ್ಕೆ ತಾಯಿ ಬೇರಿನ ಪಾತ್ರವಹಿಸುತ್ತದೆ.
ನವಜಾತ ಶಿಶುವಿಗೆ ಎರಡು ಮೂರು ವರ್ಷಗಳ ತನಕ ನಿತ್ಯ ತೈಲದ ಮಸಾಜ್ ಮಾಡಿ ಹೊಕ್ಕಳಕ್ಕೆ ಕೆಲವು ತೊಟ್ಟು ಎಣ್ಣೆ ಹಾಕಿ ಕ್ಷಣಕಾಲ ಬಿಟ್ಟು ಆ ಮೇಲೆ ಮಗುವಿಗೆ ಸ್ನಾನ ಹಾಕಿಸುವ ರೂಡಿ ಈಗಲೂ ನಮ್ಮಲ್ಲಿ ಕಾಣುತ್ತೇವೆ. ಇದರಿಂದಾಗಿ ಶಿಶುವಿನ ದೇಹ ಕೋಮಲವಾಗಿ ಇರುವುದಲ್ಲದೆ ನಾಭಿ ಮೂಲಕ ಹೀರಿಕೊಂಡ ಎಣ್ಣೆ ಇಡಿ ಶರೀರದೊಳಗೆ ತಲುಪಿ ಮಗುವು ಆರೋಗ್ಯಕರವಾಗಿ ಇರುವಂತೆ ಸಹಾಯ ಮಾಡುತ್ತದೆ.
ಅದಲ್ಲದೆ ಶಿಶುವಿಗೆ ಹೊಟ್ಟೆ ಉಬ್ಬರಿಸಿ ನೋವು ಅನುಭವಿಸಿದರೆ, ಮಲವಿಸರ್ಜನೆಗೆ ತೊಂದರೆ ಇದ್ದರೆ ನಮ್ಮ ಹಿರಿಯರು ಹಿಂಗಿನ ನೀರನ್ನು ಹೊಕ್ಕಳಿನ ಸುತ್ತಲೂ ಉಜ್ಜುವುದು ಅಥವಾ ಓಮ ಕಾಳನ್ನು ಉಗುರು ಬೆಚ್ಚಗೆ ಮಾಡಿ ತೆಳು ಬಟ್ಟೆಯಲ್ಲಿ ಕಟ್ಟಿ ನಾಭಿಯ ಸುತ್ತಾ ಮಸಾಜ್ ಮಾಡವುದನ್ನು ನೋಡುತ್ತೇವೆ. ಹೀಗೆ ಮಾಡುವುದರಿಂದ ಶಿಶುವಿನ ಹೊಟ್ಟೆ ನೋವು ಶಮನವಾಗುತ್ತದೆ.
ಹಿಂದಿನಿಂದಲೂ “ಆಯುರ್ವೇದ ” ವೈದ್ಯಕೀಯ ಪದ್ಧತಿ ಮತ್ತು “ಪ್ರಕೃತಿ ಚಿಕಿತ್ಸೆ ” ಪದ್ದತಿ ಎರಡರಲ್ಲೂ ನಾಭಿಗೆ ಎಣ್ಣೆ ಹಾಕಿದಲ್ಲಿ ಹಲವು ಆರೋಗ್ಯ ದೋಷಗಳಿಂದ ಮುಕ್ತರಾಗಬಹುದು ಎಂಬ ನಂಬಿಕೆ ಈಗಲೂ ಇದೆ. ಹೊಕ್ಕುಳಕ್ಕೆ ಎಣ್ಣೆಯನ್ನು ಹಾಕುವುದರಿಂದ ನಮ್ಮ ಚರ್ಮದ ಆರೈಕೆಗೆ , ಕೂದಲಿನ ಆರೈಕೆ ಮತ್ತು ಮುಟ್ಟಿನ ನೋವು, ಕೀಲು ನೋವು ಮತ್ತು ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವು ಸಿಗುವುದೆಂದು ಹಿಂದಿನವರ ಹೇಳಿಕೆ. ಹಾಗಾಗಿ ನಾಭಿ ಚಿಕಿತ್ಸೆಯು ಇತ್ತೀಚೆಗೆ ಬಹಳ ವಿಶೇಷತೆಯನ್ನು ಪಡೆದಿದೆ.
