Connect with us

ದಿನದ ಸುದ್ದಿ

ಗ್ಯಾರಂಟಿಗಳಿಂದ ಆರ್ಥಿಕಾಭಿವೃದ್ದಿ ; ಯೋಜನೆ ಟೀಕೆ ಮಾಡುತ್ತಿದ್ದವರು ಅನುಷ್ಟಾನದ ಅಧ್ಯಯನ ಮಾಡುವಂತಾಗಿದೆ : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

Published

on

ಸುದ್ದಿದಿನ,ದಾವಣಗೆರೆ:ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕಾಭಿವೃದ್ದಿಯಾಗುತ್ತಿದ್ದು ಯೋಜನೆಗಳ ಅನುಷ್ಟಾನಕ್ಕೆ ಅಪಸ್ವರವೆತ್ತಿದವರು ರಾಜ್ಯಕ್ಕೆ ಬಂದು ಗ್ಯಾರಂಟಿ ಯೋಜನೆಗಳ ಅಧ್ಯಯನ ಮಾಡುವಂತಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಅವರು ಸೋಮವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಇಂಧನ, ಸಾರಿಗೆ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳಿಂದ ಏರ್ಪಡಿಸಲಾದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕಚೇರಿ ಉದ್ಘಾಟನೆ ನೆರವೇರಿಸಿ ಸಮಾರಂಭದಲ್ಲಿ ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದು ಕಷ್ಟ, ಇದರಿಂದ ಆರ್ಥಿಕ ನಷ್ಟವಾಗಿ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ವಿರೋಧ ಪಕ್ಷದವರು ಮಾತನಾಡುತ್ತಿದ್ದರು. ಆದರೆ ಯೋಜನೆಗಳನ್ನು ಕಳೆದೆರಡು ವರ್ಷಗಳಿಂದ ಯಶಸ್ವಿಯಾಗಿ ಅನುಷ್ಟಾನ ಮಾಡಲಾಗಿದೆ. ಯಶಸ್ವಿಯಾದ ಯೋಜನೆಗಳ ಕುರಿತು ವಿವಿಧ ರಾಜ್ಯಗಳು ಕರ್ನಾಟಕಕ್ಕೆ ಬಂದು ಅಧ್ಯಯನ ಮಾಡುವಂತಾಗಿದೆ. ಪ್ರತಿ ಕುಟುಂಬಕ್ಕೆ 4 ರಿಂದ 6 ಸಾವಿರದಷ್ಟು ಯೋಜನೆಗಳ ಲಾಭ ಸಿಗುತ್ತಿರುವುದರಿಂದ ಜನರ ಜೀವನ ಮಟ್ಟ ಸುಧಾರಣೆಯಾಗಿದ್ದು ಪರೋಕ್ಷವಾಗಿ ಆರ್ಥಿಕಾಭಿವೃದ್ದಿಯಾಗಿ ಜೀವನ ನಿರ್ವಹಣಾ ಮಟ್ಟ ಹೆಚ್ಚಳವಾಗಿದೆ ಎಂದರು.

ಪಂಚ ಗ್ಯಾರಂಟಿ ನೇರವಾಗಿ ಜನರಿಗೆ ತಲುಪುವುದರಿಂದ ಇನ್ನೂ ಪಾರದರ್ಶಕವಾಗಿ ಯೋಜನೆಗಳನ್ನು ಅನುಷ್ಟಾನ ಮಾಡಿ ಜನರಿಗೆ ತಲುಪಿಸುವ ಕೆಲಸವನ್ನು ಸಮಿತಿಯಿಂದ ಮಾಡಬೇಕಾಗಿದೆ. ಆರ್ಥಿಕ ಸೌಲಭ್ಯ ನೀಡುವ ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳನ್ನು ಪ್ರತಿ ತಿಂಗಳು 1 ರಿಂದ 5 ನೇ ತಾರೀಖಿನೊಳಗೆ ತಲುಪಿಸುವಂತೆ ಮಾಡಬೇಕೆಂದರು.

