ಅಂತರಂಗ
ನನ್ನ ಜೀವನದಲ್ಲಿ ಕಂಡ ಮರೆಯದ ವೈದ್ಯರು
ಚಿಕ್ಕವನಿರುವಾಗ ಅಂದ್ರೆ ನಾನು ನಾಲ್ಕೋ-ಐದೋ ತರಗತಿನೆ ಇರಬೇಕು.ಮೊದಲೇ ತುಂಟಾಟದ ಹುಡುಗ,ಕೂತಲ್ಲಿಯೇ ಕೂರದೇ ಸದಾ ಆಟ,ಅವರಿವರ ಜೊತೆ ಜಗಳ ಅವರು ಹೊಡೆದಾಗ ಮರಳಿ ಹೊಡೆಯಲಿಕ್ಕಾಗದಾಗ ಬಾಯಿಗೆ ಬಂದಂತೆ ಬೈದು,ಕಲ್ಲನ್ನು ಅವರ ಮೇಲೆ ತೂರಿ ಪರಾರಿಯಾಗಿಬಿಡುವವ,ಹೀಗೆ ಆಟ ಆಡುತ್ತಿರುವಾಗ ಅದು ಮಳೆಗಾಲ ಅಂದ್ರೆ ನೆಲವೆಲ್ಲ ಕೆಸರು ಆಗಿಬಿಡುತ್ತಿತ್ತು.ಕೆಸರಲ್ಲಿಯೇ ನಮ್ಮಾಟ ನೋಡಿ ಹೇಗೆಂದರೆ, ಮೊದಲೇ ಮಳೆಬಂದು ನೆಲಕ್ಕಂಟಿದ ಕಾಲು ಕಿತ್ತದಹಾಗೆ ಇರುವುದು.ಅದರಲ್ಲಿ ಸ್ಕೂಡೈವರಾಗಲಿ,ಗಟ್ಟಿರುವ ಕಟ್ಟಿಗೆಯಾಗಲಿ,ರಾಡಾಗಲಿ ತೊಗಂಡು ನೆಲಕ್ಕೆ ಬಿಳದೇ ನೇರವಾಗಿ ನಿಲ್ಲುವ ಹಾಗೆ ಶಕ್ತಿ ಮೀರಿ ಕೈಯಿಂದ ನೆಲಕ್ಕೆ ಬೀಸಬೇಕಿತ್ತು,ಅದು ನೇರವಾಗಿ ನಿಲ್ಲದೆ ಬಿದ್ದರೆ ಸೋತಂತೆ.(ಇದು ಆಟ)
ಮಳೆನಿಂತ ಮೇಲೆ ಆಟ ಶುರು ನಾನು ಸ್ಕೂಡೈವರ ತೊಗಂಡು ನೆಲಕ್ಕೆ ಒಂದು ಹೆಜ್ಜೆ ಮುಂದಿಟ್ಟು ಬೀಸುತ್ತಾ ಆಡುತ್ತಿರಬೇಕಾದರೆ,ಅಚಾನಕವಾಗಿ ಅದು ನೆಲಕ್ಕೆ ತಾಗದೆ ಮೊಣಕಾಲಿನ ಸ್ವಲ್ಪನೆ ಕೆಳಗಿನ ಭಾಗಕ್ಕೆ ಚುಚ್ಚಿಯೆ ಬಿಡ್ತು,ದೋಸ್ತ್ ರಿಗೆ ಯಾರಿಗೂ ಹೇಳಬ್ಯಾಡ್ರಿಲೆ ಅದರಾಗ ನಮ್ಮಮ್ಮಾಗ ಹೇಳಬ್ಯಾಡ್ರಿ ಎಂದು ಬೇನೆವಿತ್ತು,ದಸ್ತಿ(ಕರ್ ಚಿಪ್) ಕಾಲಿಗೆ ಕಟ್ಕೊಂಡು ಮತ್ತೆ ಶುರುವಾಟ.ಎರಡು ದಿನದ ನಂತರ ಅಮ್ಮ ನೋಡಿ ಸ್ವಲ್ಪನೆ ಕುಂಟುತಿರಬೇಕಾದರೆ ಕಾಲಿಗ್ಯಾಕೋ ದಸ್ತಿ ಕಟ್ಕೊಂಡು ಕುಂಟಕತ್ತಿ ಏನಾಗಐತಿ ತೋರ್ಸು ಬಾ ಅಂದ್ರ ಏನಿಲ್ಲ ಬೇ ಎಂದು ಮನೆಬಿಟ್ಟು ಹೊರಗ ಸವಾರಿ ನಮ್ಮದು.