ಇಂದಿನ ಆತುರಾತುರವಾದ ಬದುಕಿನಲ್ಲಿ ಎಣ್ಣೆ ಸವರಿ ಕುಳಿತುಕೊಳ್ಳಲು ಯಾರಿಗೆ ತಾನೆ ಸಮಯವಿದೆ ? ಎನ್ನುವ ಯೋಚನೆ ತಕ್ಷಣ ನಮ್ಮಲ್ಲಿ ಬರುವುದು ಸ್ವಾಭಾವಿಕ. ಆದರೆ ಪ್ರಕೃತಿಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳಿಂದಲೆ ನಾವು ಆರೋಗ್ಯಕರರಾಗಿ ಇರಬಹುದಾದಲ್ಲಿ ಸ್ವಲ್ಪ ಸಮಯ ಸ್ವಂತಕ್ಕಾಗಿ ಬಳಸಿಕೊಂಡಲ್ಲಿ ತಪ್ಪೆನಿದೆ. ಹಾಗಾದರೆ ಬನ್ನಿ
ಹೊಕ್ಕುಳಕ್ಕೆ ತೈಲ ಚಿಕಿತ್ಸೆಯಿಂದ ತ್ವಚೆಯ ಆರೈಕೆಯನ್ನು ಮಾಡಿಕೊಳ್ಳುವ ವಿಧಾನ ತಿಳಿಯೋಣ.
ಎಳ್ಳೆಣ್ಣೆ ( Sesame oil)
ಎಣ್ಣೆಯುಕ್ತ ತ್ವಚೆ( oily skin ) ಇಂತಹ ತ್ವಚೆಯವರಿಗೆ ಹದಿ ಹರೆಯದಲ್ಲಿ ಮೊಡವೆಗಳ ತೊಂದರೆ ಅಧಿಕವಾಗಿರುತ್ತದೆ. ಯಾಕೆಂದರೆ ಇಂತಹ ಚರ್ಮ ಮೇದೋಜೀರಕ ಎಂಬ ಗ್ರಂಥಿಯನ್ನು ಅತಿಯಾಗಿ ಸ್ರವಿಸುವುದರಿಂದ ಚರ್ಮವು ನೈಸರ್ಗಿಕವಾಗಿಯೇ ಎಣ್ಣೆಯನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ ಎಣ್ಣೆಯುಕ್ತ ಚರ್ಮ ಉಳ್ಳವರು ತಮ್ಮ ತ್ವಚೆಯ ಬಗ್ಗೆ ಸ್ವಲ್ಪ ಹೆಚ್ಚು ಕಾಳಜಿವಹಿಸಬೇಕು.
ಈ ತ್ವಚೆಯಲ್ಲಿ ಎಣ್ಣೆಯಂಶ ಅತಿಯಾಗಿ ಕಾಣಿಸಿಕೊಳ್ಳುವುದಲ್ಲದೆ ತ್ವಚೆಯು ಸದಾ ಜಿಡ್ಡು ಜಿಡ್ಡಾಗಿದ್ದು ಹೊರಗಿನ ದೂಳು ಪ್ರದೂಷಣಗಳಿಗೆ ಬಹು ಬೇಗ ಪ್ರತಿಕ್ರಿಯಿಸುವುದರಿಂದಾಗಿ ಮುಖದಲ್ಲಿ ಮೊಡವೆ ಮತ್ತು ಬೊಕ್ಕಗಳು ಮೂಡುತ್ತದೆ.
ಇಂತಹ ಎಣ್ಣೆಯುಕ್ತ ತ್ವಚೆಯುಳ್ಳವರು ಸ್ನಾನದ ಬಳಿಕ ಮತ್ತು ಮಲಗುವ ಮುನ್ನ ತಮ್ಮ ನಾಭಿಗೆ ಎಳ್ಳೆಣ್ಣೆಯ ನಾಲ್ಕು ಹನಿಯನ್ನು ಹಾಕಿ ಹತ್ತು ಹದಿನೈದು ನಿಮಿಷ ಬಿಡುವುದರಿಂದ ಮುಖದಲ್ಲಿರುವ ಮೊಡವೆಗಳ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದಾಗಿ ತ್ವಚೆಯು ಅತಿಯಾಗಿ ಎಣ್ಣೆಯಾಂಶ ಬಿಡುಗಡೆ ಮಾಡುವುದನ್ನು ಕ್ರಮೇಣವಾಗಿ ಒಳಗಿನಿಂದಲೇ ನಿಯಂತ್ರಿಸುವುದುರಿಂದಾಗಿ ಕ್ರಮೇಣ ಜಿಡ್ಡಿರದ ಸಾಮಾನ್ಯ ತ್ವಚೆಯಾಗಿ ಮಾರ್ಪಾಡಾಗುತ್ತದೆ.
ಬಾದಾಮಿ ಎಣ್ಣೆ (Almond oil)
ಈ ಎಣ್ಣೆಯು ವಿಟಮಿನ್ ಇ ಅಂದರೆ ನೈಸರ್ಗಿಕವಾಗಿ ಎಣ್ಣೆಯುಕ್ತ ವಾಗಿದೆ. ಒಣ ತ್ವಚೆ ಅಥವಾ ಶುಷ್ಕ ತ್ವಚೆ (dry skin) ತ್ವಚೆಯಲ್ಲಿ ಎಣ್ಣೆಯಂಶ ಕಡಿಮೆ ಇದ್ದು ಸದಾ ಒಣಗಿದಂತಿರುತ್ತದೆ. ಇಂತಹ ಚರ್ಮವು ವಯಸ್ಸಿಗಿಂತಲೂ ಬೇಗನೆ ಸುಕ್ಕು ಗಟ್ಟಿ ಹೊಳಪಿಲ್ಲದೆ ಕಳೆಗುಂದಿದಂತೆ ಕಾಣುತ್ತದೆ. ಒಣ ಚರ್ಮವನ್ನು ಕಾಂತಿಯುತವಾಗಿ ಮತ್ತು ಆಧ್ರ೯ಕವಾಗಿ ಇಡಲು ಹೊಕ್ಕುಳಕ್ಕೆ ಬಾದಾಮಿ ಎಣ್ಣೆ ಬಳಸಬೇಕು.
ಬಾದಾಮಿ ಎಣ್ಣೆಯನ್ನು ನಾಭಿಗೆ ಹಾಕುವುದರಿಂದ ಇದು ದೇಹದ ಸಂಪೂರ್ಣ ತ್ವಚೆಗೆ ಪೋಷಣೆ ಕೊಡುವುದಲ್ಲದೆ ನಿಮ್ಮ ತ್ವಚೆಗೆ ನೈಸರ್ಗಿಕವಾಗಿ ಹೊಳಪು ಕೊಡುತ್ತದೆ. ಇದರಿಂದಾಗಿ ವಯಸ್ಸಿಗೆ ಪೂರ್ವವಾಗಿ ಬರುವ ಮುಪ್ಪಿನ ಲಕ್ಷಣಗಳನ್ನು ತಡೆಯಬಹುದು.
ಸಾಸಿವೆ ಎಣ್ಣೆ (Mustard oil)
ಹೆಚ್ಚಿನವರಲ್ಲಿ ತಮ್ಮ ತ್ವಚೆ complexion ಅಂದರೆ ಬಣ್ಣದ ಬಗ್ಗೆ ಕೀಳರಿಮೆ ಇರುತ್ತೆ . ಅಂತವರು ತ್ವಚೆಯ (complexion lmprove ) ಬಣ್ಣದ ಮಟ್ಟ ತಿಳಿ ಮಾಡಲು ಹೊಕ್ಕುಳಕ್ಕೆ ಸಾಸಿವೆ ಎಣ್ಣೆಯನ್ನು ಉಪಯೋಗಿಸ ತಕ್ಕದ್ದು. ಸಾಸಿವೆ ಎಣ್ಣೆಯಲ್ಲಿ ತ್ವಚೆಯ ತೇಜಸ್ಸನ್ನು ಹೆಚ್ಚಿಸುವ ಗುಣವಿದೆ. ಹಾಗೆಂದು ಇದನ್ನು ಮುಖಕ್ಕೆ ನೇರವಾಗಿ ಹಚ್ಚಿಕೊಂಡರೆ ಮುಖ ಇನ್ನು ಹೆಚ್ಚು ಕಪ್ಪಾಗುವ ಸಂಭವ ಇರುತ್ತದೆ.
ಹಾಗಾಗಿ ನಾಭಿಗೆ ಈ ಎಣ್ಣೆಯನ್ನು ಹಾಕುವುದರಿಂದ ಇದು ದೇಹದ ಒಳಗಿಂದಲೇ ಆರೈಕೆ ಮಾಡುವುದು. ಸಾಸಿವೆ ಎಣ್ಣೆ ದಣಿವು, ಕಳಪೆ ಸ್ಮರಣೆ ಮತ್ತು ಖಿನ್ನತೆಯ ನಿವಾರಣೆಗೆ ಸಹಾಯ ಮಾಡುತ್ತದೆ. ಕಣ್ಣಿನ ಸೋಂಕು ಮತ್ತು ಕಣ್ಣಿನ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ. ತಲೆನೋವು ಮತ್ತು ಮೈಗ್ರೇನ್ ಕಡಿಮೆ ಮಾಡುತ್ತದೆ.
ಸೂರ್ಯಕಾಂತಿ ಎಣ್ಣೆ (sunflower oil)
ಕಾಂತಿಯುತವಾದ ತ್ವಚೆ ಅಂದರೆ glowing skin ತ್ವಚೆಯ ಕಾಮನೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಇಂತಹ ತ್ವಚೆಯನ್ನು ಪಡೆಯಲು ಸೂರ್ಯಕಾಂತಿ ಎಣ್ಣೆಯ 2 , 3 ಹನಿಯನ್ನು ಹೊಕ್ಕುಳಿಗೆ ಬಿಡಬೇಕು. ಈ ಎಣ್ಣೆಯು ನಮ್ಮ ತ್ವಚೆಯ ಕಾಂತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ.
ತೆಂಗಿನ ಎಣ್ಣೆ (coconut oil )
ಈ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿರುವುದು. ಇದು ಕೂದಲ ಬೆಳವಣಿಗೆಗೆ ಅತಿ ಮುಖ್ಯ. ಇದರಿಂದ ಚರ್ಮವು ಮೃದುವಾಗಿ ಇರುವುದು. ಮಹಿಳೆಯರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಗೆ ಇದು ಉತ್ತಮವೆಂದು ಹೇಳಲಾಗುತ್ತದೆ. ತಲೆ ಹೊಟ್ಟು ಮತ್ತು ಒಣ ನೆತ್ತಿಯ ತೊಂದರೆ ನಿವಾರಿಸುತ್ತದೆ.
ಬೇವಿನ ಎಣ್ಣೆ (Neem oil)
ಈ ಎಣ್ಣೆಯು ಮುಖದ ಗುಳ್ಳೆಗಳನ್ನು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ತುರಿಕೆ ಮತ್ತು ದದ್ದುಗಳ ಮೇಲೆ ಪರಿಣಾಮಕಾರಿ.
ಹಸುವಿನ ತುಪ್ಪ ( Cow Ghee )
ಈ ಎಣ್ಣೆಯು ನಯವಾದ ಚರ್ಮಕ್ಕಾಗಿ ಮತ್ತು
ನವಜಾತ ಶಿಶುಗಳ ಮೂಳೆಗಳನ್ನು ಬಲಪಡಿಸಲು ಉಪಯೋಗಕಾರಿ.
ಕ್ಯಾಸ್ಟರ್ ಆಯಿಲ್ (Castor oil)
ಮೊಣಕಾಲು ನೋವು ಮತ್ತು ಇತರ ಕೀಲು ನೋವುಗಳಿಗಾಗಿ,
ಉದ್ದನೆಯ ರೆಪ್ಪೆಗೂದಲಿಗೆ, ಉದ್ದನೆಯ ದಟ್ಟ ಕೂದಲಿಗಾಗಿ,
ಹೆಚ್ಚಿನ ರೀತಿಯ ಹೊಟ್ಟೆಯ ಸಮಸ್ಯೆಗಳ ನಿವಾರಣೆಗೆ ಈ ಎಣ್ಣೆಯು ಉಪಯುಕ್ತ.
ಆಲೀವ್ ಎಣ್ಣೆ ( Olive oil )
ಈ ಎಣ್ಣೆ ಹಾಕುವುದರಿಂದ ಮುಟ್ಟಿನ ನೋವು ಮತ್ತು ಸೆಳೆತಕ್ಕೆ ಸಹಾಯ ಮಾಡುತ್ತದೆ. ಮಕ್ಕಳ ಮೂಳೆ ಮತ್ತು ಸ್ನಾಯುಗಳನ್ನು ಬಲಪಡಿಸುವುದು. ಒಳ್ಳೆಯ ನಿದ್ರೆಗಾಗಿ ಸಹಾಯ ಮಾಡುತ್ತದೆ.
ಹಸಿವಿನ ಕೊರತೆಯ ನಿವಾರಿಸುವುದು. ಮಲಬದ್ಧತೆಗೆ ಪರಿಣಾಮಕಾರಿ.
ಇಲ್ಲಿ ಮುಖ್ಯವಾಗಿ ನೆನಪಿನಲ್ಲಿಡಬೇಕಾದ ಅಂಶವೆಂದರೆ ಹೊಕ್ಕಳಕ್ಕೆ ಉಪಯೋಗಿಸಲು ಅತಿ ಶುದ್ಧವಾದ ನೈಸರ್ಗಿಕವಾದ ಎಣ್ಣೆಯನ್ನೆ ಬಳಸಬೇಕು. ಕಲಬೆರಕೆಯ ಎಣ್ಣೆಯನ್ನು ಬಳಸದಿರಿ. ಎಣ್ಣೆಯ ಮೂಲ ಗುಣ ಸಕ್ರೀಯಗೊಳ್ಳಲು ಬಳಸುವ ಮುನ್ನ ಸ್ವಲ್ಪ ಬಿಸಿ ಮಾಡಿಕೊಂಡು ಬಳಸಬೇಕು.
