ದಿನದ ಸುದ್ದಿ
ಫ್ಯಾಷನ್ ಪ್ರಿಯರಿಗಿದು ಸಿಹಿ ಸುದ್ದಿ..!

ಸುದ್ದಿದಿನ,ಬೆಂಗಳೂರು : ದೇಶದ ಫ್ಯಾಷನ್ ನಗರ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನ ಫ್ಯಾಷನ್ ಪ್ರಿಯರಿಗೊಂದು ಶುಭ ಸುದ್ದಿ. ತ್ವಶಿ ಸಮೂಹದ ನೂತನ ಎಕ್ಲೂಸಿವ್ ಮಳಿಗೆ ನಗರದಲ್ಲಿ ನಿನ್ನೆ ಭಾನುವಾರ ಉದ್ಘಾಟನೆಗೊಂಡಿತು.
ಕನ್ನಡ ಸಿನಿಮಾ ನಟಿ ಸುಧಾ ಬೆಳವಾಡಿ ಮತ್ತು 2016 ನೇ ಸಾಲಿನ ಮಿಸೆಸ್ ಕರ್ನಾಟಕ ಶ್ರೀಮತಿ ಶುಭಾ ಶ್ರೀರಾಮ್ ಈ ಸಂದರ್ಭದಲ್ಲಿ ಹಾಜರಿದ್ದರು. ಬೆಂಗಳೂರಿನಲ್ಲಿ ಕಾರ್ಯಾರಂಭಿಸುವುದರೊಂದಿಗೆ, ತಶ್ವಿ ಬಳಗವು ಭಾರತದ ಪ್ರಮುಖ ನಗರದಲ್ಲಿ ತನ್ನ ಛಾಪನ್ನು ಒತ್ತುತ್ತಿದೆ.ಜನಪ್ರಿಯ ಶಾಪಿಂಗ್ ತಾಣವಾಗಿರುವ 196, ಮೊದಲನೇ ಮಹಡಿ, ನ್ಯೂ ಬಿ ಎಲ್ ರೋಡ್, ಆರ್‍ಎಂವಿ 2 ನೇ
ಹಂತದಲ್ಲಿದೆ.
ಈ ಮಳಿಗೆಯಲ್ಲಿ ತಶ್ವಿಯ ವಿಶೇಷ ವಿನ್ಯಾಸಗಳು ಮಧ್ಯಮ ದರದಿಂದ ಆರಂಭಗೊಂಡು ವಿವಿಧ ದರದಲ್ಲಿ ಲಭ್ಯವಿದೆ. ಭಾರತೀಯತೆಯೊಂದಿಗೆ ಪಾಶ್ಚಿಮಾತ್ಯತೆಯ ಸೊಬಗು ಹೊಂದಿರುವ ವಿನ್ಯಾಸಗಳು ಇಲ್ಲಿಯ ಪ್ರಮುಖ ಆಕರ್ಷಣೆ. ತ್ವಿಶಿಯ ವಿನ್ಯಾಸಗಳು ಪ್ರತಿಯೊಬ್ಬರಿಗೂ ವಿಶೇಷ ಹಾಗು ಶ್ರೀಮಂತಿಕೆಯ ಮೆರಗು ತಂದುಕೊಡುತ್ತವೆ. ಇಲ್ಲಿ ಇಂದಿನ ಯುವ ಪೀಳಿಗೆಯ ಅಭಿರುಚಿಗೆ ತಕ್ಕುದಾದ ಆಯ್ಕೆ ಇರುವುದಲ್ಲದೆ, ಇತರ ವಯೋಮಾನದವರ
ಮನೋಭಿಲಾಷೆಗೂ ಹೊಂದುವಂತಹ ವಿನ್ಯಾಸಗಳೂ ಲಭ್ಯವಿದೆ. ಈ ಹೊಸ ಮಳಿಗೆ ವಿಶಾಲವಾಗಿದೆ.
ಆಯ್ದ, ಕೈಯಿಂದ ಮಾಡಲಾದ ಕೆಲವು ವಿನ್ಯಾಸಗಳಿಗೆ ವಿಶೇಷ ರಿಯಾಯಿತಿ ಲಭ್ಯವಿದ್ದು, ಇದು ನಿಜವಾಗಿಯೂ ಶಾಪಿಂಗ್ ಪ್ರಿಯರ ಸ್ವರ್ಗ ಎನಿಸುವುದರಲ್ಲಿ ಸಂದೇಹವಿಲ್ಲ. ಈ ಮಳಿಗೆಯಲ್ಲಿ ಸಾಂಪ್ರದಾಯಿಕ, ಭಾರತೀಯ ಮತ್ತು ಪಾಶ್ಚಾತ್ಯ ಶೈಲಿ ಸೇರಿದಂತೆ ವಿಭಿನ್ನ ವಿನ್ಯಾಸದ ಸೀರೆಗಳ ಸಂಗ್ರಹವಿದೆ. ಅಲ್ಲದೆ, ಸಾಂಪ್ರದಾಯಿಕ, ಕ್ಯಾಶುವಲ್, ಪಾರ್ಟಿ, ಹಬ್ಬಗಳಿಗೆ ಮತ್ತು ವಿವಾಹ ಸಂದರ್ಭಗಳಿಗೆ ಸರಿಹೊಂದುವ ದಿರಿಸುಗಳ ಸಂಗ್ರಹವಿದೆ.
“ಬೆಂಗಳೂರಿನಲ್ಲಿ ನಮ್ಮ ಸಮೂಹದ ಮೊದಲನೇ ಮಳಿಗೆಯನ್ನು ಬೆಂಗಳೂರಿನಲ್ಲಿ ಆರಂಭಿಸಿರುವುದು ನಮಗೆ ಅತ್ಯಂತ ಸಂತೋಷಕರ ವಿಷಯವಾಗಿದೆ. ಇದು ನಮ್ಮ ಉತ್ಪನ್ನಗಳಿಗೆ ಪ್ರಮುಖ ಮಾರುಕಟ್ಟೆ ಆಗುವುದರಲ್ಲಿ ಸಂಶಯವಿಲ್ಲ. ಬೆಂಗಳೂರಿನ ಫ್ಯಾಶನ್ ಪ್ರಿಯರಿಗೆ ಆಹ್ಲಾದಕಾರ ವಾತಾವರಣದಲ್ಲಿ ತ್ವಿಶಿಯ ವಿವಿಧ ಬ್ರಾಂಡ್‍ಗಳನ್ನು ಪರಿಚಯಿಸುತ್ತದೆ. ಅಷ್ಟೇ ಅಲ್ಲದೆ, ಸಾಂಪ್ರದಾಯಿಕ ಶೈಲಿಯಲ್ಲಿ ಸಮಕಾಲೀನ ವಿನ್ಯಾಸಗಳು, ಪಾಶ್ಚಿಮಾತ್ಯಮತ್ತು ವಿವಿಧ ಜೀವನಶೈಲಿಗೆ ಸಂಬಂಧಿಸಿದ ವಿವಿಧ ಆಯ್ಕೆಗಳು ಇಲ್ಲಿ ಲಭ್ಯವಿದೆ”ಎನ್ನುತ್ತಾರೆ ತ್ವಿಶಿ ಮಳಿಗೆಯ ಸಹ ಸಂಸ್ಥಾಪಕಿ ಮತ್ತು ಪಾಲುಗಾರರೂ ಆಗಿರುವ ಶಲೀನ್ ಸುಬ್ಬಯ್ಯ.
“ನಾವು ಈ ಮಳಿಗೆಯನ್ನು ಆರಂಭಿಸಲು ಉತ್ಸುಕರಾಗಿದ್ದೇವೆ. ಇಂದು ಎಲ್ಲೆಡೆಯೂ ಸ್ಪರ್ಧೆ
ಇದೆ. ತ್ವಿಶಿಯಲ್ಲಿ ನಾವು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ಉತ್ಪನ್ನಗಳನ್ನು ಪೂರೈಸುತ್ತೇವೆ. ಗ್ರಾಹಕರಿಗೆ ಉತ್ತಮ ದರ್ಜೆಯ ಉತ್ಪನ್ನಗಳ ಪೂರೈಕೆ, ಉತ್ತಮ ಸೇವೆ ಮತ್ತು ಶಾಪಿಂಗ್‍ಗೆ ಚೇತೋಹಾರಿ ವಾತಾವರಣವನ್ನು ಒದಗಿಸುವುದು ತ್ವಶಿಯ ಗುರಿ’ ಎನ್ನುತ್ತಾರೆ ತ್ವಿಶಿ ಮಳಿಗೆಯ ಇನ್ನೋರ್ವ ಸಹ ಸಂಸ್ಥಾಪಕಿ ಮತ್ತು ಪಾಲುಗಾರರೂ ಆಗಿರುವ ವರ್ಷಾ ವೆಂಕಟೇಶ್”.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಪರಿಸರ ಗಣೇಶ ಚತುರ್ಥಿ ಆಚರಣೆ | ಪಿಓಪಿ ಮೂರ್ತಿ ಸಂಪೂರ್ಣ ನಿಷೇಧ : ಜಿಲ್ಲಾಧಿಕಾರಿ ಡಾ. ವೆಂಕಟೇಶ್

ಸುದ್ದಿದಿನ,ದಾವಣಗೆರೆ : ಗಣೇಶ ಚತುರ್ಥಿಯಲ್ಲಿ ಪಿಓಪಿ ಗಣೇಶ ಮೂರ್ತಿ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದ್ದು ಮಣ್ಣಿನಲ್ಲಿ ಮಾಡಿದ ಹಾಗೂ ಬೆಲ್ಲದ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡುವ ಮೂಲಕ ಪರಿಸರ ಸ್ನೇಹಿ ಗಣೇಶನ ಹಬ್ಬ ಆಚರಣೆಗೆ ಮುಂದಾಗೋಣ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪರಿಸರಕ್ಕೆ ಮಾರಕವಾದ ಪಿಓಪಿ ಗಣೇಶ ಮೂರ್ತಿಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಯಾರು ಸಹ ಮಾರಾಟ ಮಾಡುವಂತಿಲ್ಲ. ಮಹಾರಾಷ್ಟ್ರದಿಂದ ಪಿಓಪಿ ಗಣೇಶ ಮೂರ್ತಿಗಳನ್ನು ತಂದು ಹರಿಹರದಲ್ಲಿ ಮಾರಾಟ ಮಾಡುತ್ತಿದ್ದ ವೇಳೆ 17 ಮೂರ್ತಿಗಳನ್ನು ವಶಪಡಿಸಿಕೊಂಡು ಮಾರಾಟಗಾರರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಲಾಗಿದೆ ಎಂದರು.
ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು ಅಥವಾ ಯಾವುದೇ ಸವಕಳಿ ಇಲ್ಲದ ಬೆಲ್ಲದ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡುವುದರಿಂದ ನಷ್ಟವಿಲ್ಲದೆ ಲಾಭವೇ ಹೆಚ್ಚಿರಲಿದೆ. ಈ ಭಾರಿ ಮೊದಲ ಭಾರಿಗೆ ಜಿಲ್ಲೆಯಲ್ಲಿ ಬೆಲ್ಲದ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಮಂಡ್ಯದಲ್ಲಿ ಈ ಹಿಂದೆ ಕೆಲಸ ಮಾಡುತ್ತಿರುವಾಗ ಅಲ್ಲಿನ ರೈತ ಉತ್ಪಾದಕ ಸಂಸ್ಥೆಯ ಮೂಲಕ ಬೆಲ್ಲದ ಗಣೇಶ ಮೂರ್ತಿ ತಯಾರಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಉತ್ತೇಜಿಸಲಾಗಿತ್ತು. ಇಂದು ಆ ಸಂಸ್ಥೆಗೆ ಸಾಕಷ್ಟು ಬೇಡಿಕೆ ಬಂದಿದೆ ಎಂದರು.
ಶೂನ್ಯ ನಷ್ಟದ ಬೆಲ್ಲದ ಗಣಪ; ಬೆಲ್ಲದ ಗಣೇಶ ಮೂರ್ತಿಯನ್ನು ರೈತರು ಬೆಳೆದ ಕಬ್ಬಿನಿಂದ ಹಾಲನ್ನು ತೆಗೆದು ಅದರಲ್ಲಿ ಯಾವುದೇ ರಾಸಾಯನಿಕ ಬೆರಸದೇ ಪಾಕವನ್ನು ತಯಾರು ಮಾಡಿ ಈ ಪಾಕದಿಂದ ಗಣೇಶ ಮೂರ್ತಿಯ ಹಚ್ಚಿಗೆ ಬೆರೆಸಿದಾಗ ಅದು ಮೂರ್ತಿಯಾಗುತ್ತದೆ. ಒಂದು ಗಣೇಶ ಮೂರ್ತಿಯನ್ನು ಕನಿಷ್ಠ 2 ಕೆಜಿ ಬೆಲ್ಲದಿಂದ ಮಾಡಬಹುದಾಗಿದೆ. ಇದರಿಂದ ರೈತರಿಗೂ ಆರ್ಥಿಕಾಭಿವೃದ್ದಿಯಾಗಲಿದೆ ಮತ್ತು ರೈತ ಉತ್ಪಾದಕ ಕಂಪನಿಗಳಿಗೂ ಆದಾಯ ಬರಲಿದ್ದು ಆರ್ಥಿಕತೆ ಹಂಚಿಕೆಯಾಗಲಿದೆ. ಇದರಿಂದ ಎಲ್ಲರಿಗೂ ಲಾಭವಾಗಲಿದ್ದು ಖರೀದಿಸಿದ ಗ್ರಾಹಕರಿಗೂ ಯಾವುದೇ ನಷ್ಟ ಉಂಟಾಗುವುದಿಲ್ಲ. ಬೆಲ್ಲದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ವಿಸರ್ಜನೆಯ ದಿನ ಇದೇ ಮೂರ್ತಿಯನ್ನು ಪ್ರಸಾದವನ್ನಾಗಿ ಎಲ್ಲರಿಗೂ ಹಂಚಿಕೆ ಮಾಡಬಹುದಾಗಿದೆ ಎಂದರು.
ದಾವಣಗೆರೆಯಲ್ಲಿಯೇ ತಯಾರು; ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿಯೇ ಬೆಲ್ಲದ ಗಣೇಶ ಮೂರ್ತಿಯನ್ನು ತಯಾರು ಮಾಡಲು ಎಲ್ಲಾ ತಾಂತ್ರಿಕ ನೆರವನ್ನು ರೈತ ಉತ್ಪಾದಕ ಕಂಪನಿಗಳಿಗೆ ಮತ್ತು ಸ್ವ ಸಹಾಯ ಸಂಘಗಳಿಗೆ ಕೊಡಿಸುವ ಮೂಲಕ ಪರಿಸರ ಸ್ನೇಹಿ ಬ್ಯಾಗ್‍ಗಳ ಉತ್ಪಾದನೆ, ಮದುವೆ ಸಮಾರಂಭಗಳಲ್ಲಿ ನೀಡಲು ಬೆಲ್ಲದ ಹಚ್ಚುಗಳನ್ನು ಸಹ ತಯಾರು ಮಾಡಿಸುವ ಮೂಲಕ ಜಿಲ್ಲೆಯ ಜನರಿಗೆ ಆರ್ಥಿಕಾಭಿವೃದ್ದಿ ಮತ್ತು ಜಿಲ್ಲೆಯನ್ನು ಆರ್ಥಿಕಾಭಿವೃದ್ದಿಯತ್ತ ಕೊಂಡೊಯ್ಯಲು ಉದ್ದೇಶಿಸಲಾಗಿದೆ ಎಂದರು.
ಮಣ್ಣಿನ ಗಣೇಶ ಮೂರ್ತಿ ಮಾರಾಟವಾಗುವ ಸ್ಥಳದಲ್ಲಿಯೇ ಈ ಭಾರಿ ಬೆಲ್ಲದ ಮೂರ್ತಿಗಳು ಲಭಿಸುವಂತೆ ಮಾಡಲು ಮಹಾನಗರ ಪಾಲಿಕೆ ಹಾಗೂ ಪರಿಸರ ಇಲಾಖೆಯಿಂದ ಬೆಲ್ಲದ ಗಣೇಶ ಮೂರ್ತಿಗಳನ್ನು ತರಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಏಕಗವಾಕ್ಷಿ
ಗಣೇಶ ಮೂರ್ತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಟಾಪನೆ ಮಾಡಲು ಅಗತ್ಯ ಅನುಮತಿಗಾಗಿ ದಾವಣಗೆರೆ ಜಿಲ್ಲೆಯಲ್ಲಿ 7 ಕಡೆ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ. ದಾವಣಗೆರೆ ಬಡಾವಣೆ ಠಾಣೆ, ಹರಿಹರ ನಗರಸಭಾ ಕಾರ್ಯಾಲಯ, ಮಲೆಬೆನ್ನೂರು ಪುರಸಭಾ ಕಚೇರಿ, ಜಗಳೂರು ಪೊಲೀಸ್ ಠಾಣೆ, ಹೊನ್ನಾಳಿ ಪೊಲೀಸ್ ಠಾಣೆ, ನ್ಯಾಮತಿ ಪೊಲೀಸ್ ಠಾಣೆ, ಚನ್ನಗಿರಿ ಪೊಲೀಸ್ ಠಾಣೆ ಇಲ್ಲಿ ಅನುಮತಿ ಪಡೆಯಬಹುದಾಗಿದ್ದು ಇಲ್ಲಿಯವರೆಗೆ ನೀಡಲಾದ 239 ಪರವಾನಗಿಯಲ್ಲಿ ದಾವಣಗೆರೆಯಲ್ಲಿ 217, ಹರಿಹರ 9, ಮಲೆಬೆನ್ನೂರು 2, ಜಗಳೂರು 6, ನ್ಯಾಮತಿ 1, ಹೊನ್ನಾಳಿ 1, ಚನ್ನಗಿರಿ 3 ಪರವಾನಗಿ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪಾಲಿಕೆ ಆಯುಕ್ತರಾದ ರೇಣುಕಾ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಮಹಂತೇಶ್, ಪರಿಸರ ಅಧಿಕಾರಿ ಲಕ್ಷ್ಮಿಕಾಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸೆ. 14 ರಿಂದ 21 ರವರೆಗೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಸಾಲಿನ ಜಿಲ್ಲೆಯ ಆರು ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ತಾಲ್ಲೂಕುವಾರು ಆಯೋಜಿಸಲಾಗಿದೆ.
ಸೆಪ್ಟೆಂಬರ್ 14 ರಂದು ಹರಿಹರ ತಾಲ್ಲೂಕಿಗೆ ಸಂಬಂಧಿಸಿದಂತೆ ರಾಜನಹಳ್ಳಿಯ ಶ್ರೀ ವಾಲ್ಮೀಕಿ ವಸತಿಯುತ ಪ್ರೌಢಶಾಲೆ, ಹರಿಹರ, 15 ರಂದು ಹೊನ್ನಾಳಿ ತಾಲ್ಲೂಕಿಗೆ ಸಂಬಂಧಿಸಿದಂತೆ ತಾಲ್ಲೂಕು ಕ್ರೀಡಾಂಗಣ, ಹೊನ್ನಾಳಿ, 16 ರಂದು ನ್ಯಾಮತಿ ತಾಲ್ಲೂಕಿಗೆ ಸಂಬಂಧಿಸಿದಂತೆ ತಾಲ್ಲೂಕು ಕ್ರೀಡಾಂಗಣ ಹೊನ್ನಾಳಿ, 16 ರಂದು ಚನ್ನಗಿರಿ ತಾಲ್ಲೂಕಿಗೆ ಸಂಬಂಧಿಸಿದಂತೆ ತಾಲ್ಲೂಕು ಕ್ರೀಡಾಂಗಣ ಚನ್ನಗಿರಿ, 20 ರಂದು ಜಗಳೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಜಗಳೂರಿನ ಬೇಡರ ಕಣ್ಣಪ್ಪ ಪ್ರೌಢ ಶಾಲೆ ಹಾಗೂ 21 ರಂದು ದಾವಣಗೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟಗಳು ನಡೆಯಲಿವೆ.
ಕ್ರೀಡಾಕೂಟದಲ್ಲಿ ರಕ್ಷಣಾ ಪಡೆ ಮತ್ತು ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸುವಂತಿಲ್ಲ. ಒಬ್ಬ ಕ್ರೀಡಾಪಟು ಅಥವಾ ತಂಡದ ಯಾವುದೇ ತಾಲೂಕಿನಲ್ಲಿ ಒಂದು ಬಾರಿ ಭಾಗವಹಿಸಿದ ನಂತರ ಬೇರೆ ಯಾವುದೇ ತಾಲೂಕಿನ ಅಥವಾ ಜಿಲ್ಲೆಯ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿಲ್ಲ. ತಾಲ್ಲೂಕು ಮಟ್ಟದ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಂಡವನ್ನು ಮಾತ್ರ ಜಿಲ್ಲಾ ಮಟ್ಟದ ತಟ್ಟೆಗೆ ಕಳುಹಿಸಲಾಗುತ್ತದೆ.
ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ಪ್ರಯಾಣ ಭತ್ಯೆ, ದಿನಭತ್ಯೆ ನೀಡಲಾಗುವುದಿಲ್ಲ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಕೆ.ಆರ್. ಜಯಲಕ್ಷ್ಮೀಬಾಯಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಳಪೆ ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಹುಬ್ಬಳ್ಳಿ : ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ ಪತ್ರ ಬರೆಯಲಾಗಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮಹದಾಯಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತಯಾರಿದ್ದರೂ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ದೊರೆತಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.
ಬರಗಾಲ ಘೋಷಿತ ಪ್ರದೇಶಗಳಿಗೆ ಪರಿಹಾರ ಒದಗಿಸಲು ಇರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ಬರಗಾಲ ಘೋಷಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುಡಿಯುವ ನೀರು, ಬಿತ್ತನೆಗೆ ನೆರವು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ನೆರವು ಬರಬೇಕಿದೆ ಎಂದು ಹೇಳಿದರು. ವಿದ್ಯಾವಿಕಾಸ ಯೋಜನೆಯಡಿ ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿದ್ದು, ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ಮಕ್ಕಳಿಗೆ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿರುವ ಬಗ್ಗೆ ತನಿಖೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಳಪೆ ಬಟ್ಟೆ ನೀಡಿರುವುದಕ್ಕೆ ಪಾವತಿಯೂ ಆಗಿರುವುದರಿಂದ, ಸಂಬಂಧಪಟ್ಟವರನ್ನು ಇದಕ್ಕೆ ಜವಾಬ್ದಾರರನ್ನಾಗಿಸಬೇಕೆಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸಂಬಂಧಪಟ್ಟವರಿಂದ ಪಾವತಿಸಲಾಗದ ಮೊತ್ತವನ್ನು ಮರುಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