ಶಕ್ತಿ ಯೋಜನೆಯಡಿ ದಾವಣಗೆರೆ ಕೆಎಸ್‍ಆರ್‍ಟಿಸಿಗೆ ರೂ.213.48 ಕೋಟಿ, ಅನ್ನಭಾಗ್ಯ ಯೋಜನೆಯಡಿ 3.44 ಲಕ್ಷ ಕಾರ್ಡ್‍ದಾರರು ಹಾಗೂ 12.42 ಲಕ್ಷ ಫಲಾನುಭವಿಗಳಿಗೆ ರೂ.346 ಕೋಟಿ, ಗೃಹಜ್ಯೋತಿ ಯೋಜನೆಯಡಿ 5.03 ಲಕ್ಷ ಆರ್.ಆರ್.ಸಂಖ್ಯೆ ಹೊಂದಿದ ಕುಟುಂಬಗಳಿಗೆ ರೂ.409 ಕೋಟಿ ವಿದ್ಯುತ್ ಸಬ್ಸಿಡಿ, ಗೃಹಲಕ್ಷ್ಮಿಯಡಿ 3.6 ಲಕ್ಷ ಯಜಮಾನಿಯರಿಗೆ ರೂ.1255 ಕೋಟಿ ಮತ್ತು ಯುವನಿಧಿಯಡಿ 9094 ವಿದ್ಯಾರ್ಥಿಗಳಿಗೆ ರೂ.13 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಅವರು ನೂತನ ಕಚೇರಿ ಉದ್ಘಾಟನೆಯಲ್ಲಿ ಭಾಗಿಯಾಗಿ ಸಮಾರಂಭದಲ್ಲಿ ಮಾತನಾಡಿ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಕಳೆದೆರಡು ವರ್ಷಗಳಲ್ಲಿ ರೂ.82 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಸರ್ಕಾರ ಯೋಜನೆಗಳನ್ನು ಬರೀ ಚುನಾವಣೆಗಾಗಿ ರೂಪಿಸಿಲ್ಲ, ಜನರ ಕಲ್ಯಾಣಕ್ಕಾಗಿ ಅನುಷ್ಟಾನ ಮಾಡುತ್ತಿದೆ.

ಉಳುವವನೇ ಭೂ ಒಡೆಯ, ಪದವೀಧರರಿಗೆ ಸ್ಟೈಫಂಡ್, ಸಿಇಟಿ ಮೂಲಕ ಉನ್ನತ ವ್ಯಾಸಂಗಕ್ಕೆ ಆಯ್ಕೆ, ರೈತರಿಗೆ ಉಚಿತ ವಿದ್ಯುತ್, ಬೆಂಗಳೂರು ಐಟಿ, ಬಿಟಿ ನಗರವನ್ನಾಗಿ ಅಭಿವೃದ್ದಿ, ಕಳೆದ ಸರ್ಕಾರದ ಅವಧಿಯಲ್ಲಿ ನೀಡಿದ 165 ಭರವಸೆಗಳಲ್ಲಿ ಎಲ್ಲವನ್ನು ಈಡೇರಿಸಲಾಗಿದೆ. ಈಗ ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಟಾನ ಮಾಡಿದ್ದು ಈ ಯೋಜನೆಗಳು ಮನೆ ಮಾತಾಗಿವೆ ಎಂದರು.

ಹಿಂದೆ ಗುಜರಾತ್ ಮಾದರಿ ಎಂದು ಹೇಳಲಾಗುತ್ತಿತ್ತು, ಆದರೆ ಈಗ ಕರ್ನಾಟಕ ಮಾದರಿ ಎಂದು ಹೇಳುವಂತಾಗಿದ್ದು ಅನೇಕ ರಾಜ್ಯಗಳು ನಮ್ಮ ಪಂಚ ಗ್ಯಾರಂಟಿಗಳನ್ನು ಅನುಕರಣೆ ಮಾಡುವ ನಿಟ್ಟಿನಲ್ಲಿ ಸಾಗಿವೆ. ಪಂಚ ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 450 ಕೋಟಿಯಷ್ಟು ಮಹಿಳೆಯರು ಎಲ್ಲಾ ಜಿಲ್ಲೆಗಳಿಂದ ಪ್ರಯಾಣಿಸಿದ್ದು ಇದಕ್ಕಾಗಿ ರೂ.11188 ಕೋಟಿ ವೆಚ್ಚ ಭರಿಸಲಾಗಿದೆ.

