ರಾಜಕೀಯ
ದಾವಣಗೆರೆ ಮತದಾರ ಹೊಸ ಮುಖ ಬಯಸಿದ್ರೆ ‘ಹೊನ್ನಾಳಿ ಹೊಡೆತ’ ಗ್ಯಾರೆಂಟಿ.. !
ಸುದ್ದಿದಿನ,ದಾವಣಗೆರೆ: ನಿರಂತರ ಮೂರು ಸೋಲು, ಮೂರು ಗೆಲುವಿಗೆ ವೇದಿಕೆಯಾದ ದಾವಣಗೆರೆ ಲೋಕಸಭಾ ಕ್ಷೇತ್ರ, ಇದೀಗ ಹೊಸ ಮುಖ ಬಯಸಿದರೆ ರಾಜ್ಯದ ಜನತೆಗೆ ‘ಹೊನ್ನಾಳಿ ಹೊಡೆತ’ ಇನ್ನಷ್ಟು ಮುನ್ನೆಲೆಗೆ ಬರುವ ಸಾಧ್ಯತೆ ಇದೆ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದು, ಇದೀಗ ನಾಲ್ಕನೇ ಬಾರಿಗೆ ಆಯ್ಕೆ ಬಯಸಿರುವ ಜಿಎಂ ಸಿದ್ದೇಶ್ವರ್ ಅವರಿಗೆ ಸಾಂಪ್ರದಾಯಿಕ ಎದುರಾಳಿ ಎಸ್ ಎಸ್ ಮಲ್ಲಿಕಾರ್ಜನ್ ಕಣದಲ್ಲಿ ಇಲ್ಲ. ಕಳೆದ ಮೂರು ಭಾರಿ ಆಯ್ಕೆಯಲ್ಲೂ ಅಲೆಗಳ ಮೇಲೆ ಗೆದ್ದವರು ಎನ್ನುವುದು ಜನಜನಿತ. ಒಮ್ಮೆ ತಂದೆಯ ಸಾವಿನ ಅನುಕಂಪದ ಅಲೆ, ಇನ್ನೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂಪ್ಪ ಅವರ ಅಲೆ ಹಾಗೂ ಮೂರನೇ ಬಾರಿ ಪ್ರಧಾನಿ ಮೋದಿಯವರ ಅಬ್ಬರದ ಅಲೆಯಲ್ಲಿ ಹ್ಯಾಟ್ರಿಕ್ ಮಾಡಿದರು. ಅಲ್ಲದೆ ಕೇಂದ್ರ ಸಚಿವರು ಆಗಿದ್ದರು. ಅಷ್ಟೇ ಬೇಗ ಸ್ಥಾನವನ್ನೂ ಕಳೆದುಕೊಂಡರು ಎನ್ನುವುದು ಈಗ ಇತಿಹಾಸ. ಆದರೆ, ಇದೀಗ ನಾಲ್ಕನೇ ಬಾರಿಯೂ ಜನ ಕೈ ಹಿಡಿಯುವ ಸಾಧ್ಯತೆ ಕಡಿಮೆ ಎನ್ನುವ ಉದ್ದೇಶದಿಂದ ಹಳ್ಳಿ ಸುತ್ತಿದ್ದಾರೆ. ಅಬ್ಬರದ ಪ್ರಚಾರವೂ ಕೈಗೊಂಡಿದ್ದಾರೆ.
ಎಸ್. ಎಸ್. ಮಲ್ಲಿಕಾರ್ಜುನ್ ಕಣದಿಂದ ಹಿಂದಕ್ಕೆ
ಮೂರು ಬಾರಿ ಹ್ಯಾಟ್ರಿಕ್ ಸೋಲಿಂದ ಧೃತಿಗೆಡದೆ ಕೊನೆ ಪ್ರಯತ್ನಕ್ಕೆ ಮುಂದಾದ ಎಸ್ ಎಸ್ ಎಂ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ, ಅವರ ಆಪ್ತ ಎಚ್ ಬಿ ಮಂಜಪ್ಪ ಅವರನ್ನು ಕಣಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇತ್ತ ಸಿದ್ದೇಶ್ವರ್ ನನಗೆ ಪೈಪೋಟಿ ನೀಡುವ ಎದುರಾಳಿ ಇಲ್ಲ, ಎಸ್ ಎಸ್ ಎಂ ಎದುರಾಳಿಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಊರು ಸುತ್ತಿದ್ದು ನಷ್ಟವಾಯಿತು ಎನ್ನುವಂತ ಸ್ಥಿತಿಗೆ ಬಂದಿದ್ದು ಸುಳ್ಳಲ್ಲ.
ಹೊನ್ನಾಳಿ ಹೊಡೆತ ?
ಅತಿಯಾದ ಆತ್ಮವಿಶ್ವಾಸದಿಂದ ಒಂದು ಹಂತದಲ್ಲಿ ಸುತ್ತಾಟ ಕಡಿಮೆ ಮಾಡಿದ ಬಿಜೆಪಿ ಅಭ್ಯರ್ಥಿಗೆ ಎಚ್ ಬಿ ಮಂಜಪ್ಪ ಸುತ್ತಾಟ, ಅವರ ತಂತ್ರ, ಮೈತ್ರಿ ಧರ್ಮ, ಅಹಿಂದ ಸಂಘಟನೆ ರಾಜಕೀಯ ವಿಶ್ಲೇಷಕರು, ಇಂಟಲಿಜೆನ್ಸ್ ವರದಿಗಳು ಹೊನ್ನಾಳಿ ಹೊಡೆತದ ಸೂಚನೆ ನೀಡಿದ್ದು ಮತ್ತೆ ಪ್ರಚಾರ ಚುರುಕುಗೊಳಿಸುವಂತೆ ಮಾಡಿದೆ.
ಮಂಜಪ್ಪ ಕಡಿಮೆ ಅವಧಿಯಲ್ಲಿ ಜಿಲ್ಲಾದ್ಯಂತ ಪ್ರವಾಸ ಮಾಡುವುದನ್ನೆ ಸವಾಲಾಗಿ ಸ್ವೀಕರಿದ್ದಾರೆ. ಇನ್ನು ಟಿಕೆಟ್ ಘೋಷಣೆ ಆರಂಭದಿಂದಲೇ ಹಣ ಬಲದ ವಿರುದ್ಧ ಬಡವನ ಹೋರಾಟ, ಅಹಿಂದ, ಮೈತ್ರಿ ತಂತ್ರದಡಿ ಅಲ್ಪಸಂಖ್ಯಾತ, ಹಿಂದುಳಿದ ದಲಿತ ಸಮುದಾಯಗಳ ವಿಶ್ವಾಸಕ್ಕೆ ಪಡೆಯುವ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಹರಿಹರದಲ್ಲಿ ಮಾಜಿ ಶಾಸಕ ಎಚ್ ಎಸ್ ಶಿವಶಂಕರ್, ಹಾಲಿ ಶಾಸಕ ರಾಮಪ್ಪ ಒಂದೇ ವೇದಿಕೆಯಲ್ಲಿ ಸುತ್ತಾಡುತ್ತಿದ್ದಾರೆ. ಹರಪನಹಳ್ಳಿಯಲ್ಲಿ ಜೆಡಿಎಸ್ ಮುಖಂಡ ಕೊಟ್ರೇಶ್, ದಿ. ಎಂಪಿ ರವೀಂದ್ರ ಅಭಿಮಾನಿಗಳು, ಜಗಳೂರಲ್ಲಿ ಎಚ್ ಪಿ ರಾಜೇಶ್, ಮೈತ್ರಿ ಟೀಮ್, ಚನ್ನಗಿರಿಯಲ್ಲಿ ವದ್ದಿಗೆರೆ ರಮೇಶ್, ವಡ್ನಾಳ್ ರಾಜಣ್ಣ, ಮಯಕೊಂಡದಲ್ಲಿ ಬಸವಂತಪ್ಪ, ಹೊನ್ನಾಳಿಯಲ್ಲಿ ಶಾಂತನಗೌಡ್ರು ಹಾಗೂ ಮೈತ್ರಿ ಟೀಮ್ ಹಾಗೂ ಸ್ಥಳೀಯ ಎನ್ನುವ ತಂತ್ರ ಪ್ರಯೋಗ ಮಾಡಲಾಗುತ್ತಿದೆ. ಸಿದ್ದೇಶ್ವರ್ ಹೊರಗಿನವರು, ಮಂಜಪ್ಪ ಸ್ಥಳೀಯ ಎನ್ನುವ ವಿಷಯ ಮುನ್ನೆಲೆಗೆ ಬಂದಿದೆ. ಸಿದ್ದೇಶ್ವರ್ ಗೆ ೧೫ ವರ್ಷ ಅಧಿಕಾರ ಕೊಟ್ಟಿದ್ದೀರಿ. ಈ ಬಾರಿ ಸ್ಥಳೀಯ ಮಂಜಪ್ಪನಿಗೆ ಅವಕಾಶ ಮಾಡಿಕೊಡುವಂತೆ ಒತ್ತಿ ಒತ್ತಿ ಪ್ರಚಾರ ಮಾಡಲಾಗುತ್ತಿದೆ.
ಮಂಜಪ್ಪ ಸಹಿತ ಮೈತ್ರಿ ತಂಡ ತಾಲೂಕುವಾರು ಸುತ್ತಾಟ ಮಾಡುತ್ತಿದ್ದರೆ, ಇತ್ತ ಎಸ್ ಎಸ್ ಎಂ, ಎಸ್ಎಸ್ ದಾವಣಗೆರೆ ನಗರದಲ್ಲಿ ಆಯ್ದ ಗ್ರಾಮಗಳಲ್ಲೂ ರೋಡ್ ಶೋ ಮಾಡುತ್ತಿದ್ದಾರೆ. ಕಾರ್ಮಿಕ ಮುಖಂಡ ಎಚ್ ಕೆ ರಾಮಚಂದ್ರಪ್ಪ, ಜೆಡಿಎಸ್ ಗುಡ್ಡಪ್ಪ, ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಅಹಿಂದ ಮುಖಂಡರು ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರು ವಾರ್ಡವಾರು, ತಮ್ಮ ಭೂತ್ ಮಟ್ಟದಲ್ಲಿ ಸಕ್ರಿಯವಾಗಿರುವುದು ಎದುರಾಳಿ ನಿದ್ದೆ ಕೆಡಿಸುವಂತಾಗಿದೆ.
ಮತದಾರರೇ ಹಣ ಕೊಟ್ರು…!
ಮಂಜಪ್ಪ ಊರು ಸುತ್ತಲು ವಾಹನ ವ್ಯವಸ್ಥೆ, ಚುನಾವಣಾ ಖರ್ಚಿಗೆ ಮತದಾರರೇ ಹಣ ನೀಡುತ್ತಿರುವುದು ಇನ್ನೊಂದು ವಿಶೇಷವಾಗಿದ್ದು, ಬಿಜೆಪಿಯಲ್ಲಿ ಹಣದ ಕೊರತೆ ಇಲ್ಲ, ಆದರೆ, ದೂರವಿದ್ದ ನಾಯಕರು ಮುನ್ನೆಲೆಗೆ ಬಂದಿದ್ದಾರೆ. ಮಂಜಪ್ಪ ಅಭ್ಯರ್ಥಿ ಆದ ಕೂಡಲೇ ಅದೇ ಸಮಾಜ ಹಾಗೂ ಅಹಿಂದ ಮುಖಂಡರಾದ ಬಿ ಎಂ ಸತೀಶ್, ಜಯಪ್ರಕಾಶ್, ಲಿಂಗರಾಜ್, ಶಿವಕುಮಾರ್ ರಂಥ ಆನೇಕರು ಮುನ್ನೆಲೆಗೆ ಬರುತ್ತಿದ್ದಾರೆ. ಒಟ್ಟಾರೆ ಏಕಮುಖವಾದ ಕಣ ಇದೀಗ ನೇರ ಹಣಾಹಣಿಯಾಗಿದೆ. ಬಿಜೆಪಿ, ಕಾಂಗ್ರೆಸ್ ಯಾರೇ ಗೆದ್ದರೂ ಅಲ್ಪ ಅಂತರವಷ್ಟೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