ಯಾರೋ ಹೇಳಿಬಿಟ್ಟಾರ ಅಮ್ಮಗ, ನನ್ನ ದಾರಿ ಕಾದು ನನ್ನಿಡಿದು ಅಮ್ಮ ಕಾಲು ನೋಡಿದ್ರೆ ತೂತು ಬಿದ್ದು,ಎರಡು ಸಣ್ಣ ನೀರಿನ ಗುಳ್ಳೆ ತರಹ ತೂತಲ್ಲಿ ಗುಳ್ಳೆಗಳು ಇದ್ದವು. (ಕಾಲಿನಮೇಲೆ ಗುರುತು ಈಗಲೂ ಇದೆ) ಬೈದು ನೀನು ಬಾಳ ಕುಚೇಷ್ಟೆ ಇದಿಯಾಲೇ ನೋಡು ಎಲ್ಲಾ ಮೀರಿದ ಮೇಲೆ ಅದು ನಾ ಕೇಳಿದಾಗ ಹೇಳಿದ್ರೆ ಹೆಂಗ ನಡಿ ಪುಗ್ಗಿ ಡಾಕ್ಟರ್ ಹತ್ರ ಹೋಗೋಣ ಒಂದು ಸೂಜಿಗಿ ಚಲೋ ಆತದಾ ಅಂದಳು ಅಮ್ಮ.ಸೂಜಿಬ್ಯಾಡಬೇ ಬ್ಯಾನಿ ಆಕ್ಕದ ಅಂದ್ರ ಏನಾಗಲ್ಲ,ಹಿಂಗೆ ಬಿಟ್ರ ಆಪರೇಷನ್ ಮಾಡಿ ಕಾಲು ಅಲ್ಲಿಗೆ ಕಡಿತಾರ ನೋಡ್ ನಿನ್ನಿಷ್ಟ(ಮನದಲ್ಲಿಯೆ ಭಯ ಕುಂಟ ನಾಯ್ಯಾಕ ಆಗಬೇಕು ಮಾರ್ರೆಯ ಸೂಜಿ ಚುಚ್ಚಿಕೊಳ್ಳೊಣ ಎಂದು ನಿರ್ಧಾರ) ಎಂದಾಗ ಸರಿ ಅಂತ ದವಾಖಾನೆಗೆ ಹೋದೆವು.
ನನ್ನ ಕರ್ಮಕಾಂಡವೆಲ್ಲ ಎಳೆಎಳೆಯಾಗಿ ವೈದ್ಯರ ಮುಂದೆ ಬಿಡಿಸಿದಳು ನೋಡಿ ಅಮ್ಮಾ,ಆಗ ಸರಿ ಯಾಕೋ ನೋಡ್ಕಂಡು ಆಡಬೇಕಪ್ಪಾ,ಕಾಲಿಗೇನಾದರ ಆದ್ರೆ ಯಾರು ಜವಬ್ದಾರರು,ಏನೂ ಆಗುವುದಿಲ್ಲ ಒಂದು ಸೂಜಿ ಹಾಕಿದ್ರ ಸರಿಹೋಗುತ್ತೆ ಅಂದ್ರೆ ಬ್ಯಾನಿ ಆಗತ್ತ ಸರ್ ಅಂದೆ.ಹೇ ಹೇ ಬ್ಯಾನಿ ಆಗಲ್ಲ ಚುಚ್ಚಿಸಿಕೊಂಡ ನೋಡಿ ಮಾತಾಡು ಅಂದ್ರು ನನ್ನ ಮೆಚ್ಚಿನ ವೈದ್ಯರು,ಬ್ಯಾನಿ ಒಂದಾಗಲಿ ನೋಡ್ರಿ ನಿಮಗ ರೊಕ್ಕ(ಹಣ) ಕೊಡದಿಲ್ಲವೆಂದೆ ಅಮ್ಮನೂ,ಡಾಕ್ಟ್ರು ನಕ್ಕರು.ನಿನ್ನ ಹೆಸರೇನಪ್ಪ ಎಂದು ಸೂಜಿ ಚುಚ್ಚುತ್ತಾ ಕೇಳಿದ್ರೂ ಮಾತಾಡದಿದ್ದಾಗ ಹೇಸರೇಳಪ್ಪ ಅಂದಾಗ ಬ್ಯಾನಿ ಆಗತಿದ್ರೂ ಶಿವರಾಜ ಎಂದೆ,ಎಷ್ಟನೇ ತರಗತಿ ಎಂಬ ಪ್ರಶ್ನೆಗೆ ನಾಲ್ಕೋ-ಐದೋ ಅಂತ ಹೇಳ್ದೆ, ಯಾವ ಶಾಲೆ ಎಂಬುವುದಕ್ಕೂ ಸರಕಾರಿ ಶಾಲೆ ಅಂತ ಹೇಳುತ್ತಲೇ ಇರಬೇಕಾದ್ರೆ ಮುಗಿತು ನೋಡುಪಾ ಇಷ್ಟೇ ಸೂಜಿ ಕೆಲ್ಸ ಬಿಡಬೇಡ ಉಜ್ಜು ಇಲ್ಲಾಂದ್ರ ಬಾಯತದ(ಬಾಹು) ನೋಡು ಎಂದ್ರೆ ಅಮ್ಮ ಅಚ್ಚಟ್ಟಾಕಿ ಹುಜ್ಜುತಿದ್ದಳು,ನಾನು ಸಾಕ್ ಬಿಡು ಮಾ ಎಂದು ನಾನೇ ನನ್ನ ಕೈಯಾರೆ ಉಜ್ಜುತ್ತಾ ಬ್ಯಾನಿ ಮಾಡಲ್ಲ ಅಂದು ಬ್ಯಾನಿ ಮಾಡುತ್ರಿ ನಿಮಗ ರೊಕ್ಕ ಕೊಡಲ್ಲ ಏನ್ ಮಾಡತ್ತಿರಿ ನೀವು ಮಾಡ್ರೀ(ಮನಸಿನಾಗ ಈಗ ಅನ್ಸಕತ್ತಾದ ಮತ್ತೊಂದು ಸೂಜಿ ಅಂದಿದ್ರ),ನೋಡ-ನೋಡುತ್ತಾ ಅಮ್ಮ ದುಡ್ಡು ಕೊಟ್ಟೇ ಬಿಟ್ಟಳು.ಕೊನೆಗೆ ಬಿಳ್ಕೋಡುವಾಗ ಹೇಳಿದ ಔಷಧಿಗಳನ್ನ ಸರಿಯಾಗಿ ತೊಗೋ ಶಿವು ಇಲ್ಲಂದ್ರ ಮತ್ತೆ ಸೂಜಿಗೆ ಬರಬೇಕಾಗುತ್ತೆ ನೋಡು ಎಂದು ಮುಗುಳ್ನಗುತ್ತಾ ಮಮತೆಯ ಉತ್ತರ ಡಾಕ್ಟರ್ ರದು.ನಾನು ಮಾತ್ರ ಮುಗುಳ್ನಗುತ್ತಾ ಮನೆಗೆ ಬಂದೆ.ಮರೆಯಲಾರದ ಇದು ಮೊದಲನೇ ನನ್ನ ಜೀವದ ವೈದ್ಯರಿವರು.
ಇವರು ಇಂದು ಮಗನ ವಿದ್ಯಾಬ್ಯಾಸದ ಸಲುವಾಗಿ ಬೆಂಗಳೂರಿನಲ್ಲಿದ್ದಾರೆ.ಇವರ ಹೆಸರು ಕುಲಕರ್ಣಿ ಡಾಕ್ಟರ್ ಅಂತ ಯಾಕೋ ಏನೋ ಇವರಿಗೆ ಪುಗ್ಗಿ(ತೆಲುಗಿನಲ್ಲಿ ಭಜಿ ಎಂದರ್ಥ) ಡಾಕ್ಟ್ರು ಎನ್ನುತ್ತಾರೆ.ಈಗ ಸರಿಯಾಗಿ ಕಣ್ಣು ಕಾಣಿಸುವುದಿಲ್ಲ.ನಮಗೆ ಸಣ್ಣದೂ ಕಣ್ಣಾಗಲಿ,ಕಾಲಾಗಲಿ,ಕೈಯಿಗೆ ಏನಾದ್ರೂ ಆದ್ರೆ ಇವರ ಹತ್ರನೆ ತೋರಿಸುವುದು.ಅದು ವಿಶೇಷವೆಂದರೆ ಅಮ್ಮನಿಗೆ ತೋರಿಸಿದ ಮೇಲೆಯೇ ಇವರಿಗೆ ತೋರಿಸುವುದು. ಯಾಕಂದ್ರೆ ಅಮ್ಮನೂ ನಮ್ಮನೆಯವರ ಪಾಲಿಗೆ ಡಾಕ್ಟ್ರೆ,ಅವಳಿಗೆ ಮೀರಿದ ಮೇಲೆನೆ ನಿಜವಾದ ವೈದ್ಯ ಇವರ ಕಡೆ ದಾಪುಗಾಲು ನಮ್ಮದು.ಈಗಲೂ ಇವರ ನಿವೃತ್ತ ವೈದ್ಯ ತಂದೆ ಕಣ್ಣು ಸರಿಯಾಗಿ ಕಾಣದಿದ್ದರೂ ಮನೇಲಿಯೇ ವೃತ್ತಿ ಮುಂದುವರೆಸಿದ್ದಾರೆ.
ಪಿಯುಸಿಯಲ್ಲೊಮ್ಮೆ,ಹಾಸ್ಟೇಲ್ ನಲ್ಲಿದ್ದಾಗ Hydrocele ಆಗಿತ್ತು,ಅದಕ್ಕೆ ಕಾರಣವೂ ತಿಳಿದಿರಲಿಲ್ಲ.ಮಾನ್ವಿಯ ಪ್ರಸ್ತುತ ಕಸಾಪ ಜಿಲ್ಲಾಧ್ಯಕ್ಷರೂ ಹೌದು,ಹಿರಿಯ ವೈದ್ಯರೂ ಹೌದು.ಅವರಿಗೆ ತೋರಿಸಿದರೆ ನೋಡಿ ಅವರು,ಅದನ್ನು ತೂಕಮಾಡಿ ಹುಷಾರು ಇರಬೇಕೋ ಏನಾದ್ರ ಆದ್ರ ಹೆಂಗ ಅಂದು ಔಷಧಿ ಕೊಡುವೆ ತೊಗಂಡು ಎರಡು ದಿನವಾದ ಮೇಲೆ ಬಾ ಎಂದರು.
ಎರಡು ದಿನ ಮುಗಿಸಿ ಹೋದ್ರೆ ಬಾಪಾ ಶಿವರಾಜ ಹೆಂಗೈತಿ ಅರಾಮಿದಿ ಎಂದು ಮುಗುಳ್ನಗುತ್ತಾ (ಹರೇ ಮಾರಾಯ ನನ್ನೆಸರು ನೆನಪು ಇಟ್ಟಾರಲ್ಲೋ ಅಂದು ಮನದಲ್ಲಿಯೇ ನಗು) ತೋರಿಸಿದೆ.ಮತ್ತೌಷಧಿ ಕೊಟ್ಟು ರಾಯಚೂರಿಗೆ ಹೋಗು ಆಫರೇಷನ್ ಮಾಡ್ತಾರೆ ಎಂದರು.ಇವರು ನೆನಪಿನಲ್ಲಿ ಅಚ್ಚಳಿಯದೆ ಉಳಿಯುವ ಎರಡನೇ ವೈದ್ಯರು.
ರಾಯಚೂರಿನ ರೀಮ್ಸ್ ಆಸ್ಪತ್ರೆಯಲ್ಲಿ ಮಾಮನ ಸಹಾಯ,ಸಹಕಾರದೊಂದಿಗೆ ಮನೆಯವರಿಗೆ ಗೊತ್ತಾಗದೇ ಪರಿಚಯಸ್ಥ ನರ್ಸ್ ರಿಂದ ದಾಖಲಾಗಿ,ಆಫರೇಷನ್ ಇದ್ದ ಹಿಂದಿನ ದಿನ ಮನೆಗೆ ತಿಳಿಸಿದೆ.
ಅವರು ಇನ್ನೂ ವೈದ್ಯರಾಗುವವರು(MBBS) ತರಬೇತಿಯಲ್ಲಿದ್ದವರು ನೋಡಿ,ಆಫರೇಷನ್ ದಿನಾಂಕ ಕೊಟ್ಟು,ಸೈಡ್ ಗೆ(ತೊಡೆಯ ಎರಡೂ ಬದಿ ಸಂದಿಗೆ) ಸ್ಕೀನ್ ಪ್ರಾಬ್ಲಂ ಆಗಿತ್ತು ವಿಪರೀತ ತುರಿಕೆಯೂ ಇತ್ತು.ತುರಿಸಿ-ತುರಿಸಿ ಜಾಸ್ತಿನೆ ಆಗಿತ್ತು.ಅದಕ್ಕೂ ಔಷಧಿ ಕೊಟ್ಟರು ಅದು ಕಡಿಮೆಯಾಗಿರಲಿಲ್ಲ.
ಆಪರೇಷನ್ ದಿನವೂ ಬಂತು ದೊಡ್ಡ ಡಾಕ್ಟರ್ ಬಂದು ನೋಡಿ,ಏನದು ಸ್ಕೀನ್ ಗೆ ಎಂದು ಕೇಳಿ ಔಷಧಿ ಹೇಳಿದರೂ ಅದಕ್ಕೂ ಕಡಿಮೆಯಾಗಲಿಲ್ಲ.ಕೊನೆಗೂ ಆಫರೇಷನ್ ಹಾಲ್ ಗೆ ಕರೆದೊಯ್ದರು.ಮೊದಲೇ ತರಬೇತಿಯಲ್ಲಿರುವ ಹೆಣ್ಣುಮಕ್ಕಳು ಮೊಬ್ಬುಸೂದಿ ಹಾಕಲು ಬೆನ್ನಿಗೆ ಚುಚ್ಚುತ್ತಿದ್ದರು ಮೂರನೇ ಸಲ ಪರಿಪೂರ್ಣವಾಗಿ ಬೆದರುತ್ತಾ ಚುಚ್ಚಿಯೆ ಬಿಟ್ಟರು.ಸಣ್ಣ ಮಗು ಅತ್ತ ಹಾಗೆನೆ ಅತ್ತೆ,ದೊಡ್ಡ ಡಾಕ್ಟರ್ ಇಲ್ಲ-ಇಲ್ ಏನ್ ಆಗಲ್ಲವೆಂದರು.ಮತ್ತೊಬ್ಬ ಬಂದು ಕಾಲು ಎತ್ತು ಅಂದ ಸ್ವಲ್ಪ ಎತ್ತಿದೆ,ಮತ್ತೆ ಎತ್ತು ಎಂದ ಕಾಲು ಅಲುಗಾಡಿಸಲೂ ಸಹವಾಗಲಿಲ್ಲ.(ಮೊಬ್ಬುಸೂಜಿ ಹಾಕಿದ್ರಲ್ಲ ಅದ್ಕೇ).
ಆಫರೇಷನ್ ಶುರುವಾಯಿತು ಗಂಡು ಡಾಕ್ಟ್ರು ಮಾಡ್ತಾರೆಂದರೆ,ಹೆಣ್ಣು ಡಾಕ್ಟರ್ ಮಾಡಿಮುಗಿಸಿ ಹೊಲಿಗೆ ಹಾಕುತ್ತಾ ತರಬೇತುದಾರರಿಗೆ ವಿವರಿಸುತ್ತಿದ್ದರು ಅದು ನನಗೆ ಗೊತ್ತಾಗಲೇ ಇಲ್ಲ.ನನ್ನ ಬೆಡ್ಡಿಗೆ ಹಾಕಿ ಇಂಟ್ರೋಲ್ ಗೆ ಪೈಪ್ ಹಾಕಿ ಬಿಟ್ಟು ಹೋದ್ರು.ಸೂಸು ಬರದೇ ಗೊತ್ತಾಗುತ್ತಿರಲಿಲ್ಲ,ಚೀಲಗಟ್ಟಲೇ ತುಂಬುತ್ತಿತ್ತು.ಅದನ್ನು ಅಣ್ಣಾ ಎತ್ತಿ ಹಾಕುತ್ತಾ ನನ ಕರ್ಮ ನಿನದು ಎತ್ತಾಕಬೇಕಲ್ಲೋ ಅಂತ ಮೂಗು ಮುಚ್ಚಿ ಇನ್ನೊಮ್ಮೆ ಇಷ್ಟು ವಯ್ಯಿಬೇಡವೆಂದು ತೋರಿಸುತ್ತಿದ್ದ,ನನಗೆ ಗೊತ್ತೆ ಆಗುತ್ತಿರಲಿಲ್ಲ. ಇದು ನನ್ನ ಜೀವ ಉಳಿಸಿದ ಮೂರನೇ ವೈದ್ಯರು.
