Connect with us

ದಿನದ ಸುದ್ದಿ

ಭೀಮೋದ್ಯಮಿಗಳ ಯಶೋಗಾಥೆ : ಚಿನ್ನ-ಬೆಳ್ಳಿ ಪ್ರಮೋದ್ ಎಂಬ ದಲಿತ ಯುವಕನ ಸಕ್ಸೆಸ್ ಸ್ಟೋರಿ

Published

on

  • ನಾಗರಾಜ್ ಹೆತ್ತೂರ್

ದುಕಿಗಾಗಿ ಚಿನ್ನ ಗಿರವಿ ಇಟ್ಟವ ಮುಂದೊಂದು ದಿನ ಚಿನ್ನದಂಗಡಿಯ ಮಾಲೀಕನಾದ. ಕೇವಲ 95 ಸಾವಿರದಿಂದ 70 ಕೋಟಿ ವ್ಯವಹಾರ ನಡೆಸುವ ಪ್ರಮೋದ್ ಅವರು,

  • ಅಂಬೇಡ್ಕರ್ ಇಲ್ಲದಿದ್ದರೆ ನಾನಿಲ್ಲ….! ಈ ಯಶಸ್ಸಿಗೆ ಅವರೇ ಕಾರಣ
  • ಕೇವಲ 95 ಸಾವಿರದ ಮೂಲ ಬಂಡವಾಳ ಈಗ ವಾರ್ಷಿಕ 70 ಕೋಟಿ ವ್ಯವಹಾರ
  • ದಲಿತರು ಜ್ಯೂಯಲರಿ ಶಾಪ್ ಮಾಡುತ್ತಾರಾ ಎಂದು ನಕ್ಕು ಅವಮಾನಿಸಿದ್ದರು

ಅದು 1995 ರ ಇಸವಿ. ಡಿಗ್ರಿ ಓದುತ್ತಿದ್ದ ಆ ಯುವಕನ ತಲೆಯಲ್ಲಿ ಏನಾದರೂ ಬ್ಯುಸಿನೆಸ್ ಮಾಡಬೇಕೆಂಬ ಹಂಬಲ. ಮದ್ಯಾಹ್ನ ಕಾಲೇಜು ಮುಗಿಯುತ್ತಿತ್ತು. ಆ ಸಮಯದಲ್ಲಿ ಏನು ಮಾಡು ವುದು? ತಲೆಯಲ್ಲಿ ನೂರೆಂಟು ಯೋಚನೆ. ಕಾಲೇಜು ನಡುವೆ ಪಾರ್ಟ್ ಟೈಂ ಗೆ ಸೇರಿಕೊಂಡಿದ್ದು ಜ್ಯೂಯಲರಿ ಶಾಪ್ ಒಂದಕ್ಕೆ ಕೆಲಸಗಾರನಾಗಿ. ಕಣ್ಣೆದುರಿಗೆ ಇದ್ದ ಚಿನ್ನವನ್ನು ನೋಡಿದಾಗ ಇದು ನಮ್ಮಂತಹವರಿಗಲ್ಲ ಅಂದುಕೊಂಡಿದ್ದೆ ಹೆಚ್ಚು. ಇಷ್ಟಕ್ಕೂ ದಲಿತರು ಚಿನ್ನ ಬೆಳ್ಳಿ ಕ್ಷೇತ್ರದಲ್ಲಿ ಕಾಲಿರಿಸಿ ಉಳಿದುಕೊಳ್ಳುವುದುಂಟೆ? ಚಿನ್ನ, ಬೆಳ್ಳಿ ಉದ್ಯಮ ಎಂದರೆ ಅದು ಮಾರ್ವಾಡಿ, ಸೇಠುಗಳ ಉದ್ಯಮ. ಆ ಉದ್ಯಮದಲ್ಲಿ ದಲಿತರು ಕಾಲುಡಲು ಸಾಧ್ಯವೇ ..? ಹಾಗೆ ಸುಮ್ಮನೆ ನೆನಪಿಸಿಕೊಳ್ಳಲೂ ಅಸಾಧ್ಯದ ಮಾತು.

ವಾಸ್ತವದಲ್ಲಿ ಯಾವ ದಲಿತ ಕುಟುಂಬದಿಂದ ಬಂದವನೂ ಕಲ್ಪಿಸಿಕೊಂಡಿರುವುದೂ ಇಲ್ಲ. ಆದರೆ ಆ ಯುವಕ ಯಾರೂ ತುಳಿಯದ ಹಾದಿಯಲ್ಲಿ ಹೋಗಲು ಬಯಸಿದ್ದ. ಅಲ್ಲಿ 2 ವರ್ಷ ಕೆಲಸ ಮಾಡಿದ್ದಾಯಿತು. ಅನುಭವ ಪಡೆದಿದ್ದೂ ಆಯಿತು. ಅಷ್ಟರಲ್ಲಿ ಡಿಗ್ರಿ ಮುಗಿದಿತ್ತು. ನಾನೇಕೆ ಚಿನ್ನಬೆಳ್ಳಿ ಕ್ಷೇತ್ರಕ್ಕೆ ಕಾಲಿಡಬಾರದು…,? ನಾನೂ ಒಂದು ಜ್ಯೂಯಲರಿ ಅಂಗಡಿ ತೆರಯಬಾರದೇಕೆ? ಅದೊಂದು ದಿನ ಈ ಯೋಚನೆ ತಲೆಗೆ ಹೊಳೆದಿತ್ತು. ಅದೊಂದು ದಿನ ಆ ಕೆಲಸಕ್ಕೆ ಕೈ ಹಾಕಿದ ಆ ಹುಡುಗ ಮತ್ತೆ ಹಿಂದೆ ನೋಡಲೇ ಇಲ್ಲ.

ಸ್ನೇಹಿತರೊಬ್ಬರು ಗಿರವಿ ಇಟ್ಟು ಕೊಟ್ಟ ಐವತ್ತು ಸಾವಿರ ರೂಪಾಯಿ ಮತ್ತು ಬ್ಯಾಂಕ್‍ನಿಂದ ಕೊಟ್ಟ ತೊಂಬತ್ತೈದು ಸಾವಿರ ರೂಪಾಯಿಯಲ್ಲಿ ಆರಂಭಿಸಿದ ಚಿನ್ನ ಬೆಳ್ಳಿ ವಹಿವಾಟು ಇಂದು ವರ್ಷಕ್ಕೆ ಐವತ್ತು ಕೋಟಿ ವಹಿವಾಟು ನಡೆಸುತ್ತಿದೆ. ಜಾತಿ- ಧರ್ಮಗಳನ್ನು ಮೀರಿ ಆ ಯುವಕ ಒಬ್ಬ ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ. ನಂಬಿಕೆ ಮತ್ತು ಕೆಲಸದ ಮೇಲೆ ಶ್ರದ್ಧೆ ಇದ್ದರೆ ದಲಿತರು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು ಎಂದು ತೋರಿಸಿದ್ದಾರೆ ಹಾಸನದ ಆಕಾಶ್ ಜ್ಯೂಯಲರ್ಸ್ ಮಾಲೀಕ ಬಿ.ಎನ್ ಪ್ರಮೋದ್. ಅವರು ಬೆಳೆದ ಪರಿಯನ್ನು ಅವರ ಬಾಯಿಂದಲೇ ಕೇಳೋಣ:

ಕೈಯ್ಯಲ್ಲಿ ಬಿಡಿಗಾಸಿಲ್ಲದೇ ಆರಂಭಿಸಿದ ಆಕಾಶ್ ಜ್ಯೂಯಲರ್ಸ್

ಪಾರ್ಟ್ ಟೈಂ ನಲ್ಲಿ ನಾನು ಕೆಲಸ ಮಾಡ ಬೇಕೆಂದು ಓಡಾಡುತ್ತಿದ್ದಾಗ ಇಲ್ಲೊಬ್ಬರು ರಾಜಾಸ್ತಾನದವರಿದ್ದರು. ಅಂಗಡಿ ಹೆಸರು ಮನೋಜ ಬ್ಯಾಂಕರ್ಸ್ನ ಮಾಲೀಕ ಶಾಂತಿ ಲಾಲ್ ಗುಲ್ ಗುಲಿಯಾ ಅವರ ಹತ್ತಿರ ಸೇರಿಕೊಂಡೆ. ಡಿಗ್ರಿಗೆ ಹೋಗುತ್ತಲೇ ಫ್ರೀ ಟೈಂ ನಲ್ಲಿ ಅಂಗಡಿಯಲ್ಲಿ ಪಾರ್ಟ್ ಟೈಂ ಕೆಲಸವನ್ನು 2 ವರ್ಷ ಮಾಡಿದೆ. ಒಳ್ಳೆ ಅನುಭವ ಸಿಕ್ಕಿತು. ನಾವೇ ಏಕೆ ಮಾಡಬಾರದು ಎಂದು ಮನಸ್ಸಾಯಿತು. ಪಾರ್ಟ್‍ನರ್ ಯಾರೂ ಇರಲಿಲ್ಲ, ಮನೆಯಲ್ಲಿ ಬಡತನ. ಕೈಯ್ಯಲ್ಲಿ ಹಣವಿಲ್ಲ. ಆದರೂ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡೆ. ಆಗ ನನ್ನೊಂದಿಗೆ ಇದ್ದದ್ದು ಆತ್ಮವಿಶ್ವಾಸ ಮಾತ್ರ.

ದುಡ್ಡಿಗೆ ಏನು ಮಾಡುವುದು ಎಂದು ಯೋಚಿಸಿದಾಗ ನನ್ನ ಕೈ ಹಿಡಿದವರು ದೂಪ ಪೇಪರ್ ಏಜೆನ್ಸಿ ನಡೆಸುತ್ತಿದ್ದ ದೊರೆಸ್ವಾಮಿ. ಜೀವನದಲ್ಲಿ ಅವರನ್ನು ಮರೆಯುವಂತೆಯೇ ಇಲ್ಲ. `ಸಾರ್ ಅಂಗಡಿ ಮಾಡುತ್ತಿದ್ದೇನೆ’ ಅವರು ಮರು ಮಾತ ನಾಡಲಿಲ್ಲ. ಯಾಕೆಂದರೆ ನನ್ನ ಮೇಲೆ ಅವರಿಗೆ ನಂಬಿಕೆ ಇತ್ತು. ಅವರ ಮನೆಯಲ್ಲಿದ್ದ ಚಿನ್ನ ಅಡವಿಟ್ಟು 50 ಸಾವಿರ ತಂದುಕೊಟ್ಟರು.

ಆ ಕಾಲಕ್ಕೆ ಅದು ದೊಡ್ಡ ಮೊತ್ತ. ಅದನ್ನು ತೆಗೆದುಕೊಂಡು ಹೋಗಿ ಅಡ್ವಾನ್ಸ್ ಕೊಟ್ಟೆ. ಇನ್ನೊಬ್ಬರಿಗೆ ಗಿರವಿ ಇಟ್ಟು ತಂದ ಹಣದಲ್ಲಿ ಒಂದು ಸಣ್ಣ ಟೇಬಲ್- ಕುರ್ಚಿ ಹಾಕಿಕೊಂಡು ಕಳಿತೆವು. ಆಗ ಶುರುವಾಗಿದ್ದು ಆಕಾಶ್‍ ಜ್ಯೂಯಲರ್ಸ್. ನನ್ನ ಈ ಉದ್ಯಮದ ಹಿಂದೆ ಬೆನ್ನೆಲುಬಾಗಿ ನಿಂತವರು ಶಾಂತಿ ಲಾಲ್ ಗುಲ್ ಗುಲಿಯಾ. ಅವರನ್ನೂ ಎಂದೂ ಮರೆಯುವಂತಿಲ್ಲ.

ದಲಿತರು ಜ್ಯೂಯಲರಿ ಶಾಪ್ ಮಾಡುತ್ತಾರಾ ಎಂದು ನಕ್ಕು ಅವಮಾನಿಸಿದ್ದರು

ಅಂಗಡಿ ತೆರೆದಿದ್ದಾಯಿತು, ಮೂಲ ಬಂಡವಾಳ ಬೇಕಲ್ಲವೇ..? ನಂತರ ಪಿಎಂಆರ್ ವೈ ಪ್ರಧಾನಮಂತ್ರಿ ಜವಹಾರ್‍ಲಾಲ್ ಯೋಜನೆಗೆ ಅರ್ಜಿ ಹಾಕಿದೆ. ಆಗಲೂ ಒಂದು ಕತೆ. ನಮ್ಮವರು (ದಲಿತರು) ಡಿಫಾಲ್ಟರ್ ಆಗಿದ್ದರು, ನೀವು ಸರಿಯಾಗಿ ಹಣ ಕಟ್ಟುವುದಿಲ್ಲ ನಿಮಗೆ ಕೊಡುವುದಿಲ್ಲ ಎಂದರು.

ಮೊದಲನೆಯದಾಗಿ ನಾನು ಸೆಲೆಕ್ಟೆ ಆಗಲಿಲ್ಲ. ಕಾರಣ, ಜ್ಯುಯಲರಿ ಶಾಪ್ ಮಾಡುವುದು ಅದು ದಲಿತರು…? ನನ್ನ ಮಾತು ಕೇಳಿ ಅಲ್ಲಿನ ಆಯ್ಕೆ ಸಮಿತಿ ಅಧಿಕಾರಿಗಳು ನಕ್ಕು ಅವಮಾನ ಮಾಡಿ ಕಳುಹಿದ್ದರು. ಅದೊಂದು ಅಪರಾಧ` ಎಂಬಂತೆ ನನ್ನ ನೋಡಿದ್ದರು. `ಅದು ನಿಮ್ಮಂತಹವರಿಗಲ್ಲ ಹೋಗಯ್ಯ’ ಎಂದು ಕುಹಕವಾಡಿದ್ದರು. ಇನ್ನೂ ಹೇಳುವುದಾದರೆ ಸರಕಾರದಿಂದ ಇಂತಹ ಸ್ಕೀಂ ಗೆ ಸಾಲವೇ ಇರಲಿಲ್ಲ.

ದಿ.ಚಂದ್ರ ಪ್ರಸಾದ್ ತ್ಯಾಗಿ ಹೇಳಿ ಸಾಲ ಕೊಡಿಸಿದರು

ಆಗ ನನಗೆ ನೆನಪಾಗಿದ್ದು ದಿ. ಚಂದ್ರಪ್ರಸಾದ್ ತ್ಯಾಗಿ. ಅಗವರು ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರಾಗಿದ್ದರು. ಅವರ ಮನೆಗೆ ಹೋಗಿ ವಿಚಾರ ಹೇಳಿದೆ. ಆಗವರು ಡಿಐಸಿ ಅಧಿಕಾರಿಗಳಿಗೆ ಕರೆ ಮಾಡಿ ಚಿನ್ನ ಬೆಳ್ಳಿ ಅಂಗಡಿ ತೆರೆಯಲು ಯಾರಾದರೂ ದಲಿತರು ಅರ್ಜಿ ಹಾಕಿದ್ದಾರೆನ್ರಿ ಎಂದು ವಿಚಾರಿಸಿದರು.

ಅವರ ಮಾತಿಗೆ ಒಪ್ಪಿದ ಅಧಿಕಾರಿಗಳು ಒಲ್ಲದ ಮನಸ್ಸಿನಿಂದಲೇ ಸೆಲೆಕ್ಷನ್ ಮಾಡಿಸಿದರು. ಅಲ್ಲಿ ಸೆಲೆಕ್ಟ್ ಆದೆ. ಆದರೆ ಬ್ಯಾಂಕಿನಲ್ಲಿ ಮತ್ತೆ ರಿಜೆಕ್ಟ್ . ವಿಜಯ ಬ್ಯಾಂಕಿನ ಮೆನೆಜರ್ `ನಿಮ್ಮವರು ಕಟ್ಟುವುದಿಲ್ಲ ಹೋಗ್ರಿ ‘ಎಂದುಬಿಟ್ಟರು. ನಾನು ಅವರೆದುರು ನಿಂತು ನೇರವಾಗಿಯೇ ಹೇಳಿದೆ ಸಾರ್ ಕೊಡಿ, ನನಗೆ ಬೇರೆಯವರ ಕತೆ ಗೊತ್ತಿಲ್ಲ. ನಾನು ಕಟ್ಟುತ್ತೇನೆ ಎಂದೆ.

ಕೇವಲ 95 ಸಾವಿರದ ಮೂಲ ಬಂಡವಾಳ

ಅದೇನೋ ನನ್ನ ಅದೃಷ್ಟ. ಏಳೂವರೆ ಸಾವಿರ ಸಬ್ಸಿಡಿ ಸೇರಿ 95 ಸಾವಿರದ ಚೆಕ್ ಕೊಟ್ಟರು ಅದೇ ನನ್ನ ಮೂಲ ಬಂಡವಾಳ. ಇದನ್ನು ತೀರಿಸಲು 7 ವರ್ಷ ಬೇಕು. ಆದರೆ ಶೃದ್ಧೆಯಿಂದ ಕೆಲಸ ಮಾಡಿದೆ. ಯಶಸ್ಸು ಸಿಕ್ಕಿತು. 3 ವರ್ಷಕ್ಕೆ ಸಾಲ ತೀರಿಸಿದೆ. ನನಗೆ ಸಾಲ ಕೊಟ್ಟ ಮ್ಯಾನೇಜರ್ ಬೆಂಗಳೂರಿನಲ್ಲಿ ಚೀಪ್ ಮ್ಯಾನೆಜರ್ ಆಗಿದ್ದರು.

ಹೋಗಿ ಅವರಿಗೆ ಕೊಟ್ಟೆ. ಅವರು ಅಚ್ಚರಿಯಿಂದ ಕೂರಿಸಿಕೊಂಡು ಮಾತನಾಡಿಸಿದರು. ಅವರಿಗೆ ಹೇಳಿದೆ `ನಮ್ಮಂತಹವರು ಬಂದರೆ ಕೊಡಿ’ ಕೆಲವರು ಹಾನೆಸ್ಟ್ ಆಗಿರುತ್ತಾರೆ ಎಂದೆ. ಆ ಮೆನೆಜರ್ ಈಗ ನಿವೃತ್ತಿ ಆಗಿದ್ದಾರೆ. ಆದರೆ ಇವತ್ತಿಗೂ ನಮ್ಮ ಕಸ್ಟಮರ್. ಈಗಲೂ ಬರುತ್ತಾರೆ ಈಗವರು ಮಂಗಳೂರಿನಲಿದ್ದಾರೆ. ಅತಿ ಕಡಿಮೆ ಹಣ ಹಾಕಿ ಈ ಎತ್ತರಕ್ಕೆ ಬೆಳೆದೆ. ಇದು ಬೆಳೆದು ಬಂದ ಹಾದಿ ಇದು ಎನ್ನುತ್ತಾರೆ ಪ್ರಮೋದ್.

ಪೆಟ್ರೋಲ್ ಬಂಕ್ ಮಾಲೀಕರಾಗಿಯೂ ಯಶಸ್ವಿ

ಒಂದು ಚಿಕ್ಕ ಅಂಗಡಿ ಮಾಡಿದ್ದು. 13 ವರ್ಷ ಕೆಲಸ ಮಾಡಿದೆ. ಇಂದು ದೊಡ್ಡ ಶೋರೂಂ ಮಾಡಿದ್ದೇನೆ. ಮಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಮಾಡಿದ್ದೇನೆ. ಅದರಲ್ಲೂ ಯಶಸ್ವಿಯಾದೆ. 25 ರಿಂದ 30 ಮಂದಿಗೆ ಕೆಲಸ ಕೊಟ್ಟಿದ್ದೇನೆ. ತಿಂಗಳಿಗೆ ಲಕ್ಷಾಂತರ ರುಪಾಯಿ ಸಂಬಳ ನೀಡುತ್ತೇನೆ. ವಾರ್ಷಿಕವಾಗಿ ಏನಿಲ್ಲವೆಂದರೂ 80 ಕೋಟಿ ವಹಿವಾಟು ನಡೆಯುತ್ತಿದೆ ಎನ್ನುತ್ತಾರೆ.

ಚಿನ್ನ ಬೆಳ್ಳಿ ವರ್ತಕರ ಸಂಘದ ಕಾರ್ಯದರ್ಶಿಯಾಗಿ

ಚಿನ್ನ -ಬೆಳ್ಳಿ ವರ್ತಕರ ಸಂಘದ ಕಾರ್ಯದರ್ಶಿಯೂ ಆಗಿರುವ ಅವರು, ಅಸೋಸಿಯೇಷನ್ ಆರಂಭದಿಂದಲೇ ಇದ್ದವರು. ವರ್ತಕರೊಂದಿಗೆ ತಮ್ಮ ಒಡನಾಟದ ಬಗ್ಗೆ ಹೇಳುವುದಿಷ್ಟು `ನಾವು ಎಲ್ಲರೊಂದಿಗೆ ಚೆನ್ನಾಗಿರಬೇಕು, ಮೇಲಾಗಿ ಇತರೆ ವರ್ಗದವರೊಂದಿಗೆ ಬೆಳೆಯಬೇಕು. ಇದಕ್ಕಾಗಿ ಬ್ರಾಡ್ ಮೈಂಡ್ ಬೆಳೆಸಿಕೊಳ್ಳಬೇಕು. ಇತರೆ ವರ್ಗದವರ ಜೊತೆ ಬಿದ್ದಾಗ ಹೆಚ್ಚು ಕಲಿತುಕೊಳ್ಳಬಹುದು.

ಇಲ್ಲಿ ನಂಬಿಕೆಯೇ ಮುಖ್ಯ. ದಲಿತ ಎನ್ನುವುದಕ್ಕಿಂತಲೂ ಒಳ್ಳೆಯ ಉದ್ದಿಮೆದಾರರಾಗ ಬೇಕು.ಸತ್ಯ ಹೇಳಬೇಕೆಂದರೆ ದಲಿತರೊಂದಿಗೆ ಇದ್ದು ಬೆಳೆಯಲು ಕಷ್ಟ. ಆದರೆ ಇತರೆ ಜನಾಂಗದವರೊಂದಿಗೆ ಬೆಳೆಯಬೇಕು. ಇಲ್ಲದಿದ್ದರೆ ಎಲ್ಲಿರುತ್ತೇವೆಯೋ ಅಲ್ಲೇ. ನಾವು ಅವರಿಂದ ಕಲಿತುಕೊಳ್ಳಬೇಕು. ಯಾಕೆ ಅವರು ಬೇಗ ಮುಂದುವರೆಯುತ್ತಾರೆ ಅವೆಲ್ಲವನ್ನೂ ನೋಡ ಬೇಕು.

ಜನ ಈಗ ನನ್ನನ್ನು ಉದ್ಯಮಿಯಾಗಿ ನೋಡುತ್ತಾರೆ

ಈಗ ನನ್ನ ಕಸ್ಟಮರ್ಸ್ ಮತ್ತು ಹೊರಜಗತ್ತು ನನ್ನನ್ನು ದಲಿತ ಎನ್ನುವುದಕ್ಕಿಂತಲೂ ಒಳ್ಳೆಯ ಉದ್ದಿಮೆದಾರನಾಗಿ ನನ್ನನ್ನು ನೋಡುತ್ತಾರೆ. ಇತ್ತೀಚೆಗಷ್ಟೆ ರಾಜ್ಯ ಜ್ಯೂಯಲರಿ ಅಸೋಸಿಯಷನ್. ಇಡೀ ರಾಜ್ಯದಲ್ಲಿ ಈ ಉದ್ಯಮದಲ್ಲಿರುವ ದಲಿತರ ಪೈಕಿ ನಾನು ಮತ್ತು ಬೆಂಗಳೂರಿನಲ್ಲಿರುವ ಒಬ್ಬರು.

ಯಾವುದನ್ನು ನಾವು ಜೀವನದ ಪ್ರಮುಖ ವಸ್ತು, ಕೈಗೆಟಗದ ವಸ್ತು ಎಂದು ಕೊಂಡಿದ್ದೇವೋ ಅದೇ ಚಿನ್ನವನ್ನು ಇಂದು ಮಾರಾಟ ಮಾಡುತ್ತೇವೆ, ಇಂಪೋರ್ಟ್ ಮಾಡಿಕೊಳ್ಳುತ್ತೇವೆ. ನಮ್ಮದು ಚಿನ್ನದೊಂದಿಗೆ ಬದುಕು ಎನ್ನುವಂತಾಗಿದೆ. ಇದೇ ಚಿನ್ನವನ್ನು ಅಡ ಇಟ್ಟು ಅಂಗಡಿ ಕಟ್ಟಿದ್ದು ಎಂದರೆ ಒಂದು ಕ್ಷಣ ನಂಬಲು ಆಗುವುದಿಲ್ಲ.

ಬಡ ಕುಟುಂಬದಲ್ಲಿ ಹುಟ್ಟಿ ಕೋಟಿಗಟ್ಟಲೆ ವ್ಯವಹಾರ

ನಾನು ಹುಟ್ಟಿದ್ದು ಹಾಸನ ತಾಲ್ಲೂಕು ದೊಡ್ಡಬಾಗನಹಳ್ಳಿಯಲ್ಲಿ. ತಂದೆ ನಿಂಗಯ್ಯ, ತಾಯಿ ಜಯಮ್ಮ, ಡಿಗ್ರಿ ಮುಗಿದ ಸಂದರ್ಭ ನನ್ನ ತಂದೆ ತೀರಿಕೊಂಡರು. ಶಿಕ್ಷಣ ಇಲಾಖೆಯಲ್ಲಿ 4 ನೇ ದರ್ಜೆ ನೌಕರರಾಗಿದ್ದರು. ತೀರಿಕೊಂಡ ನಂತರ ತಂದೆಯ ಕೆಲಸ ನನಗೆ ಬಂತು, ತಿರಸ್ಕರಿಸಿದೆ. ನನಗೆ ಬಿಸಿನೆಸ್ ಮಾಡುವ ಹಂಬಲ. ಅಂದು ಮನೆಯವರೆಲ್ಲ ತುಂಬಾ ಒತ್ತಾಯ ಮಾಡಿದ್ದರು ಅವತ್ತು ಸರಕಾರಿ ಕೆಲಸಕ್ಕೆ ಹೋಗಿದ್ದರೆ ಈ ಮಟ್ಟಕ್ಕೆ ಬೆಳೆಯಲು ಆಗುತ್ತಿರಲಿಲ್ಲ.

ನಾವು 4 ಜನ ಇಬ್ಬರು ಗಂಡು ಇಬ್ಬರು ಹೆಣ್ಣು. ನಾನೇ ಕೊನೆ ಯವನು ಸಹೋದರ ಜಯರಾಂ ಶಿಕ್ಷಣ ಇಲಾಖೆ ಯಲ್ಲಿ ಪ್ರಥಮ ದರ್ಜೆ ನೌಕರಾಗಿದ್ದಾರೆ. ನನ್ನ ಈ ಯಶಸ್ಸಿನ ಹಿಂದೆ ಸಹೋದರ ಜಯರಾಂ ಅವರ ಪಾತ್ರ ಬಹುಮುಖ್ಯವಾಗಿದೆ. ಹಾಗೇ ಅತ್ನಿ ಎಂಸಿಇ ಕಾಲೇಜಿನ ಪ್ರೊಫೆಸರ್ ಅತ್ನಿ ಕೃಷ್ಣ, ಹಾಗೂ ಅತ್ನಿ ಮಹದೇವ್ ಹಾಗೂ ಸ್ನೇಹಿತರ ಮಾರ್ಗದರ್ಶನ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ ಪ್ರಮೋದ್.

ಬದುಕುವ ಛಲ ಇದ್ದರೆ ನಾವೂ ಈ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು

ಈ ಕ್ಷೇತ್ರದಲ್ಲಿ ಬರಲು ಐಡಿಯಾಸ್‍ಬೇಕು ಕೋಟ್ಯಾಂತರ ಹಣ ಬೇಡ . ಸ್ವಲ್ಪವೇ ಇದ್ದರೂ ಸಾಕು. ಈ ಕ್ಷೇತ್ರದಲ್ಲೂ ಜಯಿಸಬಹುದು ಹಾಗೆ ಆಸಕ್ತಿ ಇರುವ ಯುವಕರು ಬಂದರೆ ನಾನು ದಾರಿ ಹೇಳುತ್ತೇನೆ. ಅಂದ ಹಾಗೆ ಜ್ಯೂಯಲಿರಿ ಶಾಪ್ ಮಾಡಲೆಂದು ಸರಕಾರದಿಂದ ಯಾವ ಸ್ಕೀಮ್ ಕೂಡ ಇಲ್ಲ. ನಾನು ಇಲ್ಲಿಗೆ ಬರಲು ಸಹಾಯ ಮಾಡಿ ದವರೆಲ್ಲ ಇತರೆ ವರ್ಗದವರು, ಶೆಟ್ಟರು, ಗೌಡರು ಅವರೇ ಈ ಫೀಲ್ಡಿಗೆ ಕರೆತಂದವರು .

ಬಹುಶಃ ನಾನೇ ನಾದರೂ ನಮ್ಮ ಜಾತಿಯವರ ಜೊತೆ ಹೋಗಿದ್ದರೆ ಅವರನ್ನು ಎದುರಿಸುವುದು ಕಷ್ಟವಾಗುತ್ತಿತ್ತು ಎಂದು ಪ್ರಾಮಾಣಿಕವಾಗಿ ಹೇಳುತ್ತಾರೆ. ಚಿನ್ನ ಬೆಳ್ಳಿ ವರ್ತಕರೆಂದರೆ ಅದು ಸೇಟು, ಮಾರ್ವಾಡಿಗಳದ್ದು ಎಂಬಂತಿರುವ ಕ್ಷೇತ್ರದಲ್ಲಿ ದಲಿತ ಯುವಕನೊಬ್ಬ ಈ ಪರಿ ಬೆಳೆದು ನಿಂತಿದ್ದು ಯಶೋ ಗಾಥೆಯೇ ಸರಿ. ಉದ್ಯಮ ವಲಯಕ್ಕೆ ಹೊರಡುವರಿಗೆ ಪ್ರಮೋದ್ ಮತ್ತು ಅವರು ಕಟ್ಟಿ ಬೆಳೆಸಿದ ಆಕಾಶ ಜ್ಯೂಯಲರ್ಸ್ ಮಾದರಿಯಾಗಿದೆ ಎಂದರೆ ತಪ್ಪಿಲ್ಲ.

ಪ್ರಾಮಾಣಿಕತೆ ಮತ್ತು ತಾಳ್ಮೆ ಇದ್ದರೆ ಸಕ್ಸಸ್

ನಮ್ಮ ದಲಿತ ಯುವಕರು ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ ಅದರೂ ಭಯ. ಇಲ್ಲಿ ಉಳಿದುಕೊಳ್ಳಬೇಕು ಎಂದರೆಪ್ರಾಮಾಣಿಕತೆ, ನಂಬಿಕೆ, ಆತ್ಮವಿಶ್ವಾಸ ಮತ್ತು ಶ್ರಮ ಹಾಗಿದ್ದರೆ ಮಾತ್ರ ಉದ್ಯಮ ಕ್ಷೇತ್ರದಲ್ಲಿ ಮುಂದೆ ಬರಬಹುದು. ಅದರಲ್ಲೂ ಕಾಯುವ ತಾಳ್ಮೆ ಬೇಕು. ಇನ್ನೂ ಕೆಲವರು ಭಯದಿಂದ ಬರುತ್ತಿಲ್ಲ. ಬಜೆಟ್ ಗೆ ತಕ್ಕಂತೆ ವ್ಯವಹಾರ ಮಾಡಿ ಇತಿಮಿತಿ ಸಮಸ್ಯೆಗಳು ಬರುತ್ತವೆ. ವ್ಯಾಪಾರ ಒಂದು ಕಲೆ, ಹಾಗೆಯೇ ತಾಳ್ಮೆ ಬೇಕು ನನ್ನ ಈ ಸಕ್ಸೆಸ್ ಪ್ರಯಣದಲ್ಲಿ ಈಗ ನನ್ನ ಪತ್ನಿ ನ್ಯಾ ಕೈ ಜೋಡಿಸಿದ್ದಾರೆ.

ಬಿಇ ಕಂಪ್ಯೂಟರ್ ಸೈನ್ಸ್ ಮಾಡಿರುವ ಇವರು ನನ್ನ ಜ್ಯೂವೆಲರಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ವಿನೀಸ್ ಎನ್ ಪ್ರಮೋದ್ ಎಂಬ ಮಗಳಿದ್ದಾಳೆ.ಜ್ಯೂವೆಲ್ಲರಿಯನ್ನು ಇನ್ನೂ ಎತ್ತರಕ್ಕೆ ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಹಾಗೆ ನೊಂದವರಿಗೆ, ನಿರ್ಗತಿಕರಿಗೆ ಕೈಲಾದ ಸಹಾಯ ಮಾಡುತ್ತೇವೆ.

ಬಹುಮುಖ್ಯವಾಗಿ ಉದ್ಯಮ ಕ್ಷೇತ್ರಕ್ಕೆ ಬರುವರಿಗೆ ಸದಾ ಪ್ರೋತ್ಸಾಹಿಸಲು, ಯಾವುದೇ ಸಲಹೆ ಸಹಕಾರ ಕೊಡಲು ನಾನು ಸಿದ್ದನಿದ್ದೇನೆ. ಯಾರೂ ಬೇಕಾದರೂ ನನ್ನನ್ನು ಸಂಪರ್ಕಿಸಬಹುದು. ಆದರೆ ಹಣವನ್ನೇ ಮಾಡಬೇಕೆಂದು ಬರಬೇಡಿ ಎನ್ನುತ್ತಾರೆ ಪ್ರಮೋದ್.

ರಾಷ್ಟ್ರಪತಿ ಕೆ.ಆರ್. ನಾರಾಯಣ್ ನನ್ನ ಬಗ್ಗೆ ಕೇಳಿ ಬೆನ್ನುತಟ್ಟಿದ್ದರು

ಅಬ್ದುಲ್ ಕಲಾಂ ಹೇಳಿದಂತೆ, ಯಾವಾಗಲೂ ನಾವು ದೊಡ್ಡ ದೊಡ್ಡ ಕನಸುಗಳನ್ನೇ ಕಾಣಬೇಕು. ನಾನು ರಾಷ್ಟ್ರಪತಿಯನ್ನು ನೋಡುತ್ತೇನೆಂದು ಅಂದುಕೊಂಡವನೂ ಅಲ್ಲ. ಆದರೆ ಕೆ.ಆರ್. ನಾರಾಯಣ್ ಅವರನ್ನು ನೋಡಿ ಕೈ ಕುಲುಕು ಮಾತನಾಡಿದ್ದರು. ಅದು ನನ್ನ ಸ್ಮರಣೀಯವಾದ ಘಟನೆ. ಹಾಗೆ ಮಂತ್ರಿಗಳಾದ ಜಾರ್ಜ್ ಫರ್ನಾಂಡಿಸ್, ಬಂಗಾರು ಲಕ್ಮಣ್ ಹಾಗೂ ದೇಶದ ನಮ್ಮ ಸಮುದಾಯದ ಎಲ್ಲಾ ಎಂಪಿಗಳನ್ನು ಒಮ್ಮೆ ಭೇಟಿ ಮಾಡಿದ್ದು ಜೀವನದ ಬಹುಮುಖ್ಯ ಘಟನೆಗಳು ಒಬ್ಬ ಉದ್ಯಮಿಯಾಗಿ ಇದೆಲ್ಲ ಸಾಧ್ಯವಾಯಿತು. ರಾಷ್ಟ್ರಪತಿ ಭವನದಲ್ಲಿ ಅವರನ್ನು ಮುಟ್ಟಿ ಮಾತನಾಡಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಹಾಗೂ ಅದ್ಭುತ ಕ್ಷಣಗಳು .
ಬಾಬಾಸಾಹೇಬರಿಲ್ಲದಿದ್ದರೆ ನಾನಿಲ್ಲ….! ಈ ಯಶಸ್ಸಿಗೆ ಅವರೇ ಕಾರಣ.

ಹೌದು…! ನನ್ನ ಎಲ್ಲಾ ಬೆಳವಣಿಗೆ, ಸಾಧನೆಯ ಯಶಸ್ಸಿನ ಹಿಂದಿನ ಆದರ್ಶ ಬಾಬಾಸಾಹೇಬ್ ಅಂಬೇಡ್ಕರ್. ಅವರೇ ನನ್ನ ದೇವರು. ಅವರು ಕೊಟ್ಟ ಭಿಕ್ಷೆಯಿಂದ ನಾವು ಈ ಮಟ್ಟಕ್ಕೆ ಬಂದಿದ್ದೇವೆ. ಅವರಿಲ್ಲದಿದ್ದರೆ ನಾನು ಈ ಕ್ಷೇತ್ರಕ್ಕೆ ಬರಲು ಸಾಧ್ಯವೇ ಇರುತ್ತಿರಲಿಲ್ಲ. ನನ್ನ ಮೊದಲ ಸ್ಪೂರ್ತಿ. ಅವರಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ನಾನೊಬ್ಬ ಅಂಬೇಡ್ಕರ್ ಅನುಯಾಯಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

(ಪ್ರಮೋದ್ , ಆಕಾಶ್ ಜ್ಯೂಯಲರ್ಸ್ ಮಾಲೀಕರು, ಹಾಸನ ಮೊ- 9448330416)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗ್ರಾಮ ಪಂಚಾಯತಿಗಳಲ್ಲಿ ಪಕ್ಷ ರಾಜಕೀಯ ಬೇಡ : ಸಚಿವ ಕೆ.ಎಸ್. ಈಶ್ವರಪ್ಪ

Published

on

ಸುದ್ದಿದಿನ,ದಾವಣಗೆರೆ :ಕೋವಿಡ್ ಸಂಕಷ್ಟ ಕಾಲದಲ್ಲಿ ನಗರಗಳಿಂದ ಗ್ರಾಮಗಳಿಗೆ ಮರಳಿದ ಅನೇಕ ಯುವಕರಿಗೆ ಗ್ರಾಮೀಣ ಉದ್ಯೋಗಖಾತ್ರಿ ನರೇಗಾ ಯೋಜನೆ ಸ್ಥಳೀಯವಾಗಿ ಕೆಲಸ ನೀಡುವ ಮೂಲಕ ಆರ್ಥಿಕ ನೆರವು ನೀಡುವುದರ ಜೊತೆಗೆ ಸ್ವಾಭಿಮಾನದ ಬದುಕನ್ನೂ ಸಹ ಕಲಿಸಿಕೊಟ್ಟಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.

75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಹಾಗೂ ಜಿಲ್ಲಾ ಪಂಚಾಯತಿ ಇವರುಗಳ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅಭಿವೃದ್ಧಿ ವಿಷಯಗಳ ಕುರಿತು ನಗರದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ ಒಂದು ದಿನದ ಕಾರ್ಯಗಾರದ ಸಮಾರೋಪ ಭಾಷಣ ಮಾಡಿದರು.

ಕೋವಿಡ್ ಲಾಕ್‍ಡೌನ್ ಪರಿಣಾಮವಾಗಿ ನಗರಗಳಲ್ಲಿ ಉದ್ಯೋಗ ಕಂಡುಕೊಂಡಿದ್ದ ಅನೇಕ ಇಂಜಿನಿಯರ್‍ಗಳು, ಪದವೀಧರರು ಗ್ರಾಮಗಳಿಗೆ ಮರಳಿದ್ದು, ಇಂತಹ ಅನೇಕರು ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿರುವ ನಿದರ್ಶನ ನಮ್ಮ ಮುಂದೆ ಇದೆ. ಕಳೆದ ವರ್ಷ ನರೇಗಾದಡಿ ರಾಜ್ಯಕ್ಕೆ 13 ಕೋಟಿ ಮಾನವದಿನಗಳ ಸೃಜನೆಯ ಗುರಿ ನೀಡಲಾಗಿತ್ತು. ಆದರೆ ಕಳೆದ ಡಿಸೆಂಬರ್ ನಲ್ಲಿಯೇ ಗುರಿ ಮೀರಿ ಸಾಧನೆ ಮಾಡಲಾಯಿತು.

ಹೀಗಾಗಿ ಕೇಂದ್ರ ಸರ್ಕಾರ ಕೂಡ ರಾಜ್ಯಕ್ಕೆ ಶಹಬ್ಬಾಸ್‍ಗಿರಿ ನೀಡಿ, ಇನ್ನೂ 2 ಕೋಟಿ ಹೆಚ್ಚುವರಿ ಮಾನವದಿನಗಳ ಸೃಜನೆಗೆ ಅವಕಾಶ ನೀಡಿ, 800 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿತ್ತು. ಹೀಗಾಗಿ ನರೇಗಾ ಯೋಜನೆ ಗ್ರಾಮೀಣರಿಗೆ ಆರ್ಥಿಕ ಸಬಲತೆ ನೀಡುವುದರ ಜೊತೆಗೆ ಸ್ವಾಭಿಮಾನದ ಬದುಕನ್ನೂ ನೀಡಿದೆ. ಈ ಯೋಜನೆಯಡಿ ಶಾಲಾ ಕಾಂಪೌಂಡ್, ತೋಟಗಾರಿಕೆ ವಿಸ್ತರಣೆ, ಕೃಷಿ ಜಮೀನುಗಳಲ್ಲಿ ಕೆಲಸ, ಕೆರೆ, ಕಲ್ಯಾಣಿ, ಮುಂತಾದ ಜಲರಕ್ಷಣೆ ಪ್ರದೇಶಗಳ ಹೂಳೆತ್ತಿ ಅಭಿವೃದ್ಧಿಪಡಿಸುವುದೂ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಅವಕಾಶಕೊಟ್ಟಿದೆ.

ಗ್ರಾಮ ಪಂಚಾಯತಿಗಳ ನೇತೃತ್ವ ವಹಿಸಿರುವ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಸರ್ಕಾರದ ಯೋಜನೆಗಳ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕು. ಗ್ರಾಮಗಳಲ್ಲಿ ಯಾವುದೇ ಕುಟುಂಬ ಶೌಚಾಲಯ ರಹಿತವಾಗಿರಬಾರದು. ಯಾರೂ ಕೂಡ ರಸ್ತೆಗಳ ಬದಿಯಲ್ಲಿ ಶೌಚಕ್ಕೆ ಹೋಗುವ ಪರಿಸ್ಥಿತಿ ಇರಬಾರದು. ಪ್ರತಿಯೊಂದು ಗ್ರಾ.ಪಂ. ಗಳಲ್ಲಿ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಘಟಕ ಆಗಬೇಕು.

ಸ್ವಸಹಾಯ ಸಂಘದ ಒಕ್ಕೂಟದವರಿಗೆ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ನೀಡಲು ಈಗಾಗಲೆ ಸೂಚನೆ ನೀಡಲಾಗಿದೆ. ಜಿಲ್ಲೆಯ 195 ಗ್ರಾ.ಪಂ. ಗಳ ಪೈಕಿ ಕೇವಲ 13 ಗ್ರಾ.ಪಂ. ಗಳಲ್ಲಿ ಮಾತ್ರ ಘನತ್ಯಾಜ್ಯ ವಿಲೇವಾರಿ ಘಟಕಗಳು ಆಗಿದ್ದು, ಒಂದು ವರ್ಷದ ಒಳಗಾಗಿ ಜಿಲ್ಲೆಯ ಎಲ್ಲ ಗ್ರಾ.ಪಂ. ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭವಾಗಬೇಕು ಎಂದು ಸಚಿವರು ಹೇಳಿದರು.

ಮುಂದಿನ 05 ವರ್ಷಗಳ ಅವಧಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಕೈಗೊಳ್ಳಬೇಕಿರುವ ಕಾರ್ಯಗಳ ಬಗ್ಗೆ ಗುರಿ ನಿಗದಿಪಡಿಸಿಕೊಂಡು, ಪ್ರತಿ ವರ್ಷ ಅದನ್ನು ಸಾಧಿಸುವ ಮೂಲಕ ಮಾದರಿ ಗ್ರಾಮಗಳನ್ನು ನಿರ್ಮಿಸಬೇಕು. ಜನರ ಏಳಿಗೆಗೆ ಶ್ರಮಪಟ್ಟ ಬಗ್ಗೆ ಆತ್ಮತೃಪ್ತಿಯಾಗುವಂತೆ ಕೆಲಸ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು. ಜಲ ಜೀವನ್ ಮಿಷನ್ ಯೋಜನೆ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗ್ರಾಮಗಳ ಮನೆ ಮನೆಗೆ ನಳ ಸಂಪರ್ಕದ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒಗಳಿಗೆ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಮಟ್ಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಯೋಜಿಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಸದ್ಯಸರಿಗೆ ತರಬೇತಿಯನ್ನು ತಾಲ್ಲೂಕು ಮಟ್ಟದಲ್ಲಿ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ಗ್ರಾ.ಪಂ. ಗಳಿಗೆ ಕೆರೆಗಳ ಉಸ್ತುವಾರಿ

ಈ ಮೊದಲು ಗ್ರಾಮಗಳ ವ್ಯಾಪ್ತಿಯಲ್ಲಿನ ಕೆರೆಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತಿದ್ದವು. ಇದೀಗ ಕೆರೆಗಳ ಸಂಪೂರ್ಣ ನಿರ್ವಹಣೆಯ ಹೊಣೆಯನ್ನು ಆಯಾ ಗ್ರಾಮ ಪಂಚಾಯತ್‍ಗಳಿಗೆ ನೀಡಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ಗ್ರಾಮೀಣ ಕೆರೆಗಳ ಅಭಿವೃದ್ಧಿಯನ್ನು ಆಯಾ ಗ್ರಾ.ಪಂ. ಗಳೇ ನಿರ್ವಹಿಸಬೇಕು. ಕೆರೆಗಳ ಒತ್ತುವಾರಿ ಇದ್ದಲ್ಲಿ, ಡಿಸಿ ಮತ್ತು ಸಿಇಒ ಗಳ ಗಮನಕ್ಕೆ ತಂದು, ನಿಯಮಾನುಸಾರವಾಗಿ ಒತ್ತುವರಿ ತೆರವುಗೊಳಿಸುವುದು ಸೇರಿದಂತೆ ಕೆರೆಗಳ ಸಮಗ್ರ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಗ್ರಾಮ ಪಂಚಾಯತ್‍ಗಳು ಸಹಕಾರ ನೀಡಬೇಕು ಎಂದು ಸಚಿವರು ಹೇಳಿದರು.

ಗ್ರಾಪಂ ಗಳಲ್ಲಿ ಪಕ್ಷ ರಾಜಕೀಯ ಬೇಡ

ಗ್ರಾಮ ಪಂಚಾಯತ್ ಚುನಾವಣೆಯನ್ನು ಪಕ್ಷ ರಹಿತವಾಗಿ ನಡೆಸುತ್ತೇವೆ. ಹೀಗಾಗಿ ಕೈಮುಗಿದು ಬೇಡಿಕೊಳ್ಳುತ್ತೇನೆ ಗ್ರಾಮ ಪಂಚಾಯತ್ ಮಟ್ಟದ ಚುನಾಯಿತ ಸದಸ್ಯರುಗಳು ಯಾವುದೇ ಕಾರಣಕ್ಕೂ ಪಕ್ಷ ರಾಜಕೀಯ ಮಾಡಬೇಡಿ, ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಬೇಕು. ರಾಜಕೀಯ ಏನಿದ್ದರೂ ಲೋಕಸಭೆ, ವಿಧಾನಸಭೆ ಚುನಾವಣೆಗೆ ಮಾತ್ರ ಇರಲಿ. ಎಲ್ಲ ಗ್ರಾಮ ಪಂಚಾಯತ್ ಕಚೇರಿಗಳಿಗೂ ಸೋಲಾರ್ ಲೈಟಿಂಗ್ ವ್ಯವಸ್ಥೆ ಕಲ್ಪಿಸಲು ಆದೇಶ ಹೊರಡಿಸಲಾಗಿದ್ದು, ಜಿಲ್ಲೆಯಲ್ಲಿ ಕೇವಲ 25 ಗ್ರಾ.ಪಂ. ಗಳಿಗೆ ಮಾತ್ರ ಅಳವಡಿಸಲಾಗಿದೆ. ಮುಂದಿನ 6 ತಿಂಗಳ ಒಳಗಾಗಿ ಎಲ್ಲ ಗ್ರಾಮ ಪಂಚಾಯತಿ ಕಚೇರಿಗಳಿಗೂ ಸೋಲಾರ್ ಲೈಟಿಂಗ್ ಅಳವಡಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮಗಳ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗುರಿಗಳನ್ನು ಹೊಂದಿರಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಆದ್ಯತೆ, ಜಾಬ್‍ಕಾರ್ಡ್ ವಿತರಣೆ, ಪಿಂಚಣಿ ಸೌಲಭ್ಯ, ಎಬಿಎಆರ್‍ಕೆ ಆರೋಗ್ಯ ಕಾರ್ಡ್, ಲೈಬ್ರರಿ ಮತ್ತು ಓದುವ ಬೆಳಕು ಕಾರ್ಯಕ್ರಮ, ಡಿಜಿಟಲ್ ಲೈಬ್ರರಿ, ಘನತ್ಯಾಜ್ಯ ವಿಲೇವಾರಿ ಸಂಸ್ಕರಣೆ, ಸೋಲಾರ್ ಪ್ರಾಜೆಕ್ಟ್ ಈ ಗುರಿಗಳನ್ನು ಅಭಿವೃದ್ಧಿ ಪಡಿಸಲು ಆದ್ಯತೆ ನೀಡುವಂತೆ ಸಲಹೆ ನೀಡಿದರು. ಅಲ್ಲದೆ ಎಲ್ಲ ಗ್ರಾಮಗಳಲ್ಲೂ ಕೋವಿಡ್‍ನ ಮೂರನೆ ಅಲೆ ನಿಯಂತ್ರಣಕ್ಕೆ ಆದ್ಯತೆ ನೀಡುವಂತೆ ಸೂಚನೆ ನೀಡಿದರು.

ಸಮಾರಂಭದಲ್ಲಿ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಅಬ್ದುಲ್ ನಜೀರ್‍ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆಯ ಗಾಯತ್ರಿ, ಪರಿಸರವಾದಿ ಶಿವಾನಂದ ಕಳವೆ, ಜಯರಾಂ, ಜಿ.ಪಂ ಸಿಇಒ ಡಾ. ವಿಜಯಮಹಾಂತೇಶ್ ದಾನಮ್ಮನವರ್ ಉಪಸ್ಥಿತರಿದ್ದರು.

ನರೇಗಾ ಯೋಜನೆ ಅನುಷ್ಠಾನದಲ್ಲಿ 2019-20 ಹಾಗೂ 2020-21 ನೇ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ವಿವಿಧ ಅಧಿಕಾರಿಗಳು ಹಾಗೂ ಪಿಡಿಒ ಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಂಚಾಯತ್‍ರಾಜ್ ಯೋಜನೆಗಳ ಕುರಿತು ಕಾರ್ಯಾಗಾರ ಗ್ರಾಮ ಪಂಚಾಯತಿಗಳು ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಿ : ಡಿಸಿ ಮಹಾಂತೇಶ್ ಬೀಳಗಿ

Published

on

ಸುದ್ದಿದಿನ,ದಾವಣಗೆರೆ : ದೇಶದ ಹೃದಯ ಗ್ರಾಮಗಳಲ್ಲಿದೆ. ಗ್ರಾಮಗಳು ಬೆಳೆದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ, ಹೊಸ ಹೊಸ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿಸುವ ಮಹತ್ವದ ಜವಾಬ್ದಾರಿ ಗ್ರಾಮ ಪಂಚಾಯತಿಗಳ ಮೇಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಹಾಗೂ ಜಿಲ್ಲಾ ಪಂಚಾಯತಿ ಇವರುಗಳ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅಭಿವೃದ್ಧಿ ವಿಷಯಗಳ ಕುರಿತು ನಗರದ ಹದಡಿ ರಸ್ತೆಯಲ್ಲಿನ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತಾಡಿದರು.

ಕೋವಿಡ್ ಸಂಕಷ್ಟದ ನಡುವೆಯೇ ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿಸಿದ್ದು ಸವಾಲಿನ ವಿಷಯವಾಗಿತ್ತು. ಇವೆಲ್ಲವನ್ನೂ ಮೀರಿ ಯಶಸ್ವಿಯಾಗಿ ಚುನಾವಣೆ ನಡೆಸಿ ಅನುಷ್ಠಾನಗೊಳಿಸಿದ್ದೇವೆ. ಈ ಬಾರಿ ಸ್ನಾತಕೋತ್ತರ ಪದವಿ, ಸಾಫ್ಟ್‍ವೇರ್ ಇಂಜಿನಿಯರ್‍ಗಳು ಕೂಡ ಗ್ರಾಮ ಪಂಚಾಯತಿ ಸದಸ್ಯರು, ಅಧ್ಯಕ್ಷರುಗಳಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಅಂತಹವರು ತಮ್ಮ ಪ್ರತಿಭೆ, ಸಾಮಥ್ರ್ಯ ವಿನಿಯೋಗಿಸಿ, ಹೊಸ ಹೊಸ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮಾದರಿ ಗ್ರಾಮಗಳನ್ನು ನಿರ್ಮಿಸಲು, ಸ್ವಾವಲಂಬಿ ಗ್ರಾಮಗಳ ನಿರ್ಮಾಣಕ್ಕೆ ಒಳ್ಳೆಯ ಸದಾವಕಾಶವಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ವಿದ್ಯುತ್ ಪೂರೈಕೆ, ಗ್ರಾಮಗಳ ಸ್ವಚ್ಛತೆಯ ಸಂಪೂರ್ಣ ಜವಾಬ್ದಾರಿ ಗ್ರಾಮ ಪಂಚಾಯತಿಗಳ ಮೇಲಿದೆ. ಹೀಗಾಗಿಯೇ ಕೇಂದ್ರ ಸರ್ಕಾರದಿಂದ ವಿವಿಧ ಅಭಿವೃದ್ಧಿ ಯೋಜನೆಗಳ ಅನುದಾನ ನೇರವಾಗಿ ಗ್ರಾಮ ಪಂಚಾಯತಿಗಳಿಗೆ ಬಂದು ಸೇರುತ್ತದೆ. ಗ್ರಾಮ ಪಂಚಾಯತಿ ಚುನಾವಣೆ ಪಕ್ಷ ರಹಿತ ಚುನಾವಣೆಯಾಗಿದ್ದು, ಗ್ರಾ.ಪಂ. ಪ್ರತಿನಿಧಿಗಳು ರಾಜಕೀಯ ಮಾಡುವುದನ್ನು ಬಿಟ್ಟು, ಗ್ರಾಮಗಳ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಗ್ರಾಮ ಪಂಚಾಯತಿಗಳಲ್ಲಿ ಅಧ್ಯಕ್ಷರಾಗಿರುವ ಮಹಿಳೆಯರ ಗಂಡಂದಿರು ತಾವೇ ಗ್ರಾ.ಪಂ. ಅಧ್ಯಕ್ಷರೆಂದು ಹೇಳಿಕೊಂಡು ಓಡಾಡುತ್ತಾರೆ. ಖುದ್ದು ತಾವೇ ಇದನ್ನು ಕಂಡಿದ್ದೇನೆ. ಹೀಗಾಗಿ ಮಹಿಳಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ತಮ್ಮ ಅಧಿಕಾರವನ್ನು ತಾವೇ ಚಲಾಯಿಸಬೇಕು. ಒಂದು ವೇಳೆ ಯಾವುದೇ ಮಾಹಿತಿ ತಿಳಿಯದಿದ್ದರೆ ಪಿಡಿಒ ಗಳಿಗೆಅಥವಾ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು.

ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಕೆಲಸಗಳಿಗೆ ಕೈ ಹಾಕಬೇಡಿ, ಒಂದು ವೇಳೆ ಒತ್ತಡ ಬಂದಲ್ಲಿ, ಉನ್ನತ ಅಧಿಕಾರಿಗಳಿಂದ ಮಾರ್ಗದರ್ಶನ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯತಿಗಳು ಸ್ವಾವಲಂಬಿಗಳಾಗಲು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಕಳೆದ ವರ್ಷ ಉತ್ತಮವಾಗಿ ತೆರಿಗೆ ಸಂಗ್ರಹವಾಗಿದ್ದು, ಈ ಬಾರಿಯೂ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕರೆ ನೀಡಿದರು.

ಕಾರ್ಯಾಗಾರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಅವರು, ನೂತನವಾಗಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ, ಕೋವಿಡ್ 02ನೇ ಅಲೆಯ ಸಂಕಷ್ಟ ಎದುರಾಗಿತ್ತು. ಕೋವಿಡ್ ನಿಯಂತ್ರಣಕ್ಕೆ ರಚಿಸಲಾದ ಗ್ರಾ.ಪಂ. ಕಾರ್ಯಪಡೆಯ ಮುಖ್ಯಸ್ಥರಾಗಿ ಅಧ್ಯಕ್ಷರು, ಸೋಂಕು ದೃಢಪಟ್ಟವರಿಗೆ ಆಸ್ಪತ್ರೆ ಅಥವಾ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸುವುದು ಸೇರಿದಂತೆ ಕೋವಿಡ್ ಸರಪಳಿಯನ್ನು ತುಂಡರಿಸಲು ಕೈಗೊಂಡ ಕಾರ್ಯ ನಿಜಕ್ಕೂ ಶ್ಲಾಘನೀಯ.

ಗ್ರಾಮ ಪಂಚಾಯತಿಗಳ ಅಭಿವೃದ್ಧಿಯ ದೃಷ್ಟಿಯಲ್ಲಿ ಗ್ರಾಮ ಸಭೆಗಳು ಅತ್ಯಂತ ಮಹತ್ವದ್ದ ವೇದಿಕೆಯಾಗಿದೆ. ಅಂಗನವಾಡಿ, ಶಾಲೆ, ಪಶುಪಾಲನೆ ವ್ಯವಸ್ಥೆ, ನ್ಯಾಯಬೆಲೆ ಅಂಗಡಿ, ಸಾಕ್ಷರತಾ ಕಾರ್ಯಕ್ರಮಗಳು, ಉದ್ಯೋಗಖಾತ್ರಿ ಯೋಜನೆಗಳ ಪರಿವೀಕ್ಷಣೆಯ ಸಂಪೂರ್ಣ ಹೊಣೆ ಗ್ರಾಮ ಪಂಚಾಯಿತಿಗಳಿಗಿದೆ. ಈ ವರ್ಷ ಕೋವಿಡ್ ಕಾರಣದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಸ್ಥಳೀಯವಾಗಿಯೇ ಉದ್ಯೋಗ ದೊರಕಿಸಲು ‘ದುಡಿಯೋಣು ಬಾರಾ’ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರಕಿದೆ.

ಈ ವರ್ಷ ನರೇಗಾ ಯೋಜನೆಯಡಿ 39 ಲಕ್ಷ ಮಾನವದಿನಗಳನ್ನು ಸೃಜಿಸುವ ಗುರಿ ಇದ್ದು, ಈವರೆಗೆ 12 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗಾಗಿ 195 ಗ್ರಾ.ಪಂ. ಗಳ ಪೈಕಿ 13 ಗ್ರಾಮಗಳಲ್ಲಿ ಘಟಕಗಳು ಕಾರ್ಯಾರಂಭಿಸಿವೆ. 100 ಗ್ರಾ.ಪಂ. ಗಳಲ್ಲಿ ಇನ್ನೂ ಕಾಮಗಾರಿ ನಡೆದಿದ್ದು, ಉಳಿದ ಗ್ರಾಮ ಪಂಚಾಯತಿಗಳಲ್ಲಿ ಇನ್ನೂ ಸ್ಥಳ ಅಂತಿಮಗೊಳಿಸುವ ಕಾರ್ಯ ಆಗಿಲ್ಲ, ಹೀಗಾಗಿ ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ದ್ರವ ತ್ಯಾಜ್ಯವನ್ನೂ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ವ್ಯವಸ್ಥೆಗೊಳಿಸಲಾಗುತ್ತಿದೆ ಎಂದರು.

ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳ ಜನರಿಗೆ ಕೈಗೆಟಕುವ ದರದಲ್ಲಿ ಶುದ್ಧ ಕುಡಿಯುವ ನೀರನ್ನು ಮನೆ ಮನೆಗೆ ತಲುಪಿಸಲು 356 ಗ್ರಾಮಗಳಿಗೆ ಯೋಜನೆ ಜಾರಿಗೊಳಿಸಿದ್ದು, ಈವರೆಗೆ 08 ಕಾಮಗಾರಿಗಳು ಪೂರ್ಣಗೊಂಡಿದ್ದು, 213 ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಯೋಜನೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರ ಬಗ್ಗೆ ಕೆಲವು ಗ್ರಾ.ಪಂ. ಸದಸ್ಯರುಗಳೇ ವಿನಾಕಾರಣ ಗೊಂದಲ ಹಾಗೂ ಸಮಸ್ಯೆ ಸೃಷ್ಟಿಸುತ್ತಿರುವುದು ಸಮಂಜಸವಲ್ಲ.

ಯೋಜನೆ ಅನುಷ್ಠಾನ ಬಳಿಕ ಗ್ರಾಮ ಪಂಚಾಯತಿಗಳ ನೀರು ಮತ್ತು ನೈರ್ಮಲ್ಯ ಸಮಿತಿಗೇ ನಿರ್ವಹಣೆಯ ಹೊಣೆಯನ್ನು ವಹಿಸಲಾಗುವುದು ಎಂದರು. ವಿವಿಧ ವಸತಿ ಯೋಜನೆಗಳಡಿ ಕಳೆದ 2011 ರಿಂದಲೂ ಇನ್ನೂ ಮನೆಗಳ ನಿರ್ಮಾಣ ನಡೆಯುತ್ತಲೇ ಇದೆ. ದಶಕಗಳೇ ಕಳೆದರೂ ಸಣ್ಣ ಮನೆಗಳನ್ನೂ ಕೂಡ ಪೂರ್ಣಗೊಳಿಸಲಾಗುತ್ತಿಲ್ಲ. ಅನರ್ಹರು ಮತ್ತು ಆಸಕ್ತಿ ಇಲ್ಲದಂತಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಗ್ರಾಮ ಪಂಚಾಯತಿಗಳೇ ಇದಕ್ಕೆ ಹೊಣೆ ಎಂದು ಬೇಸರ ವ್ಯಕ್ತಪಡಿಸಿದ ಸಿಇಒ ಅವರು, ಇನ್ನಾದರೂ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ರಾಜ್ಯ ಕುಡಿಯುವ ನೀರು ಮತ್ತು ನೈರ್ಮಲ್ಯ ಆಯುಕ್ತಾಲಯದ ನಿರ್ದೇಶಕ ಪರಮೇಶ್ವರ ಹೆಗಡೆ ಅವರು ‘ಜಲಜೀವನ್ ಮಿಷನ್’ ಯೋಜನೆ ಕುರಿತು ಹಾಗೂ ಕಾರ್ಡಿಯಾ ಸಂಸ್ಥೆಯ ಮುಖ್ಯಸ್ಥ ಸುದರ್ಶನ ಅವರು ‘ಜೀವ ವೈವಿಧ್ಯತೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿ.ಪಂ. ಉಪಕಾರ್ಯದರ್ಶಿ ಬಿ. ಆನಂದ್, ಮುಖ್ಯ ಯೋಜನಾಧಿಕಾರಿ ಲೋಕೇಶಪ್ಪ, ಯೋಜನಾ ನಿರ್ದೇಶಕ ಜಗದೀಶ್ ಉಪಸ್ಥಿತರಿದ್ದರು.

ಕಾರ್ಯಗಾರದಲ್ಲಿ ಜಿಲ್ಲೆಯ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಗಳಿಗೆ ಒಂದು ದಿನದ ಕಾರ್ಯಾಗಾರ

Published

on

ಸುದ್ದಿದಿನ,ದಾವಣಗೆರೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಹಾಗೂ ಜಿಲ್ಲಾ ಪಂಚಾಯತಿ ಇವರುಗಳ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅಭಿವೃದ್ಧಿ ವಿಷಯಗಳ ಕುರಿತು ಒಂದು ದಿನದ ಕಾರ್ಯಗಾರವನ್ನು ಜು.23 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಹದಡಿ ರಸ್ತೆಯಲ್ಲಿನ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending