ಲೈಫ್ ಸ್ಟೈಲ್
ಇಂದಿನ ಕರುವೇ ನಾಳಿನ ಹಸು..!
- ಡಾ.ಎನ್.ಬಿ.ಶ್ರೀಧರ,ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ,ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
“ನಮ್ಮನೇ ಕರುಗಳಿಗೆಲ್ಲಾ ಗಡಿಗೆ ಹೊಟ್ಟೆ ಸಾರ್.. ಏನೂ ಮಾಡಿದ್ರೂ ಸುಧಾರಿಸ್ತಿಲ್ಲ.. ಜಂತಿನ ಔಷಧಿ 10 ಸಲ ಹಾಕಿದ್ದೇನೆ. ಆದರೂ ಸರಿಯಾಗ್ತಿಲ್ಲ.. ಗಂಡು ಕರುಗಳೆಂತೂ ಬಿಡಿ.. ಇದೇ ಅವಸ್ಥೆ.. ಒಳ್ಳೆಯ ಟಾನಿಕ್ ಬರೆದು ಕೊಡಿ ಡಾಕ್ಟ್ರೇ !! ಇದು ಅನೇಕ ಹೈನುಗಾರರ ಕೊರಗು.
“ನಮ್ಮನೇ ಮಣಕ ಹತ್ತು ಸಲ ಇನ್ಸೆಮಿನೇಷನ್ ಆಯ್ತು. ಕಟ್ತಾನೇ ಇಲ್ಲ.. ಎಲ್ಲಾ ಔಷಧ ಆಯ್ತು.. ಏನ್ಮಾಡೋದೋ ಗೊತ್ತಾಗ್ತಾ ಇಲ್ಲ” .. ಇದೂ ಸಹ ಅನೇಕರ ಅಳಲು.!!.
ನಾವು ಗೋವು ದೇವರು, ಮೂವತ್ಮೂರು ಕೋಟಿ ದೇವರುಗಳ ಆಗರ.. ಅದು ಪೂಜ್ಯ ಗೋಮಾತೆ. ಎಂದರೂ ಸಹ ಗೋಸಂಗೋಪನೆ ಮನುಷ್ಯನ ಸ್ವಾರ್ಥಕ್ಕಾಗಿ ಮಾತ್ರ ಎಂಬುದನ್ನು ಮರೆಯಲೇಬಾರದು. “ಆಕಳನ್ನು ಸಾಕುವುದು ಅದರ ಸಂತತಿ ಅಭಿವೃದ್ಧಿಗಾಗಿ ಮತ್ತು ಅದರ ಹಾಲು ಅದರ ಕರುವಿಗಾಗಿ ಮಾತ್ರ” ಎಂದು ಆಕಳನ್ನು ಸಾಕುವವರು ಬಹಳ ವಿರಳ. ಆಕಳ ಹಾಲು ನಮಗಾಗಿ ಅಲ್ಲ.
ಅದರ ಮೇಲಿನ ನೈಸರ್ಗಿಕ ಹಕ್ಕು ಕರುವಿನದು ಮಾತ್ರ. ಯಾರೇನೇ ಹೇಳಿದರೂ ಸಹ ಕರುವಿನ ಹಾಲನ್ನು ನಾವು ಕಸಿದುಕೊಳ್ಳುತ್ತಿರುವುದು ಸತ್ಯ. ಇದನ್ನು ಪೂರ್ಣ ಪ್ರಮಾಣದಲ್ಲಿ ಕಸಿದುಕೊಂಡು ಅದಕ್ಕೆ ತಕ್ಕದಲ್ಲದ ಅಪೌಷ್ಟಿಕ ಹಿಂಡಿಯನ್ನು ಹಾಕಿದಾಗ ಆಗುವ ಅನಾಹುತವೇ ಈ ಗಡಿಗೆ ಹೊಟ್ಟೆ ಅಥವಾ ಜೋಲು ಹೊಟ್ಟೆ.
ಪುರಾತನ ಕಾಲದಲ್ಲಿ ಋಷಿ ಮುನಿಗಳು ಆಕಳನ್ನು ಸಾಕಿದಾಗ ಅದು ಮತ್ತು ಅದರ ಕರು ನೈಸರ್ಗಿಕವಾದ ಕಾಡಿನಲ್ಲಿ ಓಡಾಡಿಕೊಂಡಿದ್ದಾಗ ಅದರ ಕರು ಅದರ ಹಾಲನ್ನು ಹೊಟ್ಟೆ ತುಂಬಾ ಕುಡಿದು ಅದರ ಕಟವಾಯಿಯಿಂದ ಹಾಲು ಸಂತೃಪ್ತಿಯಿಂದ ಸುರಿದರೆ ಮಾತ್ರ ಉಳಿದ ಹಾಲನ್ನು ಕೆಚ್ಚಲಿನಿಂದ ಕರೆದುಕೊಳ್ಳುತ್ತಿದ್ದರು ಎಂಬುದನ್ನು ಹಳೆಯ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ ಎನ್ನುವುದು ಗಮನಿಸಬೇಕಾದ ವಿಷಯ.
ಗಂಡು ಕರುಗಳಿರಲಿ ಅಥವಾ ಹೆಣ್ಣು ಕರುಗಳಿರಲಿ, ಹುಟ್ಟಿದಾಗ ಒಂದು ತಿಂಗಳವರೆಗೂ ಮೈಕೈ ತುಂಬಿಕೊಂಡು ದಷ್ಟ ಪುಷ್ಟವಾಗಿರುವ ಕರುಗಳು ನಂತರ ಕ್ರಮೇಣವಾಗಿ ಗಡಿಗೆ ಹೊಟ್ಟೆ ಅಥವಾ ಜೋಲು ಹೊಟ್ಟೆ ಹೊತ್ತುಕೊಂಡು ಓಡಾಡುವ ಪರಿಸ್ಥಿತಿಯನ್ನು ತಲುಪುತ್ತವೆ. ಹಲವಾರು ಕೃಷಿಕರು ಇಂತಹ ಕರುಗಳಿಗೆ ಜಂತುನಾಶಕವನ್ನು ಮೇಲಿಂದ ಮೇಲೆ ನೀಡುವುದರಿಂದ ಗುಣಮುಖವಾಗುತ್ತವೆ ಎಂದು ಭಾವಿಸುತ್ತಾರೆ. ಅಥವಾ ಅದು ಕೂಡಲೇ ಬೆಳವಣಿಗೆ ಆಗಲು ಔಷಧಿಯನ್ನು ಬರೆದುಕೊಡಲು ಕೋರುತ್ತಾರೆ. ಇದು ಸರಿಯೇ? ಇದಕ್ಕೆ ಏನು ಕಾರಣ ಅಂತ ತಿಳಿಯೋಣ.
“ಇಂದಿನ ಮಗುವೇ ನಾಳಿನ ನಾಗರೀಕ” ಎನ್ನುವುದು ಗಾದೆ. ಇದನ್ನು ಜಾನುವಾರುಗಳಿಗೆ ಅನ್ವಯಿಸಿದರೆ ‘ಇಂದಿನ ಕರುವೇ ನಾಳಿನ ಹಸು’ ಎನ್ನಬಹುದು. ಸಾಮಾನ್ಯವಾಗಿ ಕರುಗಳಿಗೆ ಆಕಳಿನ ಹಾಲೇ ಸರ್ವಶ್ರೇಷ್ಠವಾದ ಅಹಾರ. ಹುಟ್ಟಿದ ದಿನದಿಂದಲೂ ಕನೀಷ್ಠ 3-4 ತಿಂಗಳುಗಳವರೆಗೆ ಕರುಗಳಿಗೆ ಅದರ ಶರೀರದ ತೂಕದ ಶೇ 10 ರಷ್ಟು ಹಾಲನ್ನು ನೀಡಬೇಕು. ಒಂದು ಮಿಶ್ರ ತಳಿಯ ಕರು ಹುಟ್ಟುವಾಗ ಸುಮಾರು 40 ಕೆಜಿ ತೂಕವನ್ನು ಹೊಂದಿದ್ದು ಅದಕ್ಕೆ 4 ಲೀಟರ್‌ನಷ್ಟು ಹಾಲನ್ನು ನೀಡಬೇಕು.
ಪ್ರತಿ ದಿನ ಕರು ಸುಮಾರು 100-500 ಗ್ರಾಂನಷ್ಟು ತೂಕದಲ್ಲಿ ವರ್ಧನೆಯನ್ನು ಹೊಂದುತ್ತದೆ. ಇದಕ್ಕೆ ತಕ್ಕಂತೆ ಹಾಲಿನ ಪ್ರಮಾಣವನ್ನು ಸಹ ಹೆಚ್ಚಿಸುವುದು ಸಹ ಬಹಳ ಮುಖ್ಯ. ಆದರೆ ಹಲವಾರು ಬಾರಿ ಹೆಚ್ಚಿನ ಹೈನುಗಾರರು ಕರುವಿಗೆ ನೀಡುವುದನ್ನು ಕಡಿಮೆ ಮಾಡಿ ಬಿಡುತ್ತಾರೆ. ಇಷ್ಟು ಹಾಲನ್ನು ನೀಡಿದರೆ ಕರುವಿಗೆ ಅಜೀರ್ಣವಾಗಿ ಬೇಧಿಯುಂಟಾಗುತ್ತದೆ ಎಂದು ಹೆದರುತ್ತಾರೆ. ಆದರೆ ಈ ರೀತಿಯ ಬೇದಿಯಾಗುವುದು ಕರುವಿಗೆ ವಿವಿಧ ಕಾರಣಗಳಿಂದ ಅಜೀರ್ಣವಾದಾಗ ಮತ್ತು ಸೂಕ್ಷ್ಮಾಣು ಜೀವಿಗಳಿಂದ ಮಲೀನವಾದ ಹಾಲನ್ನು ಕೊಟ್ಟಾಗ ಅದಕ್ಕೆ ಬಿಳಿ ಬೇದಿಯಾಗಬಹುದು.
ಅಲ್ಲದೇ ಹಾಲು ಉತ್ಪಾದಕರ ಸಂಘಕ್ಕೆ ಹಾಲನ್ನು ಮಾರಿ ಹೆಚ್ಚಿನ ಲಾಭ ಪಡೆಯುವ ಆಸೆಯೂ (ದುರಾಸೆ ??) ಸಹ ಒಂದು ಕಾರಣ. ಆದರೆ ಇದು ತಾತ್ಕಾಲಿಕ ಲಾಭ ಮಾತ್ರ. ದೂರಗಾಮಿ ದೃಷ್ಠಿಯಲ್ಲಿ ನೋಡಿದಾಗ ಕರುವಿಗೆ ಅದರ ತಾಯಿಯ ಹಾಲನ್ನು ನಿಗದಿತ ಪ್ರಮಾಣದಲ್ಲಿ ನಿಗದಿತ ದಿನಗಳವರೆಗೆ ನೀಡಿದರೆ ಮಾತ್ರ ಉತ್ತಮ ಮಣಕ ಅಥವಾ ಪಡ್ಡೆಯನ್ನು ಪಡೆಯಲು ಸಾಧ್ಯ.
ಕರುಗಳಿಗೆ ಜೋಲು ಹೊಟ್ಟೆ ಬರಲು ಮುಖ್ಯವಾದ ಕಾರಣ ಅದಕ್ಕೆ ಬೆಳವಣಿಗೆಯ ಹಂತದಲ್ಲಿ ಹಾಲನ್ನು ಮತ್ತು ಪೌಷ್ಠಿಕ ಅಹಾರವನ್ಮ್ನ ಸೂಕ್ತ ಪ್ರಮಾಣದಲ್ಲಿ ನೀಡದಿರುವುದು. ಮತ್ತೊಂದು ಕಾರಣವೆಂದರೆ ಎಳೆ ಕರುಗಳಿಗೆ ಜಾನುವಾರುಗಳಿಗೆ ನೀಡುವ ಕಡಿಮೆ ಪೌಷ್ಟಿಕಾಂಶಗಳನ್ನು ಹೊಂದಿದ ಪಶು ಅಹಾರವನ್ನು ನೀಡುವುದು. ಬಹಳಷ್ಟು ಕರುಗಳು ತುಂಬಾ ಆಸ್ಥೆಯಿಂದ ಅದರ ತಾಯಿಗೆ ನೀಡಿದ ಅಹಾರವನ್ನು ತಿನ್ನುತ್ತವೆ.
ಇದನ್ನು ಗಮನಿಸಿದ ರೈತರು ಅದಕ್ಕೆ ಹಾಲನ್ನು ಕಡಿಮೆ ಮಾಡಿ ಪಶು ಅಹಾರವನ್ನು ಏಕಾಏಕಿ ನೀಡಲು ಪ್ರಾರಂಭಿಸುತ್ತಾರೆ. ಇದೇ ಸಮಯದಲ್ಲಿ ಕರು ಹುಲ್ಲನ್ನು ತಿನ್ನಲು ಪ್ರಾರಂಭಿಸುತ್ತದೆ. ಈ ಹುಲ್ಲು ಮತ್ತು ಕಡಿಮೆ ಗುಣಮಟ್ಟದ ಅಹಾರವನ್ನು ಪಚನ ಮಾಡಲು ಅನುವಾಗುವಂತೆ ಕರುವಿನ ಹೊಟ್ಟೆ, ಕರುಳು ಮತ್ತು ಜೀರ್ಣಾಂಗದ ವಿವಿಧ ಭಾಗಗಳು ಜಾಸ್ತಿ ಬೆಳವಣಿಗೆ ಹೊಂದುತ್ತವೆ. ಅದರಲ್ಲೂ ದೊಡ್ಡ ಹೊಟ್ಟೆ ಬೇಗ “ಗುಡಾಣ” ದಂತೆ ಬೆಳೆಯುತ್ತದೆ. ಆದರೆ ಹಾಲಿನಿಂದ ಲಭ್ಯವಾಗುವ ಕ್ಯಾಲ್ಸಿಯಂ ಮತ್ತು ರಂಜಕ ಸೂಕ್ತ ಪ್ರಮಾಣದಲ್ಲಿ ಲಭ್ಯವಾಗದೇ ಅಸ್ಥಿವ್ಯೂಹದ ಸರಿಯಾದ ಬೆಳವಣಿಗೆಯಾಗುವುದಿಲ್ಲ.
ಎಲುಬುಗಳು ಅದರಲ್ಲೂ ಹಿಂಬಾಗದ ಎಲುಬುಗಳು ಉತ್ತಮ ಬೆಳವಣಿಗೆ ಹೊಂದದೇ ಇರುವುದರಿಂದ ಕರುವನ್ನು ಹಿಂಬಾಗದಿಂದ ಗಮನಿಸಿದಾಗ ಜೋಲು ಹೊಟ್ಟೆ ಗುಡಾಣದಂತೆ ಎದ್ದು ಕಾಣುತ್ತದೆ. ಇದನ್ನು ಹಳ್ಳಿಯ ಭಾಷೆಯಲ್ಲಿ ‘ಹೊಟ್ಟೆ ಡುಮ್ಮಣ್ಣ ; ಕೈಕಾಲು ಸಣ್ಣಣ್ಣ’ ಎಂದು ಕರೆಯುತ್ತಾರೆ. ಪೌಷ್ಟಿಕಾಂಶದ ತೀವ್ರವಾದ ಕೊರತೆಯಿಂದ ಉದ್ದುದ್ದ ಕೂದಲುಗಳು ಬೆಳೆದು, ತೀವ್ರವಾದ ರಕ್ತಹೀನತೆಯಾಗಿ, ಕರು ನಿಸ್ತೇಜಗೊಳ್ಳುತ್ತದೆ.
ನವಜಾತ ಕರುಗಳಲ್ಲಿ ಕರುಹಾಕಿದ ತಕ್ಷಣ ಅರ್ಧಗಂಟೆಯೊಳಗೆ ಗಿಣ್ಣದ ಹಾಲನ್ನು ನೀಡಲೇ ಬೇಕು. ಕರುಗಳಿಗೆ ದೇಹ ತೂಕಕ್ಕೆ ತಕ್ಕಂತೆ ಸುಮಾರು 3 ಲೀಟರ್ ಹಾಲನ್ನು ದಿನಕ್ಕೆ 2–3 ಬಾರಿ ವಿಭಾಗಿಸಿ ನೀಡಬೇಕು. ಗಿಣ್ಣದ ಹಾಲಿನಲ್ಲಿ ಅತ್ಯಧಿಕ ಪ್ರಮಾಣದ ಸಸಾರಜನಕ, ಖನಿಜಾಂಶ, ವಿಟಮಿನ್‌ಗಳು ಮತ್ತು ರೋಗನಿರೋಧಕ ಶಕ್ತಿ ಅಡಕವಾಗಿರುವುದರಿಂದ ಕರುವಿಗೆ ಇವುಗಳ ಕೊರತೆಯಾದರೆ ಬೆಳವಣಿಗೆ ಕುಂಠಿತವಾಗುತ್ತದೆ. ಮೂರು ತಿಂಗಳ ತನಕ ಕರುವಿಗೆ ತಾಯಿಯ ಹಾಲು ಅಗತ್ಯ. ಏಕಾಏಕಿ ಹಾಲು ನಿಲ್ಲಿಸಿ ಪಶು ಅಹಾರ ನೀಡುವುದು ಒಳ್ಳೆಯದಲ್ಲ.
ತಾಯಿಯ ಪಶು ಅಹಾರ ಕರುವಿಗೆ ಹಾಕುವುದು ಸಲ್ಲ. ಇದರಲ್ಲಿ ಪ್ರೊಟೀನ್ ಅಂಶ ಕಡಿಮೆ. ಕರುಗಳಿಗೆಂದೇ ಇರುವ ಪಶುಅಹಾರವನ್ನೇ ಬಳಸಿದರೆ ಈ ಸಮಸ್ಯೆ ಬರುವುದಿಲ್ಲ. ತಯಾರಕರ ನಿರ್ದೇಶನ ದಂತೆ ಮೊದಲಿಗೆ ದಿನಕ್ಕೆ 100 ಗ್ರಾಂ, 35 ದಿನದಿಂದ 2 ತಿಂಗಳವರೆಗೆ ಪ್ರತಿ ದಿನ 250 ಗ್ರಾಂ, 2 ರಿಂದ 3 ತಿಂಗಳವರೆಗೆ 500 ಗ್ರಾಂ ಕರುಗಳ ನೀಡಬೇಕು. ಕರುಗಳ ಹಿಂಡಿ ಸಿಗದಿದ್ದರೆ ಉತ್ತಮ ಗುಣಮಟ್ಟದ ನೆಲಗಡಲೆ ಹಿಂಡಿಯನ್ನು ಮೇಲೆ ಹೇಳಿದ ಅರ್ಧದಷ್ಟನ್ನಾದರೂ ಕೊಟ್ಟರೆ ಉತ್ತಮ. ಕರುವಿನ ದೇಹ ತೂಕದ ಆಧಾರದ ಮೇಲೆ ಆರು ತಿಂಗಳಿನಿಂದ ಒಂದು ವರ್ಷದವರೆಗೆ ಪ್ರತಿದಿನ ಒಂದು ಕಿ.ಗ್ರಾಂ ಹಾಗೂ ಒಂದು ವರ್ಷದಿಂದ ಬೆದೆಗೆ ಬರುವ ತನಕ ಎರಡು ಕಿ.ಗ್ರಾಂ ಪಶು ಆಹಾರ ನೀಡಬೇಕು. ಉತ್ತಮ ಖನಿಜ ಮಿಶ್ರಣವನ್ನು ಸೂಕ್ತ ಪ್ರಮಾಣದಲ್ಲಿ ನೀಡುವುದೂ ಸಹ ಅಗತ್ಯ
ಹಾಗಿದ್ದರೆ ಕರುವಿನ ಆಹಾರವನ್ನು ಹೇಗೆ ತಯಾರಿಸಬೇಕು ? ಎನ್ನುವುದು ನಿಮ್ಮ ಪ್ರಶ್ನೆಯಲ್ಲವೇ? ನಿಜ. ಕರುಗಳಿಗೆ ಪ್ರತ್ಯೇಕವಾದ ಆಹಾರ ಬೇಕು. ಇದಕ್ಕೆ ಕಾಫ್ ಸ್ಟಾರ್ಟರ್ ಮತ್ತು ಕಾಫ್ ಫಿನಿಶರ್ ಎಂದು ಕರೆಯುತ್ತಾರೆ. ಮೂರು ತಿಂಗಳವರೆಗೂ ಹಾಲನ್ನೇ ನೀಡಿ ನಂತರ ಕರುವಿಗಾಗಿಯೇ ತಯಾರಿಸಿದ ವಿಶೇಷ ಆಹಾರ ತಯಾರಿಸಬಹುದು ಅಥವಾ ಮಾರುಕಟ್ಟೆಯಲ್ಲಿ ಸಿದ್ಧ ರೂಪದಲ್ಲಿ ಲಭ್ಯವಿರುವ ಕರುವಿನ ಆಹಾರವನ್ನು ನೀಡಬಹುದು. ಕರುವಿನ ಸಮತೋಲ ಆಹಾರವನ್ನು ಈ ಕೆಳಗಿನ ವಸ್ತುಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಬಹುದು;
- ಆಹಾರದ ಅಂಶ ಪ್ರಮಾಣ (ಕೆಜಿ)
- ಮುಸುಕಿನ ಜೋಳದ ಪುಡಿ 40
- ಕಡಲೆ ಕಾಯಿ ಹಿಂಡಿ 40
- ರವೆ ಬೂಸಾ 10
- ಹಾಲಿನ ಪುಡಿ 7
- ಖನಿಜಾಂಶ ಮಿಶ್ರಣ 2
- ಉಪ್ಪು 1
- ಜೀವಸತ್ವ(ಎ.ಡಿ.ಈ.) 50 ಗ್ರಾಂ
- ಜೀವನಿರೋಧಕಗಳು (ಅವಶ್ಯಕತೆಗೆ ತಕ್ಕಷ್ಟು) 30 ಗ್ರಾಂ
ಹಾಗಿದ್ದರೆ ಈ ಹಿಂಡಿಯನ್ನು ಹೇಗೆ ನೀಡಬೇಕು ಅನ್ನುವುದು ಒಂದು ಪ್ರಶ್ನೆ. ಇದನ್ನು ಬೆಳೆಯುವ ಕರುಗಳು ದಿನಕ್ಕೆ ಸರಾಸರಿ 250-500ಗ್ರಾಂ ನಷ್ಟು ತೂಕ ಜಾಸ್ತಿ ಹೊಂದುವುದರಿಂದ ಶರೀರ ತೂಕದ ಶೇ: 5%ರಷ್ಟು ಅಂದರೆ ಮೂರನೇ ತಿಂಗಳಿಗೆ ಕರು 50 ಕಿಲೋ ತೂಗುತ್ತಿದ್ದರೆ ದಿನಕ್ಕೆ 2.5 ಕಿಲೋವನ್ನು ಬೆಳಿಗ್ಗೆ1.25 ಕಿಲೋ ಮತ್ತು ಸಾಯಂಕಾಲ 1.25 ಕಿಲೋ ರಷ್ಟು ಹಾಕಬೇಕು. ಪ್ರತಿ ದಿನವೂ ಸಹ ಇದನ್ನು 26-50ಗ್ರಾಮಿನಷ್ಟು 3-12 ತಿಂಗಳ ವರೆಗೆ ಹೆಚ್ಚಿಸುತ್ತಾ ಹೋಗಬೇಕು.
ಕರು ಪ್ರೌಢಾವಸ್ತೆಗೆ ಬಂದ ನಂತರ ಸಾಕಷ್ಟು ಉತ್ತಮ ಗುಣಮಟ್ಟದ ರಾಗಿ ಹುಲ್ಲು, ಜೋಳದ ಸಿಪ್ಪೆ ಇತ್ಯಾದಿಗಳ ಜೊತೆ ಪ್ರತಿ ದಿನ 3 ಕೆಜಿ ಹಿಂಡಿಯನ್ನು ನೀಡಲೇಬೇಕು. ಅಂದರೆ ಮಾತ್ರ ಕರು ಉತ್ತಮ ಮಣಕವಾಗಿ ಬೆಳೆದು ನಿಗದಿತ ಸಮಯದಲ್ಲಿ ಬೆದೆಗೆ ಬಂದು ಗರ್ಭಧರಿಸಿ ಕರು ಹಾಕುತ್ತದೆ.
ಇದಕ್ಕೆಲ್ಲಾ ಸಿಕ್ಕಾಪಟ್ಟೆ ಖರ್ಚು ಬರುತ್ತದಲ್ಲಾ ಎಂದು ಗೊಣಗಬೇಡಿ. ಏಕೆಂದರೆ ಇಂದಿನ ಕರುವೇ ನಾಳಿನ ಹಸು. ತೆಂಗಿನ ಸಸಿಗೆ ಹೇಗೆ ಉತ್ತಮ ಗೊಬ್ಬರ, ಮಣ್ಣು, ನೀರು ನೀಡಿದಲ್ಲಿ ಹೇಗೆ ದೊಡ್ಡ ದೊಡ್ಡ ರುಚಿಯಾದ ಎಳೆನೀರನ್ನು ನೆಟ್ಟ ಎರಡು ವರ್ಷಗಳಿಗೆ ನೀಡುತ್ತದೆಯೋ ಹಾಗೆಯೇ ಇದೂ ಸಹ.
ಗೋಮಾತೆಗೆ ಏನೇ ಖರ್ಚು ಮಾಡಿದರೂ ಅದರ ದುಪ್ಪಟ್ಟು ವಾಪಸ್ಸು ಬಂದೇ ಬರುತ್ತದೆ. ಉತ್ತಮ, ನಳನಳಿಸುವ ಹಸುವನ್ನು ಸಿದ್ಧ ಗೊಳಿಸಲು ರೂ: 50 ಸಾವಿರ ಖರ್ಚಾದರೂ ಸಹ ಅದರ ಮಾರಾಟ ಬೆಲೆ 75-80 ಸಾವಿರ ಆಗಿಯೇ ಆಗುತ್ತದೆ. ಕಾರಣ ದನ-ಕರುಗಳಿಗೆ ಹಿಂಡಿ, ಹುಲ್ಲು ಹಾಕುವಲ್ಲಿ ಖಂಡಿತಾ ಜಿಪುಣತನ ಬೇಡ. ಗೋಮಾತೆಗೆ ಬೇಕಾಗಿರುವುದು ಹೊಟ್ಟೆ ತುಂಬಾ ಹುಲ್ಲು, ಹಾಲು ನೀಡಲು ಹಿಂಡಿ ಅಷ್ಟೆ. ಇಷ್ಟು ಒದಗಿಸಿ ಗೋಮಾತೆಯ ಕೃಪೆ ಹಾಗೂ ವರಕ್ಕೆ ಪಾತ್ರರಾಗಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ
ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