ಹೀಗೆ ಉಗುರು ಬೆಚ್ಚಗಿನ ಎಣ್ಣೆಯನ್ನು ರಾತ್ರಿಯಲ್ಲಿ ಮಲಗುವ ಮುನ್ನ ಹತ್ತಿಯಲ್ಲಿ ಅದ್ದಿ 2-3 ಹನಿ ಹೊಕಳಕ್ಕೆ ಬಿಡಬೇಕು. 15-20 ನಿಮಿಷದ ಬಳಿಕ ವೃತ್ತಾಕಾರದ ಪ್ರದಕ್ಷಿಣಾಕಾರದ ಚಲನೆಯಲ್ಲಿ ನಾಭಿಯ ಸುತ್ತಾ ಮಸಾಜ್ ಮಾಡಿಕೊಳ್ಳಬೇಕು. ಹಾಗೆಯೇ ನಿತ್ಯ ಸ್ನಾನ ಮಾಡುವಾಗ ಹೊಕ್ಕುಳವನ್ನು ತೊಳೆದು ಶುಚಿಯಾಗಿ ಇಟ್ಟುಕೊಳ್ಳಬೇಕು. ಇಲ್ಲಾವಾದಲ್ಲಿ ಸೊಂಕು ತಗಲುವ ಸಾಧ್ಯತೆ ಇರುತ್ತದೆ. ಹೀಗೆ ಮಾಡಿ ನೋಡಿ ತಮ್ಮ ತ್ವಚೆಯಲ್ಲಿ ಆರೋಗ್ಯದಲ್ಲಿ ಆಗುವ ವ್ಯತ್ಯಾಸವನ್ನು ತಾವಾಗಿಯೇ ಗಮನಿಸಿ ಆನಂದಿಸಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ ಹಣ ಜಮೆಯಾಗಿಲ್ಲ, ಹಾಗಾದರೆ ನನ್ನ ಖಾತೆಗೆ ಇನ್ನೂ ಬಡ್ಡಿ ಸಿಗುತ್ತದೆಯೇ ಅಥವಾ ನನ್ನ ಹಣ ಹಾಗೆಯೇ ಉಳಿದುಕೊಳ್ಳುತ್ತದೆಯೇ?’ ಎಂಬುದು ಆ ಪ್ರಶ್ನೆ. ಈ ಪ್ರಶ್ನೆಗೆ ಇಪಿಎಫ್‌ಒ ನೇರವಾಗಿ ನೀಡಿರುವ ಉತ್ತರ – ಹೌದು, ಖಂಡಿತವಾಗಿಯೂ ಬಡ್ಡಿ ಸಿಗುತ್ತದೆ’.ಪಿಎಫ್‌ಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ವಾಸ್ತವವೇ ಬೇರೆ.
http://Visit : www.suddidina.com
3 ವರ್ಷಗಳ ಹಳೆಯ ನಿಯಮದ ಅಸಲಿ ಸತ್ಯವೇನು?
ಈ ಗೊಂದಲಕ್ಕೆ ಕಾರಣ 2016ಕ್ಕಿಂತ ಮೊದಲು ಇದ್ದ ನಿಯಮ. ಹಳೆಯ ನಿಯಮದ ಪ್ರಕಾರ, ಒಂದು ಪಿಎಫ್ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ವಂತಿಗೆ ಜಮೆಯಾಗದಿದ್ದರೆ, ಅದನ್ನು `ನಿಷ್ಕ್ರಿಯ ಖಾತೆ’ (Inoperative Account) ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅಂತಹ ಖಾತೆಗೆ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಲಕ್ಷಾಂತರ ಖಾತೆದಾರರ ಹಣಕ್ಕೆ ಬಡ್ಡಿ ಸಿಗದೆ ನಷ್ಟವಾಗುತ್ತಿತ್ತು.ಆದರೆ ಚಂದಾದಾರರ ಹಿತದೃಷ್ಟಿಯಿಂದ ಇಪಿಎಫ್‌ಒ 2016 ರಲ್ಲಿ ಈ ನಿಯಮಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಯಮಿತವಾಗಿ ಚಕ್ರಬಡ್ಡಿ (Compounding Interest) ಜಮೆಯಾಗುತ್ತಲೇ ಇರುತ್ತದೆ. ನೀವು ಕೆಲಸದಲ್ಲಿದ್ದರೂ, ಇಲ್ಲದಿದ್ದರೂ ಇದು ಅನ್ವಯಿಸುತ್ತದೆ.
ಉದಾಹರಣೆ:
ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಒಬ್ಬ ವ್ಯಕ್ತಿ ತಮ್ಮ 40ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪಿಎಫ್ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಯನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದುಕೊಳ್ಳಿ. ಅವರು ಮುಂದಿನ 5 ವರ್ಷಗಳ ಕಾಲ ಅಂದರೆ 45ನೇ ವಯಸ್ಸಿನವರೆಗೆ ಯಾವುದೇ ಹಣವನ್ನು ಜಮೆ ಮಾಡದಿದ್ದರೂ, ಅವರ ಖಾತೆಯಲ್ಲಿರುವ ಆ 10 ಲಕ್ಷ ರೂಪಾಯಿಗೆ ಇಪಿಎಫ್‌ಒ ಪ್ರತಿ ವರ್ಷ ಘೋಷಿಸುವ ಬಡ್ಡಿ ದರದಂತೆ (ಪ್ರಸ್ತುತ 8.25%) ಬಡ್ಡಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಇದು ಅವರಿಗೆ 58 ವರ್ಷ ತುಂಬುವವರೆಗೆ ಅಂದರೆ ಇನ್ನೂ 13 ವರ್ಷಗಳ ಕಾಲ ನಿರಂತರವಾಗಿ ಸಿಗುತ್ತದೆ. ಅದೇ ರೀತಿ 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟವರಿಗೆ 58 ವರ್ಷದವರೆಗೆ 8 ವರ್ಷಗಳ ಕಾಲ ಬಡ್ಡಿ ಸಿಗುತ್ತದೆ.
ಈ ಒಂದು ತೆರಿಗೆ ನಿಯಮವನ್ನು ಮಾತ್ರ ಮರೆಯಬೇಡಿ!
ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ ಎಂಬುದು ಖುಷಿಯ ವಿಚಾರವೇ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ಎಚ್ಚರಿಕೆಯಿದೆ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಪಿಎಫ್ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ನೀವು ಕೆಲಸ ಬಿಟ್ಟ ನಂತರ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಯು `ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿಸುತ್ತದೆ. ಆದ್ದರಿಂದ ಆ ಬಡ್ಡಿಯ ಮೊತ್ತವನ್ನು ನೀವು ನಿಮ್ಮ ವಾರ್ಷಿಕ ಆದಾಯದಲ್ಲಿ ತೋರಿಸಿ, ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.
ಖಾತೆದಾರರು ಏನು ಮಾಡಬೇಕು?
1. ಕೆಲಸ ಬದಲಾಯಿಸಿದ್ದರೆ: ಹಳೆಯ ಕಂಪನಿಯ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಬದಲು, ನಿಮ್ಮ ಯುಎಎನ್ (UAN) ಮೂಲಕ ಹೊಸ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ. ಇದರಿಂದ ನಿಮ್ಮ ಸೇವಾ ಅವಧಿ ನಿರಂತರವಾಗಿರುತ್ತದೆ.
2. ವೃತ್ತಿ ವಿರಾಮದಲ್ಲಿದ್ದರೆ: 58 ವರ್ಷದವರೆಗೆ ಹಣ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ ನಿಮಗೆ ತುರ್ತು ಅಗತ್ಯವಿಲ್ಲದಿದ್ದರೆ, ಹೆಚ್ಚಿನ ಆದಾಯಕ್ಕಾಗಿ ಬೇರೆಡೆ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು.
3. 58 ವರ್ಷದ ನಂತರ: ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣವನ್ನು ಹಿಂಪಡೆಯದಿದ್ದರೆ ಮಾತ್ರ ಆ ಖಾತೆಯನ್ನು ಮತ್ತೆ `ನಿಷ್ಕ್ರಿಯ’ ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ.ಆದ್ದರಿಂದ 5 ವರ್ಷದಿಂದ ಹಣ ಜಮೆಯಾಗದಿದ್ದರೂ ಚಿಂತಿಸಬೇಕಿಲ್ಲ, ನಿಮ್ಮ ಪಿಎಫ್ ಹಣ ಇಪಿಎಫ್‌ಒ ನಲ್ಲಿ ಸುರಕ್ಷಿತವಾಗಿ ಬಡ್ಡಿಯೊಂದಿಗೆ ಬೆಳೆಯುತ್ತಿದೆ.

ದಿನದ ಸುದ್ದಿ
ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
ಸುದ್ದಿದಿನ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಷಾಂತರ ಬಿಎಂಟಿಸಿ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಇರುವುದಿಲ್ಲ. ಖಾಸಗಿ ರೈಡ್-ಹೇಲಿಂಗ್ ಆ್ಯಪ್‌ಗಳಾದ ಓಲಾ, ಉಬರ್, ರ‍್ಯಾಪಿಡೋ ನಂತಹ ಆ್ಯಪ್‌ಗಳಲ್ಲೇ ನೇರವಾಗಿ ಬಿಎಂಟಿಸಿ ಬಸ್‌ಗಳ ಲೈವ್ ಲೋಕೇಶನ್ ಟ್ರ್ಯಾಕ್ ಮಾಡಲು ಮತ್ತು ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಮಹತ್ವದ ಸೇವೆಯು ಇದೇ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
http://Visit : www.suddidina.com
ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ, ನಾವು ಹಲವು ಖಾಸಗಿ ರೈಡ್ ಅಗ್ರಿಗೇಟರ್ ಕಂಪನಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಇದಕ್ಕಾಗಿ ಶೀಘ್ರದಲ್ಲೇ ಒಂದು ಸಾಮಾನ್ಯ ಮಾನದಂಡದ ಒಪ್ಪಂದವನ್ನು (Standard Agreement) ಜಾರಿಗೆ ತರಲಿದ್ದೇವೆ. ಈ ಒಪ್ಪಂದದ ನಿಯಮಗಳಿಗೆ ಬದ್ಧರಾಗುವ ಯಾವುದೇ ಖಾಸಗಿ ಕಂಪನಿಯು ಬಿಎಂಟಿಸಿಯ ಲೈವ್ ಡೇಟಾವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಇದರಿಂದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ. ಕ್ಯಾಬ್ ಅಥವಾ ಆಟೋಗಳಿಂದ ಇಳಿದು ಮುಂದಿನ ಪ್ರಯಾಣಕ್ಕೆ ಬಸ್ ಹಿಡಿಯುವವರಿಗೆ ಇದು ಅತ್ಯಂತ ಸಹಕಾರಿಯಾಗಲಿದೆ ಎಂದು ಹೇಳಿದರು.
ನಮ್ಮ ಬಿಎಂಟಿಸಿ 2.0′ ಆ್ಯಪ್‌ನಲ್ಲಿ ಏನಿದೆ ಹೊಸತು?
ಖಾಸಗಿ ಆ್ಯಪ್‌ಗಳ ಜೊತೆ ಡೇಟಾ ಹಂಚಿಕೊಳ್ಳುವುದರ ಜೊತೆಗೆ, ಬಿಎಂಟಿಸಿ ತನ್ನ ಸ್ವಂತ ಮೊಬೈಲ್ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸುತ್ತಿದೆ. ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0′ ಅನ್ನು ಮುಂದಿನ ವಾರದ ಅಂತ್ಯದೊಳಗೆ ಲೋಕಾರ್ಪಣೆಗೊಳಿಸಲಾಗುವುದು. ಈ ಹಿಂದೆ ಆ್ಯಪ್ ಕುರಿತು ಪ್ರಯಾಣಿಕರು ನೀಡಿದ್ದ ದೂರುಗಳು ಮತ್ತು ತಾಂತ್ರಿಕ ದೋಷಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ. ಹೊಸ ಆ್ಯಪ್‌ನಲ್ಲಿ ಬಿಎಂಟಿಸಿ ನೆಟ್‌ವರ್ಕ್‌ನಲ್ಲಿ ಸಂಚರಿಸುವ ಪ್ರತಿಯೊಂದು ಬಸ್‌ನ ಲೈವ್ ಲೋಕೇಶನ್ ಅತ್ಯಂತ ನಿಖರವಾಗಿ ಲಭ್ಯವಾಗಲಿದೆ. ಪ್ರಸ್ತುತ ಬಿಎಂಟಿಸಿ ಬಳಿ 1,771 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಒಟ್ಟು 6,938 ಬಸ್‌ಗಳಿವೆ. ಪ್ರತಿದಿನ ಸರಾಸರಿ 6,200 ಬಸ್‌ಗಳು ನಗರದಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ.
ಸಾರಿಗೆ ಸಚಿವರ ಮಹತ್ವದ ಸಭೆ ಮತ್ತು ನಿರ್ದೇಶನ:
ವಿಧಾನಸೌಧದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
200 ಹೊಸ ಮಿನಿ ಬಸ್‌ಗಳ ಖರೀದಿ:
ಮೆಟ್ರೋ ಫೀಡರ್ ಸೇವೆ ಹಾಗೂ ನಗರದ ಕಿರಿದಾದ ರಸ್ತೆಗಳ ಸಂಪರ್ಕಕ್ಕಾಗಿ 200 ಹೊಸ 7 ಮೀಟರ್ ಉದ್ದದ ಮಿನಿ ಡೀಸೆಲ್ ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ನಿರ್ಧರಿಸಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕಿರಿದಾದ ರಸ್ತೆಗಳಲ್ಲಿ ಈ ಚಿಕ್ಕ ಬಸ್‌ಗಳು ಸುಲಭವಾಗಿ ಸಂಚರಿಸಬಲ್ಲವು. ಸದ್ಯ 9 ಮತ್ತು 12 ಮೀಟರ್ ಉದ್ದದ 255 ಬಸ್‌ಗಳು ಮೆಟ್ರೋ ಫೀಡರ್ ಆಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ನಾಲ್ಕು ನಿಗಮಗಳಿಗೆ 1,000 ಬಸ್ ಖರೀದಿ ಯೋಜನೆಯ ಭಾಗವಾಗಿ ಈ ಖರೀದಿ ನಡೆಯಲಿದೆ. ಮುಂದಿನ 6 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್ ಲೈನ್‌ನ 6 ನಿಲ್ದಾಣಗಳು ಸೇರಿದಂತೆ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್ ಮತ್ತು ಸಂಚಾರ ಪೊಲೀಸರ ಜೊತೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.
ಎಸಿ ಬಸ್ ಸೇವೆ ಹೆಚ್ಚಳಕ್ಕೆ ಸೂಚನೆ:
ಪಿಎಂ ಇ-ಡ್ರೈವ್ ಯೋಜನೆಯಡಿ ಬರಲಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ಪೈಕಿ 200 ಮಿನಿ ಎಸಿ ಇ-ಬಸ್‌ಗಳನ್ನು ಎಲ್ಲಾ ಮೆಟ್ರೋ ನಿಲ್ದಾಣಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಓಡಿಸುವಂತೆ ಸಚಿವರು ಸೂಚಿಸಿದ್ದಾರೆ. ಐಟಿ ಕಂಪನಿ ಉದ್ಯೋಗಿಗಳು ಖಾಸಗಿ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೇರೇಪಿಸಲು ಐಟಿ ಪಾರ್ಕ್‌ಗಳ ಮಾರ್ಗಗಳಲ್ಲಿ ಎಸಿ ಬಸ್ ಸೇವೆ ಹೆಚ್ಚಿಸಲು ಮತ್ತು ಐಟಿ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಎಲ್ಲಾ ನಿಗಮಗಳಲ್ಲಿ ಆದಾಯ ಸೋರಿಕೆ ತಡೆದು ಅನಗತ್ಯ ವೆಚ್ಚ ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವರು ಸೂಚಿಸಿದ್ದಾರೆ.

ದಿನದ ಸುದ್ದಿ
EV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ
ಸುದ್ದಿದಿನ,ಬೆಂಗಳೂರು: ರಾಜ್ಯವು ಇವಿ ನೋಂದಣಿಯಲ್ಲಿ ದೇಶದಲ್ಲೇ ಪ್ರಮುಖ ಸ್ಥಾನ ಪಡೆದಿದ್ದು, ಶುದ್ಧ ಚಲನೆಗೆ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ವಿಶ್ವ ಇವಿ ದಿನದ ಸಂದರ್ಭದಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ ಸಾಧಿಸಿರುವುದು ಶ್ಲಾಘನೀಯ.
http://Visit : www.suddidina.com
ಕರ್ನಾಟಕವು ಒಟ್ಟು ಇವಿ ನೋಂದಣಿಯಲ್ಲಿ 3ನೇ ಸ್ಥಾನ ಪಡೆದಿದ್ದು, e-2W (ಎಲೆಕ್ಟ್ರಿಕ್ ಎರಡು ಚಕ್ರ ವಾಹನ) ಮತ್ತು e-4W (ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನ) ನೋಂದಣಿಯಲ್ಲಿ 2ನೇ ಸ್ಥಾನ ಪಡೆದಿದೆ. ಇದು ರಾಜ್ಯದ ಜನರು ಎಲೆಕ್ಟ್ರಿಕ್ ವಾಹನಗಳನ್ನು ಸ್ವೀಕರಿಸುವ ಪ್ರಮಾಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 2027 ಹಣಕಾಸು ವರ್ಷದಲ್ಲಿ EV ಪ್ರವೇಶ ಪ್ರಮಾಣ 14.67% ಆಗಿದ್ದು, ಇದು ದೇಶದ ಮಟ್ಟದಲ್ಲಿ ಗಮನಾರ್ಹ ಸಾಧನೆಯಾಗಿದೆ.
ರಾಜ್ಯದ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಬೆಸ್ಕಾಂ ನೊಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಚಾರ್ಜಿಂಗ್ ಸೌಲಭ್ಯ, ಹಾಗೂ ಶುದ್ಧ ಚಲನೆಗೆ ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸುವಲ್ಲಿ ಬೆಸ್ಕಾಂ ಪ್ರಮುಖ ಪಾತ್ರವಹಿಸಿದೆ.
ಕರ್ನಾಟಕ ಸರ್ಕಾರವು ಶುದ್ಧ ಚಲನೆಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವಿ ಖರೀದಿಗೆ ಪ್ರೋತ್ಸಾಹಕ ಯೋಜನೆಗಳು, ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆ, ಹಾಗೂ ಹಸಿರು ತಂತ್ರಜ್ಞಾನವನ್ನು ಉತ್ತೇಜಿಸುವ ಕ್ರಮಗಳು ಇವಿ ಕ್ರಾಂತಿಗೆ ಬಲ ನೀಡಿವೆ.
ಇವಿ ಬಳಕೆಯ ಹೆಚ್ಚಳದಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದು, ಇಂಧನ ಅವಲಂಬನೆ ಕಡಿಮೆಯಾಗುವುದು ಹಾಗೂ ಶುದ್ಧ ಶಕ್ತಿಯ ಬಳಕೆ ಹೆಚ್ಚಾಗುವುದು. ಇದು ಕರ್ನಾಟಕವನ್ನು ಹಸಿರು ರಾಜ್ಯವಾಗಿ ರೂಪಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.
ವಿಶ್ವ ಇವಿ ದಿನದ ಅಂಗವಾಗಿ, ಕರ್ನಾಟಕವು ತನ್ನ ಸಾಧನೆಗಳನ್ನು ಹಂಚಿಕೊಂಡು, ಮುಂದಿನ ದಿನಗಳಲ್ಲಿ ಶುದ್ಧ ಚಲನೆಗೆ ಇನ್ನಷ್ಟು ಬಲ ನೀಡಲು ಬದ್ಧವಾಗಿದೆ. ಇವಿ ಕ್ರಾಂತಿಯ ಮೂಲಕ ಕರ್ನಾಟಕವು ಭಾರತದ ಭವಿಷ್ಯವನ್ನು ಹಸಿರು ಮತ್ತು ಶಾಶ್ವತ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ.