ಇಷ್ಟೆಲ್ಲವಾದ ಮೇಲೂ ಸ್ಕೀನ್ ಪ್ರಾಬ್ಲಃ ವರ್ಷವಾದರೂ ಹೋಗಿರಲಿಲ್ಲ.ಅದು ಯಾರೋ Supot lotion ಹಚ್ಚಿದ್ರೆ ಹೋಗುತ್ತೆ ಅಂದಾಗ ಅಮ್ಮ ತಂದು ದಿನಾಲೂ ಎರಡು ತಿಂಗಳಕಾಲ ನಿನ್ನಿಂದ ಬೇರೆ ಯಾರ್ಗೋ ಬಂದಾದ ಮತ್ತ ಎಂದು ಬೆಂಬಿಡದೇ ಹಚ್ಚಿ ಆ ಸಮಸ್ಯೆನ ದೂರ ಮಾಡಿದಳು.ಹಾಗಾಗಿ ತಾಯಿಯೇ ಮೊದಲಪಾಠ ಶಾಲೆವೆನ್ನುವ ಹಾಗೆ ಮೊದಲನೇ ವೈದ್ಯಳೂ ಹೌದು ನಮಗೆ.ಅಣ್ಣಾ ಅಂದಿದಿನಲ್ಲ ಅವನಿಗೂ ಈಗ ಸ್ಕೀನ್ ಪ್ರಾಬ್ಲಃ ಬಂದಿದೆ.ಸಪೋಟ್ ಲೋಷನ್ ಹಚ್ಚುತ್ತಾ ಅದನ್ನು ಕಳೆಯುತ್ತಿದ್ದೇನೆ.ಅವನು ಅಂದು ನಾ ಮಾಡಿದ ಆ ಕಾರ್ಯಕ್ಕೆ ಇಂದು ನಿನ್ನ ಉಪಕಾರವಿದು. ನಿನ್ನಿಂದಲೇ ಬಂದಿದ್ದು ಎಂದು ಭಯ್ಯುತ್ತಾ ನನ್ನ ಬಟ್ಟೆಗಳನ್ನು ಹಾಕಿಕೊಳ್ಳಬೇಡವೆನ್ನುತ್ತಾ ಧನ್ಯವಾದಗಳನ್ನು ಹೇಳುತ್ತಿದ್ದಾನೆ.
ಎಲ್ಲರಿಗೂ ವೈದ್ಯರ ದಿನದ ಶುಭಾಶಯಗಳು (ಜುಲೈ 1)
–ಶಿವರಾಜ್ ಮೋತಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಆಶ್ರಯ ಯೋಜನೆ – ಆವಧಿ ವಿಸ್ತರಣೆ
-
ದಿನದ ಸುದ್ದಿ4 days agoಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
-
ಅಂಕಣ4 days agoಕವಿತೆ | ದೇವರ ಹೂವು
-
ದಿನದ ಸುದ್ದಿ6 days agoಗರಿಕೆ ಹುಲ್ಲಿನ ಜ್ಯೂಸ್ನಲ್ಲಿದೆ ರಕ್ತದ ಕ್ಯಾನ್ಸರ್ ಗುಣಪಡಿಸುವ ಶಕ್ತಿ
-
ದಿನದ ಸುದ್ದಿ3 days agoರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
-
ದಿನದ ಸುದ್ದಿ3 days agoಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ

