Connect with us

ದಿನದ ಸುದ್ದಿ

ಹಲವು ವರ್ಷಗಳ ಬಳಿಕ ಕಾಂಗ್ರೆಸ್ ಗೆ ಅತಿ ಹೆಚ್ಚು ಸ್ಥಾನ ; ಯಾವ ವರ್ಷಗಳಲ್ಲಿ ಎಷ್ಟು..?

Published

on

ಸುದ್ದಿದಿನ ಬೆಂಗಳೂರು : ಹಲವು ವರ್ಷಗಳ ಬಳಿಕ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ಹುಮ್ಮಸ್ಸು ಪಡೆದಿದೆ.

1989ರಲ್ಲಿ 178ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಭರ್ಜರಿ ದಾಖಲೆ ಮಾಡಿತ್ತು. ನಂತರ1999 ರಲ್ಲಿ 132 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 2013ರಲ್ಲಿ 122 ಕ್ಷೇತ್ರಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಗಳಿಸಿತ್ತಾದರೂ ಈ ಬಾರಿಯ ಫಲಿತಾಂಶದಲ್ಲಿ 135 ಸ್ಧಾನಗಳಲ್ಲಿ ಗೆಲುವು ಸಾಧಿಸಿರುವುದರಿಂದ ಪಕ್ಷದಲ್ಲಿ ಸಂಭ್ರಮ ಮನೆಮಾಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಕತೆ | ಒಂದು ಸದ್ದಿಲ್ಲದ ಕ್ರಾಂತಿ

Published

on

ಡಾ||.ಮಿರ್ಜಾ ಬಶೀರ್, ತುಮಕೂರು

ಊರಲ್ಲಿ ಕಾಲೇಜು ಪ್ರಾರಂಭವಾಗಿ ಪಿಯುಸಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳತೊಡಗಿದ್ದು ಕೇಳಿ ಅತ್ಯಂತ ಹೆಚ್ಚು ಖುಷಿಯಾಗಿದ್ದು, ಎಸ್‌ಎಸ್‌ಎಲ್‌ಸಿ ಪಾಸಾಗಿ, ಶಿಕ್ಷಣ ಮುಂದುವರಿಸಲಾಗದೆ ಮೂಲೆ ಸೇರಿದ್ದ ಮುಸ್ಲಿಂ ಹುಡುಗಿಯರಿಗೆ. ಹಿಂದು ಹುಡುಗಿಯರು ಕಾಲೇಜು ಇರುವ ನಗರಗಳಲ್ಲಿ ಹಾಸ್ಟೆಲ್‌ಗಳ ಸೇರಿ ಅಥವಾ ನೆಂಟರಿಷ್ಠರುಗಳ ಮನೆ ಸೇರಿ ಶಿಕ್ಷಣ ಮುಂದುವರೆಸುತ್ತಿದ್ದರು. ಮುಸ್ಲಿಂ ಹುಡುಗರಿಗೆ ಹಾಸ್ಟೆಲ್‌ಗಳಿರುತ್ತಿದ್ದವು ಅಥವಾ ಬಾಡಿಗೆ ರೂಮುಗಳಲ್ಲಿದ್ದು ಓದುತ್ತಿದ್ದರು. ಆದರೆ ಹುಡುಗಿಯರಿಗೆ ಹಾಸ್ಟೆಲ್‌ಗಳಿರಲಿಲ್ಲ. ಯಾರಾದರೂ ನೆಂಟರಿಷ್ಠರ ಮನೆಯಲ್ಲಿ ಹರೆಯದ ಮಗಳನ್ನು ಬಿಡುವುದು ಸಂಪ್ರದಾಯಸ್ಥ ಮುಸ್ಲಿಮರಿಗೆ ಒಪ್ಪಿಗೆಯಾಗುತ್ತಿರಲಿಲ್ಲ. ಬಾಡಿಗೆ ರೂಮು ಮಾಡಿ ಓದುವುದು ಊಹೆಗೂ ನಿಲುಕದ ಮಾತಾಗಿತ್ತು. ಹೀಗಾಗಿ ಎಸ್‌ಎಸ್‌ಎಲ್‌ಸಿಗೆ ಮುಸ್ಲಿಂ ಹುಡುಗಿಯರ ಶಿಕ್ಷಣ ಖತಂ ಆಗುತ್ತಿತ್ತು. ಅವರು ರ‍್ಯಾಂಕ್ ಬಂದರೂ ಅಷ್ಟೇ ಫೇಲಾದರೂ ಅಷ್ಟೇ. ಊರಿನಲ್ಲಿದ್ದ ಹತ್ತಾರು ಮನೆಗಳ ಶ್ರೀಮಂತ ಮುಸ್ಲಿಮರು ಏನೋ ಒಂದು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಆದರೆ ಅತಿ ಹೆಚ್ಚು ಪ್ರಮಾಣದಲ್ಲಿದ್ದ ಬಡ ಮುಸ್ಲಿಮರದ್ದೇ ಇಕ್ಕಟ್ಟಿನ ಪರಿಸ್ಥಿತಿ. ಓದಲೇಬೇಕೆಂಬ ಅದಮ್ಯ ಆಸೆ ಇಟ್ಟುಕೊಂಡಿದ್ದ ಕೆಲವು ಜಾಣೆಯರು ಮುಸುರೆ ತಿಕ್ಕುತ್ತಾ, ಬೀಡಿ ಕಟ್ಟುತ್ತಾ, ಊದಿನ ಕಡ್ಡಿ ಹೊಸೆಯುತ್ತಾ, ಕಟ್ಟಿದ ಗಂಡನ ಜೊತೆ ಏಗುತ್ತಾ, ಬುರ್ಕಾ ಹೊದ್ದುಕೊಂಡು ಭರವಸೆ ಎಂಬುದನ್ನೇ ಮರೆತು ಕಾಲನೊಡನೆ ಸೆಣಸುತ್ತಿದ್ದರು. ಅವರ ಯಾವತ್ತೂ ಮುಂದಿನ ಬದುಕು ಬುರ್ಖಾದ ಕತ್ತಲಿನಲ್ಲಿ ಕರಗಿ ಹೋಗುತ್ತಿತ್ತು.

ಮುಷ್ತರಿ ಎಂಬ ಬಾಲೆಯು ಎಸ್‌ಎಸ್‌ಎಲ್‌ಸಿಯಲ್ಲಿ ಭರ್ಜರಿ ಅಂಮೇಷ್ಟ್ರದು ಪಾಸಾಗಿ, ಕನ್ನಡದಲ್ಲಿ 125 ಕ್ಕೆ 125 ಅಂಕಗಳ ಪಡೆದು, ಕನ್ನಡದ ಮೇರು ಲೇಖಕರೊಬ್ಬರಿಂದ ಬಹುಮಾನ ಸ್ವೀಕರಿಸಿದ್ದಳು. ಅವಳು ಪಾಸಾದ ವರ್ಷವೇ ಕಾಲೇಜು ಪ್ರಾರಂಭವಾಯಿತು. ಮುಷ್ತರಿಯ ಜೊತೆಗೆ ಪಾಸಾಗಿ ಬಂದು ಪಿಯುಸಿ ಸೇರಿದವಳು ಕೌಸರ್. ಕೌಸರ್ ಪ್ರೈಮರಿ ಉರ್ದು ಶಾಲೆಯ ಉಪಾಧ್ಯಾಯ ರೆಹಮಾನ್ ಮೇಷ್ಟ್ರು ಮಗಳು. ಕೌಸರ್ ಇಂಗ್ಲೀಷ್ ಮತ್ತು ಉರ್ದು ಭಾಷೆಗಳನ್ನು ಓದಿ ಎಸ್‌ಎಸ್‌ಎಲ್‌ಸಿ ಪಾಸಾಗಿದ್ದಳು. ಆದರೆ ಕಾಲೇಜಿನಲ್ಲಿ ಉರ್ದು ಭಾಷಾ ಲೆಕ್ಚರರ್ ಇರಲಿಲ್ಲ. ಅದನ್ನು ತಾನೇ ಓದಿಕೊಳ್ಳುತ್ತೇನೆಂದು ಹೇಳಿ ಪ್ರವೇಶ ಪಡೆದಳು.

ಅದೇ ರೀತಿ ಕಿರಾಣಿ ಅಂಗಡಿ ಅಜೀಜರ ಮಗಳು ಖುರ್ಷಿದ್ ಎಸ್‌ಎಸ್‌ಎಲ್‌ಸಿ ಪಾಸಾಗಿ ಎರಡು ವರ್ಷಗಳಾಗಿದ್ದವು. ಎರಡು ವರ್ಷ ಬೀಡಿ ಕಟ್ಟಿ ಸಾವಿರಾರು ರೂಪಾಯಿ ದುಡಿದು ತಂದೆ ತಾಯಿಗೆ ಆಸರೆಯಾಗಿದ್ದಳು. ಈಗ ಕಾಲೇಜು ಸೇರಿದರೆ ಒಂದು ದುಡಿಮೆಯ ಕೈ ಕಮ್ಮಿಯಾಗುತ್ತದೆ ಎಂದು ಅಜೀಜ್ ರಾಗ ಎಳೆದ. ಆದರೆ ಖುರ್ಷಿದ್ ಬಿಡುವಿನ ವೇಳೆಯಲ್ಲಿ ಬೀಡಿ ಕಟ್ಟುತ್ತೇನೆ ಎಂದ ಮೇಲೆ ಒಪ್ಪಿಗೆ ದೊರೆಯಿತು. ಅದು ಹೊಸತಾಗಿ ಪ್ರಾರಂಭವಾದ ಖಾಸಗಿ ಪದವಿ ಪೂರ್ವ ಕಾಲೇಜಾಗಿತ್ತು. ಅರ್ಜಿ ಹಾಕಿದವರಿಗೆಲ್ಲ ಸೀಟು ಸಿಗುತ್ತಿತ್ತು.

ಫಾತಿಮಾ ಸಹ ಎಸ್‌ಎಸ್‌ಎಲ್‌ಸಿ ಮುಗಿದ ಮೇಲೆ ಎರಡು ವರ್ಷ ಮನೆಯಲ್ಲಿದ್ದು ಕಾಲೇಜು ಪ್ರಾರಂಭವಾಗಿದ್ದಕ್ಕೆ ಖುಷಿಯಿಂದ ಬಂದು ಪಿಯುಸಿಗೆ ಪ್ರವೇಶ ಪಡೆದಿದ್ದಳು. ಅವಳಿಗೆ ಸೈನ್ಸ್ ಓದಬೇಕೆಂದಿತ್ತು. ಆದರೆ ಹೊಸತಾಗಿ ಪ್ರಾರಂಭವಾದ ಕಾಲೇಜಿನಲ್ಲಿ ಕಲಾ ವಿಭಾಗ ಮಾತ್ರವಿತ್ತು. ಆಕೆ ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಬೇರೆ ಮಾರ್ಗವಿಲ್ಲದೆ ಕಲಾ ವಿಭಾಗಕ್ಕೆ ಸೇರಿಕೊಂಡಳು. ಉರ್ದು ಭಾಷೆಯನ್ನು ಸಹ ತಾನೇ ಓದಿಕೊಳ್ಳಬೇಕಾಗಿತ್ತು. ತನ್ನ ಇದುವರೆಗಿನ ಬದುಕಲ್ಲಿ ರಾಜಿ ಮಾಡಿಕೊಂಡು ಅವಳಿಗೆ ಅಭ್ಯಾಸವಾಗಿ ಹೋಗಿತ್ತು.

ಅದೇ ಊರಿನ ಮಸೀದಿಯ ಮೌಜಾನ್ ಸಾಹೇಬರ ಮಗಳು ಸಕೀನಾ, ಚರ್ಮದ ಮಂಡಿ ಕರೀಮ್ ಸಾಹೇಬರ ಮಗಳು ನೂರ್‌ಜಹಾನ್, ಸೈಕಲ್ ಶಾಪ್ ಅಮೀರ್ ಜಾನರ ಮಗಳು ಹಲೀಮಾ, ಬಹಳ ಕಷ್ಟಪಟ್ಟು ಕೊನೆಗೆ ಮಮ್ಮದಿ ಮೇಷ್ಟç ಹತ್ತಿ ಪಾಠ ಹೇಳಿಸಿಕೊಂಡು ಎಸ್‌ಎಸ್‌ಎಲ್‌ಸಿ ಪಾಸಾಗಿದ್ದ ಸಲೀಮಾ ಬಂದು ಪಿಯುಸಿಗೆ ಸೇರಿಕೊಂಡರು. ಅವರಿವರ ಮನೆಯಲ್ಲಿ ಕೆಲಸ ಮಾಡುವ ಅಮೀನಾಬಿಯ ಮೊಮ್ಮಗಳು ಜೀನತ್ ಸಹ ಪಿಯುಸಿ ಸೇರಿದಳು. ಊರಿನಲ್ಲಿ ಕಾಲೇಜು ಪ್ರಾರಂಭವಾಗಿದ್ದು ಜೀನತ್ತಳಿಗೆ ಭಾಗ್ಯದ ಬಾಗಿಲು ತೆರೆದಂತಾಗಿತ್ತು. ಹೀಗೆ ಬಂದು ಸೇರಿದ ಈ ಹೆಣ್ಣುಮಕ್ಕಳೆಲ್ಲ ಬಡತನವನ್ನು ಚೆನ್ನಾಗಿ ಕಂಡವರು ಉಂಡವರು ಆಗಿದ್ದರು. ಶಿಕ್ಷಣ ಪಡೆದು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕೆಂಬುದಷ್ಟೇ ಅಲ್ಲ ತಮ್ಮ ಕುಟುಂಬಕ್ಕೆ ಸಹಾಯ ಮಾಡಬೇಕೆಂಬ ಮಹತ್ವಾಕಾಂಕ್ಷೆ ಉಳ್ಳವರಾಗಿದ್ದರು. ತಮ್ಮ ಗುರಿಯಿಂದ ಯಾವುದೇ ಕಾರಣಕ್ಕೂ ವಿಚಲಿತರಾಗದ ಶಪಥ ತೊಟ್ಟವರಾಗಿದ್ದರು. ನಗರ ಜೀವನದ ಜಂಭ, ದುಂದು ವೆಚ್ಚ, ಉಡಾಫೆ, ಥಳಕು ಬಳಕು ಮುಂತಾದುವುಗಳಿಂದ ದೂರವಾದವರೂ, ಸರಳರೂ, ಭಯಸ್ಥರೂ, ವಿನಯಶೀಲರೂ ಆಗಿದ್ದರು. ಇದರಲ್ಲಿ ಮುಷ್ತರಿಯದ್ದು ಮಾತ್ರ ಆರ್ಥಿಕವಾಗಿ ಸದೃಢವಾಗಿದ್ದು ಮಿಕ್ಕವರು ಯಾವುದೇ ಕ್ಷಣದಲ್ಲಿ ಕಾಲೇಜು ಬಿಟ್ಟು ಮನೆ ಸೇರುವಂತಿದ್ದರು.

ಈ ಮಕ್ಕಳ ಶಿಕ್ಷಣ ಎಂಬುದು ಮನೆಯ ಆರ್ಥಿಕ ಪರಿಸ್ಥಿತಿ, ಮನೆಯ ಯಜಮಾನನ ಕುಡಿತ, ಇಸ್ಪೀಟಿನಂಥ ಅಭ್ಯಾಸ, ಮನೆಯವರ ಮೌಢ್ಯ, ಕಾಲ ಕಾಲಕ್ಕೆ ಜಾರಿಯಾಗುವ ಜಮಾತಿನ ನಿರ್ಣಯ ಮುಂತಾದುವುಗಳ ಮೇಲೆ ಅವಲಂಬಿತವಾಗಿರುತ್ತಿತ್ತು. ಇಲ್ಲಿಗೆ ಆರು ತಿಂಗಳ ಕೆಳಗೆ ಜಮಾತಿನವರು ಮುಸ್ಲಿಂ ಮಹಿಳೆಯರಾರೂ ಸಿನಿಮಾಗಳನ್ನು ನೋಡಕೂಡದೆಂದು ಹೊರಡಿಸಿದ್ದ ಆದೇಶದನ್ವಯ ಮಹಿಳೆಯರು ಸಿನಿಮಾ ನೋಡುವುದನ್ನು ಅಂದೇ ಬಿಟ್ಟುಬಿಟ್ಟಿದ್ದರು. ಸೈಕಲ್ ಶಾಪ್‌ನ ಅಮೀರ್ ಜಾನ್ ಕುಡಿಯಲು ಪ್ರಾರಂಭಿಸಿದನೆಂದರೆ ವಾರಗಟ್ಟಲೆ ಕುಡಿಯುತ್ತ ಮನೆ ಸೇರುತ್ತಿರಲಿಲ್ಲ. ಆಗೆಲ್ಲ ಅವನ ಮಗಳಾದ ಹಲೀಮ ತನ್ನ ಅಬ್ಬಾಜಾನನನ್ನು ಊರೆಲ್ಲ ಹುಡುಕಿ ಮನೆಗೆ ಕರೆತರಬೇಕಿತ್ತು. ಆಗೆಲ್ಲ ಅವಳ ಓದು ಬರಹ ಕುಂಟಿತವಾಗುತ್ತಿದ್ದವು. ಕಾಲೇಜಿಗೂ ಗೈರಾಗಬೇಕಾಗುತ್ತಿತ್ತು. ಅಲ್ಲದೆ ಕುಡುಕನ ಮಗಳೆಂದು ಅವಮಾನ ಅನುಭವಿಸಬೇಕಾಗಿತ್ತು. ಅವರಿವರ ಮನೆಯಲ್ಲಿ ಕಸ ಮುಸುರೆ ಕೆಲಸ ಮಾಡುವ ಅಮೀನಾಬಿ ಮನೆಯ ಜೀನತ್ತಳದ್ದು ಸಹ ಅದೇ ಕಥೆಯಾಗಿತ್ತು.

ಇದು ವಿದ್ಯಾರ್ಥಿಗಳ ಲೋಕವಾದರೆ ಹಿರಿಯರ ಲೋಕ ಬೇರೆ ಇತ್ತು. ಅಲ್ಲಿ ಈಗಾಗಲೇ ಅಜಾನ್, ಹಲಾಲ್, ಬೀಫ್, ಲವ್ ಜಿಹಾದ್ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಜಗಳಗಳಾಗಿದ್ದವು. ಹಿಂದೂ ಮುಸ್ಲಿಂ ಮಧ್ಯೆ ಕಂದಕಗಳು ಏರ್ಪಟ್ಟು ಪರಸ್ಪರ ಸಂಶಯಗಳು ಮನೆ ಮಾಡಿದ್ದವು.

ಊರಲ್ಲಿ ಈ ಬಾರಿ ರಂಜಾನ್ ಹಬ್ಬವನ್ನು ಪ್ರತಿ ವರ್ಷಕ್ಕಿನ್ನ ನೇಮ ನಿಷ್ಠೆಯಿಂದಷ್ಟೇ ಅಲ್ಲದೆ ಅದ್ದೂರಿಯಾಗಿ ಆಚರಿಸಬೇಕೆಂದು ಜಮಾತಿನವರು ನಿರ್ಧರಿಸಿದ್ದರು. ಹಬ್ಬವೊಂದೇ ಅಲ್ಲ ರಂಜಾನ್ ತಿಂಗಳಿನ ಮೂವತ್ತು ದಿನಗಳನ್ನೂ ಹೆಚ್ಚಿನ ಭಕ್ತಿಭಾವದಿಂದ ನಡೆದುಕೊಳ್ಳಬೇಕೆಂದು ಮಾತಾಡಿಕೊಂಡಿದ್ದರು. ಊರಿನ ವಾತಾವರಣಕ್ಕನುಗುಣವಾಗಿ ಭಕ್ತಿಗೊಂದು ತುರ್ತು ಬಂದಿತ್ತು. ವೇಗ ಬಂದಿತ್ತು. ಊರಿನ ಅನೇಕರು ಉದಾರವಾಗಿ ಚಂದಾ ನೀಡಿದ್ದರು. ರಂಜಾನ್ ತಿಂಗಳು ಒಂದೆರಡು ವಾರ ಇರುವಂತೆಯೇ ಮಸೀದಿ ಕಟ್ಟಡ, ಸುತ್ತಲಿನ ಅವರಣ ಗೋಡೆ ಮತ್ತು ಈದ್ಗಾಗಳು ದುರಸ್ತಿಗೊಂಡು ಸುಣ್ಣ ಬಣ್ಣ ಕಂಡವು. ಎಲ್ಲಕ್ಕಿನ್ನ ಮುಖ್ಯವಾಗಿ ಪವಿತ್ರ ರಂಜಾನ್ ತಿಂಗಳು ಪೂರ್ತಿ ಊರಿನಲ್ಲಿಯೇ ಉಳಿದು ತಿಂಗಳಿಡೀ ರೋಜಾ, ನಮಾಜುಗಳಲ್ಲಿ ಕಟ್ಟುನಿಟ್ಟು, ಶ್ರದ್ಧಾ ಭಕ್ತಿ ತಂದುಕೊಡಲು, ಇಡೀ ಸಮುದಾಯಕ್ಕೆ ದಾರಿದೀಪವಾಗಿರಲು ಎಲ್ಲಿಂದಾದರೂ ಧರ್ಮಶಾಸ್ತçಗಳನ್ನು ಕರತಲಾಮಲಕ ಮಾಡಿಕೊಂಡಿರುವ ಒಬ್ಬ ಮೌಲಾನಾರನ್ನು ಕರೆತರಲು ನಿರ್ಧರಿಸಿದ್ದರು. ಧಾರ್ಮಿಕ ಆಚಾರ ವಿಚಾರಗಳಲ್ಲಿ ತಾವು ತಿಳಿಯದೇ ಮಾಡುತ್ತಿರಬಹುದಾದ ತಪ್ಪುಗಳನ್ನು ತಿದ್ದಿಕೊಳ್ಳಲು ಇದು ಸುಸಮಯವಾಗುತ್ತದೆ. ತಾವು ಸರಿಯಾಗಿ ನಡೆದುಕೊಳ್ಳುತ್ತಿದ್ದರೂ ಸಹ ಬಲ್ಲವರೊಬ್ಬರ ಮಾರ್ಗದರ್ಶನವಿದ್ದರೆ ಆತ್ಮವಿಶ್ವಾಸದಿಂದ ಅಲ್ಲಾಹುವಿಗೆ ನಡೆದುಕೊಳ್ಳಬಹುದೆಂಬುದು ಎಲ್ಲರ ಅಭಿಪ್ರಾಯವಾಗಿತ್ತು.

ಮೌಲಾನಾರೊಬ್ಬರು ರಂಜಾನ್ ಒಂದು ತಿಂಗಳಿದೆ ಅನ್ನುವಾಗಲೇ ಬಂದಿಳಿದರು. ಹಾಗೆ ಆಗಮಿಸಿದ ಮೌಲಾನಾರವರನ್ನು ಸಕಲ ಮರ್ಯಾದೆಗಳೊಂದಿಗೆ ಒಂದು ತಿಂಗಳಿಗೂ ಹೆಚ್ಚು ಕಾಲ ಊರಲ್ಲಿಯೇ ಇರಿಸಿಕೊಳ್ಳಬೇಕಾಗಿತ್ತು. ಒಂದೊಂದು ಮನೆಯಲ್ಲಿ ಒಂದೊಂದು ದಿನ ಊಟದ ದಾವತ್ ಇರುತ್ತಿತ್ತು. ರಂಜಾನಿನ ರೋಜಾ ದಿನಗಳಳ್ಲಿ ಸಹರ್ ಮತ್ತು ಇಫ್ತರ್‌ಗಳಿಗೆ ಮೌಲಾನರನ್ನು ಆಹ್ವಾನಿಸಲು ಜನರಲ್ಲಿ ಸ್ಪರ್ಧೆಯೇ ಏರ್ಪಡುತ್ತಿತ್ತು.

ಊರಿನಲ್ಲೊಬ್ಬ ಸೂಜಿಗಲ್ಲಿನಂಥ ವ್ಯಕ್ತಿಯಿದ್ದರು. ಅವರೇ ಪ್ರೌಢಶಾಲೆಯಲ್ಲಿ ವಿಜ್ಞಾನದ ಮೇಷ್ಟ್ರಾಗಿದ್ದ ಮಹಮ್ಮದ್ ದಿಲಾವರ್. ಬರೀ ವಿಜ್ಞಾನವಷ್ಟೇ ಅಲ್ಲ ಯಾವ ವಿಷಯವನ್ನು ಕೊಟ್ಟರೂ ಲೀಲಾಜಾಲವಾಗಿ ಪಾಠ ಮಾಡಬಲ್ಲವರಾಗಿದ್ದರು. ಮಮ್ಮದಿ ಮೇಷ್ಟುç ಎಂದೇ ಜನಪ್ರಿಯರಾಗಿದ್ದ ಅವರು ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಅರೇಬಿಕ್ ಭಾಷೆಗಳನ್ನು ಬಲ್ಲವರಾಗಿದ್ದರು. ಪಾಠ ಪ್ರವಚನಗಳ ಜೊತೆ ಶಾಲೆಯ ಆಟದ ಮೈದಾನ ಮತ್ತು ಗ್ರಂಥಾಲಯದಲ್ಲಿ ಅವರೇ ವಿದ್ಯಾರ್ಥಿಗಳ ಮುಂದಾಳು ಮತ್ತು ಗೆಳೆಯರಾಗಿದ್ದರು. ಯಾವುದೇ ವಿದ್ಯಾರ್ಥಿ ಎಷ್ಟೇ ಸಲ ಎಸ್‌ಎಸ್‌ಎಲ್‌ಸಿಯಲ್ಲಿ ಡುಮ್ಕಿ ಹೊಡೆದಿದ್ದರೂ ಮಮ್ಮದಿ ಮೇಷ್ಟ್ರು ಕೈಗೆ ಸಿಕ್ಕನೆಂದರೆ ಒಂದೆರಡು ಪ್ರಯತ್ನಗಳಲ್ಲಿಯೇ ಪಾಸಾಗುತ್ತಿದ್ದ. ಊರಲ್ಲಿದ್ದುದು ಒಂದೇ ಪ್ರೌಢಶಾಲೆಯಾಗಿದ್ದುದರಿಂದ ಊರಿನ ಎಲ್ಲ ವಿದ್ಯಾವಂತ ಯುವಕರೂ ಮಮ್ಮದಿ ಮೇಷ್ಟç ಅಭಿಮಾನಿ ಶಿಷ್ಯರೇ ಆಗಿರುತ್ತಿದ್ದರು.

ಮಮ್ಮದಿ ಮೇಷ್ಟ್ರು ಮನೆಯಲ್ಲಿ ಪಿಯುಸಿ ಓದುತ್ತಿದ್ದ ತಂಗಿ ಮುಷ್ತರಿಯನ್ನು ಬಿಟ್ಟರೆ ಮತ್ತಾರೂ ಇರಲಿಲ್ಲ. ಮೇಷ್ಟುç ಮದುವೆಯ ವಯಸ್ಸಿಗೆ ಬಂದಿದ್ದರೂ ತಂಗಿಯ ಶಿಕ್ಷಣ ಮತ್ತು ಮದುವೆ ಪೂರೈಸದೆ ತಾನು ಮದುವೆಯಾಗುವುದಿಲ್ಲವೆಂದು ಪ್ರಕಟಪಡಿಸಿದ್ದರು. ಎಂದೋ ಕಾಲವಶರಾಗಿದ್ದ ಅಮ್ಮಿ, ಬಾಬಾರ ನೆನಪು ಕಾಡದಂತೆ ತಂಗಿಯನ್ನು ಬೆಳೆಸಿದ್ದರು.

ತನ್ನ ಸಹಪಾಠಿ ಜೀನತ್ತಳ ದಾದಿ ಅಮೀನಾಬಿಯನ್ನು ಮುಷ್ತರಿ ತಾಯಿಯಂತೆ ಕಾಣುತ್ತಿದ್ದಳು. ಐವತ್ತು ವರ್ಷಕ್ಕೂ ಹೆಚ್ಚು ವಯಸ್ಸಾಗಿರುವ ಅಮೀನಾಬಿ ಹತ್ತಾರು ಮನೆಗಳಲ್ಲಿ ಕಸ ಮುಸುರೆಯ ಕೆಲಸ ಮಾಡುತ್ತಿದ್ದಳು. ಒಂದೆರಡು ಮನೆಗಳಲ್ಲಿ ದನದ ಕೊಟ್ಟಿಗೆ ‘ತೊಳಿ ಬಳಿ’ ಕೆಲಸ. ಕೆಲವು ಮನೆಗಳಲ್ಲಿ ಬೇಸಿಗೆಯಲ್ಲಿ ಸಂಡಿಗೆ, ಹಪ್ಪಳ, ಶಾವಿಗೆ ಮಾಡುವುದು, ಚಳಿಗಾಲಕ್ಕೆಂದು ಕೌದಿ, ಸ್ವೆಟರ್ ಹೆಣೆಯುವುದು ಮಾಡುತ್ತಿದ್ದಳು. ಯಾರದಾದರೂ ಮನೆಯಲ್ಲಿ ಹೆರಿಗೆಯಾದರೆ ಅಥವಾ ಸಾವು ನೋವಾದರೆ ಅಮೀನಾಬಿ ಬೇಕೇ ಬೇಕು. ಅವಳು ಹಿಂದು ಮುಸ್ಲಿಂ ಎಂದು ನೋಡುತ್ತಿರಲಿಲ್ಲ. ನೆಂಟರೋ, ಇಷ್ಟರೋ ಎಂದು ನೋಡುತ್ತಿರಲಿಲ್ಲ. ಬಡವ ಶ್ರೀಮಂತ ಎಂದು ನೋಡುತ್ತಿರಲಿಲ್ಲ. ಪರಿಚಿತರು ಅಪರಿಚಿತರು ಎಂದು ನೋಡುತ್ತಿರಲಿಲ್ಲ. ಸಾಬರ ಕೇರಿಯ ಖಾತೂನಮ್ಮ, ಜರೀನಾ, ಮಹಬೂಬಿ, ರಜಿಯ ಮುಂತಾದವರು ಹೇಗೆ ಅಮೀನಾಬಿಯ ಮೇಲೆ ಅವಲಂಬಿತರೋ ಹಾಗೆಯೇ ಹಂಪಮ್ಮ, ಜಯಮ್ಮ, ಲಕ್ಷö್ಮಮ್ಮ, ಪಾರ್ವತಮ್ಮ ಸೈತ ಅವಲಂಬಿತರೇ ಆಗಿದ್ದರು. ಹತ್ತಾರು ಮನೆಯವರು, ಕಛೇರಿ, ಹೊಲ, ಗದ್ದೆ, ತೋಟ, ಅಂಗಡಿಗಳಿಗೆ ಸಮಯಕ್ಕೆ ಸರಿಯಾಗಿ ಹೋಗಿ ಕೆಲಸ ಮಾಡಲು ಅಮೀನಾಬಿ ಬೇಕೇ ಬೇಕು. ಅಮೀನಾಬಿಗೆ ಇಪ್ಪತ್ತು ವರ್ಷ ಆಗುವುದಕ್ಕೆ ಮುಂಚೆಯೇ ಒಬ್ಬ ಮಗನನ್ನು ಕೈಗೆ ಕೊಟ್ಟು ಅವಳ ಗಂಡ ಇಹಲೋಕ ತ್ಯಜಿಸಿದ್ದ. ಅಮೀನಾಬಿ ಅಂದಿನಿAದಲೂ ಯಾರ ಮುಂದೆಯೂ ಕೈಚಾಚದೆ ಬದುಕಿದ್ದಾಳೆ. ಬುರ್ಖಾ, ಹಿಜಾಬುಗಳನ್ನು ಧರಿಸದಿದ್ದರೂ ಮಾನ ಮರ್ಯಾದೆಯಿಂದ ಹಗಲು ರಾತ್ರಿಯೆನ್ನದೆ ದುಡಿದು ಬದುಕಿದ್ದಾಳೆ.

ಅಂಥವಳ ಮಗ ಬಾಬು ಇತ್ತೀಚಿನ ದಿನಗಳಲ್ಲಿ ಕುಡಿತಕ್ಕೆ ದಾಸನಾಗಿ ಮನೆ ಸೇರದಂತಾಗಿದ್ದ. ಬಾಬುನ ಹೆಂಡತಿ ಮಕ್ಕಳನ್ನು ಸಹ ಅಮೀನಾಬಿಯೇ ಸಾಕಬೇಕಾಗಿ ಬಂದಿತ್ತು. ಮೌಲಾನಾರಿಂದ ಮಗನಿಗೆ ಹಿತ ವಚನ ಹೇಳಿಸಿದರೆ ಮಗ ಸರಿದಾರಿಗೆ ಬರಬಹುದು ಮತ್ತು ಅಂಥ ಪುಣ್ಯಾತ್ಮರೆದುರು ಜನರು ತಮ್ಮ ಪಾಪಗಳನ್ನು ತೊಳೆದುಕೊಂಡು ನಿಚ್ಚಳವಾಗುವರೆಂಬುದು ಅಮೀನಾಬಿಯ ನಂಬಿಕೆಯಾಗಿತ್ತು. ಇಂತಹ ಆಸೆಯನ್ನು ಇಟ್ಟುಕೊಂಡು ಮೌಲಾನಾರ ಭೇಟಿಯ ಸಮಯಕ್ಕೆ ಅಮೀನಾಬಿ ಕಾಯುತ್ತಿದ್ದಳು. ಬಡ ಮುದುಕಿಯಾದ ತನಗೆ ಮೌಲಾನಾರು ಸಮಯ ಕೊಡುವರೋ ಇಲ್ಲವೋ ಎಂಬ ತೊಳಲಾಟದಲ್ಲಿದ್ದಳು. ಮೌಲಾನಾರವರು ವಾಸವಿದ್ದ ಕೊಠಡಿಯು ಮಸೀದಿಯ ಕಾಂಪೌAಡಿನೊಳಗಿದ್ದು ಅಲ್ಲಿಗೆ ಹೆಣ್ಣು ಹೆಂಗಸಾದ ಅಮೀನಾಬಿ ಪ್ರವೇಶಿಸುವಂತಿರಲಿಲ್ಲ. ಬಾಬು ಮಾತ್ರ ಸದಾ ಕುಡಿದೇ ಇರುತ್ತಿದ್ದುದರಿಂದ ಅವನನ್ನು ಮೌಲಾನಾರ ಎದುರು ಕರೆತರುವುದು ಅಮೀನಾಬಿಗೆ ಇದುವರೆಗೂ ಸಾಧ್ಯವಾಗಿರಲಿಲ್ಲ.

ರಂಜಾನ್ ತಿಂಗಳು ಪೂರ್ತಿ ಬೆಳಗಿನ ಜಾವ ನಾಲ್ಕು ಗಂಟೆಗೆಲ್ಲ ಎದ್ದು ಮನೆ ಮಂದಿಗೆಲ್ಲ ಅಡಿಗೆ ಮಾಡಿ, ರೋಜಾ ಮಾಡುವವರಿಗೆ ಸಹರ್ ಮಾಡಿಸುವುದು ಮತ್ತು ಸಾಯಂಕಾಲ ಆರು ಏಳರ ಸುಮಾರಿಗೆ ಇಫ್ತಾರ್ ಸಿದ್ಧಪಡಿಸುವುದು ಹೆಣ್ಣುಮಕ್ಕಳ ಜವಾಬ್ದಾರಿಯಾಗಿತ್ತು. ಅಂದರೆ ಹೆಣ್ಣುಮಕ್ಕಳು ದುಡಿದುಡಿದು ಹಣ್ಣಾಗುತ್ತಿದ್ದರು. ರಂಜಾನ್ ಎಂದರೆ ಬರೀ ದಾನದ ಹಬ್ಬ ಮಾತ್ರವಲ್ಲ. ಅದು ಸಂಭ್ರಮದ ಹಬ್ಬ ಮಾತ್ರವಲ್ಲ, ಅದು ಹೆಚ್ಚು ಖರ್ಚು ವೆಚ್ಚದ ಹಬ್ಬವೂ ಆಗಿತ್ತು.

ಹೀಗೆ ಹುಮ್ಮಸ್ಸಿನ ಜೀವಿಗಳಾದ ಮುಷ್ತರಿ, ಕೌಸರ್, ಖುರ್ಷಿದ್, ಫಾತಿಮಾ, ಹಲೀಮಾ, ಸಲೀಮಾ, ಜೀನತ್ ಇವರೆಲ್ಲ ರಂಜಾನ್ ತಿಂಗಳ ಅಡಿಗೆ ಮನೆಯ ಬಿಡುವಿಲ್ಲದ ವೇಳಾಪಟ್ಟಿಯಲ್ಲಿಯೂ ತಮ್ಮ ತಮ್ಮ ಪಾಠಗಳ ಕಡೆ ಗಮನವಿಟ್ಟಿದ್ದರು. ದಿನ ದಿನದ ಪಾಠಗಳನ್ನು ಅಂದAದೇ ಓದಿಕೊಳ್ಳುವುದಲ್ಲದೆ ವಾರದಲ್ಲಿ ಬೋಧಿಸಿದ ವಿಷಯಗಳನ್ನು ಹುಡುಗಿಯರೆಲ್ಲ ಸೇರಿ ಗುಂಪು ಮಾಡಿಕೊಂಡು ಓದುತ್ತಿದ್ದರು. ವರ್ಷಾಂತ್ಯದ ಪರೀಕ್ಷೆ ಬಂದೇ ಬಿಟ್ಟಿತು ಎಂಬ ಧಾವಂತದಲ್ಲಿ ಓದಿದರು. ಬೀಡಿ ಸುತ್ತಿದರು. ಊದಿನ ಕಡ್ಡಿ ಹೊಸೆದರು. ಕಸ ಹೊಡೆದರು. ಮುಸುರೆ ತಿಕ್ಕಿದರು. ಅಡಿಗೆ ಮಾಡಿದರು. ಮನೆಯಲ್ಲಿ ಚಿಕ್ಕ ಪುಟ್ಟ ಮಕ್ಕಳ ಕುಂಡಿ ತೊಳೆದರು. ಬದುಕಿನ ಪ್ರತಿ ಗಳಿಗೆಯೂ ಅಮೂಲ್ಯವೆಂಬAತೆ ಕಾಲವನ್ನು ಜಿಪುಣನಂತೆ ಖರ್ಚು ಮಾಡಿದರು.

ಊರಲ್ಲಿ ಮಮ್ಮದಿ ಮೇಷ್ಟçನ್ನು ಕಂಡರಾಗದವರು ಕೆಲವರಿದ್ದರು. ಮುಸ್ಲಿಂ ವಿದ್ಯಾರ್ಥಿನಿಯರು ಆಟೋಟ ಸ್ಪರ್ಧೆಗಳಲ್ಲಿ ಫ್ರಾಕು, ನಿಕ್ಕರ್ ಹಾಕಿಕೊಂಡು ಆಡುವಂತಿಲ್ಲ ಎಂಬುದು ಕೆಲ ಪೋಷಕರ ತಕರಾರು ಆಗಿತ್ತು. ಮಮ್ಮದಿ ಮೇಷ್ಟೆçà ಮುಂದೆ ನಿಂತು ಕ್ರೀಡಾ ಸ್ಪರ್ಧೆಗಳಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಜಿಲ್ಲಾ ಮಟ್ಟ, ರಾಜ್ಯ ಮಟ್ಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಮೇಷ್ಟç ಒಳ್ಳೆಯತನ ಮತ್ತು ಸಾಧನೆಗಳು ಅವರ ವೈರಿಗಳನ್ನು ಸುಮ್ಮನಾಗಿಸುತ್ತಿತ್ತು. ಅವರ ಶಾಲೆಯ ವಿದ್ಯಾರ್ಥಿನಿಯರ ರಿಲೇ ತಂಡವು ಅದೇ ಸಮಯದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಅಡ್ಡ ಮಾತಾಡುತ್ತಿದ್ದ ಎಲ್ಲರ ಬಾಯಿ ಮುಚ್ಚಿಸಿತ್ತು. ರಿಲೇ ತಂಡದಲ್ಲಿ ಇಬ್ಬರು ಮುಸ್ಲಿಂ ವಿದ್ಯಾರ್ಥಿನಿಯರೂ ಸಹ ಇದ್ದರು. ಎಲ್ಲ ಪತ್ರಿಕೆಗಳಲ್ಲೂ ರಿಲೇ ತಂಡದ ಸುದ್ದಿ ರಾರಾಜಿಸಿತು. ಮುಂದೆ ಕ್ರೀಡಾ ಕೋಟಾದಲ್ಲಿ ಇವರ ಶೈಕ್ಷಣಿಕ ಮತ್ತು ಔದ್ಯೋಗಿಕ ಬದುಕಿಗೆ ಸಹಾಯವಾಗಬಹುದಾದ ಅವಕಾಶವನ್ನು ಮಮ್ಮದಿ ಮೇಷ್ಟುç ವಿವರವಾಗಿ ತಿಳಿಸಿದರು. ಇದೇ ಊರಿನವಳೂ ಮತ್ತು ಮೇಷ್ಟç ಶಿಷ್ಯೆಯೂ ಆಗಿದ್ದ ಮಹಾದೇವಿಯು ರಾಜ್ಯ ಕಬಡ್ಡಿ ಮಹಿಳಾ ತಂಡದ ನಾಯಕಿಯಾಗಿದ್ದರಿಂದ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕೆಲಸ ಕೊಟ್ಟು ಗೌರವಿಸಿದ್ದು ಊರಿನಲ್ಲಿ ಮನೆಮಾತಾಗಿತ್ತು. ಇದರಿಂದ ಜನಸಾಮಾನ್ಯರ ಮನಸ್ಸುಗಳಲ್ಲಿ ಹೊಸ ಕನಸುಗಳು, ಆದರ್ಶಗಳು ಚಿಗುರೊಡೆದವು. ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆಯುವವರಷ್ಟೇ ಅಲ್ಲದೆ ಕಬಡ್ಡಿ ಮಹಾದೇವಿಯಂಥವರು ಸಹ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾದರು.

ಹೀಗೆ ಕಷ್ಟಗಳನ್ನೇ ಸಂಭ್ರಮದ ಹಾದಿ ಮಾಡಿಕೊಂಡಿದ್ದ ಮುಷ್ತರಿ, ಕೌಸರ್ ಮುಂತಾದವರಿಗೆ ಅವರ ಪ್ರಿನ್ಸಿಪಾಲ್ ಒಂದು ದಿನ ಇನ್ನು ಮೇಲೆ ಹಿಜಾಬ್ ಧರಿಸಿ ಕಾಲೇಜಿಗೆ ಬರಕೂಡದು ಮತ್ತು ಹಿಜಾಬ್ ಧರಿಸಿದವರಿಗೆ ಕಾಲೇಜಿನಲ್ಲಿ ಪ್ರವೇಶವಿಲ್ಲ ಎಂದು ಹೇಳಿ ಕಾಲೇಜು ಮುಖ್ಯ ದ್ವಾರಕ್ಕೆ ಅಡ್ಡ ನಿಂತರು. ಮನೆಯ ಕೆಲಸ ಕಾರ್ಯ ಮತ್ತು ತಮ್ಮ ತಮ್ಮ ಓದು ಬರಹಗಳಲ್ಲಿ ಮುಳುಗಿದ್ದ ಹುಡುಗಿಯರಿಗೆ ಕಕ್ಕಾಬಿಕ್ಕಿಯಾಯಿತು. ಅವರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಎಲ್ಲಿಂದಲೋ ಇದ್ದಕ್ಕಿದ್ದಂತೆ ಅಪ್ಪಳಿಸಿದ ಸಿಡಿಲಿನಂತಿತ್ತು ಸನ್ನಿವೇಶ. ಹಿಜಾಬ್ ಅವರು ಸಣ್ಣವರಿದ್ದಾಗಲಿಂದ ತೊಡುತ್ತಿದ್ದ ಉಡುಗೆಯ ಭಾಗವಾಗಿತ್ತು. ಅದೊಂದು ಭಾವನಾತ್ಮಕ ಬಂಧವೂ ಆಗಿತ್ತು. ಅನೇಕರಿಗೆ ಕೂಡಲೇ ಕಣ್ಣೀರು ಬಂದವು. ಅಂದೂ ಸಹ ಎಲ್ಲರು ಹಿಜಾಬು ಧರಿಸಿ ಬಂದಿದ್ದರು. ಅವರು ಆ ಕ್ಷಣದಿಂದ ಕಾಲೇಜಿನ ಒಳಗೆ ಪ್ರವೇಶಿಸುವಂತಿರಲಿಲ್ಲ. ಮನೆಗೆ ವಾಪಸ್ಸು ಹೋಗಬೇಕಿತ್ತು. ಮರುದಿನದಿಂದ ಕಾಲೇಜಿಗೆ ಬರುವ ಗ್ಯಾರಂಟಿ ಇರಲಿಲ್ಲ. ಆ ದಿನ ಎಲ್ಲ ವಿಷಯಗಳ ತರಗತಿಗಳಿದ್ದವು. ಅವೆಲ್ಲವೂ ತಪ್ಪಿ ಹೋಗುತ್ತಿದ್ದವು. ತಬ್ಬಿಬ್ಬಾಗಿದ್ದಂಥ ಹುಡುಗಿಯರು ಏನು ಮಾಡಬೇಕೆಂದು ತಿಳಿಯದೆ ಸ್ವಲ್ಪ ಹೊತ್ತು ಕಾಲೇಜಿನ ಮುಖ್ಯ ದ್ವಾರದ ಹೊರಗೇ ನಿಂತಿದ್ದರು. ಪ್ರಿನ್ಸಿಪಾಲರ ಸಿಟ್ಟು ಇಳಿದ ಮೇಲೆ ಒಳಗೆ ಬಿಡಬಹುದೆಂದುಕೊAಡಿದ್ದರು. ಆದರೆ ಪ್ರಿನ್ಸಿಪಾಲರು ತಮ್ಮ ಬಿಗಿಪಟ್ಟು ಬಿಡಲೇ ಇಲ್ಲ. ಹುಡುಗಿಯರೆಲ್ಲರೂ ತಲೆ ತಗ್ಗಿಸಿಕೊಂಡು ಅವಮಾನದಿಂದ ಕಾಲೇಜಿನಿಂದ ಹೊರಟರು. ಅವರಿಗೆ ತಮ್ಮ ಸ್ವಾತಂತ್ರö್ಯ ಹರಣವಾದಂತಾಗಿತ್ತು. ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು, ಇತರೆ ಸಿಬ್ಬಂದಿ, ದಾರಿಹೋಕರು ನೋಡುತ್ತಿದ್ದರು. ತಮ್ಮನ್ನು ಮಾತ್ರ ಹಿಜಾಬ್ ನೆಪದಲ್ಲಿ ಅನ್ಯಧರ್ಮೀಯರೆಂದು ಹೊರಹಾಕಲ್ಪಟ್ಟಂತಾಗಿತ್ತು. ಬರೀ ಹಿಜಾಬು ತೆಗೆದಿದ್ದರೂ ಅವರಿಗೆ ಪೂರ್ತಿ ಬೆತ್ತಲಾದಂತೆ ಅನಿಸುತ್ತಿತ್ತು. ಜೀವನದಲ್ಲಿ ಇದೇ ಪ್ರಥಮ ಬಾರಿಗೆ ಈ ತರಹದ ಸನ್ನಿವೇಶದಲ್ಲಿ ಸಿಗಿಬಿದ್ದಿದ್ದರು. ಅಷ್ಟೇ ಅಲ್ಲ ಯಾವುದೋ ಕ್ಷÄಲ್ಲಕ ಕಾರಣ ಕೊಟ್ಟು ವಿದ್ಯೆಯನ್ನು ನಿರಾಕರಿಸಿ ಹಿಂದಕ್ಕಟ್ಟಲಾಗಿತ್ತು. ಕೆಲವು ಪತ್ರಿಕೆಗಳು, ಸಾಮಾಜಿಕ ಜಾಲತಾಣ, ರಾಜಕೀಯ ಮುಖಂಡರ ಪ್ರಕಾರ ತಾವೆಲ್ಲರೂ ನುಸುಳುಕೋರರು ಇತ್ಯಾದಿ ನೆನಪಿಗೆ ಬಂತು. ಇವರು ಕಾಲೇಜು ಬಿಟ್ಟು ಹೊರಬರುತ್ತಿದ್ದಾಗ ಅನೇಕ ಹಿಂದು ಸ್ನೇಹಿತರು ಕಣ್ಣೀರು ಮಿಡಿದುದನ್ನು ಇವರು ಗಮನಿಸಿದ್ದರು. ಕೆಲವು ಉಪನ್ಯಾಸಕರು ಸಹ ದುಃಖತಪ್ತರಾಗಿದ್ದರು. ಅಲ್ಲಿಯೇ ಒಂದು ಕ್ಷಣ ಮರದ ನೆರಳಲ್ಲಿ ಮಾತು ಕಳೆದುಕೊಂಡು ಕುಳಿತರು. ಸಾಯಂಕಾಲ ಮಮ್ಮದಿ ಮೇಷ್ಟçಲ್ಲಿ ಸಲಹೆ ಪಡೆಯಲು ನಿರ್ಧರಿಸಿ ಮನೆಗಳತ್ತ ಹೊರಟರು. ಪೋಷಕರು ‘ಹಿಜಾಬು ಬೇಡವೆಂದರೆ ಶಿಕ್ಷಣವೇ ಬೇಡ’ ಎಂದರೇನು ಮಾಡುವುದು ಎಂದು ದಿಗಿಲಿನಿಂದ ಒಬ್ಬರಿಗೊಬ್ಬರು ಪ್ರಶ್ನಿಸಿಕೊಂಡರು.

ಅವರೆಲ್ಲ ಒಟ್ಟು ಹನ್ನೆರಡು ಜನರಿದ್ದರು. ಮಗ್ರೀಬ್ ನಮಾಜಿನ ನಂತರ ಅವರೆಲ್ಲರೂ ಮಮ್ಮದಿ ಮೇಷ್ಟç ಮನೆಗೆ ಹೋದಾಗ ಮೇಷ್ಟುç ಮತ್ತು ಮುಷ್ತರಿ ಮನೆಯಲ್ಲಿಯೇ ಇದ್ದರು. ಅಮೀನಾಬಿ ಮತ್ತು ಮೊಮ್ಮಗಳು ಜೀನತ್ ಅಷ್ಟೊತ್ತಿಗೆ ಬಂದು ಕುಳಿತಿದ್ದರು. ಮೇಷ್ಟಿçಗೆ ಎಲ್ಲ ವಿಷಯ ಗೊತ್ತಿತ್ತು. ಗಾಬರಿ ಬಿದ್ದಿದ್ದ ಹುಡುಗಿಯರಿಗೆ ಗಾಬರಿಯಾಗದಿರಲು ಮತ್ತು ಸೂಕ್ಷö್ಮವಾಗಿ ಈ ಸವಾಲನ್ನು ಎದುರಿಸೋಣ ಎಂದು ಮಾತಿಗಿಳಿದರು.

‘ಹೀಗೆ ಮಾಡಿರಿ. ಕೆಲಸ ಕೈಗೆತ್ತಿಕೊಂಡ ಮೇಲೆ ಅರ್ಧಕ್ಕೆ ಬಿಟ್ಟು ಬರುವಂತಿಲ್ಲ. ನಿಮ್ಮ ಅಬ್ಬ ಅಮ್ಮಿಯರನ್ನು ಒಪ್ಪಿಸಲು ಪ್ರಯತ್ನಿಸಿ. ಮುಖ್ಯ ಏನೆಂದರೆ ನೀವು ಈಗ ಓದುತ್ತಿರುವ ಹಾಗೆ ಮುಂದೆಯೂ ಓದುತ್ತಿರಬೇಕು. ಇವೆಲ್ಲ ಓಟಿಗೆ, ಅಧಿಕಾರಕ್ಕೆ ರಾಜಕಾರಣಿಗಳು ಆಡುತ್ತಿರುವ ಆಟ. ಇವಕ್ಕೆಲ್ಲ ಅರ್ಥವೇ ಇಲ್ಲ. ಹಿಜಾಬನ್ನು ಅಸ್ತç ಮಾಡಿಕೊಂಡಿರುವ ಅಧಾರ್ಮಿಕರಿವರು. ಪ್ರಿನ್ಸಿಪಾಲರು ಸ್ವಂತವಾಗಿ ಆಲೋಚಿಸುವ ವ್ಯಕ್ತಿಯಂತೆ ಕಾಣುತ್ತಿಲ್ಲ. ವಿದ್ಯೆ ಅಂತರAಗಕ್ಕಿಳಿಯದಿದ್ದರೆ ಹೀಗಾಗುತ್ತದೆ. ಇದೇನೂ ಶಾಶ್ವತವಲ್ಲ. ಯಾರದೋ ಹುನ್ನಾರಕ್ಕೆ ನಾವು ಬಲಿಯಾಗಕೂಡದು. ನಾವು ಶಿಕ್ಷಣ ಕೈಬಿಟ್ಟರೆ ನಮಗೇ ನಷ್ಟ’ ಮುಂತಾಗಿ ಮಮ್ಮದಿ ಮೇಷ್ಟುç ಏನು ಮಾಡಬೇಕೆಂದು ಎರಡು ಸಲ ಗುಟ್ಟಾಗಿ ವಿವರಿಸಿದರು.

ಅದೇ ಸಮಯದಲ್ಲಿ ಅಲ್ಲಿದ್ದ ಅಮೀನಾಬಿ ‘ನೋಡ್ರಮ್ಮ, ಎಷ್ಟು ಚೆನ್ನಾಗಿ ಹೇಳ್ತಾರೆ ಮೇಷ್ಟುç! ಓದಬೇಕ್ರಮ್ಮ ಇಲ್ಲಾಂದ್ರೆ ನನ್ನಂತೆ ಕೊನೆತನಕ ಕಸ ಮುಸ್ರೆ ಬಾಚ್ಕೊಂಡು ಸಾಯಬೇಕಾಗುತ್ತೆ. ನಮ್ಮ ವಿದ್ಯೆಯೇ ನಮ್ಮನ್ನು ಸಾಕ್ಬೇಕು. ಎಲ್ಲವ್ದುಕ್ಕೂ ಗಂಡಸ್ರ ಮೇಲೆ ಡಿಪೆಂಡ್ ಆಗ್ಬರ‍್ದು’ ಎಂದು ನುಡಿದಳು. ಓದೋ ಹುಡುಗೀರ ಜೊತೆ ಮಾತಾಡಿ ಅಮೀನಾಬಿ ಕೆಲವು ಇಂಗ್ಲೀಷ್ ಪದಗಳನ್ನು ಬಳಸುತ್ತಿದ್ದಳು.

ಮರುದಿನ ಎಲ್ಲ ವಿದ್ಯಾರ್ಥಿನಿಯರು ದಿನವೂ ಹೊರಟಂತೆ ಹಿಜಾಬ್ ಧರಿಸಿ ಕಾಲೇಜಿಗೆ ಹೊರಟರು. ಏನೂ ಗೊತ್ತಿಲ್ಲದ ಪೋಷಕರು ಪ್ರತಿ ದಿನದಂತೆ ಟಾಟಾ ಹೇಳಿ ಮಕ್ಕಳನ್ನು ಕಳಿಸಿಕೊಟ್ಟರು. ಹುಡುಗಿಯರು ಕಾಲೇಜಿನ ಮುಖ್ಯದ್ವಾರ ಪ್ರವೇಶಿಸುವಾಗ ಹಿಜಾಬನ್ನು ತೆಗೆದು ತಮ್ಮ ಪುಸ್ತಕದ ಚೀಲದಲ್ಲಿ ಇಟ್ಟುಕೊಂಡರು. ಗೇಟಿನ ಬಳಿ ಪ್ರಿನ್ಸಿಪಾಲರು ಕ್ಯಾತೆ ಮಾಡಲು ಕಾರಣ ಇಲ್ಲದೆ ಸುಮ್ಮನೆ ನಿಂತಿದ್ದರು. ಕಾಲೇಜಿಗೆ ಒಳ್ಳೆಯ ಹೆಸರು ತರಲಿರುವ ಈ ವಿದ್ಯಾರ್ಥಿನಿಯರ ಬಗ್ಗೆ ಎಲ್ಲ ಉಪನ್ಯಾಸಕರು ಪ್ರಿನ್ಸಿಪಾಲರಿಗೆ ತಿಳಿಸಿದ್ದರೆಂದು ಕಾಣುತ್ತದೆ. ಸಂಜೆ ವಾಪಸ್ಸು ಬರುವಾಗ ಕಾಲೇಜಿನಿಂದ ಹೊರ ಬಂದ ಕೂಡಲೇ ಹುಡುಗಿಯರು ಹಿಜಾಬ್ ಧರಿಸಿ ಮನೆಗೆ ಹಿಂತಿರುಗಿದರು. ಮನೆ ಸೇರಿದ ಮೇಲೆ ಅಬ್ಬ ಅಮ್ಮಿಯರಿಗೆ ನಡೆದ ವಿಷಯ ತಿಳಿಸಿದರು. ಅವರು ಅಬ್ಬ ಅಮ್ಮಿಯರನ್ನು ಒಪ್ಪಿಸಿದರು. ಮನೆಯ ಹಿರಿಯರನ್ನು ಒಪ್ಪಿಸಿದರು. ತಪ್ಪಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡರು. ಹುಡುಗಿಯರ ಏಕಾಗ್ರತೆ, ಛಲ ನೋಡಿ ಹಿರಿಯರು ಮೌನ ವಹಿಸಿದರು. ‘ತರಗತಿಯಲ್ಲಿರುವ ತನಕ ನಾವು ಮನೆಯಲ್ಲಿರುವಂತೆ ಹಿಜಾಬು ತೆಗೆದಿರಬಹುದು ಆದರೆ ಅದು ನಮ್ಮ ನಡತೆಯ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ನಮ್ಮ ಮನಸಿನ ವಜ್ರ ಕವಚದ ಮುಂದೆ ಈ ಹಿಜಾಬು ಇದ್ದರೇನು ಬಿಟ್ಟರೇನು?’ ಎಂದು ನುಡಿದರು. ಮಕ್ಕಳ ಕಣ್ಣಿನಲ್ಲಿನ ಮೊನಚು, ಅವರ ಧ್ವನಿಯ ದೃಢತೆಯು ಎದುರಿದ್ದವರನ್ನು ಆತ್ಮಪರೀಕ್ಷೆಗೊಳಪಡಿಸಿತು. ಅಪ್ಪ ಅಮ್ಮಂದಿರು ಅಂತರ್ಮುಖಿಗಳಾದರು. ಎಳೆಯ ಮಕ್ಕಳ ಕನಸನ್ನು ಹೊಸಕಿ ಹಾಕಲು ಅವರ ಮನಸ್ಸು ನಿರಾಕರಿಸಿತು.
ಎಳೆಯರೂ, ಅನಾಮಿಕರೂ, ಗೊತ್ತು ಗುರಿಯಿಲ್ಲದ ಮಕ್ಕಳು ಸವಾಲು ಗೆದ್ದು ನಿಂತಿದ್ದರು.
ಮಮ್ಮದಿ ಮೇಷ್ಟ್ರು ತಮ್ಮ ಶಿಷ್ಯೆಯರತ್ತ ನೋಡಿ ಕಣ್ಣು ಮಿಟುಕಿಸಿದ್ದು ಗೆಲುವನ್ನಲ್ಲದೆ ಅನೇಕ ಅರ್ಥಗಳನ್ನು ಬಿತ್ತರಿಸುತ್ತಿತ್ತು.

* * * * * *

ಕತೆಗಾರರ ಪರಿಚಯಾತ್ಮಕ ನುಡಿ

ಕನ್ನಡ ಕಥಾಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಕಥನಶೈಲಿ, ಜೀವನಾನುಭವದ ಸೂಕ್ಷ್ಮ ಗ್ರಹಿಕೆ ಮತ್ತು ಮಾನವೀಯ LPP ಸಂವೇದನೆಗಳ ಮೂಲಕ ಗಮನ ಸೆಳೆದಿರುವ ಪ್ರಮುಖ ಕಥೆಗಾರರಲ್ಲಿ ಡಾ. ಮಿರ್ಜಾ ಬಷೀರ್ ಅವರೂ ಒಬ್ಬರು. ತುಮಕೂರು ನಿವಾಸಿಯಾಗಿರುವ ಇವರು, ವೃತ್ತಿಯಿಂದ ಪಶುವೈದ್ಯರು; ಪ್ರವೃತ್ತಿಯಿಂದ ಸೃಜನಶೀಲ ಕಥೆಗಾರರು. ವೃತ್ತಿಜೀವನದಲ್ಲಿ ಕಂಡುಂಡ ಅನುಭವಗಳು, ಸಮಾಜದ ವಿವಿಧ ಸ್ತರಗಳ ಬದುಕು, ಮನುಷ್ಯ ಸಂಬಂಧಗಳ ಸಂಕೀರ್ಣತೆ ಹಾಗೂ ಜೀವಜಗತ್ತಿನ ಸೂಕ್ಷ್ಮ ಸಂಗತಿಗಳು ಇವರ ಸಾಹಿತ್ಯದ ವಸ್ತುಗಳಾಗಿ ರೂಪುಗೊಂಡಿವೆ.

ಇದುವರೆಗೆ ‘ಬಟ್ಟೆಯಿಲ್ಲದ ಊರಿನಲ್ಲಿ’ (2013), ‘ಜಿನ್ನಿ’ (2016), ‘ಹಾರುವ ಹಕ್ಕಿ ಮತ್ತು ಇರುವೆ’ (2020) ಹಾಗೂ ‘ಅಬ್ರಕಡಬ್ರ’ (2023) ಎಂಬ ನಾಲ್ಕು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ, ತಮ್ಮ ಪಶುವೈದ್ಯ ವೃತ್ತಿಯ ಅನುಭವಗಳನ್ನು ಆಧರಿಸಿದ ‘ಗಂಗೆ ಬಾರೆ ಗೌರಿ ಬಾರೆ’ (2022) ಎಂಬ ಅನುಭವ ಕಥನವನ್ನೂ ಹೊರತಂದಿದ್ದಾರೆ. ಇವರ ಕಥೆಗಳು ಪ್ರಜಾವಾಣಿ, ಮಯೂರ, ಸುಧಾ, ಹೊಸತು, ಸಮಾಜಮುಖಿ ಸೇರಿದಂತೆ ನಾಡಿನ ಹಲವು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೂರು ಬಾರಿ, ಕನ್ನಡಪ್ರಭದ ಸಂಕ್ರಾಂತಿ ಕಥಾಸ್ಪರ್ಧೆಯಲ್ಲಿ ಒಂದು ಬಾರಿ ಹಾಗೂ ಸಮಾಜಮುಖಿಯ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಎರಡು ಬಾರಿ ಬಹುಮಾನ ಪಡೆದಿರುವುದು ಇವರ ಕಥನ ಪ್ರತಿಭೆಗೆ ಸಾಕ್ಷಿಯಾಗಿದೆ.

ಮಿರ್ಜಾ ಬಷೀರ್ ಅವರ ಸಾಹಿತ್ಯದ ಮಹತ್ವಕ್ಕೆ ಮತ್ತೊಂದು ಸಾಕ್ಷಿ ಎಂದರೆ, ಇವರ ಕಥೆಗಳು ಹಲವು ವಿಶ್ವವಿದ್ಯಾಲಯಗಳ ಪದವಿ ತರಗತಿಗಳ ಪಠ್ಯಗಳಲ್ಲಿ ಸ್ಥಾನ ಪಡೆದಿರುವುದು. ಇವರ ‘ತಬ್ಬಲಿಗಳು’ ನಾಟಕವು ಕೃಷಿ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಪದವಿ ತರಗತಿಗೆ ಪಠ್ಯವಾಗಿದೆ. ಅಲ್ಲದೆ, ಇವರ ಕಥೆಗಳು ಕೇರಳ ರಾಜ್ಯದ ಒಂಬತ್ತನೇ ತರಗತಿಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಪಠ್ಯದಲ್ಲಿಯೂ ಸೇರ್ಪಡೆಯಾಗಿವೆ. ಕೆಲವು ಕಥೆಗಳು ತೆಲುಗು ಭಾಷೆಗೂ ಅನುವಾದಗೊಂಡಿವೆ. ಇದು ಇವರ ಸಾಹಿತ್ಯದ ಭಾಷಿಕ ಹಾಗೂ ಭೌಗೋಳಿಕ ವ್ಯಾಪ್ತಿಯನ್ನು ಸೂಚಿಸುತ್ತದೆ.

ಇವರ ‘ಜಿನ್ನಿ’ ಕಥಾಸಂಕಲನಕ್ಕೆ 2017ರಲ್ಲಿ ಲಂಕೇಶ್ ಪ್ರಶಸ್ತಿ ಹಾಗೂ ಕೆ. ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ ಲಭಿಸಿವೆ. ‘ಹಾರುವ ಹಕ್ಕಿ ಮತ್ತು ಇರುವೆ’ ಕೃತಿಗೆ 2020ರಲ್ಲಿ ಸ್ವಾಭಿಮಾನಿ ಕರ್ನಾಟಕದ ವಾರ್ಷಿಕ ಕಥಾಸಂಕಲನ ಪ್ರಶಸ್ತಿ ಮತ್ತು ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿಗಳು ಸಂದಿವೆ. ‘ಗಂಗೆ ಬಾರೆ ಗೌರಿ ಬಾರೆ’ ಕೃತಿಗೆ 2023ರಲ್ಲಿ ‘ಅಮ್ಮ’ ಪ್ರಶಸ್ತಿ ದೊರೆತಿದೆ. 2024ರ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಮುಸ್ಲಿಂ ಲೇಖಕರ ಸಂಘದ ಪ್ರಶಸ್ತಿಯೂ ಇವರಿಗೆ ಲಭಿಸಿವೆ. 2025ರಲ್ಲಿ ಪರಸ್ಪರ ಸಾಹಿತ್ಯ ವೇದಿಕೆ, ಸಾಗರದಿಂದ ‘ಸಂತ ಶಿಶುನಾಳ ಷರೀಫ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೃತ್ತಿ ಮತ್ತು ಪ್ರವೃತ್ತಿಗಳ ನಡುವಿನ ಅಂತರವನ್ನು ಸೃಜನಶೀಲತೆಯ ಮೂಲಕ ಅಳಿಸಿಹಾಕಿರುವ ಡಾ. ಮಿರ್ಜಾ ಬಷೀರ್, ತಮ್ಮ ಕಥೆಗಳ ಮೂಲಕ ಬದುಕಿನ ಅನೇಕ ಮಗ್ಗುಲುಗಳನ್ನು ಅನಾವರಣಗೊಳಿಸುತ್ತಿರುವ ಸಂವೇದನಾಶೀಲ ಲೇಖಕರು. ಪ್ರಶಸ್ತಿ-ಪುರಸ್ಕಾರಗಳಾಚೆಗೂ ಓದುಗರ ಮನಸ್ಸಿನಲ್ಲಿ ತಮ್ಮ ಸಾಹಿತ್ಯದ ಮೂಲಕ ನೆಲೆ ಕಂಡುಕೊಂಡಿರುವ ಇವರ ಸೃಜನಶೀಲ ಪಯಣ ಕನ್ನಡ ಕಥಾಲೋಕಕ್ಕೆ ಮಹತ್ವದ ಕೊಡುಗೆಯಾಗಿದೆ.

Continue Reading

ಅಂತರಂಗ

ಕನ್ನಡ ಕಾವ್ಯಲೋಕದ ವಿಶಿಷ್ಟ ಧ್ವನಿ ಸ. ಉಷಾ ಇನ್ನಿಲ್ಲ

Published

on

ಸುದ್ದಿದಿನ ಡೆಸ್ಕ್ :ಹಿರಿಯ ಲೇಖಕಿ ಸ.ಉಷಾ ಅವರು ಅನಾರೋಗ್ಯದಿಂದ ಶನಿವಾರ ರಾತ್ರಿ (ನವೆಂಬರ್ 28 ರಂದು ಎಂಟೂವರೆ‌ ಹೊತ್ತಿಗೆ ) ಬೆಂಗಳೂರಿನಲ್ಲಿ ನಿಧನರಾದರು.ಅವರಿಗೆ 72 ವರ್ಷ ವಯಸ್ಸಾಗಿತ್ತು.ಅವರ ಅಂತ್ಯಕ್ರಿಯೆ ಭಾನುವಾರ (ನವೆಂಬರ್ 29) ಮಧ್ಯಾಹ್ನ ಬೆಂಗಳೂರಿನ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಆಪ್ತ ವಲಯ ತಿಳಿಸಿದೆ.

ಕನ್ನಡದ ಹಿರಿಯ ಕವಯತ್ರಿ, ವಿಮರ್ಶಕಿ ಹಾಗೂ ಪ್ರಾಧ್ಯಾಪಕಿ ಸ. ಉಷಾ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಮಹತ್ವದ ಕೊಂಡಿಯೊಂದು ಕಳಚಿದಂತಾಗಿದೆ. ತಮ್ಮ ವಿಶಿಷ್ಟ ಕಾವ್ಯಾಭಿವ್ಯಕ್ತಿ, ವೈಚಾರಿಕ ನಿಲುವು ಹಾಗೂ ಸಾಮಾಜಿಕ ಸಂವೇದನೆಗಳಿಂದ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಸಂಪಾದಿಸಿದ್ದ ಅವರು, ಮಹಿಳಾ ಕಾವ್ಯದ ದಿಟ್ಟ ಹಾಗೂ ಪರಿಪಕ್ವ ಧ್ವನಿಯಾಗಿ ಗುರುತಿಸಿಕೊಂಡಿದ್ದರು.

ಮೈಸೂರಿನಲ್ಲಿ 1954ರ ಏಪ್ರಿಲ್ 5ರಂದು ಜನಿಸಿದ ಸ. ಉಷಾ ಅವರು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಅವರು, ಬೋಧನೆಯ ಜೊತೆಗೆ ಸಾಹಿತ್ಯ ಸೃಜನಶೀಲತೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಕವಿತೆಗಳನ್ನು ಬರೆಯಲು ಆರಂಭಿಸಿದ್ದರು.

ಅವರ ಮೊದಲ ಕವನ ಸಂಕಲನ ತೊಗಲುಗೊಂಬೆಯ ಆತ್ಮಕಥೆ ಕನ್ನಡ ಕಾವ್ಯಲೋಕದಲ್ಲಿ ಗಮನ ಸೆಳೆದ ಕೃತಿಯಾಗಿದೆ. ನಂತರ ಈ ನೆಲದ ಹಾಡು, ಹವಳ ಹಾರಿದ ಹೊತ್ತು, ಕಸೂತಿ ಮೊದಲಾದ ಕವನ ಸಂಕಲನಗಳ ಮೂಲಕ ತಮ್ಮದೇ ಆದ ಕಾವ್ಯಲೋಕವನ್ನು ಕಟ್ಟಿಕೊಂಡರು. ವೈದೇಹಿ ಅವರ ಸಾಹಿತ್ಯದ ಕುರಿತು ವಿಮರ್ಶಾ ಬರಹಗಳನ್ನೂ ರಚಿಸಿದ್ದರು.

ಅವರ ಕವಿತೆಗಳಲ್ಲಿ ಹೆಣ್ಣಿನ ಅಂತರಂಗ, ಸಾಮಾಜಿಕ ಅಸಮಾನತೆ, ಶೋಷಣೆ, ಮಾನವೀಯ ಸಂಬಂಧಗಳು ಹಾಗೂ ಬದುಕಿನ ಸೂಕ್ಷ್ಮ ಸಂವೇದನೆಗಳು ಅಭಿವ್ಯಕ್ತಿಗೊಂಡಿವೆ. ಅನುಭವ, ಕಲ್ಪನೆ ಮತ್ತು ವೈಚಾರಿಕತೆಯ ಸಮನ್ವಯ ಅವರ ಕಾವ್ಯದ ಪ್ರಮುಖ ಲಕ್ಷಣವಾಗಿತ್ತು. ಮಹಿಳೆಯರ ಬದುಕಿನ ತಲ್ಲಣಗಳನ್ನು ಕೇವಲ ಭಾವನಾತ್ಮಕವಾಗಿ ಕಟ್ಟಿಕೊಡದೆ, ಸಾಮಾಜಿಕ ಪ್ರಜ್ಞೆಯ ನೆಲೆಯಲ್ಲಿ ವಿಶ್ಲೇಷಿಸುವ ಮೂಲಕ ತಮ್ಮ ಕಾವ್ಯಕ್ಕೆ ವಿಭಿನ್ನ ಆಯಾಮ ನೀಡಿದ್ದರು. ಅವರ ಕವಿತೆಗಳು ಇಂಗ್ಲಿಷ್, ಹಿಂದಿ, ಬೆಂಗಾಲಿ ಹಾಗೂ ಮಲಯಾಳಂ ಭಾಷೆಗಳಿಗೂ ಅನುವಾದಗೊಂಡಿವೆ.

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಅವರಿಗೆ ವರ್ಧಮಾನ ಉದಯೋನ್ಮುಖ ಲೇಖಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ 2017ನೇ ಸಾಲಿನ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿದ್ದವು.

ಕವಯತ್ರಿಯಾಗಿ, ವಿಮರ್ಶಕಿಯಾಗಿ, ಅಧ್ಯಾಪಕಿಯಾಗಿ ಹಲವು ತಲೆಮಾರುಗಳ ಸಾಹಿತ್ಯಾಸಕ್ತರಿಗೆ ಪ್ರೇರಣೆಯಾಗಿದ್ದ ಸ. ಉಷಾ ಅವರ ಅಗಲಿಕೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾಹಿತ್ಯ ಕೃತಿಗಳು ಹಾಗೂ ವೈಚಾರಿಕ ಬರಹಗಳು ಕನ್ನಡ ಓದುಗರ ನಡುವೆ ಸದಾ ಜೀವಂತವಾಗಿರಲಿವೆ.

ಸಾಹಿತ್ಯದ ಮೂಲಕ ಬದುಕಿನ ನೋವು, ನಲಿವು ಮತ್ತು ಸಂಘರ್ಷಗಳಿಗೆ ಧ್ವನಿಯಾದ ಸ. ಉಷಾ ಅವರ ನೆನಪು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ, ಭ್ರಷ್ಟಾಚಾರ ಕಂಡುಬಂದರೆ ಕ್ರಮ: ಸಚಿವ ಬಸವಂತಪ್ಪ

Published

on

ಹೃದಯ ಚಿಕಿತ್ಸೆಗೆ ಹೊಸಪೇಟೆಯಲ್ಲೇ ಸೌಲಭ್ಯ; ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಪ್ರಯತ್ನ – ಉದ್ಯೋಗ ಸೃಷ್ಟಿಗೂ ಆದ್ಯತೆ

ಸುದ್ದಿದಿನ,ಹೊಸಪೇಟೆ (ವಿಜಯನಗರ): ಸರ್ಕಾರಿ ಆಸ್ಪತ್ರೆಗಳು ಬಡವರು, ಅಸಹಾಯಕರು ಹಾಗೂ ಸಾಮಾನ್ಯ ಜನರ ಪಾಲಿಗೆ ಆರೋಗ್ಯ ಸಂಜೀವಿನಿಗಳಾಗಿವೆ. ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ಅಥವಾ ಭ್ರಷ್ಟಾಚಾರ ಕಂಡುಬಂದರೆ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಎಚ್ಚರಿಸಿದರು.

ಹೊಸಪೇಟೆ ನಗರದ ಹೊರವಲಯದ ಜಂಬುನಾಥ ಹಳ್ಳಿ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಿರ್ಮಿಸಿರುವ 250 ಹಾಸಿಗೆ ಸಾಮರ್ಥ್ಯದ ನೂತನ ಜಿಲ್ಲಾ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದರ ಜತೆಗೆ ಸ್ವಚ್ಛತೆ, ನೈರ್ಮಲ್ಯ ಹಾಗೂ ಸಿಬ್ಬಂದಿಯ ಸೌಜನ್ಯದ ವರ್ತನೆಗೆ ಆದ್ಯತೆ ನೀಡಬೇಕು. ಆಸ್ಪತ್ರೆಗೆ ಬರುವ ರೋಗಿಗಳ ನೋವಿಗೆ ತಕ್ಷಣ ಸ್ಪಂದಿಸಿ, ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದಾಗ ಆಸ್ಪತ್ರೆ ನಿರ್ಮಾಣದ ಉದ್ದೇಶ ಸಾರ್ಥಕವಾಗಲಿದೆ ಎಂದರು.

ವಿಜಯನಗರ ಹೊಸ ಜಿಲ್ಲೆಯಾಗಿದ್ದು, ಜಿಲ್ಲೆಯ ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸುಮಾರು 104 ಕೋಟಿ ರೂ. ವೆಚ್ಚದಲ್ಲಿ ಸುಂದರವಾಗಿ ಹಾಗೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಜಿಲ್ಲಾ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಹೊರರೋಗಿ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ, ಔಷಧಾಲಯ ಸೇರಿದಂತೆ 17ಕ್ಕೂ ಹೆಚ್ಚು ವಿಭಾಗಗಳು ಇಲ್ಲಿ ಆರಂಭವಾಗಿವೆ. ಮೊದಲ ಹಂತದಲ್ಲಿ ಈಗಾಗಲೇ 90 ಸಿಬ್ಬಂದಿಯನ್ನು ಪೂರ್ಣಾವಧಿಗೆ ನೇಮಕ ಮಾಡಲಾಗಿದೆ. ಎರಡನೇ ಹಂತದಲ್ಲಿ ಉಳಿದ ಅಗತ್ಯ ವೈದ್ಯರು ಹಾಗೂ ಶುಶ್ರೂಷಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸರ್ಕಾರದ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ, ಎಕ್ಸ್‌ರೇ, ಎಂಆರ್‌ಐ, ಶವಾಗಾರ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಪ್ರಮುಖ ವೈದ್ಯಕೀಯ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗಬೇಕು. ಕೇಂದ್ರಿಕೃತ ಪ್ರಯೋಗಾಲಯ ಸ್ಥಾಪಿಸುವ ಅಗತ್ಯವಿದ್ದು, ಜಿಲ್ಲಾಡಳಿತ ಸೂಕ್ತ ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸಿ, ಜಿಲ್ಲೆಯ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಸರ್ಕಾರದ ಅನುದಾನದ ಮೂಲಕ ಪ್ರಯೋಗಾಲಯ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಪಡೆಯಲು ಮಣಿಪಾಲ, ಬಳ್ಳಾರಿ, ದಾವಣಗೆರೆ ಸೇರಿದಂತೆ ದೂರದ ನಗರಗಳಿಗೆ ತೆರಳುವ ಅನಿವಾರ್ಯತೆ ತಪ್ಪಿಸಲು ಹೊಸಪೇಟೆಯಲ್ಲಿಯೇ ಅಗತ್ಯ ಉಪಕರಣಗಳು ಹಾಗೂ ಹೃದಯ ಶಸ್ತ್ರಚಿಕಿತ್ಸಾ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯ ಭೌಗೋಳಿಕ ಹಿನ್ನೆಲೆ ಹಾಗೂ ಗಣಿಗಾರಿಕೆ ಪ್ರದೇಶವಾಗಿರುವುದರಿಂದ ಕಾರ್ಮಿಕರು ಸೇರಿದಂತೆ ಜನರಲ್ಲಿ ಶ್ವಾಸಕೋಶ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಹೊಸಪೇಟೆಯಲ್ಲಿ ಶೀಘ್ರ ಕ್ಯಾನ್ಸರ್ ಆಸ್ಪತ್ರೆ ಆರಂಭಿಸಲು ಪ್ರಯತ್ನಿಸಲಾಗುತ್ತಿದ್ದು, ಇದರಿಂದ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಜಿಲ್ಲೆಯ ಜನರ ಬೇಡಿಕೆಗೆ ಅನುಗುಣವಾಗಿ ಸೂಕ್ತ ಸ್ಥಳದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಜನರಿಗೆ ಅಗತ್ಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳ ಪ್ರಯತ್ನದ ಜತೆಗೆ ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ. ಜನರ ಆಶೀರ್ವಾದದಿಂದ ಜಿಲ್ಲೆಯಲ್ಲಿ ಆರೋಗ್ಯ, ಉದ್ಯೋಗ ಹಾಗೂ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ಮಾತನಾಡಿ, ಸುಮಾರು 104 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಸೇವೆಗಳಿಗೆ ಅಗತ್ಯವಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ನೇಮಕಾತಿ ಸೇರಿದಂತೆ ಎಲ್ಲ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮುಂದಿನ ಮೂರರಿಂದ ಮೂರೂವರೆ ತಿಂಗಳೊಳಗೆ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳ ಪೈಕಿ ಅತ್ಯುತ್ತಮ ಕಟ್ಟಡಗಳಲ್ಲಿ ವಿಜಯನಗರ ಜಿಲ್ಲಾ ಆಸ್ಪತ್ರೆಯೂ ಒಂದಾಗಿದೆ. ಕಟ್ಟಡ ಉದ್ಘಾಟನೆಯಾಗಿದ್ದರೂ, ವೈದ್ಯಕೀಯ ಉಪಕರಣಗಳ ಸ್ಥಳಾಂತರ ಹಾಗೂ ಅಗತ್ಯ ಸಿಬ್ಬಂದಿ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಬೇಕಿರುವುದರಿಂದ ಸಾರ್ವಜನಿಕ ಸೇವೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಲು ಸುಮಾರು ಮೂರು ತಿಂಗಳು ಕಾಲಾವಕಾಶ ಬೇಕಾಗುತ್ತದೆ.

ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ಸುಮಾರು 53 ಎಕರೆ ಪ್ರದೇಶದಲ್ಲಿ ವ್ಯವಸ್ಥೆ ರೂಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಆಯುರ್ವೇದ ಆಸ್ಪತ್ರೆ, ಕ್ಯಾನ್ಸರ್ ಘಟಕ, ನರ್ಸಿಂಗ್, ಪ್ಯಾರಾಮೆಡಿಕಲ್ ಕಾಲೇಜು ಹಾಗೂ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಸೌಲಭ್ಯಗಳು ಬರುವ ನಿರೀಕ್ಷೆಯಿದೆ. ಸದ್ಯ ತಾಲೂಕು ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಸಣ್ಣಪುಟ್ಟ ತಪಾಸಣೆಗಳಿಗೆ ಜನರು ಅನಗತ್ಯವಾಗಿ ದೂರದ ಆಸ್ಪತ್ರೆಗೆ ಅಲೆಯುವುದು ತಪ್ಪಲಿದೆ ಎಂದು ಹೇಳಿದರು.

ನಕಲಿ ವೈದ್ಯರ ಹಾವಳಿ ಹಾಗೂ ಆಡಳಿತಾತ್ಮಕ ಕ್ರಮ

ನಕಲಿ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕಾನೂನು ಬದಲಾವಣೆ ಹಾಗೂ ಕಠಿಣ ಶಿಕ್ಷೆಯ ಕುರಿತೂ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಎದುರಾಗಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಕ್ಯಾಬಿನೆಟ್ ಸಭೆ ನಡೆಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಶಿಕ್ಷಣ ಹಾಗೂ ವಸತಿ ಯೋಜನೆಗಳು: ಈ ಶೈಕ್ಷಣಿಕ ವರ್ಷದಲ್ಲಿ ಹೊಸ ಶಾಲೆಗಳು, ಹಾಸ್ಟೆಲ್ಗಳು ಹಾಗೂ ವೃತ್ತಿಪರ ಕಾಲೇಜುಗಳ ಆರಂಭಕ್ಕೆ ಮಂಜೂರಾತಿ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಸಂಸದ ಈ. ತುಕಾರಾಂ, ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ, ಹೊಸಪೇಟೆ ಶಾಸಕ ಹೆಚ್.ಆರ್. ಗವಿಯಪ್ಪ, ನಗರಸಭೆ ಅಧ್ಯಕ್ಷ ರೂಪೇಶ ಕುಮಾರ ಎನ್., ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅಪರ ಜಿಲ್ಲಾಧಿಕಾರಿ ಲೋಕೇಶ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಲ್.ಆರ್. ಶಂಕರ ನಾಯ್ಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಿಂಗರಾಜು ಟಿ. ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Trending