ಅನ್ನಭಾಗ್ಯ ಯೋಜನೆಯಡಿ ಕಾರ್ಡ್‍ದಾರರಿಗೆ ರೂ.11821 ಕೋಟಿ, ಗೃಹಜ್ಯೋತಿಯಡಿ 1.63 ಕೋಟಿ ಕುಟುಂಬಗಳಿಗೆ ರೂ.14950 ಕೋಟಿ, ಗೃಹಲಕ್ಷ್ಮಿಯಡಿ 1.22 ಕೋಟಿ ಯಜಮಾನಿಯರಿಗೆ ರೂ.42552 ಕೋಟಿ ಮತ್ತು ಯುವನಿಧಿಯಡಿ 2.74 ಲಕ್ಷ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ ರೂ.326.95 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದ್ದು ಪಂಚ ಗ್ಯಾರಂಟಿ ಯೋಜನೆಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ರೂ.82000 ಕೋಟಿಯಷ್ಟು ವೆಚ್ಚ ಮಾಡಲಾಗಿದೆ. ಇದರಿಂದ ಮಹಿಳೆಯರ ಆದಾಯ ಹೆಚ್ಚಳವಾಗಿ ಕೊಡು, ಕೊಳ್ಳುವಿಕೆ ಸಾಮಥ್ರ್ಯ ಹೆಚ್ಚಿದೆ. ಯಾವುದೇ ಕಾರಣಕ್ಕೂ ಈ ಯೋಜನೆಗಳು ನಿಲ್ಲುವುದಿಲ್ಲ ಎಂದರು.

ಮಾಯಕೊಂಡ ಕ್ಷೇತ್ರದ ಶಾಸಕ ಕೆ,ಎಸ್.ಬಸವಂತಪ್ಪ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರಜೆಗಳ ಹಿತಕ್ಕಾಗಿ ಜಾರಿಗೊಳಿಸಲಾಗಿದ್ದು, ನಿರಂತರ 2 ವರ್ಷಗಳಿಂದ ಈ ಯೋಜನೆಯ ನೀಡುತ್ತಾ ಬಂದಿದೆ. ಇಂತಹ ಯೋಜನೆಗಳನ್ನು ಅರ್ಹ ಫಲಾನುಭವಿಗೆ ತಲುಪಿಸುವ ಸಲುವಾಗಿ ಗ್ಯಾರಂಟಿ ಯೋಜನಾ ಸಮಿತಿ ಸ್ಥಾಪಿಸಲಾಗಿದೆ. ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆಯಡಿ ನೀಡುವ ಹಣವನ್ನು ಯಾವುದೇ ಬ್ಯಾಂಕ್‍ಗಳು ಇತರೆ ಸಾಲಗಳಿಗೆ ಜಮಾ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಕ್ರಮ ವಹಿಸಬೇಕೆಂದರು.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಗ್ಯಾರಂಟಿ ಅನುಷ್ಠಾನ ಸಮತಿಯಿಂದ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡಲಾಗುತ್ತದೆ. ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಿಂದ ಬಡವರು, ಮಧ್ಯಮ ವರ್ಗದ ಪ್ರತಿ ಕುಟುಂಬವೂ ಪ್ರೀತಿ, ಸಹಬಾಳ್ವೆ, ಸಾಮರಸ್ಯದಿಂದ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ. ಜಿ.ಎಂ.ಗಂಗಾಧರಸ್ವಾಮಿ, ಜಿ.ಪಂ. ಸಿಇಓ ಸುರೇಶ್ ಬಿ.ಇಟ್ನಾಳ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಶಾಮನೂರು ಟಿ. ಬಸವರಾಜ್, ದೂಡ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ರಾಜ್ಯ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ಮಾಜಿ ಮೇಯರ್ ಚಮನ್ ಸಾಬ್, ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಉಪಾಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

Published

on

ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು

Published

on

ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.

ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.

ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending