ದಿನದ ಸುದ್ದಿ
CAB ಬಗ್ಗೆ ಸಂಪೂರ್ಣ ವಿವರ : ಮಿಸ್ ಮಾಡ್ದೆ ಓದಿ ; ಶೇರ್ ಮಾಡಿ
- ಪೌರತ್ವ ಕಾಯಿದೆಯ ವಿರುದ್ಧ ಮೂವರು ಹಿರಿಯ ವಿಶ್ರಾಂತ ಅಧಿಕಾರಿಗಳು ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಸಾರಾಂಶವನ್ನು ಇಲ್ಲಿ ಭಾಷಾಂತರಿಸಿದ್ದೇನೆ. ಸರಳ ಮಾತುಗಳಲ್ಲಿ ಏಕೆ ಈ ಕಾಯಿದೆ ಸರಿ ಇಲ್ಲ ಎಂದು ರಿಟ್ ಅರ್ಜಿಯಲ್ಲಿ ವಿವರಿಸಲಾಗಿದೆ. ಬಾಂಗ್ಲಾದೇಶದಲ್ಲಿ ಭಾರತದ ಹೈಕಮಿಷನರ್ ಆಗಿದ್ದ ದೇವ್ ಮುಖರ್ಜಿ, ಸೋಮಸುಂದರ್ ಬುರ್ರಾ, ಅಮಿತಾಭಾ ಪಾಂಡೆ ಎಂಬ ಇಬ್ಬರು ನಿವ್ರತ್ತ ಹಿರಿಯ ಐ ಎ ಎಸ್ ಅಧಿಕಾರಿಗಳು ಸಲ್ಲಿಸಿರುವ ರಿಟ್ ಅರ್ಜಿ ಇದು.
ಅನುವಾದ: ರಾಜಾರಾಂ ತಲ್ಲೂರು
ಶತಮಾನಗಳಿಂದ ಮನುಷ್ಯ ಧರ್ಮ ಮತ್ತು ನಂಬಿಕೆಗಳ ಹೆಸರಿನಲ್ಲಿ ದೌರ್ಜನ್ಯ, ತಾರತಮ್ಯ ಮತ್ತು ಹಿಂಸೆಗಳಿಗೆ ಬಲಿಯಾಗುತ್ತಾ ಬಂದಿದ್ದಾನೆ. ಇದರಿಂದಾಗಿ ವ್ಯಕ್ತಿಗಳು, ಕುಟುಂಬಗಳು, ಜನಸಮುದಾಯಗಳು ತಮ್ಮ ತಾಯ್ನೆಲವನ್ನು ಬಿಟ್ಟು ಹೋಗಬೇಕಾದ ಮತ್ತು ಬೇರೆಲ್ಲೋ ಹೋಗಿ ಆಶ್ರಯ ಪಡೆಯುವ ದಾರುಣ ಪರಿಸ್ಥಿತಿ ಬಂದದ್ದಿದೆ. ಕೆಲವೊಮ್ಮೆ ಅವರಿಗೆ ಆಯ್ಕೆಗಳಿರುವುದಿಲ್ಲ. ಜಗತ್ತಿನ ಚರಿತ್ರೆ ಎಂದರೆ, ಗಂಡಸರು, ಹೆಂಗಸರು ಮತ್ತು ಮಕ್ಕಳು ತಮ್ಮದೇ ನೆಲದಲ್ಲಿ ಪರಕೀಯರಾಗುವುದರ ಮತ್ತು ಅವರ ಆ ಅಸಹಾಯಕ ಸ್ಥತಿಯಲ್ಲಿ ಸಮಾಜಗಳು, ದೇಶಗಳು ಅವರಿಗೆ ಆಶ್ರಯ ನೀಡಿದ್ದರ ಕಥೆಯೇ ಆಗಿದೆ.
ಪೌರತ್ವ (ತಿದ್ದುಪಡಿ) ಕಾಯಿದೆ, 2019 [ಪ್ರಶ್ನಾರ್ಹ ಕಾಯಿದೆ] ಮೇಲ್ನೋಟಕ್ಕೆ ದೌರ್ಜನ್ಯಕ್ಕೊಳಗಾದವರಿಗೆ ಅನುಕೂಲ ಮಾಡಿಕೊಡುವ ಕಾಯಿದೆಯಂತೆ ಕಾಣಿಸುತ್ತದೆ. ಆದರೆ ಈ ಪ್ರಶ್ನಾರ್ಹ ಕಾಯಿದೆಯು ದೌರ್ಜನ್ಯಕ್ಕೊಳಗಾದವರ ನಡುವೆ, ನಂಬಿಕೆ ಮತ್ತು ಮೂಲ ದೇಶದ ಆಧಾರದಲ್ಲಿ ತಾರತಮ್ಯ ಮಾಡುತ್ತದೆ. ಸರಿಯಾದ ಧರ್ಮ (ಹಿಂದು, ಸಿಖ್, ಜೈನ್, ಕ್ರಿಷ್ಚಿಯನ್, ಪಾರ್ಸಿ, ಬೌಧ್ಧ) ಮತ್ತು ಸರಿಯಾದ ಮೂಲದೇಶ (ಪಾಕಿಸ್ಥಾನ, ಅಫ್ಗಾನಿಸ್ಥಾನ, ಬಾಂಗ್ಲಾದೇಶ)ದ ನಿರಾಶ್ರಿತರು ಮತ್ತು ವಲಸೆ ಬಂದವರಿಗೆ ಅಕ್ರಮ ವಲಸಿಗರೆಂಬ ಕಾರಣಕ್ಕೆ ಕಾನೂನು ಕ್ರಮದಿಂದ ಮುಕ್ತಿ ನೀಡಿ ಫಾಸ್ಟ್ ಟ್ರ್ಯಾಕ್ ಮೂಲಕ ಪೌರತ್ವ ನೀಡುವ ಮಾತನ್ನು ಪ್ರಶ್ನಾರ್ಹ ಕಾಯಿದೆ ಆಡುತ್ತದೆ. ಆದರೆ, ತಪ್ಪು ದೇಶಗಳ ತಪ್ಪು ಧರ್ಮದ ನಿರಾಶ್ರಿತರು ಮತ್ತು ವಲಸಿಗರಿಗೆ ಅವರು ಇಲ್ಲಿ ಒಳಗೊಳ್ಳಲು ತಾವು ಅರ್ಹರೆಂದು ವೈಯಕ್ತಿಕವಾಗಿ ಸಾಬೀತು ಮಾಡಬೇಕಾಗುತ್ತದೆ, ಅವರಿಗೆ ಕ್ಷಮಾದಾನವಾಗಲೀ, ಪೌರತ್ವವಾಗಲೀ ಇಲ್ಲ.
ಇದು ಅನ್ಯಾಯವಾದ ತಾರತಮ್ಯ ಮತ್ತು ಸಕಾರಣ ಇಲ್ಲದೆ ಸಮಾನ ಗೌರವ ಮತ್ತುಕಳಕಳಿಗಳನ್ನು ನಿರಾಕರಿಸಿದಂತಾಗುತ್ತದೆ ಎಂದು ಗೌರವಯುತವಾಗಿ ನಿವೇದಿಸಿಕೊಳ್ಳುತ್ತಿದ್ದೇವೆ. ಪ್ರಶ್ನಾರ್ಹ ಕಾಯಿದೆಯು ಸಮಾನತೆ ಮತ್ತು ಸಮಾನ ಪರಿಗಣನೆಯ ಎಲ್ಲ ತತ್ವಗಳನ್ನು ಉಲ್ಲಂಘಿಸುತ್ತದೆ, ಭಾರತದ ಸಂವಿಧಾನದ ಮೂಲ ಲಕ್ಷಣವಾದ ಜಾತ್ಯತೀತತೆಯ “ಹಾನಿ ಮತ್ತು ನಾಶಕ್ಕೆ” ಕಾರಣವಾಗುತ್ತದೆ, ಹಾಗಾಗಿ ಅದನ್ನು ಅಸಾಂವಿಧಾನಿಕ ಎಂದು ಕಿತ್ತುಹಾಕಬೇಕಾಗಿದೆ.
ಈ ಪ್ರಶ್ನಾರ್ಹ ಕಾಯಿದೆ ಅಸಾಂವಿಧಾನಿಕ ಮಾತ್ರವಲ್ಲ, ಭಾರತ ಗಣರಾಜ್ಯದ ತಳಹದಿಯಲ್ಲಿರುವ ತತ್ವಾದರ್ಶಗಳಿಗೂ ಇದು ತದ್ವಿರುದ್ಧವಾಗಿದೆ. 1947ರಲ್ಲಿ, ಕೆಲವು ಬದಲಾಯಿಸಲಾಗದ ಸತ್ಯಗಳ ತಳಹದಿಯ ಮೇಲೆ ಈ ದೇಶ ಸ್ಥಾಪನೆಯಾಗಿದೆ. ಅವುಗಳಲ್ಲಿ ಮುಖ್ಯವಾದುದು ಭಾರತ ಆವತ್ತಿಗೂ-ಈವತ್ತಿಗೂ-ಯಾವತ್ತಿಗೂ – ಎಲ್ಲ ಧಾರ್ಮಿಕ ನಂಬಿಕೆಗಳಿಗೂ ತವರಾಗಿತ್ತು, ವೈವಿದ್ಯತೆ ಮತ್ತು ಬಹುತ್ವಗಳನ್ನು ಸ್ವಾಗತಿಸುತ್ತಿತ್ತು ಮತ್ತು ಎಲ್ಲರನ್ನೂ ಒಳಗೊಳ್ಳುತ್ತಿತ್ತು.
ಭಾರತ ಸ್ಥಾಪನೆ ಆಗಿರುವುದು “ ನಾಗರಿಕ ರಾಷ್ಟ್ರೀಯತೆ” ಚಿಂತನೆಯ ಆಧಾರದಲ್ಲಿ. – “ಭಾರತೀಯತೆ” ಎಂಬುದು ಸಂವಿಧಾನ ಮತ್ತದರ ಮೌಲ್ಯಗಳನ್ನು ಒಪ್ಪಿಕೊಂಡು ಸಾಗುವುದರಲ್ಲಿದೆ- ಮತ್ತು ವಿಭಜನೆಯ ವೇಳೆ “ದ್ವಿ-ರಾಷ್ಟ್ರ” ಸಿದ್ಧಾಂತವನ್ನು ತಿರಸ್ಕರಿಸುವುದರಲ್ಲಿ. ಪ್ರಶ್ನಾರ್ಹ ಕಾಯಿದೆಯು ಈ ಮೂಲಭೂತ ತತ್ವಗಳನ್ನು ಚೂರುಚೂರು ಮಾಡಿ, ಕೆಲವು ನಂಬಿಕೆ ಮತ್ತು ಧರ್ಮಗಳನ್ನು ಉದ್ದೇಶಪೂರ್ವಕವಾಗಿ ಬೇರೆಯವರಿಗಿಂತ ಹೆಚ್ಚು ರಕ್ಷಣೆಗೆ ಅರ್ಹಗೊಳಿಸುತ್ತದೆ.
ಭಾರತ ಗಣರಾಜ್ಯದ ಸ್ಥಾಪಕ ತತ್ವಗಳು ಮತ್ತು ಭಾರತದ ಸಂವಿಧಾನದ ಆಶಯಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೆ ಸಂವಿಧಾನದ ಮೂಲಭೂತ ಸಂರಚನೆಯನ್ನು ಹಾಗೂ ಸಂವಿಧಾನದ 14,21,25ನೇ ವಿಧಿಗಳನ್ನು ಪ್ರಶ್ನಾರ್ಹ ಕಾಯಿದೆ ಸಂಪೂರ್ಣವಾಗಿ ಉಲ್ಲಂಘಿಸುತ್ತದೆ. ಪ್ರಶ್ನಾರ್ಹ ಕಾಯಿದೆಯು ಭಾರತದ ಗಡಿಯೊಳಗೆ ನಿರಾಶ್ರಿತರು ಮತ್ತು ವಲಸೆಬಂದವರ ನಡುವೆ ಎರಡು ವಿಚಾರಗಳಲ್ಲಿ ತಾರತಮ್ಯ ಮಾಡುತ್ತದೆ: ಅವರ ಮೂಲ ರಾಷ್ಟ್ರೀಯತೆ ಮತ್ತು ಅವರ ಧರ್ಮದ ಹೆಸರಲ್ಲಿ. ಈ ವರ್ಗದಲ್ಲಿ ಬರುವವರು ಯಾರೆಂದರೆ (ಎ) ಅಕ್ರಮ ವಲಸಿಗರು ಎಂದು ಕಾನೂನು ಕ್ರಮದಿಂದ ರಿಯಾಯಿತಿ ಪಡೆಯುವವರು, ಮತ್ತು (ಬಿ) ಫಾಸ್ಟ್ ಟ್ರ್ಯಾಕ್ ಪೌರತ್ವ ಪಡೆಯುವವರು.
ಅದಿಲ್ಲದವರು, ಕೇಂದ್ರ ಗ್ರಹ ಇಲಾಖೆ 2011ರಲ್ಲಿ ಬಿಡುಗಡೆ ಮಾಡಿದ ಸ್ಟಾಂಡರ್ಡ್ ಕಾರ್ಯ ನಿರ್ವಹಣಾ ಮಾರ್ಗದರ್ಶಿಯ ಅಡಿ ವೈಯಕ್ತಿಕ ಕಾರ್ಯನಿರ್ವಾಹಕ ಪ್ರಕ್ರಿಯೆಯ ಅನ್ವಯ “ದೀರ್ಘಕಾಲಿಕ ವೀಸಾ” ಗಳಿಸುವುದಕ್ಕೆ ಪ್ರಯತ್ನಿಸಲು ಸೀಮಿತರಾಗುತ್ತಾರೆ. ಇದರ ಪರಿಣಾಮವಾಗಿ ಕೆಲವು ವ್ಯಕ್ತಿಗಳುಕೆಲವು ಧರ್ಮಕ್ಕೆ ಮತ್ತು ರಾಷ್ಟ್ರೀಯ ಗುಂಪುಗಳಿಗೆ ಸೇರಿರುವ ಕಾರಣಕ್ಕಾಗಿ ಶಾಸನಾತ್ಮಕ ರಕ್ಷಣೆ ಮತ್ತು ಪೌರತ್ವ ಪಡೆದರೆ, ಇತರರು ಅಂತಹ ಯಾವುದೇ ಲಾಭಗಳಿಲ್ಲದೆ ಕಾರ್ಯಾಂಗದ ಮರ್ಜಿ ಕಾಯಬೇಕಾಗುತ್ತದೆ.
ಭಾರತದ ಗಡಿಯೊಳಗಿರುವ ಎಲ್ಲರಿಗೂ ಅನ್ವಯವಾಗುವಂತೆ ಕಾನೂನಿನ ರಕ್ಷಣೆ ಸಮಾನವಾಗಿರಬೇಕೆಂಬ ಸಾಂವಿಧಾನಿಕ ಆಶಯವನ್ನಿದು ಉಲ್ಲಂಘಿಸುತ್ತದೆ. ಈ ಕಾನೂನು ತಾನೇ ಸ್ವತಃ ಶಾಸಕಾಂಗೀಯ ಉದ್ದೇಶವನ್ನು ವ್ಯಕ್ತಪಡಿಸದಿದ್ದರೂ, ಕೇಂದ್ರ ಗ್ರಹಖಾತೆಯ 2015 ಮತ್ತು 16ರ ಪ್ರಕಟಣಾಸ್ವರೂಪದ ಶಾಸಕಾಂಗೀಯ ದಾಖಲೆಗಳಿಂದ (ಈ ಪ್ರಶ್ನಾರ್ಹ ಕಾಯಿದೆಯ ತಯಾರಿಗೆ ಪೂರ್ವಭಾವಿಯಾಗಿ ರಚಿತವಾದ ಜಂಟಿ ಸಂಸದೀಯ ಆಯೋಗಕ್ಕೆ ಸಲ್ಲಿಸಲಾದವು) ಮತ್ತು ಕಾಯಿದೆಯ ಉದ್ದೇಶ ಮತ್ತು ಕಾರಣಗಳ ಹೇಳಿಕೆಯಲ್ಲಿ, ಈ ಕಾಯಿದೆಯ ಮೂಲ ಉದ್ದೇಶ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಪರಿಹಾರ ಒದಗಿಸುವುದೆಂದು ಹೇಳಲಾಗಿದೆ.
ಈ ಉದ್ದೇಶ ಮತ್ತು ಗುರಿ ಮಹತ್ತರವಾದದ್ದೇ. ಆದರೆ, ಈ ಪ್ರಶ್ನಾರ್ಹ ಕಾಯಿದೆಯು ಈ ಗುರಿಯನ್ನು ತಾರತಮ್ಯಪೂರ್ವಕವಾಗಿ ಅನುಷ್ಠಾನಗೊಳಿಸಲು ಹೊರಟಿದೆ. ಕೇವಲ ಕೆಲವು ದೇಶಗಳ ಕೆಲವೇ ಧರ್ಮದ ಜನರಿಗೆ ರಕ್ಷಣೆಯನ್ನು ಸೀಮಿತಗೊಳಿಸಲಾಗಿದೆ.
ಹಾಗಾಗಿ, ಭಾರತದ ಆಸುಪಾಸಿನ ದೇಶಗಳಲ್ಲಿ ಕೂಡ ಈ ಕೆಳಗಿನ ಸ್ಥಿತಿಗಳಿರಬಹುದು ಎಂಬ ವಾಸ್ತವವನ್ನು ಈ ಕಾನೂನು ನಿರ್ಲಕ್ಷಿಸುತ್ತದೆ (ಎ) ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶ ಹೊರತುಪಡಿಸಿ ಬೇರೆ ಆಸುಪಾಸಿನ ದೇಶಗಳಲ್ಲೂ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರು ಇರಬಹುದು, (ಬಿ) ಮೇಲೆ ಹೇಳಲಾದ ಮೂರು ದೇಶಗಳಲ್ಲಿ ಹಿಂದೂಗಳು, ಸಿಖ್ ರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಷ್ಚಿಯನ್ನರ ಹೊರತಾಗಿಯೂ ಬೇರೆ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಜನಸಮುದಾಯಗಳಿರಬಹುದು ಮತ್ತು (ಸಿ) ಈ ಎಲ್ಲ ದೇಶಗಳು ಮತ್ತು ಎಲ್ಲ ಗುಂಪುಗಳಲ್ಲೂ ಧಾರ್ಮಿಕೇತರ ದೌರ್ಜನ್ಯಗಳಿಗೆ ಒಳಗಾದ ಜನರು ಇರಬಹುದು (2011ರ ಸ್ಟಾಂಡರ್ಡ್ ಕಾರ್ಯನಿರ್ವಹಣಾ ಮಾರ್ಗದರ್ಶಿ ಇದನ್ನು ಗುರುತಿಸಿದೆ)
ಇದರ ಫಲವಾಗಿ, ಕೆಳಗಿನ ಉದಾಹರಣೆಗಳು ತೋರಿಸುವಂತೆ, ಕಾಯಿದೆಯು ಇಂತಹ ಸನ್ನಿವೇಶಗಳಲ್ಲಿ ಜನರ ನಡುವೆ ಅನ್ಯಾಯ ಮತ್ತು ತಾರತಮ್ಯಗಳನ್ನು ಎಸಗುತ್ತದೆ :
- ಶ್ರೀಲಂಕಾದಿಂದ ಧಾರ್ಮಿಕ ದೌರ್ಜನ್ಯದ ಕಾರಣದಿಂದಾಗಿ ಪಲಾಯನ ಮಾಡಿರುವ ಒಬ್ಬ ಶ್ರೀಲಂಕಾದ ತಮಿಳ ವ್ಯಕ್ತಿ, ಅಥವಾ ಧಾರ್ಮಿಕ ಕಾರಣಗಳಿಗಾಗಿ ಮಾನವ ಹತ್ಯೆಯಿಂದ ತಪ್ಪಿಸಿಕೊಳ್ಳಲು ಮಯಮ್ನಾರ್ ನಿಂದ ಪಲಾಯನ ಮಾಡಿದ ಒಬ್ಬ ರೋಹಿಂಗ್ಯಾ ಮುಸ್ಲಿಂ, ಈ ಕಾಯಿದೆಯಡಿ ಆಶ್ರಯ ಪಡೆಯಲಾಗುವುದಿಲ್ಲ, ಆದರೆ ಇದೇ ಕಾರಣಗಳಿಗಾಗಿ ಪಾಕಿಸ್ಥಾನದಿಂದ ಪಲಾಯನ ಮಾಡಿರುವ ಒಬ್ಬ ಹಿಂದೂ ಆಶ್ರಯ ಪಡೆಯುತ್ತಾನೆ – ಈ ಮೂವರೂ “ಭಾರತದ ಗಡಿಯ ಒಳಗೆ ಇರುವ ಹೊರತಾಗಿಯೂ” ಹೀಗಾಗುತ್ತದೆ.
- ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಪಾಕಿಸ್ಥಾನದಿಂದ ಪಲಾಯನ ಮಾಡಿರುವ ಅಹ್ಮದೀಯ ವ್ಯಕ್ತಿಯೊಬ್ಬರಿಗೆ ಈ ಕಾಯಿದೆಯಡಿ ಇಲ್ಲಿ ಆಶ್ರಯ ದೊರಕುವುದಿಲ್ಲ, ಆದರೆ ಇದೇ ಕಾರಣಕ್ಕಾಗಿ ಪಾಕಿಸ್ಥಾನದಿಂದ ಪಲಾಯನ ಮಡಿದ ಒಬ್ಬ ಕ್ರಿಷ್ಚಿಯನ್ ಆಶ್ರಯ ಪಡೆಯುತ್ತಾನೆ – ಈ ಇಬ್ಬರೂ “ ಭಾರತದ ಗಡಿಯ ಒಳಗೆ ಇರುವ ಹೊರತಾಗಿಯೂ” ಹೀಗಾಗುತ್ತದೆ.
- ರಾಜಕೀಯ ದೌರ್ಜನ್ಯದ ಕಾರಣದಿಂದಾಗಿ ಚೀನಾದಿಂದ ಪಲಾಯನ ಮಾಡಿರುವ ಒಬ್ಬ ಟಿಬೇಟನ್ ರಾಜಕೀಯ ಚಳುವಳಿಗಾರ, ಅಥವಾ ಸಾಮಾಜಿಕ ದೌರ್ಜನ್ಯಕ್ಕಾಗಿ ಬಾಂಗ್ಲಾದೇಶದಿಂದ ಪಲಾಯನ ಮಾಡಿರುವ ಒಬ್ಬರು ಮಹಿಳಾ ಹಕ್ಕುಗಳ ಚಳುವಳಿಗಾರ ಈ ಕಾನೂನಿನ ಅಡಿ ಆಶ್ರಯ ಪಡೆಯುವುದಿಲ್ಲ, ಆದರೆ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಫ್ಘಾನಿಸ್ಥಾನಿ ಬೌದ್ಧ ಆಶ್ರಯ ಪಡೆಯುತ್ತಾರೆ – ಈ ಮೂವರೂ “ಭಾರತದ ಗಡಿಯ ಒಳಗೆ ಇರುವ ಹೊರತಾಗಿಯೂ” ಹೀಗಾಗುತ್ತದೆ.
ಹಾಗಾಗಿ ಈ ಪ್ರಶ್ನಾರ್ಹ ಕಾಯಿದೆ ಸಕಾರಣವನ್ನಾಗಲೀ, ಕರುಣೆಯನ್ನಾಗಲೀ, ಮಾನವೀಯತೆಯನ್ನಾಗಲೀ ಹೊಂದಿಲ್ಲ, ಸಾಂವಿಧಾನಿಕವಾಗಿಯೂ ಮಾನ್ಯತೆ ಗಳಿಸಿಕೊಳ್ಳುವಂತಿಲ್ಲ.ಇದಲ್ಲದೆ, ಧರ್ಮ ಮತ್ತು ಧರ್ಮಾಧರಿತ ದೌರ್ಜನ್ಯಗಳನ್ನು ದೇಶದ ಪೌರತ್ವಕ್ಕೆ ಸ್ಪಷ್ಟ ಕ್ಲೇಮುಗಳಾಗಿ ಪರಿವರ್ತಿಸುತ್ತಾ, ಅದೇ ವೇಳೆಗೆ ಬೇರೆ ಧಾರ್ಮಿಕೇತರ ದೌರ್ಜನ್ಯಗಳಿಗೆ ಅದೇ ಪಾವಿತ್ರ್ಯವನ್ನು ನಿರಾಕರಿಸುತ್ತಾ ಇರುವ ಈ ಪ್ರಶ್ನಾರ್ಹ ಕಾಯಿದೆ ಜಾತ್ಯತೀತತೆಯ ಮೂಲಭೂತ ತತ್ವವನ್ನೇ ಉಲ್ಲಂಘಿಸುತ್ತದೆ.
ಸಮಾಜದಲ್ಲಿ ವ್ಯಕ್ತಿಯ ನಾಗರಿಕ ಸ್ಥಿತಿಯನ್ನು ಧರ್ಮ ಅಥವಾ ನಂಬಿಕೆಯ ಆಧಾರದಲ್ಲಿ ಗುರುತಿಸುವುದನ್ನು ಭಾರತದ ಜಾತ್ಯತೀತತೆಯ ತತ್ವವು ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಮಾನ್ಯ ಮಾಡುವುದಿಲ್ಲ. ಜನರನ್ನು ಪ್ರತ್ಯೇಕಿಸಿ ಮೇಲುಕೀಳೆಂದು ಪರಿಗಣಿಸಿ ಹೀಗೆ ಮಾಡಲು ಇಲ್ಲಿ ಅವಕಾಶವೇ ಇಲ್ಲ.
ಅರ್ಜಿದಾರರು ವಿಶ್ರಾಂತ ಜನಸೇವಕರಾಗಿದ್ದು ತಮ್ಮ ಇಡಿಯ ವ್ರತ್ತಿಬದುಕನ್ನು ದೇಶದ ಸಂವಿಧಾನವನ್ನು ಎತ್ತಿಹಿಡಿಯುವ, ಅದರ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕೆ ಮುಡಿಪಾಗಿಟ್ಟವರು. ಎಲ್ಲ ನಿರಾಶ್ರಿತರು ಮತ್ತು ವಲಸಿಗರಿಗೆ ನ್ಯಾಯಬದ್ಧ, ಸಮಾನ ಅವಕಾಶಗಳಿರುವ, ನೈಸರ್ಗೀಕರಣದ ಮೂಲಕ ಪೌರತ್ವ ನೀಡುವ ನೀತಿಗೆ ನಮ್ಮ ಆಕ್ಷೇಪ ಇಲ್ಲ.
ಇದೊಂದು ನೈತಿಕ ಆವಶ್ಯಕತೆ ಮಾತ್ರವಲ್ಲದೇ ಜಗತ್ತಿನಲ್ಲಿ ಭಾರತವು ಈ ತನಕ ಪಡೆದಿರುವ ತೆರೆದ, ಬಹುತ್ವದ, ವೈವಿದ್ಯತೆಗಳಿಂದೊಡಗೂಡಿದ ಸಮಾಜ ಎಂಬ ಚಾರಿತ್ರಿಕ ಸ್ಥಾನಮಾನಕ್ಕೆ ತಕ್ಕುದಾಗಿದೆ, ರಕ್ಷಣೆ ಬಯಸಿ ಬಂದವರಿಗೆ ಯಾವತ್ತೂ ರಕ್ಷಣೆ ನೀಡಿದೆ, ಎಲ್ಲ ಧರ್ಮ, ನಂಬಿಕೆ, ಜೀವನ ಶೈಲಿಗಳ ಜನರನ್ನೂ ಯಾವತ್ತಿಗೂ ಸ್ವಾಗತಿಸಿದೆ, ಸಹನೆ ಮತ್ತು ಸ್ವೀಕಾರದ ಮನೋಭಾವ ಭಾರತದ ನಾಗರೀಕತೆಯ ಲಕ್ಷಣವೇ ಆಗಿದೆ ಎಂಬ ಕಾರಣಗಳಿಗಾಗಿಯೂ ಇದು ಅಗತ್ಯವಿದೆ. ಆದರೆ ಪ್ರಶ್ನಾರ್ಹ ಕಾಯಿದೆಯು ಈ ಗುರಿಯನ್ನು ತಲುಪುವುದಿಲ್ಲ ಮಾತ್ರವಲ್ಲದೇ, ತಾರತಮ್ಯದ ಕಾನೂನುಗಳಿಗೆ ಕಾರಣ ಆಗಲಿದೆ. ಈ ಕಾರಣಗಳಿಗಾಗಿ, ಪ್ರಶ್ನಾರ್ಹ ಕಾಯಿದೆಯು ಅಸಂವಿಧಾನಿಕ ಮತ್ತು ನ್ಯಾಯಲಯವು ಅದನ್ನು ರದ್ಧುಪಡಿಸಬೇಕೆಂದು ಕೋರುತ್ತೇವೆ.
ದಿನಾಂಕ ಪಟ್ಟಿ
15-8-1947
ಅಹಿಂಸೆ, ಮಾನವೀಯತೆ, ಸಮಾನತೆ, ಜಾತ್ಯತೀತತೆಯ ತತ್ವಗಳ ಮೇಲೆ ಸುದೀರ್ಘವಾದ ಹೋರಾಟದ ಬಳಿಕ ಭಾರತ ಸ್ವತಂತ್ರ, ಸಾರ್ವಭೌಮ ದೇಶವಾಗಿದೆ. ಭಾರತದ ಸ್ವಾತಂತ್ರ್ಯವು ಮೊಹಮ್ಮದ್ ಅಲಿ ಜಿನ್ನಾ ಅವರ ಹಿಂದೂ ಗಳು ಮತ್ತು ಮುಸ್ಲಿಮರು ತಮ್ಮೊಳಗೇ ಎರಡು ರಾಷ್ಟ್ರಗಳು ಮತ್ತವರಿಗೆ ಸ್ವಂತ ತಾಯ್ನೆಲಗಳು ಬೇಕು ಎಂಬ “ ಎರಡು-ರಾಷ್ಟ್ರ ಸಿದ್ಧಾಂತ” ವನ್ನುತಿರಸ್ಕರಿಸಿದೆ. ಬದಲಾಗಿ ದೇಶ ಮತ್ತು ದೇಶದ ಸಂವಿಧಾನ ವೈವಿದ್ಯತೆ, ಬಹುತ್ವ ಮತ್ತು ಒಳಗೊಳ್ಳುವಿಕೆಯ ತತ್ವಗಳನ್ನು ಆಧರಿಸಿದೆ.
1947-50
ಈ ತತ್ವಗಳ ಆಧಾರದಲ್ಲಿ ಮೂರುವರ್ಷಗಳ ದೀರ್ಘ ಪ್ರಕ್ರಿಯೆಯ ಬಳಿಕ ಭಾರತದ ಸಂವಿಧಾನವನ್ನು ರಚಿಸಲಾಯಿತು. ಪೌರತ್ವದ ಬಗ್ಗೆ ಹೇಳುವ ಸಂವಿಧಾನದ ಎರಡನೇ ಭಾಗದಲ್ಲಿ ಇದು ಸ್ಪಷ್ಟವಾಗಿ ಉಲ್ಲೇಖವಾಗಿದ್ದು, ಧಾರ್ಮಿಕ ಮತ್ತು ಜನಾಂಗೀಯ ತಳಹದಿಯ ಪೌರತ್ವ (jus sanguinis) ಮತ್ತು ಹುಟ್ಟು, ವಾಸ ಹಾಗೂ ಗಡಿ ಆಧರಿತ ಪೌರತ್ವ (jus soli) ಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ.
30-12-1955
ಪೌರತ್ವ ಕಾಯಿದೆ ಶಾಸನವಾಯಿತು. ಅದು ಮೇಲೆ ಹೇಳಿದ ಸಾಂವಿಧಾನಿಕ ತತ್ವಗಳನ್ನೇ ಆಧರಿಸಿದೆ.
24-4-1973
ಮಾನ್ಯ ನಾಯಾಯಾಲಯವು ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಪ್ರಕರಣದ ತೀರ್ಪಿನಲ್ಲಿ, ಜಾತ್ಯತೀತತೆ ಭಾರತೀಯ ಸಂವಿಧಾನದ ಮೂಲ ಸಂರಚನೆಯ ಭಾಗ ಎಂದು ಹೇಳಿದೆ. ಮುಂದೆ ಎಸ್ ಆರ್ ಬೊಮ್ಮಾಯಿ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲೂ ಇದನ್ನು ಎತ್ತಿ ಹಿಡಿದಿದೆ.
7-12-1985
ಅಸ್ಸಾಂ ಒಪ್ಪಂದದ ಬಳಿಕ, ಪೌರತ್ವ ಕಾಯಿದೆಗೆ 6Aಸೆಕ್ಷನ್ “ಅಸ್ಸಾಂ ಒಪ್ಪಂದದನ್ವಯ ಬರುವ ವ್ಯಕ್ತಿಗಳಿಗೆ ಪೌರತ್ವದ ವಿಶೇಷ ಪ್ರಾವಧಾನಗಳು” ಸೇರ್ಪಡೆಯಾಯಿತು. ಈ ವಿಭಾಗವು “ನಿರ್ದಿಷ್ಟ” ಭೂಭಾಗದಿಂದ ಭಾರತಕ್ಕೆ ಬರುವ “ಭಾರತೀಯ ಮೂಲದ” ಜನರಿಗೆ ಹಾಗೆ ಮಾಡಲು ಕೊನೆಯ ದಿನಾಂಕಗಳನ್ನು ಸ್ಪಷ್ಟಪಡಿಸುತ್ತದೆ. ಈ ಸೆಕ್ಷನ್ 6A ಸಾಂವಿಧಾನಿಕವೇ ಎಂಬ ಬಗ್ಗೆ ತಕರಾರು ಈಗಲೂ ತಮ್ಮ ನ್ಯಾಯಲಯದ ಮುಂದೆ ವಿಚಾರಣೆಗೆ ಬಾಕಿ ಇದೆ.
3-12-2004
ಪೌರತ್ವ ಕಾಯಿದೆಯ 3ನೇ ವಿಧಿಯನ್ನು ಬದಲಾಯಿಸಲಾಯಿತು. ಇದು jus soli ತತ್ವವನ್ನು 1987ರ ಬಳಿಕ ಜನಿಸಿದವರಿಗಾಗಿ ಭಾಗಷಃ ಬದಲಾಯಿಸುತ್ತದೆ. ಇಲ್ಲಿ ಧಾರ್ಮಿಕ ನಂಬಿಕೆ ಪೌರತ್ವಕ್ಕೆ ತಳಹದಿಯಾಗಿಲ್ಲ.
29-12-2011
ನಿರಾಶ್ರಿತರೆಂದು ಭಾರತದಲ್ಲಿ ವಾಸವಿರುವ ವಿದೇಶಿ ನಾಗರಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಗ್ರಹಸಚಿವಾಲಯವು ಸ್ಟಾಂಡರ್ಡ್ ಕಾರ್ಯಾಚರಣೆ ಮಾರ್ಗದರ್ಶಿ ಪ್ರಕಟಿಸಿತು. ಅದರ ಪ್ರಕಾರ, ಈ ಕ್ಲೇಮುಗಳನ್ನು ಪರಿಶೀಲಿಸಿ, ಸರಿಯೆಂದು ಕಂಡುಬಂದರೆ “ದೀರ್ಘಕಾಲಿಕ ವೀಸಾ” ನೀಡಲಾಗುತ್ತದೆ. ಈ ವೀಸಾನೀಡಿಕೆಗೆ ಆಧಾರ, ಆ ವ್ಯಕ್ತಿಗೆ ಅವರ ತಾಯ್ನಾಡಿನಲ್ಲಿ ಜಾತಿ, ಧರ್ಮ, ರಾಷ್ಟ್ರೀಯತೆ ಹೆಸರಿನಲ್ಲಿ ದೌರ್ಜನ್ಯ ಆಗಿದೆಯೇ ಎಂಬುದು.
7-9-2015
ಗೃಹ ಖಾತೆಯು GSR 685 (E) ಎಂಬ ಪ್ರಶ್ನಾರ್ಹ ಪ್ರಕಟಣೆ ಹೊರಡಿಸುತ್ತದೆ ಮತ್ತು 1950ರ ಪಾಸ್ ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡುತ್ತದೆ. ಈ ತಿದ್ದುಪಡಿಯಲ್ಲಿ, ಬಾಂಗ್ಲಾದೇಶ ಮತ್ತು ಪಾಕಿಸ್ಥಾನದ ಅಲ್ಪಸಂಖ್ಯಾತ ಸಮುದಾಯಗಳು ಅಂದರೆ ಹಿಂದೂಗಳು, ಸಿಖ್, ಬೌದ್ಧ, ಪಾರ್ಸಿ, ಜೈನ ಮತ್ತು ಕ್ರಿಷ್ಚಿಯನ್ನರು ಧಾರ್ಮಿಕ ದೌರ್ಜನ್ಯ ಅಥವಾ ಅದರ ಭಯದಿಂದ ಭಾರತದಲ್ಲಿ ಆಶ್ರಯ ಪಡೆಯಬಯಸಿದರೆ, ಮತ್ತು ಅವರು 2014 ಡಿಸೆಂಬರ್ 31ರ ಮುನ್ನ ಭಾರತವನ್ನು ಪ್ರವೇಶಿಸಿದ್ದರೆ, ಅವರಿಗೆ ಸೂಕ್ತ ದಾಖಲೆಪತ್ರಗಳಿಲ್ಲದಿದ್ದರೂ ಭಾರತಕ್ಕೆ ಮುಕ್ತ ಪ್ರವೇಶ ಇರುತ್ತದೆ (ಪಾಸ್ ಪೋರ್ಟ್ ನಿಯಮಗಳ ನಿಯಮ 3). ಇದಲ್ಲದೇ ಈ ಪ್ರಕಟಣೆಯು 1948ರ ವಿದೇಶೀಯರ ಆದೇಶಕ್ಕೂ ತಿದ್ದುಪಡಿಗಳನ್ನು ಮಾಡುತ್ತದೆ.
18-7-2016
ಗ್ರಹಸಚಿವಾಲಯವು ಪ್ರಶ್ನಾರ್ಹವಾದ GSR 702 (E) and 703 (E) ಮೂಲಕ ರಕ್ಷಣೆಯನ್ನು ಅಫ್ಘಾನಿಸ್ಥಾನ ರಾಷ್ಟ್ರೀಯರಿಗೂ ವಿಸ್ತರಿಸುತ್ತದೆ.
ಜುಲೈ-ಆಗಸ್ಟ್2016
ಪೌರತ್ವ (ತಿದ್ದುಪಡಿ) ಕಾಯಿದೆ 2016, ಲೋಕಸಭೆಯಲ್ಲಿ ಮಂಡನೆಯಾಯಿತು (ಇದು ಬಹುತೇಕ ಈಗ ಜಾರಿಗೆ ಬಂದಿರುವ ಕಾಯಿದೆಯ ರೀತಿಯಲ್ಲೇ ಇದೆ) ಇದರಲ್ಲಿ ಮೂರು ದೇಶಗಳ ಆರು ಧಾರ್ಮಿಕ ಸಮುದಾಯಗಳಿಗೆ ಅಕ್ರಮ ವಲಸಿಗರನ್ನು ಪೌರರನ್ನಾಗಿಸುವ ಅವಕಾಶ ನೀಡಲಾಗಿದೆ. ಇದನ್ನು 2016ರಲ್ಲಿ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಯಿತು.
4-1-2019
ವಿಸ್ತ್ರತ ಚರ್ಚೆಯ ಬಳಿಕ ಜಂಟಿ ಸಂಸದೀಯ ಸಮಿತಿಯು (ಕೆಲವು ಆಕ್ಷೇಪಗಳೊಂದಿಗೆ) ಈ ಮಸೂದೆಯನ್ನು ಮಂಡಿಸಬಹುದೆಂದು ಶಿಫಾರಸು ಮಾಡಿತು. ಸಮಿತಿ ತನ್ನ ವರದಿಯಲ್ಲಿ ಈ ಮಸೂದೆಯ ಉದ್ದೇಶ 2015 ಮತ್ತು 2016ರ ಗ್ರಹ ಇಲಾಖೆಯ ಪ್ರಕಟಣೆಗಳಿಗೆ ಶಾಸನರೂಪ ನೀಡುವುದು ಈ ಮಸೂದೆಯ ಉದ್ದೇಶ ಎಂದು ಗ್ರಹ ಇಲಾಖೆಯ ನಿಲುವನ್ನು ದಾಖಲಿಸಿದೆ.
9.12.2019
ಪೌರತ್ವ (ತಿದ್ದುಪಡಿ) ಕಾಯಿದೆ 2019ಲೋಕಸಭೆಯಲ್ಲಿ ಅಂಗೀಕಾರಗೊಂಡಿತು. ಇದು 2016ರ ಮಸೂದೆಗಿಂತ ಭಿನ್ನವಾಗಿದ್ದು, ನೋಂದಣಿ ಪ್ರಮಾಣಪತ್ರ ಅಥವ ನೈಸರ್ಗೀಕರಣ ಗಳಿಸಲು ಭಾರತಕ್ಕೆ ಪ್ರವೇಶದ ಕೊನೆಯ ದಿನಾಂಕವನ್ನು 31-12-2014ಕ್ಕೆ ನಿಗದಿಪಡಿಸಿದೆ, ಮತ್ತು ಇದು ತಿದ್ದುಪಡಿಯ ಲಾಭವನ್ನು ಕೆಲವು ಭೂಭಾಗಗಳಿಗೆ ಮಾತ್ರ ಸೀಮಿತಗೊಳಿಸುತ್ತದೆ, ಹಾಗಾಗಿ ಸಂವಿಧಾನದ ಆರನೇ ಷೆಡ್ಯೂಲಿನ ವ್ಯಾಪ್ತಿಯಲ್ಲಿ ಬರುವ ಭೂಭಾಗಗಳಿಗೆ ಇದನ್ನು ಅನ್ವಯಿಸಲಾಗುವುದಿಲ್ಲ ಮಾತ್ರವಲ್ಲದೇ ಬೆಂಗಾಲ್ ಈಸ್ಟರ್ನ್ ಫ್ರಂಟಿಯರ್ ರೆಗ್ಯುಲೇಷನ್ 1873 ಅಡಿ ಬರುವ “ಒಳರೇಖೆ” ಯ ಒಳಗಿನ ಭೂಭಾಗಗಳಿಗೂ ಇದು ಅನ್ವಯ ಆಗುವುದಿಲ್ಲ.
11-12-2019
ಪೌರತ್ವ (ತಿದ್ದುಪಡಿ) ಕಾಯಿದೆ 2019ರಾಜ್ಯಸಭೆಯಲ್ಲಿ ಅಂಗೀಕಾರವಾಗುತ್ತದೆ.
12-12-2019
ಪೌರತ್ವ (ತಿದ್ದುಪಡಿ) ಕಾಯಿದೆ 2019ಕ್ಕೆ ರಾಷ್ಟ್ರಪತಿಗಳ ಅಂಕಿತ ಬೀಳುತ್ತದೆ ಮತ್ತು ಅದು ಈಗ ಶಾಸನವಾಗಿದೆ.
13-12-2019
ಈ ರಿಟ್ ಅರ್ಜಿ ದಾಖಲಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ
ಸುದ್ದಿದಿನಡೆಸ್ಕ್:ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ನಾಳೆ ಮತ್ತು ಇದೇ 15ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ತೆರೆದಿರಲಿವೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತದಿಂದ ತೊಂದರೆಗೆ ಒಳಗಾಗಬಾರದು ಹಾಗೂ ಆನ್‌ಲೈನ್ ಪೇಮೆಂಟ್ ಬಳಸದವರ ಅನಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬಿಲ್ ಬಂದ 30 ದಿನದೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಿದ್ದು, ಸೆಪ್ಟೆಂಬರ್ 1ರಿಂದಲೇ ಈ ನಿಯಮ ಜಾರಿಯಾಗಿದೆ ಎಂದು ಹೇಳಿದೆ.
ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂಪಾಯಿ ಗಳಿಗಿಂತ ಅಧಿಕವಾಗಿದ್ದಲ್ಲಿ, ಅಂತಹ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಗೃಹ ಜ್ಯೋತಿಯೋಜನೆ ಅಡಿ ಶೂನ್ಯ ಬಿಲ್ ಪಡೆಯುತ್ತಿರುವ ಗ್ರಾಹಕರ ಹಿಂಬಾಕಿ ಶೂನ್ಯವಿದ್ದಲ್ಲಿ ಈ ಬಗ್ಗೆ ಚಿಂತಿಸಬೇಕಿಲ್ಲ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ
ಸುದ್ದಿದಿನಡೆಸ್ಕ್:ಹತ್ತು ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ, ನಿರ್ಣಯ ತೆಗೆದುಕೊಳ್ಳಲು ಸೆಪ್ಟೆಂಬರ್ 17ಕ್ಕೆ ಸಂಪುಟ ಸಭೆ ನಡೆಯಲಿದೆ.
ಜಿಲ್ಲೆಯ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ವಿಶೇಷ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ 2014ರ ನವೆಂಬರ್ 28ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಅದರಂತೆ ಬೆಂಗಳೂರು ಜನತೆ ಮನೆ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನ ಮೂರ್ತಿಗಳನ್ನು ಜಲ ಮೂಲಗಳಲ್ಲಿ ವಿಸರ್ಜಿಸಲು ಬೆಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಇನ್ನೂ ಗಣೇಶ ಚತುರ್ಥಿ ವಿಶೇಷವಾಗಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತ್ತೆ ಅನೇಕ ಸಚಿವರು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.
ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮದ್ಯಪಾನಾಸಕ್ತರು ಗಲಭೆಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ ನಿಯಮಗಳಡಿ ಇಂದಿನಿಂದ ಉಡುಪಿ ಜಿಲ್ಲೆಯಾದ್ಯಂತ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಇದೇ 9 ಮತ್ತು ಸೆಪ್ಟೆಂಬರ್ 11 ರಂದು ಮಧ್ಯಾಹ್ನ 2 ರಿಂದ ಮದ್ಯರಾತ್ರಿ 12.00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ನೈಸರ್ಗಿಕವಾಗಿ ತಯಾರಿಸಿದ ಮಣ್ಣಿನ ಗಣೇಶನ ವಿಗ್ರಹಗಳನ್ನು ಮಾತ್ರ ಬಳಸುವ ಮೂಲಕ ಕೆರೆ, ನದಿ ಮೂಲಗಳು ಕಲುಷಿತಗೊಳಿಸದಂತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಪತ್ರಕರ್ತರಿಗೆ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
-
ದಿನದ ಸುದ್ದಿ6 days ago
ಮಾಯಕೊಂಡ ಗುಡ್ಡದಹಳ್ಳಿಗೆ ಕೆ.ಎಸ್.ಆರ್.ಟಿ.ಸಿ.ಬಸ್ ಸೌಕರ್ಯ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
-
ದಿನದ ಸುದ್ದಿ7 days ago
ಆತ್ಮಕತೆ | ನಮ್ಮ ಬಿಆರ್ಪಿ ಸ್ನಾತಕೋತ್ತರ ಕೇಂದ್ರ
-
ದಿನದ ಸುದ್ದಿ6 days ago
ಸಮಾಜ ಕಲ್ಯಾಣ ಇಲಾಖೆ : ಪ್ರೋತ್ಸಾಹಧನಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ನ್ಯಾಮತಿ | ತೂಕ ವಂಚನೆ ; ನ್ಯಾಯಬೆಲೆ ಅಂಗಡಿ ಅಮಾನತಿಗೆ ಡಿಸಿ ಆದೇಶ
-
ದಿನದ ಸುದ್ದಿ6 days ago
ಶ್ರೀ ಮಹರ್ಷಿ ವಾಲ್ಮೀಕಿ ಸ್ಮರಣಾರ್ಥ ಪ್ರಶಸ್ತಿಗೆ ಆರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಬಾಲ್ಯ ವಿವಾಹ ತಡೆಗೆ ನೂತನ ಕಾಯ್ದೆ ಜಾರಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕಕರ್
-
ದಿನದ ಸುದ್ದಿ6 days ago
KPSC | ಮರು ಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ ಸೂಚನೆ